Most Viewed
ಸುಗಮಗಾನ ಸಮಾಜ
Sugama Gaana Samaja
ಘಮ ಘಮ ಸುಗಮ
Ghama Ghama Sugama
ಸುಗಮ ಹಾಸ್ಯ
Sugama Hasya
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಸುಗಮ ಆರೋಗ್ಯ
Sugama Aarogya
ಕನ್ನಡ ಪಾಠ ಶಾಲೆ
Kannada School
Useful links
- Kannada Calendar
- 2011 Hindu festival dates
- NSW Holiday List 2011-12
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಭಕ್ತಿ-ಸುಗಮ-ಮುಕ್ತಿ Bhakti Sugama Muktiಪರಿಚಯ Introduction
ಆಧ್ಯಾತ್ಮವು ಜೀವನದ ಅಂತಿಮ ಸತ್ಯ. ಭಗವಾನ್ ಬುದ್ಧನನ್ನು ಅವನ ಮೆಚ್ಚಿನ ಶಿಷ್ಯ ಆನಂದ ಒಮ್ಮೆ ಕೇಳಿದ, "ಪ್ರಭು ಆಧ್ಯಾತ್ಮ ಅಂದರೆ ಏನು ಹಾಗೂ ಅದರ ಹಿನ್ನೆಲೆ ಹಾಗೂ ವ್ಯಾಪ್ತಿ ಏನು?" ಬುದ್ಧ ನಕ್ಕು ಹೇಳಿದ, "ಜೀವನ ಹಾಗೂ ಆಧ್ಯಾತ್ಮ ಬೇರೆ ಬೇರೆ ಅಲ್ಲ. ಎಂದು ಆಧ್ಯಾತ್ಮ ಜೀವನ-ವಿಮುಖಿಯಾಗುತ್ತೋ ಅಂದು ಅದು ಜೀವವಿಲ್ಲದ ಬರಿ ಒಣ ಕಟ್ಟಿಗೆಯಾಗುತ್ತೆ. ಜೀವನವು ಏನೆಲ್ಲವನ್ನು ಒಳಗೊಂಡಿದೆಯೋ ಆಧ್ಯಾತ್ಮವು ಅದೆಲ್ಲವನ್ನೂ ಒಳಗೊಂಡಿದೆ ಹಾಗೂ ಅದೇ ಅದರ ವ್ಯಾಪ್ತಿ". ಈ ಉತ್ತರವು ಸಂಕ್ಷಿಪ್ತವಾಗಿದ್ದರೂ ಬಹಳ ಗಹನವಾಗಿದೆ. ಆಧ್ಯಾತ್ಮವು ನಮ್ಮ ಸನಾತನ ಧರ್ಮದ ಜೀವಾಳವೇ ಆಗಿದೆ. ಅದೇ ಬೇರೆ ಸಂಸ್ಕೃತಿಗಳೊಡನೆ ಹೋಲಿಸಿದರೆ ನಮ್ಮ ಸಂಸ್ಕೃತಿಯ ವೈಶಿಷ್ಟ್ಯವೂ ಆಗಿದೆ.
ಕನ್ನಡದಲ್ಲಿ ಆಧ್ಯಾತ್ಮ-ಸಾಹಿತ್ಯವು, ಧಾರ್ಮಿಕ-ಸಾಹಿತ್ಯದೊಡನೆ ಮೇಳೈಸಿ ವಿಶಿಷ್ಟ ಪ್ರಕಾರವಾಗಿ ರೂಪುಗೊಂಡಿದೆ. ಇದಕ್ಕೆ ದಾಸ-ಸಾಹಿತ್ಯ, ಶಿವ-ಶರಣರ ವಚನಗಳು, ಸರ್ವಜ್ಞನ ವಚನಗಳು, ಷರೀಫನ ಪದ್ಯಗಳು, ಮಂಕುತಿಮ್ಮನ ಕಗ್ಗ...ಇನ್ನೂ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ ಪ್ರಚಾರಗೊಂಡಿದೆ. ಕನ್ನಡ ಹಾಗೂ ಕನ್ನಡ ಸಾಹಿತ್ಯವು ಭಕ್ತಿ ಹಾಗೂ ಆಧ್ಯಾತ್ಮಸಾಹಿತ್ಯವಿಲ್ಲದೆ ಅಪೂರ್ಣವೆಂದೇ ಹೇಳಬೇಕು. ವ್ಯಕ್ತಿಯ ಸಂಪೂರ್ಣ ಬೆಳವಣಿಗೆಗೆ ಭಕ್ತಿ ಹಾಗೂ ಆಧ್ಯಾತ್ಮ ಎರಡೂ ಅತ್ಯಗತ್ಯ. ನಮ್ಮ ಭಕ್ತಿ-ಸುಗಮ-ಮುಕ್ತಿ ಬಳಗದಲ್ಲಿ ಈ ಎರಡಕ್ಕೂ ಆದ್ಯತೆ. ಹಬ್ಬ ಹರಿದಿನಗಳ ಮಹತ್ವ, ವಿವಿಧ ಭಕ್ತಿ ಪಂಥಗಳನ್ನು ಕುರಿತಂತೆ ಲೇಖನಗಳು, ನಮ್ಮ ಹಾಗೂ ಸೋದರ ಬಳಗಗಳಲ್ಲಿನ ವಿವಿಧ ಸ್ಥಳೀಯ ಆಚರಣೆಗಳು, ಇವುಗಳನ್ನು ಕುರಿತಂತೆ, ಸ್ಥಳೀಯ ಲೇಖಕರ ಬರವಣಿಗೆಗಳಲ್ಲದೆ, ಹಿರಿಯ ಲೇಖಕರ ಬರಹಗಳು ಇಲ್ಲಿ ಲಭ್ಯ.
ನಿಮಗೂ ಆಧ್ಯಾತ್ಮದಲ್ಲಿ ಆಸಕ್ತಿ ಉಂಟೆ? ನಿಮ್ಮ ನಂಬಿಕೆ, ಅನುಭವ, ಆಚರಣೆ, ಪಂಥ ಇವುಗಳನ್ನು ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಎಲ್ಲರೊಡನೆ ಹಂಚಿಕೊಳ್ಳಬೇಕೆ? ಹಾಗಿದ್ದರೆ ತಡವೇಕೆ? ನಿಮ್ಮ ಬರಹಕ್ಕೆ ನಮ್ಮಲ್ಲಿ ಸದಾ ಸ್ವಾಗತ ಹಾಗೂ ಆದ್ಯತೆ.ತಡಮಾಡದೆ ನಮ್ಮನ್ನು ನಿಮ್ಮ ಬರಹದೊಡನೆ ಸಂಪರ್ಕಿಸಿ.
ಲೇಖನಗಳು
- ಶ್ರೀ ಅಶೋಕ್ ಕುಮಾರ್ಆಧ್ಯಾತ್ಮಿಕ ಪರಂಪರೆ
- ಡಾ. ಸಿ.ವಿ. ಮಧುಸೂದನ
ಪ್ರಮಾದೋ ಧೀಮತಾಮಪಿ
ಇನ್ನೂ ನಾನು ಕಲಿಯುತ್ತಿದ್ದೇನೆ
- ಶ್ರೀಮತಿ ಕನಕ ರಾಮಕೃಷ್ಣ
ಜೀವನ-ಧ್ಯೇಯ
-ಶ್ರೀ ಆರ್ ಭವಾನಿ ಶಂಕರ್
ಭಗವನ್ನಾಮ ಸಂಕೀರ್ತನೆಯ ಮಹತ್ವ
- ಡಾ. ಆನಂದ ಬುಕ್ಕಾಂಬುದಿ
ಚಿಂತೆ-ಚಿಂತನೆ
-ಶ್ರೀ ಕನಕಾಪುರ ನಾರಾಯಣ
click to listen audio
ಈ ದಿನ, ಈ ಕ್ಷಣ ನಾವೇನು ಮಾಡಬಹುದು
ee dina ee kshana naavenu maadabahudu -Sri R. BhavaniShankar
(ಒಂದು ಚಿಂತನಾತ್ಮಕ ಬರಹ)
ಶ್ರೀ ಪುರಂದರ ದಾಸರು ರಚಿಸಿ, ಹಾಡಿದ ಒಂದು ಚಿಕ್ಕ ಕೀರ್ತನೆ ಹೀಗಿದೆ:
ಇಂದಿನ ದಿನ ಶುಭದಿನವು,ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ,ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ, ಇಂದಿನ ಲಗ್ನ ಶುಭಲಗ್ನ
ದಾಸರು ಹೇಳಿದ ಹಾಗೆ ಈ ದಿನವೇ ಬಹು ಮುಖ್ಯವಾದದ್ದು.ನೆನ್ನೆಯದು ಮುಗಿದು ಹೋದ ಅಧ್ಯಾಯ,ನಾಳೆಯದು ನಾಳೆಗೇ ಇರಲಿ.ಧೈರ್ಯದಿಂದ ಎದುರಿಸೋಣ.ಮುಗಿದುಹೋದ ನೆನ್ನೆಯದನ್ನು ಚಿಂತಿಸಿ ಫಲವಿಲ್ಲ.ಬರಲಿರುವ ನಾಳೆಯ ದಿವಸಗಳಲ್ಲಿ ನಮ್ಮ ಜೀವನ ಸುಖದಿಂದ, ಸಂತೋಷಕರವಾಗಿ ಇರಬೇಕಾದರೆ,ಇವತ್ತಿನ ಈ ಕ್ಷಣಗಳು ಅಂದರೆ ಇಂದು ದಿವಸದ 24ಘಂಟೆಗಳು ಅತಿ ಅಮೂಲ್ಯವಾದದ್ದು.ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯುತ ಆದ್ಯ ಕರ್ತವ್ಯವೂ ಆಗಿದೆ.
ಇದಕ್ಕೊಸ್ಕರ ನಾವೆಲ್ಲ ಮಾಡಬಹುದಾದದ್ದು ? ಎಲ್ಲರೂ ಚಿಂತಿಸಬೇಕಾದ ವಿಚಾರ.ಇವತ್ತಿನ ಕಾರ್ಯಸೂಚಿ ಹೀಗಿದ್ದರೆ ಹೇಗೆ ಎಂದು ನಾವು ವಿಮರ್ಶಿಸೋಣ.ಒಂದು ಅನಿಸಿಕೆ.
1.ದಿವಸದ 24ಘಂಟೆಗಳಲ್ಲಿ ಕನಿಷ್ಠ 10 ರಿಂದ 12 ಘಂಟೆಗಳಷ್ಟು ವೇಳೆಯನ್ನು ನಮಗೆ ಇಷ್ಟವಾದ ಮತ್ತು ಕೆಲವುಸಲ ಇಷ್ಟವಲ್ಲದಿದ್ದರೂ ಸಹ ಮಾಡಬೇಕಾದ ಕೆಲಸ ಕಾರ್ಯಗಳನ್ನು ಆಸಕ್ತಿಯಿಂದ, ಮುತುವರ್ಜಿಯಿಂದ, ಜವಾಬ್ದಾರಿಯಿಂದ ನಿಭಾಯಿಸುವುದು.ಎಷ್ಟೋ ಸಲ ನಾವುಗಳು ಹಗಲುಗನಸು ಕಾಣುತ್ತಾ,ಇಂದಿನ ಅಮೂಲ್ಯವಾದ ಸಮಯ ವ್ಯರ್ಥಮಾಡುತ್ತ,ಸೋಮಾರಿತನದಿಂದ ಗಮನವಿಟ್ಟು ಮುಖ್ಯವಾದ ಮತ್ತು ಇಂದಿನ ದಿನವೇ ಮಾಡಬೇಕಾದ ಕೆಲಸಗಳನ್ನು ಮುಂದೂಡುವುದು ಸಹಜ.
2.ಯಾವ ಕೆಲಸವನ್ನೂ ಅರ್ಧಕ್ಕೆ ನಿಲ್ಲಿಸದೆ, ಅದನ್ನು ಸಂಪೂರ್ಣವಾಗಿ ಜವಾಬ್ದಾರಿಯುತವಾಗಿ,ಚೊಕ್ಕವಾಗಿ ಮಾಡುವುದು.
3.ನಮ್ಮನ್ನು ನಾವು ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗಿ, ಅದರಿಂದಾಗಿ ಬೇರೆಯವರು ಅಂದರೆ ನಮ್ಮ ಜೊತೆಯಲ್ಲಿರುವ ಯಾರಿಗೂ ನಮ್ಮಿಂದ ಯಾವ ತೊಂದರೆಯೂ ಉಂಟಾಗದಂತೆ ಎಚ್ಚರಿಕೆ ವಹಿಸುವುದು.
4.ಈ ದಿವಸ ಯಾವ ವಿಚಾರಕ್ಕೂ ಆಕ್ಷೇಪಿಸದೆ, ಯಾರಮೇಲೂ ದರ್ಪವನ್ನು ಪ್ರದರ್ಶಿಸದೆ ಇರುವುದಕ್ಕೆ ಪ್ರಯತ್ನಿಸುವುದು.
5.ಈ ದಿವಸ ಎಲ್ಲರ ಅಭಿಪ್ರಾಯಕ್ಕೆ ಬೆಲೆಕೊಟ್ಟು, ನಮ್ಮ ಗುರಿ,ಆದರ್ಶಗಳನ್ನು ಗಮನದಲ್ಲಿಟ್ಟು ಯಾವ ಪ್ರಶಂಸೆಗಳಿಗೂ ಆಸೆಪಡದೆ ಇರುವುದು.
6.ಈ ದಿವಸ ಸಹಾಯ ಯಾಚಿಸಿದವರಿಗೆ ಹಾಗೂ ತೊಂದರೆತಾಪತ್ರಯಗಳಲ್ಲಿ ಇರುವವರಿಗೆ ಕಿಂಚಿತ್ತಾದರೂ ಹೃದಯಪೂರ್ವಕವಾಗಿ ಸಹಾಯಮಾಡುವುದು.
7.ಈ ದಿವಸ ಕೆಲಸವನ್ನು ಯೋಗ, ಧ್ಯಾನ, ಪ್ರಾರ್ಥನೆಗೆ ಮುಡಿಪಾಗಿಟ್ಟು ಕಟ್ಟುನಿಟ್ಟಾಗಿ ಪಾಲಿಸುವುದು.
8.ಈ ದಿವಸ ಸ್ವಲ್ಪಸಮಯವನ್ನು ಮನಸ್ಸಿಗೆ ಆಹ್ಲಾದ ಕೊಡುವ ವಿಚಾರಗಳಾದ ಸಂಗೀತ ಆಲಿಸುವುದು, ಭಗವನ್ನಾಮ ಸಂಕೀರ್ತನೆಗೆ,ಓದಿಗೆ, ಬರೆಯಲಿಕ್ಕೆ ಬಳಸುವುದು.
9.ಈ ದಿವಸ ಕಾರ್ಯಕ್ರಮದ ಪಟ್ಟಿಯನ್ನು ಮೊದಲಿಗೇ ನಿರ್ಧರಿಸಿ,ಪಟ್ಟಿಮಾಡಿ ಆದಷ್ಟೂ ಅದನ್ನು ಸಂಪೂರ್ಣವಾಗಿ ಮುಗಿಸುವುದು ಅಂದರೆ ಕೆಲಸಗಳನ್ನು ಬಾಕಿ ಇಲ್ಲದೆ ಮಾಡುವುದು.
10.ಈ ದಿವಸ 30 ನಿಮಿಷಕ್ಕೆ ಕಡಿಮೆಯಿಲ್ಲದೆ ಒಂದು ಘಂಟೆಯಾದರೂ ಮೌನವನ್ನು ಆಚರಿಸುವುದು.
11.ಸೋಮಾರಿತನದಿಂದ ಹಾಗೂ ಆಲಸ್ಯದಿಂದ ಮುಖ್ಯವಾದ ಕೆಲಸಗಳನ್ನು ಮುಂದೂಡುವುದು ಮಾನವನ ಸಹಜ ಸ್ವಭಾವ. ಇಂತಹ ವಿಚಾರಗಳಲ್ಲಿ ಜಾಗರೂಕತೆಯಿಂದ ಇರುವುದು.
12.ಈ ದಿವಸ ಯಾವ ಕೆಲಸ,ಕಾರ್ಯಗಳಿಂದ ನಮ್ಮ ಮನಸ್ಸಿಗೆ ಸುಖ, ಸಂತೋಷ, ಹೆಚ್ಚುಹೆಚ್ಚು ಆನಂದ ಸಿಗುವುದೋ ಅದನ್ನು ಕಾರ್ಯರೂಪಕ್ಕೆ ತಂದು ಜಗತ್ತಿನ ಹಾಗೂ ಬಹುಜನಹಿತಕ್ಕಾಗಿ ಶ್ರಮಿಸುತ್ತಾ ಎಲ್ಲವನ್ನೂ ಭಗವಂತನಿಗೆ ಅರ್ಪಣೆಮಾಡುವುದು.
ಈ ಸಂಧರ್ಭದಲ್ಲಿ ನಾವು ನೆನೆಪಿನಲ್ಲಿಟ್ಟುಕೊಳ್ಳಬೇಕಾದ್ದು ಶ್ರೀ ಸ್ವಾಮಿ ವಿವೇಕಾನಂದರ ದಿವ್ಯವಾಣಿ - "ಆತ್ಮನೋ ಮೋಕ್ಷಾರ್ತಂ ಜಗತ್ ಹಿತಾಯ ಚ" - ಅಂದರೆ ಪ್ರತಿಯೊಬ್ಬರೂ ಆತ್ಮಸಾಕ್ಷಾತ್ಕಾರದ ಗುರಿಯ ಜೊತೆಗೆ ಜಗತ್ತಿನ ಸುಖ, ಸಂತೋಷ ಮತ್ತು ಹಿತಕ್ಕಾಗಿಯೂ ಶ್ರಮಿಸಬೇಕು.
ಈ ದಿವಸ, ಈ ಶುಭದಿನ. ಈ ಕ್ಷಣ ವ್ಯರ್ಥವಾಗದ ಹಾಗೆ ಪ್ರತಿದಿವಸವೂ ನಾವೆಲ್ಲಾ ಶ್ರದ್ಧೆಯಿಂದ ಪ್ರಯತ್ನಿಸೋಣವೇ?ಏನಂತೀರಾ?
"ಹರಿಃ ಓಂ ತತ್ಸತ್ ಶ್ರೀ ರಾಮಕೃಷ್ಣಾರ್ಪಣಮಸ್ತು"
click to listen audio
ಭಗವನ್ನಾಮ ಸಂಕೀರ್ತನೆಯ ಮಹತ್ವ
Bhagavannama_sankirthaneya_mahathva -Sri R. BhavaniShankar
ಪರಮಾತ್ಮನ ಸಾಕ್ಷಾತ್ಕಾರಕ್ಕೆ ಕಲಿಯುಗದಲ್ಲಿ ಅತಿ ಸುಲಭಸಾಧ್ಯವಾದ ಮಾರ್ಗ ಯಾವುದೆಂದರೆ ಅದು ಭಗವನ್ನಾಮ ಸಂಕೀರ್ತನೆ.ಇದು ಅತಿಶಯೋಕ್ತಿಯಲ್ಲ.ಪ್ರಾಚೀನ ಋಷಿಕವಿಗಳು ಈ ಕಾರಣಕ್ಕಾಗಿಯೇ ಭಗವಂತನ ವಿವಿಧ ಲೀಲಾವಿನೋದಗಳನ್ನು ಸಂಕೀರ್ತನಾ ರೂಪದಲ್ಲಿ ಸೃಜಿಸಿ ಜನಸಾಮಾನ್ಯಕ್ಕೆ ನೀಡಿ ಔತನ್ಯದ ಮಾರ್ಗ ರೂಪಿಸಿಕೊಟ್ಟಿದ್ದಾರೆ.
ಈ ಭಗವನ್ನಾಮ ಸಂಕೀರ್ತನೆಗಳಲ್ಲಿ ಸಗುಣದೇವತಾಸ್ತುತಿಗಳೂ ಹಾಗೂ ಅದ್ವೈತಸಿದ್ಧಾಂತದ ತಿರುಳನ್ನೇ ಎತ್ತಿಹಿಡಿಯುವ ಕೀರ್ತನೆಗಳು,ಶ್ಲೋಕಗಳು ಬಹಳವಾಗಿ ಇವೆ.ಶೃತಿ,ತಾಳ,ಲಯ ಬದ್ಧವಾಗಿ ಹಾಗೂ ಅತಿ ಮುಖ್ಯವಾಗಿ ಭಕ್ತಿ,ಪ್ರೇಮ ಭಾವಗಳಲ್ಲಿ ರಮ್ಯವಾಗಿ ವಿವಿಧರಾಗಗಳಲ್ಲಿ ಹಾಡಿ,ತಾವೂ ರಸಾನುಭವ ಮಾಡಿಕೊಂಡು ಭಕ್ತವೃಂದದವರನ್ನೂ,ಶ್ರೋತ್ರುಗಳನ್ನೂ ತಲ್ಲೀನರಾಗಲಿಕ್ಕೆ ಹಾಗೂ ಹಾಡಲಿಕ್ಕೆ ಪ್ರೇರೇಪಿಸುವ ಮಹನೀಯರನ್ನು ಅಂದಿನಂತೆ ಇಂದೂ ಸಹ ನಾವು ಕಾಣುತ್ತಿದ್ದೇವೆ.
ಭಗವನ್ನಾಮ ಸಂಕೀರ್ತನೆಯ ಮಹತ್ವವನ್ನು ಹೆಚ್ಚು ಹೆಚ್ಚು ತಿಳಿಯಬೇಕಾದರೆ ಅನೇಕ ಮಹಾತ್ಮರ ವಾಣಿಯ ಕಡೆಗೆ ಸೂಕ್ಷ್ಮವಾಗಿ ನಮ್ಮ ಗಮನ ಹರಿಸಬೇಕು.
ಶ್ರೀ ಸದಾಶಿವ ಬ್ರಹ್ಮೇಂದ್ರರು: ’ಎಲೈ ಚಪಲ ಮನಸ್ಸೇ ಈ ಸಂಸಾರ ಸಾಗರವನ್ನು ದಾಟಬೇಕಾದರೆ ಯಜ್ಞ,ಯಾಗಗಳು,ತೀರ್ಥಯಾತ್ರೆ,ಸನ್ಯಾಸ,ಸಜ್ಜನರ ಸಂಗ ಮುಂತಾದ ಸಾಧನೆಗಳು ಅನೇಕವಾಗಿ ಇದ್ದರೂ ಸುಲಭಸಾಧನೆ ’ಶಿವನಾಮಸ್ಮರಣೆ’ ಅದನ್ನೇ ಮಾಡಿ”
ಚಕ್ರವರ್ತಿ ಶ್ರೀರಾಜಗೋಪಾಲಾಚಾರಿ : “ಶ್ರೀ ಶಂಕರಾಚಾರ್ಯರ ಭಜಗೋವಿಂದಂ ಸ್ತೋತ್ರ ಸಂಸ್ಕೃತದಲ್ಲಿನ ಒಂದು ಅತ್ಯುನ್ನತ ಧಾರ್ಮಿಕ ಜನಪ್ರಿಯ ಸ್ತೋತ್ರ.ಒಬ್ಬ ಮನುಷ್ಯನ ಮಾನಸಿಕ ಹಾಗೂ ಧಾರ್ಮಿಕ ಬೆಳವಣಿಗೆಗೆ ವೇದಾಂತದ ತಿರುಳನ್ನು ಬಹಳ ರಸವತ್ತಾಗಿ ಸುಂದರ ಸಂಕೀರ್ತನೆ ರೂಪದಲ್ಲಿ ಇದನ್ನು ಹಾಡಬಹುದು”
ಶ್ರೀಕೃಷ್ಣಪರಮಾತ್ಮ ’ಭಗವದ್ಗೀತೆಯಲ್ಲಿ’ : “ನಾನು ಎಲ್ಲದಕ್ಕೂ ಕಾರಣನು, ನನ್ನಿಂದಲೇ ಎಲ್ಲವೂ ನಡೆಯುತ್ತಿದೆ.ಹಾಗೆಂದು ತಿಳಿದ ಶ್ರದ್ಧಾವಂತರಾದ ಭಕ್ತರು ನನ್ನನ್ನೇ ಸ್ಮರಿಸುತ್ತಾರೆ ಮತ್ತು ತಮ್ಮ ಚಿತ್ತಗಳನ್ನು,ತಮ್ಮ ಪ್ರಾಣಗಳನ್ನು ನನಗೇ ಅರ್ಪಿಸಿ,ಅನವರತವೂ ಪರಸ್ಪರ ನನ್ನ ಕಥೆಗಳನ್ನೇ ಹೇಳಿಕೊಳ್ಳತ್ತಾ ಹಾಡುತ್ತಿರುತ್ತಾರೆ”
ವಿಷ್ಣು ಪುರಾಣದಲ್ಲಿ : “ಕೃತಯುಗದಲ್ಲಿ ವಿಷ್ಣುವನ್ನು ಧ್ಯಾನಿಸುತ್ತಲೂ, ತ್ರೇತಾಯುಗದಲ್ಲಿ ಯಜ್ಞಗಳಿಂದ ಆರಾಧಿಸುತ್ತಲೂ, ದ್ವಾಪರಯುಗದಲ್ಲಿ ಅರ್ಚಿಸಿ ಪೂಜಿಸುತ್ತಲೂ, ಒಬ್ಬನು ಯಾವ ಫಲವನ್ನು ಮೋಕ್ಷಪರ್ಯಂತ ಹೊಂದಬಹುದೋ, ಹೊಂದುವನೋ ಅದೆಲ್ಲವನ್ನು ಕಲಿಯುಗದಲ್ಲಿ ಕೇಶವನನ್ನು ಸಂಕೀರ್ತನೆ ಮಾಡಿದ ಮಾತ್ರದಿಂದಲೇ ಹೊಂದುವನು”. - ”ಹರಿನಾಮ ಸಂಕೀರ್ತನೆಯೇ ಸಾಕು ಎಲ್ಲರ ಪಾಪಸಂಚಯವನ್ನು ಉಪಶಮನಗೊಳಿಸಲು,ಈ ಕಲಿಯುಗದಲಿ ಇದು ಬಿಟ್ಟರೆ ಬೇರೆ ಗತಿಯೇ ಇಲ್ಲ”
ಆನಂದ ರಾಮಾಯಣದಲ್ಲಿ: ಶ್ರೀರಾಮ ಭಜನೆಯನ್ನು ಒಂದು ಅಕ್ಷರದಿಂದ ಮೂವತ್ತಾರು ಅಕ್ಷರಗಳವರೆಗೂ ಬೀಜಾಕ್ಷರದಿಂದ ಕೂಡಿದ ಮಂತ್ರದಿಂದ ಉದ್ಧಾರಮಾಡಿ ನಾಲ್ಕು ವರ್ಣದವರೂ ಶೃತಿ, ತಾಳ,ಲಯ ಬದ್ಧವಾಗಿ ಭಜನೆಯ ರೂಪದಲ್ಲಿ ಭಗವಂತನನ್ನು ಸೇವಿಸಬಹುದು ಹಾಗೂ ಆರಾಧಿಸಬಹುದು.”
ಶ್ರೀ ರಾಮಕೃಷ್ಣಪರಮಹಂಸರು ; “ಪ್ರಾಪಂಚಕರಿಗೆ ಸಾಯುವ ಸಮಯದಲ್ಲಿ ಸಂಸಾರದ ಯೋಚನೆಯೇ ಬರುತ್ತದೆ.ಭಗವದ್ಭಾವನೆ ಮನಸ್ಸಿನಲ್ಲಿ ಏಳದು.ಇದಕ್ಕೆ ಸುಲಭಮಾರ್ಗ ಬದುಕಿರುವಾಗ ನಾಮ ಸಂಕೀರ್ತನೆಯ ಅಭ್ಯಾಸವನ್ನು ಇಟ್ಟುಕೊಂಡಿರುವುದು.ಇದರಿಂದ ಸಾಯುವ ಸಮಯದಲ್ಲಿ ಅಭ್ಯಾಸಬಲದಿಂದ ಭಗವನ್ನಾಮ ಬಾಯಿಂದ ಹೊರಡುತ್ತದೆ.ಭಗವಂತನ ಪಾದಪದ್ಮಗಳಲ್ಲಿ ಭಕ್ತಿಯೇ ಸಾರವಾದದ್ದು.ಭಗವನ್ನಾಮೋಚ್ಚಾರಣೆ ಮಾಡಿದರೆ ಎಲ್ಲರೂ ಶುದ್ಧರಾಗಿಬಿಡುತ್ತಾರೆ.
ಕಲಿಯುಗದಲ್ಲಿ ನಾಮ ಮಹಾತ್ಮ್ಯ ಇರುವುದರಿಂದ ಭಗವಂತನ ನಾಮಸ್ಮರಣೆ, ನಾಮೋಚ್ಛಾರಣೆ ಸರ್ವದಾ ಮಾಡುತ್ತಿರಬೇಕು. ಆತನ ನಾಮೋಚ್ಛಾರಣೆ ಮಾಡುತ್ತಾ ಕೈತಾಳ ಹಾಕಿದರೆ ಪಾಪವೆಂಬ ಹಕ್ಕಿ ಹಾರಿಹೋಗಿಬಿಡುತ್ತದೆ.
ಸತತವಾಗಿ ಭಗವಂತನ ನಾಮಗುಣಕೀರ್ತನೆ ಮತ್ತು ಪ್ರಾರ್ಥನೆ ಮಾಡುತ್ತಿರಬೇಕು.ಹಳೇ ಚೊಂಬನ್ನು ಎಲ್ಲೋ ಒಂದು ದಿನ ಬೆಳಗಿ ಬಿಟ್ಟರೆ ಏನಾದಹಾಗಾಯಿತು? ದಿನವೂ ಬೆಳಗುತ್ತಿರಬೇಕು.ವಿವೇಕ ವೈರಾಗ್ಯಗಳು ಒದಗೂಡಿರಬೇಕು.ಈ ಸಂಸಾರ ಅನಿತ್ಯ ಎಂಬ ಜ್ಞಾನವನ್ನು ಮನಸ್ಸಿಗೆ ಒತ್ತಬಲ್ಲ ಶಕ್ತಿ ಭಗವನ್ನಾಮ ಸಂಕೀರ್ತನೆಯಲ್ಲಿ ಇದೆ ಎಂಬ ಶ್ರದ್ಧೆ,ನಂಬಿಕೆ ಬರಬೇಕು”
ಕಡೆಯದಾಗಿ ನಾವೆಲ್ಲರೂ ಅರಿತುಕೊಳ್ಳಬೇಕಾದ್ದು ಏನೆಂದರೆ:
- ಕಲಿಯುಗದಲ್ಲಿ ಮುಕ್ಕಾಲುಪಾಲು ಗಾಳಿ,ನೀರು,ನೈಸರ್ಗಿಕ ಫಲ,ಪುಷ್ಪಗಳು, ಮಲಿನವಾಗಿದೆ, ಕಲಬೆರಕೆ ಹಾಗೂ ವಿಷಪೂರಿತ.
- ಇದರಿಂದ ಮಾನವನ ಆರೋಗ್ಯ ದುರ್ಬಲವಾಗಿ,ಅಸಂಖ್ಯಾತ ರೋಗಗಳಿಂದ ,ಚಂಚಲವಾದ ಮನಸ್ಸಿನಿಂದ ಬಳಳುತ್ತಿದ್ದಾನೆ.
- ಅವನು ಯಶಸ್ವಿಯಾಗಿ ಧ್ಯಾನ,ಯೋಗ,ತಪಸ್ಸು,ಯಜ್ಞ ಮಾಡಲಾರ.ವೈಧಿಕ ವಿಧಿಗಳನ್ನು ಬಲ್ಲ ಸೃಜನಶೀಲ ವ್ಯಕ್ತಿಗಳ ಅಭಾವದಿಂದ ಸರಿಯಾದ ಯಜ್ಞವನ್ನು ಮಾಡಲು ಅಸಾಧ್ಯ.
- ಕಲಿಯುಗದಲ್ಲಿ ಮಾನವನು ವಿಷಯಾಸಕ್ತದಿಂದ ಚಿತ್ತೈಕಾಗ್ರತೆ ಇಲ್ಲದೆ ಮನಸ್ಸು ಕೆಟ್ಟು ಅರ್ಚನೆಯನ್ನೂ ಸಹ ಮಾಡಲಾರ.
- ಅವನಿಗಿರುವ ಏಕೈಕ ಸುಲಭಮಾರ್ಗ ಭಗವನ್ನಾಮ ಸ್ಮರಿಸುವುದು.
- ದೇವರ್ಷಿಗಳಾದ ನಾರದರು ಹೇಳುತ್ತಾರೆ “ಭಗವನ್ನಾಮವು ಒಂದೇ ನನ್ನ ಪ್ರಾಣ ಆಧ್ಯಾತ್ಮಿಕ ಅಂಧಕಾರದ ಕಲಿಯುಗದಲ್ಲಿ ಭಗವನ್ನಾಮಹೊರತು ಬೇರೆಯಾವುದೇ ಆಶ್ರಯವಿಲ್ಲ”
“ಹರಿಃ ಓಂ ತತ್ಸತ್ ಶ್ರೀರಾಮಕೃಷ್ಣಾರ್ಪಣಮಸ್ತು”
click to listen audio > ಗೋವರ್ಧನೋದ್ಧಾರಕ Govardhanodharaka-Sri Ashok Kumar
"ಗೋವಿಂದ ಗೋಪಾಲ ಗೋಪಿಕಾ ವಲ್ಲಭ ಗೋವರ್ಧನೋದ್ಧಾರಕ". ಇದು ಸುಂದರ ಭಕ್ತಿಗೀತೆಯೊಂದರ ಪಲ್ಲವಿ. ಇದನ್ನು ಮೆಲುಕು ಹಾಕುತ್ತಿರುವಂತೆಯೇ ಭಾಗವತದ ಕೃಷ್ಣನ ಕಥೆಯು ಮನಃಪಟಲದಲ್ಲೊಮ್ಮೆ ಸುಳಿಯುತ್ತದೆ. ಕಥೆಯು ಎಲ್ಲರಿಗೂ ತಿಳಿದಿರುವಂತದ್ದೇ. ಆದರೂ ಸಂಕ್ಷಿಪ್ತವಾಗಿ ನನಗೆ ಅನಿಸಿದ್ದನ್ನು ಹೇಳುತ್ತೇನೆ.
ಬೃಂದಾವನದಲ್ಲಿ ಕೃಷ್ಣನ ಬಾಲ್ಯದ ದಿನಗಳವು. ಬೃಂದಾವನದ ಬಳಿ ಗೋವರ್ಧನಗಿರಿ ಎಂಬುದೊಂದು ಬೆಟ್ಟ. ಹುಲುಸಾದ ಹುಲ್ಲಿನ ಮೇವು, ನೀರಿನಿಂದ ಸಮೃದ್ಧವಾಗಿದ್ದ ಆ ಬೆಟ್ಟವು ಬೃಂದಾವನದ ಗೋವುಗಳು ಮತ್ತಿತರ ಪ್ರಾಣಿಗಳಿಗೆ ಆಸರೆಯಂತಿದ್ದಿತು. ಬೃಂದಾವನ ವಾಸಿಗಳಿಗೆ ಇಂದ್ರನ ಪೂಜೆಯು ವಾರ್ಷಿಕ ಆಚರಣೆಗಳಲ್ಲೊಂದಾಗಿತ್ತು. ಕೃಷ್ಣನು ಇಂದ್ರನ ಪೂಜೆಯನ್ನು ಅನುಮೋದಿಸಲಿಲ್ಲ. ಪೂಜೆ ಸತ್ಕಾರವೆಲ್ಲ ಇಂದ್ರನಿಗೇಕೆ? ಬದಲಿಗೆ ಅಷ್ಟು ಪ್ರೀತಿಯಿಂದ ನಮ್ಮ ಗೋವುಗಳಿಗೆ ಆಸರೆಯಾಗಿರುವ ಗೋವರ್ಧನ ಗಿರಿಯನ್ನೇಕೆ ಪೂಜಿಸಬಾರದು ಎಂದು ಪ್ರಶ್ನಿಸಿದನು. ಕಾಲ ಕಾಲಕ್ಕೆ ಮಳೆಯನ್ನು ನೀಡುತ್ತಿರುವ ಮಳೆಯ ದೇವತೆಯಾದ ಇಂದ್ರನು ಕೋಪಿಸಿಕೊಂಡರೇನು ಮಾಡುವುದೆಂದು ಗ್ರಾಮಸ್ಥರು ಭಯಭೀತರಾದರೂ ಕೃಷ್ಣನ ಆಶ್ವಾಸನೆಯಂತೆ, ಒಮ್ಮೆ ವಾರ್ಷಿಕ ಕಟ್ಟಳೆಯನ್ನು ಮುರಿದು ಗೋವರ್ಧನ ಗಿರಿಗೆ ಪೂಜೆ ಸಲ್ಲಿಸಲು ಅನುವಾದರು. ಇದರಿಂದ ಕೋಪಗೊಂಡ ಇಂದ್ರನು ಅತೀ ರಭಸದಿಂದ ಗಾಳಿ, ಧಾರಾಕಾರ ಮಳೆಯನ್ನು ಸುರಿಸಿದ ಕಾರಣ ಬೃಂದಾವನವೇ ಕೊಚ್ಚಿ ಹೋಗುವಂತೆ ಪ್ರವಾಹದಿಂದ ತುಂಬಿ ಹೋಯಿತು. ಪಶು ಪಕ್ಷಿ, ಪ್ರಾಣಿಗಳ ಸಹಿತ ಯಾರಿಗೂ ನಿಲ್ಲಲೂ ನೆಲೆಯಿಲ್ಲದಂತಾಗಲು ಕೃಷ್ಣನು ಎಲ್ಲರಿಗೂ ಅಭಯವನ್ನು ನೀಡಿ, ಗೋವರ್ಧನ ಗಿರಿಯನ್ನೇ ತನ್ನ ಕಿರುಬೆರಳಿನಿಂದ ಎತ್ತಿ ಹಿಡಿದು ಎಲ್ಲರಿಗೂ ಅದರಡಿಯಲ್ಲಿ ಆಶ್ರಯ ಕೊಟ್ಟಾಗ ಇಂದ್ರನು ಏನೂ ಮಾಡಲಾಗದೇ ಸೋತು ಶರಣಾಗುತ್ತಾನೆ.
ಎಷ್ಟು ಚೆಂದದ ಕಥೆ. ಬಾಲ್ಯದಲ್ಲಿ ಇದನ್ನು ಕೇಳಿದಾಗ ನಮ್ಮ ದೇವರೆಂದರೆ ಸೂಪರ್ ಮ್ಯಾನ್, ಏನು ಬೇಕಾದರೂ ಮಾಡಬಲ್ಲ, ಎಂದುಕೊಂಡು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ನಾವೇ ನೋಡಿದಂತೆ ಅನುಭವಿಸಿದ್ದು, ಸಂತಸಗೊಂಡಿದ್ದು ಇನ್ನೂ ಹಸಿರಾಗಿದೆ. ಮುಂದೆ ಸ್ವಲ್ಪ ವಯಸ್ಸಾದಂತೆ ಇಂದಿಗೆ ಉದ್ಧಟತನವೆನ್ನಿಸುವ ಅನೇಕ ಆಲೋಚನೆಗಳು. ಇದೆಲ್ಲಾ ನಡೆದಿದೆ ಎನ್ನುವುದಕ್ಕೆ ಏನು ಸಾಕ್ಷಿ? ಒಬ್ಬ ಚಿಕ್ಕ ಬಾಲಕ ಬೆಟ್ಟವನ್ನು ಎತ್ತುವುದೆಂದರೇನು? ಅವನು ದೇವರೇ ಆಗಿದ್ದು ಬೆಟ್ಟವನ್ನೆತ್ತಿದ್ದರೂ ಅದನ್ನು ಹೇಗೆ ಉದ್ಧಾರ ಮಾಡಿದಂತಾಯಿತು? ಹಾಗೆ ಉದ್ಧಾರ ಮಾಡಿದ್ದರೆ ಅದೊಂದು ಬೆಟ್ಟವೇ ಏಕೆ? ಅನೇಕ ಪರ್ವತಗಳೇ ಇವೆಯಲ್ಲ? ಇಂದ್ರನ ಪೂಜೆ ಬೇಡವೆಂದು, ಆ ಬೆಟ್ಟದ ಪೂಜೆ ಮಾಡುವುದೆಂದರೆ ಅರ್ಥವೇನು? ಹೀಗೆ ಹತ್ತು ಹಲವು ಪ್ರಶ್ನೆಗಳು.
ಆದರೂ ಇದರಲ್ಲಿ ಅರ್ಥವೇನೋ ಇರಲೇಬೇಕೆಂದು ಯೋಚಿಸುತ್ತಿದ್ದಾಗ ಮುಂದೊಮ್ಮೆ ಸಂಸ್ಕೃತದಲ್ಲಿ ‘ಗೋ’ ಎಂಬ ಶಬ್ದಕ್ಕೆ ಎಂಭತ್ತಕ್ಕೂ ಹೆಚ್ಚಿನ ಅರ್ಥಗಳಿವೆ, ಅದರಲ್ಲೊಂದು ಅರ್ಥ ಗೋವು ಎಂದಾದರೆ ಮತ್ತೊಂದು ಅರ್ಥ ಇಂದ್ರಿಯಗಳು ಎಂದು ತಿಳಿದಾಗ, ಗೊಜಲು ಗೊಜಲಾದ ಚಿತ್ರವೊಂದನ್ನು ದೃಷ್ಟಿಸುತ್ತಿರುವಾಗ, ಒಮ್ಮೆಲೇ ಅದು ಮೂರು ಆಯಾಮಗಳಿರುವ ಅರ್ಥಪೂರ್ಣ ಆಕೃತಿಯಾಗಿ ಪುಟಿದೆದ್ದ ಅನುಭವ, ಸಂತಸ, ಸಂಭ್ರಮ.
ಇನ್ನೊಂದು ಅರ್ಥದಲ್ಲಿ ಯೋಚಿಸಿದಾಗ ಗೋವರ್ಧನವೆಂದರೆ ಇಂದ್ರಿಯಗಳನ್ನು ಪೋಷಿಸುವುದು ಅಥವಾ ವರ್ಧಿಸುವುದು ಎಂದಾಗುತ್ತದೆ. ಇಂದ್ರಿಯಗಳು ಬೆಳಗುವುದು ಅಥವಾ ಅದರ ಅಸ್ಥಿತ್ವವು, ಪ್ರಜ್ಞೆಯಿಂದಲೇ ಅಲ್ಲವೇ? ಹಾಗಾಗಿ ಗೋವರ್ಧನವೆಂದರೆ ಪ್ರಜ್ಞೆಯೆಂದಾಗುತ್ತದೆ. ಮಾನಸಿಕ ಕ್ಲೇಶಗಳು ತಡೆಯಲಾರದಾದಾಗ ಆಸರೆಗಾಗಿ ಪ್ರಜ್ಞೆಯ ಸ್ಥರವನ್ನು ಮೇಲೆತ್ತಿ ಹಾಯಾಗಿರಬಹುದೆನ್ನುತ್ತಾರೆ. ಮಹಾತ್ಮರು ಪ್ರಪಂಚಕ್ಕಾಗಿ ಕೈಕಾಲುಗಳನ್ನು ಮುಡಿಪಾಗಿರಿಸಿ ತಮ್ಮ ತಲೆಯನ್ನು ಮೋಡಗಳಿಗಿಂತ ಮೇಲಿರಿಸಿಕೊಂಡು ಸದಾ ಸಮ ಸ್ಥಿತಿಯಲ್ಲಿರುತ್ತಾರೆನ್ನುತ್ತಾರಲ್ಲವೇ? ನಮ್ಮಂತಹ ಸಾಮಾನ್ಯರು ಪ್ರಜ್ಞೆಯ ಸ್ಥರವನ್ನು ಮೇಲೇರಿಸಲು ಪ್ರಯತ್ನಿಸಿದಾಗಲೇ, ಅದು ಬೆಟ್ಟವನ್ನೆತ್ತುವಂತೆ ಅಸಾಧ್ಯವೆಂದು ತಿಳಿಯುವುದು. ಏಕೆಂದರೆ ನಮ್ಮ ವೈಯಕ್ತಿಕ ಪ್ರಜ್ಞೆಯು ವಿಶ್ವ ಪ್ರಜ್ಞೆಯ ಅವಿಭಾಜ್ಯ ಭಾಗ ಮಾತ್ರ, ಅದರಿಂದಲೇ ಅದು ಗೋವರ್ಧನ ಗಿರಿ. ಭಗವಂತನ ಅನುಗ್ರಹವಾದರೆ ಮಾತ್ರ ಅವನಿಗೆ ಅದನ್ನು ಕಿರುಬೆರಳಲ್ಲಿ ಎತ್ತುವಷ್ಟು ಸುಲಭ. ಆಮೇಲೆ ಯಾವ ಮಾನಸಿಕ ಕ್ಲೇಶಗಳೂ ನಮ್ಮನ್ನು ಕಾಡಲಾರವೆಂಬ ಅರ್ಥವಿರಬಹುದೇ ಈ ಭಾಗವತದ ಕಥೆಗೆ? ಅದರಿಂದಲೇ ಭಗವಂತನನ್ನು ‘ಗೋವರ್ಧನೋದ್ಧಾರಕ’ ಎಂದು ಸ್ತುತಿಸಿರಬಹುದೇ?
ಹೀಗೆ ಯೋಚಿಸುತ್ತಾ ಹೋದರೆ ‘ಗೋವಿಂದ’ ನೆಂದರೆ ಇಂದ್ರಿಯಗಳನ್ನು ತಿಳಿದವನು, ‘ಗೋಪಾಲ’ ನೆಂದರೆ ಇಂದ್ರಿಯಗಳನ್ನು ಪಾಲಿಸುವವನು, ‘ಗೋಪಿಕಾವಲ್ಲಭ’ ನೆಂದರೆ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಸರಿಯಾದ ದಾರಿಯಲ್ಲಿ ನಡೆಸುತ್ತಿರುವವರಿಗೆ (ಗೋಪಬಾಲರ) ಮತ್ತು ಅದರಿಂದ ಭಗವತ್ ಪ್ರೀತ್ಯರ್ಥವಾದ ಹಾಲು, ಮೊಸರು, ಬೆಣ್ಣೆಯನ್ನು ಪಡೆದು (ಭಕ್ತಿ. ಜ್ಞಾನ, ವೈರಾಗ್ಯದಂತೆ) ಶ್ರೇಯೋ ಮಾರ್ಗದಲ್ಲಿ ನಡೆಯುವವರ (ಗೋಪಿಯರ) ಪ್ರಾಣಸಖನೆಂಬ ಅರ್ಥವಿರಬಹುದೇ?
ಗೋವರ್ಧನ ಗಿರಿಯನ್ನು ಪೂಜಿಸಿರೆಂಬ ಕೃಷ್ಣನ ಸಲಹೆಯು ಪರಬ್ರಹ್ಮ ಸ್ವರೂಪಿ ಭಗವಂತನನ್ನು ಪೂಜಿಸಿರಿ, ಮನಸ್ಸನ್ನು ಓಲೈಸದಿರಿ (ಇಂದ್ರನೆಂದರೆ ಇಂದ್ರಿಯಗಳ ರಾಜ ಅಥವಾ ಮನಸ್ಸು) ಎಂಬ ಅರ್ಥ ಬರಬಹುದು. ಋಗ್ವೇದದ ಮಹಾವಾಕ್ಯ "ಪ್ರಜ್ಞಾನಂ ಬ್ರಹ್ಮ" (ಐತರೇಯ ಉಪನಿಷತ್, ೩-೧-೩) ಎಂದರೆ ಪ್ರಜ್ಞೆಯೇ ಬ್ರಹ್ಮ (ಗೋವರ್ಧನ ಗಿರಿ).
ಹೀಗೆ ಸರಳವೆನಿಸುವ, ಕೆಲವೊಮ್ಮೆ ಬಾಲಿಶವೆನಿಸುವ ಒಂದು ಗೋವಳರ ಗ್ರಾಮದ ಕೃಷ್ಣ ನ ಕಥೆಯಲ್ಲಿ ವೇದ ವೇದಾಂತದ ಅತ್ಯುನ್ನತ ಸತ್ಯಗಳಿವೆ ಎಂದೆನಿಸುವುದರಲ್ಲಿ ಸಂದೇಹವೇ ಇಲ್ಲ. ಎಷ್ಟು ಪ್ರಬುದ್ಧವಾಗಿ ಹೊಮ್ಮಿ ಅರ್ಥೈಸುತ್ತವೆ ನಮ್ಮ ಪುರಾಣ ಕಥೆಗಳು ಎಂದು ಯೋಚಿಸುತ್ತಾ ಹೋದರೆ ಇಂತಹ ಗಹನವಾದ ಸತ್ಯಗಳನ್ನು ಸರಳವಾಗಿ ಎಳೆಯರನ್ನು ರಂಜಿಸುವ ಕಥೆಯಾಗಿಸಿ, ಯೋಚಿಸಿದ ನಮ್ಮ ಪೂರ್ವಜರ ಪ್ರೌಢಿಮೆಯ ಬಗ್ಗೆ , ಜ್ಞಾನದ ಬಗ್ಗೆ ಹೆಮ್ಮೆಯೆನಿಸದಿರಲಾರದು. ಇಂತಹ ಜ್ಞಾನ ದೀವಿಗೆಯನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮರ್ಥ ಹರಿಕಾರರನ್ನಾಗಿಸು ನಮ್ಮನೆಂದು ಗೋವರ್ಧನೋದ್ಧಾರಕನನ್ನು ಪ್ರಾರ್ಥಿಸೋಣ.
click to listen audio > ಡಯೋಜನೀಸ್ DIOGENESE by Dr.C.V. Madhusudana
ಗ್ರೀಕ್ ತತ್ತ್ವಜ್ಞಾನಿಗಳು (philosophers) ಎಂದರೆ ಎಲ್ಲರ ನೆನಪಿಗೂ ಮೊದಲು ಬರುವವರು ಸಾಕ್ರಟೀಸ್, ಪ್ಲೇಟೋ, ಅರಿಸ್ಟಾಟಲ್ ಮುಂತಾದವರು. ಆದರೆ ಅರಿಸ್ಟಾಟಲನ ಸಮಕಾಲೀನನಾಗಿದ್ದ ಡಯೋಜನೀಸನ ಹೆಸರನ್ನು ಕೇಳಿರುವವರು ವಿರಳ.
