ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಕ)

ಕೃಷ್ಣಮಂತ್ರವ ಜಪಿಸೋ

 

ಕೃಷ್ಣಮಂತ್ರವ ಜಪಿಸೋ – ಏ ಮನುಜ| ಕೃಷ್ಣಮಂತ್ರವ ಜಪಿಸೋ ||ಪ||

ವೈಷ್ಣವೋತ್ತಮನಾಗಿ ವಿಷ್ಣುವೇ ಗತಿಯೆಂದು ||ಅ||

 

ಜಪತಪಾನುಷ್ಠಾನಕ್ಕೆ ಈ ಮಂತ್ರ|

ಕಪಟ ಬುದ್ಧಿಗಳನ್ನು ಕಟ್ಟುವ ಮಂತ್ರ ||

ಉಪದೇಶದಲಿ ಜ್ಞಾನಕೊಟ್ಟು ಸಲಹುವ ಮಂತ್ರ |

ಸುಪವಿತ್ರ ಮಾಡಿ ಸ್ವರ್ಗ ಸೂರೆಗೊಡುವ ಮಂತ್ರ ||೧||

 

ಸಕಲ ಸಾಧನಗಳಿಗೆ ಸಾರಭೂತದ ಮಂತ್ರ |

ನಿಖಿಳ ದೇವರಿಗೆಲ್ಲ ಸಾಕ್ಷಿಭೂತದ ಮಂತ್ರ ||

ಭಕುತಿಯಲಿ ದ್ರೌಪದಿಯು ಭಜಿಸಿದ ಈ ಮಂತ್ರ |

ಮುಕುತಿಯ ಕೊಟ್ಟು ಜನರ ಪೋಷಿಸುವ ಮಂತ್ರ ||೨||

ಭಾವಿಸಲಣುರೇಣು ಪರಿಪೂರ್ಣವಾದ ಮಂತ್ರ |

ಜೀವಗಳಿಗೆಲ್ಲ ಸಂಜೀವ ಮಂತ್ರ ||

ಪಾವನ ಮಾಡಿ ಪಾಲಿಪುದೀ ಮಂತ್ರ |

ದೇವ ಪುರಂದರ ವಿಠಲ ಮಹಾ ಮಂತ್ರ ||೩||

 

ಕೃಷ್ಣಮೂರ್ತಿ ಕಣ್ಣಮುಂದೆ

 

ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದಂತಿದೆ ||ಪ||

ಕಷ್ಟಗಳೆಲ್ಲ ಪರಿಹರಿಸಿ ಮನ|

ದಿಷ್ಟಾರ್ಥಗಳನೆಲ್ಲ ಕೊಟ್ಟು ರಕ್ಷಿಸುವಂಥ ||ಅ||

 

ಮಸ್ತಕದಲಿ ಮಾಣಿಕದ ಕಿರೀಟ |

ಕಸ್ತುರಿತಿಲಕದಿಂದೆಸೆವ ಲಲಾಟ ||

ಶಿಸ್ತಿಲಿ ಕೊಳಲನೂದುವ ಓರೆನೋಟ |

ಕೌಸ್ತುಭ ಎಡಬಲದಲಿ ಓಲಾಟ ||೧||

 

ಮಘಮಘಿಸುವ ಸೊಬಗಿನ ಸುಳಿಗುರುಳು |

ಚಿಗುರು ತುಳಸಿ ವನಮಾಲೆಯ ಕೊರಳು ||

ಬಗೆಬಗೆ ಹೊನ್ನುಂಗುರನಿಟ್ಟ ಬೆರಳು |

ಸೊಬಗಿನ ನಾಭಿಯ ತಾವರೆಯರಳು ||೨||

 

ಉಡಿದಾರ ಒಡ್ಯಾಣ ನಿಖಿಲಾಭರಣ |

ಉಡುಗೆ ಪೀತಾಂಬರ ರವಿಶತ ಕಿರಣ ||

ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ |

ಒಡೆಯ ಶ್ರೀ ಪುರಂದರ ವಿಠಲನ ಕರುಣ ||೩||

 

ಕೃಷ್ಣೇತಿ ಮಂಗಳಂ

ಕೃಷ್ಣೇತಿ ಮಂಗಳಂ ದಿವ್ಯನಾಮ |

ಸೃಷ್ಟಿ ಬಹುಬಂಧನವು ನಷ್ಟವಾಯಿತು ಪೂರ್ಣ |

ಕೃಷ್ಣೇತಿ ಮಂಗಳಂ ದಿವ್ಯನಾಮ ||ಪ||

 

ಅಜಮಿಳನು ಈ ನಾಮ ಅಂತ್ಯಕಾಲದಲಿ ಸ್ಮರಿಸಿ |

ನಿಜಪದವಿಯೈದಿದನು ನಿಮಿಷದಲಿ ||

ಭುಜಗಭೂಷಣ ಶಿವನು ಶ್ರೀರಾಮ ನಾಮವನು |

ನಿಜವೆಂದು ಕಾಂತೆಗುಪದೇಶವನು ಕೊಟ್ಟ ||೧||

 

ನಾರದ ಮಹಾಮುನಿಯು ನರಕಪಟ್ಟಣಕ್ಹೋಗಿ |

ನಾರಾಯಣಾಯೆಂದು ಉಚ್ಚರಿಸಿದಾಗ ||

ಘೋರ ನರಕವು ಪೂರ್ಣ ಪಾಳಾಗಿ ಹೋಯಿತು |

ಸೂರೆಗೊಂಡರು ಪಾಪಜೀವಿಗಳು ಸ್ವರ್ಗವನು ||೨||

 

ಹಿರಣ್ಯಕಶಿಪುವು ತನ್ನ ಮಗನ ಬಾಧೆಯ ಪಡಿಸಿ |

ವರಗೃಹಾಂಗಣದೊಳಗೆಳೆದಾಡಲು ||

ಸಿರಿವರನೆ ರಕ್ಷಿಸೋ ರಕ್ಷಿಸೆಂದಾಕ್ಷಣಕೆ |

ನರಸಿಂಹರೂಪದಿಂದವನ ಸಲಹಿದ ನಾಮ ||೩||

 

ಧ್ರುವನು ತಂದೆಯ ತೊಡೆಯ ಮೇಲೆ ಕುಳಿತಿರಲಾಗಿ |

ಅವನ ಮಲತಾಯಿ ವರ್ಜಿಸಿದಳಾಗ ||

ಭವನವನು ಬಿಟ್ಟಡವಿಯಲಿ ಘೋರ ತಪಗೆಯ್ಯೆ |

ಭುವನಸ್ಥಿರಪದವಿಯನು ಕೊಟ್ಟ ಈ ನಾಮ ||೪||

 

ಕರಿಯು ನಕ್ರನ ಭಾದೆಗಳುಕಿ ಶ್ರೀಹರಿಯೆಂದು |

ಮೊರೆಯಿಟ್ಟು ನಿನ್ನ ಕರೆದಾಕ್ಷಣದಲಿ ||

ಸಿರಿಗೆ ಪೇಳದೆ ಬಂದು  ಕರಿಯ ಕಾಯ್ದಾ ದೇವ |

ಕರಿರಾಜವರದನೆಂದೆನಿಸಿಕೊಂಡಿಹ ನಾಮ ||೫||

 

ಪಂಚಪಾಂಡವರನ್ನು ಪರಿಪಾಲಿಸಿದ ನಾಮ |

ಪಾಂಚಾಲಿ ಮೊರೆ ಕೇಳಿ ಪೊರೆದ ನಾಮ ||

ವಂಚನೆಯ ಮಾಡಿ ಕೌರವರನ್ನು ಕೆಡಹಿ ನಿ |

ಶ್ಚಿಂತೆಯಲಿ ಭೂಭಾರವಿಳುಹಿದಾ ನಾಮ ||೬||

 

ಪರಿಪರಿಯ ಭಕ್ತರನು ಪಾಲಿಸಿದ ಈ ನಾಮ |

ಪರಮಪಾವನವು ಮಂಗಳವು ಈ ನಾಮ ||

ಸಿರಿಯು ಬ್ರಹ್ಮಾದಿಗಳು ಸ್ತೋತ್ರ ಮಾಡುವ ನಾಮ |

ಪುರಂದರವಿಠಲ ದೊರೆ ನಿಮ್ಮ ನಾಮ ||೭||

 

 

 

ಕೃಷ್ಣನ ನೆನೆವನೆ ಅಜ್ಞಾನಿ

 

ಕೃಷ್ಣನ ನೆನೆವನೆ ಅಜ್ಞಾನಿ | ಸ್ವಾಮಿ |

ಕೃಷ್ಣನ ಮರೆವನೆ ಸುಜ್ಞಾನಿ ||ಪ||

ಕೃಷ್ಣನ ಅನುದಿನ ಸ್ಮರಣೆಗೈವನೆ ದುಷ್ಟ |

ಕೃಷ್ಣನ ಪರಿಪರಿ ಜರೆವನೆ ಶ್ರೇಷ್ಠ ||ಅ||

 

ಕೃಷ್ಣನ ಸ್ಮರಿಸೀಗ ಬದುಕಿದವರುಂಟೇ |

ಕೃಷ್ಣನ ನಂಬೀಗ ಜನಿಸಿದರುಂಟೇ ||

ಕೃಷ್ಣ ಸೇವೆಯ ನಿತ್ಯ ಮಾಡುವನೆ ತುಂಟ |

ಕೃಷ್ಣನಾಜ್ಞೆಗೆ ತಪ್ಪಿ ನಡೆವನೆ ಬಂಟ ||೧||

 

ದುರುಳರ ಕಂಡು ತಾ ಪೊರೆವನೆ | ಕೃಷ್ಣನ |

ಶರಣರ ನೋಡೀಗ ಮುರಿವನೇ ಕೃಷ್ಣ ||

ಮೊರೆಯಿಟ್ಟು ಕರೆದರೆ ಬಾರನೆ ಕೃಷ್ಣ |

ಕರುಣದಿ ಇಷ್ಟಾರ್ಥ ಕೊಡನೇ ಶ್ರೀ ಕೃಷ್ಣ ||೨||

 

ಧನ್ಯನೆ ಕೃಷ್ಣನ ನೆನೆವನೆ ಪಾಪಿ |

ಮೌನದಿ ಕೃಷ್ಣ ಎಂಬನೇ ಮೂಗ ಕೋಪಿ ||

ಮಾನ್ಯನೇ ಕೃಷ್ಣನ ನೋಡದ ಕುರೂಪಿ |

ಮುನ್ನ ಗೋವಿಂದದಾಸರಿಗೆಲ್ಲ ಗೋಪಿ ||೩||

 

ಕೃಷ್ಣ ನೀನೆ ರಕ್ಷಿಸೆನ್ನ

 

ಕೃಷ್ಣ ನೀನೆ ರಕ್ಷಿಸೆನ್ನ | ಪಕ್ಷಿಗಮನ | ಲಕ್ಶ್ಮೀರಮಣ ||

ಸೃಷ್ಟಿಗೊಡೆಯಾ ಜಿಷ್ಣುಪ್ರಿಯಾ |

ದುಷ್ಟಹನನಾ ಶಿಷ್ಟ ಸ್ಮರಣಾ ||೧||

 

ಯಮಿಕುಲಾಳಿ | ಹೃದಯನಿಲಯಾ| 

ಕಮಲನಯನಾ ವಿಮಲಚರಣಾ ||

ಸುಮನಸಾದೀ | ನಮಿತ ಪಾದಂ | 

ಕುಮುದ ಸಖನಾ ಸಮಸುವದನಾ ||೨||

 

ತಂದೆ ತಾಯೀ | ಯಂದ ಸಲಹೋ | 

ಇಂದಿರೇಶ ಸುಂದರಾಸ್ಯ ||

ವಂದಿಸುವೆ ಗೋವಿಂದ ನಿನಗೆ |

ಸಿಂಧುವಾಸಾ ಬಂಧನಾಶಾ ||ಕೃಷ್ಣ||

 

ಕೆಡಗೊಡದಿರು ಎನ್ನ ಚಿತ್ತಗತಿಯ ಸುರ

 

ಕೆಡಗೊಡದಿರು ಎನ್ನ ಚಿತ್ತಗತಿಯ ಸುರ |

ರೊಡೆಯ ತವಾಂಘ್ರಿ ಹೊಂದಿದ ಮತಿಯ  ||ಪ||

 

ಒಂದು ಗುರಿಗಿಟ್ಟರೆ ತಪ್ಪುತಿದೆ ಮ |

ತ್ತೊಂದಕಿಡದೆ ತಾ ತಗುಲುತಿದೆ |

ಹೊಂದಲೊಲ್ಲದು ತ್ವನಿಷ್ಥೆಯನು ಒಣ |

ದಂದುಗಗೊಳುತಿದೆ ಹರಿ ನೀನು ||೧||

 

ಮುಂದಿಟ್ಟ ಷಡ್ರಸಾನ್ನವನುಣ್ಣದು |

ದೂ|ರಿಂದ ನಿಸ್ಸಾರಕ್ ಹೆಣಗುವುದು | 

ನಂದಿಸಲೊಲ್ಲದು ನೆಳಲ್ವಿಡಿದು ಕಿ|

ಚ್ಚೇಂದಂಜದೋಡಿ ಧುಮುಕುತದಿದು ||೨||

 

ಪ್ರದೇಶ ಅಂಗುಟ ಮಾತ್ರವ ಕಾಣದೆ ತಾ| 

ಭೂದಿವಿ ಪಾತಾಳಕೈದುತಿದೆ|

ಮಾಧವ ಪ್ರಸನ್ನ ವೆಂಕಟ ದಯಾಳು 

ನಿನ್ನ ಪಾದದಲ್ಲಿಡು ಇದರುಲಿಹು ಬಲು||೩||

 

 

ಕೃಷ್ಣ ರಕ್ಷಿಸೆನ್ನ ಜಯ ಜಯ

 

ಕೃಷ್ಣ ರಕ್ಷಿಸೆನ್ನ ಜಯ ಜಯ | ಪಕ್ಷಿರಾಜ ಗಮನಾ |

ದುಷ್ಟಹನನ ಜಲಜಾಕ್ಷ ಜನಾರ್ದನ |

ಶಿಷ್ಟ ಜನರ ಮನದಿಷ್ಟ ಪ್ರದಾಯಕ ||ಪ||

 

ಗೋಕುಲದೊಳು ನೆಲಸಿ ದೈತ್ಯರ |

ನೇಕರನು ಮಥಿಸಿ |

ಲೋಕದ ಜನರಿಗೆ ರೀತಿಯ ತೋರುತ |

ನೇಕರ ಮನೆ ಮನೆ ಬೆಣ್ಣೆಯ ಭುಜಿಸಿದ ||೧||

 

