ಗಾಂಪರ ಗುರು(ಹಾಸ್ಯ)

ಗಾಂಪರ ಗುರುಗಳು ಶಿಷ್ಯರನ್ನೂ ಕರೆದುಕೊಂಡು ಒಮ್ಮೆ ದೂರದೂರಿಗೆ ಎತ್ತಿನಗಾಡಿಯಲ್ಲಿ ಪ್ರಯಾಣ ಹೊರಟಿದ್ದರು.ಆಯಾಸವಾಗಿದ್ದ ಗುರುಗಳು ಅಲುಗಾಡುವ ಗಾಡಿಯಲ್ಲಿ ಹಾಗೇ ತೂಕಡಿಸುತ್ತಿದ್ದರು,ಆಗ ಅವರ ತಲೆಯ ಮೇಲಿನ ರುಮಾಲು ಗಾಳಿಗೆ ಹಾರಿ ಹೋಯಿತು.
ಆದರೆ ಗುರುಗಳ ಅಪ್ಪಣೆಯಿಲ್ಲದೆ ಶಿಷ್ಯರು ಎಂದೂ ಏನೂ ಮಾಡುವಹಾಗಿರಲಿಲ್ಲ. ಶಿಷ್ಯರು ಸುಮ್ಮನಿದ್ದರು.ಗುರುಗಳು ತುಸು ಹೊತ್ತಿನ ಬಳಿಕ ಎದ್ದು ನೋಡಲು ರುಮಾಲು ಕಾಣದೆ ಶಿಷ್ಯರಿಗೆ ಬೈದರು.ಇನ್ನು ಮುಂದೆ ಏನೇ ಬಿದ್ದರೂ ತೆಗೆದು ಗಾಡಿಯಲ್ಲಿ ಹಾಕಿ ಎಂದು ಹೇಳಿ ಮತ್ತೆ ತೂಕಡಿಸತೊಡಗಿದರು. ನಂತರ ಎತ್ತುಗಳು ಹಾದಿಯಲ್ಲೇ ಸಗಣಿ ಹಾಕಿದವು, ಶಿಷ್ಯರು ತಕ್ಷಣ ಅದನ್ನು ಬಾಚಿ ಗಾಡಿಯಲ್ಲಿ ಹಾಕಿದರು, ವಾಸನೆ ತಡೆಯಲಾಗುವುದೇ? ಗುರುಗಳು ಎದ್ದು ರೇಗಿದರು, ಇನ್ನು ಮುಂದೆ ಹೀಗಾಗದಿರಲು ಒಂದು ಕಾಗದದ ಮೇಲೆ ಒಂದು ಪಟ್ಟಿ ಬರೆದು,ಇವು ಬಿದ್ದರೆ ಮಾತ್ರ ತೆಗೆಯಬೇಕು ಬೇರೇನೂ ಕೂಡದು ಎಂದರು.ಸ್ವಲ್ಪ ಹೊತ್ತಿನ ಬಳಿಕ ಹಳ್ಳಿ ದಾರಿಯ ಹಳ್ಳ ಕೊಳ್ಳ ದಾಟಿ ಹೋಗುತ್ತಿರಲು ಗುರುಗಳು ಗಾಡಿಯಿಂದ ಜಾರಿ ಬಿದ್ದರು,ಕೂಡಲೇ "ಅಯ್ಯಯ್ಯೋ ನನ್ನನು ಎತ್ತ್ರೋ ಎಂದು ಗೋಗರೆದರು" ಅದಕ್ಕೆ ಗಾಂಪ ಶಿಷ್ಯರು "ಗುರುಗಳೇ ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇಲ್ಲವೆಲ್ಲಾ" ಎಂದರು, ಅಯ್ಯೋ ಆಪಟ್ಟಿ ಕೊಡಿ ಎಂದು ಕಸಿದುಕೊಂಡು ತಮ್ಮ ಹೆಸರನ್ನೂ ಸೇರಿಸುವ ವರೆಗೂ ಶಿಷ್ಯರು ಅವರನ್ನು ಮುಟ್ಟಲೇ ಇಲ್ಲ.