ಉಪಕಾರಿ

ಹಿಂದೊಮ್ಮೆ ಇಬ್ಬರು ವ್ಯಾಪಾರಿಗಳು ಕಾಲ್ನಡಿಗೆಯಲ್ಲೇ ಊರೂರು ಅಲೆಯುತ್ತಾ ತಮ್ಮಕೆಲಸ ಮಾಡುತ್ತಿರಲು, ಮಧ್ಯಾಹ್ನದ ಉರಿಬಿಸಿಲನ್ನು ತಡೆಯಲಾರದೆ ಒಂದು ಮರದ ಬಳಿ ದಣಿವು ಆರಿಸಿಕೊಳ್ಳಲು ಕುಳಿತರು. ತಂಪಾದ ನೆರಳಿನಲ್ಲಿ ಕುಳಿತಲ್ಲೇ ತಾವು ತಂದ ಬುತ್ತಿ ಬಿಚ್ಚಿ ಹಸಿವನ್ನೂ ನಿವಾರಿಸಿಕೊಂಡರು. ಹಾಗೇ ಮರಕ್ಕೆ ಒರಗಿ ಸ್ವಲ್ಪ ವಿಶ್ರಾಂತಿ ಪಡೆದರು. ಸ್ವಲ್ಪ ಸಮಯದ ನಂತರ ಒಬ್ಬ ಮರದ ಕಡೆ ನೋಡುತ್ತಾ "ಅರೆ ಇದೇನು ಮರವಯ್ಯಾ ಒಂದು ಹಣ್ಣೂ ಬಿಡುವುದಿಲ್ಲ' ಅಂದ.ಅದಕ್ಕೆ ಮತ್ತೊಬ್ಬ `ಹಣ್ಣು ಬಿಡುವುದಿರಲಿ ಮರ ಕೂಡಾ ಗಟ್ಟಿ ಇಲ್ಲ, ಯಾವ ಕೆಲಸಕ್ಕೂ ಉಪಯೋಗಿಸಲು ಯೋಗ್ಯವಿಲ್ಲ, ಶುದ್ಧ ಅಪ್ರಯೋಜಕ ಮರ' ಎಂದ. ತಕ್ಷಣ ಆ ಮರಕ್ಕೆ ಕೋಪ ಬಂದು 'ಎಲೈ ಮಾನವರೇ ಈಗ ನನ್ನ ನೆರಳನ್ನಾದರೂ ಅನುಭವಿಸುತ್ತಿದ್ದೀರಲ್ಲಾ,ಅದಕ್ಕಾದರೂ ಕೃತಜ್ಞತೆ ಬೇಡವೆ ?'ಎಂದುಕೊಂಡು ತನ್ನ ಒಂದು ಒಣಗಿದ್ದ ಟೊಂಗೆಯನ್ನು ಕಳಚಿ ಬಿಟ್ಟಿತು.ಅದು ಆವ್ಯಾಪಾರಿಗಳ ಮೇಲೆ ಬಿದ್ದಿತು,ಕೂಡಲೇ ಅವರು ಅಲ್ಲಿಂದ ಜಾಗ ಖಾಲಿ ಮಾಡಿದರು.