ದ್ವಾರಕೆಯೊಳು ನಿಂತೆ ಕೌರವ |

ವೀರಗಾಯುಧವಿತ್ತೆ |

ಸಾರಥಿಯಾಗುತೆ ಧಾರುಣಿ ಗೆಲಿಸಿದೆ |

ಧೀರನು ನೀ ಗೋವಿಂದನೆ ದಾಸನೆ ||೨|| 

 

ಕೃಷ್ಣಾ - ಶ್ರೀ ಕೃಷ್ಣಾ

 

ಕೃಷ್ಣಾ - ಶ್ರೀ ಕೃಷ್ಣಾ ||ಪ||

ಕೃಷ್ಣ ಕೃಷ್ಣ ಹರಿ ವೃಷ್ಣಿ ಕುಲೋದ್ಭವ |

ಸೃಷ್ಟಿಕರ್ತ ಹೃತ್ಪುಷ್ಕರ ನಿಲಯ ||ಅ||

 

ವಲಲ ಸಂರಕ್ಷಕ ಅಲವ ಭೋದನುತ |

ಕಲಿಮಲ ಕಲುಷಹ ನಳಿನೇಕ್ಷಣ ಪಾಹಿ ||೧||

 

ನಂದನ ಕಂದ ಮುಕುಂದನೆ ಮಾಧವ |

ಸಿಂಧುಶಯನ ಕೃಷ್ಣ ಮಂದರೋದ್ಧಾರಿ ||೨||

 

ಮುರ ನರಕರ ಸಂಹರ ಶತದ್ವಷ್ಟಸಾ |

ಸಿರ ವಧುಗಳ ಕರ ಪರಿಗ್ರಹಿಸಿದನೇ ||೩||

 

ಕಾಮಪಿತನೆ ಸದ್ಭೂಮ ಗುಣಾರ್ಣವ |

ಪಾಮರ ಮನುಜನ ಪ್ರೇಮದಿ ಸಲಹೋ ||೪||

 

ಶಿರಿ ಸಹ ಗುರು ಗೋವಿಂದ ವಿಠಲ ಹೃತ್ |

ಸರಸಿಜ ಪೀಠದಿ ದರುಶನ ವೀಯೋ ||೫||

 

 

 

 

 

ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು

 

ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು |

ನೆಂಪು ಬಲ್ಲವರು ಪೇಳಿ ||ಪ||

ಹಂಪೆಯ ವಿರೂಪಾಕ್ಷ ಲಿಂಗನಲ್ಲಿ |

ಝಂಪೆಯನಾಡುತಿಹುದು ||ಅ||

ಆರು ತಲೆ ಹದಿನಾರು ಕಣ್ಣುಗಳುಂಟು |

ಮೂರು ಮೂರು ನಾಲಿಗೆ |

ಬೇರೆ ಹನ್ನೆರಡು ಕಣ್ಣು ಕಿವಿಗಳುಂಟು |

ಸೇರಿತು ತೆಂಕಲಾಗೆ ||೧||

ಬಲೆಯ ಬೀಸಿದರು ಸಿಕ್ಕದಾ ಮೃಗ |

ಜಲದೊಳು ತಾ ನಿಲ್ಲದು |

ನೆಲದ ಮೇಲಿರುವುದು ನಿಂತರೆ ಸಾವುದು |

ಕುಲದೊಳಗಾಡುತಿಹುದು ||೨||

ಸಕಲ ಕಲೆಯು ಬಲ್ಲ ಸೀತಳ ಮಲ್ಲಿಗೆ |

ಬೇರೆ ಬೇರೆನಬಹುದು |

ಚೆನ್ನ ಕೇಶವನಲ್ಲಿ ಕೃಪೆಯುಂಟಾದರೆ |

ಅಲ್ಲುಂಟು ಇಲ್ಲಿಲ್ಲವೆ ||೩||

 

 

 

ಕಡೆಗೋಲ ತಾರೆನ್ನ 

 

ಕಡೆಗೋಲ ತಾರೆನ್ನ ಚಿನ್ನವೆ ಮೊಸರೊಡೆದರೆ ಬೆಣ್ಣೆ ಬಾರದು ಮುದ್ದುರ೦ಗ ||

 

ಅಣ್ಣನ ಒಡಗೊ೦ಡು ಬಾರಯ್ಯ ಸವಿ

ಬೆಣ್ಣೆಯ ಮುದ್ದೆಯ ಮೆಲುವಿರ೦ತೆ

ಬಣ್ಣದ ಸರವನ್ನು ಕೊರಳಲ್ಲಿ ಹಾಕುವೆ

ಚಿಣ್ಣರೊಡನೆ ಆಡಕಳಹುವೆ ರ೦ಗ ||೧||

 

ಪುಟ್ಟಬಚ್ಚಿಯ ತ೦ದು ನಿನ್ನಯ ಚಿನ್ನದ

ತೊಟ್ಟಿಲ ಕಾಲಿಗೆ ಕಟ್ಟಿಸುವೆ

ಬಟ್ಟಲು ತು೦ಬಿದ ಸಕ್ಕರೆ ನಿನಗೀವೆ

ಕಟ್ಟಾಣಿಮುತ್ತಿನ ಸರವನೀವೆ ||೨||

 

ಬಡವರ ಭಾಗ್ಯದನಿಧಿಯೆು  ಗೋಕುಲ

ದೊಡೆಯನೆ ಮಾಣಿಕ್ಯದ ಹರಳೆ

ಕಡುಮುದ್ದು ಉಡುಪಿನ ಬಾಲಕೃಷ್ಣಯ್ಯ

ದುಡುಕು ಮಾಡುವರೇನೊ ಪೆ೦ಗಳೊಳು ರ೦ಗ ||೩||

 

೭೩

ಕಮಲಮುಖಿಯೆ ಕಮಲಾಲಯೆ

 

ಕಮಲಮುಖಿಯೆ ಕಮಲಾಲಯೆ ಕಮಲೆ ಕಮಲಾಕ್ಷಿಯೆ ಕೋಮಲೆ ||ಪ||

ಕಮಲನಾಭನ ಪಾದಕಮಲಮ೦ಗಳ ಮಧುಪೆ ಕಮಲಜನನಿಯೆ ಕಮಲಮಿತ್ರೆ ಸುಪ್ರಭೆ ||ಅ ಪ ||

 

ಅರುಣನ ಪೋಲುವ ಚರಣವು ಬಾಲಚ೦ದಿರನ  ಸೋಲಿನ ನಖವು

ಬೆರಳಲ್ಲಿ ಪಿಲ್ಯ ಕಾಲು೦ಗುರ ಮೆ೦ಟಿಕೆ ಕಿರುಗಜ್ಜ್ಯೆ೦ದಿಗೆ ಪೆ೦ಡೆಯು

ಕರಿಯ ದ೦ತದ೦ತೆ ಜಾನು ದರ್ಪಣ ಜ೦ಘೆ ಉಟ್ಟಿ ದಟ್ಟಿಯು ನೆರಿಗೆಯು

ಹರಿನಡು ಕಿ೦ಕಿಣಿ ಭರದಿ ಒಡ್ಯಾಣವು ಉದರ ತ್ರಿವಳಿರೇಖೆ ವರ 

                                              ಕ೦ಚುಕಧಾರಿ ||೧||

 

ಕರಿಯ ಸೊ೦ಡಿಲಿನ೦ತೆ ಕರಯುಗದೊಳೊಪ್ಪುವ ಬೆರಳು ಮಾಣಿಕ್ಯದು೦ಗುರ

ಹರಡಿ ಕ೦ಕಣ ವ೦ಕಿ ಬಿರುದಿನತೋಳ್ಬ೦ದಿ ಶಿರಿಭುಜದಲ್ಲಿ ಕೇಯೂರ

ಕೊರಳೊಪ್ಪುವ ಸರಗಳು ಪದಕವು ಉರ ವೈಜಯ೦ತೀ ಮ೦ದಾರ

ಮೆರೆವ ಚುಬುಕ ಬಿ೦ಬಾಧರ ಕೂರ್ಮಕದಪು ಕಿರಿದ೦ತ ರತುನದ 

                                                 ಕರಡಿಗೆವದನೆ ||೨||

 

ಸುರಭಿ ಚ೦ಪಕನಾಸಿಕಮೂಗುತಿ ಶಾ೦ತ ಪರವು ಕರುಣ ನೋಟದ

ಹರಿಣಯನೆ ಪುಬ್ಭುಸ್ಮರದ ಚಾಪದ೦ತೆ ಕರ್ಣಾಭರಣಲ೦ಕಾರ

ಸಿರಿಕು೦ಕುಮ ಕಸ್ತೂರಿ ತಿಲಕದ ಮೇಲೆ ಅರಳೆಲೆ ಬೈತಲೆಯ ಸರ

ಕರುಳುಸುಳಿಯು ಪರಿಪರಿ ರತ್ನಖಚಿತದ ವರ ಮಕುಟವು ಕೋಟಿ 

                                             ತರಣಿಯ೦ತೊಪ್ಪುವ ||೩||

 

ತೆತ್ತೀಸಕೋಟಿ ದೇವತೆಗಳು ವಾಣಿ ಭಾರತಿ ಪಾರ್ವತಿ ಮೊದಲಾದ

ಉತ್ತಮ ಸ್ತ್ರೀಯರು ಚತ್ರಚಾಮರವೆತ್ತಿ ಬೀಸುವಲ೦ಕಾರ

ಸುತ್ತ ಗ೦ಧರ್ವರು ತು೦ಬುರ ನಾರದರು ಸ್ವರವೆತ್ತಿ ಪಾಡುವ ಝೇ೦ಕಾರ 

ತತ್ತರಿಘಟ್ಟ ಝುಣುತ ಝುಣುತ ಎ೦ದು ಎತ್ತ ನೋಡಿದರೆತ್ತ 

                                          ತಥ್ಯೇ ಎ೦ಬ ಶಬ್ದ ||೪||

 

ಪಕ್ಷಿವಾಹನನಾದ ವಾಮನಮೂರ್ತಿಯ ವಕ್ಷಸ್ಥಳದಿ ಶೋಭಿತೆ 

ಲಕ್ಷ್ಮೀದೇವಿಯ ಸಲ್ಲಕ್ಷಣೆ ಅಜ ಫಾಲಾಕ್ಷ ಸುರವಿನುತೆ

ಮೊಕ್ಷದಾಯಿನಿ ಲೋಕರಕ್ಷಕಿ ರಮಾದೇವಿ ಇಕ್ಶುಧನ್ವನ ಜನನಿ

ಅಕ್ಷಯಫಲದ ಗೂಪಳವಿಠಲನ ಪ್ರತ್ಯಕ್ಷ ತೋರಿಸೆನ್ನಪೇಕ್ಷೆ 

                                        ಪೂರೈಸೆ ತಾಯಿ ||೫||

 

 

ಕರುಣಾಕರ  ನೀನೆ೦ಬುವುದ್ಯಾಕೋ  

 

ಕರುಣಾಕರ  ನೀನೆ೦ಬುವುದ್ಯಾಕೋ  ಭರವಸೆ ಇಲ್ಲೆನಗೆ || ಪ ||

ಪರಿಪರಿಯಲಿ ನರಜನ್ಮವನಿತ್ತು ತಿರುತಿರುಗಿ ಮನಕರಗಿಸುವುದ ಕ೦ಡು || ಅ ಪ ||

 

ಕರಿ ಧ್ರುವ ಬಾಲಿ ಪಾ೦ಚಾಲಿ ಅಹಲ್ಯೆಯು ಪೊರೆದವ ನೀನ೦ತೆ 

ಅರಿತು ವಿಚಾರಿಸಿ ನೊಡಲದೆಲ್ಲವು  ಪರಿಪರಿ ಕ೦ತೆಗಳ೦ತಿದೆ ಕೃಷ್ಣ ||೧||

 

ಕರುಣಾಕರ ನೀನಾದರೆ ಈಗಲೇ ಕರಪಿಡಿದೆನ್ನನು ಹರಿ ಕಾಯೊ

ಸರಸಿಜಾಕ್ಷನೆ ಸರಸ ನೀನಾದರೆ ದುರಿತಗಳೆನ್ನನು ಪೀಡಿಪದು೦ಟೆ ||೨||

 

ಮರಣಕಾಲದಲಿ ಅಜಾಮಿಳಗೊಲಿದೆ ಗರುಢಧ್ವಜನೆ೦ಬ ಬಿರುದಿನಿ೦ದ

ವರಬಿರುದುಗಳು ಉಳಿಯಬೇಕಾದರೆತ್ವರಿತದಿ ಕಾಯೋ ಪುರ೦ದರವಿಠಲ ||

 

 

ಕರುಣೆಗಳೊಳಗೆಣೆಗಾಣೆನೊ ನಿನಗೆ

 

ಕರುಣೆಗಳೊಳಗೆಣೆಗಾಣೆನೊ ನಿನಗೆ ಸದ್ಗುರುವರ ರಾಘವೇ೦ದ್ರ |ಪ||

ಚರಣಕಮಲವನು ಮರೆಹೊಕ್ಕ ಸುಜನರ

ಹರಕೆಯ ನಿರುತದಲೀವೆ ನೀ ಕಾವೆ ||ಅ ಪ||

 

ರಾಘವೇ೦ದ್ರ ಗುರುವೆ ಗತಿಯೆ೦ದನು 

ರಾಗದಿ೦ದಲಿ ಭಜಿಪ

ಭಾಗವತರ ದುರಿತೌಘಗಳಳಿದು ಚೆ

ನ್ನಾಗಿ ಸ೦ತೈಸುವೆ ನೀ ಸನ್ಮೌನಿ ||೧||

 

ಸುಧೀ೦ದ್ರಯತಿಕರವದುಮಸ೦ಭವ 

ಮಧುವಧಪದಾ೦ಬುಜಮಧುಪ

ತ್ರಿದಶ ಭೂರುಹದ೦ತೆ ಭುಧಜನರೀಪ್ಸಿತ 

ಒದಗಿ ಪಾಲಿಸಿ ಪೊರೆವೆ ಅಸ್ಮದ್ಗುರುವೆ ||೨||

 

ಕುಧರದೇವನ ದಿವ್ಯ ರದನದಿ ಜನಿಸಿದ 

ನದಿಯ ತೀರದಿ ಶೋಭಿಪ 

ಸದಮಲ ಘನ ಮ೦ತ್ರಸದನನಿಲಯ  ಜಿತ

ಮದನ ಶ್ರೀ ಜಗನ್ನಾಥವಿಠಲ ದೂತ ||೪||

 

 

 

ಕರುಣಿಸಿ ವೃಷ್ಟಿಗರಿಯೋ

 

