Most Viewed
ಸುಗಮಗಾನ ಸಮಾಜ
Sugama Gaana Samaja
ಘಮ ಘಮ ಸುಗಮ
Ghama Ghama Sugama
ಸುಗಮ ಹಾಸ್ಯ
Sugama Hasya
ಸುಗಮ ಚಿಣ್ಣರಲೋಕ
Kids World
ಸುಗಮ ಸಾಹಿತ್ಯ
Sugama Sahitya
ಭಕ್ತಿ-ಸುಗಮ-
ಮುಕ್ತಿ
Bhakti Sugama
ಸುಗಮ ಆರೋಗ್ಯ
Sugama Aarogya
ಕನ್ನಡ ಪಾಠ ಶಾಲೆ
Kannada School
Useful links
- Kannada Calendar
- 2011 Hindu festival dates
- NSW Holiday List 2011-12
- NSW School Terms
- Nice things around Sydney
- A Beautiful NSW (A Guide)
- Cheapest Petrol prices in and around Sydney
ಸಣ್ಣ ಕಥೆಗಳು Tiny Tales 
- ಕನಕಾಪುರ ನಾರಾಯಣ
ಕುಸ್ತಿ ಬರತ್ತಾ?(ಹಾಸ್ಯ)
ತಿಮ್ಮ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಅದೇ ಸಮಯಕ್ಕೆ ಗುಂಡ ಪಕ್ಕದಲ್ಲಿ ಬಂದು ಕುಳಿತ.ಹೊಸ ಮುಖ ಪರಿಚಯ ಇಲ್ಲ ಇಬ್ಬರೂ ಮಾತನಾಡದೇ ಕುಡಿಯುತ್ತಾ ಕುಳಿತಿದ್ದರು.ಅಮಲು ಏರುತ್ತಿದ್ದಂತೆ ಆಗಿಂದಾಗ್ಗೆ ಅನುಮಾನವಾಗಿ ಒಬ್ಬರನ್ನೊಬ್ಬರು ಮುಖ ನೋಡಿಕೊಳ್ಳುತ್ತಿದ್ದರು.ಸ್ವಲ್ಪ ಸಮಯದ ನಂತರ ತಿಮ್ಮ ಕೇಳಿದ"ರೀ ನಿಮಗೆ ಕುಸ್ತಿ ಮಾಡಕ್ಕೆ ಬರತ್ತಾ? ಕರಾಟೆ ಕುಂಗ್ಫೂ ಬರತ್ತಾ?ಕಿಕ್ ಬಾಕ್ಸಿಂಗ್ ಬರತ್ತಾ?ನಿಮ್ ಹತ್ರ ಚಾಕೂ, ಚೂರಿ, ಪಿಸ್ತೂಲ್,ಸಿರಿಂಜ್ ಏನಾದ್ರೂ ಇದೆಯಾ?" ಎಲ್ಲಕ್ಕೂ ಗುಂಡ "ಇಲ್ಲ " ಅಂದ....."ಅದ್ಸರೀ ಅಲ್ಲಾ ಇದೆಲ್ಲಾ ಯಾಕೆ ಕೇಳ್ತಾ ಇದ್ದೀರಾ?" ಎಂದು ಪ್ರಶ್ನಿಸಿದ. ತಿಮ್ಮ "ಏನಿಲ್ಲಾ ಆವಾಗ್ಲಿಂದ ನನ್ನ ಸೀಸೆ ತಗೊಂಡು ಗುಂಡ್ ಏರಿಸ್ತಾ ಇದ್ದೀರಾ ಅದಕ್ಕೆ,ಖಾತ್ರಿ ಮಾಡ್ಕೋತಾ ಇದ್ದೆ"ಎಂದು ಗುಂಡನಿಗೊಂದು ಸರಿಯಾಗಿ ಗೂಸಾ ಕೊಟ್ಟ.ಗುಂಡನಿಗೆ ಎಲ್ಲಾ ಎರೆಡೆರಡು ಕಾಣುತ್ತಿದ್ದುದು ಗುದ್ದು ಬಿದ್ದಮೇಲೆ ನಾಲ್ಕಾಯಿತು.
ಸತ್ತವರು ಯಾರು? (ಹಾಸ್ಯ)
ಒಬ್ಬ ಮಸಣದಲ್ಲಿ ತನ್ನ ತಾಯಿಯ ಸಮಾಧಿಯ ಮೇಲೆ ಹೂವಿನ ಬೊಕ್ಕೆ ಇಟ್ಟು ಕೆಲ ನಿಮಿಶ ಮೌನ ಆಚರಿಸಿ ಹೊರಟ. ಇನ್ನೂ ಸ್ಮಶಾನದಿಂದ ಹೊರಟಿಲ್ಲ ಆಗ ಯಾರೋ ಜೋರಾಗಿ ಅಳುವ ಧ್ವನಿ ಕೇಳಿಸಿತು.ತಿರುಗಿ ನೋಡಿದ.ಒಬ್ಬಾತ ಒಂದು ಸಮಾಧಿಯ ಬಳಿ ತಲೆ ತಲೆ ಚಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ.ಅವನ ಬಳಿ ಹೋಗಿ "ಸಾರಿ ಸಾರ್ ನಿಮ್ಮ ಸ್ವಂತ ವಿಶಯ ಕೇಳಬಾರದು, ಆದರೆ ಯಾಕೆ ಸಾರ್ ಯಾರನ್ನ ಕಳೆದುಕೊಂಡು ಹೀಗೆ ಅಳುತ್ತಿದ್ದೀರಿ? ಮಗನಾ, ತಂದೇನಾ,ಅಣ್ಣಾನಾ,ತಮ್ಮಾನಾ?" ಎಂದ. ಅದಕ್ಕೆ ಉತ್ತರವಾಗಿ ಆತ"ನನ್ನ ಹೆಂಡತಿಯ ಮೊದಲ ಗಂಡ ಸಾsssರ್"ಎಂದು ಇನ್ನೂ ಜೋರಾಗಿ ಅಳಲು ಶುರುಮಾಡಿದ.
ವಿಚಿತ್ರ ಲೋಕ
ಜೋಸೆಫ್ ಯೂರೋಪ್ ದೇಶದ ದೂರದ ಹಳ್ಳಿಯಲ್ಲಿ ವಾಸಮಾಡುತ್ತಿದ್ದ ಒಬ್ಬ ರೈತನ ಮಗ.ಇಡೀ ಜೀವನದಲ್ಲಿ ಒಮ್ಮೆಯೂ ಪಟ್ಟಣ ಕಂಡವನಲ್ಲ.ಜೋಸೆಫ್ ಗೆ ತಂದೆ ತೀರಿಹೋದ ಬಳಿಕ ಬೋರ್ ಹೊಡೆಯುತ್ತಿದ್ದ ಒಂದುದಿನ ಪಟ್ಟಣ ಸುತ್ತಿ ಬರುವ ಆಸೆಯಾಯಿತು.ಹೊರಟು ಬಂದ. ಪಟ್ಟಣ ತಲುಪುತ್ತಿದ್ದಂತೆಯೆ ಅನಿರೀಕ್ಷಿತ ಸ್ವಾಗತ.ಪೋಲೀಸರು ಮೂರು ಬಾರಿ ಪ್ರಶ್ನಿಸಿದರು,ಸಲ್ಲದ ತನಿಖೆಯಂತೆ ಅವನ ಐಡಿ, ವಿವರ ವಿಚಾರಿಸಿದರು.ಅದು ಹೇಗೋ ಮುಗಿಯಿತು ಎಂದು ಸುತ್ತ ನೋಡಿದರೆ ಎಲ್ಲೆಡೆ ಜನ ಏನೋ ಹುಡುಕಿಕೊಂಡು ದುಡುಕಿ ಓಡುವಂತೆ ಕಾಣಿಸಿತು. ಏನಿರಬಹುದೂ? ಎಲ್ಲರೂ ಹೀಗೆ ಓಡುತ್ತಿದ್ದಾರಲ್ಲಾ! ಕಿವಿಗೆ ಹೆಡ್ ಫೋನ್ ಚುಚ್ಚಿಕೊಂಡು ತನ್ಪಾಡಿಗೆ ತಾನೇ ಮಾತಾಡುತ್ತಾ ತಲೆ ಅಲ್ಲಾಡಿಸುತ್ತಾ ಹೋಗುತ್ತಿದ್ದ ಒಬ್ಬ ಯುವಕನನ್ನು ಹಿಂಬಾಲಿಸಿದ.ಆತ ಸುಮಾರು ಕಡೆ ತಿರುಗಾಡಿ,ಎರಡು ಘಂಟೆ ರೈಲು ಬಸ್ಸು ಕಾಲ್ನಡಿಗೆ ಬಳಸಿಕೊಂಡು ಒಂದು ದೊಡ್ಡ ಕಟ್ಟಡದಲ್ಲಿ ಪುಟ್ಟ ಫ್ಲಾಟ್ ಒಳಕ್ಕೆ ಹೋದ.ನಿರಾಸೆಯಿಂದ ದಣಿದ ಜೋಸಫ್ ರಾತ್ರಿಯಿಡೀ ಪಾರ್ಕನಲ್ಲೆ ಕಳೆಯಬೇಕಾಯ್ತು.ಬೆಳಿಗ್ಗೆ ಚಾರಿಟಿಯವರು ನಿರಾಶ್ರಿತರಿಗೆ ಕೊಡುವ ಬ್ರೆಡ್ ಕಾಫಿ ಸೇವಿಸಿ ಮತ್ತೆ ಗುಂಪು ಗುಂಪಾಗಿ ಹೋಗುತ್ತಿದ್ದ ಜನಜುಂಗುಳಿ ಹಿಂಬಾಲಿಸಿದ.ಶಾಪಿಂಗ್ - ಸೇಲ್ Upto 70% off ಎಂಬಕಡೆ ಜನ ನೂಕುನುಗ್ಗಲು,ಏನು ಕೊಳ್ಳುತ್ತಾರೆ ಎಂದು ಗಮನಿಸಿದ. ಹರಕಲು ಬಟ್ಟೆ,ಸೆಂಟ್ ಸೀಸೆಗಳು,ಕೈಗಡಿಯಾರಗಳು.ಅವನೂ ಒಂದು ಗಡಿಯಾರ ಕೈಗೆ ತೆಗೆದುಕೊಂಡು ನೋಡಿದ, ಅರೆ ನಿಮಿಶವೇ ತೋರಿಸದ ಇದಕ್ಕೆ ಇಷ್ಟೋಂದು ಬೆಲೆ? ಇದನ್ನು ಆಸೆ ಪಟ್ಟು ಕೊಳ್ಳುತ್ತಿದ್ದಾರಲ್ಲಾ ಎಂದು ವ್ಯಥೆಯಿಂದ ಹೊರಬಂದ.ಹೊರಗೆ ಮಕ್ಕಳು ಸಂತೋಷದಿ ಆಡುತ್ತಿದ್ದರು.ಅದರಲ್ಲಿ ಒಬ್ಬ ಹುಡುಗ ಅದೇನೋ ಕೈಯಲ್ಲಿ ಹಿಡಿದು ಕೆಟ್ಟಮುಖ ಮಾಡುತ್ತಾ ಕೈಯಲ್ಲಿದ್ದ (console)ಡಬ್ಬಿಯನ್ನು ಬೆರಳಿನಿಂದ ಅದುಮಿ ಅದುಮಿ ತಲೆ ಚಚ್ಚಿಕೊಂಡು ಆ ಡಬ್ಬಿಗೂ ಒಂದೇಟು ಕುಟ್ಟುತ್ತಿದ್ದ.ಮಿಕ್ಕ ಹುಡುಗರು ಅದನ್ನು ಕೇಳಲು ಬಂದರೆ ಆತ ಕೊಡುವುದಿಲ್ಲ ಎಂದು ಹಟದಿಂದ ತನ್ನ ಆಟ ಮುಂದುವರೆಸುತ್ತಿದ್ದ.ಜೋಸಫ್ ಹುಡುಗನಿಗೆ ಸಹಾಯ ಮಾಡಬೇಕು ಎನಿಸಿತು.ಹುಡುಗನಿಗೆ ಆ ಡಬ್ಬಿಯಿಂದ ಏನೋ ತೊಂದರೆ ಇರಬೇಕು ಅದಕ್ಕೆ ಹಾಗೆ ಮಾಡುತ್ತಿದ್ದಾನೆ ಎಂದು ಆಡಬ್ಬಿಯನ್ನು ಕಸಿದು ಫಟ್ ಎಂದು ನೆಲಕ್ಕೆ ಅಪ್ಪಳಿಸಿ ಏನೋ ಸಹಾಯ ಮಾಡಿದೆ ಎಂದು ಹುಡುಗನ ಕಡೆ ನೋಡಿ ಮಂದಹಾಸ ಬಿರಿದ.ಅದು ಕಂಪ್ಯೂತರ್ ಗೇಮ್ಸ್ ಆಡುವ consoleಆಗಿತ್ತು. ಬಾಲಕ ಓ! ಎಂದು ಅಳಲು ಆರಂಭಿಸಿದ ಮಿಕ್ಕ ಮಕ್ಕಳು,ಅವರ ತಂದೆ ತಾಯಂದಿರೂ ಜೋಸೆಫ್ ನನ್ನು ಅಟ್ಟಿಸಿಕೊಂಡು ಬಂದರು. ಬದುಕಿದೆಯಾ ಬಡಜೀವ ಎನ್ನುತ್ತಾ ಓಡತೊಡಗಿದವನು ಸಾಕಪ್ಪ ಪಟ್ಟಣ ಸಹವಾಸ ಎಂದು ತನ್ನ ಹಳ್ಳಿಗೆ ಕಡೆಗೆ ರೈಲು ಹತ್ತುವವರೆಗೂ ನಿಲ್ಲಲ್ಲಿಲ್ಲ.
ಮುದ್ದು
ರವಿ ಒಬ್ಬ ಒಳ್ಳೆಯ ಹುಡುಗ.ಎಲ್ಲರಿಗೂ ಆತನನ್ನು ಕಂಡರೆ ಬಹಳ ಪ್ರೀತಿ.ಆತನನ್ನು ಅತಿ ಮುದ್ದು ಮಾಡಿ ಆತನಿಗೆ ಸ್ವಲ್ಪವೂ ನೋವಾಗದಂತೆ ಜಾಗರೂಕತೆಯಿಂದ ಕಾಣುತ್ತಿದ್ದರು.ಕೇಳುವ ಮೊದಲೇ ಆತನಿಗೆ ಎಲ್ಲಾ ವಸ್ತುಗಳು ಸಿಗುತ್ತಿದ್ದವು.ಅತಿ ಮುದ್ದಿನಿಂದಾಗಿ ಅವನು ಚಿಕ್ಕಪುಟ್ಟ ಕಾರಣಕ್ಕೆ ಅಳುವುದು,ಸಣ್ಣ ವಿಶಯಕ್ಕೆ ಬೇಸರ ಮಾಡಿಕೊಳ್ಳುವುದು, ತನ್ನ ಪಾದರಕ್ಷೆಯಲ್ಲಿ ಚಿಕ್ಕ ಕಲ್ಲು ನುಸುಳಿದರೆ ಪ್ರಾಣವೆ ಹೋದಂತೆ ಆಡುವುದು ಹಾಗೂ ಬಿಸಿಲು ನೆತ್ತಿಗೆ ಒಂದು ನಿಮಿಷ ತಾಕಿದರೆ ಸಾಕು ತಲೆ ಸುತ್ತಿ ಬೀಳುತ್ತಿದ್ದ.ಹೀಗೆಯೇ ಆತ ಅತಿ ನಾಜೂಕು ಆಗಿಹೋದ. ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ಒಬ್ಬ ತಾಯಿ ತನ್ನ ಮಗುವಿಗೆ "ಸಾಕು ಅತ್ತಿದ್ದು ಏಳೊ, ನೀನೇನು ಅಳುಬುರುಕ ರವೀನಾ? ಏನೂ ಆಗಿಲ್ಲ ಏಳು,ಸುಮ್ಮನೆ ತರಚಿದೆ ಅಷ್ಟೆ ರಕ್ತ ಕೂಡಾ ಬರಲಿಲ್ಲ ಸಾಕು ನಿನ್ನ ನಾಟಕ ನಡಿ"ಎನ್ನುತ್ತಿದ್ದಳು.ಅದನ್ನು ಕೇಳಿ ರವಿಗೆ ಬಹಳ ಬೇಸರವಾಯಿತು. ತನ್ನ ಶಾಲೆಗೆ ಬಂದಾಗ ತನ್ನ ಟೀಚರ್ ಬಳಿ ಹೇಳಿಕೊಂಡ.ಸಂಜೆ ಮನೆಗೆ ಬಂದೊಡನೆಯೆ ತಂದೆಯ ಬಳಿಯೂ ಹೇಳಿಕೊಂಡ ಇಬ್ಬರೂ ಒಂದೇ ಉಪಾಯ ಹೇಳಿಕೊಟ್ಟರು.ಮರುದಿನದಿಂದಲೇ ಅಳವಡಿಸಿಕೊಂಡ.ಮುಂದಕ್ಕೆ ಅಳುಬುರುಕನಾಗದೆ ಸ್ವಶಕ್ತಿ ಅರಿತು ಧೈರ್ಯದಿಂದ ಬಾಳಿದ. ಉಪಾಯ ಇದಾಗಿತ್ತು "ದಿನಕ್ಕೆ ಒಂದು ಮಿಠಾಯಿ ಕಡಿಮೆ ತಿನ್ನು,ದಿನಕ್ಕೆ ಐದು ನಿಮಿಷ ಹೆಚ್ಚಿಗೆ ಓದು, ಅಳುವ ಮೊದಲು ಒಂದರಿಂದ-ಹತ್ತು ಎಣಿಸು" ಇದೇ ಅವನರಿತ ಪಾಠ.
ಗಣಿತ ಪಂಡಿತ
ಒಮ್ಮೆ ಶ್ರೀಮಂತ ಜಿಪುಣ ವ್ಯಾಪಾರಿ ಒಬ್ಬ ಗಣಿತ ಪಂಡಿತನನ್ನು ಕೆಲಸಕ್ಕೆ ಇಟ್ಟುಕೊಂಡ.ತನ್ನ ಹಣ ದ್ವಿಗುಣವಗುವ ಬಗ್ಗೆ ಒಂದು ಸೂತ್ರವನ್ನು ಕಂಡುಹಿಡಿಯಲು ಪಂಡಿತನಿಗೆ ಒತ್ತಾಯ ಮಾಡಿದ.ಅದರಂತೆ ಆತ ಸೂತ್ರ ಕಂಡಿಯೂ ಹಿಡಿದ. ಸ್ವಲ್ಪ ದಿನ ಕಳೆಯಲು ವ್ಯಾಪಾರಿ ಬೇರೆ ಊರಿಗೆ ಹೋಗಿ ಬರುವುದಾಗಿಯೂ,ಅಲ್ಲಿಯವರೆಗೂ ತನ್ನ ವ್ಯಾಪಾರ ನೋಡಿಕೊಳ್ಳಲೂ ಹಾಗೂ ಹೊಸ ಸೂತ್ರವನ್ನು ಅಲವಡಿಸಲೂ ಹೇಳಿದ. ದೂರದೂರಿಗೆ ಹೊರಟ. ತಿರುಗಿ ಬರಲು ತನ್ನ ವ್ಯಾಪಾರ ದೀವಾಳಿ ಆಗಿ ಹೋಗಿತ್ತು ಖಾತೆಯಲ್ಲಿ ಹಣವೇ ಇಲ್ಲವಾಗಿತ್ತು.ಆತನಿಗೆ ಸಿಟ್ಟು ಬಂದಿತು.ಪಂಡಿತ ಹಣವನ್ನು ಊರಿನವರಿಗೆಲ್ಲಾ ದಾನ ಮಾಡಿಬಿಟ್ಟಿದ್ದ.ಪರೋಪಕಾರದಿಂದ ನಿನ್ನ ಉದ್ಧಾರ ಎಂದು ಉಪದೇಶ ಮಾಡಿದ.ಶ್ರೀಮಂತ ಕೋಪದಿಂದ ಆತನನ್ನು ಕೆಲಸದಿಂದ ಅಟ್ಟಿದ. ಶ್ರಿಮಂತನಿಗೆ ಸ್ವಲ್ಪ ಸಮಯದ ನಂತರ ತೀರಾ ಬಡತನ ಆವರಿಸಿತು. ಮುಂದಿನ ದಾರಿ ಕಾಣದೆ ಬೇಸರದಿಂದ ದಾರಿಯಲ್ಲಿ ನಡೆದು ಹೋಗುತ್ತಿದ್ದ.ಆತನನ್ನು ಕಂಡು ಜನ ಅನುಕಂಪದಿಂದ ವಿಚಾರಿಸಿದರು,ಮನೆಗೆ ಕರೆದರು,ಹಣ್ಣು ಆಹಾರ ಕೊಟ್ಟರು.ನೀನು ಒಬ್ಬ ನಿಪುಣ ವ್ಯಾಪಾರಿ ನಮ್ಮೂರಿಗೆ ಕೆಲವು ವ್ಯಾಪಾರಿಗಳ ಅವಶ್ಯವಿದೆ ನಿನ್ನಲ್ಲಿ ಆ ಕಲೆ ಇದೆ,ನೀನೇ ಏಕೆ ಮಾಡಬಾರದು? ನಾವು ನಿನಗೆ ಸಹಾಯ ಮಾಡುತ್ತೇವೆ ಎಂದು ಪ್ರೋತ್ಸಾಹಿಸಿದರು.ಅದರಂತೆ ಮುಂದೆ ಮೊದಲಿಗಿಂತಲೂ ದೊಡ್ದ ವ್ಯಾಪಾರಿ ಎನಿಸಿದ.ಜನರ ಬೆಂಬಲ ಮತ್ತಷ್ಟು ಪುಷ್ಟಿ ಕೊಟ್ಟಿತು.ಪಂಡಿತನ ಜಾಣ್ಮೆ ಅರಿತು ಅವನನ್ನು ಮತ್ತೆ ಕೆಲಸಕ್ಕೆ ಕರೆದ.
ಕಿವುಡು
ಜಪಾನಿನ ಪುಟ್ಟ ಹಳ್ಳಿಯಲ್ಲಿ ಕಟ್ಸೂ ಎಂಬ ಪುಟ್ಟ ಹುಡುಗನಿದ್ದ.ಆತ ಹುಟ್ಟು ಕಿವುಡ.ಸುತ್ತಲೂ ಇದ್ದ ಜನ ಆತನನ್ನು ಅತಿ ಗಮನ ಕೊಟ್ಟು ನೋಡಿಕೊಳ್ಳುತ್ತಿದ್ದರು.ಆತನಿಗೆ ಹತ್ತು ವರ್ಷವಾದರೂ ಪುಟ್ಟ ಮಗುವಿನಂತೆ ಕಾಣುತ್ತಿದ್ದರು.ಆದರೆ ಆತನಿಗೆ ಅದು ಇಷ್ಟವಿರಲಿಲ್ಲ.ಎಲ್ಲರಂತಿರಬೇಕು ಎನ್ನುವ ಆಸೆ. ಅದರೆ ಎಲ್ಲರೂ ಅವನನ್ನು ಅಂಗವಿಕಲನಂತೆ ಕಾಣುತ್ತಿದ್ದರು. ಇದು ಆತನ ಗೆಳೆಯನಿಗೆ ಅರ್ಥವಾಯಿತು.ಆ ಗೆಳೆಯ ಕಟ್ಸೂ ನ ತಂದೆಯಲ್ಲು ಕರೆದು ವಿವರಿಸಿದ.ಕಟ್ಸೂ ನ ತಂದೆ ಅಲ್ಲಿನ ಮೇಯರ್ ಆಗಿದ್ದ.ಹಳ್ಳಿಗೆ ದೊಡ್ಡ ವ್ಯಕ್ತಿ.ಈ ವರ್ಷ ಒಂದುದಿನ ಊರಿನವರೆಲ್ಲಾ ಕಿವಿಗೆ ಪ್ಲಗ್ ಹಾಕಿಕೊಳ್ಳಬೇಕು ಎಮ್ದು ಆಜ್ಞೆ ಹೊರಡಿಸಿದ.ಆದಿನ ಹಳ್ಳಿಯವರೆಲ್ಲಾ ಕಿವಿಗೆ ಪ್ಲಗ್ ಚುಚ್ಚಿಕೊಂಡು ಪಾಲಿಸಿದರು.ಎಲ್ಲರಿಗೂ ಮೊದಲು ಸಂಭ್ರಮ ಎನಿಸಿತು ನಂತರ ಕಷ್ತವಾಗುತ್ತಾ ಬಂದಿತು.ಮಾತಿಲ್ಲದೇ ಮೂಕಾಭಿನಯದಿಂದ ಸಂಹವಿಸುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.ಆದರೆ ಕಟ್ಸೂ ಮಾತ್ರ ಸುಲಭವಾಗಿ ಚಿಹ್ನೆಮೂಲಕ ತನಗೆ ಬೇಕಿದ್ದನ್ನು ಸುಲಭವಾಗಿ ಹೇಳುತ್ತಿದ್ದ. ಜನ ಮರುದಿನದಿಂದ ಆತನನ್ನು ಮೊದಲಿಗಿಂತ ವಿಭಿನ್ನವಾಗಿ ನೋಡತೊಡಗಿದರು.ಕಟ್ಸೂ ಜಾಣನೂ ಮಾತ್ರವಲ್ಲದೆ ಚುರುಕು ಬುದ್ಧಿ ಹಾಗೂ ಸಮಯ ಪ್ರಜ್ಞೆ ಉಳ್ಳವನೂ ಎಂದು ಅವನನ್ನೂ ಎಲ್ಲರಂತೆ ಸಮನಾಗಿ ಕಂಡರು. ಬೇರೊಬ್ಬರಿಗೂ ತಮ್ಮ ಪ್ರತಿಭೆ ತೋರಿಸಲು ಅವಕಾಶ ಕೊಡಬೇಕು ಅನ್ನುವುದನ್ನು ಅಂದಿನಿಂದ ಅರಿತರು ಅಲ್ಲಿನ ಜನ.
Robot
ಪುಟ್ಟ ಕಿಟ್ಟಿ ಓದಿನಲ್ಲಿ ಬಹಳ ಚುರುಕು ಆಟದಲ್ಲೂ ಚೂಟಿ.ಆದರೆ ತನ್ನ ಕೋಣೆಯನ್ನು ಸ್ವಚ್ಚವಾಗಿಡುವುದರಲ್ಲಿ ಮಾತ್ರ ಹಿಂದು.ಆತನ ಹತ್ತನೇ ಹುಟ್ಟು ಹಬ್ಬಕೆ ಅವನ ತಂದೆ ದುಬಾರಿ ಬೆಲೆಯ ಒಂದು ರೋಬೋಟ್ ತಂದು ಕೊಟ್ಟರು.ಅದೆಕ್ಕೆ ನೆಲದಲ್ಲಿದ್ದ ಬೇಡದ ವಸ್ತುಗಳನ್ನು ಕಸದ ಡಬ್ಬಿಗೆ ಹಾಕಬಲ್ಲ ಶಕ್ತಿ ಉಳ್ಳದ್ದಾಗಿತ್ತು.ಅದನ್ನು ಕಂಡು ಕಿಟ್ಟಿಗೆ ಬಹಳ ಸಂತೋಷವಾಯಿತು. ಮಾರನೆಯ ದಿನ ಬೆಳಗ್ಗೆ ಎದ್ದು ನೋಡಲು ತನ್ನ ಚೆಂಡು,ಕಾರು ಎಲ್ಲಾ ಕಾಣೆಯಾಗಿತ್ತು.ಈ ರೋಬೋಟ್ ತನ್ನ ವಸ್ತುಗಳನ್ನು ಕದಿಯುತ್ತಿದೆ ಎಂದು ಶಂಕಿಸಿ ಮರುದಿನ ರಾತ್ರಿ ಎಚ್ಚರವಿದ್ದು ನೋಡಲು ರೋಬೋಟ್ ಕೆಲ ವಸ್ತುಗಳನ್ನು ಕಸದ ಬುಟ್ಟಿಗೆ ಹಾಕಿತು.ಕೂಡಲೇ ತನ್ನ ತಂದೆಯ ಬಳಿಗೆ ಹೋಗಿ ಕಿಟ್ಟಿ"ಅಪ್ಪಾ ನೋಡು ಈ ರೋಬೋಟ್ ನನ್ನ ಆಟದ ಸಾಮಾನು,ಹೊದ್ದಿಗೆ,ಚಪ್ಪಲಿ ಎಲ್ಲಾ ತೆಗೆದು ಕಸದ ಬುಟ್ಟಿಯಲ್ಲಿ ಹಾಕುತ್ತಿದೆ"ಎಂದು ತಂದೆಗೆ ಬುಟ್ಟಿಯನ್ನು ತೋರಿಸಿದ.ತಂದೆ ನಿಧಾನವಾಗಿ ರೋಬೋಟ್ ಗೆ "ನೀನು ಏಕೆ ಹಾಗೆಮಾಡುತ್ತಿರುವೆ"ಎಂದು ಪ್ರಶ್ನೆ ಹಾಕಿದ.ಅದಕ್ಕೆ ರೋಬೋಟ್ ಹೇಳಿತು"ನನ್ನನ್ನು ಹಾಗೇ ಪ್ರೋಗ್ರಾಮ್ ಮಾದಲಾಗಿದೆ.ಮನುಷ್ಯರಿಗೆ ಬೇಡದ ನೆಲದಮೇಲೆ ಬಿದ್ದ ವಸ್ತುಗಳನ್ನು ಬಡಜನರಿಗೆ ದಾನಮಾಡಲು ಇಟ್ಟಿರುವ ಬುಟ್ಟಿಗೆ ಹಾಕುವುದು ನನ್ನ ಕೆಲಸ"ಎಂದು. ತಕ್ಷಣ ಕಿಟ್ಟಿಗೆ ತನ್ನ ತಪ್ಪು ಅರಿವಾಯಿತು.ತನ್ನ ಕೋಣೆ ಚೊಕ್ಕಟವಾಗಿ ಇಟ್ಟುಕೊಳ್ಳದ ಕಾರಣ ನನ್ನ ತಂದೆ ಬುದ್ಧಿ ಕಲಿಸಲು ಮಾಡಿರುವ ಉಪಾಯ ಎಂದು ಅರಿತು ಅಂದಿನಿಂದ ಚೂಟಿ ಮಾತ್ರ ಆಗಿರದೆ ಚೊಕ್ಕಟವಾಗಿಯೂ ಆದನು.
ಬೆಂಕಿ-ಗಾಳಿ !
ಚೀನಾ ದೇಶದ ಒಂದು ಹಳ್ಳಿಯಲ್ಲಿ ಒಬ್ಬ ಗಂಡನಿಲ್ಲದ ಮುದುಕಿಗೆ ಇಬ್ಬರು ಗಂಡು ಮಕ್ಕಳು. ಅವಳ ಸೊಸೆಯರು ತಮ್ಮ ತವರೂರಿಗೆ ಹೋಗಿ ಬರಲು ಅತ್ತೆಯ ಬಳಿ ಕೋರಿಕೊಂಡರು.ಮುದುಕಿಗೆ ಅವರನ್ನು ಕಳಿಸಲು ಇಷ್ಟವಿರಲಿಲ್ಲ."ನೀವು ನಿಮ್ಮ ಅಮ್ಮನ ಮನೆಗೆ ಹೋಗಿ ಬರಲು ನನಗೆ ಅಭ್ಯಂತರವಿಲ್ಲ ಆದರೆ ಹಿಂತಿರುಗಿ ಬರುವಾಗ ದೊಡ್ದ ಸೊಸೆ ಕಾಗದದಲ್ಲಿ ಸುತ್ತಿಟ್ಟ ಬೆಂಕಿಯನ್ನೂ, ಚಿಕ್ಕ ಸೊಸೆ ಕಾಗದದಲ್ಲಿ ಸುತ್ತಿಟ್ಟ ಗಾಳಿ ಈ ಎರಡೂ ಉಡುಗೊರೆಯನ್ನು ತರಬೇಕು, ಇಲ್ಲದಿದ್ದರೆ ಇಲ್ಲಿಗೆ ಬರಲೇಬೇಡಿ"ಎಂದು ಶರತ್ತು ಹಾಕಿದಳು. ತಮ್ಮ ತವರೂರಿಗೆ ಹೋಗುವ ತವಕದಲ್ಲಿ ಅವರೂ ಸಹ ಅದಕ್ಕೆ ಒಪ್ಪಿ ಹೊರಟರು. ಊರಿನಲ್ಲಿ ತಮ್ಮ ನಂಟರೂ ಇಷ್ಟರೂ ಎಲ್ಲರೊಡನೆ ಸಂತೋಷದಿಂದ ಕಾಲ ಕಳೆದು ಹಿಂತಿರುಗಿ ಬರುವಾಗ ಅವರಿಗೆ ಅತ್ತೆ ಹೇಳಿದ್ದ ಮಾತು ನೆನೆಪಿಗೆ ಬಂದಿತು. ತಲೆಯ ಮೆಲೆ ಕೈಯಿಟ್ಟು ಆಲೋಚನೆ ಮಾಡುತ್ತಾ ಕುಳಿತರು.ಆ ವೇಳೆಗೆ ಸರಿಯಾಗಿ ವಾಂಗ್ ಚೂ ಎನ್ನುವ ಜಾಣ ರೈತ ಅವರನ್ನು ಕಂಡು,ಅವರ ಕಷ್ಟ ವಿಚಾರಿಸಿದ.ಸ್ವಲ್ಪ ಕಾಲ ಆತನೂ ಆಲೋಚಿಸಿ ನಂತರ ಜಾಣ್ಮೆಯಿಂದ ಅವರಿಗೆ ಬೇಕಿದ್ದ ಉಡುಗೊರೆಗಳನ್ನು ಅವರ ಕೈಗಿಟ್ಟ. ಅದನ್ನು ಸಂತೋಷದಿಂದ ತಂದು ಸೊಸೆಯರು ಅತ್ತೆಗೆ ಒಪ್ಪಿಸಿದರು.ಮುದುಕಿಗೆ ಆಶ್ಚರ್ಯ ಯಾವ ಕೆಲಸವು ಅಸಾಧ್ಯ ಎಂದುಕೊಂಡಿದ್ದಳೋ ಸೊಸೆಯರಿಗೆ ಸುಲಭವಾಗಿ ಸಾಧ್ಯವಾಯಿತು.ಆದರೆ ಅವರಿಗೆ ಸಹಾಯ ಮಾಡಿದ ವಾಂಗ್ ಚೂ ವಿಚಾರ ಮುದುಕಿಯ ಬಳಿ ಬಾಯಿ ಬಿಡಲಿಲ್ಲ. ವಾಂಗ್ ಚೂ ದೊಡ್ದ ಸೊಸೆಗೆ ಕಾಗದದಲ್ಲಿ ಸುತ್ತಿಟ್ಟ ಬೆಂಕಿಗೆ - ಚೈನೀಸ್ ಲಾಟಿನ್ ಮತ್ತು ಚಿಕ್ಕ ಸೊಸೆಗೆ ಕಾಗದದಲ್ಲಿ ಸುತ್ತಿಟ್ಟ ಗಾಳಿಗೆ - ಕೈ ಬೀಸಣಿಗೆ ಕೊಟ್ಟಿದ್ದ.
ಕಿಲಾಡಿ ! ಮಹಾ ಕಿಲಾಡಿ !(ಹಾಸ್ಯ)
ಒಬ್ಬ ಕಳ್ಳ ಊರಿಂದೂರಿಗೆ ಪ್ರಯಾಣ ಮಾಡುತ್ತಾ ತನ್ನ ಕೆಲಸ ಸಾಧಿಸಿಕೊಳ್ಳುತ್ತಿದ್ದ. ಒಮ್ಮೆ ಆತ ತಿಮ್ಮನಹಳ್ಳಿ ಎನ್ನುವ ಹಳ್ಳಿಗೆ ಬಂದ. ಹೆಸರಿಗೆ ತಕ್ಕ ಹಾಗೆ ಊರಿನಲ್ಲಿ ಬಹಳಷ್ಟು ತಿಮ್ಮಂದಿರು ಇರುತ್ತಾರೆ, ಅವರನ್ನು ಚೆನ್ನಾಗಿ ಮೋಸ ಮಾಡಿ ಇಲ್ಲಿಂದಲೂ ಪರಾರಿಯಾಗಬಹುದು ಎಂದು ಯೋಜನೆ ಹಾಕಿ ನಡೆದ.ಆ ಕೂಡಲೇ ಆತನಿಗೆ ಒಬ್ಬ ಡೊಳ್ಳು ಹೊಟ್ಟೆಯ ಪುರೋಹಿತ ತನ್ನ ಅಂಗಳದ ಉಯ್ಯಾಲೆಯಲ್ಲಿ ವಿಶ್ರಮಿಸುತ್ತಾ ಕುಳಿತಿರುವುದು ಕಾಣಿಸಿತು.ಆತನ ಬಳಿಗೆ ಓಡಿ ಹೋಗಿ"ಸ್ವಾಮೀ ನಿಮ್ಮ ಮುಖದಲ್ಲಿ ಏನು ಖಳೆ ಇದೆ"ಎಂದ.ಅದಕ್ಕೆ ಆ ಪುರೋಹಿತ ತನ್ನ ಮನೆಯ ಬಾಗಿಲಕಡೆಗೆ ನೋಡುತ್ತಾ "ಲೇ ಒಂದ್ ಮೂರು ಸೇರು ಅಕ್ಕಿ ತಾರೇ" ಎಂದು ಕೂಗಿದ. ಕಳ್ಳ ಅಷ್ಟಕ್ಕೆ ಸುಮ್ಮನಾಗಲಿಲ್ಲ " ಸ್ವಾಮೀ, ನಿಮ್ಮ ಮುಖದಲ್ಲಿ ಖಳೆಮಾತ್ರವಲ್ಲ ನೀವು ಮಹಾ ದಯಾಳು,ಕರುನಾಳು"ಎಂದ. ತಕ್ಷಣ ಪುರೋಹಿತ "ಲೇ ಹತ್ತು ಸೇರು ಅಕ್ಕಿ ತಾ,ಹಾಗೇ ಹಣ್ಣು ಕಾಯಿಯನ್ನೂ ತಾ" ಎಂದ. ಕಳ್ಳನ ಸಂತೋಷಕ್ಕೆ ಪಾರವೆ ಇಲ್ಲದಂತಾಯ್ತು, ‘ಇಷ್ಟೊಂದು ಸುಲಭವಾಗಿ ಈ ಊರಿನವರನ್ನು ಮೋಸಮಾಡಬಹುದೂ!ಇನ್ನು ನಾನು ಧಿಡೀರ್ ಶ್ರೀಮಂತನೇ ಆಗುವೆ’ ಅಂದುಕೊಂಡ. "ಸ್ವಾಮೀ ನಿಮ್ಮಂತಹವರು ಇರೋದ್ಲಿಂದ್ಲೇ ಮಳೆ-ಬೆಳೆ ಊರಿಗೆ ತುಂಬಿ ಹರಿಯುವ ಹೊಳೆ......"ಎಂದು ಪಟ್ಟಿ ಸುತ್ತಿದ. ಪುರೋಹಿತ ಈಗ ಮತ್ತೂ ಜೋರಾಗಿ "ಹಾಗೇ ಒಂದೆರೆಡು ಒಳ್ಳೆ ಪಂಚೆ,ವಸ್ತ್ರ,ನೂರು ರೂಪಾಯಿ ಎಲ್ಲಾ ತಾ"ಎಂದ. ಕಳ್ಳನಿಗೆ ಅನುಮಾನ ಶುರುವಾಯ್ತು "ಅಲ್ಲಾ ಸ್ವಾಮೀ ನೀವು ಆವಾಗ್ಗಿನಿಂದ ಅಕ್ಕಿ ತಾ, ವಸ್ತ್ರ ತಾ, ಹಣ್ಣು ತಾ ಅಂತಿದ್ದೀರಿ ಆದರೆ ಒಳಗಿನಿಂದ ಏನೂ ಬರ್ತಾನೇ ಇಲ್ಲವಲ್ಲಾ?" ಎಂದು ಕೇಳಿದ.ಅದಕ್ಕೆ ಉತ್ತರವಾಗಿ ಆ ಪುರೋಹಿತ "ಅರೇ ಬರೇ ಹೊಗಳಿಕೆಯಿಂದ ನನಗೇನು ಲಾಭ ಮುಂದಕ್ಕೆ ಹೋಗು"ಎಂದ. ಅದಕ್ಕೆ ಉತ್ತರವಾಗಿ ಕಳ್ಳ "ನಾನು ನಿಮ್ಮನ್ನು ಸಂತೋಷ ಪಡಿಸಲಿಲ್ಲವೇ" ಅನ್ನಲು "ನಾನೂ ನಿನ್ನನ್ನು ಸಂತೋಷ ಪಡಿಸಿದ್ದೀನಿ,ಬರೀ ಮಾತಿನ ಹೊಗಳಿಗೆಗೆ,ಬರೀ ಮಾತಿನ ಬಹುಮಾನ !" ಎಂದ ಪುರೋಹಿತ. ನಂತರ ತಿಮ್ಮನಹಳ್ಳಿಯಲ್ಲಿ ಮತ್ತಾರನ್ನೂ ಮಾತಾಡಿಸುವ ಗೋಜಿಗೇ ಹೋಗದೆ ಮುಂದಿನ ಊರಿನ ಕಡೆ ಹೆಜ್ಜೆ ಹಾಕಿದ ಆ ಕಳ್ಳ.
ಜನಸೇವೆ
ಪಟ್ಟಣವಾಸಿ ಯುವಕನೊಬ್ಬ ಹಳ್ಳಿಯ ಕಡೆ ಪ್ರಯಾಣ ಮಾಡುತ್ತಿದ್ದ.ಅಲ್ಲಿ ಒಂದು ಬಾವಿಯಿಂದ ಗಾಲಿಯ ಏತದ ಮೂಲಕ ನೀರು ಗದ್ದೆಗೆ ಹರಿದು ಬರುವುದು ಕಂಡಿತು.ಆತನಿಗೆ ಆಶ್ಚರ್ಯ "ಅರೆ ಇದೇನಿದು ಬಾವಿಯಿಂದ ತಾನೇ ತಾನಾಗಿ ನೀರು ಬರುತ್ತಿದೆ?" ಎಂದು ಅಲ್ಲಿದ್ದ ಒಬ್ಬ ರೈತನನ್ನು ಕೇಳಿದ. ಅದಕ್ಕೆ ಉತ್ತರವಾಗಿ ಆ ರೈತ "ಅರೆರೆ ತಾನಾಗೇ ಎಲ್ಲಾದ್ರೂ ನೀರು ಬರುತ್ತಾ? ಒಳಗೆ ನಿಮ್ಮಪ್ಪ ಇದ್ದಾರೆ! ಅವರೇ ನಮಗೆಲ್ಲಾ ನೀರು ತುಂಬಿ ತುಂಬಿ ಮೆಲಕ್ಕೆ ಕಳಿಸ್ತಾ ಇರೋದು" ಎಂದ. ಯುವಕ "ಅಯ್ಯಾ ನನ್ನ ತಂದೆ ಸತ್ತು ಹತ್ತು ವರ್ಷವಾಯ್ತು, ಅದು ಹೇಗೆ ಸಾಧ್ಯ?"ಎಂದು ಹೇಳಿದ.ರೈತ ಅಷ್ಟಕ್ಕೇ ನಿಲ್ಲಿಸಲಿಲ್ಲ "ಮಗೂ ನಿನ್ನ ತಂದೆಯನ್ನು ದೇವರು ಮತ್ತೆ ಈ ಭೂಮಿಗೆ ನಮ್ಮ ಸೇವೆ ಮಾಡಲು ಕಳಿಸಿದ್ದಾರೆ ,,, ಜನಸೇವೆ ಹೂ! ಜನಸೇವೆ" ಎಂದು ನಕ್ಕ.ಆ ಯುವಕ ರೈತನ ಮಾತನ್ನು ನಂಬಿದ "ಹೌದಾ? ಪಾಪ ನನ್ನ ತಂದೆ ಎಷ್ಟು ಕಷ್ಟ ಪಡ್ತಿದ್ದರೋ ಒಳಗೆ?"ಎಂದು ಕನಿಕರಿಸಿದ.ರೈತ ಇದೇ ಸಮಯ ನೋಡಿ "ನೋಡು ಮಗೂ ನಿನ್ನ ತಂದೆಗೆ ಬಟ್ಟೆ ಇಲ್ಲ,ನಿನ್ನ ಚೆಂದರ ಅಂಗಿ ಕೊಡು ಆತನಿಗೆ ಚಳಿ ಆಗುವುದು ತಪ್ಪಿಸಬಹುದು" ಎಂದು ಆತನ ಅಂಗಿಯನ್ನೂ ಕಿತ್ತುಕೊಂಡ.ಆಗ ಯುವಕ ಸ್ವಲ್ಪ ಯೋಚಿಸಿ,ಜಾಣತನದಿ ನುಡಿದ"ನನ್ನ ತಂದೆಯನ್ನು ಕರೆದುಕೊಂಡು ಹೋಗಬೇಕು ಕಳಿಸಿಕೊಡುವಿರಾ?"ಎಂದ.ಅದಕ್ಕೆ ಊರಿನ ರೈತರೆಲ್ಲಾ ನಕ್ಕು"ನಿನ್ನ ತಂದೆಯಿಂದಲೇ ನಮಗೆ ವ್ಯವಸಾಯಕ್ಕೆ ನೀರು ಸಿಗುತ್ತಿದೆ,ಅವರಿಂದಲೇ ನಮಗೆ ಈಗ ಬೆಳೆ ಬೆಳೆಯಲು ಆಗ್ತೀರೋದು, ಮೇಲಾಗಿ ಅವರು ಈಗ ನಿನಗೆ ಕಾಣುವುದಿಲ್ಲ"ಎಂದರು."ಹಾಗಿದ್ದರೆ ಕಾನೂನಿನ ಪ್ರಕಾರ ನಿಮ್ಮ ಬೆಳೆಯಲ್ಲಿ ನನಗೆ ಅರ್ಧ ಪಾಲು ಕೊಡಿ,ನನ್ನ ಅಪ್ಪನೇ ನಿಮಗೆಲ್ಲಾ ನೀರು ತುಂಬಿ ಹಾಕ್ತಿರೋದು ತಾನೆ? ಆತನಿಗೆ ನ್ಯಾಯವಾಗಿ ನಿಮ್ಮ ಲಾಭದಲ್ಲಿ ಅರ್ಧ ಸಿಗಬೇಕು, ಆ ಅಪ್ಪನ ಆಸ್ತಿ ಪಾಲು ನನಗೆ ಸೇರಬೇಕು" ಎಂದ.ಗೇಲಿ ಮಾಡುತ್ತಿದ್ದ ರೈತರೆಲ್ಲಾ ಕಕ್ಕಾಬಿಕ್ಕಿಯಾಗಿ ಮುಖ ನೋಡಿಕೊಂಡರು.ಸುಳ್ಳು ಹೇಳಿದ್ದು ಅವರಿಗೆ ಫಜೀತಿಗೆ ಬಂದಿತ್ತು.ಕ್ಷಮೆ ಯಾಚಿಸಿ ನಾಲ್ಕು ಮೂಟೆ ಧವಸ ಧಾನ್ಯ ಕೊಟ್ಟು ಕಳಿಸಿದರು,ಅಂಗಿಯನ್ನೂ ವಾಪಸ್ ಕೊಟ್ಟರು.
