ಜ್ಞಾನ ಮಾರ್ಗ

ಗೀತೆಯ ೭ ನೇ ಅಧ್ಯಾಯದಲ್ಲಿ ಭಗವಂತ,ಅವನನ್ನು ಭಜಿಸುವ ವ್ಯಕ್ತಿಗಳನ್ನು ೪ ವಿಧವಾಗಿ ವಿಂಗಡಿಸುತ್ತಾನೆ. ಯಾರು ಯಾರೆಂದರೆ, ೧.ಆರ್ತ(ಸಂಕಟಕ್ಕೆ ಸಿಕ್ಕಿ ದೀನನಾದವನು),೨.ಜಿಜ್ಞಾಸು(ಭಗವತ್ ತತ್ವವನ್ನು ತಿಳಿದುಕೊಳ್ಳಲಿಚ್ಛಿಸುವವನು),೩.ಅರ್ಥಾರ್ಥಿ(ಧನವನ್ನು ಬಯಸುವವನು), ೪.ಜ್ಞಾನಿ(ಭಗವಂತನನ್ನು ಬಲ್ಲವನು). ಇವರೆಲ್ಲರೂ ಸುಕೃತಿಗಳೇ ಅನ್ನೋ ಭಗವಂತ,ಮುಂದಿನ ಶ್ಲೋಕದಲ್ಲೇ ನಾನು ಜ್ಞಾನಿಗೆ ಅತ್ಯಂತ ಪ್ರಿಯ ಮತ್ತು ಅವನು ನನಗೆ ಪ್ರಿಯ ಅಂತ ಹೇಳುತ್ತಾನೆ. ಮಾತ್ರವಲ್ಲ, ಅದರ ಮುಂದಿನ ಶ್ಲೋಕದಲ್ಲಿ ಜ್ಞಾನಿಯು ನನ್ನ ಆತ್ಮವೇ ಎನ್ನುತ್ತಾನೆ. ಇಷ್ಟು ಮಾತ್ರವೇ ಅಲ್ಲದೇ ಜ್ಞಾನ ಮತ್ತು ಜ್ಞಾನಿ ಬಗ್ಗೆ ಗೀತೆಯಲ್ಲಿ ಅನೇಕ ಕಡೆ ಉಲ್ಲೇಖಿಸಿ, ಜ್ಞಾನದ ಹಿರಿಮೆಯನ್ನು ಹೊಗಳುತ್ತಾನೆ. ಉದಾಹರಣೆಗೆ, ಜ್ಞಾನಯೋಗ ಅಧ್ಯಾಯದಲ್ಲಿ "ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ". ಅಂದರೆ, ಈ ಲೋಕದಲ್ಲಿ,ಜ್ಞಾನಕ್ಕೆ ಸಮಾನವಾದ ಪವಿತ್ರ ವಸ್ತು ಯಾವುದೂ ಇಲ್ಲ ಅಂತ ಹೇಳುತ್ತಾ ಶ್ಲೋಕದ ಉತ್ತರಾರ್ಧದಲ್ಲಿ ಯೋಗದಿಂದ ಸಂಸಿದ್ಧಿ ಹೊಂದಿದವನು ಕಾಲಕ್ರಮದಲ್ಲಿ ಜ್ಞಾನವನ್ನು ತನ್ನಲ್ಲಿ ತಾನೇ ಹೊಂದುತ್ತಾನೆ. ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ, "ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ" ಅಂದರೆ, ಜ್ಞಾನವೆಂಬ ಅಗ್ನಿಯು ಕರ್ಮಗಳನ್ನೆಲ್ಲಾ ಭಸ್ಮ ಮಾಡಿ ಬಿಡುತ್ತದೆ ಎನ್ನುತ್ತಾನೆ. ಹೀಗೆ ಜ್ಞಾನದ ಬಗ್ಗೆ ಹೇಳುತ್ತಾರಲ್ಲ,ಜ್ಞಾನ ಮತ್ತು ಅಜ್ಞಾನ ಯಾವುದು ಅಂತ ಕೇಳಿದರೆ, ೧೩ನೇ ಅಧ್ಯಾಯದ ೨ನೇ ಶ್ಲೋಕದಲ್ಲೇ "ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್ಜ್ಞಾನಮ್ ಮತಂ ಮಮ" ಅಂದರೆ, ಕ್ಷೇತ್ರ ಕ್ಷೇತ್ರಜ್ಞರ ಜ್ಞಾನವೇ ನನ್ನ ಮತದಲ್ಲಿ ಜ್ಞಾನ ಎಂದು ಹೇಳಿ ಕ್ಷೇತ್ರ ಎಂದರೇನು, ಮತ್ತು ಕ್ಷೇತ್ರಜ್ಝ ಅಥವಾ ಆತ್ಮ ಎಂದರೇನು ಎಂದು ವಿಸ್ತಾರವಾಗಿ ವಿವರಿಸಿದ್ದಾನೆ. ಇನ್ನೊಂದು ಅರ್ಥದಲ್ಲಿ ಆತ್ಮ ಜ್ಞಾನದ ಹೊರತು ಉಳಿದ ಎಲ್ಲಾ ರೀತಿಯ ಜ್ಞಾನವೂ ಅಜ್ಞಾನವೇ ಎಂದಾಯ್ತು.
