ಭಕ್ತಿ,ಭಕ್ತರು ಮತ್ತು ಸಂಸ್ಕೃತಿ

ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಕರ್ಮಯೋಗ ಅಥವ ಜ್ಞಾನಯೋಗಗಳಿಗಿಂತ ಭಕ್ತಿಯೇ ಮಿಗಿಲಾದುದೆಂದು ನಾರದ ಭಕ್ತಿ ಸೂತ್ರಗಳ ೨೫ನೆಯ ಸೂತ್ರವು ತಿಳಿಸುತ್ತದೆ. ಅಲ್ಲದೆ 'ಧ್ಯಾನದಿ ಕೃತಯುಗದಲ್ಲಿ, ಯಜ್ಞಯಾಗದಿ ತ್ರೇತಾಯುಗದಲ್ಲಿ, ಅರ್ಚನೆಯಿಂದ ದ್ವಾಪರದಲ್ಲಿ, ಕೀರ್ತನೆ ಮಾತ್ರದಿ ಕಲಿಯುಗದಲ್ಲಿ ಮುಕ್ತಿಯನೀವ ಪುರಂದರವಿಠಲ' ಎಂದು ಹರಿದಾಸರೇ ಹಾಡಿದ್ದಾರಲ್ಲವೇ?
ನಾರದ ಭಕ್ತಿ ಸೂತ್ರಗಳ ೮೨ನೆಯ ಸೂತ್ರದ ಪ್ರಕಾರ ಭಕ್ತಿಯನ್ನು ಹನ್ನೊಂದು ವಿಧವಾಗಿ ಪ್ರಕಟಿಸಬಹುದು. ಇವು ಯಾವುವೆಂದರೆ:
ಗುಣ ಮಹಾತ್ಮ್ಯಾಸಕ್ತಿ - ಭಗವಂತನ ಮಹಿಮೆಯನ್ನು ಕೇಳಲು ಉತ್ಕಟವಾದ ಇಚ್ಛೆ
ರೂಪಾಸಕ್ತಿ - ಆತನ ದಿವ್ಯ ದರ್ಶನವನ್ನು ಮಾಡುವ ಹಂಬಲ
ಪೂಜಾಸಕ್ತಿ - ಆತನನ್ನು ಸದಾ ಪೂಜಿಸುವ ಇಚ್ಛೆ
ಸ್ಮರಣಾಸಕ್ತಿ - ಭಗವಂತನ ನಾಮಸ್ಮರಣೆ ಮಾಡುವ ಇಚ್ಛೆ
ದಾಸ್ಯಾಸಕ್ತಿ - ಭಗವಂತನನ್ನು ದಾಸನಂತೆ ಸೇವಿಸುವ ಆಸೆ. ಈ ಸಂಬಂಧದಲ್ಲಿ 'ತ್ವದ್ ಭೃತ್ಯ ಭೃತ್ಯ ಪರಿಚಾರಕ ಭೃತ್ಯ ಭೃತ್ಯ ಭೃತ್ಯಸ್ಯ ಭೃತ್ಯ ಇತಿಮಾಮ್ ಸ್ಮರ ಲೋಕನಾಥ'ಎಂದು ರಾಜಾ ಕುಲಶೇಖರರು ತಮ್ಮ ಮುಕುಂದಮಾಲೆಯಲ್ಲಿ ಹಂಬಲಿಸಿದ್ದನ್ನು ನಾವು ನೆನೆಯಬಹುದು.
ಸಖ್ಯಾಸಕ್ತಿ - ಭಗವಂತನನ್ನು (ಅರ್ಜುನನಂತೆ) ಪ್ರಿಯಮಿತ್ರನನ್ನಾಗಿ ಹೊಂದುವ ಆಸೆ.
ಕಾಂತಾಸಕ್ತಿ - ಆಂಡಾಳ್, ಅಕ್ಕಮಹಾದೇವಿ ಮತ್ತು ಮೀರಾ ಇವರುಗಳಂತೆ ಭಗವಂತನನ್ನು ಪತಿಯಾಗಿ ಸ್ವೀಕರಿಸುವ ಆಸೆ.
ವಾತ್ಸಲ್ಯಾಸಕ್ತಿ - ಮಾತಾಪಿತೃಗಳಂತೆ ಆತನಲ್ಲಿ ಪ್ರೀತಿಯನ್ನು ತೋರಿಸುವ ಆಸೆ.
ಆತ್ಮನಿವೇದನಾಸಕ್ತಿ - ತನ್ನ ಆತ್ಮವನ್ನು ಆತನಿಗೆ ಸಮರ್ಪಿಸುವ ಇಚ್ಛೆ.
ತನ್ಮಯಾದಾಸಕ್ತಿ - ಆತನಲ್ಲೇ ಲೀನವಾಗುವ ಆಸಕ್ತಿ
ಪರಮವಿರಹಾಸಕ್ತಿ - ರಾಧೆಯಂತೆ ಒಂದು ಕ್ಷಣವೂ ಆತನಿಂದ ಅಗಲಿಕೆಯನ್ನು ಸಹಿಸಲಾಗದಿರುವಿಕೆ.
