Most Viewed
ಸುಗಮಗಾನ ಸಮಾಜ
Sugama Gaana Samaja
ಘಮ ಘಮ ಸುಗಮ
Ghama Ghama Sugama
ಸುಗಮ ಹಾಸ್ಯ
Sugama Hasya
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಭಕ್ತಿ-ಸುಗಮ- ಮುಕ್ತಿ
Bhakti Sugama
ಸುಗಮ ಆರೋಗ್ಯ
Sugama Aarogya
ಕನ್ನಡ ಪಾಠ ಶಾಲೆ
Kannada School
Useful links
- Kannada Calendar
- 2011 Hindu festival dates
- NSW Holiday List 2011-12
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಸಿಡ್ನಿ ದಸರಾ ಬೊಂಬೆ ಹಬ್ಬ 2010 PHOTOS Sydney Dasara 2010
ಲೇಖನ - ಶ್ರೀಮತಿ ಪ್ರತಿಭಾ ಅಶೋಕ್
ಸಿಡ್ನಿ ದಸರಾ ಹಬ್ಬವನ್ನು ಮೊದಲೇ ನಿಶ್ಚಯಿಸಿದಂತೆ ಅಕ್ಟೋಬರ್ ೨೩ ಶನಿವಾರದಂದು ಕಸುಲಾ ಪವರ್ ಹೌಸ್ ಆರ್ಟ್ ಸೆಂಟರ್ ನ ಆಶ್ರಯದಲ್ಲಿ ವಿಭಿನ್ನವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.
ಬೊಂಬೆ,ರಂಗೋಲಿ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ವರ್ಷದ ವಿಷೇಶವಾಗಿತ್ತು.
ಟರ್ಬೈನ್ ಹಾಲ್ ಗ್ಯಾಲರಿಯಲ್ಲಿ ಏರ್ಪಡಿಸಲಾಗಿದ್ದ ಸಾವಿರಕ್ಕೂ ಮೀರಿದ್ದ ಬೊಂಬೆಗಳು ಈ ಬಾರಿ ಹೆಚ್ಚು ಕಲಾತ್ಮಕವಾಗಿಯೂ ಹಾಗೂ ಅಪರೂಪದವಾದವೂ ಆಗಿದ್ದು ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು.ಅದರ ಎದಿರಿನಲ್ಲೇ ಬಿಡಿಸಿದ್ದ ಬಣ್ಣಬಣ್ಣಗಳಿಂದ ರಂಗೋಲಿ ವರ್ಣರಂಜಿತವಾಗಿ ಎದ್ದು ಕಾಣುತ್ತಿತ್ತು. ಬಿಳಿಯ ಬಣ್ಣದ ಹಿನ್ನೆಲೆಯ ಮೆಟ್ಟಿಲುಗಳ ಮುಂದಿನ ಬೊಂಬೆ ಹಾಗೂ ನೆಲದ ಮೇಲಿದ್ದ ರಂಗೋಲಿ ಎರಡಕ್ಕೂ ಮೇಲಿಂದ ಬಿಟ್ಟಿದ್ದ ಸ್ಪಾಟ್ ಲೈಟ್ ಗಳು ಹೆಚ್ಚು ಮೆರಗುಕೊಟ್ಟಿತ್ತು.
ಸಾಯಂಕಾಲ ೫.೩೦ಕ್ಕೆ ಲಿವರ್ಪೂಲ್ ನ ಮೇಯರ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ನಾಂದಿ ಹಾಡಲಾಯಿತು.ಕಾರ್ಯಕ್ರಮದ ಉದ್ಘಾಟನೆಯ ಸಮಾರಂಭಕ್ಕೆ ಸ್ಥಳೀಯ ಎಂಪಿ ಗಳಾದ ಪಾಲ್ ಲಿಂಚ್ ಮತ್ತಿ ಮಾರ್ಕ್ ಫರ್ಗೂಶನ್ ಸಹ ಪಾಲ್ಗೊಂಡಿದ್ದರು.ಪವರ್ ಹೌಸ್ ಡೈರೆಕ್ಟರ್ ಆದ ಸ್ಟೀವ್ ಎಲ್ಲರಿಗೂ ಸ್ವಾಗತ ಬಯಸಿ ಬೊಂಬೆ ಹಾಗೂ ವಸ್ತುಪ್ರದರ್ಶನ ನೋಡಲು ಆಹ್ವಾನವಿತ್ತರು.ಹಾಗೇ ಅವರು ಭಾರದ ಬಗ್ಗೆ ತಮಗಿರುವ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.ನಂತರ ಅರ್ಧ ಘಂಟೆ ಎಲ್ಲರೂ ಹೋಗಿ ತಿರುಗಿ ಬಂದೊಡನೆ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು.
