ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಜ)

 

 

ಜಾಲಿಯ ಮರದಂತೆ

ಜಾಲಿಯ ಮರದಂತೆ ಧರೆಯೊಳು ದುರ್ಜನರು      ಪ

ಮೂಲಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ         ಅ.ಪ

 

ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ 

ಹಸಿದು ಬಂದವರಿಗೆ ಹಣ್ಣು ಇಲ್ಲ 

ಕುಸುಮವಾಸನೆಯಿಲ್ಲ ಕೂಡಲು ಸ್ಥಳವಿಲ್ಲ 

ರಸದಲ್ಲಿ ಸ್ವಾದವು ವಿಷದಂತೆ ಇರುತಿಹ               ೧

 

ಊರಹಂದಿಗೆ ಷಡ್ರ ಸ್ನಾನವನಿಕ್ಕಲು

ನಾರುವ ದುರ್ಗಂಧ ಬಿಡಬಲ್ಲುದೆ 

ಘೋರಪಾಪಿಗೆ ತತ್ವ ಜ್ಞಾನದ ಪೇಳಲು

ಕ್ರೂರ ಕರ್ಮವ ಬಿಟ್ಟು ಸುಜನಾಗುವನೆ                ೨

 

ತನ್ನಿಂದ ಉಪಕಾರ ತೊಟ್ಟಿಕಾದರು ಇಲ್ಲ 

ಬಿನ್ನಾಣದ ಮಾತಿಗೆ ಕೊನೆಯಿಲ್ಲ 

ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ 

ಇನ್ನಿವರ ಕಾರ್ಯವು ಪುರುಂದರ ವಿಠಲ               ೩

 

ಜ್ಞಾನವಂತರ ಸಂಗವಿರಲು

ಜ್ಞಾನವಂತರ ಸಂಗವಿರಲು ಸ್ನಾನವೇತಕೆ

ನಾನು ಎಂಬುದ ಬಿಟ್ಟ ಮೇಲೆ ನರಕವೇತಕೆ    ಪ

 

ಮೃತ್ತಿಕ ಶೌಚ ಮಾಡದವರ ಆಚಾರವೇತಕೆ

ಚಿತ್ರಶುದ್ದಿಯಿಲ್ಲದವರ ವ್ಯರಾಗ್ಯವೇತಕೆ 

ಸತ್ಯವಾದಿಗಳಾದವರ ವ್ರತಗಳ್ಯಾತಕೆ

ಉತ್ತಮ ಗುರುಹಿರಿಯರಿಲ್ಲದ ಸಭೆಯುಯಾತಕೆ         ೧

 

ಪತಿಯ ಆಜ್ಞೆ ಮೀರಿದಂತವಳ ನೀತಿ ಏತಕೆ 

ಸತಿಗೊಳಗಾಗಿ ನಡೆಯಲವರ ಸಹವಾಸವೇತಕೆ

ಯತಿಯ ನಿಂದೆ ಮಾಡಿದವರ ಮತಿಯು ಏತಕೆ 

ಅತಿವಿರೋಧ ಬೆಳೆಸುವಂಥ ಅಣ್ಣನೇತಕೆ                  ೨

 

ಆಗಿಬಾರದವನ ಮನೆಯ ಅನ್ನವೇತಕೆ

ಯೋಗಿಯಾದ ಮೇಲೆ ದ್ರವ್ಯದಾಸೆಯೇತಕೆ 

ರೋಗಿಯಾದ ಮೇಲೆ ಹೆಣ್ಣಿನ ಭೋಗವೇತಕೆ 

ಭಾಗೀರಥಿಯಲಿ ಮಿಂದ ಮೇಲೆ ದೋಷವೇತಕೆ           ೩

 

ಕಾಣದ ಕುರುಡನಿಗೆ ಕನ್ನಡಿಯೇತಕೆ 

ಗಾಣಕ್ಕೆ ಕಟ್ಟಿದ ಎತ್ತಿಗೆ ಗೆಜ್ಜೆಯೇತಕೆ 

ತಾನು ಉಣ್ಣದೆ ಪರರಿಗೀಯದ ಧನವಿದ್ಯಾತಕೆ

ರಾಣಯಿಲ್ಲದವನು ಮಾಡುವ ಕರ್ಮವೇತಕೆ               ೪

 

ಮಕ್ಕಳನು ಮಾರಿಕೊಂಬ ತಂದೆಯೇತಕೆ 

ರೋಕ್ಕಕಾಗಿ ಬಡಿದಾಡುವ ತಮ್ಮನೇತಕೆ 

ಕುಕ್ಕುಲಾತಿಯನ್ನು ಬಿಡದ ಸನ್ಯಾಸವೇತಕೆ 

ಠಕ್ಕ ಭಕುತಿಯನ್ನು ಮಾಡುವ ದಾಸನ್ಯಾತಕೆ               ೫

 

ಭಾಗವತರ ದ್ವೇಷಿಗಿನ್ನು ಯೋಗವೇತಕೆ

ರಾಗದ್ವೇಷ ಬಿಡದೆಯಿರುವ ಭೋಗವೇತಕೆ 

ನಾಗಶಯನನ ಪೊಗಳದ ನಾಲಿಗ್ಯೇತಕೆ 

ನಗುತ ಪರರ ಹಿಂಸಿಸುತಿಪ್ಪ ಒಗತನೇತಕೆ                 ೬

 

ಗುರೂಪದೇಶವಿಲ್ಲದಂತ ದಾಸನೇತಕೆ

ಅರಿತುವಿದ್ಯ ಪೇಳದಂತ ಗುರುವು ಏತಕೆ 

ಮುರ್ಮವರಿತು ನಡೆಯದಂಥ ಹೆಣ್ಣು ಏತಕೆ 

ಮೋಹನ್ನ ವಿಠಲ ನಮ್ಮೊಳಿರಲು ಭಯವು ಏತಕೆ           ೭

 

ಜ್ಞಾನವಿಲ್ಲದ ಕರ್ಮ

ಜ್ಞಾನವಿಲ್ಲದ ಕರ್ಮ ಏನು ಮಾಡಿದರೇನು 

ಆನೆ ತಿಂದ ಕಪಿತ್ಹ 

ನಾನಾಪರಿಯಲಿ ಕಾಯುವನು ದಂಡಿಸಲ್ಯಾತಕೆ 

ಶ್ರೀನಿವಾಸನು ಒಲಿಯನು ಮನುಜ                      ಪ

 

ನಿನ್ನ ಉನ್ನತವೆಷ್ಟು ನೀನಾವ ಜಾತಿಯವ 

ನೀನಾವ ಬಲದಲಿರುವಿ ನಿನಗೆ 

ನಿನ್ನವರಿಗೆ ನೀನರಿತು ನೋಡಿಕೋ 

ನಿನಗೆ ಸಥೆಯಾದದಿನ್ನು ಏನು ಕಾಣದೆ ಬರಿದೆ 

ನಾನು  ಮಾಡಿದೆಮ್ಬೋದೇನು ಈ 

ಅನ್ಯಾಯವ ಹೇನು ತನ್ನಮ್ಯಾಲೆ

ಗೋಣೆಯ ಹಾಕಿಕೊಡಂತೆ ನಾನು 

ನನ್ನದು ಎಂಬುದನು ಬಿಡದಲೇ ವ್ಯರ್ಥ                  ೧

 