ಡಯೋಜನೀಸನು ಆಗಿನ ಕಾಲದಲ್ಲಿ, ಎಂದರೆ ಕ್ರಿ.ಪೂ. ೪ನೆಯ ಶತಮಾನದಲ್ಲಿ, ತುಂಬ ಜನಪ್ರಿಯನಾಗಿದ್ದನು. ಈತನ ಜೀವನ ತುಂಬ ಸರಳವಾದದ್ದು - ಇವನಿಗೆ ಆಸ್ತಿಪಾಸ್ತಿ ಎಂದರೆ ಅನಾಸಕ್ತಿ. ಮನೆಯಲ್ಲಿರುವಾಗಲೆಲ್ಲ ಒಂದು ಸ್ನಾನದ ತೊಟ್ಟಿಯಲ್ಲೇ ಇದ್ದುಬಿಡುತ್ತಿದ್ದನು. ಅಂದಿನ ಗ್ರೀಸಿನಲ್ಲಿ ನಾಯಿಗಳೂ ಸಹ ಇದೇ ರೀತಿಯಲ್ಲಿ ತೊಟ್ಟಿಯಲ್ಲಿ ಮಲಗಿ ವಿರಮಿಸುತ್ತಿದ್ದವಂತೆ. ನಾಯಿಗೆ ಗ್ರೀಕ್ ಭಾಷೆಯಲ್ಲಿ ಸಿನಿಕೋಸ್ ಎಂದೂ, ಲ್ಯಾಟಿನ್ನಿನಲ್ಲಿ ಸಿನಿಕಸ್ ಎಂದೂ ಕರೆಯುತ್ತಾರೆ (ಸಂಸ್ಕೃತದ ಶುನಕ ಎಂಬ ಪದವನ್ನು ಹೋಲಿಸಿ). ಇದರಿಂದ ಡಯೋಜನೀಸ್ ಮತ್ತು ಅವನ ಅನುಯಾಯಿಗಳಿಗೆ cynics ಎಂಬ ಹೆಸರಾಯಿತು.
ಇವನು ಒಮ್ಮೆ ಹಾಡೇ ಹಗಲಿನಲ್ಲಿ ದೀವಟಿಗೆಯನ್ನು ಹೊತ್ತಿಸಿಕೊಂಡು, ಏನನ್ನೋ ಹುಡುಕುವನಂತೆ ಅಥೆನ್ಸ್ ನಗರದ ಬೀದಿಬೀದಿಗಳಲ್ಲಿ ಅಲೆಯುತ್ತಿದ್ದನು. ‘ಡಯೋಜನೀಸ್! ಏನು ಮಾಡುತ್ತಿದ್ದೀಯೆ?’ ಎಂದು ಜನರು ಕೇಳಲು ‘ಈ ನಗರದಲ್ಲಿ ಕೇವಲ ಒಬ್ಬನಾದರೂ ನಂಬಿಕಸ್ಥನಿದ್ದಾನೆಯೇ ಎಂದು ಹುಡುಕುತ್ತಿದ್ದೇನೆ’ ಎಂದು ಉತ್ತರವಿತ್ತನು. ಈಗ cynics ಎಂದರೆ ಯಾರನ್ನೂ ನಂಬದ ಸಂಶಯಾತ್ಮಕರು ಎಂಬ ಅರ್ಥವಿದೆ. ಇದಕ್ಕೆ ಈ ಕಥೆಯೇ ಕಾರಣವಿರಬಹುದು.
ಡಯೋಜನೀಸನು ತನ್ನ ಮುಪ್ಪಿನಲ್ಲಿ ಒಮ್ಮೆ ಸಮುದ್ರಯಾನ ಮಾಡುತ್ತಿದ್ದಾಗ ಕಡಲುಗಳ್ಳರ ಕೈಗೆ ಸಿಕ್ಕಿಬಿದ್ದನು. ಅವರು ಅವನನ್ನು ಕಾರಿಂಥ್ ಎಂಬ ನಗರಕ್ಕೆ ಕೊಂಡೊಯ್ದು ಅಲ್ಲಿ ಗುಲಾಮನನ್ನಾಗಿ ಮಾರಿದರು. ಅವನನ್ನು ವಿಕ್ರಯಿಸಿದ ಶ್ರೀಮಂತನು, ಆತನು ಯಾರು ಎಂದು ಅರಿವಾದ ಕೂಡಲೇ ಅವನನ್ನು ದಾಸ್ಯದಿಂದ ಬಿಡುಗಡೆ ಮಾಡಿದನು. ಮುಂದೆ ಡಯೋಜನೀಸನು ಮಕ್ಕಳಿಗೆ ಬೋಧಿಸುತ್ತ ಆ ನಗರದಲ್ಲೇ ನೆಲಸಿದನು.
ಆ ಸಮಯದಲ್ಲಿ ಪರ್ಷಿಯ ಮತ್ತು ಇಂಡಿಯಾಗಳ ಮೇಲೆ ದಂಡಯಾತ್ರೆಗೆ ಸಿದ್ಧವಾಗುತ್ತಿದ್ದ ಅಲೆಕ್ಸಾಂಡರನು ಕಾರಿಂಥ್ ಪಟ್ಟಣಕ್ಕೆ ಬಂದಿದ್ದನು. ಅಲೆಕ್ಸಾಂಡರನು ಆ ವೇಳೆಗಾಗಲೇ ತುಂಬ ಪ್ರಸಿದ್ಧನಾಗಿದ್ದನು. ಅದು ಮಾತ್ರವಲ್ಲ, ತಾನು ದೇವಾಧಿದೇವನಾದ ಜ಼್ಯೂಸನ ಮಗನೆಂದೇ ಧೃಢವಾಗಿ ನಂಬಿದ್ದನು. ಆದರೂ ಅವನಿಗೆ ಜ್ಞಾನಿಗಳು, ಮೇಧಾವಿಗಳು ಎಂದರೆ ತುಂಬ ಗೌರವವಿತ್ತು. ಅಲೆಕ್ಸಾಂಡರನನ್ನು ಸಂದರ್ಶಿಸಲು ಪುರಪ್ರಮುಖರು, ಪಂಡಿತರು, ವರ್ತಕರು ಮುಂತಾದ ಗಣ್ಯ ವ್ಯಕ್ತಿಗಳೆಲ್ಲರೂ ತಂಡತಂಡವಾಗಿ ಹೋಗುತ್ತಿದ್ದರು. ಡಯೋಜನೀಸನು ಮಾತ್ರ ಹೋಗಲಿಲ್ಲ. ತನ್ನ ಪಾಡಿಗೆ ತಾನಿದ್ದನು. ಇಂಗ್ಲೀಷಿನಲ್ಲಿ ಒಂದು ಗಾದೆಯಿದೆ. "If the mountain won't come to Muhammad then Muhammad must go to the mountain." ಎಂದು
ಅದರಂತೆ ಅಲೆಕ್ಸಾಂಡರನು ತಾನೇ ಸ್ವತಃ ಡಯೋಜನೀಸನ ಮನೆಯ ಬಾಗಿಲಿಗೆ ಬಂದು ನಿಂತನು. ಅವರಿಬ್ಬರ ನಡುವೆ ಈ ಸಂಭಾಷಣೆ ನಡೆಯಿತು.
‘ನಾನು ಅಲೆಕ್ಸಾಂಡರ್ ಎಂಬ ಮಹಾರಾಜ
‘ನಾನು ಡಯೋಜನೀಸ್ ಎಂಬ ನಾಯಿ’
‘ನಿನಗೆ ಏನು ಬೇಕಾದರೂ ಕೇಳು, ಮಾಡಿಸಿಕೊಡುತ್ತೇನೆ’
‘ಸ್ವಾಮಿ, ತಾವು ಸೂರ್ಯನಿಗೂ ನನಗೂ ಮಧ್ಯೆ ನಿಂತು ಕತ್ತಲೆ ಮಾಡಿದ್ದೀರಿ. ಸ್ವಲ್ಪ ಪಕ್ಕಕ್ಕೆ ತೊಲಗಿದರೆ ಮಹದುಪಕಾರವಾಗುವುದು’
‘ಅಯ್ಯಾ, ನಿನಗೆ ನನ್ನನ್ನು ಕಂಡರೆ ಹೆದರಿಕೆಯೇ ಇಲ್ಲವೋ?’
‘ಪ್ರಭೂ, ತಾವು ಒಳ್ಳೆಯವರೋ, ಕೆಟ್ಟವರೋ?’
‘ನಾನು ಒಳ್ಳೆಯವನೆಂದೇ ಎಲ್ಲರೂ ಹೇಳುತ್ತಾರೆ’
‘ಒಳ್ಳೆಯವರನ್ನು ಕಂಡರೆ ಯಾರಾದರೂ ಹೆದರುತ್ತಾರೆಯೇ?’
ಇನ್ನು ಹೆಚ್ಚು ಮಾತಾಡಿ ಪ್ರಯೋಜನವಿಲ್ಲೆಂದು ಅಲೆಕ್ಸಾಂಡರನು ಅಲ್ಲಿಂದ ಹಿಂತಿರುಗಿದನು. ಈ ಸಂವಾದವನ್ನು ಕೇಳಿಸಿಕೊಂಡಿದ್ದ ಅವನ ಸಂಗಡಿಗರು ಒಳಗೊಳಗೇ ನಗುತ್ತಿದ್ದರು. ಅಲೆಕ್ಸಾಂಡರನು ಅವರಿಗೆ ‘ದಯವಿಟ್ಟು ನಗಬೇಡಿ. ನಾನು ಈ ಜನ್ಮದಲ್ಲಿ ಅಲೆಕ್ಸಾಂಡರನಾಗಿ ಹುಟ್ಟದಿದ್ದರೆ, ಖಂಡಿತವಾಗಿಯೂ ಡಯೋಜನೀಸನಾಗಿ ಹುಟ್ಟಬಯಸುತ್ತಿದ್ದೆ’ ಎಂದು ಹೇಳಿದನು.
ಡಯೋಜನೀಸನು ವೃದ್ಧನಾದನು. ಆಗ ಕೆಲವರು ಅವನ ಬಳಿ ಬಂದು ‘ಅಯ್ಯಾ, ನಿನಗೆ ಹೆಂಡಿರಿಲ್ಲ, ಮಕ್ಕಳಿಲ್ಲ, ಒಬ್ಬ ಸೇವಕನೂ ಇಲ್ಲ. ನೀನು ಸತ್ತರೆ ನಿನ್ನನ್ನು ಹೂಳುವವರು ಯಾರು? ಅಪರ ಕರ್ಮಗಳನ್ನು ಮಾಡುವವರು ಯಾರು?’ ಎಂದು ಮುಂತಾಗಿ ಅಧಿಕ ಪ್ರಸಂಗದ ಮಾತುಗಳನ್ನಾಡಿದರು. ಡಯೋಜನೀಸನು ನಗುತ್ತಲೇ ‘ನನ್ನ ಈ ಮನೆ ಯಾರಿಗೆ ಬೇಕಾಗಿದೆಯೋ, ಅವರೇ ಇದೆಲ್ಲವನ್ನೂ ಮಾಡುವರು, ನೀವು ವೃಥಾ ಚಿಂತಿಸಬೇಡಿ’ ಎಂದು ಹೇಳಿ ಆ ಧೂರ್ತರನ್ನು ಸಾಗಹಾಕಿದನು.
click to listen audio > ಏಕಂ ಸತ್ (ದೇವರೊಬ್ಬ) Ekam sath by Sri Ashok Kumar
ದೇವನೊಬ್ಬ, ನಾಮ ಹಲವು ಎಂದು ಹೇಳುತ್ತೇವಲ್ಲವೇ, ಅದನ್ನೇ ವೇದದಲ್ಲಿ ‘ಏಕಮ್ ಸತ್, ವಿಪ್ರಾ ಬಹುದಾ ವದಂತಿ’ ಅಂದರೆ ಇರುವ ಒಂದೇ ಸತ್ಯವನ್ನು ತಿಳಿದವರು ಬಹುವಾಗಿ ಹೇಳುತ್ತಾರೆ. ಮೇಲ್ನೋಟಕ್ಕೆ ಹಿಂದೂ ಧರ್ಮವೊಂದು ಗೊಜಲು. ಅನೇಕಾನೇಕ ದೇವರುಗಳು, ನಾನಾರೀತಿಯ ಆಚರಣೆಗಳು. ಎಲ್ಲವೂ ಅರ್ಥಹೀನ ಅಂದುಕೊಳ್ಳುವ ಮುಂಚೆ, ಅರ್ಥವನ್ನು ಕಂಡುಕೊಳ್ಳಲು ಎಷ್ಟು ಪ್ರಯತ್ನಿಸಿದ್ದೇವೆ ಎಂದು ಯೋಚಿಸಬೇಕು. ಪ್ರಯತ್ನಿಸಿದರೆ ಎಲ್ಲದಕ್ಕೂ ಅರ್ಥ ಸಿಕ್ಕೇ ಸಿಗುತ್ತದೆಂದು ಹೇಳಲಾಗದಿದ್ದರೂ, ಕೆಲವಕ್ಕಾದರೂ ಪ್ರಬುದ್ಧ ಅರ್ಥಗಳು ಸಿಕ್ಕಿದಾಗ ನಮ್ಮ ಪ್ರಾಚೀನರ ಆಲೋಚನೆಗಳ ವೈಜ್ಞಾನಿಕತೆಯನ್ನು ಕಂಡು ಹೆಮ್ಮಯೆನಿಸುವುದು ಮಾತ್ರವಲ್ಲದೇ, ಈ ಧರ್ಮದಲ್ಲಿ ಹುಟ್ಟಿದ್ದಕ್ಕಾಗಿ ಧನ್ಯತೆಯ ಭಾವ ಬರುವುದರಲ್ಲಿ ಸಂಶಯವಿಲ್ಲ. ಹೀಗೆ ದೊರೆತ ಅರ್ಥಗಳಲ್ಲೊಂದನ್ನು ನಿಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ.
ವಿಶ್ವದ ಅಗಾಧತೆಯನ್ನು, ಅದರ ರಚನೆಯ ಸಂಕೀರ್ಣತೆಯನ್ನು, ವ್ಯವಸ್ಥೆಯ ವೈಖರಿಯನ್ನು ಕಂಡು ಬೆಕ್ಕಸ ಬೆರಗಾದ ನಮ್ಮ ಪೂರ್ವಿಕರು, ಇದೆಲ್ಲದರ ಹಿಂದೆ ಯಾವುದೋ ಬುದ್ಧಿಶಕ್ತಿ ಇರಲೇಬೇಕೆಂದು ಭಾವಿಸಿ ಅದನ್ನೇ ದೇವರೆಂದು ಕರೆದರು. ಕಾಣದ ದೇವರನ್ನು ವಿಶ್ವದ ರೂಪದಲ್ಲಿಯೇ ಕಂಡಾಗ ಈ ವ್ಯವಸ್ಥೆಯಲ್ಲಿ ಮೂಲಭೂತವಾದ ಮೂರು ಕಾರ್ಯಗಳನ್ನು ಕಂಡರು. ಅದೆಂದರೆ ಯಾವುದೋ ಹಿಂದಿರದಿದ್ದ ಶಕ್ತಿಯ ಅಥವಾ ದ್ರವ್ಯದ ಅಥವಾ ಜೀವದ ಹುಟ್ಟು, ಆ ರೀತಿ ಸೃಷ್ಟಿಯಾದ ಅದರ ಇರವು ಅಥವಾ ಸ್ಥಿತಿ ಮತ್ತು ಅದರ ನಾಶ ಅಥವಾ ಲಯ..
ಹುಟ್ಟಿನ ಅಥವಾ ಸೃಷ್ಟಿಯ ಹಿಂದಿರುವ ಶಕ್ತಿಯನ್ನೇ ಬ್ರಹ್ಮನೆಂದು ಕರೆದರೆ, ಸ್ಥಿತಿಯ ಹಿಂದಿರುವ ಶಕ್ತಿಯನ್ನು ವಿಷ್ಣುವಾಗಿಯೂ, ಲಯದ ಹಿಂದಿನ ಶಕ್ತಿಯನ್ನು ಶಿವನಾಗಿಯೂ ಕಂಡರು. ಹೀಗೆ ಒಬ್ಬ ದೇವರನ್ನು ಮೂರು ಮಹಾಕಾರ್ಯಗಳಂತೆ ವಿಂಗಡಿಸಿ ತ್ರಿಮೂರ್ತಿ ರೂಪದಲ್ಲಿ ಕಂಡರು. ಇದೇ ಅರ್ಥದಲ್ಲಿಯೇ ಭಗವತ್ ಶಕ್ತಿಯ ಮೂರು ರೂಪಗಳಾಗಿ ವೇದಗಳಲ್ಲಿ ಬ್ರಹ್ಮ, ವಿಷ್ಣು, ಮತ್ತು ಶಿವ ಇವರುಗಳ ಉಲ್ಲೇಖವಿರುವುದಂತೆ. ಅವರ ವಿವಿಧ ರೂಪಗಳು, ಕುಟುಂಬ ಮತ್ತು ಕಥೆಗಳೆಲ್ಲ ಆಮೇಲೆ ರಚನೆಯಾದ ಪುರಾಣಗಳಿಗೆ ಮಾತ್ರ ಸೀಮಿತವಾದದ್ದು ಎನ್ನುತ್ತಾರೆ..
ಧರ್ಮಪತ್ನಿ ಅಥವಾ ಅರ್ಧಾಂಗಿಯೆಂದರೆ, ಆಂಗ್ಲದಲ್ಲಿ ಉತ್ತಮ ಅರ್ಧ ಎಂದು ಹೇಳುವುದುಂಟು. ಹಿಂದಿನ ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಹೊತ್ತು ಹುಟ್ಟುವ ಮುನ್ನವೇ, ದೈನಂದಿನ ಕಾರ್ಯಕ್ಕೆಂದು ಹೊರಡುವ ಪತಿ ಹಿಂತಿರುಗುವುದು ದಿನ ಕಳೆದ ನಂತರವೇ. ಆದುದರಿಂದ ಅವನನ್ನು ಕಾಣುವುದು ಬಹಳ ಕಷ್ಟ. ಆದರೆ ಅವನ ದುಡಿಮೆ, ಮತ್ತು ವ್ಯಕ್ತಿತ್ವದ ಸ್ತರವನ್ನು ಅವನ ಮನೆಯೊಡತಿ, ಕುಟುಂಬವನ್ನು ನಡೆಸುವ ರೀತಿಯಲ್ಲಿ ಕಂಡುಕೊಳ್ಳಬಹುದಿತ್ತಲ್ಲವೇ, ಅಂತೆಯೇ ವ್ಯಕ್ತವಾಗುವುದೆಲ್ಲವೂ ದೇವಿ ಅಥವಾ ದೇವಿ ಸ್ವರೂಪ, ಪುರುಷನು ಅವ್ಯಕ್ತ..
ಕಟ್ಟು ಕಥೆಗಳಂತಿರುವ ಪುರಾಣಗಳನ್ನೂ ಅಸಂಬದ್ಧವೆಂದು ಕಾಣುವಂತಿಲ್ಲ. ಅದರಲ್ಲಿ ಹೇಳಿರುವ, ದೇವರ ಅರ್ಧಾಂಗಿಯರಿಗೂ ಅರ್ಥಪೂರ್ಣ ಕಲ್ಪನೆಯ ತಳಹದಿಯಿದೆ. ಉದಾಹರಣೆಗಾಗಿ, ಯಾವುದಾದರೂ ಹೊಸ ವಸ್ತುವಿನ ಸೃಷ್ಟಿಗಾಗಿ ಅದರ ವಿನ್ಯಾಸ, ಅದರ ರಚನೆಯ ಜಾಣತನ ಮುಂತಾದ ವಿಷಯಗಳ ಹಿಂದೆ ಮುಖ್ಯವಾಗಿ ಬೇಕಾಗಿರುವುದು ಬುದ್ಧಿ ಅಥವಾ ವಿದ್ಯೆ. ಅದನ್ನೇ ವಿದ್ಯಾಧಿದೇವತೆಯಾದ ಸರಸ್ವತಿಯ ರೂಪದಲ್ಲಿ ಕಂಡರು. ಅದಿಲ್ಲದಿದ್ದರೆ ಬ್ರಹ್ಮನೇನು ಮಾಡಬಹುದು? ಅದನ್ನೇ ಬ್ರಹ್ಮನ ಅರ್ಧಾಂಗಿಯೆಂದು ಕಂಡರು. ಹಾಗೆಯೇ ಹುಟ್ಟಿದ ಏನನ್ನಾದರೂ ಅದರ ಸ್ಥಿತಿಯಲ್ಲಿ ಕಾಪಾಡಲು ಅಥವಾ ಸಾಕಲು ಮುಖ್ಯವಾಗಿ ಸಂಪತ್ತಿನ ಅವಶ್ಯಕತೆಯಿದೆಯಲ್ಲವೇ? ಉದಾಹರಣೆಗೆ ಯಾವುದಾದರೂ ಕಟ್ಟಡವೊಂದನ್ನು ನಿರ್ಮಿಸಿದ ಮೇಲೆ ಅದರ ನಿರ್ವಹಣೆಗಾಗಿ ಸಂಪತ್ತಿನ ಅವಶ್ಯಕತೆ ಇರುವುದಲ್ಲವೇ? ಅದನ್ನೇ ಲಕ್ಷ್ಮಿಯಾಗಿ, ವಿಷ್ಣುವಿನ ಅರ್ಧಾಂಗಿಯಾಗಿ, ಸಂಪತ್ತಿನ ಅಧಿದೇವತೆಯಾಗಿ ಕಂಡರು. ಅದೇ ರೀತಿಯಲ್ಲಿಯೇ ಏನನ್ನಾದರೂ ಲಯಗೊಳಿಸಬೇಕಾದಲ್ಲಿ ಶಕ್ತಿಯ ಅವಶ್ಯಕತೆಯೇ ಮುಖ್ಯವಲ್ಲವೇ? ಉದಾಹರಣೆಗೆ ಒಂದು ಕಟ್ಟಡವನ್ನು ನೆಲಸಮಗೊಳಿಸಲು ಬೇಕಾಗಿರುವುದು ಅಗಾಧ ಶಕ್ತಿ, ಮತ್ತು ಇದನ್ನೇ ಪಾರ್ವತಿಯೆಂದೂ, ಶಿವನ ರಾಣಿಯೆಂದೂ ಶಕ್ತಿಯ ಅಧಿದೇವತೆಯೆಂದೂ ಕರೆದಿರುವುದು ಸಮಂಜಸವಾಗಿರುವುದಲ್ಲವೇ?.
ಏನಿದು? ದೇವರನ್ನು ಅನೇಕವಾಗಿ ಕಾಣುವುದು ಮಾತ್ರವಲ್ಲದೇ, ನಮ್ಮಂತೆ ಸತಿ ಸುತರನ್ನೂ ಕಟ್ಟಿದ್ದಾರಲ್ಲ, ಎಂತಹ ಮೌಢ್ಯವೆಂದು ನಿಕೃಷ್ಟವಾಗಿ ಕಾಣುತ್ತಿದ್ದ ನನಗೆ ಈ ರೀತಿಯ ಅರ್ಥವನ್ನೊಮ್ಮೆ ಕೇಳಿದಾಗ ನಮ್ಮ ಪೂರ್ವಿಕರ ಕಲ್ಪನೆಗೆ ಅಚ್ಚರಿಯೆನಿಸಿ, ನಮ್ಮ ಪ್ರತಿಯೊಂದು ಧಾರ್ಮಿಕ ವಿಷಯಗಳಿಗೂ ಅರ್ಥವನ್ನು ಕಂಡುಕೊಳ್ಳುವ, ಆಲೋಚಿಸುವ, ಕಂಡುಕೊಂಡಾಗ ಅದನ್ನು ಎಲ್ಲರಿಗೂ ಸಾರುವ, ತನ್ಮೂಲಕ ಎಲ್ಲರಲ್ಲಿಯೂ ಧರ್ಮದ ಬಗ್ಗೆ ನಂಬಿಕೆ, ಶ್ರದ್ಧೆಯನ್ನು ಬಲಪಡಿಸುವ ತವಕ.
click to listen audio ಕಲ್ಪವೃಕ್ಷ Kalpavruksha by Sri.Kanakapur Narayana
ಈಗಿನ ಕಾಲದಲ್ಲಿ ರಜೆಯಲ್ಲಿ ಮಕ್ಕಳಿಗೆ ಮನೋರಂಜನೆಗೆಂದು ಸಿನಿಮಾ,ಪಿಕ್ ನಿಕ್, ಬೀಚ್ ವಂಡರ್ಲ್ಯಾಂಡ್ ಈ ಥರದ ಸ್ಥಳಗಳಿಗೆ ಹೋಗಿ ದುಡ್ಡೂ ಖರ್ಚು ಮಾಡಿಕೊಂಡು,ದೇಹಕ್ಕೂ ಮನಸ್ಸಿಗೂ ಆಯಾಸ ಮಾಡಿಕೊಂಡು ಬರುವುದು ಪದೇ ಪದೇ ರಜೆಯಲ್ಲಿ ಮರುಕಳಿಸುತ್ತಿದೆ. ನಾವು ಮಕ್ಕಳಾಗಿದ್ದಾಗ ರಜೆಯಲ್ಲಿ ಅಜ್ಜನ ಊರಿಗೆ ಹೋಗುವುದು,ಅಲ್ಲಿ ಯಾವುದೇ ಪಾರ್ಕ್, ಬೀಚ್ ಇಲ್ಲದಿದ್ದರೂ ಖರ್ಚಿಲ್ಲದೇ ಕೆರೆ,ತೋಟ,ಆಲೆಮನೆಗಳಲ್ಲಿ ಆಡಿದ್ದು ಇಂದಿಗೂ ಮರೆಯಲಾಗದ ಅನುಭವಗಳು.ಸಂಜೆಯವೇಳೆಗೆ ತಾತನ ಜೊತೆಯಲ್ಲಿ ಗುಡಿಗೆ ಹೋಗಿಬರುವುದು,ಹಿಂತಿರುಗಿ ಬರುವಾಗ ಹಣ್ಣು ಕಾಯಿ ಕದ್ದು ತಾತನಿಂದ ಬೈಸಿಕೊಂಡದ್ದು ಇನ್ನೂ ನೆನಪಿದೆ.ಅಲ್ಲಿ ತಂಪಾದ ಸಂಜೆಯ ಹಳ್ಳಿಯ ದಾರಿಯಲ್ಲಿ ನಡೆದು ಬರುವಾಗ ಎತ್ತಿನ ಗಾಡಿಯ ಹಿಂದೆ ಜೋತುಬಿದ್ದು ಮಜ ಮಾಡುತ್ತಿದ್ದ ಸಮಯ ಇವೇ ಮೊದಲಾದ ಸವಿನೆನಪುಗಳು.ದಾರಿಯಲ್ಲಿ ನಡೆದು ಬರುವಾಗ ತಾತ ಹೇಳುತ್ತಿದ್ದ ಚಿಕ್ಕ ಚಿಕ್ಕ ಕಥೆಗಳು ಇನ್ನೂ ಮರೆಯುವಂತಿಲ್ಲ.ಅವುಗಳಲ್ಲಿ ಒಂದು ಸ್ವಾರಸ್ಯಕರವಾದ ಕಥೆಯನ್ನು ಈಗ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಕಥೆ - ಹಿಂದೊಮ್ಮೆ ಬಸ್ಸು ಕಾರು ಇಲ್ಲದ ಕಾಲದಲ್ಲಿ ಯಾತ್ರಿಕನೊಬ್ಬ ನಡೆದು ಹೋಗುತ್ತಿದ್ದ.ಬಿಸಿಲಿನ ಬೇಗೆಯಿಂದ ಸುಸ್ತಾಗಿದ್ದ ಆತ ಒಂದು ಆಲದ ಮರದ ನೆರಳಿನಲ್ಲಿ ವಿಶ್ರಾಂತಿಗೆಂದು ಕುಳಿತ.ಹಾಯೆನಿಸಿತು.ತಂಪಾದ ನೆರಳೇನೋ ಸಿಕ್ಕಿತು ಆದರೆ ಸ್ವಲ್ಪ ನೀರು ಸಿಕ್ಕರೆ ಬಾಯಾರಿಕೆ ನಿವಾರಿಸಿಕೊಳ್ಳಬಹುದು ಎಂದು ಮನಸ್ಸಿನಲ್ಲಿ ಅಂದುಕೊಂಡ.ಕೂಡಲೇ ಒಂದು ಮಡಕೆಯಲ್ಲಿ ತಂಪಾದ ನೀರು! ಹಿಂದೆ ಮುಂದೆ ನೋಡದೆ "ಅರೆ ಇಲ್ಲೇ ನೀರೂ ಇದೆ"ಎಂದು ಕುಡಿದ,ಕೆಲ ನಿಮಿಷಗಳ ಕಾಲ ಸುಮ್ಮನಿದ್ದು ಹೊರಡಲು ಎದ್ದುನಿಂತ.ಹೊಟ್ಟೆಗೆ ಬಹಳ ಹಸಿವಾಗಿತ್ತು."ಅಯ್ಯೋ ಇನ್ನಷ್ಟು ದೂರ ನಡೆಯಬೇಕು ಹಸಿವೆ ಆಗುತ್ತಿದೆ ಎಲ್ಲಾದ್ರೂ ಊಟ ಸಿಕ್ಕರೆ? ಅನ್ನುವಷ್ಟರಲ್ಲಿ ಕಣ್ಮುಂದೆ ಭಾರೀ ಭೋಜನ! ’ಹಾ! ಇದೇನಿದು? ಅಂದುಕೊಂಡದ್ದೆಲ್ಲಾ ಕಣ್ಣಮುಂದೆ ಬರುತ್ತಿದೆಯಲ್ಲ?"ಎಂದು ಮೆಲ್ಲಗೆ ಅದನ್ನು ನಿಜವಾದ ಊಟವೇ ಎಂದು ಪರೀಕ್ಷಿಸಲು ಮುಟ್ಟಿ ನೋಡಿದ.ನಿಜ!!ನಿಜವಾಗಿಯೂ ಊಟ! ಚೆನ್ನಾಗಿ ಹೊಟ್ಟೆಭರ್ತಿ ತಿಂದ.ಇನ್ನೇನು?ಊಟದ ನಂತರ ನಿದ್ದೆ ಬರುವಹಾಗಾಯ್ತು,ತೂಕಡಿಕೆ ಶುರುವಾಯ್ತು."ಒಂದು ಹಾಸಿಗೆ ಇದ್ದಿದ್ದ.....ರೆ ಅನ್ನುವಷ್ಟರಲ್ಲಿ ಧೊಪ್ಪೆಂದು ಮೆತ್ತನೆಯ ಹಾಸಿಗೆ ಮೇಲಿಂದ ಬಿತ್ತು! ಅರೆ ಹಾಸಿಗೆ? ಇಂಥಾ ವೇಳೆಯಲ್ಲಿ..... ನನ್ನ ಸಂಗಾತಿಯೂ ಹತ್ತಿರ ಇದ್ದಿದ್ದ......ರೆ ಎನ್ನುವಾಗಾಗಲೇ ರೀ! ಎಂದು ಪಕ್ಕದಲ್ಲಿ ಪತ್ನಿ! ಆಶ್ಚರ್ಯ! ಭಯ! ಎರಡೂ ಒಟ್ಟಿಗೇ ಆಗೋಕ್ಕೆ ಶುರುವಾಯ್ತು "ಏನಿದು ಈ ಮರವೇನಾದರೂ ಕಲ್ಪವೃಕ್ಷವೇ?ಕೇಳಿದ್ದೆಲ್ಲಾ ಕೊಡುತ್ತಿದೆ"ಎಂದು ಮನಸ್ಸಿನಲ್ಲಿ ಯೋಚಿಸುವಹೊತ್ತಿಗೆ ಪಕ್ಕದಲ್ಲಿದ್ದ ತನ್ನ ಪತ್ನಿ ರಾಕ್ಷಸಿಯಾಗಿ ಪರಿವರ್ತನೆಯಾದಳು.ಅಯ್ಯೋ ಇದೆಲ್ಲಾ ಈ ರಾಕ್ಷಸಿಯ ಮಾಯೆ!ಇಲ್ಲೇ ಇದ್ದರೆ ಇವಳು ನನ್ನನ್ನೇ ತಿಂದುಬಿಡುತ್ತಾಳೆ ಎಂದು ಓಡಲು ಆರಂಭಿಸಿದ,ಆದರೆ ಅವನು ಅಂದುಕೊಂಡಂತೆ ಏನೇನು ನಡೆಯಿತೋ ಹಾಗೇ ಆ ರಾಕ್ಷಸಿ ಅವನನ್ನು ಹಿಡಿದು ತಿಂದೇ ಬಿಟ್ಟಳು.ಅಲ್ಲಿಗೆ ಕಥೆ ಮುಗಿಯಿತು.
ಇಲ್ಲಿ ಅರಿಯಬೇಕಾದುದು ಇಷ್ಟೆ, ಕೇಳಿದ್ದನ್ನು ಕೊಡುವ,ಬಯಸಿದ್ದನ್ನು ನಡೆಸಿಕೊಡುವ ಕಲ್ಪವೃಕ್ಷದ ಕೆಳಗೇ ನಾವು ಬದುಕುತ್ತಿದ್ದೇವೆ.ಆ ಕಲ್ಪವೃಕ್ಷ ಮತ್ತಾವುದೂ ಅಲ್ಲದೆ "ನಮ್ಮ ಮನಸ್ಸು" (ನಮ್ಮ ಸೂಪ್ತಮನಸ್ಸು).ನಾವು ಅಂದುಕೊಡದ್ದನ್ನು, ಬಯಸಿದ್ದನ್ನು ದೊರಕಿಸಿಕೊಡುವ ಅಪಾರ ದಿವ್ಯ ಶಕ್ತಿ ಈ ಸೂಪ್ತಮನಸ್ಸಿಗೆ ಇದೆ.ನಾವು ಏನನ್ನು ತಪಸ್ಸಿನಂತೆ ಸದಾ ಬಯಸುತ್ತೇವೋ ಅದು ಖಂಡಿತವಾಗಿ ನೆರವೇರುತ್ತದೆ.ಕೆಲವರಿಗೆ ಬೇಗ, ಇನ್ಕೆಲವರಿಗೆ ನಿಧಾನ,ಅವರವರ ಕರ್ಮಾನುಸಾರವಾಗಿ ಈಡೇರುತ್ತದೆ.ಆದರೆ ಪ್ರತಿಯೊಬ್ಬರ ಮನದಾಳದ ನಿರಂತರ ಇಚ್ಚೆಗಳು ಪೂರೈಸುವುದು ನಿಶ್ಚಿತ.ಬಯಕೆಗಳು ಒಳ್ಳೆಯದಾಗಿರಲಿ, ಕೆಟ್ಟದ್ದಾಗಿರಲಿ ಅದು ಆಳವಾಗಿ ಮನಸ್ಸಿನಲ್ಲಿ ಬೇರೂರಿದ್ದರೆ ಸತತ ಪ್ರಯತ್ನ ತಾನೇ ಶುರುವಾಗಿ ಸಫಲತೆ-ಜಯ ಕಾಣುತ್ತದೆ.ಕೆಟ್ಟ ಹಾಗೂ ಬೇರೊಬ್ಬರಿಗೆ ಮಾರಕ ಎನ್ನುವ ಬಯಕೆಗಳು ಅಧರ್ಮದ ಸಂಕೇತ. ತಾನೂ ಬೆಳಗಿ ಮತ್ತೊಬ್ಬರಿಗೂ ಬೆಳಕು ಚೆಲ್ಲುವುದು ಒಳ್ಳೆಯ ಬಯಕೆ.ಹಾಗೇ ಸ್ವಾರ್ಥ ಬಯಕೆಗಳೂ ಶಾಂತಿಗೆ ಮಾರಕ. ಉದಾಹರಣೆ ಡಿ ವಿ ಜಿ ಅವರ ಕಗ್ಗದಲ್ಲಿ ಹೇಳುವಹಾಗೆ
"ಜನಕಜೆಯ ದರುಶನದಿನಾಯ್ತು ರಾವಣ ಚಪಲ|
ಕನಕಮೃಗದರುಶನದೆ ಜಾನಕಿಯ ಚಪಲ||
ಜನವವನ ನಿಂದಿಪುದು, ಕನಿಕರಿಪುದಾಕೆಯಲಿ|
ಮನದ ಬಗೆಯರಿಯದದು - ಮಂಕುತಿಮ್ಮ||"
ಇಲ್ಲಿ ರಾವಣ ಮತ್ತು ಜಾನಕಿ ಇಬ್ಬರಿಗೂ ಆಯಿತು ಚಪಲ(ಬಯಕೆ). ಜಾನಕಿಯ ಬಯಕೆ ಮತ್ತೊಬ್ಬರಿಗೆ ಕೆಡಕು ಅಗುವಂಥದ್ದಾಗಿರಲಿಲ್ಲ,ಆದರೆ ರಾವಣನ ಬಯಕೆ ಮತ್ತೊಬ್ಬರಿಗೆ ಕೆಡಕು ಮಾಡುವಂಥದ್ದಾಗಿತ್ತು.ಆದ್ದರಿಂದ ಜನ ಅವನ ಪಾತ್ರವನ್ನು ನಿಂದಿಸುತ್ತಾರೆ. ಕೆಟ್ಟ ಯೋಚನೆಗಳಿಂದ ಭಯ,ಆತಂಕ,ದುಗುಡ ಇನ್ನೂ ಅನೇಕ ಅನಾವಶ್ಯಕ ತೊಂದರೆಗಳ ಉದ್ಭವಕ್ಕೆ ಎಡೆ ಮಾಡಿಕೊಡುತ್ತದೆ.ಆದ್ದರಿಂದ ನಮ್ಮ ಮನಸ್ಸು ಸದಾ ಒಳ್ಳೆಯದನ್ನೇ ಬಯಸುತ್ತಿರಬೇಕು.
click to listen audioನಿರ್ಲಿಪ್ತರು ಯಾರು? Nirliptharu yaaru?by Sri.KanakapurNarayana
ಕಥೆಗಳ ಮೂಲಕ ಮನಸ್ಸಿಗೆ ಸುಲಭವಾಗಿ ನೀತಿ ನಾಟುವುದು ನಿಜ.ಇಂದು ಅಜ್ಜ ಹೇಳಿದ ಮತ್ತೊಂದು ಕಥೆ ಹಂಚಿಕೊಳ್ಳುವ ಆಸೆಯಾಗಿದೆ. ಹಿಂದೆ ಒಬ್ಬ ರಾಜನಿದ್ದನು.ರಾಜ್ಯವನ್ನು ಸುಭೀಕ್ಷವಾಗಿ ನಡೆಸುತ್ತಿದ್ದನು.ಪ್ರಜೆಗಳ ಪಾಲನೆ ಚೆನ್ನಾಗಿ ಮಾಡುತ್ತಿದ್ದನು.ಆತನು ಧರ್ಮಿಷ್ಟನೂ ದಯಾಳುವೂ ಆಗಿದ್ದನು.ಗುಣದಲ್ಲಿ ಒಳ್ಳೆಯವನೂ ಹಾಗೂ ಎಷ್ಟೇ ಸಂಪತ್ತಿದ್ದರೂ ಮತ್ತೆ ಹಣಕ್ಕೆ ಮೋಹಿತನಾಗದೇ ಬಾಳುತ್ತಿದ್ದನು.ತೃಪ್ತನು.ಸಂಸಾರದಲ್ಲಿದ್ದರೂ ತಾವರೆಯ ಎಲೆಯ ಮೇಲಿನ ನೀರಿನಂತೆ ಸುಖಗಳಿಗೆ ಅಂಟಿಯೂ ಅಂಟದಂತಿದ್ದನು. ಒಮ್ಮೆ ಇದ್ದಕ್ಕಿದ್ದಹಾಗೆ ಶತ್ರು ಸೈನ್ಯ ಆತನ ರಾಜ್ಯಕ್ಕೆ ದಂಡೆತ್ತಿ ಬಂದು ಸ್ವಲ್ಪವೂ ಮುನ್ಸೂಚನೆ ನೀಡದೇ ಆತನ ಸೈನ್ಯವನ್ನು ಸೋಲಿಸಿ,ಅವನನ್ನು ಬೀದಿ ಪಾಲು ಮಾಡಿತು.ಅರಮನೆಯ ವೈಭೋಗ,ಹೆಂಡತಿ, ಮಕ್ಕಳು,ಆಸ್ತಿ ಅಂತಸ್ತು ಎಲ್ಲಾ ಕಳೆದುಕೊಂಡು ಊರ ಹೊರಗೆ ಒಂದು ಗುಡಿಸಿಲಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿತು.ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಹಾಗಾಯ್ತು.ಕಷ್ಟಗಳ ಸುಳಿಗೆ ಸಿಲುಕಿದ ರಾಜನಿಗೆ ಬಹಳ ಬೇಸರವಾಯಿತು,ದುಃಖ ಅನುಭವಿಸಲಾರದೇ ನೊಂದು ಬಳಲಿದ.
ಇಷ್ಟರಲ್ಲಿ ರಾಜನಿಗೆ ಇದ್ದಕ್ಕಿದ್ದಂತೆ ಎಚ್ಚರ ವಾಯಿತು."ಅರೆ ಇಷ್ಟು ಹೊತ್ತು ಕಂಡದ್ದೆಲ್ಲಾ ಕನಸೇ?" ಎಂದು ನೆಮ್ಮದಿಯ ಉಸಿರು ಬಿಟ್ಟ. ತನ್ನ ಕನಸಿನಿಂದ ರಾಜನಿಗೆ ಜ್ಞಾನೋದಯವಾಯಿತು."ನಾನು ಇಷ್ಟುದಿನ ಸುಖವನ್ನು ಮಾತ್ರ ಅಂಟದೇ ಬದುಕಿದೆ,ಆದರೆ ದುಃಖಬಂದಾಗ ಬದುಕುವ ಶಕ್ತಿಯೇ ನನ್ನಲ್ಲಿ ಇಲ್ಲವಾಗಿತ್ತು,ದುಃಖವನ್ನು ಅಂಟದೇ ಬದುಕುವ ಮನೋಬಲ ನನಗಿನ್ನೂ ಬಂದಿಲ್ಲ,ಕನಸಿನಲ್ಲಿ ಬಂದ ಕಷ್ತಕ್ಕೇ ಕಂಗಾಲಾಗಿ ಹೋದೆನಲ್ಲಾ!ಇನ್ನು ನಿಜವಾಗಿ ಕಷ್ಟ ಬಂದರೆ?"ಎಂದು ಎಚ್ಚೆತ್ತುಕೊಂಡ.ದುಃಖದಲ್ಲೂ ಸಹ ದೃಢವಾಗಿ,ನಿಶ್ಚಲವಾಗಿ ನಿಲ್ಲುವಂತೆ ಮನಸ್ಸನ್ನು ಪಕ್ವಗೊಳಿಸಿಸುವ ಪ್ರಯತ್ನದಲ್ಲಿ ತೊಡಗಿದ.
ನಾವೂ ಹಾಗೇ ನಮ್ಮ ಜೀವನದಲ್ಲಿ ಪ್ರತಿ ವಿಚಾರವನ್ನೂ ಅಂಟಿಯೂ ಅಂಟದಂತೆ ವ್ಯವಹರಿಸುತ್ತಿದ್ದರೆ ಆಂತರಿಕ ಶಕ್ತಿ ಹೆಚ್ಚುತ್ತದೆ.ಇದನ್ನೇ ನಿರ್ಲಿಪ್ತ ಮನೋಭಾವ ಎನ್ನುವುದು.ಅದನ್ನು ಪಾಲಿಸುವವರೇ ನಿರ್ಲಿಪ್ತರು.ನಾವು ಏಕೆ ಅಂಟದಂತಿರಬೇಕು? ಎನ್ನುವುದನ್ನು ತಿಳಿಯೋಣ.ಈ ಪ್ರಪಂಚದಲ್ಲಿ ಯಾವುದು ನಮ್ಮದಲ್ಲವೋ ಅದನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ.ಅದರಿಂದ ಆಂತರಿಕ ಶಕ್ತಿ ಕ್ಷೀಣಿಸುತ್ತಿದೆ ಎಂದರೆ ತಪ್ಪಾಗಲಾರದು.ನನ್ನದು ನನ್ನದು ನನ್ನದು ಎನ್ನುವುದು ಮನಸ್ಸಿಗೆ ಭಾರವಾಗುತ್ತಿದೆಯೇ ಹೊರತು ಹಗುರವಾಗುತ್ತಿಲ್ಲ.ಈ ರೀತಿ ವಿವೇಕದಿಂದ ಯೋಚಿಸಿ ಕಷ್ಟ-ಸುಖವೆರೆಡರಲ್ಲೂ ಅಂಟಿಯೂ ಅಂಟದಂತೆ ವ್ಯವಹರಿಸುತ್ತಿದ್ದರೆ ಆಂತರಿಕ ಶಕ್ತಿ ಹೆಚ್ಚಾಗಿ,ಸುಖ ದುಃಖಗಳಿಗೆ ಅತೀತವಾದ ಉನ್ನತ ಆತ್ಮಸ್ಥಿತಿಯನ್ನು ಹೊಂದಬಹುದು.
ವೈಜ್ಞಾನಿಕ ಸಂಶೋಧನೆಗಳು ಮಾನವನ ಜೀವನವನ್ನು ಸರಳ, ಸುಖಮಯ, ಸುಂದರ ಹಾಗೂ ಕೌತುಕಮಯವನ್ನಾಗಿಸಿದೆ. ಎಲ್ಲ ಕಾಲದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಜೀವನವನ್ನೂ ಸ್ಪರ್ಶಿಸುತ್ತಾ ಜೀವನದ ಅವಿಭಾಜ್ಯ ಅಂಗವೇ ಆಗಿರುವ ವೈಜ್ಞಾನಿಕ ಸಂಶೋಧನೆಗಳ ಹರವು, ಸ್ಥೂಲಾತಿಸ್ಥೂಲದಿಂದ ಹಿಡಿದು ಸೂಕ್ಷ್ಮಾತಿಸೂಕ್ಷ್ಮದವರೆಗೆ ಹರಡಿದೆ. ಇದರ ಹೊರತು ಇಂದು ಜೀವನವನ್ನು ಊಹಿಸಲೂ ಕಷ್ಟವೆನಿಸುತ್ತದೆ.
ಸ್ಥೂಲಾತಿಸ್ಥೂಲ ವೈಜ್ಞಾನಿಕ ಸಂಶೋಧನೆಯನ್ನು ಅವಲೋಕಿಸಿದರೆ ಮಾನವನು ಭೂಮಿಯ ವಾತಾವರಣವನ್ನು ಭೇದಿಸಿ ಬಾಹ್ಯಾಕಾಶಕ್ಕೆ ಜಿಗಿದು ಚಂದ್ರನ ಮೇಲೆ ಕಾಲಿರಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಬಾಹ್ಯಾಕಾಶದಲ್ಲಿ ವೈಜ್ಞಾನಿಕ ಸಂಶೋಧನೆಯ ಪ್ರಯೋಗಾಲಯಗಳನ್ನು ಸ್ಥಾಪಿಸಿರುವುದು, ಅತ್ಯಂತ ಶಕ್ತಿಶಾಲಿ “ಹಬ್ಬಲ್“ ದೂರದರ್ಶನವನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸಿ ದೂರದ ತಾರೆ, ನಿಹಾರಿಕೆಗಳ ಛಾಯಾ ಚಿತ್ರಗಳನ್ನು ಪಡೆಯುತ್ತಿರುವುದು, ಸೌರಮಂಡಲದ ಬೇರೆ ಗ್ರಹಗಳಿಗೆ ಬಾಹ್ಯಾಕಾಶ ನೌಕೆಗಳು ಮತ್ತು ರೋಬೋಗಳನ್ನು ಕಳುಹಿಸಿ ಸಂಶೋಧನೆ ನಡೆಸುತ್ತಿರುವುದು ಜನಜನಿತ. ಮುಂದೆಲ್ಲಿಗೆ ನಮ್ಮ ಪಯಣವೆಂದು ಯೋಚಿಸಿದರೆ ಬೇರೆ ತಾರೆಗಳು ಮತ್ತು ಅವುಗಳ ಗ್ರಹ ಮಂಡಲದೆಡೆಗೆ ಎಂದೆನಿಸುತ್ತದೆ. ಬೇರೆ ತಾರೆಗಳೆಂದರೆ ಸೂರ್ಯನಿಗೆ ಅತ್ಯಂತ ಹತ್ತಿರವಿರುವ ಒಂದು ಪುಟ್ಟ ತಾರೆಯ ಹೆಸರು “ಪ್ರಾಕ್ಸಿಮಾ ಸೆಂಟೌರಿ“ ಎಂದು. ಸೌರಮಂಡಲದಿಂದ ಅದರ ದೂರ ೪.೩ ಜ್ಯೋತಿರ್ವರ್ಷಗಳು. ಎಂದರೆ ಜ್ಯೋತಿಯ ವೇಗದಲ್ಲಿ ಪಯಣಿಸಿದರೆ ಅದನ್ನು ತಲುಪಲು ೪.೩ ವರ್ಷಗಳು ಬೇಕಾಗುತ್ತದೆ. ಹಿಂತಿರುಗಿ ಬರಲು ಮತ್ತೆ ಅಷ್ಟೇ ಕಾಲ ಬೇಕು. ವಿಜ್ಞಾನ ಇಂದು ತಲುಪಿರುವ ರಾಕೆಟ್ ನ ವೇಗದಲ್ಲಿ ಪಯಣಿಸಿದರೆ ಮಾನವನ ಜೀವಮಾನದಲ್ಲಿ ಹೋಗಿ ಹಿಂತಿರುಗಲು ಸಾಧ್ಯವಿಲ್ಲ. ಯಾವುದೇ ಭೌತಿಕ ವಸ್ತುಗಳು ಬೆಳಕಿನ ವೇಗವನ್ನು ತಲುಪಲು ಸಾಧ್ಯವೇ ಇಲ್ಲವೆನ್ನುತ್ತಾರೆ. ತಲುಪಿದರೆ ಅದು ಭೌತಿಕ ವಸ್ತುವಾಗಿ ಉಳಿಯದೇ ಬೆಳಕೇ ಆಗಿ ಬಿಡುತ್ತದೆ ಎನ್ನುತ್ತಾರೆ. ಹಾಗಾದರೆ ಬೆಳಕನ್ನೇ ಕಳುಹಿಸಿದರೆ ಹೇಗೆ ಎಂದರೆ, ಬೆಳಕು ಸ್ವಲ್ಪ ದೂರ ಪಯಣಿಸಿದ ನಂತರ ಅದು ಹೊರಟ ಜಾಗಕ್ಕೇ ಹಿಂತಿರುಗುತ್ತದಂತೆ, ಭೂಮರಂಗ್ ರೀತಿಯಲ್ಲಿ. ಹಾಗಿದ್ದರೆ ಇದೇ ಸ್ಥೂಲಾತಿ ಸ್ಥೂಲ ವೈಜ್ಞಾನಿಕ ಸಂಶೋಧನೆಯ ಕೊನೆಯಿರಬಹುದೇ?
