ಸ್ನೇಹ

ಒಬ್ಬ ಮುದುಕ ಕಡಲೇ ಸೊಪ್ಪನ್ನು ಮಾರುತ್ತಿದ್ದ.ಅಲ್ಲಿಗೆ ಬಂದ ನಾಲ್ಕು ಹುಡುಗರು ತಮ್ಮಲ್ಲೇ ಬಾಜಿ ಕಟ್ಟಿಕೊಂಡು ಒಬ್ಬೊಬ್ಬರಾಗಿ ಆತನ ಬಳಿ ಬಂದು ವ್ಯಾಪಾರ ಮಾಡಿದರು.ಮೊದಲನೆಯ ಹುಡುಗ ಎರಡು ರೂಪಾಯಿ ತಂದು "ಏಯ್ ಮುದುಕ ಎರಡು ರೂಪಾಯಿಗೆ ಎಷ್ಟು ಕಡಲೆ ಸೊಪ್ಪು ಕೊಡುತ್ತೀಯೋ"ಎಂದ.ಮುದುಕ ಎರಡು ಕಟ್ಟನ್ನು ಕೊಡಲು, ಹುಡುಗ ಹಣವನ್ನು ಎಸೆದು ಹೋದ.ಮುದುಕನಿಗೆ ಸಿಟ್ಟು ಬಂದಿತು, ಆದರೂ ಸುಮ್ಮನಿದ್ದ, ಎರಡನೆಯ ಹುಡುಗ ಬಂದು"ಏನಪ್ಪಾ ಎರಡು ರೂಪಾಯಿಗೆ ಎಷ್ಟು ಕಡಲೆಸೊಪ್ಪು ಕೊಡ್ತೀಯಪ್ಪಾ" ಎನ್ನಲು, ಮುದುಕ ನಾಲ್ಕು ಕಟ್ಟನ್ನು ಅವನ ಕೈಗಿಟ್ಟ. ಆ ಹುಡುಗ ತನ್ನ ಗುಂಪಿಗೆ ವಾಪಸಾಗಲು ಅವನ ನಂತರ ಮೂರನೇಯ ಹುಡುಗ ಮುದುಕನ ಬಳಿಗೆ ಬಂದು"ಅಜ್ಜಾ ಎರಡುರೂಪಾಯಿಗೆ ಎಷ್ಟುಕಡಲೆ ಸೊಪ್ಪು ಕೊಡುವೆ ಅಜ್ಜಾ ?" ಎನ್ನಲು ಮುದುಕ ಎದ್ದು ನಿಂತು ಅವನ ಕೆನ್ನೆ ಸವರಿ ನನ್ನ ಮನೆಯಲ್ಲೂ ನಿನ್ನಂತದೇ ನಾಲ್ಕೈದು ಮೊಮ್ಮಕ್ಕಳು ನನಗಿದ್ದಾರೆ ಮಗೂ ತಗೊ ಎಂದು ಐದಾರು ಕಟ್ಟನ್ನು ಅವನ ಕೈಗಿತ್ತ.ಇನ್ನು ಕಡೇಯ ಹುಡುಗ ನಡೆದ್ದದ್ದೆಲ್ಲಾ ಕಂಡು ಬೇರೆ ದಾರಿ ತೋಚದೆ ಮುದುಕನ ಮುಂದೆ ನಿಂತು"ಅಯ್ಯಾ ನನ್ನ ಗೆಳೆಯರು ನಿನ್ನನ್ನು ಅಪ್ಪಾ, ಅಜ್ಜಾ ಎಂದೆಲ್ಲಾ ಕರೆದದ್ದಕ್ಕೆ ಅವರಿಗೆ ಹೆಚ್ಚುಹೆಚ್ಚು ಕಟ್ಟನ್ನಿತ್ತೆ, ಆದರೆ ನಾನು ನಿನ್ನ ಸ್ನೇಹಿತನಾಗಲು ಬಯಸುವೆ ನನಗೆ ಎರಡು ರೂಗೆ ಎಷ್ಟು ಕಟ್ಟನ್ನು ಕೊಡುವೆ?" ಎಂದ. ಆ ಮಾತನ್ನು ಕೇಳಿ ಮುದುಕ ಎದ್ದುನಿಂತು ಹುಡುಗನನ್ನು ಹಿಡಿದು ತಬ್ಬಿಕೊಂಡ. "ಮಗೂ ನೀನು ನನ್ನನ್ನು ಸ್ನೇಹಿತ ಎಂದು ಹೇಳುತ್ತಿರುವೆ.ಈ ಸ್ನೇಹದ ಮುಂದೆ ಎಲ್ಲವೂ ಚಿಕ್ಕದು"ಎಂದು ಹುಡುಗನಿಗೆ ಜೊಂಪೆ ಜೊಂಪೆಯಾಗಿ ಕಾಳುಗಳಿದ್ದ ಕಟ್ಟನ್ನು ಕೈತುಂಬಾ ಕೊಟ್ಟು, ತಗೋ ತಗೋ, ಇಕೋ ಇನ್ನೂ ತಗೋ, ಇನ್ನೂ ತಗೋ ,ನೀನೂ ತಿನ್ನು ,ನಿನ್ನ ಗೆಳೆಯರಿಗೂ ಕೊಡು" ಎಂದು ಹೇಳಿದ.