ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮುಂಡಿಗೆಗಳು

 

 

 

1) ಇಂದು ನೀ ಕರೆದು ತಾರೆ

ಇಂದು ನೀ ಕರೆದು ತಾರೆ

ಇಂದು ನೀ ಕರೆದು ತಾರೆ | ಬಾರದೆ ಶ್ರೀ ಗೋ -

ವಿಂದ ತಾ ಮುನಿದಿಹರೆ | ವಿರಹ ಬೇಗೆಯಲಿ 

ಬೆಂದು ಸೈರಿಸಲಾರೆ || ಸಖಿಯೆ ನೀನು

ತಂದು ತೋರೆ |||| ಪ ||

 

ನೊಂದರೂ ಮನದಂದ ಕೊಡುವನು

ನಂದನಂದನನೆಂದು ಸೈರಿಸಿ 

ಎಂದಿಗಗಲಿರಲಾರೆ ಕರೆತಂ

ದೊಂದುಗೂಡಿಸೆ ಮಂದಗಮನೆ || ಅ.ಪ ||

 

ಕಾಲಿಲ್ಲದೆಲೆ ಆಡುತ್ತ | ವೇದ ತಂದಿತ್ತ

ಕಾಲಿಲ್ಲದವನ ಪೊತ್ತ | ಅಮೃತ ತಂದಿತ್ತ

ಕಾಲತೂಗಿ ನೋಡುತ್ತ | ಗಜ  ಉನ್ಮತ್ತ ||

ಕಾಲಿನಿಂದಲಿ ಕೊಲುವ ರೂಪದಿ 

ಕಾಲಿನಲಿ ರಿಪುವನ್ನು ಸೀಳಿದ

ಕಾಲಿನಲಿ ತಾನಳೆದ ಮೇದಿನಿ

ಕಾಲಿನಲಿ ತಾ ನಡೆದ ಭಾರ್ಗವ 

ಕಾಲಿನಲಿ ವನವಾಸ ಪೋದನ 

ಕಾಲಿನಲಿ ಕಾಳಿಯನ ತುಳಿದನ 

ಕಾಲಿನಲಿ ತ್ರಿಪುರರನು ಗೆಲಿದನ 

ಕಾಲಿಗೆರಗುವೆ ತೇಜಿ ರೂಢನ  || || 1 ||

 

ಎವೆಯಿಕ್ಕದೆ ನೋಡಿದ | ತಲೆಯ ತಗ್ಗಿಸಿ

ಕವಲುದಾಡೆಯೊಳಾಡಿದ | ಕಂಬದಿ ಮೂಡಿ

ತವಕದಿಂದಲಿ ಬೇಡಿದ | ಭೂಭುಜರ ಕಾಡಿದ ||

ಶಿವನ ಬಿಲ್ಲನು ಮುರಿದ ದೇವಕಿ 

ಕುವರ ನಗ್ನದಿ ಹಯವನೇರಿದ 

ವಿವಿಧ ವಾಧರ್ಿಯೊಳಾಡಿ ಗಿರಿಧರ

ಸವಿದು ಬೇರನು ಬಾಲಗೊಲಿದನು 

ಅವನಿ ಬೇಡುತ ಕೊಡಲಿ ಪಿಡಿದನ

ಸವರಿ ದಶಶಿರ ಬೆಣ್ಣೆ ಕದ್ದನ

ಯುವತಿಯರ ವ್ರತಗೆಡಿಸಿ ಕುದುರೆಯ

ಹವಣುಗತಿಯಲಿ ಏರಿದಾತನ || || 2 ||

 

ವರ ಮತ್ಸ್ಯ ನಗಧರನ | ಸೂಕರ ಸಿಂಹನ

ತಿರುಕ ತಾಯ್ತರಿದವನ | ವರವಿತ್ತು ಶಬರಿಗೆ

ತುರುಗಾಯ್ದ ನಿವರ್ಾಣನ | ಅಶ್ವಾರೂಢನ ||

ಚರಿಸಿ ಹೊರೆಯನು ಹೊತ್ತ ಕ್ರೂರನ

ಉರವ ಸೀಳಿದ ವಿಪ್ರ ನೃಪರರಿ

ಧರಣಿಜೆಯ ವರಕೃಷ್ಣ ಗಗನದಿ 

ಪುರವ ದಹಿಸಿದ ತೇಜಿರೂಢನ

ಮೆರೆವ ಜಲಜ ಕೂರ್ಮ ವರಹ 

ನರಹರಿ ದ್ವಿಜ ಕೊರಳ ಕೊಯ್ದನ

ಧರಣಿಸುತೆ ವರಶೌರಿ ಬುದ್ಧನ

ತುರಗವೇರಿದ ಆದಿಕೇಶವ || || 3 ||

 

2)ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನು 

 

ಎನ್ನ ಮಾನಿನಿ ರನ್ನೆ ತಾನ್ಯಾಕೆ ಬಾರನು

ನೀನೆ ವಿಚಾರಿಸಿ ಇಬ್ಬರ ನ್ಯಾಯವ || ಪ ||

 

ಮಗಳಿಗೆ ಮಗನಾದ ಮಗಳಿಗಳಿಯನಾದ 

ಮಗಳ ಗಂಡಗೆ ಭಾವ ಮಾವನಾದುದ ಕೇಳಿ

ನಾನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ|| 1 ||

 

ವೈರಿಗೆ ವೈರಿಯಾದ ವೈರಿಗೆ ಸುತನಾದ

ವೈರಿಗಂಡಗೆ ತನ್ನ ಮಗಳ ಕೊಟ್ಟುದ ಕೇಳಿ 

ನಾನಿನ್ನ ಪಾದಕ್ಕೆ ಬಂದೆ ಶ್ರೀಹರಿಯೆ || 2 ||

 

ಆನೆ ಬಿದ್ದರ ತನ್ನ ಗ್ಯಾನದಿಂದೇಳುವುದು 

ಏನುಮಾಡಿದರು ಅದರ ಭಾವ ಹಿಂಗದು 

ಜ್ಞಾನವಂತ ಕಾಗಿನೆಲೆಯಾದಿ ಕೇಶವನೆ || 3 ||

 

 

3)ಎಂದೆಂದು ಇಂಥ ಚೋದ್ಯವ ಕಂಡಿದ್ದಿಲ್ಲವೋ

 

ಎಂದೆಂದು ಇಂಥ ಚೋದ್ಯವ ಕಂಡಿದ್ದಿಲ್ಲವೋ|| ಪ ||

 

ಅಂಗಡಿ ಬೀದಿಯೊಳೊಂದು ಆಕಳ ಕರು ನುಂಗಿತು

ಲಂಘಿಸಿದ ಹುಲಿಯ ಕಂಡ ನರಿಯು ನುಂಗಿತು|| 1 ||

 

ಹುತ್ತದೊಳಾಡುವ ಸರ್ಪ ಮತ್ತಗಜವ ನುಂಗಿತು

ಉತ್ತರ ದಿಶೆಯೊಳು ಬೆಳದಿಂಗಳಾಯಿತಮ್ಮ|| 2 ||

 

ಯೋಗಮಾಗರ್ಿ ಕಾಗಿನೆಲೆಯಾದಿಕೇಶವರಾಯ 

ಭಾಗವತರ ಬೆಡಗಿದು ಬೆಳದಿಂಗಳಾಯಿತಮ್ಮ|| 3 ||

 

4)ಏನೆ ಮನವಿತ್ತೆ ಲಲಿತಾಂಗಿ

 

ಏನೆ ಮನವಿತ್ತೆ ಲಲಿತಾಂಗಿ | ಅಸ

ಮಾನ ಗೋವಳ ಕುಲವಿಲ್ಲದವನೊಳು || ಪ ||

 

ಮಗಗೆ ಮೈದುನನಾದ ಮಗಳಿಗೆ ಪತಿಯಾದ 

ಮಗಳಿಗಳಿಯನಾದ ಅಳಿಯಗಳಿಯನಾದ|| 1 ||

 

ಮಗಳ ಮಗಗೆ ಮೈದುನನಾಗಿ ಮಾವನ

ಜಗವರಿಯಲು ಕೊಂದ ಕುಲಗೇಡಿ ಗೋವಳ || 2 ||

 

ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ

ಚಿತ್ತ ಒಲಿದು ಚಿನ್ನ ಆದಿಕೇಶವನೊಳು || || 3 ||

 

5)ಓಹೋ ಎನ ಜೀವ ಮೈಯೆಲ್ಲ ನವಗಾಯ

 

ಓಹೋ ಎನ ಜೀವ ಮೈಯೆಲ್ಲ ನವಗಾಯ

ಗಾಯ ಕಟ್ಟುವರಿಲ್ಲ ಗಾಳಿಹಾಕುವರಿಲ್ಲ || ಪ ||

 

ಮಾಡಿಲ್ಲ ಮಳಿಯಿಲ್ಲ ಮರದ ಮ್ಯಾಲೆ ನೀರ ಕಂಡೆ

ಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ|| 1 ||

 

ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲ

ಹೊತ್ತುಕೊಂಡು ತಿರುಗಿದೆ ರೊಕ್ಕದ ಪ್ರಾಣಿಯನ್ನು || 2 ||

 

ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣ

ಒಡನೆ ಕರೆದಾರ ಕರಿತೈತಿ ರಂಜಣಿಕಿ ಹಾಲಣ್ಣ|| 3 ||

 

ಮೂರು ಮೊಳದಾ ಬಳ್ಳಿಗೆ ಆರು ಮೊಳದಾ ಕಾಯಣ್ಣ

ಆರು ಹತ್ತರ ಮೊಳದ ಕಾಯಿ ಕೊಯ್ವ ಕುಡುಗೋಲಣ್ಣ|| 4 ||

 

ಊರಮುಂದೆ ಹಿರಣ್ಯಕನ ಕೊರಳ ಕೊಯ್ವದ ಕಂಡೆ

ಕೊರಳ ಕೊಯ್ವುದ ಕಂಡೆ ರಕುತವ ಕಾಣಲಿಲ್ಲ|| 5 ||

 

ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂಡಿಗೆಯ 

ಮಿಗೆ ಒಳಹೊರಗೆಲ್ಲ ಬಲ್ಲ ಬಾಡದಾದಿ ಕೇಶವರಾಯ || 6 || 

 

6)ಕಾವನಯ್ಯನ ಕಳುಹು ರಮಣಿ

 

ಕಾವನಯ್ಯನ ಕಳುಹು ರಮಣಿ|| ಅ ||

ಕೋವಿದರು ಪಡೆದ ಬಡದಾದಿ ಕೇಶವನ || ಅ.ಪ. ||

 

ಚಂದ್ರವಂಶದ ರಾಯನನುಜಸಖನಾದವನ

ಚಂದ್ರವೈರಿಯ ಮೇಲೆ ಪವಡಿಸಿದನ

ಚಂದ್ರಮನ ಸೋದರಿಯ ಕೈಯ ಪಿಡಿದಂಥವನ

ಚಂದ್ರದಾಮನ ಮನೆಗೆ ಕಳುಹೆ ಕಮಲಾಕ್ಷಿ|| 1 ||

 

ಕಮಲನಾಭನ ಕಮಲಸಖಕೋಟಿತೇಜನ

ಕಮಲಕೋರಕದಿ ಜನಿಸಿದನಯ್ಯನ 

ಕಮಲವನು ಕರದಲ್ಲಿ ಪಿಡಿದಿಹನ ಬೇಗದಲಿ 

ಕಮಲವದದನನ ಮನೆಗೆ ಕಳುಹೆ ಕಮಲಾಕ್ಷಿ|| 2 ||

 

ಬಾಲತನದಲಿ ಬಹಳ ಅಸುರರನು ಸೀಳಿದನ

ಲೀಲೆಯಿಂದಲಿ ಭಕ್ತರನು ಸಲಹುತಿಹನ 

ನೀಲಮೇಘಶ್ಯಾಮ ಭಾಗ್ಯಪುರದಲಿ ನಿಂದ 

ಶ್ರೀಲತಾಂಗಿಯ ರಮಣ ಆದಿಕೇಶವನ|| 3 ||

 

 

7) ಕೇಶವ ಎನ್ನಿರೋ ಕ್ಲೇಶನಾಶನನ

 ಕೇಶವ ಎನ್ನಿರೋ ಕ್ಲೇಶನಾಶನನ | ನನ್ನ

ಆಸೆಪಟ್ಟವರಿಗೆ ಅಧಿಕ ಫಲವೀವನ|| ಪ ||

 

ಸತಿಯ ತಮ್ಮನ ಸುತ ಸೋದರನಾದನ

ಮತಿವಂತ ಮಾವನ ಮಗಳ ತಂದಾತನ

ಮತ ಪಿಡಿದ ಮಾತೆಯ ಮೊಮ್ಮಗನ ಕೊಂದನ

ಕ್ಷಿತಿಯುತನಾಗಿ ಕರಿಯ ಕಾಯ್ದಾತನ|| 1 ||

 

ದಶಮುಖನಸಿಯ ಪೆಸರ ಭಕ್ತಗೊಲಿದನ

ಅಸದಳರೆನಿಪ ರನ್ನೆರೊಡಗೂಡಿದಾತನ

ಕುಸುಮಕೋದಂಡ ಗಂಡರ ಗಂಡನಾದನ

ಎಸೆವ ಬಾಣಕೆ ತನ್ನ ಎದೆಯಾಂತು ನಿಂತನ|| 2 ||

 

ದಾಸರ ಹೃದಯದೊಳಗೆ ನೆಲೆಸಿಪ್ಪನ

ದೇಶವರಿಕೆಯಲ್ಲಿ ನಯನವುಂಟಾದನ

ಮೋಸದಿಂ ಮುಂದಲೆ ತುಳಿದು ಭಂಗಿಸಿದನ

ದೇಶಾಧಿಪತಿ ಕಾಗಿನೆಲೆಯಾದಿ ಕೇಶವನ || 3 ||

 

8)ಕೆಂಪುಮೂಗಿನ ಪಕ್ಷಿ 

 

ಕೆಂಪುಮೂಗಿನ ಪಕ್ಷಿ ತಂಪಿನೊಳಿರುವುದು

ನೆಂಪು ಬಲ್ಲವರು ಪೇಳಿ|| 1 ||

 

ಹಂಪೆಯ ವಿರೂಪಾಕ್ಷಲಿಂಗನಲ್ಲಿ 

ಝಂಪಿಯನಾಡುತಿದೆ || || ಅ.ಪ. ||

 

ಆರುತಲೆಯು ಹದಿನಾರು ಕಣ್ಗಳುಂಟು

ಮೂರು ಮೂರು ನಾಲಗೆ

ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು

ಸೇರಿತು ತೆಂಕಲಾಗೆ|| 1 ||

 

