ಏಳು ಬಜ್ಜಿ

ಹಿರಿಯ ದಂಪತಿಗಳಿಬ್ಬರು ತಮ್ಮ ಇಳಿ ವಯಸ್ಸಿನಲ್ಲಿ ಹಳ್ಳಿಯೊಂದರಲ್ಲಿ ವಾಸವಿದ್ದರು.ಮನೆಬಿಟ್ಟು ಪೇಟೆ ಸೇರಿದ ಮಕ್ಕಳು ಇವರನ್ನು ಕಡೆಗಣಿಸಿದ್ದರು. ಹಳ್ಳಿಯ ಜನರ ಪ್ರೀತಿ ವಿಶ್ವಾಸದೊಂದಿಗೆ ಕಾಲ ಕಳೆಯುತ್ತಿದ್ದು, ಬರುತ್ತಿದ್ದ ಅಲ್ಪ ಪಿಂಚಣಿಯಲ್ಲೇ ಬದುಕಿದ್ದರು. ಚಳಿಗಾಲದ ಒಂದು ದಿನ ಮನೆಯಲ್ಲಿ ಅವರಿಗೆ ಬಿಸಿಬಿಸಿಯಾಗಿ ಬಜ್ಜಿ ಮಾಡಿತಿನ್ನುವ ಆಸೆ. ಸರಿ ಇದ್ದ-ಬದ್ದ ತರಕಾರಿ ಹಿಟ್ಟುಕಲಸಿ ಸ್ವಲ್ಪವೇ ಎಣ್ಣೆಯಲ್ಲಿ ಒಟ್ಟು ಏಳೇ ಏಳು ಬಜ್ಜಿ ಕರೆದರು. ತಟ್ಟೆಯಲ್ಲಿಟ್ಟು ತಿನ್ನುವ ಸಮಯ, ಮುದುಕ ತನ್ನ ಹೆಂಡತಿಗೆ ನೀನು ನಾಲ್ಕು ತಿನ್ನು ನಾನು ಮೂರು ತಿನ್ನುವೆ ಅಂದನು.ಆದರೆ ಆಕೆಯದೂ ಹಟ ಬೇಡ ನೀವೇ ನಾಕು ತಿನ್ನಿ ನಾನು ಮೂರು ತಿನ್ನುವೆ, ನಾಳೆ ಮಾಡಿದಾಗ ನಾನೇ ಒಂದು ಹೆಚ್ಚಾಗಿ ತಿನ್ನುವೆ ಎಂದಳು. ಹೀಗೇ ವಾದ ವಿವಾದ ಬೆಳೆದು ಬಜ್ಜಿ ತಣ್ಣಗಾಗಿ ಮಲಗುವ ಸಮಯವಾಯಿತು.ಇಬ್ಬರೂ ಒಂದು ಒಪ್ಪಂದಕ್ಕೆ ಬಂದರು ಯಾರು ಬೆಳಿಗ್ಗೆ ಮೊದಲು ಏಳುವರೋ ಅವರಿಗೆ ನಾಲ್ಕು ಬಜ್ಜಿ ಎಂದು.
ಕೋಳಿ ಕಾಗೆ ಕೂಗಿ, ಸೂರ್ಯ ನೆತ್ತಿಗೆ ಬರುವ ಸಮಯವಾದರೂ ಇಬ್ಬರೂ ಏಳಲೇ ಇಲ್ಲ.ಸುತ್ತಲಿನ ಜನ ಮುದುಕರು ಹೊರಗೆ ಕಾಣದೆ ಬಾಗಿಲು ತಟ್ಟಿದರು. ಆಗ ಅವರು ಹಾಸಿಗೆಯಲ್ಲೇ ಮಾತಾಡಿಕೊಳ್ಳುತ್ತಿದ್ದರು "ನೀನೇ ನಾಲ್ಕು ತಿನ್ನಬಹುದಾಗಿತ್ತು,ಈಗ ನೋಡು ಬಜ್ಜೀನೂ ತಣ್ಣಗಾಯ್ತು ಎಲ್ಲಾರೂ ಬಂದರು" ಈ ಮಾತನ್ನು ಬಾಗಿಲ ಬಳಿ ಇನ್ನೇನು ಕೊಡಲಿ ಸಲಾಕೆಗಳಿಂದ ಬಾಗಿಲು ಮುರಿಯಲು ಹೊರಟ ಜನ ಕೇಳಿ ಓಹೋ ಮುದುಕರು ಸತ್ತು ದೆವ್ವಗಳಾಗಿದ್ದಾರೆ ಎಂದು ಕೂಗುತ್ತಾ ಓಡಿದರು ಅವರಿಗೆ ನಿಜ ಸಂಗತಿ ತಿಳಿಸಲು ಇವರೂ ಅವರ ಬೆನ್ನಟ್ಟಿದರು.ಕಡೆಗೆ ನಡೆದ ವಿಚಾರ ತಿಳಿದು ಎಲ್ಲರೂ ನಕ್ಕರು.