ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ದಾಸರಪದ (ವ)

 

ವೃಂದಾವನಗಳಿಗಾನಮಿಸಿ ನಿತ್ಯ

ವೃಂದಾವನಗಳಿಗಾನಮಿಸಿ ನಿತ್ಯ| ನಂದ ತೀರ್ಥಮತೋದ್ಧಾರಕರೆನಿಪ ನವ ||ಪ|| 

ವರ ಮಧ್ವಮುನಿ ವಿಮಲಕರ ಪದ್ಮ ಸಂಜಾತ | ಗುರು ಪದ್ಮನಾಭ ಮಾಧವ ಕವೀಂದ್ರಾ | ಕರಸರೋರುಹ ||೧|| 

ಶ್ರೀ ಸುಧೀಂದ್ರಾರ್ಯರಪ್ರಪೌತ್ರರೆನಿಪ | ವಸುಧೀಂದ್ರ ವ್ಯಾಸರಾಯ ಶ್ರೀನಿವಾಸಮುನಿಯಾ | ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ | ರ್ದೋಷರನ ಮಾಡಿ  ಅಭಿಲಾಷೆ ಪೂರೈಸುತಿಹ ||೨|| 

ದೇವತೆಗಳು ಇವರು ಸಂದೇಹ ಬಡಸಲ್ಲಾ ಮಿ | ಥ್ಯಾವಾದಿಗಳ ಪರಾಭವ ಮಾಡಿ ಈ ವಸುಂಧರೆಯೊಳಗೆ ಕೀರ್ತಿಯುತರಾಗಿ ಲಕ್ಷ್ಮೀವರ ಜಗ  | ನ್ನಾಥ  ವಿಠಲನ  ಯೈದಿಹರಾ  ||೩||

ವೃಂದಾರಕ ವಂದ್ಯ ಯದುಕುಲಾಂಬುಧಿ  ಚಂದ್ರ

ವೃಂದಾರಕ  ವಂದ್ಯ ಯದುಕುಲಾಂಬುಧಿ ಚಂದ್ರ || ಪ || 

ಮೃಗಮದತಿಲಕ ವಿರಾಜಿತ ಖಳಶೂಲ | ಮೃಗನರ  ರೂಪಧೃತ ಸುಗುಣ ವಿಶಾಲ ||೧|| 

ಖಗಾಸನ ಕಮಲಾರಮಣ  ಕಲಿನಾಶ | ಖಗಮುಕ್ತಿದಾಯಕ ಕನಕಗೇಶ ||೨|| 

ಮಣಿಮಯ ಭೂಷಣಾಮಿತ ಭೃತ್ಯ ಚಿಂತಾ | ಮಣಿ ಕಲ್ಪಕುಜ  ಧೇನು ಮಹಿಮಾನಂತ ||೩|| 

ಸ್ವಾಮಿಪುಷ್ಕರ  ವರ ಸನ್ನಿದಸದನ | ಸ್ವಾಮಿ ವರಾಹ ಹಿರಣ್ಯಾ0ಕ ಮಥನ ||೪|| 

ರಾಕೇಂದುಕೋಟಿ ಪ್ರಕಾಶ ಕಲುಷ ನೀ | ರಾಕೃತ ನಮೋ ಪ್ರಸನ್ವೆಂಕಟೇಶ ||೫||   

ವೃಥಾ ಭವದಿ ಮೆರೆದೆ

ವೃಥಾ ಭವದಿ ಮೆರೆದೆ | ರಥಚರಣಧರನ ಸ್ಮೃತಿಯನೆ ಮರೆದೆ || ಪ || 

ಸತಿಸುತರೆನ್ನವರತಿಶಯ ಗೃಹಧನ | ಪತಿಯು ನಾನೆಂಬೊ ಮಮತೆವಿಡಿದು | ರತಿಪತಿಪಿತನಂಘ್ರೆರತಿ ಲೇಶವಿಲ್ಲದೆ | ಸತತ ಯಮಪುರದ ಪಥವನೆ ಪಿಡಿದು ||೧|| 

ಅತಿಥಿಗಳೊಲ್ಲದೆ ಯತಿಪೂಜೆಯಿಲ್ಲದೆ | ಪೂತಿ ಮಲಭಾಂಡ ಭರಿತನಾಗಿ | ಚತುರ್ಮುಖನಯ್ಯನ ವ್ರತವ ಬಿಸುಟು ಅನ್ಯ | ಪತಿತ ಮಾರ್ಗವ ಪೊಂದಿ ಹತಭಾಗ್ಯನಾಗಿ ||೨|| 

ಮಿತಮನರಹಿತ ದುರ್ಮತಪಂಡಿತನಾಗಿ | ಪ್ರತಿಬೊಮ್ಮ ರಕ್ಕಸೋನ್ನತನೆನಿಸಿ | ಅತಿ ಪ್ರಾಜ್ಞಶಾಸ್ತ್ರದೇವತೆ ಪ್ರಸನ್ವೆಂಕಟ | ಪತಿಯನೆ ಬಿಟ್ಟಿನ್ನಿತರವ ಭಜಿಸಿ ||೩||