ಬಲೆಯ ಬೀಸಿದರು ಸಿಕ್ಕದು ಆ ಮೃಗ

ಜಲದೊಳು ತಾ ನಿಲ್ಲದು 

ನೆಲನ ಮೇಲಿರುವುದು ನಿಂತರೆ ಸಾವುದು

ಕುಲದೊಳಗಾಡುತಿದೆ|| 2 ||

 

ಸಕಲ ಕಲೆಯ ಬಲ್ಲ ಸೀತಳ ಮಲ್ಲಿಗೆ 

ಬೇರೆಬೇರೆನಬಹುದು

ಚೆನ್ನಕೇಶವನಲ್ಲಿ ಕೃಪೆಯುಂಟಾದರೆ 

ಅಲ್ಲುಂಟು ಇಲ್ಲಿಲ್ಲವೆ|| || 3 ||

 

9)ನಾಮ ಮುಂದೋ ಸ್ವಾಮಿ 

 

 ನಾಮ ಮುಂದೋ ಸ್ವಾಮಿ ವಿಭೂತಿ ಮುಂದೋ || ಅ ||

 

ಭೂಮಿ ಆಕಾಶ ಪೊತ್ತೋ ಆಕಾಶ ಭೂಮಿಯ ಪೊತ್ತೋ

ಭೂಮಿಯ ಮುಂದೋ ಆಕಾಶ ಮುಂದೋ ಸ್ವಾಮಿ|| 1 ||

 

ತತ್ತಿ ಹಕ್ಕಿಯ ಪೊತ್ತೋ ಹಕ್ಕಿ ತತ್ತಿಯ ಪೊತ್ತೋ

ತತ್ತಿಯು ಮುಂದೋ ಹಕ್ಕಿಯು ಮುಂದೋ ಸ್ವಾಮಿ || 2 ||

 

ಬೀಜ ವೃಕ್ಷವ ಪೊತ್ತೋ ವೃಕ್ಷ ಬೀಜವ ಪೊತ್ತೋ

ಬೀಜವು ಮುಂದೋ ವೃಕ್ಷವು ಮುಂದೋ ಸ್ವಾಮಿ || 3 ||

 

ಗಂಡ ಹೆಂಡಿರ ಪೊತ್ತೋ ಹೆಂಡಿರು ಗಂಡನ ಪೊತ್ತೋ

ಗಂಡನು ಮುಂದೋ ಹೆಂಡಿರು ಮುಂದೋ ಸ್ವಾಮಿ|| 4 ||

 

ಕನಕನು ಹೇಳಿದ ಬೆಡಗಿದು ಕಂಡವರೆಲ್ಲರು

ಮನದಲಿ ಚಿಂತಿಸಿ ಮಥಿಸಿ ನವನೀತ ಕಾಣಿರೋ || 5 ||

 

10) ನಾರಾಯಣ ಎನ್ನಿ ನಾರದವರದನ

 

ನಾರಾಯಣ ಎನ್ನಿ ನಾರದವರದನ

ನಾರಾಯಣ ಎನ್ನಿರೋ || ವೇದ

ಪಾರಾಯಣನಾಗಿ ಕರಿದು ಕಾಯ್ವಾತನ

ನಾರಾಯಣ ಎನ್ನಿರೋ || ಪ ||

 

ಶಿವನೊಳು ಕೂಡಿಯೆ ಶಿವವರ್ಣನಾದನ

ಶಿವನ ತುರುಬಿನೊಳು ಶಿವನ ಕಟ್ಟಿಸಿದನ ||

ಶಿವನ ಹರಿಯನು ಮಾಡಿ ಸೊಸೆಯನು ತಂದನ

ಶಿವದರುಶನವಾಗಿ ಶಿವನುತಾನಾದನ|| 1 ||

 

ಗರುಡವಾಹನನಾಗಿ ಗಜವನು ಪೊರೆದನ 

ಗರುಡನ ಗಿರಿಯೊಳು ಕಡಲ ತಂದಾತನ ||

ಗರುಡನ ಮಾತೆಯಣ್ಣನ ಮುಖಪಡೆದನ

ಗರುಡ ಗಂಧರ್ವಪುರದಿ ಮೆರೆದಾತನ || 2 ||

 

ಸ್ವರ್ಣವಾಹನನಾಗಿ ಕರ್ಣಕುಂಡಲಧರನ

ಸ್ವರ್ಣಪಂಕದೊಳು ಶಿವನಪ್ಪಿಕೊಂಡನ ||

ಸ್ವರ್ಣಖಚಿತವಾದ ರಥದೊಳು ಪೊಕ್ಕನ

ನಿರ್ಣಯವಿದು ಕಾಗಿನೆಲೆಯಾದಿಕೇಶವನ|| 3 ||

 

11 ) ಪರಮಪುರುಷ ನೀನೆಲ್ಲಿಕಾಯಿ

 

ಪರಮಪುರುಷ ನೀನೆಲ್ಲಿಕಾಯಿ|| ಪ ||

ಸರಸಿಯೊಳಗೆ ಕೂಗಿರೆ ಕಾಯಿ |||| ಅ.ಪ.||

 

ಹಿರಿದು ಮಾಡಿದ ಪಾಪ ನುಗ್ಗೇಕಾಯಿ

ಹರಿ ನಿನ್ನ ಧ್ಯಾನ ಬಾಳೇಕಾಯಿ

ಸರುವ ಜೀವರಿಗುಣಿಸಿಯುಂಬದನೆಕಾಯಿ 

ಅರಿಷಡ್ವರ್ಗಗಳೊದಗಿಲಿಕಾಯಿ|| 1 ||

 

ಕ್ರೂರವ್ಯಾಧಿಗಳೆಲ್ಲ ಹೀರೇಕಾಯಿ

ಘೋರದುಷ್ಕೃತಗಳು ಸೋರೇಕಾಯಿ ||

ಭಾರತದ ಕಥೆ ಕರ್ಣ ತುಪ್ಪಿರೆಕಾಯಿ

ವಾರಿಜಾಕ್ಷನೆ ಗತಿಯೆಂದಿಪ್ಪಿರೆಕಾಯಿ|| 2 ||

 

ಮುರಹರ ನಿನ್ನವರು ಅವರೆಕಾಯಿ

ಗುರುಕರುಣಾಮೃತ ಉಣಿಸೆಕಾಯಿ

ವರಭಕ್ತವತ್ಸಲನೆಂಬ ಹೆಸರುಕಾಯಿ

ಸಿರಿಯಾದಿಕೇಶವನಾಮಮೆಣಿಸೆಕಾಯಿ || 3 ||

 

12) ಬಯಲಬಾವಿನೀರಿಗ್ಹೊಂಟಾಳೊಬ್ಬ

 

ಬಯಲಬಾವಿನೀರಿಗ್ಹೊಂಟಾಳೊಬ್ಬ ಬಾಲಿ

ಹರಿಯೋ ಹೊಳಿನೀರಿಗ್ಹೊಂಟಾಳೊಬ್ಬ ಬಾಲಿ || ಅ ||

 

ಕಾಲಿಟ್ಟು ಮೊಗಿಬ್ಯಾಡ ಕೈಯಿಟ್ಟು ಹೊರಬ್ಯಾಡ

ನೀರಿಲ್ಲದೆ ಮನಿಗಿ ಬರಬ್ಯಾಡ || 1 ||

 

ಸತ್ತದ್ದು ತರಬ್ಯಾಡ ಜೀವದ್ದು ಕೊಲಬ್ಯಾಡ

ಬಾಡಿಲ್ಲದೆ ಮನಿಗಿ ಬರಬ್ಯಾಡ|| 2 ||

 

ಕಾಗಿನೆಲಿ ಕನಕದಾಸ ಹಾಕಿದ ಮುಂಡಿಗಿ

ಬಲ್ಲಂಥ ಒಡೆಯರು ಒಡೆದು ಹೇಳಿರಣ್ಣ || 3 ||

 

 

13) ಬಲ್ಲವರು ಪೇಳಿರೈ

 

ಬಲ್ಲವರು ಪೇಳಿರೈ ಭಾವದುಭಯಾರ್ಥ|| ಪ ||

ಎಲ್ಲಜನರಿಗೆ ಸುಸಮ್ಮತವಾದುದೀ  ನಾಮ || ಅ.ಪ. ||

 

ಚಿತ್ತನಕ್ಷತ್ರದಲಿ ಪುಟ್ಟಿದಾತನ ಸೊಸೆ

ಮೃತ್ಯುವೆಂದೆಣಿಸಿ ಹೊರಡಿಸಿದಾತನ

ಉತ್ತರಾಯಣದೇವನ ಮಗಳಿಗಳುಪಿದನ

ಹೊತ್ತು ಹೋಗದು ಎನಗೆ ತೋರೆ ನಳಿನಾಕ್ಷಿ || 1 ||

 

ಅತ್ತ ಅಣ್ಣನ ಅಗ್ರಜನ ಕೈಯ್ಯಿಂದ 

ಬತ್ತಲೆಗನ ಕರೆಸಿ ಒಲಿಸಿಕೊಂಡನ ||

ಉತ್ತ ಹೊಲದಿ ವೈದರ್ಭನಹನ ತಂಗೆಯ ಕೊಂಡು

ಮುತ್ತೈದೆ ಮಾಡಿ ಮೊಮ್ಮಗನ ಪಡೆದವನ|| 2 ||

 

ಉರಿಯ ಆಸರ ಕಳೆಯೆ ನೆರವನಿತ್ತಾತನ

ಧರೆಯೊಳಗೆ ಮೂವರನು ಗೆಲಿದು ||

ಭೂರಿವಾತರ್ೆಯ ಪಡೆದ ಆ ಮಹಾಮಹಿಮನ

ತೋರೆನಗೆ ಕಾಗಿನೆಲೆಯಾದಿಕೇಶವನ || 3 ||

 

14) ಬಲ್ಲವರು ಪೇಳಿರೈ ಲೋಕದೀ ಹದನು

 

ಬಲ್ಲವರು ಪೇಳಿರೈ ಲೋಕದೀ ಹದನು |

ಪುಲ್ಲಶರನನು ರಂಗ ಪೆತ್ತ ಮಹಿಮೆಯನು || ಪ ||

 

ಗರಿಯುಂಟು ನೋಡಿದರೆ ಪಕ್ಷಿಕುಲ ತಾನಲ್ಲ

ಧರೆಯ ಬೆನ್ನಲಿ ಪೊತ್ತು ಮಡಗಿಕೊಂಡಿಹುದು

ಬರಿಗಾಲ ಭಾರದಲಿ ನಡೆಯಲೊಲ್ಲದು ಮುಂದೆ 

ಎರಡು ಮೆಯ್ಯೊಂದಾಗಿ ಕೂಡಿಸಿಕೊಂಡಿಹುದು || 1 ||

 

ಇಳೆಯಲ್ಲಿ ಒಂದುಪದ ಗಗನದಲಿ ಒಂದುಪದ 

ಕುಲವೈರಿಗಳ ಕೊಂದು ನಲಿದಾಡುತಿಹುದು ||

ಹೊಲದೊಳಗೆ ಜೋಡಗಲಿ ತಿರುಗಾಡುತಿಹುದು ಅದು

ಕಳದೋಳೇಕಂಬುಗಳ ಹರಡಿಕೊಂಡಿಹುದು|| 2 ||

 

ಜನಿಸಿದಾ ಬಳಿಯಲ್ಲಿ ತಾ ಲಜ್ಜೆ ತೊರೆದಿಹುದು 

ಕುಣಿದಾಡುತಿದೆ ಹರಿಯ ತಲೆ ತುರಗವೇರಿ ||

ಕನಕನೊಡೆಯನು ಕಾಗಿನೆಲೆಯಾದಿಕೇಶವನ

ಜನಕೆ ನಿತ್ಯವನು ಪ್ರಸಾದವನು ಕೊಡುತಿಹುದು || 3 ||

 

16) ಬಲ್ಲವರು ಪೇಳಿರೈ ಬಹುವಿಧದ ಚತುರತೆಯ 

 

ಬಲ್ಲವರು ಪೇಳಿರೈ ಬಹುವಿಧದ ಚತುರತೆಯ

ಎಲ್ಲರಿಗು ಸಮ್ಮತವು ಏಕಾಂತವಲ್ಲ || ಪ ||

 

ಕಂಕಣಕೆ ಮೊದಲೇನು ಕಾಮರ್ುಗಿಲ ಕಡೆಯೇನು

ಶಂಕರನ ಹೆಮ್ಮಗನ ಮುಖದ ಸಿರಿಯೇನು ||

ಪಂಕಜಕೆ ಕುರುಹೇನು ಪಾಥರ್ಿವರ ತಪವೇನು 

ಅಂಕಿತಕೆ ಗುರುತೇನು ಅಜನ ಗುಣವೇನು || 1 ||

 

ಕಲಿಗಳಿಗೆ ಕಣ್ಣೇನು ಕಾವನಿರುಹುಗಳೇನು

ಲಲನೆಯೆ ಒಲಿಸುವ ಲೀಲೆ ಮತ್ತೇನು ||

ನೆಲೆಕ ಸಾಕ್ಷಿಗಳೇನು ನ್ಯಾಯದಾ ಪರಿಯೇನು

ಬಲವ ನಿಲಿಸುವುದೇನು ಭಾಗ್ಯವಿದು ಏನು || 2 ||

 

ಸತ್ಯಕ್ಕೆ ಕುರುಹೇನು ಪೃಥ್ವಿಗೆ ಕಡೆಯೇನು 

ಚಿತ್ತವನು ಸೆಳೆದೊಯ್ವ ಕಪಟತನವೇನು ||

ಮತ್ರ್ಯದೊಳು ಕಾಗಿನೆಲೆಯಾದಿಕೇಶವನಂಘ್ರಿ 

ಅತರ್ಿಯಿಂದಲಿ ಕೂಡಿದುದಕೆ ಫಲವೇನು || 3 ||

 

17) ಬಾ ರಂಗ ಎನ್ನ ಮನಕೆ 

 

ಬಾ ರಂಗ ಎನ್ನ ಮನಕೆ | ಭಾವಜನಯ್ಯ 

ಬಾ ರಂಗ ಎನ್ನ ಮನಕೆ|| ಪ ||

 

ಭಾವಮೈದುನ ಬಾರೊ ಮಾವಬೀಗನ ಅನುಜ

ಮಾವನ ಮಡದಿಯ ಮಗಳ ತಂಗಿಯ ಗಂಡ || 1 ||

 