ಬಸವಣ್ಣನವರು ಈ ಹನ್ನೊಂದರಲ್ಲಿ ಐದು ವಿಧಗಳನ್ನು ತಮ್ಮ ಒಂದೇ ವಚನದಲ್ಲಿ ನಿರೂಪಿಸಿದರು:
ವಚನದಲಿ ನಾಮಾಮೃತ ತುಂಬಿ, ನಯನದಲಿ ನಿಮ್ಮ ಮೂರುತಿ ತುಂಬಿ
ಮನದಲಿ ನಿಮ್ಮ ನೆನಹು ತುಂಬಿ, ಕಿವಿಯಲಿ ನಿಮ್ಮ ಕೀರುತಿ ತುಂಬಿ
ಕೂಡಲ ಸಂಗಮದೇವಾ, ನಿಮ್ಮ ಚರಣ ಕಮಲದಲಾನು ತುಂಬಿ.
ಸತ್ಯ, ಅಹಿಂಸೆ, ದಯೆ, ಶುಚಿತ್ವ ಮುಂತಾದ ಗುಣಗಳಲಿಲ್ಲದವನು ಎಂದಿಗೂ ನಿಜವಾದ ಭಕ್ತನಾಗಲಾರ (ನಾರದ ಭಕ್ತಿ ಸೂತ್ರ - ೭೮). ಇಂತಹ ಸದ್ಭಕ್ತರು ಭಗವಂತನಷ್ಟೇ ಪೂಜನೀಯರು. ಪರಮ ವೈಷ್ಣವ ಭಕ್ತರಾದ ವಿಪ್ರನಾರಾಯಣ ಆಳ್ವಾರರು ತಮ್ಮನ್ನು ತೊಂಡರಡಿಪ್ಪೊಡಿ (ಭಕ್ತರ ಪಾದಧೂಳಿ) ಎಂದೇ ಕರೆದುಕೊಂಡರು. ಭಕ್ತಿಭಾಂಡಾರಿಗಳಾದರೋ:
ಬ್ರಹ್ಮಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ, ರುದ್ರಪದವಿಯನೊಲ್ಲೆ
ಮತ್ತಾವ ಪದವಿಯನೊಲ್ಲೆನಯ್ಯಾ ಕೂಡಲ ಸಂಗಮದೇವ
ನಿಮ್ಮ ಸದ್ಭಕ್ತ್ರರ ಪಾದವನರಿದಿಪ್ಪ ಮಹಾಪದವಿಯನ್ನೇ ಕರುಣಿಸಯ್ಯಾ
ಎಂದು ಬೇಡಿಕೊಂಡರು. ಇದು ಮಾತ್ರವಲ್ಲ - ಭಕ್ತರು ಭಗವಂತನಿಗಿಂತ ಅದೃಷ್ಟವಂತರಂತೆ. ಪುರಂದರದಾಸರು
ನಾನೆ ಸ್ವದೇಶಿ, ನೀನೆ ಪರದೇಶಿ
ನಿನ್ನರಸಿ ಲಕುಮಿ ಎನ್ನ ತಾಯಿ
ನಿನ್ನ ತಾಯ ತೋರೋ, ಪುರಂದರವಿಠಲ
ಎಂದು ಆ ಪರಮಾತ್ಮನಿಗೇ ಸವಾಲು ಮಾಡಿದರು!
ಭಾರತದ ಸಾಹಿತ್ಯಕ್ಕೆ ಭಕ್ತಿಯ ಕೊಡುಗೆ ಅಪಾರವಾದುದು. ಶ್ರೀ ಶಂಕರ ಭಗವತ್ಪಾದರ ಅನೇಕಾನೇಕ ಸ್ತೋತ್ರಗಳು, ವೈಷ್ಣವರ ನಾಲಾಯಿರ ಪ್ರಬಂಧಗಳು, ಶೈವರ ತಿರುಮುರೈಗಳು, ಶಿವಶರಣರ ವಚನಗಳು, ಹರಿದಾಸರ ಪದಗಳು, ತುಕಾರಾಮ, ನಾಮದೇವ ಇವರ ಅಭಂಗಗಳು, ಮೀರಾ, ತುಳಸೀದಾಸ, ಸೂರದಾಸ ಇವರ ಭಜನೆಗಳು, ಅಣ್ಣಮಾಚಾರ್ಯ, ತ್ಯಾಗರಾಜರ ಕೀರ್ತನೆಗಳು ಇವೆಲ್ಲಕ್ಕೂ ಭಕ್ತಿಯೇ ಆಧಾರ. ಕರ್ಣಾಟಕ ಶಾಸ್ತ್ರೀಯ ಸಂಗೀತವನ್ನಂತೂ ಭಕ್ತಿಗೀತೆಗಳಿಲ್ಲದೆ ಊಹಿಸಿವುದೂ ಅಸಾಧ್ಯ! ಶಿಲ್ಪಕಲಾವೈಭವಗಳಿಗೆ ಹೆಸರಾದ ನಮ್ಮ ದೇವಾಲಯಗಳನ್ನು ಕಟ್ಟಿಸಿದವರೂ, ಕಟ್ಟಿದವರೂ ಬಹುಮಟ್ಟಿಗೆ ಭಕ್ತಿಯಿಂದಲೇ ಪ್ರೇರೇಪಿತರಾದವರು - ಕೀರ್ತಿ ಅಥವ ಬೇರೆ ಆಸೆಗಳಿಂದಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ನಮ್ಮ ದೇಶದ ಸಂಸ್ಕೃತಿ ಶ್ರೀಮಂತವಾಗಿರುವುದು ಭಕ್ತಿಯಿಂದಲೇ. ಈ ಜಗತ್ತಿನ ಬೇರೆ ಯಾವ ದೇಶಕ್ಕೂ ಈ ಮಾತು ಪ್ರಾಯಶಃ ಅನ್ವಯಿಸಲಾರ