ವೃಂದಾವನದಲಿ ನಿಂದು  ರಾಜಿಪನ್ಯಾರೆ ಪೇಳಮ್ಮಯ್ಯ

ವೃಂದಾವನದಲಿ  ನಿಂದು ರಾಜಿಪನ್ಯಾರೆ ಪೇಳಮ್ಮಯ್ಯ || ಪ || 

ಬಂದ ಜನರಘ ವೃಂದ ತಳೆದು ಅ - | ನಂದಕೊಡುವೊ ರಾಘವೇಂದ್ರ ಕಾಣಮ್ಮ ||ಅ|| 

ನತಿಸುವ ಜನರನ ಹಿತದಲಿ ಪಾಲಿಪನ್ಯಾರೇ ಪೇಳಮ್ಮಯ್ಯ | 

ಸತಿಯರು ಬೇಡಲು ಸುತರನ  ನೀಡುವನ್ಯಾರೇ ಪೇಳಮ್ಮಯ್ಯ | 

ಮತಿಹರಿಹತರಿಗೆ ಶುಭ ಮತಿಯನು | ನೀಡುವನ್ಯಾರೆ ಪೇಳಮ್ಮಯ್ಯ | 

ಪತಿತಪಾವನ ಶ್ರೀಪತಿ ಕರುಣದಲಿ | ವಿತತ ಮಹಿಮ ಗುರುವರ್ಯ ಕಾಣಮ್ಮ ||೧|| 

 

ಕುಸ್ಟರೋಗಗಳ ನಸ್ಟಮಾಡುವನ್ಯಾರೇ ಪೇಳಮ್ಮಯ್ಯ | 

ದೃಷ್ಟಿಹೀನರಿಗೆ  ಶುಭದೃಷ್ಟಿಯ ನೀಡುವನ್ಯಾರೆ ಪೇಳಮ್ಮಯ್ಯ | 

ಅಸ್ಟ ದಾರಿದ್ರ್ಯತಿ ಕಷ್ಟವ ತಿರೆಯುವನ್ಯಾರೇ ಪೇಳಮ್ಮಯ್ಯ | 

ಶಿಷ್ಟಜನರೊಳತಿ ಶ್ರೇಷ್ಠನೆನಿಸಿ | ಸೃಷ್ಠಿ ಜನಗಲಿಗಭೀಷ್ಟವ ನೀತಮ್ಮಾ ||೨|| 

 

ಭೂತಪ್ರೇತಗಳ ಭೀತಿಯ ಬಡಿಸುವನ್ಯಾರೇ ಪೇಳಮ್ಮಯ್ಯ | 

ಮಾತಪಿತರ ತೆರ ದೂತರ ಪಾಲಿಪನ್ಯಾರೇ ಪೇಳಮ್ಮಯ್ಯ | 

ನೀತ ಮಹಿಮೆಯನೀತರ ತೋರುವಾನ್ಯಾರೇ ಪೇಳಮ್ಮಯ್ಯ | 

ನೀತ ಮಹಿಮೆಯನೀತೆರ ತೋರುವನ್ಯಾರೇ ಪೇ ಳಮ್ಮಯ್ಯ | 

ದಾತ ಗುರುಜಗನ್ನಾಥವಿಠಲಗತಿ | ಪ್ರೀತಿಕರ ಯತಿನಾಥ ಕಾಣಮ್ಮ ||೩||

ವೃಂದಾವನದಲಿ ನಿಂತ ಸುಯತಿವರನ್ಯಾರೇ

ವೃಂದಾವನದಲಿ ನಿಂತ ಸುಯತಿವರನ್ಯಾರೇ  ಪೇಳಮ್ಮಯ್ಯ ||ಪ|| 

ವಂದಿಪ ಜನರಿಗೆ ನಂದ ಕೊಡುವೊ ರಾಘ - | ವೇಂದ್ರ ಮುನಿವರನೀತ ನೋಡಮ್ಮ ||ಅ|| 

 

ಇಂದಿರೆ ರಮಣನ ಛಂದದಿ ಭಜಿಸ್ಯಾ - | ನಂದದಲಿಹನ್ಯಾರೇ ಪೇಳಮ್ಮಯ್ಯಾ | 

ನಂದತೀರ್ಥಮತ ಸಿಂಧುವರಕೆ ಬಾಲ - | ಚಂದಿರನೆನಿಸಹನ್ಯಾರೇ ಪೇಳಮ್ಮಯ್ಯ | 

ಮಂದಜನವ ಹರಿ ಕಂದುಗೊರಳರ | ವೃಂದದಿ ಶೋಭಿಪನ್ಯಾರೆ ಪೇಳಮ್ಮಯ್ಯ| 

ಹಿಂದೆ ವ್ಯಾಸಮುನಿ ಎಂದು ಕರೆಸಿದ ರಾಘ - | ವೇಂದ್ರ ಗುರುವರ – ನೀತ ನೋಡಮ್ಮ ||೧|| 

 

ನತಿಸುವ ಜನರಿಗೆ ಸತಿಸುತರನು ಬಲು | ಹಿತದಲಿ ನೀಡುವನ್ಯಾರೆ ಪೇಳಮ್ಮಯ್ಯ | 

ಪ್ರತಿದಿನ ತನ್ನನು ಮತಿಪೂರ್ವಕ ಬಲು | ತುತಿಪರ ಪಾಲಿಪನ್ಯಾರೇ ಪೇಳಮ್ಮಯ್ಯ | 

ಮತಿಯುತ ಪಂಡಿತ ತತಿಯಭಿಲಾಷವ | ಸತತ ಪೂರ್ತಿಪನ್ಯಾರೇ ಪೇಳಮ್ಮಯ್ಯ | 

ಕ್ಷಿತಿಸುರರಿಗೆ ಸದ್ಗತಿದಾಯಕ ಮಹ | ಯತಿಕುಲವರ ಗುರುರಾಯರ ಕಾಣಮ್ಮ ||೨|| 

 

ಮಾತೆಯು ಸುತರಲಿ ಪ್ರೀತಿಗೊಳಿಸುವ | ತಾತನ – ತೆರದಿಹನ್ಯಾರೇ ಪೇಳಮ್ಮಯ್ಯ | 

ಪ್ರೇತನಾಥ ಮಹ ಭೂತಗಣಗಳ | ಭೀತಿಯ ಬಿದಿಸುವನ್ಯಾರೇ ಪೇಳಮ್ಮಯ್ಯ | 

ಭೂತಳ ಜನಕೃತ ಪಾತಕ ಕಾನನ | ವೀತಿಹೋತ್ರತೆರನ್ಯಾರೇ ಪೇಳಮ್ಮಯ್ಯ | 

ದಾತ ಗುರುಜಗನ್ನಾಥವಿಠಲ  ನಿಜ | ದೂತ ಜನಕ ಮಹದಾತನೀತಮ್ಮ ||೩||

 

ವೃಂದಾವನ ನೋಡಿರೋ

ವೃಂದಾವನ ನೋಡಿರೋ – ಗುರುಗಳ ವೃಂದಾವನ ಪಾಡಿರೋ ||ಪ|| 

ವೃಂದಾವನ ನೋಡಿ – ಆನಂದ ಮದವೇರಿ ಚೆಂದದಿ ದ್ವಾದಶ ಪೌಂಡ್ರಂಕಿತಗೊಂಬ ||ಅ|| 

ತುಂಗಭದ್ರಾನದಿಯ ತೀರದಿ ಇದ್ದ ತುಂಗಾ ಮಂಟಪ ಮಧ್ಯದಿ ಶೃಂಗಾರ ತುಳಸಿ ಪದ್ಮಾಕ್ಷ ಸರಗಳಿಂದ ಮಂಗಳಕರ ಮಹಾ ಮಹಿಮೆಯಿಂದೊಪ್ಪುವ ||೧|| 

ದೇಶ ದೇಶದಿ ಮೆಚ್ಚುತ – ಇಲ್ಲಿಗೆ ಬಂದು ವಾಸವಾಗಿ ಸೇವಿಪ ಭಾಷೆ ಕೊಟ್ಟಮದದಿ ಬಹುವಿಧ ವರಗಳ ಸೂಸುವ ಕರ ಮಹಾಮಹಿಮೆಯಿಂದೊಪ್ಪುವ ||೨|| 

ನಿತ್ಯ ಸನ್ನಿಧಿ ಸೇವಿಪ – ಭಕ್ತರಿಗೆಲ್ಲ ಮತ್ತಭೀಷ್ಟವ ಕೊಡುತ ಪತ್ಯಾಧಿಗುಣ ಸಿಂಧು ವೆಂಕಟವಿಠಲನ ನಿತ್ಯ ಸನ್ನಿಧಿಯಿಂದ ನಿರುತ ಪೂಜೆಯಗೊಂಬ ||೩||

ವೃಂದಾವನದೇವಿ ನಮೋ ನಮೋ

ವೃಂದಾವನದೇವಿ ನಮೋ ನಮೋ | ಚೆಲ್ವ | ಮಂದರಧರನ ಮನಃಪ್ರಿಯಳೆ || ವೃಂದಾವನದೇವಿ ನಮೋ ನಮೋ ||ಪ||

 ನಿನ್ನ ಸೇವಿಸಿ ಉದಕವನೆರೆಯಲು | ಮುನ್ನ ಮಾಡಿದ ಪಾಪ ಹೋಗುವುದು|| 

ಎನ್ನ ಇಪ್ಪತೊಂದು ಕುಲದವರಿಗೆಲ್ಲ || ಉನ್ನಂತ ವೈಕುಂಠ ಪದವೀವಳೆ ||೧|| 

 

ಒಂದೊಂದು ದಳದಲ್ಲಿ ಒಂದೊಂದು ಮೂರುತಿ | ಸಂದಣಿಸಿವೆ ಬಹುಗುಪಿತದಲಿ || 

ಬಂದು ಕುಂಕುಮ ಶಂಖ ಚಕ್ರ ಧರಿಸಿದರೆ | ತಂದೆ ನಾರಾಯಣ ಕರೆದೊಯ್ಯುವ ||೨|| 

 

ಹರಿಗೆ ಸಮರ್ಪಿಸಿದ ತುಳಸಿ ನಿರ್ಮಾಲ್ಯವ | ಕೊರೊಲೊಳು ಧರಿಸಿ ಕರ್ಣದೊಲಳಿಟ್ಟರೆ|| 

ದುರಿತರಾಶಿಗಳೆಲ್ಲ ಅಂಜಿ ಓಡುತಲಿವೆ| ಹರಿಯು ತನ್ನವರೆಂದು ಕೈಪಿಡಿವ ||೩|| 

 

ಹತ್ತು ಪ್ರದಕ್ಷಿಣೆ ಹತ್ತು ವಂದನೆ ಮಾಡೆ| ಉತ್ತಮ ವೈಕುಂಠಪದವೀವಳೇ|| 

ಭಕ್ತಿಯಿಂದಲೆ ಬಂದು ಕೈ ಮುಗಿದವರನ್ನು| ಕರ್ತು ನಾರಾಯಣ ಕರೆದೊಯ್ವನು ||೪|| 

 

ಆವಾವ ಪರಿಯಲ್ಲಿ ಸೇವೆಯ ಮಾಡಲು | ಪಾವನ ವೈಕುಂಠಪದವೀವಳೇ|| 

ದೇವ ಶ್ರೀಪುರಂದರವಿಠಲರಾಯನ ದೇವಿ ನಿನ್ನ ಮುಟ್ಟಿ ತ್ರಾಹಿಎಂಬೆ ||೫||

ವೃಂದಾವನದೊಳಾಡುವನ್ಯಾರೆ

ವೃಂದಾವನದೊಳಾಡುವನ್ಯಾರೆ | ಗೋಪಿ |  ಚಂದಿರವದನೆ ನೋಡುವ ಬಾರೆ ||ಪ|| 

 

ಅರುಣಪಲ್ಲವಪಾದಯುಗಳನೆ| ದಿವ್ಯ| ಮರಕತ ಮಂಜುಳಾಭರಣನೆ|| 

ಸಿರಿವರ ಯದುಕುಲಸೋಮನೆ|ಇಂಥ | ಪರಿಪೂರ್ಣಕಾಮ ನಿಸ್ಸೀಮನೆ ||೧|| 

 

ಹಾರಹೀರಗುಣಧಾರನೆ| ದಿವ್ಯ| ಸಾರ ಶರೀರಶೃಂಗಾರನೆ || 

ಆರಿಗಾದರು ಮನದೂರನೆ| ತನ್ನ | ಸೇರಿದವರ ಮಾತ ಮೀರನೆ||೨||

 

ಮಕರಕುಂಡಲಕಾಂತಿಭರಿತನೆ | ದಿವ್ಯ ಅಕಳಂಕರೂಪಲಾವಣ್ಯನೆ || 

ಸಕಲರೊಳಗೆ ದೇವನೀತನೆ | ನಮ್ಮ| ಮುಕುತೀಶ ಪುರಂದರವಿಠಲನೆ ||೩||

 

ವೃಂದಾವನವೇ ಮಂದಿರವಾಗಿಹ

ವೃಂದಾವನವೇ ಮಂದಿರವಾಗಿಹ | ಇಂದಿರೆ  ಶ್ರೀ ತುಳಸಿ  ||ಪ|| 

ನಮ್ಮ| ನಂದನ ಕಂದ ಮುಕುಂದಗೆ ಪ್ರಿಯವಾದ | ಚಂದಾದ ಕೊರಳಲಿಟ್ಟ ಶ್ರೀತುಲಸಿ ||ಅ|| 

 

ತುಲಸಿ ವನದಲ್ಲಿ ಹರಿ ಇಹನೆಂಬೋದು| ಶ್ರುತಿ ಸಾರುತಿದೆ ಕೇಳಿ|| 

ತುಲಸೀ ದರ್ಶನದಿಂದ ದುರಿತಗಳೆಲ್ಲ | ಹರಿದು ಹೋಗೋದು ಕೇಳಿ|| 

ತುಲಸೀ ಸ್ಪರ್ಶದಿಂದ ದೇಹ  ಪಾವನವೆಂದು| ನೀವೆಲ್ಲ ತಿಳಿದು ಕೇಳಿ|| 

ತುಲಸೀಸ್ಮರಣೆ ಮಾಡಿ  ಸಕಲಿಷ್ಟವ ಪಡೆದು| ಸುಖದಲಿ ನೀವು ಬಾಳಿ||೧|| 

ಮೂಲಮೃತ್ತಿಕೆಯನು  ಧರಿಸಿದ ಮಾತ್ರದಿ | ಮೂರು ಲೋಕವಶವಾಹುದು| 

ಮಾಲೆಗಳನೆ  ಕೊರಳಲಿಟ್ಟ ಮನುಜಗೆ | ಮುಕ್ತಿಮಾರ್ಗನೀವುದು||  

ಕಾಲ ಕಾಲಗಳಲ್ಲಿ ಮಾಡಿದ ದುಷ್ಕರ್ಮ| ಕಳೆದು ಬಿಸುಟು ಹೋಗೋದು| 

ಕಾಲನ ದೂತರ ಅಟ್ಟಿ ಕೈವಲ್ಯವ | ಲೀಲೆಯ ತೋರುವುದು ||೨|| 

 

ಧರೆಯೊಳು ಸುಜನರ ಮರೆಯದೆ ಸಲಹುವ | ವರ ಲಕ್ಷ್ಮೀ ಶ್ರೀತುಲಸಿ | 

ಪರಮ ಭಕ್ತರ ಪಾಪಗಳೆಲ್ಲ ತರಿದು | ಪಾವನ ಮಾಡುವಳು ತುಲಸಿ | 

ಸಿರಿ ಆಯು ಪುತ್ರಾದಿಸಂಪತ್ತುಗಳನಿತ್ತು | ಹರುಷವೀವಳು ತುಲಸಿ | 

ಪುರಂದರವಿಠಲನ್ನ ಚರಣಕಮಲದ | ಸ್ಮರಣೆ ಕೊಡುವಳು ತುಳಸಿ ||೩||

 

ವೃಂದಾವನ ದರುಶನವಾಯಿತು

ವೃಂದಾವನ ದರುಶನವಾಯಿತು | ಇಂದು ಪೋದವುಭವ ವೃಂದಾವನಗಳೆಲ್ಲ ||ಪ|| 

 

ಕುಂದು ಕೊರತೆಯಿಲ್ಲದ ಜ್ಞಾನಗಳೂ | ಬಂದು ಘಟಿಸಿತು ಭಕುತಿ ವೈರಾಗ್ಯ | 

ಇಂದಿನದಿನ ಆನಂದಪುಟ್ಟಿ ಹರಿ | ದ್ವಂದ್ವ ಪದಗಳನು ತೋರಿಸುವಂಥ ||೧|| 

 