ವಹ್ನಿಯಂತೆಂಬಂತೆ  ಇನ್ನು ನಿನ್ನಲಿರಲು 

ಪುಣ್ಯದಂಕುರು ಫಲಿಸೋದೆ 

ಏಣೆಯಿನ್ನಷ್ಟಿರಲು ಇನ್ನು ಜೋಡಿಯ  ಮುಂದೆ 

ತನ್ನ ಬಲವನು ನಡೆವದೆ ತನಗೆ  ಮಾಡಿ 

ಸಿನ್ನು ಜೀವಕ್ಕೆ ಫಲತರಿದು 

ಮುನ್ನ ತಂದುಕೊಡುವ ಚಿನ್ಮಯವರಿಯದೆ           ೨

 

ಕೇಳುವನು ದಾರು ಹೇಳುವನು ದಾರು 

ಅರಿತವನು ದಾರು ತಾಳಿ ಮಿತಿಕೊಡುವರು

ಆಲೋಚಿಸಿ ನೋಡು ಮನದಿ ಪಾಲಸಾಗರ 

ಶಾಯಿ  ಗೋಪಾಲವಿಠಲನ್ನ ಊಳಿಗ 

ಮಾಡಿನ್ನು ಬಾಳುವೆ ಮಾಡದಲೆ                       ೩ 

 

 

ಜೋ ಜೋ ರಂಗಧಾಮ

ಜೋ ಜೋ ಜೋ ಜೋ ಜೋ ರಂಗಧಾಮ 

ಜೋ ಜೋ ಜೋ ಜೋ ಜೋ ರಣಭೀಮ         ಪ

 

ಜೋ ಜೋ ಭಕ್ತರ ಕಷ್ಟ ನಿರ್ಧೂಮ 

ಜೋ ಜೋ ದಶರಥರಾಮ ನಿಸ್ಸೀಮ               ಅ ಪ

 

ಭೂಮಿಯ ಚಿನ್ನದ ತೊಟ್ಟಿಲ ಮಾಡಿ 

ಸೋಮಸೂರ್ಯರೆಂಬ ಕಲಶವ ಹೂಡಿ 

ನೇಮದಿ ವೇದಗಳ ಸರಪಣಿ ಮಾಡಿ 

ಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ                 ೧ 

 

ಸರಸಿಜೋದ್ಬವ ಸರಸ್ವತಿ ಭಾರತಿ 

ಗರುಡ ಶೇಷರು ದ್ರರಿವರ ಸತಿಯರು 

ಸುರರುಕಿನ್ನರರು ಕಿಂಪುರುಷರು ನಾರದರು 

ಪರಿಪರಿ ಗೀತದಿ ತುತಿಸಿ ಪಾಡಿದರು                 ೨

 

ವಸುದೇವ ಸುತನಾದ ಮುದ್ದು ಮುರಾರಿ 

ಅಸುರೆ ಪೂತನಿಯ ಪ್ರಾಣಪಹಾರಿ

ಅಸುಮಸಾಹಸಮಲ್ಲ ದ್ಯತ್ಯರ ವೈರಿ 

ಶಿಶುವಾಗಿ ದೇವಕಿಗಾನಂದ ತೋರಿ                 ೩

 

ಜಗವನು ಹೊಟ್ಟೆಯೋಳಿಂಬಿಟ್ಟೆ  ತ್ರುವ್ವಿ 

ಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿ 

ನಿಗಮಗೋಚರ ನಿತ್ಯಾನಂದನೆ ತ್ರುವ್ವಿ 

ಮಗುವೆಂದು  ನಾವ್ ತೂಗಬಲ್ಲೇವೆ ತ್ರುವ್ವಿ         ೪

 

ಶಮನ ಮರ್ದಿಸಿ ವೇದ ತತಿಗಳನು ತಂದೆ 

ಸುಮನಸರಿಗಾಗಿ ಮಂದರ ಪೊತ್ತು ನಿಂದೆ 

ಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆ

ನಮಿಸಿ ಕರೆದರೆ ಕಂಬದಿಂಮ್ಹೊರಟು ಬಂದೆ         ೫

 

