ವಿಷ !

ಜಲಜ ತನ್ನ ಮದುವೆಯಾದಾಗ್ಗಿನಿಂದ ತನ್ನ ಅತ್ತೆಯ ಜೊತೆ ಹೊಂದಿಕೊಳ್ಳಲುಸಾಧ್ಯವಾಗಲಿಲ್ಲ. ಏನಾದರೊಂದು ಕಾರಣ ಹುಡುಕಿ ಇಬ್ಬರೂ ಕಚ್ಚಾಡುವುದು, ಒಬ್ಬರನ್ನೊಬ್ಬರು ಶಪಿಸುವುದು ಸಾಮಾನ್ಯವಾಗಿಬಿಟ್ಟಿತ್ತು. ಅತ್ತೆ ಸೊಸೆಯರ ಜಗಳ ದಿನೇದಿನೇ ಬೆಳೆಯುತ್ತಾ ಜಲಜಳಿಗೆ ಒಮ್ಮೆ ರೋಸಿಹೋಗಿ ಒಬ್ಬ ಪಂಡಿತನ ಬಳಿಗೆ ಹೋಗಿ ತನ್ನ ಕಷ್ಟವನ್ನು ಹೇಳಿಕೊಂಡು ಹಣ ಎಷ್ಟಾದರೂ ಸರಿ ಹೇಗಾದರೂ ಮಾಡಿ ತನ್ನ ಅತ್ತೆಗೆ ವಿಷ ಕುಡಿಸಿಯಾದರೂ ಕೊಲ್ಲುವ ಸಲಹೆ ಕೇಳಿದಳು. ವಿಚಾರವನ್ನು ನಿಧಾನವಾಗಿ ಪರಿಶೀಲಿಸಿದ ನಂತರ ಪಂಡಿತ "ಅಮ್ಮಾ ಜಲಜ ನಾನು ನಿನಗೆ ಒಂದು ಸೀಸೆ ವಿಷವನ್ನು ಕೊಡುತ್ತೇನೆ, ಆದರೆ ನೀನು ಇದನ್ನು ಪ್ರತಿದಿನ ಊಟದಲ್ಲಿ ಬೆರೆಸಿ ಕೊಡು,ನಿನ್ನತ್ತೆ ನಿಧಾನವಾಗಿ ಸಾಯುತ್ತಾಳೆ"ಎಂದ. ಕೂಡಲೇ ಆ ಸೀಸೆಯನ್ನು ಮನೆಗೆ ತಂದು ಎಂದಿನಂತೆ ಅತ್ತೆಯ ಕೂಡ ಕೋಪ ಮಾಡದೆ ಊಟೋಪಚಾರವನ್ನು ತಾನೇ ಮಾಡತೊಡಗಿದಳು. ಊಟದಲ್ಲಿ ವಿಷವನ್ನು ಮರೆಯದೇ ಬೆರೆಸಿ ಇನ್ನೇನು ಸ್ವಲ್ಪವೇ ಕಾಲ ಬದುಕಿರುವ ಅತ್ತೆಯ ಜೊತೆ ಸಂತೋಷದಿಂದ ಮಾತನಾಡುತ್ತಾ ಹೊಂದಿಕೊಳ್ಳುತ್ತಾ ಬಂದಳು. ಮೊದಮೊದಲು ಕಷ್ಟವೆನಿಸಿದರೂ ಹಾಗೇ ಹೊಂದಿಬಾಳುವುದು ಅಭ್ಯಾಸವಾಗಿ ದಿನಗಳು,ವಾರಗಳು ತಿಂಗಳುಗಳೇ ಕಳೆದವು.
ಅತ್ತೆಗೂ ತನ್ನ ತಪ್ಪುಗಳರಿವಾಗಿ ಜಲಜಳನ್ನು ಕ್ಷಮೆಕೇಳಿ ತಾನೂ ಆಕೆಯನ್ನು ಕ್ಷಮಿಸಿ ಸಂತೋಷದಿಂದ ಕಾಲ ಕಳೆದಳು. ಜಲಜಳಿಗೆ ಸಂಕಟವಾಗುತ್ತಾ ಬಂದಿತು ಇಷ್ಟೊಂದು ಒಳ್ಳೆಯ ಅತ್ತೆಯನ್ನು ತನ್ನಕೈಯ್ಯಾರೆ ಕೊಲ್ಲುವುದಾದರೂ ಹೇಗೆ" ಒಂದು ದಿನ ಪಂಡಿತನ ಬಳಿ ಓಡಿಬಂದು"ಸ್ವಾಮೀ ಪಂಡಿತರೇ ಹೇಗಾದರೂ ಮಾಡಿ ನನ್ನ ಅತ್ತೆಯನ್ನು ಉಳಿಸಿಕೊಡಿ ಅವರು ಸಾಯುವುದು ನನಗೆ ಇಷ್ಟವಿಲ್ಲ, ದಯೆಮಾಡಿ"ಎಂದು ಗೋಗರೆದಳು.ಅದಕ್ಕೆ ಪಂಡಿತನು "ಅಮ್ಮಾ ಜಲಜ ನೀನೇನೂ ಭಯಪಡಬೇಡ ನಿನ್ನ ಅತ್ತೆಗೆ ಏನೂ ಆಗದು,ನಾನಂದು ಕೊಟ್ಟಿದ್ದು ವಿಷವಲ್ಲ ನಿನ್ನಲ್ಲಿ ಈ ಬದಲಾವಣೆ ಕಾಣಲೆಂದು ಹಾಗೆ ಮಾಡಿದೆ"ಎಂದನು. ಜಲಜಳ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ತನ್ನೊಳಗಾದ ಬದಲಾವಣೆಯನ್ನು ಉಳಿಸಿಕೊಂಡು ಸಂಸಾರ ನಡೆಸಿದಳು.