ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 
ಅದ್ದೂರಿ ದಸರಾ ಮತ್ತು ಕನ್ನಡ ರಾಜ್ಯೋತ್ಸವ picture

ಅದ್ದೂರಿ ದಸರಾ ಮತ್ತು ಕನ್ನಡ ರಾಜ್ಯೋತ್ಸವ

ಕಾರ್ಯಕ್ರಮದ ಚಿತ್ರಗಳನ್ನು ನೊಡಲು ಇಲ್ಲಿ ಕ್ಲಿಕ್ ಮಾಡಿ

“ಅಲ್ಲ ಸಿಡ್ನಿನಲ್ಲಿ ಎಲ್ಲಾದರು ಕಾರ್ ಪಾರ್ಕ್ ಮಾಡಿದ್ರೆ $20 ಕೊಡಬೇಕಲ್ಲ” ಅಂತ ಯಾರಾದ್ರು  ಹೇಳಿದರೆ, ಅಬ್ಬಬ್ಬಾ ಅಂದ್ರೆ  “ಒಹ್ ಹೌದೆ, ಅಷ್ಟೊಂದು ದುಬಾರಿನಾ” ಅಂತ ಮೂಗಿನ ಮೇಲೆ ಕೈ ಇಡ್ತಿರೇನೋ. ಇದೆ ಕಥಾ ವಸ್ತು “ರಿಚರ್ಡ್ ಲೂಯಿಸ್” ಕೈಗೆ ಸಿಕ್ಕರೆ ಅದನ್ನ ಗಣೇಶ ಯಾಕೆ ಇಲೀನ ವಾಹನ ಮಾಡ್ಕೊಂಡ ಅಂತ ಹಾಸು ಹೊಕ್ಕಾಗಿ ಹಾಸ್ಯ ಹೆಣೆದು ನೆರೆದ ಜನಕ್ಕೆ ನಗೆ ಔತಣವನ್ನೇ ಬಡಿಸುತ್ತಾರೆ.

ನವೆಂಬರ್ ೯, ಶನಿವಾರ ಸಂಜೆ ಆದದ್ದೂ ಅದೇ. ಸುಗಮ ಕನ್ನಡ ಕೂಟ, ಸಿಡ್ನಿ ಕನ್ನಡ ಶಾಲೆ ಆಶ್ರಯದಲ್ಲಿ ದಸರಾ ಮತ್ತು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ರಿಚರ್ಡ್ ಅವರ ನಗೆ ಹೂರಣ ಬಡಿಸಿತ್ತು. 

ಕಾರ್ಯಕ್ರಮದ ಶುರು ಶ್ರೀ ದಿವಾಕರ್ ಅವರ ಸುಶ್ರಾವ್ಯ ಗಾಯನ ಮತ್ತು ತದನಂತರದ ವೀಣಾವಾದನದಿಂದ ಆಯಿತು. ಆಕ್ಲೆಂಡ್ ನಲ್ಲಿ ನೆಲೆಸಿದ್ದ ಶ್ರೀ ದಿವಾಕರ್ ಅವರು ಇತ್ತೀಚೆಗಷ್ಟೇ ಸಿಡ್ನಿಗೆ ಬಂದು ನೆಲಸಿದ್ದಾರೆ. ದಾಸರ ಪದಗಳ ಅವರ ಹಾಡುಗಾರಿಕೆ ದಸರಾ ಸಂಗೀತದ ವೈಭವ ತರಿಸಿತ್ತು. ತದನಂತರದ ವೀಣಾವಾದನದಲ್ಲಿ ನುಡಿಸಿದ “ಪವಮಾನ” ರಚನೆ. ನೆರೆದ ಜನ ತಲೆ ತೂಗಿಸಿ ಆಲಿಸುವಂತೆ ಮಾಡಿತು. ಸಾಮಾನ್ಯವಾಗಿ ವೀಣೆಯ ತಯಾರಿಕೆಯಲ್ಲಿ ಮೇಣವನ್ನು (ವ್ಯಾಕ್ಸ್) ಉಪಯೋಗಿಸುತ್ತಾರೆ. ದಿವಾಕರ್ ಅವರು ಮೇಣರಹಿತ ವೀಣೆ ಸಂಶೋಧಿಸಿದ್ದಾರೆ. ಇದರ ಬಗ್ಗೆ ಪರಿಚಯವೂ ಅವರಿಂದ ಆಯಿತು. ದಿವಾಕರ್ ಅವರ ಗಾಯನಕ್ಕೆ ಪಕ್ಕವಾದ್ಯದಲ್ಲಿ ಶ್ರೀನಾಥ್ ಅವರು ಸಾಥ್ ಕೊಟ್ಟು ತಮ್ಮ ತಬಲಾ ನೈಪುಣ್ಯವನ್ನು ತೋರಿದರು.

