ದೇವೇಂದ್ರನ ಅಮರಾವತಿ

“ಸೃಷ್ಟಿಯಲ್ಲಿನ ಎಲ್ಲದರ ಉತ್ಕೃಷ್ಠತೆಯ ಪರಾಕಾಷ್ಠೆಯೇ ನಾನು” ಎಂದಿರುವ ಭಗವಂತ, ಗೀತೆಯಲ್ಲಿ, “ವೇದಗಳಲ್ಲಿ ನಾನು ಸಾಮವೇದ, ದೇವತೆಗಳಲ್ಲಿ ಇಂದ್ರ, ಇಂದ್ರಿಯಗಳಲ್ಲಿ ಮನಸ್ಸು, ಮತ್ತು ಭೂತಗಳಲ್ಲಿ ಚೈತನ್ಯ" ಎಂದಿದ್ದಾನೆ (ಭ.ಗೀ-೧೦-೨೨).
ಇಂತಹ ಪವಿತ್ರ ಸಾಮವೇದಕ್ಕೆ ಸೇರಿದ ಉಪನಿಷತ್ತು, ಕೇನೋಪನಿಷತ್ತು. ಜೀವ, ಜಗತ್ತು ಮತ್ತು ಈಶ್ವರರ ಸಂಬಂಧವನ್ನು ವಿವರಿಸುವ, ಹಂತ ಹಂತ ವಾಗಿ ಸಾಕ್ಷಾತ್ಕಾರದತ್ತ ಮುನ್ನಡೆಸುವ ಇತರೆಲ್ಲ ಉಪನಿಷತ್ತುಗಳ ಹಾದಿಯಲ್ಲಿಯೇ ಸಾಗುವ ಈ ಉಪನಿಷತ್ತಿನಲ್ಲಿ ಇಂದ್ರ ಮತ್ತು ದೇವತೆಯರದೊಂದು ಸುಂದರ ಕಥೆ ಹೀಗಿದೆ.
“ಬ್ರಹ್ಮವು ದೇವತೆಗಳಿಗಾಗಿ ಜಯಿಸಿತು. ಆ ಬ್ರಹ್ಮದ ಜಯದಲ್ಲಿ ದೇವತೆಗಳು ಮಹಿಮಾನ್ವಿತರಾದರು. ‘ಈ ಜಯವು ನಮ್ಮದೇ, ಈ ಮಹಿಮೆಯು ನಮ್ಮದೇ’ ಎಂದು ಅವರು ಯೋಚನೆ ಮಾಡಿದರು. ಬ್ರಹ್ಮವು ಇವರ ತಪ್ಪು ಭಾವನೆಯನ್ನು ತಿಳಿದುಕೊಂಡಿತು. ಅವರಿಗೆ ಕಾಣಿಸಿಕೊಂಡಿತು. ಈ ಯಕ್ಷವು ಯಾವುದೆಂಬುದನ್ನು ಅವರು ತಿಳಿಯಲಿಲ್ಲ. ದೇವತೆಗಳು ಅಗ್ನಿಯನ್ನು ಕುರಿತು, ‘ಹೇ ಜಾತವೇದ(ಹುಟ್ಟಿನಿಂದಲೇ ವೇದವನ್ನು ತಿಳಿದವನು), ‘ಈ ಯಕ್ಷವು ಯಾವುದೆಂಬುದನ್ನು ತಿಳಿದುಕೋ’ ಎಂದು ಹೇಳಿದರು. ‘ಹಾಗೆಯೇ ಆಗಲಿ’ ಎಂದು ಅಗ್ನಿಯು ಹೇಳಿದನು. ಅಗ್ನಿಯು ಅದರ ಸಮೀಪಕ್ಕೆ ಓಡಿದನು. ‘ನೀನು ಯಾರು’? ಎಂದು ಯಕ್ಷವು ಪ್ರಶ್ನಿಸಿತು. ‘ನಾನು ಅಗ್ನಿಯೇ ಆಗಿರುವೆನು, ನಾನು ಜಾತವೇದನೇ ಆಗಿರುವೆನು’ ಎಂದು ಹೇಳಿದನು. ಅಂತಹ ನಿನ್ನಲ್ಲಿ ಯಾವ ವಿಶೇಷತೆಯುಂಟು ಎಂದು ಯಕ್ಷವು ಪ್ರಶ್ನಿಸಲು ಅಗ್ನಿಯು, ‘ಈ ಭೂಮಿಯಲ್ಲಿ ಏನೇನಿದೆಯೋ ಇವೆಲ್ಲವನ್ನೂ ಸುಡಬಲ್ಲೆನು’ ಎಂದು ಉತ್ತರಿಸಿದನು. ಇದನ್ನು ಸುಡು ಎಂದು ಅವನ ಎದುರಿಗೆ ಒಂದು ಹುಲ್ಲು ಕಡ್ಡಿಯನ್ನು ಇಟ್ಟಿತು. ಅಗ್ನಿಯು ಸರ್ವ ವೇಗದಿಂದ ಅದರ ಬಳಿ ಓಡಿದನು; ಅದನ್ನು ಸುಡಲು ಶಕ್ತನಾಗಲಿಲ್ಲ. ಅವನು ಅಲ್ಲಿಂದಲೇ ಹಿಂತಿರುಗಿದನು. ‘ ಇದು ಯಾವ ಯಕ್ಷವು ಎಂಬುದನ್ನು ತಿಳಿಯಲು ಶಕ್ತನಾಗಲಿಲ್ಲ’ ಎಂದು ದೇವತೆಗಳಿಗೆ ಹೇಳಿದನು.
ಆನಂತರ ದೇವತೆಗಳು ವಾಯುವನ್ನು ಕುರಿತು, ಹೇ ವಾಯು, ‘ಈ ಯಕ್ಷವು ಯಾವುದೆಂಬುದನ್ನು ತಿಳಿದುಕೋ’ ಎಂದು ಹೇಳಿದರು. ‘ಹಾಗೆಯೇ ಆಗಲಿ’ ಎಂದು ವಾಯುವು ಹೇಳಿದನು. ವಾಯುವು ಅದರ ಸಮೀಪಕ್ಕೆ ಓಡಿದನು. ‘ನೀನು ಯಾರೆಂದು ಅವನನ್ನು ಯಕ್ಷವು ಪ್ರಶ್ನಿಸಿತು. ನಾನು ವಾಯುವೇ ಆಗಿರುವೆನು, ಮಾತರಿಶ್ವನೇ(ಅಂತರಿಕ್ಷದಲ್ಲಿ ಚಲಿಸುವವನು) ಆಗಿರುವೆನು ಎಂದು ಹೇಳಿದನು. ‘ಅಂತಹ ನಿನ್ನಲ್ಲಿ ಯಾವ ಮಹತ್ವವುಂಟು?’ ಎಂದು ಯಕ್ಷವು ಪ್ರಶ್ನಿಸಲು, ವಾಯುವು ‘ಈ ಭೂಮಿಯಲ್ಲಿ ಏನೇನಿದೆಯೋ ಇವೆಲ್ಲವನ್ನೂ ಎತ್ತಬಲ್ಲೆನು ಎಂದು ಹೇಳಿದನು. ಯಕ್ಷವು ಇದನ್ನು ಎತ್ತು ಎಂದು ಅವನ ಎದುರಿಗೆ ಒಂದು ಹುಲ್ಲುಕಡ್ಡಿಯನ್ನಿಟ್ಟನು. ವಾಯುವು ವೇಗದಿಂದ ಅದರ ಬಳಿಗೆ ಓಡಿದನು. ಆದರೆ ಅದನ್ನು ಎತ್ತಲು ಶಕ್ತನಾಗಲಿಲ್ಲ. ಅವನು ಅಲ್ಲಿಂದಲೇ ಹಿಂತಿರುಗಿದನು. ‘ಇದು ಯಾವ ಯಕ್ಷನೆಂದು ತಿಳಿಯಲು ಶಕ್ತನಾಗಲಿಲ್ಲ’ ಎಂದು ದೇವತೆಗಳಿಗೆ ಹೇಳಿದನು.
