ಗಣಪನೆಂಬ ಗಹನ ತತ್ವ

ಗಣಪತಿ ಹಬ್ಬ ಭಾರತದ ಹೆಚ್ಚಿನ ಭಾಗಗಳಲ್ಲಿ ಸಾಮೂಹಿಕವಾಗಿ ಹಾಗೂ ಮನೆ ಮನೆಗಳಲ್ಲಿ ಆಚರಿಸುವ ಮುಖ್ಯ ಹಬ್ಬಗಳಲ್ಲೊಂದಾದರೂ, ಈ ಹಬ್ಬಕ್ಕಿರುವ ಪರಿಪೂರ್ಣತೆಯು, ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಯಾವುದೇ ಧಾರ್ಮಿಕ ಆಚರಣೆಗಳಿಗೂ ಅಥವಾ ಹಬ್ಬಗಳಿಗೂ ಇಲ್ಲವೆಂಬುದು ಗಮನಿಸಬೇಕಾದ ಅಂಶ. ಇದನ್ನು ಬರಿಯ ಭಾವನೆಗಳ ಉತ್ಕಟತೆಯಿಂದ ಮಾತ್ರವೇ ಹೇಳುತ್ತಿಲ್ಲವೆಂದು ಹಬ್ಬದಾಚರಣೆಯ ಮುಖ್ಯ ಅಂಶಗಳನ್ನು ಗಮನಿಸಿದರೆ ವ್ಯಕ್ತವಾಗುತ್ತದೆ.
ಗಣಪತಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವಾಗ ಗೌರೀ ಗಣೇಶ ಹಬ್ಬದ ಶುಭಾಶಯಗಳು ಎಂದೇ ಹೇಳುತ್ತೇವಲ್ಲವೇ. ಗಣಪತಿ ಹಬ್ಬದ ಹಿಂದಿನ ದಿನ ಬರುವ ಗೌರಿ ಹಬ್ಬವನ್ನು ಜೊತೆಯಲ್ಲಿ ಸೇರಿಸಿಕೊಂಡು ಹೇಳುತ್ತೇವೆ. ಬೇರಾವ ಹಬ್ಬಕ್ಕೂ ಈ ರೀತಿ ಇನ್ನೊಂದು ಹಬ್ಬವನ್ನು ಜೊತೆಯಲ್ಲಿ ಸೇರಿಸಿ ಹೇಳುವುದಿಲ್ಲ. ಇದನ್ನು ಸ್ಥೂಲವಾಗಿ ಗಮನಿಸೋಣ.
ಹಬ್ಬಗಳೆಂದರೆ ಸಾಮಾನ್ಯವಾಗಿ, ಜೀವನದ ಪರಮ ಗುರಿಯಾದ ಆತ್ಮಜ್ಞಾನವನ್ನು ಹೊಂದುವ ಅಥವಾ ನಮ್ಮ ನಿಜ ಸ್ವರೂಪವನ್ನು ಅರಿಯುವ ಅಥವಾ ಭಗವಂತನಲ್ಲಿ ಸೇರಿ ಒಂದಾಗುವಂತೆ ಆದರ್ಶ ರೀತಿಯಲ್ಲಿ ಬದುಕಲು ನೆನಪಿಸುವ ಸಾಂಕೇತಿಕ ದಿನ ಅಥವಾ ಕೆಲ ದಿನಗಳು. ಈ ಜಾಡಿನಲ್ಲಿ ಯೋಚಿಸಿದಾಗ, ನಮ್ಮ ಒಳ ಮತ್ತು ಹೊರ ಪ್ರಕೃತಿಯ ಕರುಣೆಯಿಂದ ಮಾತ್ರ ಪುರುಷನೆಡೆಗೆ ಸಾಗಿ ಹೋಗುವುದು ಸಾಧ್ಯವಾದುದರಿಂದ, ಆ ಪುರುಷನೆಡೆಗೆ ದಾರಿ ತೋರೆಂದು ನಾವು ಪ್ರಾರ್ಥಿಸಬೇಕಾದದ್ದೇ ಪ್ರಕೃತಿಯನ್ನು ಅಥವಾ ದೇವಿಯನ್ನು. ಪ್ರಕೃತಿಯ ಪರ್ಯಾಯ ಪದವೇ ಗೌರಿ.
