ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಬ)

ಬಿಡುವೇನೇನಯ್ಯಾ ಹನುಮ

ಬಿಡುವೇನೇನಯ್ಯಾ ಹನುಮ ಬಿಡುವೇನೇನಯ್ಯಾ ||ಪ||

ಬಿಡುವೇನೇನೋ ಹನುಮ ನಿನ್ನ ಅಡಿಗಳಿಗೆ ಶಿರವಾ ಬಾಗಿ

ಜ್ಞಾನ ಭಕ್ತಿ ವೈರಾಗ್ಯವನು ಕೊಡುವೋ ತನಕ ಸುಮ್ಮನೆ ನಾನು ||ಅ ಪ||

 

ಹಸ್ತಾವನೆತ್ತಿದರೇನು ಹಾರಕಾಲ ಹಾಕಲೇನು

ಭೃತ್ಯನೋನಿನ್ನವನು ನಾನು ಹಸ್ತೀವರದನ ತೋರುವ ತನಕ ||೧||

ಹಲ್ಲುಮುಡಿಯ ಕಚ್ಚಿದರೇನು ಅಂಜುವನೇನೋ ನಿನಗೆ ನಾನು 

ಪುಲ್ಲನಾಭನಲ್ಲಿ ಮನಸು ನಿಲ್ಲಿಸೋತನಕ ಸುಮ್ಮನೆ ನಾನು ||೨||

 

ಡೊಂಕುಮೋರೆ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ

ಕಿಂಕರ ನಿನಗೆ ಕಿಂಕರ ನಾನು ಪುರಂದರವಿಠಲನ ತೋರುವ ತನಕ |೩||

 

 

 

ಬಾರೋ ನಮ್ಮ ಮನೆಗೆ

 

ಬಾರೋ ನಮ್ಮ ಮನೆಗೆ ಗೋಪಾಲಕೃಷ್ಣ

 

ಗೊಲ್ಲ ಬಾಲಕರನು ನಿಲ್ಲಿಸಿ ಪೆಗಲೇರಿ

ಗುಲ್ಲು ಮಾಡದೆ ಮೊಸರೆಲ್ಲ ಸವಿದ ಕೃಷ್ಣ     ೧

 

ಕಸ್ತೂರಿ ತಿಲಕವ ಶಿಸ್ತಾಗಿ ಪಣೆಯೊಳಿಟ್ಟು 

ಮಸ್ತಕದಲಿ ಪರವಸ್ತು ತೋರಿದ ಕೃಷ್ಣ        ೨

 

ಮುಜ್ಜಗವನೆಲ್ಲ ಬೊಜ್ಜೆಯೊಳಗಿಟ್ಟು

ಗೆಜ್ಜೆಯ ಕಟ್ಟಿ ತಪ್ಪ್ ಹೆಜ್ಜೆಯನಿಕ್ಕುತ              ೩

 

ನಾರೇರು ಬಿಚ್ಚಿಟ್ಟ ಸೀರೆಗಳನೆವೊಯ್ದು

ಮ್ಯಾರೆ ಇಲ್ಲದ ಕರತೋರೆಂದ ಶ್ರೀಕೃಷ್ಣ      ೪

 

ಅಂಗನೆಯರ ವೃತಭಂಗವ ಮಾಡಿದ

ರಂಗವಿಠಲ ಭವಭಂಗವ ಪರಿಹರಿಸೊ       ೫ 

 

 

ಬಾರೋ ಬಾರೋ ಬಾರೋ ಹರಿ

 

ಬಾರೋ ಬಾರೋ ಬಾರೋ ಹರಿ

ತೋರೋ ತೋರೋ ಮುಖವ ದೊರಿ         ಪ  

ಧೀರನೆ ಬಹು ಗಂಭೀರನೆ ಗೋರಸ

ಚೋರನೆ ಗೋಪೀಚಾರನೆ ಬ್ಯಾಗನೆ

ವೀರಾಧಿವೀರನೆ ಎನ್ನ ವಾರೆನೋಟ ನೋಡುವರೆ

ಗುರುಮಾಡದಲೆ ಮನ ಸೇರಿ ಸುಖಬಡಿಸಲು             ಅ.ಪ

 

