ಸರ್ವಜ್ಞ (ಒ, ಓ)
ಒಂದರ ಮೊದಲೊಳಗೆ | ಬಂದಿಹುದು ಜಗವೆಲ್ಲ |
ಒಂದರ ಮೊದಲನರಿದರೆ ಜಗ ಕಣ್ಣ |
ಮುಂದೆ ಬಂದಿಹುದು ಸರ್ವಜ್ಞ |
"ಒಮ್ಮೆಯುಂಡವ ತ್ಯಾಗಿ ಇಮ್ಮೆಯುಂಡವ ಭೋಗಿ |
ಬಿಮ್ಮಗುಂಡರವ ರೋಗಿ, ಯೋಗಿ ತಾ |
ಸುಮ್ಮನಿರುತಿಹನು ಸರ್ವಜ್ಞ ||"
"ಒಳಗಣ ಜ್ಯೋತಿಯ | ಬೆಳಗ ಅರಿದಾತಂಗೆ |
ಬೆಳಗಾದುದೇಳು ಬೇಹಾರಕೆಂದೆಂಬಾ |
ಕಳವಳವದೇಕೆ ? ಸರ್ವಜ್ಞ |"
"ಒಡಲಿಡಲು ಗಳಿಸಿದ | ಒಡವೆಗಳು ಒಡನಿರಲು |
ಕೊಡದುಣ್ಣದಿಟ್ಟು ಮಡಿದರೆ ಒಡವೆಯ |
ನೊಡನೆ ಹೂಳುವರೆ ಸರ್ವಜ್ಞ |"
"ಒಬ್ಬನರಿದರೆ ಸ್ವಾಂತ | ಇಬ್ಬರರಿದರೆ ಏಕಾಂತ |
ಇಬ್ಬರಿಂದನೊಬ್ಬನರಿದು ಬೇರೊಬ್ಬನಿಂ |
ಹಬ್ಬಿ ಲೋಕಾಂತ ಸರ್ವಜ್ಞ |"
"ಒಬ್ಬನಲ್ಲದೆ ಜಗಕೆ | ಇಬ್ಬರುಂಟೇ ? ಮತ್ತೆ |
ಒಬ್ಬ ಸರ್ವಜ್ಞ ಕರ್ತ ನೀ ಜಗಕೆಲ್ಲ |
ಒಬ್ಬನೆ ದೈವ ಸರ್ವಜ್ಞ |"
ಒಲ್ಲದ ಹೆಣ್ಣಿಂದ | ಗೆಲ್ಲದ ಜೂಜಿಂದ |
ಸಲ್ಲದೋಲಗದ ಬದುಕಿಂದ ಅರಿಯಿರಿದು |
ಕೊಲ್ಲ ಲೇಸೆಂದ ಸರ್ವಜ್ಞ |
"ಓದಿದ ಓದು ತಾ | ಮೇದ ಕಬ್ಬಿನ ಸಿಪ್ಪೆ |
ಓದಿನ ಒಡಲನರಿದಿಹರೆ ಸಿಪ್ಪೆ ಕ |
ಬ್ಬಾದಂತೆ ಕಾಣೊ ! ಸರ್ವಜ್ಞ |"
ಓಕಾರ ಮುಖವಲ್ಲ | ಆಕಾರವದಕಿಲ್ಲ |
ಆಕಾಶದಂತೆ ಅಡಗಿಹುದು ಪರಬೊಮ್ಮ |
ತಾ ಕಾಣದಯ್ಯ ಸರ್ವಜ್ಞ |