ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಎ)

ಎನಗೂ ಆಣೆ ರಂಗ

 

ಎನಗೂ ಆಣೆ ರಂಗ

ಎನಗೂ ಆಣೆ ರಂಗ ನಿನಗೂ ಆಣೆ |ಪ|

ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ |ಅ.ಪ|

ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ

ಎನ್ನ ನೀ ಕೈ ಬಿಟ್ಟು ಪೋದರೆ ನಿನಗೆ ಆಣೆ |೧|

 

ತನುಮನಧನದಲಿ ವಂಚಕನಾದರೆ ನಿನಗೆ ಆಣೆ ರಂಗ

ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ |೨|

 

ಕಾಕು ಮನುಜರ ಸಂಗವ ಮಾಡದಿದ್ದರೆ ಎನಗೆ ಆಣೆ ರಂಗ

ಲೌಕಿಕವ ಬಿಡಿಸದಿದ್ದರೆ ನಿನಗೆ ಆಣೆ |೩|

 

ಶಿಷ್ಟರ ಸಂಗ ಮಾಡದಿದ್ದರೆ ಎನಗೆ ಆಣೆ ರಂಗ

ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ |೪|

 

ಹರಿನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ ರಂಗ

ಪುರಂದರವಿಠಲ ನೀನೊಲಿಯದಿದ್ದರೆ ನಿನಗೆ ಆಣೆ |೫|

 

ಎದುರುಗೊಂಡಳು ಇಂದಿರಾದೇವಿ

ಎದುರುಗೊಂಡಳು ಇಂದಿರಾದೇವಿ

ಮದನಮೋಹನ ದಿವ್ಯಮೂರುತಿಯ

ಸದಮಲಾನಂದ ಕೀರುತಿಯ  ||ಪ||

 

ನವಸ್ವರ್ಣಹರಿವಾಣದಿ ಕಂಚಕಲಶನಿಕ್ಕಿ

ಹವಳದಾರತಿ ರನ್ನ ಜ್ಯೋತಿಯಲಿ

ತವಕದಿಂದಲಿ ಎತ್ತಿ ಮುತ್ತಿನಾಕ್ಷತೆ ಇಟ್ಟು

ನವರತ್ನ ನಿವಾಳೆಯ ಕೊಡುತ  ||೧||

 

ಜಯಮತ್ಸ್ಯಕೂರ್ಮನೆ ಜಯಕ್ರೋಡ ನರಸಿಂಹ

ಜಯಮುನಿವಟು ಭಾರ್ಗವರೂಪನೆ

ಜಯ ರಾಮ ಶ್ರಿಕೃಷ್ಣ ಜಯ ಬೌದ್ಧಕಲ್ಕಿಯೆ

ಜಯವೆಂದು ಬೆಳಗಿ ಪಾದಕೆ ನಮಿಸಿ  ||೨||

 

ಕರೆದೊಯ್ದು ತೂಗುಮಂಚದಿ ಕುಳ್ಳಿರಿಸಿ

ಕರ್ಪೂರದ ವೀಳ್ಯ ಕೊಟ್ಟು ಹರುಷದಲಿ

ಗುರುಮಹಿಪತಿ ಸುತ ಪ್ರಭುವಿನ ಸನಿಹದಿ

ಕರುಣ ಮಾತುಗಳಾಡಿಸುತ ಹರಿಯ  ||೩||

 

 

ಎದ್ದು ಬರುತಾರೆ

ಎದ್ದು ಬರುತಾರೆ ನೋಡೆ ತಾ

ವೆದ್ದು ಬರುತಾರೆ ನೋಡೆ  ||ಪ||

ಮುದ್ದು ವೃಂದಾವನದ ಮಧ್ಯದೊಳಗಿಂದ

ತಿದ್ದಿಹಚ್ಚಿದ ನಾಮ ಮುದ್ರೆಗಳೊಪ್ಪುತಿವೆ  ||ಅ.ಪ||

 