ಭೃಂಗಗಳ್ಯಾತಕೆ ಕೂಗಿದವೊ ಅಂಗಜಠರಗಳು ಸೇರಿದವೊ

ರಂಗನೆ ಗರುಡತುರಂಗನೆ ವಿದ್ವತರಥಾಂಗನೆ ಸಜ್ಜನಸಂಗನೆ ಬ್ಯಾಗನೆ

ಮಂಗಳರೂಪನೆ ಬೆಳದಿಂಗಳೊಳು ನೀನು ಪಿ-

ಳ್ಳಂಗೋವಿನೂದಲು ಆ ರಂಗ ಎನ್ನ ಬಿಡಿಸಿದ                                   ೧

 

ಕಾವರೆ ನಿನ್ನ್ಹೊರತಿನ್ನಾರೊ ಭಾವಜಪಿತ ಮಂದಿರ ಸೇರೊ

ದೇವನೆ ಭಕುತರಕಾವನೆ ವರಗಳನೀವನೆ ರಿಪುವರದಾವನೆ ಬ್ಯಾಗನೆ

ದೇವಾಧಿದೇವನೆ ಎನ್ನ ಕಾವನು ನೀನಲ್ಲದೆ ಇ

ನ್ನ್ಯಾವನು ಈ ಭೂಮಿಯೊಳಗೀವನು ಕಾಣೆನೊ ನಾನೊಬ್ಬ           ೨ 

 

ಈ ಸಮಯದಿ ಪರಿಪಾಲಿಪರ್ಯಾರೊ ವಾಸುದೇವವಿಠಲ ನೀ ತೋರೊ

ಶ್ರೀಶನೆ ಸುಂದರಹಾಸನೆ ಮುನಿಮನವಾಸನೆ ಶಶಿರವಿಭಾಸನೆ ಬ್ಯಾಗನೆ

ಹಾಸುಮಂಚದೊಳು ಹುವ್ವಿನ ಹಾಸಿಕಿಯೊಳು ಮಲಗಿ

ಬ್ಯಾಸರಗೊಂಡೆನು ಪರಿಹಾಸವಮಾಡದೇ ಬ್ಯಾಗ                    ೩

 

 

ಬ್ಯಾಗೆ ಬರುವೇನೆಂದು

 

ಬ್ಯಾಗೆ ಬರುವೇನೆಂದು ಸಾಗಿ ಮಧುರಿಗೆ ಹೋದ

ಹ್ಯಾಗೆ ಮಾಡುವೊಣುದ್ಧವ

ಭಾಗವತಪ್ರಿಯಗಿನ್ನು ಬಾಗಿ ನಮಿಸುತ ನಾವು 

ಹೋಗಬ್ಯಾಡೆಂತೆಂದೆವೊ ಉದ್ಧವ                     ಪ

ಗೋಕುಲವಾಸ ಬಿಟ್ಟ್ಯಾಕೆ ತೆರಳಿದ ಸ್ವಾಮಿ

ಈ ಕಾರ್ಯವನು ತಿಳುಹಿಸೊ

ಶ್ರೀಕರಕಮಲಾರ್ಚಿತ ಚರಣ ಧ್ವಜವಜ್ರ

ರೇಖವಾದವ ಚಲಿಸಿದ

ವಾಕಶಾಸನಪ್ರಿಯನು ಪರಮನಿರ್ದಯಮಾಡಿ

ವ್ಯಾಕುಲರಾಗಿದ್ದೆವೊ ಉದ್ಧವ                    ೧

ಯಂತ್ರಮಾಯದಲಿ ಶ್ರೀಕಾಂತನೊಲಿಸುವುದಕ್ಕೆ

ಮಂತ್ರವನು ಮಾಡರಿಯೆವೊ

ಅಂತರಂಗದಲಿ ಅನಂತಗುಣ ಸ್ತುತಿಸಲೇ

ಕಾಂತ ಭಕ್ತರೆಲ್ಲವೊ

ನಿಂತು ನಿತ್ಯಾನಂದಮೂರ್ತಿಯ ನೋಡದಲೆ

ಭ್ರಾಂತರಾಗಿ ಪೋದೆವಲ್ಲೊ ಉದ್ಧವ            ೨

 