ವ್ರತವನ್ನಾಚರಿಸಿ ಗೌರಿಯನ್ನು ಪೂಜಿಸಿದಾಗ, ಜಗದಂಬೆಯು ದಯೆತೋರಿ ತನ್ನ ಮೈ ಮಣ್ಣಿನಿಂದ ಮೂರ್ತಿಯನ್ನು ಸೃಷ್ಟಿಸಿ ಪ್ರಾಣ ತುಂಬಿ ಗಣಪತಿಯೆಂಬ ಅನ್ವರ್ಥ ನಾಮ ನೀಡಿ ನಮಗಾಗಿ ಕರುಣಿಸುತ್ತಾಳೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಎಲ್ಲ ಧರ್ಮಗಳ, ಎಲ್ಲ ದೇವರ ಆಕೃತಿಗಳು ಅಥವಾ ಮೂರ್ತಿಗಳೂ ಜಗದಂಬೆಯ ಮೈ ಮಣ್ಣೇ ಅಥವಾ ಪ್ರಕೃತಿಯ ಸ್ಥೂಲ ಭಾಗವಾದ ಪೃಥ್ವಿ ತತ್ವವೇ ಅಲ್ಲವೇ (ಮಣ್ಣು, ಕಲ್ಲು, ಲೋಹ, ಮರ, ಪ್ಲಾಸ್ಟಿಕ್, ದಂತ ಅಥವಾ ಇನ್ನಾವ ಧಾತುವಿನಿಂದ ಮಾಡಿದ್ದರೂ ಸಹ). ಗಣಪತಿಯೆಂದರೆ ಭೂತ ಗಣಗಳ (ಪಂಚ ಭೂತಗಳು, ಮನಸ್ಸು, ಬುದ್ಧಿ, ಅಹಂಕಾರಗಳೆಂಬ ಅಷ್ಟದಾ ಪ್ರಕೃತಿಗಳ) ಪತಿ ಅಥವಾ ಸ್ವಾಮಿ ಎಂದಾಗುತ್ತದೆ.
ಗಣಪನ ಸೃಷ್ಟಿಯ ಹಿಂದಿನ ಪುರಾಣದ ಕಥೆಯ ಹಿನ್ನೆಲೆಯಲ್ಲಿ ನೋಡಿದಾಗ, ಜನ್ಮಾಂತರಗಳಿಂದ ನಮ್ಮೊಡನಿದ್ದು ಮಲಿನವಾಗಿ ಹೋಗಿರುವ ದೇವಿ ತತ್ವವು ಕುಂಡಲಿನಿ ಶಕ್ತಿಯಾಗಿ ನಮ್ಮ ಬೆನ್ನು ಹುರಿಯ ತಳದಲ್ಲಿದ್ದು (ಸ್ನಾನದ ಮನೆಯಂತೆ), ಯಾರನ್ನೂ ಒಳ ಬಿಡದಂತೆ ಬಾಗಿಲಲ್ಲಿಯೇ (ಮೂಲಾಧಾರ ಚಕ್ರದಲ್ಲಿ) ಗಣಪನನ್ನು ಸ್ಥಾಪಿಸಿಟ್ಟಿದ್ದಾಳೆ. ಅವಳ ಮಲಿನತೆಯೆಲ್ಲ ಕಳೆದಾಗ (ನಮ್ಮ ಒಳ ಪ್ರಕೃತಿಯು ಶುಭ್ರವಾದಾಗ) ಪುರುಷನನ್ನು ಸೇರಲು ಹೊರಡುವವರೆಗೆ ಗಣಪತಿಯ ಸನ್ನಿಧಾನದ ಅಗತ್ಯವಿದ್ದೇ ಇರುತ್ತದೆ.