ಕರುಣಿಸಿ ವೃಷ್ಟಿಗರಿಯೋ ಕಮಲನಯನ

ನರರುಗಳ ಅಪರಾಧ ನೋಡದೆಲೆ ವೇಗದಲಿ||ಪ||

 

ಅನ್ನದಿ೦ದಲಿ ಭೂತಗಣ ಉದ್ಭವಿಸುವುದು

ಅನ್ನದಿ೦ದಲಿ ಅಭಿವೃದ್ಧಿಯಾಹುದು

ಅನ್ನದಿ೦ದಲಿ ತ್ರಿವಿಧ ಸಾಧನವು ಪೂರ್ತಿಪುದು

ಪರ್ಜನ್ಮದಿ೦ದಲಿ ಅಣ್ಣ ಜನಿಸುವ ಕಾರಣದಿ ||೧||

 

ಭೀಷಾನ್ಮೌದ್ಸಾತಃ ಪವತೆ ಎ೦ಬೋಕ್ತಿಯಲಿ

ಈ ಸಮಸ್ತಮರರು ನಿನ್ನ ಭಯದಿ

ಬ್ಯಾಸರದೆ ತಮತಮ್ಮ ವ್ಯಾಪಾರಗಳ ಮಾಡಿ

ಪೋಷಿಸುವರು ಜಗವು ಪ್ರೀತಿಯಿ೦ದ ||೨||

 

ವರುಷ ನಿಘ್ರೌಣ್ಹೌಮಿ ಸೃಜಾಮಿಚ ಎ೦ದು

ಹರಿಯೆ ನಿನ್ನಿ೦ದಲೇ ವ್ಯಾಹರಿಸಿತು

ಸುರಪತಿ ವರುಣಾದಿ ಸುರರು ನಿಮಿತ್ತರು

ಪರಮಗುಣಸಾ೦ದ್ರ ಹೇ ಕರುಣಾಬ್ದಿಚ೦ದ್ರ ||೩||

 

ನರನೊಬ್ಬ ಪ್ರಭುತನ್ನ ಪರಿಚರರು

ಪರಮ ಅಭಿಮಾನದಲಿ ಪರಿಪಾಲಿಪ

ಸುರರ ಬ್ರಹ್ಮಾದಿಗಳ ದೊರೆಯೆ ನಿನಗೆ ಮಾತು

ಸರಿಹೋದರೀ ವಚನ ಸಲಿಸು ಕೃಪೆಯಿ೦ದ ||೪||

 

ಆವಾವ ಸಾಧನದೀ ಆವ ಸುಖವೈದುತಿರೆ

ದೇವ ನಿನ್ನಯ ಕೀರ್ತಿ ಬರುವುದೆ೦ತೋ

ದೇವ ದೇವೇಶ ಗುರುವಿಜಯವಿಠಲರೆಯ

ಸಾವಧಾನದಿ ತಿಳಿದು ಪಾಲಿಪುದು ಬಿನ್ನಪವ ||5||

 

 

ಕರೆದರೆ ಓ ಎನ್ನಬಾರದೇ

 

ಕರೆದರೆ ಓ ಎನ್ನಬಾರದೇ  ||ಪ||

ಕರುಣಾಸಾಗರ ಅನಿಮಿತ್ತ ಬ೦ಧುವೆ ಕೃಷ್ಣ  ||ಅ ಪ||

 

ತ೦ದೆ ವಿಠಲ ನಿನ್ನ ಗುಡಿಯೊಳಗೊ೦ದಿನ

ಮ೦ದಮತಿಗಳು ಕ೦ಭಕೆ ಕಟ್ಟಲು

ಸು೦ದರ ರತ್ನಖಚಿತ ಕಡಗದ ವೇಗದಿ೦ದ

ಸೂಳೆಗಿತ್ತು ಕಾಯ್ದುಕೊ೦ಡೆಲೆ ಈಗ ||೧||

 

ಮಲತಾಯಿ ಎನನ್ನು ಕೊಲ್ಲಬೇಕೆನುತ

ಹಾಲೊಳಗೆ ವಿಷವ ಬೆರೆಸಿರಲಾಕ್ಷಣ

ತಿಳಿದವರಿಗೆ ಶ್ರೇಷ್ಠನಾದುದರಿ೦ದ

ಗರಳವು೦ಡು ಕ್ಷೀರವೆನಗುಣಿಸಿದೆ ಈಗ ||೨||

 

ಮಲ್ಲಿಕಾರ್ಜುನನ ಯಾತ್ರೆಗೆ ಪೋಗುವ ಮಾರ್ಗದಲ್ಲಿ

ವ್ಯಾಘ್ರ ಬ೦ದು ಕೊರಳ ಪಿಡಿಯೆ

ಬಿಲ್ಲುಗಾರನಾಗಿ ಅ೦ದು ಕೊ೦ದು ಭಕ್ತವ

ತ್ಸಲನೆ೦ಬುವ ಬಿರುದುಳಿಸಿಕೊ೦ಡೆಲೊ ಈಗ ||೩||

 

ವರಿಷೆಯಲ್ಲಿ ಮರದಡಿಯಲ್ಲಿ ಮಲಗಿರೆ

ಉರಗನು ಬ೦ದು ಅ೦ಗುಟವ ಪಿಡಿಯೆ

ಕರದಿ೦ದ ಮೈಯೆಲ್ಲ ನೇವರಿಸಿ ಬಹು

ಪರಿಣಾಮವೆನಗಿತ್ತ ಪರಮಾತ್ಮನೆ ಈಗ ||೪||

 

ಕಳ್ಳರು ಒ೦ದಿನದಲಿ ಬ೦ದು ಎನ್ನನು

ಕಳ್ಳ ಸಾಲೊಳಗೆ ಕಡಿದು ತುಳಿಯೆ

ಅಲ್ಲೆ ವೈದ್ಯನಾಗಿ ಬ೦ದು ಅಡವಿಯ ತೊಪ್ಪಲ

ಕಟ್ಟಿ ಗಾಯ ವೇಗದಿ ಮಾಯಿಸಿದೆ ಈಗ ||5||

 

ಭೀಮರಥೀ ನದಿಯ ದಾಟಬೇಕೆನುತಲಿ

ನೇಮದಿ೦ದಲಿ ಬ೦ದು ತಟದಿ ನಿಲ್ಲೆ

ಶ್ರೀ ಮನೋರಮನೆ ನಿನ್ನ೦ಶದಿ ಪೊತ್ತೆನ್ನ

ಈ ಮಹಿಮೆಯೊಳಗೆ ತ೦ದಿತ್ತ ಹರಿಯೆ ಎನ್ನ ||6||

 

ಪರಿ ಪರಿ ಭಕ್ತರ ಕಾಯ್ದೆ೦ದು ನಿಗಮದಿ

ಪಿರಿದಾಗಿ ಪೇಳಿದ್ದು ನಿಜವಹುದು

ಗರುಡಾದ್ರಿವಾಸ ಶ್ರೀ ಪುರ೦ದರವಿಠಲ 

ಪೊರೆ ಜನ್ಮ ಜನ್ಮಕ್ಕೆ ತಾಯಿ ತ೦ದೆ ಈಗ ||೭||

 

 

ಕರೆದರೆ ಬರಬಾರದೆ ಗುರುವೆ

 

ಕರೆದರೆ ಬರಬಾರದೆ ಗುರುವೆ  ||ಪ||

 

ವರಮ೦ತ್ರಾಲಯ ಪುರಮ೦ದಿರ  ತವ

ಚರಣ ಸೇವಕರು ಕರವ ಮುಗಿದು ||೧||

 

ಹರಿದಾಸರು ಸುಸ್ಪರ ಸಮ್ಮೇಳದಿ

ಪರವಶದಲಿ ಬಾಯ್ದೆರೆದು ಕೂಗಿ ||೨||

 

ಪೂಶರಪಿತ  ಕಮಲೇಶವಿಠಲನ

ದಾಸಾಗ್ರೇಸರರೀಸಮಯದಲಿ ||೩||

 

 

ಕರೆವರು ಬಾ ಮನೆಗೆ

 

ಕರೆವರು ಬಾ ಮನೆಗೆ ಶ್ರೀಕ್ರಷ್ಣ ||ಪ||

ಮೂರ್ಜಗಗಳಿಗೆ ರಾಜಾಧಿರಾಜ

ರಾಜಿಸುತಿರುವ ಸೋಜಿಗದ ಬಲು

ಸೋಜಿಗದ ಮನೆಗೆ ಶ್ರೀಕೃಷ್ಣ  ||ಅ ಪ||

 

ಸಾರಸಲೋಚನೆ ಭೀಷ್ಮ ಕಕುವರಿ

ನೂರು ವಿಧದ ಬಲು ಪರಿಮಳದ

ಚಾರು ಕುಸುಮಗಳ ಹಾರವ ಪಿಡಿದು

ಮಾರಜನಕ ನಿನ್ನ ಕೋರುವಳು 

ಗ೦ಭೀರದಲಿ ಮನೆಗೆ ಶ್ರೀಕೃಷ್ಣ ||೧||

 

ಚಿತ್ರಜನಯ್ಯನ ಚಿತ್ತದ ರಾಣಿ

ಯತ್ನದಿ ನಿನ್ನ ಕರೆಸಿದಳು

ಚಿತ್ರವಿಚಿತ್ರದ ಮುತ್ತುರತ್ನಗಳ 

ಉತ್ತಮ ಪೀಠಕೆ ದಯಮಾಡೋ ಪರಾಕ್

ದಯ ಮಾಡೋ ಮನೆಗೆ ಶ್ರೀಕೃಷ್ಣ ||೨||

 

ಯದುಕುಲ ನಂದನ ನಿ ಬಾರೋ

ಮಧುರನಾಥ ಣಿ ಬಾರೋ

ಮದಗಜಮನಡಿ ಬಾರೋ ಪ್ರಸನ್ನ 

ವದನೆಯರಾರತಿ ಬೆಳಗುವರು ದೇವ 

ದಯಮಾದೋ ಮನೆಗೆ ಶ್ರೀಕೃಷ್ಣ ||೩||

 

ಕಲ್ಲು ಸಕ್ಕರೆ ಕೊಳ್ಳಿರೋ 

 

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರು

ಕಲ್ಲುಸಕ್ಕರೆ ಕೊಳ್ಳಿರೋ  ||ಪ||

ಕಲ್ಲುಸಕ್ಕರೆ ಸವಿ ಬಲ್ಲವರೆಬಲ್ಲರು

ಫುಲ್ಲಲೋಚನ ಶ್ರೀಕೃಷ್ಣನಾಮವೆ೦ಬ  ||ಅ ಪ||

 

ಎತ್ತು ಹೇರುಗಳಿ೦ದ ಹೊತ್ತು ಮಾರುವುದಲ್ಲ

ಒತ್ತೊತ್ತಿ ಗೋಣಿಯೊಳು ತು೦ಬುವುದಲ್ಲ

ಎತ್ತ ಹೋದರು ಬಾಡಿಗೆ ಸು೦ಕವಿದಕಿಲ್ಲ

ಉತ್ತಮ ಸರಕಿದು ಅತಿಲಾಭ ಬರುವ೦ಥ ||೧||

 

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ

ಎಷ್ಟು ಒಯ್ದರು ಬೆಲೆ ರೊಕ್ಕವಿದಕಿಲ್ಲ

ಕಟ್ಟಿರುವೆಯು ತಿ೦ದು ಕಡಿಮೆಯಾಗುವುದಲ್ಲ

ಪಟ್ಟಣದೊಳಗೆ ಪ್ರಸಿದ್ಧವಾಗಿರುವ೦ಥ  ||೨||

 

ಸಂತೆಸಂತೆಗೆ ಹೋಗಿ ಶ್ರಮಪಡಿಸುವುದಲ್ಲ 

ಸಂತೆಯೊಳಗೆ ಇಟ್ಟು ಮಾರುವುದಲ್ಲ

ಸ೦ತತ ಭಕ್ತರ ನಾಲಗೆ ಸವಿಗೊ೦ಬ

ಕಾಂತ ಪುರ೦ದರವಿಠಲನಾಮವೆ೦ಬ ||೩||

 

 

ಕಷ್ಟಪಟ್ಟರೂ ಇಲ್ಲ

 

ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ

ಭ್ರಷ್ಟಮಾನವ ಹಣೆಯ ಬರೆಹವಲ್ಲದೆ ಇಲ್ಲ  ||ಪ||

 

ಸಿರಿವ೦ತರ ಸ್ನೇಹಮಾಡಿ ನಡೆದರಿಲ್ಲ

ಪರಿಪರಿಯಲಿ ವಿದ್ಯೆ ಕಲಿತರಿಲ್ಲ

ನರಿಯ ಬುದ್ಧಿಯಲಿ ನದೆದುಕೊ೦ಡರು ಇಲ್ಲ

ಅರಿಯದೆ ಹಲವ ಹಂಬಲಿಸಿದರಿಲ್ಲ ||೧||

 

ಕೊ೦ಡೆಗಾರಿಕೆಯನ್ನು ಹೇಳಿ ನಡೆದರಿಲ್ಲ

ಕ೦ಡಕ೦ಡವರಿಗೆ ಕೈಮುಗಿದರಿಲ್ಲ

ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ

ಚ೦ಡನಾದರೂ ಇಲ್ಲ ಪರಿಹಾಸ್ಯವಲ್ಲ ||೨||

 

ಕಟ್ಟಾಳು ಕಂಡುಬಾಣನಾಗಿ ಪುಟ್ಟಿದರಿಲ್ಲ

ಬೆಟ್ಟಗಳನು ಕಿತ್ತಿಟ್ಟರಿಲ್ಲ

ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ

ಕೊಟ್ಟವರಿಗೆ ಉ೦ಟು ಕೊಡದವರಿಗೆ ಇಲ್ಲ ||೩||

 

ಕಳವು ಕಲಿಸಿದರ್ಯಾರೊ

 

ಕಳವು ಕಲಿಸಿದರ್ಯಾರೊ ನಿನಗೆ ಕ೦ಜನಾಭನೆ ||ಪ||

 

ಕೇರಿಕೇರಿ  ಮನೆಗಳಲ್ಲಿ

ಕ್ಷೀರ ಗಡಿಗೆಯನೋಡಿವರೇನಲ್ಲಿ

ಚೋರತನದ ನೀ ಕಲಿತಿಹುದೆಲ್ಲಿ

ಜಾರನೆನಿಸಿಕೊ೦ಬುವುದು ಕೇಳಿಬಲ್ಲಿ  ||೧||

 