ಹಾಟಕರತ್ನ ಖಚಿತವಾದಂಥಾ | ಮಾಟಮಾದವು ಆಭರಣಗಳೂ | 

ಸಾಟಿಯಿಲ್ಲದ ಪುಷ್ಪಮಾಲವ ಧರಿಸಿದ | ಕೋಟಿ ಸೂರ್ಯಪ್ರಭೆ ಸೋಲಿಸುವಂಥ ||೨|| 

 

ನೋಡಿದನಯನ ಅನ್ಯತ್ರನೋಡವೂ | ಪಾಡಿದ ಜಿಹ್ವಾ ಅನ್ಯತ್ರಪಾಡವೂ | 

ನಾಡಿನೊಳಿಂಥಾ ಶ್ರೀಪಾದ ರಾಜರಿಗೆ | ಈಡುಗಾಣೆ ಮುದ್ದುಮೋಹನವಿಠಲ ||೩||

ವೆಂಕಟೇಶ ಮಂತ್ರ ಒಂದೇ

ವೆಂಕಟೇಶ ಮಂತ್ರ ಒಂದೇ |ಸಂಕಟ  ಪರಿಹರಿಸಿ ಸಂಪದವಿಯ ಕೊಡುವ ||ಪ|| 

 

ಬಲನ ಭೂಸುರಹತ ಪೋಗಾಡಿದ ಮಂತ್ರಾ  | ಬಲಿಯ ಕನಕ ಸ್ತೇಯ ಕಳೆದ ಮಂತ್ರಾ || 

ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ | ಕಲಿಯುಗದೊಳಗಿದೆ ಸಿದ್ಧ ಮಂತ್ರಾ ||೧||

 

ವೃದ್ಧ ಬ್ರಾಹ್ಮಣನಿಗೆ ಪ್ರಾಯವನು ಕೊಟ್ಟ ಮಂತ್ರಾ | ಶುದ್ಧನ್ನ ಪರಿಶುದ್ಧ್ಹ ಮಾಳ್ಪ ಮಂತ್ರಾ |  

ಉದ್ಧರಿಸಿ ಶಿಲೆಯನ್ನು ಸ್ತ್ರೀಯ ಮಾಡಿದ ಮಂತ್ರಾ| ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ  ||೨|| 

 

ಗುರು ತಲ್ಪಕನ  ದೋಷ ನಾಶ ಮಾಡಿದ ಮಂತ್ರಾ | ಹರನ ಸುತ ಬರಲವನ ಪೊರೆದ ಮಂತ್ರಾ | 

ಸ್ಮರಿಸಲಾಕ್ಷಣ ಒಮ್ಮೆ ಮುಂದೆ ನಿಲುವ ಮಂತ್ರಾ | ಅರಸರಿಗೆ ವಲಿದಿಪ್ಪ ಆದಿ ಮಂತ್ರಾ ||೩|| 

 

ಅಜ ಭವಾದಿಗಳಿಗೆ ಪಟ್ಟಗಟ್ಟಿದ ಮಂತ್ರ| ರಜ ದೂರವಾಗಿದ್ದ ರಮ್ಯವಾದ ಮಂತ್ರಾ | 

ಕುಜನ ಕುಲವನಕೆ ಕುಠಾರ ಮಂತ್ರಾ | ಪ್ರಣವ ಪೂರ್ವಕಾಲದಿಂದ ಜಪಿಸಲು ವೊಲಿವ ಮಂತ್ರಾ ||೪||

 

ಅಣು ಮಹತ್ತಿನಲಿ ಪರಿಪೂರ್ಣ ಮಂತ್ರಾ | ಫಣಿಶೈಲ ನಿಲಯ ಸಿರಿ ವಿಜಯವಿಠಲನ ಮಂತ್ರಾ | 

ಕ್ಷಣ ಕ್ಷಣಕೆ ಬಲ್ಲವರಿಗೆ ಪ್ರಾಣ ಮಂತ್ರಾ ||೫||

 

ವೆಂಕಟಪತಿ ಶರಣು ಹಾಹಾ

ವೆಂಕಟಪತಿ ಶರಣು ಹಾಹಾ ವೆಂಕಟಪತಿ ಶರಣು ||ಪ|| 

ಕಮಲಸಂಭವನುತ ಚರಣ ಶುಭಾಕಮಲಾರಿಕುಳಭರಣ | 

ಕಮಲಸುಖ ಸಂತಾರುಣ ಕಿರಣ ಕರುಣಾಸಂಪೂರ್ಣ ||೧|| 

 

ಸಿರಿ ಭೂದೇವಿಯರ ರಮಣ ದಿವ್ಯಸರಸಾಕ್ಷ ಖಗವರಗಮನ | 

ಸುರರಿಪುಗಣಾಸುರದಮನ ಭವಹರ ಸುರವರಸಮ ನಾಮ ನಮೊ ||೨|| 

 

ಶೇಶಗಿರಿಯತಟನಿಲಯ ಫಣಶೇಷಭೂಷಣ ಮಣಿ ನಿಲಯ | 

ಪ್ರಸನ್ವೆಂಕಟ ತಿರುಮಲೆಯೊಳಿಹ  ಚೆಲುವ ಸ್ವಸುಖ ಭೋಕ್ತ ಭಕ್ತರಾಶ್ರಯ ||೩||

 

ವೆಂಕಟಾದ್ರಿವರದ ಶಂಕರನುತಪಾದ

ವೆಂಕಟಾದ್ರಿವರದ ಶಂಕರನುತಪಾದ ||ಪ|| 

ಶಂಖಾರಿ ಅಹಿಪರಿಯಂಕಶಾಯಿ ಉದಾರಿ | ಕಿಂಕರಕೋಶ ಸಂಕಟನಾಶ | ಪಂಕಜನಾಭಸಂಖ್ಯಾತ ರವಿಭಾ||೧|| 

ಗಜಬಂಧನ ನಿವಾರಿಕುಜಮಸ್ತಕವಿದಾರಿ | ಅಜಮಿಳರಕ್ಷ ನಿಜಜನಪಕ್ಷ | ಕುಜನ ವಿಶಿಕ್ಷಾಂಬುಜ ಪತ್ರಾಕ್ಷ ||೨|| 