ಗಳದೊಳು ಶ್ರೀತುಳಸಿ ನಳಿನಾಕ್ಷಿಮಾಲೆಗಳು

ಚೆಲುವ ಮುಖದೊಳು ಪೊಳೆವ ದಂತಗಳಿಂದ  ||೧||

 

ಹೃದಯ ಸದನದಲ್ಲಿ ಪದುಮನಾಭನ ಭಜಿಸಿ

ಮುದಮನದಿಂದ ನಿತ್ಯ ಸದಮಲರೂಪ ತಾಳಿ  ||೨||

 

ದಾತ ಗುರು ಜಗನ್ನಾಥವಿಠಲನ

ಪ್ರೀತಿಯ ಪಡಿಸುತ ದೂತರ ಪೊರೆಯುತ  ||೩||

 

ಎನ್ನ ಪಾಲಿಸೋ ಕರುಣಾಕರ

ಎನ್ನ ಪಾಲಿಸೋ ಕರುಣಾಕರ

ಪನ್ನಗಶಯನ ಗದಾಧರ  ||ಪ||

 

ವಸುದೇವನಂದನ ಹರಿಮಧುಸೂದನ

ಅಸುರಾಂತಕ ಮುರಲೀಧರ

ಬಿಸರುಹನಾಭ ಸರ್ವೇಶನೆ ಮುನಿಮಾ

ನಸ ಸಂಚಾರ ರಮಾಧವ  ||೧||

 

ಪರಮಪುರುಷ ಉರಗಾಸನ ವಾಹನ

ಕರುಣಾರ್ಣವ ವಡವಾನಳ

ಸರಸಿಜಭವ ಗಿರಿಜಾವಲ್ಲಭನುತ

ವರ ಸುಜನಾವಳಿ ಪಾಲನ  ||೨||

 

ಕಾವನಪಿತ ಮುಚುಕುಂದವರದ ರಾ

ಜೀವ ನಯನ ನಾರಾಯಣ

ಶ್ರೀವತ್ಸಲಾಂಛನ ಗುರುಮಹಿಪತಿಸುತ

ಜೀವನಸಖ ಶ್ರೀಕೃಷ್ಣನೆ  ||೩||

 

 

ಎನ್ನ ಬಿನ್ನಪ ಕೇಳು

ಎನ್ನ ಬಿನ್ನಪ ಕೇಳು ಧನ್ವಂತ್ರಿ ದಯಮಾಡು ಸಣ್ಣವನು ಇವ ಕೇವಲ

ಬನ್ನಬಡಿಸುವ ರೋಗವನ್ನು ಯೋಚನೆ ಮಾಡಿ ಚೆನ್ನಾಗಿ

ಪಾಲಿಸುವುದು ಕರುಣಿ  ||ಪ||

 

ಆರೋಗ್ಯ ಆಯುಷ್ಯ ಐಶ್ವರ್ಯವೆಂಬೊ ಈ ಮೂರು ವಿಧ ವಸ್ತುಗಳು

ನಾರಾಯಣನ ಭಜಕರಾದವರ ಸಾಧನಕೆ ಪೂರ್ಣವಾಗಿಪ್ಪುವು

ಘೋರ ವ್ಯಭಿಚಾರ ಪರನಿಂದೆ ಪರವಿತ್ತಾಪಹಾರ ಮಾಡಿದ ದೋಷದಿ

ದರಿದ್ರರಾಗುವರು ಮೂರು ವಿಧದಿಂದಲಿ ಕಾರಣನು ನೀನೆ ದುಷ್ಕರ್ಮ

ಪರಿಹರಿಸುವುದು ಹರಿಯೆ ||೧||

 

ವಸುಮತಿಯ ಮೇಲಿನ್ನು ಅಸುರಜನರೆ ಬಹಳ ವಶವಲ್ಲ ಕಲಿಯ ಬಾಧೆ

ಬಿಸಿಲಿಂದ ಪೀಡಿತವಾದ ಸಸಿಗಳಂತೆ ಶಿಶುಗಳು ನಾವಿಪ್ಪೆವು

ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು ಕುಶಲದಿ ಪಾಲಿಸುವುದು

ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು ಅಸುನಾಥ

ಹರಿಯೆ ಪೊರೆಯೊ ಸ್ವಾಮಿ  ||೨||

 