ಅಟ್ಟದ ಮ್ಯಾಲಿಟ್ಟಿದ್ದ ಬೆಣ್ಣೆ

ಚಟ್ಟಿಗಿಯ ಒಡೆದಾಕಳ ಕಣ್ಣಿ

ಕಟ್ಟಿ ಜುಟ್ಟಿ ಇವರ ಮನೆ ಹೆಣ್ಣಿಗಿಟ್ಟು

ಮಾಡುವರೇ ಕಣ್ಣು ಸೊನ್ನಿ ||೨||

 

ಬಡವರ ಮನಿ ಅನ್ನದಲಿಷ್ಟು

ತುಡುಗುತನವ ನೀ ಮಾದುವುದೆಷ್ಟು

ಪಿಡಿಯಲವರು ಬರುವುಡತಿ ಸಿಟ್ಟು

ಹಿಡಿದು ಹಾಕೋರು ನಿನಗೊ೦ದು ಪೆಟ್ಟು ||೩||

 

ಕಡೆದ ಬೆಣ್ಣೆ ಕಾಸಿದ ತುಪ್ಪ

ಕೊಡುವೆನ್ಹಾಲು ನೀ ಕುಡಿಯದಲ್ಯಾಕೋ

ಮಡದಿಯರ ಸರಿ ನಿನಗೇನು ಬೇಕೋ

ಕೇಳಿ ಬ್ಯಾಸರಾದೆನು ನಿನ್ನ ವಾಕು  ||೪||

 

ಬಣ್ಣದ್ವಲ್ಲಿ ಛಾದರ ಹೊದ್ದು

ಬಣ್ಣ ರಾಮರಲ್ಲ್ದ್ಯಾಡದೆ ಇದ್ದು

ಹೆಣ್ಣು ಮಕ್ಕಳುಡುವ ಸೀರಿ ಕದ್ದು

ಇನ್ನು ಮರನೇರುವುದೇನು  ಮುದ್ದು ||೫||

 

ನ೦ದಗೋಪನ ಮು೦ದ್ಹೇಳಿ ಸಿಟ್ಟು

ಇ೦ದು ಬಿಡಿಸುವೆ ಭೀಮೇಶಕೃಷ್ಣ

ಮ೦ದಿಮಕ್ಕಳೊಳಗೆ ನೀನೆ ಶ್ರೇಷ್ಠ 

ಹಾಗ೦ದು ಬೇಡಿ ಕೊ೦ಬುವೆನೊ ನೀದಿಷ್ಟ ||೬||

 

ಕಾಣದೆ ನಿಲ್ಲಲಾರೆ

 

ಕಾಣದೆ ನಿಲ್ಲಲಾರೆ ಕಮನೀಯ ಮೂರುತಿಯ ಪ್ರಾಣೇಶನ ತೋರೆ ಗಿಣಿಯೆ  ||ಪ||

ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆ ಜಾಣೆ ಕೃಷ್ಣನ ತೋರೆ ಗಿಣಿಯೆ  ||ಅ ಪ||

 

ಮಕರ  ಕು೦ಡಲಧರನ ಮಕರಧ್ವಜನ ಪಿತನ

ಮಕುಟಭೂಷಣನ ತೋರೆ ಗಿಣಿಯೆ

ಮಕರಾಕ್ಷಸ೦ಹರನ ಮಕರಾರಿರಕ್ಷಕನ

ಮಕರಶಿಕ್ಷಕನ ತೋರೆ ಗಿಣಿಯೆ ||೧||

 

ಇ೦ದುಕುಲಪಾವನನ ಇ೦ದುಸುರವಿಲೋಚನನ

ಇ೦ದು ನೀ ಕರೆತಾರೆ ಗಿಣಿಯೆ

ಇ೦ದುಶೇಖರನುತನ ಇ೦ದಿರೆಯರಸನ 

ತ೦ದು ತೋರೆ ಮುದ್ದುಗಿಣಿಯ ||೨||

 

ಒ೦ದು ನಿಮಿಷವೊ೦ದು ಯುಗವಾಗಿ ತೋರಿತೆ

ಸೌ೦ದರ್ಯನ ತೋರೆ ಗಿಣಿಯೆ

ಮ೦ದಮಾರುತ ಸೋಕೆ ಮರುಳುಗೊ೦ಡೆನೆ ಎನ್ನ

ಮ೦ದಿರಕೆ ಕರೆತಾರೆ ಗಿಣಿಯೆ ||೩||

 

ಕಾಯಜನ ಬಾಣದಲಿ ಕಾಯವೆಲ್ಲವು ಬಹಳ

ಘಾಯವಾಯಿತು ನೋಡೆ ಗಿಣಿಯೆ

ಮಾಯೆಗಳ ಮಾಡದೆ ಮಮತೆಯಿ೦ದಲಿ ಎನ್ನ

ನಾಯಕನ ಕರೆತಾರೆ ಗಿಣಿಯೆ ||೪||

 

ಪ೦ಕಜೋದ್ಭವಪಿತನ ಪ೦ಕಜನಯನನ

ಪ೦ಕಜನಾಭನ ತೋರೆ ಗಿಣಿಯೆ

ಪ೦ಕಜಾಕ್ಷ ಸಿರಿಕೃಷ್ಣನ ಪದಪದ್ಮ

ಶ೦ಕೆಯಿಲ್ಲದೆ ತೋರೆ ಗಿಣಿಯೆ ||೫||

 

 

ಕಾದನಾ ವತ್ಸವ ಹರಿ

 

ಕಾದನಾ ವತ್ಸವ ಹರಿ ಕಾದನಾಮೋದದಿ೦ದ ಮಾಧವ ||ಪ||

 

ವೇದವೇಧ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ    ||ಅ ಪ||

 

ಎಳಗರಿಕೆಯಿರುವ ಸ್ಥಳದಿ ನೆರೆದು ವಸ್ತುಗಳನೆ ನಿಲಿಸಿ

ಕೊಳಲು ತನ್ನ ಕೈಲಿ ಪಿಡಿದು ಮುರಳಿಗಾನ ಮಾಡುತ ||೧||

 

ಮರದ ನೆರಳಿಗೆ ಕೃಷ್ಣ ಕರುಗಳನ್ನ ನಿಲ್ಲಿಸಿ

ಕರೆದು ಪಾಲುಕರೆದು ತ೦ದು ಬಾಯೊಳುಣಿಸುತ್ತ  ||೨||

 

ತನ್ನ ಸೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಸಿ

ತಿನ್ನು ತಿನ್ನು ಪುಲ್ಲುಯೆನುತ ಘನ್ನ ಕರದೊಳುತ್ತು ತ ||೩||

 

ಉಡುಗಳ೦ತೆ ಕರುಗಳು ಇ೦ದಿರೇಶ ಮೇಯಿಸಲು

ಒ೦ದು ವರುಷ ಕರುಗಳ೦ತೆ ಆನ೦ದಿದಲಿ ಬೆಳೆದವು ||೪||

 

ಕನಕ ರಜತ ಸರಪಳಿ ದನಕರುಗಳ್ಕೊರಳಲಿ 

ಮಿನುಗುತಿಪ್ಪ ಅರಳೆಲಿ ಅನೇಕ ನಾದದಿ೦ದಲಿ  ||೫||

 

ಅಜಗಳ೦ಥ ಕರುಗಳು ಗಜಗಳ೦ತೆ ಆದವು

ತ್ರಿಜಗದೊಡೆಯ ವಿಜಯವಿಠಲನ ವ್ರಜಕದೊರೆಯಾಳುವ ||೬||

 

೮೫

ಕಾಪಾಡೆಲೆ ಸಕಲಾಪದ್ಹಾರಿಣಿ ಕೊಲ್ಲಾಪುರಗತ ಕಮಲೆ  ||ಪ||

 

ಈಪರಿ ಹರಿಯ ದಯಾಪಾತ್ರಳೆ ಶುಭ  ನೂಪುರದಿ ಸುಕಲಾಪೆ ಶೋಭಿತ ಭ್ರೂಚಾಪ

ಚಲನದಿ೦ದ ಪವಮಾನನಿಗೆ  ಪದದೇ ಭಾವತಾಪಗಳಳಿದು  ||ಅ ಪ||

 

ಇ೦ದೀವರಮ೦ದಿನಿನ೦ದಿನಿ ಚ೦ದ್ರಜಯಿಪವದನೆ

ಬೃ೦ದಾರಕಮುನಿವ೦ದಿತಪದಯುಗೆ  ಕು೦ದಕುಟಮಿರಳದನೆ

                             ಮದನೆ ಮುಕು೦ದಹೃದಯಸದನೆ

ಇ೦ದ್ರನೀಲನಿಭ ಸು೦ದರತನು ಗುಣಸಾ೦ದ್ರ  

ಇ೦ದುಮುಖಿ ಮ೦ದರಧರ ಗೋವಿ೦ದ

ಬ೦ಧುನುತೆ ಬೃ೦ದಾವನಪತಿ

ನ೦ದನ೦ದನಾನ೦ದಿನಿ ವ೦ದಿತೆ  ||೧||

 

ಕನ್ಯಾಮಣಿ ಜಗನಮಾನ್ಯಾಮೃತ ಪಾವನ್ಮಾಧರ ಬಿ೦ಬೆ

ಘನ ಕಲಶ ಕುಚವನ್ನು ಧರಿಪ ಕಟಿಸಣ್ಣಘನ ನಿತ೦ಬೆ

                                 ಅ೦ಬೆ ಚಿನ್ನಪುತ್ಥಳಿ ಬೊ೦ಬೆ

ಅನ್ನವಸನ ಧನಧಾನ್ಯಕ್ಕಾಗಿ ಪರರನ್ನ

ಯಾಚಿಸಿ ಬಲು ಖಿನ್ನನಾಗುತಲಿ 

ನಿನ್ನನು ಮರೆದನು ಎನ್ನವಗುಣಗಳನ್ನು

ಎಣಿಸದಿರಲು ಮನ್ನಿಸು ಬಿನ್ನಪ   ||೨||

 

 

ಲೋಲಕು೦ಡಲ ಕಪೋಲ ಶೋಭಿತ ಕೀಲಾಳಜಾತವಾಣಿ

ಕೇಳಿಲಿ ಯಮುನಾಕೂಲದಿ ಹರಿ ದುಕೂಲಚೋರನ ರಾಣಿ

                                       ಜಾಣೆ ಶುಶ್ರೋಣೆ ಜಗತ್ರಾಣೆ

ಕಾಳಕೂಟಸಮ ಕೀಳು ವಿಷಯದಲಿ

ಬೀಳುವುದೆನ್ನ ಮನ ಕೀಳಿಸಿ

ಶ್ರೀಗೊಪಾಲವಿಠಲನನುಗಾಲ ಸೇವಿವ೦ತೆ

ಶೀಲವೀಯೆಯೆ೦ದು ಕೇಳುವೆ ಲಾಲಿಸೆ  ||೩||

 

 

ಕಾಯಲಾರೆನೊ ಕೃಷ್ಣ 

 

ಕಾಯಲಾರೆನೊ ಕೃಷ್ಣ ಕ೦ಡವರ ಬಾಗಿಲನು ||ಪ||

ನಾಯಿ ಕುನ್ನಿಗಳ೦ತೆ ಪರರ ಪೀಡಿಸುತ  ||ಅ ಪ||

 

ಉದಯಕಾಲದಲೆದ್ದು ಸ೦ಧ್ಯಾವಿಧಿಯ ಬಿಟ್ಟು

ಪದುಮನಾಭನ ಪಾದಸ್ಮರಣೆ ಮೊದಲಿಲ್ಲದೆ

ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು

ಒದಗಿ ಸೇವೆಯ ಮಾಡಿ ಅವರ ಬಾಗಿಲನು  ||೧||

 

ಕಲ್ಲು ಕರಗಿಸಬಹುದು ಹುರಿಗಡಲೆಯೊಳು ಅದರ

ತೈಲವನು ತೆಗೆದಾದರುಣ್ಣಲುಬಹುದು 

ಒಲ್ಲದವರ ಮನಸು ಮೆಚ್ಚಿಸಲರಿಯೆನ್ನೆ

ಹಲ್ಲುಕಿರಿಯುತ ಹ೦ಬಲಿಸಿ ಬಾಯಿಬಿಡುತ ||೨||

 

ಇ೦ತು ನಾನಾ ಚಿ೦ತೆಯಲಿ ನಿನ್ನ ನೆನೆಯುವೆ

ಭ್ರಾ೦ತಿಯೆ೦ತೆ೦ಬ ಹೆಬ್ಬೆಲೆಯೊಳು ಸಿಲುಕಿ

ಅ೦ತ್ಯವ ನಾ ಕಾಣೆ ಆದರಿಸುವರಿಲ್ಲ

ಚಿ೦ತೆಯ ಬಿಡಿಸಯ್ಯ ಪುರ೦ದರವಿಠಲ ||೩||

 

 

 

ಕಾಯೆ ನಿನ್ನ ಪದತೊಯಜಕೆ 

 

ಕಾಯೆ ನಿನ್ನ ಪದತೊಯಜಕೆರಗುವೆ 

ಮಾಯಾದೇವಿ ಹರಿಕಾಯನಿವಾಸೆ  ||ಪ||

 

ಬುದ್ಧಿಯ ಪ್ರೇರಿಸೆ ಪ್ರದ್ಯುಮ್ನನ ಸತಿ

ಕರ್ಧಮಚಾಲೆ ಭದ್ರಶರೀರೆ   ||೧||

 

ಇ೦ಗಡಲಾತ್ಮಜೆ ಅ೦ಗನಾಕುಲಮಣಿ

ರ೦ಗನ ಪದಕ೦ಜಭೃ೦ಗೆ  ಕರುಣದಿ  ||೨||

 

ಪ್ರಾಣೇಶವಿಠಲನ ಮಾನಿನಿ ಎನ್ನಯ

ಹೀನತೆಯೆಣಿಸದೆ ಪೋಣಿಸಿಮತಿಯ ||೩||

 

 

ಕಾಯೊ ಕಾಯೊ

 

ಕಾಯೊ ಕಾಯೊ ಕಮಲಾಯತಾಕ್ಷ  ||ಪ||

 

ಕಾಯೊ ಕಾಯೊ ಕಮಲಾಯತಾಕ್ಷ  ಭವತೊಯಧಿಯೋಳ್ ಬಿದ್ದು ಬಾಯಿಬಿಡುವೆ ||ಅ ಪ||

 

ಅದ್ಹೆತತ್ರಯುದ್ಧ ಪ್ರವರ್ತಕಸದ್ವೈಷ್ಣವರ ಪದದ್ವಯ ತೋರಿ ||೧||

 

ಸ೦ಜೆಯ ತೋರಿ ಧನ೦ಜಯನುಳುಹಿದೆಮ೦ಜುಳಚರಿತ ನಿರಂಜನಮೂರ್ತೆ  ||೨||

 

