ಸುಗಮ ಸಾಹಿತ್ಯ                                                                  

         ಸುಗಮ ಸಾಹಿತ್ಯ ಬಳಗವು ಸಿಡ್ನಿಯ ಸಾಹಿತ್ಯಾಸಕ್ತರ ಕ್ರಿಯಾತ್ಮಕ ವೇದಿಕೆ.ಇಲ್ಲಿ ನಮ್ಮ ವಿಪುಲ ಸಾಹಿತ್ಯ, ಪರಂಪರೆಯ ವಿಚಾರ-ವಿಮರ್ಷೆಯಲ್ಲದೆ, ಸ್ಠಳೀಯ ಸೃಜನಶೀಲ ಪ್ರತಿಭೆಗಳ ರಚನೆಗಳ ಪ್ರಕಟಣೆಯೂ ಉಂಟು.ಹಿರಿಯರು ಕಿರಿಯರು ಮಹಿಳೆಯರು ಮಕ್ಕಳು ಎಲ್ಲರಿಗೂ ಉತ್ತಮ ಅವಕಾಶ. ನಮ್ಮ ಕೆಲವು ಸ್ಥಳೀಯ ಲೇಖನ/ಕೃತಿಗಳು ಈ ಸಂಚಿಕೆಯಲ್ಲಿವೆ.

ಸ್ಥಳೀಯರ ಕಥೆ, ಕವನ, ಲೇಖನಗಳು


                                              
-ಶ್ರೀ. ಗುರಪ್ಪ ಹರೀಶ;                  - ಶ್ರೀಮತಿ.ಅನು ಶಿವರಾಂ             - ಶ್ರೀ.ನಾಗಶೈಲ ಕುಮಾರ
ಹೆಣ್ಣೆಂದರೇನು ?                         ಶ್ರುತಿ                                     ಜಂಬೂ ಸವಾರಿ
ಕವಿಯಾಗುವಾಸೆ                         ದಿಟ್ಟೆ                                     ನನ್ನ ಚಿನ್ನ
                                           ಸೆರಗು
                                           ಲಾಲಿ ಹಾಡು

                                              
- ಡಾ. ಸಿ.ವಿ.ಮಧುಸೂದನ                                      - ಕನಕಾಪುರ ನಾರಾಯಣ
ಭಾಸಕವಿ ಮತ್ತು ಊರುಭಂಗ                                    100 ಸಣ್ಣ ಕಥೆಗಳು
ಆರ್ಯಭಟ ಮತ್ತು ಆರ್ಯಭಟೀಯ
ಫಾ ಹಿಯೆನ್
ಸುಭಾಷಿತಗಳು ಮತ್ತು ಹಾಸ್ಯ


ಭಾಸಕವಿ ಮತ್ತು ಊರುಭಂಗ


  • ಲೇಖನ - ಡಾ.ಸಿ.ವಿ.ಮಧುಸೂದನ



                ಪ್ರಾಚೀನ ಸಂಸ್ಕೃತ ನಾಟಕಕಾರರಲ್ಲಿ ಭಾಸನು ಅಗ್ರಗಣ್ಯ. ಈತನು ಕಾಳಿದಾಸನಿಗಿಂತಲೂ ಹಿಂದಿನವನೆಂದು ಕಾಳಿದಾಸನ ಮಾಲವಿಕಾಗ್ನಿಮಿತ್ರ ನಾಟಕದ ಪ್ರಸ್ತಾವನೆಯಿಂದ ತಿಳಿದು ಬರುತ್ತದೆ. ಆ ಪ್ರಸ್ತಾವನೆಯ ಒಂದು ಭಾಗ ಈ ರೀತಿ ಇದೆ:
ಸೂತ್ರಧಾರ: ಈ ವಸಂತೋತ್ಸವಕ್ಕೆ, ಕಾಳಿದಾಸನು ರಚಿಸಿರುವ ‘ಮಾಲವಿಕಾಗ್ನಿಮಿತ್ರ’ ಎಂಬ ನಾಟಕವನ್ನು ಪ್ರದರ್ಶಿಸಬೇಕೇಂದು ಪ್ರೇಕ್ಷಕರು ಕೇಳಿದ್ದಾರೆ. ಆದ್ದರಿಂದ ಸಂಗೀತವು ಪ್ರಾರಂಭವಾಗಲಿ.
ನಟ:, ಇಲ್ಲ, ಇಲ್ಲ. ಅಪಾರ ಕೀರ್ತಿವಂತರಾದ ಭಾಸ, ಸೌಮಿಲ್ಲ, ಕವಿಪುತ್ರ ಮುಂತಾದವರ ಕೃತಿಗಳಿರುವಾಗ, ಈ ವರ್ತಮಾನ ಕಾಲದ ಕಾಳಿದಾಸನ ರಚನೆಗೆ ಏಕಿಷ್ಟು ಗೌರವ?

