ಕರುಣೆ

ಹೀಗೊಂದು ಕಥೆ, ಸಿರಿವಂತನಾದ ಒಬ್ಬ ವ್ಯಕ್ತಿಗೆ ಅನೇಕ ಜನ ಮಕ್ಕಳು. ಒಬ್ಬೊಬ್ಬರು ಒಂದೊಂದು ರೀತಿಯ ಗುಣ ಹೊಂದಿದ್ದರು. ಒಬ್ಬ ಹಣ ಮಾಡುವುದರಲ್ಲಿ ನಿಸ್ಸೀಮನಾದರೆ, ಇನ್ನೊಬ್ಬ ತಂದೆಯನ್ನು ಬಹಳ ಪ್ರೀತಿಸುತ್ತಾ, ಹೊಗಳುತ್ತಾ ಇರುತ್ತಾನೆ. ಮತ್ತೊಬ್ಬ ಒಳ್ಳೆಯ ಕಲಾವಿದನಾದರೆ, ಇನ್ನೊಬ್ಬ ಒಳ್ಳೆಯ ಬರಹಗಾರ. ಮಗದೊಬ್ಬ ಹೆಳವನಾದರೆ, ಇನ್ನೊಬ್ಬ ಕುರುಡ. ಬುದ್ಧಿಮಾಂದ್ಯದವನೊಬ್ಬ, ಜಿಪುಣನೊಬ್ಬ ಹೀಗೆ ಹಲವಾರು ಗುಣಗಳುಳ್ಳ ಮಕ್ಕಳು. ಅವರಲ್ಲಿ ಒಬ್ಬ ಬಹಳ ಸಾತ್ವಿಕ ವ್ಯಕ್ತಿ, ತನ್ನ ಆಸೆಗಳನ್ನೆಲ್ಲವನ್ನೂ ಬದಿಗಿಟ್ಟು ಬೇರೆಯವರ ಹಿತ ಬಯಸುವವನು. ಹಿರಿಯರನ್ನು ಗೌರವದಿಂದ ಕಾಣುತ್ತಿದ್ದನು. ಸಮಾನ ವಯಸ್ಕರಲ್ಲಿ ಸ್ನೇಹದಿಂದಿದ್ದನು. ಕಿರಿಯರಿಗೆ, ಅಂಗವಿಕಲರಿಗೆ, ಬುದ್ಧಿಮಾಂದ್ಯರಿಗೆಲ್ಲ ಅಪರಿಮಿತ ಪ್ರೀತಿ ತೋರಿಸುತ್ತಾ ತನ್ನ ಕೈಲಾದ ಸಹಾಯ ಮಾಡುತ್ತಿದ್ದನು. ಸ್ವಾಭಾವಿಕವಾಗಿ ಈ ಗುಣಗಳೆಲ್ಲಾ ತಂದೆಗೆ ಬಹಳ ಮೆಚ್ಚುಗೆಯಾಗುತ್ತಿತ್ತು. ಹೀಗಾಗಿ ತಂದೆ ಒಂದು ದಿನ ತನ್ನೆಲ್ಲಾ ಸಂಪತ್ತು ಮತ್ತು ಜವಾಬ್ದಾರಿಯನ್ನು ಸಂತೋಷದಿಂದ ಸಾತ್ವಿಕ ಮಗನಿಗೆ ವಹಿಸಿಕೊಟ್ಟನು. ತನ್ನ ಆದರ್ಶಗಳನ್ನೆಲ್ಲಾ ಮೈಗೂಡಿಸಿಕೊಂಡವನು, ತನಗೆ ಉತ್ತರಾಧಿಕಾರಿಯಾಗಲು, ತನ್ನೆಲ್ಲಾ ಮಕ್ಕಳಿಗೆ ತಂದೆಯ ಸ್ಥಾನ ವಹಿಸಿಕೊಳ್ಳಲು, ತನ್ನ ಸಂಪತ್ತನ್ನು ಸಾರ್ಥಕವಾಗಿ ವಿನಿಯೋಗಿಸಲು ತಕ್ಕವನೆಂದು ತನ್ನಲ್ಲಿಯೇ ಅವನನ್ನು ಒಂದಾಗಿಸಿಕೊಳ್ಳುತ್ತಾನೆ. ತಂದೆಯ ಈ ದೃಷ್ಟಿಕೋನ ಸಹಜವೇ ಅಲ್ವ?