ಅತಿಕ್ರೂರನೆನಿಸುವಕ್ರೂರ ಬಂದು ನಮಗ-

ಹಿತಮಾಡಿ ಪೋದನಲ್ಲೊ

ಮತಿಹೀನರಾಗಿ ಹರಿಯ ರಥವ ನಿಲಿಸದಲೆ ಮುಂ

ದೆತನವರಿಯದೆ ನಿಂತೆವೊ

ಪೃಥಿವಿ ಒಳಗಿಂತ ಗೋಪಿಕಾಸ್ತ್ರೀಯರೆಂದು ಭಾಳಪ

ಕೀರ್ತಿ ಗೊಳಗಾದೆವೊ ಉದ್ಧವ                           ೩

 

ಸಕ್ಕರೆಯಂಥ ಸವಿಮಾತನಾಡುತ ನಮಗೆ

ದಕ್ಕಿ ದಕ್ಕದಲ್ಹೋದನೊ

ಮತ್ತೇನು ಪೇಳೋಣ ಮಂದಭಾಗ್ಯರು ಹರಿಯ

ದಕ್ಕಿಸಿಕೊಳ್ಳದೆ ಹೋದೆವೊ

ಸಿಕ್ಕರೆ ಧನವು ಶತಸಾವಿರ ಕೊಪ್ಪರಿಗೆ ಅಷ್ಟ

ಧಿಕ ಸುಖವಾದೀತೊ ಉದ್ಧವ                         ೪

 

ಮಡದಿಯರು ಕೇಳಿಗೆ ಮಧುರಾಪಟ್ಟಣದಂಥ

ಚೆದುರೆಯರು ನಾವಲ್ಲವೊ

ಮದನನಾಟಕ ಮದಗಜಗಮನೇರಿಗಿನ್ನು

ಮುದದಿ ಮರುಳಾಗಿಪ್ಪನೊ

ವಿಧಿ ಬರೆದನೇನಂದರೀ ನಮ್ಮ ಪಣೆಯಲ್ಲಿ

ಪದುಮಾಕ್ಷನಗಲುವಂತೆ ಉದ್ಧವ                ೫

 

ಮಲ್ಲರನೆ ಮಡುಹಿದ್ದ ಮಾವನ್ನೆ ಹರಿಯು ನಮ್ಮ

ಕೊಲ್ಲಿ ಪೋದಂತಾಯಿತೊ

ಸಲ್ಲನಡತೆಯ ಸೊಟ್ಟ ಕುಬ್ಜೆಗೆ ಕಡೆಯು ನಾ

ವಲ್ಲವೆಂದವಗೆ ಪೇಳೊ

ನಿಲ್ಲದೆ ಹೋಗಿ ಹಿಂದಕೆ ಸುಳ್ಳಲ್ಲೊಂದು ಬೆರೆಸದಲೆ

ಎಲ್ಲ ವಾರ್ತೆಗಳ ಹೇಳೊ ಉದ್ಧವ                    ೬

 

ಕಲ್ಲಾಗದೀ ವಿಧಿಯ ಕಾಮನ ಪಿತನಗಲಿ ಸೊಲ್ಲು ಸೊಲ್ಲಿಗೆ ಬಳಲೆವೊ

ಮಲ್ಲಿಗ್ವೊಣಗಿದ ದಾರದಂತೆ ಗೋವ್ರಜ ಮೂಲೆ

ಯಲ್ಲಿ ನಾವಿರಲಾರೆವೊ

ಎಲ್ಲಿ ಬಂದೊದಗಿತೀ ಬಿಲ್ಲ್ಹಬ್ಬನಮಗೆ ಭೀ

ಮೇಶಕೃಷ್ಣನ ತೋರಿಸೊ ಉದ್ಧವ                ೭

 

