ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಚ)

ಚಂದ್ರಚೂಡ ಶಿವಶಂಕರ ಪಾರ್ವತಿರಮಣನೆ ನಿನಗೆ 

ನಮೋ ನಮೋ |ಪ| 

ಸುಂದರ ಮೃಗವರ ಪಿನಾಕಧನುಕರ ಗಂಗಾಶಿರ 

ಗಜಚರ್ಮಾಂಬರಧರ |ಅ.ಪ.| 

 

ನಂದಿವಾಹನಾನಂದದಿಂದ ಮೂರ್ಜಗದಿ  ಮೆರೆವ ನೀನೆ 

ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೆ

ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರ ನೀನೆ 

ಇಂದಿರೇಶ ಶ್ರೀರಾಮನ ಪಾದವ ಚೆಂದದಿ ಪೊಗಳುವ ನೀನೆ  |೧|

 

ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೆ 

ವಾಲಯದಿ ಕಪಾಲ ಪಿಡಿದು ಭಿಕ್ಷ ಬೇಡೋ ದಿಗಂಬರ ನೀನೆ 

ಕಾಲಕೂಟವನು ಪಾನ ಮಾಡಿದ ನೀಲಕಂಠನು ನೀನೆ 

ಜಾಲಮಾಡಿದ ಗೋಪಾಲನೆಂಬ ಪೆಣ್ಣಿಗೆ ಮರುಳಾದವ ನೀನೆ |೨| 

 

ಧರೆಗೆ ದಕ್ಷಿಣ ಕಾವೇರಿ ತೀರ ಕುಂಭಪುರವಾಸನು ನೀನೆ

ಕೊರಳೊಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮ ವೈಷ್ಣವ ನೀನೆ 

ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ 

ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ |೩| 

 

ಚಿರಂಜೀವಿಯಾಗೆಲೊ ಚಿಣ್ಣ ನೀನು

ಹರಿದಾಸ ದಾಸ ದಾಸರ ಪಾದಧೂಳಾಗಿ | ಪ| 

 

ಜರಿಯಬ್ಯಾಡ ಹರಿಯ ಮರೆಯಬ್ಯಾಡೆಂದೆಂದು 

ತಿರಿಯಬ್ಯಾಡ ಖಳರ ಮನೆಗೆ ಪೋಗಿ 

ಓರೆಯಬ್ಯಾಡನ್ಯರಿಗೆ ತತ್ವಗಳನು 

ಬೆರೆಯಬ್ಯಾಡ ಅನ್ಯಸತಿಯ ಸ್ವಪ್ನದಲಿ |೧| 

 

ಸಾಲ ಮಾಡಲು ಬೇಡ ಸಾಲದೆನ್ನಲು ಬೇಡ 

ನಾಳಿಗೆ ಹ್ಯಾಂಗೆಂಬೊ ಚಿಂತೆ ಬೇಡ 

ಖೂಳ ಜನರೊಡನೆ ಮಿತ್ರತ್ವ ಮಾಡಲಿಬೇಡ 

ಬಾಳುವರ ಸಂಗಡ ಬಾಳೆಲೊ ಬಾಲಾ |೨| 

 

ಲೋಕವಾರ್ತೆಯು ನಿನ್ನ ಕಿವಿಕೇಳಿಸಲು ಬೇಡ 

ಶ್ರೀಕಾಂತನ ವಾರ್ತೆ ಕೇಳದಿರಬೇಡ 

ಪಾಕವನು ಮಾಡಿ  ಏಕಾಂಗಿಯಾಗಿ  ಉಣಬೇಡ 

ಲೌಕಿಕವನುಸರಿಸಿ ದಣುಕೊಳಲಿ ಬೇಡ |೩|

 

ಪಂಡಿತರು ಪಾಮರರು ಆರಾದರೂ ನಿನ್ನ 

ಕಂಡವರಿಗೆಲ್ಲ ಕೌತುಕ ತೋರಲೀ 

ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು 

ಉಂಡುಟ್ಟು ದ್ವಿಜರುಸಹ ಗಂಡುಗಲಿಯಾಗಿರೆಲೊ |೪| 

 

ಮಂದ ಮತಿಗಳ ಕೂಡ ಮಾತಾಡದಿರು ಹರಿ

ನಿಂದಕರ ಕಣ್ಣೆತ್ತಿ ನೋಡಬೇಡ 

ಇಂದಿರಾರಮಣ ಸಿರಿ ವಿಜಯವಿಠಲನ ಚರಣ 

ದ್ವಂದ್ವದಲಿ ಮಸ್ತಕವನಿಡದಿರಬೇಡ |೫| 

 

ಚರಣವ ತೋರೈ ಚೆಲುವರ ಅರಸನೆ 

ಚರಣವ ತೋರೈ |ಪ|

ಸ್ಮರಣೆ ಮಾತ್ರದಲಿ ಮುಕುತಿಯ ಕೊಡುವ

ಚರಣವ ತೋರೈ |ಅ.ಪ|

 

ರಮ್ಮೆಯ ಮನಕೆ ಬೆಡಗು ತೋರಿದ ಚರಣವ ತೋರೈ

ಬೋಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ

ಚಿಮ್ಮಿ ರಾವಣನ ಬಲುದೂರವ ಗೈದ ಚರಣವ ತೋರೈ

ಘಮ್ಮನೆ ಮೊಸರ ಮೆದ್ದು ನಡೆದ ಚರಣವ ತೋರೈ |೧|

 

ಗೋಕುಲಭೂಮಿಯ ಪಾವನಮಾಡಿದ ಚರಣವ ತೋರೈ

ಲೋಕವನೆಲ್ಲ ಅಡಗಿಸಿಕೊಂಡ ಚರಣವ ತೋರೈ

ಬೇಕೆಂದು ಕುಬುಜೆಯ ಮನೆಗೆ ಪೋದ ಚರಣವ ತೋರೈ

ನೂಕಿಭವಾಬ್ಧಿಯ ಬತ್ತಿಸಿಬಿಡುವ ಚರಣವ ತೋರೈ |೨|

 

ಬಿಡದಲೆ ಸರ್ವಜ್ಞತೀರ್ಥರಿಗೊಲಿದ ಚರಣವ ತೋರೈ

ಬಡವರಾಧಾರ ದಿವ್ಯಭೂಷಣವಿಟ್ಟ ಚರಣವ ತೋರೈ

ಕಡುಮುದ್ದುಸಿರಿಕೃಷ್ಣ ವಿಜಯವಿಠಲ ನಿನ್ನ ಚರಣವ ತೋರೈ

ಉಡುಪಿಯ ಸ್ಥಳದಲಿ ನಿಂದು ಪೂಜೆಯಗೊಂಬ ಚರಣವ ತೋರೈ


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023