ಗುರಿ ಸೇರು

ಹಿಂದೊಮ್ಮೆ, ಬಸ್ಸು, ಟ್ರಕ್ಕು ಇಲ್ಲದ ಕಾಲ, ಆಗ ತೆಂಗಿನಕಾಯಿ ಮೂಟೆಗಳನ್ನು ಕುದುರೆಯ ಮೇಲೆ ಹೊತ್ತ ವ್ಯಾಪಾರಿ ತಿಳಿಯದ ಊರಿಗೆ ಹೊರಟಿದ್ದ. ಸಾಗುತ್ತಿದ್ದ ದಾರಿಯಲ್ಲಿ ಹುಡುಗನೊಬ್ಬನನ್ನು ತಾನು ಸೇರಬೇಕಿರುವ ಊರಿಗೆ ದಾರಿ ಕೇಳಿದ ಹಾಗೇ ಅಲ್ಲಿಗೆ ತಲುಪಲು ಎಷ್ಟು ಸಮಯ ಬೇಕಾಗಬಹುದು ಎಂದೂ ಕೇಳಿದ. ಆಗ ಆ ಹುಡುಗ ಒಮ್ಮೆ ಆತನ ಕುದುರೆಯ ಕಡೆ ನೋಡಿ ಹೇಳಿದ “ ನೀವು ನಿಧಾನವಾಗಿ ನಡೆದು ಹೋದರೆ ಸಂಜೆಯಾಗುವ ಒಳಗೇ ತಲುಪುತ್ತೀರಿ, ಒಂದು ವೇಳೆ ವೇಗವಾಗಿ ಓಡಿಹೋದರೆ ಗುರಿ ಸೇರುವ ಮೊದಲೇ ಕತ್ತಲಾಗಿರಬಹುದು” ಎಂದ. ಹುಡುಗನ ಮಾತು ವ್ಯಾಪಾರಿಗೆ ಅರ್ಥವಾಗಲಿಲ್ಲ. ಅವನ ಮಾತಿಗೆ ಬೆಲೆ ಕೊಡದೇ ತನ್ನ ಕುದುರೆ ಏರಿ ವೇಗವಾಗಿ ಹೊರಟ. ತಲುಪಬೇಕಿದ್ದ ಊರು ದೂರದಿಂದ ಕಂಡಿತು. ಕುದುರೆ ವೇಗವಾಗಿ ಹೆಜ್ಜೆ ಹಾಕಿತು. ಪರವಾಗಿಲ್ಲವೇ ಕತ್ತಲಾಗಲು ಇನ್ನೂ ಮೂರು ನಾಲ್ಕು ತಾಸು ಇರುವಾಗಲೇ ಊರು ಬಂದೇ ಬಿಟ್ಟಿತು ಅಂದುಕೊಂಡು ಒಮ್ಮೆ ತೆಂಗಿನಾಕಾಯಿ ಮೂಟೆಗೆ ಕಾಲಿನಿಂದ ಒದ್ದನು, ಮೂಟೆಯಲ್ಲಿ ಕೆಲವೇ ಕಾಯಿಗಳು ಇದ್ದಂತೆ ಭಾಸವಾಯಿತು. ಕುದುರೆ ನಿಲ್ಲಿಸಿ ಹಿಂದೆ ತಿರುಗಿ ನೋಡಲು ದಾರಿಯುದ್ದಾಕ್ಕೂ ತೆಂಗಿನಕಾಯಿ ಬಿದ್ದಿದ್ದವು, ಮತ್ತೆ ಅದನ್ನೆಲ್ಲಾ ಎತ್ತಿ ಮೂಟೆಗೆ ಹಾಕುವುದು ಸುಲಭವೇ? ಹುಡುಗನು ಹೇಳಿದ ಮಾತು ಜ್ಞಾಪಕಕ್ಕೆ ಬಂದಿತು.ನಿಧಾನ ವಾಗಿ ನಡೆದು ಬಂದಿದ್ದರೆ ಮೂಟೆಯಿಂದ ಕಾಯಿಗಳು ಉದುರುತ್ತಿರಲಿಲ್ಲ, ಇಂಥಾ ಸಣ್ಣ ವಿಷಯ ಪುಟ್ಟ ಹುಡುಗ ಹೇಳಿದಾಗಲೂ ಅರಿವಾಗಲಿಲ್ಲವಲ್ಲಾ ಎಂದು ವ್ಯಥೆಯಾಯಿತು. ಕಾಯಿಗಳೆಲ್ಲಾ ಆಯ್ದು ಹಿಂತಿರುವ ವೇಳೆಗೆ ಕತ್ತಲು ಕವಿಯಿತು.