ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಉ)

ಉಮಾ ಕಾತ್ಯಾಯನೀ ಗೌರಿ

ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ | ಹಿಮವಂತ ಗಿರಿಯ ಕುಮಾರಿ | ಪ |

ರಮೆಯರಸನ ಪದಕಮಲ ಮಧುಪೆ ನಿತ್ಯ| ಅಮರವಂದಿತೆ ಗಜಗಾಮಿನಿ ಭವಾನಿ ||ಅ.ಪ|| 

 

ಪನ್ನಗಧರನ ರಾಣಿ ಪರಮಪಾವನಿ | ಪುಣ್ಯಫಲ ಪ್ರದಾಯಿನಿ ಪನ್ನಗವೇಣಿ ಶರ್ವಾಣಿ|| ಕೋಕಿಲವಾಣಿ | 

ಉನ್ನತಗುಣಗಣ ಶ್ರೇಣಿ | ಎನ್ನ ಮನದ ಅಭಿಮಾನಿ ದೇವತೆಯೆ | ಸ್ವರ್ಣಗಿರಿ ಸಂಪನ್ನೆ ಭಾಗ್ಯನಿಧಿ || ನಿನ್ನ ಮಹಿಮೆಯನು ಬಿನ್ನಾಣದಲಿ ನಾ | ಬನ್ನಿಸಳಲವೆ ಪ್ರಸನ್ನ ವದನಳೆ ||೧|| 

 

ಮುತ್ತಿನ ಪದಕ ಹಾರ ಮೋಹನ ಸರ ಉತ್ತಮಾಂಗದಲಂಕಾರ || ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ | ರತ್ನಕಂಕಣದುಂಗುರ || ತೆತ್ತೀಸಕೋಟಿ ದೇವತೆಗಳ್ ಪೊಗಳುತ | ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ || ಸುತ್ತಲು ಆಡುವ ನರ್ತನ ಸಂದಣಿ | ಎತ್ತ ನೋಡಿದರತ್ತ  ತಥೈ ವಾದ್ಯ ||೨||

 

ಪೊಳೆವ ವಸನ ಕಂಚುಕ ತಿಲಕ | ಥಳಪಿ ಮೂಗುತಿ ನಾಸಿಕ || ಕಳಿತ ಮಲ್ಲಿಗೆ ಗಂಧಿಕ ಮುಡಿಗೆ ಸೂಸುಕ | ಸಲೆ ಭುಜ ಕೀರ್ತಿಪಾಟಿಕ | ಇಳೆಯೊಳು ಮಧುರಾ ಪುರಲೊಳು ವಾಸಳೆ | ಅಳಿಗಿರಿ ವಿಜಯವಿಠಲನ ಕೊಂಡಾಡುವ | ಸುಲಭ ಜನರಿಗೆಲ್ಲ ಒಲಿದು ಮತಿಯನೀವ || ಗಿಳಿಕರ ಶೋಭಿತೆ ಪರಮ ಮಂಗಳ ಹೇ ||೩||

ಉದರಪೂರ್ತಿಯ ಕೊಡದಿರು ಉದಧಿಶಯನ

ಉದರಪೂರ್ತಿಯ ಕೊಡದಿರು ಉದಧಿಶಯನ ||ಪ|| 

ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ||ಅ.ಪ||

 

ಮುದದಿ ನಿನ್ನ ಚರಣವನು ಸ್ಮರಿಸುವುದು | ಪರಿಹಾರವು ಬಹು ಗರ್ವವು ಹೆಚ್ಚುವುದು ಎನಗೆ | ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ | ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ ||೧|| 

 

ತನುಮನವು ನಿನ್ನ ವಿಷಯಕ್ಕೆರಗಲಿ | ಅನುಮಾನವಿದ್ದ ಪರಿಯಲ್ಲಿ ತೊಲಗಿ | ವನಜಸಂಭವನ್ನೆಯ್ಯ  ವೈಕುಂಠಪತಿ ನಿನಗೆ | ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ ||೨|| 

 

ಗಜಮದದಿ ಕಂಗೆಟ್ಟ ಪರಿಯೆನ್ನ ಮಾಡದೇ | ಅಜಮಿಳಗೆ ಒಲಿದಂತೆ ಎನಗೆ ವೊಲಿದೂ |

ಸುಜನ ರಕ್ಷಕನೆಂಬ ಬಿರುದು ಬೇಕಾದರೆ | ನಿಜವಾಗಿ ದಯಮಾಡೋ ವಿಜಯವಿಠಲನೆ ||೩||

 

 

 

 

ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು

ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು ||ಪ|| 

ಚಕ್ರಧರ ಪರಮಾತ್ಮನೊಬ್ಬ ನಲ್ಲದಿಲ್ಲವೆಂದು ||ಅ|| 

 

ಪೋರೆಯೊಪರದೈವವೆಂದು ಕರೋ ಮೊರೆಯಿಡಲು ಕಂಡು | ನರದ ಬೃಂದಾರಕರು ಅಂದು ಪೊರೆದರೆ ಬಂದು | ಕರದೊಲೊಪ್ಪುವ ಮುತ್ತಿಗೆ ಕನ್ನಡಿಯ ನೋಡಲೇಕೆ | ಭರದಿ ಗಜೇಂದ್ರನ್ನ ಕಾಯ್ವ ಹರಿಯೆ ಪರದೈವವೆಂದು ||೧||

 

ಮತಾಂತರದಲ್ಲಿ ಭಗವದ್ಗೀತೆಯನದ್ವೈತವೆಂದು | ವಾತಗುದ್ದಿ ಕೈಗಳೆರೆಡು ನೋಯಿಸಲೇಕೆ | ಏತತ್ಸರ್ವಾಣಿ ಭೂತಾನ್ಯೆಂಬ ಶೃತ್ಯರ್ಥವ ತಿಳಿದು | ಜ್ಯೋತಿರ್ಮಯ ಕಿರೀಟಿ ಅಚ್ಚ್ಯುತಾಂತರ್ಯಾಮಿಯೆಂದು | ಭಾನು ಕೋಟಿ ತೇಜೋತ್ತಮ ವರದ ಶ್ರೀಹರಿಯೆಂಬ | ಜ್ಞಾನವೆ ಕೈವಲ್ಯದ ಸೋಪಾನವೆಂದು ಸಭೆಯಲ್ಲಿ ||೩|| 

