ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಹ)

ಹರಿ ಚಿತ್ತ ಸತ್ಯ ನಮ್ಮ ಹರಿ

ರಾಗ: ಪೂರ್ವಿಕಲ್ಯಾಣಿ, ತಾಳ: ಆದಿ 

 

ಹರಿ ಚಿತ್ತ ಸತ್ಯ ನಮ್ಮ ಹರಿ ಚಿತ್ತ ಸತ್ಯ

ನರ ಚಿತ್ತಕೆ ಬಂದದು ಲವಲೇಶ ನಡೆಯದು |ಹರಿ|

 

ಸುದತಿ ಮಕ್ಕಳ ಭಾಗ್ಯ ಬಯಸೋದು ನರ ಚಿತ್ತ

ಮದುವ್ಯಾಗದಿರುವುದು ಹರಿಚಿತ್ತವು |ಹರಿ|

 

ಕುದುರೆ ಅಂದಾನ ಆನೆ ಬಯಸೋದು ನರಚಿತ್ತ

ಪಾದಚಾರಿ ಆಗೋದು ಹರಿಚಿತ್ತವಯ್ಯ |ಹರಿ|

 

ಪುರಂದರ ವಿಠಲನ ಬಯಸೋದು ನರಚಿತ್ತ

ದುರಿತವ ಕಳೆವುದು ಹರಿಚಿತ್ತವಯ್ಯ |ಹರಿ|

 

 

ಹರಿ ನಾರಾಯಣ  ರಾಗ: ಶಂಕರಾಭರಣ ತಾಳ: ಆದಿ

 

ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಎನು ಮನವೆ ||ಪ||

 

ನಾರಾಯಣನೆಂಬೋ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ||ಅ ಪ||

 

ತರಳ ಧ್ರುವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳ್ಕೆಯಾಯ್ತು

ಧರಣೀಶ ರುಕುಮಾಂಗದನಿಂದ ಚಿಗುರಿತು ಕುರು ಪಿತಾಮಹನಿಂದ ಹೂವಾಯ್ತು ||ಹರಿ||

 

ವಿಜಯನ ಸತಿಯಿಂದ ಕಾಯಾಯ್ತು ಅದು ಗಜೇಂದ್ರನಿಂದ ದೊರೆ ಹಣ್ಣಾಯ್ತು

ದ್ವಿಜ ಶುಕ ಮುನಿಯಿಂದ ಪರಿಪಕ್ವವಾಯಿತು ಅಜಮಿಳ ತಾನುಂಡು ರಸ ಸವಿದ ||ಹರಿ||

 

ಕಾಮಿತ ಫಲವೆಂಬ ನಾಮವೊಂದಿರಲಾಗಿ ಹೋಮ ನೇಮ ಜಪ ತಪವ್ಯಾಕೆ

ಸ್ವಾಮಿ ಶ್ರೀ ಪುರಂದರ ವಿಠಲನ ನಾಮವ ನೇಮದಿಂದಲಿ ನೆನೆ ಮನವೆ ||ಹರಿ||

 

ಪುರಂದರದಾಸರು: ಹರಿಯಧಿಕ ಹರನಧಿಕ ರಾಗ: ಕಾಂಭೋದಿ, ತಾಳ ಝಂಪೆ

ಹರಿಯಧಿಕ ಹರನಧಿಕ ಎಂದು ಹೋರಾಡದಿರಿ ಹರಿ-ಹರರ ಭಕ್ತರೇ ಸಾಕ್ಷಿ ಲೋಕದೊಳು |ಪ|

 

ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ ಹರನೆಂದು ಅವನ ಪಿತ ತಾನೆ ಒಲಿದ

ಹರಿಯೆಂದು ವಿಭೀಷಣನು ಸ್ಥಿರ ಪಟ್ಟವೈದಿದ ಹರನೆಂದು ರಾವಣನು ಹತನಾದನಯ್ಯ |೧|

 