ಅತ್ತೆ ಮೈದುನ ಬಾರೊ ಅತ್ತೆಯ ಮಗಳ ಗಂಡ

ಅತ್ತಿಗೆ ಮೇಲ್ ಅತ್ತಿಗೆ ಮಗಳ ಗಂಡ|| 2 ||

 

ಅಂಬುಧಿಶಯನನೆ ಬಾರೊ ಆದಿಮೂರುತಿ ರಂಗ 

ಕಂಬವೊಡೆದು ಬಂದ ಆದಿಕೇಶವರಾಯ || 3 ||

 

18) ಬಿತ್ತಾಕ ಹೋದಲ್ಲಿ 

ಬಿತ್ತಾಕ ಹೋದಲ್ಲಿ ಬಿಡದೆ ಮಳೆಹೊಡೆದು || ಅ ||

 

ಜತ್ತಿಗಿ ತೊಯ್ದು ಮಿಣಿತೊಯ್ದು

ಜತ್ತಿಗಿ ತೊಯ್ದು ಮಿಣಿತೊಯ್ದು ಉಡಿಯಾಗ 

ಬಿತ್ತಬೀಜ ತೊಯ್ದು ಮೊಳಕೆವೊಡೆದೊ || 1 ||

 

ಬಿತ್ತಲಿಲ್ಲ ಬೆಳೆಯಲಿಲ್ಲ ಮೊಳದುದ್ದ ತೆನೆಹಾಯ್ದೊ

ಮೆತ್ತಗೆ ಬಂದ ಮೇಯಾಕ

ಮೆತ್ತಗೆ ಬಂದ ಮೇಯಾಕ ಗಿಣಿರಾಮ

ಹತ್ತಿರ ನಿಂತ ಬೆರಗಾಗಿ || 2 ||

 

ಕಾಗಿನೆಲೆ ಕನಕಪ್ಪ ಹಾಕಿದ ಮುಂಡಿಗೆ

ತೂಗುತ್ತ ಒಡಚದಿದ್ದರೆ ಓ ಗೆಣೆಯ 

ಆದಿಕೇಶವನ ಪದದಾಣೆ || 3 ||

 

19) ಬೀಜ ಮೂರನು ಬಿತ್ತಿ 

 

ಬೀಜ ಮೂರನು ಬಿತ್ತಿ ಸಾಜಬೀಜವ ತೋರಿ

ರಾಜನಿಗೆ ಪಾಲೊಂದು ರಾಜ್ಯಕ್ಕೆ ಎರಡು || ಪ ||

 

ಬೀಜ ಕದರಿಕೆ ಕಾಲು ಬೀಜ ಬಿಳಿದಕೆ ಮೋರೆ

ಬೀಜ ಮತ್ತೊಂದಕ್ಕೆ ಹದಿನೆಂಟು ಕಣ್ಣು 

ರಂಜಕದ ಭೇರಿಗೆ ರಾಗ ಮೂವತ್ತೆರಡು

ಕುಂಜರದ ಗಮನೆ ಕೋವಿದನ ಅರಸಿ || 1 ||

 

ಐದುಮಾತಿನ ಮೇಲೆ ವೈದಿಕರೆಂಬವರು 

ಐದುದೀವಿಗೆ ಗಾಳಿ ಬೀಸಲೆಂದು

ಬೂದಿಹಾರಿದ ಮಣ್ಣಮೇಲೆ ಮುದ್ದೆಯ ಕಲಸಿ

ಆದ ಲೋಲರು ಪೇಳಿ ಈ ಸೊಬಗುಬೆಡಗ|| 2 ||

 

ಎರಡು ನಂದಿಯ ಹೊಡಿ ಗರುಡಹೊಲವನು ಉತ್ತು

ಹರಗಿ ಮುಚ್ಚಿದ ಕೋಲನರಿದನೆಂದು 

ಹರಿಯ ದಾಸರ ಕನಕ ಹಾಕಿದೀ ಮುಂಡಿಗೆಯ

ಸಿರಿಯಾದಿ ಕೇಶವನ ಪದದಾಣೆ ಪೇಳಿ|| 3 ||

 

 

20) ಮರ ನುಂಗುವ ಪಕ್ಷಿ 

 

ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ | ಇದರ 

ಕುರುಹ ಪೇಳಿ ಕುಳಿತಿದ್ದ ಜನರು || ಪ ||

 

ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ

ಗಂಟಲು ಮೂರುಂಟು ಮೂಗಿಲ್ಲವು 

ಕುಂಟಮನುಜರಂತೆ ಕುಳಿತಿಹುದು ಮನೆಯೊಳಗೆ 

ಎಂಟುಹತ್ತರ ಅನ್ನವನು ಭಕ್ಷಿಸುವುದು|| 1 ||

 

ನುಡಿಯುತ್ತಲುಂಬುದು ನಡುನೆತ್ತಿಯಲಿ ಬಾಯಿ 

ಕಡುನಾದದ ಗಾನ ಮಾಡುತ್ತಲಿಹುದು 

ಅಡವಿಯೊಳು ಹುಟ್ಟುವುದು ಅಗಲಿ ಎರಡಾಗುವುದು 

ಬಡತನವು ಬಂದಾಗ ಬಹಳ ರಕ್ಷಿಪುದು || 3 ||

 

ಕಂಜಲೋಚನೆಯರ ಕರದಿ ನಲಿದಾಡುವುದು 

ಎಂಜಲ ತಿನಿಸುವುದು ಮೂರು ಜಗಕೆ 

ರಂಜಿಸುವ ಮಣಿಯ ಸಿಂಹಾಸನದ ಮೇಲಿಪ್ಪ 

ಕುಂಜರವರದಾದಿಕೇಶವನೆ ಬಲ್ಲ || 4 ||

 

21 ) ಮರೆಯದೆ ನೆನೆ ಚಿನ್ಮಯನ

 

ಹರಿನಾರಾಯಣ ಅಚ್ಯುತನ || ಪ ||

 

ಮಗಳ ತಾನೆ ಮದುವೆಯಾದನ

ಮಗಳ ಮಗನ ಮೊಮ್ಮಗನ

ಮಗಳ ಗಂಡನ ಮೇಲೆ ಮಲಗಿದ ಜಾಣನ 

ಮಗಳ ಮಾವನಿಗೆ ಮೈದುನನ|| 1 ||

 

ತಂದೆಗೆ ತಾನೆ ತಂದೆಯಾದವನ 

ತಂದೆಗೆ ತಾಯಿಯ ತಂದವನ 

ತಂದೆಗೆ ಪೂರ್ವದಿ ತಾ ಪುಟ್ಟಿರುವನ

ತಂದೆಗೆ ತಂದೆಗೆ ತಂದೆಯಹನ || 2 ||

 

ರಾಮನ ಸಮರೋದ್ದಾಮನ ಸುಗುಣಾಭಿ

ರಾಮನ ಸಿತಾನಾಯಕನ 

ಕಾಮನ ಪೆತ್ತನ ಕಮಲದಳಾಕ್ಷನ

ಪ್ರೇಮದಿ ನೆಲೆಯಾದಿಕೇಶವನ || 3 ||

 

22)  ಮುತ್ತುಗಳಾ ಹಣ್ಣು ಕಾಯಾದ

 

ಮುತ್ತುಗಳಾ ಹಣ್ಣು ಕಾಯಾದ ಬಳಿಕಿನ್ನು

ಮತ್ತೊಂದು ಚೋದ್ಯ ಕೇಳಿ

ಚಿತ್ರದ ಹೂವಿನ ಹವಳ ಕಾಯಾಗುವ 

ಅರ್ಥವ ತಿಳಿದು ಪೇಳಿ || 1 ||

 

ಸುಟ್ಟ ಬೀಜವ ಬಿತ್ತಿ ಬೆಳೆಯಬಾರದ ಕಾಯಿ 

ಬೆಟ್ಟದಿ ಸಾರವನು 

ತೊಟ್ಟು ಇಲ್ಲದ ಹಣ್ಣು ಮುಟ್ಟಿ ಕೊಯ್ವನು ಒಬ್ಬ 

ಹುಟ್ಟುಬಂಜೆಯ ಮಗನು || 2 ||

 

ಒಣಗಿದ್ದ ಮರನೇರಿ ಹಣ್ಣುಕಾಯನು ಮಗನು 

ದಣಿಯದೆ ಮೆದ್ದಿಳಿದ 

ರಣದಲ್ಲಿ ತಲೆಹೊಯ್ದು ರುಂಡವು ಬೀಳಲು 

ಹೆಣನೆದ್ದು ಕುಣಿದಾಡಿತು|| 3 ||

 

ಕಣ್ಣಿಲ್ಲದಾತನು ಕಮಡು ಪಿಡಿದ ಮೃಗ

ಕೈಯಿಲ್ಲದಾತನೆಚ್ಚ

ಮಣ್ಣಲಿ ಹೊರಳುವ ಕಾಲಿಲ್ಲದಾತನು

ಗಣ್ಯವಿಲ್ಲದೆ ಪಿಡಿದ|| 4 ||

 

ಎಲ್ಲರೂ ಕೇಳಿರಿ ಕನಕ ಪೇಳಿದ ಮಾತ 

ಸೊಲ್ಲನು ಗ್ರಹಿಸಿಕೊಳ್ಳಿ 

ಬೆಳ್ಳಿಕಣ್ಣಿನವರು ತಿಳಿಯಲಾರದ ಮಾತ 

ಬಲ್ಲಾದಿಕೇಶವನು || 5 ||

 

23) ಮೂವವರೇರಿದ ಬಂಡಿ 

ಮೂವವರೇರಿದ ಬಂಡಿ ಹೊರೆನೆನ್ನದು 

ದೇವಕೀನಂದನನು ತಾನೊಬ್ಬ ಬಲ್ಲ || ಪ ||

 

ಆಡಿ ಪೊತ್ತವನೊಬ್ಬ ನೊಡಿ ತಿರುಗಿದನೊಬ್ಬ

ಓಡಾಡಿದವನೊಬ್ಬ ಈ ಮೂವರು

ಆಡಿದಗೆ ಕಿವಿಯಿಲ್ಲ ನೋಡಿದನ ಮಗ ಪಾಪಿ

ಓಡಾಡಿದವನೊಬ್ಬ ಓಡನಯ್ಯ|| 1 ||

 

ಮಾಯಕಾರನು ಒಬ್ಬ ಕಾಯ ಬಡಲಿಗನೊಬ್ಬ 

ಕಾಯಗಿರಿ ಪೊತ್ತೊಬ್ಬ ಈ ಮೂವರು 

ಮಾಯಕಾರಗೆ ರೂಪ ಕಾಯಬಡಲಿಗ ಚೆಲ್ವ

ಕಾಯಗಿರಿ ಪೊತ್ತವನು ಕಡುಧಮರ್ಿಯು|| 2 ||

 

ಹರಿಯು ಮಾವನ ಕೊಂದ ಹರಿಗಳಿಯ ತಾನೆಂದ

ಹರಿಯು ತನ್ನೊಳಗೆ ತಾ ಹರಿಯೊಳಗೆ ಇಪ್ಪ 

ಹರಿಯ ರೂಪವ ತಾಳಿ ಇರುಳು ದೈತ್ಯನ ಕೊಂದ

ಸಿರಿಧರನು ಕಾಗಿನೆಲೆಯಾದಿಕೇಶವರಾಯ  || 3 || 

 

24) ಮಂಗಳಾರತಿಯ ಪಾಡಿರೆ

 

ಮಂಗಳಾರತಿಯ ಪಾಡಿರೆ | ಮಾನಿನಿಯರು

ಮಂಗಳಾರತಿಯ ಪಾಡಿರೆ|| ಪ ||

 

ಅಂಧಕನನುಜನ ಕಂದನ ತಂದೆಯ 

ಕೊಂದನ ಶಿರದಲಿ ನಿಂದವನ |

ಚಂದದಿ ಪಡೆದನ ನಂದನೆಯಳ ನಲ-

ವಿಂದ ಧರಿಸಿದ ಮುಕುಂದಗೆ || 1 ||

 

ರಥವನಡರಿ ಸುರಪಥವನು ಸುರುಪತವನು ತಿರುಗುವನ

ಸುತನಿಗೆ ಶಾಪವನಿತ್ತವನ |

ಖತಿಯನು ತಡೆದನ ಸತಿಯ ಜನನಿಸುತನ

ಸತಿಯರನಾಳಿದ ಚತುರನಿಗೆ || 2 ||

 

ಹರಿಯ ಮಗನ ಶಿರತರಿದನ ತಂದೆಯ

ಹಿರಿಯ ಮಗನ ತಮ್ಮನ ಪಿತನ

ಭರದಿ ಭುಜಿಸಿದನ ಶಿರದಲಿ ನಟಿಸಿದ 

ವರಕಾಗಿನೆಲೆಯಾದಿಕೇಶವಗೆ || 3 ||

 

25) ಮಂದರಧರಪಾವನ 

 

ಮಂದರಧರಪಾವನ ಇಂದಿರಾರಮಣನ 

ಗೋವಿಂದ ಎನ್ನಿರೋ || ಪ || 

 

ನಂದನಕಂದ ಮುಕುಂದಾಬ್ಧಿಶಯನ

ಗೋವಿಂದ ಎನ್ನಿರೋ || ಅ.ಪ. ||

 

ಗರಳಕಂಧರಸಖನನುಜನ ಕೊಂದನ | ಗೋವಿಂದ ಎನ್ನಿರೋ ||

ಸುರಮುನಿಯನುಜನ ಪಾದವ ಪಿಡಿದನ | ಗೋವಿಂದ ಎನ್ನಿರೋ ||

ಪರಮವೈಷ್ಣವರ ಕೈಲಿ ದಾನಪಿಡಿದನ | ಗೋವಿಂದ ಎನ್ನಿರೋ ||

ಉರಗನ ಮಗಳ ಗಂಡಗೆ ಪ್ರಾಣವಿತ್ತನ | ಗೋವಿಂದ ಎನ್ನಿರೋ|| 1 ||

 

ಸತಿರುಕ್ಮಿಣಿಯ ರಾಧೆಯ ಚುಂಬಿಸಿದಾತನ | ಗೋವಿಂದ ಎನ್ನಿರೋ ||

ಅತಿಶಯದಿಂದಲಿ ಸತಿರೂಪತಾಳ್ದನ | ಗೋವಿಂದ ಎನ್ನಿರೋ ||

ಪಿತನ ಮಾತನು ಶಿರದೊಳಗಾಂತು ನಡೆದನ | ಗೋವಿಂದ ಎನ್ನಿರೋ ||

ಮತಿವಂತನಾಗಿ ಮಾತೆಯ ಶಿರತರಿದನ | ಗೋವಿಂದ ಎನ್ನಿರೋ || 2 ||

 

