ಕುಂಟ ನಾಯಿ ಮರಿ

ದೂರದ ಫಾರ್ಮ್ ಹೌಸ್ ಬಳಿಯಲ್ಲಿ "ನಾಯಿ ಮರಿಗಳು ಮಾರಾಟಕ್ಕಿವೆ " ಎಂದು ಫಲಕವೊಂದು ತೂಗಾಡುತ್ತಿತ್ತು. ಡ್ರೈವರ್ ಗೆ ಕಾರ್ ನಿಲ್ಲಿಸಲು ಹೇಳಿ ಪುಟ್ಟ ಬಾಲಕ ಕಾರಿನಿಂದಿಳಿದು ಅಲ್ಲಿದ್ದ ಮಾಲೀಕನನ್ನು ಕಂಡು "ನನಗೆ ಒಂದು ನಾಯಿಮರಿ ಬೇಕಿದೆ ಕೊಳ್ಳಬಹುದೇ" ಎಂದ, ಬೋರ್ಡ ಹಾಕಿರುವುದೇ ಉಂಟಂತೆ ಸರಿ "ಒಂದು ನಾಯಿಮರಿಗೆ ಹತ್ತು ಡಾಲರ್ ಆಗುತ್ತದೆ" ಎಂದ ಮಾಲೀಕ, ಬಾಲಕ ತನ್ನ ಜೇಬಿನಡಿಗೆ ಕೈ ಹಾಕಿ ಹುಡುಕಿ ತಡಕಿ "ನನ್ನ ಬಳಿ ಇರುವುದೇ ಎಂಟು ಡಾಲರ್ ಮಾತ್ರ, ಆಗಬಹುದಾ" ಎಂದು ಮುಖ ಪೆಚ್ಚಗೆ ಮಾಡಿ ಹೇಳಿದ. ಹೋಗಲಿ ಮಕ್ಕಳಿಗೆ ತಾನೆ ಎಂದು ಮಾಲೀಕ ನಾಯಿ ಗೂಡಿನ ಕಡೆ ಜೋರಾಗಿ ಶಿಳ್ಳೆ ಹೊಡೆದ, ಉಣ್ಣೆಯ ಉಂಡೆಗಳಂತೆ ಗುಂಡುಗುಂಡಾದ ನಾಯಿ ಮರಿಗಳು ಗುಡುಗುಡು ಓಡಿ ಬಂದವು,"ನಿನಗೆ ಯಾವುದು ಬೇಕೇ ಅರಿಸಿಕೋ" ಎಂದ ಮಾಲೀಕ,ಅಷ್ಟರಲ್ಲಿ ಗೂಡಿನ ಕಡೆಯಿಂದ ಮತ್ತೊಂದು ಮರಿ ನಿಧಾನವಾಗಿ ಬೇರೆ ಮರಿಗಳ ಗುಂಪನ್ನು ಸೇರಲು ಕಷ್ಟಪಟ್ಟು ಓಡುತ್ತಾ ಬರುವುದನ್ನು ಕಂಡು ಬಾಲಕ "ನನಗೆ ಆ ಮರಿ ಬೇಕು" ಎಂದ, "ಅಯ್ಯೋ ಅದು ಬೇಡ ಮಗು ನಿನಗೆ ಅದರ ಜೊತೆ ಆಡಲು ಅಷ್ಟು ಸೂಕ್ತವಲ್ಲ ನೋಡು ಅದು ಕುಂಟ ನಾಯಿ ಮರಿ" ಎಂದ.
ತಕ್ಷಣ ಬಾಲಕ ತನ್ನ ಬಲಗಾಲಿನ ಪ್ಯಾಂಟನ್ನು ಮೇಲಕ್ಕೆ ಸರಿಸಿ ಸ್ಟೀಲ್ ನಿಂದ ಮಾಡಿದ ತನ್ನ ಕೃತಕವಾದ ಕಾಲನ್ನು ತೋರಿಸಿ "ಇರಲಿ ನನಗೂ ಅಷ್ಟೇನು ಜೋರಾಗಿ ಓಡಲು ಸಾಧ್ಯವಿಲ್ಲ ಅದರ ಕಷ್ಟವನ್ನು ನಾನೊಬ್ಬನೇ ಅರ್ಥಮಾಡಿಕೊಳ್ಳಬಲ್ಲೆ" ಎಂದು ಓಡಿಬಂದು ಬಾಗಿ ಬಾಚಿ ತಬ್ಬಿ ಆ ಮರಿಯನ್ನು ಮನೆಗೆ ಕರೆದುಕೊಂಡು ಹೋದ.