        ಕಾಳಿದಾಸನು ಸುಮಾರು ನಾಲ್ಕನೆಯ ಶತಮಾನದಲ್ಲಿದ್ದವನು. ಈ ಮೇಲಿನ ಕಾರಣದಿಂದಲೂ, ಭಾಸನ ನಾಟಕಗಳನ್ನು ವಿಸ್ತರಿಸಿ ಇತರರು ಇನ್ನೂ ದೀರ್ಘವಾದ ನಾಟಕಗಳನ್ನು ಬರೆದಿರುವುದರಿಂದಲೂ ಮತ್ತಿತರ ಪ್ರಮಾಣಗಳಿಂದಲೂ ಭಾಸನ ಕಾಲ ಸುಮಾರು ಒಂದು ಅಥವ ಎರಡನೆಯ ಶತಮಾನವೆಂದು ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಭಾಷಾಜ್ಞಾನಿಗಳು ನಿರ್ಧರಿಸಿದ್ದಾರೆ. ಎಂದರೆ ಈ ಕವಿ ಸುಮಾರು ಎರಡು ಸಾವಿರ ವರ್ಷಗಳಷ್ಟು ಹಿಂದಿನವನು.
ಕಾಳಿದಾಸನಲ್ಲದೆ, ಬಾಣನು (ಆರನೆಯ ಶತಮಾನ) ತನ್ನ ‘ಹರ್ಷಚರಿತೆ’ಯಲ್ಲಿ ಭಾಸನನ್ನು ಪ್ರಶಂಸಿಸಿದ್ದಾನೆ. ಜಯದೇವನು (ಹನ್ನೆರಡನೆಯ ಶತಮಾನ) ತನ್ನ ‘ಪ್ರಸನ್ನರಾಘವ’ ಎಂಬ ನಾಟಕದಲ್ಲಿ ಈತನನ್ನು ‘ಕವಿಕುಲಗುರು’ ಎಂದು ಕರೆದಿದ್ದಾನೆ. ಭಾಸನು ಎಷ್ಟೇ ಪ್ರಸಿದ್ಧನಾಗಿದ್ದರೂ ಅವನ ಕೃತಿಗಳೆಲ್ಲವೂ ಕಾಲಾಂತರದಲ್ಲಿ ಕಣ್ಮರೆಯಾಗಿ, ಇಪ್ಪತ್ತನೆಯ ಶತಮಾನದ ಆರಂಭವಾಗುವ ವೇಳೆಗೆ ಅವನ ಒಂದು ನಾಟಕವೂ ಲಭ್ಯವಿಲ್ಲದಂತಾಗಿತ್ತು. ಹೀಗಿರುವಾಗ, ೧೯೧೨ ರಲ್ಲಿ, ತಿರುವನಂತಪುರದಲ್ಲಿ ತಿರುವಾಂಕೂರು ಪ್ರಾಚ್ಯ ಹಸ್ತಪ್ರತಿಗಳ ಲೈಬ್ರರಿಯ ಮೇಲ್ವಿಚಾರಕರಾಗಿದ್ದ ಮಹಾಮಹೋಪಾಧ್ಯಾಯ ಶ್ರೀ ಗಣಪತಿಶಾಸ್ತ್ರಿಗಳು ಅವರಿಗೆ ದೊರಕಿದ, ಮಲೆಯಾಳಮ್ ಅಕ್ಷರಗಳಲ್ಲಿ ಬರೆದಿದ್ದ, ಭಾಸನ ಹದಿಮೂರು ನಾಟಕಗಳನ್ನು ಪರಿಷ್ಕರಿಸಿ ಸಂಸ್ಕೃತದಲ್ಲಿ ಪ್ರಕಟಿಸಿದರು. ಈ ಪ್ರಕಟಣೆ ಭಾರತದ ಪ್ರಾಚೀನ ಸಾಹಿತ್ಯದ ಇತಿಹಾಸದಲ್ಲಿ ಒಂದು ಮೈಲುಗಲ್ಲು ಎಂಬುದರಲ್ಲಿ ಸಂಶಯವಿಲ್ಲ.
ಭಾಸನ ಹದಿಮೂರು ನಾಟಕಗಳನ್ನು ಈ ವಿಧವಾಗಿ ವಿಭಾಗಿಸಬಹುದು:
• ಮಾಹಾಭಾರತದ ಘಟನೆಗಳನ್ನೂ, ಪಾತ್ರಗಳನ್ನೂ ಉಪಯೋಗಿಸಿ ಬರೆದವು ಆರು: ಮಧ್ಯಮವ್ಯಾಯೋಗ, ದೂತ ಘಟೋತ್ಕಚ, ದೂತವಾಕ್ಯ, ಕರ್ಣಭಾರ, ಪಂಚರಾತ್ರ ಮತ್ತು ಊರುಭಂಗ.
• ರಾಮಾಯಣದ ನಾಟಕಗಳು ಎರಡು: ಪ್ರತಿಮಾ ನಾಟಕ ಮತ್ತು ಅಭಿಷೇಕ
• ಹರಿವಂಶದಲ್ಲಿನ ಕೃಷ್ಣನ ಕಥೆಯನ್ನು ಅವಲಂಬಿಸಿ ಬರೆದ ಬಾಲಚರಿತ
• ಆಗಿನ ಕಾಲದ ಚರಿತ್ರೆ ಮತ್ತು ಪ್ರಚಲಿತ ಜನಪದ ಕಥೆಗಳ ನಾಟಕೀಕರಣಗಳು ನಾಲ್ಕು: ಸ್ವಪ್ನವಾಸವದತ್ತ, ಪ್ರತಿಜ್ಞಾಯೌಗಂಧರಾಯಣ, ಅವಿಮಾರಕ ಮತ್ತು ಚಾರುದತ್ತ.
        ಮೇಲಿನ ಎಂಟು ನಾಟಕಗಳು ಮಹಾಭಾರತ ಮತ್ತು ರಾಮಾಯಣ ಗಳನ್ನು ಅವಲಂಬಿಸಿದ್ದರೂ, ಭಾಸನು ತನ್ನ ನಾಟಕಗಳಲ್ಲಿ ಅನೇಕ ಮಾರ್ಪಾಟುಗಳನ್ನು ಮಾಡಿದ್ದಾನೆ. ಅಲ್ಲದೆ ಹೊಸ ಪಾತ್ರಗಳನ್ನೂ ಸೃಷ್ಟಿಸಿದ್ದಾನೆ. ಊರುಭಂಗವು ಅವನ ರಚನಾ ಕೌಶಲ್ಯಕ್ಕೆ ಒಂದು ಉತ್ತಮ ಉದಾಹರಣೆ.
ಸಂಸ್ಕೃತದಲ್ಲಿ ‘ಊರು’ ಎಂದರೆ ತೊಡೆ. ಊರುಭಂಗವೆಂದರೆ ಮುರಿದುಬಿದ್ದ (ಭಗ್ನವಾದ) ತೊಡೆಗಳು. ಹೆಸರೇ ಸೂಚಿಸುವಂತೆ ಈ ನಾಟಕ ಮಹಾಭಾರತದ ಗದಾಯುದ್ಧ ಮತ್ತು ಅನಂತರದ ದುರ್ಯೋಧನನ ಅವಸಾನವನ್ನು ಕುರಿತದ್ದು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಕೇಶವನ ಸಂಕೇತವನ್ನು ಅರ್ಥ ಮಾಡಿಕೊಂಡು ಭೀಮಸೇನನು, ಅದು ಅಧರ್ಮವಾಗಿದ್ದರೂ ಕೂಡ, ದುರ್ಯೋಧನನ ತೊಡೆಗಳಿಗೆ ಗದೆಯಿಂದ ಹೊಡೆದು ಅವನನ್ನು ಬೀಳಿಸಿದ ಕ್ಷಣವೇ, ದುರ್ಯೋಧನನ ಅಹಂಕಾರ, ದ್ವೇಷ ಮತ್ತು ಸೇಡು ತೀರಿಸುವ ಹಟ ಎಲ್ಲವೂ ಮಾಯವಾಗಿ ಅವನು ಉದಾರ ಮನಸ್ಸಿವನಾಗುತ್ತಾನೆ. ಈ ಬಗೆಯ ಮಾರ್ಪಾಟು ಮೂಲ ಭಾರತದಲ್ಲಿ ಕಂಡು ಬರುವುದಿಲ್ಲ. ಈ ಬಗೆಯ ಪರಿವರ್ತನೆ ಆದದ್ದರಿಂದಲೇ ಅವನು ಭೀಮನ ದ್ರೋಹದಿಂದ ಕುಪಿತನಾಗಿ ಭೀಮನನ್ನೂ, ಪಾಂಡವರನ್ನೂ ಕೊಲ್ಲಲು ಹೊರಟಿದ್ದ ಬಲರಾಮನನ್ನು ತಡೆಯುತ್ತಾನೆ. ವ್ಯಾಸರ ಮಹಾಭಾರತದಲ್ಲಿ ಬಲರಾಮನನ್ನು ತಡೆದವನು ದುರ್ಯೋಧನನಲ್ಲ, ಕೃಷ್ಣ. ಈ ನಾಟಕದಲ್ಲಿ ಅನಂತರ ಬರುವ ದುರ್ಜಯ (ಇವನು ದುರ್ಯೋಧನನ ಮಗ; ನಾಲ್ಕೈದು ವರ್ಷದ ಹಸುಳೆ; ಇವನ ಪಾತ್ರವೇ ಮಹಾಭಾರತದಲ್ಲಿಲ್ಲ) ಮತ್ತು ದುರ್ಯೋಧನರ ರಣಭೂಮಿಯಲ್ಲಿ ಸಂಧಿಸುವಿಕೆ ಮತ್ತು ಸಂವಾದ ಬಹಳ ಹೃದಯಸ್ಪರ್ಶಿಯಾಗಿದೆ. ಆ ಭಾಗವನ್ನು ಮಾತ್ರ ಇಲ್ಲಿ ಭಾಷಾಂತರ ಮಾಡಲಾಗಿದೆ:
ಕುರುಡನಾದ ಧೃತರಾಷ್ಟ್ರ, ಕಣ್ಣಿದ್ದೂ ಅಂಧತ್ವವನ್ನು ಸ್ವೀಕರಿಸಿರುವ ಗಾಂಧಾರಿ ಮತ್ತು ಅವರ ಹಿಂದೆ ದುರ್ಯೋಧನನ ರಾಣಿಯರಾದ ಮಾಲವಿ ಮತ್ತು ಪೌರವಿಯರು ದುರ್ಯೋಧನನ್ನು ಅರಸುತ್ತ ಕುರುಕ್ಷೇತ್ರದಲ್ಲಿ ನಡೆದು ಬರುತ್ತಿದ್ದಾರೆ. ಇದು ಹೇಗೆ? ಈ ಸಂಭಾಷಣೆಯನ್ನು ನೋಡಿ.
ಧೃತರಾಷ್ಟ್ರ: ನನ್ನನ್ನು ನಡೆಸುಕೊಂಡು ಬರುತ್ತಿರುವವರು ಯಾರು - ನನ್ನ ಧೋತ್ರದ ಸೆರಗನ್ನು ಎಳೆಯುತ್ತ? ದುರ್ಜಯ: ತಾತ, ನಾನು ದುರ್ಜಯ.
ಧೃತರಾಷ್ಟ್ರ: ಹೋಗು ಮಗು, ನಿನ್ನ ತಂದೆಯನ್ನು ಹುಡುಕು.
ದುರ್ಜಯ: ಆದರೆ ನನಗೆ ದಣಿವಾಗಿದೆ, ಅಜ್ಜ.
ಧೃತರಾಷ್ಟ್ರ: ಹೋಗಿ ನಿನ್ನ ತಂದೆಯ ಮಡಿಲಲ್ಲಿ ವಿಶ್ರಮಿಸಿಕೊ.
ದುರ್ಜಯ: ಇದೋ, ಹೊರಟೆ (ಹೋಗುತ್ತ) ಅಪ್ಪಾ, ನೀನೆಲ್ಲಿರುವೆ?
ದುರ್ಯೋಧನ: ಅಯ್ಯೋ ಈ ಕಂದನೂ ಬಂದನು. ಯಾವ ಸನ್ನಿವೇಶದಲ್ಲಾದರೂ ಇರುವ ಮಗನ ಮೇಲಿನ ಪ್ರೇಮ ಈಗ ನನ್ನ ಹೃದಯವನ್ನು ಸುಡುತ್ತಿದೆ. ದುರ್ಜಯನು ಎಂದೂ ದುಃಖವನ್ನು ಬಲ್ಲವನಲ್ಲ, ನನ್ನ ಮಡಿಲಿನ ಸುಖವನ್ನೇ ಕಂಡವನು. ಈ ದೆಸೆಯಲ್ಲಿ ನನ್ನನ್ನು ನೋಡಿ ಏನು ಹೇಳುವನು?
ದುರ್ಜಯ: ಮಹಾರಾಜನು ಇಲ್ಲಿರುವನು. ನೆಲದ ಮೇಲೆ ಕುಳಿತಿದ್ದಾನೆ.
ದುರ್ಯೋಧನ: ಮಗೂ, ಇಲ್ಲಿಗೇಕೆ ಬಂದೆ?
ದುರ್ಜಯ: ನೀನು ಹೋಗಿ ಬಹಳ ಸಮಯವಾಗಿತ್ತು, ಅದಕ್ಕೇ ಬಂದೆ.
ದುರ್ಯೋಧನ: (ಸ್ವಗತ) ಈ ಅವಸ್ಥೆಯಲ್ಲೂ ಪುತ್ರಸ್ನೇಹವು ನನ್ನ ಹೃದಯವನ್ನು ದಹಿಸುತ್ತಿದೆ.
ದುರ್ಜಯ: ನಾನು ನಿನ್ನ ತೊಡೆಯಲ್ಲಿ ಕುಳಿತುಕೊಳ್ಳುತ್ತೇನೆ (ಹಾಗೆಯೇ ಮಾಡಲು ಹೋಗುತ್ತಾನೆ)
ದುರ್ಯೋಧನ: (ಅವನನ್ನು ತಡೆಯುತ್ತ) ದುರ್ಜಯ! ದುರ್ಜಯ! ಹಾ ಕಷ್ಟ! ಯಾವನು ನನ್ನ ಎದೆಯಲ್ಲಿ ಪ್ರೀತಿಯನ್ನುಂಟು ಮಾಡುತ್ತಿದ್ದನೋ, ಯಾವನು ನನ್ನ ಕಣ್ಣುಗಳಿಗೆ ಹಬ್ಬವಾಗಿದ್ದನೋ ಅದೇ ಚಂದ್ರನು ಈಗ ಅಗ್ನಿಯಂತಾಗಿದ್ದಾನೆ.
ದುರ್ಜಯ: ನಿನ್ನ ಮಡಿಲಲ್ಲಿ ಕುಳಿತುಕೊಳ್ಳುವುದನ್ನು ಏಕೆ ತಡೆಯುತ್ತಿ?
ದುರ್ಯೋಧನ: ಇಂದಿನಿಂದ ಇದು ನಿನಗೆ ಆಸನವಲ್ಲ. ಈ ಪರಿಚಿತವಾದ ಪೀಠವನ್ನು ಬಿಟ್ಟು ಬೇರೆ ಎಲ್ಲಾದರೂ ಕುಳಿತುಕೊಳ್ಳುವುದು.
ದುರ್ಜಯ: ಏಕೆ? ಮಹಾರಾಜನು ಎಲ್ಲಿ ಹೋಗುತ್ತಿದಾನೆ?
ದುರ್ಯೋಧನ: ನನ್ನ ನೂರು ಸೋದರರಿರುವಲ್ಲಿಗೆ.
ದುರ್ಜಯ: ನನ್ನನ್ನೂ ಅಲ್ಲಿಗೆ ಕರೆದುಕೊಂಡು ಹೋಗು.
ದುರ್ಯೋಧನ: ಹೋಗು ಮಗು. ವೃಕೋದರ (ಭೀಮ) ನನ್ನು ಕೇಳು.
ದುರ್ಜಯ: ಮಹಾರಾಜ, ಬಾ. ನಿನ್ನನ್ನು ಕರೆಯುತ್ತಿದ್ದಾರೆ.
ದುರ್ಯೋಧನ: ಯಾರು ಕರೆಯುತ್ತಿದ್ದಾರೆ?
ದುರ್ಜಯ: ಅಜ್ಜ. ಅಜ್ಜಿ ಮತ್ತು ರಾಣಿಯರು.
ದುರ್ಯೋಧನ: ನಾನು ಬರಲಾರೆ, ನೀನು ಹೋಗು ಮಗು.
ದುರ್ಜಯ: ನಾನು ನಿನ್ನನ್ನು ಕರೆದೊಯ್ಯುತ್ತೇನೆ.
ದುರ್ಯೋಧನ: ನೀನು ಇನ್ನೂ ಚಿಕ್ಕ ಹುಡುಗ.
ದುರ್ಜಯ (ಸುತ್ತ ನಡೆಯುತ್ತ): ತಾಯಂದಿರಾ! ಮಹಾರಾಜನು ಇಲ್ಲಿದ್ದಾನೆ
ಇದಾದ ನಂತರ ದುರ್ಯೋಧನನು ಧೃತರಾಷ್ಟ್ರನನ್ನೂ ಗಾಂಧಾರಿಯನ್ನೂ ಸಮಾಧಾನಗೊಳಿಸಿ, ತನ್ನ ಇಬ್ಬರು ಪತ್ನಿಯರಿಗೆ ಸಾಂತ್ವನದ ಮಾತುಗಳನ್ನಾಡಿ ದುಃಖಿಸಕೂಡದೆಂದು ಹೇಳುತ್ತಾನೆ; ಮಾಲವಿಯು ‘ನಾನು ಇನ್ನೂ ಚಿಕ್ಕವಳು, ನಿನ್ನ ಧರ್ಮಪತ್ನಿ; ಅಳದೆ ಹೇಗಿರಲಿ?’ ಎಂದು ಕೇಳುತ್ತಾಳೆ. ಪೌರವಿಯು ‘ನಾನು ನಿನ್ನೊಡನೆ ಬರಲು ನಿಶ್ಚಯಿಸಿದ್ದೇನೆ. ಆದ್ದರಿಂದ ಅಳುವುದಿಲ್ಲ’ ಎನ್ನುತ್ತಾಳೆ. ಮುಂದೆ ದುರ್ಜಯನಿಗೆ ಈ ಬುದ್ಧಿವಾದ ಮಾಡುತ್ತಾನೆ:
ದುರ್ಯೋಧನ: ನೀನು ನನ್ನ ಮಾತನ್ನು ಕೇಳುವಂತೆಯೇ ಪಾಂಡವರ ಮಾತನ್ನೂ ಕೇಳಬೇಕು. ತಾಯಿ ಕುಂತಿಯ ಅಪ್ಪಣೆಗಳನ್ನು ಸದಾ ಪಾಲಿಸಬೇಕು. ಅಭಿಮನ್ಯುವಿನ ತಾಯಿಯನ್ನೂ. ದ್ರೌಪದಿಯನ್ನೂ ನಿನ್ನ ತಾಯಿಯಂತೆಯೇ ಪೂಜಿಸಬೇಕು. ಶ್ಲಾಘ್ಯನೂ, ಅಭಿಮಾನಿಯೂ ಆಗಿದ್ದ ನಿನ್ನ ತಂದೆ ದುರ್ಯೋಧನನು ಸಮಾನ ಬಲಶಾಲಿಯನ್ನು ಎದುರಿಸಿ ಯುದ್ಧದಲ್ಲಿ ಹತನಾದನು ಎಂದು ತಿಳಿದು ಶೋಕವನ್ನು ತ್ಯಜಿಸು. ರೇಷ್ಮೆಯ ವಸ್ತ್ರವನ್ನು ಹೊದ್ದಿರುವ ಯುಧಿಷ್ಠಿರನ ವಿಪುಲವಾದ ಭುಜವನ್ನು ಮುಟ್ಟುತ್ತಾ ಪಾಂಡವರೊಂದಿಗೆ ನೀನೂ ನನಗೆ ತರ್ಪಣ ಕೊಡಬೇಕು.
        ಹೀಗೆ ಎಲ್ಲರನ್ನು ಸಮಾಧಾನ ಮಾಡಿದರೂ, ತನ್ನ ತಂದೆಯು ವಂಚನೆಯಿಂದ ಹತನಾದದ್ದನ್ನೂ, ತನ್ನ ಒಡೆಯನಿಗೆ ಆದ ದ್ರೋಹವನ್ನೂ ಮರೆಯದೆ ಕೋಪದಿಂದ ಕುದಿಯುತ್ತಿದ್ದ ಅಶ್ವತ್ಥಾಮನನ್ನು ಮಾತ್ರ ಸಂತಯಿಸುವುದಕ್ಕಾಗದೆ, ದುರ್ಯೋಧನನು ಸ್ವರ್ಗಸ್ಥನಾಗುತ್ತಾನೆ ಎಂಬಲ್ಲಿಗೆ ನಾಟಕ ಮುಗಿಯುತ್ತದೆ. ಮಹಾಭಾರತದಲ್ಲಿರುವಂತೆ ಅಶ್ವತ್ಥಾಮನು ತನ್ನ ಕಗ್ಗೊಲೆಯನ್ನು ತೀರಿಸಿ ಬರುವವರೆಗೂ ದುರ್ಯೋಧನನು ಜೀವವನ್ನು ಹಿಡಿದುಕೊಂಡಿರುವುದಿಲ್ಲ.

Back to Top



ಸುಭಾಷಿತಗಳು ಮತ್ತು ಹಾಸ್ಯ


  • ಲೇಖನ - ಡಾ.ಸಿ.ವಿ.ಮಧುಸೂದನ



        ಸಂಸ್ಕೃತದಲ್ಲಿ ಸುಭಾಷಿತ ಎಂದರೆ ಒಳ್ಳೆಯ ಮಾತು ಎಂದು ಅರ್ಥ. ಸುಭಾಷಿತಗಳಲ್ಲಿ ಅನೇಕ ವಿಧ. ಸಮಾಜದಲ್ಲಿ ನಮ್ಮ ನಡವಳಿಕೆ ಹೇಗಿರಬೇಕು, ಯಾವುದನ್ನು ಮಾಡಿದರೆ ನಮಗೆ ಹಿತ, ಬುದ್ಧಿವಂತನ ಲಕ್ಷಣಗಳೇನು, ಮೂರ್ಖನ ಲಕ್ಷಣಗಳೇನು, ಮಹಾತ್ಮರ ಗುಣಗಳೆಂಥವು, ವಿದ್ಯೆಯ ಮಹಿಮೆ ಇತ್ಯಾದಿ ಹಲವಾರು ವಿಷಯಗಳನ್ನು ಮನದಟ್ಟುವಂತೆ ಸಂಕ್ಷಿಪ್ತವಾಗಿ ತಿಳಿಯ ಹೇಳುವುದು ಸುಭಾಷಿತಗಳ ವೈಶಿಷ್ಟ್ಯ. ಈಗ ಬಳಕೆಯಲ್ಲಿರುವ ಸುಭಾಷಿತಗಳ ಮೂಲಗಳು ಹಲವಾರು:

* ನಮ್ಮ ಪವಿತ್ರ ಗ್ರಂಥಗಳಾದ ರಾಮಾಯಣ ಮತ್ತು ಮಹಾಭಾರತ
* ನೀತಿಬೋಧಕ ಕಥಾಸಂಕಲನಗಳಾದ ಪಂಚತಂತ್ರ ಮತ್ತು ಹಿತೋಪದೇಶ
* ಗುಣಾಢ್ಯನ ಕಥಾಸರಿತ್ಸಾಗರ
* ಎಲ್ಲಕ್ಕಿಂತ ಹೆಚ್ಚಾಗಿ ಭರ್ತೃಹರಿಯ ನೀತಿಶತಕ ಮತ್ತು ಚಾಣಕ್ಯನ ನೀತಿ.

