ನಿಧಿಯ ಕಾಣದ ನಿರ್ಭಾಗ್ಯರು

ಅನಾಥ ಬಾಲಕನೊಬ್ಬನಿಗೆ ತಾನುಯಾರೆಂಬ ಅರಿವಿರಲಿಲ್ಲ. ಅಲ್ಪಸುಖಕ್ಕಾಗಿ ಹಾತೊರೆಯುತ್ತಾ, ಕೆಲವೊಮ್ಮೆ ಕಿಂಚಿತ್ ಸುಖಪಡೆಯುತ್ತಾ ಬಹಳಷ್ಟುಸಾರಿ ಬಯಸಿದ್ದನ್ನು ಪಡೆಯದೇ ಮರುಗುತ್ತಾ, ತನ್ನ ಸಂಕಟವನ್ನು ಯಾರೊಡನೆಯೂ ತೋಡಿಕೊಳ್ಳಲಾಗದೇ,ಅನುಭವಿಸಲೂ ಆಗದೇ ಒಂದು ದೊಡ್ಡ ಕೋಟೆಯ ಹೊರಗಿನ ಊರಿನಲ್ಲಿ ಕಾಲ ಕಳೆಯುತ್ತಿದ್ದ.
ಹೀಗೆಯೇ ಒಂದು ದಿನ ಕೋಟೆಯ ಹೊರಗೆ ಇವನ ದೀನ ಸ್ಥಿತಿಯನ್ನು ಕಂಡು ಮರುಗಿದ ದಾರಿಹೋಕನೊಬ್ಬನೊಂದಿಗೆ ತನ್ನ ದುಃಖವನ್ನುತೋಡಿಕೊಳ್ಳುತ್ತಾನೆ. ಆಗದಾರಿಹೋಕನು, "ಮಗೂನೀನಾರೆಂದು ನನಗೆಗೊತ್ತು. ನೀನುಅನಾಥನಲ್ಲ, ನೀನುನಿನ್ನಗುರುತನ್ನು ಕಂಡುಕೊಳ್ಳಬೇಕಾದರೆ ಕೋಟೆಯೊಳಗಿರುವ ಅರಮನೆಯಲ್ಲಿ ರಾಜನನ್ನು ಒಮ್ಮೆ ಕಂಡರೆ ಸಾಕು,ನಿನ್ನತೊಳಲಾಟಕಷ್ಟ, ದುಗುಡಗಳೆಲ್ಲ ಕೊನೆಗಾಣುತ್ತವೆ ಎಂದು ಹೇಳಿ ಅರಮನೆಗೆ ಹೋಗುವಹಾದಿಯ ಪರಿಚಯ ಮಾಡಿಸುತ್ತಾನೆ. ಅರಮನೆಯು ಒಂದರೊಳಗೊಂದರಂತೆ ಇರುವ 5 ಸುತ್ತಿನಕೋಟೆಯ ಮಧ್ಯದಲ್ಲಿರುವುದು.ಒಳಗೆ ಹೋಗುವ ದಾರಿಯು ಬಹಳ ದುರ್ಗಮವಾದದ್ದು,ಏಕಾಗ್ರತೆಯಿಂದ ಕತ್ತಿಯ ಅಂಚಿನ ಮೇಲಿನಂತೆ ನಡೆಯಬೇಕಾಗುತ್ತದೆ. ಎರಡೂಕಡೆ ಪ್ರಪಾತಗಳು, ಮೂರು ಜನ ಸೇನಾಪತಿಗಳು ತಮ್ಮ ಸೈನ್ಯದೊಂದಿಗೆ ಹಗಲಿರುಳೂ ಕೋಟೆಯನ್ನು ಕಾಯುತ್ತಿರುತ್ತಾರೆ ಅವರುಗಳ ಕಣ್ಣು ತಪ್ಪಿಸಿ ಹೋಗಬೇಕಾದರೆ ಅವರುಗಳು ಪಾಳಿಬದಲಿಸುವ ಸಮಯಅಂದರೆ ಸಂಧ್ಯಾಸಮಯ ಅಥವಾಸಂಧಿ ಸಮಯವೇಅತ್ಯಂತ ಸೂಕ್ತ.