ದೇವತೆಗಳು ಅನಂತರ ಇಂದ್ರನನ್ನು ಕುರಿತು, ಹೇ, ಮಘವಂತನೇ(ಬಲವುಳ್ಳವನೇ), ಈ ಯಕ್ಷವು ಯಾವುದೆಂಬುದನ್ನು ತಿಳಿದುಕೋ ಎಂದು ಹೇಳಿದರು. ಇಂದ್ರನು ಅದರ ಸಮೀಪಕ್ಕೆ ಓಡಿದನು. ಅದು ಅವನಿಂದ ಮರೆಯಾಯಿತು. ಮರೆಯಾದ ಸ್ಥಳದಲ್ಲಿಯೇ ಇದ್ದ ಹೈಮವತಿಯೂ ಬಹು ಶೋಭಾಯಮಾನಳೂ ಸ್ತ್ರೀ ರೂಪಿಯೂ ಆದ ಉಮೆಯ ಸಮೀಪಕ್ಕೆ ಬಂದನು. ‘ಈ ಯಕ್ಷವು ಯಾವುದು’ ಎಂದು ಅವಳನ್ನು ಕೇಳಿದನು. ಉಮೆಯು ಹೇಳಿದಳು, ‘ಅದು ಬ್ರಹ್ಮ, ಬ್ರಹ್ಮದ ಜಯದಲ್ಲಿಯೇ ಹೀಗೆ ಮಹಿಮೆಯನ್ನು ಹೊಂದಿದಿರಿ’ ಎಂದಳು. ಉಮೆಯ ವಾಕ್ಯದಿಂದಲೇ ಇಂದ್ರನು ಅದು ಬ್ರಹ್ಮವೆಂದು ತಿಳಿದುಕೊಂಡನು. ಆದುದರಿಂದ ಅಗ್ನಿ, ವಾಯು, ಇಂದ್ರ ಎಂಬ ದೇವತೆಗಳು ಇತರ ದೇವತೆಗಳನ್ನು ಮೀರಿರುತ್ತಾರೆ, ಏಕೆಂದರೆ ಇದನ್ನು ಬ್ರಹ್ಮವೆಂದು ಮೊದಲನೆಯವರಾಗಿ ತಿಳಿದುಕೊಂಡರು. ಇಂದ್ರನು ಇತರ ದೇವತೆಗಳನ್ನು ಮೀರಿರುತ್ತಾನೆ. ಏಕೆಂದರೆ ಅವನು ಇದನ್ನು ಅತ್ಯಂತ ಹತ್ತಿರದಿಂದ ಸ್ಪರ್ಶಿಸಿದನು ಮತ್ತು ಇದನ್ನು ಬ್ರಹ್ಮವೆಂದು ಮೊದಲನೆಯದಾಗಿ ತಿಳಿದುಕೊಂಡನು.
ಇದೇನಿದು ಉಪನಿಷತ್ತಿನಲ್ಲಿಯೂ ಪುರಾಣದಲ್ಲಿರುವಂತೆ ಇಂತಹ ಕಥೆಯೂ ಬರಬಹುದೇ? ದೇವತೆಗಳ ಗರ್ವಭಂಗದ ಇಂತಹ ಕಥೆಯಲ್ಲಿ ಎಲ್ಲಿಯ ಜೀವ, ಜಗತ್ತು ಮತ್ತು ಈಶ್ವರರ ಸಂಬಂಧವೆನಿಸಬಹುದಲ್ಲವೇ? ಇಂದ್ರ ಮತ್ತು ದೇವತೆಗಳ ಕಥೆಗಳಂತೂ ಜನಜನಿತವೇ ಅಲ್ಲವೇ? ಇಂದ್ರನ ಅಮರಾವತಿಯು ದೇವತೆಗಳ ಭೋಗ ಭೂಮಿ. ಅಪ್ಸರೆಯರ ನೃತ್ಯಗಳಲ್ಲಿ ಎಲ್ಲಾ ದೇವತೆಗಳೂ ಸುಖವನ್ನನುಭವಿಸುತ್ತಾ ಸುರಾ ಪಾನ ಮಾಡುತ್ತಾ ಮೈ ಮರೆತು ಕಳೆಯುತ್ತಿರುವಾಗಲೇ ರಾಕ್ಷಸರು ದೇವಲೋಕವನ್ನು ದಾಳಿಯಿಟ್ಟಾಗ, ದೇವತೆಗಳು ದಿಕ್ಕಾಪಾಲಾಗಿ ಓಡಿ ವಿಷ್ಣು ಅಥವಾ ಶಿವನ ಮೊರೆಹೊಕ್ಕು ಸಹಾಯ ಪಡೆದು ರಕ್ಕಸರನ್ನು ಮಣಿಸಿ ತಮ್ಮ ಲೋಕವನ್ನು ಮರಳಿ ಪಡೆಯುವ ಕಥೆಗಳಂತೂ ಸಾಕಷ್ಟಿವೆ. ಇಂತಹ ಕಥೆಗಳು ಮಕ್ಕಳ ಕಥೆಗಳಲ್ಲೂ ಬರುತ್ತಿರುವುದರಿಂದ ಮಕ್ಕಳೂ ಹಿರಿಯರನ್ನು, ‘ಮದ್ಯಪಾನ ಮಾಡುವುದು ಕೆಟ್ಟದೆನ್ನುವಿರಿ, ಆದರೆ ದೇವತೆಗಳೇ ಅದನ್ನು ತೆಗೆದುಕೊಳ್ಳುವರಲ್ಲ?’ ಎಂದು ಪ್ರಶ್ನಿಸುತ್ತಾರೆ. ಇನ್ನು ಯಾರಾದರೂ ತಪೋ ಮಗ್ನರಾಗಿ ಬ್ರಹ್ಮಜ್ಞಾನವನ್ನೇ ಪಡೆಯುವ ಸಂದರ್ಭದಲ್ಲಿ ಇಂದ್ರನಿಗೆ ತನ್ನ ಪದವಿಗೆ ಸಂಚಕಾರ ಬಂದಂತೆನಿಸಿ ಅವರ ತಪೋ ಭಂಗವನ್ನು ಮಾಡಲೆತ್ನಿಸುವ ಕಥೆಗಳೂ ಸಾಕಷ್ಟಿವೆ.(ವಿಶ್ವಾಮಿತ್ರ, ಮೇನಕೆಯರ ಕಥೆಯನ್ನು ನೆನಪಿಸಿಕೊಳ್ಳಬಹುದು).
ಏನನ್ನು ಹೇಳ ಹೊರಟಿವೆ ಈ ಕಥೆಗಳು? ಯಾರು ಈ ದೇವತೆಗಳು ಮತ್ತು ಇಂದ್ರ? ಅವರಿಗೆ ನಮ್ಮೊಡನೆ ಏನು ಸಂಬಂಧ? ಎಲ್ಲಿದೆ ಈ ಅಮರಾವತಿ?
ಇಂದ್ರಿಯಗಳ ರಾಜನೇ ಇಂದ್ರನೆನ್ನುತ್ತಾರೆ. ಇಂದ್ರಿಯಗಳು ಎಂದರೆ ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು. ಈ ಇಂದ್ರಿಯಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿ ನಡೆಸುತ್ತಿರುವ ನಮ್ಮ ಮನಸ್ಸೇ ದೇವೇಂದ್ರ. ಇನ್ನು ಇಂದ್ರಿಯಗಳಾದ ಶ್ರೋತ್ರೇಂದ್ರಿಯ(ಕಿವಿ)ವನ್ನು ವಾಯುತತ್ವವೆನ್ನುತ್ತಾರೆ. ವಾಗೇಂದ್ರಿಯ(ಮಾತು)ವನ್ನು ಅಗ್ನಿತತ್ವವೆನ್ನುತ್ತಾರೆ. ಅದೇ ರೀತಿ ರಸನೇಂದ್ರಿಯ(ನಾಲಿಗೆ)ವನ್ನು ವರುಣ ತತ್ವವೂ ಮತ್ತು ಇತರ ಇಂದ್ರಿಯಗಳೆಲ್ಲ ಒಂದಿಲ್ಲೊಂದು ದೇವತೆಗಳ ತತ್ವವೇ ಆಗಿದ್ದು ಸದಾ ಈ ದೇವತೆಗಳ ಸಭೆಯೊಂದಿಗೆ ದೇವರನ್ನು ಮರೆತು ಜಯವೆಲ್ಲ ನಮ್ಮದೇ ಎಂದು ಭಾವಿಸುತ್ತಾ ಅಮಲಿನಲ್ಲಿರುವ ದೇವೇಂದ್ರನ ಅಮರಾವತಿಯೂ ನಮ್ಮ ಮನೋ ರಾಜ್ಯವಾದ ದೇಹವೇ ಹೊರತು ಬೇರೇನಲ್ಲ.