ಕಂಸ ಮಥನನಕಾರಿ ಹಂಸಡಿಬಿಕ ವೈರಿ | ಸಂಶಯಹರ ಗೋಪಾಂಸು ಲಿಪ್ತಾಂಗ ಹಿ | ಮಾಂಶುಕುಲೇಶ ಭವಶರಧಿನಾಶ ||೩|| 

ಭೈಶ್ಮೀ ಸತ್ಯರಮಣ ಭೂಷಿತ ಅಖಿಳಾಭರಣ | ದ್ವೇಷಕೃತ ದಮಘೋಷಜಹರ ಮ | ಹೀಶೆಜ್ಞ ಭೋಕ್ತಾಗ್ರೇಸರ ಶಕ್ತ ||೪|| 

ಸ್ವಾಮಿ ತೀರ್ಥಕರ್ತ ಕಾಮಿತ ಫಲದಾತ | ಸ್ವಾಮಿ ಪ್ರಸನ್ವೆಂಕಟಾಮಲ ಮೂರ್ತಿ | ನಾ ಮೊರೆಹೋಗುವೆ ಪ್ರೇಮದ ಪ್ರಭುವೆ ||೫||

 

ವೆಂಕಟಾದ್ರಿ ನಿಲಯನ ಪಂಕಜನಾಭನ

ವೆಂಕಟಾದ್ರಿ ನಿಲಯನ ಪಂಕಜನಾಭನ ತೋರವ್ವ ಲಕುಮಿ ||ಪ|| 

ವಸುದೇವ ದೇವಕಿ ಕಂದಾ – ನಮ್ಮ ಶಶಿಮುಖಿಯರೊಡನೆ ಆನಂದಾ ಪಶುಗಳ ಕಾಯ್ದ ಗೋವಿಂದ – ನಮ್ಮ ಬಿಸಜನಾಭ ಮುಕುಂದಾ ||೧|| 

ಸಾಮರಾಜ ವರದಾ – ಬಲು ಪ್ರೇಮದಿ ಭಕುತರಪೊರೆದಾ ಆ ಮಹಾ ದಿತಿಜರ ತರಿದಾ – ನಿ ಸ್ಸೀಮ ಮಹಾಮಹಿಮನಾಗಿ ಮೆರೆದ – ನಮ್ಮ ||೨|| 

ಉರಗಗಿರಿಯಲಿಪ್ಪ – ಅಂದು ಮರುತನ ಹೆಗಲೇರಿ ಬಪ್ಪ ಶರಣಗೊರವಿತ್ತ ತಪ್ಪ ಸಿರಿ ಮೋಹನ ವಿಠಲ ತಿಮ್ಮಪ್ಪ – ನಮ್ಮಪ್ಪನ ||೩||

ವೆಂಕಟೇಶ ನಿನ್ನ ನಾಮಕ್ಕೆ

ವೆಂಕಟೇಶ ನಿನ್ನ ನಾಮಕ್ಕೆ | ಮೊದಲು ನಾಕಕ್ಷರಗಳು ನೋಡೈ  ||ಪ|| 

ಬಿಂಕವಾದ ನಾಲ್ಕು ವೇದಶಾಸ್ತ್ರ ಪುರಾಣಗಳಿದರಿನ್ದೈ ||ಅ|| 

 

ವೇದವೊಯ್ದನ ಸಾಗಿಸಿ ಗೆದ್ದೆ ಮೊದಲು ನೀನಲ್ಲವೆ | 

ವೇಷವ ತಾಳಿದೆ ಶರಧಿಯ ಮಥನ ಲೇಸು ನಿನಗಲ್ಲವೆ || 

ವೇಗದಿಂದಲಿ ಎತ್ತಿ ದೈತ್ಯನ ಸೀಳಿದೆ ನೀನಲ್ಲವೆ| 

ವೆಕ್ಕಸ ಇಹ ಪಾತಕನ ಕರುಳು ನಿನಗೆ ಒಂದು ಮಾಲೆಯಾಗಿಲ್ಲವೆ ||೧|| 

 

ಕಂಮು ಮಾಡಿ ಮೂರುತಿಯಲ್ಲಿ ಬಲಿಯ ಹಾಕಿದೆ ಪಾತಾಳಕ್ಕೆ| 

ಕಲ್ಮಷ ನುಡಿಯ ಸುತನ ಕೈಯ ಮಾತೆಯ ಕೊಲ್ಲೋದಕ್ಕೆ || 

ಕಡ ನಿಲ್ಲದೆ ವನವಾಸಕ್ಕೆ ಬಂದೆ ಸೀತೆಯ ಹುಡುಕುವುದಕ್ಕೆ | 

ಕಂಸಮಾವನ ಕೊಂದೆ ತಂದೆತಾಯಿಗಳ ಬಿಡಿಸೋದಕ್ಕೆ ||೨|| 

 

