ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ತ್ಯಾಗ...ಹೀಗೊಂದು ಕಥೆ

picture

         ಒಬ್ಬ ರಾಜನಿಗೆ ತನ್ನ ರಾಜ್ಯದ ತ್ಯಾಗಿ ಮತ್ತು ಯೋಗಿ ವರೇಣ್ಯರೊಬ್ಬರನ್ನು ಸತ್ಕರಿಸಿ ಸನ್ಮಾನಿಸುವ ಆಸೆಯಾಯಿತು. 

         ತನ್ನ ಮಂತ್ರಿಗ, ಇಂತಹವರೊಬ್ಬರನ್ನು ಗುರುತಿಸಿ ಕರೆತರುವಂತೆ ಆಜ್ಞೆ ಮಾಡಿದನು. ಮಂತ್ರಿಯು ರಾಜ್ಯವನ್ನೆಲ್ಲ ಹುಡುಕಿ ಜಾಲಾಡಿದರೂ ಅರ್ಹ ವ್ಯಕ್ತಿಯು ದೊರೆಯದ ಕಾರಣ ಚಿಂತಾಕ್ರಾಂತನಾಗಿದ್ದನು. ರಾಜಾಜ್ಞೆಯನ್ನು ನೆರವೇರಿಸದಿದ್ದರೆ ಶಿಕ್ಷೆಗೊಳಗಾಗುವುದು ಖಂಡಿತವಾದ್ದರಿಂದ ಏನು ಮಾಡುವುದೆಂದು ತೋಚದೇ ಕುಳಿತಾಗ, ಬಹುರೂಪಿ ಕಳ್ಳನೊಬ್ಬನು ನೆರವಿಗೆ ಬಂದನು. ಮಂತ್ರಿಯು ಅವನ ಬಳಿ ಮಾಡಿಕೊಂಡ ಒಪ್ಪಂದದಂತೆ, ದೊಡ್ಡ ಯೋಗಿಯಾಗಿ ತ್ಯಾಗಿಯಾಗಿ ರಾಜನ ಮುಂದೆ ಯಶಸ್ವಿಯಾಗಿ ನಟಿಸಿದರೆ ಒಂದು ತಟ್ಟೆಯ ತುಂಬಾ ಚಿನ್ನದ ನಾಣ್ಯವನ್ನು ಕೊಡುವುದಾಗಿ ಮಾತು ಕೊಟ್ಟನು. 

         ಮುಂದೆ ನಿಗದಿ ಪಡಿಸಿದೊಂದು ದಿನ, ಮಂತ್ರಿಯು ರಾಜನ ಬಳಿಸಾರಿ ಮಹಾನ್ ಯೋಗಿ, ತ್ಯಾಗಿಯೊಬ್ಬರನ್ನು ಕರೆತಂದಿದ್ದೇನೆ.ಅವರು ಊರ ಹೊರಗಿನ ಮರದ ಕೆಳಗೆ ಧ್ಯಾನಮಗ್ನರಾಗಿದ್ದಾರೆಂದು ತಿಳಿಸಿದನು. ರಾಜನು ಅತ್ಯಾದರದಿಂದ ಪರಿವಾರದೊಡಗೂಡಿ ತಟ್ಟೆಗಳಲ್ಲಿ ಮುತ್ತು, ರತ್ನ, ನಾಣ್ಯಗಳು, ಹಣ್ಣು ಹಂಪಲಿನ ಕಾಣಿಕೆಯನ್ನು ಅಣಿ ಮಾಡಿಕೊಂಡು ಯೋಗಿಯನ್ನು ಸತ್ಕರಿಸಲು ಹೊರಟನು. ಯೋಗಿಯನ್ನು ಕಂಡೊಡನೆ ಎಲ್ಲರೂ ದೀರ್ಘದಂಡ ಪ್ರಣಾಮ ಮಾಡಿ ತಮ್ಮಂತಹ ಯೋಗಿಯನ್ನು, ತ್ಯಾಗಿಯನ್ನು ಪಡೆದ ನಮ್ಮ ರಾಜ್ಯವೇ ಕೃತಾರ್ಥವಾಗಿದೆ, ತಾವು ನಮ್ಮ ಕಾಣಿಕೆ ಮತ್ತು ಆತಿಥ್ಯವನ್ನು ಸ್ವೀಕರಿಸಬೇಕೆಂದು ಬಿನ್ನ್ವಿಸಿಕೊಂಡರು. ಬಹುರೂಪಿಯು ಎಲ್ಲವನ್ನೂ ತಿರಸ್ಕರಿಸಿದನು.