ಹರಿಯೆಂದು ಭೀಮ ಪರಿಪೂರ್ಣ ಕಾಮನು ಆದ ಹರನೆಂದ ಆ ಜರಾಸಂಧ ಹತನಾದ

ಹರಿಯ ಬಾಗಿಲ ಕಾಯ್ದ ಬಲಿ ಭಾಗ್ಯವಂತನಾದ ಹರನ ಬಾಗಿಲ ಕಾಯ್ದ ಬಾಣನಳಿದ |೨|

 

ಹರನ ವರವನು ಪಡೆದ ಭಸ್ಮಾಸುರನು ಅವನ ಶಿರದಲ್ಲಿ ತನ್ನ ಕರವಿಡಲು ಬರಲು

ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು ವರದ ಪುರಂದರ ವಿಠಲ ಕಾಯ್ದ ದರಿಯ |೩|

 

ಹೆಂಡತಿ ಪ್ರಾಣ ಹಿಂಡುತಿ

 

 

ಹೆಂಡತಿ ಪ್ರಾಣ ಹಿಂಡುತಿ

ಹೆಂಡತಿ ಪ್ರಾಣ ಹಿಂಡುತಿ ||ಪ||

ದೊಡ್ಡ| ಕೊಂಡ ಕೋತಿಯಂತೆ ಕುಣಿಕುಣಿಸುತ್ತಾ||ಅ||

 

ಹೊತ್ತಾರೆ ಏಳುತ್ತಿ ಹೊರಗೆ ತಿರುಗಾಡುತ್ತಿ | 

ಹೊತ್ತು ಹೋಯಿತು ಭತ್ಯ ತಾರೆನ್ನುತ್ತಿ|

ಉತ್ತಮ ಗುರುಹಿರಿಯರ ಮಾತು ಮೀರುತ್ತಿ | 

ಮೃತ್ಯುದೇವತೆಯಂತೆ ಮನೆಯೊಳಗಿರುತಿ ||೧||

 

ಇಲ್ಲದ್ದು ಬೇಡತ್ತಿ ಸುಳ್ಳು ಮಾತಾಡುತ್ತಿ | 

ಒಳ್ಳೆ ಊಟಮಾಡುವನುಂಡು ಕುಳಿತಿರ್ಪೆನೆಂತಿ|

ಎಳ್ಳಿನಷ್ಟು ಕೆಲಸ ಮಾಡಲಾರೆನಂತಿ | 

ಎಲ್ಲೆಲ್ಲಿ ತಲೆಯೆತ್ತಧಾಂಗೆ ಮಾಡುತ್ತಿ||೨||

 

ಹಿರಿತನಕ್ಕೋಗುತ್ತಿ ಗರುವಿಕೆ ಮಾಡುತ್ತಿ | 

ನೆರೆಹೊರೆಯರ ಕಂಡು ಬಡಿದಾಡುತ್ತಿ |

ದೊರೆ ಸಿರಿಪುರಂದರವಿಠಲನ ಸ್ಮರಿಸದೆ

 ದುರಿತಕ್ಕೆ ಗುರಿಯಾಗಿ ನೀ ನಿಲ್ಲುತ್ತಿ ||೩||

 

 

ಹರಿ ಸ್ಮರಣೆ ಮಾಡೋ

ಹರಿ ಸ್ಮರಣೆ  ಮಾಡೋ ನಿರಂತರ| 

ಪರಗತಿಗೆ ಇದು ನಿಧಾನ ||ಪ||

ದುರಿತಗಜಕ್ಕೆ ಕಂಠೀರವನೆನಿಸಿದ ಶರಣಾಗತ ರಕ್ಷಕ ಪಾವನ ನೀ||೧||

 

ಸ್ಮರಣೆಗೈದ ಪ್ರ್ಹ್ಲಾದನ ಪಕ್ಷಿಸಿದ| ದುರುಳ ಹಿರಣ್ಯಕನುದರವ ಸೀಳಿದ ||೨||

 