ಅತಿಥಿ ಸತ್ಕಾರ (ಹಾಸ್ಯ)
ಬಡವ ರಾಮಯ್ಯ ತನ್ನ ಹೆಂಡತಿಯೊಂದಿಗೆ ಜೀವನ ಸಾಗಿಸುತ್ತಿದ್ದ.ಆತನಿಗೆ ಅತಿಥಿ ಎಂದರೆ ದೇವರ ಸಮಾನ. ಆತನ ಮನೆಗೆ ಬಂದವರಿಗೆ ಊಟ ಉಪಚಾರಕ್ಕೆ ಎಂದಿಗೂ ಮೋಸವಿರಲಿಲ್ಲ. ಇದನ್ನು ಅರಿತ ಕೆಲವು ನಂಟರು ಮತ್ತೆ ಮತ್ತೆ ಆತನ ಮನೆಗೆ ಊಟಕ್ಕೆ ಬರತೊಡಗಿದರು.ಆತನ ಹೆಂಡತಿಗೆ ಅಡುಗೆ ಮಾಡಿಹಾಕಿ ರೋಸಿ ಹೋಗಿತ್ತು.ಒಂದು ದಿನ ಮತ್ತದೇ ನಂಟರು ಮನೆಗೆ ಬಂದರು.ಆ ದಿನ ರಾಮಯ್ಯ ಮನೆಯಲ್ಲಿರಲಿಲ್ಲ.ಅವರ ಮನೆಯಲ್ಲಿ ಒಂದು ದೊಡ್ದ ಒರಳು ಮತ್ತು ಒನಕೆ ಇತ್ತು.ಅದಕ್ಕೆ ಹೂವು,ಅರಿಶಿನ ಕುಂಕುಮ ಅಲಂಕಾರ ಮಾಡಲಾಗಿತ್ತು.ಅವರು "ಇದೇನಿದು?" ಎಂದರು.ಅದಕ್ಕೆ ರಾಮಯ್ಯನ ಹೆಂಡತಿ "ನಮ್ಮೆಜಮಾನರು ಈಗ ಒನಕೆ ವ್ರತ ಮಾಡುತ್ತಿದ್ದಾರೆ,ಮನೆಗೆ ಬಂದವರಿಗೆ ಊಟದ ನಂತರ ಎರಡೆರೆಡು ಲಾತ ಕೊಡುತ್ತಾರೆ"ಎಂದಳು. ಕೂಡಲೇ ಎಲ್ಲಾ ನಂಟರು ಓಡತೊಡಗಿದರು.ಅದೇವೇಳೆಗೆ ಮನೆಗೆ ಬಂದ ರಾಮಯ್ಯ ನಂಟರು ಓಡುತ್ತಿರುವುದನ್ನು ಕಂಡು ಏಕೆಂದು ಹೆಂಡತಿಯನ್ನು ಕೇಳಿದನು.ಅದಕ್ಕೆ ಆತನ ಹೆಂಡತಿ"ಅವರಿಗೆ ಈ ಒನಕೆ ಬೇಕಂತೆ,ಕೊಡಲ್ಲ ಎಂದದಕ್ಕೆ ಓಡಿ ಹೋಗ್ತಿದ್ದಾರೆ"ಎಂದಳು.ರಾಮಯ್ಯ ಒನಕೆ ಹಿಡಿದು ಅವರ ಹಿಂದೆ ತಾನೂ ಓಡಿದ. ನಂಟರು"ಅಯ್ಯೋ ರಾಮಯ್ಯ ಒನಕೆ ಹಿಡಿದು ಬರ್ತಿದ್ದಾನೆ ಓಡಿ, ಜೋರಾಗಿ ಓಡಿ"ಎಂದು ರಾಮಯ್ಯನ ಕಣ್ಣು ತಪ್ಪಿಸಿ ದೂರ ಸಾಗಿದರು.ಮತ್ತೆ ಆತನ ಮನೆಯಕಡೆ ತಲೆ ಹಾಕುವ ಸಾಹಸ ಮಾಡಲಿಲ್ಲ.
ದೂರದೃಷ್ಟಿ
ಒಂದಾನೊಂದು ಕಾಲದಲ್ಲಿ ಮಹರ್ಷಿಯೊಬ್ಬ ತನ್ನ ಊರಿನ ಕ್ಷೇಮಕ್ಕೆ ಯಾಗ ಒಂದನ್ನು ಮಾಡಲು ತಯಾರಿ ನಡೆಸಿದ್ದ.ಆತನಿಗೆ ಕೆಲವು ದಡ್ದ ಶಿಷ್ಯರು ಇದ್ದರು.ಯಾಗ ನಡೆಯುವ ದಿನ ಬೆಳಿಗ್ಗೆ ಮಹರ್ಷಿಯ ಹೆಂಡತಿ ಆತಂಕದಿಂದ ತನ್ನ ಪತಿಯ ಶಿಷ್ಯರನ್ನು ಕರೆದು"ಅಯ್ಯಾ ಮಕ್ಕಳಾ ಈ ದಿನ ಅಡುಗೆ ಮಾಡಲು ಕುಟೀರದಲ್ಲಿ ಸೌದೆ ಬಹಳ ಕಡಿಮೆ ಇದೆ,ದಯವಿಟ್ಟು ತಾವು ಕಾಡಿಗೆ ಹೋಗಿ ಇವತ್ತಿನ ಮಟ್ಟಕ್ಕೆ ಆಗುವಷ್ಟು ಕಟ್ಟಿಗೆ ಕಡಿದು ಬೇಗ ಬನ್ನಿ"ಎಂದು ಕೇಳಿಕೊಂಡಳು.ಅಡುಗೆ ಎಂದಾಕ್ಷಣ ಶಿಷ್ಯರು ಥೈ ಎಂದು ಹೊರಟೇ ಬಿಟ್ಟರು ಕಾಡಿಗೆ.ಒಣ ಕಟ್ಟಿಗೆ ಕಡಿದು, ಆಯ್ದು ಗುಡ್ಡೆ ಹಾಕುತ್ತಿರಲು ಆ ಗುಂಪಿನಲ್ಲೊಬ್ಬ ಹೇಳಿದ "ಅಯ್ಯಾ ಗೆಳೆಯರಾ, ಇನ್ನಷ್ಟು ಕಟ್ಟಿಗೆ ಕಲೆ ಹಾಕಿರಿ ಮತ್ತೆ ನಾಳೆ ಬರುವಷ್ಟಿಲ್ಲ"ಎಂದ.ಮತ್ತೊಬ್ಬ "ಅದು ಸರಿ, ಹೇಗಿದ್ದರೂ ಇಲ್ಲಿಯವರೆಗೆ ಬಂದಿದ್ದೀವಿ ಒಂದು ವಾರಕ್ಕೆ ಆಗುವಷ್ಟು ಸೇರಿಸಿ ಬಿಡೋಣ"ಎಂದು ನುಡಿದ.ಅದಕ್ಕೆ ಮತ್ತೊಬ್ಬ ಶಿಷ್ಯ "ಮತ್ತೊಂದು ವಾರ ಸಾಕೆ? ಸಮಯ ಬಹಳ ಇದೆ, ಒಂದು ತಿಂಗಳಿಗೆ ಆಗುವಷ್ಟೇ ತೆಗೆದುಕೊಂಡು ಹೋಗೋಣ"ಎಂದ.ಎಲ್ಲರೂ ಕಟ್ಟಿಗೆಯ ರಾಶಿಗೆ ಒಣಮರದ ತುಂಡು, ರೆಂಬೆ, ಕೊಂಬೆ ಎಳೆದು-ಹೊತ್ತು ತಂದು ಸೇರಿಸುತ್ತಿರಲು ಹೊತ್ತೇ ಕಳೆದದ್ದು ತಿಳಿಯಲಿಲ್ಲ.ಮಧ್ಯಾಹ್ನ ಮುಗಿದು ಸಂಜೆಯ ಸಮಯವಾಗುತ್ತಾ ಬಂದಿತು.ಅತ್ತ ಆಶ್ರಮದಲ್ಲಿ ಮಹರ್ಷಿಯು ಶಿಷ್ಯರನ್ನು ಕಾಣದೆ ಸತಿಯನ್ನು ವಿಚಾರಿಸಲು ವಿಷಯ ತಿಳಿಯಿತು.ಸಿಟ್ಟಿನಿಂದ ತನ್ನ ದಡ್ದ ಶಿಷ್ಯರನ್ನು ಹುಡುಕಿಕೊಂಡು ಕಾಡಿಗೆ ಬಂದನು.ಅಲ್ಲಿ ಅವರು ಇನ್ನೂ ಕಟ್ಟಿಗೆಗಳನ್ನು ತರುತ್ತಲೇ ಇದ್ದರು.ಅವರನ್ನು ತಡೆದು, ಬೈದು, ಬುದ್ಧಿವಾದ ಹೇಳಿದರು,"ನನ್ನ ಹೆಂಡತಿ ನಿಮಗೆ ಹೇಳಿದ್ದು ಈ ದಿನದ ಮಟ್ಟಕ್ಕೆ ಸೌದೆ ತನ್ನಿ ಎಂದು,ನೀವುಗಳು ನೋಡಿದರೆ ರಾಶಿಯನ್ನೇ ಗುಡ್ಡೆಹಾಕಿದ್ದೀರಿ,ಇನ್ನು ಇದನ್ನು ಹೊರುವುದಾದರೂ ಹೇಗೆ? ನಮಗೆ ಯಾವಾಗಲೂ ಅತಿಯಾಸೆ, ದುರಾಸೆ ಇರಕೂಡದು.ಒಮ್ಮೆಲೇ ಎಲ್ಲಾ ಮಾಡಿಬಿಡಬೇಕು,ಕೂಡಲೇ ಎಲ್ಲಾ ಕಲಿತುಬಿಡಬೇಕು,ಬೇಗನೇ ಎಲ್ಲಾ ಸಂಪಾದಿಸಿಬಿಡಬೇಕು ಎನ್ನುವುದು ಸಮಂಜಸವಲ್ಲ"ಎಂದು ಹೇಳಿ ಅವರನ್ನೆಲ್ಲಾ ಆಶ್ರಮಕ್ಕೆ ಕರೆದುಕೊಂಡು ಹೋದರು.
ಆಲಿ ಮತ್ತು olives
(ಅರೇಬಿಯನ್ ನೈಟ್ಸ್ ಆಧಾರಿತ ಕಥೆ) ಆಲಿ ಮತ್ತು ಹಸನ್ ಇಬ್ಬರು ಸ್ನೇಹಿತರು. ಒಂದುದಿನ ಆಲಿ ಹಸನ್ನನ ಮನೆಗೆ ಒಂದು ಆಲೀವ್ ಜಾಡಿಯನ್ನು ತಂದು "ಅಯ್ಯಾ ಗೆಳೆಯ ಹಸನ್, ನಾನು ಮಕ್ಕಾ ಪ್ರವಾಸಕ್ಕೆ ಹೊರಟಿರುವೆ, ಹಿಂತಿರುಗಿ ಬರುವವರೆಗೂ ಈ ಜಾಡಿಯನ್ನು ನಿನ್ನ ಬಳಿ ಇಟ್ಟುಕೊಂದಿರುವೆಯಾ?" ಎಂದು ಕೇಳಿಕೊಂಡ.ಅದಕ್ಕೆ ಹಸನ್ "ಅದೇನು ಮಹಾ ಆಲಿ, ನನ್ನ ನೆಲಮಾಳಿಗೆಯಲ್ಲಿ ಇರುವ ಕೊಠಡಿಯಲ್ಲಿ ಅದನ್ನು ನೀನೇ ಇಡು" ಎಂದು ಅವನ ಕೈಗೇ ಬೀಗದ ಕೈ ಕೊಟ್ಟ.ಸರಿ ಆಲಿ ಅದನ್ನು ಇಟ್ಟು ಮಕ್ಕಾ ಪ್ರವಾಸಕ್ಕೆ ಹೊರಟ.ಮಕ್ಕಾದಲ್ಲಿ ಅನಿರೀಕ್ಷಿತ ಘಟನೆಯಿಂದಾಗಿ ಆಲಿ ಹಿಂತಿರುಗಿ ಬರಲು ಆಗಲಿಲ್ಲ.ಏಳು ವರ್ಷವಾದರೂ ಆಲಿ ಬಾರದ ಕಾರಣ ಆ ಜಾಡಿಯಲ್ಲಿ ಏನಿರಬಹುದು? ಎಂದು ತಿಳಿಯಲು ಹಸನ್ ಕೋಣೆಗೆ ಹೋದ.ಅದರಲ್ಲಿದ್ದ ಆಲಿವ್ ಹಣ್ಣು ಕೊಳೆತು ವಾಸನೆ ಬರುತ್ತಿತ್ತು.ಇನ್ನು ಹೀಗೇ ಬಿಟ್ಟರೆ ಮನೆಯಲ್ಲಾ ವಾಸನೆ ಬರುವುದು ಎಂದುಕೊಂಡು ಕೂಡಲೇ ಅದನ್ನು ಒಂದು ಕಸದ ಬುಟ್ಟಿಗೆ ಸುರಿದ.ಆದರೆ ಜಾಡಿಯ ಕೆಳಭಾಗದಲ್ಲಿ ಸಾವಿರ ಚಿನ್ನದ ನಾಣ್ಯಗಳಿದ್ದವು.ದುರಾಸೆಯಾಗಿ ಆತ ನಾಣ್ಯವನ್ನೆಲ್ಲಾ ತೆಗೆದುಕೊಂಡು ಅದರಲ್ಲಿ ಭರ್ತಿಯಾಗಿ ಇನ್ನಷ್ಟು ಆಲೀವ್ ಹಣ್ಣು ತಂದು ತುಂಬಿದ.ಕೆಲ ದಿನಗಳ ಬಳಿಕ ಗೆಳೆಯ ಆಲಿ ಹಿಂತಿರುಗಿ ಬಂದ.ತಡವಾಗಿ ಬರಲು ಕಾರಣ ಮತ್ತು ನಡೆದ ವಿಷಯವೆಲ್ಲಾ ವಿವರಿಸಿದ. ಆಲಿ ತನ್ನ ಜಾಡಿ ವಿಚಾರ ಜ್ಞಾಪಿಸಿ ಅದನ್ನು ಹಿಂತಿರುಗಿ ಪಡೆದ.ಅದರಲ್ಲಿ ನಾಣ್ಯಗಳು ಪತ್ತೆಯಾಗಿರಲು ಹಸನ್ ಬಳಿ ಹೇಳಿಕೊಂಡ.ಹಸನ್ ತನಗೆ ಏನೂ ಗೊತ್ತಿಲ್ಲದಂತೆ ನಾಟಕವಾಡಿದ "ಅರೆ ಆಲೀ, ನೀನು ಇದರಲ್ಲಿ ಆಲೀವ್ ಮಾತ್ರ ಇದೆ ಎಂದು ಹೇಳಿದ್ದೆ?"ಎಂದ.ಆಲಿಗೆ ಬೇರೆದಾರಿ ಕಾಣದೆ ರಾಜನ ಬಳಿಗೆ ಹೋದ.ರಾಜ ತಕ್ಕ ಬುದ್ಧಿವಂತನೂ, ನ್ಯಾಯ ಕೊಡುವುದರಲ್ಲಿ ಒಳ್ಳೆಯ ಹೆಸರೂ ಮಾಡಿದ್ದನು.ಆತ ಇಬ್ಬರನ್ನೂ ಕರೆಸಿ ತನ್ನ ಊರಿನ ಆಲೀವ್ ವ್ಯಾಪಾರಿಗಳನ್ನೂ ಕರೆಸಿದ.ಜಾಡಿಯನ್ನೂ ತರಲು ಹೇಳಿದ.ಅದರಲ್ಲಿದ್ದ ಆಲೀವ್ ಗಳನ್ನು ಎಲ್ಲರ ಕೈಗೂ ಒಂದೊಂದು ಇತ್ತ."ಹೇಳಿ ಈ ಆಲೀವ್ ಎಷ್ಟು ಹಳೆಯದ್ದಿರಬಹುದು?ಎಂದ.ಅದಕ್ಕೆ ಆ ನಿಪುಣ ಆಲೀವ್ ವ್ಯಾಪಾರಿಗಳು "ಸುಮಾರು ಆರೇಳು ತಿಂಗಳು ಹಳೆಯದ್ದಿರಬಹುದು’ಎಂದರು."ಹಾಗಾದರೆ ಇದು ಏಳು ವರ್ಷ ಹಳೇಯದಂತೂ ಅಲ್ಲ ಎಂದಾಯ್ತು,ಅಂದರೆ ಯಾರೋ ಇದನ್ನು ಬದಲಿಸಿ ಇಟ್ಟಿದ್ದಾರೆ ಎಂದಾಯ್ತು"ಎಂದ. ಕೂಡಲೇ ಹಸನ್ ತನ್ನ ತಪ್ಪು ಒಪ್ಪಿಕೊಂಡ.ಆತನಿಗೆ ಶಿಕ್ಷೆಯನ್ನು ವಿಧಿಸಲಾಯಿತು.ಆಲಿಗೆ ತನ್ನ ಚಿನ್ನದ ನಾಣ್ಯ ಹಿಂತಿರುಗಿ ಸಿಕ್ಕಿದಂತಾಯ್ತು.
ಬಹುಮಾನ (ಹಾಸ್ಯ)
ರೈತನಾದ ತಿಮ್ಮ ಒಂದು ದಿನ ತನ್ನ ತೋಟದಲ್ಲಿ ನಡೆದು ಹೋಗುತ್ತಿರಲು ಒಂದು ಆಷ್ಚರ್ಯವೇ ಗೋಚರವಾಯಿತು.ಆತನ ಹೊಲದಲ್ಲಿ ಆತನಿಗೇ ಕಾಣದಂತೆ ಬೆಳೆದ ಒಂದು ಅತಿ ದೊಡ್ಡ ಕುಂಬಳಕಾಯಿ ಅಂದು ಕಾಣಿಸಿತು.ಅದನ್ನು ಎತ್ತಲೂ ಸಹ ಆಗದಷ್ಟು ದೊಡ್ದದಾಗಿತ್ತು.ತನ್ನ ಮಕ್ಕಳ ಸಹಾಯ ಪಡೆದು ಅದನ್ನು ಆ ಊರಿನ ರಾಜನಿಗೆ ಒಪ್ಪಿಸಿದ. ರಾಜ ಅಪರೂಪದ ಆ ಅತಿ ದೊಡ್ದ ಕುಂಬಳಕಾಯನ್ನು ಕಂಡು ಸಂತೋಷಗೊಂಡು ಆತನಿಗೆ ಬೆಲೆಬಾಳುವ ರತ್ನದ ಸರವೊಂದನ್ನು ಕೊಟ್ಟ. ಈ ಸುದ್ದಿ ಎಲ್ಲೆಡೆ ಹರಡಿತು ಗುಂಡಣ್ಣನ ಕಿವಿಗೂ ಬಿತ್ತು. "ಅರೆ ಕುಂಬಳ ಕಾಯಿಗೇ ಅಷ್ಟು ಬೆಲೆ ಬಾಳುವ ಸರ ಕೊಟ್ಟ ರಾಜನು ತನ್ನಲ್ಲಿರುವ ಅಪರೂಪದ ಕಲ್ಲಿಗೆ(ವಜ್ರ) ಏನು ಕೊಡಬಹುದು?"ಎಂದು ಅದನ್ನು ರಾಜನಲ್ಲಿಗೆ ಹೋಗಿ ಅವನ ಕೈಗಿಟ್ಟ.ರಾಜನಿಗೆ ಅದನ್ನು ಕಂಡು ಸಂತೋಷವಾಯಿತು ಆದರೆ ಅದಕ್ಕೆ ಪ್ರತಿಯಾಗಿ ಏನು ಕೊಡಲು ತೋಚದೆ "ಆ ಅಪರೂಪದ ದೊಡ್ದ ಕುಂಬಳಕಾಯನ್ನು ಈತನಿಗೆ ನೀಡಿ ಎಂದು ಆಜ್ಞೆ ಮಾಡಿದ"ಗುಂಡ ಅದನ್ನು ತನ್ನ ಎತ್ತಿನ ಗಾಡಿಯ ಮೇಲೆ ಹೊತ್ತು ತೆಪ್ಪಗೆ ಮನೆಯ ಕಡೆ ಹೊರಟ.
ಪಾಲು(ಹಾಸ್ಯ)
ತಿಮ್ಮ ಗುಂಡ ಇಬ್ಬರೂ ಆಪ್ತ ಸ್ನೇಹಿತರು.ಎನಾದರೂ ವ್ಯಾಪಾರ ಮಾಡುವ ಯೋಜನೆ ಮಾಡಿ ಇಬ್ಬರೂ ಸೇರಿ ಒಂದು ಎಮ್ಮೆ ಕೊಂಡರು. ಚತುರ ತಿಮ್ಮ ಗುಂಡನ ದಡ್ದತನವನ್ನು ದುರುಪಯೋಗ ಪಡಿಸಿಕೊಂಡು"ಗುಂಡಾ, ಇಬ್ಬರೂ ಈ ಎಮ್ಮೆಯನ್ನು ಚೆನ್ನಾಗಿ ನೋಡಿಕೊಳ್ಳೋಣ.ಎಲ್ಲರಿಗೂ ತಲೆ ಮುಖ್ಯ ಅಲ್ಲವೇ ಅದಕ್ಕೆ ಎಮ್ಮೆಯ ಮುಂದಿನ ಭಾಗ ನಿನ್ನದು ಹಿಂದಿನ ಭಾಗ ನನ್ನ ಜವಾಬ್ದಾರಿ" ಎಂದು ಹೇಳಿದ. ಸರಿ ಸ್ವಲ್ಪ ಹೊತ್ತಿನ ಬಳಿಕ ಎಮ್ಮೆ ಅರಚಿಕೊಳ್ಳಲು ಶುರುಮಾಡಿತು.ತಿಮ್ಮ ಗುಂಡನಿಗೆ "ಗುಂಡಾ ನಿನ್ನ ಭಾಗ ಕೂಗ್ತಾ ಇದೆ ಹಸಿವೆ ಆಗಿದೆ ಅನ್ನಿಸುತ್ತೆ,ಹುಲ್ಲು ತಂದು ಹಾಕು’ಎಂದ. ಗುಂಡ ಹುಲ್ಲಿನ ಹೊರೆ ಕೊಂಡು ತಂದು ಮೆಯಲು ಹಾಕಿದ.ಸಂಜೆಗೆ ಹಾಲು ಕರೆಯುವ ಸಮಯ ಬಂದಾಗ ಗುಂಡ ಒಂದು ಪಾತ್ರೆ ಹಿಡಿದು"ತಿಮ್ಮಾ ನನ್ನ ಪಾಲಿನ ಹಾಲು?"ಎಂದಾಗ ತಿಮ್ಮ "ನನ್ನ ಭಾಗದ ಎಮ್ಮೆಯ ಪಾಲು ನನ್ನದು,ನಿನ್ನದು ತಲೆಯ ಭಾಗ ನಿನಗೆ ಹಾಲು ಇಲ್ಲ" ಎಂದು ಜಂಭದಿಂದ ನುಡಿದ.ದಾರಿ ಕಾಣದೆ ಗುಂಡ ತೆಪ್ಪಗೆ ಹೊರಟ.ಮರುದಿನ ಹಾಲು ಕರೆಯುವ ಸಮಯಕ್ಕೆ ಸರಿಯಾಗಿ ಒಂದು ಕಟ್ಟಿಗೆ ತೆಗೆದುಕೊಂಡು ಎಮ್ಮೆಯ ತಲೆಗೆ ಬಲವಾಗಿ ಹೊಡೆದ.ಎಮ್ಮೆ ತನ್ನ ಹಿಂದೆ ಹಾಲು ಕರೆಯುತ್ತಿದ್ದ ತಿಮ್ಮನನ್ನು ಬಲವಾಗಿ ಜಾಡಿಸಿತು.ಆತನಿಗೆ ಪೆಟ್ಟು ಬಿತ್ತು.ಕೋಪದಿಂದ ಗುಂಡನನ್ನು ಏಕೆ ಹಾಗೆ ಮಾಡಿದೆ ಎಂದು ಕೇಳಲು"ಅದು ನನ್ನ ಭಾಗ ನಿನಗೆ ಕೇಳುವ ಅಧಿಕಾರವಿಲ್ಲ"ಎಂದ.ತಿಮ್ಮನಿಗೆ ತನ್ನ ತಪ್ಪಿನ ಅರಿವಾಯಿತು.ಒಪ್ಪಿಕೊಂಡು ಮುಂದೆ ಹಾಲನ್ನೂ ಭಾಗ ಮಾಡಿಕೊಂಡರು.
ಸ್ನೇಹ
ಒಬ್ಬ ಮುದುಕ ಕಡಲೇ ಸೊಪ್ಪನ್ನು ಮಾರುತ್ತಿದ್ದ.ಅಲ್ಲಿಗೆ ಬಂದ ನಾಲ್ಕು ಹುಡುಗರು ತಮ್ಮಲ್ಲೇ ಬಾಜಿ ಕಟ್ಟಿಕೊಂಡು ಒಬ್ಬೊಬ್ಬರಾಗಿ ಆತನ ಬಳಿ ಬಂದು ವ್ಯಾಪಾರ ಮಾಡಿದರು.ಮೊದಲನೆಯ ಹುಡುಗ ಎರಡು ರೂಪಾಯಿ ತಂದು "ಏಯ್ ಮುದುಕ ಎರಡು ರೂಪಾಯಿಗೆ ಎಷ್ಟು ಕಡಲೆ ಸೊಪ್ಪು ಕೊಡುತ್ತೀಯೋ"ಎಂದ.ಮುದುಕ ಎರಡು ಕಟ್ಟನ್ನು ಕೊಡಲು, ಹುಡುಗ ಹಣವನ್ನು ಎಸೆದು ಹೋದ.ಮುದುಕನಿಗೆ ಸಿಟ್ಟು ಬಂದಿತು, ಆದರೂ ಸುಮ್ಮನಿದ್ದ, ಎರಡನೆಯ ಹುಡುಗ ಬಂದು"ಏನಪ್ಪಾ ಎರಡು ರೂಪಾಯಿಗೆ ಎಷ್ಟು ಕಡಲೆಸೊಪ್ಪು ಕೊಡ್ತೀಯಪ್ಪಾ" ಎನ್ನಲು, ಮುದುಕ ನಾಲ್ಕು ಕಟ್ಟನ್ನು ಅವನ ಕೈಗಿಟ್ಟ. ಆ ಹುಡುಗ ತನ್ನ ಗುಂಪಿಗೆ ವಾಪಸಾಗಲು ಅವನ ನಂತರ ಮೂರನೇಯ ಹುಡುಗ ಮುದುಕನ ಬಳಿಗೆ ಬಂದು"ಅಜ್ಜಾ ಎರಡುರೂಪಾಯಿಗೆ ಎಷ್ಟುಕಡಲೆ ಸೊಪ್ಪು ಕೊಡುವೆ ಅಜ್ಜಾ ?" ಎನ್ನಲು ಮುದುಕ ಎದ್ದು ನಿಂತು ಅವನ ಕೆನ್ನೆ ಸವರಿ ನನ್ನ ಮನೆಯಲ್ಲೂ ನಿನ್ನಂತದೇ ನಾಲ್ಕೈದು ಮೊಮ್ಮಕ್ಕಳು ನನಗಿದ್ದಾರೆ ಮಗೂ ತಗೊ ಎಂದು ಐದಾರು ಕಟ್ಟನ್ನು ಅವನ ಕೈಗಿತ್ತ.ಇನ್ನು ಕಡೇಯ ಹುಡುಗ ನಡೆದ್ದದ್ದೆಲ್ಲಾ ಕಂಡು ಬೇರೆ ದಾರಿ ತೋಚದೆ ಮುದುಕನ ಮುಂದೆ ನಿಂತು"ಅಯ್ಯಾ ನನ್ನ ಗೆಳೆಯರು ನಿನ್ನನ್ನು ಅಪ್ಪಾ, ಅಜ್ಜಾ ಎಂದೆಲ್ಲಾ ಕರೆದದ್ದಕ್ಕೆ ಅವರಿಗೆ ಹೆಚ್ಚುಹೆಚ್ಚು ಕಟ್ಟನ್ನಿತ್ತೆ, ಆದರೆ ನಾನು ನಿನ್ನ ಸ್ನೇಹಿತನಾಗಲು ಬಯಸುವೆ ನನಗೆ ಎರಡು ರೂಗೆ ಎಷ್ಟು ಕಟ್ಟನ್ನು ಕೊಡುವೆ?" ಎಂದ. ಆ ಮಾತನ್ನು ಕೇಳಿ ಮುದುಕ ಎದ್ದುನಿಂತು ಹುಡುಗನನ್ನು ಹಿಡಿದು ತಬ್ಬಿಕೊಂಡ. "ಮಗೂ ನೀನು ನನ್ನನ್ನು ಸ್ನೇಹಿತ ಎಂದು ಹೇಳುತ್ತಿರುವೆ.ಈ ಸ್ನೇಹದ ಮುಂದೆ ಎಲ್ಲವೂ ಚಿಕ್ಕದು"ಎಂದು ಹುಡುಗನಿಗೆ ಜೊಂಪೆ ಜೊಂಪೆಯಾಗಿ ಕಾಳುಗಳಿದ್ದ ಕಟ್ಟನ್ನು ಕೈತುಂಬಾ ಕೊಟ್ಟು, ತಗೋ ತಗೋ, ಇಕೋ ಇನ್ನೂ ತಗೋ, ಇನ್ನೂ ತಗೋ ,ನೀನೂ ತಿನ್ನು ,ನಿನ್ನ ಗೆಳೆಯರಿಗೂ ಕೊಡು" ಎಂದು ಹೇಳಿದ.
ಕೊಡಲಿಗಳು
ತಿಮ್ಮನ ಕಬ್ಬಿಣದ ಕೊಡಲಿ ಬಾವಿಗೆ ಬಿದ್ದಾಗ ದೇವರನ್ನು ಆತ ಪ್ರಾರ್ಥಿಸಿ ದೇವನು ಪ್ರತ್ಯಕ್ಷನಾಗಿ ಆತನಿಗೆ ಮೊದಲು ಚಿನ್ನದ ಕೊಡಲಿ, ನಂತರ ಬೆಳ್ಳಿಯ ಕೊಡಲಿ, ಆ ನಂತರ ಕಬ್ಬಿಣದ ಕೊಡಲಿ ತರಲು ತಿಮ್ಮ ತನ್ನ,ಕೊಡಲಿ ಯಾವುದೆಂದು ನಿಜ ನುಡಿಯಲು ದೇವನು ಎಲ್ಲಾ ಕೊಡಲಿಗಳನ್ನು ದಯಪಾಲಿಸಿದ ಕಥೆ ಎಲ್ಲರಿಗೂ ಗೊತ್ತೇ ಇದೆ. ಅದೇ ತಿಮ್ಮ ತನ್ನ ಹೆಂಡತಿಯೊಡನೆ ಅದೇ ಬಾವಿಯ ಬಳಿ ಕುಳಿತಿರಲು ಅವರಿಬ್ಬರ ನಡುವೆ ಮಾತು ಬೆಳೆದು ಜಗಳಕ್ಕಿಳಿದು ತಿಮ್ಮ ತನ್ನ ಹೆಂಡತಿಯನ್ನು ಅಕಸ್ಮಾತ್ ತಳ್ಳಿ ಆಕೆ ಬಾವಿಯಲ್ಲಿ ಬಿದ್ದಳು. ಆಗ ತಿಮ್ಮ ಗಾಬರಿಯಿಂದ ಅಯ್ಯೋ ದೇವರೇ ಎಂದು ಹಿಂದಿನಂತೆ ಮೊರೆಯಿಡಲು ಅದೇ ದೇವನು ಮತ್ತೆ ತಿಮ್ಮನ ಕರೆಗೆ ಓಗೊಟ್ಟು ಮರಳಿ ಬಂದನು.ತಿಮ್ಮ ನಡೆದುದ್ದೆಲ್ಲಾ ವಿವರಿಸಲು ದೇವನು ತಿಮ್ಮನಿಗೆ ಸ್ವಲ್ಪ ತಾಳೆಂದು ಹೇಳಿ ಬಾವಿಯೊಳಗೆ ಹೋಗಿ ಐಶ್ವರ್ಯ ರೈ ಳನ್ನು ಕರೆತಂದನು. ತಕ್ಷಣ ತಿಮ್ಮ "ಈಕೇನೇ ನನ್ನ ಹೆಂಡತಿ" ಎಂದು ಅವಸರದಿ ಹೇಳಿದ. ದೇವನು "ಎಲೈ ತಿಮ್ಮ ಈ ಸುಂದರಿಯನ್ನು ಕಂಡಕೂಡಲೇ ಈಕೆಯೇ ನನ್ನ ಹೆಂಡತಿ ಅನ್ನುತ್ತಿರುವೆಯಾ" ಎಂದನು.ಅದಕ್ಕೆ ತಿಮ್ಮ ಶಾಂತವಾಗಿ ಉತ್ತರವಿತ್ತ "ಸ್ವಾಮೀ ಈಕೆಯನ್ನು ನನ್ನಕೆಂಡತಿಯಲ್ಲ ಅಂದರೆ ನೀವು ಒಳಗೆ ಹೋಗಿ ಶ್ರೀದೇವಿಯನ್ನು ಕರೆತರುವಿರಿ,ನಂತರ ನನ್ನ ಹೆಂಡತಿಯನ್ನು ತಂದಾಗ ನಿಜವನ್ನು ಹೇಳಿದಾಗ ಮೂವರನ್ನೂ ನನಗೇ ಕೊಡುವೆ.ಒಬ್ಬಳ ಕಾಟವೇ ಸಾಕಾಗಿ ಹೋಗಿದೆ ಅದಕ್ಕೆ ಈ ಒಬ್ಬಳೇ ಸಾಕು ಸ್ವಾಮಿ"ಎನ್ನಬೇಕೇ!!!
ಬೆಕ್ಕು ಬಾವುಲಿ
ಮರದಿಂದ ಮರಕ್ಕೆಹಾರುತ್ತಾ ಬಾವುಲಿಯೊಂದು ನೆಲಕ್ಕೆ ಬಿದ್ದಿತು.ಹಸಿದ ಬೆಕ್ಕೊಂದು ಹತ್ತಿರದಲ್ಲೇ ಅವಿತು ಕುಳಿತಿತ್ತು.ನೆಲಕ್ಕೆ ಬಿದ್ದ ಬಾವುಲಿಯನ್ನು ಕಂಡಿತು. ಬೆಕ್ಕು ತಕ್ಷಣ ಅದರ ಮೇಲೆರಗಿತು,ಭಯಗೊಂಡ ಬಾವುಲಿ "ನನ್ನನ್ನು ಕೊಲ್ಲಬೇಡ" ಎಂದು ಬೇಡಿಕೊಂಡಿತು.ಆಗ ಬೆಕ್ಕು"ಪಕ್ಷಿಗಳು ನಮ್ಮ ಆಜನ್ಮ ಶತ್ರುಗಳು ಅವನ್ನು ನಾವೆಂದೂ ಜೀವಸಹಿತ ಬಿಡೆವು"ಎಂದಿತು.ತಕ್ಷಣ ಬಾವುಲಿ "ನಾವು ಇಲಿಗಳ ಜಾತಿಗೆ ಸೇರಿದವರು, ಪಕ್ಷಿಯಲ್ಲ" ಎಂದಿತು.ಬೆಕ್ಕು ಬಾವುಲಿಯನ್ನು ಕೊಲ್ಲದೆ ಹಾಗೇ ಬಿಟ್ಟಿತು.ಸ್ವಲ್ಪ ದಿನಗಳ ಬಳಿಕ ಮತ್ತೊಮ್ಮೆ ಆ ಬಾವುಲಿ ಹಾರಾಡುತ್ತಿರಲು ನೆಲಕ್ಕೆ ಬಿದ್ದಿತು ಆದರೆ ಈ ಬಾರಿ ಬೇರೊಂದು ಬೆಕ್ಕು ಅದನ್ನು ಹಿಡಿಯಿತು.ಬಾವುಲಿ ಮತ್ತದೇ ರೀತಿ ಪ್ರಾಣಭಿಕ್ಷೆ ಬೇಡಿತು.ಬೆಕ್ಕು ತಾನು ಇಲಿಗಳನ್ನು ಮಾತ್ರ ತಿನ್ನುವುದು ಎಂದಿತು. ಕೂಡಲೇ ಬಾವುಲಿ ಆದರೆ ನಾನು ಇಲಿಯಲ್ಲ..... ನಾನು ಪಕ್ಷಿ ಜಾತಿಗೆ ಸೇರಿದವ" ಎಂದಿತು.ಅದನ್ನು ನಂಬಿದ ಬೆಕ್ಕು ಬಾವುಲಿಯನ್ನು ಕೊಲ್ಲದೇ ಹಾಗೇ ಬಿಟ್ಟಿತು.
ಸಮಯಕ್ಕೆ ತಕ್ಕ ಉತ್ತರ ಪ್ರಾಣವನ್ನು ಉಳಿಸಿತು
ಕುರುಡು
ಗುಬ್ಬಿ ಮರಿ ಹುಟ್ಟಿನಿಂದಲೇ ಕುರುಡಾಗಿತ್ತು.ಬೇರೆಲ್ಲಾ ಹಕ್ಕಿಗಳು ಹಾರಿ ದೂರ ಸಾರಿ ಆಹಾರ ತರುವುದು ಅದರ ಗಮನಕ್ಕೆ ಬಂದಿತು.ಒಂದು ದಿನ ಮರಿ ಅಮ್ಮನನ್ನು ಕರೆದು "ಅಮ್ಮಾ ನನಗೆ ನಿಜವಾಗಿಯೂ ಕಣ್ಣುಕಾಣುತ್ತದೆ" ಎಂದಿತು.ತಾಯಿ ಗುಬ್ಬಿ ಅದನ್ನು ಪರೀಕ್ಷೆ ಮಾಡಲೆಂದು ಅದರ ಮುಂದೆ ಎರಡು ಜೋಳದ ಕಾಳುಗಳನ್ನು ಇಟ್ಟು "ಏನಿದು" ಎಂದು ಕೇಳಿತು.ಅದಕ್ಕೆ ಮರಿ ಗುಬ್ಬಿ "ಅರೆ ಇದು ಕಲ್ಲುಗಳು" ಎಂದಿತು.ಆಗ ತಾಯಿ ಗುಬ್ಬಿ "ಮಗೂ ನೀನು ಕುರುಡು ಮಾತ್ರವಲ್ಲ ನೀನು ವಾಸನೆ ಕೂಡಾ ತಿಳಿಯುವ ಶಕ್ತಿಯನ್ನೂ ಕಳೆದುಕೊಂಡಿರುವೆ".
ಆಸೆ - ಆತುರ
ಜೇನುತುಪ್ಪ ಜಾಡಿಗಳಲ್ಲಿ ಇಡುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ.ಒಂದು ಮನೆಯಲ್ಲಿ ಒಮ್ಮೆ ಜಾಡಿ ಅಕಸ್ಮಾತ್ ಜಾರಿ ಬಿದ್ದು ಜೇನುತುಪ್ಪ ನಿಧಾನವಾಗಿ ನೆಲಕ್ಕೆ ಹರಿಯಿತು.ಮನೆಯಲ್ಲಿದ್ದ ನೊಣಗಳು ಅದರ ವಾಸನೆಗೆ ಹಿಂಡು ಹಿಂಡಾಗಿ ಹಾರಿಬಂದು ಅದರ ಮೇಲೆ ಕುಳಿತು ಸವಿಯಲು ಆರಂಭಿಸಿದವು.ಅವುಗಳ ಕಾಲು ಜೇನಿನತುಪ್ಪದಲ್ಲಿ ಒದ್ದೆಯಾಗಿ ಮುಳುಗಲು, ರೆಕ್ಕೆಗಳೂ ಸಹ ಜೇನಿಗೆ ಅಂಟಿ ನೊಣಗಳು ಹಾರದಂತೆ ಆಯಿತು.ಆಗಾಗಲೆ ಅವುಗಳಿಗೆ ತಮ್ಮ ತಪ್ಪು ಅರಿವಾಗಿತ್ತು ಆದರೆ ಏನು ಮಾಡುವುದು ಬಹಳ ತಡವೂ ಆಗಿತ್ತು. ಜೇನುತುಪ್ಪ ತಿನ್ನುವ ಆಸೆಯಿಂದ ಆತುರ ಪಟ್ಟಿದ್ದು ಪ್ರಾಣಕ್ಕೆ ಆಪತ್ತಾಯಿತು. ನೀತಿ:ಅಸೆಯೇ ಅವನತಿಗೆ ಕಾರಣ.
ಯಾರು ಹೆಚ್ಚು
ಒಂದು ಸಿಂಹ ಹಾಗು ಒಬ್ಬ ಮಾನವ ಸ್ನೇಹದಿಂದ ಬಾಳುತ್ತಿದ್ದರು.ಒಮ್ಮೆ ಇಬ್ಬರೂ ಕಾಡಿನ ಹಾದಿಯಲ್ಲಿ ನಡೆಯುತ್ತಿದ್ದರು.ಹಾಗೇ ಮಾತಿಗೆ ಮಾತು ಬೆಳೆದು ಒಬ್ಬರಿಗಿಂತ ಒಬ್ಬರು ತಮ್ಮ ಸಾಮರ್ಥ್ಯವನ್ನು ಕೊಚ್ಚಿಕೊಳ್ಳತೊಡಗಿದರು. ಹಾಗೆ ಸಾಗಿರಲು ಒಂದು ಕಲ್ಲಿನ ಶಿಲೆ ಕಂಡಿತು.ಅದು ಓರ್ವ ಮಾನವ ತನ್ನ ತೋಳ್ಬಲದಿಂದ ಸಿಂಹವನ್ನು ನೆಲಕ್ಕಪ್ಪಳಿಸಿ ಒಂದು ಕೈಯಿಂದ ಅದನ್ನು ಅದುಮಿ ಹಿಡಿದು ಮತ್ತೊಂದು ಕೈ ಮೇಲೆತ್ತಿ ಅದನ್ನು ಜಜ್ಜಿ ಹಾಕುವಂತೆ ಕೆತ್ತಲಾಗಿತ್ತು.ಅದನ್ನು ತೋರಿಸಿ ಮಾನವನು "ನೋಡಿದೆಯಾ ಸಿಂಹ ಮಾನವನ ಮುಂದೆ ಮೃಗರಾಜನೂ ಏನೂ ಇಲ್ಲ"ಎಂದ.ತಕ್ಷಣ ಸಿಂಹ ಅವನ ಮೇಲೆರಗಿ ಹಿಂಗಾಲುಗಳಿಂದ ಅವನನ್ನು ಹಿಡಿದು ಮುಂಗಾಲುಗಳಿಂದ ಸಿಗಿದು ಹಾಕುವ ಹಾಗೆ ಘರ್ಜಿಸಿ ನಿಂತಿತು." ಮಾನವ ಇದನ್ನು ಕೆತ್ತಿದವನು ಮಾನವ,ಸಿಂಹಕ್ಕೂ ಕೆತ್ತನೆ ಕೆಲಸ ತಿಳಿದಿದ್ದರೆ ಆ ಶಿಲೆ ಹೀಗಿರುತ್ತಿತ್ತು ಎಂದು ಹೇಳಿ ಏನೂ ಮಾಡದೆ ಮುಂದೆ ಸಾಗಿತು.
ಕಥೆ ಕೇಳಲು ಬಲು ಚೆನ್ನ..........ಆದರೆ ಮತ್ತೊಂದು ಹೇಳುವವರೆಗೂ ಅಷ್ಟೆ.
ಆಪ್ತರು
ಇಬ್ಬರು ಸ್ನೇಹಿತರುಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುತಿರಲು ಅವರ ಎದುರಿಗೆ ಧಿಡೀರ್ ಎಂದು ಕರಡಿಯೊಂದು ಬಂದಿತು.ಒಬ್ಬನು ಕೂಡಲೇ ಓಡಿ ಮರದ ಮೇಲೆ ಹತ್ತಿದನು.ಎಲೆಗಳ ಮರೆಯಲ್ಲಿ ಕಾಣದಂತೆ ಕುಳಿತನು. ಮತ್ತೊಬ್ಬನು ಅಲ್ಲೇ ನೆಲದಮೇಲೆ ಬಿದ್ದು ಸತ್ತವನಂತೆ ನಟಿಸಿದನು.ಕರಡಿ ನೆಲದ ಮೇಲೆ ಬಿದ್ದವನ ಬಳಿಗೆ ಬಂದು ಮೂಸಿನೋಡಿತು.ಸ್ವಲ್ಪವೂ ಅಲುಗಾಡದೆ ಉಸಿರೂ ಸಹ ಹಿಡಿದಿಟ್ಟುಕೊಂಡಿದ್ದ ಅವನನ್ನು ಕರಡಿ ಸತ್ತಿದ್ದಾನೆ ಎಂದು ವಾಸನೆ ಶಕ್ತಿಯಿಂದ ಮತ್ತೊಬ್ಬನಿದ್ದ ಎಡೆಗೆ ಧಾವಿಸಿತು.ಮರದ ಮೇಲಿದ್ದ ಅವನನ್ನು ಹಿಡಿಯುವುದು ಕರಡಿಗೆ ಕಷ್ಟವಾಗಲಿಲ್ಲ.ಮುಂದೇನಾಯಿತೆಂದು ನೀವೇ ಊಹಿಸಬಹುದಲ್ಲವೇ.....
ಆಪತ್ತು ಬಂದಾಗ ಆಪ್ತರ ನೀಯತ್ತು ತಿಳಿಯುತ್ತದೆ.
ಮುದಿ ಸಿಂಹ
ಮೃಗರಾಜನಾದ ಸಿಂಹ ವಯಸ್ಸಾದ ಮೇಲೆ ಬೇಟೆಯಾಡುವ ಸಾಮರ್ಥ್ಯ ಕಳೆದುಕೊಳ್ಳಲು ತನ್ನ ಆಹಾರವನ್ನು ಗಿಟ್ಟಿಸಿಕೊಳ್ಳಲು ಒಂದು ಉಪಾಯ ಮಾಡಿತು.ತಾನು ಖಾಯಿಲೆಯಿಂದ ನರಳುತ್ತಿರುವುದಾಗಿಯೂ ಕಾಡಿನ ಪ್ರಾಣಿಗಳೆಲ್ಲಾ ಬಿಡುವು ಮಾಡಿಕೊಂಡು ಬಂದು ನೋಡಬೇಕೆಂದು ಕಂಡ ಕಂಡ ಪ್ರಾಣಿಗಳಿಗೆಲ್ಲಾ ಹೇಳಿತು.ವಿಷಯ ಪ್ರಾಣಿಪಕ್ಷಿಗಳ ಮೂಲಕ ಎಲ್ಲಾ ಕಡೆಗೆ ಹರಡಿತು.ಎಲ್ಲಾ ಪ್ರಾಣಿಗಳು ತಮಗೆ ಅನುಕೂಲವಾದಾಗ ಒಂದೊಂದಾಗಿ ಬಂದು ನೋಡಲು ಆ ಸಿಂಹ ಗವಿಯಲ್ಲಿ ಅವಿತು ಅವನ್ನು ಕೊಂದು ತಿನ್ನುತ್ತಾ ಇತ್ತು.ಒಂದು ದಿನ ನರಿಯೊಂದು ಕಾಡಿನ ಪ್ರಾಣಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದನ್ನು ಕಂಡು ಗುಹೆಯ ಬಳಿ ಬಂದಿತು.ಸಾಕಷ್ಟು ದೂರದಿಂದಲೇ ಸಿಂಹವನ್ನು "ಹೇಗಿದ್ದೀಯಾ" ಎಂದು ವಿಚಾರಿಸಿತು.ಅದಕ್ಕೆ ಸಿಂಹ "ನಾನು ಚಳಿಯಲ್ಲಿ ನಡಗುತ್ತಿದ್ದೇನೆ ಹತ್ತಿರ ಬಾ "ಎಂದಿತು.ಅದಕ್ಕೆ ನರಿಯು "ಭಲೇ ಸಿಂಹ ನೀನು ಬಹಳ ಬುದ್ಧಿವಂತನಾಗಿದ್ದೀಯಾ ಅಂದುಕೊಂಡಿದ್ದೀಯಾ,ನಿನ್ನ ಗುಹೆಯ ಒಳಗೆ ಪ್ರಾಣಿಗಳು ನಡೆದುಬಂದಿರುವ ಹೆಜ್ಜೆ ಗುರುತು ಕಾಣುತ್ತಿವೆ ಆದರೆ ಯಾವುದೂ ಹೊರಗೆ ಬರುತ್ತಿಲ್ಲವಲ್ಲಾ"ಎಂದಾಗ ಸಿಂಹದ ಕುತಂತ್ರ ಬಯಲಾಯಿತು.
