ಪ್ರಮಾದೋ ಧೀಮತಾಮಪಿ

ಇದು ೧೯೪೧ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ವಿಷಯ.
ಕನ್ನಡದ ಪ್ರಹಸನದ ಪಿತಾಮಹರೆಂದು ಪ್ರಖ್ಯಾತರಾದ ಕೈಲಾಸಂರವರ `ಹುತ್ತದಲ್ಲಿ ಹುತ್ತ' ಎಂಬ ನಾಟಕವನ್ನು ಮೊದಲ ಬಾರಿ ಮುದ್ರಿಸಿದಾಗ ಅದರಲ್ಲಿ ಮುದ್ರಣ ದೋಷಗಳು ಹಲವಾರು ಇದ್ದವಂತೆ. ಅವು ಎಂಥವು? ಕಣ್ಮುಚ್ಕೊಂಡ್ಳು ಎನ್ನುವುದಕ್ಕೆ ಬದಲಾಗಿ ಕಣ್ಚುಚ್ಕೋಂಡ್ಳು,Cleopatra ಅನ್ನುವ ಕಡೆ Cleoptara ಇತ್ಯಾದಿ. ಈ ಪುಸ್ತಕವನ್ನು ಮುದ್ರಣ ಮಾಡಿಸುವ ಜವಾಬ್ದಾರಿಯನ್ನು ರಾಜರತ್ನಂ ಅವರು ಹೊತ್ತಿದ್ದರು ಮುದ್ರಣದಲ್ಲಿ ಎಷ್ಟೇ ಚಿಕ್ಕ ತಪ್ಪಾದರೂ ಊರು ಹೊಲಗೇರಿ ಒಂದು ಮಾಡಿ,ಅಚ್ಚು ಮಾಡಿದವರ ಜನ್ಮ ಜಾಲಾಡಿ,ಪೇಜಿಗೆ ಪೇಜೇ ಹರಿದು ಹಾಕಿಸಿ, ಅಚ್ಚು ಮಾಡುವವರೂ ನಮ್ಮ ಹಾಗೇ ಮನುಷ್ಯರು ಅನ್ನೋದನ್ನ ಮರೆಯುವ ಮಹಾನುಭಾವರನ್ನೂ ನೋಡಿದ್ದ ರಾಜರತ್ನಂ ರವರಿಗೆ ಈ ಪುಸ್ತಕವನ್ನು ಮದ್ರಾಸಿನಲ್ಲಿದ್ದ ಕೈಲಾಸಂರವರಿಗೆ ಕಳುಹಿಸಿದಾಗ ಸ್ವಲ್ಪ ಅಳುಕೇ ಆಯಿತು. ಆದರೂ ತಾವೇ ಕೈಲಾಸಂರವರಿಗೆ ತಪ್ಪುಗಳನ್ನು ತೋರಿಸಿಬಿಟ್ಟು `ಶ್ರರಣಾಗತೋಸ್ಮಿ' ಎಂದಿದ್ದರಂತೆ.ಕೈಲಾಸಂರವರು ಸ್ವಲ್ಪವೂ ಕೋಪಗೊಳ್ಳಲಿಲ್ಲ, ಬೇಜಾರು ಮಾಡಿಕೊಳ್ಳಲಿಲ್ಲ' `The book is wonderful. Yes, there are a few mistakes'. But then, `ಪ್ರಮಾದೋ ಧೀಮತಾಮಪಿ'ಎಂದು ತಮ್ಮ ಉತ್ತರದಲ್ಲಿ ಬರೆದರು.
ಈ`ಪ್ರಮಾದೋ ಧೀಮತಾಮಪಿ' ಎಂಥಾ ಬುದ್ಧಿವಂತರೂ ಒಮ್ಮೊಮ್ಮೆ ತಪ್ಪು ಮಾಡುತ್ತಾರೆ ಎಂಬರ್ಥದ ಈ ನುಡಿಯನ್ನು ಕೈಲಾಸಂರವರೇ ಕನ್ನಡದಲ್ಲಿ`ಐರಾವತಕ್ಕೂ ಅಡಿ ತಪ್ಪುತ್ತೆ' ಎಂದಿದ್ದರು. ಇದನ್ನೇ ಇಂಗ್ಲೀಷಿನಲ್ಲಿ "To err is human, to forgive divine" ಎನ್ನುತ್ತಾರೆ. ಇದು ನಮ್ಮೆಲ್ಲರಿಗೂ ತಿಳಿದ ವಿಷಯವೇ. ಇದಕ್ಕೆ
"corollary" ಅಥವಾ ಉಪಸಿದ್ಧಾಂತವಾಗಿ ಒಂದು ಚುಟುಕವಿದೆ:
Admitting error clears the score
And proves you wiser than before.