ಆದರೆ ಮೇಲಿನ ಯಾವ ಮೂಲಕ್ಕೂ ಸೇರದ ಅಥವಾ ಮೂಲ ಯಾವುದೆಂದೇ ತಿಳಿಯದ ಸುಭಾಷಿತಗಳೂ ಬೇಕಾದಷ್ಟಿವೆ.
ಸಾಧಾರಣವಾಗಿ ಸುಭಾಷಿತಗಳು ಎರಡೇ ಸಾಲಿನ ಶ್ಲೋಕಗಳು ಮತ್ತು ಇವುಗಳ ಭಾಷೆ ತುಂಬ ಸರಳ; ಆದಕಾರಣ ಇವನ್ನು ನೆನಪಿನಲ್ಲಿಡುವುದು ಕಷ್ಟವಿಲ್ಲ. ಆದ್ದರಿಂದಲೇ ಇವುಗಳು ನೂರಾರು, ಏಕೆ ಸಾವಿರಾರು ವರ್ಷಗಳಷ್ಟು ಹಳೆಯವಾದರೂ, ಭಾರತದ ಆದ್ಯಂತ ಅನೇಕ ಜನ ಇವುಗಳಲ್ಲಿ ಕೆಲವನ್ನಾದರೂ ಉದ್ಧರಿಸಬಲ್ಲರು. ಉದಾಹರಣೆಗೆ ‘ವಸುಧೈವ ಕುಟುಂಬಕಂ’ ಎಂಬ ಎಲ್ಲರಿಗೂ ಪರಿಚಿತವಾಗಿರುವ ಪದಗುಚ್ಛ ಈ ಕೆಳಗಿನ ಸುಭಾಷಿತದಲ್ಲಿದೆ:

ಅಯಂ ನಿಜಃ ಪರೋವೇತಿ ಗಣನಾ ಲಘು ಚೇತಸಾಂ |
ಉದಾರಚರಿತಾನಾಂ ತು ವಸುಧೈವ ಕುಟುಂಬಕಂ ||

‘ಇವನು ನಮ್ಮವ, ಇವನು ಪರಕೀಯ’ ಈ ರೀತಿ ನೆನಸುವುದು ಕೀಳುಬುದ್ಧಿಯವರ ಲಕ್ಷಣ. ಔದಾರ್ಯದ ಸ್ವಭಾವದವರಿಗಾದರೋ ಈ ಸಮಸ್ತ ಪ್ರಪಂಚವೇ ಒಂದು ಕುಟುಂಬದಂತೆ. ಎಂದರೆ ಸ್ವಭಾವತಃ ಧಾರಾಳ ಮನಸ್ಸಿನವರಿಗೆ ಯಾವ ಬಗೆಯ ಪೂರ್ವದ್ವೇಷವೂ (prejudice) ಇರುವುದಿಲ್ಲ.
ಮಾತನಾಡಿದರೆ ಎಂತಹ ಮಾತನ್ನಾಡಬೇಕು ಎಂಬುದನ್ನು ಈ ಸುಭಾಷಿತ ತಿಳಿಸುತ್ತದೆ:

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ |
ನಾಸತ್ಯಂ ಚ ಪ್ರಿಯಂ ಬ್ರೂಯಾತ್ ಏಷ ಧರ್ಮಃ ಸನಾತನಃ ||

ಸತ್ಯವನ್ನು ನುಡಿಯಬೇಕು, ಕೇಳುವವರಿಗೆ ಇಷ್ಟವಾದದ್ದನ್ನು ನುಡಿಯಬೇಕು. ಅಪ್ರಿಯವಾದ ಸತ್ಯವನ್ನು ನುಡಿಯಕೂಡದು. ಕೇಳುವವರಿಗೆ ಅದು ಇಷ್ಟವಾಗಬಹುದಾದರೂ ಅಸತ್ಯವನ್ನು ನುಡಿಯಬಾರದು - ಇದೇ ಸನಾತನ ಧರ್ಮ.
ಈ ಶ್ಲೋಕದಲ್ಲಿನ ‘ನ ಬ್ರೂಯಾತ್ ಸತ್ಯಮಪ್ರಿಯಂ’ ಎಂಬ ಹಿನ್ನೆಲೆಯಲ್ಲಿ ವಾಲ್ಮೀಕಿ ರಾಮಯಣದ ಒಂದು ಸಂದರ್ಭ ನೆನಪಿಗೆ ಬರುತ್ತದೆ. ಸೀತೆಯನ್ನು ಅಪಹರಣ ಮಾಡಲು ತನಗೆ ಸಹಾಯ ಮಾಡಬೇಕೆಂದು, ರಾವಣನು ಮಾರೀಚನನ್ನು ಕೇಳಿಕೊಳ್ಳುತ್ತಾನೆ. ಮಾರೀಚನು ಹಾಗೆ ಮಾಡುವುದು ತಪ್ಪೆಂದೂ, ಸೀತಾಪಹರಣದಿಂದ ರಾವಾಣನಿಗೆ ಯಾವ ಶ್ರೇಯಸ್ಸೂ ಉಂಟಾಗಲಾರದೆಂದೂ ವಿಧವಿಧವಾಗಿ ಬೋಧಿಸುತ್ತಾನೆ. ಆದರೆ ರಾವಣನು ಮಾರೀಚನ ಯಾವ ಮಾತಿಗೂ ಕಿವಿಗೊಡುವುದಿಲ್ಲ. ಆಗ ಮಾರೀಚನು ಹೀಗೆ ಹೇಳುತ್ತಾನೆ:

ಸುಲಭಾಃ ಪುರುಷಾಃ ರಾಜನ್ ಸತತಂ ಪ್ರಿಯವಾದಿನಃ |
ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ||

ಮಹಾರಾಜ! ಯಾವಾಗಲೂ ಪ್ರಭುವಿಗೆ ಪ್ರಿಯವಾದುದನ್ನೇ ಮಾತನಾಡುವವರು ಬೇಕಾದಷ್ಟು ಮಂದಿ. ಆದರೆ ಕೇಳುವುದಕ್ಕೆ ಇಷ್ಟವಾಗದೆ ಇರಬಹುದಾದರೂ, ಹಿತವಾದ, ನಮಗೆ ಶ್ರೇಯಸ್ಕರವಾದ ಮಾತನ್ನು ಆಡುವವರೂ ಅಪರೂಪ, ಕೇಳುವವರೂ ಅಪರೂಪ.
ಸುಭಾಷಿತಗಳಲ್ಲಿ ಬುದ್ಧಿ ಮಾತುಗಳನ್ನು ಮಾತ್ರವಲ್ಲ, ಅನೇಕ ವೇಳೆ ಇವುಗಳಲ್ಲಿ ಹಾಸ್ಯವನ್ನೂ, ವಿಡಂಬನೆಯನ್ನೂ, ಪದ ಚಮತ್ಕಾರಗಳನ್ನೂ ಕಾಣಬಹುದು. ಈ ಕೆಳಗಿನ ಸುಭಾಷಿತಗಳಲ್ಲಿರುವ ಹಾಸ್ಯಪ್ರಜ್ಞೆಯನ್ನು ನೋಡಿರಿ (ಇವುಗಳ ಅಭಿಪ್ರಾಯಗಳನ್ನು ನೀವು ಒಪ್ಪಬೇಕೆಂಬ ಬಲಾತ್ಕಾರವೇನೂ ಇಲ್ಲ!)

ಕನ್ಯಾ ವರೌತೇ ರೂಪಂ ಮಾತಾ ವಿತ್ತಂ ಪಿತಾ ಶೃತಮ್ |
ಬಾಂಧವಾಃ ಕುಲಮಿಚ್ಛಂತಿ ಮಿಷ್ಟಾನ್ನಂ ಇತರೇ ಜನಾಃ ||

ಮದುವೆ ಎಂದರೆ, ಕನ್ಯೆಯು ತನ್ನ ವರನು ರೂಪವಂತನಾಗಿರಬೇಕೆಂದು ಇಚ್ಛಿಸುತ್ತಾಳೆ; ತಾಯಿಯು ಐಶ್ವರ್ಯವನ್ನು ಬಯಸುತ್ತಾಳೆ; ತಂದೆಯು ವರನು ಎಷ್ಟು ತಿಳಿದವನು ಎಂಬುದನ್ನು ಗಮನಿಸುತ್ತಾನೆ; ಬಂಧುಗಳು ವರನ ಕುಲ ಎಂತಹುದು ಎಂದು ನೋಡುತ್ತಾರೆ; ಇತರ ಜನರಿಗಾದರೋ ಒಳ್ಳೆಯ ಊಟ ಸಿಕ್ಕಿದರೆ ಸಾಕು.
ಮದುವೆಯಾದ ಹೊಸದರಲ್ಲಿ ಅಳಿಯನಿಗೆ ಅತ್ತೆ ಮಾವಂದಿರಿಂದ ದೊರಕುವ ಉಪಚಾರಕ್ಕೂ, ಆದರಾತಿಥ್ಯಗಳಿಗೂ ಮಿತಿಯಿಲ್ಲ - ಎಂದರೆ ಹೊಸ ಅಳಿಯನಿಗೆ ಮಾವನ ಮನೆ ಒಂದು ಸ್ವರ್ಗದಂತೆಯೇ ತೋರುತ್ತದೆ. ಹರಿ ಹರಾದಿಗಳಿಗೂ ಈ ರೀತಿ ಅನಿಸಿರಬಹುದೇನೋ?

ಅಸಾರೇ ಖಲು ಸಂಸಾರೇ ಸಾರಂ ಶ್ವಶುರಮಂದಿರಮ್ |
ಹರೋ ಹಿಮಾಲಯೇ ಶೇತೇ ವಿಷ್ಣುಃ ಶೇತೇ ಮಹೋದಧೌ ||

ಈ ಶುಷ್ಕವಾದ ಜಗತ್ತಿನಲ್ಲಿ, ಸಾರಭರಿತವಾವುದೆಂದರೆ ಅದು ಮಾವನ ಮನೆಯೇ. ಆದ್ದರಿಂದಲೇ ಶಿವನು ಹಿಮಾಲಯದಲ್ಲಿ ನೆಲಸಿದ್ದಾನೆ (ಪಾರ್ವತಿಯು ಹಿಮವಂತನ ಮಗಳು); ವಿಷ್ನುವು ಕ್ಷೀರಸಾಗರದಲ್ಲಿ ಪವಡಿಸಿದ್ದಾನೆ (ಲಕ್ಷ್ಮಿಯು ಸಮುದ್ರರಾಜನ ಪುತ್ರಿ).
ಆದರೆ ನಮ್ಮ ನಿಮ್ಮಂಥವರು ಶಾಶ್ವತವಾಗಿ ಮಾವನ ಮನೆಯಲ್ಲಿ ಬೇರೂರಲು ಸಾಧ್ಯವಿಲ್ಲ. ಕೆಲವು ದಿನಗಳಾದ ಮೇಲೆ ಅತ್ತೆ ಮಾವಂದಿರು ‘ಈ ಶನಿ ಎಲ್ಲಿಂದ ಬಂದು ವಕ್ಕರಿಸಿದನಪ್ಪಾ? ಯಾವಾಗ ಹೆಂಡತಿಯನ್ನು ಕರೆದುಕೊಂಡು ತನ್ನ ಮನೆಗೆ ಹೋದಾನು?’ ಎಂದು ಪಿಸುಗುಟ್ಟಲು ಷುರು ಮಾಡುತ್ತಾರೆ. ಮೊದಲು ವರನಾಗಿದ್ದವನು ಈಗ ಅನಿಷ್ಟ ಗ್ರಹವಾಗುತ್ತಾನೆ!

ಸದಾ ವಕ್ರಃ ಸದಾ ಕ್ರೂರಃ ಸದಾ ಪೂಜಾಮಪೇಕ್ಷತೇ |
ಕನ್ಯಾರಾಶಿಸ್ತಿಥೋ ನಿತ್ಯಂ ಜಾಮಾತಾ ದಷಮಗ್ರಹಃ ||

ಇವನ ಬುದ್ದಿಯು ಯಾವಾಗಲೂ ಕೊಂಕು; ಇವನಿಗೆ ಬೇರೆಯವರ ಸುಖ ದುಃಖಗಳ ಪರಿವೆಯಿಲ್ಲ; ಇವನಿಗೆ ಸದಾಕಾಲವೂ ಉಪಚಾರ ಮಾಡುತ್ತಿರಬೇಕು. ಬೇರೆಯ ನವಗ್ರಹಗಳಾದರೋ ರಾಶಿಯಿಂದ ರಾಶಿಗೆ ಚಲಿಸುತ್ತಿರುತ್ತವೆ. ಈ ಅಳಿಯನೆಂಬ ಹತ್ತನೆಯ ಗ್ರಹವು ಶಾಶ್ವತವಾಗಿ ಕನ್ಯಾರಾಶಿ (ಮಾವನ ಮನೆ) ಯಲ್ಲೇ ನೆಲಸಿಬಿಟ್ಟಿದ್ದಾನೆ!
ಆದರೆ ಹರಿಹರಬ್ರಹ್ಮಾದಿಗಳು ತಮ್ಮ ನೆಲೆಗಳನ್ನು ಆಯ್ಕೆ ಮಾಡಿರುವುದಕ್ಕೆ ಬೇರೆಯ ಕಾರಣವೇ ಇರಬಹುದೆಂದು ಮತ್ತೊಬ್ಬ ಸುಭಾಷಿತಕಾರನು ಸೂಚಿಸುತ್ತಾನೆ:

ಕಮಲೇ ಬ್ರಹ್ಮಾ ಶೇತೇ ಹರಃ ಶೇತೇ ಹಿಮಾಲಯೇ |
ಕ್ಷೀರಾಬ್ಧೌ ಹರಿಃ ಶೇತೇ ಮನ್ಯೇ ಮತ್ಕುಣಶಂಕಯಾ ||

ಬ್ರಹ್ಮನು ಕಮಲದಲ್ಲಿ ನೆಲಸಿದ್ದಾನೆ; ಶಂಕರನು ಮಲಗುವುದು ಹಿಮಲಯದಲ್ಲಿ; ನಾರಾಯಣನಾದರೋ ಕ್ಷೀರಾಬ್ಧಿಶಯನ. ಇದೆಲ್ಲಕ್ಕೂ ಕಾರಣ ಒಂದೇ. ಇವರೆಲ್ಲರಿಗೂ ರಾತ್ರಿಯ ತಿಗಣೆಗಳ ಭಯ!
ದೇವಾಧಿದೇವರೂ ಸುಭಾಷಿತಕಾರರ ಹಾಸ್ಯಕ್ಕೆ ಗುರಿಯಾಗಬಲ್ಲರು ಎಂದ ಮೇಲೆ ಸಮಾಜದಲ್ಲಿ ಗೌರವಾನ್ವಿತ ಜನರೂ ಇವರ ಕುಹಕ ನೋಟದಿಂದ ತಪ್ಪಿಸಿಕೊಳ್ಳಲಾರರು:
ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ |
ಯಮಸ್ತು ಹರತಿ ಪ್ರಾಣಾನ್ ವೈದ್ಯಃ ಪ್ರಾಣಾನ್ ಧನಾನಿ ಚ ||

ವೈದ್ಯರಾಜ ನಿನಗೆ ನಮಸ್ಕಾರ; ನೀನು ಯಮರಾಜನ ಅಣ್ನನೇ ಸರಿ. ಯಮನಾದರೋ ಪ್ರಾಣಗಳನ್ನು ಮಾತ್ರ ಅಪಹರಿಸುತ್ತಾನೆ. ನೀನು ಪ್ರಾಣವನ್ನೂ ತೆಗೆಯುವೆ, ಹಣವನ್ನೂ ಕಸಿಯುವೆ.
ಈ ಮೇಲೆ ಪ್ರಸ್ತುತ ಮಾಡಿರುವುದು ಸುಭಾಷಿತಗಳ ಸ್ಥೂಲ ಪರಿಚಯ ಮಾತ್ರ. ಈಗ ಲಭ್ಯವಿರುವ ಸುಭಾಷಿತಗಳ ಸಂಖ್ಯೆ ನೂರಾರು. ಇವುಗಳಲ್ಲಿ ದಿನಕ್ಕೆ ಒಂದಾದರೂ ಸುಭಾಷಿತವನ್ನು ಓದಿ ಅರ್ಥಮಾಡಿಕೊಂಡರೆ ಅ ಸಮಯ ವ್ಯರ್ಥವಲ್ಲ, ಮನರಂಜನೆಯೂ ಆದೀತು.