 

ತಪ್ಪಾದ ವಿಚಾರದಿಂದ ತತ್ತರವ ಪಡಲೇಕೆ | ತಪ್ಪು ಶಾಸ್ತ್ರ ವೋದಿ ದೇಹ ದಂಡಿಸಲೇಕೆ | ಕಲ್ಪಕಲ್ಪಾಂತರದಲ್ಲಿ ವಟಪತ್ರಶಯನನಾಗಿ | ಮುಪ್ಪು ಮೊದಲಿಲ್ಲದ ಮುಕುಂದನಲ್ಲದಿಲ್ಲವೆಂದು ||೪|| 

 

ಶಕ್ತಿ ಶೂನ್ಯನಿವನೆಂದು ಸಂಶಯವ ಪಡಲೇಕೆ | ಕೃತ್ಯದಿಂದ ನೋಡೆ ಶ್ರೀಕೃಷ್ಣನೊಬ್ಬನೆ | ಹತ್ತಾರು ಸಾಸಿರ ನೂರು ಗೋಪಸ್ತ್ರೀಯರನು ಆಳಿ | ನಿತ್ಯ ಬ್ರಹ್ಮಚಾರಿಯೆನಿಪ ನಿಷ್ಕಳಂಕನೊಬ್ಬನೆಂದು ||೫|| 

 

ಉದಯದಲೆದ್ದು ಶ್ರೀ ಗುರುವೆನ್ನಿರೊ

ಉದಯದಲೆದ್ದು ಶ್ರೀ ಗುರುವೆನ್ನಿರೊ | 

ಉದಧಿನಿವಾಸ ಸದ್ಗುರುವೆನ್ನಿರೊ ||ಪ||

 

 ಕರುಣಾಕರನೆನ್ನಿ ಗುರುಮುರಹರನೆನ್ನಿ | 

ಕರಿವರ ಹರಿ ಸರ್ವೋತ್ತಮನೆನ್ನಿ ||೧|| 

 

ಸುರಮುನಿವರನೆನ್ನಿ ಗುರುಗಿರಿಧರನೆನ್ನಿ | 

ನರಕೀಟಕನ ಪಾಲಿಪನೆನ್ನಿರೊ ||೨|| 

 

ಶರಣರಕ್ಷಕನೆ ವರದಾಯಕನೆನ್ನಿ | 

ತ್ರೈಲೋಕ್ಯನಾಥ ತಾರಕನೆನ್ನಿರೊ ||೩|| 

 

ಮುಕ್ತಿದಾಯಕನೆನ್ನಿ | 

ಮಹಿಪತಿ ಗುರು ಭಾವನಾಶನೆನ್ನಿ ||೫||

ಉಸರಬಹುದೆನಗೆ ಕೃಷ್ಣ ಬಾಗಿಲಲಿ

ಉಸರಬಹುದೆನಗೆ ಕೃಷ್ಣ ಬಾಗಿಲಲಿ | ನಸು ನಗುತ ನಿಂತ ಬಗೆಯು ||ಪ|| 

ತಿಳಿದು ಪೂಜೆಯು ಮಾಡುವ ಭಕುತರನು | ಬಳಿಗೆ ಕರೆವುದು ತೀವ್ರವೊ | 

ಖಳಕುಲದ ಜನರು ಬರಲು ಹೋಗೆಂದು | ಕಳುಹದ ಬಗೆಯ ಏನೊ ಕೃಷ್ಣ |೧| 

 

ಸುಳಿದ ಜನಗಳ ಕೂಡ ಸುಂಕವನು | ಸೆಳೆಕೊಂಬ ಬಗೆಯು ಎನೋ | 

ಕೆಳದಿಯರ ಬಂದವರನಾ ಮೋಹಿಸಿ | ಕೊಳನೂದುತಲಿ ನಿಂದಿಯೊ ಕೃಷ್ಣ ||೨|| 

 

ಬಲಿಯ ಕಾಯಿದ ಬಗೆಯಲಿ ದಾಸರನ | ಚಲಿಸದಲೆ ಕಾವ ಬಗಿಯೊ | 

ನೆಲೆ ವಾಸುದೇವವಿಠಲ ಭಕುತನ್ನ | ಸಲಿಗೆ ಬಿನ್ನಪ ಸಲಿಪುದೊ ||೩||

 

 

ಉಣಲೊಲ್ಲೆಯೇತಕೋ ಕಂದ

ಉಣಲೊಲ್ಲೆಯೇತಕೋ ಕಂದ | ಆವ ಗೋವಳತಿಯರ | ಕಣ್ಣು ದೃಷ್ಟಿ ತಾಗಿತಯ್ಯ ||ಪ|| 

ಅನುದಿನ ನಮ್ಮೆಲ್ಲರ ಅಗಲಬಾರದೆಂದು | ಮನಸೋತು ಗೋಪಿಯರು ಮೆಚ್ಚಿ ಮದ್ದಿಕ್ಕಿದರೆ ||ಆ|| 

 

ಅಸುರ ಪೂತನಿಯಿತ್ತ ವಿಷದ ಮೊಲೆಗಳನು0ಡು | ಬಸಿರೊಳಗೆ ಬಲಿತು ಕಲ್ಮಷ ನೆಲೆಸಿತೆ || ಪೋಸ ಜವ್ವನದ ನಾರಿಯರು ಮುದ್ದಿಸಲವರ ಅಧ| ರಸುಧೆ ನಿನಗೆ ಹಸಿವೆ ಮಾಣಿಸಿತೆ ಕಂದ ||೧|| 

 

