ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ಧ)

ಧವಳಗಂಗೆಯ ಗಂಗಾಧರ ಮಹಾಲಿಂಗ

ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ | ಧವನ ತೋರಿಸಯ್ಯ ಗುರುಕುಲೋತ್ತುಂಗ ||ಪ||  

 

ಅರ್ಚಿಸಿದವರಿಗಭೀಷ್ಟವ ಕೊಡುವ | ಹೆಚ್ಚಿನ ಅಘಗಳ ಬೇಗನೆ

ತರಿವ | ದುಶ್ಚರಿತರನ್ನೆಲ್ಲ ದೂರದಲ್ಲಿಡುವ ನಮ್ಮಚ್ಚುತಗಲ್ಲದ ಅಸುರರ ಬಡಿವ ||೧|| 

 

ಮಾರನ ಗೆದ್ದ ಮನೋಹರಮೂರ್ತಿ | ಸಾರ ಸಜ್ಜನರಿಗೆ ಸುರ ಚಕ್ರವರ್ತಿ | 

ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿ | ಹರಿಯ ತೋರಿಸಯ್ಯ ನಿನಗೆ ಶರಣಾರ್ಥಿ ||೨|| 

 

ಚೆನ್ನ ಪ್ರಸನ್ನ ಶ್ರೀ ಹಯವದನನ್ನ |ಅನುದಿನ ನೆನೆವಂತೆ ಮಾಡೊ ನೀ ಎನ್ನ | 

ಅನ್ಯರನರಿಯೆನೊ ಗುರುವೆಂಬೆ ನಿನ್ನ | ಇನ್ನಾದರು ಹರಿಯ ತೋರೊ ಮುಕ್ಕಣ್ಣ ||೩||

 

ಧನ್ಯನೋ ಶೇಷಗಿರಿದಾಸ

ಧನ್ಯನೋ ಶೇಷಗಿರಿದಾಸ ನೀನೂ | ಪುಣ್ಯವಂತನು ಅಹುದೊ ಮನೊ ವಾಚದಲಿ||ಪ|| 

ಮುಂಗೈಯ ಮ್ಯಾಲಿನ ಗಿಳಿ ಹಾರಿಹೋದಂತೆ | ರಂಗ ಮಧ್ವನ ಸ್ಮರಣೆ ಮಾಡಿಕೊಳುತ |

ಮಂಗಳಾಂಗನಾಗಿ ಸ್ವರ್ಗಸ್ಥನಾದಿ ಕ್ಷಣ | ಭಂಗುರವೆಂಬ ಪ್ರಮಾಣ ಸಿದ್ಧಿಸಿತು ಗಡ ||೧||

 

ಸತ್ ಶಿಷ್ಯನೆಂದೆನಿಸಿಕೊಂಡದಕೆ ಎನ್ನ ಮ | ನೋತ್ಸಾಹ ಮಾತ್ರ ಬಂದಾಗಲಿಲ್ಲಾ | ವತ್ಸ ಕೇಳು

ಉಪಸರ್ಗ ಕೂಡಿದ ನಾಭಿ | ತತ್ಸಮಾನಾಯಿತೊ ಇಂದಿನಾರಭ್ಯವೂ ||೨|| 

 

ಒಂದೆ ಪ್ರವಾಹದೊಳು ಈಸು ಬೀಳಲು ಸುಳಿ | ಯಿಂದ ಹಿಂದಕೆ ಒಬ್ಬನಿಂದಂತೇವೆ | 

ಇಂದು ಎನಗಾಯಿತೋ ಭೂಮಿಯೊಳಗೆ ಋಣಾನು | ಬಂಧ ಇಂತಿರಲಿಕ್ಕೆ ಯತ್ನ ಒಬ್ಬರದಿಲ್ಲ ||೩|| 

 

ಪರಿಣಾಮಕೆ ನಿನಗೆ ಸಾನುಕೂಲಾವಾಗಿ | ಅನಿಲದೇವನು ಒಲಿದು ಹರಿಯ ಕೂಡಾ | 

ಪ್ರಣಮಪೂರ್ವಕದಿಂದ ಪಂಚತ್ವ ಐದಿದೆ ಸಾ | ಧನ ಪೂರ್ತಿಕಾಲ ಎಳ್ಳನಿತು ಉಳದಿಪ್ಪದೊ ||೪|| 

 

ವಿಧಿ ಸಂವತ್ಸರ ಭಾದ್ರಪದ ಶುಕ್ಲದ ಭಾನು | ಬಿದಿಗೆಯಲಿ ಪ್ರವರ ಗೌತಮ ಸಂಗಮಾ | ನಿಧಿಯಲಿ

ವಿಜಯವಿಠ್ಠಲನಂಘ್ರಿಯಗಳವನು | ಹೃದಯದಲಿ ಇಟ್ಟು ದೇಹದ ತ್ಯಾಗಮಾಡ್ದೆ ||೫||

 

 

ಧನ್ಯನಾದೆನು ವಿಠಲನ ಕಂಡು ಓಡಿತು

ಧನ್ಯನಾದೆನು ವಿಠಲನ ಕಂಡು ಓಡಿತು ಅಘದ್ ಹಿಂಡು ||ಪ|| 

ಧನ್ಯನಾದೆನೊ ಕಾಮನ್ನ ಪಿತನ ಲಾ | ವಣ್ಯಮೂರುತಿಯ ಕಣ್ಣಿಲೆ ಕಂಡು ||ಅ|| 

ದೇವವರೇಣ್ಯ ಸದಾ ವಿನೋದಿ ವೃಂ | ದಾವನ ಸಂಚರ ಗೋವನ ಕಂಡು ||೧|| 

 

ಮಂಗಳಾಂಗ ಕಾಳಿಂಗ ಮಥನ ಮಾ | ತಂಗವರ ವರದ ರಂಗನ ಕಂಡು ||೨|| 

 

ಹಾಟಕಾಂಬರ ಕಿರೀಟ ಸಾರಥಿ | ತಾಟಕಾರಿ ವೈರಾಟನ ಕಂಡು ||೩|| 

 

ಚಿಂತಿತ ಫಲದ ಕೃತಾಂತನಾತ್ಮಜಾ | ದ್ಯಂತರಹಿತ ನಿಶ್ಚಿಂತನ ಕಂಡು ||೪|| 

ಮಾತುಳಾಂತಕ ವಿಧಾತಪತಿ ಜಗ | ನ್ನಾಥ ವಿಠಲ ವಿಖ್ಯಾತನ ಕಂಡು ||೫||

 