ಕರೆತರಿಸಿದ ಮಾವನನು ಕೊಂದಾತನ | ಗೋವಿಂದ ಎನ್ನಿರೋ ||

ಧರೆಯನೊಯ್ದಸುರನ ಕಾಯವ ಕಳೆದನ | ಗೋವಿಂದ ಎನ್ನಿರೋ ||

ಈರೇಳುಭುವನವ ಉದರದೊಳಿಟ್ಟನ | ಗೋವಿಂದ ಎನ್ನಿರೋ ||

ಮಾರಜನಕ ಕಾಗಿನೆಲೆಯಾದಿಕೇಶವನ | ಗೋವಿಂದ ಎನ್ನಿರೋ |||| 3 ||

 

26) ಲಟಪಟ ನಾ ಸಟೆಯಾಡುವನಲ್ಲ 

 

ಲಟಪಟ ನಾ ಸಟೆಯಾಡುವನಲ್ಲ

ವಿಠಲನ  ನಾಮ ಮರೆತುಪೋದೆನಲ್ಲ || ಪ ||

 

ಶೇಷಗಿರಿಯ ಮೇಲೆ ಸವುತೆಯ ಬಿತ್ತ 

ದೇವಗಿರಿಯ ಮೇಲೆ ಅವತಾರವಿತ್ತ 

ಹಾಳೂರಿನೊಳಗೊಬ್ಬ ಕುಂಬಾರ ಸತ್ತ 

ಗೋಕರ್ಣದೊಳಗೊಬ್ಬ ಪರದೇಶಿ ಅತ್ತ|| 1 ||

 

ಆ ಸಮಯದಿ ಮೂರು ರಾಯರ ಕಂಡೆ 

ಕುಪ್ಪಸತೊಟ್ಟ ಕೋಳಿಯ ಕಂಡೆ

ಬೆಳ್ಳಕ್ಕಿ ಬೆರಣಿಯ ಮಾಳ್ಪುದ ಕಂಡೆ

ನರೆಸೂಳೆ ಗೆಯ್ವುದ ಕಣ್ಣಾರೆ ಕಂಡೆ || 2 ||

 

ನುಸಿಯೊಂದು ರೊಟ್ಟಿಯ ಸುಡುವುದ ಕಂಡೆ

ಆಡೊಂದು ಮದ್ದಳೆ ಬಡಿವುದ ಕಂಡೆ 

ಕಪ್ಪೆ ತತ್ತೈ ಎಂದು ಕುಣಿವುದ ಕಂಡೆ 

ಬಡದಾದಿಕೇಶವನ ಕಣ್ಣಾರೆ ಕಂಡೆ || 3 ||

 

 27) ವನಜಾಕ್ಷಿಯರ ಮನದಿಷ್ಟಾರ್ಥವೀವನ

 

ವನಜಾಕ್ಷಿಯರ ಮನದಿಷ್ಟಾರ್ಥವೀವನ ಶ್ರೀ ಕೃಷ್ಣ ಎನ್ನಿರೋ 

ಮನುಮುನಿಜನರನು ಅನುದಿನ ಪೊರೆವನ ಶ್ರೀ ಕೃಷ್ಣ ಎನ್ನಿರೋ|| ಪ ||

 

ಪಣ್ಣಕೊಯ್ದನನುಜಗೆ ಸಹಾಯನಾದನ 

ಸಣ್ಣಸೀರೆಯ ನಲ್ವೆಣ್ಣುರೂಪಾದನ

ಅಣ್ಣನ ವೈರಿಯ ಮಗನ ಕೊಂದಾತನ 

ಬಣ್ಣಿಸಲರಿಯೆ ನಾನಿವನ ಮಹಿಮೆಯ || 1 ||

 

ಮುತ್ತಯ್ಯನಿರೆ ಮೊಮ್ಮಗಗೆ ಪಟ್ಟಗಟ್ಟಿದನ 

ಹೆತ್ತವಳಿರೆ ತಾಯ ಬೇರೆ ಪಡೆದಾತನ

ಮತ್ತೇಭಗಾಮಿನಿಗಾಗಿ ವನವಾಸಪೋದನ

ಮತ್ತೆ ಹಿರಣ್ಯಗೆ ಕಂಬದಲಿ ತೋರ್ದನ|| 2 ||

 

ಉಗುರುಕೊನೆಗಳಿಂದ ನಗವನೆತ್ತಿದನ

ಬೊಗಸೆಕಂಗಳ ಬಾಲೆಯರನು ತಂದಾತನ

ಮಗಳ ಗಂಡನ ಶಿರವನ್ನೆ ಛೇದಿಸಿದನ

ಸುಗುಣರನ್ನ ಕಾಗಿನೆಲೆಯಾದಿಕೇಶವನ || 3 ||

 

28) ಶ್ರೀರಾಮ ಎನ್ನಿರೋ 

 

ಶ್ರೀರಾಮ ಎನ್ನಿರೋ 

ಮೂಜಗದವರೆಲ್ಲ 

ಈರೇಳು ಭುವನ ತನ್ನುದರದೊಳಿಟ್ಟನ || ಪ ||

 

ಮನಸಿಜಾರಿಯ ಮಾವನನುಜನ ಪೊತ್ತನ

ಅನಿಮಿಷರಂದದಿ ವನವಾಸಪೋದನ

ಘನಕೋಡಕೊನೆಯಿಂದ ಧರಣಿಯ ತಾಳ್ದನ

ದಿನಕರಳಲಿವಿಲಿ ಪಗೆಯ ಗೆದ್ದಾತನ|| 1 ||

 

ತಗಜವನೇರಿದನ ತಂದೆಯ ತಾಯನಳೆದನ

ಭುಜಬಲದಿಂದ ಭೂಪಾಲರ ಗೆಲಿದನ 

ಭುಜಗಧರನ ಕೈಯ ಆಯುಧ ಮುರಿದನ 

ನಿಜಮುನಿತನಯನ ವನಧಿಯಿಂ ತಂದನ || 2 ||

 

ಪೆಣನ ಭೋಜನ ಮಾಡಿದರ ಮನೆಪೊಕ್ಕನ

ತೃಣಕೆ ಬಾಯಿತ್ತನ ಮೇಲೇರಿ ಬಪ್ಪನ

ಅಣುರೇಣು ತೃಣದೊಳು ಪರಿಪೂರ್ಣನಾದನ

ಪ್ರಣವಗೋಚರ ಕಾಗಿನೆಲೆಯಾದಿಕೆಶವನ || 3 ||

 

29) ಸದರವಲ್ಲವೋ ನಿಜಯೋಗ 

 

ಸದರವಲ್ಲವೋ ನಿಜಯೋಗ

ಸದರವಲ್ಲವೋ ನಿಜಯೋಗ | ಸಚ್ಚಿದಾನಂದ 

ಸದಮಲಗುರು ದಿಗಂಬರನ ಸಂಯೋಗ || ಪ ||

 

ಅಡಿಯನಂಬರ ಮಾಡುವನಕ | ಅಗ್ನಿ

ಕಿಡಿಯೆದ್ದು ಮೇಲಣ ಕೊಡನುಕ್ಕದನಕ ||

ಒಡನೆರಡೊಂದಾಗದನಕ | ಅಲ್ಲಿ

ಒಡಗೂಡಿ ಅಂಗನೆ ನುಡಿಗೇಳದನಕ || 1 ||

 

ನಾಡಿಹಲವು ಕಟ್ಟದನಕ | ಬ್ರಹ್ಮ 

ನಾಡಿಯೊಳ್ ಪೊಕ್ಕು ಮುಳುಗಾಡದನಕ ||

ಕಾಡುವ ಕಪಿ ಸಾಯದನಕ | ಸತ್ತ

ಓಡಿನೊಳಗೆ ರಸ ತೊಟ್ಟಿಕ್ಕದನಕ || 2 ||

 

ಆದಿಕುಂಭವ ಕಾಣದನಕ | ಅಲ್ಲಿ

ಸಾಧಿಸಿ ಬೇಧಿಸಿ ಸವಿಯುಣ್ಣದನಕ ||

ಭೇದವು ಲಯವಾಗದನಕ | ಬಾಡ

ದಾದಿಕೇಶವ ನಿಮ್ಮ ನೆಲೆಗಾಣದನಕ || 3 ||

 

30) ಸಹಜವಿದು ಈ ನುಡಿಯು 

 

ಸಹಜವಿದು ಈ ನುಡಿಯು ಸಟೆಯ ಮಾತಲ್ಲ

ಮಹಿಯೊಳಗೆ ಪೇಳುವೆನು ವಿಹಿತ ವಾಕ್ಯಗಳ || ಪ ||

 

ಶ್ರುತಿಶಾಸ್ತ್ರ ಪೌರಾಣಗಳನೋದುವನೆ ಶೂದ್ರ

ಅತಿಥಿಗಾದರಿಸುವನೆ ಅತಿಲುಬ್ಧನು

ಪ್ರತಿನಿತ್ಯ ಸಂಧ್ಯಾನ ಮಾಡುವವನೇ ಪಾಪಿ

ಪತಿಯಾಜ್ಞೆಯಿಂದಿಹಳೆ ಪರಮಪಾತಕಿಯು || 1 ||

 

ದಾನಧರ್ಮಂಗಳನು ಬಿಡುವನೇ ಧಮರ್ಾತ್ಮ

ಮಾನಾಭಿಮಾನವನು ಹಿಡಿದವನೆ ಯೋಗಿ

ಪ್ರಾಣಿಗಳ ಹಿಂಸೆಯನೆ ಮಾಡುವನೆ ಸುಜ್ಞಾನಿ

ಜ್ಞಾನಿ ಸಜ್ಜನರನ್ನು ಕಾಡುವನೆ ಸತ್ಪುರುಷ|| 2 ||

 

ಕೆರೆಕಟ್ಟಿ ಪೂದೋಟ ರಚಿಸುವವನೆ ದ್ರೋಹಿ 

ಗುರುದೈವ ಹಿರಿಯರನು ಬಯ್ಯುವವ ನಿಷ್ಠ  

ಸಿರಿಕಾಗಿನೆಲೆಯಾದಿಕೇಶವನ ಚರಣವನು

ನಿರುತದಿಂ ಸ್ಮರಿಸುವನೆ ಅವಿಚಾರಿಪುರುಷ || 3 ||

 

31) ಸೀತಾಪತಿ ರಘುನಾಥನೆಂಬಾತನು

 

ಸೀತಾಪತಿ ರಘುನಾಥನೆಂಬಾತನು

   ಈತನೇನೆ ಸಖ ಈತನೇನೆ|| ಪ ||

 

ವ್ಯಾಸನ ಜನನಿಯ ವ್ಯಾಸರೂಪತಾಳ್ದನು

ದೇಶದೊಳಗೆ ಬಲು ಹೊಗರುಳ್ಳವನು

ನಾಸಿಕದೊಳೋರ್ವಳ ಪೊತ್ತು ಮೆರೆದ ಮು-

ನೀಶರ ಶಾಪವ ಪಡೆದನ ಕೊಂದನು || 1 ||

 

ಆನೆವಾಹನಪಿತನ ತಾಯನಳೆದವನು

ಭಾನುಸುತಗೆ ಶಾಪವಿತ್ತು ಜರೆದವನು

ಕಾನನವಾಸದಿ ನಿಂದಳಿಗೊಡೆಯ ನಿ-

ಧಾನಶರಧಿಯಲಿ ವಾಸಮಾಡಿದವನು|| 2 ||

 

ಮೂಗ್ರಾಮ ಮುರಿದು ವಾಜಿಯನೇರಿ ಮೆರೆದನು

ಸಾಗರಸುತೆಯಳ ಮೇಲೆ ಮೋಹಿಸಿದವನು

ಉಗ್ರನಹೋಬಲಪತಿರಾಜ ಕನಕಗೆ

ಭಾಗ್ಯವನೀವ ಕಾಗಿನೆಲೆಯಾದಿಕೇಶವನು || 3 ||

 

32) ಹಲವು ಜೀವನವ ಒಂದೆಲೆ ನುಂಗಿತು

 

ಹಲವು ಜೀವನವ ಒಂದೆಲೆ ನುಂಗಿತು || ಕಾಗಿ

ನೆಲೆಯಾದಿಕೇಶವನು ಬಲ್ಲನೀ ಬೆಡಗ|| ಪ ||

 

ಹರಿಯ ನುಂಗಿತು ಹರ ಬ್ರಹ್ಮರ ನುಂಗಿತು

ಸುರರಿಗುಂಟಾದ ದೇವರ ನುಂಗಿತು

ಉರಿಗಣ್ಣಶಿವನ ಒಂದೆಲೆ ನುಂಗಿತೋ ದೇವ

ಹರಿಯ ಬಳಗವ ಒಂದೆಲೆ ನುಂಗಿತು|| 1 ||

 

ಎಂಟುಗಜವನು ನುಂಗಿ ಕಂಟಕರೈವರ ನುಂಗಿ 

ಉಂಟಾದ ಗಿರಿಯ ತಲೆಯ ನುಂಗಿತು 

ಕಂಟವ ಪಿಡಿದ ಬ್ರಹ್ಮನ ನುಂಗಿತೆಲೊ ದೇವ

ಎಂಟಾರು ಲೋಕ ಒಂದೆಲೆ ನುಂಗಿತು|| 2 ||

 

ಗಿಡವ ನುಂಗಿತು ಗಿಡದೊಡತೊಟ್ಟ ನುಂಗಿತು

ಗಿಡದ ತಾಯಿ ತಂದೆಯ ನುಂಗಿತು

ಬೆಡಗ ಬಲ್ಲರೆ ಪೇಳಿ ಬಾಡ ಕನಕದಾಸ

ನೊಡೆಯಾದಿಕೇಶವನ ಬಲ್ಲನೀ ಬೆಡಗ|| 3 ||

 

33) ಹೆಣ್ಣುಗಳೊಳು ಹೆಣ್ಣುಗಾರಿಕೆ ಸತ್ಯ

 

ಹೆಣ್ಣುಗಳೊಳು ಹೆಣ್ಣುಗಾರಿಕೆ ಸತ್ಯ

ಕಣ್ಣುಕಟ್ಟಲ್ಲ  ಕವಿಗಳ ಕವಡಿಲ್ಲ|| ಪ ||

 

ರತಿಗೆ ಶೃಂಗರವೇನು ಶೃಂಗರದಿ ರತಿಗೇನು

ರತಿಯಲ್ಲಿ ಮೊದಲೇನು ಮೊದಲಿಗೆ ತುದಿಯೇನು 

ಜತೆಗೆ ಮತ್ಸರವೇನು ಮತ್ಸರದ ಕತೆಯೇನು

ಕತೆಯಲ್ಲಿ ಕಾಂಬುದೇನು ಕಂಡರೆ ಫಲವೇನು || 1 ||

 

