ದೂರದೃಷ್ಟಿ

ಒಂದಾನೊಂದು ಕಾಲದಲ್ಲಿ ಮಹರ್ಷಿಯೊಬ್ಬ ತನ್ನ ಊರಿನ ಕ್ಷೇಮಕ್ಕೆ ಯಾಗ ಒಂದನ್ನು ಮಾಡಲು ತಯಾರಿ ನಡೆಸಿದ್ದ.ಆತನಿಗೆ ಕೆಲವು ದಡ್ದ ಶಿಷ್ಯರು ಇದ್ದರು.ಯಾಗ ನಡೆಯುವ ದಿನ ಬೆಳಿಗ್ಗೆ ಮಹರ್ಷಿಯ ಹೆಂಡತಿ ಆತಂಕದಿಂದ ತನ್ನ ಪತಿಯ ಶಿಷ್ಯರನ್ನು ಕರೆದು"ಅಯ್ಯಾ ಮಕ್ಕಳಾ ಈ ದಿನ ಅಡುಗೆ ಮಾಡಲು ಕುಟೀರದಲ್ಲಿ ಸೌದೆ ಬಹಳ ಕಡಿಮೆ ಇದೆ,ದಯವಿಟ್ಟು ತಾವು ಕಾಡಿಗೆ ಹೋಗಿ ಇವತ್ತಿನ ಮಟ್ಟಕ್ಕೆ ಆಗುವಷ್ಟು ಕಟ್ಟಿಗೆ ಕಡಿದು ಬೇಗ ಬನ್ನಿ"ಎಂದು ಕೇಳಿಕೊಂಡಳು.ಅಡುಗೆ ಎಂದಾಕ್ಷಣ ಶಿಷ್ಯರು ಥೈ ಎಂದು ಹೊರಟೇ ಬಿಟ್ಟರು ಕಾಡಿಗೆ.ಒಣ ಕಟ್ಟಿಗೆ ಕಡಿದು, ಆಯ್ದು ಗುಡ್ಡೆ ಹಾಕುತ್ತಿರಲು ಆ ಗುಂಪಿನಲ್ಲೊಬ್ಬ ಹೇಳಿದ "ಅಯ್ಯಾ ಗೆಳೆಯರಾ, ಇನ್ನಷ್ಟು ಕಟ್ಟಿಗೆ ಕಲೆ ಹಾಕಿರಿ ಮತ್ತೆ ನಾಳೆ ಬರುವಷ್ಟಿಲ್ಲ"ಎಂದ.ಮತ್ತೊಬ್ಬ "ಅದು ಸರಿ, ಹೇಗಿದ್ದರೂ ಇಲ್ಲಿಯವರೆಗೆ ಬಂದಿದ್ದೀವಿ ಒಂದು ವಾರಕ್ಕೆ ಆಗುವಷ್ಟು ಸೇರಿಸಿ ಬಿಡೋಣ"ಎಂದು ನುಡಿದ.ಅದಕ್ಕೆ ಮತ್ತೊಬ್ಬ ಶಿಷ್ಯ "ಮತ್ತೊಂದು ವಾರ ಸಾಕೆ? ಸಮಯ ಬಹಳ ಇದೆ, ಒಂದು ತಿಂಗಳಿಗೆ ಆಗುವಷ್ಟೇ ತೆಗೆದುಕೊಂಡು ಹೋಗೋಣ"ಎಂದ.ಎಲ್ಲರೂ ಕಟ್ಟಿಗೆಯ ರಾಶಿಗೆ ಒಣಮರದ ತುಂಡು, ರೆಂಬೆ, ಕೊಂಬೆ ಎಳೆದು-ಹೊತ್ತು ತಂದು ಸೇರಿಸುತ್ತಿರಲು ಹೊತ್ತೇ ಕಳೆದದ್ದು ತಿಳಿಯಲಿಲ್ಲ.ಮಧ್ಯಾಹ್ನ ಮುಗಿದು ಸಂಜೆಯ ಸಮಯವಾಗುತ್ತಾ ಬಂದಿತು.ಅತ್ತ ಆಶ್ರಮದಲ್ಲಿ ಮಹರ್ಷಿಯು ಶಿಷ್ಯರನ್ನು ಕಾಣದೆ ಸತಿಯನ್ನು ವಿಚಾರಿಸಲು ವಿಷಯ ತಿಳಿಯಿತು.ಸಿಟ್ಟಿನಿಂದ ತನ್ನ ದಡ್ದ ಶಿಷ್ಯರನ್ನು ಹುಡುಕಿಕೊಂಡು ಕಾಡಿಗೆ ಬಂದನು.ಅಲ್ಲಿ ಅವರು ಇನ್ನೂ ಕಟ್ಟಿಗೆಗಳನ್ನು ತರುತ್ತಲೇ ಇದ್ದರು.ಅವರನ್ನು ತಡೆದು, ಬೈದು, ಬುದ್ಧಿವಾದ ಹೇಳಿದರು,"ನನ್ನ ಹೆಂಡತಿ ನಿಮಗೆ ಹೇಳಿದ್ದು ಈ ದಿನದ ಮಟ್ಟಕ್ಕೆ ಸೌದೆ ತನ್ನಿ ಎಂದು,ನೀವುಗಳು ನೋಡಿದರೆ ರಾಶಿಯನ್ನೇ ಗುಡ್ಡೆಹಾಕಿದ್ದೀರಿ,ಇನ್ನು ಇದನ್ನು ಹೊರುವುದಾದರೂ ಹೇಗೆ? ನಮಗೆ ಯಾವಾಗಲೂ ಅತಿಯಾಸೆ, ದುರಾಸೆ ಇರಕೂಡದು.ಒಮ್ಮೆಲೇ ಎಲ್ಲಾ ಮಾಡಿಬಿಡಬೇಕು,ಕೂಡಲೇ ಎಲ್ಲಾ ಕಲಿತುಬಿಡಬೇಕು,ಬೇಗನೇ ಎಲ್ಲಾ ಸಂಪಾದಿಸಿಬಿಡಬೇಕು ಎನ್ನುವುದು ಸಮಂಜಸವಲ್ಲ"ಎಂದು ಹೇಳಿ ಅವರನ್ನೆಲ್ಲಾ ಆಶ್ರಮಕ್ಕೆ ಕರೆದುಕೊಂಡು ಹೋದರು.