ಸಿಂಹ ಪ್ರೇಮ
ಕಾಡಿನ ರಾಜ ಸಿಂಹಕ್ಕೆ ಪಕ್ಕದ ಊರಿನ ಮರಕಡಿಯುವವನ ಮಗಳ ಮೇಲೆ ಪ್ರೇಮ ಬೆಳೆಯಿತು.ಅವಳನ್ನು ಕೊಟ್ಟು ತನಗೆ ಮದುವೆ ಮಾಡಿಕೊಡು ಎಂದು ಅವಳ ತಂದೆಯನ್ನು ಬಲವಂತ ಮಾಡತೊಡಗಿತು.ಇದಕ್ಕೆ ಆತ ಉತ್ತರ ಇಲ್ಲಾ ಎಂದರೆ ಪ್ರಾಣಭಯ ,ಆದರೆ ಯಾರುತಾನೆ ತಮ್ಮ ಮಗಳನ್ನು ಸಿಂಹಕ್ಕೆ ಮದುವೆ ಮಾಡಿಕೊಡಲು ಸಿದ್ಧರಾಗಿರುತ್ತಾರೆ? ಸರಿ ಸಿಂಹ ಪದೇ ಪದೇ ಪೀಡಿಸುತ್ತಿರಲು ಒಂದು ದಿನ ಆತ ಸಿಂಹಕ್ಕೆ ಹೇಳಿದ "ಮೃಗರಾಜ ನನ್ನ ಮಗಳನ್ನು ನೀನು ಮದುವೆ ಆಗಲು ಬಯಸಿದ್ದೀ, ಸರಿ ನನ್ನ ಒಪ್ಪಿಗೆ ಕೊಡುವೆ, ಆದರೆ ಅದರಲ್ಲಿ ನನ್ನದೊಂದು ಶರತ್ತಿದೆ. ಅದೇನೆಂದರೆ "ನಿನ್ನ ಎಲ್ಲಾ ಹಲ್ಲು ಮತ್ತು ಉಗುರುಗಳನ್ನು ಕಿತ್ತರೆ ಆ ಕೂಡಲೇ ನನ್ನ ಮಗಳು ನಿನಗೆ" ಎಂದ. ಕೂಡಲೇ ಸಿಂಹ ತನ್ನ ಹಲ್ಲುಗಳನ್ನೆಲ್ಲಾ ಕಿತ್ತು ಉಗುರನ್ನೂ ಕತ್ತರಿಸಿ ಬಿಸಾಡಿತು.ಯಾವ ಬಲವೂ ಇಲ್ಲದಂತಾದ ಕೂಡಲೇ ಮರ ಕಡಿಯುವವನು ದೊಡ್ಡದಾದ ದೊಣ್ಣೆಯಿಂದ ಸಿಂಹಕ್ಕೆ ಸರಿಯಾಗಿ ಬಾರಿಸಿ ಕಾಡಿಗಟ್ಟಿದ.
ನಕ್ಷತ್ರ ವಿದ್ಯೆ
ಜ್ಯೋತಿಷ್ಯ ಮತ್ತು ನಕ್ಷತ್ರವಿದ್ಯೆ ಕಲಿಯುತ್ತಿದ್ದ ಒಬ್ಬ ಯುವಕ. ಒಮ್ಮೆ ರಾತ್ರಿ ವೇಳೆ ಆಕಾಶವನ್ನೇ ನೊಡುತ್ತಾ ನಕ್ಷ್ತ್ರಗಳನ್ನೇ ಏಣಿಸುತ್ತಾ ನಡೆದ. ಒಂದು ಹಾಳುಬಾವಿಯಲ್ಲಿ ಬಿದ್ದು ಮೈಕೈಕಾಲು ಗಾಯ ಮಾಡಿಕೊಂಡ."ಅಯ್ಯೋ ಯಾರಾದರೂ ನನ್ನನ್ನು ಮೇಲೆತ್ತಿ,ಕಾಪಾಡಿ ಎಂದು ಗೋರ್ಗರೆದ.ಪಕ್ಕದ ಹಾದಿಯಲ್ಲಿ ನಡೆದು ಹೋಗುತ್ತಿದ್ದ ಅವನನ್ನು ಮೇಲೆಕ್ಕೆ ಎಳೆದು ಜೀವ ಉಳಿಸಿದ.ವಿಷಯ ವಿವರಿಸಲು ಆ ದಾರಿ ಹೋಕ ಹೇಳಿದ"ಮೊದಲು ಭೂಮಿಯಮೇಲಿರುವುದನ್ನೇ ನೀ ಕಾಣಲಾರೆ ಇನ್ನು ಅಕಾಶದಲ್ಲಿರುವುದನ್ನು ಹೇಗೆ ನೋಡುವೆ"ಎಂದು ಬುದ್ಧಿಹೇಳಿ ಹೊರಟ.
ಅಪಾಯ!
ದೂರದ ಹಳ್ಳಿಯ ರೈತನ ತೋಟದ ಮನೆಯಲ್ಲಿ ಹತ್ತಾರು ಸಾಕು ಪ್ರಾಣಿಗಳು ಇದ್ದವು.ಅದರಲ್ಲಿ ಹಸು,ಹಂದಿ,ಕೋಳಿ,ಇಲಿ ಆತ್ಮೀಯ ಗೆಳೆಯರು.ಒಮ್ಮೆ ಮನೆಯ ಯಜಮಾನ ಹೆಂಡತಿಯೊಡನೆ ತನ್ನ ಕೋಣೆಯಲ್ಲಿ ಮಲಗುವ ಮೊದಲು ಪಿಸುಗುಡುತ್ತಾ ಒಂದು ಪೊಟ್ಟಣ ತೆಗೆದ.ಅದರಲ್ಲಿ ಒಂದು ಇಲಿ ಹಿಡಿಯುವ ಬೋನ್ ಇತ್ತು.ಮಂಚದಡಿಯಿಂದ ಇಲಿ ಎಲ್ಲವನ್ನೂ ಗಮನಿಸಿತು ಅವರಾಡಿದ ಮಾತನ್ನೂ ಆಲಿಸಿತು.ತಕ್ಷಣ ಗಾಬರಿಯಿಂದ ಓಡಿಹೋಗಿ ಕೋಳಿಗೆ "ಅಯ್ಯೋ ಅಪಾಯ ಅಪಾಯ ಇಲಿ ಬೋನ್ ತಂದಿದ್ದಾರೆ"ಹೇಳಿತು.ಆದರೆ ಕೋಳಿ"ಅಯ್ಯೋ ಅಷ್ಟೇ ತಾನೆ ನಾನೇನೋ ಅಂತಿದ್ದೆ"ಎಂದು ಕಾಳು ಹೆಕ್ಕುತಾ ಮುಂದೆ ಸಾಗಿತು.ಆನಂತರ ಇಲಿ ಹಂದಿಗೆ ವಿಷಯ ತಿಳಿಸಿತು.ಹಂದಿಯೂ ಅಷ್ಟು ಆಸಕ್ತಿ ತೋರಿಸಲಿಲ್ಲದ ಕಾರಣ ಇಲಿ ಹಸುವಿನ ಬಳಿ ಹೋಗಿ ಹೇಳಿತು.ಅದೂ ಸಹ "ಅರೆ ಬಿಡು ಅದೇನೂ ಅಂಥಾ ಅಪಾಯ ಅಲ್ಲ,ಏನೂ ಆಗಲ್ಲ"ಎಂದಿತು.ಆರಾತ್ರಿ ಎಲ್ಲರೂ ಮಲಗಿರಲು ಇದ್ದಕ್ಕಿದ್ದ ಹಾಗೆ ಪಟಾರ್ ಎಂದು ಶಬ್ದ.ಇಲಿ ಸಿಕ್ಕಿಬಿದ್ದಿದೆಯೇನೋ ಎಂದು ರೈತಹ ಹೆಂಡತಿ ಎದ್ದು ಬೋನಿನ ಬಳಿ ಬಂದು ನೋಡಲು ವಿಷದ ಹಾವೊಂದು ಅದಕ್ಕೆ ಸಿಕ್ಕು ನರಳಾಡುತ್ತಿತ್ತು. ಆಕೆ ದೀಪ ಹಿಡಿದು ನೋಡುವಷ್ಟರಲ್ಲಿ ಆ ಬೋನನ್ನೇ ಎಳೆದಾಡುತ್ತಾ ಆಕೆಗೆ ಹಾವು ಕಚ್ಚಿತು.ಜೋರಾಗಿ ಕಿರುಚಿದಳು.ಅಕ್ಕಪಕ್ಕದ ಮನೆಯವರೆಲ್ಲಾ ಎದ್ದರು.ರೈತ ಓಡಿ ಹೋಗಿ ವೈದ್ಯರನ್ನು ಕರೆತಂದನು.ಚಿಕಿತ್ಸೆ ನಡೆಯಿತು.ರಾತ್ರಿಯಿಡೀ ಎದ್ದಿರಲು ಹೇಳಿದರು ವದ್ಯರು.ಸರಿ ಬಂದ ನೆರೆಹೊರೆಯವರು ಜೊತೆಯಲ್ಲೇ ಕುಳೀತರು.ರೈತನಿಗೆ ಅವರಿಗೆಲ್ಲಾ ಉಪಚಾರ ಮಾಡಬೇಕಾಯಿತು.ತನ್ನಲ್ಲಿದ್ದ ಕೋಳಿಯನ್ನು ಕೊಂದು ಅವರಿಗೆಲ್ಲಾ ಸಾರು/ಸೂಪ್ ಮಾಡಿಕೊಟ್ಟ.ಮರುದಿನದಿಂದ ಹಳ್ಳಿಯವರೆಲ್ಲಾ ಆಕೆಯನ್ನು ನೋದಲು ಬರತೊಡಗಿದರು.ತನ್ನಲ್ಲಿದ್ದ ಹಂದಿಯನ್ನು ಕೊಂದು ಬಂದ ನಂಟಿಷ್ಟರಿಗೆ ಅಡುಗೆ ಮಾಡಿ ಬಡಿಸಿದ.ಆದರೆ ವಿಷದ ಹಾವಿನ ಕಡಿತದಿಂದ ರೈತನ ಹೆಂಡೈ ಹೆಚ್ಚುದಿನ ಬದುಕುಳಿಯಲಿಲ್ಲ.ಅಸುನೀಗಿದಳು.ಶವ ಸಂಸ್ಕಾರ ಹನ್ನೊಂದು ದಿನದ ನಂತರ ಸಮಾರಾಧನೆಗೆ ತನ್ನಲ್ಲಿದ್ದ ಒಂದು ಹಸುವನ್ನೂ ಕಡಿದು ಬಂದ ನಂಟಿಷ್ಟರಿಗೆ ಬೇಯಿಸಿ ಬಡಿಸಿದ.ಇಲಿ ತಾನು ಮೊದಲೇ ಎಚ್ಚರಿಕೆ ಕೊಟ್ಟಾಗ ಏನಾದರೂ ಸಹಾಯ/ಉಪಾಯ ಮಾಡಿದ್ದರೆ ಇಷ್ಟು ಅನಾಹುತ ನಡೆಯುವಷ್ಟೇ ಇರಲಿಲ್ಲವೇ ಎಂದು ಪಶ್ಚಾತ್ತಾಪ ಪಟ್ಟಿತು.ಕಾಲ ಮಿಂಚಿತ್ತು. ನೀತಿ:ಸ್ನೇಹಿತ/ಸಂಸಾರದಲ್ಲಿ ಒಬ್ಬರಿಗೆ ತೊಂದರೆಯಾದರೂ ಎಲ್ಲರಿಗೂ ಅದರ ಪರಿಣಾಮವಾಗುತ್ತದೆ.
ಬಂದೂಕು ಇದೆ ಎಚ್ಚರ
ಓರ್ವ ಮುದುಕ ತನ್ನ ಹೊಲದಲ್ಲಿ ಆಲೂಗಡ್ಡೆ ಬೆಳೆಯುವ ಆಸೆ ಇಟ್ಟುಕೊಂಡಿದ್ದ.ಆದರೆ ವಯಸ್ಸು ದೇಹಸ್ಥಿತಿ ನೆನೆದು ಕೈಲಾಗದೆ ವ್ಯಥೆಯಿಂದ ನೊಂದಿದ್ದ.ಇದ್ದ ಒಬ್ಬ ಮಗನು ತಪ್ಪುಮಾಡಿ ಸಿಕ್ಕು ಜೈಲಿನಲ್ಲಿ ಇದ್ದ.ಮುದುಕ ಮಗನಿಗೆ ಒಂದು ಪತ್ರ ಬರೆದ"ಮಗ ನಿನ್ನ ತಾಯಿಗೆ ನಮ್ಮ ಹೊಲದಲ್ಲಿ ಆಲೂಗಡ್ಡೆ ಬೆಳೆಯುವ ಆಸೆಇತ್ತು.ನನಗೋ ಕೈಲಾಗದು ನೀನು ನೋಡಿದರೆ ಜೈಲಿನಲ್ಲಿ ಕೊಳೆಯುತ್ತಿರುವೆ,ಆಳುಗಳನ್ನಿಟ್ಟಾದರೂ ಬೆಳೆತೆಗೆಯೋಣ ಅಂತಿದ್ದೇನೆ, ಆದರೆ ಅದಕ್ಕೂ ಹಣ ಬೇಕು,ಈಗೇನು ಮಾಡಲಿ?" ಅದಕ್ಕೆ ಉತ್ತರವಾಗಿ ಮಗ"ಅಪ್ಪಾ ದಯವಿಟ್ಟು ಆ ನೆಲ ಅಗೆಯಬೇಡಿ ಅಲ್ಲಿ ನಾನು ಬಂದೂಕುಗಳನ್ನು ಅಡಗಿಸಿಟ್ಟಿದ್ದೇನೆ ಎಚ್ಚರ"ಎಂದು ಬರೆದ.ಮರುದಿನ ಬೆಳಗಾಗುವಷ್ಟರಲ್ಲೇ ಪೋಲೀಸರು ನೆಲವನ್ನೆಲ್ಲಾ 2/3 ಅಡಿ ಅಗೆದು ಕೆದಕಿ ನೋಡಿದರು.ಬಂದೂಕುಗಳು ಸಿಗಲಿಲ್ಲ.ಮುದುಕ ನಡೆದ ವಿಷಯ ಮಗನಿಗೆ ಪತ್ರ ಬರೆದು ತಿಳಿಸಿದ. ಆಗ ಮಗ"ಅಪ್ಪಾ ಈಗ ತಾನೇ ನೆಲ ಅಗೆಯುವ ಕೆಲಸ ಮಾಡಿದ್ದಾಗಿದೆ ಇನ್ನು ಆಲೂಗಡ್ಡೆ ಬಿತ್ತುವುದಷ್ಟೇ ಬಾಕಿ,ನನ್ನಿಂದಾದಷ್ಟು ನಾನು ಮಾಡಿಸಿದ್ದೇನೆ.ಅಲ್ಲಿ ಬಂದೂಕೂ ಇಲ್ಲ ಏನೂ ಇಲ್ಲ"ಎಂದು ಬರೆದ.
ವ್ಯಾಪಾರಬುದ್ಧಿ
ಚೀನಾದ ನಗರದಲ್ಲಿ ಚಾಂಗ್ ಮತ್ತು ವಾಂಗ್ ಎಂಬ ಇಬ್ಬರು ಯುವಕರು ವ್ಯಾಪಾರ ಸೇಲ್ಸ್ಮನ್ ಆಗಿ ಕೆಲಸಕ್ಕೆ ಸೇರಿದರು.ಸ್ವಲ್ಪ ದಿನಕ್ಕೆ ವಾಂಗ್ ತನ್ನ ಅಧಿಕಾರಿಯಿಂದ ಮೆಚ್ಚುಗೆ ಪಡೆದು ಪ್ರಗತಿ/ಪ್ರಮೋಶನ್ ಕೂಡಾ ಗಿಟ್ಟಿಸಿಕೊಂಡನು.ಚಾಂಗ್ ಅದನ್ನು ಕಂಡು ಸಹಿಸದೆ ತನ್ನ ಅಧಿಕಾರಿಯನ್ನು ವಿಚಾರಿಸಿದನು. ಅದಕ್ಕೆ ಇಬ್ಬರಿಗೂ ಒಂದು ಪುಟ್ಟ ಪರೀಕ್ಷೆ ಕೊಟ್ಟನು.ಇಬ್ಬರೂ ಹೋಗಿ ಹಲನಿನ ಹಣ್ಣಿನ ವ್ಯಾಪಾರದ ಬಗ್ಗೆ ಮಾಹಿತಿ ಪಡೆದು ಬರಲು ಹೇಳಿದ.ಚಾಂಗ್ ಮೊದಲು ಹೋಗಿ ಕಿಲೋಗೆ 12 ಡಾಲರ್ ಎಂದು ತಿಳಿದು ಬಂದ.ಆಗ ಅಧಿಕಾರಿ ವಾಂಗ್ ನನ್ನು ಕಳುಹಿಸಿ ಅವನ ವಿಚಾರಣೆ ಹೇಗಿದೆ ಎಂದು ತಿಳಿಯುವಾಗ ಚಾಂಗ್ ನನ್ನೂ ಪಕ್ಕದಲ್ಲಿರಲು ಹೇಳಿದ.ವಾಂಗ್ ವ್ಯವಹಾರದ ವಿವರ ನೀಡಿದ"ಬಾಸ್ ಮಾರುಕಟ್ಟೆಯಲ್ಲಿ ಇಬ್ಬರು ಮಾತ್ರ ಹಲಸಿನ ಹಣ್ಣು ಮಾರುತ್ತಿದ್ದಾರೆ, ಕಿಲೋಗೆ 12ಡಾಲರ್, 10ಕ್ಕೆ 100ಡಾಲರ್,ಒಬ್ಬೊಬ್ಬರೂ 300 ಹಣ್ಣು ತಂದಿದ್ದಾರೆ,ಮೇಜಿನ ಮೇಲೆ 30 ಹಣ್ಣು ಜೋಡಿಸಿದ್ದಾರೆ,ಒಂದೊಂದು ಹಣ್ಣು 15 ಕಿಲೋ ತೂಕವಿದೆ,ಅವರು ದಕ್ಷಿಣದ ರಾಜ್ಯದಿಂದ ಅವನ್ನು ತಂದಿದ್ದಾರೆ.ತಂದು ಎರಡು ದಿನ ಆಗಿದೆ.ಹಣ್ಣುಗಳು ಒಂದು ವಾರ ಕೆಡುವುದಿಲ್ಲ.ದಿನಕ್ಕೆ40 ರಿಂದ 50 ಹಣ್ಣು ಮಾರಾಟ ಮಾಡುತ್ತಾರೆ. ಇದನ್ನು ಕೇಳಿ ಚಾಂಗ್ ಗೆ ನಾಚಿಕೆಯಾಯಿತು ರಾಜಿನಾಮೆ ಕೊಡುವುದರ ಬದಲು ವಾಂಗ್ ನಿಂದ ಬುದ್ಧಿ ಕಲಿತು ಮುನ್ನಡೆದ.
ಎಡಿಸನ್
ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ದೀಪವನ್ನು ಕಂಡುಹಿಡಿಯುವ ಸಮಯದಲ್ಲಿ filament ಗಾಗಿ ಸುಮಾರು ಎರಡು ಸಾವಿರ ಪದಾರ್ಥಗಳನ್ನು ಪ್ರಯೋಗ ಮಾಡಿ ವಿಫಲನಾದ.ನಂತರ ಸರಿಯಾದ filament ಅನ್ನು ಕಂಡುಹಿಡಿಯಲು ಆತನ ಸಹಾಯಕ "ಅಯ್ಯೋ ನಮ್ಮ ಕೆಲಸವೆಲ್ಲಾ ವ್ಯರ್ಥವಾಯಿತು,ನಾವೇನು ಕಲಿತಹಾಗಾಯಿತು" ಎಂದ.ಅದಕ್ಕೆ ಎಡಿಸನ್ " ನೋಡು ನಾವು ಸಂಶೋಧನೆಯಲ್ಲಿ ಎಷ್ಟು ಮುಂದೆ ಸಾಗಿದ್ದೇವೆ ಎಂದು? ಎರಡು ಸಾವಿರ ಪದಾರ್ಥಗಳನ್ನು filament ಆಗಿ ಬಳಸಲು ಸಾಧ್ಯವಿಲ್ಲ ಎಂದು ತಿಳಿಯಿತಲ್ಲವೇ"ಎಂದನು.ಈ ಜಾಣ್ಮೆಯ ಉತ್ತರ ಎಲ್ಲಕಾಲಕ್ಕೂ ಅನ್ವಯ ಅಲ್ಲವೇ?
ಯಾರು ಮೊದಲು
ಮನೆಯೊಡತಿ ಬಾಗಿಲು ತೆರೆದು ಹೊರಗೆ ಬರಲು ಅಂಗಳದಲ್ಲಿ ಬಿಳಿಕೂದಲು ಬೆಳೆಸಿಕೊಂಡಿದ್ದ 3 ಬಡ ಮುದುಕರು ಕುಳಿತಿದ್ದರು.ಅವರನ್ನು ಕಂಡು ಮರುಕದಿಂದ "ತಾವು ಯಾರೋ ನನಗೆ ತಿಳಿಯದು,ಹಸಿದಂತೆ ಕಾಣುತ್ತೀರಿ,ಒಳಗೆ ಬನ್ನಿ ಇನ್ನಲು ಏನಾದರು ಕೊಡುವೆ ಎಂದಳು.ಅದಕ್ಕೆ ಅವರಲ್ಲೊಬ್ಬನು "ನಿಮ್ಮ ಮನೆಯ ಯಜಮನ ಮನೆಯಲ್ಲಿರುವನೋ?ಆತನನ್ನು ಕೇಳು ನಂತರ ಬರುವೆವು"ಎಂದ.ಮನೆಯ ಯಜಮಾನ ಇಲ್ಲವೆಂದು ಕೇಳಿ, ಆತನು ಬಂದಮೇಲೆ ಒಳಕ್ಕೆ ಬರುತ್ತೇವೆ ಎಂದರು.ಯಜಮಾನ ಬಂದಾಗ ಅವರನ್ನು ಕಂಡು, ಹೆಂಡತಿಯನ್ನು ವಿಚಾರಿಸಿ ವಿವರವಾಗಿ ವಿಷಯವೇನೆಂದು ತಿಳಿದ,ಒಳಗೆ ಕರೆಯಲು ಒಪ್ಪಿಗೆ ಕೊಟ್ಟ.ಆದರೆ ಆ ಮೂವರೂ ಒಟ್ಟಿಗೆ ಒಳಗೆ ಬರಲು ಸಿದ್ಧವಿರಲಿಲ್ಲ.ಅವರಲ್ಲಿ ಒಬ್ಬ "ನನ್ನ ಹೆಸರು ಸಂಪತ್ತು, ಈತನ ಹೆಸರು ಯಸಸ್ಸು, ಆತನ ಹೆಸರು ಪ್ರೀತಿ" ಎಂದು ಹೇಳಿದ."ನಮ್ಮಲ್ಲಿ ಯಾವನೋ ಒಬ್ಬನನ್ನು ಮಾತ್ರ ಒಳಗೆ ಕರೆಯಬಹುದು.ನೀವು ಯಾರನ್ನು ಆರಿಸುವಿರೋ ಯೋಚಿಸಿ ಬನ್ನಿ" ಎಂದ.ಒಳಗೆ ಹೊರಟ ಯಜಮಾನಿ ಗಂಡನ ಜೊತೆ ತುಸುಹೊತ್ತು ವಿಚಾರಣೆ ಮಾಡಿ "ಪ್ರೀತಿಯನ್ನು ಒಳಗೆ ಕರೆದರು.ಆಗ ಉಳಿದ ಇನ್ನಿಬ್ಬರೂ ಅವನ ಜೊತೆ ಒಳಗೆ ಬಂದರು.ಬೇರೆ ಆಯ್ಕೆ ಮಾಡಿದ್ದರೆ ಏನಾಗುತ್ತಿತ್ತೆಂದು ನೀವೇ ಯೋಚಿಸಿ....
ಮುಂದಾಲೋಚನೆ
ಸುಡುಬಿಸಿಲಿನಲ್ಲಿ ಹಸಿವಿನಿಂದ ಅತ್ತಿಂದಿತ್ತ ಆಹಾರಕ್ಕಾಗಿ ಹುಡುಕಾಡುತ್ತಾ ಜಿಗಿದಾಡುತ್ತಿದ್ದ ಮಿಡತೆಯೊಂದು ಸಣ್ಣ ಸಣ್ಣ ಇರುವೆಗಳು ಕಾಳುಗಳನ್ನು ಹೊತ್ತು ಸಾಲಾಗಿ ಹೋಗುತ್ತಿದ್ದುದು ಕಂಡಿತು.ಅವುಗಳ ಬಳಿಗೆ ಹೋಗಿ ತನಗೆ ಹಸಿವಾಗಿದೆ ಎಂದೂ ತನಗೂ ಒಂದೆರೆಡು ಕಾಳು ಕೊಡಲು ಕೇಳಿತು.ಆಗ ಇರುವೆಯೊಂದು "ಅಯ್ಯಾ ಮಿಡತೆ ನೀನು ಬೇಸಿಗೆಯಲ್ಲಿ ಏನು ಮಾಡುತ್ತಿದ್ದೆ, ಆಹಾರ ಕೂಡಿ ಇಡಲಿಲ್ಲವೇ?"ಎಂದಿತು.ಅದಕ್ಕೆ ಮಿಡತೆ "ಬೇಸಿಗೆ ನನಗೆ ಬಹಳ ಇಷ್ಟವಾದ ಸಮಯ ಆಗ ನಾನು ಹಾಡು ಹೇಳುತ್ತಾ ಕಾಲ ಕಳೆದೆ"ಎಂದಿತು. ಅದಕ್ಕೆ ಇರುವೆ "ಮೈಮರೆತು ಆಗ ಹಾಡುತ್ತಾ ಇದ್ದೆ, ಈಗ ಕುಣಿಯುತ್ತ ಬಿದ್ದಿರು"ಎಂದು ಮುಂದೆ ಸಾಗಿದವು. ಮಿಡತೆ ಮುಖ ಮುದುಡಿಕೊಂಡು ಮುಂದಕ್ಕೆ ಹಾರಿತು.
ಮುಯ್ಯಿ
ಎರಡು ಅಂತಸ್ತಿನ ಮನೆಯಲ್ಲಿ ಮೇಲೆ ಸುಬ್ಬು ಮತ್ತು ಕೆಳಗಿನ ಮನೆಯಲ್ಲಿ ಸೀನ ವಾಸ ಮಾಡುತ್ತಿದ್ದರು.ಇಬ್ಬರಿಗೂ ಆಗಿಂದಾಗ್ಗೆ ಜಗಳ,ವಾದ ಆಗುತ್ತಿತ್ತು.ಒಮ್ಮೆ ಸೀನ ಎಲೆಗಳನ್ನು ರಾಶಿ ಹಾಕಿ ಸುಡುತ್ತಿದ್ದ.ಮೇಲೆ ವಾಸವಾಗಿದ್ದ ಸುಬ್ಬು ಸೀನನನ್ನು ಯಾಕೆಂದು ವಿಚಾರಿಸಿದ."ಬೆಂಕಿ ಆರಿಸೋ ಮಾರಾಯ ಹೊಗೆಯಿಂದ ನನ್ನ ಉಸಿರು ಕಟ್ಟುತ್ತಿದೆ" ಅಂದ. "ಏನು ಮಾಡುವುದು ಹೊಗೆ ಯಾವಾಗಲೂ ಕೆಳಗಿನಿಂದ ಮೇಲಕ್ಕೇ ತಾನೇ ಹರಿಯುವುದು"ಎಂದ.ಕೂಡಲೇ ಸುಬ್ಬು ಒಂದು ದೊಡ್ಡ ಪಾತ್ರೆಯಲ್ಲಿ ನೀರುತಂದು ಮೇಲಿನಿಂದ ಸುರಿದು"ಏನಪ್ಪಾ ಮಾಡೋದೂ ನೀರು ಯಾವಾಗಲೂ ಮೇಲಿನಿಂದ ಕೆಳಕ್ಕೇ ಹರಿಯುವುದು"ಅನ್ನಬೇಕೇ.
ಜೋಡಿ ಗಿಣಿ
ದಟ್ಟವಾದ ಕಾಡಿನಲ್ಲಿ ಪ್ರಾಣಿ ಪಕ್ಷಿಗಳು ಹೇರಳವಾಗಿದ್ದವು.ಅಲ್ಲಿ ಎರಡು ಗಿಣಿಗಳೂ ವಾಸ ಮಾಡುತ್ತಿದ್ದವು.ದಿನಾಲೂ ದೂರ ದೂರ ಹಾರುತ್ತಾ ಹಣ್ಣು ಹುಡುಕುತ್ತಾ ಪಟ್ಟಣದ ಬಳಿಯೂ ಕಾಳು ಹೆಕ್ಕುತ್ತಾ ಜೀವಿಸುತ್ತಿದ್ದವು.ಅಲ್ಲಿ ಒಂದು ಸುಂದರ ಅರಮನೆ ಆ ಗಿಣಿಗಳಿಗೆ ಕಂಡಿತು.ಕುತೂಹಲದಿಂದ ಬಳಿಗೆ ಹೋಗಲು ಅಲ್ಲಿ ಹರಡಿದ್ದ ಕಾಳು ಧಾನ್ಯ ಕಂಡು ಆಸೆಯಿಂದ ತಿನ್ನಲು ಹೋಗಿ ಬಲೆಯಲ್ಲಿ ಸಿಕ್ಕು ಪಂಜರದ ಪಾಲಾಯಿತು.ಹೊತ್ತುಹೊತ್ತಿಗೆ ಹೊಟ್ಟೆತುಂಬಾ ಊಟ ಸಿಗುತ್ತಿತ್ತು, ರಾಜ ರಾಣಿಯರ ಪ್ರೀತಿಯೂ ದಕ್ಕಿತು.ಹೊರಗೆ ಸ್ವೇಚ್ಚೆಯಿಂದ ಹಾರಾಡುವ ಸ್ವಾತಂತ್ರ್ಯ ಕಳೆದುಕೊಂಡರೂ ಅರಮನೆಯವರ ಪ್ರೀತಿಯಿಂದ ಅಲ್ಲೇ ಸುಖವಾಗಿ ಇದ್ದವು.
ಒಂದುದಿನ ಅರಮನೆಗೆ ಒಂದು ಕೋತಿಯನ್ನು ಕರೆತರಲಾಯಿತು. ಅದರ ಜಿಗಿದಾಟ ನೆಗೆದಾಟ ಎಲ್ಲರ ಮನ ಸೆಳೆಯಿತು.ರಾಜರಾಣಿಯರೂ ಗಿಣಿಯ ಕಡೆ ಬರುವುದನ್ನು ಕಡಿಮೆ ಮಾಡಿ ಆ ಮಂಗನನ್ನೇ ನೋಡಿ ಹೋಗುತ್ತಿದ್ದರು.ಗಿಣಿಗಳಿಗೆ ಹೊತ್ತು ಹೊತ್ತಿಗೆ ಬೀಳುತ್ತಿದ್ದ ಊಟವೂ ಕಡಿಮೆಯಾಯಿತು.ಒಂದು ಗಿಣಿ ಮತ್ತೊಂದಕ್ಕೆ ಹೇಳಿತು "ನಾವು ಇಲ್ಲಿಂದ ತಪ್ಪಿಸಿಕೊಂಡು ಹಾರಿ ಹೋಗೋಣ,ನಾವು ಯಾರಿಗೂ ಬೇಡವಾಗಿದ್ದೇವೆ,ನಮ್ಮನು ಯಾರೂ ಇಷ್ಟಪಡುತ್ತಲೇ ಇಲ್ಲ ಆ ಕೋತಿ ಬಂದಾಗ್ಗಿನಿಂದ"ಎಂದಿತು.ಅದಕ್ಕೆ ಮತ್ತೊಂದು ಕೋತಿ "ಗೆಳತಿ ತಾಳ್ಮೆ ಕಳೆದುಕೊಳ್ಳಬೇಡ ಇನ್ನೂ ಸ್ವಲ್ಪ ಸಮಯ ಕಾದು ನೋಡುವ,ತಿನ್ನಲು ಆಹಾರವೇ ಸಿಗದಿದ್ದರೆ ಆ ಯೋಚನೆ ಮಾಡುವ " ಎಂದಿತು. ಸ್ವಲ್ಪ ದಿನಗಳ ನಂತರ ಆ ಕೋತಿಯು ದೊಡ್ಡದಾಯಿತು ಅಂತೆಯೇ ಅದರ ಚೇಷ್ಟೆಯೂ ಅತಿಯಾಯಿತು,ಕಾಟವೂ ಹೆಚ್ಚಾಯಿತು,ನೋಡಲು ಬಂದವರ ಮೇಲೆ ಉಗುಳುವುದು,ಊಟ ಹಾಕಲು ಬಂದವರಿಗೇ ಪರಚುವುದೂ. ಎಲ್ಲವನ್ನೂ ಗಮನಿಸಿದ ರಾಜನು ಅದನ್ನು ಕಾಡಿಗೇ ಬಿಟ್ಟು ಬನ್ನಿ ಎಂದು ತನ್ನ ಸೇವಕರಿಗೆ ಹೇಳಿದನು.ಅದನ್ನು ಕಾಡಿಗೆ ಅಟ್ಟಿದ ನಂತರ ಗಿಣಿಗಳ ಕಡೆಗೇ ಎಲ್ಲರ ಗಮನ ಹರಿಯಿತು. ಪ್ರೀತಿ ಮೊದಲಿಗಿಂತಲೂ ಹೆಚ್ಚಾಯಿತು.ರಾಜ ರಾಣಿಯರ ಮತ್ತು ಎಲ್ಲರ ಪ್ರೀತಿಯಿಂದ ಗಿಣಿಗಳು ತಮ್ಮ ಜೀವನದ ಕಡೆಯ ವರೆಗೂ ಸಂತಸದಿಂದ ಬಾಳಿದವು.
ಮುಠ್ಠಾಳ ?
ವಿಜಯನಗರದ ರಾಜ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ತೆನ್ನಾಲಿರಾಮಕೃಷ್ಣನೆಂಬ ಪಂಡಿತ ಇದ್ದನು. ಆತನು ವಿದ್ಯಾವಂತನೂ, ಚತುರನೂ, ಜೊತೆಗೆ ಸಮಯಸ್ಪೂರ್ತಿಯನ್ನು ಹೊಂದಿದ್ದವನೂ ಆಗಿದ್ದನು.ಒಮ್ಮೆ ರಾಜನಿಗೆ ದೂರದ ಊರಿನಿಂದ ಒಬ್ಬ ಅಪರಿಚಿತ ವ್ಯಕ್ತಿ ಬಂದು ಐನೂರು ಕುದುರೆಗಳನ್ನು ಕೊಡುವುದಾಗಿ ಹೇಳಿ ಐದು ಸಾವಿರ ನಾಣ್ಯಗಳನ್ನು ರಾಜನಿಂದ ಪಡೆದು ಹೊರಟು ಹೋದನು.
ಒಂದೆರೆಡು ದಿನಗಳ ಬಳಿಕ ರಾಜನು ತೆನ್ನಾಲಿಯನ್ನು ನೋಡಲು ಅವನ ಮನೆಕಡೆಗೆ ಹೊರಟನು.ತೆನ್ನಾಲಿ ರಾಮನು ಬಹಳ ಯೋಚಿಸುತ್ತಾ ಏನನ್ನೋ ಬರೆಯುತ್ತಿದ್ದನು.ಅದನ್ನು ಕಂಡು ರಾಜನು "ರಾಮಕೃಷ್ಣ ಅಷ್ಟೊಂದು ಆಳವಾಗಿ ಯೋಚಿಸುತ್ತಾ ಏನನ್ನು ಬರೆಯುತ್ತಿರುವೆ?" ಎಂದು ಕೇಳಿದನು.ಅದಕ್ಕೆ ಉತ್ತರವಾಗಿ"ಏನೂ ಇಲ್ಲ್ಲಾ ಸ್ವಾಮೀ ನಮ್ಮ ರಾಜ್ಯದಲ್ಲಿ ಎಷ್ಟು ಮುಠ್ಠಾಳರಿದ್ದರೆ ಎಂದು ಪಟ್ಟಿ ಮಾಡುತ್ತಿದ್ದೇನೆ" ಎಂದ. "ಹಾಗಾದರೆ, ನಾನು ಈ ರಾಜ್ಯದ ರಾಜ ನನಗೂ ಆ ಪಟ್ಟಿ ನೋಡುವ ಹಕ್ಕಿದೆ" ಎಂದು ಹೇಳಿ ಪಟ್ಟಿಯನ್ನು ಪಡೆದು ಹೆಸರುಗಳನ್ನು ಓದಲು ಹೊರಟ. ಆದರೆ ಆ ಪಟ್ಟಿಯಲ್ಲಿ ಮೊದಲ ಹೆಸರೇ "ಶ್ರೀ ಕೃಷ್ಣದೇವರಾಯ" ಎಂದಿತ್ತು.ರಾಜನಿಗೆ ಕೋಪ ಬಂದು ಸಿಟ್ಟಿನಿಂದ ಕಾರಣ ಕೇಳಿದನು.ತೆನ್ನಾಲಿ ರಾಮಕೃಷ್ಣನು ಶಾಂತಿಯಿಂದ "ಅಲ್ಲಾ ಸ್ವಾಮಿ ಯಾರಾದರೂ ಅಪರಿಚಿತರಿಗೆ ಐದು ಸಾವಿರ ನಾಣ್ಯ ಕೊಟ್ಟು ಅವನು ತಿರುಗಿ ಬರುತ್ತಾನೆಂದರೆ ಅವರಿಗಿಂತ ಪೆದ್ದರಿನ್ನಾರಿದ್ದರೆ ಸ್ವಾಮೀ?" ಎಂದ. ತಕ್ಷಣ ರಾಜನು "ಅಕಸ್ಮಾತ್ ಅವನು ತಿರುಗಿ ಬಂದು ಕುದುರೆಗಳನ್ನೂ ತಂದರೆ ?". ಅರೆರೆ! ಹಾಗಾದರೆ ಇನ್ಯಾವ ಶಿಕ್ಷೆ ಕಾದಿದೆಯೋ ನನಗೆ ಎಂದು ಕೂಡಲೇ ಜಾಣತನದಿಂದ ತೆನ್ನಾಲಿ ಉತ್ತರಿಸಿದ"ಅವನೇನಾದರೂ ವಾಪಸ್ ಬಂದರೆ ನಿಮ್ಮ ಹೆಸರನ್ನು ತೆಗೆದು ಅವನ ಹೆಸರನ್ನು ಅಲ್ಲಿ ಹಾಕಿಬಿಡುತ್ತೇನೆ ಸ್ವಾಮಿ" ಎಂದಾಗ ಇಬ್ಬರಿಗೂ ನಗೆಬುಗ್ಗೆ ಉಕ್ಕಿ ಗೊಳ್ಳನೆ ನಕ್ಕರು.
ಕಳ್ಳ ಸಾಧು
ರಾಜ ಕೃಷ್ಣದೇವರಾಯನ ರಾಜ್ಯದಲ್ಲಿ ಒಮ್ಮೆ ಸಾಧು ಒಬ್ಬನು ಬಂದು ದೇವರ ಗುಡಿ ಸೇರಿಕೊಂಡು ಜನರಿಗೆ ತಾನು ತನ್ನ ಮಂತ್ರಶಕ್ತಿಯಿಂದ ಪಾಪಗಳನ್ನು ಕಳೆಯಬಲ್ಲೆ, ನೋವುಗಳನ್ನು ನೀಗಿಸಬಲ್ಲೆ, ರೋಗ ರುಜಿನಗಳನ್ನು ವಾಸಿಮಾಡಬಲ್ಲೆ, ಕಷ್ಟಗಳನ್ನು ನಿವಾರಿಸಬಲ್ಲೆ ಎಂದೆಲ್ಲಾ ಹೇಳಿ ಅವರಿಂದ ಹೆಚ್ಚು ಹೆಚ್ಚು ಹಣ ಧಾನ್ಯ, ಉಡುಗೊರೆಗಳನ್ನು ಪಡೆಯಲು ಆರಂಭಿಸಿದ.ತೆನ್ನಾಲಿ ರಾಮನಿಗೆ ಈತನ ಮೇಲೆ ಸಂಶಯ ಮೂಡಿತು. ಆತನೂ ಗುಡಿಗೆ ತೆರಳಿ ತನಗೂ ಏನೋ ತೊಂದರೆ ಇದೆ ಎನ್ನುವಂತೆ ಆ ಸಾಧುವಿನ ಪಕ್ಕದಲ್ಲೇ ಕುಳಿತ. ಆದರೆ ಸಾಧು ಮತ್ತೆ ಮತ್ತೆ ಮಂತ್ರಗಳನ್ನೇ ಜಪಿಸುತ್ತಿದ್ದ. ಈತನು ಅಸಲಿ ಸಾಧುವಲ್ಲ ಎಂದು ತಿಳಿದ ಕೂಡಲೇ ಅವನ ಮುಂದೆ ಬಂದು ತಲೆ ಬಾಗಿ ನಮಸ್ಕರಿಸುವ ಹಾಗೆ ಬಗ್ಗಿ ಸಾಧುವುನ ಗಡ್ಡದ ಒಂದು ಕೂದಲನ್ನು ಕಿತ್ತು ಕೂಡಲೇ ಅಲ್ಲಿಂದ ಹೊರಗೆ ಓಡತೊಡಗಿದ.ಓಡುತ್ತಾ ಓಡುತ್ತಾ "ಹಾ! ಸಿಕ್ಕಿತು ಸಿಕ್ಕಿತು ಸ್ವರ್ಗಕ್ಕೆ ಹೋಗಲು ಬೀಗದ ಕೈ ಸಿಕ್ಕಿತು ಎಂದು ಕೂಗಿದ". ಜನರೆಲ್ಲಾ ವಿಷಯವೇನೆಂದು ತಿಳಿಯಲು ಅವನನ್ನು ಹಿಂಬಾಲಿಸಿದರು. ನಂತರ ನೂರಾರು ಜನ ಗುಡಿಯ ಕಡೆ ಧಾವಿಸಿ ಬಂದರು. ಇನ್ನು ಸಾಧು ತನ್ನ ಮುಂದಿನ ಗತಿ ಊಹಿಸಿ ತನ್ನ ಕಾಲುಗಳಿಗೆ ಬುದ್ಧಿ ಹೇಳಿದನು.
ಸಾಕ್ಷಿ
ಬಡ ರೈತನೊಬ್ಬ ತನ್ನ ಜಮೀನು ಬಿತ್ತಲು ಬೀಜ ಗೊಬ್ಬರ ಕೊಳ್ಳಲು ಹಣವಿಲ್ಲದೆ ಊರಿನ ಸಾಹುಕಾರನ ಬಳಿ ಒಂದು ಸಾವಿರ ರೂಪಾಯಿಯನ್ನು ಸಾಲವಾಗಿ ಪಡೆದನು.ಮಳೆಗಾಲಕ್ಕೆ ಮುನ್ನ ನೆಲವನ್ನು ಉತ್ತು ಆ ಹಣದಲ್ಲಿ ತಂದ ಬೀಜ ಬಿತ್ತು ಒಳ್ಳೆಯ ಫಲ ಪಡೆದು ತನ್ನ ಕುಟುಂಬಕ್ಕೆ ಆಗುವಷ್ಟು ಇಟ್ಟುಕೊಂಡು ಉಳಿದ್ದನ್ನು ಮಾರಿದ ಬಳಿಕ ಸಾಹುಕಾರನ ಹಣವನ್ನೂ ಬಡ್ಡಿ ಸಮೇತವಾಗಿ ಹಿಂತಿರುಗಿಸಲು ಬಂದನು.ಸಾಹುಕಾರನು ತನ್ನ ಮನೆಯ ಅಂಗಳದ ಕಾರಂಜಿಯ ಮೇಲೆ ಕುಳಿತಿದ್ದ ಅಪರೂಪದ ಒಂದು ಬಣ್ಣಬಣ್ಣದ ಪುಟ್ಟ ಪಕ್ಷಿಯನ್ನು ನೋಡುತ್ತಾ ಕುಳಿತಿದ್ದನು.ರೈತನೂ ಅದನ್ನು ಕಣ್ತುಂಬ ನೋಡಿ ಅನಂದ ಪಟ್ಟು ಹಣವನ್ನು ಹಿಂತಿರುಗಿಸಿ ಕೊಟ್ಟು ಹೊರಟುಹೋದನು.
ಸ್ವಲ್ಪ ಕಾಲದ ಬಳಿಕ ಸಾಹುಕಾರನು ಕೆಟ್ಟ ಯೋಜನೆ ಮಾಡಿ ಮತ್ತೆ ರೈತನಿಗೆ ತಾನು ಕೊಟ್ಟ ಹಣ ಕೊಡು ಎಂದ.ಬಡ ರೈತನು ಇದನ್ನು ಕೇಳಿ ಗಾಬರಿಗೊಂಡನು.ಇಬ್ಬರಿಗೂ ವಾದಕ್ಕಿಳಿಯಿತು.ನ್ಯಾಯ ಕೇಳಲು ಊರ ಪಟೇಲನ ಬಳಿ ಹೋದರು.ರೈತ ಸಾಹುಕಾರನ ಬಳಿ ಪಡೆದ ಹಣವನ್ನು ಕೆಲ ದಿನಗಳ ಹಿಂದೆಯೇ ಹಿಂದಿರುಗಿಸಿದ ವಿಷಯ ತಿಳಿಸಿದ.ಸಾಹುಕಾರ ಇದನ್ನು ಸುಳ್ಳು ಎಂದು ವಾದ ಮಾಡಿದ.ಹಣ ಪಡೆದ ನಂತರ ರೈತನು ತನ್ನ ಮನೆಯ ಕಡೆಯೇ ತಿರುಗಿ ಬಂದಿಲ್ಲ ಎಂದ.ರೈತ ತಾನು ಬಂದ ದಿನ ವೇಳೆಯನ್ನು ತಿಳಿಸಿದ, ಆದರೂ ಸಾಹುಕಾರ ತನ್ನ ಹಟ ಬಿಡಲೇ ಇಲ್ಲ.ರೈತ ತಾನು ಬಂದಾಗ ಸಾಹುಕಾರನು ಮನೆಯ ಅಂಗಳದಲ್ಲಿ ಇದ್ದನೆಂದೂ , ಆತನ ಹೆಗಲ ಮೇಲೆ ಒಂದು ಸುಂದರ ಪಕ್ಷಿ ಕುಳಿತಿತ್ತು ಎಂದೂ ಹೇಳಿದ.ತಕ್ಷಣ ಸಾಹುಕಾರನು "ಸುಳ್ಳು ಪಕ್ಷಿ ನನ್ನ ಹೆಗಲ ಮೇಲೆ ಕುಳಿತಿರಲಿಲ್ಲ,ಅದು ಕಾರಂಜಿಯ ಮೇಲೆ ಇತ್ತು"ಎಂದ.ಕೂಡಲೇ ಸತ್ಯವನ್ನು ಅರಿತ ಪಟೇಲ ಸಾಹುಕಾರನಿಗೆ ನೂರು ರೂಪಯಿ ದಂಡ ವಿಧಿಸಿ ಕ್ಷಮೆ ಯಾಚಿಸಲು ಹೇಳಿದ.
ನಾಯಕ
ದೂರದ ಬೆಟ್ಟದ ಬುಡದಲ್ಲಿ ಪುಟ್ಟ ಜಲಪಾತ ಒಂದಿತ್ತು.ಅದರ ಪಕ್ಕದಲ್ಲೇ ಒಂದು ಒಂದು ದೊಡ್ಡ ಮಾವಿನ ಹಣ್ಣಿನ ಮರವಿತ್ತು.ಅದರಲ್ಲಿ ಕೆಲವು ಮಂಗಗಳೂ ವಾಸವಾಗಿದ್ದವು.ರುಚಿಯಾದ ಹಣ್ಣನ್ನು ಸವಿಯುತ್ತಾ ಸಂತಸದಿಂದಿದ್ದವು.ಆ ಗುಂಪಿನ ನಾಯಕನೆನಿಸಿದ ಮಂಗವು ಆ ಮರವನ್ನು ಸುರಕ್ಷಿತವಾಗಿ ಬೇರೆ ಪ್ರಾಣಿ ಪಕ್ಷಿಗಳು ಹತ್ತಿರ ಬಾರದಂತೆ ನೋಡಿಕೊಂಡಿತ್ತು.