ಮನಕೆ ಮುಮ್ಮರೆಯೇನು ಮುಮ್ಮರೆಗೆ ನೆನಹೇನು 

ನೆನೆದರೆ ನಂಬಿಗೆಯೇನು ನಂಬಿದರೆ ಅನುವೇನು

ಅನುವಿಗೆ ಕಳವಳವೇನು ಕಳವಳದಿ ಕನಸೇನು 

ಕನಸಿನಲಿ ಕಾಂಬುದೇನು ಕಂಡರೆ ಭಯವೇನು || 2 ||

 

ಮುಲುಕಿಗೆ ಮೊದಲೇನು ಮೊದಲಿಗೆ ನಿಲುಗಡೆಯೇನು

ನಿಲುಗಡೆಗೆ ಸವಿಯೇನು ಸವಿಯಲ್ಲಿ ಸುಖವೇನು 

ಅಲರಂಬ ನಲಿವೇನು ನಲಿವಿಗೆ ಗೌಪ್ಯವೇನು 

ನೆಲೆಯಾದಿಕೇಶವ ನಿನಗೆ ಸೋಲೆಂದರೇನು || 3 || 

 

34) ಹರಿಮುಖಿ ಹರಿವಾಣಿ

 

ಹರಿಮುಖಿ ಹರಿವಾಣಿ ಹರಿವೇಣಿ ಹರಿಣಾಕ್ಷಿ

ಹರಿಯ ನಂದನಸುಖನೆನಿಪ ಅಹೋಬಲದ 

ಹರಿಯ ನೀ ತಂದು ತೋರೆ || ಪ ||

 

ಎರವಿನ ತಲೆಯವನಣ್ಣನ ಅಯ್ಯನ

ಪರಮಸಖಿಯ ಸುತನ |

ಹಿರಿಯಣ್ಣನಯ್ಯನ ಮೊಮ್ಮನ ಮಾವನ

ಸರಿಗಟ್ಟಿಹನ ಹಗೆಯ |

ಗುರುವಿನ ಸತಿಯ ಸೇರ್ದನ ಮುಂದೆ ಬಾಹನ

ಕಿರಿಯ ಮಗನ ರಾಣಿಯ |

ದುರುಳತನದಿ ಸೆಳೆಕೊಂಡನ ಕೊಂದನ

ತರಳೆ ನೀ ತಂದು ತೋರೆ|| 1 ||

 

ಸೋಮನ ಜನಕನ ಸತಿಯ ಧರಿಸಿದನ 

ರೋಮಕೋಟಿಯೊಳಿಟ್ಟನ |

[ಪ್ರೇಮದ ಜನಕನ ಸತಿಯ ಗರ್ಭದಿ ತನ್ನ

ಭಿಮತೇಜವನಿಟ್ಟನ |

ರಾಮಣೀಯಕ ಪುರದೊಳಗಿಪ್ಪ ಮಿತ್ರನ

ನೇಮನಿಷ್ಠೆಯ ಪಿತನ ] |

ಕಾಮಿನಿ ಸತಿಯ ಕಂದನ ತಮ್ಮಗೊಲಿದನ

ಭಾಮೆ ನೀ ತಂದು ತೋರೆ|| 2 ||

 

ಶ್ರುತಿಯನುದ್ಧರಿಸಿ ಭೂಮಿಯ ಪೊತ್ತು ಅಡವಿಯ 

ಅಡವಿಯ ಪಥದೊಳು ತಿರುಗಿದನ |

ಅತಿಶಯ ನರಹರಿ ವಾಮನ ರೂಪಿನ

ಪಿತನ ಮೋಹದ ರಾಣಿಯ |

ಹತಮಾಡಿ ಸತ್ಯಕ್ಕೆ ನಿಂತು ನಗವ ಪೊತ್ತು

ಪತಿವ್ರತೆಯರ ಭಂಗಿಸಿ |

ಕ್ಷಿತಿಯೋಳ್ ರಾಹುತ ಬಾಡದಾದಿಕೇಶವನನ್ನು 

ಸತಿಯೆ ನೀ ತಂದು ತೋರೆ|| 3 ||

 

35) ಶೆಷಶಯನ ನಿನ್ನ 

 

ಶೆಷಶಯನ ನಿನ್ನ ಭಾಗವತರ ಸಹ

ವಾಸದೊಳಿರಿಸು ಕಂಡೆಯ ಎನ್ನನು

ಬೇಸರಿಸದೆ ನಿನ್ನ ಹೃದಯಾಬ್ಜದೊಳಗಿಹ

ದಾಸರೊಳಿರಿಸು ಕಂಡೆಯ ಎನ್ನನು || ಅ.ಪ.||

 

ತಂದೆಯನೊಡಲನು ಸೀಳಿಸಿದವರೊಳು ದೇ-

ವೇಂದ್ರನ ತಲೆಗೆ ತಂದವರೊಳು ದು-

ರ್ಗಂಧಹೆಣ್ಣಿಗೆೆ ಚಂದನದ ಕಂಪನಿತ್ತಂಥ

ಬಾಂಧವರೊಳಗಿರಿಸು ಕಂಡೆಯ ಎನ್ನನು|| 1 ||

 

ತೋಯಜವೆಂಬ ಪುಷ್ಪದ ಪೆಸರವರೊಳು

ತಾಯ ಸೊಸೆಗೆ ಮಕ್ಕಳಿತ್ತವರೊಳು

ಆಯದಿ ದ್ವಾದಶಿ ವ್ರತವ ಸಾಧಿಸಿದಂಥ

ರಾಯರೊಳಗಿರಿಸು ಕಂಡೆಯ ಎನ್ನನು || 2 ||

 

ಗಿಳಿನಾಯಿಯ ಪೆಸರಿನವರೊಳು ಮುಗಿಲ 

ಹೊಳೆಯ ಹೊಟ್ಟೆಯಲಿ ಪುಟ್ಟಿದವರೊಳು

ಕೆಳದಿಯ ಜರೆದು ಶ್ರೀ ಹರಿದಿನ ಗೆದ್ದಂಥ

ಹಳಬರೊಳಿರಿಸು ಕಂಡೆಯ ಎನ್ನನು || 3 ||

 

ಅಂಕಕೆ ರಥವ ನಡೆಸಿದವರೊಳು ನಿಃ-

ಶಂಕಧರ್ಮವ ಗೆದ್ದ ಹಿರಿಯರೊಳು

ಲಂಕೆಯ ಅನುದಿನ ಸ್ಥಿರರಾಜ್ಯವಾಳಿದ

ಕಿಂಕರರೊಳಿರಿಸು ಕಂಡೆಯ ಎನ್ನನು || 4 ||

 

ಕಾಟಿಗೆ ಕಾಸು ಕಾಣದವರು ರಾಯರ ಪಂಕ್ತಿ

ಯೂಟ ಬಡಿಸಿದಂತೆ ನಾ ಬೇಡಿದೆ

ನಾಟಕಧರ ಕಾಗಿನೆಲೆಯಾದಿಕೇಶವ ನಿ-

ನ್ನಾಟದೊಳಿರಿಸು ಕಂಡೆಯ ಎನ್ನನು || 5 || 

 

36) ವಾರಿಜಮುಖಿ ವಾರಿಜಾಕ್ಷಿ

 

ವಾರಿಜಮುಖಿ ವಾರಿಜಾಕ್ಷಿ ವಾರಿಜಗಂಧಿ 

ವಾರಿಧಿಯಳಿಯನನು |

ಓರಂತೆ ನೀ ಪೋಗಿ ಕರೆತಾರೆನ್ನಯ ಪ್ರಾಣಾ-

ಧಾರ ಕೇಶವಮೂತರ್ಿಯ|| ಪ ||

 

ನಗವೈರಿಯಣುಗನಣ್ಣನಯ್ಯನಾಪ್ತಗೆ

ಮಿಗೆ ಹುಟ್ಟಿದನ ತಮ್ಮನ |

ನಗೆಗೆ ಶಾಪವನಿತ್ತವನ ವಾಹವೈರಿಯ

ಪಗೆಯ ಪೆಗಲೇರ್ದನ |

ಜಗದೊಳೊಗೆದ ತಾಯ ಮಗುಳೆ ಪೆತ್ತವನನೆ-

ನಗೆ ತೋರಿದರೆ ನಿನಗೆ |

ಅಗಣಿತಾಭರಣವೀವೆನು ಅಂಗಜಾಗ್ನಿಯ 

ತಗಹ ಬಿಡಿಸೆ ಕರುಣಿ|| 1 ||

 

ಮಿಹಿರನಂದನನ ತಂದೆಯ ಪಗೆಯನ ತಮ್ಮ

ನಹಿತನ ಮನೆವೆಸರ |

ಮಹಿಮನ ಕೃತಿಗೊಡೆಯನ ಬಂಟನನುಜನ |

ಸಹಿಸಿ ತಮ್ಮನ ಮಿತ್ರನ |

ಕುಹಕದಿ ಶಾಪವಡೆದಳು ಪ್ರಸ್ತರವಾಗಿ 

ಗಹನಮಧ್ಯದೊಳಿರಲು |

ದಹಿಸಿ ಶಾಪವ ದನುಜರ ಕೊಂದು ಕ್ಷಿತಿಯೊಳು

ವಿಹರಿಸುವನ ಕರೆತಾರೆ || 2 ||

 

ಸುರಭೇದಪ್ರಥಮದಾಸಿಯ ಪೆಸರಿನ ವಾಜಿ 

ಯರಸನ ನಖವೈರಿಯ |

ಮರೆಯ ಮಾರ್ಗದಿ ಗಮಿಸುವನಾಪ್ತನ ತಾಯ 

ಧರಿಸಿದಾತನ ಮಿತ್ರನ |

ಪೊರೆಯ ದೆಸೆಯ ದಿಕ್ಕರಿಯ ಕೋಪದಿ ಸೀಳ್ದ

ನರಸಿಯಣ್ಣನೀಕ್ಷಣ |

ಕರೆತಂದೆನಗೆ ಸಖಿ ಕೂಡಿಸು ಸಿರಿಕಾಗಿ

ನೆಲೆಯಾದಿಕೆಶವನ || 3 ||

37) ರಾಜವದನೆ ಸುರರಾಜನ ಪುರದೊಳು

 

ರಾಜವದನೆ ಸುರರಾಜನ ಪುರದೊಳು 

ರಾಜಿಸುತಿಹ ಕುಜವ

ರಾಜೀವಮುಖಿಯೆನಿಸುವ ಸಖಿಗೊಲಿದಿತ್ತ 

ರಾಜನ ತೋರೆನಗೆ || ಪ ||

 

ನೆತ್ತಿಯಿಂದಿಳಿದಳ ಹೆತ್ತಮಗನ ಮೊಮ್ಮ

ನೆತ್ತಿದಾತನ ಪಿತನ |

ತುತ್ತು ಮಾಡುವನ ವೈರಿಯನೇರಿ ಜಗವನು 

ಸುತ್ತು ಬರುತಲಿಪ್ಪನ |

ಕತ್ತಲೆಯೊಳು ಕಾದಿ ಅಳಿದಯ್ಯನ ಶಿರವ 

ಕತ್ತರಿಸಿದ ಧೀರನ |

ಸತ್ತಮಗನ ತಂದಿತ್ತವನನು ಎ-

ನ್ನೊತ್ತಿಗೆ ಕರೆದು ತಾರೆ || 1 ||

 

ವರುಷವೈದರ ಪೆಸರವನ ತಾಯನುಜನ

ಧರಿಸಿದಾತನ ಸಖನ |

ಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂ-

ವರೆಗೆ ತಾನೊಲಿದವನ |

ಸುರಗಿರಿಯನು ಸುತ್ತಿ ಬಹನ ಸುತನ ಕೈಲಿ

ದಾನವ ಕೊಂಡನ |

ಧರಣಿಜಾತನ ಶಿರವರಿದು ನಾರಿಯರನು 

ಪುರಕೆ ತಂದವನ ತೋರೆ || 2 ||

 

ಹನ್ನೆರಡನೆಯ ತಾರೆಯ ಪೆಸರಾಕೆಯ 

ಕನ್ನೆಯಯ್ಯನ ಮನೆಯ |

ತನ್ನ ತಾ ಮರೆಮಾಡಿಕೊಂಡಿಪ್ಪನರಸಿಯ 

ಬಣ್ಣವ ಕಾಯ್ದಿಹನ |

ಪನ್ನಗಶಯನ ಬೇಲಾಪುರದರಸನು

ತನ್ನ ನೆನೆವ ಭಕ್ತನ |

ಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ-

ಸನ್ನನ ತೋರೆನಗೆ|| 3 ||

 

38) ರಮಣಿ ಕೇಳೆಲೆ 

 

ರಮಣಿ ಕೇಳೆಲೆ  ಮೋಹನ ಶುಭಕಾಯನ

ಅಮರವಂದಿತ ರವಿಶತಕೋಟಿತೇಜನ

ವಿಮಲಚರಿತ್ರದಿ ಮೆರೆವ ಶ್ರೀಕೃಷ್ಣನ

ಕಮಲವದನೆ ನೀ ತೋರೆ|| ಪ ||

 

ಬಾಯೊಳಗಿಹಳ ಗಂಡನ ನಿಜ ತಮ್ಮನ

ತಾಯ ಪಿತನ ಮಡದಿಯ ಧರಿಸಿದನ

ಸ್ತ್ರೀಯಳ ಸುತನ ಕೈಯಲಿ ಶಾಪಪಡೆದನ

ದಾಯಾದಿಯ ಮಗನ |

ಸಾಯಕವದು ತೀವ್ರದಿ ಬರುತಿರೆ ಕಂಡು 

ಮಾಯಾಪತಿ ಭೂಮಿಯನೆತ್ತಿ ತನ್ನಯ 

ಬೀಯಗನ ತಲೆ ಕಾಯ್ದಂಥ

ರಾಯನ ಕರೆದು ತೋರೆ|| 1 ||

 

ನಾಲಗೆ ಎರಡರವನ ಭುಂಜಿಸುವನ

ಮೇಲೇರಿ ಬಹನ ತಂದೆಯಿಹ ಗಿರಿಯನು

ಲೀಲೆಯಿಂದಲಿ ಕಿತ್ತೆತ್ತಿದ ಧೀರನ 

ಕಾಳೆಗದಲಿ ಕೊಂದನ |

ಲೋಲಲೋಚನೆಯ ಮಾತೆಯ ಪುತ್ರನಣುಗನ

ಮೇಲುಶಕ್ತಿಗೆ ಉರವಾಂತು ತನ್ನವರನು 

ಪಾಲಿಸಿದಂಥ ದಾತಾರದೇವನ

ಲೋಲೆ ನೀ ಕರೆದು ತೋರೆ|| 2 ||

 