ಟೇಕಿಮಾಡಿ ಮೂರ್ಪುರ ಸತಿಯರ ವೃತವ ಕೆಡಿಸಿಬಿಟ್ಟೆ | 

ಟಕ್ಕಿಸಿ ಎಡಬಲ ಲಕ್ಷ್ಮಿಯ ತೆಗೆದು ವೃಕ್ಷಸ್ಥಳದಲಿಟ್ಟೆ|| 

ಟಂಕಿ ಬೆಳ್ಳಿ ಟಂಕಿ ನರಲೋಕಕ್ಕೆ ಉಡುಪಿಗೆ ಮನಸಿಟ್ಟೆ | 

ಟೀರ್ಕೋಡಿಯಲಿ ಟ್ಟಾಣವ ಹಾಕಿದೆ ಜಗದ ಕುದುರೆಯ ಬಿಟ್ಟೆ ||೩|| 

 

ಶಾಕದ ತುದಿಯಲ್ಲಿ ಶಾಂತಪಾಂಡವರು ದ್ರೌಪದಿ ವನವಾಸ | 

ಶ್ಯಾಮಸುಂದರ ಶರಣು ಸಜ್ಜನ ಗುರುಚಂದ್ರ ಭಾಸ|| 

ಶ್ಯಾಮ ಸಹಿತ ಬಹು ಮುಕ್ತಿಯ ಪೊಂದಿದ ರುಕ್ಮಾಂಗದಪೋಷ | 

ಶಾಶ್ವತ ಸಲಹುವ ಪುರಂದರವಿಠಲ ಕಲಿಯುಗ ವೇಂಕಟೇಶ ||೪||

ವೆಂಕಟೇಶ  ಬೇಡಿಕೊಂಬೆ

ವೆಂಕಟೇಶ  ಬೇಡಿಕೊಂಬೆ ಕೃಪೆಯ ಪಾಲಿಸೊ ||ಪ|| 

ಬ್ರಹ್ಮ| ಶಂಕರಾದಿವಂದ್ಯ ಎನಗೆ ಮುಕ್ತಿ ತೋರಿಸೊ ||ಅ ಪ|| 

ನಷ್ಟ ಮೊದಲಾದಂಥ ಕಷ್ಟ ಬಿಡಿಸೊ | ನಿನ್ನ | 

ಪಟ್ಟದ ರಾಣಿಗೆ ಹೇಳಿ ಪದವಿ ಕೊಡಿಸೊ || 

ಇಷ್ಟ ಭಕ್ತ ಜನರೊಳು ಎನ್ನ ಸೇರಿಸೊ| ಈ | 

ಸೃಷ್ಟಿಯೊಳು ನಿನ್ನ ದಾಸದಾಸನೆನಿಸೊ ||೧|| 

 

ಉಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ| 

ಪೊಂ| ಬಟ್ಟಲೊಳಗಿನ ಹಾಲು ಉಚ್ಚಿಷ್ಟ ಹಾಕಿಸೊ|| 

ಘಟ್ಯಾಗಿ ಸಕ್ಕರೆ ತುಪ್ಪ ರೊಟ್ಟಿ ಉಣ್ಣಿಸೊ| 

ಮುಂದೆ| ಹುಟ್ಟಿ ಬಹ ಜನ್ಮಂಗಳ ಎನಗೆ ಬಿಡಿಸೊ ||೨|| 

ಕಿಟ್ಟಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೊ|

 ಉ | ತ್ಕ್ರುಷ್ಟ ಬಂಗಾರದೊಳು ಎನ್ನ ಸೇರಿಸೊ|| 

ಬೆಟ್ಟಿಗೆ ಉಂಗುರ ಮಾಡಿ ಎನ್ನ ಧರಿಸೊ| 

ಸ್ವಾಮಿ| ದಿಟ್ಟ ಪುರಂದರವಿಠಲನೆ ದಯದಿ ಪಾಲಿಸೊ ||೩||

 

 

ವೆಂಕಟರಮಣನೆ ಬಾರೊ

ವೆಂಕಟರಮಣನೆ ಬಾರೊ ಶೇಷಾಚಲವಾಸನೆ ಬಾರೊ ||ಪ|| 

ಪಂಕಜನಾಭ ಪರಮಪವಿತ್ರ ಶಂಕರಮಿತ್ರನೆ ಬಾರೊ ||ಅ|| 

 

ಮುದ್ದುಮುಖದ ಮಗುವೆ ನಿನಗೆ ಮುದ್ದುಕೊಡುವೆನು ಬಾರೊ | 

ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು  ಬಾರೋ ||೧||

 

ಮಂದರಗಿರಿಯನೆತ್ತಿದಾನಂದ ಮೂರ್ತಿಯೆ ಬಾರೊ | 

ನಂದನಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೊ||೨|| 

 

ಕಾಮನಯ್ಯಕರುಣಾಳು ಶ್ಯಾಮಲವರ್ಣನೆ ಬಾರೊ | 

ಕೋಮಲಾಂಗ ಶ್ರೀಪುರಂದರವಿಠಲನೆ ಸ್ವಾಮಿರಾಯನೆ ಬಾರೋ ||೩||

ವೆಂಕಟೇಶಾ ವೆಂಕಟೇಶಾ

ವೆಂಕಟೇಶಾ ವೆಂಕಟೇಶಾ ||ಪ|| ಕಿಂಕರರಕ್ಷಕ ಹರಿ | ಣಾ೦ಕಸುಮುಖ ||ಅ|| 

 