ತರುಣಿ ದ್ರೌಪದಿ ಮೊರೆಯಿಡಲಾ ಕ್ಷಣ|ಭರದಿಂದಕ್ಷಯವಿತ್ತ ಮಹಾತ್ಮನಾ||೩||

 

ಅಂದು ಅಜಾಮಿಳ ಕಂದನ ಕರೆಯಲು| ಬಂದು ಸಲಹಿ ಆನಂದವ ತೋರಿದ||೪||

 

ಶ್ರೀಶ ಪುರಂದರವಿಠಲರಾಯನ|ಸೃಷ್ಟಿಗೊಡೆಯನ ಮುಟ್ಟಿ ಭಜಿಸಿ ನೀ||೫||

 

ಹರಿಹರರು ಸಮರೆಂದು

ಹರಿಹರರು ಸಮರೆಂದು ಅರಿಯದಜ್ಞಾನಿಗಳು| 

ಹರನ ಹೃದಯದೊಳಿರುವ ಹರಿಯ ತಾವರಿಯರು||ಪ||

 

ಶರಧಿಮಥನದೊಳಂದು ಸಿಂಧುಸುತೆ ಬಂದಾಗ|ಹರಿ ಹರ ವಿರಿಂಚಿ ಮೊದಲಾದ ಸುರರ|

ವರರಾರೆಂದು ನೋಡಿ ಶಂಕೆಯ ಬಿಟ್ಟು ಸಿರಿದೇವಿ|ಹರಿ ಸರ್ವವರನೆಂದು ಮಾಲೆ ಹಾಕಿದಳು||೧||

 

ಹರಿನಾಮ ಕ್ಷೀರವನು ಹರನಾಮ ನೀರನು|ಕ್ಷೀರ ನೀರೊಂದಾದುದಂತೆ ಇಹದು ಪರರು|

ಪರತತ್ವವರಿಯದ ನರ ತಾನು ಹರಿ ಹರರು|ಸರಿಯೆಂದು ನರಕಕ್ಕೆ ಒಳಗಾಗುತಿಹನು||೨||

 

ಕ್ಷೋಣಿಯೊಳು ಬಾಣನಾ ತೋಳುಗಳ ಕಡಿವಾಗ ಏಣಾಂಕಧರ ಬಾಗಿಲೊಳಗೆ ಇರಲು|

ಕಾಣರೇ ಜನರೆಲ್ಲ ಹರಿ ಪರನು ತಾನೆಂದು| ಗುಣಪೂರ್ಣ ಪುರಂದರವಿಠಲನು ಪರನು||೩||

 

ಹರಿಕೊಟ್ಟ ಕಾಲಕ್ಕೆ 

ಹರಿಕೊಟ್ಟ ಕಾಲಕ್ಕೆ ಉಣಲಿಲ್ಲ | ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವ್ಯಲ್ಲೋ ಪ್ರಾಣಿ ||ಪ||

 

ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂತಿಟ್ಟು| ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೋ ಪ್ರಾಣಿ |

ಹತ್ತು ಸಾವಿರ ಹೊನ್ನು ತಿಪ್ಪೇಲಿ ಪೋಪಾಗ|ಮೃತ್ತಿಗೆ ಬಾಯಲ್ಲಿ ಬಿತ್ತಲ್ಲೋ ಪ್ರಾಣಿ||೧||

 

ಹುಗ್ಗಿಯು ತುಪ್ಪವು ಅಗ್ಗವಾಗಿರಲಿಕ್ಕೆ|ಗುಗ್ಗುರಿಯನ್ನವ ತಿಂದ್ಯಲ್ಲೋ ಪ್ರಾಣಿ|

ವೆಗ್ಗಳದ ಭಾಗ್ಯ ಗಳಿಗೇಲಿ ಪೋಪಾಗ|ಬುಗ್ಗೆಯು ಹೊಯ್ಕೊಂಡು ಹೋದ್ಯಲ್ಲೊ ಪ್ರಾಣಿ||೨||

 