ಯಾಕೆ ಜ್ಞಾನಕ್ಕೆ ಇಷ್ಟೊಂದು ಮಹತ್ವ ಎಂದು ನೋಡಿದರೆ ,ಜನ್ಮ ಜನ್ಮಾಂತರಗಳಿಂದ ಅನೇಕ ಪಾಪ, ಪುಣ್ಯ ಕರ್ಮಗಳನ್ನು ಮಾಡುತ್ತಾ ಬರುತ್ತಿರುವ ನಾವು ಅದರ ಫಲವನ್ನು ಅನುಭವಿಸಲು ಮತ್ತೆ ಮತ್ತೆ ಹುಟ್ಟಿ ಸಾಯುತ್ತೇವೆ. ತಪ್ಪುಗಳನ್ನು ತಿದ್ದಿಕೊಳ್ಳಲು ಸಿಕ್ಕಿದ ಅವಕಾಶಗಳಲ್ಲಿ ಮತ್ತಿನ್ನೇನನ್ನೋ ಮಾಡಿ ಸಿಕ್ಕಿ ಹಾಕಿಕೊಳ್ಳುವ ಪಾಡು ನಮ್ಮದು. ಈ ಹಾದಿಯಲ್ಲಿ ಸಾಗುತ್ತಾ ಸಂಚಿತ ಕರ್ಮಗಳನ್ನು ನಾಶ ಮಾಡುವುದೆಂದರೆ ಮರೀಚಿಕೆಯನ್ನು ಬೆನ್ನತ್ತಿ ಹೋದ ಹಾಗೆ. ಇದಕ್ಕೊಂದು ಕೊನೆಯೇ ಇಲ್ಲವೇ ಎಂದರೆ ಇದೆ,ಅದು ನಮ್ಮೆಲ್ಲರಿಗೂ ಕೈಗೆಟಕುವ ಹಾಗೆ. ಶತಶತಮಾನಗಳಿಂದ ಕಗ್ಗತ್ತಲು ತುಂಬಿದ ಗವಿಯೊಳಗೆ, ಕತ್ತಲು ಹೋಗಿ ಬೆಳಕು ಬರುವ ಸೂಚನೆಗಳೇ ಇಲ್ಲವೇ ಎಂದರೆ,ಒಂದು ಬೆಂಕಿಕಡ್ಡಿ ಗೀರಿದರೆ ಸಾಕು, ಎಷ್ಟೇ ಶತಮಾನಗಳ ಕತ್ತಲೆಯಾಗಲೀ ಕ್ಷಣದಲ್ಲಿ ಬೆಳಕು ಬಂದು ಸತ್ಯ ದರ್ಶನವಾಗುತ್ತದೆ ಅಲ್ಲವೇ ಹಾಗೆಯೇ ಜ್ಞಾನಾಗ್ನಿ ಅಂದರೆ. ನಾವು ಎಷ್ಟೇ ಪಾಪಿಗಳಾಗಿದ್ದರೂ ಸಹಾ ಹಾದಿಹೋಕರನ್ನು ದರೋಡೆ ಮಾಡಿ ಕೊಲೆ ಮಾಡುತ್ತಿದ್ದ, ಮುಂದೆ ವಾಲ್ಮೀಕಿಯೇ ಆದ ರತ್ನಾಕರನಷ್ಟು ಪಾಪಿ ಅಂತೂ ಅಲ್ಲವೇ ಅಲ್ಲ ಅಲ್ಲವೇ? ಅದಕ್ಕೆ ಹೇಳುತ್ತಾರೆ,ಜ್ಞಾನಮಾರ್ಗ ಅಂದರೆ ವಿಹಂಗಮ ಮಾರ್ಗ ಅಥವಾ ಪಕ್ಷಿಗಳಂತೆ ನೇರವಾಗಿ ಹೋಗುವ ಮಾರ್ಗವಾದರೆ ಉಳಿದೆಲ್ಲಾ ಮಾರ್ಗಗಳು ಅಂದರೆ, ಮಾಡಿದ ಪಾಪಗಳನ್ನು ಪರಿಹಾರ ಮಾಡಿಕೊಳ್ಳುವ ಮಾರ್ಗಗಳಿಗೆ ಹೆಸರು ಪಿಪೀಲಿಕಾ ಮಾರ್ಗ. ಅಂದರೆ ಇರುವೆಯ ಮಾರ್ಗ ಎಂದು. ಊಹಿಸಿಕೊಳ್ಳಿ!! ನೂರು ಕಿಲೋಮೀಟರ್ ಹಾದಿಯನ್ನು ಸವೆಸಬೇಕಾದರೆ ಇರುವೆಗೆ ಬೆಟ್ಟಗಳನ್ನು ಹತ್ತಿ,ಕಣಿವೆಗಳನ್ನು ಇಳಿದು ಹೋಗುವಾಗ ಹಾದಿ ತಪ್ಪಿ ಸೇರಬೇಕಾದ ಗುರಿಯನ್ನು ತಲುಪದೇ ಇನ್ನೆಲ್ಲಿಗೋ ಹೋಗಿ ಸೇರುವ ಅವಕಾಶಗಳೇ ಹೆಚ್ಚು ಅಲ್ಲವೇ? ವಿಹಂಗಮದಂತೆ ಆತ್ಮ ಜ್ಞಾನದ ಮಾರ್ಗದಲ್ಲಿ ಸಾಗುವ ಆಸಕ್ತಿ, ಶಕ್ತಿ,ಅವಕಾಶಗಳು ಯಾರಿಗೆ ಒದಗಿ ಬರುತ್ತವೆಯೋ ಅವರೇ ಪುಣ್ಯವಂತರು.
"ವೇದಾಂತ ಲೈಫ್ ಇನ್ಸ್ಟಿಟ್ಯೂಟ್" ಎಂಬ ಸಂಸ್ಥೆಯ ಸಂಸ್ಥಾಪಕರಾದ ಪಾರ್ಥಸಾರಥಿಯವರ ಪುಸ್ತಕ ,"ವೇದಾಂತ ಟ್ರೀಟೈಸ್" ನಿಂದ ಕೆಲವು ಸಾಲುಗಳನ್ನು ಕನ್ನಡಕ್ಕೆ ಅನುವಾದಿಸಿ ಹೇಳಿ ಮುಗಿಸುತ್ತೇನೆ
"ಜಾಗ್ರತ್ ಸ್ವಪ್ನ ಸುಷುಪ್ತಿಗಳಲ್ಲದೇ ನಾಲ್ಕನೆಯ ಸ್ಥಿತಿಯಾದ ತುರೀಯವು ಪ್ರತಿಯೊಬ್ಬ ಮನುಷ್ಯನಿಗೂ ಪ್ರಾಪ್ತಿಯ ವ್ಯಾಪ್ತಿಯಲ್ಲಿಯೇ ಇದೆ ಎನ್ನುತ್ತದೆ ವೇದಾಂತ. ನಾವು ಎಲ್ಲಿದ್ದೇವೆಯೋ ಹೇಗಿದ್ದೇವೆಯೋ ಹಾಗೇಯೇ ಅದನ್ನು ಪಡೆಯಬಹುದು. ಅದೇ ಪರಮ ಪ್ರಾಪ್ತಿ ಅಥವಾ ಪಡೆಯಬೇಕಾದ ಪರಮಪದ. ಇಲ್ಲವಾದರೆ ಅತಿದೊಡ್ದ ನಷ್ಟವಾಗತ್ತದೆ ಎನ್ನುತ್ತದೆ ವೇದಾಂತ. ಆದರೆ ಯಾರಿಗೂ ಇದರ ಅರಿವೇ ಆಗುತ್ತಿಲ್ಲವಲ್ಲ ,ಎಲ್ಲರೂ ಏನೇನೋ ಪ್ರಾಪ್ತಿಗಾಗಿ ಹೋರಾಡುತ್ತಿರುತ್ತಾರಲ್ಲ ಎಂದು ಮರುಕ ಪಡುತ್ತದೆ ವೇದಾಂತ. ನಿಮ್ಮ ವ್ಯಕ್ತಿತ್ವವನ್ನು ನಿಮ್ಮೊಳಗಿನ ಆತ್ಮದ ಎತ್ತರಕ್ಕೇರಿಸಿಕೊಳ್ಳಿರಿ ,ಆಗ ಇಡೀ ವಿಶ್ವವನ್ನೇ ಉದ್ಧರಿಸಬಹುದು. ನಿಮ್ಮ ವ್ಯಕ್ತಿತ್ವ ಚಕ್ರದ ಅಕ್ಷವನ್ನು ತಲುಪಿರಿ, ಮೂರು ಲೋಕಗಳು ನಿಮ್ಮ ಸುತ್ತಲೂ ತಿರುಗುತ್ತಿರುವುದು ಭಾಸವಾಗುತ್ತದೆ. ಕ್ರಿಸ್ತ ಮಾಡಿದ್ದು ಹೀಗೆ, ಮಹಮ್ಮದ್, ಬುದ್ಧ, ರಾಮತೀರ್ಥರು ಮತ್ತು ಪ್ರಸಿದ್ಧಿಗೆ ಬರದಿರುವ ಅಸಂಖ್ಯಾತ ಜ್ಞಾನಿಗಳು ಮಾಡಿದ್ದೂ ಹೀಗೆ. ಅವರುಗಳ ಯಶಸ್ಸಿನ ಗುಟ್ಟೆಂದರೆ,ಅವರೊಳಗಿನ ಸತ್ಯವನ್ನು ಅವರು ಕಂಡುಕೊಂಡರು. ಹೊರಗಿನ ಯಾರನ್ನೋ ಅಥವಾ ಯಾವ ಶಕ್ತಿಯನ್ನೋ ಅವರು ಸಹಾಯ ಕೇಳಲಿಲ್ಲ. ಅವರುಗಳು ಯಾವ ಧರ್ಮಕ್ಕೋ ಅಥವಾ ಸಂಸ್ಥೆಗೋ ಸೇರಿದವರಾಗಿರಲಿಲ್ಲ. ಅವರುಗಳು ತಮ್ಮಿಂದಲೇ ತಮ್ಮನ್ನು ಉದ್ಧರಿಸಿಕೊಂಡರು. ಕ್ರಿಸ್ತ,ಯಾವ ಕ್ರೈಸ್ತ ಸಂಸ್ಥೆಗೂ ಸೇರಿದವನಲ್ಲ, ಅಂತೆಯೇ ಬುದ್ಧ, ಭೌದ್ಧ ಧರ್ಮದವನಾಗಿರಲಿಲ್ಲ. ಮಹಮ್ಮದ್,ಮಹಮ್ಮದೀಯನಲ್ಲ. ಅಂತೆಯೇ ಸ್ವಾಮಿ ರಾಮತೀರ್ಥರು ಯಾವ ಸಂಸ್ಥೆಯನ್ನೂ ನೆಚ್ಚಿರಲಿಲ್ಲ. ಆದರೂ ಅವರ ಸುತ್ತಲೂ ಸಂಸ್ಥೆಗಳು ಹುಟ್ಟಿದವು, ಕೋಟಿಗಟ್ಟಲೆ ಜನ ಗುಂಪು ಕೂಡಿದರು. ಈ ಸಂಸ್ಥೆಗಳಿಗೆ ಸೇರಿದ ಜನರು ಸಂಸ್ಥೆಯ ಹೆಸರಿನಲ್ಲಿ ಹಣವನ್ನು ಸಂಪಾದನ ಮಾಡಿ ಕಟ್ಟಡಗಳನ್ನು ಕಟ್ಟಿ ಸಂಸ್ಥೆಗಳನ್ನು ಬೆಳೆಸುತ್ತಾರೆ. ಈ ವಿಜಯವು