ಕೋಟೆಯ ಮೊದಲ 3 ಸುತ್ತಂತೂ ಅತ್ಯಂತ ಕಠಿಣವಾದದ್ದು. ರಾಜನನ್ನೇಕಾಣಬೇಕೆಂಬ ಛಲವುಳ್ಳ, ಇಂದ್ರಿಯಗಳಮೇಲೆ ಹತೋಟಿ ಸಾಧಿಸಬಲ್ಲ ಧೀರನಿಗೆ ಮಾತ್ರ ಸಾಧ್ಯವಾಗುವಂತಹ ಪಯಣವಿದು ಎಂದುಹೇಳಿ ಶುಭವಾಗಲೆಂದು ಹಾರೈಸುತ್ತಾಬೀಳ್ಕೊಂಡ ಕರಣಾಮಯಿ ದಾರಿಹೋಕ.ಅವನಿಂದ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಪಡೆದು, ಸ್ಥಿರ ಸಂಕಲ್ಪದಿಂದ ರಾಜನನ್ನು ಕಂಡೇ ತೀರುತ್ತೇನೆಂದು ಕೋಟೆಯನ್ನು ಪ್ರವೇಶಿಸಿದ ಬಾಲಕ , ಪಡೆದ ಮಾರ್ಗದರ್ಶನದಂತೆ ಸಮಯ ಹೊಂದಿಸಿಕೊಂಡು ಜಾಗರೂಕತೆಯಿಂದ ಕೋಟೆಯ ಸುತ್ತುಗಳನ್ನು ಕ್ರಮಿಸತೊಡಗಿದ. 3 ಸುತ್ತನ್ನು ದಾಟಿ , ನಾಲ್ಕನೇಯ ಸುತ್ತನ್ನು ದಾಟುವಾಗ ಶುಭಲಕ್ಷಣಗಳು ಗೋಚರಿಸತೊಡಗಿದವು . ಐದನೇ ಸುತ್ತನ್ನು ತಲುಪಿದಾಗ ಸಂತೋಷ ಸಡಗರಗಳು ಕಾಣಿಸಿಕೊಳ್ಳುತ್ತಾ ಅರಮನೆಗೆ ಇವನ ಬರವನ್ನೇ ಎದುರು ನೋಡುತ್ತಿರುವಂತೆ ಅತ್ಯಂತ ಸಡಗರದಿಂದ ಸಂತೋಷದಿಂದ ಕರೆದೊಯ್ಯಲಾಯಿತು . ಜನ್ಮ ಜನ್ಮಾಂತರಗಳಿಂದ ಬಿಟ್ಟಿದ್ದ ಮಗನಾದ ಇವನನ್ನು ಕಂಡು ಆನಂದದಿಂದ ಬಿಗಿದಪ್ಪಿಕೊಂಡ ಜಗದೊಡೆಯ ಇವನನ್ನು ಸಿಂಹಾಸನದ ಉತ್ತರಾಧಿಕಾರಿಯಾಗಿಸುವುದು ಮಾತ್ರವಲ್ಲದೇ , ತನ್ನಲ್ಲಿಯೇ ಲೀನ ಮಾಡಿಕೊಂಡು , ಸದಾ ನಿತ್ಯಾನಂದದ ಸ್ಥಿತಿಯಲ್ಲಿರುವಂತೆ ಮಾಡಿದನಂತೆ.ನಿಧಿಯ ಕಾಣದ ನಿರ್ಭಾಗ್ಯರು ಯಾರು?....... ನಾವೇ.
