ಅಮೃತತ್ವದ ಅನುಭವ

ಸಾಧಾರಣವಾಗಿ ಎಲ್ಲರ ಜೀವನದಲ್ಲೂ ಎಷ್ಟೋ ಬಾರಿ ಇಷ್ಟಪಟ್ಟು ಕೆಲಸ ಮಾಡುವಾಗ ನಿರೀಕ್ಷೆಗೂ ಮೀರಿ ಚೆನ್ನಾಗಿ ಬಂದಾಗ ಮೈ ಪುಳಕಗೊಂಡು, ರೋಮಾಂಚನವಾಗಿ ಸದಾ ನೆನಪಿನಲ್ಲಿ ಉಳಿಯುವ ಅನುಭವವಾಗುತ್ತದೆ. ಅದೇ ರೀತಿ ಮಾಡಬೇಕೆಂದು ಮತ್ತೆ ಮತ್ತೆ ಪ್ರಯತ್ನಿಸಿದರೂ ಆ ರೀತಿಯ ಫಲಿತಾಂಶ ಮತ್ತೆ ಬರುವುದೇ ಇಲ್ಲ. ಅದು ವೃತ್ತಿ ಜೀವನದಲ್ಲಿ ಇರಬಹುದು ಅಥವಾ ಹವ್ಯಾಸಿ ಚಟುವಟಿಕೆಯಲ್ಲಿರಬಹುದು. ಸೂಕ್ಷ್ಮವಾಗಿ ಇಂತಹ ಅನುಭವದ ಹಿನ್ನೆಲೆಯನ್ನು ಗಮನವಿಟ್ಟು ನೆನಪಿಸಿಕೊಂಡಾಗ ಸಾಧಾರಣವಾಗಿ ಕಂಡು ಬರುವುದು, ನಮ್ಮ ಪ್ರಯತ್ನಕ್ಕಿಂತ ಮಿಗಿಲಾದ ಯಾವುದೋ ಶಕ್ತಿಯ ಕೈಗೊಂಬೆಯಾಗಿ ನಮ್ಮಿಂದ ಆ ಕೆಲಸ ಮಾಡಲ್ಪಟ್ಟಿತೇನೋ ಅನ್ನಿಸುತ್ತದೆ.ಅಥವಾ ನಮ್ಮ ಇರವನ್ನೂ ಮರೆತು ಮಗ್ನರಾಗಿ ಮಾಡುವ ಕೆಲಸದ ಭವ್ಯತೆ ಇದೇನೋ ಅನ್ನಿಸುತ್ತದೆ.
ನಾವು ನಾವಾಗಿಲ್ಲದಾಗ ಯಾರಿಂದಾಯಿತು ಆ ಕಾರ್ಯ ಎಂದು ಯೋಚಿಸಿದಾಗ, ಆ ಕ್ಷಣಗಳಲ್ಲಿ ನಮ್ಮ ಅಂತರಾಳದೊಳಗಿನ ಯಾವುದೋ ಪವಿತ್ರ ಶಕ್ತಿಯ ಸ್ಪರ್ಶದ ಅನುಭವವವಾಯಿತೇನೋ ಎಂದು ಅನ್ನಿಸುವುದಲ್ಲವೇ? ಜೀವನದಲ್ಲಿ ಎಲ್ಲೋ ಒಂದೊಂದು ಬಾರಿ ಬರುವ ಈ ರೀತಿಯ ಅನುಭವಗಳನ್ನೇ ಅಮೃತತ್ವದ ಅನುಭವ ಎನ್ನುವುದು. ಇದಕ್ಕೆ ಬರುವ ಪ್ರತಿಫಲ, ಧನ ಕನಕಗಳಿಗಿಂತಲೂ ಮಿಗಿಲಾದದ್ದು. ಅದೇ ತೃಪ್ತಿ ಅಥವಾ ಸಾರ್ಥಕತೆಯ, ಅಥವಾ ಧನ್ಯತೆಯ ಶ್ರೀಮಂತ ಮನೋಭಾವ. ಇದನ್ನೇ ಅಲ್ಲವೇ ನಿಜವಾದ ಆನಂದ ಎನ್ನುವುದು! ದಿನ ನಿತ್ಯದ ಯಾಂತ್ರಿಕ ಬದುಕಿನಲ್ಲಿ, ನೀರಸ ಜೀವನದಲ್ಲಿ ಈ ರೀತಿಯ ಅನುಭವವೇ ಸದಾ ಇರುವಾಂತಾದರೆ ಎಷ್ಟು ಚೆನ್ನಾಗಿರುತ್ತದೆ. ಹಾಗಿರುವುದಿಲ್ಲ ಎಂದೇ ವರ್ಷದಲ್ಲಿ ಮಧ್ಯೆ ಮಧ್ಯೆ ಕೆಲವು ದಿನಗಳನ್ನು ಗುರುತಿಸಿಕೊಂಡು ಹಬ್ಬಗಳು ಎಂದು ಆಚರಿಸುತ್ತೇವೆ. ವಿಶೇಷ ಪೂಜೆ, ಅಡಿಗೆಗಳನ್ನು ಮಾಡಿ ಊಟ ಉಪಚಾರದೊಂದಿಗೆ ದೈನಂದಿನ ದಿನಚರಿಗಳನ್ನು ಬದಲಿಸಿ ಸಂತೋಷವಾಗಿರಲು ಪ್ರಯತ್ನಿಸುತ್ತೇವೆ.