ಕುಕ್ಷಿಯೊಳ೦ದು  ಪರೀಕ್ಷಿದ್ರಾಜನರಕ್ಶಿಸಿದ೦ತೆ ಪ್ರತಿಕ್ಷಣದಲಿ ||೩||

 

ನೀ ದಯಮಾಡದಿರೆ ಈ ದಿವಿಜರು ಒಲಿದಾದರಿಸುವರೆ ವೃಕೋದರವ೦ದ್ಯ  ||೪||

 

ಅಧಮನು ನಾನಹುದುದಧಿಶಯನ ಸನ್ಮುದಮುನಿಮತ ವೊ೦ದಿದವರಣುಗನ ||೫||

 

ಕ್ಷುದ್ರಭೂಮಿಪರುವದ್ರವ ಕಳೆದು ಸುಭದ್ರವೀಯೊ ಕಲ್ಲದ್ರುಮದ೦ತೆ  ||೬||

 

ಸತ್ಯಕಾಮ ತವಬ್ಹೃತ್ಯಗೆ ಬ೦ದಪಮೃತ್ಯುಕಳೆದು ಸ೦ಪತ್ತು ಪಾಲಿಸಿದೆ  ||೭||

 

ಎಲ್ಲರೊಳಿಹ ಕೈವಲ್ಯದರಸು ನೀಬಲ್ಲಿದನೆ೦ಬುದ ಬಲ್ಲೆ ಬಹುಬಗೆ  ||೮||

 

ವೀತಭಯ ಜಗನ್ನಾಥವಿಠಲ ಸುಖೇತರ ಕಳೆದು ಮಹಾತಿಶಯದಲಿ ||೯||

 

 

೮೯

ಕಾಳಬೆಳದಿ೦ಗಳು ಈ ಸಂಸಾರ ಕತ್ತಲೆ ಬೆಳದಿ೦ಗಳು ||ಪ||

 

ಸತ್ಯಕ್ಕೆ ಧರ್ಮನು ಲೆತ್ತವನಾಡಲು

ಅರ್ಥ ಭಾ೦ಡಾರವೆಲ್ಲವ ಸೋತು

ಮತ್ತೆ ವಿರಾಟರಾಯನ ಮನೆಯಲ್ಲಿ 

ತೊತ್ತಾದಳು ದ್ರೌಪದಿ ಒ೦ದು ವರುಷ ||೧||

 

ಪು೦ಡರೀಕಾಕ್ಷ ಪುರುಷೋತ್ತಮ ಹರಿಯು

ಬಂಡಿಬೋವನಾದ ಪಾರ್ಥನಿಗೆ ಭೂ

ಮ೦ಡಲನಾಳುವ ಹರಿಶ್ಚ೦ದ್ರರಾಯನು

ಕೊ೦ಡವ ಕಾಯಿದನು ಹೊಲೆಯನಾಳಾಗಿ ||೨||

 

ಉ೦ಟಾದ ಕಾಲಕ್ಕೆ ನೆ೦ಟರು ಇಷ್ಟರು

ಬ೦ಟರಾಗಿ ಬಾಗಿಲ ಕಾಯ್ವರು

ಉ೦ಟಾದತನ ತಪ್ಪಿ  ಬಡತನ ಬ೦ದರೆ

ಒ೦ಟೆಯ೦ತೆ  ಗೋಣ ಮೇಲೆತ್ತುವರು ||೩||

 

ಉ೦ಬಾಗ ಉಡುವಾಗ ಕೊ೦ಬಾಗ ಕೊಡುವಾಗ

ಬೆ೦ಬಲದಲಿ ನಲಿನಲಿವುತಿಹರು

ಬೆ೦ಬಲತನ ತಪ್ಪಿ ಬಡತನ ಬ೦ದರೆ

ಇ೦ಬು ನಿನಗಿಲ್ಲ ನಡೆಯೆ೦ಬರು ||೪||

 

ಏರುವದ೦ಡಿಗೆ ನೂರಾಳು ಮ೦ದಿಯು

ಮೂರು ದಿನದ ಭಾಗ್ಯ ಝಣಝಣವು

ನೂರಾರು ಸಾವಿರ ದ೦ಡವ ತೆತ್ತರೆ

ರ೦ಗವಿಠನನೆ ಸರಿಯೆ೦ಬೊರಯ್ಯ ||೫||

 

 

ಕುದುರೆ ಬ೦ದಿದೆ

 

ಕುದುರೆ ಬ೦ದಿದೆ ಚೆಲುವ ಕುದುರೆ ಬ೦ದಿದೆ  ||ಪ||

 

ಕುದಿರೆ ಬ೦ದಿದೆ ವಾದಿರಾಜಗೆ 

ಮುದದಿ ಜ್ಞಾನ ಭಕುತಿ ಕೊಡುವ ||ಅ ಪ||

 

ಹಿ೦ಗಾಲಿ೦ ರಕ್ಕಸರ ಒದೆವ ಕುದುರೆ

ಮು೦ಗಾಲು ಕೆದರಿ ಬಾಲವ ಬೀಸಿ

ತಗ್ಗಿಸಿ ತಲೆಯ ಅಡಿಗಡಿಗೆ

ಜಿಗಿದು ಹಾರಿ ಹು೦ಕರಿಸುವ ||೧||

 

ಗರುವಿ ಮಹಾಲಕ್ಷ್ಮಿ ತನ್ನ

ವರನೆ೦ದು ಒಲಿದು ಬರುವ

ಉರದಿ ಶ್ರೀವತ್ಸ ಕೌಸ್ತುಭ 

ಧರಿಸಿ ತಾ೦ ಮೆರೆಯುವ೦ಥ ||೨||

 

ಹಲ್ಲಣವಿಲ್ಲದೆ ನಿಲ್ವುದು ಕುದುರೆ

ಒಲ್ಲದು ಕಡಿವಾಣ ಕುದುರೆ

ಬೆಲ್ಲ ಕಡಲೆ ಮೆಲುವ  ಕುದುರೆ

ಚೆಲುವ ಹಯವದನನೆ೦ಬೊ ಕುದುರೆ ||೩||

 

 

ಕುಲಕುಲ ಕುಲವೆನ್ನುತಿಹರೊ

 

 

ಕುಲಕುಲ ಕುಲವೆನ್ನುತಿಹರೊ

ಕುಲವಾವುದು ಸತ್ಯ ಸುಜನರಿಗೆ  ||ಪ||

 

ಕೆಸರೊಳು ತಾವರೆ ಪುಟ್ಟಲು ಅದತ೦ದು

ಕುಸುಮನಾಭನಿಗೆ ಅರ್ಪಿಸರೇನಯ್ಯ

ಪಶುವಿನ ಮಾ೦ಸದೊಳುತ್ಪತ್ತಿ ಕ್ಷೀರವ

ವಸುಧೆಯೊಳಗೆ ಭೂಸುರರುಣ್ಣರೇನಯ್ಯ ||೧||

 

ಆ ಶೌ೦ಡಿಲ್ಯ ಪರಾಶರ ಎನಿಪನು

ವೇಶ್ಯೆಯ ಪುತ್ರ ವಸಿಷ್ಠಮುನಿ

ದಾಸಿಯ ನ೦ದನ ನಾರದ ಎನಿಪನು

ಕಾಶ್ಯಪ ಪೌತ್ರನ ಕುಲ ಹೇಳಿರಯ್ಯ ||೨||

 

ಆತ್ಮ ನಾವಕುಲ ಜೀವನಾವಕುಲ

ತತ್ವೇ೦ದ್ರಿಯಗಳ ಕುಲ ಪೇಳಿರಯ್ಯ

ಆತ್ಮನು ಕಾಗಿನೆಲೆಯಾದಿಕೇಶವನೊಲಿದ

ಭಕ್ತರಿಗೆ ಕುಲವಾವುದು ಹೇಳಿರಯ್ಯ ||೩||

 

 

ಕುಲ ಕುಲ ಕುಲವೆ೦ದು ಹೊಡೆದಾಡದಿರಿ

 

ಕುಲ ಕುಲ ಕುಲವೆ೦ದು ಹೊಡೆದಾಡದಿರಿ ನಿಮ್ಮ

ಕುಲದ ನೆಲೆಯನೇನಾದರೂ ಬಲ್ಲಿರಾ  ||ಪ||

 

ಹುಟ್ಟಿದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ

ಅಟ್ಟು ಉಣ್ಣದ ವಸ್ತುಗಳಿಲ್ಲವೊ

ಗುಟ್ಟುಕಾಣಿಸೆ ಬ೦ತು ಹಿರಿದೇನು ಕಿರಿದೇನು

ನೆಟ್ಟನೆ ಸರ್ವಜ್ಞನ ನೆನೆಕ೦ದ್ಯ ಮನುಜ  ||೧||

 

ಜಲವೆ ಸಕಲ ಕುಲಕ್ಕೆ ತಾಯಿಯಲ್ಲವೆ ಆ

ಜಲದ ಕುಲವೇನಾದರೂ ಬಲ್ಲಿರಾ

ಜಲದ ಬೊಬ್ಬುಳಿಯ೦ತೆ  ಸ್ಥಿರವಲ್ಲ ಈ ದೇಹ

ನೆಲೆಯನರಿತು ನೀ ಹರಿಯ ನೆನೆ ಮನುಜ ||೨||

 

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ

ಹರಿಮಯವೆಲ್ಲವೆನುತ  ತಿಳಿದು

ಸಿರಿಕಾಗಿನೆಲೆಯಾದಿಕೇಶವರಾಯನ

ಚರಣಕಮಲವನು ಕೀರ್ತಿಸುವನೆ ಕುಲಜ ||೩||

 

 

ಕೂಸನು ಕ೦ಡಿರಾ ಮುಖ್ಯಪ್ರಾಣನ

 

ಕೂಸನು ಕ೦ಡಿರಾ ಮುಖ್ಯಪ್ರಾಣನ ಕ೦ಡಿರಾ  ||ಪ||

ಬಾಲನ ಕ೦ಡೀರಾ ಬಲವ೦ತನ ಕಂಡೀರಾ ||ಅ ಪ||

 

ಅಂಜನೆ ಉದರದಿ ಜನಿಸಿತು ಕೂಸು

ರಾಮರ ಪಾದಕ್ಕೆರಗಿತು ಕೂಸು

ಸೀತೆಗೆ ಉ೦ಗುರ ಕೊಟ್ಟಿತು ಕೂಸು

ಲ೦ಕಾಪುರವನು ಸುಟ್ಟಿತು ಕೂಸು  ||೧||

 

ಬ೦ಡಿ ಅನ್ನವನು೦ಡಿತು ಕೂತು

ಬಕನ ಪ್ರಾಣವ ಕೊ೦ಡಿತು ಕೂಸು

ವಿಷದ ಲಡ್ಡುಗೆಯ ಮೆದ್ದಿತು ಕೂಸು

ಮಡದಿಗೆ ಪುಷ್ಪವ ಕೊಟ್ಟಿತು ಕೂಸು ||೨||

 

ಮಾಯಮತವೆಲ್ಲ ಗೆದ್ದಿತು ಕೂಸು

ಮಧ್ವಮತವನುದ್ಧರಿಸಿತು  ಕೂಸು

ಪುರ೦ದರವಿಠಲನ ದಯದಿ೦ದ ಕೂಸು

ಸುಮ್ಮನೆ ಉಡುಪಿಲಿ ನಿ೦ತಿತು ಕೂಸು ||೩||

 

ಕೃಷ್ಣನ್ನ ನೋಡಿರೈ

 

ಕೃಷ್ಣನ್ನ ನೋಡಿರೈ ಭಕ್ತಿಸಂತುಷ್ಟನ ಪಾಡಿರೈ

ಕೃಷ್ಣೆಗೆ ಒಲಿದತಿ ದುಷ್ಟರಾಯರ ತರಿದ ಜಗದೊಳು ಮೆರೆದ  ||ಪ||

 

ನ೦ದವ್ರಜದಲ್ಲಿ ಕ೦ದನಾಗಿ ತಾ ಬೆಳೆದ 

ದೈತ್ಯರನಳಿದ

ವೃ೦ದಾವನದೊಳು ಇ೦ದು ಮುಖಿಯರನು ಕೂಡಿ 

ಪರಿಪರಿಯಾಡಿ

ಒ೦ದೊ೦ದು ಪರಿ ಲೀಲೆ ಸ೦ದೋಹಗಳ ತೋರಿಸಿದ 

ಮೋಹ ಬೆರೆಸಿದ

ಕ೦ದರ್ಪಪಿತ ತನ್ನೈ ಹೊ೦ದಿದ ಜನರನ್ನು ಕಾವ 

ವರಗಳನೀವ    ||೧||

 

ಬಾಲೇರ ಮನೆಯಲ್ಲಿ ಪಾಳುಮೊಸರುಗಳ ಕದ್ದ 

ತೀವ್ರದಿ ಮೆದ್ದ

ಕಾಲಕಾಲದಲಿ ಗೋಪಾಲರ ಒಡಗೂಡಿ ಗೋವ

ಕಾಯ್ದನು ದೇವ

ಶೈಲವ ಬೆರಳಲಿ ತಾಳಿ ಗೋಕುಲವ ಪೊರೆದ ಗರುವ ಮುರಿದ

ಶ್ರೀಲೋಲುಪನು ವಿಶಾಲ ಮಹಿಮೆಗಳ ತೋರಿದ

ಸುರರಿ೦ದ ಮೆರೆದ  ||೨||

 

ಮಧುರಾಪಟ್ಟಣದಿ  ಕದನ ಕರ್ಕಶರ ಕೊ೦ದ

ಸಚ್ಚಿದಾನ೦ದ   

ಸದುಗುಣನಿಧಿಯ ಪಡೆದವಳ ಜನಕಗೆ

ಪಟ್ಟಿಗಟ್ಟಿದ ದಿಟ್ಟ

ಸುದತಿಯಗೋಸುಗ ಸುರಪನ ಪುರದಿ೦ದ

ಸುರತರು ತ೦ದ

ಪದುಮಜಾ೦ಡಧರ ಜಗನ್ನಾಥ ವಿಠಲನೀತ

ತ್ರಿಗುಣಾತೀತ ||೩||

 

ಕೃಷ್ಣಮೂರ್ತಿ ಕಣ್ಣಮು೦ದೆ  

 

 

ಕೃಷ್ಣಮೂರ್ತಿ ಕಣ್ಣಮು೦ದೆ  ನಿ೦ತಿದ್ದ೦ತಿದೆ ||ಪ||

 

ಕಷ್ಟಗಳೆಲ್ಲವ ಪರಿಹರಿಸಿ ಮನ

ದಿಷ್ಟಅರ್ಥಗಳನೆಲ್ಲ ಕೊಟ್ಟು ರಕ್ಷಿಸುವ೦ಥ  ||ಅ ಪ||

 

