ಗೌತಮ ಬುದ್ಧ

ಗೌತಮ ಬುದ್ಧನು ತನ್ನೊಡನೆ ಐನೂರು ಅನುಯಾಯಿಗಳನ್ನು ಕರೆದುಕೊಂಡು ವೈಶಾಲಿ ಎಂಬ ಪುಟ್ಟ ಹಳ್ಳಿಯ ಕಡೆಯಿಂದ ಹೊರಟಿದ್ದ.ಒಮ್ಮೆ ಹಿಂತಿರುಗಿ ಹಳ್ಳಿಯನ್ನು ನೋಡಿದ. ಅದನ್ನು ಕಂಡ ಒಬ್ಬ ಅನುಯಾಯಿ "ಯಾಕೆ ನೀವಿ ಆಹಳ್ಳಿಯಕಡೆ ನೋಡುತ್ತಿದ್ದೀರಿ? ಎಂದು ಪ್ರಶ್ನಿಸಿದ.ಅದಕ್ಕೆ ಗೌತಮ ಬುದ್ಧನು"ನಾವು ಆ ಹಳ್ಳಿಗೆ ಹೋಗಬೇಕು" ಎಂದ. "ಅರೆ ಆ ಹಳ್ಳಿ ಬಹಳ ಚಿಕ್ಕದು ಸ್ವಲ್ಪವೇ ಮನೆಗಳಿವೆ, ನಾವೆಲ್ಲಾ ಅಲ್ಲಿಗೆ ಹೋದರೆ ಕೂರುವುದಾದರೂ ಎಲ್ಲಿ?" ಎಂಬ ಪ್ರಶ್ನೆಗಳು ಕೇಳಿಬಂದರೂ, ಬುದ್ಧ ಮೌನವಾಗಿದ್ದು ನಂತರ "ನಡೆಯಿರಿ ವೈಶಾಲಿಯ ಕಡೆಗೆ" ಎಂದು ಆಜ್ಞೆ ಮಾಡಿದ. ಹಳ್ಳಿಯನ್ನು ಸಮೀಪಿಸುತ್ತಿದ್ದಂತೆ ಒಬ್ಬ ಯುವತಿ ಹೊಲದಲ್ಲಿದ್ದ ತನ್ನ ತಂದೆಗೆ ಊಟ, ನೀರು ಕೊಡಲು ಹೊರಟಿದ್ದಳು. ಬುದ್ಧನನ್ನು ಕಂಡವಳೇ ಅವನಿಗೆ ನಮಸ್ಕರಿಸಿ "ಸ್ವಾಮಿ ನಾನು ಹಿಂತಿರುಗಿ ಬರುವವರೆಗೂ ನೀವು ಪ್ರವಚನವನ್ನು ಆರಂಭ ಮಾಡಬೇಡಿ"ಎಂದು ಬೇಡಿದಳು.
ಹಳ್ಳಿಯ ಜನರಿಗೆ ಆಶ್ಚರ್ಯವೋ ಆಶ್ಚರ್ಯ ಎಲ್ಲರೂ ಬುದ್ಧನನ್ನು ನೋಡಲು ದೂರದೂರುಗಳಿಂದ ಬಂದರೆ ಇಲ್ಲಿ ಬುದ್ಧನೇ ನಮ್ಮೂರಿಗೆ ಬಂದಿದ್ದಾನೆ ಎಂಬ ಆನಂದದಿಂದ ಊಟ ಉಪಚಾರಗಳನ್ನು ಬಲುಬೇಗ ಸಿದ್ಧ ಮಾಡಿದರು.ಎಲ್ಲ ಅನುಯಾಯಿಗಳೂ ಕೂರಲು ಸಾಕಾಗುವಷ್ಟು ಸ್ಥಳಾವಕಾಶವಾಯಿತು.ಹಳ್ಳಿಯ ಮುಖ್ಯಸ್ಥನು ಎದ್ದುನಿಂತು ಸ್ವಾಗತವನ್ನು ಕೋರಿ ಬುದ್ಧನಿಗೆ ಪ್ರವಚನ ಆರಂಭಿಸಲು ಕೋರಿದ. ಆದರೆ ಬುದ್ಧ ಸ್ವಲ್ಪ ಕಾಲ ಮಾತಾಡಲೇ ಇಲ್ಲ ,ಎಲ್ಲೆಲ್ಲೂ ಮೌನ ಆವರಿಸಿತು, ತುಸು ಹೊತ್ತಿನ ಬಳಿಕ ಯುವತಿ ಓಡೋಡಿ ಬುದ್ಧನ ಮಾತು ಕೇಳಲು ಬಂದು ಕುಳಿತಳು.ತಕ್ಷಣ ಬುದ್ಧನ ಮುಖ ಕಮಲದಂತೆ ಅರಳಿತು,ತನ್ನ ಹಿತನುಡಿಗಳ ಉಪದೇಶವನ್ನು ಆರಂಭಿಸಿದ."ನಾನು ಈ ಹಳ್ಳಿಗೆ ಬಂದದ್ದೇ ಈ ಯುವತಿಗಾಗಿ,ಆಕೆಗೆ ಆಧ್ಯಾತ್ಮದಲ್ಲಿರುವ ಇರುವ ಆಸಕ್ತಿ ,ಆಸೆ ನನ್ನನ್ನೇ ಇಲ್ಲಿಗೆ ಬರಮಾಡಿತು .ಆಕೆಯೇ ನಿಜವಾದ ಅನುಯಾಯಿ"ಎಂದ. ಆಕೆಯಿಂದ ಇಡೀ ಹಳ್ಳಿಗೇ ಜ್ಞಾನೋದಯವಾಯಿತು.
ನೀತಿ: ಯಾವ ವ್ಯಕ್ತಿಯು ವಿದ್ಯೆ ಜ್ಞಾನಗಳಿಗೆ ಬಾಯಾರಿಕೆಯಿಂದ, ಹಸಿವಿನಿಂದ, ಆಸೆಯಿಂದ, ಆಸಕ್ತಿಯಿಂದ ಕಾದು ಕಲಿಯುತ್ತಾರೋ ಅಂತಹರು ನೀರಿನ ಬಳಿಗೆ ಹೋಗುವಷ್ಟಿಲ್ಲ ನೀರೇ ನದಿಯಾಗಿ ಅವರಿರುವಲ್ಲಿಗೆ ಹರಿದು ಬರುತ್ತದೆ.