Back to Top



ಫಾ ಹಿಯೆನ್


  • ಲೇಖನ - ಡಾ.ಸಿ.ವಿ.ಮಧುಸೂದನ



         ಪ್ರಾಚೀನ ಭಾರತದ ಜನ ಜೀವನದ ಬಗ್ಗೆ ನಮಗೆ ಅನೇಕ ವೇಳೆ ಕುತೂಹಲಕಾರಿ ಮತ್ತು ಉಪಯುಕ್ತ ಮಾಹಿತಿ ದೊರಕುವುದು ಪರದೇಶದ ಪ್ರಯಾಣಿಕರು ಬರೆದಿಟ್ಟಿರುವ ತಮ್ಮ ಪ್ರವಾಸ ಕಥನಗಳಿಂದ. ಇಂಥ ಪ್ರವಾಸಿಗರಲ್ಲಿ ಚೀನಾ ದೇಶದ ಬೌದ್ಧ ಯಾತ್ರಿಕನಾದ ಫಾ ಹಿಯೆನ್ ಅಗ್ರಗಣ್ಯನು. ಈತನು ಜೀವಿಸಿದ್ದು ಕ್ರಿ.ಶ. ೩೩೭ ರಿಂದ ಕ್ರಿ.ಶ. ೪೨೨ ರ ವರೆಗೆ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಈತನು ಚೀನಾದ ಪೂರ್ವ ತೀರದಿಂದ ಕ್ರಿ.ಶ ೩೯೯ ರಲ್ಲಿ ಹೊರಟು ಆರು ವರ್ಷಗಳ ನಂತರ ಭಾರತವನ್ನು ಸೇರಿ, ಅಲ್ಲಿ ಆರು ವರ್ಷವಿದ್ದು ಅನಂತರ ಮೂರು ವರ್ಷಗಳ ನೌಕಾಯಾನ ಮಾಡಿ, ಸಿಂಹಳ ಮುಂತಾದ ದ್ವೀಪಗಳನ್ನು ಸಂದರ್ಶಿಸಿ, ಚೀನಾದ ನಾನ್ ಕಿಂಗ್ ನಗರವನ್ನು ಕ್ರಿ.ಶ ೪೧೪ ರಲ್ಲಿ ತಲುಪಿದನೆಂದು ಅವನ ಬರಹದಿಂದಲೇ ತಿಳಿದು ಬರುತ್ತದೆ. ಇವನ ನೆನಪುಗಳನ್ನು ಚೀನೀ ಭಾಷೆಯಿಂದ ಇಂಗ್ಲೀಷಿಗೆ ಮೊದಲು ಭಾಷಾಂತರಿಸಿದ ಜೇಮ್ಸ್ ಲೆಗ್ ಎಂಬುವವರು ಫಾ ಹಿಯೆನ್ನನು ಸನ್ಯಾಸಿಯಾಗಿದ್ದು ಅವನಿಗೆ ಇಪ್ಪತ್ತು ವರ್ಷವಾಗಿದ್ದಾಗ ಮತ್ತು ಅವನು ತನ್ನ ಪ್ರಯಾಣವನ್ನು ಕೈಗೊಂಡಾಗ ಅವನಿಗೆ ಇಪ್ಪತ್ತೈದು ವರ್ಷವಾಗಿದ್ದಿರಬಹುದೆಂದು ಊಹಿಸುತ್ತಾರೆ. ಅಲ್ಲದೆ ಕ್ರಿ.ಶ ೫೧೯ ರಲ್ಲಿ ರಚಿತವಾದ ‘ಶ್ರೇಷ್ಠ ಸಂತರ ಚರಿತ್ರೆ’(memoirs of eminent monks) ಎಂಬ ಚೀನೀ ಗ್ರಂಥದ ಪ್ರಕಾರ ಫಾ ಹಿಯೆನ್ನನು ತನ್ನ ಎಂಭತ್ತೆಂಟನೆಯ ವಯಸ್ಸಿನ ವರೆಗೆ ಜೀವಿಸಿದ್ದನು ಎಂದು ತಿಳಿಯುತ್ತದೆ. ಈ ವಿವರಗಳನ್ನು ನೋಡಿದರೆ ಈತನ ಜೀವನ ಕಾಲ ಕ್ರಿ.ಶ. ೩೭೪ ರಿಂದ ಕ್ರಿ.ಶ. ೪೬೨ರ ವರೆಗೆ ಎಂದು ತೀರ್ಮಾನಿಸಬೇಕು. ಇದು ಹೇಗಾದರೂ ಇರಲಿ- ಇವನು ಭಾರತದಲ್ಲಿ ಇದ್ದುದು ಕ್ರಿ.ಶ. ೪೦೫ ರಿಂದ ಕ್ರಿ.ಶ. ೪೧೧ ರ ವರೆಗೆ ಎನ್ನುವುದು ನಿರ್ವಿವಾದ.

                 ಫಾ ಹಿಯೆನ್ನನ ತಂದೆ ತಾಯಿಗಳಿಗೆ ಇವನ ಮುನ್ನ ಮೂರು ಗಂಡು ಮಕ್ಕಳಾದರೂ, ಇವರೆಲ್ಲರೂ ಬಾಲ್ಯದಲ್ಲೇ ತೀರಿಕೊಂಡರು. ಆದ್ದರಿಂದ ಇವನ ತಂದೆಯು ಈ ಮಗನ ಮೇಲಾದರೂ ಬುದ್ಧನ ಕೃಪೆಯಾಗಲಿ ಎಂದು ಫಾ ಹಿಯೆನ್ನನನ್ನು ಮನೆಯಲ್ಲೇ ಇದ್ದುಕೊಂಡು ಸ್ಥಳೀಯ ಬುದ್ಧ ವಿಹಾರದ ಸೇವೆ ಮಾಡುವಂತೆ ನಿಯಮಿಸಿದನು. ಸ್ವಲ್ಪ ದಿನಗಳಾದ ಮೇಲೆ ಫಾ ಹಿಯೆನ್ನನಿಗೆ ತೀವ್ರವಾದ ಖಾಯಿಲೆಯಾಗಲು, ವಿಹಾರದವರು ಅವನನ್ನು ತಮ್ಮಲ್ಲೇ ಇಟ್ಟುಕೊಂಡು ಚಿಕಿತ್ಸೆ ನಡೆಸಿದರು. ಕಾಲಕ್ರಮದಲ್ಲಿ ಅವನಿಗೆ ಗುಣವಾದರೂ ಮತ್ತೆ ಅವನು ಮನೆಗೆ ಹೋಗಲು ಇಚ್ಛಿಸಲಿಲ್ಲ. ವಿಹಾರದಲ್ಲೇ ಇದ್ದುಬಿಟ್ಟನು.

                ಇವನಿಗೆ ಹತ್ತು ವರ್ಷವಾದಾಗ ಇವನ ತಂದೆಯೂ ಮೃತನಾದನು. ಒಬ್ಬಂಟಿಯೂ, ಅಸಹಾಯಕಳೂ ಆದ ಇವನ ತಾಯಿಯ ಕಷ್ಟವನ್ನು ನೋಡಲಾರದೆ, ಇವನ ಸೋದರಮಾವನು ಮಠಕ್ಕೆ ಬಂದು ಫಾ ಹಿಯೆನ್ನನನ್ನು ಮನೆಗೆ ಹಿಂತಿರುಗುವಂತೆ ಕೇಳಿಕೊಂಡನು. ಆಗ ಅವನು "ಹಿಂದೆ ನನ್ನ ತಂದೆ ಬಂದು ಕರೆದಾಗ ನಾನು ಹಿಂತಿರುಗಲಿಲ್ಲ. ಏಕೆಂದರೆ ನನಗೆ ಪ್ರಾಪಂಚಿಕ ವಿಷಯಗಳಲ್ಲಿ ಇಷ್ಟವಿಲ್ಲ.ಅದಕ್ಕೆ ನಾನು ಈಗಲೂ ಮನೆಗೆ ಹಿಂತಿರುಗಲಾರೆ" ಎಂದು ಹೇಳಿದನು. ಮಾವನು ಮತ್ತೆ ಅವನನ್ನು ಬಲವಂತ ಮಾಡದೇ ಬಂದುಬಿಟ್ಟನು. ಫಾ ಹಿಯೆನ್ನನು ಹೀಗೆ ನಿರ್ಧರಿಸಿದರೂ ಅವನಿಗೆ ತಾಯಿಯ ಮೇಲೆ ನಿಜವಾಗಿ ಎಷ್ಟು ಪ್ರೀತಿ ಇತ್ತೆಂಬುದನ್ನು, ಆಕೆ ಮುಂದೆ ಕಾಲವಶಳಾದಾಗ ಆತನು ವ್ಯಕ್ತಪಡಿಸಿದ ಸಂತಾಪದಿಂದಲೇ ಎಲ್ಲರೂ ಅರಿತರು.

                 ಒಮ್ಮೆ ಫಾ ಹಿಯೆನ್ನನು ತನ್ನಂತಹ ಇಪ್ಪತ್ತು ಮೂವತ್ತು ಶಿಷ್ಯರೊಂದಿಗೆ ಭತ್ತದ ಪೈರನ್ನು ಕಡಿಯುತ್ತಿದ್ದನು. ಆಗ ಹಸಿವಿನಿಂದ ಕಂಗೆಟ್ಟ ಕಳ್ಳರ ಗುಂಪೊಂದು ಬಂದು ಭತ್ತವೆಲ್ಲವನ್ನೂ ನಮಗೆ ಕೊಡಿ ಎಂದು ಬೆದರಿಸಿದರು. ಉಳಿದ ಶಿಷ್ಯರೆಲ್ಲರೂ ಹೆದರಿಕೊಂಡು ಓಡಿ ಹೋದರು. ಫಾ ಹಿಯೆನ್ನನೊಬ್ಬನೇ ನಿರ್ಭಯವಾಗಿ ನಿಂತು ಕಳ್ಳರಿಗೆ "ಬೇಕಾದಷ್ಟು ತೆಗೆದುಕೊಳ್ಳಿ. ನೀವು ಹಿಂದೆ ಮಾಡಿದ ಅಧರ್ಮಗಳೇ ನಿಮ್ಮನ್ನು ಈ ದುರ್ಗತಿಗೆ ಇಳಿಸಿವೆ. ನೀವು ಹೀಗೆಯೇ ಮಾಡಬಾರದ್ದನ್ನು ಮಾಡುತ್ತಿದ್ದರೆ, ನಿಮ್ಮ ಸ್ಥಿತಿ ಇನ್ನೂ ಕೆಟ್ಟದ್ದಾಗುತ್ತದೆ. ಅದಕ್ಕೆ ನಿಮ್ಮಮೇಲೆ ನನಗೆ ಕರುಣೆಯಾಗುತ್ತಿದೆ" ಎಂದನು. ಕಳ್ಳರೆಲ್ಲರೂ ವ್ಯಾಕುಲರಾಗಿ, ಭತ್ತದ ಒಂದು ಕಾಳನ್ನೂ ಮುಟ್ಟದೆ ಹೊರಟು ಹೋದರು. ಈ ವಿಷಯವನ್ನು ತಿಳಿದ ಆ ಮಠದಲ್ಲಿದ್ದ ನೂರಾರು ಸನ್ಯಾಸಿಗಳೆಲ್ಲರೂ ಫಾ ಹಿಯೆನ್ನನ ನಡತೆಯನ್ನೂ, ಧೈರ್ಯವನ್ನೂ ಕುರಿತು ಕೊಂಡಾಡಿದರು.

              ಫಾ ಹಿಯೆನ್ನನು ಶಿಷ್ಯತ್ವವನ್ನು ಮುಗಿಸಿ ಪೂರ್ಣ ಸನ್ಯಾಸಿಯಾದನು. ಆ ವೇಳೆಗೆ ಬೌದ್ಧ ಧರ್ಮವು ಭಾರತದಿಂದ ಚೀನಾ ದೇಶಕ್ಕೆ ಬಂದು ಸುಮಾರು ಐನೂರು ವರ್ಷಗಳಾಗಿದ್ದವು. ಆ ಧರ್ಮದ ಗ್ರಂಥಗಳ ಶುದ್ಧ ಪ್ರತಿಗಳು ಸಿಕ್ಕುವುದು ಕಷ್ಟವಾಗಿತ್ತು. ಇದನ್ನು ಗಮನಿಸಿದ ಫಾ ಹಿಯೆನ್ನನು ಭೌದ್ಧ ಗ್ರಂಥಗಳ, ಅದರಲ್ಲೂ ಮುಖ್ಯವಾಗಿ ವಿನಯ ಪಿಟಕದ (ಸದ್ವರ್ತನೆಯ ಸೂತ್ರಗಳು)ಸಂಗ್ರಹಣೆಗೋಸ್ಕರ ಭಾರತಕ್ಕೆ ಪ್ರಯಾಣಿಸುವುದೆಂದು ನಿರ್ಧರಿಸಿದನು. ಈತನ ಇನ್ನೊಂದು ಉದ್ದೇಶ, ಭಗವಾನ್ ಬುದ್ಧನು ಸಂಚಾರ ಮಾಡಿ ಬೋಧಿಸಿದ ಕ್ಷೇತ್ರಗಳ ದರ್ಶನ ಮಾಡುವುದು. ಇವನ ಜತೆಗೆ ಇನ್ನೂ ನಾಲ್ಕು ಸನ್ಯಾಸಿಗಳು ಬರಲು ಇಚ್ಛಿಸಿದರು. ಹಾಗಾಗಿ ಒಟ್ಟು ಹೊರಟವರ ಸಂಖ್ಯೆ ಐದು. ದಾರಿಯಲ್ಲಿ ಇನ್ನೂ ನಾಲ್ಕು ಜನ ಸನ್ಯಾಸಿಗಳು ಇವರ ಗುಂಪಿಗೆ ಸೇರಿಕೊಂಡರು. ಕಾಲ್ನಡಿಗೆಯಲ್ಲಿ ಇವರು ಕೈಗೊಂಡ ಈ ಯಾತ್ರೆ ತುಂಬಾ ದೀರ್ಘ ಮತ್ತು ಅತ್ಯಂತ ಕಠಿಣವಾದದ್ದು. ಚೀನಾದ ಪೂರ್ವ ತೀರದಿಂದ ಹೊರಟು, ಮಧ್ಯ ಏಷ್ಯದ ಅಡ್ಡಗಲಕ್ಕೂ ನಡೆದು ಅನಂತರ ದಕ್ಷಿಣಾಭಿಮುಖವಾಗಿ ನಡೆದು ಭಾರತವನ್ನು ಪ್ರವೇಶಿಸಬೇಕು. ಹೀಗೆ ನಡೆಯುವಾಗ ತಕ್ಲ ಮಕಾನ್ ಎಂಬ ಗಿಡ ಮರಗಳಿಲ್ಲದ ಮರಳು ಕಾಡನ್ನು ದಾಟಬೇಕು, ಹಿಂದೂ ಕುಷ್ ಪರ್ವತ ಶ್ರೇಣಿಯ ಮೂಲಕ ಹೋಗಬೇಕು. ಇದರಿಂದ ಅನೇಕ ಸಲ ಇವರಿಗೆ ಸುಡುವ ಬಿಸಿಲನ್ನೂ, ಕೊರೆಯುವ ಚಳಿಯನ್ನೂ ಸಹಿಸಬೇಕಾಯಿತು; ದುರ್ಗಮ ಕಣಿವೆಗಳನ್ನು ಹತ್ತಿಳಿಯಬೇಕಾಯಿತು; ಭೋರ್ಗರೆಯುವ ನದಿಗಳನ್ನು ದಾಟಬೇಕಾಯಿತು. ಅನೇಕ ಕಡೆ ತಿಂಗಳಾನುಗಟ್ಟಲೆ ಅನಿವಾರ್ಯವಾಗಿ ತಂಗಬೇಕಾಯಿತು. ಆದರೆ ಹಲವಾರು ದೇಶಗಳಲ್ಲಿ ಇವರಿಗೆ ಒಳ್ಳೆಯ ಅತಿಥಿ ಸತ್ಕಾರವೂ ದೊರೆಯಿತು.