ಬಳಲಿದೆ ಸಂಸ್ಕೃತಿಹಳುವದೊಳಲೆದು ನಿ | ನ್ನೆಲೆ ತೋರಿಸದೀ ಛಲ ಮಾಣೆಲೊ ||೧|| 

ಎನ್ನ ನೀ ಕೈ  ಬಿಟ್ಟರನ್ಯರಿಲ್ಲವೋ ಗತಿ || ಬಿನ್ನಪ ಕೇಲ್ಪಾಲಮುನ್ನೀರಾಗಾರ ||೨|| 

ಆರ್ತಹ್ನ೦ಬಳವಿತ್ತು ಕೀರ್ತಿ ಮೇರೆಯೋ ಹರಿ | ಕಾರ್ತಸ್ವರಾಚಲಮೂರ್ತಿ ಹರ್ತಾರ್ತಿ ||೩|| 

ದೇಶಾ ಕಾಲಾವಿದ್ಯ ಘಾಸಿಗೊಳಿಸಿ ಸರ್ವ | ನಾಶವಾಗದ ಮುನ್ನ ನೀ ಸಲಹೆಲೊ ||೪|| 

ತಂದೆವೆಂಕಟೇಶವಿಠಲ ನಿನಗಭಿ | ವಂದಿಸುವೆನೊ ಭವಬಂಧ ಬಿಡಿಸೊ ||೫||

 

ವೆಂಕಟೇಶ ಸಂಕಟಹರ ನಿರ್ಭೀತ

ವೆಂಕಟೇಶ ಸಂಕಟಹರ ನಿರ್ಭೀತ | ಕುಂತಿಯುತ ಸೂತ | ಭವ ವನಧಿಯ ಪೋತ ||ಪ|| 

ಬಿಂಕದಿಂದ ಪೊರೆ | ಕಿಂಕರ ಎನ್ನನು | ಮಂಕುಮತಿಯ ಕಳೆ | ಪಂಕಜ ಪಾಣಿಯೆ ||ಅ|| 

 

ಮಂದರೋದ್ಧಾರಿ ಸುಂದರ ಮುರವೈರಿ | ಬಾರಯ್ಯ ಶೌರಿ | ಎಂದೀಗೆ ಕಾಂಬೆನೊ ಕಂಸಾರೀ | 

ದನುಜ ಸಮಹಾರೀ || ಸಿಂಧುಶಯನ ಅರ | ವಿಂದ ನಯನ ಹೃ|ನ್ಮ0ದಿರದಲಿ ಆ | ನಂದವನೀಯೋ ||೧|| 

 

ಬಿಂಬಾನೆ ಗುರು ಗೋವಿಂದ ವಿಠಲಯ್ಯ | ನೀಯೆನ್ನ ಸಲಹಯ್ಯ | ತುಂಬೀಹ ಷದ್ವೈರಿಯ ಕಳೆಯಯ್ಯ | 

ನಿನ್ನಯ ಮಹಿಮೆಯ || ಹಂಬಲ ಹೃದಯಾಂಬರದೊಳು ತುಂಬಿಸಿ | ಪೊಂಬರಿಸಯ್ಯನೆ ತವಪದ ತೋರಿಸೊ ||೩|| 

 

ವೇಣುನಾದ ಪ್ರಿಯ ಗೋಪಾಲಕೃಷ್ಣ

ವೇಣುನಾದ ಪ್ರಿಯ ಗೋಪಾಲಕೃಷ್ಣ ||ಪ|| 

ವೇಣುನಾದ ವಿನೋದ ಮುಕುಂದ | ಗಾನವಿನೋದ ಶೃಂಗಾರ ಗೋಪಾಲ ||ಅ|| 

 

ವಂದಿತಚರಣ ವಸುಧೆಯಾಭರಣ | ಇಂದಿರಾರಮಣ ಇನಕೋಟಿತೇಜ | 

ಮಂಧರಧರ ಗೋವಿಂದ ಮುಕುಂದ | ಸಿಂಧುಶಯನ ಹರಿ ಕಂದರ್ಪಜನಕ ||೧|| 

 

ನವನೀತಚೋರ ನಂದಕುಮಾರ | ಭುವನೈಕವೀರ ಬುದ್ಧಿವಿಸ್ತಾರ | 

ರವಿಕೋಟಿತೇಜ ರಘುವಂಶರಾಜ | ದಿವಿಜವಂದಿತ ದನುಜಾರಿ ಗೋಪಾಲ ||೨|| 

 

ಪರಮದಯಾಳು ಪಾವನಮೂರ್ತಿ | ವರ ಕೀರ್ತಿಹಾರ ಶೃಂಗಾರಲೋಲ | 

ಉರಗೇಂದ್ರಶಯನ ವರ ಹಯವದನ | ಶರಣರಕ್ಷಕ ಪಾಹಿ ಕೋದಂಡರಾಮ ||೩||


ಮತ್ತಷ್ಟು ಲೇಖನಗಳು


ಲೇಖಕರ ಪರಿಚಯ

ಶ್ರೀ. ಸುಗಮ ಕನ್ನಡ


ಶ್ರೀ. ಸುಗಮ ಕನ್ನಡ ಅವರಿಂದ ಮತ್ತಷ್ಟು ಲೇಖನಗಳು


pictureಬೀ.ಚಿ ಚಟಾಕೆಗಳು
pictureಗಂಡು-ಹೆಣ್ಣು
pictureಕುಡುಕರು
pictureಕೋರ್ಟ್-ಲಾಯರ್ರು
pictureಅಪ್ಪ-ಮಗ
pictureಭಿಕ್ಷುಕ ಬವಣೆ
pictureಹುಚ್ಚರ ಸಂತೆ
pictureಮೇಷ್ಟ್ರು-ಮಕ್ಳು
pictureಕಚೇರಿ ಜೋಕ್ಸ್
pictureಚರ್ಚಿಲ್

ಇನ್ನಷ್ಟು ಲೇಖನಗಳು

 
 

© ಹಕ್ಕುಸ್ವಾಮ್ಯ 2008 - 2023