 

ಬ್ಯಾಡಿರವ್ವಾ ಎನ್ನ ಕಂದನ್ನ 

 

ಬ್ಯಾಡಿರವ್ವಾ ಎನ್ನ ಕಂದನ್ನ ದೂರಬ್ಯಾಡಿರೆ

ಗಾರುಮಾಡಿ ಚೋರನೆಂದು ಸಾರಿ ತಂದ ದುರುಳನೆನ್ನಾ             ಪ

ಹಸಿದೆ ಮಗುವೆ ಹಸಿದೆ ಚಿನ್ನ ಶಿಶುವೆ ಪಾಲ್ಗುಡಿಯಾ ಬಾರೆನ್ನೆ

ಮಿಸುನಿಬಟ್ಟಿಲೊಳಿಪ್ಪ ಪಾಲಿನ ಬಿಸಿಗೆ ಬೋವ್ವೆಂದು ಬೆದರುವ 

ಮೊಸರುಹರಿವೆಯೊಡದು ನಿಮ್ಮ ಪೊಸಬೆಣ್ಣೆಯ ಮೆಲುವನೆಂತೋ

ಸೊಸೆಯಾರೊಂದುಗೂಡೆನ್ನ ಕೂಸಿಗೆ ಪುಶಿಯ ವಾಕು ನುಸಿಸಿ             ೧

 

ಮುದ್ದು ತಾರೋರಂಗ ಎನಲು ಎದ್ದು ಚಪ್ಪಳೆಗಳಿಡುತ

ಬಿದ್ದು ಅಂಬೆಗಾಲನಿಕ್ಕಿ ಮುದ್ದು ನೀಡಲರಿಯನೆ

ಕದ್ದು ನಿಮ್ಮನೆ ಕೆನೆಪಾಲನು ಗೆದ್ದು ನಿಮ್ಮ ಬಾಲರ ಬೆನ್ನ

ಗುದ್ದಿ ಓಡಿಬರುವನೆಂತೊ ಬುದ್ಧಿಯಿಲ್ಲವೇನೆ ನಿಮಗೆ                      ೨

 

ಎತ್ತಿಕೊಂಡು ರಮ್ಮಿಸಿ ಬಾಯೊಳು ತುತ್ತು ನೀಡಲು ಉಣಲರಿಯ

ಕತ್ತಲೆಯೊಳು ಹೆಂಗಳ ಪಿಡಿದು ಚಿತ್ತಮೋಹಿಸಬಲ್ಲನೆ

ಹೆತ್ತಮಕ್ಕಳಿಲ್ಲವೇ ನಿಮಗೆ ವ್ಯರ್ಥ ಚಾರನೆನ್ನುವಿರಮ್ಮ

ಕರ್ತೃ ಶ್ರೀ ಪ್ರಸನ್ವೆಂಕಟರಾಯಗೆ ಭಕ್ತವತ್ಸಲ ತಾನಲ್ಲೆಂದು      ೩

 

 

ಬಿಗಿಯದಿರು ಬಿಗಿಯದಿರು

 

ಬಿಗಿಯದಿರು ಬಿಗಿಯದಿರು ಎಲೆ ಮಾನವ           ಪ

ಧಿಗಿಧಿಗಿ ಧಿಗಿಯೆನುತ ನಿನಗೇಕೆ ಗರ್ವ            ಅ.ಪ

 

ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆ

ಶೂರತನದಲಿ ಶಂತನುತನಯನೇನೊ

ಸ್ವರದಲಿ ತುಂಬುರನೆ ಗೀತದಲಿ ನಾರದನೆ

ಪರಾಶರಮುನಿಯೆ ವ್ರತತಿ ಪಟ್ಟದಲ್ಲಿ               ೧

 

ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚಂದ್ರನೆ

ಛಲದಲ್ಲಿ ಋಷಿ ವಿಶ್ವಾಮಿತ್ರನೇನೊ

ಬಲದಲ್ಲಿ ವಾಲಿಯೆ ಹಲಧರನೆ ಹಿರಣ್ಯಕನೆ

ಬಿಲುವಿದ್ಯದಲಿ ಪರಶುರಾಮನೆ ನೀನು                 ೨

 

ತ್ಯಾಗದಲಿ ಕರ್ಣನೆ ಭೋಗದಲಿ ಶತಮುಖನೆ

ಯೋಗದಲಿ ಶುಕಸನಕಜನಕನೇನೊ

ಭಾಗ್ಯದಲಿ ಬಲಿಚಕ್ರವರ್ತಿಯೊ ದಶಶಿರನೊ

ದೀರ್ಘದಲಿ ಮೇರುವೆ ಮಂದರವೆ ನೀನು                ೩

 

ಭಕ್ತಿಯಲಿ ಭರತನೆ ಭಾವದಲಿ ಲಕ್ಷ್ಮಣನೆ

ಯುಕ್ತಿಯಲಿ ನೀನಿಂದ್ರಸೂತನೇನೊ

ಶಕ್ತಿಯಲಿ ಕಾಲನೆ ಭುಕ್ತಿಯಲಗಸ್ತ್ಯನೆ

ಮುಕ್ತಿ ಪಡೆವಲ್ಲಿ ಖಟ್ಟಾಂಗರಾಯನೇನೊ             ೪

 

ಶಾಪದಲಿ ಬ್ರಹ್ಮನೆ ತಾಪದಲಿ ಸೂರ್ಯನೆ

ಕೋಪದಲಿ ಮಹೇಶನೇನೋ ನೀನು

ತಪದಲ್ಲಿ ಹನುಮನೆ ವ್ರತದಿ ರುಕ್ಮಾಂಗದನೆ

ಕೃಪೆಯಲ್ಲಿ ಶ್ರೀಕೃಷ್ಣದೇವನೆ ನೀನು               ೫

 

ಬಿನ್ನಹಕೆ ಬಾಯಿಲ್ಲವಯ್ಯಾ                           

 

ಬಿನ್ನಹಕೆ ಬಾಯಿಲ್ಲವಯ್ಯಾ                           ಪ

ಅನ್ನಂತ ಅಪರಾಧ ಎನ್ನಲ್ಲಿ ಇರಲಾಗಿ               ಅ.ಪ

 

ಶಿಶುಮೋಹ ಸತಿಮೋಹ ಜನನಿಜನಕರ ಮೋಹ

ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ

ಪಶುಮೋಹ ಭೂಮೋಹ ಬಂಧುವರ್ಗದ ಮೋಹ

ಹಸರುಳ್ಳ ಆಭರಣಗಳ ಮೋಹದಿಂದ              ೧

 

ಅನ್ನಮದ ಅರ್ಥಮದ ಅಖಿಳ ವೈಭವದ ಮದ

ಮುನ್ನ ಪ್ರಾಯದ ಮದವು ರೂಪಮದವು

ತನ್ನ ಸತ್ವದ ಮದ ಧಾತ್ರಿ ವಶವಾದ ಮದ

ಇನ್ನು ತನಗೆದುರಿಲ್ಲವೆಂಬ ಮದದಿಂದ                   ೨

 

ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ

ಅಷ್ಟು ದೊರಕಿದರು ಮತ್ತಷ್ಟರಾಸೆ

ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ

ನಷ್ಟಜೀವನದಾಸೆ ಪುರಂದರವಿಠಲ                  ೩

 

 

ಬೇಗ ಬಾರೊ ಬೇಗ ಬಾರೊ

 

ಬೇಗ ಬಾರೊ ಬೇಗ ಬಾರೊ ನೀಲಮೇಘ ವರ್ಣ              ಪ

ಬೇಗ ಬಾರೊ ಬೇಗ ಬಾರೊ ವೇಲಾಪುರದ ಚೆನ್ನ         ಅ.ಪ

 