ಅಧ್ಯಾತ್ಮಿಕ ಬೆಳವಣಿಗೆಯಲ್ಲ. ಸ್ವಲ್ಪ ಯೋಚಿಸಿ, ಯಾರು ಗುಂಪು ಕೂಡುತ್ತಾರೆ,ಯಾರು ಸಂಸ್ಥೆಗಳನ್ನು ಕಟ್ಟುತ್ತಾರೆ ಎಂದು. ನಿಜವಾದ ನಾಯಕರು ಅಥವಾ ಅಧ್ಯಾತ್ಮಿಕ ವ್ಯಕ್ತಿಗಳಲ್ಲ. ಅಧ್ಯಾತ್ಮಿಕ ದೈತ್ಯರು ಗುಂಪಿನಲ್ಲಿ ಬದುಕುವುದಿಲ್ಲ,ಒಬ್ಬಂಟಿಯಾಗಿರುತ್ತಾರೆ. ಪುಕ್ಕಲರು, ಅಶಕ್ತರು ಮಾತ್ರ ತಮ್ಮ ಸುತ್ತಲೂ ಗುಂಪು ಸೇರಿಸಿಕೊಳ್ಳುತ್ತಾರೆ. ಇದನ್ನು ಪ್ರಾಣಿ ಪ್ರಪಂಚದಲ್ಲಿ ಚೆನ್ನಾಗಿ ಗಮನಿಸಬಹುದು. ಕುರಿಗಳು ಗುಂಪುಗಳಲ್ಲಿ ಬದುಕುತ್ತವೆ, ಜಿಂಕೆಗಳು ತಮ್ಮ ಗುಂಪಿನಲ್ಲಿರುತ್ತವೆ, ಆನೆಗಳೂ ಅವುಗಳ ಗುಂಪಿನಲ್ಲಿರುತ್ತವೆ. ಸಿಂಹವು ಗುಂಪಿನಲ್ಲಿ ಓಡಾಡಿದ್ದನ್ನು ಕೇಳಿರುವುದಿಲ್ಲ, ಅದೇ ರೀತಿ ಪಕ್ಷಿಗಳ ರಾಜ ಗರುಡ ವಿಸ್ತಾರವಾದ ಆಗಸದಲ್ಲಿ ಒಬ್ಬಂಟಿಯಾಗಿ ತಾನೇ ತಾನಾಗಿ ತೇಲಾಡುತ್ತಿರುತ್ತದೆ. ಆದರೂ ಒಂದು ಸಿಂಹ ಅಥವಾ ಗರುಡ ಇತರ ಪ್ರಾಣಿ ಅಥವಾ ಪಕ್ಷಿಗಳ ಗುಂಪನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಇದೇ ಆತ್ಮಬಲ ಅಥವಾ ನಿಜವಾದ ಶಕ್ತಿ. ಈ ಶಕ್ತಿಯನ್ನೇ ನಾವು ಪಡೆದುಕೊಳ್ಳಬೇಕಾಗಿರುವುದು. ಜ್ಞಾನಮಾರ್ಗದಲ್ಲಿ ಸಾಗಿ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಿ,ಅದರಲ್ಲಿ ಬದುಕಿ, ನೀವು ಚಕ್ರವರ್ತಿಗಳಾಗುತ್ತೀರಿ! ದೇವರಾಗುತ್ತೀರಿ! ಇದನ್ನೇ ವೇದಾಂತ ಸಾರುತ್ತಿರುವುದು".