ಇನ್ನು ಸೂಕ್ಷ್ಮಾತಿಸೂಕ್ಷ್ಮ ಸಂಶೋಧನೆಗಳನ್ನು ನೋಡಿದರೆ, ಭೌತಿಕ ವಸ್ತುಗಳ ಅತ್ಯಂತ ಸೂಕ್ಷ್ಮ ಕಣಗಳಾದ ಅಣುವನ್ನು ಭೇದಿಸಿ ನೋಡಿದಾಗ ಅದರಲ್ಲೊಂದು ಸೌರಮಂಡಲವೇ ಕಾಣಿಸಿತು. ಪ್ರೋಟಾನ್ ಎಂಬ ಸೂರ್ಯನ ಸುತ್ತಲೂ ತಿರುಗುತ್ತಿರುವ ಎಲೆಕ್ಟ್ರಾನ್ ಗಳೆಂಬ ಗ್ರಹಗಳು ಪ್ರತಿಯೊಂದು ಪರಮಾಣುವಿನಲ್ಲಿ. ಪ್ರೋಟಾನ್ ಗಳನ್ನು ಮತ್ತೂ ಒಡೆದು ನೋಡಿದರೆ ಅವರಿಗೆ ಕಂಡು ಬಂದದ್ದು ಮತ್ತೂ ಸೂಕ್ಷ್ಮ ಪರಮಾಣು ದ್ರವ್ಯವಾದ ಕ್ವಾರ್ಕ್ ಗಳು. ಏನು ಈ ಕ್ವಾರ್ಕ್ ಗಳು ಎಂದು ಸಂಶೋಧನೆ ಮುಂದುವರೆಸಿದಾಗ ಅದೇನೆಂದೇ ತಿಳಿಯುವುದಿಲ್ಲವಂತೆ. ಒಮ್ಮೊಮ್ಮೆ ಅದು ಶಕ್ತಿ (energy) ಯಂತೆ ವರ್ತಿಸಿದರೆ ಮತ್ತೊಮ್ಮೆ ಅದು ಕಣದಂತೆ (particle)ವರ್ತಿಸುತ್ತದಂತೆ. ಇನ್ನೂ ಆಶ್ಚರ್ಯಕರ ವಿಷಯವೆಂದರೆ ಅದು ನಮ್ಮ ಮನಸ್ಸಿನಂತೆ ವರ್ತಿಸುವುದಂತೆ. ಅದನ್ನು ಶಕ್ತಿಯೆಂದುಕೊಂಡು ನೋಡಿದರೆ ಶಕ್ತಿಯೂ ಕಣವೆಂದುಕೊಂಡು ನೋಡಿದರೆ ಕಣದಂತೆಯೂ ಕಾಣುವುದಂತೆ. ಈ ಹಂತದಲ್ಲಿ ಸಂಶೋಧಕರು ಸಂಶೋಧನೆಯ ಅಂಶವೇ ಆಗಿ ಬಿಡುವರಂತೆ. ಮತ್ತೊಮ್ಮೆ ವೈಜ್ಞಾನಿಕ ಸಂಶೋಧನೆಯ ಕೊನೆ ಮುಟ್ಟಿದೆವೆನಿಸುತ್ತದೆ. ಆದರೆ ಬಹಳ ಗಮನವಿಟ್ಟು ಇದನ್ನು ನೋಡಿದಾಗ ತಿಳಿಯುವುದು ಇದು ಕೊನೆಯೆಂದಲ್ಲ, ಆದರೆ ಹಿಂತಿರುಗಿ ಹೋಗಿ ಎಂಬ ಫಲಕವಿದು. ಅಂದರೆ ಮುಂದಿನ ಸಂಶೋಧನೆ ನಿಮ್ಮೊಳಗೆ ಆಗಬೇಕೇ ಹೊರತು ಹೊರಗಲ್ಲ ಎಂದು ತಿಳಿಸುತ್ತಿರಬಹುದೆ?... ಮುಂದುವರೆಸುವ ಮುನ್ನ ಇಲ್ಲಿ ಎರಡು ವಿಷಯಗಳ ಬಗ್ಗೆ ಗಮನ ಸೆಳೆಯಬಯಸುತ್ತೇನೆ. ಸೌರಮಂಡಲ, ಅಥವಾ ನಕ್ಷತ್ರ ಮಂಡಲ ಮತ್ತು ದ್ರವ್ಯಗಳ ಅಣುಗಳೆರಡೂ ಒಂದೇ ರೀತಿಯಲ್ಲಿರುವುದನ್ನು ಕಂಡು ಕೊಂಡೇ “ಪೂರ್ಣಮದ: ಪೂರ್ಣಮಿದಂ........“ ಎಂಬ ವೇದಮಂತ್ರದ ಸಾಕ್ಷಾತ್ಕಾರವಾಗಿರಬಹುದೇ!? ಪರಮಾಣು ಸೂಕ್ಷ್ಮದ್ರವ್ಯವಾದ ಕ್ವಾರ್ಕ್ ಗಳನ್ನು ನಮ್ಮ ಮನಸ್ಸಿನಂತೆಯೇ ಕಂಡು, ಇಡೀ ವಿಶ್ವವೇ ನಮ್ಮ ಪ್ರಜ್ಞೆಯ ಭಾಗ ಎಂದು ಅರಿತೇ ವೇದ ಋಷಿಗಳಿಗೆ ಸಾಮವೇದದ “ತತ್ವಮಸಿ“(“ತತ್ ತ್ವಮ್ ಅಸಿ“ ಎಂದರೆ ಅದು ನೀನೇ ಆಗಿದ್ದೀಯೆ)ಯ ಸಾಕ್ಷಾತ್ಕಾರವಾಗಿರಬಹುದೇ!!
ಏನಿದೆ ನಮ್ಮೊಳಗೆ? ಈ ಪ್ರಶ್ನೆಗೆ ಉತ್ತರ... "ಎಲ್ಲವೂ ಇರುವುದು ನಮ್ಮೊಳಗೆ, ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ ನಮ್ಮೊಳಗೆ, ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ನಮ್ಮೊಳಗೆ, ತೋರಿಕೆಯ ನಾಮ ರೂಪಾತ್ಮಕ ಪ್ರಪಂಚವು ನಮ್ಮೊಳಗಿನಿಂದಲೇ ಹುಟ್ಟಿ ತೋರಿಕೊಳ್ಳುತ್ತಿರುವುದು, ಎಲ್ಲಕ್ಕೂ ಮಿಗಿಲಾಗಿ ಸೃಷ್ಟಿಕರ್ತ, ಸರ್ವನಿಯಾಮಕ ಭಗವಂತನಿರುವುದೂ ನಮ್ಮೊಳಗೆ" ಎನ್ನುತ್ತಾರೆ.
ಆಂತರಿಕ ಅವಿಷ್ಕಾರದ ವಿಷಯಕ್ಕೆ ಬಂದರೆ ನಮ್ಮ ಪುರಾತನ ಋಷಿ ಮುನಿಗಳನ್ನು ಈ ವಿಜ್ಞಾನದಲ್ಲಿ ಮೀರಿಸುವುದಿರಲಿ ಅವರ ಜ್ಞಾನದ ಸಮೀಪಕ್ಕೂ ಅಧುನಿಕ ವಿಜ್ಞಾನ ತಲುಪಲಾರದೆನಿಸುತ್ತದೆ. ಪ್ರಜ್ಞಾಸಾಗರದ ಕೊನೆಯರಿಯದ ಆಳಕ್ಕೆ ಮುಳುಗಿ ತಾವೇ ಅನರ್ಘ್ಯ ರತ್ನಗಳಿಗಾಗಿ ಹೊರಹೊಮ್ಮಿದ ವೈದ್ಯರು, ವಿಜ್ಞಾನಿಗಳು, ಗಣಿತಜ್ಞರು ಹಾಗೂ ಬಾಹ್ಯಾಕಾಶ ವಿಜ್ಞಾನಿಗಳೇ ಚರಕ, ಶುಶ್ರುತ, ಭಾಸ್ಕರಾಚಾರ್ಯ, ಲೀಲಾವತಿ, ಆರ್ಯಭಟ, ವರಾಹಮೀರ, ಮುಂತಾದ ಅನೇಕಾನೇಕ ಪೂರ್ವಜರು. ಇಂತಹ ಆಂತರಿಕ ಅನ್ವೇಷಣೆಯ ಹಾದಿಯಲ್ಲಿಯೇ, ಈ ರೀತಿಯ ಲೌಕಿಕ ಜ್ಞಾನಗಳಷ್ಟೇ ಅಲ್ಲದೇ, ಅನಿತ್ಯ ಜಗತ್ತಿನ ಹಿಂದೆ ಇರುವ ನಿತ್ಯ ಸತ್ಯವೂ ಅವರಿಗೆ ಗೋಚರಿಸಿತು. ಹುಟ್ಟು ಸಾವಿನಾಚೆ ಇರುವ ಶಾಶ್ವತ ಸತ್ಯವದು, ಅದನ್ನು ಪಡೆದ ಮೇಲೆ ಬೇರೇನನ್ನೂ ಬಯಸದ ನಿಧಿಗಳ ನಿಧಿಯದು, ನಿತ್ಯಾನಂದದ ಚರಮ ಸೀಮೆಯದು. ಇಂತಹ ನಿಧಿಯನ್ನು ಹೊಂದಿದ ಬ್ರಹ್ಮ ಜ್ಞಾನಿಗಳ ಉನ್ಮಾದಾವಸ್ಥೆಯು ನಮ್ಮೆಲ್ಲರಿಗಾಗಿ ಕರುಣೆಯಿಂದ ಈ ರೀತಿಯಲ್ಲಿ ಮಂತ್ರ ಕಾವ್ಯವಾಗಿ ಅರಳಿದೆ ಕೃಷ್ಣ ಯಜುರ್ವೇದದ ಶ್ವೇತಾಶ್ವತರ ಉಪನಿಷತ್ತಿನಲ್ಲಿ.
"ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾ
ಯೇ ಧಾಮಾನಿ ದಿವ್ಯಾನಿ ತಸ್ತುಃ
ವೇದಾಹಮೇತಂ ಪುರುಷಂ ಮಹಾಂತಂ
ಆದಿತ್ಯ ವರ್ಣಂ ತಮಸಃ ಪರಸ್ತಾತ್
ತಮೇವ ವಿದಿತ್ವಾ ಅತಿಮೃತ್ಯುಮೇತಿ
ನಾನ್ಯಃ ಪಂಥಾ ವಿದ್ಯತೇ ಅಯನಾಯ||"
“ಅಮೃತಪುತ್ರರು ಇದನ್ನು ಕೇಳಲಿ, ಯಾರು ದಿವ್ಯ ಲೋಕಗಳಲ್ಲಿ ಇರುವರೋ ಅವರು ಕೂಡಾ ಇದನ್ನು ಕೇಳಲಿ. ತಮಸ್ಸಿನ ಆಚೆ ಸೂರ್ಯನಂತೆ ಹೊಳೆಯುತ್ತಿರುವ ವಿಭುವನ್ನು ನಾನು ಅರಿತಿರುವೆನು. ಅವನನ್ನು ಅರಿತವನು ಮಾತ್ರ ಮೃತ್ಯುವನ್ನು ದಾಟುವನು. ಈ ಸಂಸಾರದಿಂದ ಪಾರಾಗಲು ಬೇರೆ ದಾರಿಯೇ ಇಲ್ಲ“. ಇದನ್ನೆಲ್ಲರಿಗೂ ಸಾರುತ್ತಿರುವ ಉದ್ದೇಶವೆಂದರೆ, ಅವರು ಅರಿತಿದ್ದಾರೆಂದರೆ ಅವರ ದಾರಿಯಲ್ಲಿ ಸಾಗಿದವರೆಲ್ಲರೂ ಅರಿಯಬಹುದು. ಇಲ್ಲವಾದಲ್ಲಿ ಮಹಾ ನಷ್ಟವೇ ಆಗಬಹುದು. ದುರ್ಲಭವಾಗಿ ಸಿಕ್ಕಿರುವ ಈ ಜನ್ಮವು ವ್ಯರ್ಥವಾದರೆ ಮುಂದೆಂದಿಗೋ ಇಂತಹ ಇನ್ನೊಂದವಕಾಶ. ಇಂತಹ ದಿವ್ಯ ಚೇತನರು ನಮ್ಮ ಪೂರ್ವಿಕರು. ವೈಜ್ಞಾನಿಕ ಪರಂಪರೆ ನಮ್ಮದು. ನಮ್ಮ ಧರ್ಮಕ್ಕಿಂತ ದೊಡ್ಡ ವಿಜ್ಞಾನವಿಲ್ಲ. ನಮ್ಮ ಹಿರಿಯರು ತೋರಿದ ಹಾದಿಯಲ್ಲಿ ಕಿಂಚಿತ್ ದೂರವನ್ನಾದರೂ ಸಾಗಲು ಸಾಧ್ಯವಾದರೆ ಅದಕ್ಕಿಂತ ಮಿಗಿಲಾದ ಸೌಭಾಗ್ಯವಿಲ್ಲ.
ಪೈಥಾಗೋರಸ್ ಎಂದರೆ ಎಲ್ಲರಿಗೂ ನೆನಪು ಬರುವುದು ಅವನ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಪ್ರಮೇಯ: c2 = a2 + b2
(ಚಿತ್ರವನ್ನು ನೋಡಿ)
ಕ್ರಿಸ್ತ ಪೂರ್ವ ಆರನೆಯ ಶತಮಾನದಲ್ಲಿದ್ದ, ಎಂದರೆ ಗೌತಮ ಬುದ್ಧನ ಸಮಕಾಲೀನನಾಗಿದ್ದ, ಈ ಪೈಥಾಗೋರಸನು ಪ್ರಸಿದ್ಧ ದಾರ್ಶನಿಕನೂ ಆಗಿದ್ದನು. ಈತನು ಕೋಪವನ್ನು ಕುರಿತು ಹೀಗೆ ಹೇಳಿದ್ದಾನೆ:
ಕೋಪವು ಪ್ರಾರಂಭವಾಗುವುದು ಮೂರ್ಖತನದಿಂದ, ಕೊನೆಗೊಳ್ಳುವುದು ಪಶ್ಚಾತ್ತಾಪದಿಂದ .
ಭಗವಾನ್ ಶ್ರೀಕೃಷ್ಣನೂ ಗೀತೆಯಲ್ಲಿ ಹೀಗೆ ತಿಳಿಹೇಳಿದ್ದಾನೆ (ಸಾಂಖ್ಯ ಯೋಗ, ೬೩):
ಕ್ರೋದಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ |
ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ ||
ಅರ್ಥ: ಕ್ರೋಧದಿಂದ ಅವಿವೇಕದ ಆವೇಶವಾಗುತ್ತದೆ; ಅವಿವೇಕದಿಂದ ಮತಿಭ್ರಮೆ; ಮತಿಭ್ರಮೆಯಿಂದ ಬುದ್ಧಿನಾಶ; ಬುದ್ಧಿನಾಶದಿಂದ ಸರ್ವನಾಶ.
ಈ ಮಾತುಗಳು ಎಷ್ಟು ನಿಜವೆಂದು ನಮಗೆಲ್ಲರಿಗೂ ತಿಳಿದ ವಿಷಯವೇ. ಮಹಾಭಾರತ ಯುದ್ಧಕ್ಕೆ ದ್ರೌಪದಿಯ ಕ್ರೋಧ ಮತ್ತು ದುರ್ಯೋಧನನ ಹಟಗಳೇ ಮೂಲಕಾರಣಗಳು. ದ್ರೌಪದಿಯ ಕೋಪವನ್ನು ಪ್ರಚೋದಿಸಿದ್ದು ತುಂಬಿದ ಸಭೆಯಲ್ಲಿ ದುರ್ಯೋಧನ ಮುಂತಾದವರಿಂದ ಆಕೆಗೆ ಆದ ಅವಮಾನ. ದುರ್ಯೋಧನನು ಹೀಗೆ ಅವಳನ್ನು ಅವಮಾನಿಸಿದ್ದೂ, ದ್ರೌಪದಿ ಮತ್ತು ಆಕೆಯ ಸಖಿಯರು ರಾಜಸೂಯ ಯಾಗದ ಸಮಯದಲ್ಲಿ ಅವನನ್ನು ಪರಿಹಾಸ್ಯ ಮಾಡಿ ನಕ್ಕಾಗ ಅವನಿಗೆ ಉಂಟಾದ ಕೋಪದಿಂದಲೇ.
ಈ ಕೋಪ ಮತ್ತು ಹಟಗಳ ಪರಿಣಾಮವೇನಾಯಿತು? ದ್ರೌಪದಿಯ ತಂದೆ, ಇಬ್ಬರು ಅಣ್ಣಂದಿರು ಮತ್ತು ಆಕೆಯ ಎಲ್ಲ ಪುತ್ರರೂ ಯುದ್ಧದಲ್ಲಿ ಅಥವ ಯುದ್ಧಾನಂತರ ಅಶ್ವತ್ಥಾಮನು ಎಸಗಿದ ಮಾರಣ ಹೋಮದಲ್ಲಿ ಕೊಲೆಗೀಡಾದರು. ದುರ್ಯೋಧನನ ಎಲ್ಲ ತಮ್ಮಂದಿರೂ, ಅವನ ಪ್ರಿಯಮಿತ್ರನಾದ ಕರ್ಣನೂ ಅವನಿಗಿಂತ ಮುಂಚೆಯೇ ಹತರಾದರು. ಅವನ ನೆಚ್ಚಿನ ಮಗನಾದ ಲಕ್ಷ್ಮಣನನ್ನೂ, ಅಭಿಮನ್ಯುವು ಅವನ ಕಣ್ಣೆದುರಿಗೇ ಸಂಹರಿಸಿದನು.
ಕೋಪದಿಂದ ಇಷ್ಟೆಲ್ಲ ಅನರ್ಥಗಳೂ, ಅನಾಹುತಗಳೂ ಸಂಭವಿಸಬಹುದೆಂದು ಚೆನ್ನಾಗಿ ಅರಿತಿದ್ದ ಮಹಾತ್ಮ ವಿದುರನು ಯುದ್ಧಕ್ಕಿಂತ ಮುಂಚೆಯೇ ಧೃತರಾಷ್ಟ್ರನಿಗೆ ಈ ರೀತಿ ಬೋಧಿಸಿದ್ದನು (ಕುಮಾರವ್ಯಾಸ ಭಾರತ, ಉದ್ಯೋಗ ಪರ್ವ, ಮೂರನೆಯ ಸಂಧಿ, ೧೧೩):
ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದಿಹಪರದ ಸೌಖ್ಯವು ಲಯವನೈದುವುದು |
ಕೋಪವನು ವಿಸರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲು
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ ||
ಆದರೆ ವಿದುರನ ಮಾತುಗಳಿಗೆ ಯಾರೂ ಕಿವಿಗೊಡಲಿಲ್ಲ,
ಕೋಪದಿಂದುಂಟಾಗುವ ದುಷ್ಪರಿಣಾಮಗಳನ್ನು ವಿವರಿಸಲು ಪುರಾಣ ಇತಿಹಾಸಗಳ ನಿದರ್ಶನಗಳೇ ಬೇಕಾಗಿಲ್ಲ. ಹೆಂಡತಿಯ ಮೇಲಿನ ಕೋಪದಿಂದ ಗಂಡನೂ, ಗಂಡನಮೇಲಿನ ಕೋಪದಿಂದ ಹೆಂಡತಿಯೂ ತಮ್ಮ ಮಕ್ಕಳನ್ನೇ ಕೊಲೆ ಮಾಡಿರುವುದನ್ನೂ, road rage ಮುಂತಾದ ಕ್ಷುಲ್ಲಕ ಕಾರಣಗಳಿಂದ ಒಬ್ಬರನ್ನೊಬ್ಬರು ಘಾತಿಸುವುದನ್ನೂ ನೀವು ಕೇಳಿಯೇ ಇರುತ್ತೀರಿ. ಇಂಥ ಸಂದರ್ಭಗಳನ್ನು ನೋಡಿದಾಗ ರೋಮನ್ ಚಕ್ರವರ್ತಿ ಮಾರ್ಕಸ್ ಔರೇಲಿಯಸ್ಸನು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಅಂದಿದ್ದು ನೆನಪಿಗೆ ಬರುತ್ತದೆ:
ಕೋಪದ ಕಾರಣಗಳಿಗಿಂತಲೂ, ಅಂಥ ಕೋಪದ ಪರಿಣಾಮಗಳೇ ಹೆಚ್ಚು ದುಃಖಕರವಾದುವು.
ಆದರೆ ಈ ಕೋಪವನ್ನು ನಿಯಂತ್ರಿಸುವುದು ಹೇಗೆ? ಭಗವಾನ್ ಬುದ್ಧನೇನೋ "ಅಕ್ಕೋಧೇನ ಜಿನೇತ್ ಕೋಧಂ", ಎಂದರೆ "ಕೋಪವನ್ನು ವಿಶ್ವಾಸದಿಂದ ಜಯಿಸಬೇಕು" ಎಂದು ಉಪದೇಶಿಸುತ್ತಾನೆ. ನಮ್ಮ ಸರ್ವಜ್ಞನೂ "ಮುನಿವಂಗೆ ಮುನಿಯದಿರು" ಎಂದು ಬುದ್ಧಿ ಹೇಳುತ್ತಾನೆ. ಆಧುನಿಕ ಚಿಂತಕರು ಕ್ರೋಧನಿಯಂತ್ರಣದ ಬಗ್ಗೆ ಅನೇಕ ಸಲಹೆಗಳನ್ನು ಕೊಡುತ್ತಾರೆ:
* ಕೋಪ ಬಂದಾಗ ಬಾಯಿಗೆ ಬಂದದ್ದು ಮಾತನಾಡದೆ ನಿಧಾನವಾಗಿ ಒಂದರಿಂದ ಹತ್ತರವರೆಗೆ ಎಣಿಸು
* ಸಾಧ್ಯವಾದರೆ ಆ ಸ್ಥಳದಿಂದ ನಿರ್ಗಮಿಸು
* ಧ್ಯಾನ, ಯೋಗಾಭ್ಯಾಸ ಮಾಡು
* ಮುಯ್ಯಿಗೆ ಮುಯ್ಯಿ ತೀರಿಸುವುದಕ್ಕಿಂತಲೂ ವಿನಾಶಕಾರಿ ಪ್ರವೃತ್ತಿ ಮತ್ತೊಂದಿಲ್ಲ
* ಯಾರೋ ಒಬ್ಬ ವ್ಯಕ್ತಿ ನಿಮಗೆ ದ್ರೋಹ ಅಥವಾ ಮೋಸ ಮಾಡಿದನೆಂದು ಅವನ ಜನಾಂಗದವರ ಮೇಲೆಯೇ ಕೋಪಗೊಳ್ಳಬೇಡ
* ಬಲವಂತನು ನಿನ್ನ ಮೇಲೆ ಕೋಪ ಮಾಡಿದನೆಂದು, ಆ ಕೋಪವನ್ನು ಬಲಹೀನನ ಮೇಲೆ ತೋರಿಸಿಕೊಳ್ಳಬೇಡ
ಇತ್ಯಾದಿ ಇತ್ಯಾದಿ.
"ಸ್ವಾಮೀ, ಇದೆಲ್ಲವೂ ಸರಿಯೇ. ಆದರೆ Easier said than done, ಆಡುವುದು ಸುಲಭ ಮಾಡುವುದು ಕಷ್ಟ ಅಲ್ಲವೇ?" ಎಂದು ನೀವು ಕೇಳಬಹುದು. ಅದೇನೋ ನಿಜವೇ. ಆದರೂ ಕೋಪದಿಂದ ನಮ್ಮ ಮೇಲೂ ನಮಗೆ ಸಂಬಂಧಪಟ್ಟವರ ಮೇಲೂ ಸಂಭವಿಸುವ ಅನರ್ಥಗಳನ್ನು ಗಮನಿಸಿದಾಗ ಸ್ವಲ್ಪ ಪ್ರಯತ್ನವನ್ನಾದರೂ ಮಾಡಲೇಬೇಕು ಎನಿಸುತ್ತದಲ್ಲವೆ?
ತನ್ನ ಕ್ರೋಧದ ಭರದಲ್ಲಿ ಇಡೀ ಲಂಕಾನಗರವನ್ನೇ ದಹಿಸಿದ ಹನುಮಂತನು "ಅಯ್ಯೋ ಕೋಪದಲ್ಲಿ ಎಂಥ ಕೆಲಸ ಮಾಡಿಬಿಟ್ಟೆ; ಈ ಉರಿಯಲ್ಲಿ ಸೀತೆಯೂ ದಗ್ಧಳಾದಳೋ ಏನೋ" ಎಂದು ಮರುಗಿ ಹೀಗನ್ನುತ್ತಾನೆ (ವಾಲ್ಮೀಕಿ ರಾಮಾಯಣ, ಸುಂದರಕಾಂಡ, ಸರ್ಗ ೫೫, ಶ್ಲೋಕ ೩):
ಧನ್ಯಾಸ್ತೇ ಪುರುಷಶ್ರೇಷ್ಠಾಃ ಯೇ ಬುದ್ಧ್ಯಾ ಕೋಪಮುತ್ಥಿತಮ್ |
ನಿರುಂಧಂತಿ ಮಹಾತ್ಮಾನೋ ದೀಪ್ತಮಗ್ನಿಮಿವಾಂಭಸಾ ||
ಅರ್ಥ: ಉರಿಯುತ್ತಿರುವ ಜ್ವಾಲೆಯನ್ನು ನೀರು ಶಾಂತಗೊಳಿಸುವಂತೆ ತಮ್ಮ ವಿವೇಚನೆಯಿಂದ ಕೋಪೋದ್ರೇಕವನ್ನು ಯಾರು ನಿಯಂತ್ರಿಸಬಲ್ಲರೋ, ಅಂಥ ಪುರುಷಶ್ರೇಷ್ಠರೇ ಧನ್ಯರು.
ನಮ್ಮ ಮಾತಿನಲ್ಲಿ ಹೇಳುವುದಾದರೆ: ಕಡುಕೋಪ ಬಂದಾಗ, ತಡೆದುಕೊಂಡವನೇ ಜಾಣ.
ಹೀಗೊಂದು ಕಥೆ..... ಒಂದು ದೊಡ್ಡ ಪರ್ವತದ ತಪ್ಪಲಿನ ಸುತ್ತಲೂ ಅನೇಕ ಹಳ್ಳಿಗಳು, ಊರುಗಳು, ಹಾಗೂ ಪಟ್ಟಣಗಳು ಇದ್ದವು. ಜೌಗು ಪ್ರದೇಶಗಳಾದ್ದರಿಂದ ಎಲ್ಲೆಲ್ಲೂ ಗಲೀಜು, ಕೊಚ್ಚೆ ಇದ್ದಿತು. ಅಲ್ಲಿ ಅದೇ ಬದುಕು ಎಂದುಕೊಳ್ಳುತ್ತಾ ಜೀವನ ನಡೆಸುತ್ತಿರುವ ಅನೇಕಾನೇಕ ಕ್ರಿಮಿಕೀಟಗಳು, ಪ್ರಾಣಿಪಕ್ಷಿಗಳ ಜೊತೆ ಮನುಷ್ಯರೂ ವಾಸವಾಗಿದ್ದರು. ದುಸ್ತರವಾದ ಬದುಕನ್ನು ಸಹಿಸಲಾಗದ ಅನೇಕರಿಗೆ, ಕೆಲ ಬುದ್ಧಿವಂತರು ಮಾರ್ಗದರ್ಶನ ನೀಡುತ್ತಾ ದೂರದಲ್ಲಿ ಕಾಣುವ ಪರ್ವತದ ಶಿಖರದಲ್ಲಿರುವ ಒಬ್ಬನು ನಮ್ಮನ್ನೆಲ್ಲಾ ನಿಯಂತ್ರಿಸುತ್ತಿದ್ದಾನೆ, ಅವನ ಬಳಿ ಹೋದರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗಿ ಕೊನೆಯಿಲ್ಲದ ಆನಂದವು ನಮ್ಮದಾಗುವುದು ಎನ್ನುತ್ತಾರೆ.
ಎಲ್ಲರೂ ಪರ್ವತದ ಶಿಖರವನ್ನು ನೋಡಲಾರಂಭಿಸುತ್ತಾರೆ. ಆ ದಿಕ್ಕಿನಲ್ಲಿ ಹೋಗೋಣವೆಂದರೆ ಕಾಲುಗಳನ್ನು ಕೀಳಲಾಗದ ಕೊಚ್ಚೆ, ಜೊತೆಗೆ ಕಾಲುಗಳಿಗೆ ಸಿಕ್ಕಿಕೊಳ್ಳುವ ಜೊಂಡು, ಬಳ್ಳಿಗಳು. ಆ ಕಷ್ಟದಲ್ಲಿಯೂ ಹೇಗೋ ಸಾಗಿ ಬೆಟ್ಟದ ಹತ್ತಿರ ಹೋದ ಕೆಲವರು, ಹೇಗಿರಬಹುದು ಆ ಶಿಖರದಲ್ಲಿರುವವನು ಎಂದು ಹತ್ತಿರದಿಂದ ನೋಡುವ ಪ್ರಯತ್ನ ಮಾಡುತ್ತಾರೆ. ಎತ್ತರದ ಶಿಖರದಲ್ಲಿ ಏನೋ ಒಂದು ನೆರಳು ಬೆಳಕಿನಾಟದಂತೆ, ಯಾವುದೂ ಸ್ಪಷ್ಟವಾಗಿ ತಿಳಿಯುತ್ತಿರಲಿಲ್ಲ. ಯಾರೋ ಇದ್ದ ಹಾಗೆ ಅನ್ನಿಸುತ್ತಿತ್ತು. ಒಂದು ದಿಕ್ಕಿನಿಂದ ನೋಡಿದ ಯಾರೋ ಒಬ್ಬ ಹೇಳುತ್ತಾನೆ, "ನನಗೆ ಕಾಣಿಸುತ್ತಿದೆ, ಅಲ್ಲಿರುವವನು ರಾಜನಂತೆ ಕಂಗೊಳಿಸುತ್ತಿದ್ದಾನೆ, ಚಿನ್ನಾಭರಣಗಳು, ವಜ್ರ ವೈಢೂರ್ಯಗಳನ್ನೆಲ್ಲಾ ತೊಟ್ಟಿದ್ದಾನೆ" ಎಂದು. ಹೌದು ಹೌದು ಅದೇ ರೀತಿ ಅವನಿರುವುದು ಎಂದು ಅವನನ್ನು ಅನುಮೋದಿಸಿ ಹಿಂಬಾಲಕರಾದವರು ಕೆಲವರು. ಅದೇ ರೀತಿ ಇನ್ನೊಂದು ದಿಕ್ಕಿನಿಂದ ನೋಡಿದ ಇನ್ನೊಬ್ಬನು ಹೇಳುತ್ತಾನೆ, "ನನಗೆ ಸ್ಪಷ್ಟವಾಗಿ ಕಾಣಿಸುತ್ತಿದೆ ಅವನೊಬ್ಬ ಯೋಗಿಯಂತಿದ್ದಾನೆ, ನಿರಾಭರಣನಾಗಿದ್ದಾನೆ ಮತ್ತು ಧ್ಯಾನ ಮುದ್ರೆಯಲ್ಲಿದ್ದಾನೆ" ಎಂದು. ಮತ್ತೊಬ್ಬನಿಗೆ ಅಲ್ಲಿರುವುದು ದೇವಿಯಂತೆ ತೋರುತ್ತದೆ, ಮಗದೊಬ್ಬನಿಗೆ ಸಿಂಹದ ತಲೆಯ ಮನುಷ್ಯನಂತೆ, ಇನ್ನೊಬ್ಬನಿಗೆ ಆನೆಯ ತಲೆಯವನಂತೆ, ಕೋತಿಯ ತಲೆಯವನಂತೆ.... ಹೀಗೆ ಅನೇಕಾನೇಕ ರೀತಿಗಳಲ್ಲಿ ಕಾಣಿಸುತ್ತದೆ ಹಾಗೂ ಎಲ್ಲರಿಗೂ ಅವರ ಅನುಮೋದಕರು, ಹಿಂಬಾಲಕರು ಜೊತೆಗೂಡುತ್ತಾರೆ.
ಬೆಟ್ಟವನ್ನೇರಿ ತಾವೇ ನೋಡೋಣವೆಂದರೆ, ಸಾಗಿ ಹೋಗಲು ಜಾರುವ ಕಷ್ಟ ಸಾಧ್ಯವಾದ ದಾರಿ. ಯಾವ ಕಡೆಯಿಂದ ಹೊರಡುವುದು ಎಂದುಕೊಂಡಾಗ ತಮ್ಮ ದಾರಿಯೇ ಸರಿಯೆಂದು ಬೇರೆ ಬೇರೆ ದಿಕ್ಕುಗಳಿಂದ ನೋಡಿದವರು ಅವರವರ ದಿಕ್ಕುಗಳನ್ನು ತೋರುತ್ತಾರೆ. ಮತ್ತು ಅಲ್ಲಿಗೆ ತಲುಪಲು ಬೇಕಾದ ತಯಾರಿಯನ್ನು ಮಾಡಿಕೊಳ್ಳುವ ವಿಧಿ ವಿಧಾನಗಳನ್ನು ರೂಪಿಸುತ್ತಾರೆ. ಇದನ್ನೆಲ್ಲಾ ಒಪ್ಪುವ ಅವರ ಹಿಂಬಾಲಕರು, ತಮ್ಮ ನಾಯಕರು ಮತ್ತವರು ರೂಪಿಸಿದ ವಿಧಾನಗಳೇ ಸರಿಯೆಂದೂ ಉಳಿದವರದು ತಪ್ಪೆಂದೂ, ಅವರೆಲ್ಲ ನರಕದ ಹಾದಿಯಲ್ಲಿ ಕೊನೆಗೊಳ್ಳುತ್ತಾರೆಂದೂ ಆರೋಪ, ಪ್ರತ್ಯಾರೋಪ ಮಾಡುತ್ತಾ ಜಗಳ ಕಾಯುತ್ತಿರುತ್ತಾರೆ. ಎಲ್ಲೋ ಒಬ್ಬೊಬ್ಬರು ವಿಧಿ, ವಿಧಾನಗಳನ್ನು ಪಾಲಿಸುತ್ತಾ ಹತ್ತಿ ನೋಡಿಯೇ ಬಿಡೋಣವೆಂದು ಹೋದವರು ತಮ್ಮ ಅನುಭವಗಳನ್ನು ತಿಳಿಸಿ ಹೇಳಲಾಗಲಿಲ್ಲ.
ಹೀಗೆಯೇ ಕಳೆಯುತ್ತಾ ಶತಮಾನಗಳೇ ಉರುಳಿವೆ. ಇಂದಿಗೂ ತಲೆಮಾರುಗಳು ಕಳೆದ ಮೇಲೂ ಜಗಳ, ಆರೋಪ, ಪ್ರತ್ಯಾರೋಪಗಳು, ತಮ್ಮ ಹಾದಿಯೇ ಸರಿಯೆಂಬ ಸಾಧನೆ, ತಮ್ಮ ನಂಬಿಕೆಗಳೆಡೆಗೆ ಬೇರೆಯವರನ್ನು ಸೆಳೆಯುವ ತಂತ್ರ, ಕುತಂತ್ರಗಳೆಲ್ಲಾ ಹಾಗೆಯೇ ಮುಂದುವರೆದಿವೆ. ಹೊರಗಿನ ರಾಡಿ, ಕೊಚ್ಚೆಗಳೆಲ್ಲವನ್ನೂ ಒಳಗೂ ಸೇರಿಸಿಕೊಂಡು ಆರೋಗ್ಯ ಹೀನರಾಗಿ ಬವಣೆಯಿಂದಲೇ ಬದುಕುತ್ತಿದ್ದಾರೆ. ತಮ್ಮದೆಂದೂ, ಸರಿಯೆಂದೂ ಪ್ರತಿಪಾದಿಸುತ್ತಿರುವ ಹಾದಿ ಮತ್ತು ಗುರಿಯನ್ನು ತಾವು ಕಾಣುವುದಿರಲಿ ಅವರ ವಂಶಜರಾರೂ ಕಂಡೇ ಇಲ್ಲ.
ಇದೆಲ್ಲ ನಮ್ಮ ಕಥೆಯೇ ಎಂದುಕೊಂಡಾಗ, ಗುರಿ ಎಂದರೆ ನಂಬಿಕೊಂಡ ದೇವರ ನಾಮ ಮತ್ತು ರೂಪ, ಅದನ್ನು ತಲುಪುವ ಹಾದಿ ಎಂದರೆ ಅದಕ್ಕೆ ಸಂಬಂಧ ಪಟ್ಟ ಮಂತ್ರ, ಸ್ತೋತ್ರಗಳು, ಪೂಜಾ ವಿಧಾನಗಳು, ಯಜ್ಞ ಯಾಗಾದಿಗಳು, ದೇವಾಲಯಗಳು ಇತ್ಯಾದಿ. ಕೊಚ್ಚೆ, ಗಲೀಜುಗಳು ಅಂದರೆ ಇಚ್ಛಾ ದ್ವೇಷಗಳು, ಅರಿ ಷಡ್ವರ್ಗಗಳು, ಇಂದ್ರಿಯಾದಿ ವಿಷಯಗಳು ಇತ್ಯಾದಿ. ಕಾಲುಗಳಿಗೆ ಸಿಕ್ಕಿಕೊಳ್ಳುವ ಜೊಂಡು ಬಳ್ಳಿಗಳೇ ಸಾಂಸಾರಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳು, ಮೋಹ ಮಮತೆಗಳು ಇತ್ಯಾದಿ.
ಇಷ್ಟು ಜನಗಳ ಮಧ್ಯೆ ಎಲ್ಲೋ ಕೆಲವರು ಮಾತ್ರ ಅದೇ ಕೊಚ್ಚೆ, ಗಲೀಜಿನಲ್ಲಿ ಹುಟ್ಟಿ ಬೆಳೆದರೂ ಅದನ್ನು ಸ್ವಲ್ಪವೂ ಲೇಪಿಸಿಕೊಳ್ಳದೇ ಎಲ್ಲರಲ್ಲೂ ಸಮಭಾವವನ್ನು ತಾಳಿ ಪ್ರೀತಿಸುತ್ತಾ, ತಮಗಿಂತ ಹೆಚ್ಚಿನ ಬವಣೆ ಪಡುವವರಿಗೆ, ನಿರ್ಗತಿಕರಿಗೆ, ಕಿರಿಯರಿಗೆ ಆಸರೆಯಾಗತ್ತಾ, ಪರ್ವತದ ಮೇಲಿರುವವನನ್ನು ಹೃದಯದಲ್ಲಿ ಸ್ಥಾಪಿಸಿಕೊಂಡು ಧ್ಯಾನಿಸುತ್ತಾ, ಹಾದಿ ಗುರಿಗಳ ಬಗೆಗೆ ತಲೆ ಕೆಡಿಸಿಕೊಳ್ಳದೇ ನಿರ್ಮಲವಾಗಿ ನಗುತ್ತಿರುವವರನ್ನೇ ಪದ್ಮ ಪುಷ್ಪಗಳು ಅಥವಾ ಕೆಸರಿನ ಕಮಲಗಳು ಅನ್ನುತ್ತಾರೇನೋ. ಈ ಕಮಲಗಳು ಅರಳಿ ನಗುವಾಗ ಅವರ ಮೇಲಿನ ಪ್ರೀತಿಯಿಂದ ದೇವರೇ ಇವರ ಬಳಿ ಬಂದು ಈ ಕಮಲಗಳಿಂದಲೇ ತನ್ನನ್ನು ಅಲಂಕರಿಸಿಕೊಳ್ಳುವುದು ಮಾತ್ರವಲ್ಲದೇ, ತನ್ನಲ್ಲಿಯೇ ಸೇರಿಸಿಕೊಳ್ಳುವುದರಿಂದಲೇ .....
ಕಮಲಾಸ ಶ್ರೀ ಮುಖ ಕಮಲ ಕಮಲ ಹಿತ|
ಕಮಲಪ್ರಿಯಾ ಕಮಲೇಕ್ಷಣಾ||
ಕಮಲಾಸನ ಹಿತ ಗರುಡಗಮನ ಶ್ರೀ| ಕಮಲನಾಭ ನೀ
ಪದಕಮಲಮೇ ಶರಣಂ||(ಶ್ರೀಮನ್)"
ಎಂದು ಹಾಡುತ್ತಾ ಶರಣಾಗುತ್ತಾರೇನೊ ಅಲ್ಲವೇ?
ರೋಮನ್ ಚಕ್ರವರ್ತಿಗಳು ಸುಮಾರು ಐನೂರು ವರ್ಷಗಳ ಕಾಲ ಯೂರೋಪಿನ ಬಹುಭಾಗವನ್ನೂ ಅಲ್ಲದೆ ಬ್ರಿಟನ್ ಮತ್ತು ಪಶ್ಚಿಮ ಏಷಿಯಾದ ಕೆಲವು ಪ್ರಾಂತಗಳನ್ನೂ ಆಳಿದರು. ಇವರಲ್ಲಿ ಜೂಲಿಯಸ್ ಸೀಸರನಂತಹ ಧೀರರು ಅನೇಕರಿದ್ದರು; ಅಗಸ್ಟಸ್, ಕ್ಲಾಡಿಯಸ್ ಮುಂತಾದ ಸಮರ್ಥರೂ, ಚಾಣಾಕ್ಷರೂ ಇದ್ದರು; ಕಲಿಗುಳ ಮತ್ತು ನೀರೋ ಬಗೆಯ ಕ್ರೂರಿಗಳೂ, ಅವಿವೇಕಿಗಳೂ ಇದ್ದರು. ಆದರೆ ಈ ಚಕ್ರವರ್ತಿಗಳಲ್ಲೆಲ್ಲ ಅತ್ಯಂತ ಗೌರವಕ್ಕೂ, ಆದರಕ್ಕೂ ಪಾತ್ರರಾದವರಲ್ಲಿ ಮಾರ್ಕಸ್ ಔರೇಲಿಯಸ್ (ಕ್ರಿ.ಶ. ೧೨೧ - ೧೮೦) ಅಗ್ರಗಣ್ಯನು.
ಔರೇಲಿಯಸ್ಸನು ಒಂದು ಕುಲೀನ, ಶ್ರೀಮಂತ ಮನೆತನದಲ್ಲಿ ಜನಿಸಿದವನು. ಈತನಿಗೆ ೧೭ ವರ್ಷ ವಯಸ್ಸಾಗಿದ್ದಾಗ, ಆಗಿನ ಚಕ್ರವರ್ತಿ ಆಂಟೊನಿನಸ್ ಪಯಸ್ ಇವನನ್ನು ತನ್ನ ಉತ್ತರಾಧಿಕಾರಿಯಾಗಲು ತಕ್ಕವನೆಂದು ತಿಳಿದು, ಕಾಲಕ್ರಮದಲ್ಲಿ ತನ್ನ ಮಗಳು ಫಾಸ್ಟೀನಾಳನ್ನು ಕೊಟ್ಟು ಮದುವೆ ಮಾಡಿದನು. ಕ್ರಿ.ಶ. ೧೪೦ ರಲ್ಲಿ ಇವನನ್ನು ಚಕ್ರಾಧಿಪತ್ಯದ ಪರಮಾಧಿಕಾರಿಗಳಲ್ಲಿ ಒಬ್ಬನಾಗಿ ನೇಮಕ ಮಾಡಿದರು. ಮುಂದಿನ ಇಪ್ಪತ್ತು ವರ್ಷ ತನ್ನ ಅಧಿಕಾರವನ್ನು ದಕ್ಷತೆಯಿಂದಲೂ, ಪ್ರಾಮಾಣಿಕತೆಯಿಂದಲೂ ನಿರ್ವಹಿಸಿ ಚಕ್ರವರ್ತಿಗೆ ತುಂಬ ಅಚ್ಚುಮೆಚ್ಚಿನವನಾದನು. ಅದೇ ಸಮಯದಲ್ಲಿ ತತ್ತ್ವಶಾಸ್ತ್ರವನ್ನೂ, ನ್ಯಾಯಶಾಸ್ತ್ರವನ್ನೂ, ಆಳವಾಗಿ ಅಭ್ಯಾಸಮಾಡಿದನು. ಕ್ರಿ.ಶ. ೧೬೦ ರಲ್ಲಿ ಪಯಸ್ ದೊರೆ ಕಾಲವಾಗಲು, ಇವನನ್ನು ಸಾಮ್ರಾಜ್ಯದ ಅಧಿಪತಿಯಾಗಿ ಅಭಿಷೇಕ ಮಾಡಲಾಯಿತು. ಆಗಿನ ಕಾಲದಲ್ಲೇ ಏಕೆ, ಸುಮಾರು ಹದಿನಾರನೆಯ ಶತಮಾನದವರೆಗೂ, ಯೂರೋಪಿನಲ್ಲಿ ಯಾರಾದರೂ ರಾಜನಾದ ಕೂಡಲೇ, ಮಿಕ್ಕೆಲ್ಲ ವಾರಸುದಾರರನ್ನೂ (ಅವರು ಅಣ್ಣತಮ್ಮಂದಿರೇ ಆಗಿದ್ದರೂ ಸಹ) ಗಡೀಪಾರು ಮಾಡಿಯೋ ಅಥವಾ ಸಂಹರಿಸಿಯೋ, ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಸ್ವಭಾವತಃ ಉದಾರಿಯಾದ ಔರೇಲಿಯಸ್ಸನು ಹಾಗೇನೂ ಮಾಡಲಿಲ್ಲ, ಬದಲಿಗೆ ಸಮಸ್ತ ರಾಜ್ಯಭಾರವನ್ನು ತನ್ನ ದತ್ತು ತಮ್ಮನಾದ ಲೂಸಿಯಸ್ ವೆರಸ್ ಎಂಬುವನ ಜತೆಗೆ ಹಂಚಿಕೊಂಡನು. ರೋಮ್ ಸಾಮ್ರಾಜ್ಯಕ್ಕೆ ಒಂದೇ ಸಮಯದಲ್ಲಿ ಎರಡು ಚಕ್ರವರ್ತಿಗಳಿದ್ದುದು ಇದೇ ಮೊದಲ ಬಾರಿ.
ಔರೇಲಿಯಸ್ಸನು ಚಕ್ರವರ್ತಿಯಾಗಿದ್ದಾಗ ರೋಮ್ ಸಾಮ್ರಾಜ್ಯವು ಅನೇಕ ಕಷ್ಟನಷ್ಟಗಳಿಗೆ ಒಳಗಾಯಿತು. ಆದರೆ ಇವು ಯಾವುದಕ್ಕೂ ಇವನು ಕಾರಣಕರ್ತನಲ್ಲ. ವೆರಸ್ ನ ಸೈನಿಕರು ಏಷ್ಯಾದ ಪಾರ್ಥಿಯನ್ನರನ್ನು ಅಡಗಿಸಿ ಹಿಂತೆರಳಿದಾಗ ತಮ್ಮ ಜತೆಯಲ್ಲೇ ಪ್ಲೇಗ್ ಮಾರಿಯನ್ನೂ ತಂದರು. ಇದರ ಪರಿಣಾಮವಾಗಿ ರೋಮಿನಲ್ಲಿ ಸಾವಿರಾರು ಮಂದಿ ಮೃತರಾದರು. ತಾನು ಸ್ವತಃ ಶಾಂತಿಪ್ರಿಯನಾಗಿದ್ದರೂ, ತನ್ನ ಚಕ್ರಾಧಿಪತ್ಯದ ಬ್ರಿಟನ್, ಈಗಿನ ಜರ್ಮನಿ, ಪಶ್ಚಿಮ ಏಷ್ಯಾ ಮುಂತಾದ ಮೂಲೆಮೂಲೆಗಳಲ್ಲಿ ಆಗಾಗ ನಡೆಯುತ್ತಿದ್ದ ದಂಗೆಗಳನ್ನು ಹುಟ್ಟು ಹಾಕಲು, ಪದೇಪದೇ ಯುದ್ಧ ಮಾಡಬೇಕಾಗಿ ಬಂದಿತು. ಇದಲ್ಲದೆ, ಪ್ಲೇಗಿನ ಜತೆಗೆ ರೋಮ್ ನಗರವು ಭೂಕಂಪ, ಪ್ರವಾಹ ಇತ್ಯಾದಿ ಪ್ರಕೃತಿಯ ಪ್ರಕೋಪಕ್ಕೂ ಒಳಗಾಯಿತು. ರಾಜ್ಯದಲ್ಲಿ ಕ್ಷಾಮವೂ ಉಂಟಾಯಿತು. ಪತ್ನಿ ಫಾಸ್ಟೀನಾಳು ಹದಿಮೂರು ಮಕ್ಕಳಿಗೆ ಜನ್ಮವಿತ್ತಳು. ಆದರೆ ಅವರಲ್ಲಿ ಉಳಿದವರು ಐದು ಮಂದಿ ಮಾತ್ರ. ಜೀವಮಾನ ಪರ್ಯಂತ, ಔರೇಲಿಯಸ್ಸನ ಆರೋಗ್ಯವೂ ಅಷ್ಟೇನೂ ಉತ್ತಮ ಮಟ್ಟದ್ದಾಗಿರಲಿಲ್ಲ. ಆದರೆ ಎಂಥ ಕಷ್ಟಗಳನ್ನು ಎದುರಿಸ ಬೇಕಾದರೂ ಮತ್ತು ಕರ್ತವ್ಯ ಪಾಲನೆಗಾಗಿ ಅಪ್ರಿಯವಾದ, ತನಗೆ ಅಸ್ವಾಭಿಕವಾದ ಕೆಲಸಗಳನ್ನು ಮಾಡ ಬೇಕಾದರೂ, ಔರೇಲಿಯಸ್ಸನು ತನ್ನ ಮನಸ್ಸನ್ನು ಕಹಿ ಮಾಡಿಕೊಳ್ಳಲಿಲ್ಲ, ಸಮತೋಲತೆಯನ್ನು ಕಳೆದುಕೊಳಲಿಲ್ಲ. ಸಾಮ್ರಾಜ್ಯದ ಅಖಂಡತೆಗೆ ಭಂಗವಾಗದಂತೆ ಅದನ್ನು ರಕ್ಷಿಸಿದನು. ಆದರೆ ವರ್ಷಗಳು ಕಳೆದಂತೆ, ಆತನು ಹೆಚ್ಚು ಹೆಚ್ಚು ಅಂತರ್ಮುಖಿಯಾಗಿ, stoicism (ಎಂಥ ಕಷ್ಟವನ್ನಾದರೂ ನಿರ್ವ್ಯಗ್ರತೆಯಿಂದ ಸಹಿಸುವ ಧೀರ ಸಂಯಮತೆ) ಎಂಬ ದರ್ಶನಶಾಸ್ತ್ರಕ್ಕೆ ಒಲಿದನೆಂಬುವುದರಲ್ಲಿ ಸಂದೇಹವಿಲ್ಲ.
