ತಪ್ಪುಗಳ ಪಟ್ಟಿ

ಗಂಡ-ಹೆಂಡಿರಂದಮೇಲೆ ಸಣ್ಣ ಪುಟ್ಟ ಜಗಳ, ವಾದ-ವಿವಾದ, ಸಿಟ್ಟು ಸಿಡುಕು ಮುನಿಸು ಇದ್ದದ್ದೇ. ಈ ಕಥೆಯ ಗಂಡ-ಹೆಂಡತಿ, ಮದುವೆಯಾಗಿ ನಾಲ್ಕಾರು ವರ್ಷ ಕಳೆದಿತ್ತು. ನವ ದಂಪತಿಗಳು ಒಮ್ಮೆ ಪ್ರವಚನ ಕೇಳಿ ಮನೆಗೆ ಬಂದ ದಿನ ಇಬ್ಬರೂ ಕುಳಿತು ನಿರ್ಧಾರಕ್ಕೆ ಬಂದು ತಮ್ಮಿಬ್ಬರಲ್ಲಿ ಪರಸ್ಪರ ಯಾವ ಯಾವ ವಿಷಯಗಳು / ಗುಣಗಳು ಬದಲಾಯಿಸಿಕೊಳ್ಳಬೇಕಾಗಿದೆ? ಎಂದು ಒಂದು ಪಟ್ಟಿ ಮಾಡೋಣ, ಆಗ ಇಬ್ಬರಲ್ಲೂ ವೈಮನಸ್ಯ ಕಡಿಮೆ ಆಗುವುದು ಎಂದು ನಿರ್ಧಾರ ಮಾಡಿ ಎರಡು ಕೋಣೆಗಳಲ್ಲಿ ಪ್ರತ್ಯೇಕ ಕುಳಿತರು. ಕೆಲವು ಹೊತ್ತಿನ ಬಳಿಕ ಎರಡು ಕಾಫಿ ಬಿಸಿ ಮಾಡಿ ಗಂಡ ಊಟದ ಮೇಜಿನ ಬಳಿಗೆ ಬಂದ, ತಡವಾಗಿ ಬಂದ ಹೆಂಡತಿಗೆ ಕಾಫಿಕೊಟ್ಟ. ಇಬ್ಬರೂ ತಮ್ಮ ಪಟ್ಟಿ ಸಿದ್ಧಪಡಿಸಿದ್ದರು ಮುಖದಲ್ಲಿ ಕಿರುನಗೆ ಚೆಲ್ಲಿತ್ತು. ನಾನು ಮೊದಲು ಆನ್ನುವುದು ಸದಾ ಕೇಳಿಬರುತ್ತಿದ್ದ ಸಂಸಾರದಲ್ಲಿ ಅಂದು ನೀನು ಮೊದಲು ಎಂದು ಇಬ್ಬರೂ ಹೇಳಿದರು ಹೆಣ್ಣಿನ ಜೋರು ದ್ವನಿಗೆ ಗಂಡ ಸೋಲಲಿಲ್ಲ, ಆಕೆಯೂ ಒಪ್ಪಿದಳು, ಸರಿ ಹೆಂಡತಿ ತನ್ನ ಪಟ್ಟಿ ಓದಿದಳು.
ತನ್ನ ನಲ್ಲನ ಸಾಕಷ್ಟು ತಪ್ಪು ಗುಣಗಳನ್ನು ಗುರುತಿಸಿ ಓದುತ್ತಾ ಹೋದಳು.ನೀನು ಹೀಗೆ,ಈ ವಿಷಯದಲ್ಲಿ ಹೀಗೆ,ಇಲ್ಲಿ ನೀನ್ನ ನಡತೆ ಬದಲಾಗಬೇಕು, ಇದು ನನಗೆ ಕಷ್ಟ, ಈ ಸಮಯ ನನಗೆ ಸಹಿಸಲಾಗದು ಹೀಗೇ ಸುಮಾರು ಪುಟಗಳೇ ಇದ್ದವು ಆಕೆಯ ಪಟ್ಟಿಯಲ್ಲಿ. ಸರಿ ಎಲ್ಲವನ್ನೂ ಕೇಳಿದ ಗಂಡ ಸುಮ್ಮನೆ ಕುಳಿತಿದ್ದ. “ಸರಿ ನಾನೇನೋ ಎಲ್ಲಾ ವಿಷಯ ಓದಿದೆ, ನಿನ್ನ ಪಟ್ಟಿ ತೆಗಿ ನೋಡೋಣ ಏನೇನು ಬರೆದಿರುವೆ ಅಂತ” ಎಂದಳು. ಗಂಡ ನಿಧಾನವಾಗಿ ಒಂದು ಪುಸ್ತಕ ಮೇಜಿನಡಿಯಿಂದ ತೆಗೆದು ಮೇಲಿಟ್ಟ. ಇಡೀ ಪುಸ್ತಕ ತುಂಬುವಷ್ಟು ಬರೆದಿರಬಹುದು ಎಂದು ಊಹಿಸುವಷ್ಟರಲ್ಲೇ ಪುಸ್ತಕದ ಒಳಗಿನಿಂದ ಮಡಚಿಟ್ಟ ಪಟ್ಟಿ ಹೊರಕ್ಕೆ ಬಂದಿತು. ಆಕೆ ತಕ್ಷಣ ಅದನ್ನು ಕಸಿದು ಬಿಚ್ಚಿ ನೋಡಿದಳು “ಖಾಲಿ!” ಅರೆ ಏನೂ ಇಲ್ಲ. ಯಾಕೆ ಎಂದು ಪ್ರಶ್ನಿಸಿದಳು. ಆಗ ಆತ “ನಿನ್ನಲ್ಲಿ ಯಾವುದೇ ನ್ಯೂನತೆ ನನಗೆ ಕಂಡಿಲ್ಲ, ನೀನು ಹೇಗಿದ್ದೀಯೋ ಹಾಗೇ ಬಹಳ ಚೆನ್ನಾಗಿದ್ದೀಯಾ ನೀಹೀಗಿರುವುದೇ ನನಗೆ ಇಷ್ಟ” ಎಂದ. ಆಕೆಯ ಮುಖ ಮುದುಡಿತು.ತನ್ನ ತಪ್ಪು ಅರಿವಾಯಿತು. ಪ್ರೀತಿಯ ಮುಂದೆ ಎಲ್ಲವೂ ಕ್ಷುಲ್ಲಕ ಎಂಬ ಸತ್ಯದ ಸಾಕ್ಷಾತ್ಕಾರವಾಯಿತು.