ಆದರೆ ಅಮೃತತ್ವದ ಅನುಭವಕ್ಕೆ ಹೋಲಿಸಿದರೆ ಅದೆಲ್ಲ ಸಂತೋಷವೇ ಅಲ್ಲ ಅನ್ನಿಸುವುದಲ್ಲವೇ? ಹೇಗೆ ಈ ಅನುಭವವನ್ನು ಸದಾ ತಂದುಕೊಳ್ಳುವುದು ಅಂದರೆ ಆಂತರಿಕವಾಗಿರುವ ಆನಂದದ ಸೆಲೆಯನ್ನು ಸದಾ ಭಕ್ತಿಪೂರ್ವಕವಾಗಿ ನೆನೆದು ಮಾಡುವ ಎಲ್ಲಾ ಕೆಲಸಗಳೂ ಅಮೃತತ್ವದ ಅನುಭವವನ್ನೇ ತರುತ್ತದೆ ಎನ್ನುತ್ತಾರೆ. ಈ ಭಾವನೆಯನ್ನು ಬಲಪಡಿಸಿಕೊಳ್ಳುವುದು, ಅದೂ ನಮ್ಮನ್ನು ನಾವು ಮರೆಯುವಷ್ಟು ಭಕ್ತಿ ಎಂದರೇನು ಎಂದು ನೋಡೋಣ.
ಭಕ್ತಿ ಎಂದರೆ ಸಾಮಾನ್ಯ ತಿಳುವಳಿಕೆಯಲ್ಲಿ ನ್ಯಾಯಾಧೀಶನಾಗಿ ಶಿಕ್ಷೆ ಕೊಡುವ ಕಾಣದ ದೇವರಿಗೆ ಭಯದಿಂದ ನಡೆದುಕೊಳ್ಳುವುದು ಎಂದಲ್ಲವೇ? ಆದರೆ ಭಕ್ತಿ ಎಂದರೆ ಪ್ರೀತಿ, ಭಗವಂತ ಪ್ರೇಮ ಸ್ವರೂಪಿ, ಮಾತಾ, ಪಿತ, ಬಂಧು, ಸಖ ಎಲ್ಲವೂ ಅವನು ಮಾತ್ರ ಅನ್ನುವ ರೀತಿಯಲ್ಲಿ ನೋಡಿದರೆ ಅಲ್ಲಿ ಭಯದ ಛಾಯೆಯೂ ಇರುವುದಿಲ್ಲ. ಇದನ್ನೇ "ಅಭಯಂ ಪ್ರತಿಷ್ಠಾ ವಿಂದತಿ" ಅಂದರೆ ನಿಜವಾಗಿ ತಿಳಿದವನು ಅಭಯದಲ್ಲಿ ಪ್ರತಿಷ್ಠಿತನಾಗಿರುತ್ತಾನೆ ಎಂದು ಉಪನಿಷತ್ತುಗಳು ಹೇಳುತ್ತವೆ. ನಿಷ್ಕಲ್ಮಶ ಪ್ರೇಮ ಎಲ್ಲಿ ಉತ್ಕಟವಾಗಿರುವುದೋ ಅಲ್ಲಿ ಭಯವಿರುವುದಿಲ್ಲ ಎಂದು ಹಿಂದೆ ಪರಮಹಂಸ ಯೋಗಾನಂದರು ಅಮೇರಿಕಾದಲ್ಲೊಂದು ಕಡೆ ತಮ್ಮ ಉಪನ್ಯಾಸದಲ್ಲಿ ಹೇಳುತ್ತಿರುವಾಗ ಸಭಿಕರು ಅದು ಹೇಗೆಂದು ಪ್ರಶ್ನಿಸಿದಕ್ಕೆ ಅವರೊಂದು ದೃಷ್ಟಾಂತವನ್ನು ಕೊಡುತ್ತಾರೆ, " ನಾವೆಲ್ಲಿಗಾದರೂ ಹೋಗುವಾಗ ಎದುರಿಗೊಂದು ಹುಲಿ ಬಂದರೆ ಏನಾಗಬಹುದು ನಮ್ಮ ಗತಿ? ಹೆದರಿ ಓಡಬಹುದು, ಹೆದರಿ ಎಚ್ಚರ ತಪ್ಪಬಹುದು. ಆದರೆ ಅದೇ ಹುಲಿ ಒಂದು ಮಗುವನ್ನು ಹಿಡಿಯಲು ಹೋದರೆ ತಾಯಿಯಾದವಳು ಮಗು ಮತ್ತು ಹುಲಿಯ ನಡುವೆ ನಿಂತು ಮಗುವನ್ನು ರಕ್ಷಿಸುವ ಪ್ರಯತ್ನ ಮಾಡುತ್ತಾಳೆ. ಮಗುವಿನ ಮೇಲಿನ ಮಮತೆ, ಪ್ರೀತಿಯ ಮುಂದೆ ಎಲ್ಲಿ ಹೋಯಿತು ಹುಲಿಯ ಭಯ? ಪ್ರೇಮಿಸಿದವರು ಪ್ರಾಣವನ್ನೂ ಲೆಕ್ಕಿಸುವುದಿಲ್ಲ, ಜಗತ್ತನ್ನೇ ಎದುರಿಸಿ ನಿಲ್ಲುತ್ತಾರೆ"". ಇಂತಹ ಕಥೆಗಳು ಸಾಕಷ್ಟಿವೆ ಜಗತ್ತಿನಲ್ಲಿ. ಅದೇ ಪ್ರೇಮವನ್ನು ಭಗವಂತನೆಡೆಗೆ ತಿರುಗಿಸಿದಾಗ ಭಕ್ತಿ ಎನ್ನುತ್ತಾರೆ.
ಈ ರೀತಿ ಭಗವಂತನಲ್ಲಿ ಪ್ರೀತಿಯನ್ನು ತಿರುಗಿಸಿದ ಪ್ರಸಿದ್ಧ ಉಲ್ಲೇಖ ಗೋಸ್ವಾಮಿ ತುಳಸೀದಾಸರದು. ಅಷ್ಟು ಉತ್ಕಟವಾಗಿ ಪ್ರಾಣದ ಹಂಗನ್ನು ತೊರೆದು ಪ್ರೀತಿಸಿದ ಹೆಂಡತಿಯು ಹೇಳಿದ ಒಂದು ಮಾತಿನಿಂದ ಅವರ ಜೀವನದಲ್ಲಿ ಎಂಥಹ ಪರಿವರ್ತನೆಯಾಯಿತು. ಮಹಾನ್ ಸಂತ ಶ್ರೇಷ್ಠರಾದರು ಅನ್ನುವುದು ಎಲ್ಲರಿಗೂ ತಿಳಿದ ವಿಷಯ.
ಆದರೆ ಇಂತಹ ಭಕ್ತಿ ಯಾರಿಗೆ ಸಾಧ್ಯವೆಂದರೆ, ನಿಷ್ಕಾಮವಾಗಿ ನಿರ್ಮಲ ಪ್ರೀತಿಯನ್ನು ನೀಡಲು ಒಬ್ಬ ವ್ಯಕ್ತಿಗೆ ಸಾಧ್ಯವಿದ್ದಲ್ಲಿ, ಅವನನ್ನವನು ಭಗವದ್ಭಕ್ತಿಯ ಕಡೆಗೆ ತಿರುಗಿಸಲು ಸಾಧ್ಯ. ಭಾವನೆಗಳೇ ಇಲ್ಲದ ಮನುಷ್ಯಪ್ರಾಣಿಗಳಿಗೆ ಭಕ್ತಿಯ ಮಾರ್ಗ ಬಹಳ ಕಷ್ಟ. ಈ ಭಾವನೆಗಳನ್ನು ಬೆಳೆಸಲು, ಪ್ರಕೃತಿಯನ್ನು, ಪ್ರಕೃತಿಯಲ್ಲಿರುವ ಚೇತನಗಳನ್ನು ತಮ್ಮಂತೆಯೇ ಒಂದು ಜೀವವೆಂದು ಪ್ರೀತಿಸುವ ಅಭ್ಯಾಸವನ್ನು ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಕಲಿಸಿದರೆ ಮುಂದೆ ಅವರು ಒಳ್ಳೆಯ ನಾಗರೀಕರಾಗಿ ಬಾಳಿ ತಮ್ಮ ಕರ್ಮದಲ್ಲಿ ತಾವು ಮಾತ್ರವಲ್ಲ, ಇಡೀ ವಿಶ್ವವೇ ಅವರ ನೆನಪಿನಲ್ಲಿ, ಅವರ ಕರ್ಮದಲ್ಲಿ ಅಮೃತತ್ವದ ಅನುಭವಗಳನ್ನು ಕಾಣಿಕೆಯಾಗಿ ನೀಡಲು ಸಮರ್ಥರಾಗುತ್ತಾರೆ. ಬೇಲೂರು, ಹಳೆಬೀಡು ಮತ್ತು ಸೋಮನಾಥಪುರದ ಶಿಲ್ಪ ವೈಭವಗಳಲ್ಲಿ ಅಲ್ಲಿನ ಶಿಲ್ಪಿಗಳಾರೂ ತಮ್ಮ ಹೆಸರನ್ನು ಕೆತ್ತಿರದೇ ಇದ್ದದ್ದು ಜ್ಞಾಪಕಕ್ಕೆ ಬರುತ್ತದೆ. ಕಗ್ಗಲ್ಲಿನಲ್ಲಿ ಸುಂದರ ಶಿಲ್ಪವಾಗಿ ಮೂಡಿರುವುದು ಅವರುಗಳ ಅಮೃತಾನುಭವಗಳೇ ಇರಬಹುದಲ್ಲವೇ? ತಮ್ಮ ಜೀವನವಿಡೀ ನಡೆಸಿದ ಇಂತಹ ಸಾರ್ಥಕ ಸಾಧನೆಗಳ ಹಿಂದೆ ತಮ್ಮನ್ನು ತಾವೇ ಮರೆತು ತಮ್ಮ ಅಂತರಾತ್ಮದ ಅಥವಾ ಭಗವಂತನ ಪ್ರೀತಿಯಲ್ಲದೇ ಇನ್ನೇನು ತಾನೆ ಇರಲು ಸಾಧ್ಯ?
ಇಂತಹ ಅಮೃತತ್ವದ ಅನುಭವಗಳನ್ನು ಎರವಲಾಗಿ ಬಿಟ್ಟು ಹೋದವರು ಭಾರತೀಯರು ಮಾತ್ರವಲ್ಲ "ಲಿಯೊನಾರ್ಡೋ ಡ ವಿಂಚಿ"ಯ ಹಾಗೆ ಅನೇಕಾನೇಕ ವಿದೇಶಿಯರೂ ಇದ್ದಾರೆ. ಆದರೆ ಇದನ್ನು ರೂಢಿಸಿಕೊಂಡು ತಮ್ಮ ಆಸಕ್ತಿಯ ಕೆಲಸಗಳೆಲ್ಲವನ್ನೂ ಇದರ ನೆಲೆಗಟ್ಟಿನಲ್ಲಿ ನಿರ್ಮಿಸುವ ವ್ಯವಸ್ಥಿತ ಮಾರ್ಗವನ್ನು ಭಕ್ತಿಮಾರ್ಗವಾಗಿ ರೂಪಿಸಿರುವುದು ಭಾರತೀಯ ತತ್ವಶಾಸ್ತ್ರ. ಭಕ್ತಿಯ ಮಾರ್ಗದಲ್ಲಿರುವವನಿಗೆ ನಿತ್ಯೋತ್ಸವ, ನಿತ್ಯ ಮಂಗಳ, ನಿತ್ಯವೂ ಅಮೃತಾನುಭವವೇ ಎನ್ನುತ್ತದೆ ಭಾಗವತ. ಇದನ್ನು ಹೊಂದಿರುವ ಪುಣ್ಯಾತ್ಮರ ಸ್ವಲ್ಪ ಸಮಯದ ಒಡನಾಟವೇ ನಮ್ಮ ದುಃಖ, ದುಗುಡಗಳನ್ನು ದೂರ ಮಾಡಿ, ಅವರ ಆನಂದದ ಛಾಯೆ ನಮ್ಮಲ್ಲೂ ಮೂಡುವ ಹಾಗಾಗುತ್ತದೆ. ಇಂತಹ ಅಮೃತಾನುಭವಿಗಳಾಗಲು ಪ್ರಯತ್ನ ಮಾಡೋಣ!!