ಡ್ಯಾನ್ಯೂಬ್ ನದೀತೀರದಲ್ಲಿ ಅವನು ಒಮ್ಮೆ ವಿಹಾರಾರ್ಥವಾಗಿ ವಾಸಿಸುತ್ತಿದ್ದಾಗ meditations (ಚಿಂತನೆಗಳು) ಎಂಬ ಗ್ರಂಥವನ್ನು ಬರೆದನು. ಈ ಚಿಂತನೆಗಳು ಯಾರೋ ಬೇರೆಯವರು ಬರೆದದ್ದನ್ನು ಓದಿಯೋ ಅಥವಾ ಹೇಳಿದ್ದನ್ನು ಕೇಳಿಯೋ ಬರೆದವಲ್ಲ. ಅಂಥವು ಕೆಲವು ಇರಬಹುದು. ಔರೇಲಿಯಸ್ಸನೇ ತಾನು ಯಾರು ಯಾರಿಂದ ಏನೇನು ಕಲಿತೆ ಎಂಬ ಪಟ್ಟಿಯನ್ನು ಮಾಡಿದ್ದಾನೆ! ಆದರೆ ಹೆಚ್ಚಾಗಿ ಸ್ವಂತ ಅನುಭವದಿಂದ ಪಕ್ವವಾದ ಅಂತರಾಳದಿಂದ ಬಂದ ಮಾತಿಗಳಿವು. ಈ ಗ್ರಂಥವನ್ನು ಬರೆದು ಒಂದು ಸಾವಿರದ ಎಂಟುನೂರ ವರ್ಷಗಳ ಮೇಲಾಗಿದ್ದರೂ, ಇಂದಿಗೂ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಇಷ್ಟೆ. ಇವನ ಅನಿಸಿಕೆಗಳು ಸರಳವಾಗಿ ಕಂಡರೂ, ಅವು ಬಾಳ್ವೆಯ ಏರಿಳಿತಗಳನ್ನು ಸಮಾಧಾನ ಚಿತ್ತದಿಂದ ಎದುರಿಸುವ ಸಾಮರ್ಥ್ಯವನ್ನೂ, ಜೀವನವನ್ನು ಸಫಲಗೊಳಿಸಲು ಬೇಕಾದ ಮಾರ್ಗದರ್ಶನವನ್ನೂ ನಮಗೆ ಕೊಡಬಲ್ಲವು. ಅಂಥ ಚಿಂತನೆಗಳಲ್ಲಿ ಕೆಲವನ್ನು ಮಾತ್ರ ಓದುಗರ ಮುಂದಿಡುತ್ತಿದ್ದೇನೆ.
- ಪ್ರತಿ ಪ್ರಾತಃಕಾಲವೂ ಇದನ್ನು ಸ್ಮರಿಸು: ಇಂದು ನನಗೆ ಕೃತಘ್ನತೆ, ದುರಹಂಕಾರ, ದ್ರೋಹ, ಸ್ವಾರ್ಥಪರತೆ ಮುಂತಾದುವುಗಳ ಅನುಭವವಾಗಬಹುದು. ಇವೆಲ್ಲವೂ ಆಗುವುದು ಇಂಥವನ್ನು ಮಾಡುವವರಿಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದ್ದು ಎಂಬ ಪರಿಜ್ಞಾನವಿಲ್ಲದಿರುವುದರಿಂದ. ನನ್ನ ಮಟ್ಟಿಗಾದರೋ ಒಳ್ಳೆಯದು ಯಾವುದು ಮತ್ತು ಅದರ ಹಿರಿಮೆ, ಕೆಟ್ಟದು ಯಾವುದು ಮತ್ತು ಅದರ ಕೀಳ್ಮೆ ಇವುಗಳ ಅರಿವು ಚೆನ್ನಾಗಿದೆ, ಯುಕ್ತಾಯುಕ್ತ ವಿವೇಚನೆಯಿದೆ. ಆದ್ದರಿಂದ ಇವು ಯಾವುವೂ ನನ್ನ ಮೇಲೆ ಯಾವ ಪರಿಣಾಮವನ್ನೂ ಮಾಡಲಾರವು. ಅಲ್ಲದೆ ಕೆಟ್ಟದ್ದನ್ನು ಮಾಡಿದವರಲ್ಲಿಯೂ, ನನ್ನಲ್ಲಿರುವಂತೆಯೇ ಒಂದು ದೈವಾಂಶವಿದೆ. ಹೀಗಿರುವಾಗ ಅವರ ಬಗ್ಗೆ ಕೋಪವನ್ನೂ ಮಾಡಲಾಗದು.
- ವಿಧಿಯು ನಿನಗೆ ಕಷ್ಟವೋ ಅಥವಾ ಸುಖವೋ, ಏನೇನನ್ನು ತರುತ್ತದೋ ಅದನ್ನು ನಿರ್ವಿಕಾರವಾಗಿ ಸ್ವೀಕರಿಸು, ಈ ಜೀವನದಲ್ಲಿ ದೇವರು ಯಾರನ್ನು ನಿನ್ನ ಒಡನಾಡಿಗಳನ್ನಾಗಿ ಮಾಡಿರುವನೋ ಅವರನ್ನು ಮನಃಪೂರ್ವಕವಾಗಿ ಪ್ರೀತಿಸು.
- ನಿನ್ನ ಜೀವನದ ಪ್ರತಿಯೊಂದು ಕರ್ತವ್ಯವನ್ನೂ, ಅದೇ ಕೊಟ್ಟಕೊನೆಯದೋ ಎಂಬಂತೆ ನೆರವೇರಿಸು.
- ಕೋಪದ ಕಾರಣಗಳಿಗಿಂತಲೂ, ಅಂಥ ಕೋಪದ ಪರಿಣಾಮಗಳೇ ಹೆಚ್ಚು ದುಃಖಕರವಾದುವು.
- ನಿನ್ನ ನೆರೆಯವನು ಏನು ಹೇಳುತ್ತಾನೆ, ಏನು ಮಾಡುತ್ತಾನೆ ಅಥವಾ ಏನು ಯೋಚಿಸುತ್ತಾನೆ ಎಂದು ಚಿಂತಿಸಬೇಡ. ಹಾಗೆ ಚಿಂತಿಸುವುದು ವೃಥಾ ಕಾಲಹರಣ.
- ಕೆಲಸವು ಸರಿಯಲ್ಲದಿದ್ದರೆ (ಅಧರ್ಮವಾಗಿದ್ದರೆ) ಅದನ್ನು ಮಾಡಬೇಡ; ಮಾತು ನಿಜವೆಂದು ನಿನಗೆ ತೋರದಿದ್ದರೆ, ಅಂಥ ಮಾತನ್ನು ಆಡಬೇಡ..
- ನಿನ್ನಲ್ಲಿ ಏನಿಲ್ಲ ಎಂದು ಯೋಚಿಸುವ ಬದಲು, ನಿನ್ನಲ್ಲಿ ಆಗಲೇ ಎಷ್ಟಿದೆ ಎಂದು ಯೋಚಿಸು.
- ಯಾರಾದರೂ ನಿನಗೆ ಅನ್ಯಾಯ ಮಾಡಿದ್ದರೆ ಅಥವಾ ನಿನ್ನನ್ನು ನೋಯಿಸಿದ್ದರೆ, ಅದಕ್ಕೆ ಸರಿಯಾದ ಮುಯ್ಯಿ ನೀನೂ ಅವರಂತೆ ಮಾಡದಿರುವುದು.
- ಯಾವ ಧನವನ್ನು ನೀನು ಒಳ್ಳೆಯ ಕಾರ್ಯಕ್ಕಾಗಿ ದಾನ ಮಾಡಿರುವೆಯೋ, ಅದೇ ನಿನ್ನಲ್ಲಿ ಶಾಶ್ವತವಾಗಿ ನಿಲ್ಲುವ ಐಶ್ವರ್ಯ.
- ನಿನ್ನ ಜೀವನದಲ್ಲಿ ನಡೆಯುವ ಅನೇಕ ಘಟನೆಗಳ ಮೇಲೆ ನಿನಗೆ ಹತೋಟಿಯಿರುವುದಿಲ್ಲ, ಇದು ನಿಜ. ಆದರೆ ನಿನ್ನ ಮನಸ್ಸಿನ ನಿಯಂತ್ರಣ ನಿನ್ನ ಕೈಯಲ್ಲಿದೆ. ಇದು ನಿನಗೆ ಅರಿವಾದರೆ ಕಷ್ಟವನ್ನು ಸೈರಿಸುವ ಶಕ್ತಿ ತಾನಾಗಿಯೇ ಬರುವುದು.
ಮೇಲೆ ಉದ್ಧರಿಸಿರುವ ಚಿಂತನೆಗಳಲ್ಲಿ ಕೆಲವಾದರೂ, ಭಾರತದ ದಾರ್ಶನಿಕರಾದ ತಿರುವಳ್ಳುವರ್, ಭರ್ತೃಹರಿ, ಸರ್ವಜ್ಞ ಮುಂತಾದವರ ವಿಚಾರಗಳನ್ನು ನೆನಪಿಗೆ ತರುತ್ತವೆಯಲ್ಲವೆ? ಅದು ಹೇಗಾದರೂ ಇರಲಿ. ಮಾರ್ಕಸ್ ಔರೇಲಿಯಸ್ಸನ ಜೀವನ ಚರಿತ್ರೆಯನ್ನೂ, ಅವನ ಅನಿಸಿಕೆಗಳನ್ನೂ ಗಮನಿಸಿ ನೋಡಿದರೆ, ಭಗವದ್ಗೀತೆಯ "ಸ್ಥಿತಪ್ರಜ್ಞ" ನೂ, ಧಮ್ಮಪದದ "ನಿಜವಾದ ಬ್ರಾಹ್ಮಣ" ನೂ ಇಂಥವರೇ ಇರಬೇಕೇನೋ ಎನ್ನಿಸುತ್ತದೆ.
ಉಪನಿಷತ್ತುಗಳು ತಿಳಿಸುವ ವಿದ್ಯೆಗೆ ಆತ್ಮ ವಿದ್ಯಾ ಅಥವಾ ಬ್ರಹ್ಮ ವಿದ್ಯಾ ಎಂದು ಹೆಸರು. ಇಲ್ಲಿ ಬ್ರಹ್ಮ ಎಂದರೆ ನಾಲ್ಕು ಮುಖವುಳ್ಳ ಸೃಷ್ಟಿಕರ್ತ ಅಥವಾ ಸರಸ್ವತಿಯ ಪತಿಯಾದ ಬ್ರಹ್ಮ ಅಲ್ಲ. ಬ್ರಹ್ಮ ಅಂದರೆ ಪರಬ್ರಹ್ಮ. ಪರಬ್ರಹ್ಮ ಅಂದರೆ ನಿರ್ಗುಣ, ನಿರಾಕಾರ ಭಗವಂತ. ಅಥವಾ ಅನೇಕ ರೂಪ, ನಾಮಗಳಿರುವ ಎಲ್ಲಾ ಜೀವಿಗಳ ಹೃದಯದೊಳಗಿರುವ ಒಂದೇ ದೇವರಿಗೆ ಪರಬ್ರಹ್ಮ , ಪರಮಾತ್ಮ ಅಥವಾ ಆತ್ಮನೆಂದು ಹೆಸರು. ಪರಬ್ರಹ್ಮನನ್ನೇ ಜನರು ರಾಮ, ಕೃಷ್ಣ, ವಿಷ್ಣು, ಗಣಪತಿ, ಈಶ್ವರ ಎಂದೆಲ್ಲಾ ಕರೆಯುತ್ತಾರೆ. ಭಗವದ್ಗೀತೆಯಲ್ಲಿ ಭಗವಂತನು, "ಹೃದಯದಲ್ಲಿ ನೆಲೆಸಿರುವ ಈಶ್ವರನೇ ಸರ್ವಪ್ರಾಣಿಗಳನ್ನು ಯಂತ್ರಾರೂಢರಾದ ಬೊಂಬೆಗಳಂತೆ ಮಾಯೆಯಿಂದ ತಿರುಗಿಸುತ್ತಾನೆ" ಎಂದು ಹೇಳುತ್ತಾನೆ. "ಪರ ಬ್ರಹ್ಮ" ದಲ್ಲಿ ಪರ ಎನ್ನುವ ಪದಕ್ಕೆ ಕನ್ನಡದಲ್ಲಿಯೂ "ತನ್ನ ಕಡೆಯಿರುವ" ಎಂದೇ ಅರ್ಥವಿದೆ. ನಾವು ಹುಟ್ಟಿದ್ದು , ಇರುವುದು, ಮುಂದೆ ಲಯವಾಗುವುದು ಎಲ್ಲಾ ಪರಮಾತ್ಮನಲ್ಲಿಯೇ. ನಿಜ ಹೇಳಬೇಕೆಂದರೆ ಅದು ಒಂದೇ ನಮ್ಮ ಎಲ್ಲಾ ಸ್ಥಿತಿಗಳಲ್ಲಿಯೂ ನಮ್ಮ ಪರವಾಗಿ ಜೊತೆಯಲ್ಲಿರುವುದು. ಬೇರೆಲ್ಲವೂ, ಎಲ್ಲರೂ ನಮ್ಮ ವಿರುದ್ಧವೇ. ಎಷ್ಟರ ಮಟ್ಟಿಗೆಂದರೆ ಕಡೆಗುಳಿಯುವುದು ಆತ್ಮವೊಂದೇ ಅಥವಾ ನಾವು ಅಂದರೆ ಆತ್ಮ ಮಾತ್ರವೇ. ಅದು ನಮಗೆ ಅರ್ಥವಾಗಬೇಕಷ್ಟೇ. ಅದನ್ನು ಅರಿಯುವ ತತ್ವಕ್ಕೆ "ಪರತತ್ವ" ಎಂದು ಹೆಸರು. ವಿದ್ಯೆಗೆ ಹೆಸರು "ಪರಾ ವಿದ್ಯೆ" ಎಂದರೆ ಬೇರೆ ವಿದ್ಯೆಗಳೆಲ್ಲಾ "ಅಪರಾ ವಿದ್ಯೆ" ಎಂದು ಅರ್ಥ ಬರುತ್ತದೆ ಅಲ್ಲವೇ? ಅದು ನಿಜವೇ. ಬೇರೆ ಯಾವ ವಿದ್ಯೆಯಿಂದಲೂ ನಿಜವಾದ ಶಾಂತಿ ಸಿಕ್ಕುವುದಿಲ್ಲ. ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಕದಡುವ ವಿದ್ಯೆಗಳೇ ಎಲ್ಲವೂ.
ಇದೇನು ಈ "ಬ್ರಹ್ಮ ವಿದ್ಯೆ" ಅಥವಾ "ಆತ್ಮ ವಿದ್ಯೆ"? ಯಾವುದೋ ಕಾಲದ್ದು ಇಂದಿಗೆ ಅದು ಪ್ರಸ್ತುತವೇ? ಅದೂ ಈ ಆಧುನಿಕ ಯುಗದಲ್ಲಿ, ಈ ಆಧುನಿಕ ದೇಶದಲ್ಲಿ ಎಂದು ಹುಡುಗರಾದರೂ ಪ್ರಶ್ನಿಸಬಹುದು. ಕಾಲ, ದೇಶ ಯಾವುದೇ ಇರಲಿ, ನಾವೆಲ್ಲಾ ಮುಂಚೆ ಮಗುವಾಗಿದ್ದೆವು. ಯುವಕರಾಗಿ, ವಯಸ್ಕಾರಾಗಿ ಮುಂದೊಂದು ದಿನ ಸಾಯುತ್ತೇವೆ. ಎಲ್ಲಿಂದ ಬಂದೆವು, ಎಲ್ಲಿಗೆ ಹೋಗುತ್ತೇವೆ ಎಂದು ತಿಳಿದುಕೊಳ್ಳಲು ದೇಶ, ಕಾಲ ಯಾವುದಾದರೇನು? ನಮ್ಮ ಪರಿಚಯ ಮಾಡಿಕೊಳ್ಳುವುದಕ್ಕೆ, ಇಲ್ಲ ನಾವು ಮಾಡ್ರನ್ ನಮಗೆ ಅದು ಬೇಕಾಗಿಲ್ಲ ಅನ್ನುವುದಕ್ಕಾಗುತ್ತದೆಯೇ? ಅದು ಕೊನೆಗಲ್ಲವೆ ತಿಳಿದುಕೊಳ್ಳ ಬೇಕಾದದ್ದು ,ಈಗ್ಲೇ ಯಾಕೆ? ಸದ್ಯಕ್ಕಂತೂ ಪ್ರಾಪಂಚಿಕ ಸುಖ ಎಲ್ಲ ಪೂರ್ತಿಯಾಗಿ ಅನುಭವಿಸೋಣ ಆಮೇಲೆ ನೋಡೋಣ ಅನ್ನುತ್ತೇವಲ್ಲವೇ? ಪ್ರಾಪಂಚಿಕ ಆಸೆಗಳ ಪೂರೈಕೆಗಾಗಿ ದುಡಿದು ಕಾಲಕಳೆದು ಅದನ್ನು ಅನುಭವಿಸುವ ಮುಂಚೆಯೇ ಬಹಳಷ್ಟು ಜನ ಕೊನೆಯುಸಿರೆಳೆದಿದ್ದಾರೆ. ಇದನ್ನೇ ಕರೆಯುವುದು ಶೂನ್ಯ ಸಂಪಾದನೆ ಅಂತ.
ಆಸೆಗಳು...ಅದನ್ನರಸಿ ಹೋಗುವುದು ಅಂದರೆ ನನಗೆ ಜ್ಞಾಪಕಕ್ಕೆ ಬರುವುದು ೧೫ ವರ್ಷಗಳ ಹಿಂದೆ ಭಾರತದಲ್ಲಿ ಪ್ರಸಾರವಾದ ದೂರ ದರ್ಶನದ ಒಂದು ಕಾರ್ಯಕ್ರಮ, ಯಾವುದೋ ಬೇರೆ ದೇಶದ ಕಥೆಯೊಂದನ್ನು ಆಧರಿಸಿದ್ದೆನಿಸುತ್ತದೆ. ಒಂದು ದೇಶದಲ್ಲಿ ಒಬ್ಬನು, ರಾಜನ ಬಳಿ ಬಂದು ತಾನು ಸುಖವಾಗಿ ಬದುಕಲು ತುಂಡು ಜಮೀನು ಕೊಟ್ಟು ಉಪಕರಿಸಿ ಅಂತ ಕೇಳುತ್ತಾನೆ. ರಾಜ, ಮರುದಿನ ಸೂರ್ಯೋದಯಕ್ಕೆ ಮುಂಚೆಯೇ ಇಂತಹ ಜಾಗಕ್ಕೆ ಬಾ, ಜಮೀನು ಕೊಡುತ್ತೇನೆ ಎಂದು ಹೇಳುತ್ತಾನೆ. ಬಹಳ ಸಂತೋಷದಿಂದ ಅವನು ರಾಜ ಹೇಳಿದ ಜಾಗಕ್ಕೆ ಮುಂಜಾನೆ ಬಂದಾಗ ಅರಸನ ಜೊತೆ ಅವನ ಆಸ್ಥಾನದವರೆಲ್ಲಾ ಇರುತ್ತಾರೆ. ರಾಜನು ಅವನಿಗೆ ಕಣ್ಣಿಗೆ ಕಾಣುವವರೆಗೂ ಫಲವತ್ತಾಗಿ ಪೈರು ತುಂಬಿ ಕಂಗೊಳಿಸುತ್ತಿದ್ದ ಜಮೀನನ್ನು ತೋರಿಸಿ, "ನೋಡು,
ಒಂದು ನಿಬಂಧನೆ ಇದೆ, ಈ ಜಮೀನಿನಲ್ಲಿ ಎಷ್ಟು ಬೇಕು ಅನ್ನಿಸುತ್ತದೆಯೋ ಅಷ್ಟು ದೂರ ಹೋಗಿ ಹೋದ ದಾರಿಯಲ್ಲಿಯೇ ಸೂರ್ಯಾಸ್ತಮದ ಒಳಗೆ ಹಿಂತಿರುಗಿ ಬಂದರೆ ಅಷ್ಟು ಜಮೀನು ನಿನ್ನದು ಅಂತ ಹೇಳಿದಾಗ, ಬಹಳ ಆಸೆಯಿಂದ ಜಮೀನಿನಲ್ಲಿ ಓಡಲು ಪ್ರಾರಂಭ ಮಾಡಿದನು, ಇನ್ನೂ ಸ್ವಲ್ಪ ಮತ್ತೂ ಸ್ವಲ್ಪ ಅಂತ ಓಡುತ್ತ ಓಡುತ್ತ ಸೂರ್ಯ ನಡು ನೆತ್ತಿಯ ಮೇಲೆ ಬಂದರೂ ಓಡುತ್ತಿರುತ್ತಾನೆ. ಸೂರ್ಯ ಮುಳುಗುವುದಕ್ಕೆ ಪ್ರಾರಂಭಿಸಿದರೂ ದೂರದಲ್ಲಿ ಕಾಣುತ್ತಿರುವ ಬೆಟ್ಟಗಳ ತನಕ ಇರುವ ಜಮೀನು ನನ್ನದೇ ಆದರೆ ಎಷ್ಟು ಚೆನ್ನ ಅಂತ ಏದುಸಿರು ಬಿಟ್ಟುಕೊಂಡು ಬಹಳ ದೂರದಲ್ಲಿ ಚಿಕ್ಕದಾಗಿ ಕಾಣಿಸುತ್ತಿದ್ದ ರಾಜನ ಕಡೆಗೊಮ್ಮೆ,ಸೂರ್ಯನ ಕಡೆಗೊಮ್ಮೆ ನೋಡುತ್ತ ಓಡಿ ಓಡಿ ಕುಸಿದು ಸತ್ತು ಬೀಳುತ್ತಾನೆ. ಅಷ್ಟು ಓಡಿದ್ದು ಎಲ್ಲ ನಾವು ಮಾಡುವ ಹಾಗೆ ಶೂನ್ಯ ಸಂಪಾದನೆಯೇ.
ಚಿಕ್ಕ ಕಥೆಯಾದರೂ ಎಷ್ಟು ಅರ್ಥ ಪೂರ್ಣ ಅನ್ನಿಸುತ್ತದಲ್ಲವೇ? ನಮಗೆ ಅನ್ವಯಿಸುವ ಹಾಗೆ ರಾಜ ದೇವರು. ನಮಗೆ ಒಡ್ಡಿರುವ ಶರತ್ತೆಂದರೆ ಕೈ ಕಾಲುಗಳಲ್ಲಿ ಶಕ್ತಿ ಉಡುಗಿ ಹೋಗಿ, ಬಾಳೆಂಬ ಸೂರ್ಯ ಮುಳುಗುವುದೊರಳಗೆ ಏನೇ ಸಾಧನೆ ಮಾಡಿದರೂ ಹಿಂತಿರುಗಿ ಅವನ ಬಳಿ ಬಂದರೆ ನಾವು ಗಳಿಸಿದ್ದು ಮಾತ್ರವೇ ಅಲ್ಲದೇ ಅವನ ಸಮಸ್ತ ಐಶ್ವರ್ಯವನ್ನೂ ಅನುಭವಿಸುತ್ತೇವೆ. ಇಲ್ಲದೇ ಇದ್ದರೆ ಮತ್ತೆ ಮೊದಲಿನಿಂದ ಪ್ರಾರಂಭ. ಆದುದರಿಂದ ನಾನೇನೇ ಸಾಧನೆ ಮಾಡಿದರೂ ರಾಜನ ಕಡೆ ಹಿಂತಿರುಗಿ ಬರಲಾರದಷ್ಟು ದೂರ ಹೋಗುವುದು ಬೇಡ ಅಲ್ಲವೇ? ನಮ್ಮೆಲ್ಲ ಕೆಲಸಗಳ ಮಧ್ಯೆಯೂ ಅವನ ಕಡೆ ಹೋಗುವ ದಾರಿಯ ಬಗ್ಗೆ ಚಿಂತನೆ ಹರಿಸಿದರೆ ಅದು ನಿಜವಾದ ಸಂಪಾದನೆ ಅಲ್ಲವೇ?
"ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಲಿ ಬೇಡಿ, ಹುಚ್ಚಪ್ಪಗಳಿರಾ" ಎಂದು ದಾಸಶ್ರೇಷ್ಠರಾದ ಪುರಂದರದಾಸರು ಮನುಷ್ಯಜನ್ಮದ ಶ್ರೇಷ್ಠತೆಯನ್ನು ಎತ್ತಿಹಿಡಿದಿದ್ದಾರೆ. ಬದುಕಿನ ಬಗೆಗಿರುವ ಮಾನವತೆಯನ್ನೂ, ವ್ಯಕ್ತಿಜೀವನದಲ್ಲಿ ಅಡಗಿರುವ ಜೀವಶಕ್ತಿಗಿರುವ ಅನಂತ ಸಾಧ್ಯತೆಗಳನ್ನೂ ಸೂಚಿಸಿದ್ದಾರೆ. ಅಂಥ ಜೀವನವನ್ನು ನಡೆಸಲು ಬೇಕಾದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ನಡೆನುಡಿಗಳನ್ನು ಮಾನವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು; ಬದುಕಿನ ತೋರಿಕೆಯ ಕ್ಷಣಿಕ ಭೋಗವೈಭವಗಳಿಗೆ ಮರುಳಾಗಿ, ಗುಣಹೀನರಾಗಿ, ವ್ಯರ್ಥಜೀವನ ನಡೆಸಿ ಬದುಕನ್ನು ಹಾಳುಮಾಡಬೇಡಿ ಎಂದು ಸಂತ ಪುರಂದರ ದಾಸರು ಕಳಕಳಿಯಿಂದ ಹೇಳಿದ್ದಾರೆ. ಬದುಕಿನಲ್ಲಿ ಉತ್ತಮ ಮೌಲ್ಯಗಳನ್ನು ಮತ್ತು ಆಧ್ಯಾತ್ಮಿಕತೆಯನ್ನು ರೂಢಿಸಿಕೊಂಡು ಭಗವಂತನ ಕೃಪೆಗೆ ಪಾತ್ರರಾಗಿ, ಮುಕ್ತಿಯನ್ನು ಪಡೆಯುವುದೇ ಬದುಕಿನ ಮೂಲ ಧ್ಯೇಯ.
ಆಚಾರ್ಯ ಶಂಕರಾಚಾರ್ಯರು ವಿವೇಕ ಚೂಡಾಮಣಿಯಲ್ಲಿ ಹೇಳಿರುವಂತೆ ಮನುಷ್ಯ ಜನ್ಮ ಹೊಂದುವುದು ದುರ್ಲಭ. ಅನೇಕ ಸಂತರೂ, ಯೋಗಿಗಳೂ, ಜ್ಞಾನಿಗಳೂ ಇದನ್ನೇ ಸ್ಪಷ್ಟ ಪಡಿಸಿದ್ದಾರೆ. ಈ ಉತ್ತಮ ಮನುಷ್ಯ ಜೀವನದ ಮೌಲ್ಯವನ್ನರಿಯದ ಅಜ್ಞಾನಿಗಳು ಧರ್ಮಕ್ಕೂ, ದೈವಕ್ಕೂ ವಿರೋಧವಾಗಿ ಪ್ರಾಪಂಚಿಕ ವಿಷಯಾನುಭವಗಳಿಗೆ ದಾಸರಾಗಿ, ಸದಾ ಭೋಗಲಾಲಸೆಗಳಲ್ಲಿ ಮತ್ತರಾಗಿ ಜೀವನದ ಮುಖ್ಯಗುರಿಯನ್ನೇ ಮರೆಯುತ್ತಾರೆ. ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಇಂತಹ ಪ್ರಾಪಂಚಿಕ ಮನಸ್ಸು ಹೇಗಿರುತ್ತದೆ ಎಂಬುದನ್ನು ಒಂದು ದೃಷ್ಟಾಂತದ ಮೂಲಕ ಹೇಳಿದ್ದಾರೆ. ರಣಹದ್ದು ಆಕಾಶದಲ್ಲಿ ಬಹಳ ಎತ್ತರದಲ್ಲಿ ಹಾರಾಡುತ್ತಿದ್ದರೂ, ಅದರ ಇಡೀ ದೃಷ್ಟಿ ಭೂಮಿಯಮೇಲೆ ಸತ್ತುಬಿದ್ದಿರುವ ಪ್ರಾಣಿಯ ಮೇಲೆ ಇರುತ್ತದೆ.
ಹಿಂದೂ ಧರ್ಮದಲ್ಲಿ ನಾಲ್ಕು ಪುರುಷಾರ್ಥಗಳಿವೆ - ಧರ್ಮ, ಅರ್ಥ, ಕಾಮ, ಮೋಕ್ಷ. ಇವುಗಳಲ್ಲಿ ಅರ್ಥ ಮತ್ತು ಕಾಮ ಇವು ನಿತ್ಯ ಬದುಕಿಗೆ ಸಂಬಂಧಿಸಿವೆ. ಎಲ್ಲರಿಗೂ ಅವಶ್ಯವಾಗಿರುವುದರಿಂದ ಯಾರೂ ಇವೆರಡನ್ನು ಕೈಬಿಡಲಾಗುವುದಿಲ್ಲ. ಆದರೆ ಇವನ್ನು ಸಾಧನವಾಗಿರಿಸಿಕೊಂಡು, ಮೋಕ್ಷವನ್ನೇ ಗುರಿಯಾಗಿರಿಸಿ ಧರ್ಮ ಮಾರ್ಗವನ್ನನುಸರಿಸಿ, ದಿನನಿತ್ಯದ ಪ್ರಾಪಂಚಿಕ ಕರ್ಮದಲ್ಲಿ ತೊಡಗಿದರೆ ಮನುಷ್ಯ ಜನ್ಮ ಸಫಲತೆಯನ್ನು ಪಡೆಯಬಹುದು.
ಗಹನವಾದ ವೇದಾಂತ ತತ್ವಗಳನ್ನು ಸರಳವಾಗಿ ದೈನಂದಿನ ಜೀವನದಲ್ಲೂ ಜರಗುವ ಘಟನೆಗಳ ಮೂಲಕ ಉದಾಹರಿಸಿ ವಿವರಿಸುವುದರಲ್ಲಿ ಭಗವಾನ್ ಶ್ರೀ ರಾಮಕೃಷ್ಣರು ಅತ್ಯಂತ ಕುಶಲರು. ಪಾಂಡಿತ್ಯದಲ್ಲಿ ವಿದ್ವತ್ತಿದ್ದು, ದೈನಂದಿನ ವ್ಯವಹಾರ ಜ್ಞಾನ ಶೂನ್ಯರಾದ ವಿದ್ವಾಂಸರ ಡಂಭತನ ಹಾಗೂ ಅಜ್ಞಾನದ ಬಗ್ಗೆ ಅವರು ಸ್ವಾರಸ್ಯಕರವಾದ ಘಟನೆಯೊಂದನ್ನು ಹೇಳಿದ್ದಾರೆ. ಒಮ್ಮೆ ಸಕಲ ಶಾಸ್ತ್ರಗಳಲ್ಲಿ ನುರಿತ ಪಂಡಿತರೊಬ್ಬರು ನದಿ ದಾಟಿ ಪಕ್ಕದ ಊರಿಗೆ ಹೋಗಲು ದೋಣಿಯೊಂದರಲ್ಲಿ ಕುಳಿತರು. ಅದರಲ್ಲಿ ಅವರು ಮತ್ತು ಅಂಬಿಗ ಇಬ್ಬರೇ. ದೋಣಿ ಪ್ರಶಾಂತ ವಾತಾವರಣದಲ್ಲಿ ನಿಧಾನವಾಗಿ ಸಾಗುತ್ತಿತ್ತು. ಪಂಡಿತರಿಗೆ ತಮ್ಮ ಪಾಂಡಿತ್ಯವನ್ನು ಸ್ವಲ್ಪ ತೋರಿಸಿಕೊಳ್ಳುವ ಮನಸ್ಸಾಯಿತು. ಅವರು ಅಂಬಿಗನನ್ನು ಕೇಳಿದರು," ಅಯ್ಯಾ, ನಿನಗೆ ಕಾವ್ಯ, ನಾಟಕಗಳ ಪರಿಚಯ ಇದೆಯೇನು?" ಅಂಬಿಗ ಹೇಳಿದ, "ಇಲ್ಲಾ ಸ್ವಾಮಿ, ಅವುಗಳ ಹೆಸರೇ ತಿಳಿದಿಲ್ಲ." ಪಂಡಿತರು ಹೇಳಿದರು, "ಓಹೋ, ಅದು ಗೊತ್ತಿಲ್ಲವೆ? ಹಾಗಾದರೆ ನಿನ್ನ ಜೀವನದ ಕಾಲು ಭಾಗ ನಷ್ಟವಾಯಿತು. ಹೋಗಲಿ, ಜ್ಯೋತಿಷ್ಯ ಶಾಸ್ತ್ರ ಏನಾದರೂ ತಿಳಿದಿರುವೆಯಾ?" "ಸ್ವಲ್ಪವೂ ಇಲ್ಲ", ಅಂಬಿಗ ಹೇಳಿದ. "ಅಯ್ಯಾ, ನಿನ್ನ ಜೀವನದ ಅರ್ಧ ಭಾಗ ನಷ್ಟವಾಯಿತು. ಹೋಗಲಿ ತರ್ಕಶಾಸ್ತ್ರವನ್ನಾದರೂ ಸ್ವಲ್ಪ ಓದಿದ್ದೀಯಾ?" "ಸ್ವಾಮಿ ಇದಕ್ಕೆ ಏನು ಹೇಳಲಿ?", ಎಂದ ಅಂಬಿಗ. "ಹಾಗಾದರೆ ನಿನ್ನ ಜೀವನದ ಮುಕ್ಕಾಲು ಭಾಗ ನಷ್ಟವಾಯಿತು", ಎಂದರು ಪಂಡಿತರು. ಅಂಬಿಗ ಖಿನ್ನನಾಗಿ ಕುಳಿತ.
ಕೊಂಚ ಕಾಲದ ನಂತರ ನದಿಯಲ್ಲಿ ಪ್ರವಾಹ ಜೋರಾಗುತ್ತಾ ಬಂದು ದೋಣಿ ಮುಳುಗುವ ಹಾಗಾಯಿತು. ಅಂಬಿಗ ಕೇಳಿದ, "ಸ್ವಾಮೀ ದೋಣಿ ಮುಳುಗುವ ಹಾಗಿದೆ. ನನಗೇನೋ ಈಜು ಬರುತ್ತದೆ. ನಿಮಗೆ ಈಜಲು ಗೊತ್ತಿದೆಯೇ?". ಪಂಡಿತರು ಗಾಭರಿಯಿಂದ ಕಂಗಾಲಾಗಿ ಹೆಳಿದರು, "ಇಲ್ಲಪ್ಪಾ, ಈಜುವ ವಿದ್ಯೆ ತಿಳಿದಿಲ್ಲ. ಈಗೇನು ಮಾಡಲಿ?" ಅಂಬಿಗ ಹೇಳಿದ, "ಸ್ವಾಮಿ, ಹಾಗಾದರೆ ನಿಮ್ಮ ಇಡೀ ಜೀವನವೇ ಹಾಳಾಯ್ತು." ಜೀವನದಲ್ಲಿ ಐಹಿಕ ಮತ್ತು ಪಾರಮಾರ್ಥಿಕ ಜ್ಞಾನಗಳು ಸಾಮರಸ್ಯದಲ್ಲಿ ಮಿಳಿತವಾಗಿರಬೇಕು. ದಿನನಿತ್ಯ ಕರ್ಮಗಳಲ್ಲಿ ಎರಡನ್ನೂ ಹೊಂದಿಸಿ ನಡೆಯುವುದೇ ಬುದ್ಧಿವಂತರ ಲಕ್ಷಣ.
ಜೀವನದ ಮುಖ್ಯ ಉದ್ದೇಶವನ್ನು ಮರೆತು ಏಕಮುಖವಾಗಿ ಕೇವಲ ಪ್ರಾಪಂಚಿಕ ಭೋಗಗಳಲ್ಲೇ ತಲ್ಲೀನರಾಗಿ ಆತ್ಮೋನ್ನತಿಯ ಮಾರ್ಗವನ್ನು ಕಡೆಗಣಿಸಿದರೆ ನಿಜಕ್ಕೂ ಇಡೀ ಜೀವನವೇ ವ್ಯರ್ಥ. ಐಶ್ವರ್ಯ, ಅಧಿಕಾರ, ಕೀರ್ತಿ, ಗೌರವ, ಸುಖಭೋಗಗಳೇ ಸರ್ವಸ್ವವೆಂದು ಸುಖಿಸುತ್ತಾ, ಸಂತೋಷದ ಪರಮಾವಧಿಯಲ್ಲಿದ್ದಾಗ ಹಠಾತ್ತನೆ ಸಾವು ನೋವುಗಳ ಪೆಟ್ಟು ಬಿದ್ದಾಗ, ದುಃಖ ನಿರಾಶೆಗಳು ಬಂದು ಅಪ್ಪಳಿಸಿದಾಗ, ಅವುಗಳನ್ನು ಎದುರಿಸುವ ಮಾನಸಿಕ ಶಕ್ತಿಯೇ ಇಲ್ಲದೆ, ಬೇರೆ ದಾರಿ ಕಾಣದೆ ಮನುಷ್ಯರು ಕಂಗಾಲಾಗಿ ಕುಸಿಯುತ್ತಾರೆ. ಜೀವನದ ಏರು ಪೇರುಗಳನ್ನು ಎದುರಿಸಲು ಲೌಕಿಕ ಬುದ್ಧಿಶಕ್ತಿಯ ಜೊತೆಗೆ ಆದ್ಯಾತ್ಮಿಕ ಜ್ಞಾನ ಶಕ್ತಿಯೂ ಅವಶ್ಯಕ. ಇದಕ್ಕಿರುವ ಒಂದೇ ಮಾರ್ಗ- ಭಕ್ತಿ, ಧ್ಯಾನ ಮತ್ತು ಜ್ಞಾನ ಮಾರ್ಗಗಳು. ಇವುಗಳ ಮೂಲಕ ಭಗವಂತನಲ್ಲಿ ಶ್ರದ್ಧೆ ಇಟ್ಟು, ಪಾರಮಾರ್ಥಿಕ ಹಾದಿಯಲ್ಲಿ ನಡೆಯುತ್ತಾ, ನಿತ್ಯಜೀವನದಲ್ಲಿ ಸಾಗಿದರೆ ಎಂತಹ ಪ್ರತಿಕೂಲ ಪರಿಸ್ಥಿತಿಯನ್ನೂ ಎದುರಿಸುವ ಶಕ್ತಿ ಲಭಿಸುತ್ತದೆ. ಈ ಆಂತರಿಕ ಜ್ಞಾನ ಇಹದಲ್ಲೂ ಪರದಲ್ಲೂ ಫಲದಾಯಕವಾಗಿರುತ್ತದೆ.
ಮನುಷ್ಯ ಜೀವನ ಈ ಐಹಿಕ ಪ್ರಪಂಚದಲ್ಲಿಯೇ ಸಾಗಬೇಕು. ಈ ಪ್ರಪಂಚದಲ್ಲಿರುವ ಮುಳ್ಳನ್ನೆಲ್ಲಾ ತೆಗೆಯಲು ಸಾಧ್ಯವಿಲ್ಲ. ಆದರೆ ನಡೆಯುವಾಗ ಕಾಲಿಗೆ ಪಾದರಕ್ಷೆಯನ್ನು ಹಾಕಿಕೊಂಡು ನಡೆದರೆ, ಮುಳ್ಳಿನ ಮೇಲೆ ನಡೆದರೂ ಮುಳ್ಳು ಚುಚ್ಚುವುದಿಲ್ಲ. ಅಂತೆಯೇ ಪ್ರಪಂಚದಲ್ಲಿದ್ದೂ ಪ್ರಾಪಂಚಿಕತೆಯಿಂದ ದೂರವಾಗಬೇಕಾದರೆ ಮನಸ್ಸನ್ನು ಸ್ಥಿರವಾಗಿ ಭಗವಂತನಲ್ಲಿರಿಸಿ ನಿತ್ಯ ವ್ಯವಹಾರಗಳಲ್ಲಿ ತೊಡಗಿದರೆ, ಜೀವನದ ಏರುಪೇರುಗಳನ್ನು ಎದುರಿಸಲು ಸಾಧ್ಯ. ಶ್ರೀ ರಾಮಕೃಷ್ಣರು ಮತ್ತೊಂದು ಸುಂದರ ಉದಾಹರಣೆಯನ್ನು ಹೇಳಿದ್ದಾರೆ-- ಹಲಸಿನ ಹಣ್ಣನ್ನು ಬಿಡಿಸುವ ಮೊದಲು ಕೈಗೆ ಎಣ್ಣೆ ಸವರಿಕೊಂಡು ಬಿಡಿಸಿದರೆ ಹಾಲು ಅಂಟುವುದಿಲ್ಲ. ಅದರಂತೆಯೇ ಭಗವಂತನಲ್ಲಿ ಮೊದಲು ಶುದ್ಧ ಭಕ್ತಿ, ಪ್ರೀತಿಭಾವಗಳನ್ನು ಬೆಳೆಸಿಕೊಂಡು, ಪ್ರಪಂಚದ ವ್ಯವಹಾರಗಳಲ್ಲಿ ಎಷ್ಟೇ ತೊಡಗಿದರೂ ಪ್ರಾಪಂಚಿಕತೆ ಮನಸ್ಸಿಗೆ ಅಂಟುವುದಿಲ್ಲ.
ಶ್ರೀ ಕೃಷ್ಣ ಭಗವಾನರು ಭಗವದ್ಗೀತೆಯಲ್ಲಿ ಹೇಳಿರುವಂತೆ -
"ಅನನ್ಯಾಶ್ಚಿಂತಯಂತೋಮಾಂ ಯೇ ಜನಾಃ ಪರ್ಯುಪಾಸತೇ |
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ||"
"ವಿಧಿವಿರಾಮವಿಲ್ಲದೆ ಅನನ್ಯ ಚಿಂತೆಯಿಂದ ನನ್ನನ್ನು ಸೇವಿಸುವ ಜನರ ಯೋಗ ಕ್ಷೇಮವನ್ನು ನಾನೇ ನಿರ್ವಹಿಸುತ್ತೇನೆ."
ಮಕ್ಕಳು ಕಂಬ ಸುತ್ತುವ ಆಟ ಆಡುವಾಗ ಕಂಬವನ್ನು ಭದ್ರವಾಗಿ ಒಂದು ಕೈಯಲ್ಲಿ ಹಿಡಿದುಕೊಂಡು ನಂತರ ಕಂಬದ ಸುತ್ತಲೂ ಜೋರಾಗಿ ತಿರುಗುತ್ತಾ ಆನಂದಿಸುತ್ತಾರೆ. ಆದರೆ ಕಂಬದ ಮೇಲಿನ ಕೈ ಮಾತ್ರ ಸ್ವಲ್ಪವೂ ಹಿಡಿತ ತಪ್ಪದಂತೆ ಮನಸ್ಸೆಲ್ಲಾ ಅದರ ಮೇಲೆಯೇ ಕೇಂದ್ರೀಕರಿಸಿರುತ್ತದೆ. ಅದರಂತೆಯೇ ಭಗವಂತನಲ್ಲಿ ಮನಸ್ಸನ್ನು ಕೇಂದ್ರೀಕರಿಸಿ ದಿನ ನಿತ್ಯದ ಜೀವನದಲ್ಲಿ ವ್ಯವಹರಿಸುತ್ತಿದ್ದರೂ, ಮನಸ್ಸು ಇಂದ್ರಿಯ ವಿಷಯಗಳಿಗೆ ಒಳಗಾಗದೆ, ಪ್ರಾಪಂಚಿಕತೆಯಿಂದ ದೂರವಾಗಿ ಭಗವಂತನ ಲೀಲಾಪ್ರಪಂಚದಲ್ಲಿ ನಡೆಯುತ್ತಾ ಜೀವನದ ಗುರಿಯನ್ನು ಸೇರಬಹುದು.
ಸಾಧಾರಣವಾಗಿ ಎಲ್ಲರ ಜೀವನದಲ್ಲೂ ಎಷ್ಟೋ ಬಾರಿ ಇಷ್ಟಪಟ್ಟು ಕೆಲಸ ಮಾಡುವಾಗ ನಿರೀಕ್ಷೆಗೂ ಮೀರಿ ಚೆನ್ನಾಗಿ ಬಂದಾಗ ಮೈ ಪುಳಕಗೊಂಡು, ರೋಮಾಂಚನವಾಗಿ ಸದಾ ನೆನಪಿನಲ್ಲಿ ಉಳಿಯುವ ಅನುಭವವಾಗುತ್ತದೆ. ಅದೇ ರೀತಿ ಮಾಡಬೇಕೆಂದು ಮತ್ತೆ ಮತ್ತೆ ಪ್ರಯತ್ನಿಸಿದರೂ ಆ ರೀತಿಯ ಫಲಿತಾಂಶ ಮತ್ತೆ ಬರುವುದೇ ಇಲ್ಲ. ಅದು ವೃತ್ತಿ ಜೀವನದಲ್ಲಿ ಇರಬಹುದು ಅಥವಾ ಹವ್ಯಾಸಿ ಚಟುವಟಿಕೆಯಲ್ಲಿರಬಹುದು. ಸೂಕ್ಷ್ಮವಾಗಿ ಇಂತಹ ಅನುಭವದ ಹಿನ್ನೆಲೆಯನ್ನು ಗಮನವಿಟ್ಟು ನೆನಪಿಸಿಕೊಂಡಾಗ ಸಾಧಾರಣವಾಗಿ ಕಂಡು ಬರುವುದು, ನಮ್ಮ ಪ್ರಯತ್ನಕ್ಕಿಂತ ಮಿಗಿಲಾದ ಯಾವುದೋ ಶಕ್ತಿಯ ಕೈಗೊಂಬೆಯಾಗಿ ನಮ್ಮಿಂದ ಆ ಕೆಲಸ ಮಾಡಲ್ಪಟ್ಟಿತೇನೋ ಅನ್ನಿಸುತ್ತದೆ.ಅಥವಾ ನಮ್ಮ ಇರವನ್ನೂ ಮರೆತು ಮಗ್ನರಾಗಿ ಮಾಡುವ ಕೆಲಸದ ಭವ್ಯತೆ ಇದೇನೋ ಅನ್ನಿಸುತ್ತದೆ.
ನಾವು ನಾವಾಗಿಲ್ಲದಾಗ ಯಾರಿಂದಾಯಿತು ಆ ಕಾರ್ಯ ಎಂದು ಯೋಚಿಸಿದಾಗ, ಆ ಕ್ಷಣಗಳಲ್ಲಿ ನಮ್ಮ ಅಂತರಾಳದೊಳಗಿನ ಯಾವುದೋ ಪವಿತ್ರ ಶಕ್ತಿಯ ಸ್ಪರ್ಶದ ಅನುಭವವವಾಯಿತೇನೋ ಎಂದು ಅನ್ನಿಸುವುದಲ್ಲವೇ? ಜೀವನದಲ್ಲಿ ಎಲ್ಲೋ ಒಂದೊಂದು ಬಾರಿ ಬರುವ ಈ ರೀತಿಯ ಅನುಭವಗಳನ್ನೇ ಅಮೃತತ್ವದ ಅನುಭವ ಎನ್ನುವುದು. ಇದಕ್ಕೆ ಬರುವ ಪ್ರತಿಫಲ, ಧನ ಕನಕಗಳಿಗಿಂತಲೂ ಮಿಗಿಲಾದದ್ದು. ಅದೇ ತೃಪ್ತಿ ಅಥವಾ ಸಾರ್ಥಕತೆಯ, ಅಥವಾ ಧನ್ಯತೆಯ ಶ್ರೀಮಂತ ಮನೋಭಾವ. ಇದನ್ನೇ ಅಲ್ಲವೇ ನಿಜವಾದ ಆನಂದ ಎನ್ನುವುದು! ದಿನ ನಿತ್ಯದ ಯಾಂತ್ರಿಕ ಬದುಕಿನಲ್ಲಿ, ನೀರಸ ಜೀವನದಲ್ಲಿ ಈ ರೀತಿಯ ಅನುಭವವೇ ಸದಾ ಇರುವಾಂತಾದರೆ ಎಷ್ಟು ಚೆನ್ನಾಗಿರುತ್ತದೆ. ಹಾಗಿರುವುದಿಲ್ಲ ಎಂದೇ ವರ್ಷದಲ್ಲಿ ಮಧ್ಯೆ ಮಧ್ಯೆ ಕೆಲವು ದಿನಗಳನ್ನು ಗುರುತಿಸಿಕೊಂಡು ಹಬ್ಬಗಳು ಎಂದು ಆಚರಿಸುತ್ತೇವೆ. ವಿಶೇಷ ಪೂಜೆ, ಅಡಿಗೆಗಳನ್ನು ಮಾಡಿ ಊಟ ಉಪಚಾರದೊಂದಿಗೆ ದೈನಂದಿನ ದಿನಚರಿಗಳನ್ನು ಬದಲಿಸಿ ಸಂತೋಷವಾಗಿರಲು ಪ್ರಯತ್ನಿಸುತ್ತೇವೆ.