ಹೊದ್ದಿ ಗೊಲ್ಲರ ಮನೆಯಲಿದ್ದಷ್ಟು ಬೆಣ್ಣೆಯನು| ಕದ್ದು ಮೆದ್ದುದಕ್ಕೆ ಹೊಟ್ಟೆ ತುಂಬಿತೆ|| ಅಬ್ಡಿಯೊಳಗಿದ್ದಮೃತ ಅಸುರರಿಗೆ ವ0ಚಿಸಿ| ಮೆದ್ದಿಸಲು ಸುರರಿಗೆ ಹಿತವಾಯಿತೇ ಕಂದ ||೨|| 

 

ತುರುಗಾಯ್ವ ಗೊಲ್ಲರು ಕಲಸಿ ಅನ್ನವ ಕೊಡಲು | ಹರುಷದಿಂದುಂಬೋವತಿ ಪ್ರಿಯವಾಯಿತೆ || ಪರಮಭಕ್ತರು ನಿನ್ನ ಪೂಜಿಸುತ ಅರ್ಪಿಸಿದ | ಪರಿಪರಿಯ ನೈವೇದ್ಯ ಹಿತವಾಯಿತೇ ಕಂದ ||೩|| 

 

ಸಣ್ಣಕ್ಕಿಯೋಗರವು ಸೊಗಸಾದ ಕೆನೆ ಮೊಸರು| ಬಣ್ಣಿಸುತ ನಾನುಣಿಸೆ ಒಲ್ಲದಾಯ್ತೆ | ಚಿಣ್ಣ ನಿನ್ನನು ತಮ್ಮ ತೊಡೆಯ ಮೇಲೆತ್ತಿಕೊಂಡಾ | ಹೆಣ್ಣುಗಳು ಉಣಿಸಿದರೆ ಹೊಟ್ಟೆ ತುಂಬುವುದೆ ||೪|| 

 

ವರ ಮಹಾಋಷಿಗಳು ಯಾಚಿಸುತ ತಂದಿತ್ತ | ಪರಿಪರಿಯ ನೈವೇದ್ಯಪ್ರಿಯವಾಯಿತೆ | ವರ ಪುರಂದರವಿಠಲರಾಯನೇ ನೀ ಪೇಳೋ | ನಿರತ ಸಂತುಷ್ಟನೆಂಬುದು ನಿಜವಾಯಿತೇ ಕಂದ ||೫||

ಉದರವೈರಾಗ್ಯವಿದು

ಉದರವೈರಾಗ್ಯವಿದು| ನಮ್ಮ| ಪದುಮನಾಭನಲ್ಲಿ ಲೇಶ ಭಕುತಿಯಲ್ಲ ||ಪ|| 

ಉದಯಕಾಲದಲೆದ್ದು ಗಡಗಡ ನಡುಗುತ | ನದಿಯಲ್ಲಿ ಮಿಂದೆನೆಂದು ಹಿಗ್ಗುತಲಿ || ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು| ಬದಿಯಲ್ಲಿದ್ದವರಿಗಾಶ್ವರ್ಯವು ತೋರುವು|ದುದರ ||೧||

 

 ಕಂಚುಗಾರನ ಬಿಡಾರದಂದದಿ | ಕಂಚು ಹಿತ್ತಾಳೆ ಪ್ರತಿಮೆಗಳ ನೆರಹಿ | ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ | ವಂಚನೆಯಿಂದಲಿ ಪೂಜೆಯ ಮಾಡುವು| ದುದರ ||೨|| 

 

ಕರದಲಿ ಜಪಮಣಿ ಬಾಯಲಿ ಮಂತ್ರವು | ಅರಿವ ಮುಸುಕು ಮೋರೆಗೆ ಹಾಕಿ || ಪರಸತಿಯರ ಗುಣ ಮನದಲಿಸ್ಮರಿಸುತ | ಪರಮ ವೈರಾಗ್ಯಶಾಲಿಯೆಂದೆನಿಸುವುದು|| ದುದರ ||೩|| 

ಬೂಟಕತನದಲಿ ಬಹಳ ಭಕುತಿ ಮಾಡಿ| ದಿಟನೀತ ಸರಿಯಾರಿಲ್ಲೆನಿಸಿ|| ನಾಟಕ ಸ್ತ್ರೀಯಂತೆ ಬಯಲ ಡಂಭವ ತೋರಿ| ಊಟದ ಮಾರ್ಗದ ಜ್ಞಾನವಿದಲ್ಲದೆ|| ಉದರ ||೪|| 

 

ನಾನು ಎಂಬುದು ಬಿಟ್ಟು ಜ್ಞಾನಿಗಳೊಡನಾಡಿ| ಏನಾದರು ಹರಿಪ್ರೇರಣೆಯೆಂದು| ಧ್ಯಾನಿಸಿ ಮೌನದಿಂ ಪುರಂದರವಿಥಲನ ಕಾಣದೆ ಮಾಡಿದ ಕಾರ್ಯಗಳೆಲ್ಲವು|| ಉದರ ||೫||

 

 

 

 

 

ಉಬ್ಬದಿರು ಉಬ್ಬದಿರು

ಉಬ್ಬದಿರು ಉಬ್ಬದಿರು ಎಲೆ ಮಾನವ ||ಪ|| 

ಹೆಬ್ಬುಲಿಯಂತೆ ಯಮ ಬೋಬ್ಬಿಡುತ ಕಾದಿರುವ ||ಆ||

 

 ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ | ಭೋಗಭಾಗ್ಯಗಳೆಂದು ಬಳಲಲೇಕೊ | 

ನಾಗಪೆಡೆ ನೆರಳಲ್ಲಿ ನಡುಗೊ ಕಪ್ಪೆಯ ರೀತಿ | ಕೂಗಿ ಚೀರಿದರೆ ನಿನ್ನಾಗ ಕೇಳುವರೆ ||೧|| 

 

ಮಾಳಿಗೆಮನೆಯೆಂದು ಮತ್ತೆ ಸತಿಸುತರೆಂದು | ಜಾಳಿಗೆ ಧನ ಧಾನ್ಯ ಪಶುಗಳೆಂದು || 

ವೇಳೆತಪ್ಪದೆ ತಿಂಬ ಕೂಳು ತನಗುಂಟೆಂದು | ಗಾಳಿಗಿಕ್ಕಿದ ದೀಪ ಬಾಳು ಬದುಕೆಲ್ಲ ||೨|| 

 