ಇಂದಿರಾರಮಣ ಗೋವಿಂದ ಬೇಗ ಬಾರೊ

ನಂದನ ಕಂದ ಮುಕುಂದ ಬೇಗ ಬಾರೊ                 ೧

 

ಋದ್ಧ ಸಮೃದ್ಧ ಅನಿರುದ್ಧ ಬೇಗ ಬಾರೊ

ಹದ್ದನೇರಿದ ಪ್ರಸಿದ್ಧ ಬೇಗ ಬಾರೊ                     ೨

 

ರಂಗ ಉತ್ತುಂಗ ನರಸಿಂಹ ಬೇಗ ಬಾರೊ

ಕಂಗಳಿಗೆಸೆವ ಶುಭಾಂಗ ಬೇಗ ಬಾರೊ               ೩

 

ಧೀರ ಉದಾರ ಗಂಭೀರ ಬೇಗ ಬಾರೊ

ಹಾರಾಲಂಕಾರ ರಘುವೀರ ಬೇಗ ಬಾರೊ                  ೪

 

ಅಯ್ಯ ವಿಜಯ್ಯ ಸಾಹಯ್ಯ ಬೇಗ ಬಾರೊ ಉ

ದಯಾದ್ರಿವಾಸ ಹಯವದನ ಬೇಗ ಬಾರೊ                ೫

 

 

ಬೇವು ಬೆಲ್ಲದೊಳಿಡಲೇನು ಫಲ                 

 

ಬೇವು ಬೆಲ್ಲದೊಳಿಡಲೇನು ಫಲ                 ಪ

ಹಾವಿಗೆ ಹಾಲೆರೆದೇನು ಫಲ                 ಅ.ಪ

ಕುಟಿಲವ ಬಿಡದಿಹ ಮನುಜರು ಮಂತ್ರವ

ಪಠಣೆಯ ಮಾಡಿದರೇನು ಫಲ

ಸಟೆಯನ್ನಾಡುವ ಮನುಜರು ಸಂತತ

ನಟನೆಯ ಮಾಡಿದರೇನು ಫಲ                ೧

 

ಕಪಟತನದಲಿ ಕಾಡುತ ಜನರನು  

ಜಪವನು ಮಾಡಿದರೇನು ಫಲ

ಕುಪಿತತನವನು ಬಿಡದೆ ನಿರಂತರ

ಜಪವನು ಮಾಡಿದರೇನು ಫಲ                 ೨

 

ಮಾತಾಪಿತರನು ಬಳಲಿಸಿದಾತನು 

ಯಾತ್ರೆಯ ಮಾಡಿದರೇನು ಫಲ

ಘಾತಕತನವನು ಬಿಡದೆ ನಿರಂತರ 

ಗೀತೆಯನೋದಿದರೇನು ಫಲ                       ೩

 

ಪತಿಗಳ ನಿಂದಿಪ ಸತಿಯರು ಬಹುವಿಧ

ವ್ರತಗಳ ಮಾಡಿದರೇನು ಫಲ

ಅತಿಥಿಗಳೆಡೆಯಲಿ ಭೇದವ ಮಾಡುತ 

ಗತಿಯನು ಬಯಸಿದರೇನು ಫಲ                   ೪

 

ಹೀನಗುಣಂಗಳು ಹಿಂಗದೆ ಗಂಗೆಯ 

ಸ್ನಾನವ ಮಾಡಿದರೇನು ಫಲ

ಶ್ರೀನಿಧಿ ಪುರಂದರವಿಠಲನ ನೆನೆಯದೆ 

ಮೌನವ ಮಾಡಿದರೇನು ಫಲ                   ೫

 

 

ಬಂದ ಕೃಷ್ಣ ಚಂದದಿಂದ

 