ಧಣಿ ನೀನಿರಲು ತಣಿಸಿ ಪರರ

ಧಣಿ ನೀನಿರಲು ತಣಿಸಿ ಪರರ | ದಣಿವುದುಂಟೆ ಲೋಕದಿ ||ಪ|| 

ಕ್ಷಣ ಕ್ಷಣದಲಿ ಪೊರೆವ ಚಿಂತಾ | ಮಣಿ ನೀನಿರೆ ತ್ರಿಭುವನಕೆ ||ಅ.ಪ|| 

 

ಕರದಲಿರುವ ಮಣಿಯ ಬೆಲೆಯ | ನರಿಯದಂಥ ಮೂಢ ಜನರು | 

ಪರರಿಗಿತ್ತು ಹರುಷದಿಂದ | ಪುರಿಯ ಕೊಂಬು ತೆರದಲಿ ||೧|| 

 

ಘೋರ ದುರಿತ ದೂರ ಮಾಡಿ | ಸಾರ ಫಲಗಳನ್ನು ಕೊಡುವ | ನಾರಸಿಂಗ

ಮಂತ್ರವಿರಲು | ಭೈರವನನು ಜಪಿಸುವಂತೆ ||೨|| 

 

ಪಡೆದ ಜನಕನಲ್ಲದೆನ್ನ | ನುಡಿಗೆ ಒಲಿವರುಂಟೆ

ಜಗದಿ | ಕಡಲಶಯನ ಎನ್ನ ಕರವ | ಪಿಡಿಯುತ ಪ್ರಸನ್ನನಾಗೋ ||೩||

 

ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ

ಧರೆಯೊಳಗೆ ಹೆಳವನಕಟ್ಟೆಯಲಿ ನೆಲಸಿ | ಪರಿಪೂರ್ಣಕಳೆಯಿಂದ ಭಕುತರನು

ಒಲಿಸಿ | ಸ್ಥಿರವಾಗಿ ಪೂಜೆಯನು ನೆಲಸಿ ನೀನಿಂದೆ | ಕರುಣ ದೃಷ್ಟಿಯಲಿ ಭಕ್ತರನು ಮನ್ನಿಸುವೆ ||೧|| 

 

ಹತ್ತು ಅವತಾರದಲಿ ಇದಿರಾಂತವರ ಗೆಲಿದು | ಮತ್ತೆ ಪದವಿಯ ಕೊಟ್ಟುರಕ್ಷಿಸಿ

ಕಾಯ್ದೆ | ವಿಸ್ತರಿಸಿ ಪೂಜೆಯನು ಮಾಡಿಸಿಕೊಂಬೆ | ತೆತ್ತೇಸಕೋಟಿ ದೇವರ್ಕಳನು ರಕ್ಷಿಸಿದೆ ||೨|| 

 

ಉದಯ ಮಧ್ಯಾಹ್ನ ಸಂಜೆಯಲಿ ಪೂಜೆಯನು | ವಿಧವರಿತು ಸೇವೆಯನು ಅನುಸರಿಸಿಕೊಂಬೆ ಸಹೃದಯ ಭಕ್ತರನು ಕಾಯ್ದು ಪಾಲಿಸುವೆ | ಮುದದಿಂದ ಹೆಳವನಕಟ್ಟೆಯಲಿ  ನೆಲಸಿರುವೆ ||೩||

 

ಧ್ವಜದ ತಿಮ್ಮಪ್ಪ

ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ| ನಿಜಗಿರಿಯಾತ್ರೆಗೈದಿದ ಹರುಷವ ಕೇಳಿ ||ಪ||

 

ಬಲದಲಂಬುಜವ ಭವಾದಿಗಳೆಡದಲಿ| ಉಲಿವ ವೇದ ಉಪನಿಷದುಗಳು|| ಸಲುಗೆಯಲ್ಲಿ

ಸನಕಾದಿಗಳು ಸೇವಿಸೆ ಮುನ್ನ| ಹಲವು ಋಷಿ ಮುನಿನಿಕರ ಹಿಂದೆ ಬರುತಿರಲಿ ||೧|| 

 

ಛತ್ರವ ಶಚಿ ಚಾಮರವ ಢಾಳಿಸೆ ಇಂದ್ರ| ಚಿತ್ತಜಾತನು ವ್ಯಜನವ ಬೀಸಲು|| ಹೊತ್ತು ಮಾರುತಿ

ಹಡಪ ಹೊಳೆವೆಲೆಗಳ ಕೂಡಲು| ಹಸ್ತದ ಕಾಳಂಜಿ ಹರಿಣಾಂಕನು ಬರೆ ||೨|| 

ವರುಣನು ಸ್ವಾದುಜಲವ ಪಿಡಿದು ಬರೆ| ತರುಣಿ ತನಗೆ ಆಧಾರದಂತಿರಲು| ಸುರರು ಸುಮನಗಳಿಂದ

ಸರ್ವರು ತಮತಮ್ಮ| ಪರಿಪರಿ ಆಯುಧಗೊಂಡು ಬಳಸಿಬರೆ ||೩|| 

 

ಮಂದರ ಮಧ್ಯಮ ತಾರಕ ಮೋಹನ| ದಿಂದ ಗಂಧರ್ವರು ಗಾನಮಾಡೆ| 

ತೋಂಧಿಮಿಧಿಮಿಕೆಂದು ತಾಳಮೇಳದೆನಾ| ರಂದ ಪಾಡಲು ಆಡುತಾಡುತ ಬರುತಿರೆ ||೪|| 

 

ಲೋಕನಾಯಕ ಲೋಕೈಕ ರಕ್ಷಾಮಣಿ| ಸಾಕಾರರೂಪ ಸದ್ಗುಣಭರಿತ | ವೆಂಕಟೇಶ ವ್ಯಾಸಮುನಿವರದನಾದ ಕರು| ಣಾಕರ ಪುರಂದರವಿಠಲನು ಗರುಡ ||೫||

 

ಧನ್ಯನಾದೆ ನಾ

ಧನ್ಯನಾದೆ ನಾ| ನೀಜಗದೊಳು| ಧನ್ಯನಾದೆ ನಾ ||ಪ|| 

ಪನ್ನಗಶಯನನ ಕಣ್ಣಿನಿಂದಲಿ ಕಂಡು| ಧನ್ಯನಾದೆ ನಾ ||ಅ|| 

 