ನಮಗಾಗಿ ಕರುಣಿಸಿದ ಗಣಪತಿಯ ಜನ್ಮ ದಿನವಾಗಿ ಮರುದಿನ ಆಚರಿಸುವುದೇ ಗಣಪತಿ ಹಬ್ಬ. ಅದನ್ನು ಧ್ಯಾನಿಸುವ, ಪೂಜಿಸುವ ಸಂಕಲ್ಪವನ್ನು ಮಾಡಿ ಒಂದು ದಿನ ಅಥವಾ ಕೆಲ ದಿನಗಳವರೆಗೆ (ನಮ್ಮ ಸಾಮಥ್ರ್ಯಕ್ಕನುಸಾರವಾಗಿ) ಮನೆಯಲ್ಲಿಟ್ಟು ವ್ರತವನ್ನಾಚರಿಸಿ ಕೊನೆಯಲ್ಲಿ ಸಡಗರ, ಸಂಭ್ರಮಗಳೊಡನೆ ಉತ್ಸವದೊಡನೆ ನೀರಿನಲ್ಲಿ ಬಿಡಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಧ್ಯಾನಿಸಿ ಭಗವಂತನಲ್ಲಿ ಒಂದಾದ ನಂತರ (ಸಾಂಕೇತಿಕವಾಗಿ) ನಾಮ ರೂಪಗಳ ಅಗತ್ಯವೇ ಉಳಿಯುವುದಿಲ್ಲವಾದ್ದರಿಂದ, ಗಣಪನೆಂಬ ಪೃಥ್ವಿ ತತ್ವ ಮೂಲಕ್ಕೆ ಹಿಂತಿರುಗುವಾಗ ನೀರಿಗೇ ಹೋಗಬೇಕಲ್ಲವೇ? (ಪೃಥ್ವಿ ತತ್ವವು ಜಲ ತತ್ವವಾಗಿ, ಅಗ್ನಿ ತತ್ವವಾಗಿ, ವಾಯುವಿನಿಂದ ಆಕಾಶ ತತ್ವವಾಗಿಯೇ ಮೂಲಕ್ಕೆ ಹಿಂತಿರುಗುವುದನ್ನು ಪ್ರಳಯವೆನ್ನುತ್ತಾರಲ್ಲವೇ?). ಹೀಗೆ ನಾಮ ರೂಪಗಳನ್ನು ಮೂಲಕ್ಕೆ ಹಿಂತಿರುಗಿಸುವಾಗ ನಮಗೆ ಬ್ರಹ್ಮಜ್ಞಾನವೇ ಆಗಿ ಹೋಗಿರುವುದರಿಂದ (ಸಾಂಕೇತಿಕವಾಗಿ) ಸಂಭ್ರಮ, ಸಡಗರಗಳೆಲ್ಲ ಬ್ರಹ್ಮಾನಂದದ, ಅಥವಾ ಪರಮ ಸಾಧನೆಯ ಸಂಕೇತ.
ಸಾಧನೆಯ ಪ್ರಾಥಮಿಕ ಹಂತವಾದ ಪ್ರಕೃತಿ ಪೂಜೆಯಿಂದ ಮೊದಲುಗೊಂಡು ಬ್ರಹ್ಮಜ್ಞಾನದವರೆಗೆ ಹಾಗೂ ದೈವೀ ಸಂಕೇತವನ್ನು ಮೂಲಕ್ಕೆ ಹಿಂತಿರುಗಿಸುವವರೆಗೆ ಸಾಗುವುದರಿಂದಲೇ ಈ ಹಬ್ಬವನ್ನು ಪ್ರಪಂಚದಲ್ಲಿಯೇ ಅತ್ಯಂತ ಪರಿಪೂರ್ಣ ಹಬ್ಬವೆನ್ನುವುದು. ಬೇರಾವ ಹಬ್ಬಕ್ಕೂ ಈ ರೀತಿಯ ಪರಿಪೂರ್ಣ ಕೊನೆ, ಮೊದಲುಗಳಿಲ್ಲ.