ಆದರೆ ಅಮೃತತ್ವದ ಅನುಭವಕ್ಕೆ ಹೋಲಿಸಿದರೆ ಅದೆಲ್ಲ ಸಂತೋಷವೇ ಅಲ್ಲ ಅನ್ನಿಸುವುದಲ್ಲವೇ? ಹೇಗೆ ಈ ಅನುಭವವನ್ನು ಸದಾ ತಂದುಕೊಳ್ಳುವುದು ಅಂದರೆ ಆಂತರಿಕವಾಗಿರುವ ಆನಂದದ ಸೆಲೆಯನ್ನು ಸದಾ ಭಕ್ತಿಪೂರ್ವಕವಾಗಿ ನೆನೆದು ಮಾಡುವ ಎಲ್ಲಾ ಕೆಲಸಗಳೂ ಅಮೃತತ್ವದ ಅನುಭವವನ್ನೇ ತರುತ್ತದೆ ಎನ್ನುತ್ತಾರೆ. ಈ ಭಾವನೆಯನ್ನು ಬಲಪಡಿಸಿಕೊಳ್ಳುವುದು, ಅದೂ ನಮ್ಮನ್ನು ನಾವು ಮರೆಯುವಷ್ಟು ಭಕ್ತಿ ಎಂದರೇನು ಎಂದು ನೋಡೋಣ.
ಭಕ್ತಿ ಎಂದರೆ ಸಾಮಾನ್ಯ ತಿಳುವಳಿಕೆಯಲ್ಲಿ ನ್ಯಾಯಾಧೀಶನಾಗಿ ಶಿಕ್ಷೆ ಕೊಡುವ ಕಾಣದ ದೇವರಿಗೆ ಭಯದಿಂದ ನಡೆದುಕೊಳ್ಳುವುದು ಎಂದಲ್ಲವೇ? ಆದರೆ ಭಕ್ತಿ ಎಂದರೆ ಪ್ರೀತಿ, ಭಗವಂತ ಪ್ರೇಮ ಸ್ವರೂಪಿ, ಮಾತಾ, ಪಿತ, ಬಂಧು, ಸಖ ಎಲ್ಲವೂ ಅವನು ಮಾತ್ರ ಅನ್ನುವ ರೀತಿಯಲ್ಲಿ ನೋಡಿದರೆ ಅಲ್ಲಿ ಭಯದ ಛಾಯೆಯೂ ಇರುವುದಿಲ್ಲ. ಇದನ್ನೇ "ಅಭಯಂ ಪ್ರತಿಷ್ಠಾ ವಿಂದತಿ" ಅಂದರೆ ನಿಜವಾಗಿ ತಿಳಿದವನು ಅಭಯದಲ್ಲಿ ಪ್ರತಿಷ್ಠಿತನಾಗಿರುತ್ತಾನೆ ಎಂದು ಉಪನಿಷತ್ತುಗಳು ಹೇಳುತ್ತವೆ. ನಿಷ್ಕಲ್ಮಶ ಪ್ರೇಮ ಎಲ್ಲಿ ಉತ್ಕಟವಾಗಿರುವುದೋ ಅಲ್ಲಿ ಭಯವಿರುವುದಿಲ್ಲ ಎಂದು ಹಿಂದೆ ಪರಮಹಂಸ ಯೋಗಾನಂದರು ಅಮೇರಿಕಾದಲ್ಲೊಂದು ಕಡೆ ತಮ್ಮ ಉಪನ್ಯಾಸದಲ್ಲಿ ಹೇಳುತ್ತಿರುವಾಗ ಸಭಿಕರು ಅದು ಹೇಗೆಂದು ಪ್ರಶ್ನಿಸಿದಕ್ಕೆ ಅವರೊಂದು ದೃಷ್ಟಾಂತವನ್ನು ಕೊಡುತ್ತಾರೆ, " ನಾವೆಲ್ಲಿಗಾದರೂ ಹೋಗುವಾಗ ಎದುರಿಗೊಂದು ಹುಲಿ ಬಂದರೆ ಏನಾಗಬಹುದು ನಮ್ಮ ಗತಿ? ಹೆದರಿ ಓಡಬಹುದು, ಹೆದರಿ ಎಚ್ಚರ ತಪ್ಪಬಹುದು. ಆದರೆ ಅದೇ ಹುಲಿ ಒಂದು ಮಗುವನ್ನು ಹಿಡಿಯಲು ಹೋದರೆ ತಾಯಿಯಾದವಳು ಮಗು ಮತ್ತು ಹುಲಿಯ ನಡುವೆ ನಿಂತು ಮಗುವನ್ನು ರಕ್ಷಿಸುವ ಪ್ರಯತ್ನ ಮಾಡುತ್ತಾಳೆ. ಮಗುವಿನ ಮೇಲಿನ ಮಮತೆ, ಪ್ರೀತಿಯ ಮುಂದೆ ಎಲ್ಲಿ ಹೋಯಿತು ಹುಲಿಯ ಭಯ? ಪ್ರೇಮಿಸಿದವರು ಪ್ರಾಣವನ್ನೂ ಲೆಕ್ಕಿಸುವುದಿಲ್ಲ, ಜಗತ್ತನ್ನೇ ಎದುರಿಸಿ ನಿಲ್ಲುತ್ತಾರೆ"". ಇಂತಹ ಕಥೆಗಳು ಸಾಕಷ್ಟಿವೆ ಜಗತ್ತಿನಲ್ಲಿ. ಅದೇ ಪ್ರೇಮವನ್ನು ಭಗವಂತನೆಡೆಗೆ ತಿರುಗಿಸಿದಾಗ ಭಕ್ತಿ ಎನ್ನುತ್ತಾರೆ.
ಈ ರೀತಿ ಭಗವಂತನಲ್ಲಿ ಪ್ರೀತಿಯನ್ನು ತಿರುಗಿಸಿದ ಪ್ರಸಿದ್ಧ ಉಲ್ಲೇಖ ಗೋಸ್ವಾಮಿ ತುಳಸೀದಾಸರದು. ಅಷ್ಟು ಉತ್ಕಟವಾಗಿ ಪ್ರಾಣದ ಹಂಗನ್ನು ತೊರೆದು ಪ್ರೀತಿಸಿದ ಹೆಂಡತಿಯು ಹೇಳಿದ ಒಂದು ಮಾತಿನಿಂದ ಅವರ ಜೀವನದಲ್ಲಿ ಎಂಥಹ ಪರಿವರ್ತನೆಯಾಯಿತು. ಮಹಾನ್ ಸಂತ ಶ್ರೇಷ್ಠರಾದರು ಅನ್ನುವುದು ಎಲ್ಲರಿಗೂ ತಿಳಿದ ವಿಷಯ.
ಆದರೆ ಇಂತಹ ಭಕ್ತಿ ಯಾರಿಗೆ ಸಾಧ್ಯವೆಂದರೆ, ನಿಷ್ಕಾಮವಾಗಿ ನಿರ್ಮಲ ಪ್ರೀತಿಯನ್ನು ನೀಡಲು ಒಬ್ಬ ವ್ಯಕ್ತಿಗೆ ಸಾಧ್ಯವಿದ್ದಲ್ಲಿ, ಅವನನ್ನವನು ಭಗವದ್ಭಕ್ತಿಯ ಕಡೆಗೆ ತಿರುಗಿಸಲು ಸಾಧ್ಯ. ಭಾವನೆಗಳೇ ಇಲ್ಲದ ಮನುಷ್ಯಪ್ರಾಣಿಗಳಿಗೆ ಭಕ್ತಿಯ ಮಾರ್ಗ ಬಹಳ ಕಷ್ಟ. ಈ ಭಾವನೆಗಳನ್ನು ಬೆಳೆಸಲು, ಪ್ರಕೃತಿಯನ್ನು, ಪ್ರಕೃತಿಯಲ್ಲಿರುವ ಚೇತನಗಳನ್ನು ತಮ್ಮಂತೆಯೇ ಒಂದು ಜೀವವೆಂದು ಪ್ರೀತಿಸುವ ಅಭ್ಯಾಸವನ್ನು ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಕಲಿಸಿದರೆ ಮುಂದೆ ಅವರು ಒಳ್ಳೆಯ ನಾಗರೀಕರಾಗಿ ಬಾಳಿ ತಮ್ಮ ಕರ್ಮದಲ್ಲಿ ತಾವು ಮಾತ್ರವಲ್ಲ, ಇಡೀ ವಿಶ್ವವೇ ಅವರ ನೆನಪಿನಲ್ಲಿ, ಅವರ ಕರ್ಮದಲ್ಲಿ ಅಮೃತತ್ವದ ಅನುಭವಗಳನ್ನು ಕಾಣಿಕೆಯಾಗಿ ನೀಡಲು ಸಮರ್ಥರಾಗುತ್ತಾರೆ. ಬೇಲೂರು, ಹಳೆಬೀಡು ಮತ್ತು ಸೋಮನಾಥಪುರದ ಶಿಲ್ಪ ವೈಭವಗಳಲ್ಲಿ ಅಲ್ಲಿನ ಶಿಲ್ಪಿಗಳಾರೂ ತಮ್ಮ ಹೆಸರನ್ನು ಕೆತ್ತಿರದೇ ಇದ್ದದ್ದು ಜ್ಞಾಪಕಕ್ಕೆ ಬರುತ್ತದೆ. ಕಗ್ಗಲ್ಲಿನಲ್ಲಿ ಸುಂದರ ಶಿಲ್ಪವಾಗಿ ಮೂಡಿರುವುದು ಅವರುಗಳ ಅಮೃತಾನುಭವಗಳೇ ಇರಬಹುದಲ್ಲವೇ? ತಮ್ಮ ಜೀವನವಿಡೀ ನಡೆಸಿದ ಇಂತಹ ಸಾರ್ಥಕ ಸಾಧನೆಗಳ ಹಿಂದೆ ತಮ್ಮನ್ನು ತಾವೇ ಮರೆತು ತಮ್ಮ ಅಂತರಾತ್ಮದ ಅಥವಾ ಭಗವಂತನ ಪ್ರೀತಿಯಲ್ಲದೇ ಇನ್ನೇನು ತಾನೆ ಇರಲು ಸಾಧ್ಯ?
ಇಂತಹ ಅಮೃತತ್ವದ ಅನುಭವಗಳನ್ನು ಎರವಲಾಗಿ ಬಿಟ್ಟು ಹೋದವರು ಭಾರತೀಯರು ಮಾತ್ರವಲ್ಲ "ಲಿಯೊನಾರ್ಡೋ ಡ ವಿಂಚಿ"ಯ ಹಾಗೆ ಅನೇಕಾನೇಕ ವಿದೇಶಿಯರೂ ಇದ್ದಾರೆ. ಆದರೆ ಇದನ್ನು ರೂಢಿಸಿಕೊಂಡು ತಮ್ಮ ಆಸಕ್ತಿಯ ಕೆಲಸಗಳೆಲ್ಲವನ್ನೂ ಇದರ ನೆಲೆಗಟ್ಟಿನಲ್ಲಿ ನಿರ್ಮಿಸುವ ವ್ಯವಸ್ಥಿತ ಮಾರ್ಗವನ್ನು ಭಕ್ತಿಮಾರ್ಗವಾಗಿ ರೂಪಿಸಿರುವುದು ಭಾರತೀಯ ತತ್ವಶಾಸ್ತ್ರ. ಭಕ್ತಿಯ ಮಾರ್ಗದಲ್ಲಿರುವವನಿಗೆ ನಿತ್ಯೋತ್ಸವ, ನಿತ್ಯ ಮಂಗಳ, ನಿತ್ಯವೂ ಅಮೃತಾನುಭವವೇ ಎನ್ನುತ್ತದೆ ಭಾಗವತ. ಇದನ್ನು ಹೊಂದಿರುವ ಪುಣ್ಯಾತ್ಮರ ಸ್ವಲ್ಪ ಸಮಯದ ಒಡನಾಟವೇ ನಮ್ಮ ದುಃಖ, ದುಗುಡಗಳನ್ನು ದೂರ ಮಾಡಿ, ಅವರ ಆನಂದದ ಛಾಯೆ ನಮ್ಮಲ್ಲೂ ಮೂಡುವ ಹಾಗಾಗುತ್ತದೆ. ಇಂತಹ ಅಮೃತಾನುಭವಿಗಳಾಗಲು ಪ್ರಯತ್ನ ಮಾಡೋಣ!!
ಈ ಕಥೆಯನ್ನು ಮೂಲತಃ, ತಮಿಳಿನಲ್ಲಿ ಬರೆದವರು, ಭಾರತದ ಏಕೈಕ ಭಾರತೀಯ Governor General ಆಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿಯವರು. ಕಥೆ Charles Dickens ನ A Christmas Carol ಎಂಬ ನೀಳ್ಗತೆಯನ್ನು ನೆನಪಿಗೆ ತರುತ್ತಾದರೂ, ಇದರಲ್ಲಿ ತನ್ನದೇ ಆದ ವೈಶಿಷ್ಟ್ಯವಿದೆ. ನೆನಪಿನಲ್ಲಿಡಬೇಕಾದ ಇನ್ನೊಂದು ಮಾತೇನೆಂದರೆ, ಈ ಕಿರುಗತೆಯನ್ನು ಬರೆದದ್ದು ಸುಮಾರು ಎಂಭತ್ತು ವರ್ಷಗಳ ಹಿಂದೆ.
ಅಂದು ಗೋಕುಲಾಷ್ಟಮಿ ರಾತ್ರಿ. ರಾಜುಲು ಚೆಟ್ಟಿಯಾರರು ತಮ್ಮ ಕೊಠಡಿಯನ್ನು ಒಳಗಿಂದ ಭದ್ರವಾಗಿ ಮುಚ್ಚಿ ಹಣದ ನೋಟುಗಳನ್ನು ತಿಜೋರಿಯಲ್ಲಿ ಇಡುತ್ತಿದ್ದರು. ಆಮೇಲೆ ತಿಜೋರಿಗೆ ಬೀಗ ಹಾಕಿ ಏಳುವಾಗ "ಗೋವಿಂದಾ" ಎಂದರು. ಅವರು "ಗೋವಿಂದಾ" ಎಂದುದು ದೇವರ ಮೇಲಿನ ಭಕ್ತಿಯಿಂದಲೇನೂ ಅಲ್ಲ. ಅವರಿಗೆ ಸಂಧಿವಾತ. ಬಹಳ ಹೊತ್ತು ನೆಲದ ಮೇಲೆ ಕುಳಿತದ್ದರಿಂದ ಏಳುವುದು ಕಷ್ಟವಾಯಿತು. ಅದಕ್ಕೆ ಅವರಿಗೆ ಅರಿವಿಲ್ಲದೆಯೇ "ಗೋವಿಂದಾ" ಎಂಬ ನಾಮವು ಅವರ ಬಾಯಿಯಿಂದ ಹೊರಬಿದ್ದಿತು. ಮರುಕ್ಷಣದಲ್ಲಿಯೇ, ಅವರ ಮುಂದೆ ಶ್ಯಾಮವರ್ಣನಾದ ಬಾಲಕೃಷ್ಣನು ನಿಂತಿದ್ದನು. ಚೆಟ್ಟಿಯಾರರಿಗೆ ಯಾರೋ ಕಳ್ಳನು ಬಂದಿದ್ದಾನೆ ಎಂದು ಗಾಬರಿಯಾಯಿತು. "ಯಾರು ನೀನು? ಒಳಗೆ ಹೇಗೆ ಬಂದೆ?" ಎಂದು ಕೇಳಿದರು. ಕೃಷ್ಣನು "ನಾನು ಗೋವಿಂದ, ನೀವು ಕರೆದಿರಿ ನಾನು ಬಂದೆ" ಎಂದನು. ಆಗ ಮುಚ್ಚಿದ ಬಾಗಿಲು ಹಾಗೆಯೇ ಇದ್ದುದು ಅವರ ಗಮನಕ್ಕೆ ಬಂದು ಚೆಟ್ಟಿಯಾರರು ಇನ್ನೂ ಗಾಬರಿಗೊಂಡು ಮೂರ್ಛಿತರಾದರು.
ಅವರಿಗೆ ಎಚ್ಚರವಾದಾಗ, ಕೃಷ್ಣನು ಅಲ್ಲಿಯೇ ಇದ್ದನು. ಆದರೆ ಈ ಸಲ ಅವನು ಕಾಣಿಸಿಕೊಂಡದ್ದು ಶಂಖ ಚಕ್ರ ಗದಾ ಪದ್ಮಧಾರಿಯಾದ ಶ್ರೀಮನ್ನಾರಾಯಣನಂತೆ. ಮನೆಯ ಕ್ಯಾಲೆಂಡರಿನಲ್ಲಿದ್ದ ಮಹಾವಿಷ್ಣುವಿನ ಚಿತ್ರದ ನೆನಪಾಗಿ, ಚೆಟ್ಟಿಯಾರರಿಗೆ ಭಗವಂತನು ನಿಜವಾಗಿ ಪ್ರತ್ಯಕ್ಷನಾಗಿದ್ದಾನೆ ಎಂಬ ಅರಿವು ಮೂಡಿತು. ಪರಮಾತ್ಮನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಧನ್ಯನಾದೆ ಎಂದರು. ಇನ್ನು ಮುಂದೆಯೂ ಹೀಗೆಯೇ ನನ್ನ ಮೇಲೆ ಅನುಗ್ರಹ ತೋರಬೇಕು ಎಂದರು. ದೇವರು "ಹಾಗಾದರೆ ನೀನು ಮಾಡಬೇಕಾದುದು ಇಷ್ಟೆ. ಹಣದ ಮೇಲೆ ನಿನಗಿರುವ ಅತಿಯಾದ ವ್ಯಾಮೋಹವನ್ನು ತೊರೆದುಬಿಡು" ಎಂದನು.
ಅಷ್ಟು ಹೊತ್ತಿಗೆ ರಾತ್ರಿ ಊಟದ ಸಮಯ ಮೀರಿದ್ದರಿಂದ, ಚೆಟ್ಟಿಯಾರರ ಹೆಂಡತಿಯೂ ಅವರ ಮೊಮ್ಮಗನೂ ಕೊಠಡಿಯ ಬಾಗಿಲನ್ನು ದಬದಬ ತಟ್ಟಿದರು. ಉತ್ತರ ಬರದಿದ್ದರಿಂದ ಮನೆಯಾಳುಗಳು ಸೇರಿ ಇನ್ನೂ ಜೋರಾಗಿ ತಟ್ಟಿದರು, ಹೆಸರು ಹಿಡಿದು ಕೂಗಿದರು. ಈ ಗಲಾಟೆಯಲ್ಲಿ ಶ್ರೀಕೃಷ್ಣನು ಅಂತರ್ಧಾನನಾದನು. ಚೆಟ್ಟಿಯಾರರು ಬಾಗಿಲು ತೆರೆದು ಹೊರ ಬಂದರು. ಎಲ್ಲರೂ "ಏನಾಯಿತು? ಏನಾಯಿತು?" ಎಂದು ಆತಂಕದಿಂದ ಕೇಳಿದರು. ರಾಜುಲು ಅವರು "ಏನೂ ಇಲ್ಲ" ಎಂದು ಅವರನ್ನು ಸಮಾಧಾನ ಮಾಡಿದರು.
ಚೆಟ್ಟಿಯಾರರು ವಾಸವಾಗಿದ್ದ ಬೀದಿಯಲ್ಲಿ ಒಂದು ದೇವಸ್ಥಾನವಿತ್ತು. ಅಲ್ಲಿ ಆ ರಾತ್ರಿ ಹರಿಕಥೆ ನಡೆಯುತ್ತಲಿತ್ತು. ಊಟವಾದ ನಂತರ ರಾಜುಲು ಅವರು ಅಲ್ಲಿಗೆ ಹೋಗಿ ಶ್ರೋತೃಗಳ ಮಧ್ಯೆ ಕುಳಿತರು. "ಕೃಷ್ಣನು ಒಬ್ಬ ಚೋರ, ಅವನು ಎಲ್ಲಿಗೆ ಬೇಕಾದರೂ ಹೋಗಬಲ್ಲ. ಕದಹಾಕಿದ ಬಾಗಿಲು ಅವನಿಗೇನೂ ಅಡ್ದಿಯಾಗುವುದಿಲ್ಲ. ಯಾರೇ ಆದರೂ ಗೋವಿಂದಾ ಎಂದು ಕರೆದರೆ ತ್ವರೆಯಿಂದ ಅಲ್ಲಿಗೆ ಹೋಗಿ ಏನು ಬೇಕೆಂದು ಕೇಳುವನು. ಸಕಲ ಜೀವಿಗಳಲ್ಲೂ ಅವನಿಗಿರುವ ಪ್ರೇಮ ಅಂಥದು" ಎಂದು ಮುಂತಾಗಿ ಭಾಗವತರು ಉಪನ್ಯಾಸ ಮಾಡುತ್ತಿದ್ದರು. ಎಲ್ಲರಿಗೂ ಪ್ರವಚನದ ಈ ಭಾಗ ಇಷ್ಟವಾಗಿ ತಲೆದೂಗುತ್ತಿದ್ದರು. ಆದರೆ ಅದನ್ನು ನಿಜವಾಗಿ ಅರ್ಥಮಾಡಿಕೊಂಡವರು ಚೆಟ್ಟಿಯಾರರೊಬ್ಬರೇ ಎಂದು ಕಾಣುತ್ತದೆ. ಅವರು ಎದ್ದು ನೇರವಾಗಿ ವೇದಿಕೆಯ ಬಳಿಗೆ ಹೋದರು. ಭಾಗವತರಿಗೆ ಕೈ ಜೋಡಿಸಿ ನಮಸ್ಕರಿಸಿ "ಸ್ವಾಮೀ, ನಾನು ಕಣ್ಣನನ್ನು ಕಣ್ಣಾರೆ ಕಂಡಿದ್ದೇನೆ" ಎಂದರು. ಆಗ ಹಲವು ಸಭಾಸದರು ಈ ಲೋಭಿ ಚೆಟ್ಟಿಯಾರರು ಹಾಸ್ಯ ಮಾಡುತ್ತಿದ್ದಾರೆ ಎಂದು ಕೊಂಡರು. ಮತ್ತೆ ಕೆಲವರು ನಕ್ಕು ಅವರನ್ನು ಗೇಲಿ ಮಾಡಿದರು. ಇನ್ನೂ ಕೆಲವರು, "ರಾಜುಲು ಅವರೇ, ನೀವು ಸುಮ್ಮನೆ ಕುಳಿತುಕೊಳ್ಳಿ" ಎಂದರು. ಒಟ್ಟಿನಲ್ಲಿ ಸ್ವಲ್ಪ ಅಶಾಂತಿ ಉಂಟಾಯಿತು. ಭಾಗವತರು ಕಷ್ಟದಿಂದ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಚೆಟ್ಟಿಯಾರರು ಮನೆಗೆ ಹಿಂತಿರುಗಿದರು.
ಮಾರನೆಯ ದಿನ ಅವರು ತಮ್ಮ ಲಾಯರನ್ನು ಮನೆಗೆ ಕರೆಸಿ ಎರಡು ದಾನಪತ್ರಗಳನ್ನು ಸಿದ್ಧ ಮಾಡಿದರು. ಒಂದರಲ್ಲಿ ಕುರುಡ ಕುಂಟ ಮುಂತಾದ ಅಂಗವಿಹೀನರಿಗೆ ಒಂದು ಆಶ್ರಯವನ್ನು ಸ್ಥಾಪಿಸಲು ೨೦೦೦೦ ರೂಪಾಯಿಗಳನ್ನು ಮೀಸಲಾಗಿಟ್ಟರು. ಇನ್ನೊಂದರಲ್ಲಿ ಬಡ ಹೆಣ್ಣುಮಕ್ಕಳ ಪ್ರಸೂತಿ ಗೃಹಕ್ಕೆಂದು ೫೦೦೦೦ ರೂಪಾಯಿಗಳನ್ನು ತೆಗೆದಿಟ್ಟರು.
ರಾಜುಲು ಚೆಟ್ಟಿಯಾರರ ಈ ಅನಿರೀಕ್ಷಿತ ದಾನಶೀಲತೆ ಊರಲ್ಲಿ ಎಲ್ಲರಿಗೂ ತಿಳಿಯಿತು, "ಈ ಕೃಪಣನು ಒಮ್ಮೆಲೇ ಧರ್ಮಾತ್ಮನಾದದ್ದು ಹೇಗೆ?" ಎಂದು ಎಲ್ಲರೂ ಆಶ್ಚರ್ಯ ಪಟ್ಟರು. ಭಾಗವತರಾದರೋ ತಮ್ಮ ಶಿಷ್ಯರೊಂದಿಗೆ "ನೋಡಿದಿರೋ, ನನ್ನ ಪ್ರವಚನದ ಪ್ರಭಾವ!" ಎಂದು ಹೆಮ್ಮೆ ಪಟ್ಟರು. ಅವರ ಶಿಷ್ಯರು "ಸ್ವಾಮಿ, ಕೃಷ್ಣ ಜಯಂತಿಯ ದಿನದ ನಿಮ್ಮ ಪ್ರವಚನ ಎಂಥ ಕಲ್ಲೆದೆಯನ್ನೂ ಕರಗಿಸಿಬಿಡುತ್ತಿತ್ತು." ಎಂದು ಗುರುಗಳನ್ನು ಪ್ರಶಂಸಿದರು.
ಆದರೆ ಯಾರೂ ಇದನ್ನು ಕೃಷ್ಣನ ಮಾಯೆ ಎಂದು ತಿಳಿಯಲಿಲ್ಲ. ಚೆಟ್ಟಿಯಾರರೂ ಯಾರಿಗೂ ಹೇಳಲಿಲ್ಲ. ಹೇಳಿದ್ದರೂ ಅವರನ್ನು ನಂಬುವವರು ಯಾರು?
ಭಾರತದಲ್ಲಿರುವ ಎಲ್ಲ ನದಿಗಳಿಗಿಂತಲೂ ಗಂಗಾ ನದಿಯು ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ. ಎಲ್ಲ ನದಿಗಳನ್ನೂ ದೇವರೆಂದೇ ಕಾಣುವ ನಾವು, ನದಿಯ ಜಲವನ್ನು ತೀರ್ಥವೆಂದು ಪವಿತ್ರ ಭಾವನೆಯಲ್ಲಿ ನೋಡುತ್ತೇವೆ. ಹಿಂದೆ ಋಷಿ ಮುನಿಗಳು ಯಾವಾಗಲೂ ತಮ್ಮ ದಂಡದ ಜೊತೆಗೆ ಕಮಂಡಲುವಿನಲ್ಲಿ ಮಂತ್ರಿಸಿದ ನೀರನ್ನು ಇಟ್ಟುಕೊಂಡಿರುತ್ತಿದ್ದರಂತೆ. ಇದೇ ನೀರನ್ನು ಋಷಿಗಳು ವರ ಕೊಡುವುದಕ್ಕೂ, ಶಾಪ ಕೊಡುವುದಕ್ಕೂ ಉಪಯೋಗಿಸುತ್ತಿದ್ದರಂತೆ. ಈಗಲೂ ಸ್ನಾನ ಮಾಡುವಾಗ ಗಂಗೆ, ಯಮುನೆ ಮುಂತಾದ ನದಿಗಳ ತೀರ್ಥಗಳನ್ನು ಜ್ಞಾಪಿಸಿಕೊಳ್ಳುವವರು ಕೆಲವರಾದರೂ ಇದ್ದಾರೆ.
ಸಾಕ್ಷಾತ್ ಗಂಗೆಯ ನೀರನ್ನು "ದೇವ ಗಂಗೆ" ಎಂದೇ ದೇವರ ಮನೆಯಲ್ಲಿಟ್ಟು ಪೂಜಿಸುತ್ತೇವೆ, ಅಷ್ಟು ಪವಿತ್ರ ನಮಗೆ ಈ ತೀರ್ಥಗಳು. ತೀರ್ಥಗಳು ಎಂದರೆ, ದೇವಸ್ಥಾನಗಳಲ್ಲಿ ಕೊಡುವ ತೀರ್ಥಗಳು ನೆನಪಿಗೆ ಬರುತ್ತದೆ. ಎಲ್ಲಾ ದೇವಸ್ಥಾನಗಳಲ್ಲೂ ಪ್ರಸಾದವಿಲ್ಲದಿದ್ದರೂ ತೀರ್ಥವಂತೂ ದೊರೆಯುತ್ತದೆ. ಉತ್ತರ ಭಾರತದವರು ತೀರ್ಥವನ್ನು "ಚರಣಾಮೃತ" ಎಂದು ಕರೆಯುತ್ತಾರೆ. ಇದೇ ತೀರ್ಥದ ನಿಜವಾದ ಅರ್ಥವೂ ಹೌದು. ದೇವರ ಚರಣ ಸ್ಪರ್ಶ ಮಾಡಿದ ಅಮೃತ ಸ್ವರೂಪಿ ನೀರು ಎಂಬ ಅರ್ಥ ಬರುತ್ತದೆ. ಕೆಲವು ಪವಿತ್ರ ಕ್ಷೇತ್ರಗಳ ತೀರ್ಥಗಳಿಗೆ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯೂ ಇರುತ್ತದೆ. ಇದು ಮೂಢ ನಂಬಿಕೆ ಅಂತ ಅನಿಸುತ್ತದೆಯೇ?
ಇಂತಹ ನಂಬಿಕೆಗಳು ಹಿಂದೂಗಳಿಗೆ ಮಾತ್ರವಲ್ಲ ಇತರ ಧರ್ಮದವರಿಗೂ ಇರುತ್ತದೆ. ಕ್ರಿಶ್ಚಿಯನ್ನರು ಇಂತಹ ಪವಿತ್ರ ನೀರನ್ನು "ಹೋಲಿ ವಾಟರ್"
ಎಂದು ಕರೆಯುತ್ತಾರೆ, ಅಲ್ಲದೇ ಅವರುಗಳ ನೂತನ ಗೃಹಪ್ರವೇಶದ ಸಮಯದಲ್ಲಿ ಈ ನೀರನ್ನು ಇಡೀ ಮನೆಗೆ ಪ್ರೋಕ್ಷಿಸುತ್ತಾರೆ. ಮುಸ್ಲಿಂ ಮತ್ತಿತರ ಸಮುದಾಯಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ನೀರಿಗೆ ಈ ರೀತಿಯ ಪಾವಿತ್ರ್ಯತೆಯನ್ನು ಕೊಡುವುದು ಕಾಣಬಹುದು. ಏನಿದು ಶಾಸ್ತ್ರಗಳು? ನೀರು ಅಂದರೆ ನೀರೇ ಅಲ್ವ? ಜಲಜನಕ, ಆಮ್ಲಜನಕದ ಮಿಶ್ರಣ (H2O) ಎಂದು ಒಬ್ಬ ಸಾಮಾನ್ಯ ವಿದ್ಯಾರ್ಥಿಗೂ ಗೊತ್ತಿರುವ ವಿಷಯ. ಒಂದು ನೀರಿಗಿಂತ ಇನ್ನೊಂದು ನೀರು ಬೇರೆಯಾಗಿರಲು ಹೇಗೆ ಸಾಧ್ಯ? ಗಂಗೆಯ ನೀರು ಅಂದರೆ ಬೇರೆಯೇ ಗುಣವುಳ್ಳದ್ದು ಅಂದರೆ ಏನರ್ಥ? ಮಂತ್ರಿಸಿದ ನೀರು ಅಥವಾ ಚರಣಾಮೃತ ಅಂದರೆ ಹೇಗೆ ಅದು ಬೇರೆಯಾಗುತ್ತದೆ? ಇವೆಲ್ಲಾ ಅರ್ಥವಿಲ್ಲದ ಭಾವನೆಗಳೇ? ಇವು ವಿಚಾರವಂತರನ್ನು ಒಂದಲ್ಲ ಒಂದು ಸಾರಿ ಕಾಡುವ ವಿಷಯ ಅಂದರೆ ತಪ್ಪಾಗಲಾರದು.
ಇತ್ತೀಚೆಗೆ ನಮ್ಮ ಸ್ನೇಹಿತರೊಬ್ಬರು "Message from Water" ಅಂತ ಅಂತರ್ಜಾಲ ಕ್ಷೇತ್ರದಿಂದ ದೊರಕಿದ ಮಾಹಿತಿಯನ್ನು ತಂದುಕೊಟ್ಟರು. ಅದರಲ್ಲಿ ಜಪಾನ್ ದೇಶದ ವಿಜ್ಞಾನಿಯೊಬ್ಬರು ನೀರಿನ ಬಗ್ಗೆ ಸಂಶೋಧನೆ ಮಾಡುತ್ತಾರೆ. ಅವರ ಪ್ರಕಾರ "ಎಲ್ಲಾ ನೀರು ಒಂದೇ ಅಲ್ಲ, ನೀರಿನಿಂದ ನೀರಿಗೆ ವ್ಯತ್ಯಾಸ ಇದೆ. ನೀರಿನ ಭೌತಿಕತೆಯಲ್ಲಿ ವ್ಯತ್ಯಾಸ ಕಂಡುಬರದೇ ಇದ್ದರೂ ಸೂಕ್ಷ್ಮಾತಿ ಸೂಕ್ಷ್ಮವಾಗಿ ಗಮನಿಸಿದರೆ ವ್ಯತ್ಯಾಸ ಇರಲೇಬೇಕು" ಎಂದು ಬೇರೆ ಬೇರೆ ಕಡೆಗಳ ನೀರನ್ನು ಇಟ್ಟುಕೊಂಡು ಅದನ್ನು ಹೆಪ್ಪುಗಟ್ಟಿಸಿ ಅದನ್ನು ಸೂಕ್ಷ್ಮದರ್ಶಕ ಯಂತ್ರದ ಮೂಲಕ ಆರು ತಿಂಗಳುಗಳ ಕಾಲ ಪರೀಕ್ಷಿಸಿ ಒಂದು ದಿನ ವಿಸ್ಮಯಕಾರಿ ಫಲಿತಾಂಶಗಳು ಬಂದೇ ಬಿಟ್ಟಿತಂತೆ. -೨೦ ಡಿಗ್ರಿಗೆ ಘನೀಕರಿಸಿದ ಮಂಜುಗಡ್ಡೆಗಳು ಸುಮಾರು -೫ ಡಿಗ್ರಿ ಯಿಂದ ನೀರಾಗುವ ತನಕ ಒಂದು ರೀತಿಯ ಷಡ್ಭುಜಾಕೃತಿಯ ಸ್ಫಟಿಕದಂತಿರುವ ಹರಳುಗಳಾಗುತ್ತವಂತೆ. ಅದರಲ್ಲೂ ಅದು ಎಲ್ಲಾ ನೀರಿನಲ್ಲಿ ಆಗುವುದಿಲ್ಲವಂತೆ. ಕೆಲವು ದೇಶಗಳ ನೀರಿನಲ್ಲಿ, ನೀರು ಎಷ್ಟೇ ಶುದ್ಧವಾಗಿದ್ದರೂ ಯಾವ ರೀತಿಯ ಹರಳುಗಳೂ ಮೂಡುವುದಿಲ್ಲವಂತೆ. ಹೆಚ್ಚಾಗಿ ನೈಸರ್ಗಿಕವಾಗಿ ಸಿಗುವ ತೊರೆ, ನದಿ, ಜಲಪಾತಗಳ ನೀರಿನಲ್ಲಿ ಈ ಹರಳುಗಳು ಚೆನ್ನಾಗಿ ಮೂಡುವುದು ಮಾತ್ರವಲ್ಲದೇ ಆ ಹರಳುಗಳ ಮೂಲೆಗಳಲ್ಲಿ ಒಂದು ರೀತಿಯ ಹೂವಾಗಿ ಅರಳಿರುವುದನ್ನು ಚಿತ್ರೀಕರಿಸಿದ್ದಾರೆ. ಒಂದೊಂದು ನೀರು ಒಂದೊಂದು ರೀತಿಯ ಹರಳುಗಳನ್ನು ಸಿದ್ಧಪಡಿಸುವುದು ಮಾತ್ರವಲ್ಲ, ಅವುಗಳ ಮುಂದೆ ವಾದ್ಯ ಮೇಳಗಳನ್ನು ಹಾಕಿ ಅದನ್ನು ಹೆಪ್ಪುಗಟ್ಟಿಸಿದರೆ ಬೇರೆ ಬೇರೆ ಸಂಗೀತಕ್ಕೆ ಬೇರೆ ಬೇರೆ ರೀತಿಯಲ್ಲಿ ಅರಳುತ್ತವಂತೆ. ನಾವು ಒಳ್ಳೆಯ ಮನಸ್ಥಿತಿಯ ಭಾವನೆಗಳಿಂದ ಹರಳುಗಳನ್ನು ನೋಡಿದರೆ ಅವು ಬೇರೆಯಾಗಿಯೇ ತೋರುತ್ತದಂತೆ. ನಾವು ಕೋಪ, ತಾಪಗಳಿಂದ ನೋಡಿದರೆ ಯಾವ ಹರಳುಗಳೂ ಮೂಡುವುದಿಲ್ಲವಂತೆ. ಅಂದರೆ ನಮ್ಮ ಭಾವನೆಗಳಿಗೆ ನೀರು ಸ್ಪಂದಿಸುವುದು ಎಂದು ರುಜುವಾತು ಪಡಿಸಿದಂತಾಯಿತು.
ನೀರನ್ನು ಹೆಪ್ಪುಗಟ್ಟಿಸಿದಾಗ ಬರುವ ಹರಳುಗಳು ಕಾಣದ ಸ್ವರೂಪದಲ್ಲಿ ನೀರಿನಲ್ಲಿ ಯಾವಾಗಲೂ ಇರುತ್ತದೆ ಎಂದು ಹೇಳುತ್ತಾರೆ. ಹೀಗೆ ಯಾವುದೇ ವ್ಯಕ್ತಿ ಎಷ್ಟೇ ದೂರದಲ್ಲಿದ್ದರೂ ಅವರಲ್ಲಿ ದೈಹಿಕವಾಗಿ ಏನಾದರೂ ತೊಂದರೆ ಇದ್ದರೆ ಬರೀ ನೀರಿನಿಂದಲೇ ಸರಿ ಮಾಡಬಹುದು ಎನ್ನುತ್ತಾರೆ. ಮನುಷ್ಯನ ದೇಹದಲ್ಲಿರುವುದು ೭೦% ಬರೀ ನೀರು ಮತ್ತೆ ಇದರಲ್ಲಿ ಕಾಣದಂತಿರುವ, ಭಾವನೆಗಳಿಗೆ ಸ್ಪಂದಿಸುವ ಸ್ಫಟಿಕದಂತಿರುವ ಹರಳುಗಳು ಸಿದ್ಧವಾದರೆ, ಮನುಷ್ಯನ ವ್ಯಾಧಿಗಳೂ ದೂರವಾಗುತ್ತವೆ ಎಂದು ಸಾವಿರಾರು ಯಶಸ್ವೀ ಪ್ರಯೋಗಗಳನ್ನು ಮಾಡಿದ್ದಾರಂತೆ. ಅವರ ಸಂಶೋಧನಾ ಸಂಸ್ಥೆಯು ಬಹಳ ದೊಡ್ದ ಪ್ರಮಾಣದಲ್ಲಿ ಬೆಳೆದಿದೆ.
ಇದರಿಂದಾದರೂ ಸ್ಪೂರ್ತಿ ತೆಗೆದುಕೊಂಡು ನಮ್ಮ ದೇಶದ ವಿಜ್ಞಾನಿಗಳು ನೀರಿನ ಮೇಲೆ ವೇದ ಮಂತ್ರಗಳ ಪ್ರಭಾವ, ಗಂಗೆಯ ನೀರು, ತೀರ್ಥಗಳು ಇದನ್ನೆಲ್ಲಾ ಪರೀಕ್ಷಿಸಿ ಅದರಲ್ಲಾಗುವ ಪರಿಣಾಮಗಳನ್ನು ಪ್ರಯೋಗ ಮಾಡಿ ನಿರೂಪಿಸಿದರೆ ವಿದ್ಯಾವಂತರಿಗೂ, ಬುದ್ಧಿವಂತರಿಗೂ ನಮ್ಮ ಧರ್ಮ ಮತ್ತು ಆಚರಣೆಗಳ ಬಗ್ಗೆ ಗೌರವ ಮೂಡುವ ಕಾಲ ದೂರವಿಲ್ಲ!!
ಚಿಂತೆ ಮತ್ತು ಚಿಂತನೆಗಳ ನಡುವೆ ಸಾಕಷ್ಟು ಅಂತರಗಳಿವೆ. ಎರಡೂ ಸಹ ಯೋಚನೆಯ ಹಾದಿಯೇ ಆದರೂ ಅವೆರಡೂ ಮನಸ್ಸಿನ ಬೇರೆ ಬೇರೆ ಹಂತಗಳನ್ನವಲಂಬಿಸಿವೆ. ಈಗಿನ ಮಕ್ಕಳಿಗೆ ಸುಮಾರಾಗಿ ಚಿಂತನೆ ಎಂದರೇನು ಎಂಬುದಿರಲಿ ಆ ರೀತಿಯ ಒಂದು ಪದವಿದೆ ಅಂತಲೇ ತಿಳಿದಿಲ್ಲ.
ಚಿಂತೆಗಿಂತ ಚಿಂತನೆ ಗಂಭೀರವಾದದ್ದು. ಹಾಗಂತ ಚಿಂತೆ ಮಾಡುವುದು ತಪ್ಪೆಂದಾಗಲೀ ಪಾಪಕಾರ್ಯವೆಂದಾಗಲೀ ಅರ್ಥವಲ್ಲ. ಚಿಂತೆ ಕ್ಷಣಿಕವಾದದ್ದು ಹಾಗೂ ವ್ಯಕ್ತಿ, ವಸ್ತು ಅಥವಾ ವಿಷಯಗಳಿಗೆ ಸಂಬಂಧಪಟ್ಟಿದ್ದು. ಚಿಂತನೆ ಎಂಬುದು ಭವಿಷ್ಯಕ್ಕೆ ದಾರಿಮಾಡಿಕೊಡುವುದು. ಈ ಭವಿಷ್ಯ ಇಡೀ ಸಮುದಾಯಕ್ಕೆ ಅಥವಾ ಸಮಾಜಕ್ಕೆ ಸಂಬಂಧಪಟ್ಟಿದ್ದಾಗಿರುತ್ತದೆ. ಚಿಂತೆಯಿಲ್ಲದ ಮನುಷ್ಯನಿಲ್ಲ. ಆದರೆ ಚಿಂತೆಯೊಂದು ಕಳೆಯುತ್ತಿದ್ದಂತೆ ಮತ್ತೆ ಹಲವಾರು ಚಿಂತೆಗಳು ನಮ್ಮ ಮನವನ್ನಾವರಿಸಲು ಹಾತೊರೆಯುತ್ತಿರುತ್ತವೆ.
ಉದಾಹರಣೆಗೆ ಬೆಳೆದು ನಿಂತ ಒಬ್ಬ ವ್ಯಕ್ತಿಗೆ ಮದುವೆ ಆಗಲಿಲ್ಲವಲ್ಲ ಎಂಬ ಚಿಂತೆ. ಆದಮೇಲೆ ಮಕ್ಕಳಾಗಲಿಲ್ಲವಲ್ಲ ಎಂಬ ಚಿಂತೆ. ಮಕ್ಕಳಾದ ಮೇಲೆ ಅವುಗಳ ಆಟಪಾಠ, ಆರೋಗ್ಯ, ಸ್ನೇಹವರ್ಗದ ಚಿಂತೆ. ಒಂದೇ ಎರಡೇ? ಅದಕ್ಕೆ ಕೊನೆಯೇ ಇಲ್ಲ. ಆದರೆ ಇವೆಲ್ಲದರ ನಡುವೆ ಬರಬಹುದಾದ ಒಂದು ಯೋಚನೆ - ನಾನು ಇಲ್ಲಿಗೆ ಏಕೆ ಬಂದೆ? ಏನು ಮಾಡಬೇಕಿತ್ತು? ಏನು ಮಾಡಿದರೆ ಬೇರೆಯವರಿಗೆ ಒಳಿತಾಗುತ್ತದೆ ಇತ್ಯಾದಿ ಯೋಚನೆಗಳ ಸರಮಾಲೆ ಒಂದು ಬಗೆಯ ಚಿಂತನೆ. ಅದು ಚಿಂತೆಯಾಗುವುದಿಲ್ಲ. ಹಾಗೆ ನೋಡಿದರೆ ಪ್ರತಿಯೊಂದು ಜೀವಿಯೂ ಉಂಡು, ತಿರುಗಿ, ಮಲಗಿ, ಪ್ರೇಮಕಾಮಗಳಿಗೆ ಬಲಿಯಾಗುತ್ತದೆ. ಇದು ಸರ್ವೇ ಸಾಮಾನ್ಯ, ಸಾಧಾರಣ. ಅದನ್ನು ಮೀರಿ ಅಸಾಮಾನ್ಯ, ಅಸಾಧಾರಣ ಯೋಚನೆ ಮಾಡುವುದೇ ಚಿಂತನೆ. ಮೇಲಿನ ಪ್ರಶ್ನೆ ಒಂದು ಸಣ್ಣ ಉದಾಹರಣೆ ಅಷ್ಟೆ, ಪ್ರಶ್ನೆ ಅದೇ ಆಗಬೇಕಿಂದಿಲ್ಲ.
ಚಿಂತೆ ಮನುಷ್ಯನನ್ನು ಕ್ಷೀಣಗೊಳಿಸುತ್ತದೆ. ಆ ದೌರ್ಬಲ್ಯ ಅನೇಕ ಆರೊಗ್ಯಕ್ಕೆ ಸಂಬಂಧಪಟ್ಟಂತಹ ಖಾಯಿಲೆಗಳನ್ನು ತರಬಹುದು. ಇದಕ್ಕೆ ಹಿಂದಿನ ಹಿರಿಯರ ಪ್ರೌಢಬುದ್ಧಿ ಹಾಗೂ ಇಂದಿನ ವೈಜ್ನಾನಿಕ ಬುದ್ಧಿಯೇ ಸಾಕ್ಷಿ. ಇದರ ಜೊತೆಗೆ ಆ ವ್ಯಕ್ತಿಯ ಕೌಟುಂಬಿಕವರ್ಗದವರೂ ಆ ಚಿಂತೆಯ ಫಲವನ್ನನುಭವಿಸಬೇಕಾಗಬಹುದು. ಚಿಂತೆಯಲ್ಲಿರುವ ಬಿಂದು ತೆಗೆದರೆ ಚಿತೆಯಾಗುತ್ತದೆ. ಚಿತೆ ಸತ್ತ ಮನುಷ್ಯನನ್ನು ಸುಟ್ಟರೆ ಚಿಂತೆ ಜೀವಂತ ಮನುಷ್ಯನನ್ನು ಸುಡುತ್ತದೆ. ಚಿಂತನೆ ಮನುಷ್ಯನ ಉತ್ಸಾಹವನ್ನೂ ಆರೋಗ್ಯವನ್ನೂ ವರ್ಧಿಸುವುದು. ಚಿಂತನೆಯಿಂದ ವಿಚಾರವಿನಿಮಯಗಳಿಂದ ಹಲವಾರು ವ್ಯಕ್ತಿಗಳ ಬುದ್ಧಿ, ಮನಸ್ಸು ಒಟ್ಟಿಗೆ, ಏಕಕಾಲದಲ್ಲಿ ವಿಕಾಸವಾಗುವುದು ಮತ್ತು ಸಮಾಜದ ಹಾಗೂ ಮುಂದಿನ ಪೀಳಿಗೆಯ ಹಿತದೃಷ್ಟಿಗೆ ಪ್ರಚೋದಕವಾಗುವುದು. ಒಂದು ಸಮಾಜದ ಅಥವಾ ಸಮುದಾಯದ ಬಲ, ಉತ್ಸಾಹ, ಅರೋಗ್ಯಗಳು ಆ ಸಮಾಜದ ಅಥವಾ ಸಮುದಾಯದಲ್ಲಿರುವ ಹಿತಚಿಂತಕರ ಮನೋಬುದ್ಧಿಗಳನ್ನವಲಂಬಿಸಿರುತ್ತವೆ.
ಚಿಂತನೆ ಮಾಡುವುದು ಯಾವ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ಚಿಂತನೆ ಮನುಷ್ಯನ ದೈಹಿಕ ವಯಸನ್ನೂ ಅವಲಂಬಿಸಿಲ್ಲ. ಅಷ್ಟೇ ಅಲ್ಲ, ಅದು ಲಿಂಗಾತೀತ, ವರ್ಣಾತೀತ ಮತ್ತು ಜಾತ್ಯಾತೀತ. ಅದು ಕೇವಲ ಬೌದ್ಧಿಕ ವಯಸ್ಸು ಮತ್ತು ಉತ್ತೇಜಕ ವಾತಾವರಣವನ್ನು ಮಾತ್ರ ಅವಲಂಬಿಸುರುತ್ತದೆ.
ಚಿಂತೆಯಲ್ಲಿ ಹೇಗೆ ಕ್ಷುಲ್ಲಕ ಮತ್ತು ಸಾಧಾರಣ ಎಂಬ ವಿಂಗಡನೆಯುಂಟೋ ಹಾಗೆಯೇ ಚಿಂತನೆಯಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ಎಂಬ ವಿಂಗಡನೆಯುಂಟು. ಚಿಂತೆ ಯಾವುದಾದರೂ ಅದು ಹಾನಿಕರ. ಆದರೆ ಚಿಂತನೆ ಹಾಗಲ್ಲ. ಲೌಕಿಕ ಚಿಂತನೆ ಒಂದು ರೀತಿಯ ತೃಪ್ತಿಯ ಭಾವನೆ ತರಿಸುವುದು ಹಗೂ ಒಂದಲ್ಲಾ ಒಂದು ದಿನ ಪಾರಮಾರ್ಥಿಕ ಚಿಂತನೆಯತ್ತ ಮನಸೆಳೆಸುವುದು. ಅದರಲ್ಲಿ ಸಂಶಯವಿಲ್ಲ.
