ಜಾಡಿ

ಫಿಲಾಸಫಿ ಪ್ರೊಫೆಸರ್ ಒಬ್ಬ ತನ್ನ ತರಗತಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ,ತನ್ನ ಬಳಿಯಿದ್ದ ಗಾಜಿನ ಜಾಡಿಯಲ್ಲಿ ದಪ್ಪ ಹಾಗೂ ನುಣುಪಾದ ನದಿಯಲ್ಲಿ ಸಿಗುವ ಕಲ್ಲುಗಳನ್ನು ತುಂಬಿದ."ಮಕ್ಕಳೇ, ಈಗ ನೋಡಿ ಜಾಡಿ ತುಂಬಿದೆಯಲ್ಲವೇ?" ಮಕ್ಕಳು ಹೂ ಎಂದು ತಲೆ ಆಡಿಸಿದರು.
ನಂತರ ಕಡಲೆ ಗಾತ್ರದ ಸಣ್ಣ ಸಣ್ಣ ಕಲ್ಲುಗಳನ್ನು ಅದೇ ಜಾಡಿಗೆ ಸುರಿದ,ಜಾಡಿ ಅಲ್ಲಾಡಿಸಲು ಸಣ್ಣ ಕಲ್ಲುಗಳು ದೊಡ್ಡಕಲ್ಲುಗಳ ಸಂಧಿಯಲ್ಲಿ ನುಸುಳಿದವು."ಮಕ್ಕಳೇ, ಈಗ ನೋಡಿ ಜಾಡಿ ತುಂಬಿದೆಯಲ್ಲವೇ?"ಅಂದ.ಮಕ್ಕಳು ಒಪ್ಪಿದರು.
ನಂತರ ಪ್ರೊಫೆಸರ್ ಒಂದು ಚೀಲದಲ್ಲಿ ಇದ್ದ ಮರಳನ್ನು ಆ ಜಾಡಿಗೆ ಸುರಿದನು.ಮರಳು ಕಲ್ಲುಗಳ ಸಂದುಗೊಂದುಗಳನ್ನು ಹೊಕ್ಕು ಜಾಡಿ ಭರ್ತಿಯಾಯಿತು.ಮತ್ತದೇ ಪ್ರಶ್ನೆ "ಈಗ ನೋಡಿ ಜಾಡಿ ತುಂಬಿದೆಯಲ್ಲವೇ?" ಮಕ್ಕಳು "ಹೂ ಹೌದು" ಎಂದರು.
ಆಗ ಪ್ರೊಫೆಸರ್ ಹೇಳಿದ "ಮಕ್ಕಳೇ ಗಮನವಿಟ್ಟು ಕೇಳಿ ಈ ಜಾಡಿಯೇ ನಿಮ್ಮ ಜೀವನ ಅಂದುಕೊಳ್ಳಿ, ಕಲ್ಲುಗಳೇ ಬಹು ಮುಖ್ಯವಾದ ಸಂಸಾರ,ಸಂಗಾತಿ,ಆರೋಗ್ಯ,ಮಕ್ಕಳು ಇದ್ದಹಾಗೆ.ನೀವು ಎಲ್ಲಾ ಕಳೆದುಕೊಂಡರೂ ಇವರು ನಿಮ್ಮೊಡನೇ ಇರುತ್ತಾರೆ ಆಗಲೂ ನಿಮ್ಮ ಜೀವನ(ಜಾಡಿ)ಪೂರ್ತಿಯಾಗೇ ಇರುತ್ತದೆ.ಇನ್ನು ಸಣ್ಣ ಕಲ್ಲುಗಳು ನಿಮ್ಮ ಭೋಗ-ಭಾಗ್ಯಗಳು, ಆಸ್ತಿ-ಅಂತಸ್ತುಗಳು,ಇನ್ನು ಮರಳು ಅತಿ ಸಣ್ಣ ವಿಷಯ/ವಸ್ತುಗಳು.ನೀವು ಮರಳನ್ನೇ ಜಾಡಿಗೆ ತುಂಬಿಕೊಂಡರೆ ಬೇರೆ ಯಾವುದಕ್ಕೂ ಸ್ಥಳವೇ ಇಲ್ಲದಂತಾಗುತ್ತದೆ" ಎಂದ.