ಆದಿವ್ಯಾಧಿಗಳು ಉನ್ಮಾದ ವಿಭ್ರಮ ನಾನಾ ಬಾಧೆಗೌಷಧವು ನೀನೆ

ಹೇದೇವ ನಿನ್ನ ಕರಕಲಶಸುಧೆಗರೆದು ಸಾಧುಗಳ ಸಂತೈಸುವಿ

ಮೋದಬಡಿಸುವಿ ನಿನ್ನ ಸಾಧಿಸುವರಿಗೆ ಶುಭೋದಯಂಗಳನೀವಿ

ಆದರಿಸಿ ಇವಗೆ ತವಪಾದಧ್ಯಾನವಿತ್ತು ಸಾಧುಗಳೊಳಗಿಟ್ಟು

ಮೋದಕೊಡು ಸರ್ವದಾ ||೩||

 

ಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ ನಿನ್ನ ಚಿಹ್ನೆಗಳ ಧರಿಸಿ

ನಿನ್ನವರವನೆನಿಸಿ ನಿನ್ನ ನಾಮೋಚ್ಚರಿಸಿ ನಿನ್ನಿಂದ ಉಪಜೀವಿಸಿ

ಅನ್ನ ಆರೋಗ್ಯಕ್ಕೆ ಅಲ್ಪಜೀವಿಗಳಿಗೆ ಇನ್ನು ಅಲ್ಲರಿಯಬೇಕೆ

ನಿನ್ನ ಸಂಕಲ್ಪ ಭಕ್ತರಪೋಷಕನೆಂಬ ಘನ್ನ ಬಿರುದನ್ನು

ಉಳುಹೊ ಸಲಹೊ  ||೪||

 

ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಟ್ಟು ನಿನ್ನವನೆಂದು ಅರಿದು

ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ ಅಲ್ಲರಿಯೆ ಎನ್ನ ಪಾಲಿಸುವ ದೊರೆಯೆ

ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು ಮನ್ನಿಸಬೇಕು

ಕರುಣಿ ಅನಂತಗುಣಪೂರ್ಣ ಗೋಪಾಲವಿಠಲ ಇನ್ನಿದನೆ

ಪಾಲಿಸುವುದೊ ಸ್ವಾಮಿ  ||೫||

 

ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯ

ಎಲ್ಲ್ಯಾಡಿ ಬಂದ್ಯೋ ನೀ ಹೇಳಯ್ಯ ||ಪ||

ನಿಲ್ಲು ನಿಲ್ಲು ಗೋಪಾಲಕೃಷ್ಣಯ್ಯ ||ಅ ಪ||

 

ನೊಸಲಲ್ಲಿ ಕಿರುಬೆವರಿಟ್ಟಿದೆ ಅಲ್ಲಿ

ಹೊಸಪರಿ ಸುದ್ದಿಯು ಹುಟ್ಟಿದೆ

ಪುಸಿಯಲ್ಲ ಈ ಮಾತು ಮುಟ್ಟಿದೆ ನಿನ್ನ

ನಸುನಗೆ ಕೀರ್ತಿ ಹೆಚ್ಚಿದೆ   ||೧||

 

ಬೆರಳ ಉಂಗುರವೆಲ್ಲಿ ಹೋಗಿದೆ ನಿನ್ನ

ಕೊರಳ ಪದಕವೆಲ್ಲಿ ನೀಗಿದೆ

ಸರಕೆಲ್ಲ ಅವಳಲ್ಲಿ ಸಾಗಿದೆ ಆ

ತರುಣಿ ಮಹಿಮೆ ಹೀಂಗಾಗಿದೆ ||೨||

 