ಚಿಂತೆ ಕ್ಷಣಮಾತ್ರಲ್ಲಿ ಹುಟ್ಟಿ ಸಣ್ಣ ವರ್ತುಲದಲ್ಲಿ ಸುತ್ತುತ್ತಿರುತ್ತದೆ. ಆದರೆ ಚಿಂತನೆ ಕ್ಷಣಮಾತ್ರದಲ್ಲಿ ಮೂಡುತ್ತದೆ ಅಷ್ಟೆ. ಅದರ ಬೆಳವಣಿಗೆಗೆ ಸಾಕಷ್ಟು ಸಮಯ ಬೇಕು. ಸತತವಾಗಿ ಆ ಯೋಚನೆಯ ಬಗ್ಗೆ ಮನಹರಿಯುವುದರಿಂದ ಅದು ಸಾಕಷ್ಟು ಬಲಯುತವಾಗಿ ವಿಕಾಸಗೊಳ್ಳುತ್ತಾ ಹೋಗುತ್ತದೆ. ಇಡೀ ಇತಿಹಾಸದಲ್ಲಿ ಚಿಂತೆಯಿಂದ ಉದ್ಢಾರವಾಗಿರುವವರು ಯಾರೂ ಕಂಡುಬರುವುದಿಲ್ಲ. ಆದರೆ ಚಿಂತನೆಯಿಂದ ಅನೇಕ ಸಾಧನೆಗಳಾಗಿರುವುದು ಅನೇಕ ಬಾರಿ ಕಂಡುಬರುತ್ತದೆ. ಚಿಂತೆ ಜೀವನದ ಜಂಜಾಟಕ್ಕೆ ಕಾರಣವಾದರೆ ಚಿಂತನೆ ಜೀವನದ ಸಾರ್ಥಕಕ್ಕೆ ಎಡೆಯಾಗುತ್ತದೆ. ಚಿಂತನಕಾರರು ದಾರ್ಶನಿಕರಾಗಿರುತ್ತಾರಾದ್ದರಿಂದ ಚಿಂತೆ ಮಾಡುವವರಿಗೆ ವಿಚಿತ್ರವಾಗಿ ಕಂಡುಬಂದರೆ ಆಶ್ಚರ್ಯವೇನಿಲ್ಲ. ಕೇವಲ ಚಿಂತೆ ಮಾಡುವವರಿಗೆ ವಸ್ತುವಿಷಯ ಇಂಥದ್ದೇ ಆಗಬೇಕೆಂಬುದಿಲ್ಲ ಅಥವಾ ಬೇಕೇಬೇಕು ಎಂಬುದೂ ಇಲ್ಲ. ಆದರೆ ಚಿಂತನಕಾರರಿಗೆ ಹಾಗಲ್ಲ. ಅವರು ತಮ್ಮ ವಿಶೇಷ ಮನೋದಾರ್ಢ್ಯಬಲದಿಂದ ಕೇವಲ ಒಂದೇ ವಿಷಯ ಕುರಿತು ಯೋಚನೆ ಮಾಡುತ್ತಾರೆ. ಸುಭಾಷಿತದ ಒಂದು ವಾಕ್ಯ ಹೇಳುವಂತೆ "...ಕರ್ಮಣ್ಯೇಕಂ ಮನಸ್ಯೇಕಂ ವಚಸ್ಯೇಕಂ ಮಹಾತ್ಮನಃ". ಅಂದರೆ ಅವರು ಕಾಯಾ ವಾಚಾ ಮನಸಾ ಒಂದೇ ವಿಷಯ ಕುರಿತು ಯೋಚಿಸುತ್ತಾರೆ.
ಜ್ಞಾನ ಮಾರ್ಗ
- - ಶ್ರೀ ಅಶೋಕ್ ಕುಮಾರ್
ಗೀತೆಯ ೭ ನೇ ಅಧ್ಯಾಯದಲ್ಲಿ ಭಗವಂತ,ಅವನನ್ನು ಭಜಿಸುವ ವ್ಯಕ್ತಿಗಳನ್ನು ೪ ವಿಧವಾಗಿ ವಿಂಗಡಿಸುತ್ತಾನೆ. ಯಾರು ಯಾರೆಂದರೆ, ೧.ಆರ್ತ(ಸಂಕಟಕ್ಕೆ ಸಿಕ್ಕಿ ದೀನನಾದವನು),೨.ಜಿಜ್ಞಾಸು(ಭಗವತ್ ತತ್ವವನ್ನು ತಿಳಿದುಕೊಳ್ಳಲಿಚ್ಛಿಸುವವನು),೩.ಅರ್ಥಾರ್ಥಿ(ಧನವನ್ನು ಬಯಸುವವನು), ೪.ಜ್ಞಾನಿ(ಭಗವಂತನನ್ನು ಬಲ್ಲವನು). ಇವರೆಲ್ಲರೂ ಸುಕೃತಿಗಳೇ ಅನ್ನೋ ಭಗವಂತ,ಮುಂದಿನ ಶ್ಲೋಕದಲ್ಲೇ ನಾನು ಜ್ಞಾನಿಗೆ ಅತ್ಯಂತ ಪ್ರಿಯ ಮತ್ತು ಅವನು ನನಗೆ ಪ್ರಿಯ ಅಂತ ಹೇಳುತ್ತಾನೆ. ಮಾತ್ರವಲ್ಲ, ಅದರ ಮುಂದಿನ ಶ್ಲೋಕದಲ್ಲಿ ಜ್ಞಾನಿಯು ನನ್ನ ಆತ್ಮವೇ ಎನ್ನುತ್ತಾನೆ. ಇಷ್ಟು ಮಾತ್ರವೇ ಅಲ್ಲದೇ ಜ್ಞಾನ ಮತ್ತು ಜ್ಞಾನಿ ಬಗ್ಗೆ ಗೀತೆಯಲ್ಲಿ ಅನೇಕ ಕಡೆ ಉಲ್ಲೇಖಿಸಿ, ಜ್ಞಾನದ ಹಿರಿಮೆಯನ್ನು ಹೊಗಳುತ್ತಾನೆ. ಉದಾಹರಣೆಗೆ, ಜ್ಞಾನಯೋಗ ಅಧ್ಯಾಯದಲ್ಲಿ "ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ". ಅಂದರೆ, ಈ ಲೋಕದಲ್ಲಿ,ಜ್ಞಾನಕ್ಕೆ ಸಮಾನವಾದ ಪವಿತ್ರ ವಸ್ತು ಯಾವುದೂ ಇಲ್ಲ ಅಂತ ಹೇಳುತ್ತಾ ಶ್ಲೋಕದ ಉತ್ತರಾರ್ಧದಲ್ಲಿ ಯೋಗದಿಂದ ಸಂಸಿದ್ಧಿ ಹೊಂದಿದವನು ಕಾಲಕ್ರಮದಲ್ಲಿ ಜ್ಞಾನವನ್ನು ತನ್ನಲ್ಲಿ ತಾನೇ ಹೊಂದುತ್ತಾನೆ. ಈ ಶ್ಲೋಕದ ಹಿಂದಿನ ಶ್ಲೋಕದಲ್ಲಿ, "ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ" ಅಂದರೆ, ಜ್ಞಾನವೆಂಬ ಅಗ್ನಿಯು ಕರ್ಮಗಳನ್ನೆಲ್ಲಾ ಭಸ್ಮ ಮಾಡಿ ಬಿಡುತ್ತದೆ ಎನ್ನುತ್ತಾನೆ. ಹೀಗೆ ಜ್ಞಾನದ ಬಗ್ಗೆ ಹೇಳುತ್ತಾರಲ್ಲ,ಜ್ಞಾನ ಮತ್ತು ಅಜ್ಞಾನ ಯಾವುದು ಅಂತ ಕೇಳಿದರೆ, ೧೩ನೇ ಅಧ್ಯಾಯದ ೨ನೇ ಶ್ಲೋಕದಲ್ಲೇ "ಕ್ಷೇತ್ರಕ್ಷೇತ್ರಜ್ಞಯೋರ್ಜ್ಞಾನಂ ಯತ್ತಜ್ಜ್ಞಾನಮ್ ಮತಂ ಮಮ" ಅಂದರೆ, ಕ್ಷೇತ್ರ ಕ್ಷೇತ್ರಜ್ಞರ ಜ್ಞಾನವೇ ನನ್ನ ಮತದಲ್ಲಿ ಜ್ಞಾನ ಎಂದು ಹೇಳಿ ಕ್ಷೇತ್ರ ಎಂದರೇನು, ಮತ್ತು ಕ್ಷೇತ್ರಜ್ಝ ಅಥವಾ ಆತ್ಮ ಎಂದರೇನು ಎಂದು ವಿಸ್ತಾರವಾಗಿ ವಿವರಿಸಿದ್ದಾನೆ. ಇನ್ನೊಂದು ಅರ್ಥದಲ್ಲಿ ಆತ್ಮ ಜ್ಞಾನದ ಹೊರತು ಉಳಿದ ಎಲ್ಲಾ ರೀತಿಯ ಜ್ಞಾನವೂ ಅಜ್ಞಾನವೇ ಎಂದಾಯ್ತು.
ಯಾಕೆ ಜ್ಞಾನಕ್ಕೆ ಇಷ್ಟೊಂದು ಮಹತ್ವ ಎಂದು ನೋಡಿದರೆ ,ಜನ್ಮ ಜನ್ಮಾಂತರಗಳಿಂದ ಅನೇಕ ಪಾಪ, ಪುಣ್ಯ ಕರ್ಮಗಳನ್ನು ಮಾಡುತ್ತಾ ಬರುತ್ತಿರುವ ನಾವು ಅದರ ಫಲವನ್ನು ಅನುಭವಿಸಲು ಮತ್ತೆ ಮತ್ತೆ ಹುಟ್ಟಿ ಸಾಯುತ್ತೇವೆ. ತಪ್ಪುಗಳನ್ನು ತಿದ್ದಿಕೊಳ್ಳಲು ಸಿಕ್ಕಿದ ಅವಕಾಶಗಳಲ್ಲಿ ಮತ್ತಿನ್ನೇನನ್ನೋ ಮಾಡಿ ಸಿಕ್ಕಿ ಹಾಕಿಕೊಳ್ಳುವ ಪಾಡು ನಮ್ಮದು. ಈ ಹಾದಿಯಲ್ಲಿ ಸಾಗುತ್ತಾ ಸಂಚಿತ ಕರ್ಮಗಳನ್ನು ನಾಶ ಮಾಡುವುದೆಂದರೆ ಮರೀಚಿಕೆಯನ್ನು ಬೆನ್ನತ್ತಿ ಹೋದ ಹಾಗೆ. ಇದಕ್ಕೊಂದು ಕೊನೆಯೇ ಇಲ್ಲವೇ ಎಂದರೆ ಇದೆ,ಅದು ನಮ್ಮೆಲ್ಲರಿಗೂ ಕೈಗೆಟಕುವ ಹಾಗೆ. ಶತಶತಮಾನಗಳಿಂದ ಕಗ್ಗತ್ತಲು ತುಂಬಿದ ಗವಿಯೊಳಗೆ, ಕತ್ತಲು ಹೋಗಿ ಬೆಳಕು ಬರುವ ಸೂಚನೆಗಳೇ ಇಲ್ಲವೇ ಎಂದರೆ,ಒಂದು ಬೆಂಕಿಕಡ್ಡಿ ಗೀರಿದರೆ ಸಾಕು, ಎಷ್ಟೇ ಶತಮಾನಗಳ ಕತ್ತಲೆಯಾಗಲೀ ಕ್ಷಣದಲ್ಲಿ ಬೆಳಕು ಬಂದು ಸತ್ಯ ದರ್ಶನವಾಗುತ್ತದೆ ಅಲ್ಲವೇ ಹಾಗೆಯೇ ಜ್ಞಾನಾಗ್ನಿ ಅಂದರೆ. ನಾವು ಎಷ್ಟೇ ಪಾಪಿಗಳಾಗಿದ್ದರೂ ಸಹಾ ಹಾದಿಹೋಕರನ್ನು ದರೋಡೆ ಮಾಡಿ ಕೊಲೆ ಮಾಡುತ್ತಿದ್ದ, ಮುಂದೆ ವಾಲ್ಮೀಕಿಯೇ ಆದ ರತ್ನಾಕರನಷ್ಟು ಪಾಪಿ ಅಂತೂ ಅಲ್ಲವೇ ಅಲ್ಲ ಅಲ್ಲವೇ? ಅದಕ್ಕೆ ಹೇಳುತ್ತಾರೆ,ಜ್ಞಾನಮಾರ್ಗ ಅಂದರೆ ವಿಹಂಗಮ ಮಾರ್ಗ ಅಥವಾ ಪಕ್ಷಿಗಳಂತೆ ನೇರವಾಗಿ ಹೋಗುವ ಮಾರ್ಗವಾದರೆ ಉಳಿದೆಲ್ಲಾ ಮಾರ್ಗಗಳು ಅಂದರೆ, ಮಾಡಿದ ಪಾಪಗಳನ್ನು ಪರಿಹಾರ ಮಾಡಿಕೊಳ್ಳುವ ಮಾರ್ಗಗಳಿಗೆ ಹೆಸರು ಪಿಪೀಲಿಕಾ ಮಾರ್ಗ. ಅಂದರೆ ಇರುವೆಯ ಮಾರ್ಗ ಎಂದು. ಊಹಿಸಿಕೊಳ್ಳಿ!! ನೂರು ಕಿಲೋಮೀಟರ್ ಹಾದಿಯನ್ನು ಸವೆಸಬೇಕಾದರೆ ಇರುವೆಗೆ ಬೆಟ್ಟಗಳನ್ನು ಹತ್ತಿ,ಕಣಿವೆಗಳನ್ನು ಇಳಿದು ಹೋಗುವಾಗ ಹಾದಿ ತಪ್ಪಿ ಸೇರಬೇಕಾದ ಗುರಿಯನ್ನು ತಲುಪದೇ ಇನ್ನೆಲ್ಲಿಗೋ ಹೋಗಿ ಸೇರುವ ಅವಕಾಶಗಳೇ ಹೆಚ್ಚು ಅಲ್ಲವೇ? ವಿಹಂಗಮದಂತೆ ಆತ್ಮ ಜ್ಞಾನದ ಮಾರ್ಗದಲ್ಲಿ ಸಾಗುವ ಆಸಕ್ತಿ, ಶಕ್ತಿ,ಅವಕಾಶಗಳು ಯಾರಿಗೆ ಒದಗಿ ಬರುತ್ತವೆಯೋ ಅವರೇ ಪುಣ್ಯವಂತರು.
"ವೇದಾಂತ ಲೈಫ್ ಇನ್ಸ್ಟಿಟ್ಯೂಟ್" ಎಂಬ ಸಂಸ್ಥೆಯ ಸಂಸ್ಥಾಪಕರಾದ ಪಾರ್ಥಸಾರಥಿಯವರ ಪುಸ್ತಕ ,"ವೇದಾಂತ ಟ್ರೀಟೈಸ್" ನಿಂದ ಕೆಲವು ಸಾಲುಗಳನ್ನು ಕನ್ನಡಕ್ಕೆ ಅನುವಾದಿಸಿ ಹೇಳಿ ಮುಗಿಸುತ್ತೇನೆ
"ಜಾಗ್ರತ್ ಸ್ವಪ್ನ ಸುಷುಪ್ತಿಗಳಲ್ಲದೇ ನಾಲ್ಕನೆಯ ಸ್ಥಿತಿಯಾದ ತುರೀಯವು ಪ್ರತಿಯೊಬ್ಬ ಮನುಷ್ಯನಿಗೂ ಪ್ರಾಪ್ತಿಯ ವ್ಯಾಪ್ತಿಯಲ್ಲಿಯೇ ಇದೆ ಎನ್ನುತ್ತದೆ ವೇದಾಂತ. ನಾವು ಎಲ್ಲಿದ್ದೇವೆಯೋ ಹೇಗಿದ್ದೇವೆಯೋ ಹಾಗೇಯೇ ಅದನ್ನು ಪಡೆಯಬಹುದು. ಅದೇ ಪರಮ ಪ್ರಾಪ್ತಿ ಅಥವಾ ಪಡೆಯಬೇಕಾದ ಪರಮಪದ. ಇಲ್ಲವಾದರೆ ಅತಿದೊಡ್ದ ನಷ್ಟವಾಗತ್ತದೆ ಎನ್ನುತ್ತದೆ ವೇದಾಂತ. ಆದರೆ ಯಾರಿಗೂ ಇದರ ಅರಿವೇ ಆಗುತ್ತಿಲ್ಲವಲ್ಲ ,ಎಲ್ಲರೂ ಏನೇನೋ ಪ್ರಾಪ್ತಿಗಾಗಿ ಹೋರಾಡುತ್ತಿರುತ್ತಾರಲ್ಲ ಎಂದು ಮರುಕ ಪಡುತ್ತದೆ ವೇದಾಂತ. ನಿಮ್ಮ ವ್ಯಕ್ತಿತ್ವವನ್ನು ನಿಮ್ಮೊಳಗಿನ ಆತ್ಮದ ಎತ್ತರಕ್ಕೇರಿಸಿಕೊಳ್ಳಿರಿ ,ಆಗ ಇಡೀ ವಿಶ್ವವನ್ನೇ ಉದ್ಧರಿಸಬಹುದು. ನಿಮ್ಮ ವ್ಯಕ್ತಿತ್ವ ಚಕ್ರದ ಅಕ್ಷವನ್ನು ತಲುಪಿರಿ, ಮೂರು ಲೋಕಗಳು ನಿಮ್ಮ ಸುತ್ತಲೂ ತಿರುಗುತ್ತಿರುವುದು ಭಾಸವಾಗುತ್ತದೆ. ಕ್ರಿಸ್ತ ಮಾಡಿದ್ದು ಹೀಗೆ, ಮಹಮ್ಮದ್, ಬುದ್ಧ, ರಾಮತೀರ್ಥರು ಮತ್ತು ಪ್ರಸಿದ್ಧಿಗೆ ಬರದಿರುವ ಅಸಂಖ್ಯಾತ ಜ್ಞಾನಿಗಳು ಮಾಡಿದ್ದೂ ಹೀಗೆ. ಅವರುಗಳ ಯಶಸ್ಸಿನ ಗುಟ್ಟೆಂದರೆ,ಅವರೊಳಗಿನ ಸತ್ಯವನ್ನು ಅವರು ಕಂಡುಕೊಂಡರು. ಹೊರಗಿನ ಯಾರನ್ನೋ ಅಥವಾ ಯಾವ ಶಕ್ತಿಯನ್ನೋ ಅವರು ಸಹಾಯ ಕೇಳಲಿಲ್ಲ. ಅವರುಗಳು ಯಾವ ಧರ್ಮಕ್ಕೋ ಅಥವಾ ಸಂಸ್ಥೆಗೋ ಸೇರಿದವರಾಗಿರಲಿಲ್ಲ. ಅವರುಗಳು ತಮ್ಮಿಂದಲೇ ತಮ್ಮನ್ನು ಉದ್ಧರಿಸಿಕೊಂಡರು. ಕ್ರಿಸ್ತ,ಯಾವ ಕ್ರೈಸ್ತ ಸಂಸ್ಥೆಗೂ ಸೇರಿದವನಲ್ಲ, ಅಂತೆಯೇ ಬುದ್ಧ, ಭೌದ್ಧ ಧರ್ಮದವನಾಗಿರಲಿಲ್ಲ. ಮಹಮ್ಮದ್,ಮಹಮ್ಮದೀಯನಲ್ಲ. ಅಂತೆಯೇ ಸ್ವಾಮಿ ರಾಮತೀರ್ಥರು ಯಾವ ಸಂಸ್ಥೆಯನ್ನೂ ನೆಚ್ಚಿರಲಿಲ್ಲ. ಆದರೂ ಅವರ ಸುತ್ತಲೂ ಸಂಸ್ಥೆಗಳು ಹುಟ್ಟಿದವು, ಕೋಟಿಗಟ್ಟಲೆ ಜನ ಗುಂಪು ಕೂಡಿದರು. ಈ ಸಂಸ್ಥೆಗಳಿಗೆ ಸೇರಿದ ಜನರು ಸಂಸ್ಥೆಯ ಹೆಸರಿನಲ್ಲಿ ಹಣವನ್ನು ಸಂಪಾದನ ಮಾಡಿ ಕಟ್ಟಡಗಳನ್ನು ಕಟ್ಟಿ ಸಂಸ್ಥೆಗಳನ್ನು ಬೆಳೆಸುತ್ತಾರೆ. ಈ ವಿಜಯವು ಅಧ್ಯಾತ್ಮಿಕ ಬೆಳವಣಿಗೆಯಲ್ಲ. ಸ್ವಲ್ಪ ಯೋಚಿಸಿ, ಯಾರು ಗುಂಪು ಕೂಡುತ್ತಾರೆ,ಯಾರು ಸಂಸ್ಥೆಗಳನ್ನು ಕಟ್ಟುತ್ತಾರೆ ಎಂದು. ನಿಜವಾದ ನಾಯಕರು ಅಥವಾ ಅಧ್ಯಾತ್ಮಿಕ ವ್ಯಕ್ತಿಗಳಲ್ಲ. ಅಧ್ಯಾತ್ಮಿಕ ದೈತ್ಯರು ಗುಂಪಿನಲ್ಲಿ ಬದುಕುವುದಿಲ್ಲ,ಒಬ್ಬಂಟಿಯಾಗಿರುತ್ತಾರೆ. ಪುಕ್ಕಲರು, ಅಶಕ್ತರು ಮಾತ್ರ ತಮ್ಮ ಸುತ್ತಲೂ ಗುಂಪು ಸೇರಿಸಿಕೊಳ್ಳುತ್ತಾರೆ. ಇದನ್ನು ಪ್ರಾಣಿ ಪ್ರಪಂಚದಲ್ಲಿ ಚೆನ್ನಾಗಿ ಗಮನಿಸಬಹುದು. ಕುರಿಗಳು ಗುಂಪುಗಳಲ್ಲಿ ಬದುಕುತ್ತವೆ, ಜಿಂಕೆಗಳು ತಮ್ಮ ಗುಂಪಿನಲ್ಲಿರುತ್ತವೆ, ಆನೆಗಳೂ ಅವುಗಳ ಗುಂಪಿನಲ್ಲಿರುತ್ತವೆ. ಸಿಂಹವು ಗುಂಪಿನಲ್ಲಿ ಓಡಾಡಿದ್ದನ್ನು ಕೇಳಿರುವುದಿಲ್ಲ, ಅದೇ ರೀತಿ ಪಕ್ಷಿಗಳ ರಾಜ ಗರುಡ ವಿಸ್ತಾರವಾದ ಆಗಸದಲ್ಲಿ ಒಬ್ಬಂಟಿಯಾಗಿ ತಾನೇ ತಾನಾಗಿ ತೇಲಾಡುತ್ತಿರುತ್ತದೆ. ಆದರೂ ಒಂದು ಸಿಂಹ ಅಥವಾ ಗರುಡ ಇತರ ಪ್ರಾಣಿ ಅಥವಾ ಪಕ್ಷಿಗಳ ಗುಂಪನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು. ಇದೇ ಆತ್ಮಬಲ ಅಥವಾ ನಿಜವಾದ ಶಕ್ತಿ. ಈ ಶಕ್ತಿಯನ್ನೇ ನಾವು ಪಡೆದುಕೊಳ್ಳಬೇಕಾಗಿರುವುದು. ಜ್ಞಾನಮಾರ್ಗದಲ್ಲಿ ಸಾಗಿ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಿ,ಅದರಲ್ಲಿ ಬದುಕಿ, ನೀವು ಚಕ್ರವರ್ತಿಗಳಾಗುತ್ತೀರಿ! ದೇವರಾಗುತ್ತೀರಿ! ಇದನ್ನೇ ವೇದಾಂತ ಸಾರುತ್ತಿರುವುದು".
ಕರುಣೆ
- - ಶ್ರೀ ಅಶೋಕ್ ಕುಮಾರ್
ಹೀಗೊಂದು ಕಥೆ, ಸಿರಿವಂತನಾದ ಒಬ್ಬ ವ್ಯಕ್ತಿಗೆ ಅನೇಕ ಜನ ಮಕ್ಕಳು. ಒಬ್ಬೊಬ್ಬರು ಒಂದೊಂದು ರೀತಿಯ ಗುಣ ಹೊಂದಿದ್ದರು. ಒಬ್ಬ ಹಣ ಮಾಡುವುದರಲ್ಲಿ ನಿಸ್ಸೀಮನಾದರೆ, ಇನ್ನೊಬ್ಬ ತಂದೆಯನ್ನು ಬಹಳ ಪ್ರೀತಿಸುತ್ತಾ, ಹೊಗಳುತ್ತಾ ಇರುತ್ತಾನೆ. ಮತ್ತೊಬ್ಬ ಒಳ್ಳೆಯ ಕಲಾವಿದನಾದರೆ, ಇನ್ನೊಬ್ಬ ಒಳ್ಳೆಯ ಬರಹಗಾರ. ಮಗದೊಬ್ಬ ಹೆಳವನಾದರೆ, ಇನ್ನೊಬ್ಬ ಕುರುಡ. ಬುದ್ಧಿಮಾಂದ್ಯದವನೊಬ್ಬ, ಜಿಪುಣನೊಬ್ಬ ಹೀಗೆ ಹಲವಾರು ಗುಣಗಳುಳ್ಳ ಮಕ್ಕಳು. ಅವರಲ್ಲಿ ಒಬ್ಬ ಬಹಳ ಸಾತ್ವಿಕ ವ್ಯಕ್ತಿ, ತನ್ನ ಆಸೆಗಳನ್ನೆಲ್ಲವನ್ನೂ ಬದಿಗಿಟ್ಟು ಬೇರೆಯವರ ಹಿತ ಬಯಸುವವನು. ಹಿರಿಯರನ್ನು ಗೌರವದಿಂದ ಕಾಣುತ್ತಿದ್ದನು. ಸಮಾನ ವಯಸ್ಕರಲ್ಲಿ ಸ್ನೇಹದಿಂದಿದ್ದನು. ಕಿರಿಯರಿಗೆ, ಅಂಗವಿಕಲರಿಗೆ, ಬುದ್ಧಿಮಾಂದ್ಯರಿಗೆಲ್ಲ ಅಪರಿಮಿತ ಪ್ರೀತಿ ತೋರಿಸುತ್ತಾ ತನ್ನ ಕೈಲಾದ ಸಹಾಯ ಮಾಡುತ್ತಿದ್ದನು. ಸ್ವಾಭಾವಿಕವಾಗಿ ಈ ಗುಣಗಳೆಲ್ಲಾ ತಂದೆಗೆ ಬಹಳ ಮೆಚ್ಚುಗೆಯಾಗುತ್ತಿತ್ತು. ಹೀಗಾಗಿ ತಂದೆ ಒಂದು ದಿನ ತನ್ನೆಲ್ಲಾ ಸಂಪತ್ತು ಮತ್ತು ಜವಾಬ್ದಾರಿಯನ್ನು ಸಂತೋಷದಿಂದ ಸಾತ್ವಿಕ ಮಗನಿಗೆ ವಹಿಸಿಕೊಟ್ಟನು. ತನ್ನ ಆದರ್ಶಗಳನ್ನೆಲ್ಲಾ ಮೈಗೂಡಿಸಿಕೊಂಡವನು, ತನಗೆ ಉತ್ತರಾಧಿಕಾರಿಯಾಗಲು, ತನ್ನೆಲ್ಲಾ ಮಕ್ಕಳಿಗೆ ತಂದೆಯ ಸ್ಥಾನ ವಹಿಸಿಕೊಳ್ಳಲು, ತನ್ನ ಸಂಪತ್ತನ್ನು ಸಾರ್ಥಕವಾಗಿ ವಿನಿಯೋಗಿಸಲು ತಕ್ಕವನೆಂದು ತನ್ನಲ್ಲಿಯೇ ಅವನನ್ನು ಒಂದಾಗಿಸಿಕೊಳ್ಳುತ್ತಾನೆ. ತಂದೆಯ ಈ ದೃಷ್ಟಿಕೋನ ಸಹಜವೇ ಅಲ್ವ?
ಆದರೆ ಈ ಕಥೆಯಲ್ಲಿ ಬರುವ ತಂದೆಯೇ ಜಗತ್ಪಿತ ಪರಮೇಶ್ವರ ಅಥವಾ ದೇವರು. ಅವನ ಮಕ್ಕಳು ನಾವೆಲ್ಲಾ. ಆದುದರಿಂದಲೇ ಧಾರ್ಮಿಕತೆಯಲ್ಲಿ ಮೂಲಭೂತವಾಗಿ ಬೇಕಾದದ್ದು ಅನುಕಂಪ ಅಥವಾ ಕರುಣೆ. "ದಯವಿಲ್ಲದ ಧರ್ಮ ಯಾವುದಯ್ಯ" ಎನ್ನುವ ವಚನ ಎಷ್ಟು ಅರ್ಥಪೂರ್ಣವಾಗಿದೆ! ಅದೇ ರೀತಿಯ ಇನ್ನೊಂದು ವಚನ "ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು...ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯ ನೀನು...", ಭಗವದ್ಗೀತೆಯ ಶ್ಲೋಕಗಳಲ್ಲಂತೂ ಅನೇಕ ಕಡೆ "ಭೂತ ದಯೆಯೇ ಪರಮ ಧರ್ಮ" ಅಂತ. ಭಕ್ತಿಯೋಗದಲ್ಲಿ ಭಗವಂತ ತನಗೆ ಪ್ರಿಯರಾದವರು ಯಾರು? ಅವರ ಗುಣಗಳೇನು ಎಂದು ವರ್ಣಿಸುತ್ತಾ "ಅದ್ವೇಷ್ಟಾ ಸರ್ವಭೂತಾನಾಂ ಮೈತ್ರ ಕರುಣ ಏವ ಚ| ನಿರ್ಮಮೋ ನಿರಹಂಕಾರಃ ಸಮದುಃಖಸುಖಃ ಕ್ಷಮೀ...." ಅನ್ನುತ್ತಾನೆ. ಅಂದರೆ ಯಾವ ಜೀವಿಗಳನ್ನೂ ದ್ವೇಷಿಸದೇ ಎಲ್ಲರೊಡನೆ ಮೈತ್ರಿ ಮತ್ತು ಕರುಣೆಯಿಂದಿರುವವನು...ಅಹಂಕಾರಿಯಲ್ಲದವನು...ಸುಖ, ದುಃಖಗಳನ್ನು ಸಮಾನವಾಗಿ ಕಾಣುವವನು ನನಗೆ ಪ್ರಿಯ ಎಂದರ್ಥ.
ಒಬ್ಬೊಬ್ಬರಲ್ಲಂತೂ ಈ ಭೂತದಯೆ ಎಷ್ಟರ ಮಟ್ಟಿಗೆ ಉತ್ಕಟವಾಗಿರುತ್ತೆ ಅಂದ್ರೆ, ಕಷ್ಟಗಳಿರುವ, ದುಃಖವಿರುವ, ನೋವಿರುವ ಸಾವಿರುವ ಜಾಗಗಳನ್ನು ಹುಡುಕಿಕೊಂಡು ಹೋಗಿ ಅದನ್ನೇ ತಮ್ಮ ಕಾರ್ಯಕ್ಷೇತ್ರಗಳನ್ನಾಗಿಸಿಕೊಂಡು ಜೀವನವನ್ನೇ ಮುಡಿಪಾಗಿಡುತ್ತಾರಲ್ಲಾ? ಎಂತಹ ವ್ಯಕ್ತಿಗಳಿವರು!! ಇವರಿಗೆ ದೇಶ, ಭಾಷೆ, ಧರ್ಮಗಳ ಸೀಮೆಯೇ ಇಲ್ಲ. ಮಾನವೀಯತೆಯೇ ಮುಖ್ಯ. ಕೆಲವರನ್ನು ಉದಾಹರಿಸಬಹುದಾದರೆ ಯುದ್ಧಭೂಮಿಯಲ್ಲಿ ಗಾಯಾಳುಗಳಿಗೆ ಉಪಶಮನವನ್ನು ನೀಡುತ್ತಲೇ ಜೀವನವನ್ನು ಸವೆಸಿದ ಫ್ಲಾರೆನ್ಸ್ ನೈಂಟಿಂಗೇಲ್, ಡಾ||ಝಿವಾಗೋ ಮತ್ತು ಈಗಲೂ ಸಾವಿರ ಸಂಖ್ಯೆಯಲ್ಲಿರುವ ನಿಜವಾದ ಹೀರೋಗಳಾದ ಅನಾಮಧೇಯರು. ಇವರುಗಳಲ್ಲಿ ಬಹುತೇಕರು ಕೆಲಸವಿದು ಅಂತ ಮಾಡುವುದಿಲ್ಲ. ಅವರಿಗೆ ಸಮಯದ ಪರಿವೆಯೂ ಇರುವುದಿಲ್ಲ, ಸಂಬಳ ಅಥವಾ ಇನ್ನಿತರ ಫಲಾಪೇಕ್ಷಿಗಳಾಗಿರುವುದಿಲ್ಲ, ದೇವರು ಯಾವುದರಿಂದ ಮಾಡಿರಬಹುದು ಇವರುಗಳ ಮನೋಬುದ್ಧಿಗಳನ್ನು? ದೇವರು ಇಂಥಹವರಿಗೆ ಹತ್ತಿರವಾಗಿಲ್ಲದಿದ್ದರೆ ಇನ್ನಾರಿಗಿರಬಹುದು? ಇವರದ್ದು ನಿಜವಾದ ಧರ್ಮವಲ್ಲದಿದ್ದರೆ ಧರ್ಮವೇ ಅರ್ಥಹೀನ ಅಂತ ಅಲ್ವಾ?
ಹಿಂದೆ ನಮ್ಮ ಸ್ನೇಹಿತರೊಬ್ಬರಿದ್ದರು, ದೇವರು ಧರ್ಮದ ವಿಷಯದಲ್ಲಿ ಮಹಾಜ್ಞಾನಿ, ಮಹಾ ತಾರ್ಕಿಕರು, ಬಹಳ ಬುದ್ಧಿವಂತರು. ಆದರೆ, ಮಾನವತೆಯ, ಅಸಹಾಯಕರ, ವಿಕಲಾಂಗರ ಮಾತುಬಂದಾಗ, ಅದಕ್ಕೆಲ್ಲಾ ನಾವು ಹೊಣೆಗಾರರಲ್ಲ, ಅವರವರ ಹಿಂದಿನ ಕರ್ಮಗಳಿಗೆ ಸರಿಯಾಗಿ ದೇವರು ಅವರನ್ನಿಟ್ಟಿದ್ದಾನೆ ಅಂತಿದ್ರು. ಒಂದು ದೃಷ್ಟಿಯಲ್ಲಿ ನೋಡಿದರೆ ಅದು ನಿಜ. ಕಾರ್ಯ, ಕಾರಣಗಳ ಸಂಬಂಧದಿಂದ ಎಲ್ಲವೂ ಪೂರ್ವಾರ್ಜಿತ ಕರ್ಮಗಳೇ. ಅದನ್ನು ಯಾರೂ ಬದಲಿಸಲು ಆಗಲ್ಲ ನಿಜ. ಆದರೆ ಹೀಗಂತ ಎಲ್ಲರೂ ಸುಮ್ಮನಿದ್ದರೆ ಏನಾಗಬಹುದು? ಅಥವಾ ನಮ್ಮ ಮಕ್ಕಳಿಗೇ ಹಾಗಾದಾಗ ನಾವು ಹೀಗೆ ಹೇಳಿ ಸುಮ್ಮನಾಗ್ತೀವಾ? ನಮ್ಮ ಪ್ರತಿಕ್ರಿಯೆ ಹೇಗಿರುತ್ತದೆ ಅಂತ ಪರೀಕ್ಷಿಸಲು ಅಸಹಾಯಕರನ್ನು, ನೊಂದಿರುವವರನ್ನು ದೇವರು ನಮ್ಮ ಮುಂದೆ ತರ್ತಾ ಇರಬಹುದಾ? ಹಾಗಾದಾಗ ಅವರಿಗೆ ಸಹಾಯ ಮಾಡುವುದಿರಲಿ, ಹೃದಯದಲ್ಲಿ ಸ್ವಲ್ಪವೂ ಮರುಕ ಹುಟ್ಟದಿದ್ದರೆ ಭಗವಂತನು ಪರೀಕ್ಷೆಯಲ್ಲಿ ನಮ್ಮನ್ನೇನು ಮಾಡಬಹುದು? ಯೋಚಿಸಬೇಕಾದ ವಿಚಾರನೇ ಅಲ್ವಾ? ಅನೇಕರು ಹಲವು ಸೇವಾ ಸಂಸ್ಥೆಗೆ ಒಂದೊಂದು ರೂಪದಲ್ಲಿ ಸಹಾಯ ಮಾಡುತ್ತಾರೆ. ಸಾಧಾರಣವಾಗಿ ಕೆಲವರು ಸ್ವಯಂ ಸೇವಾ ಸಂಸ್ಥೆಗೆ ಇಂತಿಷ್ಟು ಅಂತ ಹಣ ಕಳಿಸಿ ಸುಮ್ಮನಾಗಿ ಬಿಡುತ್ತಾರೆ. ಇದೂ ಒಳ್ಳೆ ಮನೋಭಾವವೇ ನಿಜ. ಸೇವೆ ಮಾಡುವುದಕ್ಕೆ ಸ್ವಯಂ ಸೇವಕರಿದ್ದರೂ ಆರ್ಥಿಕ ಸಹಾಯವಿಲ್ಲದಿದ್ದರೆ ಏನು ತಾನೆ ಮಾಡಬಹುದು? ಇಷ್ಟಾದರೂ ಮಾಡಿದ್ರೆ ಧನ್ಯತೆ ಇದೆ ನಿಜ....ಆದರೂ ಪುಣ್ಯವೆಲ್ಲ ಇವರಿಗೇ ಅಲ್ಲ. ಯಾರು ಭೌತಿಕವಾಗಿ ನೋವಿನ ಜೊತೆ, ಹಸಿವಿನ ಜೊತೆ ಇದ್ದು ಸೇವೆ ಮಾಡುತ್ತಾ, ಮರುಗುತ್ತಾ, ಅವರ ಸಮಾಧಾನದ ಸಂತೋಷವನ್ನು ಅನುಭವಿಸುತ್ತಿರುತ್ತಾರೋ, ದೈಹಿಕವಾಗಿ, ಮಾನಸಿಕವಾಗಿ ಸ್ಪಂದಿಸಿರುತ್ತಾರೋ ಅಥವಾ ತನು ಕರಗುವವರಿಗೆ, ಮನ ಕರಗುವವರಿಗೆ ಮಾತ್ರ ದೇವರು ಹತ್ತಿರವಾಗೋದು ಮಾತ್ರವಲ್ಲ, ಇವರು ದೇವರಲ್ಲೇ ಒಂದಾಗಿ ಹೋಗ್ತಾರೇನೋ ಅಥವಾ ಮೋಕ್ಷ ಸಾಮ್ರಾಜ್ಯದ ಅಧಿಕಾರಿಗಳಿವರು ಅನ್ಸಲ್ವಾ?
ಈ ಪ್ರಪಂಚದಲ್ಲಿ ಯಾರು ಯಾರಿಗೆ ತಾನೇ ಹೇಗೆ ಸಹಾಯ ಮಾಡಿ ಪ್ರಪಂಚವನ್ನುದ್ಧಾರ ಮಾಡಬಹುದು? ವಿವೇಕಾನಂದರು ಹೇಳಿದ ಹಾಗೆ ಎಲ್ಲರಿಗೂ ಉಪಯೋಗ ಆಗ್ಲಿ ಅಂತ ದೊಡ್ಡ ಸೇತುವೆ ಅಥವಾ ಆಸ್ಪತ್ರೆ ಕಟ್ತೀರಾ? ಕ್ಷಣಮಾತ್ರದಲ್ಲಿ ಧೂಳೀಪಟ ಮಾಡಬಹುದು ಪ್ರಕೃತಿ. "ಪ್ರಪಂಚಕ್ಕೆ ಯಾರಿಂದ ಯಾವ ಉಪಯೋಗವೂ ಬೇಕಾಗಿಲ್ಲ. ವಿಶ್ವದ ಪುರಾತನ ನಾಗರೀಕತೆಗಳೆಲ್ಲ ಮಣ್ಣಲ್ಲಿ ಮಣ್ಣಾಗಿ ಹೋಗಿವೆ. ಯಾರಿಂದ ಯಾರಿಗಾದ ಉಪಯೋಗವನ್ನೂ ನೆನಪಿನಲ್ಲಿಟ್ಟುಕೊಂಡಿಲ್ಲ ಈ ಪ್ರಪಂಚ. ಆದರೆ ಉಪಕಾರ ಮಾಡುವಾಗ, ಮಾಡುವವರಲ್ಲಿ ಬರುವ ಧನ್ಯತೆಯ ಭಾವನೆಯೇ ಅವರಿಗೆ ದೊರೆಯಬಹುದಾದಂತಹ ದೊಡ್ದ ಪ್ರಯೋಜನ. ಹಾಗಾಗಿ ಉಪಕಾರ ಪಡೆದುಕೊಳ್ಳುವವರಿಗೆ, ಉಪಕಾರ ಮಾಡುತ್ತಿರುವವರು ಕೃತಜ್ಞರಾಗಿರಬೇಕು" ಅಂತ ವಿವೇಕಾನಂದರು ಹೇಳುತ್ತಾರೆ.
ವೇದಾಂತದ ತತ್ವದಂತೆ ಪ್ರಪಂಚವೆಲ್ಲಾ ಒಂದು ಕನಸಿನಂತೆ. ನಾವು ನೋಡುತ್ತಿರುವ ದೃಶ್ಯಗಳು, ಜನಗಳು ಎಲ್ಲವೂ ಪಾರಮಾರ್ಥಿಕವಾಗಿ ಮಿಥ್ಯೆ. ಕನಸಿನಂತಹ ದೃಶ್ಯಗಳನ್ನು ನೋಡುತ್ತಿರುವವರು ಮಾತ್ರ ಸತ್ಯ. ಜನರು, ಲೋಕವೆಲ್ಲಾ ಆ ವ್ಯಕ್ತಿಯ ರೂಪಾಂತರಗಳು ಮಾತ್ರ. ಹಾಗಾದರೆ ಸಹಾಯ ಮಾಡುವವರು ಯಾರು? ಮಾಡಿಸಿಕೊಳ್ಳುವವರು ಯಾರು? ಮಾಡಿದ ಹಾಗೆ, ಮಾಡಿಸಿಕೊಳ್ಳುವ ಹಾಗೆ ಎಲ್ಲಾ ಬರಿಯ ಭಾವನೆಗಳು ಮಾತ್ರ ಅಲ್ವಾ? ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿಸುವುದಷ್ಟೇ. ವ್ಯವಹಾರಿಕ ಪ್ರಪಂಚದಲ್ಲಿ ಆ ಧನ್ಯತೆಯ ಭಾವನೆಗಾಗಿ ಅದನ್ನು ಮಾಡುವ ಅನಿವಾರ್ಯತೆಯಂತೂ ಇದೆ.
ಆಕಾಶಿಕ ದಾಖಲೆಗಳು
- -ಶ್ರೀ ಅಶೋಕ್ ಕುಮಾರ್

ಕಳೆದ ಶತಮಾನದ ಪೂರ್ವಾರ್ಧದಲ್ಲಿ ಅಮೇರಿಕಾ ದೇಶದಲ್ಲಿ ಎಡ್ಗರ್ ಕೇಸಿ ಎಂಬ ಧಾರ್ಮಿಕ ಶ್ರದ್ಧೆಯ ವೈದ್ಯರೊಬ್ಬರಿದ್ದರು. ಕ್ರಿಶ್ಚಿಯನ್ ಧರ್ಮದ ಶ್ರದ್ಧಾಳುವಾದ ಇವರು ಒಮ್ಮೆ ಅಸ್ವಸ್ಥರಾಗಿದ್ದಾಗ ಅವರ ಧ್ವನಿಯೇ ಬಿದ್ದು ಹೋಗಿತ್ತು. ಯಾವ ಚಿಕಿತ್ಸೆಯೂ ಫಲಕಾರಿಯಾಗಿರಲಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಹುಡುಕಾಟದ ಭರದಲ್ಲಿ ಅವರಿಗೆ ತಮ್ಮನ್ನೇ ಸಮ್ಮೋಹಿನಿ ವಿದ್ಯೆಗೊಳಪಡಿಸಿಕೊಂಡು ಅನಾರೋಗ್ಯಕ್ಕೆ ಕಾರಣ ಮತ್ತು ಚಿಕಿತ್ಸೆಗಳನ್ನು ಕಂಡುಕೊಳ್ಳುವ ಅಪೂರ್ವ ಶಕ್ತಿ ಬಂದಿತ್ತು. ಇದರಿಂದಾಗಿ ತಮ್ಮನ್ನು ತಾವು ಗುಣಪಡಿಸಿಕೊಂಡದ್ದು ಮಾತ್ರವಲ್ಲ, ಬರಬರುತ್ತಾ ಬೇರೆಯವರ ಕಾಯಿಲೆಗಳನ್ನು ಕೂಡಾ ಗುಣಪಡಿಸುವ ಸುಪ್ತ ಶಕ್ತಿಯ ಅರಿವಾಯಿತು. ಅಂದಿನಿಂದ ಅನೇಕ ವರ್ಷಗಳವರೆಗೆ ಸಾವಿರಾರು ರೋಗಿಗಳನ್ನು ಗುಣಪಡಿಸಿದ ದಾಖಲೆಗಳು ಇಂದಿಗೂ ಇವೆ ಮತ್ತು ಕುತೂಹಲಕಾರಿಯಾಗಿವೆ ಎಂಬುದು ಗಮನಿಸಬೇಕಾದ ಅಂಶ.
ಅವರನ್ನು ಅನಾರೊಗ್ಯದ ಸಲುವಾಗಿ ಪರಿಹಾರ ಕೇಳ ಬಯಸಿದ್ದ ಅನೇಕರು ತಮ್ಮ ಕಾಯಿಲೆಗಳ ಬಗ್ಗೆ ಹೇಳಿದಾಗ ಕೇಸಿಯವರು ತಮ್ಮ ಒಳಹೊಕ್ಕು ಪರಿಹಾರವಿದ್ದರೆ ಸೂಚಿಸುತ್ತಿದ್ದರಂತೆ. ಇಲ್ಲವಾದರೆ ಇದು ಶೀಘ್ರವಾಗಿ ಗುಣವಾಗುವುದು ಸಾಧ್ಯವೇ ಇಲ್ಲ, ಇಂತಿಷ್ಟು ಕಾಲ ನೀವಿದನ್ನು ಅನುಭವಿಸಲೇಬೇಕು ಎಂತಲೋ, ಅಥವಾ ನೀವಿದನ್ನು ಜೀವನ ಪರ್ಯಂತ ಅನುಭವಿಸಬೇಕು ಎಂದೋ ನಿಖರವಾಗಿ ಹೇಳಿಬಿಡುತ್ತಿದ್ದರಂತೆ. ಮತ್ತು ಅದಕ್ಕೆ ಕಾರಣವನ್ನೂ ಹುಡುಕಿ ಹೇಳುತ್ತಿದ್ದರಂತೆ. ಈ ರೀತಿಯ ಕಾರಣಗಳನ್ನು ಹುಡುಕಲು ವ್ಯಕ್ತಿಗಳ ಜನ್ಮಾಂತರಗಳನ್ನೆಲ್ಲ ತಲುಪಿ ನೀವು ಮಾಡಿರುವ ಈ ತಪ್ಪಿಗಾಗಿ ಈಗ ಈ ಶಿಕ್ಷೆಯನ್ನು ಅನುಭವಿಸಲೇ ಬೇಕಾಗಿರುವುದು ಎಂದೆಲ್ಲಾ ಹೇಳುತ್ತಿದ್ದರಂತೆ. ಅವರಿಗೆ ಭಾರತೀಯ ಭಾಷೆ, ಧರ್ಮಗಳ ಬಗ್ಗೆ ಯಾವುದೇ ಮಾಹಿತಿಯಾಗಲೀ, ನಂಬಿಕೆ ಶ್ರದ್ಧೆಗಳಾಗಲೀ ಇರಲಿಲ್ಲವಾದರೂ ಅವರು ಸೂಚಿಸುವ ಪರಿಹಾರಗಳಲ್ಲಿ ಕರ್ಮ, ಪುನರ್ಜನ್ಮ, ಆಕಾಶ ಮುಂತಾದ ಸಂಸ್ಕೃತ ಪದಗಳು ನಿರರ್ಗಳವಾಗಿ ಬರುತ್ತಿದ್ದವಂತೆ. ಹಿಂದಿನ ಜನ್ಮಗಳ ವಿಷಯಗಳು ಹೇಗೆ ತಿಳಿಯುತ್ತಿತ್ತು ಎಂಬ ಪ್ರಶ್ನೆಗೆ ಅವರು "ಆಕಾಶಿಕ ದಾಖಲೆಗಳಿಂದ" ( From Akashik records) ಎನ್ನುತ್ತಿದ್ದರಂತೆ.