ಅಸ್ಥಿರದ ಭವದೊಳಗೆ ಅತಿಶಯಗಳೆನಿಸದಲೆ | ವಸ್ತು ಇದರಲಿ ಕೇಳು ವೈರಾಗ್ಯವ || 

ವಿಸ್ತಾರಮಹಿಮ ಶ್ರೀಪುರಂದರವಿಠಲನ ಸ್ವಸ್ಥಚಿತ್ತದಿ ನೆನೆದು ಮುಕ್ತಿ ಪಡೆ ಮನುಜ ||೩|| 

 

ಉದಯ ಕಾಲವದಗಿತೀಗಲೂ ನಿನ್ನನ್ನಂತೆ ರವಿ

     ಉದಯ ಕಾಲವದಗಿತೀಗಲೂ ನಿನ್ನನ್ನಂತೆ ರವಿ ||ಪ|| 

ಪದುಮನಾಭಾನ ಸ್ಮರಿಸುವ ಮೋ | ದದಿಯಾನ್ಹೀಕ  ಬುಧರು ಮಾಳ್ಪ ||ಅ|| 

 

ಅಪರಾತ್ರಿಯಲ್ಲಿ ಎದ್ದು | ಚಪಳಚಿತ್ತರಾಗದಲೆ ಸು| ರಪನ ದೆಸೆಯ ನೋಡಿ ನಮಿಸಿ | ಸುಫಲಗಳನು ಪಡೆಯುವರಿಗೆ ||೧|| 

ಕಣ್ಣುತೆರೆದು ಕೈಗಳುಜ್ಜಿ | ಕನ್ನಡಿಯನ್ನು ನೋಡಿ ಶೌಚ | ವನ್ನು ತೀರಿಸಿ ಸ್ನಾನ ಸಂಧ್ಯೆಗ | ಳನ್ನು ಮಾಳ್ವ ಸದ್ವಿಜರಿಗೆ ||೨||

 ಬ್ರಹ್ಮಯಜ್ಞ ಜಪವು ಮುಖ್ಯ | ಕರ್ಮಗಳಿಂ ಸವಿತೃನಾಮಕ | ಧರ್ಮ ಮೂರುತಿ ಗುರುರಾಮವಿಠಲನ | ಒಮ್ಮನದಲಿ ಧಾನಿಸುವರಿಗೆ ||೩||

ಉಡಿಯ ತುಂಬಿದರು ಮೋದದಿ

ಉಡಿಯ ತುಂಬಿದರು ಮೋದದಿ  | ಮಡದಿಯರು ಜನಕನ ಸುಕುಮಾರಿಗೆ ||ಪ|| 

ಸಡಗರದಲಿ ಹುರುಗಡಲೆ ಕುಬುಸ ಕ | ನ್ನಡಿ ಕದಳಿ ಖರ್ಜೂರ ದ್ರಾಕ್ಷಿಗಳನೂ-ಜನಕನ ಸುಕುಮಾರಿಗೆ ||ಅ||

 

 ಸರಸಿಜಾಕ್ಷಿಯರು ಕೊಬ್ಬರಿ ಬಟ್ಲುಗಳು ಚಂದ | 

ದರಸಿನ ಕುಂಕುಮ ಹಣಿಗೆಗಳನು-ಜನಕನ ಸುಕುಮಾರಿಗೆ ||೧|| 

 

ಮುತ್ತು ಮಾಣಿಕ ನವರತ್ನಗಳನು ಬಹು | 

ಕಿತ್ತಳೆ ದಾಡಿಮ ಮುಖ್ಯಫಲಗಳ-ಜನಕನ ಸುಕುಮಾರಿಗೆ ||೨|| 

 

ಪರಿಪರಿ ವಸ್ತುಗಳನು ಮಾನಿನಿಯರು | 

ಗುರುರಾಮವಿಠಲನರಿಸಿಯಾದ-ಜನಕನ ಸುಕುಮಾರಿಗೆ ||೩||

 

 

 

ಉಪಕೃತಿ ಯೇನ್ನದಲ್ಲ ನರಹರಿ

ಉಪಕೃತಿ ಯೇನ್ನದಲ್ಲ ನರಹರಿ | ಕೃಪೆ ಕಾರಣವಿದಕೆಲ್ಲ ||ಪ|| 

ಅಪರಾಧಗಳನು ಮನ್ನಿಸಿ ಪೊರೆಯುವ | ವಿಫುಲ ಕೃಪಾನಿಧಿ ಹರಿಯಲ್ಲದೆಲೆ ||ಅ|| 

ಲೆಕ್ಕವಿಲ್ಲದೆ ಗದ್ದಿಗಿಕ್ಕಿದ ಜಲದಂತೆ | 

ಪುಕ್ಕಟೆ ಜಾರುತ ದಕ್ಕದ ಧನದಿಂದ ||೨||

 

ಬುದ್ಧಿಲಿ ಬಹುಜನ ಗೆದ್ದನು ಮದದಿ | 

ಬಿದ್ದೋಗು ಕಾಲಕ ಸದ್ದಿಲ್ಲ ವಿದ್ಯಾದಿ ||೩|| 

 

ಉಬ್ಬುವ ಕೊಟ್ಟುವ ಹಬ್ಬುವ ಸುಖದಿಂದ | 

ಜಬ್ಬರ ಮಾಡುತಾ ರುಬ್ಬುವ ಕಾಲನು ||೪|| 

 

ತಂದೆ ಮಹಿಪತಿ ನಂದನು ಸಾರಿದಾ | 

ದ್ವಂದ್ವಗಳೆದು ಗೋವಿಂದನ ನೆನೆಯದೆ ||೫||

ಉಮಾರಮಣ ಶಂಭೋಪಾಲಯ

ಉಮಾರಮಣ ಶಂಭೋ – ಪಾಲಯ | ಉಮಾರಮಣ ಶಂಭೋ ||ಪ|| 

ರಮಾರಮಣ ಪದ | ಕಮಲ ಮಧುಪನೆ | ಯಮ ನಿಯಮ ಶಮ | ದಯಾದಿ ಗುಣ ಕೊಡು ||ಆ|| 

 