ಕಳ್ಳತನವ ಹೀಗೆ ಮಾಡಿದೆ ನಿನ್ನ

ಸುಳ್ಳು ಕಡೆಗೆ ನಾ ನೋಡಿದೆ

ಎಲ್ಲರಿಗೂ ಠಕ್ಕು ಮಾಡಿದೆ

ಚೆಲುವ ರಂಗವಿಠಲ ನಗೆಗೀಡಾದೆ   ||೩||

 

ಎಲ್ಲಿಂದ ಬಂದೆ

ಎಲ್ಲಿಂದ ಬಂದೆ ಮುಂದೆತ್ತ ಪಯಣ

ಇಲ್ಲಿ ನಿನಗೆಷ್ಟುದಿನವಾಲಸ್ಯ ಮರುಳೆ   ||ಪ||

 

ಮಾತೆಯುದರದೊಳು ನವಮಾಸ ಮಲ ಮೂತ್ರದೊಳು

ಯಾತನೆಯ ಯೋನಿಮುಖ ಮಾರ್ಗವಿಡಿದು

ಭೂತಳಕೆ ಬಂದು ಹದನೇನ ತೀರಿಸಿಕೊಂಡೆ

ಜಾತಿ ಯಾವುದು ನಿನ್ನ ಹೆಸರೇನು ಮರುಳೆ    ||೧||

 

ಮುಂದಾವ ಪಥವ ಸೇರುವೆ ಮರುಳೆ ಸಾಕಿನ್ನು

ಹಿಂದೆ ನಿನ್ನವರಾರು ಆಪ್ತರುಂಟೆ

ಒಂದುಗೂಡಿದ ಪತ್ನಿಸುತರೆಲ್ಲ ವರ್ಜಿಪರು

ನಿಂದು ಮಾತಾಡು ಬಳಲಿದೆ ಬರಿದೆ ಮರುಳೆ   ||೨||

 

ಬರವಿದೇತಕೆ ನಿನ್ನ ಸ್ಥಳವೆಲ್ಲಿ ನೆಲೆಯಾಗಿ

ಇರುವ ಮಂದಿರವಾವುದದನೆನಗೆ ಪೇಳೊ

ಧರೆಯೊಳಗೆ ವರಕಾಗಿನೆಲೆಯಾದಿಕೇಶವನ

ಸಿರಿಚರಣಕಮಲವನು ನೆರೆನಂಬಿ ಸುಖಿಸೊ   ||೩||

 

ಎಲೆ ಮನ ಮುರಾರಿ

ಎಲೆ ಮನ ಮುರಾರಿಯನು ಕೊಂಡಾಡು  ||ಪ||

 

ಮಂದಿಯ ಮಾತಿಗೆ ಎಂದೆಂದು ಮರುಗದೆ

ಮುಂದಿನ ಗತಿಯನು ನೋಡು    ||೧||

 

ಕಾಲನದೂತರ ಕಾಲಿಗೆ ಬಿದ್ದರೆ

ನಾಳೆಗೆ ನಿಲ್ಲೋರೆ ನೋಡು    ||೨||

 

ರಾಜೀವಮುಖಿಯರ ಸೋಗಿಗೆ ಮೆಚ್ಚದೆ

ವಿಜಯವಿಠಲನ ಬೇಡು     ||೩||

 

ಎಷ್ಟು ಮಮತೆಯೊ ನಿನಗೆ

ಎಷ್ಟು ಮಮತೆಯೊ ನಿನಗೆ ಭ್ರಷ್ಟಮನವೆ

ಕಷ್ಟದೇಹವ ನೆಚ್ಚಿ ಇವನ ಕಳೆದಿ   ||ಪ||

 

ಹಿಂದೆ ಅನಂತ ಜನುಮಗಳಲ್ಲಿ ಇನ್ನು

ತಂದೇಸುಮಂದಿಗಳು ತಾಯೇಸು ಎನಗೆ

ಬಂದು ಸತಿಸುತರೇಸು ಬಂಧುಜನರುಗಳೇಸು

ಇಂದೊಬ್ಬರನ್ನು ಕರೆತಂ(ದ)ದ್ದೇನೊ ಮರುಳೆ  ||೧||

 