ಉನ್ನತ ಮಹಿಮ ಪಾ| ವನ್ನಚರಿತ ಸುರಸನ್ನುತಚರಣನ||

ಪನ್ನಗಾರಿವಾ| ಹನ್ನ ಪುರುಷರನ್ನ| ಚೆನ್ನಿಗ ಶ್ರೀ|ರಂಗನ್ನ ಮಹಿಮೆಯ ಕಂಡು ||೧|| 

 

ದೇವ ದೇವೋತ್ತಮ| ಕಾವ ನಮ್ಮ ಈಗ| ಭಾವಜನಯ್ಯನು|| ಕಾವೇರಿತೀರದ| 

ಉತ್ತಮ ಕ್ಷೇತ್ರದೊಳು| ಪಾವನ ನರಸಿಂಗನ ಕಂಡು ||೨|| 

 

ಭಾನುಕೋಟಿಪ್ರಭ| ಸ್ವಾನಂದಪೂರ್ಣನ| ದೀನ ರಕ್ಷಕನ||

ಸಿರಿಪುರಂದರವಿಠಲ ಚೆನ್ನಿಗ| ಶ್ರೀರಂಗನ ಮಹಿಮೆಯ ಕಂಡು| ಧನ್ಯನಾದೆ ನಾ ||೩||

 

ಧರ್ಮ ಏಕಃ ಸಹಾಯಃ

ಧರ್ಮ ಏಕಃ ಸಹಾಯಃ ||ಪ|| 

ಪರಬ್ರಹ್ಮಮೂರುತಿಯ ಪಾದವ ಭಜಿಪ ಸುಜನರಿಗೆ ||ಅ||

 

ಹರಿಭಕುತಿಯನು ಮಾಳ್ಪ ಪರಮ ಭಾಗವತರಿಗೆ| ಕರೆದು ಭೂಸುರರಿಗನ್ನವನಿತ್ತಗೆ| ರಸತಿಯರನು

ಕಂಡು ಮನವೆಳಸದಿದ್ದವಗೆ| ಪರರುಪದ್ರವ ಬಿಡಿಸಿ ಪೊರೆವ ಸುಜನರಿಗೆಲ್ಲ ||೧||

 

 ನಿತ್ಯ ನೇಮವ ಬಿಡದೆ ಸತ್ಯದಲಿ ನಡೆದವಗೆ| ವ್ಯರ್ಥವಾಗಿ ಹೊತ್ತು ಕಳೆಯದವಗೆ| ಚಿತ್ತಶುದ್ಧಿಯಲಿ

ಪರವಸ್ತು ಹರಿಯನು ತನ್ನ| ಹೃತ್ಕಮಲಮಧ್ಯದಲಿ ಇಟ್ಟು ಭಜಿಪರಿಗೆಲ್ಲ ||೨|| 

 

ಮಾತೃಪಿತೃಗಳನ್ನ ಪ್ರಿಯದಲ್ಲಿ ಪೊರೆದವಗೆ| ಯಾತ್ರೆಗಳ ಮಾಳ್ಪ ಪುಣ್ಯಾತ್ಮಗೆ| ಧಾತ್ರಿಯೊಳು ಪುರಂದರವಿಠಲನ ನಾಮವನ್ನು| ಕೀರ್ತನೆ ಮಾಡಿ ಲೋಲಾಡುತಿಹ ಸುಜನರಿಗೆ ||೩||

 

ಧರ್ಮಕ್ಕೆ ಕೈ ಬಾರದೀ

ಧರ್ಮಕ್ಕೆ ಕೈ ಬಾರದೀ ಕಾಲ| ಪಾಪ| ಕರ್ಮಕ್ಕೆ ಮನಸೋಲೋದೀ ಕಲಿಕಾಲ ||ಪ||

 

ದಂಡ ದ್ರೋಹಕೆ ಉಂಟು| ಪುಂಡುಪೋಕರಿಗುಂಟು| ಹೆಂಡತಿಮಕ್ಕಳಿಗಿಲ್ಲವೀ ಕಾಲ||

ದಿಂಡೇರಿಗುಂಟು ಜಗಭಂಡರಿಗುಂಟು| ಅಂಡಲೆವರಿಗಿಲ್ಲವೀ ಕಾಲ ||೧|| 

 

ಮತ್ತೆ ಸುಳ್ಳರಿಗುಂಟು| ನಿತ್ಯ ಹಾದರಕುಂಟು| ಉತ್ತಮರಿಗಿಲ್ಲವೀ ಕಾಲ| ತೊತ್ತೇರಿಗುಂಟು ತಾಟಕಿಗುಂಟು| ಹೆತ್ತ ತಾಯಿಗಿಲ್ಲವೀ ಕಾಲ ||೨|| 

 

ಹುಸಿ ದಿಟವಾಯಿತು| ರಸ ಕಸವಾಯಿತು| ಸೊಸೆ ಅತ್ತೆ ದಂಡಿಸೋದೀ

ಕಾಲ|| ಬಿಸಜಾಕ್ಷ ಪುರಂದರವಿಠಲನ ಮನದಲ್ಲಿ| ಸ್ತುತಿಸುವವರಿಗಿಲ್ಲವೀ ಕಾಲ ||೩||

 

ಧರ್ಮ ದೊರಕೊಂಬುವುದೆ

ಧರ್ಮ ದೊರಕೊಂಬುವುದೆ ಸಜ್ಜನರಿಗೆ| ದು| ಷ್ಕರ್ಮ ಸತಿಯರುಳ್ಳ

ಪುರುಷೋತ್ತಮರಿಗೆ ||ಪ|| 

 

ಧನವಿದ್ದರೇನಯ್ಯ ಮನವಿಲ್ಲದವರಿಗೆ| ಮನವಿದ್ದರೇನಯ್ಯ ಧನವಿಲ್ಲವು||

ಧನವೂ ಮನವೂ ಎರಡುಳ್ಳ ಪುರುಷರಿಗೆ| ಅನುಕೂಲವಾದಂಥ ಸತಿಯಿಲ್ಲವಯ್ಯ ||೧|| 

 

ನಿನ್ನ ಕಣ್ಣ ಮುಂದೆ ಹೋಗುವ ಜೀವನು| ಇನ್ನು ನಿನಗೆ ನಾಚಿಕೆಯಿಲ್ಲವು|| 

ಎನ್ನದು ತನ್ನದು ಎಂಬ ಭ್ರಾಂತಿಯ ಬಿಟ್ಟು| ಇನ್ನೀ ದೇಹವ ನಂಬಿ ಕೆಡಬೇಡ ಮನುಜ ||೨|| 

 

