ಆಕಾಶಿಕ ದಾಖಲೆಗಳು

ಕಳೆದ ಶತಮಾನದ ಪೂರ್ವಾರ್ಧದಲ್ಲಿ ಅಮೇರಿಕಾ ದೇಶದಲ್ಲಿ ಎಡ್ಗರ್ ಕೇಸಿ ಎಂಬ ಧಾರ್ಮಿಕ ಶ್ರದ್ಧೆಯ ವೈದ್ಯರೊಬ್ಬರಿದ್ದರು. ಕ್ರಿಶ್ಚಿಯನ್ ಧರ್ಮದ ಶ್ರದ್ಧಾಳುವಾದ ಇವರು ಒಮ್ಮೆ ಅಸ್ವಸ್ಥರಾಗಿದ್ದಾಗ ಅವರ ಧ್ವನಿಯೇ ಬಿದ್ದು ಹೋಗಿತ್ತು. ಯಾವ ಚಿಕಿತ್ಸೆಯೂ ಫಲಕಾರಿಯಾಗಿರಲಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಹುಡುಕಾಟದ ಭರದಲ್ಲಿ ಅವರಿಗೆ ತಮ್ಮನ್ನೇ ಸಮ್ಮೋಹಿನಿ ವಿದ್ಯೆಗೊಳಪಡಿಸಿಕೊಂಡು ಅನಾರೋಗ್ಯಕ್ಕೆ ಕಾರಣ ಮತ್ತು ಚಿಕಿತ್ಸೆಗಳನ್ನು ಕಂಡುಕೊಳ್ಳುವ ಅಪೂರ್ವ ಶಕ್ತಿ ಬಂದಿತ್ತು. ಇದರಿಂದಾಗಿ ತಮ್ಮನ್ನು ತಾವು ಗುಣಪಡಿಸಿಕೊಂಡದ್ದು ಮಾತ್ರವಲ್ಲ, ಬರಬರುತ್ತಾ ಬೇರೆಯವರ ಕಾಯಿಲೆಗಳನ್ನು ಕೂಡಾ ಗುಣಪಡಿಸುವ ಸುಪ್ತ ಶಕ್ತಿಯ ಅರಿವಾಯಿತು. ಅಂದಿನಿಂದ ಅನೇಕ ವರ್ಷಗಳವರೆಗೆ ಸಾವಿರಾರು ರೋಗಿಗಳನ್ನು ಗುಣಪಡಿಸಿದ ದಾಖಲೆಗಳು ಇಂದಿಗೂ ಇವೆ ಮತ್ತು ಕುತೂಹಲಕಾರಿಯಾಗಿವೆ ಎಂಬುದು ಗಮನಿಸಬೇಕಾದ ಅಂಶ.
ಅವರನ್ನು ಅನಾರೊಗ್ಯದ ಸಲುವಾಗಿ ಪರಿಹಾರ ಕೇಳ ಬಯಸಿದ್ದ ಅನೇಕರು ತಮ್ಮ ಕಾಯಿಲೆಗಳ ಬಗ್ಗೆ ಹೇಳಿದಾಗ ಕೇಸಿಯವರು ತಮ್ಮ ಒಳಹೊಕ್ಕು ಪರಿಹಾರವಿದ್ದರೆ ಸೂಚಿಸುತ್ತಿದ್ದರಂತೆ. ಇಲ್ಲವಾದರೆ ಇದು ಶೀಘ್ರವಾಗಿ ಗುಣವಾಗುವುದು ಸಾಧ್ಯವೇ ಇಲ್ಲ, ಇಂತಿಷ್ಟು ಕಾಲ ನೀವಿದನ್ನು ಅನುಭವಿಸಲೇಬೇಕು ಎಂತಲೋ, ಅಥವಾ ನೀವಿದನ್ನು ಜೀವನ ಪರ್ಯಂತ ಅನುಭವಿಸಬೇಕು ಎಂದೋ ನಿಖರವಾಗಿ ಹೇಳಿಬಿಡುತ್ತಿದ್ದರಂತೆ. ಮತ್ತು ಅದಕ್ಕೆ ಕಾರಣವನ್ನೂ ಹುಡುಕಿ ಹೇಳುತ್ತಿದ್ದರಂತೆ. ಈ ರೀತಿಯ ಕಾರಣಗಳನ್ನು ಹುಡುಕಲು ವ್ಯಕ್ತಿಗಳ ಜನ್ಮಾಂತರಗಳನ್ನೆಲ್ಲ ತಲುಪಿ ನೀವು ಮಾಡಿರುವ ಈ ತಪ್ಪಿಗಾಗಿ ಈಗ ಈ ಶಿಕ್ಷೆಯನ್ನು ಅನುಭವಿಸಲೇ ಬೇಕಾಗಿರುವುದು ಎಂದೆಲ್ಲಾ ಹೇಳುತ್ತಿದ್ದರಂತೆ. ಅವರಿಗೆ ಭಾರತೀಯ ಭಾಷೆ, ಧರ್ಮಗಳ ಬಗ್ಗೆ ಯಾವುದೇ ಮಾಹಿತಿಯಾಗಲೀ, ನಂಬಿಕೆ ಶ್ರದ್ಧೆಗಳಾಗಲೀ ಇರಲಿಲ್ಲವಾದರೂ ಅವರು ಸೂಚಿಸುವ ಪರಿಹಾರಗಳಲ್ಲಿ ಕರ್ಮ, ಪುನರ್ಜನ್ಮ, ಆಕಾಶ ಮುಂತಾದ ಸಂಸ್ಕೃತ ಪದಗಳು ನಿರರ್ಗಳವಾಗಿ ಬರುತ್ತಿದ್ದವಂತೆ. ಹಿಂದಿನ ಜನ್ಮಗಳ ವಿಷಯಗಳು ಹೇಗೆ ತಿಳಿಯುತ್ತಿತ್ತು ಎಂಬ ಪ್ರಶ್ನೆಗೆ ಅವರು "ಆಕಾಶಿಕ ದಾಖಲೆಗಳಿಂದ" ( From Akashik records) ಎನ್ನುತ್ತಿದ್ದರಂತೆ.
ಮುಂದೆ ಇವರು "ಸುಷುಪ್ತಿಯ ಪ್ರವಾದಿ ಎಂದೇ ಪ್ರಖ್ಯಾತರಾದರಂತೆ. ಇವರ ಬಗ್ಗೆ ಅನೇಕ ಪುಸ್ತಕಗಳು ಎಲ್ಲಾ ಗ್ರಂಥಾಲಯಗಳಲ್ಲೂ ಲಭ್ಯವಿದೆ ಮಾತ್ರವಲ್ಲದೇ, ಅಂತರ್ಜಾಲ ಕ್ಷೇತ್ರಗಳಲ್ಲಿ ಸಾಕಷ್ಟು ಮಾಹಿತಿಗಳಿವೆ ಏನಿರಬಹುದು ಆಕಾಶಿಕ ದಾಖಲೆಗಳು? ಎಂದು ಸ್ವಲ್ಪ ಯೋಚಿಸೋಣ. ಸೂರ್ಯನ ಬೆಳಕು ಭೂಮಿಗೆ ತಲುಪಲು ಸುಮಾರು ೮ ನಿಮಿಷಗಳು ಬೇಕಂತೆ. ಅಂದರೆ ಈಗ ನಾವು ನೋಡುತ್ತಿರುವ ಸೂರ್ಯ ೮ ನಿಮಿಷಗಳ ಹಿಂದೆ ಇದ್ದ ಸೂರ್ಯ. ಅದೇ ರೀತಿ ತಾರೆಗಳು, ಎಷ್ಟೋ ವರ್ಷಗಳ ಹಿಂದಿದ್ದ ತಾರೆಗಳ ಬೆಳಕು ಈಗ ಭೂಮಿಯನ್ನು ತಲುಪಿ ಅದು ಈಗಿರುವಂತೆ ನೋಡುತ್ತೇವೆ ಎನ್ನುತ್ತಾರೆ. ಅಂದರೆ ಅವುಗಳಿಗಿರುವ ದೂರ ಎಷ್ಟೆಷ್ಟೋ ಜ್ಯೋತಿರ್ವರ್ಷಗಳಷ್ಟು. ಅದೇ ರೀತಿ ಈಗ ನಡೆಯುತ್ತಿರುವಂತೆ ಕಾಣುತ್ತಿರಬಹುದಾದ ನಕ್ಷತ್ರ ಸ್ಪೋಟಗಳಂತಹ ಘಟನಾವಳಿಗಳು ಬಹುಷಃ ಹಲವಾರು ವರ್ಷಗಳಷ್ಟೋ ಅಥವಾ ಹಲವಾರು ಶತಮಾನಗಳಷ್ಟು ಹಿಂದೆ ನಡೆದದ್ದಿರಬಹುದು.