ಚಿನ್ನಬೆಳ್ಳಿ ನಾನಾ ಬಣ್ಣ ಬಿರುದುಗಳನ್ನು

ಅನಂತ ಗಳಿಸಿ ಅನಂತ ಹರುಷದಲಿ

ನನ್ನವರು ನನ್ನದು ಎಂಬ ದೋಷದ ಮದದಿ

ಇನ್ನು ದೇಹವ ಧರಿಸಿ ಇನ್ನು ಎಚ್ಚರಿಯೊ  ||೨||

 

ನಿನ್ನ ಕಣ್ಣ ಮುಂದೆ ಪೋಪ ಜೀವರ ಕಂಡು

ಇನ್ನು ನಿನಗೆ ನಾಚಿಕೆ ಬಾರದೆ

ಇನ್ನು ಮುಂದೆ ನಾಳಿಗೆಂಬೊ ಘನ್ನ ಆಸೆ

ಚೆನ್ನಾಗಿ ಬಿಡುಕಂಡ್ಯ ಖೂಳಮನವೆ  ||೩||

 

ಆಸೆ ಎಂಬೋದು ಸಂಧಿಸಿಕೊಂಡರೆ ನಿನಗೆ

ದೋಷವೆಂಬೊ ರಾಶಿ ಆಶ್ರಯಿಸದು

ಮೀಸಲ ಮಾಡು ಮನ ಮೋಸ ಹೋಗದೆ

ಹೃಷಿಕೇಶನ ಚರಣ ವಿಶೇಷವಾಗಿ ಸ್ಮರಿಸೊ  ||೪||

 

ಸತಿಸುತರು ಇತರ ಜನ ಹಿತವಾದ ಧನದೇಹ

ಇತರ ನೋಡಲು ಮೋಹ ಅಧಿಕವಾಗಿ

ಪತಿತಪಾವನ ರಂಗ ಗೋಪಾಲವಿಠಲನ

ಜಿತವಾಗಿ ಭಕುತಿ ಇಟ್ಟು ಮುಕುತಿಯ ಪಡೆಯೊ  ||೫||

 

ಎಷ್ಟು ಸುಖಿಗಳೊ ಗೋವು

ಎಷ್ಟು ಸುಖಿಗಳೊ ಗೋವು ಗೊಲ್ಲತಿ ಗೋಪರು ಶ್ರೀ

ಕೃಷ್ಣನೊಡನೆ ಹಗಲಿರುಳು ಕ್ರೀಡೆಯಲಿ ಕಾಲಕಳೆವರು  ||ಪ||

 

ಕೇಹೋ ಕೇಹೋ ತ್ವವೈ ತ್ವವೈ ಅಂಬಾ ಅಂಬಾ ಬಾರೆಯೆಂದು 

ಮೋಹದಿಂದ ಕರೆಸಿಕೊಂಡು ಓಡಿಓಡಿ ಬಂದು

ಶ್ರೀಹರಿಯ ಹೆಗಲಮ್ಯಾಲೆ ಗಳಗಳಿಟ್ಟು ಕದಪು ಕಂಠ

ಲೇಹಿಗೆ ಮೊಗದಿರುವಿ ಸಿರಿನಖದಿಂ ತುರಿಸಿಕೊಂಬರು  ||೧||

 

ತುಡಗನೆಂದು ತುಡುವಿಡಿದು ಅಡಿಗಡಿಗೆ ಅಪ್ಪಿ ಚುಂಬಿಸಿ

ಪಿಡಿಪಿಡಿದು ಗೋಪಿಯರಿಗೆ ಒಪ್ಪಿಸಿ ಒಪ್ಪಿಸಿ

ಮಡದೇರೆಲ್ಲ ಮಧುವೈರಿಯ ಸಂಗ ಸೊಬಗಿಲ್ಯೋಲಾಡುತಲಿ

ಒಡನೆ ಗೋಪಾಲಮೂರುತಿಯ ಕಣ್ಣು ಮನದಲಿಟ್ಟು ಸುಖಿಪರು  ||೨||

 