ಗಣಪನಾಕೃತಿಯು ಹೇಗಾದರೂ ಇರಬಹುದು (ಯಾಗ, ಪೂಜೆ, ಹೋಮಗಳಲ್ಲಿ ಅರಿಶಿನದಲ್ಲಿ ಗಣಪತಿಯನ್ನು ಮಾಡಿ ಪೂಜಿಸುವುದನ್ನು ನೆನಪಿಸಿಕೊಳ್ಳಬಹುದು). ಆದರೂ ಗಣಪತಿಯ ಸಾಮಾನ್ಯ ಆಕೃತಿಯ ಒಂದೊಂದು ಭಾಗಕ್ಕೂ ಇರುವ ಅರ್ಥಪೂರ್ಣ ವೈಶಿಷ್ಠ್ಯಗಳನ್ನು ವಿವರಿಸುತ್ತಾರೆ. ಗಣಪನ ಡೊಳ್ಳು ಹೊಟ್ಟೆಯೇ ಬ್ರಹ್ಮಾಂಡದ ಸಂಕೇತ ಮತ್ತು ಇದನ್ನು ಬಿಗಿದು ಕಟ್ಟಿರುವ ಹಾವು ಕಾಲದ ಸಂಕೇತವಂತೆ (ಕಾಲದ ಬಂಧನವಿಲ್ಲದಿದ್ದರೆ ಪ್ರಪಂಚ ತನ್ನ ಮೂಲಕ್ಕೆ ಹಿಂತಿರುಗುತ್ತದೆ). ದೊಡ್ಡ ಕಿವಿ ಮತ್ತು ತಲೆಯು ಶ್ರವಣ ಮತ್ತು ಮನನವನ್ನು ಸಂಕೇತಿಸಿದರೆ, ಮನುಷ್ಯ ದೇಹದ ಮೇಲಿರುವ ಆನೆಯ ತಲೆಯು ಪರಮ ಜ್ಞಾನದ ಸಂಕೇತವಂತೆ, ಇತ್ಯಾದಿ.
ಇನ್ನು ಗಣಪನ ಸೊಂಡಿಲನ್ನು ಗಮನಿಸಿದರೆ, ಇದು ಅವನ ಮೂಗು. ಅದು ಎಡಕ್ಕೆ ತಿರುಗಿರಬಹುದು. ಇಲ್ಲವೇ ಬಲಕ್ಕೆ ತಿರುಗಿರಬಹುದು ಅಥವಾ ಮಧ್ಯದಲ್ಲಿಯೇ ಇದ್ದು ಊಧ್ರ್ವಮುಖವಾಗಿರಬಹುದು. ಇದು ಮೂರೇ ಮುಖ್ಯ ಸಾಧ್ಯತೆಗಳಲ್ಲವೇ. ಗಣಪನ ಸೊಂಡಿಲು ಎಡಕ್ಕೆ ತಿರುಗಿದ್ದರೆ ಎಡಮುರಿ ಗಣಪತಿಯೆಂದೂ, ಬಲಕ್ಕೆ ತಿರುಗಿದ್ದರೆ ಬಲಮುರಿ ಗಣಪತಿಯೆಂದೂ, ಮಧ್ಯದಲ್ಲಿದ್ದರೆ ಊಧ್ರ್ವ ಮೂಲ ಗಣಪತಿಯೆನ್ನುತ್ತಾರೆ. ಸಾಧಾರಣವಾಗಿ ಗಣಪತಿಯು ಎಡಮುರಿ ಗಣಪತಿಯಾಗಿರುತ್ತದೆ. ಬಲಮುರಿ ಗಣಪತಿಯು ಶ್ರೇಷ್ಠವಂತೆ. ಯೋಗಿಗಳು ಅಥವಾ ಸಿದ್ಧಿಯನ್ನು ಬಯಸುವವರು ಆರಾಧಿಸುವುದು ಊಧ್ರ್ವಮೂಲ ಗಣಪತಿಯನ್ನಂತೆ.