ಒಂದುದಿನ ಜೋರಾಗಿ ಗಾಳಿ ಬೀಸಿದ ಕಾರಣ ಒಂದು ಹಣ್ಣು ಮರದಿಂದ ಕಳಚಿ ನೀರಿನಲ್ಲಿ ಬಿದ್ದಿತು.ನೀರು ಹರಿಯುತ್ತಾ ಹರಿಯುತ್ತಾ ರಾಜನ ಅರಮನೆಯ ಈಜುವ ಕೊಳಕ್ಕೆ ಸೇರುವ ವ್ಯವಸ್ಥೆ ಮಾಡಲಾಗಿತ್ತು.ರಾಜ ರಾಣಿಯರು ಆ ಕೊಳದಲ್ಲಿ ಈ ಜುತ್ತಿರಲು ಅಲ್ಲಿಗೆ ಈ ಹಣ್ಣು ತೇಲುತ್ತಾ ಬಂದಿತು.ರಾಣಿ ಅದರ ಪರಿಮಳವನ್ನು ಕಂಡು ಕಚ್ಚಿ ರುಚಿ ನೋಡಿದಳು.ಬಹಳ ಸೊಗಸಾಗಿದ್ದ ಈ ಹಣ್ಣು ಬಿಡುವ ಮರವನ್ನು ಹುಡುಕಿಕೊಂಡು ರಾಜನು ಹೊರಟನು.ದೂರದ ಬೆಟ್ಟದ ಬಳಿ ಮರ ಕಂಡಿತು.ಆದರೆ ಮರದ ಬಳಿಗೆ ಹೋದಾಗ ಮಂಗಗಳು ಕೋಪದಿಂದ ಕಿರುಚಿ,ಅರಚಿ,ಕಚ್ಚಲು ಬಂದವು.ರಾಜನು ತನ್ನ ಬಿಲ್ಲಿನಿಂದ ಬಾಣಗಳನ್ನು ಬಿಟ್ಟು ಮಂಗಗಳನ್ನು ಕೊಲ್ಲಲು ನೋಡಿದನು.ಅವುಗಳ ಒಡೆಯ ಎನಿಸಿದ ಕೋತಿಯು ಮರದ ತುದಿಗೆ ಹೋಗಿ ತನ್ನ ಕಾಲು ಚಾಚಿ ಪಕ್ಕದಲ್ಲಿದ್ದ ಬೆಟ್ಟ ಹಿಡಿದು ಉಳಿದ ಕಪಿಗಳು ಮರದಿಂದ ಬೆಟ್ಟಕ್ಕೆ ಹಾರಲು ಸೇತುವೆಯಾಯಿತು.ಆದರೆ ರಾಜನ ಬಾಣಗಲು ತಗುಲಿದರೂ ಎಲ್ಲ ಮಂಗಗಳು ಸುರಕ್ಷಿತ ಸ್ಥಳಕ್ಕೆ ಹೊರಡುವ ವರೆಗೂ ಗಟ್ಟಿಯಾಗಿ ನಿಂತು ಕಡೆಗೆ ಮೇಲಿಂದ ಉರುಳಿತು. ಇದನ್ನು ಕಂಡ ರಾಜನು ಅದರ ಶೌರ್ಯವನ್ನು ಮೆಚ್ಚಿದನು.ಅಸಹಾಯಕತೆಯಿಂದ ಬಿದ್ದ ಕೋಚಿಯನ್ನು ಕೊಲ್ಲದೆ ಅದನ್ನು ಉಪಚರಿಸಿ,ಹಣ್ಣನ್ನು ಕಿತ್ತದೇ ಹಿಂದಕ್ಕೆ ಹೊರಟನು.ಕಪಿಗಳು ರಾಜನ ಕರುಣೆಯನ್ನು ಕಂಡು ಕೆಲವು ಹಣ್ಣುಗಳನ್ನು ಕೊಟ್ಟವು.ಅದನ್ನು ಪಡೆದು,ಅರಮನೆಗೆ ತೆರಳಿ ಎಲ್ಲರಿಗೂ ಆ ಮಂಗಗಳ ನಾಯಕನ ಸಾಹಸ, ಧೈರ್ಯ,ಪರೋಪಕಾರದ ವಿಷಯ ತಿಳಿಸಿದನು.ತಂದ ಹಣ್ಣುಗಳನ್ನು ತಿಂದು ಬೀಜವನ್ನು ನೆಟ್ಟು ವರುಶಗಳ ನಂತರ ರುಚಿಕರ ಹಣ್ಣನ್ನೂ ಪಡೆದರು
ಮನವರಿಕೆ
ಮುದುಕನೊಬ್ಬನು ತನ್ನ ಹೆಂಡತಿಯನ್ನು ಕಳೆದುಕೊಂಡ ನಂತರ ತನ್ನ ಮಗನ ಮನೆಯಲ್ಲೇ ವಾಸ ಮಾಡಲು ನಿರ್ಧರಿಸಿದ.ವಯಸ್ಸಿನ ಅಂತರದ ಕಾರಣ ಮಗ ಸೊಸೆ ಆಗಾಗ್ಗೆ ಮುದುಕನ ಮನಸ್ಸಿಗೆ ನೋವಾಗುವ ಹಾಗೆ ನಡೆಯುತ್ತಿದ್ದರು.ಊಟ ಮಾಡುವಾಗ ತಟ್ಟೆಯಿಂದ ಆಹಾರ ಚೆಲ್ಲಿದರೆ,ಹಾಲು ಲೋಟದಿಂದ ಚೆಲ್ಲಿದರೆ,ಕೈಜಾರಿ ಚಮಚ ಕೆಳಗೆ ಬಿದ್ದರೆ ಮಗ ಸಿಟ್ಟಿನಲ್ಲಿ ತಂದೆ ಎನ್ನುವುದನ್ನೇ ಮರೆತು ರೇಗುತ್ತಿದ್ದ.ಕೈಲಾಗದ,ಕೈನಡುಗುವ ಮುದುಕ ತನ್ನ ಮಗ ಸೊಸೆ ಏನು ಹೇಳಿದರೂ ಸಹಿಸಿಕೊಂಡು ಬದುಕು ಸಾಗಿಸುತ್ತಿದ್ದ.ದಿನಾ ಊಟಕ್ಕೆ ಒಟ್ಟಿಗೆ ಕುಳೀತುಕೊಳ್ಳುತ್ತಿದ್ದವರು ಮುದುಕನನ್ನು ಬೇರೊಂದು ಮೇಜು ಹಾಕಿ ಕೂಡಿಸಲಾಯಿತು.ಕೈಜಾರಿ ಒಡೆದ ಕಾರಣ ಪಿಂಗಾಣಿ ತಟ್ಟೆಯ ಬದಲಿಗೆ ಮರದ ತಟ್ಟೆ,ಮರದ ಚಮಚವನ್ನೂ ಕೊಟ್ಟರು.ಕುಟುಂಬದವರೆಲ್ಲಾ ಒಟ್ಟಿಗೆ ಸಂತೋಷದಿ ಉಣ್ಣಲು ಮುದುಕ ಮಾತ್ರ ಬೇಸರದಿಂದ ಒಂಟಿಯಾಗಿ ಮೂಲೆಯಲ್ಲಿ ಕುಳಿತು ಒಲ್ಲದ ಮನಸ್ಸಿನಲ್ಲಿ ಊಟ ಮಾಡುತ್ತಿದ್ದನು.ಅವನು ಊಟ ಮಾಡಿದ ಮೇಲೆ ಆ ಜಾಗವನ್ನು ಸ್ವಚ್ಚ ಮಾಡುವಾಗ ತಟ್ಟೆಯ ಸುತ್ತಲೂ ಚೆಲ್ಲಿದ್ದಕ್ಕಾಗಿ ಬೈಗುಳ ಕೇಳಬೇಕಾಗಿತ್ತು. ಇವೆಲ್ಲವನ್ನೂ ಅದೇ ಮನೆಯಲ್ಲೇ ಇದ್ದು ಗಮನಿಸುತ್ತಿದ್ದ ಮುದುಕನ ಮೊಮ್ಮಗ ನಾಲ್ಕು ವರ್ಷದ ಬಾಲಕ.ಅವನು ಆಟವಾಡುವಾಗ ಒಮ್ಮೆ ಮರದ ಹಲಗೆಗಳನ್ನು ಗರಗಸದಿಂದ ಕತ್ತರಿಸಲು ಪ್ರಯತ್ನ ಮಾಡುತ್ತಿದ್ದ.ಹರಿತವಾದ ಹಲ್ಲುಗಳಿದ್ದ ಗರಗಸ ಮಗನ ಕೈಗೆ ತಗುಲಿತೆಂದು ಅವನ ತಂದೆ ಮೆಲ್ಲನೆ ಅದನ್ನು ಕಸಿದುಕೊಂಡು"ಮಗೂ ಏನು ಮಾಡ್ತಿದ್ದೀಯಪ್ಪಾ?"ಎಂದು ಕೇಳಿದ.ಅದಕ್ಕೆ ಪುಟ್ಟ ಬಾಲಕ "ಅಪ್ಪಾ ಮರದಲ್ಲಿ ಎರಡು ತಟ್ಟೆ,ಚಮಚ ಮಾಡ್ತಿದ್ದೇನೆ ಮುಂದೆ ನಿಮಗೆ ಬೇಕಾಗಬಹುದಲ್ಲವೇ" ಅಂದ.ಆತನ ತಂದೆ ತಾಯಿ ಈ ಮಾತನ್ನು ಕೇಳಿ ದಂಗಾದರು,ತಾವು ಮಾಡಿದ ತಪ್ಪು ಅರಿವಾಯಿತು.ಮರುದಿನವೇ ಮುದುಕನಿಗೂ ಒಂದೇ ಮೇಜಿನ ಮೇಲೆ ಊಟ ಬಡಿಸಲಾಯಿತು.ಎಲ್ಲರೂ ಕೂಡಿ ಸಂತೋಷದಿಂದ ಉಂಡು ಬಾಳಿದರು.
ನೀತಿ: ಮಕ್ಕಳ ಮನಸ್ಸು ಬಲು ಸೂಕ್ಷ್ಮ, ಮಕ್ಕಳಿಂದ ಒಮ್ಮೊಮ್ಮೆ ಹಿರಿಯರೂ ಕಲಿಯುವುದಿದೆ.
ಆಸ್ತಿ
ದೊಡ್ಡ ಪಟ್ಟಣದ ಬಲು ಶ್ರೀಮಂತ ಕುಟುಂಬದ ಒಬ್ಬ ತಂದೆ ತನ್ನ ಮಗನಿಗೆ ಬಡತನದ ಅರಿವಾಗಲೆಂದು ದೂರದ ಹಳ್ಳಿಗೆ ಕರೆದೊಯ್ದ.ಅಲ್ಲಿ ನಾಲ್ಕಾರು ದಿನ ಕಳೆದು ಮರಳಿ ಮನೆಗೆಬಂದ ನಂತರ ತಂದೆ ಮಗನನ್ನು ಕೇಳಿದ "ಹೇಗಿತ್ತು ಮಗು ಹಳ್ಳಿ ಜೀವನ? ನೋಡಿದೆಯಾ ಬಡತನ ಅಂದರೆ ಏನೂ ಅಂತಾ?"ಎಂದ.ಮಗ "ಹೌದು"ಎಂದು ಸಪ್ಪೆಯಾಗಿ ಉತ್ತರಿಸಿದ.ತಂದೆ ಮತ್ತೆ"ಇದರಿಂದ ಏನು ಪಾಠ ಕಲಿತೆ ನೀನು?"ಎಂದು ಪ್ರಶ್ನಿಸಿದ.ಅದಕ್ಕೆ ಮಗ"ಹೌದಪ್ಪಾ ನೋಡಿದೆ ನಮ್ಮ ಮನೆಯಲ್ಲಿ ಒಂದು ನಾಯಿಯಿದೆ ಅವರಿಗೆ ಆರೆಂಟು ಇವೆ,ನಮಗೆ ಈಜಲು ಪುಟ್ಟ ಪೂಲ್ ಇದೆ ಅವರಿಗೆ ದೊಡ್ಡ ಕೆರೆಯೇ ಇದೆ,ನಮಗೆ ಅಂಗಳದಲ್ಲಿ ವಿದೇಶಿ ಲಾಟಿನ್ ಇವೆ,ಅವರಿಗೆ ನಕ್ಷತ್ರಗಳೇ ಇವೆ,ನಮಗೆ ಆಡಲು ಬೇಲಿಯವರೆಗೆ ಅಂಗಳ ಇದೆ ಅವರಿಗೆ ಕಣ್ಣು ಹರಿಯುವಷ್ಟೂ ಅಂಗಳವೇ,ನಮಗೆ ದೊಡ್ಡ ಮನೆಯಿದೆ ಅವರಿಗೆ ತೋಟ,ಹೊಲ,ಗದ್ದೆ,ಬಯಲು ಎಲ್ಲಾ ಇವೆ,ನಮ್ಮನ್ನು ರಕ್ಷಿಸಲು ಸುತ್ತಲೂ ಗೋಡೆಗಳಿವೆ ಅವರ ಸುತ್ತಲೂ ಬರೀ ಗೆಳೆಯರೇ ಇದ್ದಾರೆ".ಇಷ್ಟು ಕೇಳಿದ ತಂದೆಯ ಮುಖ ಮುದುಡಿತು.ಮಗ ಮತ್ತೊಂದು ಮಾತು ಹೇಳಿದ"ಅಪ್ಪಾ ತುಂಬಾ ಥ್ಯಾಂಕ್ಸ್ ಅಪ್ಪ ನಾವೆಷ್ಟು ಬಡವರೆಂದು ನನಗೆ ಈಗ ಅರಿವು ಮಾಡಿಕೊಟ್ಟಿದ್ದಕ್ಕೆ."ಎಂದು ಹೇಳಿದ.
ನೀತಿ: ಪ್ರತಿಯೊಂದು ವಿಷಯವನ್ನು ಬೇರೊಂದು ದೃಷ್ಟಿಯಿಂದಲೂ ನೋಡಬಹುದು, ಮಕ್ಕಳಿಗೆ ಅರಿವು ಮೂಡಿಸುವುದು ಸುಲಭದ ಕೆಲಸವಲ್ಲ.
ಬೆಲೆ
ತರಗತಿಯಲ್ಲಿ ಮಕ್ಕಳಿಗೆ ಪಾಠ ಹೇಳುವಾಗ ಗುರುಗಳು ಮಕ್ಕಳಿಗೆ ಸಾಮಾನ್ಯ ತಿಳುವಳಿಕೆಯ ನೀತಿ ಕಥೆಗಳನ್ನೂ ಹೇಳುತ್ತಿದ್ದರು.ಒಂದು ದಿನ ಐವತ್ತು ಡಾಲರ್ ನೋಟನ್ನು ಹಿಡಿದು ತಂದು ಯಾರಿಗೆ ಬೇಕು ಈ ನೋಟು ಅಂದರು.ಮಕ್ಕಳು ಒಕ್ಕೊರಲಿನಲ್ಲಿ"ನನಗೆ" ಎಂದು ಕೂಗಿದರು.ನಂತರ ಗುರುಗಳು ಅದನ್ನು ಬೆರಳಿನಲ್ಲಿ ವರಟಾಗಿ ಕಿವುಚಿ "ಈಗ ಯಾರಿಗೆ ಬೇಕು" ಎಂದರು.ಎಲ್ಲರೂ "ನನಗೆ ನನಗೆ"ಎಂದು ಕೂಗಿದರು.ಅದಾದ ನಂತರ ನೋಟನ್ನು ನೆಲದಲ್ಲಿ ಹಾಕಿ ಕಾಲಿನಿಂದ ನೆಲದಲ್ಲಿದ್ದ ಮಣ್ಣಿನ ಜೊತೆ ಒಸಗಿ ಹಾಕಿದರು.ಮತ್ತದೇ ಪ್ರಶ್ನೆ, ಮಕ್ಕಳು ಆಗಲೂ "ನನಗೆ " ಎನ್ನಲು, ಗುರುಗಳು "ಮಕ್ಕಳೇ ಇದೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ವಿಷಯ, ನೋಟಿಗೆ ಏನಾದರೂ ಆಗಲಿ ಅದರ ಬೆಲೆ ಮಾತ್ರ ಕಡಿಮೆ ಆಗಲಿಲ್ಲ, ನಾವು ನಮ್ಮ ನಿರ್ಧಾರಗಳಿಂದ ಒಮ್ಮೆ ಕೆಳಕ್ಕೆ ಬೀಳಬಹುದು,ಕೆಟ್ಟವರ ಜೊತೆ ಬೆರೆತು ಕೊಳೆತು ತಪ್ಪು ಮಾಡಬಹುದು ಆದರೆ ನಮ್ಮನ್ನು ಇಷ್ಟ ಪಡುವವರಿಗೆ ಮಾತ್ರ ನಮ್ಮ ಮೇಲೆ ಅಷ್ಟೇ ಬೆಲೆ ಇರುತ್ತದೆ"
ದೇವರು ಎಲ್ಲಿದ್ದಾನೆ?
ಗಿರಾಕಿಯೊಬ್ಬ ಹಜಾಮರ ಅಂಗಡಿಗೆ ಹೋಗಿ ತಲೆ ಕೂದಲನ್ನು ತುಂಡರಿಸಿಕೊಳ್ಳಲು ಕುಳಿತ.ಎಂದಿನಂತೆ ಹಜಾಮ ಏನಾದರೊಂದು ವಿಷಯ ತೆಗೆದು ಗಿರಾಕಿಗಳನ್ನು ಮಾತನಾಡಿಸುವುದು ರೂಢಿ.ಅಂದು"ಏss ದೇವರೆಲ್ಲಿದ್ದಾನೆ ಸ್ವಾಮಿ,? ಇಲ್ಲ,ಇದ್ದಿದ್ದ್ರೆ ಪ್ರಪಂಚದಲ್ಲಿ ಇಷ್ಟೊಂದು ಬಡವರು, ರೋಗಿಗಳು ಯಾಕೆ ಇರ್ತಿದ್ರು?"ಅಂದ.ಸರಿ ಕೆಲಸ ಮುಗಿದ ಮೇಲೆ ಗಿರಾಕಿ ಬಾಗಿಲು ತೆರೆದು ಹೊರಗೆ ಹೊರಟ. ಎದುರುರಿನಲ್ಲೇ ಒಬ್ಬ ಗಡ್ಡಧಾರಿ ನಡೆದು ಹೋಗುತ್ತಿದ್ದ.ಅದನ್ನು ಕಂಡು ಹಜಾಮನನ್ನು ಕರೆದು"ನೋಡು ಈ ಪ್ರಪಂಚದಲ್ಲಿ ಹಜಾಮರೇ ಇಲ್ಲ" ಎಂದ. ಅದಕ್ಕೆ ಅವನು"ಅರೆ ಏನ್ ಸ್ವಾಮಿ ಇಲ್ಲೇ ಇದ್ದೀನಿ ಏನು ಹೀಗಂತೀರಾ?" ಎಂದ."ಇದ್ದಿದ್ದ್ರೆ ಅವನು ಯಾಕೆ ಗಡ್ಡ ಬಿಟ್ಟುಕೊಂಡು ಓಡಾಡ್ತಿದ್ದಾನೆ?" ಎಂದು ಪ್ರಶ್ನಿಸಿದ". ಅದಕ್ಕೆ ಆ ಹಜಾಮ "ಅರೆ ಅವರಿಗೆ ಹಜಾಮ ಬೇಕಿದ್ದರೆ ನನ್ನ ಬಳಿ ಬರಬೇಕಪ್ಪಾ" ಎಂದು ಹೇಳುವಾಗಲಷ್ಟರಲ್ಲೇ ದೇವರ ಬಗ್ಗೆಯೂ ತಾನು ಹೇಳಿದ್ದ ನಂಬಿಕೆಯ ಮಾತು ಅರಿಯಾಯಿತು.ನಕ್ಕು ಕೆಲಸ ಮುಂದುವರೆಸಿದ.
ಲೋಕದ ಡೊಂಕ
ಒಬ್ಬ ರಾಜನು ದೊಡ್ಡದಾದ ತನ್ನ ಸಾಮ್ರಾಜ್ಯವನ್ನು ನೋಡಲು ರಥವನ್ನೇರಿ ಹೊರಟ.ಊರುಗಳೆಲ್ಲಾ ಸುತ್ತಿ ಬಂದ ನಂತರ ಸಭೆ ಕರೆದ "ರಾಜ್ಯದ ಹಾದಿ ಬಹು ಕೆಟ್ಟದಾಗಿದೆ ಅಲ್ಲಿ ನನಗೆ ನಡೆಯಲು ಸಾಧ್ಯವಿಲ್ಲ,ಅದಕ್ಕಾಗಿ ಎಲ್ಲಾ ರಸ್ತೆಗೂ ಚರ್ಮದ ಕಂಬಳಿ ಹಾಸಿಬಿಡಿ"ಎಂದು ಆಜ್ಞೆ ಮಾಡಿದ.ಅಷ್ಟು ದೊಡ್ಡ ಊರಿನ ಎಲ್ಲಾ ದಾರಿಗೂ ಚರ್ಮವನ್ನು ಒದಗಿಸಲು ಅದೆಷ್ಟು ಪ್ರಾಣಿಗಳು ಬೇಕು? ಅವುಗಳ ಹತ್ಯೆ ಆಗಬೇಕು? ಎಂದು ಜಾಣತನದಿಂದ ಚಿಂತಿಸಿದ ಬುದ್ಧಿವಂತನು" ಸ್ವಾಮೀ ತಾವೇ ಏಕೆ ಒಂದು ಮೆತ್ತನೆಯ ಚರ್ಮದ ಪಾದರಕ್ಷೆಯನ್ನು ಮಾಡಿಸಿಕೊಳ್ಳಬಾರದು?"ಎಂದು ಕೇಳಿದ.ಅವನ ಸಲಹೆ ಎಲ್ಲರಿಗೂ ಹಿಡಿಸಿತು.ರಾಜನೂ ಒಪ್ಪಿದ.ಮೆಚ್ಚಿ ಉಡುಗೊರೆಯಿತ್ತ.
ನೀತಿ: ಪ್ರಪಂಚವನ್ನು ಬದಲಾಯಿಸುವ ಮೊದಲು ನಮ್ಮನ್ನು ನಾವೇ ಏಕೆ ಬದಲಾಯಿಸಿಕೊಳ್ಳಬಾರದು?
ಬುದ್ಧಿ ಮಾತು
ಮನೆಯ ಮುಂದಿನ ಬೇಲಿಯ ಹಿಂದೆ ಒಣಗಿ ಹೋಗಿದ್ದ ದೊಡ್ಡ ಮರವೊಂದು ಇತ್ತು.ಮನೆಯ ಮಾಲೀಕನಿಗೆ ಪಕ್ಕದ ಮನೆಯವನು"ಒಣಗಿದ ಮರ ಮನೆಯಮುಂದಿರುವುದು ಒಳ್ಳೆಯದಲ್ಲ,ಏನೋ ಅನಾಹುತ ಆಗುವ ಮೊದಲು ಅದನ್ನು ಕತ್ತರಿಸಿ"ಎಂದ. ಅದರಂತೆ ಮಾಲೀಕ ಒಣಗಿದ್ದ ಮರವನ್ನು ಕೆಡವಿದ.ಬೇಲಿಯಿಂದ ಹೊರಗೆ ಎಳೆದು ರಸ್ತೆಯ ಬದಿಗೆ ತಂದು ಹಾಕಿದ.ಪಕ್ಕದ ಮನೆಯವನು ತನ್ನ ಮಗನೊಡನೆ ಬಂದು"ಹಾಗಾದರೆ ಈ ಮರ ನಿಮಗೆ ಬೇಡಾ?"ಎಂದ.ಅದಕ್ಕೆ ಉತ್ತರ ಏನು ಹೇಳಬೇಕೆಂದು ತೋಚದೆ"ಊಹು"ಎಂದ.ಕೂಡಲೇ ಪಕ್ಕದಮನೆಯಾತ ತನ್ನ ಮಗನ ಸಹಾಯದಿಂದ ತಮ್ಮ ಮನೆಗೆ ಎಳೆದುಕೊಂಡು ಹೋಗಿ ಒಲೆ ಉರಿಸಲು ಬಳಸಲು,ಕತ್ತರಿಸಲಾರಂಭಿಸಿದ. "ಮರ ಕಡಿದ್ದಿದ್ದಕ್ಕೆ ಯಾವ ಒಳ್ಳೆಯದೂ ನನಗಾಗಲಿಲ್ಲ,ಆದರೆ ಪಕ್ಕದಮನೆಯವನಿಗೆ ಆಗಿದ್ದು ಖಂಡಿತ"ಎಂದು ಪೆಚ್ಚಾಗಿ ಕುಳಿತ.
ನೀತಿ: ಬುದ್ಧಿವಂತರು ಒಳ್ಳೆಯ ಮಾತಿನಿಂದ ಬೇರೆಯವರ ಕೈಯಲ್ಲಿಯೇ ತಮ್ಮ ಕೆಲಸವನ್ನೂ ಮಾಡಿಸಿಕೊಳ್ಳಬಲ್ಲರು.
ಯಕ್ಷನ ಎರಡು ವರಗಳು
ದೂರದ ಹಳ್ಲಿಯಲ್ಲಿ ಒಬ್ಬ ಬಟ್ಟೆ ನೇಕಾರ(weaver) ವಾಸವಾಗಿದ್ದ.ಬಟ್ಟೆ ನೇಯುವುದು ಅವನ ಕಸುಬು.ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ದೊಡ್ಡದೊಂದು ಮರವನ್ನು ನೋಡಿ ಈ ಮರವನ್ನು ಕಡಿದರೆ ಒಲೆಗೆ,ಮನೆಗೆ ಉಪಯೋಗಕ್ಕೆ ಬರುತ್ತದೆ" ಎಂದು ನಿರ್ಧರಿಸಿ ಮರುದಿನ ಮರ ಕತ್ತರಿಸಲು ಬೇಕಾದ ಮಚ್ಚು,ಕೊಡಲಿ,ಗರಗಸ ಎಲ್ಲಾ ತಂದು ಕೆಲಸ ಶುರುಮಾಡಿದ.ಕೂಡಲೇ ಮರದಲ್ಲಿ ವಾಸವಾಗಿದ್ದ ಯಕ್ಷನೊಬ್ಬ "ಅಯ್ಯಾ ಈ ಮರದಲ್ಲಿ ನಾನು ವಾಸವಾಗಿದ್ದೇನೆ ದಯವಿಟ್ಟು ಕಡಿಯಬೇಡ"ಎಂದು ನುಡಿದ.ಆದರೆ ನೇಕಾರ ಕೇಳಲಿಲ್ಲ"ಬೇಕಿದ್ದರೆ ಬೇರೆ ಮರದಲ್ಲಿ ಹೋಗಿರು"ಎಂದು ಹೇಳಿದ."ಹಾಗಿದ್ದಲ್ಲಿ ನಿನಗೆ ಎರಡು ವರ ಕೊಡುವೆ ಏನು ಬೇಕಾದರೂ ಕೇಳಿಕೋ,ಆದರೆ ಮರವನ್ನು ಮುಟ್ಟಬೇಡ"ಎಂದು ಬೇಡಿದ. ಸರಿ ವರವನ್ನು ಏನು ಬೇಕೆಂದು ಕೇಳುವುದು? "ಇರು ನನ್ನ ಹೆಂಡತಿಯನ್ನು ಕೇಳಿ ಬರುತ್ತೇನೆ" ಎಂದು ಹೊರಟ.ದಾರಿಯಲ್ಲಿ ಆತಂಕ ತಡೆಯಲಾರದೆ ಒಬ್ಬ ಕುಂಬಾರನಿಗೆ ಹೇಳಿದ"ಅದಕ್ಕೆ ಆ ಬುದ್ಧಿವಂತ ಕುಂಬಾರ"ಹೆಚ್ಚು ಆಸ್ತಿ,ಮತ್ತು ದೊಡ್ಡ ಮನೆಯನ್ನು ಕೇಳಿಕೋ" ಎಂದ.ನೇಕಾರ ತನ್ನ ದಡ್ಡ ಹೆಂಡತಿ ಬಳಿ ಎಲ್ಲವನ್ನೂ ಹೇಳಿದ.ಆಕೆ "ಆಸ್ತಿ ಅಂತಸ್ತು ಬೇಡ,ನೇಯಲು ಇನ್ನೆರಡು ಕೈಗಳು ಮತ್ತೊಂದು ತಲೆಯನ್ನು ಪಡೆದುಕೊಳ್ಳಿ,ಹೆಚ್ಚುಹೆಚ್ಚು ನೇಯ್ದು ಹೆಚ್ಚು ಸಂಪಾದಿಸಬಹುದು!"ಎಂದು ಸಲಹೆ ಇತ್ತಳು.ಅದರಂತೆಯೇ "ನನಗೆ ನಾಲ್ಕು ಕೈಗಳೂ ಎರಡು ತಲೆಗಳೂ ಇರಲಿ"ಎಂದು ಕೇಳಿದ.ಯಕ್ಷ "ಅಸ್ತು" ಎಂದ. ನಂತರ ಮನೆಯ ಕಡೆಗೆ ನಡೆದು ಹೊರಟಿರಲು ಜನರು ಯಾವುದೂ ಭೂತವೋ,ಪ್ರೇತವೋ ಊರಿನೊಳಗೆ ಬರುತ್ತಿದೆ ಎಂದು ಕಲ್ಲು,ಕೋಲಿನಿಂದ ಬಾರಿಸಿದರು.ನೇಕಾರ ಕೈಕಾಲು ಮುರಿದುಕೊಂಡು ಕೆಲವೇ ದಿನಗಳಲ್ಲಿ ಪ್ರಾಣ ಬಿಟ್ಟ.
ನೀತಿ: ಸ್ವಂತ ನಿರ್ಧಾರ ಮಾಡಲಾರದವರು ಅನುಭವಿಗಳ ಸಲಹೆ ಪಡೆಯುವುದು ಜಾಣತನ.
ಜಾಣತನ
ದೊಡ್ಡದೊಂದು ಕೆರೆಯಲ್ಲಿ ಶತಬುದ್ಧಿ ಮತ್ತು ಸಹಸ್ರಬುದ್ಧಿ ಎಂಬ ಎರಡು ದೊಡ್ಡ ಮೀನುಗಳಿದ್ದವು.ಅದೇ ಕೆರೆಯಲ್ಲಿ ಏಕಬುದ್ಧಿ ಎಂಬ ಕಪ್ಪೆಯೂ ವಾಸವಾಗಿತ್ತು.ಅವೆಲ್ಲಾ ಸ್ನೇಹಿತರೇ ಆಗಿದ್ದರು.ಒಮ್ಮೆ ಮೀನುಗಾರರು ಕೆರೆಯೆಬಳಿ ನಿಂತು ಮಾರನೆಯದಿನ ಬಲೆ ಬೀಸಲು ಯೋಜನೆ ಹಾಕಿದ್ದರು.ಇದನ್ನು ಆಲಿಸಿದ ಕಪ್ಪೆ ಭಯದಿಂದ ವಿಷಯವನ್ನು ಮೀನುಗಳಿಗೆ ತಿಳಿಸಿತು.ಶತಬುದ್ಧಿ ಮತ್ತು ಸಹಸ್ರಬುದ್ಧಿ ಮೀನುಗಳು "ಅಯ್ಯಾ ಏಕಬುದ್ಧಿ ಈ ಮನುಷ್ಯರಿಗೆ ಹೇಳಿದ್ದನ್ನೆಲ್ಲಾ ಮಾಡಲು ಆಗುವುದಿಲ್ಲ, ಅವರಿಗೆ ಹೆದರಿ ಬೇರೆಡೆ ಹೋಗಬೇಡ,ಅವರು ಬಂದರೆ ನಾನು ನೋಡಿಕೊಳ್ಳುತ್ತೇನೆ"ಎಂದು ಧೈರ್ಯ ಹೇಳಿತು.ಆದರೆ ಕಪ್ಪೆ ತಾನೇ ಕಣ್ಣಾರೆ ಮನುಷ್ಯರು ಮಾಡುವ ಚಮತ್ಕಾರಗಳನ್ನೆಲ್ಲಾ ಈ ಮೊದಲು ನೋಡಿತ್ತು.ಅಂದು ಸಂಜೆ ಜಿಗಿದು ಬೇರೆಡೆ ಅವಿತುಕೊಂಡಿತು.ಆ ರಾತ್ರಿಯೇ ಮೀನುಗಾರರು ಬಲೆ ಬೀಸಿ ಹೋಗಿದ್ದರು.ಮರುದಿನ ಸುಲಭವಾಗಿ ಮೀನುಗಳು,ಆಮೆ,ಏಡಿ ಮುಂತಾದ ಜಲಚರಗಳನ್ನು ಹಿಡಿದು ಬುಟ್ಟಿಯೊಳಗೆ ತುಂಬಿಕೊಂಡು ಹೋದರು.ಅದರ ಜೊತೆಗೆ ಶತಬುದ್ಧಿ ಮತ್ತು ಸಹಸ್ರಬುದ್ಧಿ ಯನ್ನೂ ಬೊಂಬುಗಳಿಗೆ ತೂಗುಹಾಕಿಕೊಂಡು ಹೋದರು. ಏಕಬುದ್ಧಿ ಮರದ ಹಿಂದೆ ಕುಳಿತು ತನ್ನ ಗೆಳೆಯರ ಅಂತ್ಯವನ್ನು ಗಮನಿಸಿತು.
ನೀತಿ: ವಿದ್ಯೆಗಿಂತ ಬುದ್ಧಿ ಲೇಸು, ಆದರೆ ಬುದ್ಧಿಗಿಂತ ಜಾಣತನ ಲೇಸು.
ಮಹಾರಾಜ?(ಹಾಸ್ಯ)
ತೆನ್ನಾಲಿ ರಾಮ ಕೃಷ್ಣ ಒಮ್ಮೆ ಬೀದಿಯಲ್ಲಿ ನಡೆದು ಹೋಗುವಾಗ ಬೇರೊಬ್ಬ ರಾಜ್ಯದ ವ್ಯಕ್ತಿಯೊಬ್ಬ ಅವನ ಎದುರಿಗೇ ನಡೆದು ಬರುತ್ತಿದ್ದ. ಅಕಸ್ಮಿಕವಾಗಿ ರಾಮಕೃಷ್ಣನ ಭುಜ ಆತನಿಗೆ ತಗುಲಿತು.ತಕ್ಷಣ ಕೋಪಗೊಂಡ ಆ ವ್ಯಕ್ತಿ ರಾಮಕೃಷ್ಣನನ್ನು ಶಪಿಸಲು ಶುರುಮಾಡಿದ "ಹೇ!! ನಿನಗೇನು ಕಣ್ಣು ಕಾಣುವುದಿಲ್ಲವೇ? ನಾನು ಯಾರೆಂದು ತಿಳಿದಿರುವೆ? ನಾನು ಒಬ್ಬ ರಾಜನ ಸಲಹೆಗಾರ"ಎಂದು ಜಂಭದಿಂದ ಕೂಗಿ ಹೇಳಿದ.ಅದಕ್ಕೆ ರಾಮಕೃಷ್ಣ "ಓಹೋ ಹಾಗೋ ನೀನು ಬರೀ ಸಲಹೆಗಾರನೋ...ಆದರೆ ನಾನು ಮಹಾರಾಜ ತಿಳಿಯಿತೋ"ಎಂದ. ಕೂಡಲೇ ಆ ವ್ಯಕ್ತಿ "ಹಾ! ಹಾಗಾ? ತಪ್ಪಾಯಿತು ಮಹಾಪ್ರಭು,ತಾವು ಯಾವ ರಾಜ್ಯಕ್ಕೆ ರಾಜರು?" ಎಂದ. ರಾಮಕೃಷ್ಣ ನಕ್ಕು"ನನಗೆ ನಾನೇ ಮಹಾರಾಜ, ನನ್ನ ಭಾವೋದ್ರೇಗಕ್ಕೆ, ನನ್ನ ನಡೆ ನುಡಿಗೆ ನಾನೇ ಅಧಿಪತಿ, ನೀನು ಈಗಷ್ಟೇ ತಾಳ್ಮೆ ಕಳೆದುಕೊಂಡಂತೆ ನಾನೆಂದೂ ನಡೆದಿಲ್ಲ, ನಡೆಯುವುದೂ ಇಲ್ಲ."ಎಂದ. ತಕ್ಷಣ ಆ ಸಲಹೆಗಾರನಿಗೆ ತನ್ನ ತಪ್ಪರಿವಾಗಿ ತಲೆಬಾಗಿ ಮುಂದೆ ಸಾಗಿದ.
ಭೂತ!(ಹಾಸ್ಯ)
ತೆನ್ನಾಲಿ ರಾಮ ಕೃಷ್ಣನ ಬುದ್ಧಿವಂತಿಕೆ ,ಸಮಯಸ್ಪೂರ್ತಿ, ಜಾಣತನ, ಸಲಹೆ ಎಲ್ಲ ಜನರ ಮನೆ ಮಾತಾಗಿದ್ದ ಕಾಲವದು. ಆಗ ಒಬ್ಬ ಸಾಹುಕಾರನು ತನ್ನ ಕಷ್ಟವನ್ನು ಹೇಳಿಕೊಳ್ಳಲು ರಾಮಕೃಷ್ಣನ ಬಳಿಗೆ ಬಂದ. "ರಾಮ ಕೃಷ್ಣಾ, ನನಗೆ ದಿನಾ ರಾತ್ರಿ ಮಲಗಿದಾಗ ನನ್ನ ಮಂಚದಡಿ ಒಂದು ಭಯಂಕರ ಭೂತ ಮಲಗಿದಂತೆ ಕನಸು ಬರುತ್ತದೆ, ಇದರಿಂದ ನನಗೆ ತುಂಬಾ ಭಯವಾಗಿದೆ,ಆದರೆ ಬೆಳಿಗ್ಗೆ ಎದ್ದು ನೋಡಿದಾಗ ಅದು ಅಲ್ಲಿ ಇರುವುದಿಲ್ಲ, ಅದಕ್ಕೆ ಏನಾದರೂ ಒಂದು ಉಪಾಯ ಹೇಳು. ನಿನಗೆ ನೂರು ವರಹಗಳನ್ನು ಕೊಡುತ್ತೇನೆ" ಎಂದ. ಅದಕ್ಕೆ ರಾಮಕೃಷ್ಣ "ಮೊದಲು ನೂರು ವರಹ ಕೊಡಿ ಆನಂತರ ಉಪಾಯ ಹೇಳುವೆ" ಎಂದ. ಅದರಂತೆ ಆ ಶ್ರೀಮಂತ ಹಣದ ಚೀಲವನ್ನು ಅವನ ಕೈಗಿತ್ತ. ರಾಮ ಕೃಷ್ಣ ಮೊದಲೇ ಉಪಾಯ ಯೋಚಿಸಿಬಿಟ್ಟಿದ್ದ. ಹಣ ಕೈಗೆ ಸಿಕ್ಕಿದ ತಕ್ಷಣ ಹೇಳಿದ"ನೋಡಿ ಸ್ವಾಮಿ ನೀವು ಈ ದಿನವೇ ಮನೆಗೆ ಹೋಗಿ ನೀವು ಮಲಗುವ ಮಂಚದ ನಾಲ್ಕೂ ಕಾಲುಗಳನ್ನು ಕತ್ತರಿಸಿ, ನಂತರ ಆ ಭೂತಕ್ಕೆ ಈ ರಾತ್ರಿಯಿಂದ ನಿಮ್ಮ ಮಂಚದ ಕೆಳಗೆ ಜಾಗ ಇದ್ದರೆ ತಾನೆ!" ಎಂದು ಹೇಳಿ ಕಳಿಸಿದ. ಶ್ರೀಮಂತ ಅದರಂತೆಯೇ ಮಂಚದ ಕಾಲುಗಳನ್ನು ಕತ್ತರಿಸಿ ನೆಮ್ಮದಿಯಿಂದ ಮಲಗಿದ. ಆತನ ಭ್ರಮೆಯೂ ದೂರವಾಯಿತು.
ಪಂಡಿತ
ಪಂಡಿತನೊಬ್ಬ ನದಿ ದಾಟಿ ಪಕ್ಕದ ಊರಿಗೆ ಪ್ರಯಾಣ ಮಾಡಲು ಹೊರಟಿದ್ದ. ದೋಣಿಯಲ್ಲಿ ಸಾಗುತ್ತಿರಲು ಕಾಲ ಕಳೆಯಲು ಅಂಬಿಗನನ್ನು ಮಾತನಾಡಿಸುತ್ತಿದ್ದ. ಹಾಗೇ ಮಾತಿಗೆ ಮಾತು ಬೆಳೆದು ಪಂಡಿತ ಆ ಅಂಬಿಗನನ್ನು ಕುರಿತು"ನಿನಗೆ ವ್ಯಾಕರಣ ಬರುತ್ತದೋ"ಎಂದು ಜಂಭದಿಂದ ಕೇಳಿದ.ಅದಕ್ಕುತ್ತರವಾಗಿ ಅಂಬಿಗ‘ಇಲ್ಲಾ ಸ್ವಾಮಿ’ಎಂದ. ಪಂಡಿತ ಮತ್ತೆ ಜಂಭದಿಂದ ನಕ್ಕು "ಹಾದಿದ್ದರೆ ನಿನ್ನ ಅರ್ಧ ಜನ್ಮ ಹಾಳು" ಅಂದ. ಸ್ವಲ್ಪ ಹೊತ್ತಿನ ಬಳಿಕ ಅಂಬಿಗ ಕೇಳಿದ"ಸ್ವಾಮಿ ನಿಮಗೆ ಈಜು ಬರುತ್ತೋ?" ಅದಕ್ಕೆ ಪಂಡಿತ "ಇಲ್ಲ"ಎಂದ."ಹಾಗಿದ್ದಲ್ಲಿ ನಿಮ್ಮ ಪೂರ್ತಿ ಜನ್ಮವೇ ನೀರುಪಾಲು, ಈಗ ದೋಣಿಯಲ್ಲಿ ಬಿರುಕು ಬಿಟ್ಟಿದೆ, ನೀರು ನುಗ್ಗುತ್ತಿದೆ!"ಎಂದ. ಕಡೆಗೆ ಅಂಬಿಗನೇ ಹಾಗೂ ಹೀಗೂ ಮುಳುಗುತ್ತಿದ್ದ ಪಂಡಿತನನ್ನು ದಡ ಸೇರಿಸಿ ಪ್ರಾಣ ಉಳಿಸಿದ.
ಪ್ರಶ್ನೆಗೆ ತಕ್ಕ ಉತ್ತರ(ಹಾಸ್ಯ)
ತಿಮ್ಮ ದನ ಕಾಯುತ್ತಿದ್ದ. ಅಲ್ಲಿಗೆ ಒಬ್ಬ ಬೇಟೆಗಾರನು ತನ್ನ ಕುದುರೆಯ ಮೇಲೆ ಸವಾರಿ ಮಾಡುತ್ತಾ ವೇಗದಿಂದ ಬಂದು ಅವಸರದಿಂದ "ಏಯ್ ಗೊಲ್ಲ, ಈ ಕಡೆ ಯಾವ್ದಾದ್ರೂ ಕಾಡುಪಾಣಿ ಹೋಗಿತ್ತಾ?" ಎಂದ.ಅದಕ್ಕೆ ತಿಮ್ಮ "ಹಾ! ಹೌದು ಒಂದು ಕಾಡು ಹಂದಿ ಹೋಗಿತ್ತು"ಎಂದ.ಬೇಟೆಗಾರ ಅದೇ ದಿಕ್ಕಿನಲ್ಲಿ ಪ್ರಯಾಣಿಸಿ ಸ್ವಲ್ಪ ಹೊತ್ತಿನ ಬಳಿಕ ಮರಳಿ ಬಂದು"ಎಲ್ಲಿ ಕಾಡುಹಂದಿ? ಯಾವ ಗುರುತೂ ಕಾಣ್ತಿಲ್ಲ? ನಿಜವಾಗಿಯೂ ನೀನು ನೋಡಿದ್ಯಾ?"ಎಂದು ಪ್ರಶ್ನಿಸಿದ." ಹೌದೂ ನನ್ನ ಕಣ್ಣಾರೆ ನೋಡೀವ್ನಿ ಇದೇ ದಿಕ್ಕಿನಲ್ಲಿ ಹೋಯ್ತು ಸುಮಾರು ಎರಡು ವರ್ಷದ ಹಿಂದೆ" ಎನ್ನಬೇಕೇ.
ನಂದಾ ದೀಪ
ಪುಟ್ಟ ಎಣ್ಣೆಯ ದೀಪವೊಂದನ್ನು ರವಿ ಮುಳುಗುವ ಹೊತ್ತಿಗೆ ಮನೆಯ ಯಜಮನ ಅದರ ಹತ್ತಿಯ ಬತ್ತಿಗೆ ಕಡ್ಡಿಗೀರಿ ಸೋಕಿಸಲು ಆ ನಂದಾದೀಪವು ಆನಂದದಿಂದ ತನ್ನಲ್ಲೇ ಹೆಮ್ಮೆ ಪಟ್ಟಿತು. "ಆಹಾ !ಸಂಜೆ ಕಳೆದು ಕತ್ತಲು ಕವಿಯುವ ಹೊತ್ತಿಗೆ ನನ್ನದೇ ದರ್ಬಾರು ಸೂರ್ಯನಿಗಿಂತ ನಾನೇನು ಕಡಿಮೆ, ರಾತ್ರಿಯ ಹೊತ್ತೂ ಬೆಳಕು ಚೆಲ್ಲುವ ಹಿರಿಮೆ ನನ್ನದು" ಎಂದು ಜಂಭದಿಂದ ನುಡಿಯಿತು.ತಕ್ಷಣ ರಭಸವಾಗಿ ಬೀಸಿದ ಗಾಳಿಯ ಪ್ರಭಾವದಿಂದ ದೀಪ ಆರಿಹೋಯಿತು.ಕೂಡಲೇ ಯಜಮಾನ ಮತ್ತೊಮ್ಮೆ ಅದನ್ನು ಹೊತ್ತಿಸಿ ಗೋಡೆಯ ಬದಿಗೆ ಸರಿಸಿದನು.ಹಿಗ್ಗಿದ್ದ ದೀಪಕ್ಕೆ ಸ್ವಲ್ಪ ಬೇಸರವಾಯಿತು.ಆ ಕೂಡಲೇ "ಅರೆ! ನೀನೇನೂ ಕಡಿಮೆ ಇಲ್ಲಾ, ಆದರೆ ಸೂರ್ಯನಿಗೆ ಮತ್ತೆ ಮತ್ತೆ ಹೊತ್ತಿಸುವ ಗೋಜಿಲ್ಲವಲ್ಲಾ"ಎಂದು ಯಾರೋ ಹೇಳಿದಂತಾಯಿತು. ತನ್ನೊಳಗಿನ ಮನಸ್ಸೇ ಬುದ್ದಿ ಹೇಳಿದುದು ಅರಿವಾಗಿ ನಾಚಿಕೆಯಾಯಿತು.