ಆದರೆ ಈ ಕಥೆಯಲ್ಲಿ ಬರುವ ತಂದೆಯೇ ಜಗತ್ಪಿತ ಪರಮೇಶ್ವರ ಅಥವಾ ದೇವರು. ಅವನ ಮಕ್ಕಳು ನಾವೆಲ್ಲಾ. ಆದುದರಿಂದಲೇ ಧಾರ್ಮಿಕತೆಯಲ್ಲಿ ಮೂಲಭೂತವಾಗಿ ಬೇಕಾದದ್ದು ಅನುಕಂಪ ಅಥವಾ ಕರುಣೆ. "ದಯವಿಲ್ಲದ ಧರ್ಮ ಯಾವುದಯ್ಯ" ಎನ್ನುವ ವಚನ ಎಷ್ಟು ಅರ್ಥಪೂರ್ಣವಾಗಿದೆ! ಅದೇ ರೀತಿಯ ಇನ್ನೊಂದು ವಚನ "ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು...ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯ ನೀನು...", ಭಗವದ್ಗೀತೆಯ ಶ್ಲೋಕಗಳಲ್ಲಂತೂ ಅನೇಕ ಕಡೆ "ಭೂತ ದಯೆಯೇ ಪರಮ ಧರ್ಮ" ಅಂತ. ಭಕ್ತಿಯೋಗದಲ್ಲಿ ಭಗವಂತ ತನಗೆ ಪ್ರಿಯರಾದವರು ಯಾರು? ಅವರ ಗುಣಗಳೇನು ಎಂದು ವರ್ಣಿಸುತ್ತಾ "ಅದ್ವೇಷ್ಟಾ ಸರ್ವಭೂತಾನಾಂ ಮೈತ್ರ ಕರುಣ ಏವ ಚ| ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ...." ಅನ್ನುತ್ತಾನೆ. ಅಂದರೆ ಯಾವ ಜೀವಿಗಳನ್ನೂ ದ್ವೇಷಿಸದೇ ಎಲ್ಲರೊಡನೆ ಮೈತ್ರಿ ಮತ್ತು ಕರುಣೆಯಿಂದಿರುವವನು...ಅಹಂಕಾರಿಯಲ್ಲದವನು...ಸುಖ, ದುಃಖಗಳನ್ನು ಸಮಾನವಾಗಿ ಕಾಣುವವನು ನನಗೆ ಪ್ರಿಯ ಎಂದರ್ಥ.