ಉಪನಿಷತ್ತಿನಲ್ಲಿ ಬರುವ ಕಥೆಯಂತೆ, ಬ್ರಹ್ಮತತ್ವಕ್ಕೆ ನಿಕಟವಾಗಿ ಹೋಗಿ ಅದನ್ನು ಮಾತಿನಲ್ಲಿ ಹೇಳಲು(ಗುರು ಉಪದೇಶದಂತೆ)ಪ್ರಯತ್ನಿಸಬಹುದು, ಕಿವಿಯಲ್ಲಿ ಅದನ್ನು ಕೇಳಲು(ಶಿಷ್ಯನ ಶ್ರವಣೇಂದ್ರಿಯದಿಂದ) ಪ್ರಯತ್ನಿಸಬಹುದು. ಆದರೆ ಅದರ ಅವಿರ್ಭಾವದ ಸಿಂಚನವಾಗುವುದು ಧ್ಯಾನದ ಅವಸ್ಥೆಯ ಮನಸ್ಸಿಗೇ ಆದ್ದರಿಂದ ಮನಸ್ಸು ಎಲ್ಲ ಇಂದ್ರಿಯಗಳಿಗಿಂತ ಶ್ರೇಷ್ಠವೆಂದಿರಬಹುದು ಅಥವಾ ರಾಜನೆಂದಿರಬಹುದು. ಅದರಿಂದಲೇ ಈ ಮೂರು ದೇವತೆಗಳೇ(ಅಗ್ನಿ, ವಾಯು ಮತ್ತು ಇಂದ್ರ) ಇತರ ದೇವತೆಗಳನ್ನು ಮೀರಿರುತ್ತಾರೆನ್ನುವುದಿರಬಹುದು.
ಸದಾ ಭೋಗದಲ್ಲಿಯೇ ಮೈಮರೆಯುವುದನ್ನು ಮನಸ್ಸು ಮತ್ತು ಇಂದ್ರಿಯಗಳು ಬಯಸುವುದನ್ನೇ, ಭೋಗದ ಪರಾಕಾಷ್ಠೆಗಳಾದ ಕಾಮ ಮತ್ತು ಮದ್ಯಪಾನದಿಂದ ಮೈಮರೆಯುವುದನ್ನು ದೇವೇಂದ್ರನ ಸಭೆಯಲ್ಲಿ ನಡೆಯುತ್ತಿರುವಂತೆ ಚಿತ್ರಿಸಿರಬಹುದು. ಹೀಗೆ ಮೈಮರೆತಿರುವಾಗಲೇ ಅರಿ ಷಡ್ವರ್ಗಗಳು (ರಾಕ್ಷಸರು) ಮುತ್ತಿಗೆ ಹಾಕಿ ಮನಸ್ಸು ಮತ್ತು ಇಂದ್ರಿಯಗಳು ನಮ್ಮ ಹತೋಟಿ ತಪ್ಪುವುದನ್ನೇ, ದೇವಲೋಕದಿಂದ ದಿಕ್ಕಾಪಾಲಾಗಿ ಓಡುವ ದೇವತೆಗಳನ್ನು ಪ್ರತಿನಿಧಿಸಿರಬಹುದು. ಈ ಹಂತದಲ್ಲಿಯಾದರೂ ಭಗವಂತನನ್ನು ನೆನೆದು ದೈನ್ಯತೆಯಿಂದ ಪ್ರಾರ್ಥಿಸಿದರೆ, ರಾಕ್ಷಸರನ್ನು ನಾಶ ಮಾಡಿ, ಮತ್ತೆ ನಮ್ಮ ಮನೋಸ್ಥಿತಿ ಕಾಯ್ದುಕೊಳ್ಳಲು ಕರುಣಾಮಯಿ ಭಗವಂತನು ಸಹಾಯ ಮಾಡುವನೆಂಬುದನ್ನು ಕಥೆಯ ರೂಪದಲ್ಲಿ ಹೇಳಿರಬಹುದು.
