ಭೂತ!(ಹಾಸ್ಯ)

ತೆನ್ನಾಲಿ ರಾಮ ಕೃಷ್ಣನ ಬುದ್ಧಿವಂತಿಕೆ ,ಸಮಯಸ್ಪೂರ್ತಿ, ಜಾಣತನ, ಸಲಹೆ ಎಲ್ಲ ಜನರ ಮನೆ ಮಾತಾಗಿದ್ದ ಕಾಲವದು. ಆಗ ಒಬ್ಬ ಸಾಹುಕಾರನು ತನ್ನ ಕಷ್ಟವನ್ನು ಹೇಳಿಕೊಳ್ಳಲು ರಾಮಕೃಷ್ಣನ ಬಳಿಗೆ ಬಂದ. "ರಾಮ ಕೃಷ್ಣಾ, ನನಗೆ ದಿನಾ ರಾತ್ರಿ ಮಲಗಿದಾಗ ನನ್ನ ಮಂಚದಡಿ ಒಂದು ಭಯಂಕರ ಭೂತ ಮಲಗಿದಂತೆ ಕನಸು ಬರುತ್ತದೆ, ಇದರಿಂದ ನನಗೆ ತುಂಬಾ ಭಯವಾಗಿದೆ,ಆದರೆ ಬೆಳಿಗ್ಗೆ ಎದ್ದು ನೋಡಿದಾಗ ಅದು ಅಲ್ಲಿ ಇರುವುದಿಲ್ಲ, ಅದಕ್ಕೆ ಏನಾದರೂ ಒಂದು ಉಪಾಯ ಹೇಳು. ನಿನಗೆ ನೂರು ವರಹಗಳನ್ನು ಕೊಡುತ್ತೇನೆ" ಎಂದ. ಅದಕ್ಕೆ ರಾಮಕೃಷ್ಣ "ಮೊದಲು ನೂರು ವರಹ ಕೊಡಿ ಆನಂತರ ಉಪಾಯ ಹೇಳುವೆ" ಎಂದ. ಅದರಂತೆ ಆ ಶ್ರೀಮಂತ ಹಣದ ಚೀಲವನ್ನು ಅವನ ಕೈಗಿತ್ತ. ರಾಮ ಕೃಷ್ಣ ಮೊದಲೇ ಉಪಾಯ ಯೋಚಿಸಿಬಿಟ್ಟಿದ್ದ. ಹಣ ಕೈಗೆ ಸಿಕ್ಕಿದ ತಕ್ಷಣ ಹೇಳಿದ"ನೋಡಿ ಸ್ವಾಮಿ ನೀವು ಈ ದಿನವೇ ಮನೆಗೆ ಹೋಗಿ ನೀವು ಮಲಗುವ ಮಂಚದ ನಾಲ್ಕೂ ಕಾಲುಗಳನ್ನು ಕತ್ತರಿಸಿ, ನಂತರ ಆ ಭೂತಕ್ಕೆ ಈ ರಾತ್ರಿಯಿಂದ ನಿಮ್ಮ ಮಂಚದ ಕೆಳಗೆ ಜಾಗ ಇದ್ದರೆ ತಾನೆ!" ಎಂದು ಹೇಳಿ ಕಳಿಸಿದ. ಶ್ರೀಮಂತ ಅದರಂತೆಯೇ ಮಂಚದ ಕಾಲುಗಳನ್ನು ಕತ್ತರಿಸಿ ನೆಮ್ಮದಿಯಿಂದ ಮಲಗಿದ. ಆತನ ಭ್ರಮೆಯೂ ದೂರವಾಯಿತು.