ಕು| ಅಂಕಿತಾಳ ಸುಮಧುರ ಶಾಸ್ತ್ರೀಯ ಗಾಯನದಿಂದ ಆರಂಭಗೊಂಡ ಕಾರ್ಯಕ್ರಮ, ಪುಟ್ಟ ಬಾಲಕಿ ನೈಮಿಷಾ ಮಾಡಿದ ಗಣೇಶಸ್ತುತಿಗೆ ಭರತನಾಟ್ಯ ನೋಡುಅಗರಿಗೆ ಸಂತೋಷ ತಂದುಕೊಟ್ಟಿತು.ಶ್ರೀಮತಿಯರಾದ ದೀಪ್ತಿ ಮತ್ತು ಸ್ನೇಹ ನಿರೂಪಣೆಯ ಕೆಲಸ ವಹಿಸಿಕೊಂಡಿದ್ದರು.
ಇದಾದ ನಂತರ ಸಾಲು ಸಾಲಾಗಿ ಭರತನಾಟ್ಯ ಶೈಲಿಯ ನೃತ್ಯಗಳು ಪ್ರದರ್ಶನಗೊಂಡವು.ಇದೇನು ಭರತನಾಟ್ಯ ಸ್ಪರ್ಧೆಯೇನೋ? ಅನ್ನಿಸುತ್ತಿತ್ತು.ಅವುಗಳ ನಡುವೆ ಕೂಚುಪುಡಿ ನೃತ್ಯಗಳು ನೋಡುವ ಅವಕಾಶ ಒದಗಿತು.
ಗಣೇಶ ವಂದನೆ, ಮಧುರಾಷ್ಟಕ, ಮಹಿಷಾಸುರ ಮರ್ಧಿನಿ ವಸ್ತುವಾಗಿಟ್ಟುಕೊಂಡ ಭರತನಾಟ್ಯ ಪ್ರದರ್ಶನವಾದರೆ, ವಿನಾಯಕ ಮತ್ತು ಪುಷ್ಪಾಂಜಲಿ ವಸ್ತುವಾಗಿಟ್ಟುಕೊಂಡ ಕೂಚುಪುಡಿ ಸೊಗಸಾಗಿ ಮೂಡಿ ಬಂದವು.ನೃತ್ಯ ಮಾಡಿದ ಮಕ್ಕಳ ಪೋಷಕರು ದೊಡ್ಡದೊಡ್ಡ ಕ್ಯಾಮರಾಗಳನ್ನು ಸ್ಟಾಂಡ್ ಮೇಲಿರಿಸಿ ರೆಕಾರ್ಡ್ ಮಾಡುತ್ತಿದ್ದುದು ಟಿವಿ ಅವರೇನಾದರೂ ಬಂದಿದ್ದಾರೇನೋ ಅನ್ನಿಸುವ ಹಾಗಿತ್ತು.
ಪುಟ್ಟ ಮಕ್ಕಳು ಮಾಡಿದ ಕೃಷ್ಣನ ತುಂಟಾಟವನ್ನು ಪ್ರತಿಬಿಂಬಿಸುವ ನೃತ್ಯ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು.
ಈ ವರ್ಷದ ದಸರಾದಲ್ಲಿ ಕನ್ನಡೇತರ ಭಾಷೆಯವರಿಗೂ ಅವಕಾಶ ಕಲ್ಪಿಸಿಕೊಡಲಾಗಿತ್ತು.ಕಾರ್ಯಕ್ರಮದಲ್ಲಿ ಎಲ್ಲ ವಯಸ್ಸಿನವರೂ ಭಾಗವಹಿಸಿದ್ದರು.ಮಕ್ಕಳದ್ದೇ ಹೆಚ್ಚಿನ ಪಾತ್ರವಾಗಿತ್ತು.
