ಕ್ರೂರ ಪ್ರಾಣಿ

ಕಾಡಿನಲ್ಲೊಂದು ಸುಂದರವಾದ ಮರ.ಕಾಡು ಪ್ರಾಣಿಗಳೆಲ್ಲಾ ಒಮ್ಮೊಮ್ಮೆ ಬಂದು ಆ ಮರದಡಿ ವಿಶ್ರಮಿಸಿ ಹೋಗುತ್ತಿದ್ದವು.ಹಾಗೇ ಅದೇ ಮರದಡಿಯಲ್ಲೇ ಮಲ-ಮೂತ್ರ ವಿಸರ್ಜನೆಯನ್ನೂ ಮಾಡಿ ಹೋಗುತ್ತಿದ್ದವು.ಅದರಿಂದ ಆ ಮರಕ್ಕೆ ಬೇಸರವಾಗಿತ್ತು.ಒಂದು ದಿನ `ನನ್ನ ಬಳಿ ಯಾವ ಪ್ರಾಣಿಗಳು ಬಾರದಂತೆ ಮಾಡುತ್ತೇನೆ,ನನ್ನ ಈ ಉದ್ದನೆಯ ಟೊಂಗೆಯಿಂದ ಬೀಸಿ ಆ ಪ್ರಾಣಿಗಳನ್ನು ಓಡಿಸುತ್ತೇನೆ'ಎಂದು ತನ್ನ ಪಕ್ಕದ ಮರಗಳಿಗೆ ಹೇಳಿತು.ಅವು ಹಾಗೆ ಮಾಡಬೇಡ ಎಂದು ಎಷ್ಟು ಬೇಡಿದರೂ ಈ ಮರ ಕೇಳಲಿಲ್ಲ .ಆ ದಿನದಿಂದ ವಿಶ್ರಾಂತಿಗೆ ಬಂದ ಎಲ್ಲ ಪ್ರಾಣಿಗಳಿಗೂ ತನ್ನ ಟೊಂಗೆಯಿಂದ ಬಲವಾಗಿ ಬೀಸಿ ಬಾರಿಸಿತು,ಪ್ರಾಣಿಗಳು ಹೆದರಿ ಓಡಿವವು.ಮುಂದೆ ಯಾವ ಪ್ರಾಣಿಗಳೂ ಹತ್ತಿರ ಸುಳಿಯಲಿಲ್ಲ. ಒಂದು ದಿನ ಮುಂಜಾನೆ ನಾಲ್ಕು ಜನ ಅಲ್ಲಿಗೆ ಬಂದರು. ಮರವು ಓ ಇವರೂ ಪ್ರಾಣಿಗಳಿಗೆ ಹೆದರಿ ಇಲ್ಲಿ ಬಂದಿರಬೇಕು,ವಿಶ್ರಾಂತಿ ಪಡೆಯಲಿ ಇಂದು ಸುಮ್ಮನೆ ನೋಡುತ್ತಿತ್ತು.ಆದರೆ ಬಂದವರು ಮರ ಕಡಿದು ಸಾಗಿಸುವವರು,ಅವರು ತಮ್ಮ ಕೆಲಸವನ್ನು ಮೊದಲು ಅದೇ ಮರದಿಂದಲೇ ಶುರು ಮಾಡಿಕೊಂಡರು.
ನೀತಿ 1:`ಕುರುಡು ಕಣ್ಣಿಗಿಂತ ಮೆಳ್ಳಗಣ್ಣೇ ವಾಸಿ" ಎನ್ನುವ ಗಾದೆಗೆ ಹೋಲುತ್ತದೆ.
ನೀತಿ 2: ಮನುಜನೇ ಎಲ್ಲರಿಗಿಂತ ಕ್ರೂರ ಪ್ರಾಣಿ