ತರಳನಾಗಿ ಬಲಿಯ ದಾನವ ಬೇಡ್ದೆ

ಪರಶು ಧರಿಸಿ ಕ್ಷತ್ರಿಯರ ಸವರಿದೆ 

ದುರುಳ ರಾವಣನ ಶಿರವ ಚೆಂಡಾಡಿದೆ 

ಚರಿಸಿ ಮನೆಗಳ ಪಾಲು ಮೊಸರನ್ನ ಕುಡಿದೆ         ೬

 

ಬುದ್ದನಾಗಿ ಪತಿವ್ರತೆರನಾಳಿದೆಯಲ್ಲ

ಮುದ್ದುತುರಗವನೇರಿ ಕಲ್ಕನಾದ್ಯಲ್ಲ 

ಪದ್ಮನಾಭ ಸೂರಿ ಭಕ್ತವತ್ಸಲ 

ನಿದ್ರೆಯ ಮಾಡಯ್ಯ ಶ್ರೀ ರಂಗವಿಠಲ                ೭ 

 

ಜೋ ಜೋ ಶ್ರೀಕೃಷ್ಣ ಪರಮಾನಂದ

 

ಜೋ ಜೋ ಶ್ರೀಕೃಷ್ಣ ಪರಮಾನಂದ 

ಜೋ ಜೋ ಗೋಪಿಯ ಕಂದ

ಮುಕುಂದ ಜೋ ಜೋ                       ಪ

 

ಪಾಲಗಡಲೋಳು ಪವಡಿಸಿದವನೆ

ಆಲದೆಲೆಯ ಮೇಲೆ ಮಲಗಿದ ಶಿಶುವೆ 

ಶ್ರೀಲಂತಾಗಿಯಳ ಚಿತ್ತದೊಲ್ಲಭನೆ 

ಬಾಲ ನಿನ್ನನು ಪಾಡಿ  ತೂಗುವೆನಯ್ಯ ಜೋ ಜೋ    ೧

 

ಹೊಳೆವಂಥ ರನ್ನದ ತೊಟ್ಟಿಲ ಮೇಲೆ 

ಥಳಥಳಿಸುವ ಗುಲಗಂಜಿಯ ಮಾಲೆ 

ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ 

ನಳಿನನಾಭನೇ ನಿನ್ನ ಪಾಡಿ ತೋಗುವೆನು ಜೋ ಜೋ  ೨

 

ಯಾರ ಕಂದ ನಿನಾರ ನಿಧಾನಿ 

ಯಾರ ರತ್ನವೊ ನೀನಾರ ಮಾಣಿಕ್ಯವೋ

ಸೇರಿತು ಎನಗೊಂದು ಚಿಂತಾಮಣಿಯೊಂದು

ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ      ೩

 

ಗುಣನಿಧಿಯ ನಿನ್ನ ನೆತ್ತಿಕೊಂಡಿದ್ದರೆ

ಮನೆಯ ಕೆಲಸವಾರು ಮಾಡುವರಯ್ಯ 

ಮನಕೆ ಸುಖ ನಿದ್ರೆಯ ತಂದುಕೋ ಬೇಗ 

ಫಣಿಶಯನನೆ ನಿನ್ನ ಪಾಡಿ ತೋಗುವೆನು ಜೋ ಜೋ    ೪

 

ಅಂಡಾಜವಾಹನ ಅನಂತ ಮಹಿಮ

ಪುಂಡರೀಕಾಕ್ಷ  ಶ್ರೀ ಪರಮಪಾವನ್ನ 

ಹಿಂಡು ದೈವದ ಗಂಡ ಉದ್ದಂಡನೆ 

ಪಾಂಡುರಂಗ ಶ್ರೀ ಪುರಂದರ ವಿಠಲ ಜೋ ಜೋ        ೫

 

ಜಗದೋದ್ಧಾರನಾ ಆಡಿಸಿದಳ್ ಯಶೋದಾ 

ರಾಗ: ಕಾಪಿ ತಾಳ:ಆದಿ

 