ಅದೇ ರೀತಿ ಭೂಮಿ ಮತ್ತು ಅದರ ಮೇಲೆ ನಡೆಯುವ ಘಟನಾವಳಿಗಳು ಕಾಲ ಕಳೆದಂತೆ ಆಕಾಶದ ಬೇರೆ ಬೇರೆ ಸ್ಥರಗಳನ್ನು ತಲುಪುತ್ತಾ ನಾಶವಾಗದ ದಾಖಲೆಗಳಾಗಿ ಎಂದೆಂದಿಗೂ ಉಳಿದಿರಬಹುದಲ್ಲವೇ? ಉದಾಹರಣೆಗೆ ಯಾವುದೋ ಒಂದು ಸ್ಥರದಲ್ಲಿ ನಿಂತು ನೋಡಿದಾಗ ಕುರುಕ್ಷೇತ್ರದ ಯುದ್ಧ ನಡೆಯುತ್ತಿರುವುದನ್ನೂ, ಭಗವಂತನ ಗೀತೋಪದೇಶವನ್ನೂ ಈಗ ನಡೆಯುತ್ತಿರುವಂತೆ ವೀಕ್ಷಿಸುವ ಸಂಭವವನ್ನು ತಳ್ಳಿ ಹಾಕಲಾಗುವುದಿಲ್ಲ ಅಲ್ಲವೇ? ತಾತ್ವಿಕವಾಗಿ ಯಾವ ಸ್ಥರಕ್ಕಾದರೂ ತಲುಪಿ ಭೂಮಿಯ ಹುಟ್ಟು ಮಾತ್ರವಲ್ಲ , ಸೃಷ್ಟಿಯ ಆದಿಯನ್ನೂ ತಲುಪಬಹುದಲ್ಲವೇ? ಪೂರ್ವ ಜನ್ಮಗಳ ಘಟನಾವಳಿಗಳೆಂದರೆ ಸಾಪೇಕ್ಷವಾಗಿ ಆಕಾಶದ ಅತ್ಯಂತ ಕೆಳಸ್ಥರಗಳಲ್ಲಿಯೇ ಇರಬಹುದು. ಆದರೆ ಆಕಾಶದ ದಾಖಲೆಗಳನ್ನು ತಲುಪಿ ನೋಡುವ ಬಗೆಯಾದರೂ ಹೇಗೆ? ಬೆಳಕಿಗಿಂತ ವೇಗವಾಗಿ ಪ್ರಯಾಣಿಸಿ ನೋಡಬೇಕಲ್ಲವೇ? ಬೆಳಕಿಗಿಂತ ವೇಗವಾದದ್ದೇನಾದರೂ ಇದೆಯೇ ಎಂಬ ಪ್ರಶ್ನೆಗೆ, ಮಹಾಭಾರತದ ಯಕ್ಷ ಪ್ರಶ್ನೆಯೊಂದಕ್ಕೆ ಧರ್ಮರಾಯನ ಉತ್ತರದಿಂದ ತಿಳಿಯುತ್ತದೆ, ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸಬಲ್ಲದ್ದು ಮನಸ್ಸು ಎಂದು. ಅಂದರೆ ಮಾನಸಿಕ ಏಕಾಗ್ರತೆಯಿಂದ ಆಕಾಶಿಕ ದಾಖಲೆಗಳ ಯಾವುದೇ ಸ್ಥರವನ್ನು ಅತ್ಯಂತ ಕ್ಷಿಪ್ರವಾಗಿ ತಲುಪಬಹುದೆಂದಾಯಿತು. ಅಥವಾ ಅವುಗಳನ್ನು ತಲುಪಲು ಇದೊಂದೇ ಹಾದಿಯೆಂದಾಯಿತ ು. ಮಾನಸಿಕ ಏಕಾಗ್ರತೆಯೆಂದರೆ ಧ್ಯಾನ ಅಥವಾ ತಪಸ್ಸು.