ಕಮಲ ಭವ ಭವ ಶಂಕರಾ  | ವಿಮಲ ರೂಪಳು ಗಂಗಾಧರಾ | 

ಅಮರ ಸನ್ನುತ ಹರ ಹರಾ | ನಮೊ ನಿನ್ನ ಪದ ಪುಷ್ಕರಾ ||೧|| 

 

ದೂರ್ವಾಸ ಮಹಾ ಮುನಿ ರುದ್ರನೆ | ಪೂರ್ವ ದಿವಿಜ ಪ್ರಿಯ ಉಗ್ರನೇ | 

ಮೌರ್ವಿ ಪಿನಾಕಿಧರ ಶೂರನೇ | ಶರ್ವಾನೇ ತುತಿಸಲಾಪನೇ ||೨|| 

 

ಗುರು ಗೋವಿಂದ ವಿಠಲಾ | ಪೊರೆವನೆಂಬಂಧ ನಿಶ್ಚಲಾ | 

ವರಮತಿಯನೀಯೋ ತ್ರೈಶೂಲ | ಧರ ಹರಿಸೋ ಮಾಯ ಪಟಲಾ ||೩||

 

ಉದ್ಧರಿಸು ಅನಿರುದ್ಧ ನೀಯನ್ನ

     ಉದ್ಧರಿಸು ಅನಿರುದ್ಧ ನೀಯನ್ನ | ಮಧ್ವಾಂತರ್ಯಾಮಿ ಮಾಧವ ಕೃಷ್ಣಾ ||ಪ|| 

 

ಪಾಂಡುತನಯ ಪರಿಪಾಲನ ಹರಿ | ವೆತಂಡ ವರದ ಶ್ರೀಕುಂಡಲಿಶಯನ ||೧|| 

ಅಂಡಜಗಮನ ಪ್ರಚಂಡ ಮಹಿಮಾ | ಭವ ಖಂಡನ ಮುನಿಸುತ ಮಂಡನಭೀಮ ||೨|| 

ನೀಲವರ್ಣ ನವನೀತ ಚೋರ ಗೋ | ಪಾಲ ಮುರಾರಿ ದಯಾಲು ರಮೇಶ ||೩|| 

ಕಂಬುಕಂಠ ಕನಕಾಂಬರಧರ ಶಶಿ | ಬಿಂಬ ವಿಜಿತ ಮುಖ ಅಂಬರುಹಾಕ್ಷ ||೫|| 

ಪಾಪರಹಿತ ನಿರ್ಲೇವ ನಿರಂಜನ | ಶ್ರೀಪತಿ ಘನ ಹೆನ್ನೆಪುರನಿಲಯ  ||೬||

ಉದರ ಮಲವನ್ನು ತಾನರಿಯದೆ

     ಉದರ ಮಲವನ್ನು ತಾನರಿಯದೆ | ಮರಳಿ ಮರಳಿ ಸರೋವರದಿ ಮುಳುಗುವುದಕ್ಕಿಂತ | ಉದಯಾಸ್ತಮಯವಾಗಿ ನೀರೋಳಗಿದ್ದು | ಮುದಿಕಪ್ಪೆಗಳು ಮಾಡಿದ ತಂತ್ರಗಳೇನಯ್ಯ ಆಚಲಾನಂದವಿಠಲ |

 

 

 

 

 

 

ಉದ್ಧಾರಮಾಡೋ ಉದಧಿ ಶಯನ

     ಉದ್ಧಾರಮಾಡೋ ಉದಧಿ ಶಯನ | ಶ್ರದ್ಧಾ ಭಕ್ತಿ ಜ್ಞಾನ ಇತ್ತು ಸದಾ ||ಪ|| 

 

ಅನ್ಯ ಮಾರ್ಗವ ಕಾಣೆ ನಿನ್ನ ಸ್ಮರಣೆಯ ಹೊರತು | ಮನ್ನಿಸಯ್ಯ ಎನ್ನ ಅಪರಾಧವಾ || 

ಪನ್ನಂಗಶಯನನೇ  ಪಾವನ್ನ ಚರಿತ | ಎನ್ನ ಬಿನ್ನಪವ ಪೂರೈಸಿ ಬೇಗ ||೧|| 

 

ಕ್ಲೇಶ ಸಾಸಿರವಿರುವ ಸಾರವಿಲ್ಲದ ಭವದಿ | ಈಸಲಾರೆ ದೇವ ಶೇಷಷಾಯೀ | 

ಕೂಸಿನಂದದಿ ಎನಗೆ ಜ್ಞಾನಸುಧೆಯನು ಕೊಟ್ಟು | ಹೇಸಿ ಭವದೊಳು ವೇಗ ಮೋಸ ಮಾಡದೆ ದೇವ ||೨|| 

 

ಕರುವಿನ ಮೊರೆ ಕೇಳಿ ತುರು ತಾನು ಬಂದೊದಗಿ | ತ್ವರಿತದಲಿ ಸುಧೆ ನೀಡಿ ಪಾಲಿಸುವ ತೆರದಿ | 

ಕರಿರಾಜಗೊಲಿದಂದೆ ಮರೆಯದೆಲೆ ಬಂದೆನ್ನ | ಗುರುಶಾಮಸುಂದರನೆ ಕರುಣದಲಿ ನೀನಾಗಿ ||೩||

ಉಪಕಾರ ನೀ ಸ್ಮರಿಸೋ

ಉಪಕಾರ ನೀ ಸ್ಮರಿಸೋ ||ಪ|| 

ಉಪವೀತ ಬಂದಾಗ ಉಪದೇಶ ಕೊಟ್ಟವರ ||ಆ.ಪ|| 

 

ತಪವ ಮಾಡಲೇಕೆ ಉಪವಾಸವಿರಲೇಕೆ | ಶಪಥ ಮಾಡುತ್ತ ತಿರುಗಲೇಕೆ | ಶ್ರೀಪತಿ ಸರ್ವರ ಹಿರಿದೈವನಿಹನೆಂದು | ಎಲ್ಲರ ಬಿಡದಲೆಂದು |ತ್ರಿಪಥಗಾಮಿನಿ ಪಿತ ಗುಪುತವಾಗಿ ನಮ್ಮ | ಸುಪಥದಲ್ಲಿ ನಡೆಸಿ ಕೊಡುವನು ಮುಕ್ತಿಯ ||೧|| 