ಸಣ್ಣವರಾಡಲೊಲ್ಲೆನಲು ಗದ್ದವಿಡಿದು ಮುದ್ದಿಸಿ ನ

ಮ್ಮಣ್ಣ ತಮ್ಮಗಳಿರಾ ಗೆಳೆಯರಿರಾ ಬಾಯೆಂದು

ಆಣ್ಣೆಕಲ್ಲೊಡ್ಡಿ ಗಜುಗನಾಡಿ ಸೋಲಿಸಿಕೊಂಡಳುವ

ಚಿಣ್ಣರಾಮ ಪ್ರಸನ್ವೆಂಕಟೇಶನ ಉಣ್ಣುವೆಂಜಲ ಸೆಳೆದುಂಬುವರು ||೩||

 

ಎಂತು ತುತಿಸಲಿ ಎನ್ನ ದೇವನ

ಎಂತು ತುತಿಸಲಿ ಎನ್ನದೇವನ ಸಂತತ ಎಮ್ಮ ಸಲಹೋನೆ

ಅಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ  ||ಪ||

 

ತಾನು ಮಾಡಿದ ಕರ್ಮಶೇಷವು ತಾನು ತಿಳುಹಿದ ಜ್ಞಾನಶೇಷವು

ತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವು

ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮ ಮಾಡಿಸಿ

ತಾನು ಸಹಿತ ಧ್ಯಾನದಲಿ ಹರಿಕಾಣಿಸಿ ತೋರ್ಪ ಕರುಣೆಯ  ||೧||

 

ಇವನ ಪ್ರೇರಣೆ ಹರಿಯ ಪ್ರೇರಣೆ ಇವನ ಸೇವೆಯು ಹರಿಯ ಸೇವೆಯು

ಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವು

ಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿಯುವ

(ಪವನಾಖ್ಯನಾಗಿ) ನಮ್ಮನು ಪವನಗತಿ ಪೊಂದಿಸುವನ  ||೨||

 

ಜ್ಞಾನಭಕುತಿ ವೈರಾಗ್ಯಖಣಿಯು ದಾನವಾಂತಕ ಧರ್ಮಶೀಲ

ಪೂರ್ಣಬೋಧೆಯ ಪುಣ್ಯನಾಮಕ ಪ್ರಾಣಾಪಾನವುದಾನರಿಗೆ

ಪ್ರಾಣ ಮುಖ್ಯಪ್ರಾಣ ಇವನಮ್ಮ ಪ್ರಾಣವಿಲ್ಲದು ಇವನು ಇಲ್ಲದಿರೆ

ಪ್ರಾಣಪತಿ ಗೋಪಾಲವಿಠಲನ ಕಾಣಿಸಿ ತೋರ್ಪ ಕರುಣೆಯ  ||೩||

 

ಎಂಥಾ ಪುಣ್ಯವೆ ಗೋಪಿ

ಎಂಥಾ ಪುಣ್ಯವೆ ಗೋಪಿ

ಎಂಥಾ ಭಾಗ್ಯವೆ ನಿನ್ನ

ಇಂಥಾ ಮಗನ ಕಾಣೆವೆ  ||ಪ||

ಚಿಂತಿಸಿದರು ದೊರಕ ಚೆಲುವ ರಾಜಗೋಪಾಲ

ಚಿಂತೆಯೆಲ್ಲವು ಪೋಪುದೇ ಕೇಳೆ ಯಶೋದೆ  ||ಅ.ಪ||

 

ಸರಸಿಜನಾಭನ ಸುಮ್ಮನೆ ಕಂಡರೆ

ದುರಿತವೆಲ್ಲವು ಪೋಪುದೆ

ಸರಸವಾಡುತ ಬಂದು ಸವಿ ಮಾತನಾಡಿದರೆ

ಹರುಷ ಕೈಗೂಡುವುದೇ ಕೇಳೆ ಯಶೋದೆ   ||೧||

 