           ಭಾರತವನ್ನು ಉದ್ಯಾನ ಎಂಬ ನಗರದಲ್ಲಿ ಪ್ರವೇಶಿಸಿದರು. ಇದು ಆಗಿನ ಕಾಲದಲ್ಲಿ ಶುಭವಸ್ತು ಎಂದು ಕರೆಯುತ್ತಿದ್ದ ಕಣಿವೆಯಲ್ಲಿತ್ತು.(ಈ ಶುಭವಸ್ತುವೇ ಈಗಿನ ಪಾಕಿಸ್ತಾನದಲ್ಲಿರುವ Swat valley) ಉದ್ಯಾನವು ಭೌದ್ಧರ ಒಂದು ಮುಖ್ಯ ನೆಲೆಯಾಗಿದ್ದಿತು. ಇಲ್ಲಿ ಐನೂರಕ್ಕೂ ಹೆಚ್ಚು ಭಿಕ್ಷುಗಳು ಅನೇಕ ಸಂಘಾರಾಮಗಳಲ್ಲಿರುತ್ತಿದ್ದರು. ಯಾರಾದರೂ ಪರದೇಶದ ಭಿಕ್ಷುಗಳು ಬಂದರೆ ಅವರಿಗೆ ಉಚಿತವಾಗಿ ಮೂರು ದಿನದ ಊಟ ಮತ್ತು ವಸತಿ. ಅನಂತರ ಬೇರೆ ಏರ್ಪಾಡು ಮಾಡಿಕೊಳ್ಳಬೇಕು. ಇದಾದ ನಂತರ ಅವರು ತಕ್ಷಶಿಲ, ಪುರುಷಪುರ(ಇಂದಿನ ಪೆಷಾವರ್) ಮುಂತಾದ ಭೌದ್ಧರಿಗೆ ಪವಿತ್ರವಾದ ಕ್ಷೇತ್ರಗಳನ್ನು ಸಂದರ್ಶಿಸಿದರು. ಪುರುಷಪುರವನ್ನು ನೋಡಿದ ಬಳಿಕ ಇಬ್ಬರು ಯಾತ್ರಿಕರು ಹಿಂತಿರುಗಿದರು. ಇನ್ನು ಕೆಲವರು ಆಗಲೇ ಬೇರೆ ದಾರಿಯನ್ನು ಹಿಡಿದಿದ್ದರು. ಒಬ್ಬನು ಚಳಿಯನ್ನು ತಡೆಯಲಾರದೆ ಮೃತನಾದನು. ಮುಂದಿನ ಯಾತ್ರೆಗೆ ಉಳಿದವರು ಫಾ ಹಿಯೆನ್ ಮತ್ತು ತಾಒ ಚಿಂಗ್ ಎಂಬ ಇನ್ನೊಬ್ಬ ಸನ್ಯಾಸಿ ಮಾತ್ರವೇ. ಮುಂದೆ ಅವರು ಯಮುನಾ ನದಿಯ ತೀರದಲ್ಲಿದ್ದ ಮಥುರಾ ನಗರವನ್ನು ತಲುಪಿದರು. ಆಗ ಭಾರತದ ಸ್ವರ್ಣಯುಗ-ಗುಪ್ತ ಚಕ್ರವರ್ತಿಯಾದ ಎರಡನೆಯ ಚಂದ್ರಗುಪ್ತ (ವಿಕ್ರಮಾದಿತ್ಯ) ರಾಜ್ಯಭಾರವನ್ನು ನಡೆಸುತ್ತಿದ್ದನು. ಚಕ್ರವರ್ತಿಯು ಹಿಂದುವಾದರೂ, ಭೌದ್ಧಮತಕ್ಕೆ ಅಪಾರ ಗೌರವವಿತ್ತು- ಮಥುರಾ ನಗರದಲ್ಲಿ ಇಪ್ಪತ್ತು ಭೌದ್ಧ ವಿಹಾರಗಳೂ ೩೦೦೦ ಸನ್ಯಾಸಿಗಳೂ ಇದ್ದರಂತೆ. ಈ ದೇಶದ ವಿಷಯವಾಗಿ ಫಾ ಹಿಯೆನ್ನನು ಹೀಗೆ ಬರೆದಿದ್ದಾನೆ: ಇಲ್ಲಿ ಹೆಚ್ಚು ಚಳಿಯೂ ಇಲ್ಲ, ಹೆಚ್ಚು ಬಿಸಿಲೂ ಇಲ್ಲ. ಜನಸಂಖ್ಯೆ ಹೆಚ್ಚಾಗಿದ್ದರೂ ಎಲ್ಲರೂ ಸುಖಿಗಳಾಗಿದ್ದಾರೆ. ಚಂಡಾಲರ ವಿನಹ ಯಾರೂ ಪ್ರಾಣಿವಧೆ ಮಾಡುವುದಿಲ್ಲ. ಈರುಳ್ಳಿ, ಬೆಳ್ಳುಳ್ಳಿಗಳನ್ನು ತಿನ್ನುವುದಿಲ್ಲ. ಯಾರೂ ತಾವಿರುವ ಸ್ಥಳಗಳನ್ನು ದಾಖಲಿಸಬೇಕಾಗಿಲ್ಲ - ಇಷ್ಟವಿದ್ದಷ್ಟು ದಿವಸ ಇರಬಹುದು, ಇಲ್ಲವಾದರೆ ಬೇರೆ ಕಡೆ ಹೋಗಬಹುದು. ಎಂಥ ಅಪರಾಧವೇ ಆಗಿರಲಿ, ಅದಕ್ಕೆ ಮರಣ ದಂಡನೆ ಏಕೆ, ಕಠಿಣ ಶಿಕ್ಷೆಯನ್ನೂ ಕೊಡುವುದಿಲ್ಲ- ಅಪರಾಧಕ್ಕನುಸಾರವಾಗಿ ಶುಲ್ಕ ವಿಧಿಸುತ್ತಾರೆ. ಒಬ್ಬನೇ ವ್ಯಕ್ತಿ ಪದೇ ಪದೇ ದುಷ್ಕ್ರಿಯೆ ನಡೆಸುತ್ತಿದ್ದರೆ ಮಾತ್ರ ಅವನ ಹಸ್ತಚ್ಛೇಧ ಮಾಡುತ್ತಾರೆ. ತಮ್ಮ ಜಮೀನಿನಲ್ಲೇ ಬೆಳೆದ ಪೈರಿಗೆ ತೆರಿಗೆ ಕೊಡಬೇಕಾಗಿಲ್ಲ. ಸರ್ಕಾರದ ಜಮೀನಿನಲ್ಲಿ ಬೆಳೆದರೆ ಮಾತ್ರ ಅದರ ಒಂದು ಅಂಶವನ್ನು ರಾಜನಿಗೆ ಕೊಡಬೇಕು-ಇತ್ಯಾದಿ‘.

                  ನಮ್ಮ ಯಾತ್ರಿಕರು ಮುಂದೆ ಶ್ರಾವಸ್ತಿ(ಬುದ್ಧನು ಅನೇಕ ಬಾರಿ ಬೋಧನೆ ಮಾಡಿದ ಮತ್ತು ಕ್ರೂರಿ ಅಂಗುಲಿಮಾಲನ ಪರಿವರ್ತನೆಯಾದ ಸ್ಥಳ), ಕುಶನಗರ ಅಥವಾ ಕುಶಿನಾರ(ಬುದ್ಧನು ಮಹಾನಿರ್ವಾಣ ಹೊಂದಿದ ಊರು) ಮುಂತಾದ ಭೌದ್ಧರ ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸಿ ಮಗಧ ರಾಜಧಾನಿಯಾದ ಪಾಟಲಿಪುತ್ರ(ಇಂದಿನ ಪಾಟ್ನಾ) ನಗರವನ್ನು ಬಂದು ಸೇರಿದರು. ಈ ಪಟ್ಟಣದ ಬಗ್ಗೆ ಫಾ ಹಿಯೆನ್ನನ ಅಭಿಪ್ರಾಯ ಹೀಗಿದೆ: ‘ಈ ದೇಶವು ಸಂಪದ್ಭರಿತವಾದುದು. ಇಲ್ಲಿ ಅನೇಕ ಧನವಂತರಿದ್ದು ದಾನ ಧರ್ಮಗಳಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಇಲ್ಲಿನ ವರ್ತಕರು ಇಲ್ಲಿ ಹಲವಾರು ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆ. ಈ ಆಸ್ಪತ್ರೆಗಳಲ್ಲಿ ದೇಶದ ಯಾವ ಭಾಗದಿಂದಲಾದರೂ ಬರುವ ದೀನ ದರಿದ್ರರು, ಅನಾಥರು, ಅಂಗವಿಹೀನರು, ವ್ಯಾಧಿಗ್ರಸ್ಥರು, ವಿಧುರರು, ಪುತ್ರವಿಹೀನರು ಮುಂತಾದವರಿಗೆ ಸ್ವಾಗತವಿದೆ. ವೈದ್ಯರು ಇಂಥವರನ್ನು ಚೆನ್ನಾಗಿ ಪರೀಕ್ಷಿಸಿ ಚಿಕಿತ್ಸೆಗೆ ಬೇಕಾದ ಮದ್ದು ಮತ್ತು ಆಹಾರವನ್ನು ಕೊಡುವ ವ್ಯವಸ್ಥೆ ಮಾಡುತ್ತಾರೆ. ಯಾವ ವಿಧದಲ್ಲೂ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಗುಣ ಹೊಂದಿದವರು ತಾವೇ ತಮ್ಮ ಊರಿಗೆ ಹಿಂತಿರುಗುತ್ತಾರೆ (ಬಲವಂತ ಮಾಡಿ ಹೊರಡಿಸಬೇಕಾಗಿಲ್ಲ)’ ಪಾಟಲಿಪುತ್ರದಿಂದ ಹೊರಟು ರಾಜಗೃಹ(ಇದರ ಸಮೀಪದಲ್ಲಿ ಬುದ್ಧನ ಮೆಚ್ಚಿನ ಶಿಷ್ಯರಲ್ಲೊಬ್ಬನಾದ ಸಾರಿಪುತ್ರನ ಜನ್ಮಸ್ಥಳವಿದೆ, ಅಮ್ರಪಾಲಿಯ ಉದ್ಯಾನವನವೂ ಇದೆ). ಮತ್ತು ಗಯ(ಬುದ್ಧನ ಜ್ಞಾನೋದಯವಾದ ಕ್ಷೇತ್ರ) ಮುಂತಾದ ಸ್ಥಳಗಳನ್ನು ದರ್ಶಿಸಿದರು. ಆ ಸಮಯಕ್ಕಾಗಲೇ ಎರಡೂ ಪಟ್ಟಣಗಳೂ ಪಾಳು ಬಿದ್ದಿದ್ದವು. ಇಲ್ಲಿಂದ ಮುಂದೆ ಅವರು ಬುದ್ಧನು ಮೊಟ್ಟಮೊದಲು ಬೋಧನೆ ಮಾಡಿದ, ಕಾಶೀ ರಾಜ್ಯದ ವಾರಣಾಸಿಯ ಸಮೀಪದಲ್ಲಿರುವ ‘ಜಿಂಕೆಗಳ ವನ’ಕ್ಕೆ ಭೇಟಿಕೊಟ್ಟು ಪಾಟಲಿಪುತ್ರಕ್ಕೆ ಹಿಂತಿರುಗಿದರು. ಅಲ್ಲಿನ ಮಹಾಯಾನ ಬುದ್ಧವಿಹಾರದಲ್ಲಿ ಅವರಿಗೆ ಬೇಕಾಗಿದ್ದ ವಿನಯ ಪಿಟಕದ ಶುದ್ಧ ಪ್ರತಿಯೇ ಅಲ್ಲದೇ, ಮುಖ್ಯವಾದ ಇತರ ಅನೇಕ ಗ್ರಂಥಗಳು ದೊರಕಿದವು. ಇವುಗಳೆಲ್ಲವನ್ನೂ ಅರ್ಥಮಾಡಿಕೊಂಡು ಬರೆಯಬೇಕಾದರೆ ಸಂಸ್ಕೃತವನ್ನೂ, ಪಾಲಿಯನ್ನೂ ಮೊದಲು ಕಲಿಯಬೇಕಾಯಿತು. ಹಾಗಾಗಿ ಯಾತ್ರಿಕರಿಬ್ಬರೂ ಪಾಟಲಿಪುತ್ರದಲ್ಲೇ ಮೂರು ವರ್ಷ ನಿಂತರು.

                 ಭಾರತಕ್ಕೆ ಬಂದ ಕಾರ್ಯವೆಲ್ಲವೂ ಮುಗಿಯಲು ಫಾ ಹಿಯೆನ್ನನು ತನ್ನ ದೇಶಕ್ಕೆ ಮರಳಲು ಸಿದ್ಧನಾದನು. ಅವನ ಸಹಯಾತ್ರಿ ತಾಒ ಚಿಂಗನು "ಇಲ್ಲಿನ ಸನ್ಯಾಸಿಗಳ ನಡತೆ, ಮೌನ ಮತ್ತು ಗಾಂಭೀರ್ಯದ ಮುಂದೆ ನಮ್ಮ ಜನರ ಅಶಿಸ್ತು ಮತ್ತು ಗಲಾಟೆಯನ್ನು ಹೋಲಿಸಿ ನೋಡಿದ ಮೇಲೆ, ನಾನು ಇಲ್ಲೇ ಇದ್ದು ಬಿಡಬೇಕೆಂದು ನಿರ್ಧರಿಸಿದ್ದೇನೆ. ನೀನು ಮಾತ್ರ ಈ ಪವಿತ್ರ ಗ್ರಂಥಗಳೊಂದಿಗೆ ಚೀನಾಗೆ ಹಿಂತಿರುಗು" ಎಂದು ಬಿಟ್ಟನು. ಅಂತೆಯೇ ಫಾ ಹಿಯೆನ್ನನೊಬ್ಬನೇ ತನ್ನ ಅಮೂಲ್ಯ ಗ್ರಂಥಗಳನ್ನು ತೆಗೆದುಕೊಂಡು ತನ್ನ ಮರುಪ್ರಯಾಣವನ್ನು ಆರಂಭಿಸಿದನು. ಗಂಗಾ ನದಿ ಹರಿಯುತ್ತಿದ್ದ ಮಾರ್ಗವನ್ನೇ ಅನುಸರಿಸಿ ತಾಮ್ರಲಿಪ್ತಿ ಎಂಬ ದೇಶಕ್ಕೆ ಬಂದನು. ಇಲ್ಲಿ ೨೨ ಭೌದ್ಧವಿಹಾರಗಳಿದ್ದವು. ಫಾ ಹಿಯೆನ್ನನು ಇಲ್ಲೇ ಮತ್ತೆರಡು ವರ್ಷವಿದ್ದು ಇನ್ನೂ ಅನೇಕ ಸೂತ್ರಗಳನ್ನು ಬರೆದನು. ಪ್ರತಿಮೆಗಳ ಚಿತ್ರಗಳನ್ನೂ ಬಿಡಿಸಿದನು. ಮುಂದೆ ಸಮುದ್ರಯಾನ ಮಾಡಿ ಸಿಂಹಳ ದ್ವೀಪದಲ್ಲಿ ಮತ್ತೆರಡು ವರ್ಷವಿದ್ದು ತನ್ನ ಯಾತ್ರೆಯನ್ನು ಮುಂದುವರಿಸಿದನು. ಕೊನೆಗೆ ಮತ್ತೊಂದು ಹಡಗನ್ನೇರಿ ಮಾರ್ಗದಲ್ಲಿ ಜಾವಾ ದ್ವೀಪದಲ್ಲಿ (ಆಗ ಅಲ್ಲಿ ಹಿಂದೂಗಳು ಮಾತ್ರವೇ ಇದ್ದರು- ಬೌದ್ಧರು ಯಾರೂ ಇರಲಿಲ್ಲ ಎಂದು ಫಾ ಹಿಯೆನ್ನನು ಹೇಳುತ್ತಾನೆ) ಕೆಲವು ದಿನವಿದ್ದು ಅನೇಕ ಚಂಡಮಾರುತ, ನೌಕಾಘಾತಗಳನ್ನು ಅನುಭವಿಸಿ ಕೊನೆಗೂ ತನ್ನ ಪವಿತ್ರ ಗ್ರಂಥಗಳೊಂದಿಗೆ ಚೀನಾವನ್ನು ತಲುಪಿದನು. ಅವನ ಒಟ್ಟು ಪ್ರಯಾಣಕ್ಕೆ ಹದಿನೈದು ವರ್ಷಗಳು ಹಿಡಿದವು. ಆ ವೇಳೆಗಾಗಲೇ ಬುದ್ಧಭದ್ರ ಮತ್ತು ಕುಮಾರಜೀವ ಎಂಬ ಭಾರತದ ಇಬ್ಬರು ಬೌದ್ಧ ಸನ್ಯಾಸಿಗಳು ಭೂಮಾರ್ಗದಿಂದ ಚೀನಾಗೆ ಆಗಮಿಸಿದ್ದರು. ಇವರಿಬ್ಬರ ಸಹಾಯದಿಂದ ಫಾ ಹಿಯೆನ್ನನು ಗ್ರಂಥಗಳನ್ನು ಸಂಶೋಧಿಸಿ, ಪರಿಷ್ಕರಿಸಿದ ಪ್ರತಿಗಳನ್ನು ತಯಾರು ಮಾಡಿದನು.