ಪ್ರಾಪಂಚಿಕ ತೊಳಲಾಟಗಳಲ್ಲಿ ಸಿಲುಕಿರುವ ಅನಾಥರು. ಜನ್ಮ ಜನ್ಮಾಂತರಗಳಿಂದ ನಮ್ಮ ಗುರುತನ್ನು ಕಂಡುಕೊಳ್ಳದೇ ದ್ವಂದ್ವಗಳಲ್ಲಿ ಒದ್ದಾಡುತ್ತಿರುವವರು. ನಿಜವಾಗಿ ಇದರಿಂದಾಚೆ ಹೋಗಿ ನಾವಾರೆಂದು ತಿಳಿಯುವ ಹಂಬಲ ಪಕ್ವವಾದಾಗ ಕೋಟೆಯ ಹೊರಗೊಬ್ಬ ದಾರಿಹೋಕ, ಕರುಣಾಮಯಿ, ಮಾರ್ಗದರ್ಶಿಯೊಬ್ಬ ದೊರೆತೇ ದೊರೆಯುತ್ತಾನೆ, ಅವನೇ ಸದ್ಗುರು.ಹೊರ ಕೋಟೆಯೇ ನಮ್ಮ ದೇಹ. ಐದು ಸುತ್ತಿನ ಕೋಟೆಯೆಂದರೆ ನಮ್ಮ ದೇಹದೊಳಗಿನ ಅನ್ನ, ಪ್ರಾಣ, ಮನೋ, ವಿಜ್ಞಾನ, ಮತ್ತು ಆನಂದಮಯ ಕೋಶಗಳು, 3 ಸೇನಾಪತಿಗಳೆಂದರೆ ಸತ್ವ, ರಜಸ್ಸು, ಮತ್ತು ತಮೋಗುಣಗಳು,ಪಾಳಿ ಬದಲಿಸುವ ಸಮಯವೆಂದರೆ ಪ್ರಾತಃ ಮತ್ತು ಸಾಯಂ ಸಂಧ್ಯೆಗಳು . ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಬೀಳುವ ಸಾಧ್ಯತೆ ಎಂದರೆ ವಿಶ್ವಾಮಿತ್ರನ ತಪಸ್ಸನ್ನು ನೆನೆಸಿಕೊಳ್ಳಬಹುದು . ವಿಜ್ಞಾನಮಯ ಕೋಶವನ್ನು ತಲುಪಿದರೆ , ಸಾಗಿ ಬಂದ ಹಾದಿಯ ಫಲಗಳು ಎಂದರೆ ಸಿದ್ಧಿಗಳು ಗೋಚರಿಸಿದರೆ ಆನಂದಮಯ ಕೋಶದಲ್ಲಿ ಭಗವಂತನ ಮಿಲನದ ಆನಂದವು ಕಾಣತೊಡಗುತ್ತವೆ .
ಮಿಲನವಾದ ಮೇಲೆ ಅವನಲ್ಲಿ ಲೀನವಾಗುವಿಕೆ ಎಂದರೆ ಬ್ರಹ್ಮವನ್ನು ತಿಳಿದವನು ಬ್ರಹ್ಮನೇ ಆಗುತ್ತಾನೆ ಎಂಬಂತಹ ಅನೇಕ ಉಪನಿಶತ್ತಿನ ವಾಕ್ಯಗಳನ್ನು ನೆನಪಿಸಿಕೊಳ್ಲಬಹುದು. ಇದನ್ನು ಸಾಧಿಸುವ ತನಕ ತೊಳಲಾಟ ತಪ್ಪದ , ಹೇಡಿಗಳ , ನಿರ್ಭಾಗ್ಯರ ಜೀವನ ನಮ್ಮದು . ಇನ್ನಾದರೂ ಉಪನಿಷತ್ತಿನಲ್ಲಿ ಹೇಳಿರುವಂತಹ ಧೀರರಾಗೋಣ.