“ನ ತತ್ರ ಚಕ್ಷುರ್ಗಚ್ಛತಿ ನ ವಾಗ್ಗಚ್ಛತಿ ನೋ ಮನಃ"
“ಅಲ್ಲಿಗೆ(ಬ್ರಹ್ಮನ ಬಳಿ)ಕಣ್ಣು, ಮಾತು ಅಥವಾ ಮನಸ್ಸು ಹೋಗುವುದಿಲ್ಲ” ಎಂದು ಕೇನೋಪನಿಷತ್ತೇ ತಿಳಿಸುವುದರಿಂದ ಅವೆಲ್ಲ ದಿಕ್ಕು ತೋರಿಸುವ ದಿಕ್ಸೂಚಿಗಳಷ್ಟೇ ಆಗಬಹುದು, ಬ್ರಹ್ಮ ಸಂಸ್ಪರ್ಷವಾಗಬೇಕಾದರೆ ಇಂದ್ರಿಯಗಳ ಜೊತೆ ಮನೋಲಯವೇ ಆಗಬೇಕಾಗಿರುವುದರಿಂದಲೇ, ಬ್ರಹ್ಮಜ್ಞಾನದ ಹಂತದಲ್ಲಿ ಮನಸ್ಸು ತನ್ನ ಪದವಿಯನ್ನು ಕಾಯ್ದುಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸುವುದನ್ನೇ, ಈ ಹಂತದಲ್ಲಿ ಬರಬಹುದಾದ ಮನಸ್ಸಿನ ಆಮಿಷಗಳನ್ನು, ಇಂದ್ರನು ತಪೋಭಂಗ ಮಾಡುವ ಕಥೆಗಳು ಪ್ರತಿನಿಧಿಸುತ್ತವೆಂದು ತಿಳಿದುಕೊಂಡರೆ, ಇಂತಹ ಪುರಾಣದ ಕಥೆಗಳಿಗೆ ಒಂದು ಹೊಸ ಆಯಾಮವೇ ದೊರೆಯಬಹುದಲ್ಲವೇ. ಅಷ್ಟೇ ಅಲ್ಲದೇ ನಮ್ಮ ಕಥೆಯನ್ನೇ ವೈವಿಧ್ಯಮಯವಾಗಿ ಕಥಾ ರೂಪದಲ್ಲಿ ವಿವರಿಸಿರುವ ನಮ್ಮ ಪೂರ್ವಿಕರ ಬಗ್ಗೆ ಮತ್ತು ನಮ್ಮ ಧರ್ಮದ ಬಗ್ಗೆ ಉನ್ನತ ಭಾವನೆ ಮೂಡಲು ಸಾಧ್ಯವಲ್ಲವೇ? ಕಿರಿಯರಿಗೆ ಗೊಜಲು ಗೊಜಲೆನಿಸುವ ಈ ರೀತಿಯ ಕಥೆಗಳನ್ನು ಪ್ರಶ್ನಿಸುವ ಬುದ್ಧಿ ಬಂದಾಗ ಅದನ್ನು ಅವರ ತಿಳಿವಿನ ಮಟ್ಟಕ್ಕೆ ತಿಳಿಸಿ ಹೇಳಿದರೆ ನಮ್ಮ ಧರ್ಮದ ಬಗ್ಗೆ ಅವರಲ್ಲಿ ಹೆಚ್ಚಿನ ಅಭಿಮಾನ ಮೂಡಬಹುದಲ್ಲವೇ?