ದಿಟ್ಟೆ

ಹದಿನಾಲ್ಕರ ನಿನ್ನ ಮಗ ಇಂದು
ತೊದಲು ನುಡಿಯಲಿ ಅಮ್ಮ ಎಂದ
ಚೆಲ್ಲಾಡುತ ಮೊದಲ ತುತ್ತು ಅನ್ನವ
ಚಮಚ ಹಿಡಿದು ತಿಂದ
ಅಬ್ಬ ಅದೆಷ್ಟು ಹಿಗ್ಗು ನಿನ್ನ ಮೊಗದಲ್ಲಿ
ಗೌರಿಶಂಕರವನ್ನೇರಿದ ಸಾಧನೆ ನಿನ್ನ ಕಣ್ಣಲ್ಲಿ
ನಕ್ಕಾರು ಕಂಡವರು ಇದೇನು ನಿನ್ನ ಜಂಬ
ಚೂಟಿ ಮಕ್ಕಳಿಲ್ಲವೇ ಊರ ತುಂಬ
ಎಲ್ಲರಂತಲ್ಲ ನಿನ್ನ ಮಗ ,ಅವರೇನು ಬಲ್ಲರು
ಉಬ್ಬಿದ ಅವನ ತಲೆಗೆ ನಿಯತಿನ ಹಣೆಪಟ್ಟಿ
ಶೂನ್ಯ ನೋಟ ಭಾವವಿಲ್ಲದ ಮಾಟಕ್ಕೆ
ಬುದ್ದಿ ಮಾಂದ್ಯದ ಬಿರುದು
ಅದೆಷ್ಟು ಕನಸುಗಳು ನೀ ಹೆಣೆದದ್ದು
ಮೊದಲ ಹೆಜ್ಜೆ, ತೊದಲ್ನುಡಿಗಳ ಸಂಭ್ರಮಕ್ಕೆ ಕಾದಿದ್ದು
ಕನಸುಗಳ ಸುತ್ತಿಟ್ಟು ಕರಾಳ ವಿಧಿ
ಅಳಿಸಿತ್ತು ನಿನ್ನ ಮೊಗದ ಸಿರಿನಗುವ
ಒಮ್ಮೆಲೇ ಮಣಿದು ಮುಪ್ಪಾಯ್ತು, ನಿನ್ನ ಮೈಮನ
ಮಣಿಯಲೊಪ್ಪಲಿಲ್ಲ ನಿನ್ನ ತಾಯ್ತನ
ಕಾಪಿಟ್ಟ ಕಂದನ ಜೀವನದ ಧಗೆಯಿಂದ
ಬಗೆಬಗೆಯ ನೋಟದಾ ಕೊಂಕಿನಲಿ
ಹಿಡಿಯಾಗಿಸಿದೆ ಜೀವನ ಅವನೊಳಿತಿಗಾಗಿ
ಉಳಿದೆ ನೀ ಅವನ ಕುಂಟು ಬದುಕಿನಾ ಊರುಗೋಲಾಗಿ
ದೂರ ದೂರ ಸರಿಯಿತು ಲೋಕ ದಿನಗಳೆಂದಂತೆ
ದಿಟ್ಟೆ ನೀ,ನೆಟ್ಟು ನಿಂತೆ ಅವನ ನೆರಳಿನಂತೆ
ವಿಧಿಯ ಸವಾಲ ಮೆಟ್ಟಿ ನಿಂತಿತು ತಾಯ್ತನ
ಅಮ್ಮ, ನಿನ್ನ ಅಂತಃಶಕ್ತಿಗಿದೋ ನಮನ