ಆ ಸಂಜೆಯ ಮುಖ್ಯ ಅಂಶವಾಗಿದ್ದ “ಹಾಸ್ಯ ಸಂಜೆ” ರಿಚರ್ಡ್ ಲೂಯಿಸ್ ಎಳ್ಳಷ್ಟೂ ಲೋಪವಿಲ್ಲದಂತೆ ನೆರವೇರಿಸಿಕೊಟ್ಟರು. ವೇದಿಕೆಯ ಮೇಲೆ ರಿಚರ್ಡ್ ತಮ್ಮ ಮಾತಿನಲ್ಲಷ್ಟೇ ಅಲ್ಲದೆ ಆಯಾ ಹಾಸ್ಯಕ್ಕೆ ತಕ್ಕಂತಹ ಹಾವ ಭಾವ ಪ್ರದರ್ಶಿಸುತ್ತ, ಜೊತೆಗೆ ಹಾಡು, ಶಾಯರಿ, ಕವನ ಇತ್ಯಾದಿ ಪೂರಕ ಸಾಮಗ್ರಿ ಒದಗಿಸಿಕೊಂಡು ಎಲ್ಲರನ್ನೂ ನಗೆ ಗಡಲಿನಲ್ಲಿ ಮುಳುಗಿಸಿಯೇ ಬಿಟ್ಟರು. ಸಮಾಜದ ಅಂಕು ಡೊಂಕುಗಳನ್ನು ತಿವಿಯುತ್ತ, ಹಾಸ್ಯಪೂರಿತ ಮಾತಿನಿಂದ ಒಳೊಳ್ಳೆ ಸಂದೇಶವನ್ನೂ ಕೊಟ್ಟರು. ನೆರೆದ ಜನ ನಗು ನಿಲ್ಲಿಸಬಾರದು ಎಂದೇ ಪಣ ತೊಟ್ಟಿದ್ದ ರಿಚರ್ಡ್ ೯೦ ನಿಮಿಷ ಅಲ್ಲಿ ಸೇರಿದ್ದ ಯಾರಿಗೂ ಲೋಕದ ಚಿಂತೆ ಬರದ ಹಾಗೆ ನೋಡಿಕೊಂಡು ಮಾತಿನ ಮೋಡಿಯಲ್ಲಿ ಸೆಳೆದುಕೊಂಡಿದ್ದರು.

ಸ್ಥಳೀಯ ಪ್ರತಿಭೆಗಳು ತಮ್ಮ ಕಲೆಯನ್ನು ಪ್ರಸ್ತುತ ಪಡಿಸಲು ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಹಿರಿ ಕಿರಿಯರೆನ್ನದೆ ಹಲವಾರು ಗಾಯಕ ಗಾಯಕಿಯರು ತಮ್ಮ ಗಾನ ಚಾತುರ್ಯವನ್ನು ಹಾದಿ ಸಭೆಗೆ ತೋರಿ ಕರತಾಡನ ಪಡೆದುಕೊಂಡರು.

ಕನ್ನಡ ಭಾಷೆಗೆ ಸೇವೆ ಸಲ್ಲಿಸುವ ಪ್ರತಿಭೆಗಳಿಗೆ ಪ್ರತಿ ವರ್ಷದ ಪ್ರತೀತಿಯಂತೆ ಈ ವರ್ಷವೂ ಪ್ರಶಸ್ತಿ ಘೋಷಣೆಯಾಯಿತು. ಈ ವರ್ಷ ಹಲವು ಕಲಾ ಚಾತುರ್ಯ ಹೊಂದಿದ ಶ್ರೀ ನಾಗಶೈಲ ಅವರಿಗೆ “ಸಿರಿ ಕನ್ನಡ ಪುತ್ರ” ಬಿರುದಾವಳಿಯನ್ನು ನೀಡಿ ಗೌರವಿಸಲಾಯಿತು.

ದಸರಾ ಹಬ್ಬದ ಪ್ರಯುಕ್ತ ಗೊಂಬೆ ಇಲ್ಲದಿದ್ದರೆ ಆಗುತ್ತದೆಯೇ? ಖಂಡಿತ ಇಲ್ಲ. ಸುಗಮ ಕನ್ನಡ ಕೂಟದ ಆಶ್ರಯದಲ್ಲಿ ಪ್ರತಿ ವರ್ಷದಂತೆ, ಈ ವರ್ಷವೂ ನೂರಾರು ಬಗೆಯ ವಿಧ ವಿಧವಾದ ಅಪರೂಪದ ಗೊಂಬೆಗಳನ್ನು ಒಪ್ಪವಾಗಿ ಜೋಡಿಸಿಟ್ಟಿದ್ದರು. ಇಲ್ಲೇ ಬೆಳೆಯುವ ಮಕ್ಕಳಿಗೆ, ನಮ್ಮ ಸಂಸ್ಕೃತಿಯ “ಬೊಂಬೆ ಸಾಲನ್ನು” ತೋರಿಸಲು ಇದಕ್ಕಿಂತ ಒಳ್ಳೆ ಅವಕಾಶ ಉಂಟೆ. ಬೊಂಬೆಗಳನ್ನು ಜೋಪಾನವಾಗಿ ನೋಡಿಕೊಂಡು ಪ್ರತಿ ವರ್ಷ ಪ್ರದರ್ಶಿಸುವ ಈ ಪರಿಪಾಠ ಮೆಚ್ಚಲೇಬೇಕು.