ಈಗ ಮಾಡುವ ಧರ್ಮ ನಾಳೆಯೆಂದೆನಬೇಡ| ನೀವಾರು ನಾವಾರು ಎಲೆ ಮನುಜ| 

ಊಳಿಗದವರೆಂಬ ಭಟರು ಬಂದೆಳೆವಾಗ| ನಾಳೆ ಮಾಳ್ಪೆನೆನೆ ಬಿಡುವರೆ ಮನುಜ ||೩|| 

 

ಎಂದೆಂದು ಈ ಪರಿ ಅಲ್ಲಲ್ಲಿ ಬಳಲಿಕೆ| ಮುಂದೆ ಕಾಣೆನು ಸಾಧನವನು|| 

ತಂದೆ ಶ್ರೀಪುರಂದರವಿಠಲರಾಯನ| ಒಂದು ಸಾರಿಯು ನೀ ನೆನೆ ಕಂಡ್ಯ ಮನುಜ ||೪||

 

 

 

 

ಧರ್ಮವೆಂಬ ಸಂಬಳವ

ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೋ| ಪೆರ್ಮೆಯಿಂ ದೇಹವ ನಂಬಬೇಡಿ

ಕಾಣಿರೋ ||ಅ|| 

ಅಟ್ಟ ಅಡುಗೆ ಉಣಲು ಬಿಡನು| ಕೊಟ್ಟ ಸಾಲ ಕೇಳಬಿಡನು| ಪೆಟ್ಟಿಗೆಯೊಳಗಿದ್ದ

ಚಿನ್ನವ| ತೊಟ್ಟೇನೆಂದರೆ ಯಮನು ಬಿಡನು ||೧||

 

 ಅಕ್ಕನಿಲ್ಲಿ ಕರೆಯಲಿಲ್ಲ| ಮಕ್ಕಳನ್ನು ಪಡೆಯಲಿಲ್ಲ| ದುಃಖಗೊಂಡು ಕಣ್ಣೀರನು| 

ಉಕ್ಕಿಸಿದರೆ ಬಿಡನು ಯಮನು ||೨|| 

 

ಪೇಳ್ವೆ ನೆಂಟರಿಂಗೆ ಕರೆದು| ಬೇಳೆ ಬೆಲ್ಲವನ್ನು ತಂದು|| ನಾಳೆ ಮಗನ ಮದುವೆ ಎಂದು| 

ತಾಳು ಎಂದರೆ ಯಮನು ಬಿಡನು ||೩|| 

 

ಮಾಳಿಗೆಮನೆಯಿರಲಿ| ಜಾಳಿಗೆ ತುಂಬ ಹೊನ್ನಿರಲಿ|

ಆಳುಮಂದಿ ಶಾನೆಯಿರಲಿ| ಕಾಲನು ತಾ ಬೆನ್ನ ಬಿಡನು ||೪|| 

 

ಅರ್ತಿಯಿಂದ ಸಂಸಾರವ|ವ್ಯರ್ಥವಾಗಿ ನೆಚ್ಚಬೇಡಿ| 

ಕರ್ತ್ರು ಪುರಂದರವಿಠಲನ್ನ| ಭಕ್ತಿಯಿಂದಲೆ ಭಜಿಸಿರೊ ||೫||

 

ಧರ್ಮವೇ ಜಯವೆಂಬ

ಧರ್ಮವೇ ಜಯವೆಂಬ ದಿವ್ಯ ಮಂತ್ರ ||ಪ|| 

ಮರ್ಮವನ್ನರಿತು ಮಾಡಲುಬೇಕು ತಂತ್ರ ||ಅ|| 

 

ವಿಷವಿಕ್ಕಿದವಗೆ ಷಡ್ರಸವನುಣಿಸಲುಬೇಕು| ದ್ವೇಷ ಮಾಡಿದವನ ಪೋಷಿಸಲು ಬೇಕು|| 

ಪುಸಿಯಾಡಿ ಕೆಡಿಸುವನ ಹಾಡಿ ಹರಸಲು ಬೇಕು| ಮೋಸ ಮಾಡುವನ್ಹೆಸರು ಮಗನಿಗಿಡಬೇಕು ||೧|| 

 

ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು| ಬಂಧನದೊಳಿಟ್ಟವರ ಬೆರೆಯಬೇಕು|| 

ಕೊಂದ ವೈರಿಯ ಮನೆಗೆ ನಡೆದುಹೋಗಲು ಬೇಕು| ಕುಂದೆಣಿಸುವವರ ಗೆಳೆತನ ಮಾಡಬೇಕು||೨|| 

 

ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು| ಕಂಡು ಸಹಿಸದವರ ಕರೆಯಬೇಕು|| ಪುಂಡರೀಕಾಕ್ಷ ಶ್ರೀಪುರಂದರವಿಠಲನ| ಕೊಂಡಾಡಿ ತಾ ಧನ್ಯನಾಗಬೇಕು ||೩||

 

ಧರ್ಮಶ್ರವಣವಿದೇತಕೆ

ಧರ್ಮಶ್ರವಣವಿದೇತಕೆ| ಮೂರ್ಖಗೆ ||ಪ|| 

ಕರ್ಮಾನುಷ್ಠಾನವನೆಸಗದಿರುವ| ದುರ್ಮತಿಗೇತಕೆ ಬ್ರಾಹ್ಮಣಜನ್ಮ ||ಅ|| 

 

ಕೋಣಗೆ ವೀಣಾಗಾನವಿದೇತಕೆ| ಮಾಣಿಕ್ಯವೇತಕೆ ಮರ್ಕಟಗೆ|

ತ್ರಾಣವು ತೊಲಗಿದ ಹೆಣ್ಣಿಗೇತಕೆ ಕ| ಟ್ಟಾಣಿ ಮುತ್ತಿನ ಹಾರವು ಕೊರಳಿಗೆ ||೧||

 

ಷಡುರಸಾನ್ನವಿದೇತಕೆ ಗರ್ದಭ| ಉಡುಗೊರೆ ಸಹಿತಲೆ ಶ್ವಾನನಿಗೆ|| 

ಕಡುವೃದ್ಧಗೆ ಮೈನೆರೆದ ಹೆಣ್ಣಿನ| ಒಡನೆ ಭೋಗಿಪೆನೆಂಬಭಿಲಾಷೆಯೇಕೆ ||೨|| 

 

ಹುಟ್ಟುಕುರುಡಗೆ ದೀಪವಿದೇತಕೆ| ಭ್ರಷ್ಟನಿಗೇತಕೆ ಕುಲಧರ್ಮ|| 

ಸೃಷ್ಟಿಯೊಳಧಮಗೆ ಪುರಂದರವಿಠಲನ| ಮುಟ್ಟಿ ಭಜಿಪೆನೆಂಬ ಅಭಿಲಾಷೆಯೇತಕೆ ||೩||

 