ಮುಂದೆ ಇವರು "ಸುಷುಪ್ತಿಯ ಪ್ರವಾದಿ ಎಂದೇ ಪ್ರಖ್ಯಾತರಾದರಂತೆ. ಇವರ ಬಗ್ಗೆ ಅನೇಕ ಪುಸ್ತಕಗಳು ಎಲ್ಲಾ ಗ್ರಂಥಾಲಯಗಳಲ್ಲೂ ಲಭ್ಯವಿದೆ ಮಾತ್ರವಲ್ಲದೇ, ಅಂತರ್ಜಾಲ ಕ್ಷೇತ್ರಗಳಲ್ಲಿ ಸಾಕಷ್ಟು ಮಾಹಿತಿಗಳಿವೆ ಏನಿರಬಹುದು ಆಕಾಶಿಕ ದಾಖಲೆಗಳು? ಎಂದು ಸ್ವಲ್ಪ ಯೋಚಿಸೋಣ. ಸೂರ್ಯನ ಬೆಳಕು ಭೂಮಿಗೆ ತಲುಪಲು ಸುಮಾರು ೮ ನಿಮಿಷಗಳು ಬೇಕಂತೆ. ಅಂದರೆ ಈಗ ನಾವು ನೋಡುತ್ತಿರುವ ಸೂರ್ಯ ೮ ನಿಮಿಷಗಳ ಹಿಂದೆ ಇದ್ದ ಸೂರ್ಯ. ಅದೇ ರೀತಿ ತಾರೆಗಳು, ಎಷ್ಟೋ ವರ್ಷಗಳ ಹಿಂದಿದ್ದ ತಾರೆಗಳ ಬೆಳಕು ಈಗ ಭೂಮಿಯನ್ನು ತಲುಪಿ ಅದು ಈಗಿರುವಂತೆ ನೋಡುತ್ತೇವೆ ಎನ್ನುತ್ತಾರೆ. ಅಂದರೆ ಅವುಗಳಿಗಿರುವ ದೂರ ಎಷ್ಟೆಷ್ಟೋ ಜ್ಯೋತಿರ್ವರ್ಷಗಳಷ್ಟು. ಅದೇ ರೀತಿ ಈಗ ನಡೆಯುತ್ತಿರುವಂತೆ ಕಾಣುತ್ತಿರಬಹುದಾದ ನಕ್ಷತ್ರ ಸ್ಪೋಟಗಳಂತಹ ಘಟನಾವಳಿಗಳು ಬಹುಷಃ ಹಲವಾರು ವರ್ಷಗಳಷ್ಟೋ ಅಥವಾ ಹಲವಾರು ಶತಮಾನಗಳಷ್ಟು ಹಿಂದೆ ನಡೆದದ್ದಿರಬಹುದು.
ಅದೇ ರೀತಿ ಭೂಮಿ ಮತ್ತು ಅದರ ಮೇಲೆ ನಡೆಯುವ ಘಟನಾವಳಿಗಳು ಕಾಲ ಕಳೆದಂತೆ ಆಕಾಶದ ಬೇರೆ ಬೇರೆ ಸ್ಥರಗಳನ್ನು ತಲುಪುತ್ತಾ ನಾಶವಾಗದ ದಾಖಲೆಗಳಾಗಿ ಎಂದೆಂದಿಗೂ ಉಳಿದಿರಬಹುದಲ್ಲವೇ? ಉದಾಹರಣೆಗೆ ಯಾವುದೋ ಒಂದು ಸ್ಥರದಲ್ಲಿ ನಿಂತು ನೋಡಿದಾಗ ಕುರುಕ್ಷೇತ್ರದ ಯುದ್ಧ ನಡೆಯುತ್ತಿರುವುದನ್ನೂ, ಭಗವಂತನ ಗೀತೋಪದೇಶವನ್ನೂ ಈಗ ನಡೆಯುತ್ತಿರುವಂತೆ ವೀಕ್ಷಿಸುವ ಸಂಭವವನ್ನು ತಳ್ಳಿ ಹಾಕಲಾಗುವುದಿಲ್ಲ ಅಲ್ಲವೇ? ತಾತ್ವಿಕವಾಗಿ ಯಾವ ಸ್ಥರಕ್ಕಾದರೂ ತಲುಪಿ ಭೂಮಿಯ ಹುಟ್ಟು ಮಾತ್ರವಲ್ಲ , ಸೃಷ್ಟಿಯ ಆದಿಯನ್ನೂ ತಲುಪಬಹುದಲ್ಲವೇ? ಪೂರ್ವ ಜನ್ಮಗಳ ಘಟನಾವಳಿಗಳೆಂದರೆ ಸಾಪೇಕ್ಷವಾಗಿ ಆಕಾಶದ ಅತ್ಯಂತ ಕೆಳಸ್ಥರಗಳಲ್ಲಿಯೇ ಇರಬಹುದು. ಆದರೆ ಆಕಾಶದ ದಾಖಲೆಗಳನ್ನು ತಲುಪಿ ನೋಡುವ ಬಗೆಯಾದರೂ ಹೇಗೆ? ಬೆಳಕಿಗಿಂತ ವೇಗವಾಗಿ ಪ್ರಯಾಣಿಸಿ ನೋಡಬೇಕಲ್ಲವೇ? ಬೆಳಕಿಗಿಂತ ವೇಗವಾದದ್ದೇನಾದರೂ ಇದೆಯೇ ಎಂಬ ಪ್ರಶ್ನೆಗೆ, ಮಹಾಭಾರತದ ಯಕ್ಷ ಪ್ರಶ್ನೆಯೊಂದಕ್ಕೆ ಧರ್ಮರಾಯನ ಉತ್ತರದಿಂದ ತಿಳಿಯುತ್ತದೆ, ಪ್ರಪಂಚದಲ್ಲಿ ಅತ್ಯಂತ ವೇಗವಾಗಿ ಚಲಿಸಬಲ್ಲದ್ದು ಮನಸ್ಸು ಎಂದು. ಅಂದರೆ ಮಾನಸಿಕ ಏಕಾಗ್ರತೆಯಿಂದ ಆಕಾಶಿಕ ದಾಖಲೆಗಳ ಯಾವುದೇ ಸ್ಥರವನ್ನು ಅತ್ಯಂತ ಕ್ಷಿಪ್ರವಾಗಿ ತಲುಪಬಹುದೆಂದಾಯಿತು. ಅಥವಾ ಅವುಗಳನ್ನು ತಲುಪಲು ಇದೊಂದೇ ಹಾದಿಯೆಂದಾಯಿತ ು. ಮಾನಸಿಕ ಏಕಾಗ್ರತೆಯೆಂದರೆ ಧ್ಯಾನ ಅಥವಾ ತಪಸ್ಸು.
ಇದೇ ಸಾಧನದಿಂದ, ದರೋಡೆಕೋರನೊಬ್ಬ ವಾಲ್ಮೀಕಿಯಾಗಿ ಆಕಾಶಿಕ ದಾಖಲೆಯ ಆ ಹಂತವನ್ನು ತಲುಪಿ ತಾನು ನೋಡಿದಂತೆ ದಾಖಲಿಸಿರುವ ಪ್ರಯತ್ನವೇ ವಿಶ್ವದ ಮೊಟ್ಟ ಮೊದಲ ಮಹಾಕಾವ್ಯವಾಯಿತೇ? ನಂತರ ಬಂದ ತುಳಸೀದಾಸರು, ಕಂಭರಂತಹ ಅನೇಕ ಸಂತರು ತಾವೂ ಆ ಸ್ಥರವನ್ನು ತಲುಪಿ ವಾಲ್ಮೀಕಿ ರಾಮಾಯಣದ ಯಾವ ಪ್ರಭಾವವೂ ಇಲ್ಲದೇ, ತಮ್ಮದೇ ಆದ ಶೈಲಿಗಳಲ್ಲಿ ಅದೇ ಘಟನಾವಳಿಗಳನ್ನು ಮರುದಾಖಲಿಸುವಂತಾಯಿತೇ, ಎಂಬುದು ಯೋಚಿಸಲರ್ಹ ವಿಚಾರ ಎನಿಸುವುದಿಲ್ಲವೇ? ಏಕೆಂದರೆ ಅನೇಕ ಸಂತರು ದಾಖಲಿಸಿರುವ ರಾಮಾಯಣದ ಮೂಲ ಕಥೆಯಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲದೇ, ವಿವರಣೆಯ ಕಾವ್ಯಾತ್ಮಕತೆಯಲ್ಲಿ ಮಾತ್ರ ವ್ಯತ್ಯಾಸವಿದೆ. ರಾಮಾಯಣದ ವಿಚಾರ ಉದಾಹರಣೆಗಾಗಿ ಮಾತ್ರ. ಇದರಂತೆಯೇ ಮಹಾಭಾರತ, ಭಾಗವತಾದಿ ಪುರಾಣಗಳು ಮಾತ್ರವಲ್ಲ ವೇದಗಳು ಕೂಡಾ ಎನಿಸುವುದಿಲ್ಲವೇ?. ಹೀಗೇ ಯೋಚಿಸುತ್ತಾ ಹೋದರೆ ನಮ್ಮ ಅನೇಕ ಅಪನಂಬಿಕೆಗಳಿಗೆ ಉತ್ತರ ದೊರೆಯಬಹುದು ಮಾತ್ರವಲ್ಲ, ಅವುಗಳ ಮೇಲಿನ ನಂಬಿಕೆ ಮತ್ತು ಶ್ರದ್ಧೆಗಳು ಹೆಚ್ಚಾಗಬಹುದು. ನಮ್ಮಲ್ಲಿನ ಇಂತಹ ಶ್ರದ್ಧೆಯೇ ನಮ್ಮ ಮುಂದಿನ ಪೀಳಿಗೆಯವರು ನಮ್ಮ ಧರ್ಮದ ಬಗೆಗೆ ಗೌರವ,ಶ್ರದ್ಧೆಯನ್ನ ಕಾಪಾಡಿಕೊಂಡು ಹೋಗಲು ಭದ್ರ ಬುನಾದಿಯಾಗಬಹುದು.
ಪ್ರಮಾದೋ_ಧೀಮತಾಮಪಿ
- -ಡಾ. ಸಿ.ವಿ. ಮಧುಸೂದನ

ಇದು ೧೯೪೧ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ವಿಷಯ.
ಕನ್ನಡದ ಪ್ರಹಸನದ ಪಿತಾಮಹರೆಂದು ಪ್ರಖ್ಯಾತರಾದ ಕೈಲಾಸಂರವರ `ಹುತ್ತದಲ್ಲಿ ಹುತ್ತ' ಎಂಬ ನಾಟಕವನ್ನು ಮೊದಲ ಬಾರಿ ಮುದ್ರಿಸಿದಾಗ ಅದರಲ್ಲಿ ಮುದ್ರಣ ದೋಷಗಳು ಹಲವಾರು ಇದ್ದವಂತೆ. ಅವು ಎಂಥವು? ಕಣ್ಮುಚ್ಕೊಂಡ್ಳು ಎನ್ನುವುದಕ್ಕೆ ಬದಲಾಗಿ ಕಣ್ಚುಚ್ಕೋಂಡ್ಳು,Cleopatra ಅನ್ನುವ ಕಡೆ Cleoptara ಇತ್ಯಾದಿ. ಈ ಪುಸ್ತಕವನ್ನು ಮುದ್ರಣ ಮಾಡಿಸುವ ಜವಾಬ್ದಾರಿಯನ್ನು ರಾಜರತ್ನಂ ಅವರು ಹೊತ್ತಿದ್ದರು ಮುದ್ರಣದಲ್ಲಿ ಎಷ್ಟೇ ಚಿಕ್ಕ ತಪ್ಪಾದರೂ ಊರು ಹೊಲಗೇರಿ ಒಂದು ಮಾಡಿ,ಅಚ್ಚು ಮಾಡಿದವರ ಜನ್ಮ ಜಾಲಾಡಿ,ಪೇಜಿಗೆ ಪೇಜೇ ಹರಿದು ಹಾಕಿಸಿ, ಅಚ್ಚು ಮಾಡುವವರೂ ನಮ್ಮ ಹಾಗೇ ಮನುಷ್ಯರು ಅನ್ನೋದನ್ನ ಮರೆಯುವ ಮಹಾನುಭಾವರನ್ನೂ ನೋಡಿದ್ದ ರಾಜರತ್ನಂ ರವರಿಗೆ ಈ ಪುಸ್ತಕವನ್ನು ಮದ್ರಾಸಿನಲ್ಲಿದ್ದ ಕೈಲಾಸಂರವರಿಗೆ ಕಳುಹಿಸಿದಾಗ ಸ್ವಲ್ಪ ಅಳುಕೇ ಆಯಿತು. ಆದರೂ ತಾವೇ ಕೈಲಾಸಂರವರಿಗೆ ತಪ್ಪುಗಳನ್ನು ತೋರಿಸಿಬಿಟ್ಟು `ಶ್ರರಣಾಗತೋಸ್ಮಿ' ಎಂದಿದ್ದರಂತೆ.ಕೈಲಾಸಂರವರು ಸ್ವಲ್ಪವೂ ಕೋಪಗೊಳ್ಳಲಿಲ್ಲ, ಬೇಜಾರು ಮಾಡಿಕೊಳ್ಳಲಿಲ್ಲ' `The book is wonderful. Yes, there are a few mistakes'. But then, `ಪ್ರಮಾದೋ ಧೀಮತಾಮಪಿ'ಎಂದು ತಮ್ಮ ಉತ್ತರದಲ್ಲಿ ಬರೆದರು.
ಈ`ಪ್ರಮಾದೋ ಧೀಮತಾಮಪಿ' ಎಂಥಾ ಬುದ್ಧಿವಂತರೂ ಒಮ್ಮೊಮ್ಮೆ ತಪ್ಪು ಮಾಡುತ್ತಾರೆ ಎಂಬರ್ಥದ ಈ ನುಡಿಯನ್ನು ಕೈಲಾಸಂರವರೇ ಕನ್ನಡದಲ್ಲಿ`ಐರಾವತಕ್ಕೂ ಅಡಿ ತಪ್ಪುತ್ತೆ' ಎಂದಿದ್ದರು. ಇದನ್ನೇ ಇಂಗ್ಲೀಷಿನಲ್ಲಿ "To err is human, to forgive divine" ಎನ್ನುತ್ತಾರೆ. ಇದು ನಮ್ಮೆಲ್ಲರಿಗೂ ತಿಳಿದ ವಿಷಯವೇ. ಇದಕ್ಕೆ
"corollary" ಅಥವಾ ಉಪಸಿದ್ಧಾಂತವಾಗಿ ಒಂದು ಚುಟುಕವಿದೆ:
Admitting error clears the score
And proves you wiser than before.
ಇದೂ ಸತ್ಯವೇ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೂ ತಪ್ಪು ಮಾಡಿದ್ದನ್ನು ಒಪ್ಪಿಕೊಳ್ಳೂವವರು ಈಗಿನ ಕಾಲದಲ್ಲಿ ಅಪರೂಪ. ಒಬ್ಬ ರಾಜಕಾರಣಿಯೇ, ವೈದ್ಯರೇ, ಉಪಾಧ್ಯಾಯರೇ ಯಾರೇ ಆಗಲಿ ತಾವು ತಪ್ಪು ಮಾಡಿದ್ದೇವೆ ಎಂದು ಹೇಳಿದ್ದನ್ನು ನೀವು ಕೇಳಿ ಎಷ್ಟು ದಿವಸ ಅಥವಾ ಎಷ್ಟು ವರ್ಷಗಳಾದವು?ಬುಷ್ ಮಹಾಶಯರು ಇರಾಕನ್ನು ಆಕ್ರಮಿಸಿದ್ದು ತಪ್ಪಾಯಿತೆಂದು ಎಂದಾದರೂ ಒಪ್ಪಿಕೊಳ್ಳುವರೇ?
ತಪ್ಪನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಹಲವಾರು ಕಾರಣಗಳಿರಬಹುದು. ಮುಖ್ಯವಾಗಿ ಮುಖಭಂಗವಾಗುವುದೆಂಬ ಭೀತಿ ಅಥವಾ ಧನದ ಇಲ್ಲವೇ ಇತರೇ ಪರಿಹಾರ ಕೊಡಬೇಕಾಗುವುದೆಂದು ಹೆದರಿಕೆ, ಇತ್ಯಾದಿ. ಈ ಎರಡನೇ ನಮ್ಮ(ಆಸ್ಟ್ರೇಲಿಯಾ) ಪೂರ್ವಪ್ರಧಾನಿಗಳು ಆದಿವಾಸಿಗಳಿಗೆ `sorry' ಎಂದು ಹೇಳಲಿಲ್ಲವೇನೋ. ಈಗಿನ ಕಾಲದಲ್ಲಂತೂ ನೆಪಸಿಕ್ಕರೆ ಸಾಕು ಮಾಡಿ ಆದಷ್ಟು ಹಣವನ್ನು ಗಿಟ್ಟಿಸಿಕೊಳ್ಳೋಣವೆಂಬ ಪರಾನ್ನಪುಷ್ಟರಿಗೆ -parasiteಗಳಿಗೆ -ಕಡಿಮೆಯಿಲ್ಲ. ಅದಕ್ಕೆ ತಾವಾಗಿಯೇ ತಪ್ಪೊಪ್ಪಿಕೊಂಡವರನ್ನು `ಸ್ವಲ್ಪವೂ ವ್ಯವಹಾರಜ್ಞಾನವಿಲ್ಲದವರು' ಎಂದು ಅವರ ಬಂಧು ಮಿತ್ರರೇ ಹೀಯಾಳಿಸುತ್ತಾರೆ.ಆದರೆ ತಪ್ಪೊಪ್ಪಿಕೊಳ್ಳುವುದರಲ್ಲಿ ಮತ್ತು ತಪ್ಪನ್ನು ಕ್ಷಮಿಸುವುದರಲ್ಲಿ ಅನುಕೂಲವೂ ಇದೆ, ಏನಿಲ್ಲದಿದ್ದರೂ road rage ಅನ್ನಾದರೂ ಕಡಿಮೆ ಮಾಡಬಹುದಲ್ಲವೇ?
ಈ ವಿಷಯದಲ್ಲಿ ನಿಮ್ಮ ಅನಿಸಿಕೆ ಏನು?
ದೊಂಬರಾಟವಯ್ಯ
- -ಶ್ರೀ ಅಶೋಕ್ ಕುಮಾರ್
ದೊಂಬರಾಟವೆಂದರೆ ಅಲ್ಲಲ್ಲಿ ಜನ ಸೇರುವೆಡೆಯಲ್ಲಿ ಭಿಕ್ಷೆಗಾಗಿ ಅನೇಕ ತರಹದ ಆಟಗಳನ್ನೂ, ಯಕ್ಷಿಣಿ ವಿದ್ಯೆಗಳನ್ನೂ ಪ್ರದರ್ಶಿಸುತ್ತಾ, ಸೇರಿದ ಜನರನ್ನು ರಂಜಿಸುವ ಕಲೆಯೆಂದು ಭಾರತೀಯರೆಲ್ಲರಿಗೂ ತಿಳಿದ ವಿಷಯ. ಈ ರೀತಿ ಕಲೆಗಳಲ್ಲಿ ಕೆಲವು, ಸಾಮಾನ್ಯರ ತರ್ಕಕ್ಕೆ, ಬುದ್ಧಿಗೆ ನಿಲುಕದ ವಿಚಿತ್ರವಾಗಿ,ಪ್ರಸಿದ್ಧವಾಗಿಉಳಿದುಕೊಂಡಿದೆ.
ಇವುಗಳಲ್ಲಿ ಅನೇಕಕಲೆಗಳು ನಶಿಸಿಹೋಗುತ್ತಿವೆ. ಅಂತಹ ಒಂದು ವಿದ್ಯೆ, "ಭಾರತೀಯ ಹಗ್ಗ ಏಣಿಯಾಟ" ಅಥವಾ "ಇಂಡಿಯನ್ ರೋಪ್ ಟ್ರಿಕ್". ಸುಮಾರು ಒಂದು ಶತಮಾನದ ಹಿಂದೆ, ಭಾರತದಲ್ಲಿ ಆಂಗ್ಲರ ಕಾಲದಲ್ಲಂತೂ ಈ ಕಲೆ ಅಂತರರಾಷ್ಟ್ರೀಯ ಖ್ಯಾತಿಯನ್ನೇ ಗಳಿಸಿತ್ತಂತೆ. ವಿದೇಶಗಳಲ್ಲಿ ಸಭೆ, ಸಮಾರಂಭಗಳಲ್ಲಿ ವಿಶೇಷ ಆಕರ್ಷಣೆಯಾಗಿ ಇದನ್ನು ಪ್ರದರ್ಶಿಸಲು ಕಲಾವಿದರನ್ನು ಅಲ್ಲಿಗೆ ಕರೆಸಿಕೊಳ್ಳಲಾಗುತ್ತಿತ್ತಂತೆ. ಇದರ ಬಗ್ಗೆ ವಾದ, ವಿವಾದಗಳೇನೇ ಇದ್ದರೂ ಇದು ಇಂದಿಗೆ ನಶಿಸಿಹೋಗಿರುವಕಲೆಯಾಗಿದೆ. ಇದನ್ನೊಂದು ಉಪಮೆಯಾಗಿ , ಕಥೆಯಾಗಿ ಇಲ್ಲಿ ಉಲ್ಲೇಖಿಸಲಾಗಿದೆ.
"ಒಂದೂರಿನ ರಸ್ತೆ ಬದಿಯ ಮೈದಾನವೊಂದರಲ್ಲಿ ಕಿಕ್ಕಿರಿದ ಜನಸಂದಣಿ. ಜನರೆಲ್ಲಾ ದೊಂಬರಾಟದವನ ಮಾತಿನ ಮೋಡಿಗೆ ಬೆರಗಾಗಿ ನಿಂತಿದ್ದಾರೆ. ಉತ್ಸಾಹಿ ಯುವಕನೊಬ್ಬ ನೋಡಲು ಹೋದವನು ದೊಂಬರಾಟದವನ ಮಾತು ಕೇಳುತ್ತಾ, ಕೇಳುತ್ತಾ ಹಿಂದೆ ಹೋಗಿ ಮರದ ಮೇಲೆ ಹತ್ತಿ ನೋಡಿದರೆ ಚೆನ್ನಾಗಿ ಕಾಣಿಸಬಹುದೆಂದು ಮರಹತ್ತಿ ಕುಳಿತುಕೊಂಡು, ಆಟವನ್ನು ವೀಕ್ಷಿಸಲಾರಂಭಿಸುತ್ತಾನೆ. ಒಬ್ಬ ಪುಟ್ಟ ಹುಡುಗನೊಬ್ಬನನ್ನು ಸಹಾಯಕನಾಗಿ ಆಟದಲ್ಲಿ ಬಳಸಿಕೊಳ್ಳುತ್ತಿದ್ದ ದೊಂಬರಾಟದವನು ಆ ಹುಡುಗನನ್ನು ಕರೆದು, ಮಲಗಿಸಿ ಬಟ್ಟೆಯನ್ನು ಹೊದಿಸಿ ಮುಸುಕು ಹಾಕುತ್ತಾನೆ. ಆಮೇಲೆ ಪುಂಗಿಯನ್ನೂದಲಾರಂಭಿಸಿದಾಗ ಅಲ್ಲಿಯೇ ಸುರುಳಿ ಸುತ್ತಿಟ್ಟಿದ್ದ ದಪ್ಪನೆಯ ಹಗ್ಗವೊಂದು ಹಾವಿನಂತೆ ಮೇಲೇರಲಾರಂಭಿಸುತ್ತದೆ. ಇನ್ನೂ ಊದುತ್ತಾ, ಊದುತ್ತಾ ಮೇಲೆ ತೋರಿಸುತ್ತಾರೆ. ನೆರೆದ ಜನರೆಲ್ಲಾ ವಿಸ್ಮಯದಿಂದ ಮೇಲೆ ನೋಡುತ್ತಿರುವಂತೆಯೇ, ಹಗ್ಗದ ತುದಿಯು ಸಾಯಂ ಸಂಧ್ಯೆಯ ಬೆಳಕಿನಲ್ಲಿ ಆಗಸದಲ್ಲಿ ಕಣ್ಮರೆಯಾಗಿರುತ್ತದೆ. ಹಗ್ಗದ ಕೊನೆ ಎಲ್ಲಿ ಹೋಯಿತು ಎಂದು ವಿವರಿಸುತ್ತಾ ತನ್ನ ಮಾತಿನ ಮೋಡಿಯನ್ನು ಮುಂದುವರೆಸುತ್ತಾನೆ. ಆಮೇಲೆ ಮುಸುಕಿನೊಳಗೆ ಮಲಗಿದ್ದ ಹುಡುಗನ ಹೆಸರು ಕರೆದು ಎಬ್ಬಿಸಿ ಹಗ್ಗದ ಕೊನೆ ಎಲ್ಲಿಹೋಯಿತೆಂದು ನೋಡು ಎಂದು ಆಜ್ಞೆ ಮಾಡುತ್ತಾನೆ. ಹುಡುಗ ಕಣ್ಣುಜ್ಜಿಕೊಂಡು ಹಗ್ಗವನ್ನೇರಲಾರಂಭಿಸುತ್ತಾನೆ. ಅವನು ಏರುತ್ತಾ ಹೋಗುತ್ತಿದ್ದಂತೆಯೇ, ದೊಂಬರಾಟದವನು ಅವನೊಡನೆ ಮಾತನಾಡುತ್ತಲೇ ಇರುತ್ತಾನೆ. ಮೇಲೆ ಹೋದ ಹಾಗೆಯೇ ಅವನ ಧ್ವನಿ ಕ್ಷೀಣಿಸುತ್ತಾ ಕಡೆಗೆ ಕೇಳಿಸುವುದೇ ಇಲ್ಲ. ಹುಡುಗನೂ ಮೇಲೆ ಕಾಣದಷ್ಟು ದೂರ ಹೋಗಿರುತ್ತಾನೆ. ಅವನ ಮಾತೇ ಕೇಳದಿದ್ದಾಗ ದೊಂಬರಾಟದವನಿಗೆ ಕೋಪ ಬರುತ್ತದೆ. ಅವನು ಬಾಲಕನಿಗೆ ಹೀಗೆನ್ನುತ್ತಾನೆ,"
ಹಗ್ಗದ ಕೊನೆ ಎಲ್ಲೆಂದು ಹೋಗಿ ನೋಡೆಂದರೆ ನೀನೂ ಮಾಯವಾದೆಯಾ? ಬೇಗ ಕೆಳಗೆ ಬಾ, ನನ್ನ ಸಹನೆಯನ್ನು ಪರೀಕ್ಷಿಸಬೇಡವೆಂದು ಕೂಗಿಹೇಳುತ್ತಲೇ ಜನರೆಲ್ಲಾ ದಿಗ್ಭ್ರಮೆಯಾಗಿ ಮೇಲೆ, ಕೆಳಗೆ ನೋಡುತ್ತಿರುವಂತೆಯೇ, ದೊಂಬರಾಟದವನು ಒಂದು ದೊಡ್ಡ ಕತ್ತಿಯನ್ನು ಹಿಡಿದುಕೊಂಡು ಹುಡುಗನನ್ನು ಹಿಂಬಾಲಿಸಿ ಹಗ್ಗವನ್ನೇರುತ್ತಾನೆ. ಸ್ವಲ್ಪ ಹೊತ್ತಿನ ನಂತರ ಅವನೂ ಅದೃಶ್ಯನಾಗುತ್ತಾನೆ. ಆಮೇಲೆ ಹುಡುಗನ ಆಕ್ರಂದನ, ಚೀರಾಟ ಕೇಳತೊಡಗುತ್ತದೆ. ಜನರೆಲ್ಲಾ ಭಯವಿಹ್ವಲರಾಗಿ ನೋಡುತ್ತಿರುವಂತೆಯೇ ರಕ್ತ ಸಿಕ್ತವಾದ ಹುಡುಗನ ಕೈ ಕಾಲುಗಳೆಲ್ಲಾ ಕೆಳಗೆ ಬೀಳಲಾರಂಭಿಸುತ್ತದೆ. ಕೊನೆಯಲ್ಲಿ ಹುಡುಗನ ದೇಹವೂ ಬೀಳುತ್ತದೆ. ಅಲ್ಲಿ ನೆರೆದ ಹೆಂಗಸರ ದುಃಖದ ಕಟ್ಟೆಯೊಡೆಯುತ್ತದೆ, ಅಷ್ಟು ಮುಗ್ಧ ಬಾಲಕ, ಈ ರೀತಿಯಲ್ಲಿ ದಾರುಣ ಹತ್ಯೆಗೀಡಾದನಲ್ಲ ಎಂದು ರೋಧಿಸುತ್ತಾರೆ. ಇನ್ನೂ ಕೆಲವರಿಗೆ ಕೋಪ ಉಕ್ಕುತ್ತದೆ, ಕೆಳಗೆ ಬಂದ ದೊಂಬರಾಟದವನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ದೊಂಬರಾಟದವನು ಅವರನ್ನೆಲ್ಲಾ ಸಮಾಧಾನ ಪಡಿಸುತ್ತಾ, ತನಗೆ ಕೋಪ ತಡೆಯಲಾರದೇ ಆ ರೀತಿ ಮಾಡಬೇಕಾಯಿತು, ಅದಕ್ಕೇನಾದರೂ ಪರಿಹಾರ ಹುಡುಕುವೆನೆಂದು ಹೇಳುತ್ತಾ ಹುಡುಗನ ಎಲ್ಲಾ ಅವಯವಗಳನ್ನೂ ಆಯ್ದು ಒಟ್ಟುಗೂಡಿಸಿ ಹುಡುಗ ಮಲಗಿದ ಜಾಗದಲ್ಲಿಯೇ ಇಟ್ಟು ಮೊದಲಿನಂತೆಯೇ ಹೊದಿಕೆಯಿಂದ ಮುಚ್ಚುತ್ತಾನೆ.
ಆಮೇಲೆ ಏನೋ ಮಂತ್ರವನ್ನು ಪಠಿಸಿದಂತೆ ಮಾಡಿ ಹುಡುಗನ ಹೆಸರನ್ನು ಕರೆದಾಗ, ಏನೂ ಆಗಿಯೇ ಇಲ್ಲವೆಂಬಂತೆ, ಹುಡುಗ ಹೊದಿಕೆಯೊಳಗಿಂದ ಎದ್ದು ಬರುತ್ತಾನೆ. ಜನಗಳ ಆನಂದಕ್ಕೆ ಪಾರವೇ ಇರುವುದಿಲ್ಲ. ಎಲ್ಲರೂ ಹಬ್ಬವನ್ನಾಚರಿಸುವಷ್ಟು ಸಂತೋಷಪಟ್ಟು ದೊಂಬರಾಟದವನಿಗೆ ಯಥೇಚ್ಚವಾಗಿ ಹಣವನ್ನು ಕೊಡುತ್ತಾ, ಮುಂದಿನ ಆಟಕ್ಕಾಗಿ ಕಾಯುತ್ತಿರುವುದಾಗಿ ಹೇಳಿ ಅಲ್ಲಿಂದ ಚದುರಿ ಮುನ್ನಡೆಯುತ್ತಾರೆ. ಮರದ ಮೇಲಿನಿಂದ ಆಟವನ್ನು ನೋಡುತ್ತಿದ್ದವನಿಗೆ ಎಲ್ಲವೂ ವಿಚಿತ್ರವಾಗಿ ತೋರುತ್ತದೆ ಅವನು ಕಂಡಂತೆ ಹುಡುಗ ಮೊದಲು ಮಲಗಿದ ಮೇಲೆ ಕಡೆಯಲ್ಲಿ ಏಳುವವರೆಗೂ ಮಧ್ಯೆ ಏನೂ ನಡೆಯಲೇ ಇಲ್ಲದೊಂಬರಾಟದವನು ಮಾತನಾಡುತ್ತಲೇ ಇದ್ದನೇ ಹೊರತು ಬೇರೇನೂ ಮಾಡಲಿಲ್ಲ, ಹಗ್ಗ ಹಾವಿನಂತೆ ಮೇಲೇರಲಿಲ್ಲ ಪುಟ್ಟಹುಡುಗ ಅದನ್ನುಹಿಡಿದುಕೊಂಡು ಮೇಲೆ ಹತ್ತಲೇ ಇಲ್ಲ, ದೊಂಬರಾಟದವನೂ ಬಾಲಕನನ್ನುಹಿಂಬಾಲಿಸಲಿಲ್ಲ, ಬಾಲಕನ ಹತ್ಯೆಯನ್ನೂ ಮಾಡಲಿಲ್ಲಎಲ್ಲಾ ಬರಿಯ ಮಾತಿನ ಆಟ, ಮಾತಿನಿಂದಲೇ ಜನರ ಮನಸ್ಸನ್ನು ವಶಪಡಿಸಿಕೊಂಡು ಎಲ್ಲವೂ ನಡೆದ ಹಾಗೆ ಭ್ರಮಿಸುವಂತೆ ಮಾಡಿದ್ದು. ಆದರೆ ಅವನ ಆಟಕ್ಕೆ ಒಂದು ಕ್ಷೇತ್ರದ ಮಿತಿಯಿದ್ದು, ಮರದ ಮೇಲಿನ ಜಾಗ ಆ ಮಿತಿಯನ್ನು ಮೀರಿತ್ತು.
ಆದುದರಿಂದಲೇ ಜನರವಿಸ್ಮಯಗೊಳ್ಳುವಿಕೆ, ಅಳು, ಸಂತೋಷ, ಮುಂತಾದ ಎಲ್ಲಾ ಭಾವನೆಗಳೂ ಅವನಿಗೆ ವಿಚಿತ್ರದಂತೆ ತೋರುತ್ತಿತ್ತು ಏನೂ ನಡೆಯದಿರುವಾಗ ಏಕಿಂತಹ ಭಾವನೆಗಳ ತಾಕಲಾಟ ಎನಿಸಿ ನಿರ್ಲಿಪ್ತನಾಗಿದ್ದ ಸಾಕ್ಷಿ ಸ್ವರೂಪನಾಗಿ!! ವಿಶ್ವದ ಎಲ್ಲಾ ಆಗುಹೋಗುಗಳ ನಡುವೆ, ಎಲ್ಲವನ್ನೂ ನೋಡುತ್ತಲೇ ಏನೂ ಆಗುತ್ತಿಲ್ಲವೆಂಬಂತೆಶಾಂತಿಯುತವಾಗಿರುವವ್ಯಕ್ತಿಗಳಿರಬಹುದೇ? ಈ ಪ್ರಶ್ನೆಯ ಹಿಂದೆಯೇ ಎಲ್ಲ ಜನರನ್ನೂ ಮರುಳು ಮಾಡಿದ ದೊಂಬರಾಟದವನ ತರಹ ವಿಶ್ವದ ಎಲ್ಲರೂಸಾಮೂಹಿಕ ಸನ್ನಿಯಲ್ಲಿದ್ದಾರೆಯೇ? ಇಲ್ಲಿ ದೊಂಬರಾಟದವನು ದೇವರೇ ಅಲ್ಲವೇ!!!... ಇದು ನಿಜವಾದರೆ ಅವನ ಆಟದ ಕ್ಷೇತ್ರದ ಮಿತಿಯೇನು? ಇದಕ್ಕೆ ಉತ್ತರ ಭಗವದ್ಗೀತೆಯಲ್ಲಿದೆ. ಕ್ಷೇತ್ರ ಕ್ಷೇತ್ರಜ್ಞ ಯೋಗದಂತೆ ಕ್ಷೇತ್ರ ಯಾವುದೆಂದು ಸಂಕ್ಷೇಪವಾಗಿ ಹೇಳಬೇಕೆಂದರೆ ದೇಹ, ಮನಸ್ಸು, ಅಹಂಕಾರಬುದ್ಧಿಮುಂತಾದವುಗಳೇ.
ಇಲ್ಲಿಇರುವತನಕಭವಬಂಧನದಲ್ಲಿತೊಳಲಾಡಲೇ ಬೇಕುಅದನ್ನು ಮೀರಿ ಹೋದರೆ ಮಾತ್ರ ಕಾಣಸಿಗುವುದು ಕ್ಷೇತ್ರಜ್ಞ ಅಥವಾ ಭಗವಂತ ಮಾತ್ರ. ಮೀರಿ ಹೋಗಲು ಇರುವ ದಾರಿಗಳೇ ಹಲವಾರು ಯೋಗ ಮಾರ್ಗಗಳುಅದುಸಾಧ್ಯವಾಗುವ ತನಕಜನ್ಮಜನ್ಮಾಂತರಗಳವರೆಗೂ"ಭವ ಬಂಧನ" ತಪ್ಪಿದ್ದಲ್ಲ. ಕನ್ನಡದ ಪ್ರಸಿದ್ಧ ಗೀತೆಯೊಂದರ ಬದಲಾದಸಾಲುಗಳುನೆನಪಿಗೆಬರುತ್ತದಲ್ಲವೇ? "ಬ್ರಹ್ಮಾಂಡವೇಆ ದೇವನಾಡುವ ದೊಂಬರಾಟವಯ್ಯ.
ತ್ಯಾಗ...ಹೀಗೊಂದು_ಕಥೆ
- -ಶ್ರೀ ಅಶೋಕ್ ಕುಮಾರ್
ಒಬ್ಬ ರಾಜನಿಗೆ ತನ್ನ ರಾಜ್ಯದ ತ್ಯಾಗಿ ಮತ್ತು ಯೋಗಿ ವರೇಣ್ಯರೊಬ್ಬರನ್ನು ಸತ್ಕರಿಸಿ ಸನ್ಮಾನಿಸುವ ಆಸೆಯಾಯಿತು.
ತನ್ನ ಮಂತ್ರಿಗ, ಇಂತಹವರೊಬ್ಬರನ್ನು ಗುರುತಿಸಿ ಕರೆತರುವಂತೆ ಆಜ್ಞೆ ಮಾಡಿದನು. ಮಂತ್ರಿಯು ರಾಜ್ಯವನ್ನೆಲ್ಲ ಹುಡುಕಿ ಜಾಲಾಡಿದರೂ ಅರ್ಹ ವ್ಯಕ್ತಿಯು ದೊರೆಯದ ಕಾರಣ ಚಿಂತಾಕ್ರಾಂತನಾಗಿದ್ದನು. ರಾಜಾಜ್ಞೆಯನ್ನು ನೆರವೇರಿಸದಿದ್ದರೆ ಶಿಕ್ಷೆಗೊಳಗಾಗುವುದು ಖಂಡಿತವಾದ್ದರಿಂದ ಏನು ಮಾಡುವುದೆಂದು ತೋಚದೇ ಕುಳಿತಾಗ, ಬಹುರೂಪಿ ಕಳ್ಳನೊಬ್ಬನು ನೆರವಿಗೆ ಬಂದನು. ಮಂತ್ರಿಯು ಅವನ ಬಳಿ ಮಾಡಿಕೊಂಡ ಒಪ್ಪಂದದಂತೆ, ದೊಡ್ಡ ಯೋಗಿಯಾಗಿ ತ್ಯಾಗಿಯಾಗಿ ರಾಜನ ಮುಂದೆ ಯಶಸ್ವಿಯಾಗಿ ನಟಿಸಿದರೆ ಒಂದು ತಟ್ಟೆಯ ತುಂಬಾ ಚಿನ್ನದ ನಾಣ್ಯವನ್ನು ಕೊಡುವುದಾಗಿ ಮಾತು ಕೊಟ್ಟನು.
ಮುಂದೆ ನಿಗದಿ ಪಡಿಸಿದೊಂದು ದಿನ, ಮಂತ್ರಿಯು ರಾಜನ ಬಳಿಸಾರಿ ಮಹಾನ್ ಯೋಗಿ, ತ್ಯಾಗಿಯೊಬ್ಬರನ್ನು ಕರೆತಂದಿದ್ದೇನೆ.ಅವರು ಊರ ಹೊರಗಿನ ಮರದ ಕೆಳಗೆ ಧ್ಯಾನಮಗ್ನರಾಗಿದ್ದಾರೆಂದು ತಿಳಿಸಿದನು. ರಾಜನು ಅತ್ಯಾದರದಿಂದ ಪರಿವಾರದೊಡಗೂಡಿ ತಟ್ಟೆಗಳಲ್ಲಿ ಮುತ್ತು, ರತ್ನ, ನಾಣ್ಯಗಳು, ಹಣ್ಣು ಹಂಪಲಿನ ಕಾಣಿಕೆಯನ್ನು ಅಣಿ ಮಾಡಿಕೊಂಡು ಯೋಗಿಯನ್ನು ಸತ್ಕರಿಸಲು ಹೊರಟನು. ಯೋಗಿಯನ್ನು ಕಂಡೊಡನೆ ಎಲ್ಲರೂ ದೀರ್ಘದಂಡ ಪ್ರಣಾಮ ಮಾಡಿ ತಮ್ಮಂತಹ ಯೋಗಿಯನ್ನು, ತ್ಯಾಗಿಯನ್ನು ಪಡೆದ ನಮ್ಮ ರಾಜ್ಯವೇ ಕೃತಾರ್ಥವಾಗಿದೆ, ತಾವು ನಮ್ಮ ಕಾಣಿಕೆ ಮತ್ತು ಆತಿಥ್ಯವನ್ನು ಸ್ವೀಕರಿಸಬೇಕೆಂದು ಬಿನ್ನ್ವಿಸಿಕೊಂಡರು. ಬಹುರೂಪಿಯು ಎಲ್ಲವನ್ನೂ ತಿರಸ್ಕರಿಸಿದನು.
ಆಗ ರಾಜನು ಯೋಗಿಯ ತ್ಯಾಗಭಾವದಿಂದ ಪ್ರಭಾವಿತನಾಗಿ ತನ್ನ ಅರ್ಧರಾಜ್ಯವನ್ನೇ ಅವನಿಗೆ ಅರ್ಪಿಸುವುದಾಗಿ ಹೇಳಿದಾಗಲೂ ಅದನ್ನು ತಿರಸ್ಕರಿಸಿದಾಗ ಯೋಗಿಯ ಬಗೆಗೆ ಪೂರ್ಣಗೌರವವನ್ನು ತಾಳಿದ ರಾಜ ಮತ್ತವನ ಪರಿವಾರದ ಜನಗಳು "ಸ್ವಾಮಿಗಳೇ ತಾವು ನಮ್ಮ ರಾಜ್ಯದಲ್ಲಿರುವುದೇ ನಮ್ಮ ಭಾಗ್ಯ. ಇಂದಿನಿಂದ ಇಡೀಯ ರಾಜ್ಯವೇ ತಮ್ಮದು, ನಾವೆಲ್ಲಾ ನಿಮ್ಮ ಸೇವಕರು, ತಾವು ಹೇಳಿದ್ದನ್ನು ಶಿರಸಾವಹಿಸಿ ನಡೆಸಿಕೊಡುತ್ತೇವೆ, ತಾವಿಲ್ಲಿ ಹೇಗೆ ಬೇಕಾದರೂ ಇರಬಹುದು" ಎಂದು ಹೇಳಿ ಹಿಂತಿರುಗಿದಾಗಲೂ ಯೋಗಿಯಲ್ಲಿ ಅದೇ ನಿರ್ಲಿಪ್ತ ಭಾವನೆಯೇ ಇತ್ತು.
ಎಲ್ಲರೂ ಹೋದ ನಂತರ ಬಳಿ ಸಾರಿದ ಮಂತ್ರಿಯು ಅವನಿಗೆ ಧನ್ಯವಾದಗಳನ್ನರ್ಪಿಸುತ್ತ ಮೊದಲಿನ ಒಪ್ಪಂದದಂತೆ ಚಿನ್ನದ ನಾಣ್ಯದ ತಟ್ಟೆಯನ್ನು ಕೊಟ್ಟಾಗ, ಅದನ್ನೂ ತಿರಸ್ಕರಿಸಿದ ಯೋಗಿ ವೇಷಧಾರಿ. ಅಯ್ಯಾ ನಿನ್ನ ನಟನೆಯು ಯಶಸ್ವಿಯಾಗಿ ಮುಗಿಯಿತು. ಇನ್ನು ನಿನ್ನ ನಿಜರೂಪಿಗೆ ಹಿಂತಿರುಗೆಂದರೆ, ನಟನೆಯನ್ನೇ ಮುಂದುವರಿಸುತ್ತಿದ್ದಿಯಲ್ಲ , ತೆಗೆದುಕೋ ಎಂದು ತಟ್ಟೆಯನ್ನು ಮುಂದಿಟ್ಟಾಗ,ಮತ್ತೆ ತಿರಸ್ಕರಿಸಿದ ಯೋಗಿ ರೂಪಿಯು ಹೇಳಿದನು, ನನಗೀಗ ತ್ಯಾಗದ ಬೆಲೆಯ ಅರಿವಾಗಿದೆ,ರಾಜ ಕೊಟ್ಟ ಕಾಣಿಕೆಗಳು ಮತ್ತು ರಾಜ್ಯದ ಅರ್ಧಭಾಗವನ್ನೇ ತ್ಯಾಗ ಮಾಡಿದ ನನಗೆ ಇಡಿಯ ರಾಜ್ಯದ ಒಡೆತನ ಮಾತ್ರವಲ್ಲ ರಾಜ ಮತ್ತವನ ಪರಿವಾರದವರೆಲ್ಲಾ ಸೇವಕರಾಗಿ ದೊರೆತಿರುವಾಗ ನಿನ್ನ ಚಿನ್ನದ ನಾಣ್ಯಗಳ ತಟ್ಟೆ ಎಷ್ಟು ಕ್ಷುಲ್ಲಕವೆನ್ನಿಸಿದೆ ಆದುದರಿಂದ ಇಂದಿನಿಂದ ನಿಜವಾದ ಯೋಗಿಯಾಗಿ ತ್ಯಾಗಿಯಾಗಿಯೇ ಬದುಕುತ್ತೇನೆ, ನನಗಿನ್ನು ಏನೂ ಬೇಕಾಗಿಲ್ಲವೆಂದು ಮಂತ್ರಿಯನ್ನು ಕಳುಹಿಸಿದನು ತ್ಯಾಗದ ಇಂತಹ ನಡೆದಿರಬಹುದಾದ ಕಥೆಗಳು ಭಾರತದಲ್ಲಿ ಬಹಳಷ್ಟು ಇವೆ. ಮಹಾವೀರ ಮತ್ತು ಬುದ್ಢನ ರಾಜ್ಯ ತ್ಯಾಗದಿಂದ, ಸತ್ಯ ಸಾಕ್ಷಾತ್ಕಾರದಿಂದ, ಜನರೆಲ್ಲ ಅವರುಗಳ ಅನುಯಾಯಿಗಳಾಗಿ ವಿಶ್ವದ ಮಹಾನ್ ವ್ಯಕ್ತಿಗಳಾಗಿ ಅವರುಗಳ ಹೆಸರು ಇಂದಿಗೂ ಅಜರಾಮರವಾಗಿ ಉಳಿದಿರುವುದು ಎಲ್ಲರಿಗೂ ತಿಳಿದ ವಿಷಯ.
ತ್ಯಾಗಿ ಹಾಗೂ ದೈವೀ ಪುರುಷರ ಗೌರವಕ್ಕಾಗಿ ಚಕ್ರವರ್ತಿಗಳೂ ಶಿರಬಾಗಿದ ಉದಾಹರಣೆಗಳು ಭಾರತದ ಇತಿಹಾಸದುದ್ದಕ್ಕೂ ಕಾಣಸಿಗುತ್ತವೆ. ಇದರಿಂದೆಲ್ಲಾ ತಿಳಿದು ಬರುವುದೇನೆಂದರೆ, ಸಮುದ್ರದ ನೀರನ್ನು ಕಂಡು ಸ್ವಾರ್ಥದಿಂದ, ತುಂಬಿ ತರಹೋದರೆ ಬೊಗಸೆಯ ತುಂಬ ಅಥವಾ ಹೊತ್ತು ತರಬಹುದಾದ ಪಾತ್ರೆಯ ತುಂಬಾ ಮಾತ್ರ ತರಬಹುದಾದರೆ ಏನೂ ಬೇಡವೆಂಬ ನಿರ್ಲಿಪ್ತತೆಯಿಂದ ಸಮುದ್ರದ ಸೌಂದರ್ಯವನ್ನಾಸ್ವಾದಿಸುವ ಮನಸ್ಸಿಗೆ ಇಡಿಯ ಕಡಲು ಮತ್ತದರ ಸೌಂದರ್ಯವೆಲ್ಲ ತನಗಾಗಿಯೇ ಎಂಬ ಭಾವನೆ ಬರಬಹುದಲ್ಲವೇ? ಇದನ್ನೇ ತ್ಯಾಗವೆನ್ನುವುದು. ನಮಗಾಗಿ ಏನೂ ಬೇಡವೆಂದಾಗ ವಿಶ್ವದ ಒಡೆತನವೇ ಅದರ ಒಡೆಯನ ಸಹಿತ ನಮ್ಮದಾಗುವುದು.
ಇದನ್ನೇ ವೇದಗಳಲ್ಲಿ "ತ್ಯಾಗೇನೈಕೆ ಅಮೃತತ್ವ ಮಾನಷುಃ" ಎಂದರೆ ತ್ಯಾಗದಿಂದ ಮಾತ್ರವೇ ಮನುಷ್ಯನಿಗೆ ಅಮೃತತ್ವ ಅಥವಾ ಮೋಕ್ಷ ಅಥವಾ ಮುಕ್ತಿ ಎಂದಿರುವುದು
ಇನ್ನೂ_ನಾನು_ಕಲಿಯುತ್ತಿದ್ದೇನ
- -ಡಾ. ಸಿ.ವಿ. ಮಧುಸೂದನ
ಸುಮಾರು ಐದು ವರ್ಷಗಳ ಹಿಂದೆ ರಾನ್ ಫಿಚ್ (Ron Fitch) ಎಂಬ ಸಂಶೋಧಕರಿಗೆ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯದಿಂದ ಪಿ ಹೆಚ್ ಡಿ ದೊರಕಿತುಇದರಲ್ಲೇನು ವಿಶೇಷ? ಡಾಕ್ಟರೇಟ್ ಒಂದು ಉತ್ಕೃಷ್ಟ ಸಾಧನೆಯಾದರೂ ಈಗಿನ ದಿನಗಳಲ್ಲಿ ಅಷ್ಟೇನೂ ಅಪರೂಪವಲ್ಲ ಅಲ್ಲವೇ?ಎಂದು ನೀವು ಕೇಳಬಹುದುಆದರೆ ಈ ಪದವಿ ದೊರೆಕಿದಾಗ ಶ್ರೀಯುತ.