ವಸೂಲಿ(ಹಾಸ್ಯ)
ಒಂಟಿಯಾಗಿ ಕಾಲ್ನಡಿಗೆ ಪ್ರಯಾಣ ಬಳಸಿದ್ದ ಗುಂಡನ ದಾರಿಗೆ ಅಡ್ಡವಾಗಿ ಒಬ್ಬ ಸಣಕಲು ದರೋಡೆಗಾರ ಪಿಸ್ತೂಲ್ ಹಿಡಿದು ನಿಂತ "ಎತ್ತೋ ದುಡ್ಡು, ಬಿಚ್ಚೋ ವಾಚು" ಅಂದ.ಅದಕ್ಕೆ ಗುಂಡ "ತಗೋಳಪ್ಪ ದುಡ್ಡು,ಆದರೆ ನನಗೊಂದು ಉಪಕಾರ ಆಗಬೇಕಲ್ಲಾ." ಎಂದ.ಅದಕ್ಕೆ ಕಳ್ಳ ರೇಗಿ ಹೇಳಿದ"ಏನದು ನನ್ನಿಂದ ಉಪಕಾರ?" ಎನ್ನಲು ಗುಂಡ "ನನ್ನ ಹೆಂಡತಿಗೆ ನನ್ನಲ್ಲಿದ್ದ ದುಡ್ಡು ಕಳ್ಳತನ ಆಯ್ತು ಅಂದರೆ ನನ್ನ ಮೇಲೆ ನಂಬಿಕೇನೇ ಇಲ್ಲ, ಅದಕ್ಕೆ ನನ್ನ ಟೊಪ್ಪಿಗೆ ನಿನ್ನ ಪಿಸ್ತೂಲ್ ನಿಂದ ಒಮ್ಮೆ ಶೂಟ್ ಮಾಡು" ಅಂದ. ಅದಕ್ಕೆ ಆ ದರೋಡೆಕಾರ "ಅಷ್ಟೇ ತಾನೆ"ಎಂದು, ಢಂ! ಎಂದು ಟೋಪಿಗೊಂದು ಗುಂಡು ಹಾರಿಸಿದ.ಗುಂಡ ಅಷ್ಟಕ್ಕೇ ಸುಮ್ಮನಾಗಲಿಲ್ಲ "ಅರೆರೆ ಹಾಗೇ ಈ ನನ್ನ ಕೋಟಿಗೂ ನಾಲ್ಕಾರು ಗುಂಡು ಹಾರಿಸು" ಎಂದ. ಆದರೆ ಆ ಕಳ್ಳ ಎರಡು ಗುಂಡು ಹಾರಿಸಿ ಸುಮ್ಮನಾದ.ಗುಂಡ "ಹೂ ಇನ್ನೂ ಒಂದೆರೆಡು ತೂತುಗಳು ಬೀಳಲೀ" ಎಂದ. ಅದಕ್ಕೆ ಕಳ್ಳ "ನನ್ನಲ್ಲಿ ಇದ್ದ ಬುಲೆಟ್ ಎಲ್ಲಾ ಖಾಲಿ ಆಗಿದ" ಅಂದ. ತಕ್ಷಣ ಗುಂಡ "ನನಗೂ ಅದೇ ಬೇಕಿತ್ತು , ಎಲ್ಲಿ ಕೊಡು ನನ್ನ ದುಡ್ಡು, ಜೊತೆಗೆ ಈ ಟೊಪಿ ಕೋಟಿಗೂ ನಿನ್ನ ಹತ್ರ ಇರೋದನ್ನು ಕೊಡು ಇಲ್ಲದಿದ್ದ್ರೆ ಇಲ್ಲೇ ಈ ಛತ್ರಿಯಲ್ಲೇ ನಿನ್ನ ಚುಚ್ಚಿಚುಚ್ಚಿ ಸಾಯಿಸಿ ಬಿಡ್ತೀನಿ" ಎಂದು ಹೆದರಿಸಿ ಎಲ್ಲಾ ವಸೂಲಿ ಮಾಡಿಕೊಂಡೇ ಮನೆಗೆ ಹೊರಟ.
ಜ್ಞಾನ-ನೀರು
ಹಿಂದೆ ಆಶ್ರಮದ ಗುರುಗಳು ತಮ್ಮ ಶಿಷ್ಯರನ್ನುದ್ದೇಶಿಸಿ ಜ್ಞಾನ ಯಾರಲ್ಲಿ ಉದಯವಾಗುವುದು ಹಾಗೂ ಯಾರಿಂದ ಹರಿದು ಬರುವುದು ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ......
"ನೀರಿನ ಮೇಲೆ ಮಡಕೆಯನ್ನು ತಲೆ ಕೆಳಗಾಗಿ ಇಟ್ಟು ಅದುಮಿದರೂ ನೀರು ತುಂಬಲು ಅಸಾಧ್ಯ. ಅಂತೆಯೇ ಮಡಕೆ ಸರಿಯಾದ ರೀತಿಯಲ್ಲಿದ್ದರೂ ತೂತಾಗಿದ್ದರೆ ಅದರಲ್ಲಿ ನೀರು ನಿಲ್ಲುವುದೂ ಅಸಾಧ್ಯ.ಮಡಕೆಯೂ ತೂತಿಲ್ಲದೆ ಚೆನಾಗಿದ್ದು ಸರಿಯಾಗಿ ಇಟ್ಟಿದ್ದರೂ ಅದರಲ್ಲಿ ಕೊಳಕು ಇದ್ದರೆ ನೀರು ತುಂಬಿದರೂ ಅದನ್ನು ಬಳಸಲಾಗದು.
ಅದರಂತೆಯೇ ಜ್ಞಾನವೂ, ಸರಿಯಾದ ವ್ಯಕ್ತಿಗೆ ಧಾರೆ ಎರೆದಲ್ಲಿ ಖರೆಯಾಗಿ ಅವನಲ್ಲಿ ತುಂಬಿ ಇತರರಿಗೂ ಪಸರಿಸುವುದು ಖಂಡಿತ"ಎಂದು ತಿಳಿಸಿದರು.
ಅಳಿಲು
ಸಿಂಹದ ಸ್ನೇಹ ಮಾಡಿದ ಒಂದು ಅಳಿಲು ತನ್ನ ಕಾಡಿನ ರಾಜನ ಮೇಲಿನ ಭಕ್ತಿಯಿಂದಾಗಿ ನಿಷ್ಟೆಯಿಂದ ಅದರ ಸೇವೆ ಮಾಡತೊಡಗಿತು.ಅದನ್ನು ಮೆಚ್ಚಿದ ಸಿಂಹವು "ಅಯ್ಯಾ ಅಳಿಲೇ, ಹೀಗೇ ನನ್ನ ಸೇವೆ ಮಾಡುತ್ತಿರು ನಿನಗೆ ನಿನ್ನ ನಿವೃತ್ತಿಯ ಹೊತ್ತಿಗೆ ಒಂದು ಚೀಲದಷ್ಟು ಬಾದಾಮಿಯನ್ನು ಕೊಡುವೆ" ಎಂದಿತು.ಅಳಿಲು ಬಾದಾಮಿಯ ಆಸೆಯಿಂದಿ ಆ ದಿನವನ್ನೇ ನೆನೆಯುತ್ತಾ, "ಆಹಾ ಮಿಕ್ಕ ಅಳಿಲುಗಳು ಜೀವನವಿಡೀ ಅಲೆದರೂ ಸಿಗದಷ್ಟು ಬಾದಾಮಿ ನನಗೆ ದೊರೆಯುತ್ತದೆ" ಎಂದು ಜಂಭದಿಂದ ಅಲೆದಾಡುತ್ತಾ ಇತ್ತು. ಹೀಗೇ ಎಡಬಿಡದೆ ನಿಷ್ಟೆಯಿಂದ ಗಜರಾಜನ ಸೇವೆ ಮಾಡುತ್ತಿರಲು ಒಂದು ಒಮ್ಮೆ ಆದಿನ ಬಂದೇ ಬಿಟ್ಟಿತು.ಅಳಿಲು ಇಳಿಯ ವಯಸ್ಸಿಗೆ ಬರಲು ಸಿಂಹವು ಅದಕ್ಕೆ ಒಂದು ಚೀಲ ಬಾದಾಮಿ ಕೊಟ್ಟು ಕಳಿಸಿತು.ಆದರೆ ಬಹುದಿನಗಳಿಂದ ಆಸೆ ಹೊತ್ತುಕೊಂಡಿದ್ದ ಅಳಿಲಿಗೆ ಅದನ್ನು ಕಂಡು ಬೇಸರವಾಯಿತು,ಏಕೆಂದರೆ ಅವನ್ನು ಕಡಿಯಲು ಅದರ ಬಾಯಿಯಲ್ಲಿ ಹಲ್ಲುಗಳೇ ಇಲ್ಲವಾಗಿದ್ದವು.
ಮೊಲಗಳ ಸಾಮ್ರಾಜ್ಯ
ಕಾಡಿನ ಬದಿಯಲ್ಲೇ ಗುಡ್ಡಗಾಡಿನಲ್ಲಿ ಮೊಲಗಳು ಗುಂಪು ಗುಂಪಾಗಿ ವಾಸಿಸುತ್ತಿದ್ದವು. ನರಿ, ಚಿರತೆ, ತೋಳಗಳು ಆ ಗುಂಪಿನ ಮೇಲೆರಗಿ ದಿನಾ ಒಂದೆರಡು ಮೊಲಗಳ ಸಂಖ್ಯೆ ಕಡಿಮೆ ಆಗತೊಡಗಿದವು.ಕಾಡಿನ ಆ ಕ್ರೂರ ಪ್ರಾಣಿಗಳ ಆಕ್ರಮಣಕ್ಕೆ ಭಯದಿಂದ ಹೆದರಿದ ಮೊಲಗಳು ತಮಗಿನ್ನು ಉಳಿಗಾಲವಿಲ್ಲವೆಂದು ನಿರ್ಧರಿಸಿ ಒಮ್ಮೆಲೇ ಎಲ್ಲಾ ಮೊಲಗಳು ನೀರಿನಲ್ಲಿ ಧುಮುಕಿ ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದವು. ಹಾಗೆ ಪ್ರಾಣ ಕಳೆದುಕೊಳ್ಳಲು ಮನಸ್ಸು ಮಾಡಿ ಒಂದು ನೀರಿನ ಕೊಳದ ಬಳಿಗೆ ನಡೆದವು.ಆ ಮೊಲಗಳು ನೀರಿನ ಹತ್ತಿರಕ್ಕೆ ಬರುತ್ತಿದ್ದಂತೆಯೇ ಅಲ್ಲೇ ದಡದಲ್ಲಿ ಕುಳಿತಿದ್ದ ಕಪ್ಪೆಗಳು ದಡದಡನೆ ನೀರಿಗೆ ಧುಮುಕಿದವು.ಇದನ್ನು ಕಂಡ ಮೊಲಗಳು "ಅರೆ ನಾವೇ ಹೆದರಿದ್ದೇವೆ ಅಂದುಕೊಂಡಿದ್ದೆವು,ಇಲ್ಲಿ ನಮಗಿಂತಲೂ ಭಯದಿಂದಿರುವವರು ಇದ್ದಾರೆ, ನಮಗಿನ್ನೂ ಬದುಕಲು ಭರವಸೆ ಇದೆ"ಎಂದು ತಮ್ಮ ಬಿಲಗಳಿಗೆ ತೆರಳಿದವು
ನೀತಿ: ನಾವು ಇನ್ನೊಬ್ಬರಿಗೆ ಹೆದರುವಂತೆ,ಆ ಇನ್ನೊಬ್ಬರೂ ಮತ್ತೊಬ್ಬರಿಗೆ ಹೆದರುತ್ತಾರೆ
ಭಿಕ್ಷೆ
ಪ್ರತಿನಿತ್ಯದಂತೆ ರಥವನೇರಿ ರಾಜನೊಬ್ಬನು ರಸ್ತೆಯಲ್ಲಿ ಸವಾರಿ ಹೋಗುತ್ತಿದ್ದನು. ಅದೇ ರಸ್ತೆಯಲ್ಲಿ ಒಬ್ಬ ಭಿಕ್ಷುಕ ಅಕ್ಕಿಯನ್ನು ಭಿಕ್ಷೆಯಾಗಿ ಪಡೆದು ಅದನ್ನು ತನ್ನ ಚೀಲಕ್ಕೆ ತುಂಬಿಕೊಳ್ಳುತ್ತಿದ್ದನು.ರಾಜನು ಬರುವುದನ್ನು ಕಂಡು ಭಿಕ್ಷುಕ ಅವನಲ್ಲಿಗೆ ಓಡಿಹೋದನು,ರಾಜನು ನೀನ್ಯಾರೆಂದು ಕೇಳಲು "ಸ್ವಾಮಿ ನಾನೊಬ್ಬ ನಿರ್ಗತಿಕ, ನನ್ನಲಿ ಏನೂ ಇಲ್ಲ, ಏನಾದರೂ ಭಿಕ್ಷೆ ನೀಡಿ, ಊಟ ಮಾಡಿ ಎರಡು ದಿನಗಳೇ ಆಗಿದೆ" ಎಂದ. ಅದಕ್ಕೆ ರಾಜನು "ನಿನಗೆ ಈ ರಾಜನಿಗೆ ನೀಡಲು ಏನೂ ಇಲ್ಲವೇ? ಬರೀ ಈ ಆರ್ತ ನುಡಿಗಳು ಮಾತ್ರವೇ?"ನನಗೇ ಎನಾದರೂ ಕೊಡು"ಎಂದ.ಆಶ್ಚರ್ಯಗೊಂಡ ಭಿಕ್ಷುಕ ಬೇಸರದಿಂದ ಒಲ್ಲದ ಮನಸ್ಸಿನಲ್ಲಿ ತನ್ನ ಎರಡೇ ಎರಡು ಬೆರಳುಗಳಿಂದ ನಾಲ್ಕೇ ನಾಲ್ಕು ಅಕ್ಕಿ ಕಾಳನ್ನು ರಾಜನ ಕೈಗಿಟ್ಟ.ರಾಜ ತನ್ನ ಕುದುರೆಗಳಿಗೆ ಕಟ್ಟಿದ್ದ ಹಗ್ಗ ಜಗ್ಗಿ ಮುಂದಕ್ಕೆ ಸಾಗಿದ. ತನಗೆ ಏನೂ ನೀಡದೆ ಹೊರಟುಹೋದ ರಾಜನನ್ನು ಭಿಕ್ಷುಕ ಶಪಿಸಿದ. ಬೇರೆ ಹಾದಿಬೀದಿಗಳಲ್ಲಿ ಭಿಕ್ಷೆ ಬೇಡಿ ಸಂಜೆಯ ವೇಳೆಗೆ ಮನೆಗೆ ಬಂದ. ಮನೆಯಲ್ಲಿ ಒಂದು ದೊಡ್ಡ ಚೀಲದಲ್ಲಿ ಅಕ್ಕಿ ಇತ್ತು.ಆಶ್ಚರ್ಯದಿಂದ ಚೀಲದಲ್ಲಿ ಕೈಹಾಕಿ ನೋಡಲು ಒಂದು ಚಿನ್ನದ ನಾಣ್ಯ ಕಂಡಿತು.ಚೀಲವನ್ನು ತೆಗೆದು ಅಕ್ಕಿಯನ್ನು ಕೆಳಗೆ ಸುರಿದ.ಮತ್ತೊಂದು,ಮತ್ತೆ ಎರಡು ಹೀಗೆ ನಾಲ್ಕು ಚಿನ್ನದ ನಾಣ್ಯಗಳು ಸಿಕ್ಕಿದವು.ತಕ್ಷಣ ನೆನಪಿಗೆ ಬಂದಿತು "ಇದು ರಾಜನೇ ಕರುಣಿಸಿರುವ ಆಸ್ತಿ,ನಾನು ಉದಾರಿಯಾಗಿ ಕೈತುಂಬ ಅಕ್ಕಿ ಕಾಳನ್ನು ಕೊಟ್ಟಿದ್ದರೆ ಚೀಲದ ತುಂಬ ಚಿನ್ನದ ನಾಣ್ಯಗಳೇ ದೊರೆಯುತ್ತಿದ್ದವೇನೋ"ಎಂದುಕೊಂಡು ಬೇಸರ ಪಟ್ಟನು.ಕಾಲ ಮಿಂಚಿತ್ತು.
3 ವಿಗ್ರಹಗಳು
ಭಾರತದಲ್ಲಿ ಹಿಂದಿನ ಕಾಲದಲ್ಲಿ ಋಷಿಮುನಿಗಳು ರಾಜರನ್ನು ಆಗಿಂದಾಗ್ಗೆ ಭೇಟಿ ಮಾಡುತ್ತಿದ್ದರು.ಸಲಹೆ ಸೂಚನೆಗಳನ್ನೂ ನೀಡುತ್ತಿದ್ದರು.ಹಾಗೆ ಮುನಿಯೊಬ್ಬನು ಬೇರೆಡೆ ಹಾದು ಹೋಗುವಾಗ ರಾಜನನ್ನು ನೋಡಲು ಅರಮನೆಗೆ ಬಂದನು.ಅಲ್ಲಿ ಯುವರಾಜನ ಭೇಟಿಯಾಯಿತು.ಯುವರಾಜನು ಪೂಜ್ಯ ಗುರುಗಳ ಸೇವೆಮಾಡಿ ಸಂಜೆ ವಿಹಾರಕ್ಕೆಂದು ಉದ್ಯಾನವನದಲ್ಲಿ ವಿಹರಿಸುತ್ತಿರಲು ಆ ಋಷಿಯು "ಯುವರಾಜಾ ನೋಡು, ನಿನಗಾಗಿ 3 ವಿಗ್ರಹಗಳನ್ನು ತಂದಿರುವೆ ನೀನು ಈಗ ಅದರಿಂದ ಒಂದು ಮುಖ್ಯ ವಿಷಯವನ್ನು ತಿಳಿಯಲು ಬೇಕಾದರೆ ಆ ಪ್ರತಿಮೆಯ ಕಿವಿಯಲ್ಲಿ ಈ ತಂತಿಯನ್ನು ತೂರಿಸು"ಎಂದು ಒಂದು ತಂತಿಯನ್ನು ಅವನ ಕೈಗಿಟ್ಟ. ಅದರಂತೆ ಯುವರಾಜ ಮೊದಲನೆಯ ವಿಗ್ರಹದ ಬಲ ಕಿವಿಯಲ್ಲಿ ತಂತಿಯನ್ನು ತೂರಿಸಿದ ತಂತಿಯು ಮತ್ತೊಂದು ಕಡೆಯ ಎದ ಕಿವಿಯಲ್ಲಿ ಹೊರಬಂದಿತು,ಎರಡನೆಯ ವಿಗ್ರಹದ ಬಲ ಕಿವಿಯಲ್ಲಿ ತಂತಿಯನ್ನು ತೂರಿಸಿದ ತಂತಿಯು ಅದರ ಬಾಕಿಯಿಂದ ಹೊರಕ್ಕೆ ಬಂದಿತು.ಇನ್ನು 3ನೆಯ ವಿಗ್ರಹದ ಕಿವಿಯಲ್ಲಿ ತಂತಿಯನ್ನು ತೂರಿಸಿದ, ತಂತಿಯು ಯಾವಕಡೆಯಿಂದಲೂ ಹೊರಬರಲಿಲ್ಲ. ಆಗ ಋಷಿ ಹೇಳಿದ "ಮಗೂ ಯುವರಾಜ, ಈ 3 ವಿಗ್ರಹಗಳೂ 3 ಮಾದರಿಯ ಜನರನ್ನು ಹೋಲುತ್ತದೆ. ಮೊದಲನೆಯ ಮಾದರಿಯ ಜನ ಒಂದು ಕಿವಿಯಲ್ಲಿ ಏನು ಹೇಳಿದರೂ ಮತ್ತೊಂದು ಕಿವಿಯಲ್ಲಿ ಬಿಟ್ಟು ಬಿಡುವವರು, ಎರಡನೆಯವರು ಏನು ಕೇಳಿದರೂ ಮತ್ತೊಬ್ಬರಿಗೆ ಹೇಳುವ ಅಭ್ಯಾಸ ಇರುವವರು.ಇನ್ನು ಕಡೇಯ ಮಾದರಿಯ ಜನರೇ ಉತ್ತಮರು, ಏಕೆಂದರೆ ತಾವು ಕೇಲಿದ್ದನ್ನು ತಮ್ಮಲ್ಲೇ ಇಟ್ಟು ಜ್ಞಾನವನ್ನು ಬೆಳೆಸಿಕೊಳ್ಳುವವರು.
ಅಹಂ
ಇಬ್ಬರು ಬಾಲ್ಯ ಸ್ನೇಹಿತರು ಇದ್ದರು.ಬೆಳೆದು ದೊಡ್ಡವರಾದ ಮೇಲೆ ಒಬ್ಬನು ಮಹಾ ತಪಸ್ವಿಯೂ ಮತ್ತೊಬ್ಬನು ಬಹಳ ಸಿರಿವಂತನಾಗಿ ರಾಜನಾದನು.ತಪಸ್ವಿಯು ಊರ ಹೊರಗಿನ ಬೆಟ್ಟಗುಡ್ಡಗಳಲ್ಲಿ ವಾಸವಾಗಿದ್ದನು.ಒಮ್ಮೆ ರಾಜನಾದವನು ತನ್ನ ಗೆಳೆಯನನ್ನು ನೋಡಲು ಬಯಸಿ ಅವನಿಗಾಗಿ ಹುಡುಕಾಡಿ,ಕಾಡು ಮೇಡು ಅಲೆದು ಕಡೆಗೂ ಆತನನ್ನು ಕಂಡು ತನ್ನ ಗೆಳೆಯನು ಮಹಾ ಜ್ಞಾನಿಯಾಗಿರುವುದನ್ನು ಕಂಡು ಸಂತೋಷದಿಂದ ತನ್ನ ಮನೆಗೆ ಔತಣಕ್ಕೆ ಆಹ್ವಾನವಿತ್ತನು.ಔತಣಕ್ಕೆ ಗೆಳೆಯ ಬರುವದಿನವನ್ನೇ ಕಾದಿದ್ದು ಭಾರೀ ವಿಜೃಂಭಣೆಯ ಅಲಂಕಾರಗಳೊಂದಿಗೆ ಬರಮಾಡಿಕೊಳ್ಳಲು ಸಜಾಗಿದ್ದನು.ಅರಮನೆಯ ಮುಂದೆ ಕೆಂಪಾದ ಕಂಬಳಿ ಹಾಸಿತ್ತು.ತಪಸ್ವಿ ಗೆಳೆಯ ಅರಮನೆಯ ಹೆಬ್ಬಾಗಿಲ ಮುಂದೆ ಬಂದನು. ಅಲ್ಲೊಬ್ಬ ಕಾವಲುಗಾರ ತಪಸ್ವಿಯನ್ನು ನೋಡಿ"ಅಯ್ಯಾ ನೋಡಿದೆಯಾ ನಿನ್ನ ಗೆಳೆಯನ ಶ್ರೀಮಂತಿಕೆಯನ್ನ,ನಿನ್ನಲ್ಲಿ ಏನೂ ಇಲ್ಲ ಎಂದು ನಿನಗೆ ತೋರಿಸಲೆಂದೇ ಹೀಗೆ ಮಾಡಿದ್ದಾನೆ"ಎಂದ,ತಪಸ್ವಿಗೆ ತಾಳ್ಮೆ ಕರಗಿತು ಸ್ವಲ್ಪದೂರಕ್ಕೆ ಓಡಿಹೋಗಿ ಮಣ್ಣಿನ ರಾಡಿ(ಕೊಚ್ಚೆ)ಯಲ್ಲು ತನ್ನ ಕಾಲನ್ನು ಅದ್ದಿ ಆ ಕಂಬಳಿಯಮೇಲೆಲ್ಲಾ ಕೊಳೆ ಮಾಡಿ ಒಳಗೆ ನಡೆದ,ಅಷ್ಟರಲ್ಲಿ ಅಲ್ಲಿಗೆ ಬಂದ ರಾಜನು "ಯಾರಲ್ಲಿ? ಯಾರು ಈ ಸೊಗಸಾದ ಕಂಬಳಿಯನ್ನು ಹೀಗೆ ಮಾಡಿದ್ದು?" ಎಂದು ಕೂಗಿದ.ಅದಕ್ಕೆ ಆತನ ಗೆಳೆಯ ತಪಸ್ವಿಯು "ನಾನೇ ಗೆಳೆಯ ಹಾಗೆ ಮಾಡಿದ್ದು, ನಿನ್ನ ಸಿರಿವಂತಿಕೆಯ ಅಮಲನ್ನು ಮುರಿಯಲು ಹಾಗೆ ಮಾಡಿದೆ,ನಿನ್ನ ಶ್ರಿಮಂತಿಕೆಯನ್ನು ತೋರಿಸಲು ಹೀಗೆ ಅಲಂಕಾರಗಳನ್ನು ಮಾಡಿದ್ದೀಯಾ?"ಎಂದನು. ಅದಕ್ಕೆ ರಾಜನು "ಅಯ್ಯಾ ಗೆಳೆಯ ನಾನೇನೋ ನೀನು ಜೀವನದಲ್ಲಿ ಎಲ್ಲವನ್ನೂ ತ್ಯಜಿಸಿದ ವೈರಾಗಿ, ತಪಸ್ವಿ, ಮಹಾ ಜ್ಞಾನಿ ಎಂದುಕೊಂಡಿದ್ದೆ ಆದರೆ ಈ ಅಹಂ ಎನ್ನುವುದು ನಿನಗೆ ಇನ್ನೂ ಅಂಟಿಕೊಂಡಿದೆ. ಈಗ ನನಗೂ ನಿನಗೂ ಏನೂ ಅಂತರವೇ ಇಲ್ಲ. ನನಗೆ ಹಣದ ಅಹಂ ಇದ್ದರೆ ನಿನಗೆ ಗುಣದ ಅಹಂ ಇದೆ."ಎಂದು ಬೇಸರದಿಂದ ನುಡಿದ.
ನೀತಿ: ಹಣವಾಗಲಿ, ಗುಣವಾಗಲಿ ಎಲ್ಲವೂ ಆಭಗವಂತನಿಂದಲೇ ಪ್ರಾಪ್ತಿಯಾದವುಗಳು,ಆಕಸ್ಮಾತ್ ಅಪಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟರೆ ಯಾವುದೂ ನಮ್ಮಜೊತೆ ಬರಲಾರವು.ಇದ್ದಷ್ಟು ಕಾಲ ಇತರರಿಗೆ ಒಳಿತು ಮಾಡಿದಲ್ಲಿ ಮುಂದೆ ಇದೇ ಜನ್ಮದಲ್ಲೇ ಅದರ ಪ್ರತಿಫಲ ಸಿಗಿವುದು ಖಚಿತ.
ಗೌತಮ ಬುದ್ಧ
ಗೌತಮ ಬುದ್ಧನು ತನ್ನೊಡನೆ ಐನೂರು ಅನುಯಾಯಿಗಳನ್ನು ಕರೆದುಕೊಂಡು ವೈಶಾಲಿ ಎಂಬ ಪುಟ್ಟ ಹಳ್ಳಿಯ ಕಡೆಯಿಂದ ಹೊರಟಿದ್ದ.ಒಮ್ಮೆ ಹಿಂತಿರುಗಿ ಹಳ್ಳಿಯನ್ನು ನೋಡಿದ. ಅದನ್ನು ಕಂಡ ಒಬ್ಬ ಅನುಯಾಯಿ "ಯಾಕೆ ನೀವಿ ಆಹಳ್ಳಿಯಕಡೆ ನೋಡುತ್ತಿದ್ದೀರಿ? ಎಂದು ಪ್ರಶ್ನಿಸಿದ.ಅದಕ್ಕೆ ಗೌತಮ ಬುದ್ಧನು"ನಾವು ಆ ಹಳ್ಳಿಗೆ ಹೋಗಬೇಕು" ಎಂದ. "ಅರೆ ಆ ಹಳ್ಳಿ ಬಹಳ ಚಿಕ್ಕದು ಸ್ವಲ್ಪವೇ ಮನೆಗಳಿವೆ, ನಾವೆಲ್ಲಾ ಅಲ್ಲಿಗೆ ಹೋದರೆ ಕೂರುವುದಾದರೂ ಎಲ್ಲಿ?" ಎಂಬ ಪ್ರಶ್ನೆಗಳು ಕೇಳಿಬಂದರೂ, ಬುದ್ಧ ಮೌನವಾಗಿದ್ದು ನಂತರ "ನಡೆಯಿರಿ ವೈಶಾಲಿಯ ಕಡೆಗೆ" ಎಂದು ಆಜ್ಞೆ ಮಾಡಿದ. ಹಳ್ಳಿಯನ್ನು ಸಮೀಪಿಸುತ್ತಿದ್ದಂತೆ ಒಬ್ಬ ಯುವತಿ ಹೊಲದಲ್ಲಿದ್ದ ತನ್ನ ತಂದೆಗೆ ಊಟ, ನೀರು ಕೊಡಲು ಹೊರಟಿದ್ದಳು. ಬುದ್ಧನನ್ನು ಕಂಡವಳೇ ಅವನಿಗೆ ನಮಸ್ಕರಿಸಿ "ಸ್ವಾಮಿ ನಾನು ಹಿಂತಿರುಗಿ ಬರುವವರೆಗೂ ನೀವು ಪ್ರವಚನವನ್ನು ಆರಂಭ ಮಾಡಬೇಡಿ"ಎಂದು ಬೇಡಿದಳು.
ಹಳ್ಳಿಯ ಜನರಿಗೆ ಆಶ್ಚರ್ಯವೋ ಆಶ್ಚರ್ಯ ಎಲ್ಲರೂ ಬುದ್ಧನನ್ನು ನೋಡಲು ದೂರದೂರುಗಳಿಂದ ಬಂದರೆ ಇಲ್ಲಿ ಬುದ್ಧನೇ ನಮ್ಮೂರಿಗೆ ಬಂದಿದ್ದಾನೆ ಎಂಬ ಆನಂದದಿಂದ ಊಟ ಉಪಚಾರಗಳನ್ನು ಬಲುಬೇಗ ಸಿದ್ಧ ಮಾಡಿದರು.ಎಲ್ಲ ಅನುಯಾಯಿಗಳೂ ಕೂರಲು ಸಾಕಾಗುವಷ್ಟು ಸ್ಥಳಾವಕಾಶವಾಯಿತು.ಹಳ್ಳಿಯ ಮುಖ್ಯಸ್ಥನು ಎದ್ದುನಿಂತು ಸ್ವಾಗತವನ್ನು ಕೋರಿ ಬುದ್ಧನಿಗೆ ಪ್ರವಚನ ಆರಂಭಿಸಲು ಕೋರಿದ. ಆದರೆ ಬುದ್ಧ ಸ್ವಲ್ಪ ಕಾಲ ಮಾತಾಡಲೇ ಇಲ್ಲ ,ಎಲ್ಲೆಲ್ಲೂ ಮೌನ ಆವರಿಸಿತು, ತುಸು ಹೊತ್ತಿನ ಬಳಿಕ ಯುವತಿ ಓಡೋಡಿ ಬುದ್ಧನ ಮಾತು ಕೇಳಲು ಬಂದು ಕುಳಿತಳು.ತಕ್ಷಣ ಬುದ್ಧನ ಮುಖ ಕಮಲದಂತೆ ಅರಳಿತು,ತನ್ನ ಹಿತನುಡಿಗಳ ಉಪದೇಶವನ್ನು ಆರಂಭಿಸಿದ."ನಾನು ಈ ಹಳ್ಳಿಗೆ ಬಂದದ್ದೇ ಈ ಯುವತಿಗಾಗಿ,ಆಕೆಗೆ ಆಧ್ಯಾತ್ಮದಲ್ಲಿರುವ ಇರುವ ಆಸಕ್ತಿ ,ಆಸೆ ನನ್ನನ್ನೇ ಇಲ್ಲಿಗೆ ಬರಮಾಡಿತು .ಆಕೆಯೇ ನಿಜವಾದ ಅನುಯಾಯಿ"ಎಂದ. ಆಕೆಯಿಂದ ಇಡೀ ಹಳ್ಳಿಗೇ ಜ್ಞಾನೋದಯವಾಯಿತು.
ನೀತಿ: ಯಾವ ವ್ಯಕ್ತಿಯು ವಿದ್ಯೆ ಜ್ಞಾನಗಳಿಗೆ ಬಾಯಾರಿಕೆಯಿಂದ, ಹಸಿವಿನಿಂದ, ಆಸೆಯಿಂದ, ಆಸಕ್ತಿಯಿಂದ ಕಾದು ಕಲಿಯುತ್ತಾರೋ ಅಂತಹರು ನೀರಿನ ಬಳಿಗೆ ಹೋಗುವಷ್ಟಿಲ್ಲ ನೀರೇ ನದಿಯಾಗಿ ಅವರಿರುವಲ್ಲಿಗೆ ಹರಿದು ಬರುತ್ತದೆ.
ಆರನೇ ಮಹಡಿ?
ಆರು ಜನ ಹುಡುಗಿಯರು ಒಮ್ಮೆ ತಮ್ಮ ಗೆಳೆಯರನ್ನು ಬಿಟ್ಟು ತಾವೇ ಒಂದು ಹೋಟೆಲ್ ಗೆ ಹೋದರು.ಅದೂ ಸಹ ಆರು ಮಹಡಿಯುಳ್ಳ ಕಟ್ಟಡವೇ ಆಗಿತ್ತು.ಅಲ್ಲಿಗೆ ತಲುಪಿದ ಕೂಡಲೇ ಲಿಫ್ಟ್ ಏರಿ ಮೊದಲ ಮಹಡಿಗೆ ಹೋದರು ಅಲ್ಲಿ ಗೋಡೆಗೆ ಒಂದು ಫಲಕ ತೂಗಿ ಬಿಡಲಾಗಿತ್ತು.ಅದರ ಮೇಲೆ "ಇಲ್ಲಿರುವ ಹುಡುಗರೆಲ್ಲಾ ಕುಳ್ಳರು ಮತ್ತು ಬಡವರು"ಎಂದಿತ್ತು.ತಕ್ಷಣ ಆ ಹುಡುಗಿಯರು ಎರಡನೇ ಮಹಡಿಗೆ ಲಿಫ್ಟ್ ಚಲಾಯಿಸಿದರು ಅಲ್ಲಿಯೂ ಒಂದು ಫಲಕವಿತ್ತು.ಅದರ ಮೇಲೆ "ಇಲ್ಲಿರುವ ಹುಡುಗರೆಲ್ಲಾ ಎತ್ತರದವರು ಆದರೆ ಹಣವಂತರಲ್ಲ"ಎಂದಿತ್ತು.ಸರಿ ಮುಂದಿನ ಮಹಡಿಗೆ ಏರಿದರು.ಅಲ್ಲಿನ ಫಲಕದ ಮೇಲೆ "ಇಲ್ಲಿನ ಹುಡುಗರು ಸಿರಿವಂತರು ಆದರೆ ಬಹಳ ಕುಳ್ಳರು"ಎಂದಿತ್ತು.ನಾಲ್ಕನೇ ಮಹಡಿಗೆ ತೆರಳಲು ಅಲ್ಲಿ"ಇಲ್ಲಿನ ಹುಡುಗರು ಎತ್ತರವಾಗಿಯೂ ಹಣವಂತರಾಗಿಯೂ ಇದ್ದಾರೆ,ಆದರೆ ಅವರುಗಳು ಕುರೂಪಿಗಳು"ಎಂದಿತ್ತು.ಐದನೆಯ ಮಹಡಿಗೆ ಬಂದಿಳಿಯಲು ಅಲ್ಲಿನ ಫಲಕದ ಮೇಲೆ"ಇಲ್ಲಿನ ಹುಡುಗರು ಎತ್ತರವಾಗಿಯೂ, ಹಣವಂತರಾಗಿಯೂ ಸುಂದರವಾಗಿಯೂ ಇದ್ದಾರೆ"ಎಂದಿತ್ತು.ಹುಡುಗಿಯರು ಕುತೂಹಲ ತಡೆಯಲಾಗಲಿಲ್ಲ ಆರನೆಯ ಮಹಡಿಗೂ ಹತ್ತಿದರು.ಅಲ್ಲಿನ ಫಲಕದ ಮೇಲೆ ಹೀಗೆ ಬರೆದಿತ್ತು - "ಇಲ್ಲಿ ಯಾವ ಹುಡುಗರೂ ಇಲ್ಲ ಈ ಮಹಡಿ ಕಟ್ಟಿರುವ ಉದ್ದೇಶವೇನೆಂದರೆ ಹುಡುಗಿಯರಿಗೆ ತೃಪ್ತಿ ಅನ್ನುವುದೇ ಇಲ್ಲ ಎಂದು ಸಾಬೀತು ಮಾಡಲು"
ನೀತಿ: ಸಾಮಾನ್ಯ ಮನುಜನಿಗೆ ಎಷ್ಟು ಗಳಿಸಿದರೂ ತೃಪ್ತಿ ಎಂಬುದೇ ಇಲ್ಲ.
ಜಾಡಿ
ಫಿಲಾಸಫಿ ಪ್ರೊಫೆಸರ್ ಒಬ್ಬ ತನ್ನ ತರಗತಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ,ತನ್ನ ಬಳಿಯಿದ್ದ ಗಾಜಿನ ಜಾಡಿಯಲ್ಲಿ ದಪ್ಪ ಹಾಗೂ ನುಣುಪಾದ ನದಿಯಲ್ಲಿ ಸಿಗುವ ಕಲ್ಲುಗಳನ್ನು ತುಂಬಿದ."ಮಕ್ಕಳೇ, ಈಗ ನೋಡಿ ಜಾಡಿ ತುಂಬಿದೆಯಲ್ಲವೇ?" ಮಕ್ಕಳು ಹೂ ಎಂದು ತಲೆ ಆಡಿಸಿದರು.
ನಂತರ ಕಡಲೆ ಗಾತ್ರದ ಸಣ್ಣ ಸಣ್ಣ ಕಲ್ಲುಗಳನ್ನು ಅದೇ ಜಾಡಿಗೆ ಸುರಿದ,ಜಾಡಿ ಅಲ್ಲಾಡಿಸಲು ಸಣ್ಣ ಕಲ್ಲುಗಳು ದೊಡ್ಡಕಲ್ಲುಗಳ ಸಂಧಿಯಲ್ಲಿ ನುಸುಳಿದವು."ಮಕ್ಕಳೇ, ಈಗ ನೋಡಿ ಜಾಡಿ ತುಂಬಿದೆಯಲ್ಲವೇ?"ಅಂದ.ಮಕ್ಕಳು ಒಪ್ಪಿದರು.
ನಂತರ ಪ್ರೊಫೆಸರ್ ಒಂದು ಚೀಲದಲ್ಲಿ ಇದ್ದ ಮರಳನ್ನು ಆ ಜಾಡಿಗೆ ಸುರಿದನು.ಮರಳು ಕಲ್ಲುಗಳ ಸಂದುಗೊಂದುಗಳನ್ನು ಹೊಕ್ಕು ಜಾಡಿ ಭರ್ತಿಯಾಯಿತು.ಮತ್ತದೇ ಪ್ರಶ್ನೆ "ಈಗ ನೋಡಿ ಜಾಡಿ ತುಂಬಿದೆಯಲ್ಲವೇ?" ಮಕ್ಕಳು "ಹೂ ಹೌದು" ಎಂದರು.
ಆಗ ಪ್ರೊಫೆಸರ್ ಹೇಳಿದ "ಮಕ್ಕಳೇ ಗಮನವಿಟ್ಟು ಕೇಳಿ ಈ ಜಾಡಿಯೇ ನಿಮ್ಮ ಜೀವನ ಅಂದುಕೊಳ್ಳಿ, ಕಲ್ಲುಗಳೇ ಬಹು ಮುಖ್ಯವಾದ ಸಂಸಾರ,ಸಂಗಾತಿ,ಆರೋಗ್ಯ,ಮಕ್ಕಳು ಇದ್ದಹಾಗೆ.ನೀವು ಎಲ್ಲಾ ಕಳೆದುಕೊಂಡರೂ ಇವರು ನಿಮ್ಮೊಡನೇ ಇರುತ್ತಾರೆ ಆಗಲೂ ನಿಮ್ಮ ಜೀವನ(ಜಾಡಿ)ಪೂರ್ತಿಯಾಗೇ ಇರುತ್ತದೆ.ಇನ್ನು ಸಣ್ಣ ಕಲ್ಲುಗಳು ನಿಮ್ಮ ಭೋಗ-ಭಾಗ್ಯಗಳು, ಆಸ್ತಿ-ಅಂತಸ್ತುಗಳು,ಇನ್ನು ಮರಳು ಅತಿ ಸಣ್ಣ ವಿಷಯ/ವಸ್ತುಗಳು.ನೀವು ಮರಳನ್ನೇ ಜಾಡಿಗೆ ತುಂಬಿಕೊಂಡರೆ ಬೇರೆ ಯಾವುದಕ್ಕೂ ಸ್ಥಳವೇ ಇಲ್ಲದಂತಾಗುತ್ತದೆ" ಎಂದ.
ನ್ಯಾಯ-ನಾಣ್ಯ
ಅಕ್ಬರನ ಆಸ್ತಾನದಲ್ಲಿ ಬೀರಬಲ್ ಬಹಳ ಚತುರ ಎನಿಸಿದ್ದ.ಇದನ್ನು ಕಂಡಿದ್ದ ಇತರರು ಆತನಿಗೆ ಏನಾದರೂ ಮಾಡಿ ಮೂರ್ಖನ ಪಟ್ಟ ಕಟ್ಟಲು ನಿರ್ಧರಿಸಿದರು.ಒಮ್ಮೆ ಬೀರಬಲ್ ಸಭೆಗೆ ಬಂದಾಗ ರಾಜ ಅಕ್ಬರ್ ಎಲ್ಲರ ಸಲಹೆಯಂತೆ "ಬೀರಬಲ್ ನಿನಗೆ ನ್ಯಾಯ ಬೇಕೋ ಅಥವಾ ಚಿನ್ನದ ನಾಣ್ಯ ಬೇಕೋ"ಎಂದ.ಬೀರಬಲ್ "ನನಗೆ ನಾಣ್ಯ ಬೇಕು" ಎಂದ.ಅದಕ್ಕೆ ಎಲ್ಲರೂ ತಾವು ಹೂಡಿದ್ದ ಸಂಚು ಸಾರ್ಥಕವಾಯಿತು ಎಂದು ಸಂತೋಷದಿಂದ ನಕ್ಕರು.ಅಕ್ಬರ್ ಹೇಳಿದ "ಬೀರಬಲ್ ನಾನೇನೋ ನೀನು ಹಣದಾಸೆ ಪಡುವವನಲ್ಲ ಎಂದು ಕೊಂಡಿದ್ದೆ,ಆದರೆ ನೀನು ನನಗೆ ನಿರಾಸೆ ಮಾಡಿದೆ.ಎಲ್ಲರೂ ನೆನೆಸಿದಂತೆಯೇ ನೀನು ನಡೆದೆ".ಅದಕ್ಕೆ ಬೀರಬಲ್ "ಸ್ವಾಮಿ ಯಾರಲ್ಲಿ ಏನಿಲ್ಲವೋ ಅದನ್ನೇ ಬಯಸುತ್ತಾರೆ,ನನಗೆ ನಿಮ್ಮ ರಾಜ್ಯದಲ್ಲಿ ನ್ಯಾಯ ಸಿಕ್ಕಿದ್ದೆ,ಹಣದ ಅಭಾವ ಇರುವುದರಿಂದ ನಾಣ್ಯ ಕೇಳಿದೆ"ಎಂದು ಉತ್ತರಿಸಿದ.ಅಕ್ಬರನಿಗೆ ವಿನಾಕಾ ಬೀರಬಲ್ಲನನ್ನು ಪರೀಕ್ಷಿಸಿದ್ದಕ್ಕಾಗಿ ನಾಚಿಕೆಯಾಯಿತು.
ತಂದೆಯ ಶ್ರಮ
ತಂದೆಯೊಬ್ಬನು ತನ್ನ ಸಂಸಾರ ಸಾಗಿಸಲು ದಿನವಿಡೀ ರೊಟ್ಟಿಯನ್ನು ಮಾರುತ್ತಿದ್ದ, ಸಂಜೆಯ ವೇಳೆ ಉಳಿದ ಸಮಯದಲ್ಲಿ ವೃತ್ತಿ ಶಿಕ್ಷಣವನ್ನೂ ಮಾಡುತ್ತಿದ್ದ.ಮನೆಯ ಮಡದಿ ಮಕ್ಕಳ ಜೊತೆ ಕಾಲ ಕಳೆಯಲು ಸಾಧ್ಯವೇ ಇರುತ್ತಿರಲಿಲ್ಲ.ವರುಷಗಳು ಕಳೆದವು, ಶಿಕ್ಷಣ ಮುಗಿಯಿತು, ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನೂ ಆದ.ಸರಿ ಅದಕ್ಕೆ ತಕ್ಕ ಪ್ರತಿಫಲದಂತೆ ಒಳ್ಳೆಯ ಕೆಲಸವೂ ದಕ್ಕಿತು.ಕೆಲಸದಲ್ಲಿ ಒಳ್ಳೆಯ ಹೆಸರು, ಹಣ ಸಂಪಾದಿಸತೊಡಗಿದ.ಉತ್ತಮ ಅಧಿಕಾರಿಯಾಗುವ ಸಂಭವ ಇದ್ದುದರಿಂದ ಇನ್ನೂ ಹೆಚ್ಚು ಹೆಚ್ಚು ಓದಲು ಮನಸ್ಸು ಮಾಡಿದ.ಇದರಿಂದ ಮನೆಯವರೊಡನೆ ಕಾಲ ಕಳೆಯುವುದನ್ನೇ ಮರೆತ.ಅಧಿಕಾರಿಯೂ ಆದ,ಕಂಪನಿಯ ಮಾಲೀಕನೂ ಆದ ದೊಡ್ಡ ಬಂಗಲೆ ಕಾರುಗಳು ಕೈಕಾಲಿಗೆಲ್ಲಾ ಆಳುಗಳು.
ಒಮ್ಮೆ ಮನೆಗೆ ಬಂದು ಹೆಂಡತಿ ಮಕ್ಕಳನ್ನು ಕರೆದು ಹೇಳಿದ ಇನ್ನು ದುಡಿದದ್ದು ಸಾಕಾಯ್ತು ಮುಂದೆ ಮನೆಯವರ ಜೊತೆ ನೆಮ್ಮದಿಯಿಂದ ಇರುವೆ ಎಂದ.ಮಡದಿ ಮಕ್ಕಳಿಗೆ ಹೇಳತೀರದಷ್ಟು ಸಂತೋಷವಾಯಿತು.ಆದಿನ ಆನಂದಿಂದ ಔತಣವನ್ನೇ ಏರ್ಪಡಿಸಿದರು .ನಾಳೆಯಿಂದ ನಮ್ಮವರೆಲ್ಲಾ ಒಟ್ಟಿಗೆ ಇರುವ ಸಂಭ್ರಮದ ಕನಸು ಕಂಡರು,ಕುಡಿದರು,ಕುಣಿದರು, ರಾತ್ರಿ ಕಣ್ತುಂಬ ನಿದ್ರೆ ಮಾಡಿದರು.ಎಲ್ಲರೂ ಬೆಳಿಗ್ಗೆ ಬೇಗನೆ ಎದ್ದು ತಂದೆಯ ಜೊತೆ ಸಂತೋಷದಿ ಕಳೆಯುವ ದಿನಗಳ ನನಸನ್ನು ನಾಂದಿಯಾಡುವ ಭರದಲ್ಲಿ ಇದ್ದರು.ಆದರೆ ತಂದೆ ರಾತ್ರಿ ಮಲಗಿದವನು ಬೆಳಿಗ್ಗೆ ಏಳಲೇ ಇಲ್ಲ. ಹೃದಯ ಅಘಾತದಿಂದ ಯಾವಾಗ ಅವನ ಪ್ರಾಣ ಹಾರಿತ್ತೋ ಯಾರಿಗೂ ತಿಳಿಯದಾಗಿತ್ತು.