ಇದೂ ಸತ್ಯವೇ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೂ ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳೂವವರು ಈಗಿನ ಕಾಲದಲ್ಲಿ ಅಪರೂಪ. ಒಬ್ಬ ರಾಜಕಾರಣಿಯೇ, ವೈದ್ಯರೇ, ಉಪಾಧ್ಯಾಯರೇ ಯಾರೇ ಆಗಲಿ ತಾವು ತಪ್ಪು ಮಾಡಿದ್ದೇವೆ ಎಂದು ಹೇಳಿದ್ದನ್ನು ನೀವು ಕೇಳಿ ಎಷ್ಟು ದಿವಸ ಅಥವಾ ಎಷ್ಟು ವರ್ಷಗಳಾದವು?ಬುಷ್ ಮಹಾಶಯರು ಇರಾಕನ್ನು ಆಕ್ರಮಿಸಿದ್ದು ತಪ್ಪಾಯಿತೆಂದು ಎಂದಾದರೂ ಒಪ್ಪಿಕೊಳ್ಳುವರೇ?
ತಪ್ಪನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಹಲವಾರು ಕಾರಣಗಳಿರಬಹುದು. ಮುಖ್ಯವಾಗಿ ಮುಖಭಂಗವಾಗುವುದೆಂಬ ಭೀತಿ ಅಥವಾ ಧನದ ಇಲ್ಲವೇ ಇತರೇ ಪರಿಹಾರ ಕೊಡಬೇಕಾಗುವುದೆಂದು ಹೆದರಿಕೆ, ಇತ್ಯಾದಿ. ಈ ಎರಡನೇ ನಮ್ಮ(ಆಸ್ಟ್ರೇಲಿಯಾ) ಪೂರ್ವಪ್ರಧಾನಿಗಳು ಆದಿವಾಸಿಗಳಿಗೆ `sorry' ಎಂದು ಹೇಳಲಿಲ್ಲವೇನೋ. ಈಗಿನ ಕಾಲದಲ್ಲಂತೂ ನೆಪಸಿಕ್ಕರೆ ಸಾಕು ಮಾಡಿ ಆದಷ್ಟು ಹಣವನ್ನು ಗಿಟ್ಟಿಸಿಕೊಳ್ಳೋಣವೆಂಬ ಪರಾನ್ನಪುಷ್ಟರಿಗೆ -parasiteಗಳಿಗೆ -ಕಡಿಮೆಯಿಲ್ಲ. ಅದಕ್ಕೆ ತಾವಾಗಿಯೇ ತಪ್ಪೊಪ್ಪಿಕೊಂಡವರನ್ನು `ಸ್ವಲ್ಪವೂ ವ್ಯವಹಾರಜ್ಞಾನವಿಲ್ಲದವರು' ಎಂದು ಅವರ ಬಂಧು ಮಿತ್ರರೇ ಹೀಯಾಳಿಸುತ್ತಾರೆ.ಆದರೆ ತಪ್ಪೊಪ್ಪಿಕೊಳ್ಳುವುದರಲ್ಲಿ ಮತ್ತು ತಪ್ಪನ್ನು ಕ್ಷಮಿಸುವುದರಲ್ಲಿ ಅನುಕೂಲವೂ ಇದೆ, ಏನಿಲ್ಲದಿದ್ದರೂ road rage ಅನ್ನಾದರೂ ಕಡಿಮೆ ಮಾಡಬಹುದಲ್ಲವೇ?
ಈ ವಿಷಯದಲ್ಲಿ ನಿಮ್ಮ ಅನಿಸಿಕೆ ಏನು?