ಸುಗಮ ಕನ್ನಡದ ವೆಬ್ಬ್ ಸೈಟ್ ನೋಡಿಕೊಳ್ಳುವ ವಿನಯ್ ನಾರಾಯಣ್, ಕನ್ನಡ ಶಾಲೆಯ ನಾಗೇಂದ್ರ ಅನಂತಮೂರ್ತಿ, ಹೊರನಾಡ ಚಿಲುಮೆ ಇ-ಮಾಸಪತ್ರಿಕೆಯ ಸಂಪಾದಕರಾದ ಬದರಿ ನಾರಾಯಣ ಅವರನ್ನು ಸನ್ಮಾನಿಸಲಾಯಿತು.

ನಗು ನಗುತ್ತಾ ಕಾರ್ಯಕ್ರಮದ ನಿರೂಪಣೆ ಮಾಡಿದ ಪೂರ್ಣಿಮಾ ಭಟ್, ಒಳ್ಳೆಯ ನಿರೂಪಕಿಯೆಂದು ಗುರುತಿಸಲ್ಪಟ್ಟರು.

ಸಿಡ್ನಿ ಕನ್ನಡ ಶಾಲೆ, ಸುಗಮ ಕನ್ನಡ ಕೂಟ ಮುಂತಾದ ಕನ್ನಡ ಪೋಷಣೆಯ ಸಂಸ್ಥೆಗಳ ರೂವಾರಿಯಾದ ಕನಕಾಪುರ ನಾರಾಯಣ ಅವರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತ ಆ ಸಂಜೆಯ ಕಾರ್ಯಕ್ರಮ ಮುಕ್ತಾಯಗೊಳಿಸಿದರು

ಬಂದಿದ್ದ ಜನಸಾಗರಕ್ಕೆ ಕಾರ್ಯಕ್ರಮದ ನಂತರ ರುಚಿಕರವಾದ ಸಜ್ಜಿಗೆ, ಬಿಸಿಬೇಳೆ ಭಾತ್, ಮೊಸರನ್ನ ವಿತರಿಸಲಾಯಿತು.

ಎಲ್ಲರು ನಗು ನಗುತ್ತ ತಮ್ಮ ಮನೆಗೆ ಹೋಗುವಾಗ ಕಾರ್ಯಕ್ರಮದ ಸಾರ್ಥಕ್ಯತೆ ಎದ್ದು ಕಾಣುತ್ತಿತ್ತು.

 

ಕಾರ್ಯಕ್ರಮಗಳ ಪಟ್ಟಿಗೆ ಹಿಂತಿರುಗು


ಇತ್ತೀಚಿನ ಕಾರ್ಯಕ್ರಮಗಳು

pictureಸಿಡ್ನಿ ನಾಟಕೋತ್ಸವ
pictureಸಿಡ್ನಿ ದಸರಾ/ರಾಜ್ಯೋತ್ಸವ ಹಾಡು ಹಸೆ ಹಬ್ಬ
pictureಕನ್ನಡ ಸಾಹಿತ್ಯ ಸಂಗಮ
pictureಸಿಡ್ನಿ ಯುಗಾದಿ ಹಬ್ಬ 2015
pictureಸಿಡ್ನಿ ದಸರಾ ಬೊಂಬೆ ಹಬ್ಬ ಮತ್ತು ಸಂಗೀತ ಸಂಜೆ
pictureಕನ್ನಡ ಕ್ಯಾರೆಯೋಕೆ ಸಂಜೆ ಮತ್ತು ಶ್ರೀಯುತ ಸುದರ್ಶನ್ ಅವರಿಗೆ ಸನ್ಮಾನ
pictureಸಿಡ್ನಿ ಯುಗಾದಿ ಆಚರಣೆ 2014
pictureಅದ್ದೂರಿ ದಸರಾ ಮತ್ತು ಕನ್ನಡ ರಾಜ್ಯೋತ್ಸವ
pictureಅದ್ದೂರಿ ದಸರಾ ಮತ್ತು ಕನ್ನಡ ರಾಜ್ಯೋತ್ಸವ
pictureಪಿ ಬಿ ಶ್ರೀನಿವಾಸ್ ಶ್ರದ್ಧಾಂಜಲಿ
 
 

© ಹಕ್ಕುಸ್ವಾಮ್ಯ 2008 - 2022