ದಾಸರಪದ (ಖ)
ಖಗವರನೇ ಪಾಲಿಸೋ
ಖಗವರನೇ ಪಾಲಿಸೋ||ಪ||
ಪೆಗಲೊಳು ಹರಿಯನು | ಮಿಗೆ ಭಕುತಿಲಿ ಪೊತ್ತು| ನಗಧರ ಬಿಂಬವ ನಗುತ ನಖದಿ ನೋಳ್ಪ ||ಅ||
ವೇದೋದಿತ ಕ್ರಿಯ ಕಾದ್ಯಭಿಮಾನಿಯೆ |ವೇದಮಯನೆ ಹರಿಗಾದೆಯೊ ವಾಹನ
ಸಾಧಿಸಿ ಶ್ರೀಹರಿ ಪಾದಾಂಬುಜಗಳ ಹಾದಿಯ ತೋರೊ ಅಗಾಧ ಮಹಾತ್ಮ||೧||
ಪಾವಮಾನಿಸುತ ಪಾವಿಸಿ ಮನ್ಮನ ಗೋವಿಂದ ವಿಠಲನ ಪಾವನ ನಾಮ
ಸುಭಾವನೆ ಉಣಿಸುತ ಕೋವಿಯ ಸಂಗತಿ ಈವುದು ನೀಸದ ||೨||
ಖ್ಯಾತಿ ಬಾರದ ವಸ್ತು
ಖ್ಯಾತಿ ಬಾರದ ವಸ್ತು ಎಷ್ಟಿದ್ದರೇನು|ಹೋತನ ಕೊರಳೊಳಗೆ ಮೊಲೆ ಇದ್ದರೇನು||ಪ||
ತಾನು ಉಣ್ಣದ ದ್ರವ್ಯ ತಾಳ್ಯುದ್ದವಿದ್ದರೇನು| ದಾನವಿಲ್ಲದ ಮನೆಯು ದೊಡ್ಡದಾದರೇನು|
ಹೀನ ಗುಣ ಉಳ್ಳವಗೆ ಹಿರಿಯತನ ಬಂದರೇನು|ಶ್ವಾನದ ಮೊಲೆಯೊಳಗೆ ಹಾಲಿದ್ದರೇನು||೧||
ಆದರಿಲ್ಲದ ಊಟ ಅಮೃತಾನ್ನವಿದ್ದರೇನು,ವಾದಿಸುವ ಸತಿ ಸುತರು ಇದ್ದು ಫಲವೇನು|
ಕ್ರೋಧವನು ಮಾಡುವ ಸಹೋದರರು ಇದ್ದರೇನು| ಮಾದಿಗರ ಮನೆಯಲ್ಲಿ ಮದುವ್ಯಾದರೇನು||೨||
ಹೋಗದೂರಿನ ದಾರಿ ಕೇಳಿ ಮಾಡುವುದೇನು ಯೋಗಿಯ ಕೂಡ ಪರಿಹಾಸ್ಯವೇನು|
ರಾಗದಲಿ ಪುರಂದರ ವಿಠಲನ್ನ ನೆನೆಯದವ|ಯೋಗಿಯಾದರೇನು ಭೋಗಿಯಾದರೇನು||೩||
ಖೇಟ ಕುಕ್ಕಟ
ಖೇಟ ಕುಕ್ಕಟ - ಜಲಟಾ | ತ್ರೈರೂಪಿ| ನಿಶಾಟ ಸಂಕುಲ ರೋಟಾ|| ಪ||
ಸಾಟಿಯುಂಟೆ ವೈರಾಟದಿ ಹರಿ ಕೈಟಭಾರಿ ಪದ ಓಲೈಸುವಗೆ||ಅ||
ಪವಮಾನ ಸತ್ರಾಣಾ|ಜೀವೋತ್ತಮ| ಸವ ನಾಭಿದ ಪ್ರಾಣ|ಜೀವರೊಳ್ಕರ್ತು ಕರ್ಮ ಕರಣಾ||
ರಾವಣ ಮದ ಭಂಜನ | ಭವ ಬಂಧನ|ನಿರ್ಮೋಚನ|ಪಾವನ ಪದ ಪೂಜಕ| ಅಘ ಶೋಧಕ | ಶುಚಿ ಶರಣೂ||೧||
ಹರಿ ಪಾದಾಂಗುಷ್ಟದುಗುರೂ | ಖರ್ಪರದೊಳೂ |ಮಾಡೆ ಡೊಗರೊ | ಹರಿಯಿತು ಹೊರ ಜಲಜಾಂಡದೊಳೊ||
ಕರುಣಾರ್ಣವ ಗುರು |ಗೋವಿಂದನ |ಪದ ತೊಳೆದನ |ವರ ಪದವನ ಸಾರುವನ ಚರಣವನ ಶರಣೂ||೨||