ನೀತಿ: ಮಡದಿ, ಮಕ್ಕಳ ಜೊತೆ ಕಾಲ ಕಳೆಯುವುದು ಸಂಸಾರಿಯ ಮೊದಲ ಧರ್ಮ
ಮಾತನಾಡುವ ಮರ
ಪುಟ್ಟ ಬಾಲಕನೊಬ್ಬ ದಿನಾ ಒಂದು ಮರದ ಬಳಿ ಆಡುತ್ತಿದ್ದ, ಅದರ ಮೇಲೆ ಹತ್ತುತ್ತಿದ್ದ, ಅದರ ಟೊಂಗೆ ಹಿಡಿದು ಜೋತಾಡುತ್ತಿದ್ದ. ಆ ಮರಕ್ಕೂ ಬಾಲಕನಿಗೂ ನಂಟೇ ಬೆಳೆಯಿತು.ಒಂದು ದಿನ ಬಾಲಕ ಪ್ರತಿನಿತ್ಯದಂತೆ ಆಡದೆ ಸುಮ್ಮನೆ ಮರದಡಿ ಕುಳಿತ.ಅದನ್ನು ಕಂಡ ಮರ ಮಾತನಾಡಿತು "ಮಗು ಏನಾಯಿತು?"ಎಂದಿತು, ಆಗ ಬಾಲಕ "ನನಗೆ ಹಸಿವಾಗಿದೆ ತಿನ್ನಲು ಮನೆಯಲ್ಲಿ ಏನೂ ಇಲ್ಲ"ಎಂದ.ತಕ್ಷಣ ಆ ಮರ ತನ್ನ ಎಲೆಗಳ ಮರೆಯಲ್ಲಿದ್ದ ಹಣ್ಣನ್ನು ಬೀಳಿಸಿತು.ಅದನ್ನು ತಿಂದು ಸಂತೋಷದಿಂದ ದಿನಾ ಅಲ್ಲೇ ಆಡಲು ಬರುತ್ತಿದ್ದ.ಸ್ವಲ್ಪ ವರ್ಷಗಳ ಕಾಲ ಬಾಲಕ ಮರಳಿ ಮರದ ಬಳಿ ಬರಲಿಲ್ಲ,ಮರಕ್ಕೆ ಬೇಸರವಾಗಿತ್ತು.ಒಂದು ದಿನ ಎದುರಿಗೆ ಕಾಣಿಸಿಕೊಂಡು ಬೇಸರದ ಮುಖ ಮಾಡಿಕೊಂಡಿರಲು ಮರವು ಕಾರಣ ಕೇಳಿತು."ಮಗೂ ನನ್ನಬಳಿ ಆಡಲು ಬಾ"ಎಂದಿತು.ಅದಕ್ಕೆ ಆ ಹುಡುಗ ನಾನೀಗ ದೊಡ್ಡವನಾಗಿದ್ದೇನೆ,ಆದರೆ ವ್ಯಾಪಾರ ಮಾಡುವ ಬಯಕೆ ಆದರೆ ನನ್ನಲ್ಲಿ ಹಣವಿಲ್ಲ"ಎಂದ.ತಕ್ಷಣ ಆಮರ ತನ್ನಲ್ಲಿದ್ದ ಎಲ್ಲಾ ಹಣ್ಣುಗಳನ್ನು ಆತನಿಗೆ ಕೊಟ್ಟಿತು.ಅದಲ್ಲು ಮಾರಿ ವ್ಯಾಪಾರದಲ್ಲಿ ಚೆನ್ನಾಗೇ ಹಣ ಮಾಡಿದ.ಸ್ವಲ್ಪಕಾಲ ಮರವನ್ನು ಭೇಟಿ ಮಾಡಲು ಬರಲೇ ಇಲ್ಲ.ಮರಕ್ಕೆ ಮತ್ತೆ ಬೇಸರವಾಗಿತ್ತು.ಕೆಲವು ದಿನಗಳ ಬಳಿಕ ಮತ್ತೆ ಬಾಲಕ ಹಿಂತಿರುಗಿದ.ಮರ ಮತ್ತದೇ ಆಸೆಯಿಂದ "ನನ್ನೊಡನೆ ಆಡಲು ಬಾ"ಎಂದಿತು.ಹುಡುಗನಿಂದ ಅದೇ ಉತ್ತರ"ನನಗೀಗ ಆಡಲು ಸಮಯವಿಲ್ಲ,ನಾನು ಬಹಳ ಕಷ್ಟದಲ್ಲಿದ್ದೇನೆ ನನಗೆ ಆಶ್ರಯಕ್ಕೊಂದು ಮನೆ ಕಟ್ಟಿಕೊಳ್ಳಬೇಕಾಗಿದೆ,ಆದರೆ ಕಟ್ಟಿಗೆ,ಮರ ಕೊಳ್ಳುವಷ್ಟು ಹಣವಿಲ್ಲ"ಎಂದ.ಹಿಂದೂ ಮುಂದು ನೋಡದೆ ಮರ"ಮಗೂ ನನ್ನ ಈ ದೊಡ್ಡ ಮರದ ಟೊಂಗೆಗಳನ್ನು ಕತ್ತರಿಸಿ ಉಪಯೋಗಿಸಿಕೋ"ಎಂದಿತು.ಅಂತೆಯೇ ಅವನು ಅದನ್ನು ಉಪಯೋಗಿಸಿ ಮನೆಯನ್ನೂ ಕಟ್ಟಿದ.ವರ್ಷ ಕಳೆದರೂ ಮರಳಿಬಾರದ ಹುಡುಗನನ್ನು ಕಾಯುತ್ತಾ ಮರ ಬೇಸರದಲ್ಲಿತ್ತು.ಒಂದು ದಿನ ಆತ ಮತ್ತೆ ಬಂದ.ಎಂದಿನಂತೆ "ನನ್ನ ಬಳಿ ಆಡಲು ಬಾ"ಎಂದು ಮರ ಕರೆಯಿತು.ಹುಡುಗನೂ ಎಂದಿನಂತೆ "ನನಗೀಗ ಆಡಲು ಸಮಯವಿಲ್ಲ,ನನಗೀಗ ಮದುವೆಯಾಗಿದೆ,ನಾನು ಕೆಲಸಕ್ಕೆ ದೂರದೂರಿಗೆ ನದಿ ದಾಟಿ ಹೋಗಬೇಕಾಗಿದೆ ಈಜು ಬಾರದು,ದೋಣಿ ಮಾಡಿಕೊಳ್ಳಲು ಮರದ ಹಲಗೆ ಬೇಕು"ಎಂದ.ಕೂಡಲೇ ಆ ಮರ"ಮಗೂ ನನ್ನ ಕಾಂಡದಲ್ಲಿ ಹೆಚ್ಚು ಹಲಗೆಗಳನ್ನು ಮಾಡಿಕೊಳ್ಳಬಹುದು,ಉಪಯೋಗಿಸಿಕೋ" ಎಂದಿತು.ಅಂತೆಯೇ ಉಳಿದ ಮರವನ್ನು ಕಡಿದು ದೋಣಿ ಮಾಡಿಕೊಂಡು ಸಂಗಾತಿಯೊಡನೆ ಹೊರಟುಹೋದ.ದಶಕಗಳು ಕಳೆದರೂ ಮರ ಆತನಿಗೆ ಕಾಯುತ್ತಲೇ ಇತ್ತು. ಒಮ್ಮೆ ಮರಳಿ ಬಂದ ಆತ ಮುದುಕನಾಗಿದ್ದ.ಮರವು ಅದೇ ಭಾವನೆಯಿಂದ"ಮಗೂ ಹೇಗಿದ್ದೀಯಾ" ಎಂದಿತು.ಆಗ ಅವನು "ನನಗೆ ಬಹಳ ದಣಿವಾಗಿದೆ"ಸ್ವಲ್ಪ ವಿಶ್ರಾಂತಿ ಬೇಕು"ಎಂದ. ಆತನಿಗೆ ಕೊಡಲು ಮರದ ಬಳಿ ಏನೂ ಉಳಿದಿರಲಿಲ್ಲ"ಮಗೂ ನನ್ನಲ್ಲಿ ಉಳಿದಿರುವುದು ಈ ಬುಡ ಮತ್ತು ಬೇರು, ಮಾತ್ರ ,ಬಾ ಈ ಬುಡದಿಮ್ಮಿಯ ಮೇಲೆ ಕುಳಿತು ವಿಶ್ರಮಿಸು"ಎಂದಿತು.ಅವನು ಅದರ ಮೇಲೆ ಕುಳಿತ.ಮರಕ್ಕೆ ಇದರಿಂದ ಆನಂದವಾಯಿತು.ಮನಸ್ಸಿನಲ್ಲೇ ಖುಷಿ ಅನುಭವಿಸಿತು.
ನೀತಿ:ಇಲ್ಲಿ ಬರುವ ಮರವೇ ನಮ್ಮ ತಂದೆ-ತಾಯಿಯರ ಹಾಗೆ,ಅವರು ಬಯಸುವುದೇ ನಮ್ಮ ಸಹಬಾಳ್ವೆ.
ಬಾವಿ-ನೀರು
ಅಕ್ಬರ್ ರಾಜನ ಬಳಿ ನ್ಯಾಯಕ್ಕಾಗಿ ಆಗಾಗ್ಗೆ ಜನರು ಬರುತ್ತಿದ್ದರು. ಹಾಗೇ ಒಮ್ಮೆ ರೈತನೊಬ್ಬ ಮತ್ತೊಬ್ಬ ರೈತನಿಂದ ಒಂದು ಬಾವಿಯನ್ನು ಖರೀದಿಸಿದ್ದ.ಆ ಬಾವಿಯನ್ನು ಕೊಳ್ಳಲು ಹಣ ಕೊಟ್ಟಿದ್ದರೂ ಮತ್ತೆ ನೀರಿಗೂ ಹಣ ಕೊಡು ಎಂದು ಹಟ ಮಾಡುತ್ತಿದ್ದ ಆ ಮತ್ತೊಬ್ಬ.ಆಗ ರಾಜ ಅಕ್ಬರ್ ಇದಕ್ಕೆ ತಕ್ಕ ನ್ಯಾಯ ಬೀರಬಲ್ಲನೇ ಕೊಡಬಲ್ಲನೆಂದು ಆತನನ್ನು ಕರೆಸಿದ.ಬೀರಬಲ್ ಕೊಂಚ ಸಮಯ ಯೋಚಿಸಿ "ಅಯ್ಯಾ ನೀನು ಬಾವಿಯನ್ನು ಮಾರಿದೆ ಎಂದು ಹೇಳಿದೆ,ಹಾಗಾದರೆ ಬಾವಿ ಮಾತ್ರ ಆತನಿಗೆ ಸೇರಿದೆ,ನೀರು ನಿನ್ನದು ಇಷ್ಟು ದಿನ ಆ ನೀರನ್ನು ಆತ ತನ್ನ ಬಾವಿಯಲ್ಲಿ ಇಟ್ಟುಕೊಂಡಿದ್ದಕ್ಕೆ ನೀನೇ ಬಾಡಿಗೆ ಕೊಡಬೇಕು,ಇಲ್ಲವೇ ನೀರನ್ನು ಮಾತ್ರ ವಾಪಸ್ ತೆಗೆದುಕೋ"ಎಂದು ಬುದ್ಧಿವಂತಿಕೆಯ ಮಾತನ್ನಾಡಿದ.ಆ ಮಾತನ್ನು ಕೇಳಿ ಆ ಕುಹಕ ಬುದ್ಧಿಯ ರೈತ ತಲೆಬಾಗಿ ಕ್ಷಮೆ ಯಾಚಿಸಿದ.
ಕೋಳಿಯ ತಂತ್ರ
ಒಮ್ಮೆ ತೋಳವೊಂದು ತೋಟದೊಳಕ್ಕೆ ನುಗ್ಗಿ ಏನೂ ಸಿಗದೆ ಒಂದು ಕೋಳಿಯನ್ನು ಹಿಡುದು ಓಡತೊಡಗಿತು.ಅದನ್ನು ಕಂಡು ಆ ತೋಟದ ಯಜಮಾನ "ಏಯ್ ಹಿಡಿಯಿರಿ ಆ ತೋಳವನ್ನು,ಹೊಡೆಯಿರಿ, ನನ್ನ ಕೋಳಿಯನ್ನು ಕಚ್ಚಿಕೊಂಡು ಹೋಗುತ್ತಿದೆ" ಎಂದು ಕೂಗಿದ.ಆಗ ತೋಳದ ಬಾಯಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಕೋಳಿ"ಅಯ್ಯೋ ನನ್ನನು ಬಿಡಬೇಡ,ನನ್ನ ಯಜಮಾನ ತುಂಬಾ ಕೆಟ್ಟವನು ನನ್ನನ್ನು ಯಾವಾಗಲೂ ಹೊಡೆಯುತ್ತಾನೆ,ನನಗೆ ಅವನ ಬಳಿ ಹೋಗಲು ಇಷ್ಟವಿಲ್ಲ,ಅದಕ್ಕಿಂತ ತೋಳದ ಹೊಟ್ಟೆ ಸೇರುವುದೇ ಲೇಸು ಎಂದು ಹೇಳು ತೋಳಣ್ಣಾ, ಹೇಳು" ಎಂದು ಅರಚಿತು,ತಕ್ಷಣ ಆ ತೋಳ "ಹೇ ಯಜಮಾನ ನಿನ್ನ ಕೋಳಿಗೆ ನಿನ್ನ ಬಳಿ ಬರಲು ಇಷ್ಟವಿಲ್ಲ"ಎಂದು ಕೂಗಲು ಕೂಡಲೆ ಕೋಳಿ ಅದರ ಬಾಯಿಯಿಂದ ಜಾರಿ ನೆಲೆಕ್ಕೆ ಬಿದ್ದಿತು,ಚಂಗನೆ ಪಕ್ಕದಲ್ಲಿದ್ದ ಮರದ ಮೇಲೆ ಹಾರಿ ಕುಳಿತುಕೊಂಡಿತು.ನಂತರ ಆ ತೋಳ ಹೊರಟು ಹೋದ ಬಳಿಕ ತನ್ನ ಯಜಮಾನ ಬರುವವರೆಗೂ ಅಲ್ಲೇ ಕುಳಿತುಕೊಂಡಿತ್ತು.
ಕರುಳ ಮಿಡಿತ
ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ರೈತನೊಬ್ಬ ತನ್ನ ಮನೆಯ ಮುಂದಿನ ಅಂಗಳದಲ್ಲಿ ಸೌದೆಯನ್ನು ಸೀಳುವ ಕೆಲಸದಲ್ಲಿ ತೊಡಗಿದ್ದ.ಕೊಡಲಿಯ ಏಟು ಮರದ ದಿಮ್ಮಿಗೆ ಪ್ರತಿಬಾರಿ ಬೀಳುವಾಗಲೂ ಅವನ ಮೈಯಲ್ಲಿ ಬೆವರು ತೊಟ್ಟಿಕ್ಕುತ್ತಿತ್ತು,ದಣಿದು ಬಾಯಾರಿದ್ದರೂ ಲೆಕ್ಕಿಸದೆ ಒಂದೇ ಸಮನೆ ದುಡಿಯುತ್ತಿದ್ದ ಮಗನನ್ನು ಕಂಡು ಅವನ ತಾಯಿ" ಮಗ ಶಾಖ ಜಾಸ್ತಿ ಅಗ್ತಿದೆ ಮನೆ ಒಳಕ್ಕೆ ಬಾ,ಆಮೇಲೆ ಸೌದೆ ಹೊಡೆದರೆ ಆಯ್ತು" ಅಂದಳು.ಆದರೆ ಅದನ್ನು ಲೆಕ್ಕಿಸದೆ ಸುಡು ಸುಡು ಬಿಸಲಿನಲ್ಲಿ ತನ್ನ ಕೆಲಸ ಮುಂದುವರೆಸಿದ ಮಗ ಪದೇ ಪದೇ ತಾಯಿಯ ಕೂಗನ್ನು ಕೇಳಿ ತಾಳ್ಮೆ ಕಳೆದು ಒಮ್ಮೆ ರೇಗಿದ"ಏ ನೀನು ಒಳಕ್ಕೆ ಹೋಗಮ್ಮಾ,ಹೋಗಿ ಬೇರೆ ಕೆಲಸ ನೋಡು"ಎಂದು ಬೈದ.ಒಳಕ್ಕೆಹೋದ ತಾಯಿ ವರುಶವೂ ತುಂಬದ ತನ್ನ ಮೊಮ್ಮಗನನ್ನು ಎತ್ತು ತಂದು ಸುಡುಬಿಸಿಲಿನಲ್ಲಿ ಮಲಗಿಸಿದಳು.ಇದನ್ನು ಕಂಡು ಮಗನಿಗೆ ಬಹಳ ಕೋಪ ಬಂದಿತು"ನಿಂಗೇನ್ ಬುದ್ಧಿಗಿದ್ಧಿ ಇದ್ದೀಯಾ? ಅಲ್ಲಾ ಮಗೂನ ಬಿಸಿಲಿನಲ್ಲಿ ಮಲಗಿಸಿದ್ದೀಯಲ್ಲಾ ಮೈ ಸುಡಲ್ವಾ?" ಎಂದು ಗದರಿದ.ಅದಕ್ಕೆ ತಾಯಿ "ಸುಟ್ಟರೆ ನಿಂಗೇನಾಗುತ್ತೆ?" ಎಂದು ಪ್ರಶ್ನಿಸಿದಳು.ಅದಕ್ಕೆ ಆ ರೈತ "ಅದು ನನ್ನ ಮಗು, ಕರಳು ಚುಳ್ ಅನ್ನಲ್ವಾ" ಎಂದ.ತಕ್ಷಣ ತಾಯಿ "ನೀನು ಬಿಸಿಲಿನಲ್ಲಿ ಸುಡ್ತಾ ಇದ್ದರೆ ನನ್ನ ಕರಳು ಏನು ಆಗಬೇಕು?" ಎಂದಳು.ಕೂಡಲೇ ತಾಯಿಯ ಮಮತೆ ಅರಿತು ಮನೆಯೊಳಕ್ಕೆ ಹೊರಟ ಮಗ.
ಆಳು
ಹಿಂದೊಮ್ಮೆ ಆಫ್ರಿಕಾ ದೇಶದಲ್ಲಿ ಕಮೇರಾ ಎಂಬ ರಾಜ ದರ್ಪದಿಂದ ಆಳುತ್ತಿದ್ದ.ಆತನನ್ನು ಕಂಡರೆ ಪ್ರಜೆಗಳು ಹೆದರಿ ನಡುಗುತ್ತಿದ್ದರು.ಸಭೆಯಲ್ಲಿ ಎಲ್ಲರನ್ನೂ ಕರೆಸಿ "ಈ ನಾಡಿಗೆ ನಾನೇ ರಾಜ,ಎಲ್ಲರೂ ನನ್ನ ಆಳುಗಳು" ಎಂದು ಗರ್ವದಿಂದ ಘೋಶಿಸಿದ.ಅದೇ ವೇಳೆಗೆ ಒಬ್ಬ ಮುದುಕ ಅಲ್ಲಿಗೆ ಬಂದು"ಸಾಧ್ಯವಿಲ್ಲ, ಎಲ್ಲರೂ ಈ ಭೂಮಿಯಲ್ಲಿ ಆಳುಗಳೇ"ಎಂದ.ಅದನ್ನು ಕೇಳಿ ಕುಪಿತನಾದ ರಾಜ ಆತನನ್ನು ಹತ್ತಿರಕ್ಕೆ ಕರೆದು "ಎಷ್ಟು ಧೈರ್ಯ ನಿನಗೆ ಈ ಮಾತನ್ನು ಹೇಳಲು,ಯಾರುನೀನು?"ಎಂದು ಕೇಳಿದ.ಅದಕ್ಕೆ ಮುದುಕ "ಅಯ್ಯಾ ದೊರೆ,ಕುಡಿಯಲು ನೀರಿಲ್ಲದೆ ಬಳಲುತ್ತಿರುವ ಪಕ್ಕದ ಊರಿಂದ ಬಂದವನು ನಾನು,ಒಂದು ಬಾವಿಯನ್ನು ತೋಡಿಸಿಕೊಡಿ ಎಂದು ಬೇಡಲು ಬಂದಿರುವೆ"ಎಂದ."ಓಹೋ ಹಾಗಾದರೆ ನೀನೊಬ್ಬ ಭಿಕ್ಷುಕ!ನನ್ನನ್ನೂ ಆಳು ಎಂದ ನಿನಗದೆಷ್ಟು ಸೊಕ್ಕು"ಎಂದು ಗದರಿದ.ಅದಕ್ಕೆ ಮುದುಕ ಶಾಂತಿಯಿಂದ ಉತ್ತರಿಸಿದ "ದೊರೆ ಬೇಕಿದ್ದರೆ ಸಾಯಂಕಾಲದ ಓಳಗೆ ಸಾಬೀತು ಮಾಡಿ ತೋರಿಸುತ್ತೇನೆ" ಎಂದ."ಸರಿ ನಿನ್ನ ಮಾತು ನಿಜವಾದರೆ ಬಾವಿಯನ್ನು ತೋಡಿಸಿ ಕೊಡುತ್ತೇನೆ"ಎಂದ.ತಕ್ಷಣ ಮುದುಕ ನಮ್ರತೆಯಿಂದ ತಲೆ ತಗ್ಗಿಸಿ ಕೈಯಲ್ಲಿದ್ದ ಊರುಗೋಲನ್ನು ರಾಜನಿಗೆ ಹಿಡಿಯಲು ಹೇಳಿ ಆತನ ಪಾದ ಸ್ಪರ್ಷ್ಸಿಸಿ ನಮಸ್ಕರಿಸಿದ,ನಂತರ ತನ್ನ ಕೋಲನ್ನು ವಾಪಸ್ ಕೇಳಿ ಪಡೆದ."ಇನ್ನು ಇದಕ್ಕಿಂತಾ ಮತ್ತೇನು ಪುರಾವೆ ಬೇಕು ಪ್ರಭು?" ಎಂದ ಮುದುಕ."ಪುರಾವೆ?" ರಾಜ ಕಣ್ಣರಳಿಸಿ ಕೇಳಿದ.ನಾನು ಕೋಲನ್ನು ಹಿಡಿಯಲು ಹೇಳಿದಾಗ ನೀವು ಹಿಡಿದಿರಲಿಲ್ಲವೇ? ಮತ್ತೆ ಕೊಡಿ ಎಂದಾಗ ಕೊಡಲಿಲ್ಲವೇ? ನಾನು ಹೇಳಿದ್ದನು ನೀವು ಮಾಡಿದಿರಿ"ಎಂದ.ರಾಜನ ಮುಖ ಮುದುಡಿತು.ಮುದುಕನ ಊರಿನಲ್ಲಿ ಒಂದಲ್ಲ ಎರಡು ಬಾವಿ ತೋಡಿಸಿಕೊಟ್ಟ.ರಾಜನ ಅಟ್ಟಹಾಸವೂ ಅಡಗಿತು.
ಓಟ
ಆಫ್ರಿಕಾ ದೇಶದಲ್ಲಿ ಆಗ ಬಿಳಿಯರು ಆಳುತ್ತಿದ್ದ ಕಾಲ.ಇಬ್ಬರು ಕರಿಯರು "ಬಿಳಿಯರಿಗೆ ಮಾತ್ರ" ಎನ್ನುವ ಸ್ಥಳದಲ್ಲಿ ಭೇಟಿಯಾದರು ಒಬ್ಬನಿಗೆ ಅಲ್ಲಿ ಕೆಲಸ ಮಾಡಲು ಅನುಮತಿ ಇತ್ತು, ಮತ್ತೊಬ್ಬನಿಗೆ ಅದಿರಲಿಲ್ಲ.ಸಿಕ್ಕಿಬಿದ್ದರೆ ಜೈಲು! ಅದೇ ವೇಳೆಗೆ ಒಬ್ಬ ಪೋಲೀಸ್ ಅವರ ಬಳಿಗೇ ಬರುವುದನ್ನು ಕಂಡು ಕೆಲಸ ಮಾಡಲು ಅನುಮತಿ ಇದ್ದ ಕರಿಯ ಮತ್ತೊಬ್ಬನಿಗೆ ನೀನು ಓಡು ನಾನು ಹಿಂದೆಯೇ ಬರುವೆ ಎಂದ.ಇಬ್ಬರೂ ಓಡತೊಡಗಿದರು.ಪೋಲೀಸ್ ಇನ್ನೂ ಯುವಕ ಹಾಗೂ ಗಟ್ಟಿ ಆಳಾದ್ದರಿಂದ ಹಿಂದೆ ಓಡುತ್ತಿದ್ದವನನ್ನು ಹಿಡಿದ."ತೋರಿಸು ನಿನ್ನ ಪೆರ್ಮಿಟ್ " ಅಂದ. ಜೇಬುಗಳೆಲ್ಲಾ ತಡಕಾಡಿ ತಡಮಾಡಿ ಪರ್ಮಿಟ್ ತೋರಿಸಿದ ಆ ಕರಿಯ.ಅಷ್ಟರಲ್ಲಿ ಪರ್ಮಿಟ್ ಇಲ್ಲದವ ಕೈಗೆ ಸಿಗದಷ್ಟು ದೂರ ಓಡಿದ್ದ."ಪರ್ಮಿಟ್ ಇದ್ದರೂ ನೀನು ಏಕೆ ಓಡಿದೆ" ಎಂದು ಪೋಲೀಸ್ ಪ್ರಶ್ನಿಸಿದ."ಡಾಕ್ಟರ್ ನನಗೆ ದಿನಾ ನಾಲ್ಕು ಮೈಲಿ ಓಡಲು ಹೇಳಿದ್ದಾರೆ" ಅಂದ."ಹಾಗಾದರೆ ನಿನ್ನ ಗೆಳೆಯ ಏಕೆ ಓಡುತ್ತಿದ್ದ?"ಪೋಲೀಸ್ ಮತ್ತೆ ಪ್ರಶ್ನಿಸಿದ."ಆತನಿಗೂ ಡಾಕ್ಟರ್ ಓಡಲು ಸಲಹೆ ನೀಡಿದ್ದಾರೆ"ಎಂದ.ಅದಕ್ಕೆ ಪೋಲೀಸ್ "ನನ್ನನ್ನು ಅಷ್ಟು ಪೆದ್ದನೆಂದು ತಿಳಿದಿರುವೆಯಾ, ನೀವು ಆರೋಗ್ಯಕ್ಕಾಗಿ ಓಡುತ್ತಿದ್ದರೆ ನಾನು ಹಿಂಬಾಲಿಸಿದರೂ ನಿಲ್ಲದೆ ಏಕೆ ಓಡಿದಿರಿ?"ಎಂದ ಅದಕ್ಕೆ ಆ ಜಾಣ ಕರಿಯ"ಅರೆ ನಿಮಗೂ ಡಾಕ್ಟರ್ ಓಡಲು ಹೇಳಿರಬಹುದೇನೋ ಅಂತ ತಿಳಿದು ಹಾಗೆ ಮಾಡಿದ್ವಿ"ಎಂದು ತಪ್ಪಿಸಿಕೊಂಡು ಹೊರಟೇಬಿಟ್ಟ.
ಬೆಕ್ಕಿಗೊಂದು ಹೆಸರು
ವಿದೇಶದಿಂದ ವಲಸೆ/ವ್ಯಾಪಾರಕ್ಕೆ ಬಂದವರು ಚೀನಾದೇಶದ ರಾಜನಿಗೆ ಒಂದು ಬೆಕ್ಕನ್ನು ಉಡುಗೊರೆಯಾಗಿ ಕೊಟ್ಟರು.ನೋಡಲು ಮುದ್ದಾಗಿದ್ದ ಮರಿಯನ್ನು ರಾಜ ಸದಾ ತನ್ನೊಂದಿಗೇ ಇಟ್ಟುಕೊಂಡು ಇರುತ್ತಿದ್ದ.ಎಲ್ಲರೂ ಅದರ ಹೆಸರು ಏನು ಇಟ್ಟಿದ್ದೀರಿ? ಎಂದು ಕೇಳಲು,ತನ್ನ ಆಸ್ಥಾನದಲ್ಲಿ ಸಾರ್ವಜನಿಕರ ಸಭೆ ಸೇರಿಸಿ ಸಲಹೆ ಕೇಳಿದ.ಒಬ್ಬ ಹೇಳಿದ "ಹುಲಿ"ಎಂದೇಕೆ ಇಡಬಾರದು?" ಎನ್ನುವಷ್ಟರಲ್ಲಿ "ಹುಲಿ? ಇಲ್ಲ "ಡ್ರಾಗನ್" ಹೆಚ್ಚು ಸೂಕ್ತ ಅನ್ನಿಸುತ್ತದೆ ಏಕೆಂದರೆ ಡ್ರಾಗನ್ ಹಾರಲೂ ಬಲ್ಲದು" ಎಂದ ಒಬ್ಬ.ಅರೆ ಡ್ರಾಗನ್ ಗಿಂತ ಮೇಲೆ ಹಾರಬಲ್ಲದೂ ಹಾಗೂ ಬೆಕ್ಕಿನ ಹಾಗೇ ಬಣ್ಣವೂ ಇರುವ "ಮೇಘ" ಎಂಬುದೇ ಸರಿಯಾದ ಹೆಸರು ಎಂದನು ಇನ್ನೊಬ್ಬ.ಗಾಳಿ ಮೇಘವನ್ನೇ ತಳ್ಳಿಬಿಡುತ್ತದೆ ಆದ್ದರಿಂದ"ಗಾಳಿ"ಎನ್ನುವ ಹೆಸರೇ ಸೂಕ್ತ ಎಂದ ಮತ್ತೊಬ್ಬ."ಗೋಡೆ"ಗಾಳಿಯನ್ನೇ ತಡೆಯಬಲ್ಲದ್ದು ಆದ್ದರಿಂದ "ಕಲ್ಲಿನ ಗೋಡೆ"ಯೇ ಒಳ್ಳೆಯ ಹೆಸರು ಎಂದ ಮೊಗದೊಬ್ಬ."ಅದು ಸ್ವಲ್ಪ ಉದ್ದವೆನಿಸುತ್ತದೆ ಅಲ್ಲವೇ" ಎಂದು ರಾಜನು ಹೇಳುವಷ್ಟರಲ್ಲಿ ಮತ್ತೊಬ್ಬ "ಇಲಿ"ಎಂದು ಇಟ್ಟರೆ ಹೇಗೆ? ಇಲಿ ಗೋಡೆಯನ್ನೇ ಕೊರೆದು ಬಿಲ ಮಾಡುತ್ತದೆ,ಆದರಿಂದ ಅದು ಹುಲಿ,ಡ್ರಾಗನ್,ಮೋಡ,ಗಾಳಿ,ಗೋಡೆ ಎಲ್ಲಕ್ಕಿಂತ ಬಲಶಾಲಿ ಎಂದ."ಆದರೆ ಬೆಕ್ಕನ್ನು ಇಲಿ ಎಂದು ಕರೆಯಲು ಸಾಧ್ಯವೇ?ಅದು ಎಲ್ಲದಕ್ಕಿಂತ ಬಲಶಾಲಿ ಇರಬಹುದು ಆದರೆ ಬೆಕ್ಕು ಅದಕ್ಕಿಂತ ಹೆಚ್ಚು ಶಕ್ತಿಶಾಲಿ ಆದ್ದರಿಂದ ಬೆಕ್ಕನ್ನು ಬೆಕ್ಕು ಎಂದೇ ಕರೆಯಬೇಕು ಪ್ರಭು" ಎಂದ ಒಬ್ಬ ಬುದ್ಧಿವಂತ ಯುವಕ.ಕಡೆಗೆ ಹೆಸರೇ ಇಲ್ಲದೆ ರಾಜನ ಬಳಿ ತನ್ನ ಜೀವನವಿಡೀ ಕಾಲ ಕಳೆಯಿತು ಆ ಬೆಕ್ಕು!
ತೆನ್ನಾಲಿ ರಾಮ
ಕೃಷ್ಣದೇವರಾಯನ ಆಸ್ಥಾನಕ್ಕೊಮ್ಮೆ ಚೀನಾದೇಶದ ರಾಯಭಾರಿ ಬಂದಾಗ ಕೆಲವು ಸೇಬುಗಳನ್ನು ತಂದ.ರಾಜನಿಗೆ ಅದನ್ನು ಒಪ್ಪಿಸುವಾಗ "ಸ್ವಾಮಿ ಈ ಹಣ್ಣನ್ನು ತಿಂದವರು ಅತಿ ಹೆಚ್ಚು ಕಾಲ ಬದುಕುತ್ತಾರೆ" ಎಂದ.ಪಕ್ಕದಲೇ ಇದ್ದ ತೆನ್ನಾಲಿ ರಾಮ ಒಂದು ಹಣ್ಣನ್ನು ತೆಗೆದು ಕಡಿದೇ ಬಿಟ್ಟ.ರಾಜನಿಗೆ ಬಹಳ ಕೋಪ ಬಂದಿತು"ನನಗಾಗಿ ತಂದ ಹಣ್ಣನ್ನು ನೀನೇಕೆ ಕಡಿದೆ?ಈತನ ತಲೆಯನ್ನೇ ಕಡಿಯಿರಿ" ಎಂದು ಸೇವಕರಿಗೆ ಆಜ್ಞೆ ಮಾಡಿದ.ರಾಮಕೃಷ್ಣ "ಅರೆ ಹಣ್ಣನ್ನು ಸ್ವಲ್ಪ ಕಡಿದದ್ದಕ್ಕೇ ತಲೆ ದಂಡವೇ? ಇನ್ನು ಇಡೀ ಹಣ್ಣನ್ನು ತಿಂದವನ ಗತಿ!"ಎಂದು ಗೊಣಗಿದ.ಕೃಷ್ಣದೇವರಾಯನಿಗೆ ತನ್ನ ತಪ್ಪಿನ ಅರಿವಾಯಿತು.ಮುಗುಳ್ನಕ್ಕು ಮತ್ತೊಂದು ಸೇಬನ್ನು ತೆನ್ನಾಲಿ ರಾಮನಿಗೆ ಕೊಟ್ಟ.
ತೆನ್ನಾಲಿ ರಾಮ
ಒಂದು ದಿನ ತೆನ್ನಾಲಿ ರಾಮನ ಕೆಟ್ಟ ವರ್ತನೆಯನ್ನು ಕಂಡು ರಾಜನು ಅವನನ್ನು"ನನ್ನ ರಾಜ್ಯದಿಂದ ಹೊರಗೆ ತೊಲಗು" ಎಂದ.ಇದಾದ ಕೆಲವು ದಿನಗಳ ನಂತರ ರಾಜ ವಿಹಾರಕ್ಕೆಂದು ತನ್ನ ಕುದುರೆಯ ಮೇಲೆ ಸವಾರಿ ಹೊರಟಿರಲು ತೆನ್ನಾಲಿ ರಾಮನು ಒಂದು ಮರವನ್ನು ಏರುತ್ತಿರುವುದನ್ನು ಕಂಡನು."ಅರೆ ನೀನು ಇಲ್ಲಿ ಏನು ಮಾಡುತ್ತಿರುವೆ ನನ್ನ ರಾಜ್ಯ ಬಿಟ್ಟು ತೊಲಗು ಎನ್ನಲಿಲ್ಲವೇ"ಎಂದ.ಅದಕ್ಕೆ ತೆನ್ನಾಲಿ ರಾಮನು "ಪ್ರಭು ಎಲ್ಲಿ ಹೋದರೂ ಇದು ಕೃಷ್ಣದೇವ ರಾಯರ ಸಾಮ್ರಾಜ್ಯ ಎನ್ನುತ್ತಾರೆ ಜನ, ಅದಕ್ಕೆ ನೇರ ಸ್ವರ್ಗಕ್ಕೇ ಹೊರಟಿರುವೆ"ಎಂದ ಅವನ ಜಾಣ್ಮೆಯ ಮಾತನ್ನು ಕೇಳಿ ರಾಜ ನಕ್ಕು ಆಸ್ಥಾನಕ್ಕೆ ಹಿಂತಿರುಗಲು ಹೇಳಿದ.
ಕೆಲಸಕ್ಕೆ ಬಾರದ್ದು
ಒಂಟೆ ಮರಿಯೊಂದು ತನ್ನ ತಾಯಿ ಒಂಟೆಯನ್ನು ಕೇಳಿತು"ಅಮ್ಮಾ ನಮಗೆ ಬೆನ್ನಿನಮೇಲೆ ಏಕೆ ಉಬ್ಬು ಇದೆ?".ಅದಕ್ಕೆ ತಾಯಿ ಒಂಟೆ"ಮಗೂ ಮರಳುಗಾಡಿನಲ್ಲಿ ಹೆಚ್ಚುದಿನಗಳ ಕಾಲ ನೀರು ಸಿಗದಿದ್ದರೂ ನಮ್ಮ ಬೆನ್ನಿನಲ್ಲಿ ನೀರು ಶೇಖರಿಸಿಡಲು ಭಗವಂತ ಕೊಟ್ಟಿದ್ದು"ಎಂದಿತು. "ಅಮ್ಮಾ ನಮ್ಮ ಕಾಲುಗಳು ಮಾತ್ರ ತೆಳ್ಳಗೆ ಮತ್ತು ಪಾದಗಳೇಕೆ ಇಷ್ಟು ಅಗಲವಾಗಿವೆ?" ಎಂದು ಮರಿ ಪ್ರಶ್ನಿಸಿತು.ತಾಯಿ ಒಂಟೆ "ಮಗೂ ಮರಳುಗಾಡಿನಲ್ಲಿ ಸಡೆಯಲು ಹಾಗಿದ್ದರೆ ಅನುಕೂಲ"ಎಂದಿತು.ಮರಿ ಮತ್ತೆ "ಅಲ್ಲಮ್ಮ ನಮ್ಮ ಕಣ್ಣಿನ ರೆಪ್ಪೆಗಳೇಕೆ ಇಷ್ಟೊಂದು ಉದ್ದವಾಗಿ ದಟ್ಟವಾಗಿದೆ?"ಎಂದು ಕೇಳಿತು.ತಾಯಿ "ಅದು ಮರಳುಗಾಡಿನಲ್ಲಿ ಸುಂಟರಗಾಳಿ ಬೀಸಿದಾಗ ಧೂಳಿನಿಂದ ನಮ್ಮ ಕಣ್ಣನ್ನು ಕಾಪಾಡುತ್ತದೆ ಮಗೂ ಅದೂ ಒಂಟೆಗಳಿಗೆ ದೇವರ ಕೊಡುಗೆ" ಎಂದು ಉತ್ತರಿಸಿತು. ಅದಕ್ಕೆ "ಹಾಗದರೆ ನಡಿ ಹೋಗೋಣ ಮರಳುಗಾಡಿಗೆ,ಈ ಮೃಗಾಲಯದಲ್ಲಿ ಏನು ಕೆಲಸ?"ಎಂದಿತು ಮೃಗಾಲಯದಲ್ಲೇ ಜನಿಸಿದ್ದ ಒಂಟೆ ಮರಿ.
ನೀತಿ:ಕೆಲಸಕ್ಕೆ ಬಾರದ ವಿದ್ಯೆ, ಬುದ್ಧಿ, ಹಣಬಲ,ತೋಳ್ ಬಲ,ಅಧಿಕಾರ.....ಏನಿದ್ದರೇನು? ಎಷ್ಟಿದ್ದರೇನು?
ಧೂಮಪಾನ
ಜಾನ್ ಮತ್ತು ಪೀಟರ್ ಒಮ್ಮೆ ಪ್ರಾರ್ಥನೆಗೆಂದು ಚರ್ಚಿಗೆ ಹೋದರು.ಅಷ್ಟೇನೂ ಜನರಿಲ್ಲದ ಆದಿನ ಚರ್ಚಿನಲ್ಲಿ ಪ್ರಾರ್ಥನೆ ಪೀಟರನಿಗೆ ಬೋರ್ ಎನಿಸಿ ಸಿಗರೇಟ್ ಸೇದಲು ಮನಸ್ಸು ಮಾಡಿದ.ಆದರೆ ಚರ್ಚ್ ಒಳಗೆ ಸೇದಲು ಅನುಮತಿ ಇರಲಿಲ್ಲ.ಅದಕ್ಕೆ ಪೀಟರ್ ಫಾದರ್ ನನ್ನು "ಸ್ವಾಮೀ ಪ್ರಾರ್ಥನೆ ಮಾಡುತ್ತಾ ಸಿಗರೇಟ್ ಸೇದಬಹುದಾ?"ಎಂದು ಕೇಳಿದ.ಅದಕ್ಕೆ ಪಾದ್ರಿ ಒಪ್ಪಲಿಲ್ಲ.ಜಾನ್ ಗೊಳ್ಳನೆ ನಕ್ಕು,"ನೋಡು ಫೀಟರ್ ಅದೇ ಪ್ರಶ್ನೆಯನ್ನು ನಾನು ಕೇಳ್ತೀನಿ ಏನು ಉತ್ತರ ಬರುತ್ತೋ ನೋಡ್ತಿರು" ಎಂದು ಪಾದ್ರಿಯ ಬಳಿ ಹೋಗಿ" ಫಾದರ್ ನಾವು ಯಾವ ಯಾವ ಹೊತ್ತಿನಲ್ಲಿ ಪ್ರಾರ್ಥನೆ ಮಾಡಬಹುದು?"ಎಂದ. ಅದಕ್ಕೆ ಪಾದ್ರಿಯು"ಮಗೂ ನೀವು ಯಾವಾಗ ಬೇಕಾದರೂ ಪ್ರಾರ್ಥನೆ ಮಾಡಬಹುದು. ಕುಳಿತಲ್ಲಿ,ನಿಂತಲ್ಲಿ.ಮಲಗಿದಾಗ, ಊಟ ಮಾಡುವಾಗ,ಪ್ರಯಾಣ ಮಾಡುವಾಗ,ಯಾವುದೇ ಕೆಲಸಮಾಡುವಾಗ,ಇನ್ನೂ ಯಾವಾಗ ಬೇಕಾದರೂ" ಎಂದ. ತಕ್ಷಣ ಜಾನ್ "ಅಂದರೆ ಸಿಗರೇಟು ಸೇದುತ್ತಿರುವಾಗಲೂ ಮಾಡಬಹುದು ಎಂದಾಯ್ತು"ಫಾದರ್ ಗೆ ಕೂಡಲೇ ಉತ್ತರ ಕೊಡಲಾಗಲಿಲ್ಲ,ಜಾನ್ ಪೀಟರ್ ಕಡೆ ಹೆಬ್ಬೆಟ್ಟು ತೋರಿಸಿ "ಎಸ್" ಅಂದ.
ಮೃಗರಾಜ(ಹಾಸ್ಯ)
ಕಾಡಿನ ರಾಜನಾದ ಸಿಂಹವು ಆಗಿಂದಾಗ್ಗೆ ಸಭೆ ಸೇರಿ ಎಲ್ಲ ಪ್ರಾಣಿಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ಹೆದರಿಸುತ್ತಾ ಕಾಲಕಳೆದಿತ್ತು.ಒಮ್ಮೆ ಆನೆಯ ಮಾತು ಕೇಳಿ ಕೆಲವು ಪ್ರಾಣಿಗಳು ಬೇರೆ ಪ್ರಾಂತ್ಯಕ್ಕೆ ಕಾಲಿಟ್ಟವು.ಇದನ್ನು ಕೇಳಿದ ಸಿಂಹವು ಕೋಪಗೊಂಡು ಮತ್ತೆ ಸಭೆ ಸೇರಿಸಿ ಒಂದೊಂದು ಪ್ರಾಣಿಯಮೇಲೂ ಎರಗಿ "ಯಾರು ಈ ಕಾಡಿಗೆ ರಾಜ?"ಎಂದು ಘರ್ಜಿಸಿತು,ಚೂಪಾದ ಉಗುರು,ಕೆರಳಿದ ಕೇಸರನನ್ನು ಕಂಡು ಬೆದರಿ ಎಲ್ಲವೂ"ನೀನೇ,ನೀನೇ"ಎಂದವು, ಸಿಂಹವು ಆನೆಯ ಮೇಲೂ ಎರಗಿತು,ಜೋರಾಗಿ ಘರ್ಜಿಸಿ "ಯಾರು ಈ ಕಾಡಿಗೆ ರಾಜ?"ಎಂದಿತು, ಆನೆ ಒಮ್ಮೆಲೇ ತನ್ನ ಸೊಂಡಿಲಿನಿಂದ ಸಿಂಹವನ್ನು ತನ್ನ ಹಣೆಯ ಮೇಲಿಂದ ಕಿತ್ತು ದೂರಕ್ಕೆ ಎಸೆಯಿತು,ಕಾಲು ಮುರಿದು ತಲೆ ತಿರುಗುತ್ತಿದ್ದರೂ ಸಿಂಹ "ನಿನಗೆ ಉತ್ತರ ಗೊತ್ತಿಲ್ಲದಿದ್ದರೆ ಕೋಪ ಮಾಡಿಕೊಳ್ಳಬೇಡ ಗಜರಾಜ"ಎಂದು ಗೊಣಗುತ್ತಾ ಗುಹೆ ಸೇರಿತು.
ಗೆಳೆಯರು
ಅದೊಂದು ಹಳ್ಳಿಯ ತೋಟದಮನೆ.ಸುತ್ತಲೂ ಹುಲ್ಲುಗಾಡು.ಎಲ್ಲೆಡೆ ಮೇಯುತ್ತಿರುವ ದನ,ಕರು,ಕುರಿ,ಮೇಕೆಗಳು. ಅಲ್ಲೇ ಒಂದು ಮರದಡಿಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ಮೇಕೆಯೊಂದು ತನಗೆ ಕೆಲವು ದಿನಗಳಿಗೆ ಬೇಕಾದದಷ್ಟು ಹುಲ್ಲನ್ನು ತನ್ನ ಬಳಿಯಲ್ಲೇ ಇಟ್ಟುಕೊಂಡು ಮಲಗಿತ್ತು. ಬೇರೆ ಮೇಕೆಗಳೂ ಸುತ್ತಲೂ ಮೇಯುತ್ತಾ ಮೇಯುತ್ತಾ ಆಸೆಯಿಂದ ಈ ಮೇಕೆ ಇಟ್ಟುಕೊಂಡಿದ್ದ ಹುಲ್ಲನ್ನೂ ತಿನ್ನಲು ಬಂದವು.ಆಗ ಆ ಬಡ ಮೇಕೆ " ಹೇ ದೂರ ಹೋಗಿ, ನನ್ನ ಅನಾರೋಗ್ಯದಿಂದ ನಾನು ಸಾಯುವುದಿಲ್ಲ ಆದರೆ ನಿಮ್ಮ ದುರಾಸೆಯಿಂದಂತೂ ಹೌದು,ಥೂ ತೊಲಗಿ ದೂರ" ಎಂದಿತು.
ನೀತಿ: ಅವಿವೇಕಿ ಗೆಳೆಯರು ಶತ್ರುಗಳಿಗಿಂತ ಅಪಾಯ
ಜಂಭದ ಕತ್ತೆ
ಪ್ರತಿಮೆಗಳನ್ನು ಮಾಡುವ ಶಿಲ್ಪಿಯೊಬ್ಬ ತನ್ನ ಕುಶಲದಿಂದ ಎಂದಿನಂತೆ ಒಂದು ಸುಂದರ ಪ್ರತಿಮೆಯನ್ನು ಕೆತ್ತಿ ಒಂದು ಕತ್ತೆಯಮೇಲೆ ಸಾಗಿಸುತ್ತಿದ್ದ.ಹಾದಿಯಲ್ಲಿ ಹೋಗುವಾಗ ಅದನ್ನು ಕಂಡವರೆಲ್ಲಾ ಒಂದು ಕ್ಷಣ ನಿಂತು ಅದಕ್ಕೆ ನಮಸ್ಕರಿಸಿ ಮುಂದೆ ಹೋಗುತ್ತಿದ್ದರು.ಆದರೆ ಅದನ್ನು ಹೊತ್ತು ಸಾಗುತ್ತಿದ್ದ ಕತ್ತೆಯು ಎಲ್ಲರೂ ನನ್ನನ್ನೇ ನೋಡುತ್ತಿದ್ದಾರೆ ಎಂದು ತಿಳಿದು ಜಂಭ ಪಟ್ಟಿತು,ಸ್ವಲ್ಪ ಹೊತ್ತಿನ ಬಳಿಕ ಜನರೆಲ್ಲಾ ಕಿಕ್ಕಿರಿದು ನೋಡುತ್ತಿರಲು ಇದ್ದಕ್ಕಿದ್ದಹಾಗೇ ಮುಂದೆ ಸಾಗದೇ ಒಂದು ಕಡೆ ಕಲ್ಲಿನ ಹಾಗೆ ನಿಂತಿತು.ಶಿಲ್ಪಿ ಎಷ್ಟು ಜಗ್ಗಿದರೂ ಕದಲಲಿಲ್ಲ ಕತ್ತೆ, ಸರಿ ಮುಂದೇನೂ ಮಾಡಲು ತೋಚದೆ ಶಿಲ್ಪಿ ಆ ಶಿಲೆಯನ್ನೇ ಇತ್ತಿಕೊಂಡು ಮುಂದೆ ಸಾಗಿದ.ಕತ್ತೆ ಜಂಭದಿಂದ ತನ್ನ ಕತ್ತನು ಎತ್ತಿ ಸುತ್ತಲೂ ನೋಡಿತು,ಯಾರೂ ಕಾಣುತ್ತಿಲ್ಲ ಎಲ್ಲರೂ ಆ ಶಿಲ್ಪಿ ಹೊತ್ತು ಸಾಗುತ್ತಿದ್ದ ಪ್ರತಿಮೆಯನ್ನೇ ಹಿಂಬಾಲಿಸುತ್ತಿದ್ದರು.ಕತ್ತೆಗೆ ತನ್ನ ತಪ್ಪು ಅರಿವಾಯಿತು,ಓಡಿ ಹೋಗಿ ಗುಂಪನ್ನು ಸೇರಿತು.ಮತ್ತೆ ಶಿಲೆಯನ್ನು ತನ್ನ ಬೆನ್ನಿಗೇರಿಸಿ ಮುಂದೆ ಸಾಗಿತು.