ಬಂದ ಕೃಷ್ಣ ಚಂದದಿಂದ ಬಂದ ನೋಡೆ ಗೋಪ 

ವೃಂದದಿಂದಾನಂದಿಸುತ್ತ ಬಂದ ನೋಡೆ                  ಪ

ಗೋವ ಮೇವನೀವ ದೇವ ಬಂದ ನೋಡೆ

ದೇವ ತಾ ವಾದ್ಯಗಳಿಂದ ಬಂದ ನೋಡೆ                  ೧

 

ಪಾಪ ಪೋಪ ಗೋಪ ರೂಪ ಬಂದ ನೋಡೆ

ತಾಪಲೋಪಾಲಾಪಾಟೋಪ ಬಂದ ನೋಡೆ                  ೨

 

ಭಾಸುರಸುಖಸೂಸುತ ಬಂದ ನೋಡೆ

ವಾಸುದೇವವಿಠಲ ತಾ ಬಂದ ನೋಡೆ                     ೩

 

 

ಬಂದು ನಿಲ್ಲೊ ಕಣ್ಣ ಮುಂದೆ                             

 

ಬಂದು ನಿಲ್ಲೊ ಕಣ್ಣ ಮುಂದೆ                             ಪ

ಬಂದು ನಿಲ್ಲೋ ನಿನ್ನ ಪಾದಕ್ಕೆ ವಂದಿಪೆ

ಇಂದಿರೆಯರಸ ಗೋವಿಂದ ಮುಕುಂದ ನೀ                   ಅ.ಪ

 

ಅರಳಿದ ಕೆಂದಾವರೆಯ ಧಿಕ್ಕರಿಸುವ

ಚರಣಾರವಿಂದವ ನಿರುತ ತೋರು ನೀನು                  ೧

 

ನೀಲಾಲಕ ಭ್ರಮರಕುಂತಲಮಂಡಿತ

ಮೇಲಾದ ರಾಕೇಂದುಮುಖವ ತೋರಿಸುತಲಿ                 ೨

 

ಪದುಮನೇತ್ರನೆ ನಿನ್ನ ಸದನವೆನುತ ಎನ್ನ

ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ      ೩

 

ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ

ಕರೆದಾಗ ನಿನ್ನ ದಿವ್ಯಚರಣವ ತೋರಿಸುತ              ೪

 

ಅಜಭವಾದಿಗಳಿಗೆ ನಿಜಪದವನಿತ್ತಂತೆ

ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ               ೫

 

 

ಬಂದೆವಯ್ಯ ಗೋವಿಂದಶೆಟ್ಟಿ                     

 

ಬಂದೆವಯ್ಯ ಗೋವಿಂದಶೆಟ್ಟಿ                     ಪ

ಇಂದು ನಿಮ್ಮ ಹರಿವಾಣಪ್ರಸಾದವುಂಟೆನಲಾಗಿ    ಅ.ಪ

 

ಅಪ್ಪಾಲು ಅತಿರಸ ತುಪ್ಪ ಕಜ್ಜಾಯವು 

ಒಪ್ಪುವ ಯಾಲಕ್ಕಿ ಶುಂಠಿ ಮೆಣಸು

ಅಪ್ಪರೂಪವಾದ ಕಜ್ಜಾಯ ರಾಶಿಗಳ

ಛಪ್ಪನ್ನ ದೇಶಕೆ ಮಾರುವ ಶೆಟ್ಟಿ                  ೧

 

ಒಡೆದ ಮಡಕೆಯನ್ನು ಇಡದೆ ನಾಮವ ಮಾಡಿ

ಕೊಡುವೆ ನೀ ಕಾಸಿಗೆ ಒಂದೊಂದನು 

ಒಡಲು ತುಂಬಿ ಇಕ್ಕ ಅನ್ನವ ಮಾರಿಸಿ

ಒಡವೆಯ ಗಳಿಸುವ ಕಡುಲೋಭಿಶೆಟ್ಟಿ                    ೨

 