              ಫಾ ಹಿಯೆನ್ನನ ಬರೆದಿಟ್ಟಿರುವ ಪ್ರವಾಸ ಕಥನದಲ್ಲಿ ಬುದ್ಧನಿಗೂ, ಬೌದ್ಧರಿಗೂ ಸಂಬಂಧಪಟ್ಟ ವಿಷಯಗಳಿಗೆ ಪ್ರಾಶಸ್ತ್ಯವಿದೆ, ನಿಜ. ಆದರೆ ಪ್ರಾಚೀನ ಭಾರತದ ರಾಜ್ಯಭಾರ ಕ್ರಮ, ಜನರ ನಡತೆ ಇತ್ಯಾದಿಗಳ ಬಗ್ಗೆ ನಮಗೆ ದೊರೆತಿರುವ ಕೆಲವೇ ಚಾರಿತ್ರಿಕ ದಾಖಲೆಗಳಲ್ಲಿ ಈತನ ಬರಹಗಳು ಬಹುಮೂಲ್ಯವಾದುವು ಎನ್ನುವುದರಲ್ಲಿ ಸಂಶಯವಿಲ್ಲ.


Back to Top



ಆರ್ಯಭಟ ಮತ್ತು ಆರ್ಯಭಟೀಯ


  • ಲೇಖನ - ಡಾ.ಸಿ.ವಿ.ಮಧುಸೂದನ



         ವೇದಗಳ ಕಾಲದಿಂದಲೂ,ಪ್ರಾಯಶಃ ಅದಕ್ಕಿಂತ ಹಿಂದಿನಿಂದಲೂ, ಭಾರತದಲ್ಲಿ ಗಣಿತಕ್ಕೆ ಹೆಚ್ಚು ಪ್ರಾಶಸ್ತ್ಯವಿದೆ.ಈ ನಿಟ್ಟಿನಲ್ಲಿ ಭಾರತದ ಅನೇಕ ಕೊಡುಗೆಗಳಲ್ಲಿ ಅತ್ಯಮೂಲ್ಯವಾದ ಎರಡನ್ನು ಹೆಸರಿಸಬಹುದು.
೧. ಸಂಖ್ಯೆ ಹತ್ತನ್ನು ಆಧಾರಿಸಿದ ಸ್ಥಾನ ಮೌಲ್ಯ ಪದ್ಧತಿ(Decimal Place Value System)
೨. ಮಿಕ್ಕ ಅಂಕೆಗಳಂತೆಯೇ ಸೊನ್ನೆಯನ್ನೂ ಒಂದು ಚಿಹ್ನೆ(೦) ಇಂದ ನಿರೂಪಿಸುವುದು.

           ಸ್ಥಾನ ಮೌಲ್ಯ ಪದ್ಧತಿಯ ವಿಶೇಷವೆಂದರೆ, ಒಂದು ಅಂಕೆಯ ಬೆಲೆ ಇಷ್ಟೇ ಎಂದು ನಿರ್ದಿಷ್ಟವಲ್ಲ-ಅದರ ಬೆಲೆ ಒಂದು ಸಂಖ್ಯೆಯಲ್ಲಿನ ಆ ಅಂಕೆಯ ಸ್ಥಾನವನ್ನು ಅವಲಂಬಿಸಿರುತ್ತದೆ.ಉದಾಹರಣೆಗೆ ೨ ಎಂಬ ಒಂದೇ ಅಂಕೆಯು ೩೨ ಎಂಬ ಸಂಖ್ಯೆಯಲ್ಲಿ ಎರಡನ್ನೂ ೨ X ೧೦ ,೪೨೩ ಎಂಬ ಸಂಖ್ಯೆಯಲ್ಲಿ ಇಪ್ಪತ್ತನ್ನೂ ೨ X ೧೦ , ೧೨೦೩ ಎಂಬ ಸಂಖ್ಯೆಯಲ್ಲಿ ಇನ್ನೂರನ್ನೂ ೨ X ೧೦ ಸೂಚಿಸುತ್ತದೆ.ಇನ್ನು ಸೊನ್ನೆಗೆ ಒಂದು ಚಿಹ್ನೆಯಿಲ್ಲದಿದ್ದರೆ  ೧೨೩ ಕ್ಕೂ ೧೨೦೩ ಕ್ಕೂ ವ್ಯತ್ಯಾಸವೇ ನಮಗೆ ಗೊತ್ತಾಗುತ್ತಿರಲ್ಲಿಲ್ಲ! ಈ ಪದ್ದತಿಯು ಎಷ್ಟು ಮಹತ್ವದ್ದೂ,ಎಷ್ಟು ಪ್ರಯೋಜನಕಾರಿಯಾದದ್ದೂ ಎಂದು ಮನವರಿಕೆಯಾಗಬೇಕಾದರೆ, ರೋಮನ್ ಸಂಖ್ಯೆಗಳನ್ನೇ ಉಪಯೋಗಿಸಿಕೊಂಡು ಯಾವುದಾದರೂ ಗುಣಾಕಾರ ಮಾಡಿ ನೋಡಿ,ಉದಾಹರಣೆಗೆ DCCCLXXXVIII x XLIV ಅಥವಾ ಭಾಗಾಕಾರ ಮಾಡಿ ನೋಡಿ! ಒಂದು ಮಾತಿನಲ್ಲಿ ಹೇಳಬೇಕೆಂದರೆ ಭಾರತೀಯ ಮೂಲದ ಸ್ಥಾನ ಮೌಲ್ಯ ಪದ್ಧತಿ ಇಲ್ಲದಿದ್ದರೆ ವಾಣಿಜ್ಯ, ವಿಜ್ಞಾನ, ಗಣಕಯಂತ್ರಗಳು ಮುಂತಾದ ಯಾವುದೇ ಕ್ಷೇತ್ರದಲ್ಲಿ ಈಗಿರುವಷ್ಟು ಪ್ರಗತಿ ಸಾಧ್ಯವಾಗುತ್ತಿರಲಿಲ್ಲ.ಇದಕ್ಕಾದರೂ ಇಡೀ ಜಗತ್ತೇ ಭಾರತಕ್ಕೆ ಚಿರಋಣಿಯಾಗಿರಬೇಕು.

       ಗಣಿತ ಮತ್ತು ಖಗೋಳಶಾಸ್ತ್ರಗಳಿಗೇ ಮೀಸಲಾದ ಮತ್ತು ಈಗ ನಮಗೆ ದೊರಕಿರುವ ಭಾರತೀಯ ಗ್ರಂಥಗಳಲ್ಲಿ,ಆರ್ಯಭಟನು ರಚಿಸಿರುವ ಆರ್ಯಭಟೀಯವೇ ಅತ್ಯಂತ ಪ್ರಾಚೀನವಾದದ್ದು.ಇದು ಕೇವಲ ೧೨೧ ಶ್ಲೋಕಗಳನ್ನೊಳಗೊಂಡ ತುಂಬ ಚಿಕ್ಕ ಗ್ರಂಥ.ಇದನ್ನು ಸ್ಥೂಲವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು-ಆರಂಭದ ದೇವತಾ ಪ್ರಾರ್ಥನೆ ಮತ್ತು ಪರಿಸಮಾಪ್ತಿಯ ಮೂರು ಶ್ಲೋಕಗಳು, ದಶಗೀತಿಕ ಎಂಬ ಹತ್ತು ಶ್ಲೋಕಗಳು ಮತ್ತು ಆರ್ಯಾಷ್ಟಶತವೆಂಬ ೧೦೮ ಶ್ಲೋಕಗಳು. ಆರ್ಯಾಷ್ಟಶತದಲ್ಲಿ ಮೂರು ಉಪ ಭಾಗಗಳಿವೆ: ಕೇವಲ ಗಣಿತಕ್ಕೆ ಮೀಸಲಾದ ‘ಗಣಿತಪಾದ (೩೩ ಶ್ಲೋಕಗಳು); ಕಾಲಮಾನಕ್ಕೆ ಸಬಂಧಿಸಿದ ‘ಕಾಲಕ್ರಿಯ’(೩೫ ಶ್ಲೋಕಗಳು); ಮತ್ತು ಖಗೋಳಶಾಸ್ತ್ರವನ್ನು ಕುರಿತಾದ ‘ಗೋಲ’(೫೦ ಶ್ಲೋಕಗಳು).
         ಆರ್ಯಭಟಿಯದ ಸೂತ್ರಗಳನ್ನು ತುಂಬ ಸಂಕ್ಷೇಪವಾಗಿ ಬರೆದಿರುವುದರಿಂದ ಇವುಗಳಲ್ಲಿ ಅನೇಕವನ್ನು ಟಿಪ್ಪಣಿ(commentry) ಅಥವಾ ಕರಣ ಗ್ರಂಥ(manual) ಇಲ್ಲದೆ ಅರ್ಥಮಾಡಿಕೊಳ್ಳುವುದು ಕಷ್ಟ.ಆರ್ಯಭಟನೇ ಒಂದು ಕರಣ ಗ್ರಂಥವನ್ನು ಬರೆದಿದ್ದಿರಬಹುದು-ಆದರೆ ಅದು ಲಭ್ಯವಿಲ್ಲ.ಕ್ರಿ.ಶ.೧೫ನೆಯ ಶತಮಾನದಲ್ಲಿ ಮಹೇಶ್ವರ ಎಂಬ ಭಾಷ್ಯಾಕಾರನು(commentator) ಸಂಸ್ಕೃತ ಗದ್ಯದಲ್ಲಿ ಆರ್ಯಭಟೀಯಕ್ಕೆ‘ಭಟದೀಪಿಕಾ’ ಎಂಬ ಬಹು ಮೂಲ್ಯ ಟಿಪ್ಪಣಿಯನ್ನು ಬರೆದಿರುತ್ತಾನೆ.ಆದರೆ ಕೆಲವು ವೇಳೆ ಮಾತ್ರ ಈತನು ತನ್ನದೇ ಆದ ಅಭಿಪ್ರಾಯಕ್ಕೆ ತಕ್ಕಂತೆ ಮೂಲ ಶ್ಲೋಕವನ್ನು ಅರ್ಥೈಸಿರುವಂತೆ ತೋರುತ್ತದೆ.ಇದಲ್ಲದೆ ಆರ್ಯಭಟನ ನಂತರ ಬಂದ ಬ್ರಹ್ಮಗುಪ್ತ,ಭಾಸ್ಕರ ಮುಂತಾದ ಅತ್ಯಂತ ಮೇಧಾವಿಗಳೂ ಆರ್ಯಭಟೀಯವನ್ನು ಅನೇಕಸಲ ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ.

ಗಣಿತಪಾದದ ಮೊದಲನೆಯ ಶ್ಲೋಕದಿಂದಲೇ ಆರ್ಯಭಟನು ಕುಸುಮಪುರದ(ಪಾಟಲೀಪುತ್ರದ)ನಿವಾಸಿ ಎಂದು ತಿಳಿಯುತ್ತದೆ,ಆದರೆ ಮೂಲತಃ ಈತನು ಕೇರಳದವನೆಂದು ಕಾಣುತ್ತದೆ.ದಶಗೀತಿಕಾಸಾರದ ಮೂರನೆಯ ಶ್ಲೋಕ ಮತ್ತು ಕಾಲಕ್ರಿಯೆಯ ಹತ್ತನೆಯ ಶ್ಲೋಕವನ್ನು ಜೊತೆಗೆ ಓದಿದಾಗ,ಆರ್ಯಭಟೀಯವನ್ನು ಬರೆದಾಗ ಮಹಾಭಾರತ ಯುದ್ಧವಾಗಿ ೩೬೦೦ ವರ್ಷಗಳಾಗಿದ್ದವೆಂದು ಆಗ ಲೇಖಕನಿಗೆ ೨೩ ವರ್ಷಗಳಾಗಿದ್ದವೆಂದೂ ತಿಳಿಯುತ್ತದೆ-ಎಂದರೆ ರಚನೆಯ ವರ್ಷ ಕ್ರಿ.ಶ.೪೯೯ ಮತ್ತು ಆರ್ಯಭಟನ ಜನನವಾದದ್ದು ಕ್ರಿ.ಶ.೪೭೬ ರಲ್ಲಿ.
ಗ್ರಂಥ ಚಿಕ್ಕದಾದರೂ,ಆರ್ಯಭಟೀಯದಲ್ಲಿ ಇಂದಿಗೂ ಗಮನಾರ್ಹ ವಿಷಯಗಳು ಹೇರಳವಾಗಿವೆ,ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಬಯಸುತ್ತೇನೆ:

* ಮೇಲೆ ಹೇಳಿದ ಸ್ಥಾನಮೌಲ್ಯಪದ್ಧತಿಯನ್ನು ಆರ್ಯಭಟನು ತನ್ನ ಗಣಿತಪಾದದ ಎರಡನೆಯ ಶ್ಲೋಕದಲ್ಲಿರುವ ‘ಸ್ಥಾನಾತ್ ಸ್ಥಾನಂ ದಶಗುಣಂ ಸ್ಯಾತ್’ಎಂಬ ಪದಬಂಧದಿಂದ ಸೂಚಿಸುತ್ತಾನೆ.
* ಗಣಿತಪಾದದ ೪ ಮತ್ತು ೫ ನೆಯ ಶ್ಲೋಕಗಳಲ್ಲಿ ವರ್ಗಮೂಲ ಮತ್ತು ಘನಮೂಲಗಳನ್ನು(square and cube roots) ಕಂಡುಹಿಡಿಯುವ ಬಗೆ ತಿಳಿಸುತ್ತಾನೆ.
* ಗಣಿತಪಾದದ ಹತ್ತನೆಯ ಶ್ಲೋಕವನ್ನು ನೋಡಿರಿ:
ಚತುರಧಿಕಂ ಶತಮಷ್ಟಗುಣಂ ದ್ವಾಷಷ್ಠಿಸ್ತಥಾ ಸಹಸ್ರಾಣಾಮ್
ಆಯುತದ್ವಯ ವಿಷ್ಕಂಭಸ್ಯಾಸನ್ನೋ ವೃತ್ತ ಪರಿಣಾಹಃ ||
ಇದರ ಅರ್ಥ ಹೀಗಿದೆ; ನೂರಕ್ಕೆ ನಾಲ್ಕನ್ನು ಸೇರಿಸಿ ಅದನ್ನು ಎಂಟರಿಂದ ಗುಣಿಸಿ ನಂತರ ಅದಕ್ಕೆ ಅರವತ್ತೆರಡು ಸಾವಿರವನ್ನು ಸೇರಿಸಿದರೆ, ಅದು ಇಪ್ಪತ್ತು ಸಾವಿರ ವ್ಯಾಸವಿರುವ ವೃತ್ತದ ಪರಿಧಿಗೆ ಸುಮಾರು ಸಮವಾಗುತ್ತದೆ.ಎಂದರೆ:

104 x 8 + 62000 = 62832 ≈ circumference of a circle of diameter 20000
But, circumference = π x diameter
Therefore, π ≈ 62832/20000 = 3.1416

ಆರ್ಯಭಟನು ಇಲ್ಲಿ ಕೊಟ್ಟಿರುವ‘ಪೈ’ನ ಮೌಲ್ಯವು ಆರ್ಖಿಮಿಡೀಸ್ ಮುಂತಾದ ವಿಜ್ಞಾನಿಗಳು ಬಳಸುತ್ತಿದ್ದ(೨೨/೭)ಗಿಂತ ಹೆಚ್ಚು ನಿಖರವಾಗಿದ್ದೂ,ಇದೂ ಸಹ ಕರಾರುವಾಕ್ಕಾದದ್ದಲ್ಲ ಎಂದು ‘ಆಸನ್ನೋ’(ಸುಮಾರು) ಎಂಬ ಪದದಿಂದ ಸೂಚಿಸಿದ್ದಾನೆ.

           ಪ್ರಾಚೀನಕಾಲದಲ್ಲಿ ಭಾರತೀಯರು ಗ್ರಹಣವಾಗುವಾಗ ರಾಹು ಎಂಬ ರಾಕ್ಷಸನು ಸೂರ್ಯನನ್ನು ನುಂಗುತ್ತಾನೆ ಎಂದು ನಂಬಿದ್ದರು.ಆದರೆ ಆರ್ಯಭಟೀಯದಲ್ಲಿನ ಗೋಲದ ಮೂವತ್ತೇಳನೆಯ ಶ್ಲೋಕದ ಎರಡನೆಯ ಸಾಲು ಹೀಗಿದೆ:
ಛಾದಯತಿ ಶಶೀ ಸೂರ್ಯಂ ಶಶಿನಂ ಮಹತೀ ಚ ಭೂಚ್ಛಾಯಾ ಇದನ್ನು ಟಿಪ್ಪಣಿಕಾರ ಪರಮೇಶ್ವರನು ಈ ರೀತಿ ವಿವರಿಸಿದ್ದಾನೆ ‘ಸೂರ್ಯಂ ಗ್ರಹಣಕಾಲೇ ಶಶಿ ಛಾದಯತಿ ನ ತು ರಾಹುಃ,ಶಶಿನಂ ಗ್ರಹಣಕಾಲೇ ಛಾದಯತಿ ಮಹತೀ ಭೂಚ್ಛಾಯಾ ನ ತು ರಾಹುಃ.’ ಎಂದರೆ ಸೂರ್ಯಗ್ರಹಣವು ಚಂದ್ರನ ನೆರಳಿನಿಂದಲೂ,ಚಂದ್ರಗ್ರಹಣವು ಭೂಮಿಯ ನೆರಳಿನಿಂದಲೂ ಆಗುತ್ತವೆ,ರಾಹು ಎಂಬ ರಾಕ್ಷಸನಿಂದಲ್ಲ.
ಹಿಂದಿನ ಕಾಲದಲ್ಲಿ ಪಾಶ್ಚಾತ್ಯ,ಪೌರಾತ್ಯರೆಲ್ಲರೂ ಭೂಮಿಯು ಸ್ಥಿರವಾಗಿದೆ-ಸೂರ್ಯ ಮತ್ತು ನಕ್ಷತ್ರಗಳೆಲ್ಲವೂ ಅದರ ಸುತ್ತ ಸುತ್ತುತ್ತವೆ ಎಂದು ತಿಳಿದಿದ್ದರು.ಆದರೆ ಆರ್ಯಭಟನು ಭೂಮಿಯು ತನ್ನದೇ ಅಕ್ಷದ ಮೇಲೆ ತಿರುಗುತ್ತಿದೆ-ದೋಣಿಯಲ್ಲಿ ಪಯಣ ಮಾಡುತ್ತಿರುವವನಿಗೆ ಸ್ಥಿರವಸ್ತುಗಳೆಲ್ಲವೂ ಹಿಂದೆ ಹಿಂದೆ ಹೋದಂತೆ ಕಾಣುವಂತೆ,ಸ್ಥಿರವಾಗಿರುವ ನಕ್ಷತ್ರಗಳು ವಿರುದ್ಧ ದಿಕ್ಕಿನಲ್ಲಿ ಹೋದಂತೆ ನಮಗೆ ಭಾಸವಾಗುತ್ತದೆ ಎಂದು ತಿಳಿಸುತ್ತಾನೆ(ಗೋಲ,೯). ಈ ಸತ್ಯವನ್ನು ಅಂಗೀಕರಿಸಲು ಯೂರೋಪಿಯನ್ನರಿಗೆ ಸಾವಿರಕ್ಕೂ ಹೆಚ್ಚಿನ ವರ್ಷಗಳು(ಗೆಲಿಲೆಯೋನ ಕಾಲದವರೆಗೂ) ಬೇಕಾದವು !
ಆರ್ಯಭಟೀಯದಿಂದ ಇನ್ನೂ ಅರಿಯಬೇಕಾದ ವಿಷಯಗಳು ಅನೇಕವಿವೆ.ಆರ್ಯಭಟನ ಕೆಲವು ಸಿದ್ಧಾಂತಗಳು ಸನಾತನ ನಂಬಿಕೆಗಳಿಗೆ ಎದುರಾಗಿದ್ದುದರಿಂದ ಆತನು ಬ್ರಹ್ಮಗುಪ್ತ ಮುಂತಾದವರಿಂದ ಅನೇಕ ಟೀಕೆಗಳಿಗೆ ಒಳಗಾದನು.ಆರ್ಯಭಟೀಯದಲ್ಲಿ ಕೆಲವು ತಪ್ಪುಗಳೂ ಇವೆ-ಉದಾಹರಣೆಗೆ - ಗೋಲದ ಗಾತ್ರವನ್ನು(volume of sphere) ಕಂಡುಹಿಡಿಯುವ ಸೂತ್ರ ಸರಿಯಲ್ಲ.ಗ್ರಹಗಳ ವ್ಯಾಸದ ಬಗ್ಗೆ ಆರ್ಯಭಟನು ಕೊಟ್ಟಿರುವ ಮಾಹಿತಿಯೂ ಕರಾರುವಾಕ್ಕಾದುದಲ್ಲ.ಆದರೆ ಈ ಕೃತಿಯನ್ನು ರಚಿಸಿದಾಗ ಟೆಲಿಸ್ಕೋಪುಗಳೇ ಇರಲಿಲ್ಲವೆಂಬುದನ್ನು ನೆನಪಿನಲ್ಲಿಡಬೇಕು.ಈ ಹಿನ್ನೆಲೆಯಲ್ಲಿ ನೋಡಿದರೆ ಆರ್ಯಭಟನು ತನ್ನ ಸಮಕಾಲೀನರಿಗಿಂತ ಬಹಳ ಮುಂದುವರೆದಿದ್ದನು ಎಂದು ನಿಸ್ಸಂದೇಹವಾಗಿ ಹೇಳಬಹುದು.


Back to Top



ಕವಿಯಾಗುವಾಸೆ



ಕವಿಯಾಗುವಾಸೆ ಅನುಭವಿಯಾಗುವಾಸೆ
ಜಗದ ಜೋಲಿಯ ತೂಗೋ ರವಿಯಾಗುವಾಸೆ

ತಾಯ ಮೊಲೆಹಾಲ ಸಂಭ್ರಮದೆ ಹೀರುವ
ಕಂದನ ಕಂಗಳ ಕಾಂತಿಯ ಪ್ರತಿಫಲಿಸುವಾಸೆ

ತನುಮನಗಳಾಲಿಂಗನದೋಳ್ ಜಗವ ಮರೆವ
ಪ್ರಣಯಿಗಳ ಪ್ರೇಮದಾಳವ ಅಳೆಯುವಾಸೆ

ಪ್ರಕೃತಿಯೇ ಪ್ರಾದುರ್ಭವಿಸಿದಂದದಿ ಪ್ರೇಮದ ಕಂಪ ಸೂಸುವ
ಕುಸುಮಗಳ ರಸಗಂಧವ ಹೀರಿ ಉನ್ಮತ್ತ ದುಂಬಿಯಾಗುವಾಸೆ

ಸ್ವಾತಂತ್ರ್ಯ ವೆಂಬ ರೆಕ್ಕೆಗಳ ಬಡಿಯುತ್ತಾ ಜಿಗಿ ಜಿಗಿದು ಪುಟಿಪುಟಿದು
ಬೆಳದಿಂಗಳಿನತ್ತ ಪಯಣಿಸುವ ಹಕ್ಕಿಯಾಗುವಾಸೆ

ಹೃದಯಾಂತರಾಳದಲಿ ಹುದುಗಿಹ ಸವಿನೆನಪುಗಳ ಬಗೆದಗೆದು
ಪರಿಪರಿಯ ರಂಗುಗಳ ರಂಗೋಲಿ ಮಾಡಿ ಬಿತ್ತರಿಸುವಾಸೆ

ದಿಗಂತದಲಿ ಮಿನುಗುವ ಚುಕ್ಕಿಗಳ ಜೊತೊ ಚಕ್ಕಂದವಾಡುತಾ
ಮುಗಿಲಿನಿಂದುದುರುವ ಮಳೆಹನಿಗಳ ಜೊತೆ ಸಾಗರವ ಸೇರುತ
ಅನಂತದಲಿ ಲೀನವಾಗುವಾಸೆ

ಕವಿಯಾಗುವಾಸೆ ಅನುಭವಿಯಾಗುವಾಸೆ
ಜಗದ ಜೋಲಿಯ ತೂಗೋ ರವಿಯಾಗುವಾಸೆ

- ಗುಹ (ಗುರಪ್ಪ ಹರೀಶ)೧೯೯೪

Back to Top



ಬಹುದಿನಗಳಿಂದ ಕಾಡುತ್ತಿತ್ತೆನ್ನನು ಒಂದು ಪ್ರಶ್ನೆ - ಹೆಣ್ಣೆಂದರೇನು ?

ಕವಿಪುಂಗವರ ವರ್ಣನೆಯ ಕೋಗಿಲೆಯ ಕಂಠದಲಿ
ಅವಳು ಸಿಗಲಿಲ್ಲ

ನಾಟ್ಯಗಂಧರ್ವರ ನವಿಲಿನ ನಡಿಗೆಯಲ್ಲಿ
ಅವಳು ದೊರಕಲಿಲ್ಲ

ಬೇಲೂರ ಶಿಲಾಬಾಲಿಕೆಯೂ ಕಾಳಿದಾಸನ ಶಕುಂತಲೆಯೂ
ನನಗೆ ಹೆಣ್ಣಾಗಿ ಕಾಣಲಿಲ್ಲ

ಹೆಣ್ತನವೆಂದರೆ ಕಿತ್ತೂರು ಚೆನ್ನಮ್ಮನ ಶೌರ್ಯ ಮಾತ್ರವೇ?
ಅಥವಾ ಕುಂತಿಯ ವಾತ್ಸಲ್ಯ ಮಾತ್ರವೇ?
ನನಗಂತೂ ಹಾಗನಿಸುತ್ತಿಲ್ಲವಲ್ಲ

ಮಣ್ಣು ಹೊನ್ನಿನೊಡನೆ ಹೆಣ್ಣನ್ನು ಸೇರಿಸಿ
ಆಕೆಯನ್ನು ನಿರ್ಜೀವವಾಗಿಸಿಹೆವು ನಾವು

ಮಾತೃತ್ತ್ವ ದೈವತ್ತ್ವಗಳ ಗುಣಗಳಲ್ಲಿ
ಆಕೆಯನ್ನು ಬಂಧಿಸಿಹೆವು ನಾವು

ಶೃಂಗಾರ ಕಾಮಗಳ ಉಪಾಸನೆಯಲ್ಲಿ
ಆಕೆಯನ್ನು ಸ್ಥನಜಘನಗಳ ಮಾಂಸದ ಮುದ್ದೆಯಾಗಿಸಿಹೆವು ನಾವು

ನನ್ನ ದೃಷ್ಟಿಯಲ್ಲಿ ಹೆಣ್ಣೆಂದರೆ
ತಾಯಿ-ಮಗಳು-ಅಕ್ಕ-ತಂಗಿ-ಪ್ರೇಯಸಿ-ಪ್ರಿಯತಮೆ
ಇವಿಷ್ಟೇ ಅಲ್ಲದ, ಗಂಡಿನಂತೆಯೇ, ಅಥವಾ
ಗಂಡಿನಂತಲ್ಲದ ಅಥವಾ ಬರೀ ಗಂಡಿನೊಡನೇ ಹೋಲಿಕೆಯೇಕೆ?
ಒಂದು ಸ್ವತಂತ್ರ ವ್ಯಕ್ತಿ ಎಂದರೆ ಸಾಲದೇ?