ಧರಣಿಗೆ ಧೊರೆಯೆಂದು

ಧರಣಿಗೆ ಧೊರೆಯೆಂದು ನಂಬಿದೆ| ಇಂಥ| ಪರಮಲೋಭಿಯೆಂಬುದರಿಯೆ ಶ್ರೀಹರಿಯೆ ||ಪ|| 

 

ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ| ಓಡಿ ನೀರೊಳು ಸೇರಿಕೊಂಡೆ

ಬೇಗ|| ಹೇಡಿಯ ತೆರದಲಿ ಮೋರೆಯ ತೋರದೆ| ಓಡಿ ಅರಣ್ಯದಿ ಮೃಗಗಳ ಸೇರ್ದೆ ||೧||

 

ಬಡವರ ಬಿನ್ನಹ ಲಾಲಿಸದೆ ಹಲ್ಲ| ಕಡು ಕೋಪದಲಿ ತೆರದಂಜಿಸಿದೆ|| 

ತಡೆಯದೆ ಭಿಕ್ಷುಕನಾದರೆ ಬಿಡರೆಂದು| ಕೊಡಲಿಯ ಪಿಡಿದು ಕೋಡಗಹಿಂಡ ಕಾಯ್ದೆ ||೨||

 

ಉತ್ತಮನೆಂದರೆ ಮತ್ತೆ ಚೋರನಾದೆ| ಬತ್ತಲೆ ನಿಂತೆ ತೇಜಿಯನೇರಿದೆ|| 

ಎತ್ತ ಹೋದರು ಬಿಡೆ ಮತ್ತೆ ನಿನ್ನನು ದೇವ| ಚಿತ್ತಜನಕ ಶ್ರೀಪುರಂದರವಿಠಲ ||೩||

 

ಧನ್ಯರೆ ನೀವು ಧನ್ಯರೆ

ಧನ್ಯರೆ ನೀವು ಧನ್ಯರೆ | ಪನ್ನಂಗ ಶಯನನ ಕನ್ಯೆಯರು | 

ನಮಮ್ಯಾಲೆ ಅನಂತ  ದಯಮಾಡಿ | ಮನ್ನಿಸಿ ಬನ್ನಿರಿ ||ಪ|| 

 

ಇಂದಿರಾ ದೇವಿಯರು ಕುಂದುನೋಡದೆ | 

ನಮ್ಮ ಮಂದಿರಕ್ಕೆ ಬನ್ನಿರೆಂದು ದ್ರೌಪದಿಯು ||೧|| 

 

ಮುದ್ದು ಪಾದಕೆ ನಾನು ಬಿದ್ದು ಬೇಡುವೆ | 

ದಯ ಇದ್ದರೆ ಬಾ ಅನಿರುದ್ಧನ ರಾಣಿ ||೨|| 

 

ಕಡು ಭಾಗ್ಯ ಸುಭದ್ರಾ ಅಡಿಗೆರಗುತ | 

ಕರಹಿಡಿದು ರಾಮೇಶನ ಮಡದಿ ಬಾರಮ್ಮ ||೩||

 

ಧನ್ಯನಲ್ಲವೇ ಅವನು ಧನ್ಯವಲ್ಲವೆ

ಧನ್ಯನಲ್ಲವೇ ಅವನು ಧನ್ಯವಲ್ಲವೆ ||ಪ|| 

ಪನ್ನಗಾರಿ ಧ್ವಜನ ಮಹಿಮೆಯನ್ನು ಪೊಗಳುತಿರುವ ನರನು ||ಅ|| 

 

ಅರುಣ ಉದಯದಲ್ಲಿ ಎದ್ದು | ದುರಿತದೂರವನ್ನು ಸ್ಮರಿಸಿ | 

ಹರುಷದಿಂದ ಶೌಚ ಕರ್ಮ | ಅರಿತು ನಿರುತ ಚರಿಸುವರನು ||೧|| 

ಸತ್ಯಮತದ ಪದ್ಧತಿಯನು | ಚಿತ್ತವಿಟ್ಟು ಆಚರಿಸುತ | 

ಭೃತ್ಯನೆಂದು ಪೇಳಿಕೊಳುವ | ನಿತ್ಯ ತೃಪ್ತನಾದವರನು ||೨|| 

 

ಸಿರಿಯುತ ರಂಗೇಶವಿಠಲ | ಸರುವ ದೇವರೊಡೆಯನೆಂದು | 

ಸ್ಥಿರದಿ ನಂಬಿ ಅವನ ಪಾದ ಮರೆಯ ಹೊಕ್ಕ ಜಾನ ನರನು ||೩||

 

ಧನ್ಯ ಧನ್ಯವಾಯಿತು ಜನುಮಾ

ಧನ್ಯ ಧನ್ಯವಾಯಿತು ಜನುಮಾ | ಆವಪುಣ್ಯವೋ ಅರಿಯೇ ನಮ್ಮಾ ||ಪ|| 

 

ನಾನಾ ಜನ್ಮದ ಬಲಿಯನೆ ಗೆದ್ದು ಸಲೆ | ಮಾನುಷ ದೇಹದಲಿಂದು | 

ಮಾನುಭಾವರ ವಂಶದಿ ಬಂದು | ಅವರ | ಸಾನಿಧ್ಯ ಸೇವೆಯ ಪಡೆದು ||೧|| 

 

ಗುರುಕ್ಷೇತ್ರವೇ ಯನಗಿದೇ ಕಾಶೀ | ಗಂಗೆ | ಮೆರೆವುದು ಗುರುತೀರ್ಥವೆನಿಸಿ | 

ಗುರು ವಿಶ್ವೇಶ್ವರ ನೆನೆವಾಸೀ | ಕಂಡು | ಪೂರಿತಾಯಿತು ಮನದಾಸಿ ||೨|| 

 

ಛಂದ ದೋರಿಸಿ ಭಕ್ತಿಯವರ್ಮ | ಭವ | ಬಂಧಗಳಿಸಿದ

ಕರ್ಮ | ತಂದೆ ಮಹಿಪತಿ ಶ್ರೀ ಪಾದ ಧರ್ಮಾ | ನಿಜ | ನಂದನ ಗಾನಂದೋಬ್ರಹ್ಮಾ ||೩||

 

