ಕಳ್ಳ ಸಾಧು

ರಾಜ ಕೃಷ್ಣದೇವರಾಯನ ರಾಜ್ಯದಲ್ಲಿ ಒಮ್ಮೆ ಸಾಧು ಒಬ್ಬನು ಬಂದು ದೇವರ ಗುಡಿ ಸೇರಿಕೊಂಡು ಜನರಿಗೆ ತಾನು ತನ್ನ ಮಂತ್ರಶಕ್ತಿಯಿಂದ ಪಾಪಗಳನ್ನು ಕಳೆಯಬಲ್ಲೆ, ನೋವುಗಳನ್ನು ನೀಗಿಸಬಲ್ಲೆ, ರೋಗ ರುಜಿನಗಳನ್ನು ವಾಸಿಮಾಡಬಲ್ಲೆ, ಕಷ್ಟಗಳನ್ನು ನಿವಾರಿಸಬಲ್ಲೆ ಎಂದೆಲ್ಲಾ ಹೇಳಿ ಅವರಿಂದ ಹೆಚ್ಚು ಹೆಚ್ಚು ಹಣ ಧಾನ್ಯ, ಉಡುಗೊರೆಗಳನ್ನು ಪಡೆಯಲು ಆರಂಭಿಸಿದ.ತೆನ್ನಾಲಿ ರಾಮನಿಗೆ ಈತನ ಮೇಲೆ ಸಂಶಯ ಮೂಡಿತು. ಆತನೂ ಗುಡಿಗೆ ತೆರಳಿ ತನಗೂ ಏನೋ ತೊಂದರೆ ಇದೆ ಎನ್ನುವಂತೆ ಆ ಸಾಧುವಿನ ಪಕ್ಕದಲ್ಲೇ ಕುಳಿತ. ಆದರೆ ಸಾಧು ಮತ್ತೆ ಮತ್ತೆ ಮಂತ್ರಗಳನ್ನೇ ಜಪಿಸುತ್ತಿದ್ದ. ಈತನು ಅಸಲಿ ಸಾಧುವಲ್ಲ ಎಂದು ತಿಳಿದ ಕೂಡಲೇ ಅವನ ಮುಂದೆ ಬಂದು ತಲೆ ಬಾಗಿ ನಮಸ್ಕರಿಸುವ ಹಾಗೆ ಬಗ್ಗಿ ಸಾಧುವುನ ಗಡ್ಡದ ಒಂದು ಕೂದಲನ್ನು ಕಿತ್ತು ಕೂಡಲೇ ಅಲ್ಲಿಂದ ಹೊರಗೆ ಓಡತೊಡಗಿದ.ಓಡುತ್ತಾ ಓಡುತ್ತಾ "ಹಾ! ಸಿಕ್ಕಿತು ಸಿಕ್ಕಿತು ಸ್ವರ್ಗಕ್ಕೆ ಹೋಗಲು ಬೀಗದ ಕೈ ಸಿಕ್ಕಿತು ಎಂದು ಕೂಗಿದ". ಜನರೆಲ್ಲಾ ವಿಷಯವೇನೆಂದು ತಿಳಿಯಲು ಅವನನ್ನು ಹಿಂಬಾಲಿಸಿದರು. ನಂತರ ನೂರಾರು ಜನ ಗುಡಿಯ ಕಡೆ ಧಾವಿಸಿ ಬಂದರು. ಇನ್ನು ಸಾಧು ತನ್ನ ಮುಂದಿನ ಗತಿ ಊಹಿಸಿ ತನ್ನ ಕಾಲುಗಳಿಗೆ ಬುದ್ಧಿ ಹೇಳಿದನು.