ಇದೇ ಸಾಧನದಿಂದ, ದರೋಡೆಕೋರನೊಬ್ಬ ವಾಲ್ಮೀಕಿಯಾಗಿ ಆಕಾಶಿಕ ದಾಖಲೆಯ ಆ ಹಂತವನ್ನು ತಲುಪಿ ತಾನು ನೋಡಿದಂತೆ ದಾಖಲಿಸಿರುವ ಪ್ರಯತ್ನವೇ ವಿಶ್ವದ ಮೊಟ್ಟ ಮೊದಲ ಮಹಾಕಾವ್ಯವಾಯಿತೇ? ನಂತರ ಬಂದ ತುಳಸೀದಾಸರು, ಕಂಭರಂತಹ ಅನೇಕ ಸಂತರು ತಾವೂ ಆ ಸ್ಥರವನ್ನು ತಲುಪಿ ವಾಲ್ಮೀಕಿ ರಾಮಾಯಣದ ಯಾವ ಪ್ರಭಾವವೂ ಇಲ್ಲದೇ, ತಮ್ಮದೇ ಆದ ಶೈಲಿಗಳಲ್ಲಿ ಅದೇ ಘಟನಾವಳಿಗಳನ್ನು ಮರುದಾಖಲಿಸುವಂತಾಯಿತೇ, ಎಂಬುದು ಯೋಚಿಸಲರ್ಹ ವಿಚಾರ ಎನಿಸುವುದಿಲ್ಲವೇ? ಏಕೆಂದರೆ ಅನೇಕ ಸಂತರು ದಾಖಲಿಸಿರುವ ರಾಮಾಯಣದ ಮೂಲ ಕಥೆಯಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲದೇ, ವಿವರಣೆಯ ಕಾವ್ಯಾತ್ಮಕತೆಯಲ್ಲಿ ಮಾತ್ರ ವ್ಯತ್ಯಾಸವಿದೆ. ರಾಮಾಯಣದ ವಿಚಾರ ಉದಾಹರಣೆಗಾಗಿ ಮಾತ್ರ. ಇದರಂತೆಯೇ ಮಹಾಭಾರತ, ಭಾಗವತಾದಿ ಪುರಾಣಗಳು ಮಾತ್ರವಲ್ಲ ವೇದಗಳು ಕೂಡಾ ಎನಿಸುವುದಿಲ್ಲವೇ?. ಹೀಗೇ ಯೋಚಿಸುತ್ತಾ ಹೋದರೆ ನಮ್ಮ ಅನೇಕ ಅಪನಂಬಿಕೆಗಳಿಗೆ ಉತ್ತರ ದೊರೆಯಬಹುದು ಮಾತ್ರವಲ್ಲ, ಅವುಗಳ ಮೇಲಿನ ನಂಬಿಕೆ ಮತ್ತು ಶ್ರದ್ಧೆಗಳು ಹೆಚ್ಚಾಗಬಹುದು. ನಮ್ಮಲ್ಲಿನ ಇಂತಹ ಶ್ರದ್ಧೆಯೇ ನಮ್ಮ ಮುಂದಿನ ಪೀಳಿಗೆಯವರು ನಮ್ಮ ಧರ್ಮದ ಬಗೆಗೆ ಗೌರವ,ಶ್ರದ್ಧೆಯನ್ನ ಕಾಪಾಡಿಕೊಂಡು ಹೋಗಲು ಭದ್ರ ಬುನಾದಿಯಾಗಬಹುದು.