ನಂಟರಿಷ್ಟರು ಬಂದು ಮನೆಮುಂದೆ ಕುಳಿತಿರಲು|ಕುಂಟ ಸುದ್ದಿ ನೀನಾಡಿದ್ಯಲ್ಲೋ ಪ್ರಾಣಿ|

ಕಂಟಕ ಯಮನು ಕುಂಠಿಸುತ್ತೆಳೆವಾಗ|ನಂಟ ಪುರಂದರವಿಠ್ಠಲೆನ್ನು ಪ್ರಾಣಿ||೩||

 

ಹರಿಯೆ ಹದಿನಾಲ್ಕು ಲೋಕದ ದೊರೆಯೆ

 

ಹರಿಯೆ ಹದಿನಾಲ್ಕು ಲೋಕದ ದೊರೆಯೆ ||ಪ||

ಕರುಣದಿಂದ ತವ ಚರಣ ಕಮಲ ಷಟ್| ಚರಣನೆನಿಸಿ ಎನ್ನ ಪೊರೆವುದು ಸಂತತ||ಅ||

 

ವೀರ ಭಕ್ತ ಪ್ರಹ್ಲಾದ ವರದ ಕರುಣಾರಸ ಪರಿಪೂರ್ಣ | 

ಸಾರಸಿ ಭವ ಮುಖ ಸುರವರ ಸನ್ನುತ ಚಾರ ಚರಣನಳೀನ||೧|| 

 

ಸಾರಿದ ಪ್ರಣತ ಜನಾರ್ತಿನಿವಾರಣ | 

ಘೋರದುರಿತ ಮದಗಜ ಪಂಚಾನನ||೨||

 

ನಾರದ ಮುನಿವರ ಸೇವಿತ ಚರಣ|

ಸಾರಸಾಕ್ಷಿ ಶ್ರೀ ಕರಿಗಿರಿ ನಿಕೇತನ ||೩||

 

 

ಹೂ ಬೇಕೆ ಹೂವು

ಹೂ ಬೇಕೆ ಹೂವು ಪರಿಮಳದ ಹೂವು || ಪ ||

ಪರಮ ಪುರುಷ ನಮ್ಮ ಕೃಷ್ಣನ ತೋಟದ ||ಅ||

 

ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ | ಮಲ್ಲೆ ಗುಲಾಬಿ ತಾವರೆ ಪಾರಿಜಾತ |

ಎಲ್ಲ ವಿಧದ ಮನಕ್ಲೇಶವ ಕಳೆಯಲು | ಪುಲ್ಲಲೋಚನ ನಮ್ಮ ಕೃಷ್ಣನು ಧರಿಸಿದ ||೧||

 

ದಾರದಿ ಕಟ್ಟಿಲ್ಲ ಮಾರು ಹಾಕುವುದಿಲ್ಲ|ಕೇರಿ ಕೇರಿಗಳಲ್ಲಿ ಮಾರುವುದಿಲ್ಲ|

ಭೂರಿಭಕುತಿ ಎಂಬ ಭಾರಿಯ ಬೆಲೆಗಿದು |ಮಾರೆಂದು ಪೇಳಿದ ಶೌರಿಯ ಸೊಬಗಿನ ||೨||

 

ರಂಗು ರಂಗುಗಳಿಂದ  ಕಂಗೊಳಿಸುವ ಸ್ವಚ್ಛ | ಬಂಗಾರದ ಛವಿ ಹಂಗಿಸುವ|

ಶೃಂಗಾರ ಸಿಂಧು ಪ್ರಸನ್ನ ಶ್ರೀ ಮಾಧವ|ನಂಘ್ರಿಯ ಸಂಗದಿ ಮಂಗಳಕರವಾದ||೩||

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023