 

ಹರಿಯು ಕೊಟ್ಟ ಭಾಗ್ಯ ಏನೇ ಇರಲಿ | ಸರಿ ಎಂದು ನಂಬಿ ಭಜಿಸು ಅವನ | 

ಪರಿ ಪರಿ ಪರಿಕಿಸಿ ಪರಗತಿ ಮಾರ್ಗಕೆ | ನಿರುತ ದಾರಿ ತೋರಿ ಕರಪಿಡಿವ ||೨|| 

 

ಮಕ್ಕಳ ಹೆಂಡಿರ ಪೋಷಿಸು ಬಿಡದಲೆ | ನಕ್ಕು ನಲಿ ನೀ ಹರಿ ಸೇವೆ ಎಂದು | 

ಸೊಕ್ಕು ಮಾಡಲು ಬೇಡ ಬಂದು ಜನರಲ್ಲಿ ಚೊಕ್ಕ ಗುರುಶಾಮಸುಂದರ ವಲಿವೊನೋ ||೩||

 

 

ಊಟಕ್ಕೆ ಬಂದೆವು ನಾವು

     ಊಟಕ್ಕೆ ಬಂದೆವು ನಾವು | ನಿಮ್ಮ | ಆಟಪಾಟವ ಬಿಟ್ಟು ಅಡುಗೆ ಮಾಡಮ್ಮ ||ಪ||

 ಕತ್ತಲಿಟ್ಟಾವವಮ್ಮ ಕಣ್ಣು| ಬಾಯಿ| ಬತ್ತಿ ಬರುತಲಿದೆ ಕೈಕಾಲು ಝುಮ್ಮ || 

ಹೊತ್ತು ಹೋಗಿಸಬೇಡವಮ್ಮ | ಒಂದು | ತುತ್ತಾದರು ಇತ್ತು ಸಲಹು ನಮ್ಮಮ್ಮ ||೧|| 

 

ಒಡಲೊಳಗೇ ಉಸಿರಿಲ್ಲ | ಒಂದು | ಕ್ಷಣವಾದರೆ ಜೀವ ನಿಲ್ಲುವುದಿಲ್ಲ || 

ಮಡಿದರೇ ದೋಷ ತಟ್ಟುವುದು || ಒಂದು || ಹಿಡಿ ಅಕ್ಕಿಯಿಂದಲೆ ಕೀರ್ತಿ ಬಾಹೋದು ||೨|| 

 

ಹೊನ್ನು ರಾಸಿಯ ತಂದು ಸುರಿಯೆ | ಕೋಟಿ | ಕನ್ನಿಕೆಯರ ತಂದು ಧಾರೆಯನೆರೆಯ || 

ಅನ್ನದಾನಕ್ಕಿನ್ನು ಸರಿಯೆ | ಪ್ರ| ಸನ್ನ ಪುರಂದರವಿಠಲ ಧೊರೆಯೆ ||೩||

 

ಊರ ದೇವರ ಮಾಡಬೇಕಣ್ಣ

      ಊರ ದೇವರ ಮಾಡಬೇಕಣ್ಣ | ತನ್ನೊಳಗೆ ತಾನೆ | ಊರ ದೇವರ ಮಾಡಬೇಕಣ್ಣ ||ಪ|| 

ಊರ ದೇವರ ಮಾಡಿರೆಂದು ಸಾರುತಿವೆ ಶ್ರುತಿ ಸ್ಮೃತಿಗಳು | ದ್ವಾರಗಳೊಂಭತ್ತು ಮುಚ್ಚಿ ನಿಲ್ಲಿಸಿ ಧ್ಯಾನ ಭ್ರೂಮಧ್ಯದಿ ||ಆ|| ಎಷ್ಟು ಯುಗಗಳು ತೀರಿಹೋಯಿತಣ್ಣ | ದೇವರ ಮಾಡದೆ| ಕಷ್ಟದಿಂದ ನೊಂದೆ ಕಾಣಣ್ಣ || ಅಸ್ಟದಳದ ಕಂಭ ನಿಲ್ಲಿಸಿ | ನಷ್ಟ ಬರುವ ಕಾಲದಲ್ಲಿ | ಕೆಟ್ಟ ದೈವಕ್ಕಾಗಿ ನೀನು | ದುಷ್ಟ ಕೋಣನ ಶಿರವ ತರಿದು ||೧|| 

 

ನಾನೆ ಎಂಬೋ ಮೇಕೆ ಹೋತಣ್ಣ | ಅದಕ್ಕೆ ತಕ್ಕ | ಜ್ಞಾನವೆಂಬ ಪೋತ ರಾಜಣ್ಣ || ತಾನೆ ಬೆಳಗೋ ಜ್ಯೋತಿ ನಿಲ್ಲಿಸಿ ||೨|| 

ಕರ್ತವೆಂಬೋ ಕ್ಲೇಶ ಕುರಿಯಣ್ಣ | ಅದನ್ನು ತಂದು  | ಕಟ್ಟಿ ತಲೆಯನೆ ಕುತ್ತಬೇಕಣ್ಣ || ಅಸ್ಟವಿಧದ ಕುರಿಗಳನ್ನು | ಕಟ್ಟಿ ತಲೆಯನೆ ಚೆಂಡನಾಡಿ | ಹುಟ್ಟಿ ತಿರುಗೋ ಕೋಳಿಯನ್ನು | ಕುಟ್ಟಿ ಚೂರಿ ಹಾಕುತಲಿ ||೩|| 

 