ಧರಿಯೊಳು ಸಂತ ಚರಿಯ ಅಗಾಧಾ

ಧರಿಯೊಳು ಸಂತ ಚರಿಯ ಅಗಾಧಾ ||ಪ|| 

ನಾನಾ ಕಲ್ಪನೆಗಳೆದು ವಿಚಾರದಿ | ತಾನಾದನು ನಿಜಬೋಧಾ ||೧|| 

 

ಭಗವಧ್ಯಾನದಿ ಜನಸ್ತುತಿ ನಿಂದೆಗೆ | ಬಗಿಯನು ಹರುಷವಿಷಾದಾ ||೨|| 

ಗುರುಮಹಿಪತಿ ಪ್ರಭುನಾಮಕೀರ್ತನೆಯಲಿ | ಗರೆವರು ಪರಮಾಹ್ಲಾದಾ ||೩||

 

ಧನ್ಯನಾದೆನಾ ಗುರು

ಧನ್ಯನಾದೆನಾ ಗುರು ||ಪ|| 

ಸನ್ನುತಾಂಗ ಗುರುರಾಜರ ನೋಡಿ ||ಅ|| 

 

ಘನ್ನ ಮಹಿಮರಿವರು | ವರ ಪಾವನ್ನ ಚರಿತರಿವರು | 

ಮುನ್ನ ಮಾಡಿದಪರಾಧಗಳೆಣಿಸದೆದೆ || ಉನ್ನತ ಸುಖಗಳನೀವರ ನೋಡಿ ||೧|| 

 

ಬುಧರ ಮಹಾತ್ಪ್ರಭುವೋ | ಭಜಿಪರ ಮಧುರ | ಸುರದ್ರುಮವೋ | 

ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು | ಅಧಮರ ಮುರಿದಿಹ ಧೀರರ ನೋಡಿ ||೨|| 

 

ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು | ಭಾಸುರಾಂಗ

ಯತಿರಾಘವೇಂದ್ರರನು ಈ ಸಮಯದಿ ಕೊಂಡಾಡುತೆ ನೋಡಿ ||೩||

 

ಧ್ಯಾನವನೆ ಮಾಡು ಬಿಂಬಮೂರುತಿಯ

ಧ್ಯಾನವನೆ ಮಾಡು ಬಿಂಬ ಮೂರುತಿಯ ||ಪ|| 

ಆನಂದದಲಿ ಕುಳಿತು ಅಂತರಂಗದಲಿ ||ಅ|| 

ಸದಾಚಾರನಾಗಿ ದ್ವಾದಶ ಗುರುಗಳಿಗೆರಗಿ | ಮುದದಿಂದ 

ಮೂಲಮಂತ್ರವನು ಜಪಿಸಿ | ಸದಮಲ ಭಕುತಿಯಲಿ ದೇಹಸ್ಥನ ತಿಳಿದು | 

ಪದುಮಾಸನವ ಹಾಕಿ ಪರಮ ವಿಶ್ವಾಸದಲಿ ||೧|| 

 

ಅಂಗವನು ಚಲಿಸದೆ ಚೆಂದಾಗಿ ದೃಢದಿಂದ | ಕಂಗಳನು ಮುಚ್ಚಿ ಇಂದ್ರಿಯಂಗಳ ಜರಿದು | 

ಮಂಗಳ ಶೋಭಿತನ ಅಖಂಡ ಧ್ಯಾನವನು ಅಂತ | ರಂಗದಲಿ ನಿಲಿಸಿ ಎಲ್ಲವನು ಕಾಣೊ ||೨|| 

 

ಭಗವದ್ರೂಪಗಳೆಲ್ಲ ಒಂದು ಸಾರಿ ಸ್ಮರಿಸಿ | ದುಗುಳೆ ಪರಮ ಗುರುವಿನ ಮೂರ್ತಿಯನು | 

ತೆಗೆದು ಆವಾಹನವನೆ ಮಾಡಿ ಅಲ್ಲಿಂದಲೆ | ಸ್ವಗುರುಬಿಂಬಮೂರುತಿಯಲಿ  ಐಖ್ಯವನೆ ಮಾಡೊ ||೩|| 

 

ತಿರುಗಿ ಮೆಲ್ಲಗೆ ಮೂರು ರಂಧ್ರದಿಂದಲಿ ನಿನ್ನ | ವರಮೂರ್ತಿಯಲಿ ಚಿಂತನೆಯ ಮಾಡೊ | 

ಭರದಿಂದ ಎಲ್ಲವನು ತಂದು ಹೃದಯದಲ್ಲಿ | ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕೂಡಿಕೊ ||೪|| 

 

ಆತನೆ ಬಿಂಬಮೂರುತಿಯೆಂದು ತಿಳಿದುಕೊ | ಆ ತರುವಾಯ ನಾಡಿಗಳ ಗ್ರಹಿಸಿ | 

ಆ ತೈಜಸನ ತಂದು ವಿಶ್ವಮೂರುತಿಯಲ್ಲಿ | ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ ||೫|| 

 

ಜ್ಞಾನಪ್ರಕಾಶದಲಿ ನಿನ್ನ ಹೃದಯ | ಸ್ಥಾನ ಚೆನ್ನಾಗಿ ಅಷ್ಟದಳಕಮಲ ಮಧ್ಯ | 

ಶ್ರೀನಿವಾಸಮೂರ್ತಿ ನಿಲ್ಲಿಸಿ ಬಾಹ್ಯದಲಿ | ಏನೇನು ಪೂಜೆಗಳ ಅದನೆ ತಿಳಿದು ಮಾಡೊ ||೬|| 

 

ಗುಣ ನಾಲ್ಕರಿಂದ ಉಪಾಸನೆಯನು ಮಾಡು | ಕ್ಷಣಕ್ಷಣಕೆ ಹರಿರೂಪ ನೀ ನೋಡುತ | 

ಅನುರೇಣು ಚೇತನಕೆ ತಾನೆ ನಿಯಾಮಕ | ಫಣಿಶಾಯಿಯಲ್ಲದೆ ಮತ್ತೊಬ್ಬರಿಲ್ಲವೆಂದು ||೭|| 

 

ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ | ಸಮ ವಿಷಯದ ತಿಳಿದು ಒಂದೆ ಭಕುತಿಯಲಿ |

ಸಮಾಧಿಗೊಳಗಾಗಿ ದಿವ್ಯದೃಷ್ಟಿಯಲಿ | ಕ್ರಮದಿಂದ ಭರಿತಭಾವವನು ಕಾಣೊ ||೮|| 

 