ಚೋರ ಬಾಲಕ
ಆಶ್ರಮವೊಂದರಲ್ಲಿ ಹತ್ತಾರು ವಿಧ್ಯಾರ್ಥಿಗಳು ಕಲಿಯುತ್ತಿದ್ದರು.ಅವರಲ್ಲಿ ಒಬ್ಬ ಹುಡುಗ ಬೇರೊಬ್ಬರ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ.ಗುರುಗಳಿಗೆ ದೂರು ಕೊಟ್ಟರೂ ಅವರು ಸುಮ್ಮನೆ ಇದ್ದರು.ಒಂದು ದಿನ ಅವನ ಕಳ್ಳತನ ಮಿತಿಮೀರಿ ದೂರು ಕೊಟ್ಟರೂ ತಮ್ಮ ಗುರುಗಳೂ ಆತನಿಗೆ ಏನೂ ಕ್ರಮ ತೆಗೆದುಕೊಳ್ಳದಿರುವುದನ್ನು ಕಂಡು ಬೇರೆ ವಿದ್ಯಾರ್ಥಿಗಳೆಲ್ಲಾ ಆ ಶ್ರಮವನ್ನೇ ತ್ಯಜಿಸಿ ಹೋಗಲು ನಿರ್ಧರಿಸಿದರು.ಆಗ ಗುರುಗಳು ವಿಷಯ ತಿಳಿದು ಎಲ್ಲರನ್ನೂ ಕರೆದು"ಮಕ್ಕಳೇ ನೀವೆಲ್ಲಾ ಒಳ್ಳೆಯ ಮಕ್ಕಳು ಇಲ್ಲಿಂದ ಹೊರಟರೂ ನಿಮಗೆ ಬೇರೆ ಆಶ್ರಮ ಸೇರುವುದು ಕಷ್ಟವಿಲ್ಲ,ಆದರೆ ನಿಮ್ಮ ಸಹೋದರನಿಗೆ ಎಲ್ಲಿ ಆಶ್ರಯ ಸಿಗುತ್ತದೆ ಹೇಳಿ,ಅವನಿಗಿನ್ನೂ ತಪ್ಪು-ಸರಿಗಳ ಅರಿವೇ ಇಲ್ಲ,ನೀವೆಲ್ಲಾ ಹೋದರೂ ಆತನನ್ನು ಕೈಬಿಡುವಹಾಗಿಲ್ಲ ನಾನು" ಎಂದರು. ತುಂಟ ಹುಡುಗನ ಕಣ್ಣಿನಿಂದ ಕೆನ್ನೆಯ ಮೇಲೆ ನೀರು ಹರಿಯಿತು.ತನ್ನ ತಪ್ಪನ್ನರಿತು ಕ್ಷಮೆ ಯಾಚಿಸಿದ.
ನಾಯಿ ಮತ್ತು ಮೊಲ
ನಾಯಿಯೊಂದು ಮೊಲವನ್ನು ಅಟ್ಟಿಸಿಕೊಂಡು ಓಡಿತು,ಮೊಲ ಬಹಳ ವೇಗವಾಗಿ ಓಡಿ ಕಣ್ ತಪ್ಪಿಸಿಕೊಂಡು ಮರೆಯಾಯಿತು. ಇದನ್ನು ನೋಡುತ್ತಿದ್ದ ಬೆಕ್ಕೊಂದು "ನಿನ್ನ ಕೈಯಲ್ಲಿ ಅಷ್ಟು ಸುಲಭವಾಗಿ ಓಡಲಾಗಲಿಲ್ಲ,ಅಬ್ಬ ಮೊಲ ಅದೆಷ್ಟು ವೇಗ !"ಎಂದು ಅಣುಗಿಸಿತು. .ಅದಕ್ಕೆ ನಾಯಿ "ನೀನೇಕೆ ಆಶ್ಚರ್ಯಗೊಂಡಿದ್ದೀಯೆ ನಾನು ಮೋಜಿಗೆ ಅಟ್ಟಿಸಿಕೊಂಡು ಹೋದೆ,ಆದರೆ ಅದು ಪ್ರಾಣ ಭೀತಿಯಿಂದ ಓಡಿತು"ಎಂದಿತು.
ನೀತಿ: ನಮ್ಮ ವರ್ತನೆಯು ಪರಿಸ್ಥಿತಿಗೆ ಅನುಗುಣವಾಗಿರುತ್ತದೆ.
ಲಕ್ಷ್ಮೀಪತಿ
ಚಿಕ್ಕ ಊರೊಂದರಲ್ಲಿ ಒಬ್ಬ ವ್ಯಾಪಾರಿ ಇದ್ದ.ವ್ಯಾಪಾರ ಚೆನ್ನಾಗೇ ನಡೆಯುತ್ತಿತ್ತು,ಆದರೆ ಆತನಿಗೆ ಕಡಿಮೆ ಅವಧಿಯಲ್ಲೇ ಅತಿ ಹೆಚ್ಚು ಮಾಡಬೇಕೆಂಬ ಆಸೆಯಾಯಿತು. ಎಷ್ಟು ದುಡಿದರೂ ಹೆಚ್ಚು ಹಣ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ.ಕಡೆಗೆ ಒಂದು ದಿನ ತನ್ನ ಮನೆಯಲ್ಲೇ ಧನಲಕ್ಷ್ಮಿಯನ್ನು ಕುರಿತು ಧ್ಯಾನಕ್ಕೆ ಕುಳಿತ.ಬಹಳ ನಿಷ್ಟೆಯಿಂದ ದಿನ ವಾರ ತಿಂಗಳುಗಳ ಪರಿವೇ ಇಲ್ಲದೆ ಧ್ಯಾನಿಸಿದ.ಒಂದುದಿನ ಅವನ ಕಣ್ಮುಂದೆ ಲಕ್ಶ್ಮಿ ಪ್ರತ್ಯಕ್ಷವಾದಳು,ಏನು ವರ ಬೇಕೆಂದು ಕೇಳಲು ಆಸ್ತಿ ಅಂತಸ್ತು ಹಣ ಬಂಗಾರ ಎಲ್ಲವನ್ನೂ ಕೇಳತೊಡಗಿದ.ಅದಕ್ಕೆ ಲಕ್ಷ್ಮಿಯು "ಅಯ್ಯಾ ನಾನು ವರ ಕೊಡುವುದಾದರೆ ಈ ಊರಿನವರಿಗೆಲ್ಲಾ ಕೊಡುವೆ,ನಿನಗೊಬ್ಬನಿಗೇ ಕೊಡಲಾಗದು"ಎಂದಳು.ವ್ಯಾಪಾರಿ ಯಾರಿಗೆ ವರಕರುಣಿಸಿದರೇನು ನನಗೆ ಸಿಕ್ಕರೆ ಸಾಕು ಎಂದು "ಹೂ"ಎಂದ.ಲಕ್ಷ್ಮೀಪತಿ ಆದ. ಮರುದಿನ ಮನೆಯಲ್ಲೆಲ್ಲಾ ಚಿನ್ನದ ಆಭರಣಗಳು!ನಾಣ್ಯಗಳು!ವಜ್ರ !ವೈಡೂರ್ಯಗಳು! ಅಪಾರ ಸಂತೋಷವಾಯಿತು ವ್ಯಾಪಾರಿಗೆ.ಸರಿ ಬಹಳ ದಿವಸಗಳಿಂದ ತಪಸ್ಸಿನ ಹಸಿವಿನಲ್ಲಿದ್ದ ಕಾರಣ ಏನಾದರೂ ದಿನಸಿ ತರಕಾರಿಗಳನ್ನು ತರಲು ಅಂಗಡಿಗೆ ಹೋದ.ಅಂಗಡಿ ಬಾಗಿಲು ಮುಚ್ಚಿತ್ತು,ಕಾರಣ ಕೇಳಲು ಅವರ ಬಳಿಯೂ ಸಾಕಷ್ಟು ಆಸ್ತಿ ಬಂದಾದ ಕಾರಣ ಅವರು ಚಿಲ್ಲರೆ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ್ದರು,ಸರಿ ಫಲಹಾರ ಮಂದಿರಕ್ಕೆ ಹೋದರೂ ಅದೇ ಮಾತೆ,ಹೀಗೇ ಎಲ್ಲರೂ ವ್ಯಾಪಾರ ಮಾಡುವುದನ್ನು ಬಿಟ್ಟು ಚಿನ್ನದ ನಾಣ್ಯಗಳನ್ನು ಹಿಡಿದು ಓಡಾಡ ತೊಡಗಿದರು.ಕಡೆಗೆ ಆ ವ್ಯಾಪಾರಿಗೆ ತನ್ನ ತಪ್ಪು ಅರಿವಾಗಿ ಮತ್ತೆ ಲಕ್ಷ್ಮಿಯನ್ನು ಕುರಿತು ಧ್ಯಾನ ಮಾಡಿ ಎಲ್ಲವನ್ನೂ ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿದ.ಮೊದಲಿನಂತೆ ಕಷ್ಟಪಟ್ಟು ದುಡಿದು ತೃಪ್ತಿಯಿಂದ ಜೀವನ ಮಾಡಿದ.
ಅನುಕೂಲ
ಬೆಸ್ತನೊಬ್ಬ ಪ್ರತಿದಿನವೂ ತಾನು ಹಿಡಿದ ಮೀನುಗಳನ್ನು ಒಂದು ಗಾಡಿಯಲ್ಲಿ ತುಂಬಿಕೊಂಡು ಹೋಗುತ್ತಿದ್ದ.ದಾರಿಯಲ್ಲಿ ಒಂದು ನರಿಗೆ ಅಷ್ಟೊಂದು ಮೀನುಗಳನ್ನು ನೋಡಿ ಬಾಯಿಯಲ್ಲಿ ನೀರೂರಿ ಬಂದಿತು.ಹೇಗಾದರೂ ಮಾಡಿ ಮೀನುಗಳನ್ನು ತಿನ್ನಬೇಕೆಂದು ಉಪಾಯದಿಂದ ಬೆಸ್ತ ಬರುವ ದಾರಿಯಲ್ಲಿ ಸತ್ತಂತೆ ಮಲಗಿತು,ಬೆಸ್ತನು ಇರಲಿ ಈ ಸತ್ತ ನರಿಯ ಚರ್ಮವನ್ನು ಮಾರಿ ಹಣವನ್ನು ಪಡೆಯಬಹುದು ಎಂದು ಆಲೋಚಿಸಿ ನರಿಯನ್ನು ಎತ್ತಿ ಗಾಡಿಯಲ್ಲಿ ಮೀನುಗಳಿದ್ದ ಕಡೆ ಹಾಕಿದನು. ದಾರಿಯುದ್ದಕ್ಕೂ ನರಿ ಹೊಟ್ಟೆತುಂಬುವಷ್ಟು ಮೀನುಗಳನ್ನು ಕಬಳಿಸಿತು.ಬೆಸ್ತನಿಗೆ ತಿಳಿಯದ ಹಾಗೆ ಕೆಳಕ್ಕೆ ಜಿಗಿದು ಕಾಡಿಗೆ ಓಡಿತು,ಇದನ್ನು ಕಂಡ ತೋಳವೊಂದು "ಆ ಗಾಡಿಯಲ್ಲಿ ನೀನೇನು ಮಾಡುತ್ತಿದ್ದೆ?"ಎಂದು ವಿಚಾರಿಸಲು,ನರಿ ನಡೆದದ್ದೆಲ್ಲಾ ವಿವರಿಸಿತು.ತೋಳವೂ ಥಟ್ಟನೆ ಓಡಿ ತಾನೂ ಆ ಬೆಸ್ತನ ಗಾಡಿಯ ಮುಂದೆ ಸತ್ತಂತೆ ಮಲಗಿತು.ಬೆಸ್ತನಿಗೆ ಮತ್ತಷ್ಟು ಸಂತೋಷವಾಗಿ ಆ ತೋಳದ ಚರ್ಮವನ್ನು ಮಾರಿ ಹಣ ಮಾಡಬಹುದೆಂದು ಅದನ್ನು ಎತ್ತಲು ಹೋದನು ತೋಳವು ಭಾರವಾಗಿದ್ದ ಕಾರಣ ಒಂದು ಗೋಣಿ ಚೀಲದಲ್ಲಿ ಅದನ್ನು ತಳ್ಳಿ ಬಿಗಿಯಾಗಿ ಕಟ್ಟಿ ಗಾಡಿಯೊಳಕ್ಕೆ ಧೊಪ್ಪೆಂದು ಎಸೆದು ಮುಂದೆ ಸಾಗಿದನು.ತೋಳಕ್ಕೆ ಒಂದು ಮೀನನ್ನೂ ತಿನ್ನಲಾಗಲಿಲ್ಲ.ಮನೆಗೆ ಬಂದಾಗ ಬೆಸ್ತನು ಚೀಲವನ್ನು ಬಿಚ್ಚಿದಕೂಡಲೇ ಪ್ರಾಣ ಭೀತಿಯಿಂದ ಕಾಡಿನ ಕಡೆ ಓಡಿತು
ನೀತಿ: ಒಬ್ಬರಿಗಾದ ಅನುಕೂಲ ಮತ್ತೊಬ್ಬರಿಗೂ ಆಗದೇ ಇರಬಹುದು
ಸಹವಾಸ
ಕೊಕ್ಕರೆಗಳೆಲ್ಲಾ ಬಾನಿನಲ್ಲಿ ಹಾರುತ್ತಾ ಒಂದು ಹೊಲದಲ್ಲಿ ಇಳಿದು ಬೆಳೆಯನ್ನು ತಿನ್ನಲು ಶುರು ಮಾಡಿದವು,ಅಷ್ಟರಲ್ಲಿ ರೈತನು ಹಾಕಿದ್ದ ಬಲೆಗೆ ಅವುಗಳ ಕಾಲುಗಳು ಸಿಕ್ಕಿ ವಿಲಿವಿಲಿ ಒದ್ದಾಡತೊಡಗಿದವು.ಅಲ್ಲಿಗೆ ಬಂದ ರೈತನನ್ನು ಕಂಡು ಕೊಕ್ಕರೆಯೊಂದು "ಅಯ್ಯಾ ನಾನು ಎಂದಿಗೂ ಬೇರೆಯವರ ಹೊಲಕ್ಕೆ ನುಗ್ಗಿ ಬೆಳೆ ಕದ್ದು ತಿನ್ನುವವನಲ್ಲ,ಈ ದಿನ ನನ್ನ ಗೆಳೆಯರ ಜೊತೆ ಸೇರಿ ಹೀಗೆ ಮಾಡಿದೆ ನಾನು ಬಹಳ ಸಭ್ಯ ನನ್ನನು ಬಿಟ್ಟುಬಿಡು" ಎಂದಿತು.ಅದಕ್ಕೆ ಆ ರೈತನು"ನೀನು ಹೇಳುವುದು ನಿಜವೇ ಇರಬಹುದು ಆದರೆ ಕಳ್ಳರಜೊತೆ ನೀನೂ ಸಿಕ್ಕಿರುವೆ ಆದ್ದರಿಂದ ನೀನೂ ಕಷ್ಟ ಅನುಭವಿಸು" ಎಂದು ಹೇಳಿ ಎರಡು ಮೂರು ದಿನಗಳ ಬಳಿಕ ಎಲ್ಲಾ ಕೊಕ್ಕರೆಗಳನ್ನು ಬಿಡುಗಡೆ ಮಾಡಿದನು.
ನೀತಿ:ಜನರು ನಿನ್ನ ಸಹವಾಸಿಗಳಂತೆ ನಿನ್ನನ್ನೂ ನೋಡುತ್ತಾರೆ
ಕನಸಿನ ಲೋಕ (ಹಾಸ್ಯ)
ಶಾಲೆಯ ಮೇಷ್ಟ್ರು ದಿನಾ ಮಧ್ಯಾಹ್ನದ ವೇಳೆ ಊಟದ ಬಳಿಗ ಸ್ವಲ್ಪಕಾಲ ಮಕ್ಕಳ ಎದಿರಿನಲ್ಲೇ ನಿದ್ದೆ ಮಾಡುತ್ತಿದ್ದರು.ಮಕ್ಕಳು ಕೇಳಿದರೆ "ನಾನು ಹಿಂದಿನ ಕಾಲದ ಮಹಾರ್ಷಿಗಳನ್ನು ಭೇಟಿ ಮಾಡಲು ಕನಸಿನ ಲೋಕಕ್ಕೆ ಹೋಗಿದ್ದೆ"ಎನ್ನುತ್ತಿದ್ದರು.ಒಂದು ದಿನ ಸುಡುವ ಬಿಸಿಲಿನ ಧಗೆಗೆ ಸುಸ್ತಾಗಿದ್ದ ಮಕ್ಕಳು ಹಾಗೇ ಕೂತಲ್ಲೇ ನಿದ್ದೆ ಮಾಡುತ್ತಿದ್ದರು ಇದನ್ನು ಕಂಡ ಮೇಷ್ಟ್ರು "ಮಕ್ಕಳೇ ಏನು ಮಾಡುತ್ತಿದ್ದೀರಿ"ಎಂದು ರೇಗಿದರು.ಅದಕ್ಕೆ ಮಕ್ಕಳು"ನವೂ ಹಿಂದಿನ ಕಾಲದ ಋಷಿಗಳನ್ನು ಕಾಣಲು ಕನಸಿನ ಲೋಕಕ್ಕೆ ಹೋಗಿದ್ದೆವು" ಅದಕ್ಕೆ ಮೇಷ್ಟ್ರು"ಏನಂದ್ರು ಋಷಿಗಳು?" ತಕ್ಷಣ ಗುರುಗಳಂತೇ ಸಮಯಸ್ಪೂರ್ತಿ ಯಿಂದ ಮಕ್ಕಳು "ಇಲ್ಲಿ ದಿನಾ ಮಧ್ಯಾಹ್ನ ನಮ್ಮ ಮೇಷ್ಟ್ರು ಬರ್ತಾರಾ ಅಂದ್ವಿ,ಅದಕ್ಕೆ ಇಲ್ಲಿ ಯಾರೂ ಬಂದಿಲ್ಲವಲ್ಲಾ ಅಂದ್ರು" ಹುಡುಗರ ಜಾಣ್ಮೆ ಗುರುಗಳ ತಲೆ ತಗ್ಗಿಸುವ ಹಾಗಾಯಿತು.
ಚಂಡಮಾರುತ
ಹಡಗಿನಲ್ಲಿ ಸಮುದ್ರ ಯಾನ ಮಾಡುತ್ತಿರಲು ಭಾರೀ ಅಲೆಗಳು ಎದ್ದು ಹಡಗು ಮುರಿದು ನೀರಿನಪಾಲಯಿತು,ಕೈಗೆ ಸಿಕ್ಕ ಮರ ಮುಂತಾದ ತೇಲುವ ವಸ್ತುಗಳನ್ನು ಹಿಡಿದು ಕೆಲವರು ದಡ ಸೇರಿದರು.ಅದರಲ್ಲೊಬ್ಬ ನೀರಿನಿಂದೆದ್ದು ಬಂದು ಶಾಂತವಾದ ಸಮುದ್ರವನ್ನು ಕಂಡು `ಎಲೈ ಸಮುದ್ರವೇ ಈಗ ನೀನು ಎಷ್ಟು ಪ್ರಶಾಂತವಾಗಿದ್ದೀಯೆ ಇದೇ ಸ್ವಲ್ಪ ಕಾಲದ ಮೊದಲು ಅದೆಷ್ಟು ಕ್ರೂರವಾಗಿ ಅಲೆಗಳೆಬ್ಬಿಸಿ ನಮ್ಮನ್ನೆಲ್ಲಾ ಅಪ್ಪಳಿಸಿದೆ?'ಅಂದ. ತಕ್ಷಣ ಸಮುದ್ರದೇವತೆ ಒಂದು ಹೆಣ್ಣಿನ ರೂಪತಾಳಿ ಬಂದು `ಅಯ್ಯಾ ನಾನು ಯಾವಾಗಲೂ ಪ್ರಶಾಂತವಾಗೇ ಇರುತ್ತೇನೆ ಆದರೆ ರಭಸವಾಗಿ ಬೀಸುವ ಚಂಡಮಾರುತದ ಗಾಳಿ ನನ್ನನ್ನು ದೈತ್ಯದ ಹಾಗೆ ಆಡಲು ಕಾರಣ ಆಗುತ್ತದೆ'
ನೀತಿ: ಬೇರೊಬ್ಬರಿಂದ ನಿಯಂತ್ರಿಸಲ್ಪಡುವವರು ಬಹಳ ಅಪಾಯಕಾರಿ.
ಉಪಕಾರಿ
ಹಿಂದೊಮ್ಮೆ ಇಬ್ಬರು ವ್ಯಾಪಾರಿಗಳು ಕಾಲ್ನಡಿಗೆಯಲ್ಲೇ ಊರೂರು ಅಲೆಯುತ್ತಾ ತಮ್ಮಕೆಲಸ ಮಾಡುತ್ತಿರಲು, ಮಧ್ಯಾಹ್ನದ ಉರಿಬಿಸಿಲನ್ನು ತಡೆಯಲಾರದೆ ಒಂದು ಮರದ ಬಳಿ ದಣಿವು ಆರಿಸಿಕೊಳ್ಳಲು ಕುಳಿತರು. ತಂಪಾದ ನೆರಳಿನಲ್ಲಿ ಕುಳಿತಲ್ಲೇ ತಾವು ತಂದ ಬುತ್ತಿ ಬಿಚ್ಚಿ ಹಸಿವನ್ನೂ ನಿವಾರಿಸಿಕೊಂಡರು. ಹಾಗೇ ಮರಕ್ಕೆ ಒರಗಿ ಸ್ವಲ್ಪ ವಿಶ್ರಾಂತಿ ಪಡೆದರು. ಸ್ವಲ್ಪ ಸಮಯದ ನಂತರ ಒಬ್ಬ ಮರದ ಕಡೆ ನೋಡುತ್ತಾ "ಅರೆ ಇದೇನು ಮರವಯ್ಯಾ ಒಂದು ಹಣ್ಣೂ ಬಿಡುವುದಿಲ್ಲ' ಅಂದ.ಅದಕ್ಕೆ ಮತ್ತೊಬ್ಬ `ಹಣ್ಣು ಬಿಡುವುದಿರಲಿ ಮರ ಕೂಡಾ ಗಟ್ಟಿ ಇಲ್ಲ, ಯಾವ ಕೆಲಸಕ್ಕೂ ಉಪಯೋಗಿಸಲು ಯೋಗ್ಯವಿಲ್ಲ, ಶುದ್ಧ ಅಪ್ರಯೋಜಕ ಮರ' ಎಂದ. ತಕ್ಷಣ ಆ ಮರಕ್ಕೆ ಕೋಪ ಬಂದು 'ಎಲೈ ಮಾನವರೇ ಈಗ ನನ್ನ ನೆರಳನ್ನಾದರೂ ಅನುಭವಿಸುತ್ತಿದ್ದೀರಲ್ಲಾ,ಅದಕ್ಕಾದರೂ ಕೃತಜ್ಞತೆ ಬೇಡವೆ ?'ಎಂದುಕೊಂಡು ತನ್ನ ಒಂದು ಒಣಗಿದ್ದ ಟೊಂಗೆಯನ್ನು ಕಳಚಿ ಬಿಟ್ಟಿತು.ಅದು ಆವ್ಯಾಪಾರಿಗಳ ಮೇಲೆ ಬಿದ್ದಿತು,ಕೂಡಲೇ ಅವರು ಅಲ್ಲಿಂದ ಜಾಗ ಖಾಲಿ ಮಾಡಿದರು.
ನೀತಿ: ಕೆವವೊಮ್ಮೆ ಮನುಜ ತನಗೆ ಪ್ರಯೋಜವಾಗುತ್ತಾ ಇರುವವರನ್ನೇ ನಿಂದಿಸುತ್ತಿರುತ್ತಾನೆ.
ಕ್ರೂರ ಪ್ರಾಣಿ
ಕಾಡಿನಲ್ಲೊಂದು ಸುಂದರವಾದ ಮರ.ಕಾಡು ಪ್ರಾಣಿಗಳೆಲ್ಲಾ ಒಮ್ಮೊಮ್ಮೆ ಬಂದು ಆ ಮರದಡಿ ವಿಶ್ರಮಿಸಿ ಹೋಗುತ್ತಿದ್ದವು.ಹಾಗೇ ಅದೇ ಮರದಡಿಯಲ್ಲೇ ಮಲ-ಮೂತ್ರ ವಿಸರ್ಜನೆಯನ್ನೂ ಮಾಡಿ ಹೋಗುತ್ತಿದ್ದವು.ಅದರಿಂದ ಆ ಮರಕ್ಕೆ ಬೇಸರವಾಗಿತ್ತು.ಒಂದು ದಿನ `ನನ್ನ ಬಳಿ ಯಾವ ಪ್ರಾಣಿಗಳು ಬಾರದಂತೆ ಮಾಡುತ್ತೇನೆ,ನನ್ನ ಈ ಉದ್ದನೆಯ ಟೊಂಗೆಯಿಂದ ಬೀಸಿ ಆ ಪ್ರಾಣಿಗಳನ್ನು ಓಡಿಸುತ್ತೇನೆ'ಎಂದು ತನ್ನ ಪಕ್ಕದ ಮರಗಳಿಗೆ ಹೇಳಿತು.ಅವು ಹಾಗೆ ಮಾಡಬೇಡ ಎಂದು ಎಷ್ಟು ಬೇಡಿದರೂ ಈ ಮರ ಕೇಳಲಿಲ್ಲ .ಆ ದಿನದಿಂದ ವಿಶ್ರಾಂತಿಗೆ ಬಂದ ಎಲ್ಲ ಪ್ರಾಣಿಗಳಿಗೂ ತನ್ನ ಟೊಂಗೆಯಿಂದ ಬಲವಾಗಿ ಬೀಸಿ ಬಾರಿಸಿತು,ಪ್ರಾಣಿಗಳು ಹೆದರಿ ಓಡಿವವು.ಮುಂದೆ ಯಾವ ಪ್ರಾಣಿಗಳೂ ಹತ್ತಿರ ಸುಳಿಯಲಿಲ್ಲ. ಒಂದು ದಿನ ಮುಂಜಾನೆ ನಾಲ್ಕು ಜನ ಅಲ್ಲಿಗೆ ಬಂದರು. ಮರವು ಓ ಇವರೂ ಪ್ರಾಣಿಗಳಿಗೆ ಹೆದರಿ ಇಲ್ಲಿ ಬಂದಿರಬೇಕು,ವಿಶ್ರಾಂತಿ ಪಡೆಯಲಿ ಇಂದು ಸುಮ್ಮನೆ ನೋಡುತ್ತಿತ್ತು.ಆದರೆ ಬಂದವರು ಮರ ಕಡಿದು ಸಾಗಿಸುವವರು,ಅವರು ತಮ್ಮ ಕೆಲಸವನ್ನು ಮೊದಲು ಅದೇ ಮರದಿಂದಲೇ ಶುರು ಮಾಡಿಕೊಂಡರು.
ನೀತಿ 1:`ಕುರುಡು ಕಣ್ಣಿಗಿಂತ ಮೆಳ್ಳಗಣ್ಣೇ ವಾಸಿ" ಎನ್ನುವ ಗಾದೆಗೆ ಹೋಲುತ್ತದೆ.
ನೀತಿ 2: ಮನುಜನೇ ಎಲ್ಲರಿಗಿಂತ ಕ್ರೂರ ಪ್ರಾಣಿ
ಕಾಗಕ್ಕನ ಶಕ್ತಿ
ಅದೊಂದು ಸಮುದ್ರತೀರ. ಮೀನುಗಾರರ ಜೊತೆಗೆ ಕೊಕ್ಕರೆ, ಕಾಗೆ,ಕಡಲ ಹಕ್ಕಿ ಹಾಗೂ ಇನ್ನೂ ಅನೇಕ ಪಕ್ಷಿಗಳು ಮೀನು ಹಂಚಿಕೊಂಡು ತಿನ್ನುತ್ತಾ ವಾಸವಾಗಿದ್ದವು. ಹೀಗೇ ಬಲೆ ಬೀಸಲು ದೂರ ಸಾಗಿದ ಮೀನುಗಾರರನ್ನೇ ಕಾಯುತ್ತಾ ಕುಳಿತಿರಲು ಕುಚೇಷ್ಟೆ ಮಾಡಲೆಂದು ಕಾಗೆಯೊಂದು ಮುದಿ ಕೊಕ್ಕರೆಯೊಂದಕ್ಕೆ ಹೇಳಿತು"ಅಯ್ಯಾ ನಿನ್ನ ರೆಕ್ಕೆಗಳೇಕೆ ಅಷ್ಟು ಬಡಕಲಾಗಿವೆ ನೋಡು ನನ್ನ ರೆಕ್ಕೆ ಪುಕ್ಕಗಳು ಎಂಥಾ ಬಲಶಾಲಿಯಾಗಿವೆ, ಅದಕ್ಕೇ ಇರಬೇಕು ನೀನು ಯಾವಾಗಲೂ ತಲೆ ತಗ್ಗಿಸಿ ನೀರಿನಲ್ಲಿ ಮೀನನ್ನು ಕಾಯುತ್ತಾ ನಿಂತಿರುವೆ,ಅದೇ ನನ್ನನು ನೋಡು"ಎಂದು ಪುರ್ ಎಂದು ಹಾರಿ ನಾಲ್ಕುಬಾರಿ ಗಾಳಿಯಲ್ಲೇ ಲಾಗ ಹಾಕಿ ವೇಗವಾಗಿ ಬಂದು ಕೊಕ್ಕರೆಯ ಪಕ್ಕಕ್ಕೆ ಕುಳಿತು "ನಿನ್ನಿಂದ ಇದು ಈ ಜನುಮದಲ್ಲಿ ಸಾಧ್ಯವಿಲ್ಲ ಬಿಡು,ಹೀಗೆ ಹಾರಿದರೆ ಮಾತ್ರ ಮೀನುಗಾರರ ಬಲೆಯಿಂದ ನಾವು ಒಂದೆರೆಡು ಮೀನುಗಳನ್ನು ಕಸಿದುಕೊಳ್ಳಲು ಸಾಧ್ಯ."ಎಂದು ಜಂಭದಿಂದ ನುಡಿಯಿತು.ಅದಕ್ಕೆ ಕೊಕ್ಕರೆ "ಅರೆರೆ ಕಾಗಕ್ಕಾ ನನಗೂ ಹಾರಲು ಬರದೇ ಏನಿಲ್ಲ,ನಾನೂ ಚೆನ್ನಾಗೇ ಹಾರಬಲ್ಲೆ"ಎಂದಿತು. ಈ ಮಾತನ್ನು ಕೇಳಿ ಕಾಗೆ ಪಕ್ಕನೆ ನಕ್ಕಿತು"ಸರಿ ಹಾಗಾದರೆ ದೂರಕ್ಕೆ ಹಾರುವ ಸ್ಪರ್ಧೆ, ನಿನ್ನಲ್ಲಿ ಗುಂಡಿಗೆ ಇದ್ದಲ್ಲಿ ಬಾ"ಎಂದು ಸವಾಲೆಸೆಯಿತು. ಸರಿ ಕೊಕ್ಕರೆ ಅದಕ್ಕೆ ಒಪ್ಪಿ ಮುದುಡಿದ್ದ ತನ್ನ ರೆಕ್ಕೆ ಬಿಚ್ಚಿ, ಒಮ್ಮೆ ಪಟಪಟನ ಒದರಿ ನಿಧಾನವಾಗಿ ಹಾರಲು ಆರಾಂಭ ಮಾಡಿತು,ಕಾಗೆ ಭರ್ರನೆ ಅದರ ಪಕ್ಕಕ್ಕೇ ಹಾರಿ ಬಂದು"ಇಷ್ಟೇನಾ ನಿನ್ನ ವೇಗ? ಅಯ್ಯಾ ನಾನೇನೋ ನಿನ್ನ ರೆಕ್ಕೆ ಅಗಲ ನೋಡಿ ಭಾರೀ !.........."ಎನ್ನುತ್ತಾ ಎಡಬಿಡದೆ ಆಡಿಕೊಳ್ಳುತ್ತಾ ಜೊತೆಯಲ್ಲೇ ಹಾರುತ್ತಾ ಬಂದಿತು.ಸ್ವಲ್ಪ ಸಮಯದ ನಂತರ ಕಾಗೆ ಒಂದೇ ಸಮನೆ ಮಾತನಾಡಿ ಸುಸ್ತಾಗಿ ಬಾಯಾರಿದಂತಾಗಿ ಒಮ್ಮೆ ಬಂದ ದಾರಿಯ ಕಡೆಗೆ ತಿರುಗಿ ನೋಡಿತು. ದಡ ಕಾಣದಷ್ಟು ದೂರ ತಲುಪಿದ್ದರು. ಕಾಗೆಗೆ ರೆಕ್ಕೆಗಳಲ್ಲಿ ಶಕ್ತಿ ಕಡಿಮೆಯಾಗತೊಡಗಿತು,ಆದರೂ ಸ್ಪರ್ಧೆಯಲ್ಲವೇ, ಧೈರ್ಯದಿಂದ ಕೊಕ್ಕರೆಯನ್ನು ಕೇಳಿತು"ಇನ್ನೂ ಎಷ್ಟು ಹೊತ್ತು ಹೀಗೇ ಹಾರುವುದು?" ಅದಕ್ಕೆ ಕೊಕ್ಕರೆ ಶಾಂತವಾಗಿ ಉತ್ತರಿಸಿತು "ಎನ್ನೇನು 2-3 ದಿನ ಅಷ್ಟೇ"....."ಹಾ! 2-3 ದಿನ! ನನ್ನ ಕೈಲಾಗದು,ಈಗಲೇ ನನ್ನಲ್ಲಿ ತಿರುಗಿ ತೀರಕ್ಕೆ ಹೋಗುವಷ್ಟೂ ಶಕ್ತಿಯಿಲ್ಲ ಇನ್ನು 2-3 ದಿನ! ಅಯ್ಯಾ ನನ್ನನು ಕಾಪಾಡು ನನಗೆ ನಿನ್ನಂತೆ ನೀರಿನ ಮೇಲೆ ತೇಲಲೂ ಬಾರದು"ಎಂದು ಗೋಗರೆಯಿತು. ಅದಕ್ಕೆ ಕೊಕ್ಕರೆ "ಬಾ ನನ್ನ ಅಗಲವಾದ ಬೆನ್ನಿನ ಮೇಲೆ ಕೂಡು ನಾವು ಹೊರಟ ತೀರಕ್ಕೆ ಕರೆದೊಯ್ಯುವೆ "ಎಂದು ಹೇಳಿ ಕಾಗೆಯನ್ನು ಕೂಡಿಸಿಕೊಂಡು ವಾಪಸ್ ತಂದು ತೀರಕ್ಕೆ ಬಿಟ್ಟಿತು.ಕಾಗೆ ತನ್ನ ತನ್ನ ತಪ್ಪರಿತು,ಕ್ಷಮೆ ಕೋರಿ,ತಲೆ ತಾಗಿಸಿತು.
ಕೋಪಕ್ಕೊಂದು ಮೊಳೆ
ಯುವಕನೊಬ್ಬನಿಗೆ ಬಹಳ ಮುಂಗೋಪದ ಸ್ವಭಾವ. ಇದರಿಂದಾಗಿ ಅವನಿಗೂ ಅವನ ಕುಟುಂಬದವರಿಗೂ ಆಗಿಂದಾಗ್ಗೆ ಕೆಟ್ಟ ಆಪಾದನೆಗಳು ಕೇಳಿ ಬರುತ್ತಿದ್ದವು. ಅದನ್ನರಿತ ಯುವಕ ತನ್ನ ಕೋಪವನ್ನು ತಡೆಯಲಾಗದೆ ಸಂಕಟಕ್ಕೊಳಗಾಗುತ್ತಲೇ ಇದ್ದ.ಒಮ್ಮೆ ಅವನ ತಂದೆ ಮಗನ್ನನ್ನು ಕರೆದು "ಮಗು ನೀನು ನಿಜವಾಗಿಯೂ ನಿನ್ನ ಕೋಪವನ್ನು ಹತೋಟಿಯಲ್ಲಿ ಇಡಬೇಕಿದ್ದಲ್ಲಿ ನಿನಗೆ ಕೋಪಬಂದಾಗಲೆಲ್ಲ ತೋಟದಲ್ಲಿನ ಬೇಲಿಯ ಮರದ ಮೇಲೆ ಒಂದು ಮೊಳೆಯನ್ನು ಹೊಡಿ"ಎಂದ. ಯುವಕ ಮೊದಲ ದಿನವೇ 37 ಮೊಳೆ ಹೊಡೆದ,ನಂತರ 21,13,8,3,2,1 ಹೀಗೇ ಬರುಬರುತ್ತಾ ಕೋಪ ಬರುವುದು ತಾನಾಗೇ ಕಡಿಮೆಯಾಯಿತು. ಅಪ್ಪನಿಗೆ ವಿಷಯ ತಿಳಿಸಿದ.ತಂದೆ "ಬಹಳ ಸಂತೋಷ ಮಗೂ ಇನ್ನು ಮುಂದೆ ನೀನು ಕೋಪಬರುವುದನ್ನು ತಡೆಯಬೇಕು,ಹಾಗೆ ಮಾಡಿದಾಗಲೆಲ್ಲಾ ಅಲ್ಲಿಂದ ಒಂದೊಂದು ಮೊಳೆಯನ್ನು ತೆಗೆಯುತ್ತಾ ಬಾ" ಅಂದ.
ಹಾಗೇ ದಿನಗಳು,ವಾರಗಳು ತಿಂಗಳುಗಳೇ ಕಳೆದವು.ತನ್ನ ಕೋಪವನ್ನು ತಡೆಯಲು ಶಕ್ತನಾದಾಗಲೆಲ್ಲಾ ಒಂದೊಂದಾಗಿ ಮೊಳೆಗಳನ್ನು ತೆಗೆದ"ಎಲ್ಲಾ ಕಳಚಿದ ನಂತರ ಸಂತಸದಿಂದ ಮತ್ತೆ ತನ್ನ ತಂದೆಗೆ ತಿಳಿಸಿದ. ತಂದೆ "ನನಗೆ ಬಹಳ ಖುಷಿಯಾಗುತ್ತಿದೆ ಮಗೂ,ನಿನ್ನ ಗುರಿಯನ್ನು ನೀನು ಮುಟ್ಟಿದೆ ಆದರೆ ನೋಡು ಮೊಳೆಯಿಂದ ಆ ಮರಕ್ಕೆ ತಾಗಿದ ಏಟುಗಳು ಮಾತ್ರ ಹೋಗಲಿಲ್ಲ. ಕೋಪದಿಂದಾಗುವ ಅನಾಹುತವೂ ಹಾಗೇ ಶಾಶ್ವತವಾಗಿ ಉಳಿದು ಬಿಡುತ್ತದೆ". ತಂದೆಯ ಮಾತಿನ ಅರ್ಥ ಮಗನಿಗರಿವಾಯಿತು.
ವಿಷ !
ಜಲಜ ತನ್ನ ಮದುವೆಯಾದಾಗ್ಗಿನಿಂದ ತನ್ನ ಅತ್ತೆಯ ಜೊತೆ ಹೊಂದಿಕೊಳ್ಳಲುಸಾಧ್ಯವಾಗಲಿಲ್ಲ. ಏನಾದರೊಂದು ಕಾರಣ ಹುಡುಕಿ ಇಬ್ಬರೂ ಕಚ್ಚಾಡುವುದು, ಒಬ್ಬರನ್ನೊಬ್ಬರು ಶಪಿಸುವುದು ಸಾಮಾನ್ಯವಾಗಿಬಿಟ್ಟಿತ್ತು. ಅತ್ತೆ ಸೊಸೆಯರ ಜಗಳ ದಿನೇದಿನೇ ಬೆಳೆಯುತ್ತಾ ಜಲಜಳಿಗೆ ಒಮ್ಮೆ ರೋಸಿಹೋಗಿ ಒಬ್ಬ ಪಂಡಿತನ ಬಳಿಗೆ ಹೋಗಿ ತನ್ನ ಕಷ್ಟವನ್ನು ಹೇಳಿಕೊಂಡು ಹಣ ಎಷ್ಟಾದರೂ ಸರಿ ಹೇಗಾದರೂ ಮಾಡಿ ತನ್ನ ಅತ್ತೆಗೆ ವಿಷ ಕುಡಿಸಿಯಾದರೂ ಕೊಲ್ಲುವ ಸಲಹೆ ಕೇಳಿದಳು. ವಿಚಾರವನ್ನು ನಿಧಾನವಾಗಿ ಪರಿಶೀಲಿಸಿದ ನಂತರ ಪಂಡಿತ "ಅಮ್ಮಾ ಜಲಜ ನಾನು ನಿನಗೆ ಒಂದು ಸೀಸೆ ವಿಷವನ್ನು ಕೊಡುತ್ತೇನೆ, ಆದರೆ ನೀನು ಇದನ್ನು ಪ್ರತಿದಿನ ಊಟದಲ್ಲಿ ಬೆರೆಸಿ ಕೊಡು,ನಿನ್ನತ್ತೆ ನಿಧಾನವಾಗಿ ಸಾಯುತ್ತಾಳೆ"ಎಂದ. ಕೂಡಲೇ ಆ ಸೀಸೆಯನ್ನು ಮನೆಗೆ ತಂದು ಎಂದಿನಂತೆ ಅತ್ತೆಯ ಕೂಡ ಕೋಪ ಮಾಡದೆ ಊಟೋಪಚಾರವನ್ನು ತಾನೇ ಮಾಡತೊಡಗಿದಳು. ಊಟದಲ್ಲಿ ವಿಷವನ್ನು ಮರೆಯದೇ ಬೆರೆಸಿ ಇನ್ನೇನು ಸ್ವಲ್ಪವೇ ಕಾಲ ಬದುಕಿರುವ ಅತ್ತೆಯ ಜೊತೆ ಸಂತೋಷದಿಂದ ಮಾತನಾಡುತ್ತಾ ಹೊಂದಿಕೊಳ್ಳುತ್ತಾ ಬಂದಳು. ಮೊದಮೊದಲು ಕಷ್ಟವೆನಿಸಿದರೂ ಹಾಗೇ ಹೊಂದಿಬಾಳುವುದು ಅಭ್ಯಾಸವಾಗಿ ದಿನಗಳು,ವಾರಗಳು ತಿಂಗಳುಗಳೇ ಕಳೆದವು.
ಅತ್ತೆಗೂ ತನ್ನ ತಪ್ಪುಗಳರಿವಾಗಿ ಜಲಜಳನ್ನು ಕ್ಷಮೆಕೇಳಿ ತಾನೂ ಆಕೆಯನ್ನು ಕ್ಷಮಿಸಿ ಸಂತೋಷದಿಂದ ಕಾಲ ಕಳೆದಳು. ಜಲಜಳಿಗೆ ಸಂಕಟವಾಗುತ್ತಾ ಬಂದಿತು ಇಷ್ಟೊಂದು ಒಳ್ಳೆಯ ಅತ್ತೆಯನ್ನು ತನ್ನಕೈಯ್ಯಾರೆ ಕೊಲ್ಲುವುದಾದರೂ ಹೇಗೆ" ಒಂದು ದಿನ ಪಂಡಿತನ ಬಳಿ ಓಡಿಬಂದು"ಸ್ವಾಮೀ ಪಂಡಿತರೇ ಹೇಗಾದರೂ ಮಾಡಿ ನನ್ನ ಅತ್ತೆಯನ್ನು ಉಳಿಸಿಕೊಡಿ ಅವರು ಸಾಯುವುದು ನನಗೆ ಇಷ್ಟವಿಲ್ಲ, ದಯೆಮಾಡಿ"ಎಂದು ಗೋಗರೆದಳು.ಅದಕ್ಕೆ ಪಂಡಿತನು "ಅಮ್ಮಾ ಜಲಜ ನೀನೇನೂ ಭಯಪಡಬೇಡ ನಿನ್ನ ಅತ್ತೆಗೆ ಏನೂ ಆಗದು,ನಾನಂದು ಕೊಟ್ಟಿದ್ದು ವಿಷವಲ್ಲ ನಿನ್ನಲ್ಲಿ ಈ ಬದಲಾವಣೆ ಕಾಣಲೆಂದು ಹಾಗೆ ಮಾಡಿದೆ"ಎಂದನು. ಜಲಜಳ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ತನ್ನೊಳಗಾದ ಬದಲಾವಣೆಯನ್ನು ಉಳಿಸಿಕೊಂಡು ಸಂಸಾರ ನಡೆಸಿದಳು.
ಕ್ರಿಕೆಟ್ (ಹಾಸ್ಯ)
ನಿವೃತ್ತ ಮುದುಕನೊಬ್ಬ ಮುಂಬೈನ ಗಲ್ಲಿಯಲ್ಲಿ ವಾಸಿಸುತ್ತಿದ್ದ.ಅದೇ ಗಲ್ಲಿಯಲ್ಲಿ ಯುವಕರು ಪ್ರತಿದಿನ/ರಾತ್ರಿ ಕ್ರಿಕೆಟ್ ಆಡುತ್ತಿದ್ದರು.ಗಲಾಟೆ ತಾಳಲಾರದ ಅಲ್ಲಿನ ನಿವಾಸಿಗಳು ಎಷ್ಟು ಬೇಡಿಕೊಂಡರೂ ಅವರು ಬೇರೆಕಡೆ ಮೈದಾನಕ್ಕೆ ಹೋಗಲು ಒಪ್ಪುತ್ತಿರಲಿಲ್ಲ. ಮೊದಲೇ ವಾಹನಗಳ ಸದ್ದು ಅದರ ಜೊತೆಗೆ ಯುವಕರ ಕಿರುಚಾಟ ಮುದುಕನಿಗೆ ರೋಸಿ ಹೋಗಿತ್ತು.ಒಂದು ದಿನ ಯುವಕರನ್ನೆಲ್ಲಾ ಕರೆದು "ಹುಡುಗರೇ ನನಗೆ ಕ್ರಿಕೆಟ್ ಅಂದ್ರೆ ನನಗೆ ಬಹಳ ಇಷ್ಟ ,ನೀವು ದಯವಿಟ್ಟು ಇನ್ನು ಮುಂದೆ ಇಲ್ಲೇ ದಿನ/ ರಾತ್ರಿ ಕ್ರಿಕೆಟ್ ಆಡಿದರೆ ನಿಮಗೆ ವಾರಕ್ಕೆ 25 ರೂಪಾಯಿ ಕೊಡುತ್ತೇನೆ" ಎಂದ. ಹುಡುಗರೂ ಖುಷಿಯಿಂದ ಒಪ್ಪಿದರು.
ವಾರ ಕಳೆಯಿತು ಒಪ್ಪಿದಂತೆ ಹಣವೂ ದೊರಕಿತು, ಮತ್ತೊಂದು ವಾರ ಕಳೆಯಿತು ಮುದುಕ ಬರೀ 20 ರೂಪಾಯಿ ಕೈಗಿಟ್ಟ, ಇರಲಿ , ಎಂದು ಹುಡುಗರು ಸಹಕರಿಸಿದರು. ಮುಂದಿನ ವಾರ ಬರೀ15 ರೂಪಾಯಿ ! ಅದರ ಮುಂದಿನ ವಾರ ಬರೀ 10 ರೂಪಾಯಿ!! ನಂತರ ವಾರ ಬರೀ 5 !!!