ಇದು ನಮ್ಮ ಮೂಗಿನ ಎಡ ಹೊಳ್ಳೆ, ಬಲ ಹೊಳ್ಳೆ ಹಾಗೂ ಮಧ್ಯದ ಸೇತುವೆಯನ್ನು ಹೋಲುತ್ತದಲ್ಲವೇ. ಮೂಗಿನ ಎಡ ಹೊಳ್ಳೆಯ ಉಸಿರಾಟವನ್ನು ಶೀತಲವೆಂದೂ, ಚಂದ್ರನಾಡಿಗೆ ಅಥವಾ `ಇಡ' ನಾಡಿಗೆ ಸಂಬಂಧಪಟ್ಟಿದ್ದೆಂದೂ ಹೇಳುತ್ತಾರೆ. ಹಾಗೆಯೇ ಬಲ ಹೊಳ್ಳೆಯ ಉಸಿರಾಟವನ್ನು ಉಷ್ಣವೆಂದೂ, ಸೂರ್ಯನಾಡಿಗೆ ಅಥವಾ `ಪಿಂಗಳ' ನಾಡಿಗೆ ಸಂಬಂಧಪಟ್ಟದ್ದೆಂದು ಹೇಳುತ್ತಾರೆ. ಹಾಗೆಯೇ ಯೋಗದ ಉನ್ನತ ಸ್ಥಿತಿಯಲ್ಲಿ ಸಾಧಿಸಲಾಗುವ ಎರಡೂ ಹೊಳ್ಳೆಗಳ ಸಮನಾದ, ಕ್ಷೀಣವಾದ ಉಸಿರಾಟ ಅಥವಾ ಕೇವಲ ಕುಂಭಕವನ್ನು ಕುಂಡಲಿನಿಯು ಪ್ರವಹಿಸುವ ಸುಷುಮ್ನಾ ನಾಡಿಗೆ ಸಂಬಂಧಪಟ್ಟಿದ್ದೆನ್ನುತ್ತಾರೆ. ಪ್ರಮುಖವಾಗಿ ಯಾವಾಗಲೂ ಯಾವುದೋ ಒಂದು ಹೊಳ್ಳೆಯಿಂದ ಮಾತ್ರವೇ ಉಸಿರಾಡುವ ನಮಗೆ ಇನ್ನಾವುದೋ ಸಮಯದಲ್ಲಿ ಅರಿವಿಲ್ಲದಂತೆಯೇ ಉಸಿರಾಟ ಇನ್ನೊಂದು ಹೊಳ್ಳೆಗೆ ಬದಲಾಗಿರುತ್ತದೆ. ಮಲಗಿದಾಗ ಎಡಮಗ್ಗುಲಿನಲ್ಲಿದ್ದರೆ ಬಲ ಹೊಳ್ಳೆಯು ಉಸಿರಾಟಕ್ಕೆ ತೆರೆದುಕೊಳ್ಳುತ್ತದೆ ಅಂತೆಯೇ ಮಗ್ಗುಲು ಬದಲಾಯಿಸುವುದರಿಂದ ಹೊಳ್ಳೆಯನ್ನು ಬದಲಿಸಬಹುದು. ಅದೇರೀತಿಯಲ್ಲಿ ಸೊಂಡಿಲಿರುವ ದಿಕ್ಕು ಉಸಿರಾಟದ ಹೊಳ್ಳೆಗಳನ್ನು ನಿರ್ಧರಿಸಬಹುದೆನಿಸುತ್ತದೆ.