ಉರಿಯೊಳು ಜನಿಸಿದವನ ನಿಜತಂಗಿಯ 

ಸೆರಗ ಪಿಡಿದ ಖಳನಣ್ಣನ ತಂಗಿಯ

ವರನ ತಲೆಯನು ಕತ್ತರಿಸಿದ ಧೀರನ

ಗುರುವಿನೊಳುದಿಸಿದನ |

ಶರವ ತಪ್ಪಿಸಿ ತನ್ನ ದಾಸಗರ್ೆ ಅನುದಿನ

ಕರೆದು ವರವನಿತ್ತು ಮನ್ನಿಸಿ ಸಲಹುವ 

ಉರಗಗಿರಿಯ ವೆಂಕಟಾದಿಕೇಶವನ

ಗರತಿ ನೀ ಕರೆದು ತಾರೆ|| 3 ||

 

39) ಮುಳ್ಳುಮೊನಿಯ ಮ್ಯಾಲ

 

ಮುಳ್ಳುಮೊನಿಯ ಮ್ಯಾಲ ಮೂರು ಕೆರಿಯ ಕಟ್ಟಿ 

ಎರಡು ಹೂಳು ಒಂದು ತುಂಬಲೆ ಇಲ್ಲ || 1 ||

 

ತುಂಬದ ಕೆರೆಗೆ ಮೇಯಾಕ ಬಂದವು ಮೂರು ಎಮ್ಮಿ 

ಎರಡು ಗೊಡ್ಡು ಒಂದಕೆ ಕರುವೇ ಇಲ್ಲ|| 2 ||

 

ಕರುವಿಲ್ಲದ ಎಮ್ಮಿಯ ಕೂಡಿದರ ಮೂವರು ಹೆಣ್ಮಕ್ಕಳು 

ಇಬ್ಬರು ಬಂಜೆಯರು ಒಬ್ಬಾಕಿ ಹಡೆದೇ ಇಲ್ಲ || 3 ||

 

ಹಡೆಯದ ಹೆಣ್ಣ ಕೂಡಿಕೊಂಡರು ಮೂವರು ಕುಂಬಾರರು

ಇಬ್ಬರು ಚೊಂಚರು ಒಬ್ಬಗೆ ಕೈಯೇ ಇಲ್ಲ || 4 ||

 

ಕೈಯಿಲ್ಲದ ಕುಂಬಾರ ಮಾಡಿದ ಮೂರು ಮಡಿಕಿ 

ಎರಡು ದದ್ದು ಒಂದಕೆ ತಳವೇ ಇಲ್ಲ || 5 ||

 

ತಳವಿಲ್ಲದ ಮಡಕಿಗಿ ಕೊಟ್ಟಾರ ಮೂರು ರೊಕ್ಕ 

ಎರಡು ನಕಲು ಒಂದು ಸವಕಲಾಗಿತ್ತ || 6 ||

 

ಸವಕಲು ರೊಕ್ಕದಿಂದ ಮಾಡಿದರ ಮೂರು ಕಡುಬ

ಎರಡು ಕುದಿಯಲಿಲ್ಲ ಒಂದು ಬೇಯಲೇ ಇಲ್ಲ|| 7 ||

 

ಬೇಯದ ಕಡುಬಿಗಿ ಬಂದಾರ ಮೂವರು ಬೀಗರು 

ಇಬ್ಬರು ಬೊಚ್ಚರು ಒಬ್ಬಗೆ ಹಲ್ಲೇ ಇಲ್ಲ || 8 ||

 

ಹಲ್ಲಿಲ್ಲದ ಬೀಗನಿಗೆ ಕೊಟ್ಟಾರ ಮೂರು ಅಡಕಿ

ಎರಡು ಗೋಟು ಒಂದು ಸಿಡಿದು ಕಾಣೆಯಾಯ್ತು|| 9 ||

 

ಕಾಣೆಯಾದ ಅಡಕಿಯ ಹುಡುಕಲು ಹೋಗ್ಯಾರ ಮೂರು ಮಂದಿ

ಇಬ್ಬರು ಒಂಚೊರಿ ಒಬ್ಬಗೆ ಕಣ್ಣೇ ಇಲ್ಲ || 10 ||

 

ಕಣ್ಣಿಲ್ಲದವನ ಕರೆಯಬೇಕಂತ ಹೋಗ್ಯಾರ ಮೂರು ಮಂದಿ 

ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ || 11 ||

 

ಕಾಲಿಲ್ಲದವನ ಹೊತ್ತು ತರಬೇಕಂತ ಹೋಗ್ಯಾರ ಮೂರು ಮಂದಿ 

ಇಬ್ಬರು ಲಂಡರು ಒಬ್ಬ ಮೊಂಡನಯ್ಯ || 12 ||

 

ಕಾಗಿನೆಲೆ ಕನಕದಾಸ ಹಾಕಿದ ಮುಂಡಿಗಿ 

ಇದ ತಿಳಿದವ ಜಾಣ ಒಡೆದು ಹೇಳದವ ಕೋಣ|| 13 || 

 

40) ಭವಭಯವಿನಾಶ ಭೋ

 

ಭವಭಯವಿನಾಶ ಭೋ ಭಕ್ತವಿಲಾಸ ಭೋ

ಪಾ - ಪವಿನಾಶ ಭೋ ಬಾಡದ ರಂಗ ಭೋ|| ಪ ||

 

ಹರಿಯ ಸುತನಿಗೆ ಅಭಯವಿತ್ತೆ | ಹರಿಯ ಮಗನ ಕೊಂದೆ || 

ಹರಿಯೆನಲು ಹರಿರೂಪ ತಾಳಿದೆ | ಹರಿಯೊಳಡಗಿದೆ ಮತ್ತೆ ||

[ಹರಿಯ ನುಂಗಲು ಗಗನವೇರಿದ | ಹರಿಗೆ ವರಗಳನಿತ್ತೆ ] ||

ಹರಿಯನಗ್ರಜಕೋಟಿ ತೇಜನ | ಹರಿಯವದನನೆಂಬ || 1 ||

 

ಶಿವನ ಮಗಳೊಡಗೂಡಿ ಮತ್ತೆ | ಶಿವಮಗಳ ಮಾವಗಿತ್ತೆ ||

ಶಿವನುಪಟಳಕಳುಕಿ ಗೋಕುಲ | ಶಿವನ ಕರದಲಿ ಪೊತ್ತೆ ||

ಶಿವನ ಧನುವನು ಮುರಿದು ಮತ್ತೆ | ಶಿವನ ತಲೆಯಲಿ ನಿಂದೆ ||

ಶಿವನ ಭೋಜನವಾಹ ಪಿತನಿಗೆ | ಶಿವನ ಪ್ರತಿಫಲನವೆಂಬ || 2 ||

 

ಕಮಲವನು ಈರಡಿಯ ಮಾಡಿದೆ | ಕಮಲ ಮೊರೆಯಿಡಲಂದು ||

ಕಮಲದಲಿ ಬ್ರಹ್ಮಾಂಡ ತೋರಿದೆ | ಕಮಲಧರ ನೀನೆಂದು ||

ಕಮಲ ಕದ್ದೊಯ್ದವನ ಸದೆದು | ಕಮಲ ತಂದವನೆಂದು ||

ಕಮಲಮುಖಿಯಳ ಕಾಯ್ದ ಕಾಗಿನೆಲೆ | ವಿಮಲಾದಿಕೇಶವನೆಂಬ || 3 || 

 41 ) ಪುಲ್ಲವದನೆ ನಿಲ್ಲಲಾರೆನೆ 

 

ಪುಲ್ಲವದನೆ ನಿಲ್ಲಲಾರೆನೆ | ಕಾಮನ ಶರ ತಾಗಿ 

ತಲ್ಲಣಗೊಳುತಿಹೆನೆ || ಪ ||

 

ಬಲ್ಲಿದ ಮಲ್ಲರನೆಲ್ಲರ ಮಡುಹಿದ 

ನಲ್ಲನ ತೋರೆನಗೆ || ಅ.ಪ. ||

 

ಮೃಗಧರಾರಿಯ ವೈರಿ | ಪೆಗಲೇರಿ ಬರುವಂಥ 

ಜಗದಧಿಪತಿಯಾದನ ||

ಅಗಜೆಯರಸನ | ನಗವ ನೆಗಪಿದನ 

ಬಗೆಯಿಂದಪ್ಪಳಿಸಿದನ ||

ಹಗಲೆ ಮೋಹಿಸಿದನ | ಮಗನನುಜರೊಳು 

ಪಗೆಯಗೊಂಡಿರುವಾತನ ||

ಮಗುವು ತಾನಾಗಿ ಮಾ | ವನ ಮಸ್ತಕವನ್ನು 

ಬಗೆದನ ತೋರೆನಗೆ || 1 ||

 

ಅಂಧನೃಪಾಲನ | ಕಂದರನೆಲ್ಲರ 

ಕೊಂದೈವರ ಭಾವನ ||

ತಂದೆಗೆ ಹಿರಿಯ | ನೆಂದೆನಿಸಿಕೊಂಡಾತನ 

ವಂದಿಸಿದವರಣ್ಣನ ||

ಅಂದು ಸಭೆಯಲಿ | ಬೈದವನ ತವಕದಿ 

ಕಂಧರ ಕಡಿದಾತನ ||

ಸಿಂಧುಮಥನದೊಳು | ಜನಿಸಿದ ಗಂಡ ಮು-

ಕುಂದನ ತೋರೆನಗೆ || 2 ||

 

ಮಂಗಳ ಜನನಿಯ | ಹಿಂಗದೆ ಕದ್ದು ಜ-

ಲಂಗಳೊಳಡಗಿಪ್ಪನ ||

ಬೆಂಗೊಂಡು ಪೋಗಿ ಅವ | ನಂಗವ ಸೀಳಿ ವೇ-

ದಂಗಳ ತಂದವನ ||

ಮಂಗಳ ಮಹಿಮನ ಭು | ಜಂಗಶಯನ ನಾರಿ 

ಭಂಗವ ಕಾಯ್ದವನ ||

ಹಿಂಗದೆ ಕಾಗಿನೆಲೆ | ಯಾದಿಕೇಶವ ನರ 

ಸಿಂಗನ ತೋರೆನಗೆ || 3 ||

 

42) ಪಕ್ಕಿಯ ಕುರುಹ ಬಲ್ಲರು ಪೇಳಿರಿ

 

ಪಕ್ಕಿಯ ಕುರುಹ ಬಲ್ಲರು ಪೇಳಿರಿ || ತನ್ನ

ಮಕ್ಕಳಿಗೆ ವೈರಿ ಮೂಜಗದೊಳಗೆಲ್ಲ || ಪ ||

 

ಬಣ್ಣಬಣ್ಣದ ಪಕ್ಷಿ ಅದಕೆ ವೆಜ್ಜಗಳುಂಟು 

ಕಣ್ಣು ಮುಚ್ಚಲಿಲ್ಲ ತೆರೆಯಲಿಲ್ಲ ||

ಹುಣ್ಣಿಮೆ ಮುಂದಿನ ಬೆಳಗಲಿ ಬಾಹೋದು 

ತಣ್ಣನೆ ಹೊತ್ತಲಿ ತವಕಗೊಂಬೋದು || 1 ||

 

ಕೆಂಬಲ್ಲಿನ ಪಕ್ಷಿ ಕೊಂಬುದು ರಸಗಳ 

ಹಂಬಲ ಮಾಳ್ಪುದು ಹರುಷದಿಂದ 

ತುಂಬಿವರ್ಣನ ತೆತ್ತವೆ ನಾಲ್ಕು ರವೆಯುಂಟು 

ಜಾಂಬವರು ಮೆಚ್ಚುವರು ಜಾಣರಿಗಳವಲ್ಲ || 2 ||

 

ಉಂಡರೂ ದಣಿಯದು ಊರಸೇರದ ಪಕ್ಷಿ

ಮಂಡೆಯ ಮೇಲೆರಡು ಕೋಡದಕೆ ||

ಗುಂಡಿಗೆಯೊಳಗೆ  ಮೂಲಗಳುಂಟು ಧರೆಯೊಳು

ಗಂಡನ ನುಂಗುವುದು ಜಗಮುಖದ ಪಕ್ಷಿ|| 3 ||

 

ಗಿಡ್ಡಮೀಸೆಗಳುಂಟು ಗರುಡ ಎನ್ನಬೇಡಿ 

ಒಡ್ಡನಪ್ಪಿ ಬಾಹೋದು ವರುಷಕ್ಕೊಮ್ಮೆ ||

ಗುಡ್ಡದೊಳಿರುವುದು ದೊರೆಗಳಿಗಂಜದು 

ಹೆಡ್ಡರಿಗಳವಲ್ಲ ಹೇಮವರ್ಣದ ಪಕ್ಷಿ|| 4 ||

 

ಹಕ್ಕರಿಕೆ ಗರಿಯಂತೆ ಹರವು ರೆಕ್ಕೆಗಳುಂಟು 

ಒಕ್ಕಲು ಮೇಲದು ಒಲಿದವಗೆ  ||

ದಿಕ್ಕಿನಲ್ಲಿ ಕಾಗಿನೆಲೆಯಾದಿಕೇಶವನ 

ಮುಕ್ಕಣ್ಣನವತಾರ ಹನುಮಂತ ಬಲ್ಲ || 5 ||

 

43) ನಿಜವರಿತು ಲಿಂಗವನು 

 

ನಿಜವರಿತು ಲಿಂಗವನು ಪೂಜೆಮಾಡುವರಾರು

ನಿಜ ನೇಮನಿಷ್ಠೆಯೊಳು ನಿಂದವರ ತೋರು || ಪ ||

 

ಆತ್ಮವೆಂಬುದರೊಳಗೆ ಅಮೃತಚಿಲುಮೆಯ ತೆಗೆದು 

ನೀತಿಮಾರ್ಗವೆನ್ನುವ ಕೊಡನ ಪಿಡಿದು  ||

ಮೂತೆರದ ಭೇದಗಳ ಕಡಿದು ಕಣ್ಣಿಯ ಮಾಡಿ 

ಚಿತ್ಲಿಂಗಕಗ್ಗವಣಿ ತಂದವರ ತೋರು || 1 ||

 