ನಾಳೆ ನೋಡುವೆನೆನ್ನಬೇಡಣ್ಣ | ಕೇಳಣ್ಣ ನಿನ್ನ | ಬಾಳುಯೆಂತೋ ನೀನೆ ನೋಡಣ್ಣ || ನಾಳೆ ನಾಡದು ಎಂದು  ಹೀಗೆ | ಬಾಳುವ ಕಾಲದಿ ಯಮನು | ಕೋಳಿಪಿಳ್ಳೆಯಾಡುವಾಗ | ಹಾಳಿ ಹದ್ದಿನಂತೆ ಒಯ್ಯುವ ||೪||

 

 ಹೆಂಡಿರು ಮಕ್ಕಳು ಸುಳ್ಳಣ್ಣ | ಕೇಳಣ್ಣ ನಿನ್ನ | ಮಂಡೆ ತುಂಬ ಬಳಗ ಕಾಣಣ್ಣ || ತುಂಡನಾದ ಯಮನು ಬಂದು | ಮಂಡೆ ಮೇಲೆ ಹೊಯ್ಯುವಾಗ | ಹೆಂಡಿರು ಮಕ್ಕಳು ನಿನ್ನ| ಕಂಡು ಕಂಡು ಬಿಡಿಸೋದಿಲ್ಲ ||೫|| 

 

ಮತ್ತೆ ಹೆಣ್ಣಿನ ನೋದುವೆಯಲ್ಲೋ | ನೀ ಗಳಿಸಿದಂಥ | ಬುತ್ತಿಯನ್ನ ಉಂಬುವೆಯಲ್ಲೋ || ಮೃತ್ಯುವಿನ ಬಾಯಿಗೆ ನೀ | ತುತ್ತು ಆಗಿಹೊಗಬೇಡ | ತೊತ್ತಾಗಿ ಗುರುವಿಗೆ ನಿತ್ಯ| ಉತ್ತಮ ಸೇವೆಯನ್ನು ಮಾಡು ||೬|| 

 

ಮುಂದೆ  ಇಂಥ ಜನ್ಮಕಾಣಣ್ಣ | ಬಾರದೋ ನಿನಗೆ | ಮಂದಮತಿಯು ಆಗಬೇಡಣ್ಣ | ಹಿಂದಿನ ಕಷ್ಟಕ್ಕಿಂತ | ಮುಂದಿನ ಹೆಮ್ಮೆಯ ಮರೆತು | ತಂದೆ ಪುರಂದರವಿಠಲನ್ನ | ಹೊಂದಿ ನೀನು ಮುಕ್ತನಾಗೊ ||೭||

 

 

 

 

 

ಊರಿಗೆ ಬಂದರೆ ದಾಸಯ್ಯ

     ಊರಿಗೆ ಬಂದರೆ ದಾಸಯ್ಯ  | ನಮ್ಮ| ಕೇರಿಗೆ ಬಾ ಕಂಡ್ಯ ದಾಸಯ್ಯ ||ಪ|| 

ಕೇರಿಗೆ ಬಂದರೆ ದಾಸಯ್ಯ| ಗೊಲ್ಲ | ಕೇರಿಗೆ ಬಾ ಕಂಡ್ಯ ದಾಸಯ್ಯ ||ಆ|| 

ಕೊರಳೋಳು ವನಮಾಲೆ ಧರಿಸಿದನೆ | ಕಿರಿ| ಬೆರಳಲಿ ಬೆಟ್ಟವನೆತ್ತಿದನೆ | 

ಇರುಳು ಹಗಲು ನಿನ್ನ ಕಾಣದೆ ಇರಲಾರೆ | ಮರುಳು ಮಾಡಿದಂಥ ದಾಸಯ್ಯ ||೧|| 

ಕಪ್ಪುವರ್ಣದ ದಾಸಯ್ಯ | ಕಂ| ದರ್ಪನ ಪಿತನೆಂಬೊ ದಾಸಯ್ಯ ||

ಅಪ್ಪಿಕೊಂಡು ನಮ್ಮಮನಸಿಗೆಬಂದರೆ | ಅಪ್ಪವ ಕೊಡುವೆನು ದಾಸಯ್ಯ ||೨|| 

 

ಮುಂದೇನು ದಾರಿ ದಾಸಯ್ಯ | ಚೆಲ್ವ | ಪೊಂಗಳಲೂದುವ ದಾಸಯ್ಯ | ಹಾಂಗೆ ಪೋಗದಿರು ದಾಸಯ್ಯ | 

ಹೊ| ನ್ನುಂಗುರ ಕೊಡುವೆನು ದಾಸಯ್ಯ | ಹಾಂಗೆ ಪೋಗದಿರು ದಾಸಯ್ಯ ||೩|| 

 

ಸಣ್ಣ ನಾಮದ ದಾಸಯ್ಯ | ನಮ್ಮ ಸದನಕೆ ಬಾ ಕಂಡ್ಯ ದಾಸಯ್ಯ || 

ಸದನಕೆ ಬಂದರೆ ದಾಸಯ್ಯ | ಮಣಿ | ಸರವನು ಕೊಡುವೆನು ದಾಸಯ್ಯ ||೪|| 

 

ಸಿಟ್ಟು ಮಾಡದಿರು ದಾಸಯ್ಯ ಸಿರಿ | ಪುರಂದರವಿಠಲ ದಾಸಯ್ಯ || 

ರಟ್ಟು ಮಾಡದಿರು ದಾಸಯ್ಯ ತುಂಬಿಟ್ಟು ಕೊಡುವೆನು ದಾಸಯ್ಯ ||೫||

 

ಋಣವೆಂಬ ಸೂತಕವು

     ಋಣವೆಂಬ ಸೂತಕವು ಬಹು ಬಾಧೆಪಡಿಸುತಿದೆ ||ಪ|| 

ಗುಣನಿಧಿಯೆ ನೀನೆನ್ನ ಋಣವ ಪರಿಹರಿಸೊ ||ಆ|| 

 

ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿ | ಕೆಟ್ಟ ಬೈಗಳ ಬೈದು ಮನದಣಿಯಲು ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ| ಸೃಷ್ಟಿಗೊಡೆಯನೆ ಎನ್ನ ಋಣವ ಪರಿಹರಿಸೊ ||೧|| 

 