"ಅರೆ ಏನ್ ಸ್ವಾಮೀ ವಾರಕ್ಕೆ 25 ರೂಪಾಯಿ ಅಂತ ಹೇಳಿ ಈಗ ಬರೀ 5 ಕ್ಕೆ ಇಳಿದಿದ್ದೀರ ? ಇದು ಯಾವ ನ್ಯಾಯ ?" ಅದಕ್ಕೆ ಮುದುಕ "ನೋಡ್ರಪ್ಪಾ ನನಗೆ ಪೆನ್ ಶನ್ ಹಣ ಬರೋದೇ ಕಡಿಮೆ ನನ್ನಿಂದ ವಾರಕ್ಕೆ 25 ರೂಪಾಯಿ ಕೊಡಕ್ಕಾಗಲ್ಲ" ಅಂದ, ಬೇಕೇ ಬೇಕೆಂದು ಹುಡುಗರು ಹಟ ಹಿಡಿದರು, ಆಗದೆಂದು ಮುದುಕ ಪಟ್ಟು ಹಿಡಿದ, ಕಡೆಗೆ ಕೋಪದಿಂದ ಮುದುಕ "ಆಗಲ್ಲಾ ಅಂದ್ರೆ ಆಗಲ್ಲ ಅದೇನ್ ಮಾಡ್ತೀರೋ ಮಾಡಿ ನೋಡೋಣ" ಎಂದ.ಹುಡುಗರು " ಲೇ ಬನ್ರೋ ಇನ್ಮೇಲೆ ಈ ಬೀದೀಲೇ ಕ್ರಿಕೆಟ್ ಆಡೋದು ಬೇಡ" ಎಂದು ಹೊರಟುಹೋದರು, ಮುದುಕನಿಗೆ ಬೇಕಾದ್ದೂ ಅದೇ ಅಲ್ವೇ ?
ದೇವರೆಲ್ಲಿದ್ದಾನೆ ?
ಹಾಸ್ಯ
ಅಣ್ಣ ತಮ್ಮಂದಿರಾದ ಶಾಮ ರಾಮ ಬಹಳ ತುಂಟ ಬಾಲಕರು . ಊರಲ್ಲೆಲ್ಲಾ ಇವರದ್ದೇ ದೂರು. ಏನಾದರೂ ಅನಾಹುತ ಮಾಡುವುದು ಓಡಿ ಮನೆ ಸೇರುವುದು. ತಾಯಿ ಈ ರಗಳೆಗೆ ರೋಸಿಹೋಗಿ ಒಬ್ಬ ಬ್ರಾಹ್ಮಣ ಗುರುವಿನ ಬಳಿಗೆ ವೇದ ಪಾಠಕ್ಕೆಂದು ಸೇರಿಸಿದಳು.ಮೊದಲ ದಿನ , ಮೊದಲ ಪ್ರಶ್ನೆ, ಅಣ್ಣ ರಾಮನಿಗೆ ಗುರು ಕೇಳಿದ " ದೇವರು ಎಲ್ಲಿದ್ದಾನೆ ? ಹೇಳು".......ಉತ್ತರ ಬರಲಿಲ್ಲ , ಗುರುಗಳು ಇನ್ನೂ ಸ್ವಲ್ಪ ರೇಗಿ ಕೇಳಿದರು "ದೇವರು ಎಲ್ಲಿದ್ದಾನೆ ? " ಊಹು, ಉತ್ತರವಿಲ್ಲ , ಗುರುಗಳು ಇನ್ನೂ ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಕೇಳಿದರು....ತಕ್ಷಣ ರಾಮ ಭಯದಿಂದ ಆ ಜಾಗದಿಂದ ತಪ್ಪಿಸಿಕೊಂಡು ಓಡಿ ಹೊರಗೆಬಂದು ತಮ್ಮನಾದ ಶಾಮನನ್ನೂ ಎಳೆದುಕೊಂಡು ಊರ ಹೊರಗೆ ಓಡಿದ.ತಮ್ಮ ಕೇಳಿದ " ಯಾಕಣ್ಣಾ ಹೀಗೆ ಹೆದರಿ ಓಡಿಬಂದದ್ದು ?" ಅದಕ್ಕೆ ರಾಮ"ನಾವು ಮತ್ತೆ ಪೀಕಲಾಟಕ್ಕೆ ಸಿಕ್ಕಿದ್ದೇವೆ".... " ಏನಂತೆ?"....... " ನೋಡು ದೇವರು ಕಳೆದು ಹೋಗಿದ್ದಾನಂತೆ ನಾವೇ ಅದಕ್ಕೆ ಕಾರಣ ಅಂತೆ ? ! ? ! " ಎಂದ
ಕುಂಟ ನಾಯಿ ಮರಿ
ದೂರದ ಫಾರ್ಮ್ ಹೌಸ್ ಬಳಿಯಲ್ಲಿ "ನಾಯಿ ಮರಿಗಳು ಮಾರಾಟಕ್ಕಿವೆ " ಎಂದು ಫಲಕವೊಂದು ತೂಗಾಡುತ್ತಿತ್ತು. ಡ್ರೈವರ್ ಗೆ ಕಾರ್ ನಿಲ್ಲಿಸಲು ಹೇಳಿ ಪುಟ್ಟ ಬಾಲಕ ಕಾರಿನಿಂದಿಳಿದು ಅಲ್ಲಿದ್ದ ಮಾಲೀಕನನ್ನು ಕಂಡು "ನನಗೆ ಒಂದು ನಾಯಿಮರಿ ಬೇಕಿದೆ ಕೊಳ್ಳಬಹುದೇ" ಎಂದ, ಬೋರ್ಡ ಹಾಕಿರುವುದೇ ಉಂಟಂತೆ ಸರಿ "ಒಂದು ನಾಯಿಮರಿಗೆ ಹತ್ತು ಡಾಲರ್ ಆಗುತ್ತದೆ" ಎಂದ ಮಾಲೀಕ, ಬಾಲಕ ತನ್ನ ಜೇಬಿನಡಿಗೆ ಕೈ ಹಾಕಿ ಹುಡುಕಿ ತಡಕಿ "ನನ್ನ ಬಳಿ ಇರುವುದೇ ಎಂಟು ಡಾಲರ್ ಮಾತ್ರ, ಆಗಬಹುದಾ" ಎಂದು ಮುಖ ಪೆಚ್ಚಗೆ ಮಾಡಿ ಹೇಳಿದ. ಹೋಗಲಿ ಮಕ್ಕಳಿಗೆ ತಾನೆ ಎಂದು ಮಾಲೀಕ ನಾಯಿ ಗೂಡಿನ ಕಡೆ ಜೋರಾಗಿ ಶಿಳ್ಳೆ ಹೊಡೆದ, ಉಣ್ಣೆಯ ಉಂಡೆಗಳಂತೆ ಗುಂಡುಗುಂಡಾದ ನಾಯಿ ಮರಿಗಳು ಗುಡುಗುಡು ಓಡಿ ಬಂದವು,"ನಿನಗೆ ಯಾವುದು ಬೇಕೇ ಅರಿಸಿಕೋ" ಎಂದ ಮಾಲೀಕ,ಅಷ್ಟರಲ್ಲಿ ಗೂಡಿನ ಕಡೆಯಿಂದ ಮತ್ತೊಂದು ಮರಿ ನಿಧಾನವಾಗಿ ಬೇರೆ ಮರಿಗಳ ಗುಂಪನ್ನು ಸೇರಲು ಕಷ್ಟಪಟ್ಟು ಓಡುತ್ತಾ ಬರುವುದನ್ನು ಕಂಡು ಬಾಲಕ "ನನಗೆ ಆ ಮರಿ ಬೇಕು" ಎಂದ, "ಅಯ್ಯೋ ಅದು ಬೇಡ ಮಗು ನಿನಗೆ ಅದರ ಜೊತೆ ಆಡಲು ಅಷ್ಟು ಸೂಕ್ತವಲ್ಲ ನೋಡು ಅದು ಕುಂಟ ನಾಯಿ ಮರಿ" ಎಂದ.
ತಕ್ಷಣ ಬಾಲಕ ತನ್ನ ಬಲಗಾಲಿನ ಪ್ಯಾಂಟನ್ನು ಮೇಲಕ್ಕೆ ಸರಿಸಿ ಸ್ಟೀಲ್ ನಿಂದ ಮಾಡಿದ ತನ್ನ ಕೃತಕವಾದ ಕಾಲನ್ನು ತೋರಿಸಿ "ಇರಲಿ ನನಗೂ ಅಷ್ಟೇನು ಜೋರಾಗಿ ಓಡಲು ಸಾಧ್ಯವಿಲ್ಲ ಅದರ ಕಷ್ಟವನ್ನು ನಾನೊಬ್ಬನೇ ಅರ್ಥಮಾಡಿಕೊಳ್ಳಬಲ್ಲೆ" ಎಂದು ಓಡಿಬಂದು ಬಾಗಿ ಬಾಚಿ ತಬ್ಬಿ ಆ ಮರಿಯನ್ನು ಮನೆಗೆ ಕರೆದುಕೊಂಡು ಹೋದ.
ಎರಡು ಕಪ್ಪೆಗಳು
ಮಳೆಗಾಲದ ಸಮಯ ರಾತ್ರಿ ಸಮಯ ಭೀಕರ ಸಿಡಿಲು ಗುಡುಗು ಧಾರಾಕಾರವಾಗಿ ಸುರಿಯುವ ಮಳೆ ಝರಿ ಪ್ರವಾಹದಿಂದುಕ್ಕಿ ಹರಿಯುವುದನ್ನು ಅರಿತ ಕಪ್ಪೆಗಳು ಛಂಗನೆ ನೆಗೆಯುತ್ತಾ ನೆಗೆಯುತ್ತಾ ವಲಸೆ ಹೋಗುತ್ತಿದ್ದವು, ಆಗ ಎರಡು ಕಪ್ಪೆಗಳು ಕತ್ತಲೆಯ ಕಾನನದಿ ಕಣ್ಕಾಣದೆ ಆಳವಾದ ಕಂದರದಲ್ಲಿ ಕಾಲುಜಾರಿ ಬಿದ್ದುಬಿಟ್ಟವು.ಎಷ್ಟು ಪ್ರಯತ್ನಿಸಿದರೂ ಮೇಲಕ್ಕೆ ಎಟುಕದಷ್ಟು ಆಳ, ಎರಡೂ ಕಪ್ಪೆಗಳು ಎಡಬಿಡದೆ ಜಿಗಿಯಲೆತ್ನಿಸಿದವು. ಉಳಿದ ಕಪ್ಪೆಗಳು ಇದನ್ನು ಕಂಡು " ಅಯ್ಯೋ ಬಿದ್ದುಬಿಟ್ಟಿರಾ, ಅಷ್ಟೇ ಬಿಡಿ ಅಲ್ಲಿದ್ದರೆ ನೀವು ಬದುಕಿದ್ದರೂ ಸತ್ತಂತೆ,ಇನ್ನೇನು ನಿಮ್ಮ ಕಥೆ ಅಷ್ಟೇ" ಎಂದು ಹಾಸ್ಯ ಮಾಡುತ್ತ ನಗಲಾರಂಭಿಸಿದವು, ಈ ಎರಡೂ ಕಪ್ಪೆಗಳು ಬಿಡದೆ ಪ್ರಯತ್ನ ಮಾಡುತ್ತಿದ್ದವು, ಉಳಿದವು ಕೂಗುತ್ತಲೇ ಇದ್ದವು"ಏ ಕೇಳಿಸಲಿಲ್ಲವೇ ನಿಮಗೆ, ನೀವಿನ್ನು ಸತ್ತಂತೆ,..ಸತ್ತಂತೆ," ಅಷ್ಟರಲ್ಲಿ ಒಂದು ಕಪ್ಪೆ ನೆಗೆದೂ ನೆಗೆದೂ ಸುಸ್ತಾಗಿ ತಲೆಕೆಳಗಾಗಿ ಬಿದ್ದು ಪ್ರಾಣ ಬಿಟ್ಟಿತು, ಇನ್ನೊಂದು ಮಾತ್ರ ತನ್ನ ಪ್ರಯತ್ನವನ್ನು ಬಿಡದೇ ಮಾಡಿತ್ತು,ಮೇಲಿದ್ದ ಕಪ್ಪೆಗಳು ತಂಪಾಡಿಗೆ ಕೈಚಾಚಿ ಆಡಿಕೊಳ್ಳುತ್ತಾ ಅರಚುತ್ತಲೇ ಇದ್ದವು ಆದರೆ ಉಳಿದಿದ್ದ ಒಂದೇ ಕಪ್ಪೆ ಎಗರೀ ಎಗರೀ ಸುಸ್ತಾದರೂ ಶಕ್ತಿಮೀರಿ ಮೇಲಕ್ಕೆ ಜಿಗಿದೇ ಬಿಟ್ಟಿತು,,ಮೇಲಿದ್ದ ಕಪ್ಪೆಗಳು ಅಚ್ಚರಿಯಿಂದ ಬೆಪ್ಪಾಗಿ ಮುಂದೆಬಂದು ಅದನ್ನು ಅಭಿನಂದಿಸಿದವು,"ನಾವೆಲ್ಲಾ ನಿನ್ನನ್ನು ಅಷ್ಟು ದುರ್ಲಕ್ಷ್ಯದಿಂದ ಕಡೆಗಣಿಸಿದರೂ ನೀನು ಉತ್ಸಾಹ ಕಳೆದುಕೊಳ್ಳದೆ ಜೀವಂತವಾಗಿ ಮೇಲೇರಿ ಬಂದೆ,ನಮ್ಮನು ಕ್ಷಮಿಸು ನಿನ್ನ ಸಾಹಸ ಮೆಚ್ಚುವಂಥದ್ದು" ಎಂದು ಪ್ರಶಂಸಿಸಿದವು,ಅದಕ್ಕೆ ಆ ಕಪ್ಪೆ "ಅಯ್ಯಾ ನೀವೇನು ಹೇಳುತ್ತಿದ್ದೀರೋ ನನಗೊಂದೂ ತಿಳಿಯದು ನನಗೆ ಹುಟ್ಟು ಕಿವುಡು, ನೀವೆಲ್ಲಾ ನನ್ನ ಕಡೆ ನೋಡಿಕೊಂಡು,ಕೈ ಬೀಸುತ್ತಾ ಅಷ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು" ಎಂದಿತು.
ಈ ಕಥೆಯಲ್ಲಿ ಎರಡು ನೀತಿಗಳಿವೆ.
೧.ಮಾತಿನ ಶಕ್ತಿ ಬಿದ್ದವರನ್ನು ಮೇಲಕ್ಕೂ ಎತ್ತಬಹುದು.
೨. ಕೆಳಕ್ಕೆ ಬಿದ್ದವರನ್ನು ಅದೇ ಮಾತಿನಿಂದ ಧೈರ್ಯಗೆಡಿಸಿದರೆ ಮತ್ತೂ ಪಾತಾಳಕ್ಕೆ ತಳ್ಳಿದಂತಾಗಿ ಮೃತ್ಯುವೇ ಬರಬಹುದು
ಸರ್ಪ - ಸನ್ಯಾಸಿ
ಊರಿನ ಹೊರಗೆ ಒಂದು ಎತ್ತರದ ಹುತ್ತ, ಅದರಲ್ಲಿ ದೊಡ್ಡದಾದ ಹಾವೊಂದಿತ್ತು, ಆಗಾಗ್ಗೆ ಅದರ ಕಡಿತಕ್ಕೆ ಕೋಳಿ, ಕುರಿ, ಕರುಗಳು ಬಲಿಯಾಗುತ್ತಿದ್ದವು.ಇದರ ಭೀತಿಯಿಂದ ಊರಿನವರು ಆದಷ್ಟು ಹೊರಗೆ ಓಡಾಡುವುದನ್ನು ನಿಲ್ಲಿಸಿದ್ದರು.ಅಲ್ಲಿಗೆ ಒಬ್ಬ ಸನ್ಯಾಸಿ ಭಿಕ್ಷೆಗೆ ಬಂದ, ಬಿಕೋ ಎನ್ನುವ ಊರಿನ ವಿಷಯ ತಿಳಿದು, ಹುತ್ತದ ಬಳಿ ನಡೆದ ಹಾವು ಹೊರಗೆ ಬಂದು ತಲೆಬಾಗಿ ವಂದಿಸಿತು, ತನ್ನ ಗೆಳೆಯನನ್ನು(ಮತ್ತೊಂದು ಹಾವು) ಹಿಂದೊಮ್ಮೆ ಜನರು ಕೋಲಿನಿಂದ ಚಚ್ಚಿ ಕೊಂದ ಕಥೆ ವಿವರಿಸಿತು.ಸನ್ಯಾಸಿ ಸಂತಾಪ ಸೂಚಿಸಿ,ಮುಂದೆ ಯಾರನ್ನೂ ಕಚ್ಚುವುದಿಲ್ಲಾ ಎಂದು ಆಣೆ ಮಾಡಲು ಹೇಳಿದ. ಅದರಂತೆ ಆ ಹಾವು ಮುಂದೆ ಯಾರನ್ನೂ ಕಡಿಯಲಿಲ್ಲ.ಸುಮ್ಮನೆ ಹರಿದಾಡುವುದನ್ನು ಕಂಡ ಮಕ್ಕಳು ನೋಡೋಣವೆಂದು ಪುಟ್ಟ ಕಡ್ಡಿಯನ್ನು ಅದರ ಮೇಲೆ ಎಸೆದರು,ಕಲ್ಲನೇ ಎಸೆದರು,ಬಾಲ ಹಿಡಿದರು,ಎಳೆದರು,ಹಗ್ಗದಂತೆ ಎಳೆದಾಡಿದರು ಕೊಟ್ಟ ಮಾತಿಗೆ ತಪ್ಪದಂತೆ ಹಾವು ಸುಮ್ಮನಿತ್ತು, ಯಾರನ್ನೂ ಕಡಿಯಲಿಲ್ಲ.
ಸುಮಾರು ದಿವಸಗಳ ಬಳಿಕ ಸನ್ಯಾಸಿ ಅದೇ ಊರಿಗೆ ಮತ್ತೆ ಬಂದ.ಮೈಯಲ್ಲಾ ಗಾಯಗೊಂಡ ಹಾವು ನಿಧಾನವಾಗಿ ಹರಿದು ರಸ್ತೆ ದಾಟುತ್ತಿತ್ತು. ಸನ್ಯಾಸಿ ಅದರ ಬಳಿಗೆ ಹೋಗಿ ಅರೆ ಇದೇನಿದು ನೀನು ಹೀಗಾಗಿರುವೆ? ಎಂದ."ಎಲ್ಲಾ ನಿಮ್ಮಿಂದ ಸ್ವಾಮಿ..ನೀವು ಯಾರನ್ನೂ ಕಡಿಯಕೂಡದೆಂದು ಆಣೆ ಇಡಿಸಿದಿರಿ...ಎಲ್ಲಾ ಅದರ ಪರಿಣಾಮ".ಅದಕ್ಕೆ ಸನ್ಯಾಸಿ "ಅಯ್ಯೋ ಸಾಧುವೇ ನಾನು ಯಾರನ್ನೂ ಕಡಿಯಬೇಡಾ ಎಂದೆ ಅಷ್ಟೇ ಹೊರತು,ಬುಸ್ ಎನ್ನಬೇಡಾ ಅನ್ನಲಿಲ್ಲವಲ್ಲಾ" ಎಂದ.ಅಂದಿನಿಂದ ಹಾವು ಬದುಕುವ ರೀತಿ ಕಲಿಯಿತು.
ಮೆಟ್ಟಿಲು:(ಹಾಸ್ಯ)
ರಾಜ ಅಕ್ಬರ್ ತನ್ನ ಮಂತ್ರಿ ಬೀರಬಲ್ಲನ ಜೊತೆ ಒಮ್ಮೆ ವಿಹಾರಕ್ಕೆಂದು ಉದ್ಯಾನವನದಲ್ಲಿ ವಿಹರಿಸುತ್ತಿದ್ದನು. ರಾಜನು ಬೀರಬಲ್ಲನನ್ನು ಚೇಷ್ಟೆ ಮಾಡಲೆಂದು ಬೀರಬಲ್ ನೀನು ನಿನ್ನ ಹೆಂಡತಿಯಕೈಯಲ್ಲಿ ಎಷ್ಟು ಬಳೆಗಳಿವೆ ಎಂದು ನೋಡಿರುವೆಯಾ ಎಂದ.ಅದಕ್ಕೆ ಉತ್ತರವಿಲ್ಲದೆ ಬೀರಬಲ್ ಗೊತ್ತಿಲ್ಲವೆಂದು ತಲೆಯಾಡಿಸಿದ.ಅಕ್ಬರ್ "ಅರೆ ನೀನು ದೀನಾಗಲೂ ಊಟ ಬಡಿಸುವ ನಿನ್ನಾಕೆಯ ಕೈಬಳೆ ಎಷ್ಟಿವೆ ಎಂದೇ ನೋಡೀಲ್ಲವೇ" ಎಂದು ನಕ್ಕ. ಸ್ವಲ್ಪ ಹೊತ್ತಿನ ಬಳಿಕ ಬೀರಬಲ್ ಅಕ್ಬರನನ್ನು ಕುರಿತು ಕೇಳಿದ "ಪ್ರಭು ನೀವು ಪ್ರತಿದಿನ ಈ ಉದ್ಯಾನವನಕ್ಕೆ ಬರುತ್ತೀರಲ್ಲವೆ?"....."ಹೌದು"......ಹಾಗಿದ್ದರೆ ನಿಮ್ಮ ಉದ್ಯಾನವನದಲ್ಲಿ ಒಟ್ಟು ಎಷ್ಟು ಮೆಟ್ಟಿಲುಗಳಿವೆ?" ಎಂದ. ಅಕ್ಬರ್ ತನ್ನ ತಪ್ಪನ್ನರಿತು ಸ್ನೇಹದ ನಗೆ ಚೆಲ್ಲಿದ.
ಹಗಲು - ಕನಸು (ಹಾಸ್ಯ)
ಬಡ ರೈತನೊಬ್ಬ ಬೇಸಿಗೆಯಲ್ಲಿ ಕೆಲಸವಿಲ್ಲದೆ, ತಿನ್ನಲು ಅನ್ನವಿಲ್ಲದೆ ಅವರಿವರ ಮನೆಯಮುಂದೆ ಕೈಚಾಚಿ ಬೇಡುತ್ತಾ ಪಾಲಿಗೆ ಬಂದದನ್ನು ತಿಂದು ಕಾಲ ಕಳೆಯುತ್ತಿದ್ದ.ಒಮ್ಮೆ ಆತನಿಗೆ ಮೊಸರು ತಿನ್ನುವ ಆಸೆಯಾಯಿತು ಭಿಕ್ಷೆ ಬೇಡುವಾಗ ಕೇಳಿಕೊಂಡ ಆದರೆ ಪುಟ್ಟ ಮಡಿಕೆಯಲ್ಲಿ ಸ್ವಲ್ಪವೇ ಹಾಲು ದಕ್ಕಿತು, ಅದಕ್ಕೆ ಚಿಟಿಕೆ ಹುಳಿ ಹಿಂಡಿ ಒಂದು ಮರದ ಬಳಿ ಕಿಳಿತು ಹಾಲು ಮೊಸರು ಆಗುವುದನ್ನೇ ವಿಶ್ರಾಂತಿ ಪಡೆಯುತ್ತಾ ಹಾಗೇ ಕಾಯುತ್ತಾ, ದಣಿದ ದೇಹಕ್ಕೆ ಕೂಡಲೇ ನಿದ್ರೆ ಬಂದಿತು.ಆಳವಾದ ನಿದ್ರೆ ..............ಹಾಲು ಹೆಪ್ಪಾಗಿ ಮೊಸರಾಯಿತು,ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಕಡೆದೂ ಕಡೆದೂ ಹೆಚ್ಚುಹೆಚ್ಚು ಬೆಣ್ಣೆ ತೆಗೆದ,ಬೆಣ್ಣೆಯಿಂದ ತುಪ್ಪ,ತುಪ್ಪಮಾರಿ ನಾಲ್ಕಾರು ಮೊಟ್ಟೆ ತಂದ ಮೊಟ್ಟೆ ಮರಿಯಾಯಿತು, ಮರಿ ದೊಡ್ಡದಾಗಿ ಮತ್ತೆ ಮೊಟ್ಟೆಗಳಿಟ್ಟಿತು ಹತ್ತು, ನೂರು ಸಾವಿರ ಕೋಳಿಗಳು! ಎಲ್ಲವನ್ನೂ ಮಾರಿ ಚಿನ್ನ ಖರೀದಿಸಿದ,ಚಿನ್ನವನ್ನು ರಾಜನಿಗೆ ಒಂದಕ್ಕೆ ಎರಡರಷ್ಟು ಬೆಲೆಗೆ ಮಾರಿದ,ಮನೆ ಕೊಂಡುಕೊಂಡ ಸರಿ ಸುಂದರ ಮಡದಿಯೂ ಬಂದಳು ಮತ್ತಿನ್ನೇನು ಗಂಡು ಮಗುವೂ ಆಯಿತು.ಮಗ ಬೆಳೆದ,ತುಂಟ ಮಗನ ಚೇಷ್ಟ ನೋಡಲಾರದೆ ತನ್ನಂತೆ ಬುದ್ಧಿವಂತ ವ್ಯಾಪಾರಿಯನ್ನಾಗಿ ಮಾಡಬೇಗೆಂಬ ಆಸೆ ಮಗನನ್ನು ಕುರಿತು ಬುದ್ಧಿ ಹೇಳಿದ,ಬೈದ ಕಡೆಗೆ ಬೆತ್ತದಿಂದ ಫಟಾರ್ ಫಟಾರ್ ಎಂದು ಬಾರಿಸತೊಡಗಿದ, ಕೂಡಲೇ ಪಕ್ಕದಲ್ಲಿದ್ದ ಮಡಿಕೆಗೆ ಕೋಲಿನಿಂದ ಫ್ಹಳಾರ್ ಎಂದು ಹೊಡೆದ, ಕನಸೂ ಮುಗಿದಿತ್ತು ಮಡಿಕೆಯೂ ಚೂರಾಯಿತು ಹಾಲು ಮಣ್ಪಾಲಾಯಿತು.
ಸುಂದರಾಂಗ !
ಅದೊಂದು ದೊಡ್ಡ ಕಾಡು, ಜಿಂಕೆಯೊಂದು ನದಿಯಲ್ಲಿ ನಿರ್ಭಯವಾಗಿ ನೀರು ಕುಡಿಯಿತ್ತಿತ್ತು,ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಕಂಡುಕೊಳ್ಳುತ್ತಾ ಆನಂದದಿಂದ ತಲೆಯೆತ್ತಿ "ಆಹಾ ನನ್ನ ಎರಡೂ ಕೊಂಬುಗಳು ಅದೆಷ್ಟು ಸುಂದರ" ಮತ್ತೆ ನೀರಿನಲ್ಲಿ ತನ್ನ ಕೋಡನ್ನು ಕಂಡು"ಅರೆ ಎರಡೂ ಬೇರೆ ಕೊಂಬಾದರೂ ಅದೆಷ್ಟು ಹೋಲಿಕೆ! ಅದೆಷ್ಟು ಕವಲುಗಳು! ಹರಿತವಾದ ಕೊನೆಗಳು! ಅದೆಷ್ಟು ಬಲಿಷ್ಟ! ಎಂದು ತಲೆ ಎತ್ತಿ ಸುತ್ತಲೂ ನೋಡಿ ಮತ್ತೆಮತ್ತೆ ನೀರಿನಲ್ಲಿ ತನ್ನ ಬಿಂಬವನ್ನು ಜಂಭದಿಂದ ನೋಡಿಕೊಂಡಿತು.ಹಾಗೇ ಜಿಂಕೆ ನೀರುಕುಡಿಯಲು ತಲೆ ಬಗ್ಗಿಸಿದಾಗ ತನ್ನ ಕಾಲುಗಳನ್ನು ಒಮ್ಮೆ ನೋಡಿಕೊಂಡಿತು "ಅರೆರೆ ನನ್ನ ಕಾಲುಗಳು ಮಾತ್ರ ಅದೆಷ್ಟು ಸಣ್ಣದಾಗಿವೆ ಛೆ! ಥೂ ಸ್ವಲ್ಪವೂ ಸುಂದರವಾಗಿ ಇಲ್ಲ! ನನ್ನ ಕೊಂಬೇ ಚೆನ್ನ,ನನ್ನ ಕಾಲುಗಳೇಕೋ ಬಡಕಲು ಸುಂದರವಾಗೇ ಇಲ್ಲ"ಎಂದು ತನ್ನಷ್ಟಕ್ಕೆ ತಾನೇ ಬೇಸರವೂ ಪಟ್ಟಿತ
ಹೀಗೇ ನೀರು ಕುಡಿಯಲು ಬಂದಾಗಲೆಲ್ಲಾ ತನ್ನ ಸುಂದರವಾದ ಅಂಗವಾದ ಕೊಂಬುಗಳನ್ನು ಕಂಡು ಹೆಮ್ಮೆಯಿಂದ ಬಾಳುತ್ತಿದ್ದ ಜಿಂಕೆ ತನ್ನ ಕಾಲುಗಳನ್ನು ನೋಡಿಯೂ ನೋಡದಂತಿತ್ತು.ಹೀಗಿರಲು ಒಂದು ದಿನ ಹುಲ್ಲು ಮೇಯುತ್ತಿದ್ದ ಜಿಂಕೆಯನ್ನು ತೋಳವೊಂದು ಅಟ್ಟಿಸಿಕೊಂಡು ಬಂದಿತು.
ಜಿಂಕೆ ವೇಗದಿಂದ ಓಡತೊಡಗಿತು,ಗಿಡ-ಮರ-ಪೊದೆಗಳನ್ನು ನುಸುಳಿ ಓಡುವಾಗ ಪೊದೆಯೊಂದಕ್ಕೆ ಅದರ ಕೊಂಬುಗಳು ಸಿಲುಕಿ ಬಿಡಿಸಿಕೊಳ್ಳಲಾಗದೆ ವಿಲಿವಿಲಿ ಒದ್ದಾಡತೊಡಗಿತು, ಇನ್ನೇನೆ ತೋಳ ಇದರ ವಾಸನೆ ಗ್ರಹಿಸಿ ಸಮೀಪಿಸುತ್ತಿತ್ತು, ಜಿಂಕೆಗೆ ತೋಳ ಬರುತ್ತಿರುವುದು ಕಾಣುತ್ತಿತ್ತಿ, ಪೊದೆಯಿಂದ ಬಿಡಿಸಿಕೊಳ್ಳಲಾಗದೆ ಜಿಂಕೆ ಸೆಣಸಾಡುತ್ತಿತ್ತು, ಸುಲಭವಾಗಿ ತೋಳ ವಾಸನೆ ಗ್ರಹಿಸಿ ಜಿಂಕೆಯ ಇರುವಲ್ಲಿಗೆ ಬಂದೇ ಬಿಟ್ಟಿತು, ಅದನ್ನು ಕಂಡು ಜಿಂಕೆಗೆ ಮತ್ತಷ್ಟು ಗಾಬರಿಯಾಯಿತು ಪ್ರಾಣ ಕಳೆದುಕೊಳ್ಳುವ ಸಮಯ ತೋಳಗಳು ಹಿಂಡು ಹಿಂಡಾಗಿ ಬಂದು ಪೊದೆಯಲ್ಲಿ ಸಿಕ್ಕಿಬಿದ್ದ ತನ್ನನು ಸುಲಭವಾಗಿ ಬೇಟೆಯಾಡಿ ಕಾಲು,ಬೆನ್ನು,ಹೊಟ್ಟೆ ತಲೆ ಎಲ್ಲವನ್ನೂ ಕಿತ್ತುಕಿತ್ತು ತಿನ್ನುವ ದೃಶ್ಯವನ್ನು ಒಮ್ಮೆ ನೆನೆಯಿತು,ಕಾಲು! ಅರೆ ಕಾಲು ಎಂದು ತಕ್ಷಣ ತನ್ನ ಬಲಿಷ್ಟವಾದ ಕಾಲುಗಳನ್ನು ಹಿಂದಕ್ಕೆ ಬಾಗಿಸಿ ತನ್ನೆಲ್ಲಾ ಶಕ್ತಿಮೀರಿ ತಳ್ಳುತ್ತಾ ಹಿಂದೆ ಮುಂದೆ ಜಗ್ಗುತ್ತಾ ಪೊದೆಯಿಂದ ಕೋಡನ್ನು ಬಿಡಿಸಿಕೊಂಡು ಛಂಗನೆ ನೆಗೆದು ಅಲ್ಲಿಂದ ಪರಾರಿಯಾಯಿತು,ದೂರದ ಹುಲ್ಲು ಪ್ರದೇಶಕ್ಕೆ ಬಂದು ಭಯದಿಂದ ಹಿಂದೆ ನೋಡುತ್ತಾ ನಿಂತಿತು, ಕಾಲುಗಳು ನಡುಗುತ್ತಿತ್ತು.ಒಮ್ಮೆ ಅದರಕಡೆ ನೋಡಿಕೊಂಡು ಹೆಮ್ಮೆ ಪಟ್ಟಿತು,ನಾನು ನನ್ನ ಕೊಂಬಿನ ಸೌದರ್ಯವನ್ನು ಕಂಡು ಜಂಭದಿಂದಿದ್ದೆ ಆದರೆ ಅದರಿಂದಲೇ ಈದಿನ ನನಗೆ ತೊಂದರೆಯಾಯಿತು,ಅದೇ ಕಾಲುಗಳನ್ನು ನೋಡಿ ಅಸಹ್ಯ ಪಡುತ್ತಿದ್ದೆ ಅವೇ ನನ್ನನ್ನು ಅಪಾಯದಿಂದ ಪಾರು ಮಾಡಿತು ಎನ್ನುವುದನ್ನರಿಯಿತು.
ಮದರ್ಸ್ ಡೇ
ತಾಯಿಗೆ ಅವಳ ಮಮತೆ, ಮಹತ್ವಕ್ಕೆ ಗೌರವ ಸೂಚಿಸುವ ದಿನವೆಂದು ಮಗನೊಬ್ಬ ನೂರಾರು ಮೈಲು ದೂರದಲ್ಲಿದ್ದ ಅಮ್ಮನಿಗೆ ಹೂವಿನಗುಚ್ಚವನ್ನು ಪಾರ್ಸಲ್ ಮಾಡಲೆಂದು ಹೂವಿನ ಅಂಗಡಿಗೆ ತನ್ನ ಹೊಸ ಕಾರಿನಲ್ಲಿ ಬಂದ.
ಅಲ್ಲೊಬ್ಬ ಪುಟ್ಟ ನಿರ್ಗತಿಕ ಬಾಲಕಿ ಈ ಮಗನಿಗೆ ಕೈಚಾಚಿ ಒಂದು ಡಾಲರ್ ಗಾಗಿ ಭಿಕ್ಷೆ ಬೇಡಿದಳು,ಕಾರಣವೇನೆಂದು ಕೇಳಲು ಆಕೆ ತನ್ನ ತಾಯಿಗೆ ಒಂದು ಹೂ ಕೊಂಡು ಕೊಡಬೇಕು ಎಂದಳು.ಒಂದೇ ಡಾಲರ್ ಸಾಕೆ? ಎಂದುಕೊಳ್ಳುತ್ತಾ ಅನುಮಾನದಿಂದ ಡಾಲರನ್ನು ಕೊಡದೆ ಮಗನು ಒಂದು ಹೂವನ್ನೇ ಕೊಡಿಸಿದ.ಆ ಬಾಲಕಿ "ದಯಮಾಡಿ ಸ್ವಲ್ಪ ದೂರ ಡ್ರಾಪ್ ಮಾಡ್ತೀರಾ ಎರಡುಮೈಲಿ ನಡೆದು ಹೋಗಬೇಕು ಅಮ್ಮನಿಗೆ ಹೂ ಕೊಡಲು"ಎಂದಳು.ಸರಿ ಬಂದ ಕೆಲಸ ತಾಯಿಗೆ ಹೂ ಪಾರ್ಸೆಲ್ ಮಾಡಿದ್ದಾಗಿದೆ ವಾಪಸ್ಸಾಗುವ ದಾರಿಯಕಡೆಯೇ ಕೈತೋರಿಸುತ್ತಿದ್ದಾಳೆ "ಸರಿ ನಡಿ ಡ್ರಾಪ್ ಮಾಡ್ತೀನಿ" ಕಾರಿನಲ್ಲಿ ಎರಡುಮೈಲಿ ತಲುಪಲು ಹೆಚ್ಚು ಸಮಯವಾಗಲಿಲ್ಲ"ಹಾ ಇಲ್ಲೇ ಇಲ್ಲೇ" ಎಂದು ತಡೆದು, ಕಾರ್ ನಿಂತ ತಕ್ಷಣವೇ ಬಾಗಿಲು ತೆರೆದು ಒಡಿದಳು,...ಎಲ್ಲಿಗೆ ?... ಪ್ರಶಾಂತ ಸ್ಥಳದಲ್ಲಿ ಶಾಂತವಾಗಿ ಮಲಗಿದ್ದ ತಾಯಿಯ ಸಮಾಧಿಯ ಕಡೆಗೆ!,ಮಗನಿಗೆ ಮೈ ಛುಳ್ ಎಂದಿತು,ಥಟ್ಟನೆ ಕಾರನ್ನು ಅಂಗಡಿಯ ಕಡೆ ಓಡಿಸಿ,ತಾನು ಮಾಡಿದ್ದ ಪಾರ್ಸೆಲ್ ರದ್ದುಮಾಡಿ,ಒಂದು ಹೂಗುಚ್ಚವನ್ನು ಕೊಂಡು ತಾನೇ ಖುದ್ದಾಗಿ ಅಮ್ಮನನ್ನು ಕಾಣಲು ಹೊರಟ.
ಗಾಂಪರ ಗುರು(ಹಾಸ್ಯ)
ಗಾಂಪರ ಗುರುಗಳು ಶಿಷ್ಯರನ್ನೂ ಕರೆದುಕೊಂಡು ಒಮ್ಮೆ ದೂರದೂರಿಗೆ ಎತ್ತಿನಗಾಡಿಯಲ್ಲಿ ಪ್ರಯಾಣ ಹೊರಟಿದ್ದರು.ಆಯಾಸವಾಗಿದ್ದ ಗುರುಗಳು ಅಲುಗಾಡುವ ಗಾಡಿಯಲ್ಲಿ ಹಾಗೇ ತೂಕಡಿಸುತ್ತಿದ್ದರು,ಆಗ ಅವರ ತಲೆಯ ಮೇಲಿನ ರುಮಾಲು ಗಾಳಿಗೆ ಹಾರಿ ಹೋಯಿತು.
ಆದರೆ ಗುರುಗಳ ಅಪ್ಪಣೆಯಿಲ್ಲದೆ ಶಿಷ್ಯರು ಎಂದೂ ಏನೂ ಮಾಡುವಹಾಗಿರಲಿಲ್ಲ. ಶಿಷ್ಯರು ಸುಮ್ಮನಿದ್ದರು.ಗುರುಗಳು ತುಸು ಹೊತ್ತಿನ ಬಳಿಕ ಎದ್ದು ನೋಡಲು ರುಮಾಲು ಕಾಣದೆ ಶಿಷ್ಯರಿಗೆ ಬೈದರು.ಇನ್ನು ಮುಂದೆ ಏನೇ ಬಿದ್ದರೂ ತೆಗೆದು ಗಾಡಿಯಲ್ಲಿ ಹಾಕಿ ಎಂದು ಹೇಳಿ ಮತ್ತೆ ತೂಕಡಿಸತೊಡಗಿದರು. ನಂತರ ಎತ್ತುಗಳು ಹಾದಿಯಲ್ಲೇ ಸಗಣಿ ಹಾಕಿದವು, ಶಿಷ್ಯರು ತಕ್ಷಣ ಅದನ್ನು ಬಾಚಿ ಗಾಡಿಯಲ್ಲಿ ಹಾಕಿದರು, ವಾಸನೆ ತಡೆಯಲಾಗುವುದೇ? ಗುರುಗಳು ಎದ್ದು ರೇಗಿದರು, ಇನ್ನು ಮುಂದೆ ಹೀಗಾಗದಿರಲು ಒಂದು ಕಾಗದದ ಮೇಲೆ ಒಂದು ಪಟ್ಟಿ ಬರೆದು,ಇವು ಬಿದ್ದರೆ ಮಾತ್ರ ತೆಗೆಯಬೇಕು ಬೇರೇನೂ ಕೂಡದು ಎಂದರು.ಸ್ವಲ್ಪ ಹೊತ್ತಿನ ಬಳಿಕ ಹಳ್ಳಿ ದಾರಿಯ ಹಳ್ಳ ಕೊಳ್ಳ ದಾಟಿ ಹೋಗುತ್ತಿರಲು ಗುರುಗಳು ಗಾಡಿಯಿಂದ ಜಾರಿ ಬಿದ್ದರು,ಕೂಡಲೇ "ಅಯ್ಯಯ್ಯೋ ನನ್ನನು ಎತ್ತ್ರೋ ಎಂದು ಗೋಗರೆದರು" ಅದಕ್ಕೆ ಗಾಂಪ ಶಿಷ್ಯರು "ಗುರುಗಳೇ ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇಲ್ಲವೆಲ್ಲಾ" ಎಂದರು, ಅಯ್ಯೋ ಆಪಟ್ಟಿ ಕೊಡಿ ಎಂದು ಕಸಿದುಕೊಂಡು ತಮ್ಮ ಹೆಸರನ್ನೂ ಸೇರಿಸುವ ವರೆಗೂ ಶಿಷ್ಯರು ಅವರನ್ನು ಮುಟ್ಟಲೇ ಇಲ್ಲ
ಗಡ್ಡ
ಒಂದೂರಿನಲ್ಲಿ ಸಲೀಮ್ ಖಾನ್ ಎನ್ನುವ ಮುದುಕ ಇದ್ದ.ಇಳಿ ವಯಸ್ಸಿನಲ್ಲಿ ಎಲ್ಲರಿಗೂ ಸಾಮಾನ್ಯವಾಗಿ ತಲೆ ಕೂದಲಿನಲ್ಲಿ ದುರ್ವಾಸನೆ ಬರುವಂತೆ ಎದೆ ಮಟ್ಟದವರೆಗೂ ಗಡ್ಡಬಿಟ್ಟಿದ್ದ ಸಲೀಮನ ಬಳಿ ವಾಸನೆ ಸ್ವಲ್ಪ ಹೆಚ್ಚಾಗಿಯೇ ಇತ್ತು.ಆತನ ಮನೆಯವರಿಗೂ ಅದು ತಿಳಿದಿತ್ತು. ತಿಳಿಸುವುದು ಕಷ್ಟಕರವಾದ ಕೆಲಸವಾಗಿತ್ತು.
ಒಂದುದಿನ ಆತ ಮಲಗುವ ಮುನ್ನ ಆತನ ಮೊಮ್ಮಗ ಅವನ ಬಳಿ ಬಂದು "ತಾತಾ ನೀವು ಮಲಗುವಾಗ ನಿಮ್ಮ ಗಡ್ಡ ಹೊದಿಗೆಯ ಮೇಲಿರುತ್ತದೋ ಅಥವಾ ಒಳಗಿರುತ್ತದೋ?"ಎಂದ.ಮುದುಕ ಮೊಮ್ಮಗನಿಗೆ ಜಾಣ್ಮೆಯಿಂದ ಎನೋ ಒಂದು ಉತ್ತರ ಕೊಟ್ಟು ಕಳಿಸಿದ. ಆದರೆ ಆದಿನ ಮಲಗುವಾಗ ಸಲೀಮನಿಗೆ ಏಕೋ ಗಡ್ಡದ ಕಡೆ ಗಮನ ಹರಿಯಿತು,ಹೊದಿಗೆಯ ಮೇಲಿದ್ದ ಗಡ್ಡವನ್ನು ಒಳಕ್ಕೆ ತುರುಕಿ ಮಲಗಿದ,ಆದರೂ ಸಮಾಧಾನವಾಗಲಿಲ್ಲ ಏನೋ ಕಸಿವಿಸಿ ಮತ್ತೆ ಹೊರಗೆ ತೆಗೆದ,ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಒಳಗೆ ಹೀಗೇ ರಾತ್ರಿಯಿಡೀ ಒದ್ದಾಟ ನಿದ್ರೆ ಬಾರದಾಗಿ ತಲೆಕೆಟ್ಟು ಮೇಲೆದ್ದು ನುಣ್ಣಗೆ ಗಡ್ಡ ಬೋಳಿಸಿ ನೆಮ್ಮದಿಯಿಂದ ಮಲಗಿದ.ಬೆಳಿಗ್ಗೆ ಮನೆಯವರೆಲ್ಲರಿಗೂ ಒಂದುಕಡೆ ಆಶ್ಚರ್ಯ ಮತ್ತೊಂದು ಕಡೆ ಸಂತೋಷ.
ಧರ್ಮ
ಋಷಿಯೊಬ್ಬನೆ ತಪಸ್ಸಿಗೆ ಕುಳಿತಿರಲು ಪಕ್ಷಿಯೊಂದು ಅವನ ತಲೆಯ ಮೇಲೆ ಗಲೀಜು ಮಾಡಿತು,ಕೋಪದಿಂದ ಆ ಪಕ್ಷಿಗೆ ಶಪಿಸಿ ಕೇವಲ ನೋಟದಿಂದಲೇ ಅದನ್ನು ಭಸ್ಮ ಮಾಡಿದ.ಆದಿನ ದೂರ ಪ್ರಯಾಣ ಹೊರಟಿದ್ದ ಋಷಿಯು ಕಮಂಡಲದಲ್ಲಿ ನೀರು ಮತ್ತು ಸ್ವಲ್ಪ ಆಹಾರ ಭಿಕ್ಷೆಗಾಗಿ ಒಂದು ಮನೆಯ ಮುಂದೆ ಬಂದು ನಿಂತು "ಭವತಿ ಭಿಕ್ಷಾಂದೇಹಿ"ಎಂದು ಕೂಗಿದ.ಆ ಮನೆಯಾಕೆ ಬಹಳ ತಡಮಾಡಿ ಹೊರಗೆ ಬಂದಳು,ಕುಪಿತ ಋಷಿಯನ್ನು ಕುರಿತು"ಋಷಿವರ್ಯಾ ಸ್ವಲ್ಪ ತಾಳು ನನ್ನನು ಪಕ್ಷಿಯಂತೆ ಸುಡಬೇಡ, ಈ ಮನೆಯ ಗೃಹಿಣಿಯಾದ ನಾನು ಮೊದಲು ನನ್ನ ಮನೆವರ ಕೆಲಸ ಮಾಡುವುದು ನನ್ನ ಧರ್ಮ" ಎಂದಳು,,ಋಷಿಗೆ ತನ್ನ ತಪ್ಪಿನರಿವಾಯಿತು.ಧರ್ಮವನ್ನು ತಾನೂ ಪಾಲಿಸಬೇಕೆಂದು ಆಕೆಯನ್ನು "ನಾನೂ ಧರ್ಮದ ಪಾಠವನ್ನು ಕಲಿಯಬೇಕಿದೆ"ಎಂದ ಅದಕ್ಕವಳು ಧರ್ಮವ್ಯಾದನನ್ನು ಕಾಣಲು ಸೂಚಿಸಿದಳು.ಧರ್ಮವ್ಯಾದ ಮಾಂಸದ ವ್ಯಾಪಾರಿ,ಋಷಿ ಆತನ ಬಳಿ ಹೋಗಲು ಆತ ತನ್ನೆಲ್ಲಾ ಗಿರಾಕಿ ಹೋಗುವವರೆಗೂ ಕಾಯಿಸಿದ,ನಂತರ ತನ್ನ ತಂದೆ ತಾಯಿಯರನ್ನು ವಿಚಾರಿಸಿ ನಂತರ ಋಷಿಯನ್ನು ಬಂದ ವಿಚಾರವಾಗಿ ಕೇಳಿದ,ಅಷ್ಟರಲ್ಲಿ ಋಷಿಗೆ ಸಾಕಷ್ಟು ಅರಿವುಮೂಡಿತ್ತು.ಆ ಕೂಡಲೇ ಅಲ್ಲಿಂದ ಹೊರಟು ಅಗಲಿದ್ದ ತನ್ನ ತಾಯಿತಂದೆಯರನ್ನು ಕಂಡು ಕ್ಷಮೆ ಯಾಚಿಸಿ,ಆಶೀರ್ವಾದ ಪಡೆದು ಧರ್ಮ ಪಾಲಿಸಿದ.
ಇನ್ನೂ ನೂರಾರು ಕಥೆಗಳು ಈ ಪುಟದಲ್ಲಿ ಮುಂದೆ ಬರಲಿವೆ, ನೀವೂ ಕಥೆಗಳನ್ನು ಕಳುಹಿಸಿ