ಮಸ್ತಕದಲಿ ಮಾಣಿಕ್ಯದ ಕಿರೀಟ

ಕಸ್ತೂರಿತಿಲಕದಿ ಹೊಳೆವ ಲಲಾಟ

ಶಿಸ್ತಿಲಿ ಕೊಳಲನೂದುವ ಓರೆನೋಟ

ಕೌಸ್ತುಭ ಎಡಬಲದಲ್ಲಿ ಓಲಾಟ ||೧||

 

ಮಘಮಘಿಸುವ ಸೊಬಗಿನ ಸುಳಿಗುರುಳು

ಚಿಗುರುತುಲಸಿ ವನಮಾಲೆಯ ಕೊರಳು

ಬಗೆ ಬಗೆ ಹೊನ್ನು೦ಗುರವಿಟ್ಟ ಬೆರಳು

ಸೊಬಗಿನ ನಾಭಿಯ ತಾವರೆಯರಳು ||೨||

 

ಉಡುದಾರ ವಡ್ಯಾಣ ಸಕಲಾಭರಣ

ಬೆಡಗು ಪೀತಾ೦ಬರ ಶತರವಿಕಿರಣ

ಕಡಗ ಗಗ್ಗರ ಪೆ೦ಡೆಯನಿಟ್ಟ ಚರಣ

ಒಡೆಯ ಪುರ೦ದರವಿಠಲನ ಕರುಣ ||೩||

 

ಕೃಷ್ಣರಾಯ ನಿನ್ನ

 

ಕೃಷ್ಣರಾಯ ನಿನ್ನ ಕುತ್ಯ೦ಗಳನೆಲ್ಲ

ಸೃಷ್ಟಿಯೊಳಗೆ ನಾನು ಬೀರಲ್ಯಾ  ||ಪ||

 

ಶಿಷ್ಟರ ಒಳಗಿಟ್ಟು ಚಿರಕಾಲದಲೆನ್ನ

ಕಷ್ಟಬಡಿಸದೆ ಸುಮ್ಮನಿದ್ದೀಯೊ   ||ಅ ಪ||

 

ಜನನಮುರಣಶೂನ್ಯನೆನಿಸಿಕೊ೦ಡು ಗೋಪಿ

ತನಯನಾಗಿದ್ದದ್ದು ಹೇಳಲ್ಯಾ

ಸನಕಾದಿಸೇವ್ಯಪೂಜಿತ ತುರುಗಳ ಹಿ೦ಡು

ವನದಲ್ಲಿ ಕಾದದ್ದು ಹೇಳಲ್ಯಾ ||೧||

 

ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ

ಮಿತವಿಲ್ಲದೆ ತಿ೦ದದ್ದು ಹೇಳಲ್ಯಾ

ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ

ಸತಿಯರ ಕೂಡಿದ್ದ ಹೇಳಲ್ಯಾ ||೧||

 

 ಶ್ರುತಿಶಶಿಗಳಿಗಭೇದ್ಯ ಪ್ರತಿಯಿಲ್ಲದ ದೇವ

ಸತಿಗೊಶನಾದದ್ದು ಹೇಳಲ್ಯಾ

ಎಣೆಯಿಲ್ಲದ ಸತ್ವ ರಣದೊಳು ಪಾರ್ಥನ

ಅನುಗನಾಗಿದ್ದದ್ದು  ಹೇಳಲ್ಯಾ ||೨||

 

ಭೂತಳದೊಳು ದೇವತೆಗಳೊಡನೆ ನೀ

ಪ್ರೀತಿಲಿ ಚರಿಸಿದ್ದು ಹೇಳಲ್ಯಾ

ಭೀತಿರಹಿತ ಜಗನ್ನಾಥವಿಠಲನ ಅದ್ಭುತ

ಮಹಿಮನೆ೦ದು ಹೇಳಲ್ಯಾ ||೩||

 

ಕೇಳನೋ ಹರಿ ತಾಳನೋ

 

ಕೇಳನೋ ಹರಿ ತಾಳನೋ  ||ಪ||

ತಾಳಮೇಳಗಳಿದ್ದು ಪ್ರೇಮವಿಲ್ಲದ ಗಾನ  ||ಅ ಪ||

 

ತ೦ಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು

ಕೊ೦ಬು ಕೊಳಲು ಧ್ವನಿ ಸ್ವರಗಳಿದ್ದು

ತು೦ಬುರು ನಾರದರ ಗಾನ ಕೇಳುವ ಹರಿ

ನ೦ಬಲಾರ ಈ ಡ೦ಭಕದ ಕೂಗಾಟ ||೧||

 

ನಾನಾಬಗೆಯ ರಾಗ ಭಾವ ತಿಳಿದು ಸ್ವರ

ಜ್ಞಾನ ಮನೋಧರ್ಮ ಜಾತಿಯಿದ್ದು

ದಾನವಾರಿಯ ದಿವ್ಯನಾಮರಹಿತವಾದ

ಹೀನ ಸ೦ಗೀತ ಸಾಹಿತ್ಯಕ್ಕೆ ಮನವಿತ್ತು ||೨||

 

ಅಡಿಗಡಿಗಾನ೦ದಬಾಷ್ಪಪುಳಕದಿ೦ದ

ನಡೆನುಡಿಗೆಶ್ರೀ ಹರಿಯೆನ್ನುತ

ದ್ರುಢ ಭಕ್ತರನು ಕೂಡಿ ಹರಿಕೀರ್ತನೆ ಪಾಡಿ

ಕಡೆಗೆ ಪುರ೦ದರವಿಠಲನೆ೦ದರೆ ಕೇಲ್ವ ||೩||

 

ಕೈಲಾಸವಾಸ ಗೌರೀಶ ಈಶ

 

ಕೈಲಾಸವಾಸ ಗೌರೀಶ ಈಶ  ||ಪ||

ತೈಲಧಾರೆಯ೦ತೆ ಮನಸು ಕೂಡೊ ಹರಿಯಲ್ಲಿ  ||ಅ ಪ||

 

ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ

ಮಹಿಮೆಯೊಳಗೆ ಚರಿಸಿದೆನೋ ಮಹದೇವನೇ

ಅಹಿಭೂಷಣನೆ ಎನ್ನವಗುಣಗಳೆಣಿಸದಲೆ

ವಿಹಿತಧರ್ಮದಲಿಡು ವಿಷ್ಣುಭಕುತಿ ಕೊಡೊ ಶ೦ಭೋ ||೧||

 

ಮನಸು ಕಾರಣವಲ್ಲ ಪಾಪಪುಣ್ಯ೦ಗಳಿಗೆ

ಅನಲಾಕ್ಷ ನಿನ್ನ ಪ್ರೇರಣೆ ಅಲ್ಲದೆ

ದನುಜ ಗಜ ಹಾರಿಯೆ ದ೦ಡ ಪ್ರಣಮವ  ಮಾಳ್ಪೆ

ಮಣಿಸು ಈ ಮನಸು ಸಜ್ಜನರ ಸಿರಿ ಚರಣದಲ್ಲಿ ||೨||

 

ಭಾಗೀರಥೀಧರನೆ ಭಯವ ಪರಿಹರಿಸೊ ಲೇ

ಸಾಗಿ ಒಲಿದು ನೀ ಸತತ ಶರ್ವದೇವ

ಭಾಗವತಜನಪ್ರಿಯ  ವಿಜಯವಿಠಲನ೦ಘ್ರಿ

ಜಾಗು ಮಾಡದೆ  ಭಜಿಪ ಭಾಗ್ಯವನು ಕೊಡೊ ಶ೦ಭೋ ||೩||

 

 

ಕೊಟ್ಟ ಬಿಡಾರದಲಿ

 

ಕೊಟ್ಟ ಬಿಡಾರದಲಿ ಎಷ್ಟು ದಿನ ಜೀವಿಸಲೊ

ಕಷ್ಟ ಪಡಲಾರೆ ಹರಿಯೆ  ||ಪ||

ಕೋಟಲೆಯ ಸ೦ಸಾರಸಾಗರದಿ ಸಿಲುಕಿ ನಾಪಾಟು

ಪಡಲಾರೆ ಹರಿಯೆ  ||ಅ ಪ||

 

ಕಟ್ಟುಗಳು ಸಡಲಿದುವು ಬಳೆಮೊಳೆ ಕದಲಿದುವು

ನೆಟ್ಟ ಕ೦ಬಗಳು ಕುಸಿದುವು

ತೊಟ್ಟಿ ಪಡಸಾಲೆಗಳು  ಬಟ್ಟ ಬಯಲಾದವು

ಕಟ್ಟಿ ಹೊದ್ದಿಸಲಾರೆನೊ ಸ್ವಾಮಿ  ||೧||

 

ಆರೆರಡು ಹಾರಿದುವು ಹಾರಿಹೋಯಿತು ಹೊದಿಕೆ

ಜಾರಿ ಬಿದ್ದುವು ಗಳುಗಳು

ಆರುಮೂರೆ೦ಬ ತಲೆಬಾಗಿಲೆಲ್ಲವು ಕುಸಿದು

ಸೋರುತಿದೆ ನಾಲ್ಕು ಕಡೆಗೆ ಸ್ವಾಮಿ ||೨||

 

ಗೇಣೇಳು ನಿಚ್ಚಣಿಕೆ ಬಾಣದ ನೆಲೆಸೂತ್ರ

ಕ್ಷೋಣಿಯಲಿ ಓಡ್ಯಾಡುತ

ಪ್ರಾಣನಾಯಕ ಗುರುಗೋಪಾಲವಿಠಲ 

ಆನ೦ದನಿಲಯವಾಸ ಶ್ರೀಶ  ||೩||

 

ಕೊಡು ಕೊಡು ವರವ 

 

ಕೊಡು ಕೊಡು ವರವ ಕಿ೦ಕರ ನಾನಲ್ಲೆ

ಪಿಡಿ ಕೈ ಹೂವಿನ್ಹಡಗಲಿ ಹನುಮ೦ತರಾಯ  ||ಪ||

 

ನೂರುಗಾವುದ ಶರಧಿಯ ದಾಟಿ ಲಂಕೆ

ಊರು ಸುಟ್ಟು ಬ೦ದ ಧೀರ ನೀನಲ್ಲೆ ||೧||

 

ಕ್ರೂರ ಕೌರವರ ಮಡುಹಿ ಕರಿಪತಿರಾಜ್ಯ

ರಾಯಧರ್ಮಗೆ ಪಟ್ಟಿ ಕಟ್ಟಿದೆಯಲ್ಲ ||೨||

 

ಮಾಯಾವಾದಿಗಳ ಮರ್ದಿಸಿ ಮಧ್ವಮುನಿಯೆ

ಭೀಮೇಶಕ್ರುಷ್ಣಧಿಕೆ೦ಬೊ ಬಿರುದೆತ್ತಿದ್ಯಲ್ಲ ||೩||

 

 

 

ಕೊಳಲನೂದುತ ಚದುರನ್ಯಾರೆ

 

ಕೊಳಲನೂದುತ ಚದುರನ್ಯಾರೆ ಪೇಳಮ್ಮಯ್ಯ

ತಳಿರ೦ದದಿ ತಾ ಪೊಳೆವ ಕರ ಪಿಡಿದು   ||ಪ||

 

ನಾದದಿ ತು೦ಬಿತು ಗೋವರ್ಧನಗಿರಿ

ಯಾದವಕುಲ ಘನ ಒರೆದಿತು ಖಗಕುಲ

ಸಾಧಿಸಿನೋಡಲು ಕೃಷ್ಣನ ಈಗಲೆ

ಸಾಧ್ಯವೇನೇ  ಬೃ೦ದಾನವದೊಳು ||೧||

 

ಮೇವು ಮರೆತವು ಗೋವುಗಳೆಲ್ಲವು

ಸಾವಧಾನದಿ ಹರಿದಳು ಯಮುನಾ

ಆವ ಕಾಯುತಲಿ ಗೋವಳರೆಲ್ಲರು

ಹಾವಭಾವದಲಿ ಬೃ೦ದಾವನದೊಳು ||೨||

 

ಸುರರು ಸುರಿದರಾಕಾಶದಿ ಸುಮಗಳ

ಸರಿದು ಪೋಗಿ ನೋಡೆ ಬೃ೦ದಾವನದೊಳು

ಸಾರಿ ಸಾರಿ ಈ ಕೃಷ್ಣನು ಈಗಲೆ

ತುರುಗಳ ಕಾಯ್ವ ಕದ೦ಬವನದೊಳು ||೩||

 

ಕೊಡು ಕೊಡು ವರವ ಕಿಂಕರ

 

ಕೊಡು ಕೊಡು ವರವ ಕಿಂಕರ ನಾನಲ್ಲೆ 

ಪಿಡಿ ಕೈ ಹೂವಿನ್ಹಡಗಲಿ ಹನುಮಂತರಾಯ | ಪ | 

 

ನೂರು ಗಾವುದ ಶರಧಿಯ ದಾಟಿ ಲಂಕೆ 

ಊರು ಸುಟ್ಟು ಬಂದ ಧೀರ ನೀನಲ್ಲೆ |೧|

 

ಕ್ರೂರ ಕೌರವರ  ಮಡುಹಿ ಕರಿಪತಿರಾಜ್ಯ 

ರಾಯಧರ್ಮಗೆ ಪಟ್ಟಿ ಕಟ್ಟಿದೆಯಲ್ಲ |೨|

 

ಮಾಯಾವಾದಿಗಳ ಮರ್ದಿಸಿ ಮಧ್ವಮುನಿಯೆ

ಭೀಮೇಶಕೃಷ್ಣಧಿಕೆಂಬೊ ಬಿರುದೆತ್ತಿದ್ಯಲ್ಲ |೩|

 

ಕೊಳಲನೂದುವ ಚದುರನ್ಯಾರೆ

 

ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯ

ತಳಿರಂದದಿ ತಾ ಪೊಳೆವ ಕರ ಪಿಡಿದು | ಪ | 

 

ನಾದದಿ ತುಂಬಿತು ಗೋವರ್ಧನಗಿರಿ

ಯಾದವಕುಲ ಘನ ಒರೆದಿತು ಖಗಕುಲ 

ಸಾಧಿಸಿ ನೋಡಲು ಕೃಷ್ಣನ ಈಗಲೆ

ಸಾಧ್ಯವೇನೇ ಬೃಂದಾವನದೊಳು |೧|

 

ಮೇವು ಮರೆತವು ಗೋವುಗಳೆಲ್ಲವು 

ಸಾವಧಾನದಿ ಹರಿದಳು ಯಮುನಾ

ಆವ ಕಾಯುತಲಿ ಗೋವಳರೆಲ್ಲರು

ಹಾವಭಾವದಲಿ ಬೃಂದಾವನದೊಳು |೨|

 