ಒಬ್ಬೊಬ್ಬರಲ್ಲಂತೂ ಈ ಭೂತದಯೆ ಎಷ್ಟರ ಮಟ್ಟಿಗೆ ಉತ್ಕಟವಾಗಿರುತ್ತೆ ಅಂದ್ರೆ, ಕಷ್ಟಗಳಿರುವ, ದುಃಖವಿರುವ, ನೋವಿರುವ ಸಾವಿರುವ ಜಾಗಗಳನ್ನು ಹುಡುಕಿಕೊಂಡು ಹೋಗಿ ಅದನ್ನೇ ತಮ್ಮ ಕಾರ್ಯಕ್ಷೇತ್ರಗಳನ್ನಾಗಿಸಿಕೊಂಡು ಜೀವನವನ್ನೇ ಮುಡಿಪಾಗಿಡುತ್ತಾರಲ್ಲಾ? ಎಂತಹ ವ್ಯಕ್ತಿಗಳಿವರು!! ಇವರಿಗೆ ದೇಶ, ಭಾಷೆ, ಧರ್ಮಗಳ ಸೀಮೆಯೇ ಇಲ್ಲ. ಮಾನವೀಯತೆಯೇ ಮುಖ್ಯ. ಕೆಲವರನ್ನು ಉದಾಹರಿಸಬಹುದಾದರೆ ಯುದ್ಧಭೂಮಿಯಲ್ಲಿ ಗಾಯಾಳುಗಳಿಗೆ ಉಪಶಮನವನ್ನು ನೀಡುತ್ತಲೇ ಜೀವನವನ್ನು ಸವೆಸಿದ ಫ್ಲಾರೆನ್ಸ್ ನೈಂಟಿಂಗೇಲ್, ಡಾ||ಝಿವಾಗೋ ಮತ್ತು ಈಗಲೂ ಸಾವಿರ ಸಂಖ್ಯೆಯಲ್ಲಿರುವ ನಿಜವಾದ ಹೀರೋಗಳಾದ ಅನಾಮಧೇಯರು. ಇವರುಗಳಲ್ಲಿ ಬಹುತೇಕರು ಕೆಲಸವಿದು ಅಂತ ಮಾಡುವುದಿಲ್ಲ. ಅವರಿಗೆ ಸಮಯದ ಪರಿವೆಯೂ ಇರುವುದಿಲ್ಲ, ಸಂಬಳ ಅಥವಾ ಇನ್ನಿತರ ಫಲಾಪೇಕ್ಷಿಗಳಾಗಿರುವುದಿಲ್ಲ, ದೇವರು ಯಾವುದರಿಂದ ಮಾಡಿರಬಹುದು ಇವರುಗಳ ಮನೋಬುದ್ಧಿಗಳನ್ನು? ದೇವರು ಇಂಥಹವರಿಗೆ ಹತ್ತಿರವಾಗಿಲ್ಲದಿದ್ದರೆ ಇನ್ನಾರಿಗಿರಬಹುದು? ಇವರದ್ದು ನಿಜವಾದ ಧರ್ಮವಲ್ಲದಿದ್ದರೆ ಧರ್ಮವೇ ಅರ್ಥಹೀನ ಅಂತ ಅಲ್ವಾ?
ಹಿಂದೆ ನಮ್ಮ ಸ್ನೇಹಿತರೊಬ್ಬರಿದ್ದರು, ದೇವರು ಧರ್ಮದ ವಿಷಯದಲ್ಲಿ ಮಹಾಜ್ಞಾನಿ, ಮಹಾ ತಾರ್ಕಿಕರು, ಬಹಳ ಬುದ್ಧಿವಂತರು. ಆದರೆ, ಮಾನವತೆಯ, ಅಸಹಾಯಕರ, ವಿಕಲಾಂಗರ ಮಾತುಬಂದಾಗ, ಅದಕ್ಕೆಲ್ಲಾ ನಾವು ಹೊಣೆಗಾರರಲ್ಲ, ಅವರವರ ಹಿಂದಿನ ಕರ್ಮಗಳಿಗೆ ಸರಿಯಾಗಿ ದೇವರು ಅವರನ್ನಿಟ್ಟಿದ್ದಾನೆ ಅಂತಿದ್ರು. ಒಂದು ದೃಷ್ಟಿಯಲ್ಲಿ ನೋಡಿದರೆ ಅದು ನಿಜ. ಕಾರ್ಯ, ಕಾರಣಗಳ ಸಂಬಂಧದಿಂದ ಎಲ್ಲವೂ ಪೂರ್ವಾರ್ಜಿತ ಕರ್ಮಗಳೇ. ಅದನ್ನು ಯಾರೂ ಬದಲಿಸಲು ಆಗಲ್ಲ ನಿಜ. ಆದರೆ ಹೀಗಂತ ಎಲ್ಲರೂ ಸುಮ್ಮನಿದ್ದರೆ ಏನಾಗಬಹುದು? ಅಥವಾ ನಮ್ಮ ಮಕ್ಕಳಿಗೇ ಹಾಗಾದಾಗ ನಾವು ಹೀಗೆ ಹೇಳಿ ಸುಮ್ಮನಾಗ್ತೀವಾ? ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ಪರೀಕ್ಷಿಸಲು ಅಸಹಾಯಕರನ್ನು, ನೊಂದಿರುವವರನ್ನು ದೇವರು ನಮ್ಮ ಮುಂದೆ ತರ್ತಾ ಇರಬಹುದಾ? ಹಾಗಾದಾಗ ಅವರಿಗೆ ಸಹಾಯ ಮಾಡುವುದಿರಲಿ, ಹೃದಯದಲ್ಲಿ ಸ್ವಲ್ಪವೂ ಮರುಕ ಹುಟ್ಟದಿದ್ದರೆ ಭಗವಂತನು ಪರೀಕ್ಷೆಯಲ್ಲಿ ನಮ್ಮನ್ನೇನು ಮಾಡಬಹುದು? ಯೋಚಿಸಬೇಕಾದ ವಿಚಾರನೇ ಅಲ್ವಾ? ಅನೇಕರು ಹಲವು ಸೇವಾ ಸಂಸ್ಥೆಗೆ ಒಂದೊಂದು ರೂಪದಲ್ಲಿ ಸಹಾಯ ಮಾಡುತ್ತಾರೆ. ಸಾಧಾರಣವಾಗಿ ಕೆಲವರು ಸ್ವಯಂ ಸೇವಾ ಸಂಸ್ಥೆಗೆ ಇಂತಿಷ್ಟು ಅಂತ ಹಣ ಕಳಿಸಿ ಸುಮ್ಮನಾಗಿ ಬಿಡುತ್ತಾರೆ. ಇದೂ ಒಳ್ಳೆ ಮನೋಭಾವವೇ ನಿಜ. ಸೇವೆ ಮಾಡುವುದಕ್ಕೆ ಸ್ವಯಂ ಸೇವಕರಿದ್ದರೂ ಆರ್ಥಿಕ ಸಹಾಯವಿಲ್ಲದಿದ್ದರೆ ಏನು ತಾನೆ ಮಾಡಬಹುದು? ಇಷ್ಟಾದರೂ ಮಾಡಿದ್ರೆ ಧನ್ಯತೆ ಇದೆ ನಿಜ....ಆದರೂ ಪುಣ್ಯವೆಲ್ಲ ಇವರಿಗೇ ಅಲ್ಲ. ಯಾರು ಭೌತಿಕವಾಗಿ ನೋವಿನ ಜೊತೆ, ಹಸಿವಿನ ಜೊತೆ ಇದ್ದು ಸೇವೆ ಮಾಡುತ್ತಾ, ಮರುಗುತ್ತಾ, ಅವರ ಸಮಾಧಾನದ ಸಂತೋಷವನ್ನು ಅನುಭವಿಸುತ್ತಿರುತ್ತಾರೋ, ದೈಹಿಕವಾಗಿ, ಮಾನಸಿಕವಾಗಿ ಸ್ಪಂದಿಸಿರುತ್ತಾರೋ ಅಥವಾ ತನು ಕರಗುವವರಿಗೆ, ಮನ ಕರಗುವವರಿಗೆ ಮಾತ್ರ ದೇವರು ಹತ್ತಿರವಾಗೋದು ಮಾತ್ರವಲ್ಲ, ಇವರು ದೇವರಲ್ಲೇ ಒಂದಾಗಿ ಹೋಗ್ತಾರೇನೋ ಅಥವಾ ಮೋಕ್ಷ ಸಾಮ್ರಾಜ್ಯದ ಅಧಿಕಾರಿಗಳಿವರು ಅನ್ಸಲ್ವಾ?