ಅವನ ಒಡವೆಯ ತಂದು ದಾನಧರ್ಮವ ಮಾಡೆ| ಅವನಿಗಲ್ಲದೆ ಪುಣ್ಯ ಇವಗಾವುದು|| ಅವನ ಒದವೆಗಳಿಂದ ತೀರ್ಥಯಾತ್ರೆಯ ಮಾಳ್ಪ||೨||

 

ಇವನ ಜೀವನ ಮಾಡಿ ಮನದಣಿಯಬಹುದು| ಕಾಳಗದಿ ಪೊಕ್ಕು ಕಡಿದಾಡಿ ಜಯಿಸಲುಬಹುದು | ಪೇಳಲಳವಲ್ಲ ಋಣದವಗೊಂದು ಸೊಲ್ಲ ||೩|| 

 

ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ | ಮೃತ್ಯುಸೂತಕವು ಹನ್ನೊಂದು ದಿನಕೆ || ಮತ್ತೆ ಋಣಸೂತಕವು ಜನ್ಮಜನ್ಮಾಂತರದಕೆ | ಎತ್ತ ಹೋದರು ಬಿಡದೆ ಬೆನ್ಹತ್ತಿ ಬಹುದು ||೪|| 

ಬಂಧುಬಳಗದ ಮುಂದೆ ಬಹು ಮಾನವು ಹೋಗಿ| ಅಂದವಳಿದೆನೊ ಈ ವಿಧ ಋಣದೊಳು || ಇಂದಿರಾರಮಣ ಶ್ರೀಪುರಂದರವಿಠಲನೆ| ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೆ ||೫||

 

ಉತ್ತಮರ ಸಂಗ ಎನಗಿತ್ತು ಸಲಹೊ

ಉತ್ತಮರ ಸಂಗ ಎನಗಿತ್ತು ಸಲಹೊ ||ಪ||

ಚಿತ್ತಜನಕ ಸರ್ವೋತ್ತಮ ಮುಕುಂದ ||ಅ.ಪ||

ತಿರುತಿರುಗಿ ಪುಟ್ಟಲಾರೆ ಪರರ ಬಾಧಿಸಲಾರೆ

ಪರಿಪರಿಯ ಪಾಪಗಳ ಮಾಡಲಾರೆ

ಮರಣ ಜನನಗಳೆರಡು ಪರಿಹರವ ಮಾಡಯ್ಯ

ಕರುಣಾಸಮುದ್ರ ಮುರವೈರಿ ಶ್ರೀಕೃಷ್ಣ ||೧||

ಏನ ಪೇಳಲಿ ದೇವ ನಾ ಮಾಡಿದ ಕರ್ಮ

ನಾನಾ ವಿಚಿತ್ರವೈ ಶ್ರೀನಿವಾಸ

ಹೀನಜನರೊಳಗಾಟ ಶ್ವಾನಾದಿಗಳ ಕೂಟ

ಜ್ಞಾನವಂತನ ಮಾಡೊ ಜಾನಕೀರಮಣ ||೨||

ನಿನ್ನ ನಂಬಿದ ಮೇಲೆ ಇನ್ನು ಭಯವ್ಯಾತಕೆ

ಪನ್ನಗಾಧಿಶಯನ ಮನ್ನಿಸಯ್ಯ

ಮುನ್ನಭಕುತರನೆಲ್ಲ ಚೆನ್ನಾಗಿ ಪಾಲಿಸಿದ

ಎನ್ನೊಡೆಯ ರಂಗವಿಠಲ ಎನ್ನದೊರೆಯೆ ||೩||

 

  ಉದಯ ವೈರಾಗ್ಯವಿದು

ಉದಯ ವೈರಾಗ್ಯವಿದು ನಮ್ಮ

ಪದುಮನಾಭನಲಿ ಲೇಶ ಭಕುತಿಯಿಲ್ಲ ||ಪ||

ಉದಯಕಾಲದಲೆದ್ದು ಗಡಗಡ ನಡುಗುತ

ನದಿಯಲಿ ಮಿಂದೆನೆಂದು ಹಿಗ್ಗುತಲಿ

ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು

ಬದಿಯಲಿದ್ದವರಿಗಾಶ್ಚರ್ಯ ತೋರುವುದು  ||೧||

ಕಂಚುಗಾರನ ಬಿಡಾರದಂದದಿ

ಕಂಚು ಹಿತ್ತಾಳೆ ಪ್ರತಿಮೆಗಳ ನೆಗಹಿ

ಮಿಂಚಬೇಕೆಂದು ಬಲು ಜ್ಯೋತಿಗಳನು ಹಚ್ಚಿ

ವಂಚನೆಯಿಂದಲಿ ಪೂಜೆ ಮಾಡುವುದು  ||೨||

ಕರದಲಿ ಜಪಮಣಿ ಬಾಯಲಿ ಮಂತ್ರವು

ಅರಿವೆ ಮುಸುಕು ಮೋರೆಗೆ ಹಾಕಿ

ಪರಸತಿಯರ ಗುಣ ಮನದಲಿ ಸ್ಮರಿಸುತ

ಪರಮ ವೈರಾಗ್ಯಶಾಲಿಯೆಂದೆನಿಸುವುದು  ||೩||

ಬೂಟಕತನದಲಿ ಬಹಳ ಭಕುತಿ ಮಾಡಿ

ದಿಟನೀತ ಸರಿಯಾರಿಲ್ಲೆನಿಸಿ

ನಾಟಕ ಸ್ತ್ರೀಯಂತೆ ಬಯಲಡಂಭವ ತೋರಿ

ಊಟದ ಮಾರ್ಗದ ಜ್ಞಾನವಿಲ್ಲದೆ  ||೪||

ನಾನು ಎಂಬುದ ಬಿಟ್ಟು ಜ್ಞಾನಿಗಳೊಡನಾಡಿ

ಏನಾದರೂ ಹರಿಪ್ರೇರಣೆಯೆಂದು

ಧ್ಯಾನಿಸಿ ಮೌನಿಸಿ ಪುರಂದರವಿಠಲನ

ಕಾಣದೆ ಮಾಡಿದ ಕಾರ್ಯಗಳೆಲ್ಲವು  ||೫||

 

 

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023