ಮತ್ತೊಂದು ವಿಷೇಶವೆಂದರೆ ಎರಡು ಬಾಲಿವುಡ್ ಶೈಲಿಯ ನೃತ್ಯಗಳೂ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತು.ಚಾಂದಿನಿ ಮತ್ತು ರೋಷಿನಿ ಮಾಡಿದ ನೃತ್ಯ ಹಾಗೂ ವೈಷ್ಣವಿ ಮತ್ತು ಸಹ ನರ್ತಕಿಯರಿಂದ ಬಾಲಿವುಡ್ ಮಿಕ್ಸ್ ನೋಡುಗರನ್ನು ಮೂಕರನ್ನಾಗಿಸಿತು ಎಂದರೆ ತಪ್ಪಾಗಲಾರದು.
ಕನ್ನಡ ಶಾಲೆಯ ೨೨ ಮಕ್ಕಳು ಮಾಡಿದ ಕೋಳಾಟದ ನೃತ್ಯ ಆ ದಿನದ ಅತ್ಯಾಕರ್ಷಣೆಯ ಕುಣಿತ ಎನಿಸಿತು.ಹಳ್ಳಿಯ ಶೈಲಿಯ ಸೀರೆ,ಲಂಗ ದಾವಣಿ, ರೇಷ್ಮೆ ಲಂಗ ಕುಪ್ಪಸ ಧರಿಸಿದ್ದ ಮಕ್ಕಳು ತಾಳಬದ್ಧವಾಗಿ ಕುಣಿದು ಅತಿ ಹೆಚ್ಚು ಚಪ್ಪಾಳೆ ಗಿಟ್ಟಿಸಿದರು.ಇನ್ನು ಕ್ಯಾರೆಯೋಕೆ ಗಾಯನಗಳು ಆರು ಇದ್ದರೂ ಆರೇ ಎನಿಸಿತು.ಎಲ್ಲ ಗಾಯಕರೂ ಸೊಗಸಾಗಿ ಹಾಡಿ ಸೈ ಎನಿಸಿಕೊಂಡರು.ಕಾರ್ಯಕ್ರಮದ ಕೊನೆಯಲ್ಲಿ ಕು|ಜಸ್ನಾ ಮತ್ತು ಅವಳ ಸಹೋದರರು ಹಾಡಿದ ಜೈಹೋ ಸಡಗರ/ಉತ್ಸಾಹದ ಅಂತ್ಯಕ್ಕೆ ಕಾರಣವಾಯಿತು. ಕು|ದೀಪ್ತಿ ಮತ್ತು ಸ್ನೇಹ ಇಬ್ಬರೂ ಅಚ್ಚುಕಟ್ಟಾಗಿ, ಸರಳಸುಂದರವಾಗಿ ನಡೆಸಿಕೊಟ್ಟರು.
ಶ್ರೀ ನಾರಾಯಣ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಗಿಯುವಾಗ ವೇಳೆ ೮.೩೦ ಆಗಿತ್ತು.ಕಡೆಗೆ ಅನ್ನಪೂರ್ಣ ಹೋಟೆಲ್ ನ ಊಟದ ಮಳಿಗೆಯಲ್ಲಿ ತಂದಿದ್ದ ಎಲ್ಲಾ ಊಟ ತಿಂಡಿಗಳೂ ಖಾಲಿಯಾಗಿತ್ತು.ಹೊರಾಂಗಣದಲ್ಲಿ ಮರಗಳಿಗೆ ಅಳವಡಿಸಿದ್ದ ಬಣ್ಣ ಬಣ್ಣದ ವಿದ್ಯುತ್ ದೀಪಾಲಾಂಕಾರ ವಿಜೃಂಭಣೆಯಿಂದ ಕಾಣಿಸುತ್ತಿತ್ತು.
ಒಟ್ಟಿನಲ್ಲಿ ಈ ಕಾರ್ಯಕ್ರಮ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಆನಂದಿಸುವ ಸದಾವಕಾಶ ಸಿಡ್ನಿಯ ಸುಮಾರು ನಾನ್ನೂರು ಭಾರತೀಯರಿಗೆ ಮಾತ್ರ ಸಿಕ್ಕಿತು.
ನಿಮ್ಮ ಅನಿಸಿಕೆಗಳನ್ನು
ಈ ವಿಳಾಸಕ್ಕೆ ಈಮೈಲ್ ಮಾಡಿ
contactus@sugamakannada.com