         ಆಗ ರಾಜನು ಯೋಗಿಯ ತ್ಯಾಗಭಾವದಿಂದ ಪ್ರಭಾವಿತನಾಗಿ ತನ್ನ ಅರ್ಧರಾಜ್ಯವನ್ನೇ ಅವನಿಗೆ ಅರ್ಪಿಸುವುದಾಗಿ ಹೇಳಿದಾಗಲೂ ಅದನ್ನು ತಿರಸ್ಕರಿಸಿದಾಗ ಯೋಗಿಯ ಬಗೆಗೆ ಪೂರ್ಣಗೌರವವನ್ನು ತಾಳಿದ ರಾಜ ಮತ್ತವನ ಪರಿವಾರದ ಜನಗಳು "ಸ್ವಾಮಿಗಳೇ ತಾವು ನಮ್ಮ ರಾಜ್ಯದಲ್ಲಿರುವುದೇ ನಮ್ಮ ಭಾಗ್ಯ. ಇಂದಿನಿಂದ ಇಡೀಯ ರಾಜ್ಯವೇ ತಮ್ಮದು, ನಾವೆಲ್ಲಾ ನಿಮ್ಮ ಸೇವಕರು, ತಾವು ಹೇಳಿದ್ದನ್ನು ಶಿರಸಾವಹಿಸಿ ನಡೆಸಿಕೊಡುತ್ತೇವೆ, ತಾವಿಲ್ಲಿ ಹೇಗೆ ಬೇಕಾದರೂ ಇರಬಹುದು" ಎಂದು ಹೇಳಿ ಹಿಂತಿರುಗಿದಾಗಲೂ ಯೋಗಿಯಲ್ಲಿ ಅದೇ ನಿರ್ಲಿಪ್ತ ಭಾವನೆಯೇ ಇತ್ತು. 

         ಎಲ್ಲರೂ ಹೋದ ನಂತರ ಬಳಿ ಸಾರಿದ ಮಂತ್ರಿಯು ಅವನಿಗೆ ಧನ್ಯವಾದಗಳನ್ನರ್ಪಿಸುತ್ತ ಮೊದಲಿನ ಒಪ್ಪಂದದಂತೆ ಚಿನ್ನದ ನಾಣ್ಯದ ತಟ್ಟೆಯನ್ನು ಕೊಟ್ಟಾಗ, ಅದನ್ನೂ ತಿರಸ್ಕರಿಸಿದ ಯೋಗಿ ವೇಷಧಾರಿ. ಅಯ್ಯಾ ನಿನ್ನ ನಟನೆಯು ಯಶಸ್ವಿಯಾಗಿ ಮುಗಿಯಿತು. ಇನ್ನು ನಿನ್ನ ನಿಜರೂಪಿಗೆ ಹಿಂತಿರುಗೆಂದರೆ, ನಟನೆಯನ್ನೇ ಮುಂದುವರಿಸುತ್ತಿದ್ದಿಯಲ್ಲ , ತೆಗೆದುಕೋ ಎಂದು ತಟ್ಟೆಯನ್ನು ಮುಂದಿಟ್ಟಾಗ,ಮತ್ತೆ ತಿರಸ್ಕರಿಸಿದ ಯೋಗಿ ರೂಪಿಯು ಹೇಳಿದನು, ನನಗೀಗ ತ್ಯಾಗದ ಬೆಲೆಯ ಅರಿವಾಗಿದೆ,ರಾಜ ಕೊಟ್ಟ ಕಾಣಿಕೆಗಳು ಮತ್ತು ರಾಜ್ಯದ ಅರ್ಧಭಾಗವನ್ನೇ ತ್ಯಾಗ ಮಾಡಿದ ನನಗೆ ಇಡಿಯ ರಾಜ್ಯದ ಒಡೆತನ ಮಾತ್ರವಲ್ಲ ರಾಜ ಮತ್ತವನ ಪರಿವಾರದವರೆಲ್ಲಾ ಸೇವಕರಾಗಿ ದೊರೆತಿರುವಾಗ ನಿನ್ನ ಚಿನ್ನದ ನಾಣ್ಯಗಳ ತಟ್ಟೆ ಎಷ್ಟು ಕ್ಷುಲ್ಲಕವೆನ್ನಿಸಿದೆ ಆದುದರಿಂದ ಇಂದಿನಿಂದ ನಿಜವಾದ ಯೋಗಿಯಾಗಿ ತ್ಯಾಗಿಯಾಗಿಯೇ ಬದುಕುತ್ತೇನೆ, ನನಗಿನ್ನು ಏನೂ ಬೇಕಾಗಿಲ್ಲವೆಂದು ಮಂತ್ರಿಯನ್ನು ಕಳುಹಿಸಿದನು ತ್ಯಾಗದ ಇಂತಹ ನಡೆದಿರಬಹುದಾದ ಕಥೆಗಳು ಭಾರತದಲ್ಲಿ ಬಹಳಷ್ಟು ಇವೆ. ಮಹಾವೀರ ಮತ್ತು ಬುದ್ಢನ ರಾಜ್ಯ ತ್ಯಾಗದಿಂದ, ಸತ್ಯ ಸಾಕ್ಷಾತ್ಕಾರದಿಂದ, ಜನರೆಲ್ಲ ಅವರುಗಳ ಅನುಯಾಯಿಗಳಾಗಿ ವಿಶ್ವದ ಮಹಾನ್ ವ್ಯಕ್ತಿಗಳಾಗಿ ಅವರುಗಳ ಹೆಸರು ಇಂದಿಗೂ ಅಜರಾಮರವಾಗಿ ಉಳಿದಿರುವುದು ಎಲ್ಲರಿಗೂ ತಿಳಿದ ವಿಷಯ.