ಈ ಪರಿ ಧೇನಿಸಲು ದೇವ ಕರುಣವ ಮಾಳ್ಪ | ಪಾಪ ಸಂಚಿತವು ಪ್ರಾರಬ್ಧ ನಾಶ | 

ಅಪರೋಕ್ಷಿತನಾಗಿ ನಿನ್ನ ಯೋಗ್ಯತೆಯಿದ್ದಷ್ಟು | ಗೋಪಾಲವಿಠಲನೊಲಿವನಾಗ ||೯||

 

ಧಾನ್ಯ ದೊರಕಿತು ಎನಗೆ

ಧಾನ್ಯ ದೊರಕಿತು ಎನಗೆ| ಧನವು ದೊರಕಿತು ||ಪ|| 

ಓಣಿಯೊಳಗೆ ಹೋದ ಮಾ|ಣಿಕದ ಹರಳು ದೊರಕಿತೋ| ||ಅ|| 

 

ಕಟ್ಟಿ ಹಗೆಯ ಹಾಕುವುದಲ್ಲ| ಒಟ್ಟಿ ಕೆಸರ ಬಡಿಯುವುದಲ್ಲ||

ಮುಟ್ಟಿ ಹಿರಿದು ಮೇಯಿಸಿದರೊಂ|ದಿಷ್ಟು ಸೂಡು ಸವಿಯಲಿಲ್ಲ ||೧|| 

 

ಹರಿದು ಗೊಣಸು ಹಚ್ಚುವುದಲ್ಲ| ಮುರಿದು ಸಣ್ಣಗೆ ಮಾಡುವುದಲ್ಲ|| 

ಅರಿದು ಇದನು ಪೇಟೆಗೆ ಒಯ್ದರೆ| ಕರೆದು ಬೆಲೆಯನು ಕಟ್ಟುವುದಲ್ಲ ||೨|| 

 

ಪಾಲುಪಸುಗೆ ಹಂಚುವುದಲ್ಲ| ಮೇಲೆ ಚಾರರು ಒಯ್ಯುವುದಲ್ಲ||

ಶ್ರೀಲೋಲ ಪುರಂದರವಿಠಲನ| ಮೂಲನಾಮ ದೊರಕಿತಲ್ಲ ||೩||

 

ಧ್ಯಾನಿಸಲರಿಯೆ ನಿನ್ನ ಶ್ರೀನಿವಾಸ

 

ಧ್ಯಾನಿಸಲರಿಯೆ ನಿನ್ನ ಶ್ರೀನಿವಾಸ ||ಪ|| 

ಧ್ಯಾನಿಸಲರಿಯೆನು ದೀನಮಂದಾರ ನಿ |

ತ್ಯಾನಂದ ಮೂರ್ತಿಯಂದರಿತು ಹೃದಯದೊಳು ||ಅ|| 

 

ಯಮನಿಯಮಾಸನದಿ ಪ್ರಾಣಾಯಾಮ | ಕ್ರಮದಿ ಪ್ರತ್ಯಾಹಾರದಿ | ಭ್ರಮಗೊಳಿಸುವ ಮನವ ನಿಲಿಸಿಧಾರಣೆಯನು | 

ಪಮ ಸಮಾಧಿಯಲಿ ಹಂಮಮಯಂಬುವದು ಬಿಟ್ಟು ||೧||

 

ಪರಿಪರಿಶಾಸ್ತ್ರ ವೇದ ಪುರಾಣಗಳ | ತರತಮ ಭೇದಾಭೇದದುರವಿಗೆ ಸಾಕ್ಷಿಯಾ | 

ಗಿರುವ ತತ್ವೇಶರ ಗುರುವೆನಿಸುವ ನಿನ್ನ | ಚರಣಕಮಲವರಿತು ||೨|| 

 

ಮದಮತ್ಸರಾದಿಗಳು ಕೂಡಿಯನ್ನನು | ಬಾಧಿಸುತಿಪ್ಪವು ಅನುದಿನವು | ಸದಮಲಾತ್ಮಕ ಶ್ರವಣ ಮನನಗಳರಿಯೆ ಮೋ | ಹದ ಕೂಪದಲ್ಲಿ ಬಿದ್ದೆ ಗುರುರಾಮ ವಿಠಲನೆ ||೩||

 

ಧ್ಯಾನಿಸು ಮನುಜ ಮುದಮುನಿಪದವ

ಧ್ಯಾನಿಸು ಮನುಜ ಮುದಮುನಿಪದವ | ಹೀನ ಭವದಲಿ ಬಳಲುವಿ ಯಾಕೆ? |

ಮನಸಿನ ಕಲ್ಮಷ ಕಳೆದು ಘನ್ನ | ಜ್ಞಾನಮಾರ್ಗವ ತೋರುವರು | ವಾನರಕುಲದಿ ತಾನವತರಿಸಿ |

ಜಾನಕಿಪತಿಯ ಸೇವಕನೆನಿಸಿ | ವಾಣಿರಮಣನ ಪದವಾಂತು | ಪುನಃ ಭೂಭಾರಕ ಖಳ

ಕೃತಾಂತನ | ಈತನು ಜಗಕೆ ಜೀವನದಾತ | ಈತನ ಸ್ಮರಣೆ ಪಾತಕಹರವು | ಈತನೊಲಿದರೆ

ಭಯವಿಲ್ಲ ಮನುಜ | ಪ್ರೀತನಾಗುವ ನಿಜಶ್ರೀಕಾಂತನು | ಶ್ರೀಕರ ಶ್ಯಾಮಸುಂದರ ವಿಠಲನು |

ಲೋಕನಿಯಾಮಕನಹುದೆಂದು | ಈ ಕಲಿಯುಗದಿ ಸಂಸ್ಥಾಪಿಸಿ ಮೆರೆದ | ನಾಕಾಧಿಪನುತ

ಪಾವನನ |

 

ಧೀರೇಂದ್ರರನು ನಂಬಿರೋ

 

ಧೀರೇಂದ್ರರನು ನಂಬಿರೋ ಸಜ್ಜನರೆಲ್ಲಾ ||ಪ|| 

ಮಾರುತ ಮತದಲ್ಲಿ ವೀರರೆಂದೆನಿಸಿದ |ಮಾರಪಿತನಂಘ್ರಿ ಕಮಲವ ಭಜಿಸುವ ||ಅ|| 

 

ವರದೇಂದ್ರ ಕರಜರ ವರದಾ ತೀರಸ್ಥರ | 

ನಿರುತವು ಸೇವಿಸೆ ಪರಮ ಪದವಿಯ ನೀವ ||೧|| 

 