ಅದರಿಂದಲೇ ಎಡಮುರಿ ಗಣಪತಿಯನ್ನು ಹಿತಕರ, ಶೀತಲವೆಂದೂ ಯಾರೂ ಆರಾಧಿಸಲು ಯೋಗ್ಯವೆಂದೂ ಹೇಳಿದರೆ, ಬಲಮುರಿ ಗಣಪತಿಯು ಉಷ್ಣಕಾರಕನಾಗಿದ್ದು, ಸದಾ ನಿರಂತರ ಧ್ಯಾನಿಸುವ ಯೋಗ್ಯರಾದ, ಸಾತ್ವಿಕರು ಆರಾಧಿಸಿದರೆ ಶೀಘ್ರ ಫಲದಾಯಿ ಹಾಗೂ ಶಕ್ತಿಯುತ ದೈವೀ ಪ್ರತಿಮೆಯೆನ್ನುತ್ತಾರಾದರೂ, ಪೂಜೆ ಅಥವಾ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಲೋಪವಾದಲ್ಲಿ, ಅನಾಹುತಕ್ಕೆ ಕಾರಣವಾಗಬಹುದೆನ್ನುತ್ತಾರೆ. ಹಾಗೆಯೇ ಊಧ್ರ್ವ ಮೂಲ ಗಣಪತಿಯು ಯೋಗ ಸಾಧಕರಿಂದ ಆರಾಧಿಸಲ್ಪಡುತ್ತದಂತೆ.
ಈ ರೀತಿಯಲ್ಲಿ ನೋಡಿದಾಗ ಗಣಪತಿಯ ಸೊಂಡಿಲು ಪೂರ್ಣವಾಗಿ ಪ್ರಾಣಾಯಾಮದ ಮಹತ್ವವನ್ನೇ ಹೇಳುತ್ತಿರಬಹುದಲ್ಲವೇ. ಎರಡೂ ಹೊಳ್ಳೆಗಳಿಂದ ಒಂದಾದ ನಂತರ ಒಂದರಲ್ಲಿ ಉಸಿರಾಡುತ್ತಾ (ಅನುಲೋಮ ವಿಲೋಮ, ಪ್ರಾಣಾಯಾಮದಂತೆ) ಸಾಧಿಸುವ ಕೇವಲಕುಂಭಕ ಸ್ಥಿತಿಯೇ ಅಪರೋಕ್ಷ ಅನುಭೂತಿಯ ಕಾರಣವೆಂದು ಸಂಕೇತಿಸುತ್ತಿರಬಹುದು. ಆನೆಗೆ ಸೊಂಡಿಲೆಂದರೆ, ಉಸಿರಾಡುವ ಮೂಗು ಹಾಗೂ ನೀರನ್ನು ಹೀರಿ ಕುಡಿಯುವ ಹಾಗೂ ಹೀರಿದ ನೀರನ್ನು ಹೊರ ಬಿಡುವ ಸಾಧನವೂ ಆಗಿರುವುದು ಪ್ರಾಣಾಯಾಮದ ಜಲನೇತಿಯನ್ನು ಸಂಕೇತಿಸಬಹುದೇ?
ಹೀಗೆ ಅತ್ಯಂತ ಗಹನತತ್ವಗಳನ್ನು ತನ್ನ ಆಕೃತಿಯ ಒಂದೊಂದು ಭಾಗದಲ್ಲಿಯೂ ಹೊಂದಿರುವ ಗಣಪನು, ಆಲೋಚಿಸುತ್ತಾ ಹೋದಂತೆ ಅನೇಕ ಅರ್ಥಗರ್ಭಿತ ಆಯಾಮಗಳನ್ನು ವ್ಯಕ್ತಪಡಿಸುತ್ತಾ ಭಗವಂತನ ಅತ್ಯಂತ ಸಮರ್ಪಕವಾದ, ಭೂಮ ಸ್ವರೂಪದ ಭವ್ಯ ಮೂರ್ತಿಯಾಗಿ ಹೊರಹೊಮ್ಮುತ್ತದೆ. ಇಂತಹ ಪರಮಾತ್ಮನು ನಮ್ಮ ಜ್ಞಾನ ಸಾಧನೆಯ ವಿಘ್ನಗಳನ್ನು ನಿವಾರಿಸಿ ಬ್ರಹ್ಮಜ್ಞಾನದ ಹಾದಿಯನ್ನು ಸುಗಮವಾಗುವಂತೆ ಕರುಣಿಸಲೆಂದು ಪ್ರಾರ್ಥಿಸೋಣ.