ಊರೊಳಗೆ ಇವ ನೆರೆಹೊರೆಯರಂಜಿಕೆ

ದೂರಿಕೊಂಬುವರಲ್ಲವೆ

ಅರಣ್ಯದಲಿ ನಾವು ಆಡುವ ಆಟಗಳು

ಆರಿಗಾದರು ಉಂಟೇನೆ ಕೇಳೆ ಯಶೋದೆ   ||೨||

 

ನಿನ್ನ ಮಗನ ಕರೆಯೆ ಎಮ್ಮ ಪ್ರಾಣದ ದೊರೆಯೆ

ಘನ್ನನು ಪರಬ್ರಹ್ಮನೆ

ಚೆನ್ನಶ್ರೀ ಪುರಂದರವಿಠಲರಾಯನ

ನಿನ್ನಾಣೆ ಬಿಡಲಾರೆವೇ ಕೇಳೆ ಯಶೋದೆ   ||೩||

 

ಎಂದಿಗಾದರೂ ಒಮ್ಮೆ

ಎಂದಿಗಾದರೂ ಒಮ್ಮೆ ಕೊಡು ಕಂಡ್ಯ ಹರಿಯೆ ||ಪ||

ಬೃಂದಾವನಪತಿ ದಯದಿಂದಲೆನಗೆ ||ಅ.ಪ||

 

ಫಲಭಾರಗಳಿಂದ ತಲೆವಾಗಿ ಶುಕಪಿಕ

ಕಲಕಲದೊಳು ನಿನ್ನ ತುತಿಸಿ ತುಂಬಿಗಳ

ಗಳರವದಿಂ ಪಾಡಿ ಅಪ್ಸರರಂತೆ ಪೂ

ಮಳೆಯಗರೆವ ತರುಲತೆಯ ಜನ್ಮವನು ||೧||

 

ಕೊಳಲ ಶ್ರುತಿಯ ಕೇಳಿ ಸುಖದ ಸಂಭ್ರಮದಲಿ

ಹೊಲಬು ತಪ್ಪಿ ತಾವು ಅರೆಗಣ್ಣು ಮುಚ್ಚಿ

ನಳಿನಾಸನದಿ ಮೌನಗೊಂಡು ಪರಮಹಂಸ

ಕುಲದಂತೆ ಧ್ಯಾನಿಪ ಹಂಸಜನ್ಮವನು ||೨||

 

ನಖಗಳೆಂಬ ಸಂತತ ಪೂರ್ಣಚಂದ್ರನ್ನ

ಅಕಳಂಕ ನವಚಂದ್ರಿಕೆಯನ್ನು ಸವಿದು

ಸುಖದ ಸುಗ್ಗಿಗಳಲ್ಲಿ ಸೊಕ್ಕಿ ಯೋಗಿಗಳಂತೆ

ಅಖಿಳವ ಮರೆತ ಚಕೋರಜನ್ಮವನು  ||೩||

 

ಭಾವಜನಯ್ಯನ ಕಡುಚಲ್ವಿಕೆಯನ್ನು

ಭಾವಿಸಿ ನಿಡುಗಂಗಳಿಂದ ದಣಿದುಂಡು

ಗೋವಳೇರಂತೆ ಮನೆಮಕ್ಕಳ ಹಿಂಗಿ ನಿನ್ನ

ಆವಾಗ ಈಕ್ಷಿಸುವ ಗೋವ್ಗಳ ಜನ್ಮವನ್ನು  ||೪||

 

ತೋಳದಂಡಿಗೆ ಮಾಡಿ ಹೀಲಿಯ ಚಾಮರವ

ಮೇಲೆ ಎತ್ತಿದ ತಾವರೆಗೊಡೆಯಿಂದ

ಓಲೈಸಿ ನಿನ್ನನು ಒಲಿಸಿ ಮುಕುತರಂತೆ

ಸುಲೋಖ್ಯ ಸುಖವುಂಬ ಗೋಪರ ಜನ್ಮವನು  ||೫||

 

ಕೊಳಲಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನ

ನಳಿನನಾಭಾ ಅವಧಾರೆಂದು ಪೊಗಳಿ

ತಳಿಗೆ ಆರತಿಯೆತ್ತಿ ಲಕ್ಷ್ಮಿಯಂತೆ ನಿನ್ನ

ಚೆಲುವ ಸವಿಯಂಥ ಗೋಪೇರಜನ್ಮವನು  ||೬||

 

ಇಂದಿರೆಯರಸ ಬ್ರಹ್ಮೇಂದ್ರಾದಿ ವಂದಿತ

ಎಂದು ಮೊಸರ ಕಡೆಯುತ್ತಲಿ ನಿನ್ನ

ಅಂದಿನ ಶ್ರುತಿಯೋಳುಪ್ಪುವಡಿಪ ವ್ರಜ

ದಿಂದುಮುಖಿಯರ ಜನ್ಮವ ಸಿರಿಕೃಷ್ಣ  ||೭||

 

 

ಎಂದಿಗಾಹುದೋ ನಿನ್ನ ದರುಶನ

ಎಂದಿಗಾಹುದೋ ನಿನ್ನ ದರುಶನ

ಅಂದಿಗಲ್ಲದೆ ಬಂಧ ನೀಗದೋ  ||ಪ||

 

ಗಾನಲೋಲನೇ ದೀನವತ್ಸಲ

ಮಾನದಿಂದಲಿ ನೀನೆ ಪಾಲಿಸೊ   ||೧||

 

ಯಾರಿಗೆ ಮೊರೆಯಿಡಲೋ ಶ್ರೀಹರೀ

ಸಾರಿಬಂದು ನೀನೀಗಲೇ ಪೊರಿ    ||೨||

 

ಗಜವ ಪಾಲಿಸೋ ಗರುಡಗಮನನೆ

ಭುಜಗಶಯನ ಶ್ರೀ ವಿಜಯವಿಠಲ  ||೩||

 

ಎಂದಿದ್ದರೀ ಕೊಂಪೆಯೆನಗೆ ನಂಬಿಕೆಯಿಲ್ಲ

ಎಂದಿದ್ದರೀ ಕೊಂಪೆಯೆನಗೆ ನಂಬಿಕೆಯಿಲ್ಲ    ||ಪ||

ಮುಂದರಿತು ಶ್ರೀಹರಿಯ ಭಜಿಸುವುದು ಲೇಸು ||ಅ.ಪ||

 

ಎಲುವುಗಳು ತೊಲೆಯಂತೆ ಏಕನರಗಳ ಸೂತ್ರ

ಮಲಮೂತ್ರ ಮಾಂಸದ ಮೇಲೆ ಹೊದಿಕೆ

ಕಲಕಲನೆ ತಿರುಗಿ ನಾಲಿಗೆಘಂಟೀಪರಿಗಳು

ಕೆಲಕಾಲಕೀ ಕೊಂಪೆ ಕಾಣದೆ ಹೋಗುವುದು  ||೧||

 

ಪಿಂಡಗಳು ಒಂಬತ್ತು ಕೆಲಬಂಟರೈವರು

ದಂಡೆತ್ತಿರುವ ಕ್ರೋಧ ಮತ್ಸರಗಳು

ಮಂಡಲಾಧಿಪ ನಮ್ಮ ಮನ್ಮಥನಾರಣ್ಯವಿದು

ಬೆಂಡಾಗಿ ಹೋಗುವರು ಅರಿಯದೀ ಕೊಂಪೆ  ||೨||

 

ತನುವಿನೊಳು ಶೃಂಗಾರ ಕೊಂಡಾಡಲಳವಲ್ಲ

ಬನ್ನಬಡುತಲಿ ಬಹಳ ಚೆನ್ನಿಗನು

ರನ್ನ ಸಿರಿ ಕಾಗಿನೆಲೆಯಾದಿಕೇಶವರಾಯ

ಇನ್ನುಂಟೆ ಜಗದೊಳು ನಿನ್ನ ಪೊಗಳುವರು   ||೩||

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023