ಜಗದೋದ್ಧಾರನಾ ಆಡಿಸಿದಳ್ ಯಶೋದಾ ||ಪ||

ಜಗದೋದ್ಧಾರನಾ ಮಗನೆಂದು ತಿಳಿಯುತಾ ||ಅ ಪ||

 

ಸುಗುಣಾಂತರಂಗನ ಆಡಿಸಿದಳ್ ಯಶೋದಾ

ನಿಗಮಕೆ ಸಿಲುಕದ ಅಗಣಿತ ಮಹಿಮನ

ಮಗುಗಳ ಮಾಣಿಕ್ಯನ ಆಡಿಸಿದಳ್ ಯಶೋದಾ ||೧||

 

ಅಣೋರಣೀಯನ ಮಹತೋಮಹೀಯನ

ಅಪ್ರಮೇಯನ ಆಡಿಸಿದಳ್ ಯಶೋದಾ ||೨||

 

ಪರಮಪುರುಷನ ಪರವಾಸುದೇವನ

ಪುರಂದರವಿಠಲನ ಆಡಿಸಿದಳ್ ಯಶೋದಾ ||೩||

 

 

ಜನುಮ ಜನುಮದಲ್ಲಿ

 

ಜನುಮ ಜನುಮದಲ್ಲಿ ಕೊಡುಕಂಡ್ಯ ಹರಿಯೆ |ಪ| 

ಅನಿಮಿತ್ತ ಬಂಧು ಕೃಷ್ಣ ದಯದಿಂದಲೆನಗೆ |ಅ.ಪ.| 

 

ಮೆರೆವ ಊರ್ಧ್ವಪುಂಡ್ರ ಎರಡಾರುನಾಮವು 

ಕೊರಳೊಳು ತುಳಸಿಯ ವನಮಾಲೆಯು

ಮೆರೆವ ಶಂಖಚಕ್ರ ಭುಜದೊಳೊಪ್ಪುತ ನಿಮ್ಮ

ಸ್ಮರಿಸುತ್ತ ಹಿಗ್ಗುವ ವೈಷ್ಣವಜನುಮವ |೧|

 

ಹರಿಯೆ ಸರ್ವೋತ್ತಮ ರಾಣಿ ಲಕುಮಿ ಬೊಮ್ಮ 

ಹರ ಇಂದ್ರಾದ್ಯಖಿಳರು ತವ ಸೇವಕರು 

ವರ ತಾರತಮ್ಯ ಪಂಚಭೇದ ಸತ್ಯವೆಂದು 

ನೆರೆ ಪೇಳುವ ವಾಯುಮತದ ಸುಜ್ಞಾನವ |೨| 

 

ಸಕಲ ವಿಭುದೋತ್ತಮರಲ್ಲಿ ನಮ್ರತೆಯು 

ಸುಖತೀರ್ಥರಲಿ ಮುಖ್ಯಗುರುಭಾವನೆಯು 

ಮುಕುತಿಪ್ರದಾಯಕ ಸಿರಿಕೃಷ್ಣ ನಿನ್ನಲ್ಲಿ

ಅಕಳಂಕವಾದ  ನವವಿಧ ಭಕುತಿಯ |೩| 

 

 

 

 

 

ಜಯಮಂಗಳಂ

ಜಯಮಂಗಳಂ ನಿತ್ಯ ಶುಭಮಂಗಳಂ |ಪ| 

 

ತೊಳಸದಕ್ಕಿಯ ತಿಂಬ ಕಿಲುಬುತಳಿಗೆಯಲುಂಬ 

ಕೊಳಗದಲಿ ಹಣಗಳನು ಅಳೆದುಕೊಂಬ 

ಇಲ್ಲ ತನಗೆಂದು ಸುಳ್ಳು ಮಾತಾಡಿದರೆ 

ಎಲ್ಲವನು ಕಸುಕೊಂಬ ಕಳ್ಳದೊರೆಗೆ |೧| 

 