ಶೇಷಗಿರಿಯ ಮೇಲೆ ಇಪ್ಪ ತಿಮ್ಮ ಶೆಟ್ಟಿ 

ದೇಶಕೆ ಪ್ರಸಾದವ ನಡೆಸುವ ಶೆಟ್ಟಿ

ಆಶೆಯಿಂದ ಹಣಕಾಸು ಗಳಿಸುವ ಆದಿ

ಕೇಶವ ನಾರಾಯಣನೆಂಬ ಶೆಟ್ಟಿ                     ೩

 

 

ಬೃಂದಾವನಿ ಜನನಿ || 

ಬೃಂದಾವನಿ ಜನನಿ ವಂದಿಸುವೆ ಸತತ ಜಲಂಧರನ ರಾಣಿ ಕಲ್ಯಾಣಿ |

ಕಲ್ಯಾಣಿ ತುಳಸಿನಿಜ ಮಂದಿರೆ ಎನಗೆ ದಯವಾಗೆ ||

ಜಲಜಾಕ್ಷನಮಲಕಜ್ಜಲಬಿಂದು ಪೀಯಾಶಕಲಶದಲಿ ಬೀಳೆ ಜನಿಸಿದಿ |

ಜನಿಸಿ ಹರಿಯಿಂದ ಶ್ರೀ ತುಳಸಿ ನೀನೆಂದು ಕರೆಸಿದಿ ||

ಶ್ರೀತರುಣಿ ವಲ್ಲಭನ ಪ್ರೀತಿವಿಷಯಳೆ ನಿನ್ನ ನಾ ತುತಿಸಿ ಕೈಯ ಮುಗಿವೆನು |

ಮುಗಿವೆ ಎನ್ನಯ ಮಹಾಪಾತಕವ ಕಳೆದು ಪೊರೆಯಮ್ಮ ||

ತುಳಸಿ ನಿನ್ನಡಿಗೆ ನಾ ತಲೆಬಾಗಿ ಬಿನ್ನೈಪೆ ಕಲುಷಕರ್ಮಗಳ ಎಣಿಸದೆ |

ಎಣಿಸದೆ ಸಂಸಾರಜಲಧಿಯಿಂದೆಮ್ಮ ಕಡೆಹಾಯ್ಸು ||

ನೋಡಿದವ ದುರಿತ ಈಡ್ಯಾಡಿದವ ನಿನ್ನ ಕೊಂಡಾಡಿದವ ನಿತ್ಯ ಹರಿಪಾದ |

ಹರಿಪಾದ ಕಮಲಗಳ ಕೂಡಿದವ ಸತ್ಯ ಎಂದೆಂದು ||

ನಿಂದಿಸಿದವರೆಲ್ಲ ನಿಂದ್ಯರಾಗುವರು ಅಭಿವಂದಿಸಿದ ಜನರು ಸುರರಿಂದ |

ಸುರರಿಂದ ನರರಿಂದ ವಂದ್ಯರಾಗುವರು ಜಗದೊಳು ||

ಕಲುಷವರ್ಜಿತೆ ನಿನ್ನ ದಳಗಳಿಂದಲಿ ಲಕ್ಷ್ಮೀನಿಲಯನಂಘ್ರಿಗಳ ಪೂಜಿಪ |

ಪೂಜಿಪರಿಗೆ ಪರಮಮಂಗಳದ ಪದವಿಟ್ಟು ಸಲಹುವಿ ||

ಶ್ರೀತುಳಸೀದೀವಿ ಮನ್ಮಾತ ಲಾಲಿಸು ಜಗನ್ನಾಥವಿಠ್ಠಲನ ಚರಣಾಬ್ಜ |

ಚರಣಾಬ್ಜ ಎನ್ನ ಹೃತ್ಪದ್ಮದಲ್ಲಿ ನೀ ತೋರೆ ಕೃಪೆಂದ ||

 

ಶ್ರೀ ತುಲಸಿ ಸ್ತುತಿ || ಶ್ರೀ ಜಗನ್ನಾಥ ದಾಸರು

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023