- ಗುಹ (ಗುರಪ್ಪ ಹರೀಶ)೧೯೯೪

Back to Top



ಲಾಲಿ ಹಾಡು

ಲಾಲೀ ಲಾಲೀ ಲಾಲೀ ಲಾಲಿ
ಲಾಲೀ ಲಾಲೀ ಲಾಲೀ ಲಾಲಿ

ವಾಗ್ದೇವಿ ಭಾರತಿಗೆ ವರಹಾದ ಲಾಲಿ
ಆಜರಾಜೇಶ್ವರಿಗೆ ರತುನಾದ ಲಾಲಿ
ಮಧುರೆ ಮೀನಾಕ್ಷಿಗೆ ಮುತ್ತೀನ ಲಾಲಿ
ಜಗದಂಬ ಜನನಿಗೆ ವಜ್ರಾದ ಲಾಲಿ

ಮೈಥಿಲಿ ಸೀತೆಗೆ ಮಿಥಿಲೇಶ ಲಾಲಿ
ಪದ್ಮಾವತಿಗೆ ಆಕಾಶರ ಲಾಲಿ
ಹೈಮವತಿಗೆ ಹಿಮವಂತ ಲಾಲಿ
ಶ್ರೀಮಹಾಲಕ್ಷ್ಮಿಗೆ ಶರಧೀಶ ಲಾಲಿ

ಶೃಂಗೇರಿ ಶಾರದೆಗೆ ಸಿರಿ ತುಂಗೆ ಲಾಲಿ
ಕಾಶಿ ವಿಶಾಲಗೆ ವರಗಂಗೆ ಲಾಲಿ
ಕನಕದುರ್ಗೆಗೆ ಶ್ರೀಕ್ರಿಷ್ಣೆ ಲಾಲಿ
ರಾಧಾ ರಾಣಿಗೆ ಯಮುನೇಯ ಲಾಲಿ

ಆದಿ ಶಕ್ತಿಗೆ ಶಂಕರರ ಲಾಲಿ
ಭಾಗ್ಯಾದ ಲಕ್ಷ್ಮಿಗೆ ಪುರಂದಾರ ಲಾಲಿ
ಶ್ರೀಚಕ್ರ ರಾಗ್ನಿಗೆ ದೀಕ್ಷಿತರ ಲಾಲಿ
ಸಿಡ್ನಿ ಪುರಿ ಶಾರದೆಗೆ ಶ್ರೀನಿವಾಸ ಲಾಲಿ

- ಶ್ರಿಮತಿ. ಅನು ಶಿವರಾಂ

Back to Top



ಶ್ರುತಿ

ಎದೆಗೂಡಿನೊಳಗೊಂದು
ಲಯಭರಿತ ಮಿಡಿತವಿದೆ
ಆತ್ಮವೋ,ಮನವೋ,ಜೀವಭಾವವೋ
ಬಲ್ಲವರಾರು ಅದರ ಹೆಸರು?

ಜಗದ ಹೊಗಳಿಕೆಗೆ ಉಬ್ಬಿ ಉಬ್ಬಿ
ನಿಂದನೆಗೆ ಭಾಗಿ ಕುಸಿದು ತಗ್ಗಿ
ಬಿಸಿ ತಗಲಿದೊಡನೆ ಕರಗಿ ಹರಿದು
ಛಳಿ ತಗಲಿದೊಡನೆ ಸೆಟೆದು ಬಿಗಿದು

ಲೋಕದ ತಾಳಕ್ಕೆ ಕುಣಿ,ಕುಣಿದು ದಣಿದು
ದೊಂಬರಾಟದ ಕಪಿಯಂತೆ ಹಲ್ಕಿರಿದು ಜಿಗಿದು
ಚಿಂತೆಗಳ ಸಂತೆಯಲಿ ದಿಕ್ಕೆಟ್ಟು ಅಲೆದು
ಹಳೆ ಗಾಯ ನೋವುಗಳ ದಿನದಿನವು ಕೆರದು

ದಣಿದು ಸೊರಗಿದೆ ಈ ಮಿಡಿತದ ಲಯವೀಗ
ಬಯಸುತಿದೆ ಶಾಂತಿಯ, ಅಳಿದು ಉದ್ವೇಗ
ಗುರು,ವೈದ್ಯ,ಸಖ ಕೊಟ್ಟ ಮದ್ದು ಕೆಲಸಕ್ಕೆ ಬರದು
ಉಪಶಮನವಡಗಿಹುದು ತಾ ಧ್ಯಾನ ಮಡುವಿನಲ್ಲಿಳಿದು

ಸಮಾಧಾನದ ಸಾಧನಕೆ ನಿರಹಂಕಾರದ ಲೇಪ
ಕರುಣೆ,ತ್ಯಾಗ,ಸಹನೆಗಳ ನಿರ್ವಿಕಾರ ಧೂಪ
ಸ್ವಾರ್ಥವ ಮೀರಿದ ಸ್ನೇಹ ಶ್ರುತಿ ನೇರಿದಾಗ
ಎದೆಬಡಿತವಾಗುವುದು ವಿಶ್ವಗಾನಕೆ ತಂಬೂರಿ


- ಶ್ರಿಮತಿ. ಅನು ಶಿವರಾಂ

Back to Top



ದಿಟ್ಟೆ


ಹದಿನಾಲ್ಕರ ನಿನ್ನ ಮಗ ಇಂದು
ತೊದಲು ನುಡಿಯಲಿ ಅಮ್ಮ ಎಂದ
ಚೆಲ್ಲಾಡುತ ಮೊದಲ ತುತ್ತು ಅನ್ನವ
ಚಮಚ ಹಿಡಿದು ತಿಂದ

ಅಬ್ಬ ಅದೆಷ್ಟು ಹಿಗ್ಗು ನಿನ್ನ ಮೊಗದಲ್ಲಿ
ಗೌರಿಶಂಕರವನ್ನೇರಿದ ಸಾಧನೆ ನಿನ್ನ ಕಣ್ಣಲ್ಲಿ
ನಕ್ಕಾರು ಕಂಡವರು ಇದೇನು ನಿನ್ನ ಜಂಬ
ಚೂಟಿ ಮಕ್ಕಳಿಲ್ಲವೇ ಊರ ತುಂಬ

ಎಲ್ಲರಂತಲ್ಲ ನಿನ್ನ ಮಗ ,ಅವರೇನು ಬಲ್ಲರು
ಉಬ್ಬಿದ ಅವನ ತಲೆಗೆ ನಿಯತಿನ ಹಣೆಪಟ್ಟಿ
ಶೂನ್ಯ ನೋಟ ಭಾವವಿಲ್ಲದ ಮಾಟಕ್ಕೆ
ಬುದ್ದಿ ಮಾಂದ್ಯದ ಬಿರುದು

ಅದೆಷ್ಟು ಕನಸುಗಳು ನೀ ಹೆಣೆದದ್ದು
ಮೊದಲ ಹೆಜ್ಜೆ, ತೊದಲ್ನುಡಿಗಳ ಸಂಭ್ರಮಕ್ಕೆ ಕಾದಿದ್ದು
ಕನಸುಗಳ ಸುತ್ತಿಟ್ಟು ಕರಾಳ ವಿಧಿ
ಅಳಿಸಿತ್ತು ನಿನ್ನ ಮೊಗದ ಸಿರಿನಗುವ

ಒಮ್ಮೆಲೇ ಮಣಿದು ಮುಪ್ಪಾಯ್ತು, ನಿನ್ನ ಮೈಮನ
ಮಣಿಯಲೊಪ್ಪಲಿಲ್ಲ ನಿನ್ನ ತಾಯ್ತನ
ಕಾಪಿಟ್ಟ ಕಂದನ ಜೀವನದ ಧಗೆಯಿಂದ
ಬಗೆಬಗೆಯ ನೋಟದಾ ಕೊಂಕಿನಲಿ

ಹಿಡಿಯಾಗಿಸಿದೆ ಜೀವನ ಅವನೊಳಿತಿಗಾಗಿ
ಉಳಿದೆ ನೀ ಅವನ ಕುಂಟು ಬದುಕಿನಾ ಊರುಗೋಲಾಗಿ
ದೂರ ದೂರ ಸರಿಯಿತು ಲೋಕ ದಿನಗಳೆಂದಂತೆ
ದಿಟ್ಟೆ ನೀ,ನೆಟ್ಟು ನಿಂತೆ ಅವನ ನೆರಳಿನಂತೆ

ವಿಧಿಯ ಸವಾಲ ಮೆಟ್ಟಿ ನಿಂತಿತು ತಾಯ್ತನ
ಅಮ್ಮ, ನಿನ್ನ ಅಂತಃಶಕ್ತಿಗಿದೋ ನಮನ


- ಶ್ರಿಮತಿ. ಅನು ಶಿವರಾಂ

Back to Top



ಸೆರಗು

ಅಮ್ಮ, ನಿನ್ನ ಪ್ರೀತಿಯೆಲ್ಲ ನೇಯ್ದು ಸೆರಗ ಮಾಡಿದೆ
ನಿನ್ನ ಸೆರಗಿನ ಅಂಚಿಗೆ, ನಗೆಯ ಕುಚ್ಚ ಕಟ್ಟಿದೆ
ನಿನ್ನ ಸೆರಗಿನ ಮರೆಯಲಿ ಅಮೃಥಧಾರೆಯ ಉಣಿಸಿದೆ
ನಿನ್ನ ಸೆರಗಿನ ತೊಟ್ಟಿಲಾ ಕಟ್ಟಿ ತೂಗಿ ಬೆಳೆಸಿದೆ ಲೋಕದಾಟಕೆ ಇಳಿದಿದು
ನಿನ್ನ ಸೆರಗಿನ ಬಯಲಲಿ ಮೊದಲ ಪಾಠವ ಕಲೆತದು
ನಿನ್ನ ಸೆರಗಿನ ಬಲದಲಿ ಯಕ್ಷ, ರಾಕ್ಷಸ ಕಥೆಯ ಕೇಳಿ ಹೆದರಿ ಅವಿತಾ ಸೆರಗದು
ಹೊಸಬರನ್ನು ಕಂಡು ನಾಚಿ, ಮುದುರಿ ಹಿಡಿದಾ ಸೆರಗದು
ಬಿದ್ದ ಗಾಯಕೆ ಪಟ್ಟಿ ಆಯಿತು ನಿನ್ನ ಸೆರಗಿನ ತುಂಡದು
ಜ್ವರದ ತಾಪಕೆ ತಂಪು ತಂದಿತು ನಿನ್ನ ಸೆರಗಿನ ಅಂಚದು
ಆಡಿ ದಣಿದ ಬೆವರನು ಒರೆಸಿ ತೀಡಿದಾ ಸೆರಗದು
ಮಳೆಗೆ, ಚಳಿಗೆ ಬೆಚ್ಚನೆ ಆಸರೆ ನಿನ್ನ ಸೆರಗಿನಾ ಬಿಸುಪದು
ಹರೆಯ ತಂದ ಬೆರಗನು ಹೇಳಿಕೊಂಡಾ ಸೆರಗದು
ಮೊದಲ ಪ್ರೀತಿಯ ಗುಟ್ಟನು ಹಂಚಿಕೊಂಡ ಸೆರಗದು
ಬಾಳ ದಾರಿಗೆ ನೆರಳು ನೀಡಿತು ನಿನ್ನ ಸೆರಗಿನಾ ವಿಸ್ತರ
ನನ್ನ ಸೆರಗಿನ ನೇಯ್ಗೆಗೆ ನಿನ್ನ ಸೆರಗೇ ಹಂದರ


- ಶ್ರಿಮತಿ. ಅನು ಶಿವರಾಂ

Back to Top



ಜಂಬೂ ಸವಾರಿ

ಪುಟ್ಟುಗೆ ಆನೆ ಮೇಲೆ ಸವಾರಿ
ಪುಟ್ಟುಗೆ ಕುದುರೆ ಮೇಲೆ ಸವಾರಿ
ನಾಳೆ ಮೈಸೂರಲ್ಲಿ ಜಂಬೂ ಸವಾರಿ
ಕರೆದುಕೊಂಡು ಹೋಗುವೆ ಬೇಗ ಮಲಗು ಜಾಣಮರಿ

ಚುಕುಬುಕೂ ರೈಲು ಹತ್ತಿ ಮೈಸೂರಿಗೆ ಹೋಗೋಣ
ಬೊಂಬೆಗಳ ಕೊಡಿಸುವೆ ಬಂದಾಗ ಚನ್ನಪಟ್ ಣ
ಮಂಡ್ಯವೂ ಬಂದಾಗ ಬೆಲ್ಲದಾ ಘಮ ಘಮಾ.

ಅಲ್ಲಿ ನೋಡು ಕಾಣುತಿದೆ ಶ್ರೀರಂಗಪಟ್ಟಣ
ಶ್ರೀರಂಗನಾಥನಿಗೆ ಕೈಗಳನು ಮುಗಿಯೋಣ
ಕಾವೇರಿ ಕಂಡಾಗ ಮೈಯ್ಯೆಲ್ಲಾ ಜುಮ ಜುಮಾ.

ಇದೋ ನೋಡು ಬಂದಿತು ಮೈಸೂರು ನಗರವು,
ಅರಮನೇ ಉದ್ಯಾನವನಗಳಾ ಸಾಲು ಸಾಲು
ಓಡೋಡಿ ಹತ್ತೋಣ ಚಾಮುಂಡಿ ಮೆಟ್ಟಿಲು.

ಆನೆ ಹುಲಿ ಕರಡಿ ನರೀ ಜಿಂಕೆ ಮತ್ತು ಸಿಂಹ
ಹಾವು ಮೊಸಳೆ ನವಿಲು ಕೋತಿ ಜಿರಾಫೆ ನೋಡಮ್ಮ
ಬೋನಿನಲ್ಲೇ ಇರುವುದು ನೀನು ಲೇಸಮ್ಮ

ವಿಜಯದಶಮಿಯಾದಿನದ ಜಂಬೂಸವಾರಿ,
ಪಟ್ಟದಾನೆ ಮೇಲೆ ಚಿನ್ನದ ಅಂಬಾರಿ,
ಮೈಸೂರು ನಗರವೆಲ್ಲ ಹಿಗ್ಗುತಿದೆ ಹಿರಿ ಹಿರಿ.

ಹೇಗಿತ್ತು ಪುಟ್ಟು ಜಂಬು ಸವಾರಿ,
ಮೈಸೂರು ದಾರಿ
ನಿದ್ದೆ ಬಂದು ಬಿಟ್ಟಿತೆ ನನ್ನ ಜಾಣ್ ಮರಿ
ಕನಸ ಕಾಣುತಿರುವೆಯಾ ನನ್ನ ಪುಟ್ಟ



- ನಾಗಶೈಲ ಕುಮಾರ್,ಸಿಡ್ನಿ

Back to Top



ನನ್ನ ಚಿನ್ನ

ಮುದ್ದುಮಲ್ಲಿಗೆ ನನ್ನ ಕೆಂಡಸಂಪಿಗೆ
ಸಂಪಿಗೆ ಇಲ್ಲ ಬರಿ ಕೆಂಡ ಇಂದೇತಕೆ?
ಸಿಟ್ಟೇತಕೆ, ಈ ಸಿಡುಕೇತಕೆ?
ಸಿಟ್ಟು ಸಿಡೂಕು ಬಿಟ್ಟರೆ ನಿನ್ನ ಒಯ್ಯುವೆ ಸ್ವರ್ಗಕ್ಕೇ.

ಮುತ್ತಿನ ಹಾರ ಇಲ್ಲವೆಂಬ ಮಾತೇತಕೆ?
ನಾದಿನವೂ ನಿನಗೆ ನೀಡುವ ಮುತ್ತಿಗೆ ಬರವೆಲ್ಲಿದೆ?

ಚಿನ್ನದ ಬಳೆಯು ಇಲ್ಲವೆಂಬ ಚಿಂತೆಯಲ್ಲವೆ?
ಕ್ವಿಂಟಾಲ್ ತೂಗುವ ನನ್ನ ಚಿನ್ನ ನೀನೇ ಅಲ್ಲವೆ?



- ನಾಗಶೈಲ ಕುಮಾರ್

Back to Top