ಪುರುಷಸೂಕ್ತ ಅತಿ ಸುಲಭ ಭಾಷ್ಯವ ಗೈದ | 

ಪುರುಷಸಿಂಹ ನಾಮಹರಿಗೆ ಅರ್ಪಿಸಿದ ||೨|| 

 

ವರ ಭಾಷ್ಯ ಮೊದಲಾದ ಸದ್ಗ್ರಂಥಗಳನ್ನೆಲ್ಲ | 

ನೆರೆ ಪೇಳ್ವೆ ವರಗುರುಶಾಮಸುಂದರ ಪ್ರಿಯ ||೩||

 

 

ಧುಮ್ಮಸಾಲೆನ್ನಿರೈಯ್ಯಾ

ಧುಮ್ಮಸಾಲೆನ್ನಿರೈಯ್ಯಾ | ಒಮ್ಮೆ ಸಾಧು ಜನರು | ಬೊಮ್ಮನ ಪದವಪಡದ | 

ನಮ್ಮ ಮುಖ್ಯ ಪ್ರಾಣನ ||ಪ|| 

ನಷ್ಪರಾವಣನ ಬಾಲಕ್ಕಿಟ್ಟ ಬೆಂಕಿಯಿಂದ ಲಂಕಾ | 

ಪಟ್ಟಣದ ಸುಟ್ಟು ಬೊಬ್ಬೆ ನಿಟ್ಟ ಹನುಮಪ್ಪನಾ ||೧|| 

 

ಪಾಪಕರ್ಮಕೀಚಕಾದಿ | ಕಾಪುರುಷ ಕೌರವರಾ |

ಕೋಪಾಗ್ನಿಯಲಿ ಸುಟ್ಟ | ಭೂಪ ಭೀಮನಾ ||೨|| 

 

ಉದ್ಧಟ ದುರ್ವಾದಿಗಳಾ | ಸಿದ್ಧಾಂತವೆಂಬ

ವಹ್ನಿಯಲ್ಲಿ | ಬುದ್ಧಿಯಿಂದ ಉರಹಿದಾಪ್ರ | ಸಿದ್ಧಮಧ್ವರಾಯನಾ | ಮೂಲ ಗುರುವಾಗಿ ಜಗ |

ಪಾಲಿಸುವಾ ಮಹಿಪತಿ | ಬಾಲನ ಪ್ರಿಯ ಸಿರಿ | ಲೋಲನಿಜ ದಾಸನಾ ||೪||

 

ಧೂಪಾರತಿಯ ನೋಡುವ

ಧೂಪಾರತಿಯ ನೋಡುವ ಬನ್ನಿ ||ಪ|| 

 

ನಮ್ಮ| ಗೋಪಾಲಕೃಷ್ಣದೇವರ ಪೂಜೆಯ ||ಅ||

 

ಮುತ್ತು ಛತ್ರ ಚಾಮರ ಪತಾಕ ಧ್ವಜ| ರತ್ನ ಕೆತ್ತಿಸಿದ ಪದಕ ಹಾರಗಳು|| ಮತ್ತೆ

ಕೋಟಿಸೂರ್ಯಪ್ರಭೆಯ ಧಿಕ್ಕರಿಸುವ| ಸತ್ಯಭಾಮೆ ರುಗ್ಮಿಣಿಯರಸ ಶ್ರೀಕೃಷ್ಣನ ||೧||

 

ಢಣಢಣಢಣವೆಂಬ ತಾಳ ದಂಡಿಗೆ ಭೇರಿ| ಝಣಕು ಧಿಮಿಕು ಎಂಬ ಮದ್ದಳೆಯ||

ಝಣಝಣಿಸುವ ರವ ವೀಣೆ ಕಿನ್ನರಿಸ್ವರ| ಘನರಾಗದಿಂದಲಿ ಹಾಡುತ ಪಾಡುತಲಿ ||೨||

 

ಷಡಪಂಚ ಘಂಟೆ ಝಾಗಟೆಯು ಮೊದಲಾದ| ದೃಢವಾದ ವಾದ್ಯ ಮಂಗಲನಿನದದಲಿ||

ಪಡೆದ ಕಾಂತಿ ಧವಳ ಶಂಖದ ಪೂಜೆಗಳಿಂದ| ಒಡೆಯ ಶ್ರೀಯರಸನ ಸಂಭ್ರಮದ ಪೂಜೆಯ ||೩|| 

 

ಹರಿ ಸುರಪತಿ ವಿರಿಂಚಿಜನಕ| ಪರಮ ಮೂರುತಿ ಪುರುಷೋತ್ತಮನ||

ಪರದೈವವೆಂಬ ಶ್ರೀರಂಗನಾಥನಾದ| ಪುರಂದರವಿಠಲದೇವರ ಪೂಜೆಯ ||೪||

 

ಧೂಪಾರತಿಯ ನೋಡುವ

ಧೂಪಾರತಿಯ ನೋಡುವ ಬನ್ನಿ| ನಮ್ಮ| ಗೋಪಾಲಕೃಷ್ಣದೇವರ ಪೂಜೆಯ ||ಪ||

 

ಮದ್ದಳೆ ಜಾಗಟೆ ತಾಳ ದಂಡಿಗೆ ಭೇರಿ| ತದ್ಧಿಮಿ ಧಿಮಿಕೆಂದು ರಭಸಗಳು|| 

ಅದ್ಭುತ ಶಂಖನಾದಗಳಿಂದಲಿ ನಮ್ಮ| ಪದ್ಮನಾಭದೇವರ ದಿವ್ಯಪೂಜೆಯ ||೧|| 

 

ಅಗರು ಚಂದನ ಧೂಪ ಗುಗ್ಗುಳ ಸಾಂಬ್ರಾಣಿ| ಮಘಮಘಿಸುವ ಧೂಪದಾರತಿಯು|| 

ಮಿಗಿಲಾದ ಏಕಾರತಿ ಭಕ್ತಿಯಲಿ ನಮ್ಮ| ಜಗನ್ನಾಥವಿಠಲದೇವರ ಪೂಜೆಯ ||೨|| 

 

ಹರಿಸರ್ವೋತ್ತಮನ ಭಕ್ತರಾಧಾರನ| ಪರಮ ಮಂಗಳಮೂರ್ತಿ ಪಾವನನ|| 

ಪರದೈವವಾದಂಥ ಶ್ರೀರಂಗನಾಥನ| ಪುರಂದರವಿಠಲದೇವರ ಪೂಜೆಯ ||೩||

 


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023