ತನ್ನ ನೋಡುವೆನೆಂದು ಮುನ್ನೂರು ಗಾವುದ ಬರೆ 

ತನ್ನ ಗುಡಿಯ ಪೊಕ್ಕ ಜನರಿಗೆಲ್ಲ 

ಹೊನ್ನು ಹಣ ಕಸುಕೊಂಡು ತನ್ನ ದರುಶನ ಕೊಡದೆ 

ಬೆನ್ನೊಡೆಯ ಹೊಡೆಸುವ ಅನ್ಯಾಯಕಾರಿಗೆ |೨| 

 

ಗಿಡ್ಡಹಾರುವನಾಗಿ ಒಡ್ಡಿ ದಾನವಬೇಡಿ 

ದುಡ್ಡು ಕಾಸುಗಳಿಗೆ ಕೈಯ ನೀಡಿ

ಅಡ್ಡಬಿದ್ದ ದಾಸರಿಗೆ ವಿಡ್ಡೂರಗಳ ಕಳೆದು 

ದೊಡ್ಡವರ ಮಾಳ್ಪ ಸಿರಿ ವಿಜಯವಿಠಲರೇಯಗೆ  |೩| 

 

 

 

ಜಯವಾಯುಹನುಮಂತ

 

ಜಯವಾಯುಹನುಮಂತ ಜಯ ಭೀಮ ಬಲವಂತ |ಪ| 

ಜಯಪೂರ್ಣ ಮತಿವಂತ ಜಯ ಸಲಹೊ ಸಂತ | ಅ.ಪ.| 

 

ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ 

ನಂದದಿಂದಲಿ ಮಾಡಿ ಕಪಿಬಲವ ಕೂಡಿ

ಸಿಂಧು ಲಂಘಿಸಿ ಖಳರ ವನ ಭಂಗಿಸಿ ಸೀತೆ

ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ |೧| 

 

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ 

ಶರಧಿಯನು ಕಟ್ಟಿ ಅರಿಬಲವ ಕುಟ್ಟೆ 

ಉರುಗಬಂಧನದಿಂದ ಕಪಿವರರು ಮೈಮರೆಯೆ

ಗಿರಿಯ ಸಂಜೀವನವ ತಂದು ಬದುಕಿಸಿದೆ | ೨| 

 

ದ್ವಾಪರಾಂತ್ಯದಿ ಪಾಂಡುಭೂಪನಾತ್ಮಜನೆನಿಸಿ 

ಶ್ರೀಪಾರ್ಥಸಾರಥಿಯ ಭಜಕ ನೀನಾದೆ 

ಪಾಪಿ ಮಾಗಧ ಬಕ ಕೀಚಕ ಹಿಡಿಂಬಕರ 

ಕೊಪದಿಂದಲಿ ತರಿದೆ ಮೂಜ್ಜಗದಿ ಮೆರೆದೆ |೩| 

 

ಧುರದಲಿ ದುರ್ಯೋಧನನ ಬಲವನು ತರಿದೆ 

ಅರಿತು ದುಶ್ಶಾಸನನ ಒಡಲನು ಬಗೆದೆ 

ಉರವ ತಪ್ಪಿಸಿ  ಕೌರವನ್ನ ತೊಡೆಗಳ ಮುರಿದೆ 

ಹರಿಯ ಕಿಂಕರ ಧುರಂಧರಗಾರು ಸರಿಯೆ |೪| 

 

ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನು 

ಬಲಿಸಿ ಶ್ರೀ ಹರಿಯ ಗುಣಗಳನು ಮರೆಸಿ 

ಕಲಿಯನನುಸರಿಸಲು ಗುರುವಾಗಿ ಅವತರಿಸಿ 

ಖಳರ ದುರ್ಮತ ಮುರಿದೆ ಶ್ರೀಕೃಷ್ಣ ಪರನೆಂದೆ |೫| 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023