         ತ್ಯಾಗಿ ಹಾಗೂ ದೈವೀ ಪುರುಷರ ಗೌರವಕ್ಕಾಗಿ ಚಕ್ರವರ್ತಿಗಳೂ ಶಿರಬಾಗಿದ ಉದಾಹರಣೆಗಳು ಭಾರತದ ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಇದರಿಂದೆಲ್ಲಾ ತಿಳಿದು ಬರುವುದೇನೆಂದರೆ, ಸಮುದ್ರದ ನೀರನ್ನು ಕಂಡು ಸ್ವಾರ್ಥದಿಂದ, ತುಂಬಿ ತರಹೋದರೆ ಬೊಗಸೆಯ ತುಂಬ ಅಥವಾ ಹೊತ್ತು ತರಬಹುದಾದ ಪಾತ್ರೆಯ ತುಂಬಾ ಮಾತ್ರ ತರಬಹುದಾದರೆ ಏನೂ ಬೇಡವೆಂಬ ನಿರ್ಲಿಪ್ತತೆಯಿಂದ ಸಮುದ್ರದ ಸೌಂದರ್ಯವನ್ನಾಸ್ವಾದಿಸುವ ಮನಸ್ಸಿಗೆ ಇಡಿಯ ಕಡಲು ಮತ್ತದರ ಸೌಂದರ್ಯವೆಲ್ಲ ತನಗಾಗಿಯೇ ಎಂಬ ಭಾವನೆ ಬರಬಹುದಲ್ಲವೇ? ಇದನ್ನೇ ತ್ಯಾಗವೆನ್ನುವುದು. ನಮಗಾಗಿ ಏನೂ ಬೇಡವೆಂದಾಗ ವಿಶ್ವದ ಒಡೆತನವೇ ಅದರ ಒಡೆಯನ ಸಹಿತ ನಮ್ಮದಾಗುವುದು. 

         ಇದನ್ನೇ ವೇದಗಳಲ್ಲಿ "ತ್ಯಾಗೇನೈಕೆ ಅಮೃತತ್ವ ಮಾನಷುಃ" ಎಂದರೆ ತ್ಯಾಗದಿಂದ ಮಾತ್ರವೇ ಮನುಷ್ಯನಿಗೆ ಅಮೃತತ್ವ ಅಥವಾ ಮೋಕ್ಷ ಅಥವಾ ಮುಕ್ತಿ ಎಂದಿರುವುದು


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಅಶೋಕ್ ಕುಮಾರ್

ಹೆಚ್ಚಾಗಿ ಆಧ್ಯಾತ್ಮ ವಿಷಯದಲ್ಲಿ ಆಸಕ್ತರಾದ ಶ್ರೀ ಅಶೋಕ್ ರವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆಯೂ ಹೆಚ್ಚು ಅಭಿಮಾನ ವುಳ್ಳವರು.ಸಿಡ್ನಿಯಲ್ಲಿ ಆಧ್ಯಾತ್ಮಿಕ ತ್ರೈಮಾಸಿಕ ಪತ್ರಿಕೆ ಹೊರತಂದ ಹೆಗ್ಗಳಿಕೆ ಇವರದ್ದು. ಕನ್ನಡ ಭಾಷೆಯಲ್ಲಿ ಅತ್ಯುತ್ತಮ ಲೇಖನ, ಭಾಷಣ, ಚಿಂತನೆ ನೀಡುವ ಅಶೋಕ ಅವರು ಅನೇಕ ಬರಹ ನಮ್ಮ ವೆಬ್ಸೈಟ್ ಗೆ ಕೀರ್ತಿ ತಂದಿದೆ. 


ಶ್ರೀ. ಅಶೋಕ್ ಕುಮಾರ್ ಅವರಿಂದ ಮತ್ತಷ್ಟು ಲೇಖನಗಳು


pictureಗೋವರ್ಧನೋದ್ಧಾರಕ
pictureದೇವೇಂದ್ರನ ಅಮರಾವತಿ
pictureದಸರೆಯ ಬೊಂಬೆ
pictureಗಣಪನೆಂಬ ಗಹನ ತತ್ವ
pictureಆಧ್ಯಾತ್ಮಿಕ ಪರಂಪರೆ
pictureನಿಧಿಯ ಕಾಣದ ನಿರ್ಭಾಗ್ಯರು
pictureತ್ಯಾಗ...ಹೀಗೊಂದು ಕಥೆ
pictureದೊಂಬರಾಟವಯ್ಯ
pictureಆಕಾಶಿಕ ದಾಖಲೆಗಳು
pictureಕರುಣೆ

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023