ಈ ಪ್ರಪಂಚದಲ್ಲಿ ಯಾರು ಯಾರಿಗೆ ತಾನೇ ಹೇಗೆ ಸಹಾಯ ಮಾಡಿ ಪ್ರಪಂಚವನ್ನುದ್ಧಾರ ಮಾಡಬಹುದು? ವಿವೇಕಾನಂದರು ಹೇಳಿದ ಹಾಗೆ ಎಲ್ಲರಿಗೂ ಉಪಯೋಗ ಆಗ್ಲಿ ಅಂತ ದೊಡ್ಡ ಸೇತುವೆ ಅಥವಾ ಆಸ್ಪತ್ರೆ ಕಟ್ತೀರಾ? ಕ್ಷಣಮಾತ್ರದಲ್ಲಿ ಧೂಳೀಪಟ ಮಾಡಬಹುದು ಪ್ರಕೃತಿ. "ಪ್ರಪಂಚಕ್ಕೆ ಯಾರಿಂದ ಯಾವ ಉಪಯೋಗವೂ ಬೇಕಾಗಿಲ್ಲ. ವಿಶ್ವದ ಪುರಾತನ ನಾಗರೀಕತೆಗಳೆಲ್ಲ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಯಾರಿಂದ ಯಾರಿಗಾದ ಉಪಯೋಗವನ್ನೂ ನೆನಪಿನಲ್ಲಿಟ್ಟುಕೊಂಡಿಲ್ಲ ಈ ಪ್ರಪಂಚ. ಆದರೆ ಉಪಕಾರ ಮಾಡುವಾಗ, ಮಾಡುವವರಲ್ಲಿ ಬರುವ ಧನ್ಯತೆಯ ಭಾವನೆಯೇ ಅವರಿಗೆ ದೊರೆಯಬಹುದಾದಂತಹ ದೊಡ್ದ ಪ್ರಯೋಜನ. ಹಾಗಾಗಿ ಉಪಕಾರ ಪಡೆದುಕೊಳ್ಳುವವರಿಗೆ, ಉಪಕಾರ ಮಾಡುತ್ತಿರುವವರು ಕೃತಜ್ಞರಾಗಿರಬೇಕು" ಅಂತ ವಿವೇಕಾನಂದರು ಹೇಳುತ್ತಾರೆ.
ವೇದಾಂತದ ತತ್ವದಂತೆ ಪ್ರಪಂಚವೆಲ್ಲಾ ಒಂದು ಕನಸಿನಂತೆ. ನಾವು ನೋಡುತ್ತಿರುವ ದೃಶ್ಯಗಳು, ಜನಗಳು ಎಲ್ಲವೂ ಪಾರಮಾರ್ಥಿಕವಾಗಿ ಮಿಥ್ಯೆ. ಕನಸಿನಂತಹ ದೃಶ್ಯಗಳನ್ನು ನೋಡುತ್ತಿರುವವರು ಮಾತ್ರ ಸತ್ಯ. ಜನರು, ಲೋಕವೆಲ್ಲಾ ಆ ವ್ಯಕ್ತಿಯ ರೂಪಾಂತರಗಳು ಮಾತ್ರ. ಹಾಗಾದರೆ ಸಹಾಯ ಮಾಡುವವರು ಯಾರು? ಮಾಡಿಸಿಕೊಳ್ಳುವವರು ಯಾರು? ಮಾಡಿದ ಹಾಗೆ, ಮಾಡಿಸಿಕೊಳ್ಳುವ ಹಾಗೆ ಎಲ್ಲಾ ಬರಿಯ ಭಾವನೆಗಳು ಮಾತ್ರ ಅಲ್ವಾ? ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿಸುವುದಷ್ಟೇ. ವ್ಯವಹಾರಿಕ ಪ್ರಪಂಚದಲ್ಲಿ ಆ ಧನ್ಯತೆಯ ಭಾವನೆಗಾಗಿ ಅದನ್ನು ಮಾಡುವ ಅನಿವಾರ್ಯತೆಯಂತೂ ಇದೆ.