ಪಂಚಪ್ರಾಣಗಳ ಗೊತ್ತುಗುರಿ ಜಾಡನು ತಿಳಿದು 

ಪಂಚಾಕ್ಷರಿ ಎಂಬ ಅರಮನೆಯೊಳಗೆ ||

ಪಂಚಭೂತಗಳೆಂಬ ಬಯಲ ಜಗಲಿಯನೇರಿ ಪ್ರ

ಪಂಚಧರ ಚಿನ್ಹೆಯನು ಕಾಣುವರ ತೋರು || 2 ||

 

ಮೂಲವಾಸನೆಯಳಿದು ಕಾಯವಾಸನೆ ಕಳೆದು 

ಮೇಲೆ ಕಾರುಣ್ಯನೆಲೆ ಎಂಬುದನು ಕಂಡು ||

ನಾಲಗೆಯಿಂದ ಗಂಟೆ ನಾದದಲೆಯನು ಕೇಳಿ

ಸಲೆ ಸೂರ್ಯಚಂದ್ರರೆಡೆ ಸುಳಿದವರ ತೋರು || 3 ||

 

ಅಂತರಂಗದೊಳಗೆ ಅಷ್ಟಜ್ಯೋತಿಯನಿಟ್ಟು 

ದಂತಿ ಎಂಟನು ಪಿಡಿದು ತರಿದು ಬಿಸುಟು ||

ಆಂತರ್ಯದ ಸಂತತ ಭೇರಿಶಬ್ದವ ಕೇಳಿ

ಅಂತರಾತ್ಮಲಿಂಗವ ಪೂಜಿಪರ ತೋರು || 4 ||

 

ಪರಬ್ರಹ್ಮ ತನ್ನೊಳಗೆ ಪರಿಪೂರ್ಣವಾಗಿರಲು 

ಪರಂಜ್ಯೋತಿಲಿಂಗವ ಬಯಸಿ ನೋಡು ||

ವರ ಬಾಡ ಬಂಕಾಪುರದ ಆದಿಕೇಶವನ 

ಕುರಿತು ತಿಳಿಯೋ ಹಳೆಗನ್ನಡದ ಸೊಬಗ || 5 || 

 

44) ತೋರೆ ಬೇಗನೆ ಸಖಿ

 

ತೋರೆ ಬೇಗನೆ ಸಖಿ | ತೋಯಜಮುಖಿ |

ತೋರಮುತ್ತಿನ ಹಾರ ಭಾರವಾಗಿದೆ ನನಗೆ || ಪ ||

 

ಈರೇಳು ಲೋಕವ ಪೊರೆವ ದಯಾನಿಧಿ 

ಬಾರನೇತಕೆ ಮನೆಗೆ | ಹೇ ಸಖಿಯೆ || || ಅ.ಪ. ||

 

ತರಣಿತನಯಸುತನ | ಬಾಯೊಳನೃತವ

ಭರದಿಂದ ನುಡಿಸಿದನ ||

ತರಣಿಸುತನ ಬಾಣ | ವೆರಗಂದದಿ ರಥವ

ಧರೆಗೆ ಒತ್ತಿ ದೇವನ ||

ತರಣಿಯ ಮರೆಮಾಡಿ | ಶಿರವ ತರಿಯುವಂತೆ 

ನರಗೆ ಸೂಚಿಸಿದಾತನ ||

ತರಣಿಯೊಡನೆ ಪಂಥ | ವಾಡಿ ತಿರುಗಿದನ 

ತರಳನಾಳಿದನ ತೋರಿಸೆ | ಹೇ ಸಖಿಯೆ |||| 1 ||

 

ಗೋತ್ರಭೇದಿ ಸುತನ | ಸುತನ ಸತಿಯ

ಮಾತುಳನಾದವನ ||

ಕತ್ತಲೆಯಲಿ ಪೋಗೆ | ಕುತ್ತಿಟ್ಟವನ ಮೆಯ್ಯ 

ಸುತ್ತಿ ಬಾಧಿಸುತಿಹನ ||

ತತ್ತ್ವವರಿತು ಸು | ತತ್ತ್ವ ಬೋಧಿಸಿ ಮತ್ತೆ 

ಉತ್ತರವಿತ್ತವನ ||

ಮುತ್ತಯ್ಯನ ತಾಯ | ಪೆತ್ತ ದೇವನ ಎನ್ನ 

ಹತ್ತಿರ ಕರೆದು ತಾರೆ | ಹೇ ಸಖಿಯೆ || || 2 ||

 

ವರಮುನಿಗಳು ನೆರೆದು | ಸವರ್ೋತ್ತಮನಾರೊ

ಪರಿಶೋಧಿಸಲುಬೇಕೆಂದು ||

ಭರದಿಂದ ಭೃಗುಮುನಿ | ಬಂದು ಕೋಪಿಸೆ ಬೇಗ

ಚರಣವನೊತ್ತಿದನ ||

ಪರಿಪರಿಯಲಿ ದೇವ | ಪರಮಭಕ್ತರಕಾವ

ಸುರರಿಗಭಯವಿತ್ತನ ||

ವರ ವೇಲಾಪುರದಾದಿ | ಕೇಶವರಾಯನ 

ಮರೆಯಲಾರೆನೆ ಮನದಿ | ಹೇ ಸಖಿಯೆ || || 3 || 

 

45)  ಕೋ ಕೋ ಕೋ ಎನ್ನಿರೋ

ಕೋ ಕೋ ಕೋ ಎನ್ನಿರೋ | ಕುಂಭಿನಿಯವರೆಲ್ಲ  |

ಕೋ ಕೋ ಕೋ ಎನ್ನಿರೋ || ಪ ||

 

ಹೊದ್ದಿ ಮೊಲೆಯನುಂಡವಳಸುವನೆ ಕೊಂಡ 

ಮುದ್ದುಕಾರ ಕಳ್ಳ ಕೋ ಕೋ ಕೋ ಎನ್ನಿರೋ ||

ಕದ್ದುಕೊಂಡೊಯ್ವ ರಕ್ಕಸರನೆಲ್ಲರ ಕಾಲ

ಲೊದ್ದೊರೆಸಿದ ಕಳ್ಳ ಕೋ ಕೋ ಕೋ ಎನ್ನಿರೋ ||

ಹದ್ದುಹಗೆಯ ಹಾಸಿಗೆಯ ಮೇಲೊರಗಿದ 

ಮುದ್ದುಗಾರ ಕಳ್ಳ ಕೋ ಕೋ ಕೋ ಎನ್ನಿರೋ ||

ಅರ್ಧದೇಹನ ಕೈಯ ತಲೆಯ ಕಪಟದಿಂದ 

ಕದ್ದು ಬಿಸುಟ ಕಳ್ಳ ಕೋ ಕೋ ಕೋ ಎನ್ನಿರೋ|| 1 ||

 

ಕೆಂಜಾಜಿಯ ಮಣಿಮಲ್ಲಿಗೆ ದಂಡೆಯರ್

ಅಂಜೆ ಕದ್ದ ಕಳ್ಳ ಕೋ ಕೋ ಕೋ ಎನ್ನಿರೋ ||

ಗುಂಜಿಯ ದಂಡೆಯ ಕಲ್ಲಿಯ ಚೀಲದ 

ಮಂಜುಮೆಯ್ಯವ ಕಳ್ಳ ಕೋ ಕೋ ಕೋ ಎನ್ನಿರೋ ||

ಅಂಜದೆ ಗೊಲ್ಲರ ಪಳ್ಳಿಯೊಳಗೆ ಹಾಲ 

ನೆಂಜಲಿಸಿದ ಕಳ್ಳ ಕೋ ಕೋ ಕೋ ಎನ್ನಿರೋ ||

ಸಂಜೆ ಬೈಗಿನಲ್ಲಿ ಕರೆಯುವ ಸತಿಯರ 

ಅಂಜಿಸಿದ ಕಳ್ಳ ಕೋ ಕೋ ಕೋ ಎನ್ನಿರೋ|| 2 ||

 

ಕೇಶಿ ಎಂಬಂಥ ರಕ್ಕಸರನೆಲ್ಲರ ಕೊಂದ

ವೇಷಧಾರಿ ಕಳ್ಳ ಕೋ ಕೋ ಕೋ ಎನ್ನಿರೋ ||

ಮೋಸದಿ ಬಲಿಯ ದಾನವ ಬೇಡಿ ಅನುದಿನ 

ಬೇಸರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ ||

ಮೀಸಲು ಅನ್ನದ ಕೂಸಾಗಿ ಸವಿದುಂಡ

ವೇಷಧಾರಿ ಕಳ್ಳ ಕೋ ಕೋ ಕೋ ಎನ್ನಿರೋ ||

ಸಾಸಿರನಾಮಕೆ ಹೆಸರಾದ ಛಪ್ಪನ್ನ 

ದೇಶ ದಾರಿಗಳ್ಳ ಕೋ ಕೋ ಕೋ ಎನ್ನಿರೋ || 3 ||

 

ಆಕಳೊಳಾಡಿ ಪರಲೋಕಕೆ ನಡೆದಂಥ 

ಆಕೆವಾಳ ಕಳ್ಳ ಕೋ ಕೋ ಕೋ ಎನ್ನಿರೋ ||

ಭೂಕಾಂತೆಯ ಸೊಸೆಯನೆತ್ತಿ ಬಲುಹಿಂದೆ

ನೂಕಿ ತಂದ ಕಳ್ಳ ಕೋ ಕೋ ಕೋ ಎನ್ನಿರೋ ||

ಗೋಕುಲದೊಳು ಪುಟ್ಟಿ ಗೊಲ್ಲರೆಲ್ಲರು ಕೈಯ 

ಸಾಕಿಸಿಕೊಂಡ ಕಳ್ಳ ಕೋ ಕೋ ಕೋ ಎನ್ನಿರೋ ||

ಸಾಕಾರನಾಗಿ ಈ ಲೋಕವನೆಲ್ಲವ 

ಆಕ್ರಮಿಸಿದ ಕಳ್ಳ ಕೋ ಕೋ ಕೋ ಎನ್ನಿರೋ|| 4 ||

 

ಕ್ಷೀರವಾರಿಧಿಯನು ವೈಕುಂಠಗಿರಿಯನು

ಸೇರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ ||

ದ್ವಾರಾವತಿಯನು ನೀರೊಳು ಬಚ್ಚಿಟ್ಟ 

ಊರುಗಳ್ಳ ಬಂದ ಕೋ ಕೋ ಕೋ ಎನ್ನಿರೋ ||

ಕಾರಣಾತ್ಮಕ ಕಾಗಿನೆಲೆಯಾದಿಕೇಶವ 

ಕ್ಷೀರಬೆಣ್ಣೆಯ ಕಳ್ಳ ಕೋ ಕೋ ಕೋ ಎನ್ನಿರೋ  || 5 ||

 

46) ಕರೆತಾರೆ ಕಾಮಿನಿ ಕಮಲಜಪಿತನ 

 

ಕರೆತಾರೆ ಕಾಮಿನಿ ಕಮಲಜಪಿತನ |

ಸಿರಿ ತೋರೆ ಸಾಸಿರನಾಮವುಳ್ಳವನ || ಪ ||

 

ಮರೆದಿರಲಾರೆನೆನ್ನ ಪ್ರಾಣವಲ್ಲಭನ | ದಿನ 

ಕರ ಕೋಟಿಕಿರಣ ಪ್ರಕಾಶವುಳ್ಳವನ |||| ಅ.ಪ.||

 

ಬ್ರಹ್ಮಕಪಾಲವ ಧರೆಗಿಳುಹಿದನ 

ತಮ್ಮ ಅಣ್ಣಂದಿರ ಕಡಿದಾಡಿಸಿದನ ||

[ತಿಮ್ಮನಾಮದಿ ಗಿರಿಯೇರಿ ನಿಂದವನ 

ಕಮ್ಮಗೋಲನ ತಾಯ ಕೈಪಿಡಿದವನ]|| 1 ||

 

ನಗರಾಜವೈರಿಯ ಮಗನ ಬೀಗನ

ನಗವ ಬೆನ್ನಲಿ ಪೊತ್ತು ಜಗವನಾಳುವನ

ನಗವ ಕಿತ್ತವನ ಶಿರವ ಹರಿದವನ

ನಗಸುತಾಪತಿ ಕಾಯದೊಳು ಮೂಡಿಹನ || 2 ||

 

ಪಾತಾಳಕಿಳಿದು ಭೂಮಿಯನೊಯ್ದವನ ಕಿ-

ರಾತನಟ್ಟಿ ಸತಿಯ ಗೆದ್ದವನ 

ಮಾತು ಕದ್ದವನ ಕುಕ್ಷಿಯ ಸೀಳಿದವನ 

ಮಾತೆಗೆ ಮಾತುಕೊಟ್ಟವನ ಮಾತುಳನ || 3 ||

ಕಣ್ಣಿಂದ ಕೇಳ್ವನ ಹಗೆಯನಾಳುವನ

ಕಣ್ಣಿಂದ ತಿಳಿದು ಕಲ್ಪಿಸದವನ

ಕಣ್ಣನಿರಿದು ದಾನವ ಬೇಡಿದವನ

ಅಣ್ಣಗಳ ಕಂಗಳ ಕಾಲಲೊತ್ತಿದನ|| 4 ||

 

ಸುಂದರ ಗಿರಿಯನುಗುರಲೆತ್ತಿದವನ

ಬೆಂದು ಹೋದಾವೆಂದು ಗೋವಕಾಯ್ದವನ

ಮಂದೆಗಾಯ್ದವನ ಮನ್ಮಥನ ಪೆತ್ತವನ

ತಂದೆ ಶ್ರೀ ಬಾಡದಾದಿ ಕೇಶವನ || 5 ||

 

47) ಒಂಬತ್ತು ಹೂವಿಗೆ ಒಂದೇ ನಾಳವು 

 

ಒಂಬತ್ತು ಹೂವಿಗೆ ಒಂದೇ ನಾಳವು | ಚಂದಮಾಮ ||

ತುಂಬಿ ನಾಳತುದಿ ತುಂಬಿ ಭಾನುಪ್ರಭೆ ||ಚಂದಮಾಮ |||| 1 ||

 

ಕದರುಗಾತ್ರ ಕಂಬ ತೆಕ್ಕೆಗಾತರ ಹೂವು | ಚಂದಮಾಮ ||

ಆನೆಗಾತ್ರ ಕಾಯಿ ಒಂಟೆಗಾತರ ಹಣ್ಣು  || ಚಂದಮಾಮ |||| 2 ||

 

ಕಾಲಿಲ್ಲದಾತನು ಹತ್ತಿದ ಮರವನು  | ಚಂದಮಾಮ ||

ಕೈಯಿಲ್ಲದಾತನು ಕೊಯ್ದನಾ ಹಣ್ಣ || ಚಂದಮಾಮ |||| 3 ||

 