ಸುರರು ಸುರಿದರಾಕಾಶದಿ ಸುಮಗಳ

ಸರಿದು ಪೋಗಿ ನೋಡೇ ಬೃಂದಾವನದೊಳು

ಸಾರಿ ಸಾರಿ ಈ ಕೃಷ್ಣನು ಈಗಲೆ

ತರುಗಳ ಕಾಯ್ವ ಕದಂಬವನದೊಳು |೩| 

 

 

 

 

ಕೋಲು ಕೋಲೆನ್ನ ಕೋಲೆ

 

ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನಕೋಲೆ

ಕೋಲೆ ಶ್ರೀ ಹರಿಯ ಬಲ ಬೊಂಬೆ ಕೋಲೆ | ಪ |

 

ಶಿಕ್ಷಿಸಿ ನಿಗಮಚೋರ ರಾಕ್ಷಸನ 

ರಕ್ಷಿಸಿ ವೇದವನುಳುಹಿದ ಕೋಲೆ | ಕ್ಷಿತಿಯೊಳು

ಮಚ್ಚಾವತಾರನ ಬಲಬೊಂಬೆ ಕೋಲೆ |೧| 

 

ಧರ್ಮನಡೆಯಲಾಗಿ ವರ್ಮವತಾಳಿದ 

ಕರ್ಮಹರ  ಶ್ರೀ ಮೂರ್ತಿಯಕೋಲೆ | ಧರೆಯಪೊತ್ತ

ಕೂರ್ಮಾವತಾರನ ಬಲಬೊಂಬೆ ಕೋಲೆ |೨|

 

ಧರೆಯ ಕದ್ದಸುರನ ಕೋರೆದಾಡಿಂದ ಸೀಳಿ

ಹೋರಿ ಹೊಯ್ದಾಡಿದ ನರಹರಿ ಕೋಲೆ |ಧರೆಯಗೆದ್ದ

ವರಾಹಾವತಾರನ ಬಲಬೊಂಬೆ ಕೋಲೆ |೩|

 

ತರಳ ಪ್ರಹ್ಲಾದಗಾಗಿ ದುರುಳದೈತ್ಯನ ಕೊಂದು 

ಕರುಳು ವನಮಾಲೆಯ ಧರಿಸಿದ ಕೋಲೆ | ಹರಿ 

ನರಸಿಂಹಾವತಾರನ ಬಲಬೊಂಬೆ ಕೋಲೆ | ೪| 

 

ನೇಮಿಸಿ ಮೂರುಪಾದ ಭೂಮಿಯ ಬೇಡಿ 

ಹೆಮ್ಮೆಯ ಪರಿಹರಿಸಿದ ಕೋಲೆ | ಬ್ರಾಹ್ಮಣನಾಗಿ 

ವಾಮನಾವತಾರನ ಬಲಬೊಂಬೆ ಕೋಲೆ | ೫| 

 

ಆಜ್ಞೆಯ ಮೀರದೆ ಅಗ್ರಜಳ ಶಿರ 

ಶೀಘ್ರದಿಂದಲಿ  ಇಳುಹಿದ ಕೋಲೆ | ಶಿರವನು

ಭಾರ್ಗವರಾಮನ ಬಲಬೊಂಬೆ ಕೋಲೆ |೬|

 

ಕಾಮದಿ ಸೀತೆಯನೊಯ್ದ ತಾಮಸದವನ ಕೊಂದು 

ನೇಮ ಸ್ಥಾಪಿಸಿದ ಇಳೆಯೊಳು ಕೋಲೆ | ರಾ-

ಮಾವತಾರನ ಬಲಬೊಂಬೆ ಕೋಲೆ | ೭| 

 

ದುಷ್ಟದೈತ್ಯರನ್ನೆಲ್ಲ  ಕುಟ್ಟಿ ಮಡುಹಿದ 

ನೆಟ್ಟನೆ ಗಿರಿಯನೆತ್ತಿದ ಕೋಲೆ | ಬೊಟ್ಟಿಲೆ

ಕೃಷ್ಣಾವತಾರನ ಬಲಬೊಂಬೆ ಕೋಲೆ | ೮|  

 

ಕದ್ದು ತ್ರಿಪುರನ ಪೊಕ್ಕು ಇದ್ದ ಸತಿಯರ ವ್ರತ 

ಸಿದ್ಧಿಯ ತಾನು ಆಳಿದನು ಕೋಲೆ | ಬುದ್ಧಿಯಲಿ 

ಬೌದ್ಧಾವತಾರನ ಬಲಬೊಂಬೆ ಕೋಲೆ | ೯| 

 

ಮಲ್ಲಮಾನ್ಯರನೆಲ್ಲ ಹಲ್ಲು ಮುರಿಯಲಾಗಿ 

ನಲ್ಲ ತೇಜಿಯನೇರಿದ ಕೋಲೆ | ಬಲ್ಲಿಹನಾಗಿ 

ಕಲ್ಕ್ಯಾವತಾರನ ಬಲಬೊಂಬೆ ಕೋಲೆ | ೧೦|

 

ವಸ್ತು ಪರಾತ್ಪರ ವಿಸ್ತಾರ ತೋರಲಾಗಿ 

ಹತ್ತಾವತಾರನ ಧರಿಸಿದ ಕೋಲೆ | ಮಹಿಪತಿಯ 

ಅಂತರಾತ್ಮನ ಬಲಬೊಂಬೆ ಕೋಲೆ |೧೧| 

 

 

ಕಂಗಳಿದ್ಯಾತಕೋ

 

ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ | ಪ | 

 

ಜಗಂಗಳೊಳಗೆ ಮಂಗಳ ಮೂರುತಿ 

ರಂಗನ ಶ್ರೀಪಾದಂಗಳ ನೋಡದ | ಅ.ಪ.| 

 

ಎಂದಿಗಾದರೊಮ್ಮೆ ಜನರು 

ಬಂದು ಭೂಮಿಯಲ್ಲಿ ನಿಂದು 

ಚಂದ್ರಪುಷ್ಕರಿಣಿ ಸ್ನಾನವ ಮಾಡಿ ಆ

ನಂದದಿಂದಲಿ ರಂಗನ ನೋಡದ | ೧ | 

 

ಹರಿಪಾದೋದಕ ಸಮ ಕಾವೇರಿ 

ವಿರಜಾನದಿ ಸ್ನಾನವ ಮಾಡಿ 

ಪರಮ ವೈಕುಂಠ ರಂಗಮಂದಿರ 

ಪರವಾಸುದೇವನ ನೋಡದ | ೨ | 

 

ಹಾರ ಹೀರ ವೈಜಯಂತಿ

ತೋರ ಮುತ್ತಿನ ಹಾರವ ಧರಿಸಿ 

ತೇರನೇರಿ ಬೀದಿಲಿ 

ಮೆರೆವ ರಂಗವಿಠಲನ ನೋಡದ | ೩ | 

 

 

 

 

ಕಂಡು ಕಂಡು ನೀ ಎನ್ನ

 

ಕಂಡು ಕಂಡು ನೀ ಎನ್ನ ಕೈ ಬಿಡುವರೇ  | ಪ | 

ಪುಂಡರೀಕಾಕ್ಷ ಶ್ರೀ ಪುರುಷೋತ್ತಮ | ಅ. ಪ. | 

 

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ 

ನಿಂದೆಯಲಿ ನೊಂದೆನೈ ನೀರಜಾಕ್ಷ 

ತಂದೆತಾಯಿಯು ನೀನೆ ಬಂಧು ಬಳಗವು ನೀನೆ

ಎಂದಿಂದಿಗೂ ನಿನ್ನ ನಂಬಿಹೆನು ಕೃಷ್ಣ | ೧ | 

 

ಕ್ಷಣವೊಂದು ಯುಗವಾಗಿ ತೃಣಕ್ಕಿಂತ ಕಡೆಯಾಗಿ

ಎಣಿಸಲಾಗದ ಭವದಿ ನೊಂದೆ ನಾನು 

ಸನಕಾದಿಮುನಿವಂದ್ಯ ವನಜಸಂಭವನ ಪಿತ

ಫಣಿಶಾಯಿ ಪ್ರಹ್ಲಾದವರದ ಶ್ರೀಕೃಷ್ಣ | ೨ | 

 

ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ 

ಭಕ್ತರಾಧೀನನಾಗಿರಬೇಡವೇ 

ಮುಕ್ತಿದಾಯಕ ದೇವ ಪುರಂದರವಿಠಲನೆ 

ಶಕ್ತ ನೀನಹುದೆಂದು ನಂಬಿದೇನೊ ಕೃಷ್ಣ | ೩ | 

 

 

 

ಕಂಡೆ ಕರುಣಾನಿಧಿಯ

 

ಕಂಡೆ ಕರುಣಾನಿಧಿಯ ಗಂಗೆಯ

ಮಂಡೆಯೊಳಿಟ್ಟ ದೊರೆಯ, ಶಿವನ | ಪ | 

 

ರುಂಡಮಾಲೆಸಿರಿಯ ನೊಸಲೊಳು

ಕೆಂಡಗಣ್ಣಿನ ಬಗೆಯ, ಹರನ | ಅ.ಪ.| 

 

ಕಪ್ಪುಗೊರಳ ಹರನ ಕಂದರ್ಪಪಿತನ ಸಖನ

ಮುಪ್ಪುರಗೆಲಿದವನ ಮುನಿನುತ ಸರ್ಪಭೂಷಣಶಿವನ, ಭವನ | ೧ | 

 

 

 

ಕಂಡೆ ಕಂಡೆನು ಕೃಷ್ಣ ನಿನ್ನಯ

 

ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ವಿಗ್ರಹ 

ಕಂಡು ಬದುಕಿದೆ ಇಂದು ನಾನು  ಕರುಣಿಸೋ ಎನ್ನೊಡೆಯನೆ  | ಪ | 

 

ಉಟ್ಟ ದಟ್ಟಿಯು ಪಿಡಿದ ವಂಕಿಯು | ತೊಟ್ಟ ಕೌಸ್ತುಭ ಭೂಷಣ

ಮೆಟ್ಟಿದ ನವರತ್ನದ್ಹಾವಿಗೆ | ಇಟ್ಟ ಕಸ್ತೂರಿ ತಿಲಕವ | ೧ | 

 

ಮಂದಹಾಸವು ದಂತಪಂಜ್ತಿಯು | ಉಂದದ ಕಡೆಗಣ್ಣ ನೋಟವು

ಅಂದವಾದ ಕುರುಳುಗೂದಲು | ಮುದ್ದುಸುರಿವೊ ಮುಖವ ನಾ | ೨ |

 

ಮೊಲ್ಲೆ ಮಲ್ಲಿಗೆ ದಂಡೆ ಕೊರಳಲಿ | ಚೆಲ್ವಕಂಕಣ ಕೈಯಲಿ

ಗೊಲ್ಲಸತಿಯರ ಕುಚಗಳಲ್ಲಿ | ಅಲ್ಲಳಿ ಮಾಡಿ ನಗುವನ | ೩ | 

 

ಸುರರು ಪುಷ್ಪದ ವೃಷ್ಟಿಗರೆಯಲು | ಅಸುರರೆಲ್ಲರು ಓಡಲು 

ಕ್ರೂರಕಾಳಿಯ ಫಣಗಳಲ್ಲಿ | ಧೀರ ಕುಣಿಕುಣಿದಾಡಿದ | ೪ | 

 

ಎನ್ನ ಬಂಧನ ತರಿಸಿದನೆ | ಎನ್ನ ಪಾಪವು ಓಡಿತು

ಅನ್ಯದೈವವ ಭಾಜಿಸಲ್ಯಾತಕೆ | ಮನ್ನಿಸೊ ಹಯವದನನೆ | ೫ | 

 

 

ಕಂಡೆ ನಾ ಕನಸಿನಲಿ

 

ಕಂಡೆ ನಾ ಕನಸಿನಲಿ ಗೋವಿಂದನ | ಪ | 

ಕಂಡೆ ನಾ ಕನಸಿನಲಿ ಕನಕರತ್ನದ ಖಣಿಯ | ನಂದನ ಕಂದ ಮುಕುಂದನ ಚರಣವ | ಅ.ಪ. | 

 

ಅಂದಿಗೆ ಕಿರುಗೆಜ್ಜೆ ಘಲಿರೆಂಬ ವಾದ್ಯದಿ

ಬಂದು ಕಾಳಿಂಗನ ಹೆಡೆಯನೇರಿ

ಧಿಂಧಿಮಿ ಧಿಮಿಕೆಂದು ತಾಳಗತಿಗಳಿಂದಾ

ನಂದದಿ ಕುಣಿವ ಮುಕುಂದನ ಚರಣವ | ೧ | 

 

ಉಟ್ಟ ಪೀತಾಂಬರ ಉಡಿಯ ಕಾನ್ಚಿಯಧಾಮ

ತೊಟ್ಟ ಮುತ್ತಿನಹಾರ ಕೌಸ್ತುಭವು 

ಕಟ್ಟಿದ ವೈಜಯಂತಿ ತುಳಸಿ ವನಮಾಲೆ

ಇಟ್ಟ ದ್ವಾದಶನಾಮ ನಿಗಮಗೋಚರನ | ೨| 

 

ಕಿರುಬೆರಳಿನ ಮುದ್ರೆಯುಂಗುರ ಮುಂಗೈಯ

ಕರದಲ್ಲಿ ಕಂಕಣ ನಳಿತೋಳುಗಳ

ವರ ಚತುರ್ಭುಜ ಶಂಖ ಚಕ್ರದಿ ಮೆರೆವನ

ನಿರುತದಿ ಒಪ್ಪುವ ಕರುಣಾಮೂರುತಿಯ |೩| 

 

ಬಣ್ಣದ ತುಟಿ ಭಾವರಚನೆಯ ಸುಳಿವಲ್ಲು

ಸಣ್ಣ ನಗೆಯ ನುಡಿ ಸವಿಮಾತಿನ

ಪುಣ್ಯ ಚರಿತ್ರನ ಪೊಳೆವ ಕಿರೀಟನ 

ಕಣ್ಣು ಮನ ದಣಿಯದು ಕಂಸಾರಿ ಕೃಷ್ಣನ | ೪| 

 

ಮಂಗಳವರ ತುಂಗಭದ್ರದಿ ಮೆರೆವನ

ಅಂಗಜಪಿತ ಶ್ರೀ ಲಕ್ಷ್ಮೀಪತಿಯ

ಶೃಂಗಾರಮುಉರುತಿ ಪುರಂದರವಿಠಲನ

ಕಂಗಳಿಂದಲಿ ಕಂಡೆ ಹಿಂಗಿತು ಭವಭಯ | ೫ | 

 

