ಜನಸೇವೆ

ಪಟ್ಟಣವಾಸಿ ಯುವಕನೊಬ್ಬ ಹಳ್ಳಿಯ ಕಡೆ ಪ್ರಯಾಣ ಮಾಡುತ್ತಿದ್ದ.ಅಲ್ಲಿ ಒಂದು ಬಾವಿಯಿಂದ ಗಾಲಿಯ ಏತದ ಮೂಲಕ ನೀರು ಗದ್ದೆಗೆ ಹರಿದು ಬರುವುದು ಕಂಡಿತು.ಆತನಿಗೆ ಆಶ್ಚರ್ಯ "ಅರೆ ಇದೇನಿದು ಬಾವಿಯಿಂದ ತಾನೇ ತಾನಾಗಿ ನೀರು ಬರುತ್ತಿದೆ?" ಎಂದು ಅಲ್ಲಿದ್ದ ಒಬ್ಬ ರೈತನನ್ನು ಕೇಳಿದ. ಅದಕ್ಕೆ ಉತ್ತರವಾಗಿ ಆ ರೈತ "ಅರೆರೆ ತಾನಾಗೇ ಎಲ್ಲಾದ್ರೂ ನೀರು ಬರುತ್ತಾ? ಒಳಗೆ ನಿಮ್ಮಪ್ಪ ಇದ್ದಾರೆ! ಅವರೇ ನಮಗೆಲ್ಲಾ ನೀರು ತುಂಬಿ ತುಂಬಿ ಮೆಲಕ್ಕೆ ಕಳಿಸ್ತಾ ಇರೋದು" ಎಂದ. ಯುವಕ "ಅಯ್ಯಾ ನನ್ನ ತಂದೆ ಸತ್ತು ಹತ್ತು ವರ್ಷವಾಯ್ತು, ಅದು ಹೇಗೆ ಸಾಧ್ಯ?"ಎಂದು ಹೇಳಿದ.ರೈತ ಅಷ್ಟಕ್ಕೇ ನಿಲ್ಲಿಸಲಿಲ್ಲ "ಮಗೂ ನಿನ್ನ ತಂದೆಯನ್ನು ದೇವರು ಮತ್ತೆ ಈ ಭೂಮಿಗೆ ನಮ್ಮ ಸೇವೆ ಮಾಡಲು ಕಳಿಸಿದ್ದಾರೆ ,,, ಜನಸೇವೆ ಹೂ! ಜನಸೇವೆ" ಎಂದು ನಕ್ಕ.ಆ ಯುವಕ ರೈತನ ಮಾತನ್ನು ನಂಬಿದ "ಹೌದಾ? ಪಾಪ ನನ್ನ ತಂದೆ ಎಷ್ಟು ಕಷ್ಟ ಪಡ್ತಿದ್ದರೋ ಒಳಗೆ?"ಎಂದು ಕನಿಕರಿಸಿದ.ರೈತ ಇದೇ ಸಮಯ ನೋಡಿ "ನೋಡು ಮಗೂ ನಿನ್ನ ತಂದೆಗೆ ಬಟ್ಟೆ ಇಲ್ಲ,ನಿನ್ನ ಚೆಂದರ ಅಂಗಿ ಕೊಡು ಆತನಿಗೆ ಚಳಿ ಆಗುವುದು ತಪ್ಪಿಸಬಹುದು" ಎಂದು ಆತನ ಅಂಗಿಯನ್ನೂ ಕಿತ್ತುಕೊಂಡ.ಆಗ ಯುವಕ ಸ್ವಲ್ಪ ಯೋಚಿಸಿ,ಜಾಣತನದಿ ನುಡಿದ"ನನ್ನ ತಂದೆಯನ್ನು ಕರೆದುಕೊಂಡು ಹೋಗಬೇಕು ಕಳಿಸಿಕೊಡುವಿರಾ?"ಎಂದ.ಅದಕ್ಕೆ ಊರಿನ ರೈತರೆಲ್ಲಾ ನಕ್ಕು"ನಿನ್ನ ತಂದೆಯಿಂದಲೇ ನಮಗೆ ವ್ಯವಸಾಯಕ್ಕೆ ನೀರು ಸಿಗುತ್ತಿದೆ,ಅವರಿಂದಲೇ ನಮಗೆ ಈಗ ಬೆಳೆ ಬೆಳೆಯಲು ಆಗ್ತೀರೋದು, ಮೇಲಾಗಿ ಅವರು ಈಗ ನಿನಗೆ ಕಾಣುವುದಿಲ್ಲ"ಎಂದರು."ಹಾಗಿದ್ದರೆ ಕಾನೂನಿನ ಪ್ರಕಾರ ನಿಮ್ಮ ಬೆಳೆಯಲ್ಲಿ ನನಗೆ ಅರ್ಧ ಪಾಲು ಕೊಡಿ,ನನ್ನ ಅಪ್ಪನೇ ನಿಮಗೆಲ್ಲಾ ನೀರು ತುಂಬಿ ಹಾಕ್ತಿರೋದು ತಾನೆ? ಆತನಿಗೆ ನ್ಯಾಯವಾಗಿ ನಿಮ್ಮ ಲಾಭದಲ್ಲಿ ಅರ್ಧ ಸಿಗಬೇಕು, ಆ ಅಪ್ಪನ ಆಸ್ತಿ ಪಾಲು ನನಗೆ ಸೇರಬೇಕು" ಎಂದ.ಗೇಲಿ ಮಾಡುತ್ತಿದ್ದ ರೈತರೆಲ್ಲಾ ಕಕ್ಕಾಬಿಕ್ಕಿಯಾಗಿ ಮುಖ ನೋಡಿಕೊಂಡರು.ಸುಳ್ಳು ಹೇಳಿದ್ದು ಅವರಿಗೆ ಫಜೀತಿಗೆ ಬಂದಿತ್ತು.ಕ್ಷಮೆ ಯಾಚಿಸಿ ನಾಲ್ಕು ಮೂಟೆ ಧವಸ ಧಾನ್ಯ ಕೊಟ್ಟು ಕಳಿಸಿದರು,ಅಂಗಿಯನ್ನೂ ವಾಪಸ್ ಕೊಟ್ಟರು.