ಫಿಚ್ ಅವರಿಗೆ ೯೨ ವರ್ಷಗಳಾಗಿದ್ದವು ಎನ್ನುವುದೇ ಅಚ್ಚರಿಯ ಸಂಗತಿ.ಈ ವಿಷಯ ನನ್ನ ಗಮನಕ್ಕೆ ಬಂದಾಗ ನೆನಪಾದದ್ದು ನಾನು ಆರನೇ ತರಗತಿಯ ಪ್ರಾರಂಭದಲ್ಲಿದ್ದಾಗ ನಮ್ಮ ಸಂಸ್ಕೃತ ಗುರುಗಳು ಕಲಿಸಿಕೊಟ್ಟ ಮೊಟ್ಟ ಮೊದಲನೆಯ ಶ್ಲೋಕ ಅಜರಾಮರವತ್ ಪ್ರಾಜ್ಞಃ ವಿದ್ಯಾಮರ್ಥಂ ಚ ಸಾಧಯೇತ್ ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್ಈ ಸುಭಾಷಿತವು ಪಂಚತಂತ್ರದಂತೆಯೇ ನೀತಿಬೋಧಕ ಕಥೆಗಳನ್ನೊಳಗೊಂಡ ಸಂಸ್ಕೃತ ಗ್ರಂಥವಾದ ಹಿತೋಪದೇಶದ ಎರಡನೇ ಶ್ಲೋಕಇದರ ಅರ್ಥ: ಬುದ್ಧಿಶಾಲಿಯಾದವನು ತನಗೆ ಮುಪ್ಪಾಗಲಿ, ಮರಣವಾಗಲಿ ಬರುವುದೇ ಇಲ್ಲ ಎಂದು ಭಾವಿಸಿ ವಿದ್ಯೆಯನ್ನೂ, ಅರ್ಥವನ್ನೂ ಗಳಿಸಬೇಕು.(ಆದರೆ ಅದೇ ವೇಳೆಯಲ್ಲಿ)ಮೃತ್ಯುದೇವತೆ ಆಗಲೇ ತನ್ನನ್ನು ಕೂದಲುಗಳಿಂದ ಹಿಡಿದುಕೊಂಡಿದೆ ಎಂದು ತಿಳಿದು ಧರ್ಮವನ್ನು ಆಚರಿಸಬೇಕು.ಬೇರೆ ಮಾತುಗಳಲ್ಲಿ ಹೇಳಬೇಕೆಂದರೆ ಕಲಿಕೆಗೂ ಗಳಿಕೆಗೂ ಕೊನೆ ಇರಕೂಡದು: ಒಳ್ಳೆಯ ಕೆಲಸ ಮಾಡುವುದರಲ್ಲಿ ವಿಳಂಬವಿರಕೂಡದು ಈ ಸುಭಾಷಿತವನ್ನು ಕಲಿತ ಅನೇಕ ವರ್ಷಗಳ ನಂತರ ನಾನು ಹೆಚ್ಚಿನ ವ್ಯಾಸಂಗಕ್ಕಾಗಿ ಆಸ್ಟ್ರೇಲಿಯಾದ ಮೋನಾಶ್ ವಿಶ್ವವಿದ್ಯಾನಿಲಯವನ್ನು ಸೇರಿದೆನುಆಗ ನನ್ನ ಗಮನಕ್ಕೆ ಬಂದದ್ದು ಆ ವಿಶ್ವವಿದ್ಯಾನಿಲಯದ ಲಾಂಛನದ ಮೇಲೆ ಬರೆದಿದ್ದ ಧ್ಯೇಯ"Ancora Imparo".
ಇದು ಇಟಾಲಿಯನ್ ಭಾಷೆಯಲ್ಲಿದೆ. ಇದರ ಅರ್ಥ " ಇನ್ನೂ ನಾನು ಕಲಿಯುತ್ತಿದ್ದೇನೆ". ಇದನ್ನು ಮೊದಲಿಗೆ ಹೇಳಿದವನು ಮಿಖೆಲಾಂಜಲೋ (Michelangelo). ನಮ್ಮ ಸುಭಾಷಿತವನ್ನು ಇದು ಸಮರ್ಥಿಸುತ್ತದೆ ಎಂದುಕೊಂಡೆಮಿಖೆಲಾಂಜಲೋ೧೪೭೫೧೫೬೪) ಇಟಲಿಯ ಅಪ್ರತಿಮ ಶಿಲ್ಪಿ, ಕಲಾವಿದ ಮತ್ತು ಕವಿರೋಮ್ ನಗರದಿಂದ ಸುತ್ತುವರೆದಿದ್ದರೂ ಸ್ವತಂತ್ರ ರಾಜ್ಯವಾದ ವಟಿಕನ್ ಸಿಟಿಯಲ್ಲಿರುವ ಸಿಸ್ಟಿನ್ ಮಂದಿರದ ಒಳ ಚಾವಣಿಯ ಮೇಲೆ ಅದ್ಭುತವಾದವರ್ಣಮಯ ದೃಶ್ಯವನ್ನು ಚಿತ್ರಿಸಿದವನು ಇವನೇ.
ಅಂಗಾತನಾಗಿ ಮಲಗಿ ಸತತ ಪ್ರಯತ್ನದಿಂದ ಮಾಡಿದ ಈ ಊಹಾತೀತವಾದ ಕಾರ್ಯಕ್ಕೆ ಅವನಿಗೆ ನಾಲ್ಕು ವರ್ಷಗಳು ಬೇಕಾದವು. ಇದಲ್ಲದೇ ಫ್ಲಾರನ್ಸಿನಲ್ಲಿರುವ ಬೃಹದಾಕಾರದ ಡೇವಿಡ್ಡನ ಅಮೃತಶಿಲೆಯ ವಿಗ್ರಹವೂ , ರೋಮಿನಲ್ಲಿರುವ ಕರುಣೆಯ ಪ್ರತೀಕವಾದ ಪಿಯೆಟಾ ಎಂಬ ಪ್ರತಿಮೆಯೂ ಈತನ ಅಸಾಧಾರಣ ಶಿಲ್ಪಕಲಾಕೌಶಲಕ್ಕೆ ಉದಾಹರಣೆಗಳು. "Ancora Imparo"ಎಂದು ತನ್ನೊಂದು ಚಿತ್ರದ ಅಂಚಿನಲ್ಲಿ ಬರೆದಾಗ ಇವನಿಗೆ ೮೭ ವರ್ಷಗಳಾಗಿದ್ದವಂತೆ!ವಿಜ್ಞಾನಿಯಲ್ಲದೆ ಸಾಹಿತ್ಯದ ಅನೇಕ ಪ್ರಾಕಾರದಗ್ರಂಥಗಳನ್ನು ರಚಿಸಿದ ಗಯಠೆ Goethe) (೧೭೪೯೧೮೩೨) ಜರ್ಮನ್ ಮೇಧಾವಿಗಳಲ್ಲಿ ಅಗ್ರಗಣ್ಯನುತನ್ನ ಮೇರು ಕೃತಿಯಾದ ಫಾಸ್ಟ್ (Faust) ಅನ್ನು ಬರೆದು ಮುಗಿಸಿದಾಗಗಯಠೆಯ ವಯಸ್ಸು ಎಂಭತ್ತು ವರ್ಷಗಳು.
ಇನ್ನೊಂದು ಸೋಜಿಗದ ಸಂಗತಿಯೆಂದರೆ ಈ ಕಾವ್ಯವನ್ನು ಬರೆಯುವ ಮುನ್ನ ಕಾಳಿದಾಸನ ಅಭಿಜ್ಞಾನ ಶಾಕುಂತಲವಿಲ್ಸನ್ ಜೋನ್ಸ ನ ಇಂಗ್ಲೀಷ್ ಅನುವಾದ ೧೭೮೯)ವನ್ನು ಓದಿದ್ದನು. ಶಾಕುಂತಲೆಯ ಪಾತ್ರದಿಂದ ಎಷ್ಟು ಪ್ರಭಾವಿತನಾಗಿದ್ದನೆಂದರೆ"ಭೂಮಿಯೂ ಸ್ವರ್ಗವೂ ಶಕುಂತಲಾ ಎಂಬ ಒಂದೇ ಹೆಸರಿನಲ್ಲಿ ಅಡಕವಾಗಿದೆಎಂದು ಉದ್ಗರಿಸಿದನು. ಮಾತ್ರವಲ್ಲ, ಫಾಸ್ಟ್ ನಾಟಕದ ಪ್ರಾರಂಭದಲ್ಲಿ ಸಂಸ್ಕೃತ ನಾಟಕಗಳ ಪ್ರಾರಂಭದಲ್ಲಿರುವಂತೆ ಸೂತ್ರಧಾರನೂ ನಟಿಯೂ ರಂಗದ ಮೇಲೆ ಬಂದು ನಾಟಕದ ಕಥೆಯನ್ನು ಸಭಾಸದರಿಗೆ ಪರಿಚಯ ಮಾಡಿಕೊಡುತ್ತಾರೆಇನ್ನೂ ನಾನು ಕಲಿಯುತ್ತಿದ್ದೇನೆ ಎಂಬುದಕ್ಕೆ ನಿದರ್ಶನಗಳಾಗಿ ಕೊಡಲು ಮಹಾಪುರುಷರೇ ಬೇಕಾಗಿಲ್ಲ. ಕೆಲವು ಸಾಮಾನ್ಯರೂ ಇದರಂತೆ ನಡೆಯುತ್ತಿರುವುದೂ ನಮಗೆಲ್ಲಾ ತಿಳಿದ ವಿಷಯವೇ.
ತಮ್ಮ ಮೆದುಳನ್ನು ಸದಾ ಚುರುಕಾಗಿಟ್ಟುರುವ ಕಾರಣದಿಂದ ಇಂತಹವರಿಗೆ ಅರಳು ಮರಳು ಆಗುವ ಸಂಭವವೂ ಕಡಿಮೆಯಾಗಬಹುದೇನೋ,ಆದರೆ ಉತ್ಸಾಹ ಪೂರ್ಣರಾದ ಇವರ ಜೀವನ ಹೆಚ್ಚು ತೃಪ್ತಿಕರವಾಗಿರುವುದು ಮತ್ತು ಇಂತಹವರು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಹೆಚ್ಚು ಸಾಧಿಸಬಲ್ಲರು ಎಂದು ಧಾರಾಳವಾಗಿ ಹೇಳಬಹುದು.ನಲವತ್ತು ವರ್ಷವಾದಮೇಲೆ ಹೊಸತೇನೂ ಕಲಿಯಲಾಗದುಮತ್ತು ಮುದಿನಾಯಿಗೆ ಹೊಸ ಅಟಗಳನ್ನು ಕಲಿಸಲಾಗದು ಎಂಬ ಹೇಳಿಕೆಗಳಲ್ಲಿಅಷ್ಟೇನೂ ಸತ್ಯವಿಲ್ಲ.
ನಿಧಿಯ ಕಾಣದ ನಿರ್ಭಾಗ್ಯರು
- -ಶ್ರೀ ಅಶೋಕ್ ಕುಮಾರ್

ಅನಾಥ ಬಾಲಕನೊಬ್ಬನಿಗೆ ತಾನುಯಾರೆಂಬ ಅರಿವಿರಲಿಲ್ಲ. ಅಲ್ಪಸುಖಕ್ಕಾಗಿ ಹಾತೊರೆಯುತ್ತಾ, ಕೆಲವೊಮ್ಮೆ ಕಿಂಚಿತ್ ಸುಖಪಡೆಯುತ್ತಾ ಬಹಳಷ್ಟುಸಾರಿ ಬಯಸಿದ್ದನ್ನು ಪಡೆಯದೇ ಮರುಗುತ್ತಾ, ತನ್ನ ಸಂಕಟವನ್ನು ಯಾರೊಡನೆಯೂ ತೋಡಿಕೊಳ್ಳಲಾಗದೇ,ಅನುಭವಿಸಲೂ ಆಗದೇ ಒಂದು ದೊಡ್ಡ ಕೋಟೆಯ ಹೊರಗಿನ ಊರಿನಲ್ಲಿ ಕಾಲ ಕಳೆಯುತ್ತಿದ್ದ.
ಹೀಗೆಯೇ ಒಂದು ದಿನ ಕೋಟೆಯ ಹೊರಗೆ ಇವನ ದೀನ ಸ್ಥಿತಿಯನ್ನು ಕಂಡು ಮರುಗಿದ ದಾರಿಹೋಕನೊಬ್ಬನೊಂದಿಗೆ ತನ್ನ ದುಃಖವನ್ನುತೋಡಿಕೊಳ್ಳುತ್ತಾನೆ. ಆಗದಾರಿಹೋಕನು, "ಮಗೂನೀನಾರೆಂದು ನನಗೆಗೊತ್ತು. ನೀನುಅನಾಥನಲ್ಲ, ನೀನುನಿನ್ನಗುರುತನ್ನು ಕಂಡುಕೊಳ್ಳಬೇಕಾದರೆ ಕೋಟೆಯೊಳಗಿರುವ ಅರಮನೆಯಲ್ಲಿ ರಾಜನನ್ನು ಒಮ್ಮೆ ಕಂಡರೆ ಸಾಕು,ನಿನ್ನತೊಳಲಾಟಕಷ್ಟ, ದುಗುಡಗಳೆಲ್ಲ ಕೊನೆಗಾಣುತ್ತವೆ ಎಂದು ಹೇಳಿ ಅರಮನೆಗೆ ಹೋಗುವಹಾದಿಯ ಪರಿಚಯ ಮಾಡಿಸುತ್ತಾನೆ. ಅರಮನೆಯು ಒಂದರೊಳಗೊಂದರಂತೆ ಇರುವ 5 ಸುತ್ತಿನಕೋಟೆಯ ಮಧ್ಯದಲ್ಲಿರುವುದು.ಒಳಗೆ ಹೋಗುವ ದಾರಿಯು ಬಹಳ ದುರ್ಗಮವಾದದ್ದು,ಏಕಾಗ್ರತೆಯಿಂದ ಕತ್ತಿಯ ಅಂಚಿನ ಮೇಲಿನಂತೆ ನಡೆಯಬೇಕಾಗುತ್ತದೆ. ಎರಡೂಕಡೆ ಪ್ರಪಾತಗಳು, ಮೂರು ಜನ ಸೇನಾಪತಿಗಳು ತಮ್ಮ ಸೈನ್ಯದೊಂದಿಗೆ ಹಗಲಿರುಳೂ ಕೋಟೆಯನ್ನು ಕಾಯುತ್ತಿರುತ್ತಾರೆ ಅವರುಗಳ ಕಣ್ಣು ತಪ್ಪಿಸಿ ಹೋಗಬೇಕಾದರೆ ಅವರುಗಳು ಪಾಳಿಬದಲಿಸುವ ಸಮಯಅಂದರೆ ಸಂಧ್ಯಾಸಮಯ ಅಥವಾಸಂಧಿ ಸಮಯವೇಅತ್ಯಂತ ಸೂಕ್ತ.
ಕೋಟೆಯ ಮೊದಲ 3 ಸುತ್ತಂತೂ ಅತ್ಯಂತ ಕಠಿಣವಾದದ್ದು. ರಾಜನನ್ನೇಕಾಣಬೇಕೆಂಬ ಛಲವುಳ್ಳ, ಇಂದ್ರಿಯಗಳಮೇಲೆ ಹತೋಟಿ ಸಾಧಿಸಬಲ್ಲ ಧೀರನಿಗೆ ಮಾತ್ರ ಸಾಧ್ಯವಾಗುವಂತಹ ಪಯಣವಿದು ಎಂದುಹೇಳಿ ಶುಭವಾಗಲೆಂದು ಹಾರೈಸುತ್ತಾಬೀಳ್ಕೊಂಡ ಕರಣಾಮಯಿ ದಾರಿಹೋಕ.ಅವನಿಂದ ಮಾರ್ಗದರ್ಶನ ಮತ್ತು ಆಶೀರ್ವಾದವನ್ನು ಪಡೆದು, ಸ್ಥಿರ ಸಂಕಲ್ಪದಿಂದ ರಾಜನನ್ನು ಕಂಡೇ ತೀರುತ್ತೇನೆಂದು ಕೋಟೆಯನ್ನು ಪ್ರವೇಶಿಸಿದ ಬಾಲಕ , ಪಡೆದ ಮಾರ್ಗದರ್ಶನದಂತೆ ಸಮಯ ಹೊಂದಿಸಿಕೊಂಡು ಜಾಗರೂಕತೆಯಿಂದ ಕೋಟೆಯ ಸುತ್ತುಗಳನ್ನು ಕ್ರಮಿಸತೊಡಗಿದ. 3 ಸುತ್ತನ್ನು ದಾಟಿ , ನಾಲ್ಕನೇಯ ಸುತ್ತನ್ನು ದಾಟುವಾಗ ಶುಭಲಕ್ಷಣಗಳು ಗೋಚರಿಸತೊಡಗಿದವು . ಐದನೇ ಸುತ್ತನ್ನು ತಲುಪಿದಾಗ ಸಂತೋಷ ಸಡಗರಗಳು ಕಾಣಿಸಿಕೊಳ್ಳುತ್ತಾ ಅರಮನೆಗೆ ಇವನ ಬರವನ್ನೇ ಎದುರು ನೋಡುತ್ತಿರುವಂತೆ ಅತ್ಯಂತ ಸಡಗರದಿಂದ ಸಂತೋಷದಿಂದ ಕರೆದೊಯ್ಯಲಾಯಿತು . ಜನ್ಮ ಜನ್ಮಾಂತರಗಳಿಂದ ಬಿಟ್ಟಿದ್ದ ಮಗನಾದ ಇವನನ್ನು ಕಂಡು ಆನಂದದಿಂದ ಬಿಗಿದಪ್ಪಿಕೊಂಡ ಜಗದೊಡೆಯ ಇವನನ್ನು ಸಿಂಹಾಸನದ ಉತ್ತರಾಧಿಕಾರಿಯಾಗಿಸುವುದು ಮಾತ್ರವಲ್ಲದೇ , ತನ್ನಲ್ಲಿಯೇ ಲೀನ ಮಾಡಿಕೊಂಡು , ಸದಾ ನಿತ್ಯಾನಂದದ ಸ್ಥಿತಿಯಲ್ಲಿರುವಂತೆ ಮಾಡಿದನಂತೆ.ನಿಧಿಯ ಕಾಣದ ನಿರ್ಭಾಗ್ಯರು ಯಾರು?....... ನಾವೇ.
ಪ್ರಾಪಂಚಿಕ ತೊಳಲಾಟಗಳಲ್ಲಿ ಸಿಲುಕಿರುವ ಅನಾಥರು. ಜನ್ಮ ಜನ್ಮಾಂತರಗಳಿಂದ ನಮ್ಮ ಗುರುತನ್ನು ಕಂಡುಕೊಳ್ಳದೇ ದ್ವಂದ್ವಗಳಲ್ಲಿ ಒದ್ದಾಡುತ್ತಿರುವವರು. ನಿಜವಾಗಿ ಇದರಿಂದಾಚೆ ಹೋಗಿ ನಾವಾರೆಂದು ತಿಳಿಯುವ ಹಂಬಲ ಪಕ್ವವಾದಾಗ ಕೋಟೆಯ ಹೊರಗೊಬ್ಬ ದಾರಿಹೋಕ, ಕರುಣಾಮಯಿ, ಮಾರ್ಗದರ್ಶಿಯೊಬ್ಬ ದೊರೆತೇ ದೊರೆಯುತ್ತಾನೆ, ಅವನೇ ಸದ್ಗುರು.ಹೊರ ಕೋಟೆಯೇ ನಮ್ಮ ದೇಹ. ಐದು ಸುತ್ತಿನ ಕೋಟೆಯೆಂದರೆ ನಮ್ಮ ದೇಹದೊಳಗಿನ ಅನ್ನ, ಪ್ರಾಣ, ಮನೋ, ವಿಜ್ಞಾನ, ಮತ್ತು ಆನಂದಮಯ ಕೋಶಗಳು, 3 ಸೇನಾಪತಿಗಳೆಂದರೆ ಸತ್ವ, ರಜಸ್ಸು, ಮತ್ತು ತಮೋಗುಣಗಳು,ಪಾಳಿ ಬದಲಿಸುವ ಸಮಯವೆಂದರೆ ಪ್ರಾತಃ ಮತ್ತು ಸಾಯಂ ಸಂಧ್ಯೆಗಳು . ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಬೀಳುವ ಸಾಧ್ಯತೆ ಎಂದರೆ ವಿಶ್ವಾಮಿತ್ರನ ತಪಸ್ಸನ್ನು ನೆನೆಸಿಕೊಳ್ಳಬಹುದು . ವಿಜ್ಞಾನಮಯ ಕೋಶವನ್ನು ತಲುಪಿದರೆ , ಸಾಗಿ ಬಂದ ಹಾದಿಯ ಫಲಗಳು ಎಂದರೆ ಸಿದ್ಧಿಗಳು ಗೋಚರಿಸಿದರೆ ಆನಂದಮಯ ಕೋಶದಲ್ಲಿ ಭಗವಂತನ ಮಿಲನದ ಆನಂದವು ಕಾಣತೊಡಗುತ್ತವೆ .
ಮಿಲನವಾದ ಮೇಲೆ ಅವನಲ್ಲಿ ಲೀನವಾಗುವಿಕೆ ಎಂದರೆ ಬ್ರಹ್ಮವನ್ನು ತಿಳಿದವನು ಬ್ರಹ್ಮನೇ ಆಗುತ್ತಾನೆ ಎಂಬಂತಹ ಅನೇಕ ಉಪನಿಶತ್ತಿನ ವಾಕ್ಯಗಳನ್ನು ನೆನಪಿಸಿಕೊಳ್ಲಬಹುದು. ಇದನ್ನು ಸಾಧಿಸುವ ತನಕ ತೊಳಲಾಟ ತಪ್ಪದ , ಹೇಡಿಗಳ , ನಿರ್ಭಾಗ್ಯರ ಜೀವನ ನಮ್ಮದು . ಇನ್ನಾದರೂ ಉಪನಿಷತ್ತಿನಲ್ಲಿ ಹೇಳಿರುವಂತಹ ಧೀರರಾಗೋಣ.
ಭಕ್ತಿ , ಭಕ್ತರು ಮತ್ತು ಸಂಸ್ಕೃತಿ
- -ಡಾ. ಸಿ.ವಿ. ಮಧುಸೂದನ
ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಕರ್ಮಯೋಗ ಅಥವ ಜ್ಞಾನಯೋಗಗಳಿಗಿಂತ ಭಕ್ತಿಯೇ ಮಿಗಿಲಾದುದೆಂದು ನಾರದ ಭಕ್ತಿ ಸೂತ್ರಗಳ ೨೫ನೆಯ ಸೂತ್ರವು ತಿಳಿಸುತ್ತದೆ. ಅಲ್ಲದೆ 'ಧ್ಯಾನದಿ ಕೃತಯುಗದಲ್ಲಿ, ಯಜ್ಞಯಾಗದಿ ತ್ರೇತಾಯುಗದಲ್ಲಿ, ಅರ್ಚನೆಯಿಂದ ದ್ವಾಪರದಲ್ಲಿ, ಕೀರ್ತನೆ ಮಾತ್ರದಿ ಕಲಿಯುಗದಲ್ಲಿ ಮುಕ್ತಿಯನೀವ ಪುರಂದರವಿಠಲ' ಎಂದು ಹರಿದಾಸರೇ ಹಾಡಿದ್ದಾರಲ್ಲವೇ?
ನಾರದ ಭಕ್ತಿ ಸೂತ್ರಗಳ ೮೨ನೆಯ ಸೂತ್ರದ ಪ್ರಕಾರ ಭಕ್ತಿಯನ್ನು ಹನ್ನೊಂದು ವಿಧವಾಗಿ ಪ್ರಕಟಿಸಬಹುದು. ಇವು ಯಾವುವೆಂದರೆ:
ಗುಣ ಮಹಾತ್ಮ್ಯಾಸಕ್ತಿ - ಭಗವಂತನ ಮಹಿಮೆಯನ್ನು ಕೇಳಲು ಉತ್ಕಟವಾದ ಇಚ್ಛೆ
ರೂಪಾಸಕ್ತಿ - ಆತನ ದಿವ್ಯ ದರ್ಶನವನ್ನು ಮಾಡುವ ಹಂಬಲ
ಪೂಜಾಸಕ್ತಿ - ಆತನನ್ನು ಸದಾ ಪೂಜಿಸುವ ಇಚ್ಛೆ
ಸ್ಮರಣಾಸಕ್ತಿ - ಭಗವಂತನ ನಾಮಸ್ಮರಣೆ ಮಾಡುವ ಇಚ್ಛೆ
ದಾಸ್ಯಾಸಕ್ತಿ - ಭಗವಂತನನ್ನು ದಾಸನಂತೆ ಸೇವಿಸುವ ಆಸೆ. ಈ ಸಂಬಂಧದಲ್ಲಿ 'ತ್ವದ್ ಭೃತ್ಯ ಭೃತ್ಯ ಪರಿಚಾರಕ ಭೃತ್ಯ ಭೃತ್ಯ ಭೃತ್ಯಸ್ಯ ಭೃತ್ಯ ಇತಿಮಾಮ್ ಸ್ಮರ ಲೋಕನಾಥ'ಎಂದು ರಾಜಾ ಕುಲಶೇಖರರು ತಮ್ಮ ಮುಕುಂದಮಾಲೆಯಲ್ಲಿ ಹಂಬಲಿಸಿದ್ದನ್ನು ನಾವು ನೆನೆಯಬಹುದು.
ಸಖ್ಯಾಸಕ್ತಿ - ಭಗವಂತನನ್ನು (ಅರ್ಜುನನಂತೆ) ಪ್ರಿಯಮಿತ್ರನನ್ನಾಗಿ ಹೊಂದುವ ಆಸೆ.
ಕಾಂತಾಸಕ್ತಿ - ಆಂಡಾಳ್, ಅಕ್ಕಮಹಾದೇವಿ ಮತ್ತು ಮೀರಾ ಇವರುಗಳಂತೆ ಭಗವಂತನನ್ನು ಪತಿಯಾಗಿ ಸ್ವೀಕರಿಸುವ ಆಸೆ.
ವಾತ್ಸಲ್ಯಾಸಕ್ತಿ - ಮಾತಾಪಿತೃಗಳಂತೆ ಆತನಲ್ಲಿ ಪ್ರೀತಿಯನ್ನು ತೋರಿಸುವ ಆಸೆ.
ಆತ್ಮನಿವೇದನಾಸಕ್ತಿ - ತನ್ನ ಆತ್ಮವನ್ನು ಆತನಿಗೆ ಸಮರ್ಪಿಸುವ ಇಚ್ಛೆ.
ತನ್ಮಯಾದಾಸಕ್ತಿ - ಆತನಲ್ಲೇ ಲೀನವಾಗುವ ಆಸಕ್ತಿ
ಪರಮವಿರಹಾಸಕ್ತಿ - ರಾಧೆಯಂತೆ ಒಂದು ಕ್ಷಣವೂ ಆತನಿಂದ ಅಗಲಿಕೆಯನ್ನು ಸಹಿಸಲಾಗದಿರುವಿಕೆ.
ಬಸವಣ್ಣನವರು ಈ ಹನ್ನೊಂದರಲ್ಲಿ ಐದು ವಿಧಗಳನ್ನು ತಮ್ಮ ಒಂದೇ ವಚನದಲ್ಲಿ ನಿರೂಪಿಸಿದರು:
ವಚನದಲಿ ನಾಮಾಮೃತ ತುಂಬಿ, ನಯನದಲಿ ನಿಮ್ಮ ಮೂರುತಿ ತುಂಬಿ
ಮನದಲಿ ನಿಮ್ಮ ನೆನಹು ತುಂಬಿ, ಕಿವಿಯಲಿ ನಿಮ್ಮ ಕೀರುತಿ ತುಂಬಿ
ಕೂಡಲ ಸಂಗಮದೇವಾ, ನಿಮ್ಮ ಚರಣ ಕಮಲದಲಾನು ತುಂಬಿ.
ಸತ್ಯ, ಅಹಿಂಸೆ, ದಯೆ, ಶುಚಿತ್ವ ಮುಂತಾದ ಗುಣಗಳಲಿಲ್ಲದವನು ಎಂದಿಗೂ ನಿಜವಾದ ಭಕ್ತನಾಗಲಾರ (ನಾರದ ಭಕ್ತಿ ಸೂತ್ರ - ೭೮). ಇಂತಹ ಸದ್ಭಕ್ತರು ಭಗವಂತನಷ್ಟೇ ಪೂಜನೀಯರು. ಪರಮ ವೈಷ್ಣವ ಭಕ್ತರಾದ ವಿಪ್ರನಾರಾಯಣ ಆಳ್ವಾರರು ತಮ್ಮನ್ನು ತೊಂಡರಡಿಪ್ಪೊಡಿ (ಭಕ್ತರ ಪಾದಧೂಳಿ) ಎಂದೇ ಕರೆದುಕೊಂಡರು. ಭಕ್ತಿಭಾಂಡಾರಿಗಳಾದರೋ:
ಬ್ರಹ್ಮಪದವಿಯನೊಲ್ಲೆ, ವಿಷ್ಣು ಪದವಿಯನೊಲ್ಲೆ, ರುದ್ರಪದವಿಯನೊಲ್ಲೆ
ಮತ್ತಾವ ಪದವಿಯನೊಲ್ಲೆನಯ್ಯಾ ಕೂಡಲ ಸಂಗಮದೇವ
ನಿಮ್ಮ ಸದ್ಭಕ್ತ್ರರ ಪಾದವನರಿದಿಪ್ಪ ಮಹಾಪದವಿಯನ್ನೇ ಕರುಣಿಸಯ್ಯಾ
ಎಂದು ಬೇಡಿಕೊಂಡರು. ಇದು ಮಾತ್ರವಲ್ಲ - ಭಕ್ತರು ಭಗವಂತನಿಗಿಂತ ಅದೃಷ್ಟವಂತರಂತೆ. ಪುರಂದರದಾಸರು
ನಾನೆ ಸ್ವದೇಶಿ, ನೀನೆ ಪರದೇಶಿ
ನಿನ್ನರಸಿ ಲಕುಮಿ ಎನ್ನ ತಾಯಿ
ನಿನ್ನ ತಾಯ ತೋರೋ, ಪುರಂದರವಿಠಲ
ಎಂದು ಆ ಪರಮಾತ್ಮನಿಗೇ ಸವಾಲು ಮಾಡಿದರು!
ಭಾರತದ ಸಾಹಿತ್ಯಕ್ಕೆ ಭಕ್ತಿಯ ಕೊಡುಗೆ ಅಪಾರವಾದುದು. ಶ್ರೀ ಶಂಕರ ಭಗವತ್ಪಾದರ ಅನೇಕಾನೇಕ ಸ್ತೋತ್ರಗಳು, ವೈಷ್ಣವರ ನಾಲಾಯಿರ ಪ್ರಬಂಧಗಳು, ಶೈವರ ತಿರುಮುರೈಗಳು, ಶಿವಶರಣರ ವಚನಗಳು, ಹರಿದಾಸರ ಪದಗಳು, ತುಕಾರಾಮ, ನಾಮದೇವ ಇವರ ಅಭಂಗಗಳು, ಮೀರಾ, ತುಳಸೀದಾಸ, ಸೂರದಾಸ ಇವರ ಭಜನೆಗಳು, ಅಣ್ಣಮಾಚಾರ್ಯ, ತ್ಯಾಗರಾಜರ ಕೀರ್ತನೆಗಳು ಇವೆಲ್ಲಕ್ಕೂ ಭಕ್ತಿಯೇ ಆಧಾರ. ಕರ್ಣಾಟಕ ಶಾಸ್ತ್ರೀಯ ಸಂಗೀತವನ್ನಂತೂ ಭಕ್ತಿಗೀತೆಗಳಿಲ್ಲದೆ ಊಹಿಸಿವುದೂ ಅಸಾಧ್ಯ! ಶಿಲ್ಪಕಲಾವೈಭವಗಳಿಗೆ ಹೆಸರಾದ ನಮ್ಮ ದೇವಾಲಯಗಳನ್ನು ಕಟ್ಟಿಸಿದವರೂ, ಕಟ್ಟಿದವರೂ ಬಹುಮಟ್ಟಿಗೆ ಭಕ್ತಿಯಿಂದಲೇ ಪ್ರೇರೇಪಿತರಾದವರು - ಕೀರ್ತಿ ಅಥವ ಬೇರೆ ಆಸೆಗಳಿಂದಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ ನಮ್ಮ ದೇಶದ ಸಂಸ್ಕೃತಿ ಶ್ರೀಮಂತವಾಗಿರುವುದು ಭಕ್ತಿಯಿಂದಲೇ. ಈ ಜಗತ್ತಿನ ಬೇರೆ ಯಾವ ದೇಶಕ್ಕೂ ಈ ಮಾತು ಪ್ರಾಯಶಃ ಅನ್ವಯಿಸಲಾರದು
ಆಧ್ಯಾತ್ಮಿಕ ಪರಂಪರೆ
- -ಶ್ರೀ ಅಶೋಕ್ ಕುಮಾರ್
ಕಾಲದ ಕಣಿವೆಯಲ್ಲಿ ಜಾರುತ್ತಾ ಜಾರುತ್ತಾ ಸಾವಿರಾರು ವರ್ಷಗಳ ಹಿಂದೆ ತಲುಪಿ,ವಿಹಂಗಮವಾಗಿ ಭೂಮಿಯನ್ನೊಮ್ಮೆ ಅವಲೋಕಿಸಿದರೆ... "ಎಲ್ಲೆಲ್ಲೂ ದಟ್ಟ ಕಾನನ, ಚಿತ್ರವಿಚಿತ್ರ ಪ್ರಾಣಿ ಪಕ್ಷಿಗಳ ಕೂಗನ್ನು ಬಿಟ್ಟರೆ ಎಲ್ಲೆಲ್ಲೂ ನೀರವತೆ. ಪ್ರಾಣಿಗಳೊಡನೆ ಅವುಗಳಂತೆಯೇ ಬೇಟೆಯಾಡಿಕೊಂಡು ಬದುಕುತ್ತಿರುವ ಎರಡು ಕಾಲಿನ ಮೃಗವಾವುದಿದು? ಮನುಷ್ಯನಂತೆಯೇ ಕಾಣುವನಲ್ಲ!! .... ಆದಿಮಾನವನಿರಬಹುದೇ?...ನಾವು ತಲುಪಿರುವ ಕಾಲದಲ್ಲಿ ನಾಗರೀಕತೆಯ ಸೂರ್ಯೋದಯವೇ ಆಗಿಲ್ಲವಲ್ಲ!! ಹೀಗೇ ಆಲೋಚಿಸುತ್ತಾ ಮುಂದೆ ನೋಡಲು ಕಾಣುವ ಸುಂದರ ಭೂಭಾಗವಾವುದಿದು? ನದಿ, ವನಗಳು, ಮುಗಿಲನ್ನು ಚುಂಬಿಸುವ ಗಿರಿಶೃಂಗ, ನದಿಯ ದಡದಲ್ಲಿ ಕುಟೀರಗಳು, ಸುಗಂಧಿತ ಅಗ್ನಿಧೂಮ, ಕಿವಿಗೊಟ್ಟು ಕೇಳಿದಾಗ ನಿಯಮಬದ್ಧವಾದ ಸ್ವರಗಳ ಏರಿಳಿತಗಳ ಮಂತ್ರೋಚ್ಚಾರಣೆ. ಅದರಲ್ಲೊಂದು "ವಿಶ್ವದೆಲ್ಲೆಡೆಯಿಂದ ಜ್ಞಾನವು ನಮ್ಮೆಡೆಗೆ ಹರಿದು ಬರಲಿ" ಎಂಬರ್ಥ ಬರುವ ಮಂತ್ರ. ಅಂದಿನ ದಿನಗಳಲ್ಲಿ ಸರಳ ಜೀವನ ನಡೆಸುತ್ತಾ ಉನ್ನತ ಧ್ಯೇಯಗಳಿಂದ ತುಂಬಿರುವ ಈ ಅತಿಮಾನವರಾರು? ಇವರುಗಳು ಮಾಡುತ್ತಿರುವುದಾದರೂ ಏನನ್ನು? .......ವಿಶ್ವನಿಯಾಮಕ ಶಕ್ತಿಗಳೊಡನೆ ಸಂಪರ್ಕವನ್ನು ಸಾಧಿಸಿದ್ದ ಇವರನ್ನು, ವಿಶ್ವ ಸೃಷ್ಟಿಯ ರಹಸ್ಯವನ್ನು ಭೇದಿಸಿದ್ದ ಇವರನ್ನು,ಹುಟ್ಟು ಸಾವುಗಳನ್ನೂ ಮೀರಿದ್ದ ಇವರನ್ನು ನಾವು ಋಷಿಗಳೆಂದು ಕರೆಯುತ್ತೇವೆ. ಇವರುಗಳು ನಮ್ಮ ಪೂರ್ವಜರೆನ್ನಲು ಹೆಮ್ಮೆಯೆನಿಸುತ್ತದೆ. ಇವರುಗಳ ಸಾಧನೆಯ ವಿದ್ಯೆಯನ್ನು ನಾವು "ಆಧ್ಯಾತ್ಮ ವಿದ್ಯಾ" ಅಥವಾ "ಅಂತರ್ಮುಖ ವಿದ್ಯಾ" ಎಂದು ಕರೆಯುತ್ತೇವೆ. ಇವರ ತಪೋಭೂಮಿ ಅಥವಾ ಪ್ರಯೋಗಶಾಲೆಯೇ ಆರ್ಯಾವರ್ತ, ಜಂಬೂದ್ವೀಪ, ಭರತಖಂಡ ಅಥವಾ ನಮ್ಮ ಮಾತೃಭೂಮಿ ಭಾರತ.
ಋಷಿಗಳೆಂದರೆ ಆಧ್ಯಾತ್ಮ ವಿಜ್ಞಾನದ ವಿಜ್ಞಾನಿಗಳು ಮತ್ತು ಈ ವಿಜ್ಞಾನಿಗಳ ಸಂತತಿ ನಾವೆಲ್ಲ. ಮುಂದೆ ಪ್ರಪಂಚದ ಇತರೆಡೆಗಳಲ್ಲಿ ನಾಗರೀಕತೆಯ ಮುಂಜಾನೆಯಾಯಿತು. ವಿಶ್ವವೆಲ್ಲ ವಿಸ್ಮಯದಂತೆ ತೋರಿದಾಗ ಅದರ ಒಗಟನ್ನು ಬಿಡಿಸಲು ಬಹಿರ್ಮುಖವಾಗಿ ಅನ್ವೇಷಣೆಗೆ ಹೊರಟ ಫಲವೇ ಭೌತಿಕ ಭವ್ಯತೆಯನ್ನು ಸಾಧಿಸಿದ ನಾಗರೀಕತೆಗಳಾದ ಗ್ರೀಕ್, ರೋಮನ್, ಬೆಬಿಲೋನಿಯಾ ಮುಂತಾದವುಗಳ ಉದಯ. ಈ ನಾಗರೀಕತೆಗಳ ಭೌತಿಕ ಸಮೃದ್ಧಿಗೆ ಬೆರಗಾಗಿ, ಅದೇ ಜೀವನದ ಪರಮೋನ್ನತ ಧ್ಯೇಯವೆಂದುಕೊಂಡು ಇಂದು ಭಾರತವೂ ಸೇರಿದಂತೆ ವಿಶ್ವದ ಎಲ್ಲಾ ದೇಶಗಳು ಇದನ್ನು ಆದರ್ಶವಾಗಿರಿಸಿಕೊಂಡಿದೆ.
ಹೀಗಾಗಿ ನಿಜವಾದ "ಆಧ್ಯಾತ್ಮ ವಿದ್ಯೆ" ಇಂದು ತೀರಾ ಗೌಣವಾದ ಸಂಖ್ಯೆಯಲ್ಲಿರುವ ಕೆಲವೇ ಕೆಲವರದ್ದಾಗಿದೆ. ಈ ಅಂತರ್ಮುಖ ಪಯಣದ ಹಾದಿ ಸುಗಮವೇನಲ್ಲ.ನಮ್ಮ ದೈನಂದಿನ ಜೀವನದಲ್ಲಿ ಕೆಲವಾರು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮಾನಸಿಕ ಸ್ಥಿಮಿತತೆ ತುಂಬಾ ಮುಖ್ಯವಾಗಿ ಬೇಕಾಗಿರುತ್ತದೆ ಮತ್ತು ಹಂತ ಹಂತವಾಗಿ ಸಾಗಿ ಹೋಗಬೇಕಾದ ಸಹನೆ ಮತ್ತು ಗುರಿಯ ಬಗ್ಗೆ ನಿಶ್ಚಲ ನಂಬಿಕೆ ಬಹಳ ಮುಖ್ಯ. ಇದನ್ನೆಲ್ಲಾ ಒಂದು ವಿಜ್ಞಾನ ಶಾಸ್ತ್ರದಂತೆ ವಿಕಾಸಗೊಳಿಸಿ ಗೀತೆ ಮತ್ತು ಉಪನಿಷತ್ತುಗಳಂತಹ ಅನೇಕ ಗ್ರಂಥಗಳಲ್ಲಿ ದಾಖಲಿಸಿಟ್ಟಿದ್ದಾರೆ ನಮ್ಮ ಪೂರ್ವಜರು.ಇನ್ನಾದರೂ ಅಂಧಗೊಳಿಸುವ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೇ ನಮ್ಮ ಆದ ಅಮೂಲ್ಯ ನಿಧಿಯ ಕಡೆಗೆ ಇಣುಕಿ ನೋಡುವ ಪ್ರಯತ್ನವನ್ನಾದರೂ ಮಾಡೋಣವೇ? ... ಇದರಿಂದ ಪ್ರಾಪಂಚಿಕ ಐಷಾರಮದ ಜೀವನವೋ,ಹಣವೋ ದೊರೆಯದಿರಬಹುದು. ಆದರೆ ಪ್ರಾರಂಭಿಕ ಅಭ್ಯಾಸವೇ ಚಿರಂತನ ಶಾಂತಿ,ಸಚ್ಚಿದಾನಂದದೆಡೆಗೆ ಇಡುವ ಮೊದಲ ಹೆಜ್ಜೆಯಾಗಬಹುದು.ಕ್ಷಣಕ್ಷಣಕ್ಕೂ ಅನಿಶ್ಚಿತತೆ,ಅತೃಪ್ತಿ,ಅಶಾಂತಿ,ವ್ಯಾಮೋಹ,ಆಸೆಗಳ ಇಂದಿನ ಬದುಕಿಗೆ ಇದೇ ಅಲ್ಲವೇ ಸಂಜೀವಿನಿ?!!!
ಪ್ರತಿಮೆಗೆ ಜೀವಬಂದಾಗ
- - ಶ್ರೀ ಕನಕಾಪುರ ನಾರಾಯಣ
ಭಕ್ತ ಅಥವಾ ಸಂತನಿಗೆ ನಿರ್ಜೀವ ವಸ್ತುವೆಂಬುದೇ ಇಲ್ಲ.ಎಲ್ಲದರಲ್ಲೂ ಪ್ರಾಣವಿದೆ. ಭಕ್ತನು ಎಲ್ಲದರಲ್ಲೂ ಪ್ರಾಣ ಪ್ರತಿಷ್ಠೆ ಮಾಡುತ್ತಾನೆ .
ನರ್ಸಿಮೆಹ್ತ ಅವರನ್ನು ಒಬ್ಬ ರಾಜನು " ಓ ನರ್ಸಿ ! ನೀನು ಸತ್ಯವಂತನಾಗಿದ್ದು , ಶ್ರೀಕೃಷ್ಣನ ವಿಶ್ವಾಸದ ಭಕ್ತನಾಗಿದ್ದರೆ ಆ ಕೃಷ್ಣನ ವಿಗ್ರಹವು ಚಲಿಸಲಿ " ಎಂದ . ನರ್ಸಿಮೆಹ್ತಾನ ಪೂಜಾಫಲದಿಂದ ವಿಗ್ರಹವು ಚಲಿಸಿತು . ಶಿವಲಿಂಗದ ಮುಂದಿರುವ ಪವಿತ್ರವಾದ ನಂದಿ ತುಳಸೀದಾಸರು ನೀಡಿದ ಆಹಾರವನ್ನು ಸೇವಿಸಿತು.
ಮೀರಾಬಾಯಿಯ ಬಳಿ ಇದ್ದ ಕೃಷ್ಣನ ಪ್ರತಿಮೆ ಅವಳೊಡನೆ ಆಟವಾಡುತ್ತಿತ್ತು , ಅದರಲ್ಲಿ ಸಂಪೂರ್ಣ ಜೀವ , ಪ್ರಾಣವಿತ್ತು . ಅದು ಅವಳಿಗೆ ಗೋಚರವಾಗುತ್ತಿತ್ತು . ಅಪ್ಪಯ್ಯ ದೀಕ್ಷಿತರು ದಕ್ಷಿಣದ ತಿರುಪತಿಗೆ ದೇವಾಲಯದಲ್ಲಿ ದೇವರ ದರ್ಶನಕ್ಕೆ ಹೋದಾಗ ವೈಷ್ಣವರು ಅವರಿಗೆ ಪ್ರವೇಶ ನೀಡಲಿಲ್ಲ .
ಮಾರನೇದಿನ ಬೆಳಿಗ್ಗೆ ಅವೆರೆಲ್ಲರು ದೇವರನ್ನು ಕಂಡಾಗ ವಿಷ್ಣುವು ಶಿವನಾಗಿ ಮಾರ್ಪಟ್ಟಿತ್ತು. ಇದರಿಂದ ಆಶ್ಚರ್ಯದಿಂದ ಪುರೋಹಿತರು ಗಲಿಬಿಲಿಗೊಂಡು ಅಪ್ಪಯ್ಯ ದೀಕ್ಷಿತರ ಕ್ಷಮೆ ಕೋರಿ ಮತ್ತೆ ವಿಷ್ಣು ಪ್ರತಿಮೆ ಆಗುವಂತೆ ಮಾಡಬೇಕೆಂದು ಬೇಡಿದರು . ದಕ್ಷಿಣ ಭಾರತದ ದಕ್ಷಿಣ ಕನ್ನಡದ ಉಡುಪಿಯಲ್ಲಿರುವ ಶ್ರೀಕೃಷ್ಣನ ಮಹಾಭಕ್ತ ಕನಕದಾಸ . ಕನಕದಾಸರು ನೀಚಕುಲದವರೆಂದು , ದೇವಾಲಯದ ಪ್ರವೇಶ ನಿಷೇಧಿಸಿದರು . ಆಗ ಕನಕದಾಸರು ದೇವಾಲಯದ ಹಿಂದೆ ಇದ್ದ ಚಿಕ್ಕ ಕಿಟಕಿಯ ಬಳಿ ಹೋಗಿ ಕುಳಿತರು . ಭಕ್ತಿ ಪರವಶರಾಗಿ ಶ್ರೀಕೃಷ್ಣನ ಕೀರ್ತನೆಗಳನ್ನು ಹಾಡಲು ತೊಡಗಿದರು . ಅಸಂಖ್ಯಾತ ಜನರು ಭಾವದ ಮೋಡಿಗೆ ಒಳಗಾದರು . ಭಕ್ತಿಯ ತೀವ್ರತೆಯಲ್ಲಿ ಮುಳುಗಿ ಹೋದರು . ಆಗ ಶ್ರೀ ಕೃಷ್ಣನು ಹಿಂಭಾಗಕ್ಕೇ ತಿರುಗಿ ಕನಕನಿಗೆ ದರ್ಶನ ನೀಡಿದನು . ಅಲ್ಲಿನ ಶ್ರೋತ್ರಿಯರು ಆಶ್ಚರ್ಯ ಚಕಿತರಾದರು . ಇಂದಿಗೂ ಭಕ್ತರು, ಕನಕದಾಸರು ಶ್ರೀಕೃಷ್ಣನ ಕಂಡ ಕಿಂಡಿಯಿಂದಲೇ ದೇವರ ದರ್ಶನ ಪಡೆಯಬೇಕು.
ವಿಗ್ರಹವೇ ದೇವರ ಪ್ರತಿರೂಪ. ಮಂತ್ರದ ಸಾಕಾರ ರೂಪ .ಅದರಲ್ಲಿ ನೀವು ಕಾಣುವ ಜೀವವೇದೈವ ದೈವದ ಆಕಾರ/ರೂಪದ ಬಗ್ಗೆ ಎಲ್ಲರಲ್ಲೂ ಉದ್ಭವಿಸುವ ಪ್ರಶ್ನೆಯೆಂದರೆ ಯಾವ ಕಲೆಗಾರ ಅಥವಾ ಶಿಲ್ಪಿ ಕಂಡಿದ್ದ ಈ ಸ್ವರೂಪಗಳನ್ನು?ಎಂದು. ಅದಕ್ಕೆ ಉತ್ತರ "ಯುಗಾವತಾರ ರಾಮಕೃಷ್ಣ" ಎಂಬ ಕೃತಿಯಲ್ಲಿ ಕಾಣಬಹುದು.ರಾಮಕೃಷ್ಣರು ಪ್ರತಿಮೆಯ ಪೂಜೆ ವಿರೋಧಿಸಿ ಪ್ರಶ್ನಿಸಿದವರಿಗೆ ಹಣ್ಣುಗಳನ್ನು ತೋರಿಸಿ, "ಏನಿದು? "ಎಂದರು,ಅದಕ್ಕೆ ಉತ್ತರ "ಅಹಾ ಇದೆಂಥಾ ಸುಲಭವಾದ ಪ್ರಶ್ನೆ !ಇವು ಹಣ್ಣುಗಳು" ,ಅದಕ್ಕೆ ರಾಮಕೃಷ್ಣರು"ಅವು ನಿಜವಾದ ಹಣ್ಣುಗಳಲ್ಲ,ಮಣ್ಣಿನಿಂದ ಮಾಡಿ ಬಣ್ಣಬಳೆಯಲಾಗಿದೆ ಆಶ್ಚರ್ಯವೇ?"ಎಂದರು. ಅವು ನಿಜವಾದ ಹಣ್ಣುಗಳ ಹಾಗೇ ಕಾಣುತ್ತಿದ್ದವು."ಹಾಗಿದ್ದರೆ ಇದನ್ನು ನೋಡಿದಾಗ ಹಣ್ಣಿನಹಾಗೇ ಕಾಣಬಲ್ಲದಾದರೆ,ಪ್ರತಿಮೆಯೂ ಹಾಗೇ ಭಗವಂತನ ತದ್ರೂಪ ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ.ಭಕ್ತನು ದೇವಾಲಯದಲ್ಲಿರುವ ದೈವ ಪ್ರತಿಮೆಯನ್ನು ಅದೇ ಭಕ್ತಿ ಗೌರವಗಳಿಂದ ಆರಾಧನಾ ಭಾವದಿಂದ ಕಾಣಬೇಕು .