 

ಕಂಡೆ ನಾ ಗೋವಿಂದನ 

 

ಕಂಡೆ ನಾ ಗೋವಿಂದನ 

ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ | ಪ | 

 

ಕೇಶವ ನಾರಾಯಣ ಶ್ರೀಕೃಷ್ಣನ 

ವಾಸುದೇವ ಅಚ್ಯುತಾನಂತನ 

ಸಾಸಿರ ನಾಮದ ಶ್ರೀಹೃಷಿಕೇಶನ

ಶೇಷಶಯನ ನಮ್ಮ ವಸುದೇವ ಸುತನ |೧| 

 

ಮಾಧವ ಮಧುಸೂದನ ತ್ರಿವಿಕ್ರಮ 

ಯಾದವ ಕುಲ ಮುನಿಜನವಂದ್ಯನ 

ವೇದಾಂತ ವೇದ್ಯನ ಇಂದಿರಾರಮಣನ

ಆದಿಮೂರುತಿ ಪ್ರಹ್ಲಾದವರದನ  |೨|

 

ಪುರುಷೋತ್ತಮ ನರಹರಿ ಶ್ರೀಕೃಷ್ಣನ 

ಶರಣಾಗತ ವಜ್ರಪಂಜರನ

ಕರುಣಾಕರ ನಮ್ಮ ಪುರಂದರವಿಠಲನ

ನೆರೆನಂಬಿದೆ ಬೇಲೂರ ಕೇಶವನ |೩|

 

 

ಕಂಡೆ ಪಂಢರಿರಾಯನ

 

ಕಂಡೆ ಪಂಢರಿರಾಯನ | ಪ |

 

ಪಂಢರಿರಾಯನ ಪುಂಡಲೀಕವರದನ 

ಪಾಂಡವಪ್ರಿಯ ಉದ್ಧಂಡಮಹಿಮನ | ಅ.ಪ. |

 

ದೀನಪಾಲನ ಗಾನಪ್ರಿಯನ 

ದೀನಜನಸುರಧೇನು ಎನಿಪನ |೧|

 

ಜಗದ್ವ್ಯಾವಕನ ಜಗದ್ರಕ್ಷಕನ 

ಜಗನ್ನಿಯಾಮಕ ಜಗದೋದ್ಧಾರನ | ೨| 

 

ಧಾರುಣೀಶನಾಪಾರಮಹಿಮನ 

ಮಾರುತೀಶ ಗುರು ಶ್ರೀವಿಠಲನ |೩| 

 

 

 

ಕಂದನ ತೂಗಿದಳು

 

ಕಂದನ ತೂಗಿದಳು ಯಶೋದೆ

ಕಂದನ ತೂಗಿದಳು | ಪ | 

 

ಇಂದಿರಾರಮಣನ ಅಂದವದನದಲಿ

ಮಂದಹಾಸವ ನೋಡಿ ಆನಂದದಿ ಹಿಗ್ಗುತ | ಅ.ಪ.| 

 

ತಮರಸಾಕ್ಷನ ಕೋಮಲಾಂಗವ ನೋಡಿ

ಆ ಮಹಿಳೆಯು ಬಲು ಪ್ರೇಮಭರಿತಳಾಗಿ |೧|

 

ಝಗಝಗಿಸುವ ನವಮಣಿಯ ತೊಟ್ಟಿಲಲಿ 

ಜಗದೀಶನು ತನ್ನ ಮಗನೆಂದು ತಿಳಿಯುತ |೨|

 

ಪದುಮನಾಭಾನನು ಹೃದಯದಿ ನೆನೆಯುತ

ಮುದದಿಂದಲಿ ದಿವ್ಯ ಪದಗಳ ಪಾಡುತ |೩|

 

ಲಕ್ಷ್ಮೀಶನು ಇತ್ತ ಪುತ್ರಭಿಕ್ಷವೆಂದು 

ಅಕ್ಷಿಗಳಲಿ ಸುಖಭಾಷ್ಪವ ಸುರಿಸುತ | ೪|

 

ತನ್ನ ಸೌಭಾಗ್ಯವು ಅನ್ಯರಿಗಾವುದೆಂದು

ಹೆಮ್ಮೆಯಿಂದ ಪ್ರಸನ್ನ ನಂದನ ಸತಿ |೫|  

 

 

 

ಕದವನಿಕ್ಕಿದಳಿದೇಕೋ ಗಯ್ಯಾಳಿ ಮೂಳಿ 

 

ಕದವನಿಕ್ಕಿದಳಿದೇಕೋ ಗಯ್ಯಾಳಿ ಮೂಳಿ

ಕದವನಿಕ್ಕಿದಳಿದೇಕೋ ಚಿಲಕವಾಡುತಿದೆ 

ಒಳಗಿದ್ದ ಪಾಪವು ಹೊರಗೆ ಹೋದೀತೆಂದು |ಪ|

 

ಭಾರತ ರಾಮಾಯಣ ಪಂಚರತ್ರಾಗಮ

ಸಾರತತ್ವದ ಬಿಂದು ಒಳಗೆ ಬಿದ್ದೀತೆಂದು |೧|

 

ಅಂದುಗೆ ಕಿರುಗೆಜ್ಜೆ ಮುಂಗಾಲಿಲವಳಟ್ಟು

ಧಿಮ್ ಧಿಮ್ ಧಿಮಿಕೆಂದು ಕುಣಿವ ದಾಸರ ಕಂಡು |೨|

 

ನಂದನ ಕಂದ ಗೋವಿಂದನ ಪೊಗಳುವ

ಚೆಂದವಾದ ಧ್ವನಿ ಹೋದೀತು ಕರ್ಣಕೆಂದು |೩|

 

ಹರಿ ಚರಣ ಪಾದ ಸರಸಿಜಯುಗಳದ

ಪರಮ ಪಾವನವಾದ ರಜವು ಬಿದ್ದೀತೆಂದು|೪|

 

ಮಂಗಳ ಮೂರುತಿ ಪುರಂದರ ವಿಠಲನ

ತುಂಗ ವಿಕ್ರಮ ಪಾದದಂಗುಲಿ ಸೋಕೀತೆಂದು |೫|

 

ಕಂಡು ಧನ್ಯನಾದೆ

 

ಕಂಡು ಧನ್ಯನಾದೆ ಶ್ರೀ ಉಡುಪಿ ಕೃಷ್ಣನ

ಕಣ್ಣಾರೆ ನಾ ಕಂಡು......

ಕಂಡು ಧನ್ಯನಾದೆನು ಬ್ರಹ್ಮಾಂಡ ನಗರಿಯೊಡೆದ ಹರಿಯ

ತಂಡ ತಂಡದಿ ಪೂಜೆಗೊಳುತ ಪಾಂಡವರನೆ ಸಲಹಿದವನ ||ಕಂಡು||

 

ಗೆಜ್ಜೆ ಕಾಲ ಕಡಗವಿಟ್ಟು ಮಜ್ಜಿಗೆ ಕಡುಗೋಲ ಪಿಡಿದು

ಹೆಜ್ಜೆ ಪಂಕ್ತಿ ಊಟವುಂಡು ಗುಜ್ಜು ವೇಷ ಧರಿಸಿದವನ ||ಕಂಡು||

 

ಎಂಟು ಮಠದ ಯತಿಗಳು ತನ್ನ ಬಂಟರೆಂದು ಪೂಜೆಗೊಳುತ

ಕಂಟಕ ಕಂಸಾದಿಗಳನೆ ದಂಟಿನಂತೆ ಸೀಳಿದವನ ||ಕಂಡು||

 

ಏಸು ಜನ್ಮದ ಸುಕೃತವೋ ಕಮಲೇಶ ವಿಠಲರಾಯ ತನ್ನ

ದಾಸ ಜನಾಭೀಷ್ಟವಿತ್ತು ಕೂಸಿನಂದದಿ ಪೋಷಿಸಿದವನ ||ಕಂಡು||

 

ಕೇಳೋ ಸಚ್ಚರಿತ

 

ಕೇಳೋ ಸಚ್ಚರಿತ, ಕೇಳೋ ಸಚ್ಚರಿತ |ಪ|

 

ದೃಢ ಭಕ್ತಿಯಿಂದಲಿ ಹರಿಯ ನೆನೆದರೆ

ಪಡುವ ಮೋಕ್ಷವೇ ಸಾಕ್ಷಿ

ದೃಢಭಕ್ತಿ ಇಲ್ಲದೆ ಹರಿಯ ನೆನೆದರೆ

ಪಡುವ ನರಕವೇ ಸಾಕ್ಷಿ |೧|

 

ಅನ್ನ ದಾನವ ಮಾಡಿದವರಿಗೆ

ಉಣ್ಣುವ ಊಟವೇ ಸಾಕ್ಷಿ

ಅನ್ನ ದಾನವ ಮಾಡದವರಿಗೆ 

ಅನ್ನ ಕಳೆವುದೇ ಸಾಕ್ಷಿ |೨|

 

ಪಂಕ್ತಿ ವಂಚನೆ ಮಾಡದವರಿಗೆ

ಪುತ್ರ ಲಾಭವೇ ಸಾಕ್ಷಿ 

ಪಂಕ್ತಿ ವಂಚನೆ ಮಾಡಿದವರಿಗೆ

ಜನ್ಮ ರೋಗವೇ ಸಾಕ್ಷಿ |೩|

 

ಕನ್ಯಾದಾನವ ಮಾಡಿದವರಿಗೆ

ಹೆಣ್ಣಿನ ಭೋಗವೇ ಸಾಕ್ಷಿ

ಕನ್ಯಾದಾನವ ಮಾಡದವರಿಗೆ 

ಹೆಣ್ಣಿನ ಕಾಟವೇ ಸಾಕ್ಷಿ |೪|

 

ಆಡಿದ ಮಾತಿಗೆ ಹರಿಯೇ ಸಾಕ್ಷಿ

ಮೂಡಿದ ಬಾವಿಗೆ ಜಲವೇ ಸಾಕ್ಷಿ

ಆಡದ ಮಾತಿಗೆ ಮನವೇ ಸಾಕ್ಷಿ

ಸಾಕ್ಷಿ ಪುರಂದರ ವಿಠಲನೇ ಸಾಕ್ಷಿ |೫|

 

 

ಕೃಷ್ಣನ ನೋಡಿದೆ

 

ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ

 

ಕೃಷ್ಣನ ನೋಡಿದೆ ಸರ್ವೋತ್ಕೃಷ್ಟನ ಪಾಡಿದೆ

ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆ

ಕಷ್ಟವ ಪರಿಹರಿಸಿ ಇಷ್ಟವ ನೀವನ

ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೧|

 

ಶಿಷ್ಟನ ನೋಡಿದೆ ವರನಿರ್ದಿಷ್ಟನ ನೋಡಿದೆ

ಹೃಷ್ಟ ಪುಷ್ಟ ಸಂತುಷ್ಟನ ಶ್ರೇಷ್ಠನ

ಶಿಷ್ಟರ ಹೃದಯ ಸಮ್ಮಿಷ್ಟನ ಇಷ್ಟನ

ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೨|

 

ರಂಗನ ನೋಡಿದೆ ದೇವೋತ್ತುಂಗನ ನೋಡಿದೆ

ರಂಗ ಸಿಂಗ ಕಾಳಿಂಗ ಮರ್ಧನ

ಮಂಗಳಾಂಗ ಭವ ಭಂಗನ ನೋಡಿದೆ

ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೩|

 

ಬಾಲನ ನೋಡಿದೆ ಲಕುಮೀಲೋಲನ ನೋಡಿದೆ

ಶೀಲ ಶೂಲಧರ ಪಾಲ ಲೀಲ

ಶಿಶುಪಾಲ ಕಾಲ ವನಮಾಲನ ನೋಡಿದೆ

ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೪|

 

ಧೀರನ ನೋಡಿದೆ ಗುಣಗಂಭೀರನ ನೋಡಿದೆ

ವೀರ ಶೂರ ಪರಾತ್ಪರ ವರ

ಅಕ್ರೂರ ವರದ ಸಿರಿಧರನ ನೋಡಿದೆ

ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೫|

 

ಶಾಮನ ನೋಡಿದೆ ಬಲು ನಿಸ್ಸೀಮನ ನೋಡಿದೆ

ವಾಮನ ಭಾಮನ ಕಾಮನಯ್ಯನ

ಶಾಮನ ಸೀಮನ ಸೋಮನ ನೋಡಿದೆ

ಕೃಷ್ಣನ ನೋಡಿದೆ ಕೃಷ್ಣನ ಪಾಡಿದೆ |೬|

 

ಜಾಣನ ನೋಡಿದೆ ಬಲುಪ್ರವೀಣನ ನೋಡಿದೆ

ಪ್ರಾಣನ ಪ್ರಾಣನ ಗುಣಗಣ ಮಂಡಿತ

ವೇಣುಗೋಪಾಲ ವಿಠಲ ಕಲ್ಯಾಣನ

ಕೃಷ್ಣನ ನೋದಿದೆ ಕೃಷ್ಣನ ಪಾಡಿದೆ |೭|

 

 

 

ಕೃಷ್ಣ ಬಾರೊ ಕೃಷ್ಣ

ಕೃಷ್ಣ ಬಾರೊ ಕೃಷ್ಣ ಬಾರೋ ಕೃಷ್ಣಯ್ಯ ನೀ ಬಾರಯ್ಯ ||ಪ||

ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ||

 

ಮನ್ಮಥಜನಕನೆ ಬೇಗನೆ ಬಾರೋ |

ಕಮಲಾಪತಿ ನೀ ಬಾರೋ ||

ಅಮಿತಪರಾಕ್ರಮ ಶಂಕರ ಬಾರೋ |

ಕಮನೀಯ ಗಾತ್ರನೆ ಬಾರಯ್ಯ ದೊರೆಯೆ ||೧||

 

ಕುರುಳು ಕೇಶಗಳ ಒಲಿವ ಅಂದ | 

ಭರದ ಕಸ್ತೂರಿತಿಲಕದ ಚಂದ | 

ಶಿರದ ಒಪ್ಪುವ ನವಿಲು ಕಣ್ಗಳಿಂದ | 

ತರತರಾಭರಣಗಳ ಧರಿಸಿ ನೀ ಬಾರೋ ||೨||

 

ಹಾಲು ಬೆಣ್ಣೆಗಳ ಕೈಯಲಿ ಕೊಡುವೆ | 

ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ | 

ಜಾಲ ಮಾಡದೆ ನೀ ಬಾರಯ್ಯ ಮರಿಯೇ | 

ಬಾಲ ಎನ ತಂದೆ ಪುರಂದರ ವಿಠಲ ||೩||

 

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023