ನೆತ್ತಿಲ್ಲದಾತನು ಹೊತ್ತನು ಆ ಹಣ್ಣ  | ಚಂದಮಾಮ ||

ತಳವಿಲ್ಲದಾ ಗೊಡೆಯಲಿಳಿಸಿದರಾ ಹಣ್ಣ || ಚಂದಮಾಮ |||| 4 ||

 

ಮಾರ್ಗ ತಪ್ಪಿ ಹಿಡಿದು ನಡೆದರು  | ಚಂದಮಾಮ ||

ಸದ್ದಿಲ್ಲದಾ ಸಂತೇಲಿಳಿಸಿದರಾ ಹಣ್ಣ ||  ಚಂದಮಾಮ || || 5 ||

 

ರೊಕ್ಕವಿಲ್ಲದಾತ ಕೊಂಡನಾ ಹಣ್ಣ | ಚಂದಮಾಮ ||

ಮೂಗಿಲ್ಲದಾತ ಮೂಸಿದನಾ ಹಣ್ಣ  || ಚಂದಮಾಮ |||| 6 ||

 

ಕಣ್ಣಿಲ್ಲದಾತನು ಕೆಂಪನೆ ಹಣ್ಣೆಂದ | ಚಂದಮಾಮ ||

ಅಂಗುಳಿಲ್ಲದಾತ ನುಂಗಿದನಾ ಹಣ್ಣ ||  ಚಂದಮಾಮ |||| 7 ||

 

ಬಾಯಿಲ್ಲದಾತ ತಿಂದು ಬಸಿರಲಿಂಬಿಟ್ಟ  | ಚಂದಮಾಮ ||

ಸುಲಭ ಪದವಿದು ನಳಿನಜಾಂಡದೊಳು  || ಚಂದಮಾಮ |||| 8 ||

 

ಗುರುವಿನ ಮಹಿಮೆ ಗುರುವೆ ತಾ ಬಲ್ಲನು  | ಚಂದಮಾಮ ||

ಮೂಢನಾದವನೇನು ಬಲ್ಲನು ಈ ಮಾತ || ಚಂದಮಾಮ |||| 9 ||

 

ಕನಕನಾಡಿದಾ ಗುಟ್ಟು ಆದಿಕೇಶವ ಬಲ್ಲ  | ಚಂದಮಾಮ ||

ತಿಳಿದವರು ಪೇಳಿರೀ ಹಳೆಗನ್ನಡವನ್ನು  || ಚಂದಮಾಮ ||

 

48) ಒಡವೆ ಹೋಯಿತು ಮನ ಧೃಡವಾಯಿತು

 

ಒಡವೆ ಹೋಯಿತು ಮನ ಧೃಡವಾಯಿತು || || ಪ ||

ಹಿಡಿದರೋಡುವ ಕಳ್ಳ ಬಿಡದೆ ಕದ್ದೊಯ್ದ || || ಅ.ಪ.||

 

ಆರು ಜೋಡಿನ ಓಲೆಯಿತ್ತು ಮೂರು ಮುತ್ತಿನ ಮೂಗುತಿಯಿತ್ತು

ಚಾರುತರದ ಇಪ್ಪತ್ನಾಲ್ಕೆಳೆಯ ಸರವು ಒಂದಿತ್ತು ||

ಈರೈದು ತಾಳಿಗಳಿತ್ತು ಬಿರುದಿನ ಕಪ್ಪೆಂಟಿತ್ತು 

ದಾರಿ ನೋಡಿಕೊಂಡು ಇದ್ದ ಛಾಯನೆಂಬ ಕಳ್ಳ ಕದ್ದ || || 1 || 

 

ಎಪ್ಪತ್ತೆರಡು ಸಾವಿರ ಸೂತ್ರದ ಹಸ್ತಕಟ್ಟು ಎರಡಿತ್ತು

ಕಪ್ಪು ಬಿಳುಪು  ಕೆಂಪುವರ್ಣದ ಪದಕವೊಂದಿತ್ತು ||

ಒಪ್ಪವಿತ್ತ ಹಸ್ತಕಡಗ ಆಶಪಾಶ ಎರಡಿತ್ತು 

ಒಪ್ಪವನ್ನು ಸಾಧಿಸುತ್ತ ನೇತ್ರವೆಂಬ ಕಳ್ಳ ಕದ್ದ || || 2 ||

 

ಹುಟ್ಟು ಸಾವು ಎರಡು ಎಂಬ ಘಟ್ಟಿತೂಕದ ನಗವಿತ್ತು

ಕಷ್ಟಸುಖ ಕರ್ಮಗಳೆಂಬ ಸಂಚಿಗಳಿತ್ತು ||

ಅಷ್ಟು ಇಷ್ಟು ಚಿಲ್ಲರೆ ಪೆಟ್ಟಿಗೆಯಲಿ ತುಂಬಿತ್ತು

ದೃಷ್ಟಿ ನೋಡಿಕೊಂಡು ಇದ್ದ ಧರ್ಮನೆಂಬ ಕಳ್ಳ ಕದ್ದ || || 3 ||

ಎಲ್ಲ ಒಡವೆ ಹೋಯಿತಾದರು ಫುಲ್ಲಳಾಗಿ ಮೆರೆಯುತ್ತಾಳೆ

ಚೆಲ್ವನೊಬ್ಬ ಪುರುಷನ ಕಂಡು ತಾಳಲಾರದೆ ||

ಬಲ್ಲಿದಳು ಈಕೆಯೆಂದು ಇವಳ ಬಗೆಗೆ ತಿಳಿಯಿತೆಂದು

ಕೊಲ್ಲಬಾರದೆನುತ ಹೇಳಿ ಮನೆಯ ಬಿಟ್ಟು ಹೊರಗಟ್ಟಿದ || || 4 || 

 

ಇಂಥ ಒಡವೆ ಹೋಯಿತೆಂದು ಚೋದ್ಯಪಟ್ಟು ನೋಡುತಿರಲು

ತಂತ್ರಮಾಡಿ ಆದಿಕೇಶವ ಶ್ರೀಹರಿಯುತಾನೆ ಬಂದು ||

ತಂತ್ರವನ್ನು ಹೇಳಿ ಜ್ಞಾನಮಾರ್ಗವನ್ನು ಬಿಟ್ಟುಕೊಟ್ಟು 

ಸಂತಸದಿಂದ ಇರು ಎಂದು ಚಿಂತೆಬಿಡಿಸಿ ಸಲೆ ಸಲಹಿದ || || 5 || 

49) ಏಣನಯನೆ ಏಣಭೋಜಮಧ್ಯಳೆ

 

ಏಣನಯನೆ ಏಣಭೋಜಮಧ್ಯಳೆ ತೋರೆ

ಏಣಾಕಂಬಿಂಬಮುಖಿ |

ಏಣಾರಿರಿಪುಶಿರಕುಚಯುಗೆ ಕರೆತಾರೆ

ಏಣಾಂಕಧರಸಖನ |||| ಪ ||

ಚಳಿಯ ಮಗಳ ತಾಯಳಿಯನ ತನಯನ | ಇಳುಹದೆ ಪೊತ್ತಿಹನ ||

ಬಳಿದುಣ್ಣನೀಸದೆ ಸೆಳೆದುಂಡಣ್ಣನ | ಸಲಹಿದಾತನ ಸುತನ ||

ಕಳದೊಳು ತಲೆಯ ಚೆಂಡಾಡಿದ ಧೀರನ | ಬಳಿ ವಾಘೆಯನು ಪಿಡಿದನ ||

ಇಳೆಯ ಮೊರೆಯ ಕೇಳಿ ಖಳರುತ್ತಮಾಂಗವ | ನಿಳುಹಿದಾತನ ತೋರೆಲೆ || 1 ||

 

ಇಪ್ಪತ್ತನಾಲ್ಕು ನಾಮಗಳೊಳಗೇಳನು | ತಪ್ಪದೆಣಿಸಿ ಕಳೆದು ||

ಬಪ್ಪುವ ಎಂಟನೆಯ ನಾಮದ ಪೆಸರಿನೊ | ಳಿಪ್ಪ ಕಡೆಯ ಬೀಡಲಿ ||

ಅಪ್ಪ ಜಯದರಸನ ಕೂಡೆ ಜನಿಸಿದವಳ | ಕಪ್ಪುವರ್ಣದ ಮೆಯ್ಯಳ ||

ಅಪ್ಪನ ಮಿತ್ರನ ಮಗನೆಂಬ ಬೊಮ್ಮನ | ಬೊಪ್ಪನ ತೋರೆನಗೆ || 2 ||

 

ಬಿಡುಗಣ್ಣಬಾಲೆ  ತನ್ನೊಡೆಯನ ನುಡಿಕೇಳಿ | ಧೃಡದಿಂದ ನಡೆದು ಬಂದು ||

ಜಡಿವ ಕೋಪಕೆ ಶಾಪವಡೆದು ಕೊಂಡಾಕ್ಷಣ | ನುಡಿದ ದಿನವು ದಾಟಲು ||

ಪಡೆಯನೆಲ್ಲವ ನಡುರಣದಲಿ ಸೋಲಿಸಿ | ಜಡಿದು ಗೋವುಗಳನೆಲ್ಲ ||

ಒಡನೆ ತನ್ನೂರಿಗೆ ಹೊಡೆತಂದ ಧೀರನ | ಒಡೆಯನ ತೋರೆನಗೆ || 3 ||

 

ಸುರರ ವಾದ್ಯದ ಪೆಸರಲಿ ಬಸುರಲಿ ಬಂದ | ಉರಗನತ್ತೆಯ ಮಗನ ||

ಹಿರಿಯ ತಮ್ಮನ ಸುತ್ತಿ ನುಂಗದೆ ತಂದೆಯ | ಮರಳಿ ನುಂಗಿದ ಧೀರನ ||

ಧುರದೊಳು ಧ್ವಜವ ಕೀಲಿಸಿದಾತನ ಕು | ವರರೆಲ್ಲರನು ಕೊಂದನ 

ವರ ಮಾತೆಯ ಕೂಡ ಜನಿಸಿದ | ಧೀರನ ಗರುವೆ ನೀ ತೋರೆನಗೆ || 4 ||

 

ಮೂರು ಬಟ್ಟೆಯೊಳಿಪ್ಪ ನಾರಿಯ ಗಂಡನ | ವೈರಿಯ ಹಿರಿಯಣ್ಣನ ||

ಮೂರೊಂದು ಮಾತಿನ ಸಾರವನೆ ಕದ್ದು | ವಾರಿಧಿಯನೆ ಪೊಕ್ಕನ ||

ಬೇರೊಂದು ರೂಪದಿ ಜನಿಸಿ ಖಳನ ಕೊಂದು | ಧಾರಿಣಿಸುರಗರ್ಿತ್ತನ ||

ವೀರ ಕಾಗಿನೆಲೆಯಾದಿ ಕೇಶವ ರಘು | ವೀರನ ಕರೆದು ತೋರೆ || 5 ||

 

50) ಈತನೀಗ ವಾಸುದೇವನು

ಈತನೀಗ ವಾಸುದೇವನು | ಲೋಕದೊಡೆಯ 

ಈತನೀಗ ವಾಸುದೇವನು || ಪ ||

 

ಈತನೀಗ ವಾಸುದೇವ | ನೀ ಸಮಸ್ತ ಲೋಕದೊಡೆಯ |

ದೂತಗೊಲಿದು ತೇರನೇರಿ | ತೇಜಿಪಿಡಿದು ನಡೆಸಿದಾತ || ಅ.ಪ. ||

 

ದನುಜೆಯಾಳ್ದನಣ್ಣನಯ್ಯನ | ಪಿತನ ಮುಂದೆ ಕೌರವೇಂದ್ರನ 

ಅನುಜೆಯಾಳಿದವನ ಶಿರವ ಕತ್ತರಿಸುತ ||

ಅನುಜೆಯಾಳಿದವನ ಬೆಂಕಿ | ಮುಟ್ಟದಂತೆ ಕಾಯ್ದ ರುಕ್ಮ

ನನುಜೆಯಾಳಿದವನ ಮೂತರ್ಿಯನ್ನೆ ನೋಡಿರೋ || 1 ||

ನರನ ಸುತನರಣ್ಯದಲ್ಲಿ | ಗಿರಿಯೊಳ್ನಿಂತು ತನ್ನ ರೋಷದಿ 

ಶರಗಳನ್ನು ತೀಡುತಿಪ್ಪನ ತಾನು ಯೋಚಿಸಿ ||

ಭರದಲವನ ಕರೆದು ಕೇಳೆ | ಕುರುಹು ತೋರಿ ಪತ್ರವನ್ನು 

ಹರಿಸಿದವನ ಶಿರವ ತರಿದ ದೇವ ಕಾಣಿರೊ|| 2 ||

 

ಸೃಷ್ಟಿಕರ್ತಗೆ ಮಗನಾದವನಿ | ಗಿಷ್ಟಭೂಷಣ ಅಶನವಾದವ

ನಿಷ್ಟಪುತ್ರಗೆ ವೈರಿ ತೊಡೆಯ ಛೇದಿಸೆನ್ನುತ ||

ಕಷ್ಟವನ್ನು ಕಳೆದು ಭಕ್ತ | ರಿಷ್ಟವನ್ನು ಕಾದಂಥ ಉ-

ತ್ಕೃಷ್ಟ ಮಹಿಮನಾದ ದೇವನೀತ ಕಾಣಿರೊ|| 3 ||

 

ಕ್ರೂರನಾದ ಫಣಿಪಬಾಣ | ತರಣಿಜಾತನೆಚ್ಚುವಾಗ 

ವೀರ ನರನ ಕಡೆಗೆ ಬಪ್ಪುದನ್ನು ಈಕ್ಷಿಸಿ ||

ಧಾರಿಣಿಯ ಪದದೊಳೌಕಿ | ಚರಂಭಜಕ ನರನ ಕಾಯ್ದ 

ಭಾರಕರ್ತನಾದ ದೇವನೀತ ಕಾಣಿರೊ|| 4 ||

 

ವ್ಯೋಮಕೇಶನಿಪ್ಪ ದೆಸೆಯ | ಸರ್ವಜಗಕೆ ತೋರಿಸುತ್ತ 

ಸಾಮಜವನೇರಿ ಬಹನ ಶಕ್ತಿಯೀಕ್ಷಿಸಿ ||

ಪ್ರೇಮದಿಂದ ಉರವನೊಡ್ಡಿ | ಡಿಂಗರಿಗನ ಕಾಯ್ದ ಸಾರ್ವ

ಭೌಮ ಬಾಡದಾದಿಕೇಶವನ್ನ ನೋಡಿರೊ|| 5 || 

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2022