ಕ್ರಿಕೆಟ್ (ಹಾಸ್ಯ)

ನಿವೃತ್ತ ಮುದುಕನೊಬ್ಬ ಮುಂಬೈನ ಗಲ್ಲಿಯಲ್ಲಿ ವಾಸಿಸುತ್ತಿದ್ದ.ಅದೇ ಗಲ್ಲಿಯಲ್ಲಿ ಯುವಕರು ಪ್ರತಿದಿನ/ರಾತ್ರಿ ಕ್ರಿಕೆಟ್ ಆಡುತ್ತಿದ್ದರು.ಗಲಾಟೆ ತಾಳಲಾರದ ಅಲ್ಲಿನ ನಿವಾಸಿಗಳು ಎಷ್ಟು ಬೇಡಿಕೊಂಡರೂ ಅವರು ಬೇರೆಕಡೆ ಮೈದಾನಕ್ಕೆ ಹೋಗಲು ಒಪ್ಪುತ್ತಿರಲಿಲ್ಲ. ಮೊದಲೇ ವಾಹನಗಳ ಸದ್ದು ಅದರ ಜೊತೆಗೆ ಯುವಕರ ಕಿರುಚಾಟ ಮುದುಕನಿಗೆ ರೋಸಿ ಹೋಗಿತ್ತು.ಒಂದು ದಿನ ಯುವಕರನ್ನೆಲ್ಲಾ ಕರೆದು "ಹುಡುಗರೇ ನನಗೆ ಕ್ರಿಕೆಟ್ ಅಂದ್ರೆ ನನಗೆ ಬಹಳ ಇಷ್ಟ ,ನೀವು ದಯವಿಟ್ಟು ಇನ್ನು ಮುಂದೆ ಇಲ್ಲೇ ದಿನ/ ರಾತ್ರಿ ಕ್ರಿಕೆಟ್ ಆಡಿದರೆ ನಿಮಗೆ ವಾರಕ್ಕೆ 25 ರೂಪಾಯಿ ಕೊಡುತ್ತೇನೆ" ಎಂದ. ಹುಡುಗರೂ ಖುಷಿಯಿಂದ ಒಪ್ಪಿದರು.
ವಾರ ಕಳೆಯಿತು ಒಪ್ಪಿದಂತೆ ಹಣವೂ ದೊರಕಿತು, ಮತ್ತೊಂದು ವಾರ ಕಳೆಯಿತು ಮುದುಕ ಬರೀ 20 ರೂಪಾಯಿ ಕೈಗಿಟ್ಟ, ಇರಲಿ , ಎಂದು ಹುಡುಗರು ಸಹಕರಿಸಿದರು. ಮುಂದಿನ ವಾರ ಬರೀ15 ರೂಪಾಯಿ ! ಅದರ ಮುಂದಿನ ವಾರ ಬರೀ 10 ರೂಪಾಯಿ!! ನಂತರ ವಾರ ಬರೀ 5 !!!
"ಅರೆ ಏನ್ ಸ್ವಾಮೀ ವಾರಕ್ಕೆ 25 ರೂಪಾಯಿ ಅಂತ ಹೇಳಿ ಈಗ ಬರೀ 5 ಕ್ಕೆ ಇಳಿದಿದ್ದೀರ ? ಇದು ಯಾವ ನ್ಯಾಯ ?" ಅದಕ್ಕೆ ಮುದುಕ "ನೋಡ್ರಪ್ಪಾ ನನಗೆ ಪೆನ್ ಶನ್ ಹಣ ಬರೋದೇ ಕಡಿಮೆ ನನ್ನಿಂದ ವಾರಕ್ಕೆ 25 ರೂಪಾಯಿ ಕೊಡಕ್ಕಾಗಲ್ಲ" ಅಂದ, ಬೇಕೇ ಬೇಕೆಂದು ಹುಡುಗರು ಹಟ ಹಿಡಿದರು, ಆಗದೆಂದು ಮುದುಕ ಪಟ್ಟು ಹಿಡಿದ, ಕಡೆಗೆ ಕೋಪದಿಂದ ಮುದುಕ "ಆಗಲ್ಲಾ ಅಂದ್ರೆ ಆಗಲ್ಲ ಅದೇನ್ ಮಾಡ್ತೀರೋ ಮಾಡಿ ನೋಡೋಣ" ಎಂದ.ಹುಡುಗರು " ಲೇ ಬನ್ರೋ ಇನ್ಮೇಲೆ ಈ ಬೀದೀಲೇ ಕ್ರಿಕೆಟ್ ಆಡೋದು ಬೇಡ" ಎಂದು ಹೊರಟುಹೋದರು, ಮುದುಕನಿಗೆ ಬೇಕಾದ್ದೂ ಅದೇ ಅಲ್ವೇ ?