ಆಧ್ಯಾತ್ಮಿಕ ಪರಂಪರೆ

ಕಾಲದ ಕಣಿವೆಯಲ್ಲಿ ಜಾರುತ್ತಾ ಜಾರುತ್ತಾ ಸಾವಿರಾರು ವರ್ಷಗಳ ಹಿಂದೆ ತಲುಪಿ,ವಿಹಂಗಮವಾಗಿ ಭೂಮಿಯನ್ನೊಮ್ಮೆ ಅವಲೋಕಿಸಿದರೆ... "ಎಲ್ಲೆಲ್ಲೂ ದಟ್ಟ ಕಾನನ, ಚಿತ್ರವಿಚಿತ್ರ ಪ್ರಾಣಿ ಪಕ್ಷಿಗಳ ಕೂಗನ್ನು ಬಿಟ್ಟರೆ ಎಲ್ಲೆಲ್ಲೂ ನೀರವತೆ. ಪ್ರಾಣಿಗಳೊಡನೆ ಅವುಗಳಂತೆಯೇ ಬೇಟೆಯಾಡಿಕೊಂಡು ಬದುಕುತ್ತಿರುವ ಎರಡು ಕಾಲಿನ ಮೃಗವಾವುದಿದು? ಮನುಷ್ಯನಂತೆಯೇ ಕಾಣುವನಲ್ಲ!! .... ಆದಿಮಾನವನಿರಬಹುದೇ?...ನಾವು ತಲುಪಿರುವ ಕಾಲದಲ್ಲಿ ನಾಗರೀಕತೆಯ ಸೂರ್ಯೋದಯವೇ ಆಗಿಲ್ಲವಲ್ಲ!! ಹೀಗೇ ಆಲೋಚಿಸುತ್ತಾ ಮುಂದೆ ನೋಡಲು ಕಾಣುವ ಸುಂದರ ಭೂಭಾಗವಾವುದಿದು? ನದಿ, ವನಗಳು, ಮುಗಿಲನ್ನು ಚುಂಬಿಸುವ ಗಿರಿಶೃಂಗ, ನದಿಯ ದಡದಲ್ಲಿ ಕುಟೀರಗಳು, ಸುಗಂಧಿತ ಅಗ್ನಿಧೂಮ, ಕಿವಿಗೊಟ್ಟು ಕೇಳಿದಾಗ ನಿಯಮಬದ್ಧವಾದ ಸ್ವರಗಳ ಏರಿಳಿತಗಳ ಮಂತ್ರೋಚ್ಚಾರಣೆ. ಅದರಲ್ಲೊಂದು "ವಿಶ್ವದೆಲ್ಲೆಡೆಯಿಂದ ಜ್ಞಾನವು ನಮ್ಮೆಡೆಗೆ ಹರಿದು ಬರಲಿ" ಎಂಬರ್ಥ ಬರುವ ಮಂತ್ರ. ಅಂದಿನ ದಿನಗಳಲ್ಲಿ ಸರಳ ಜೀವನ ನಡೆಸುತ್ತಾ ಉನ್ನತ ಧ್ಯೇಯಗಳಿಂದ ತುಂಬಿರುವ ಈ ಅತಿಮಾನವರಾರು? ಇವರುಗಳು ಮಾಡುತ್ತಿರುವುದಾದರೂ ಏನನ್ನು? .......ವಿಶ್ವನಿಯಾಮಕ ಶಕ್ತಿಗಳೊಡನೆ ಸಂಪರ್ಕವನ್ನು ಸಾಧಿಸಿದ್ದ ಇವರನ್ನು, ವಿಶ್ವ ಸೃಷ್ಟಿಯ ರಹಸ್ಯವನ್ನು ಭೇದಿಸಿದ್ದ ಇವರನ್ನು,ಹುಟ್ಟು ಸಾವುಗಳನ್ನೂ ಮೀರಿದ್ದ ಇವರನ್ನು ನಾವು ಋಷಿಗಳೆಂದು ಕರೆಯುತ್ತೇವೆ. ಇವರುಗಳು ನಮ್ಮ ಪೂರ್ವಜರೆನ್ನಲು ಹೆಮ್ಮೆಯೆನಿಸುತ್ತದೆ. ಇವರುಗಳ ಸಾಧನೆಯ ವಿದ್ಯೆಯನ್ನು ನಾವು "ಆಧ್ಯಾತ್ಮ ವಿದ್ಯಾ" ಅಥವಾ "ಅಂತರ್ಮುಖ ವಿದ್ಯಾ" ಎಂದು ಕರೆಯುತ್ತೇವೆ. ಇವರ ತಪೋಭೂಮಿ ಅಥವಾ ಪ್ರಯೋಗಶಾಲೆಯೇ ಆರ್ಯಾವರ್ತ, ಜಂಬೂದ್ವೀಪ, ಭರತಖಂಡ ಅಥವಾ ನಮ್ಮ ಮಾತೃಭೂಮಿ ಭಾರತ.
ಋಷಿಗಳೆಂದರೆ ಆಧ್ಯಾತ್ಮ ವಿಜ್ಞಾನದ ವಿಜ್ಞಾನಿಗಳು ಮತ್ತು ಈ ವಿಜ್ಞಾನಿಗಳ ಸಂತತಿ ನಾವೆಲ್ಲ. ಮುಂದೆ ಪ್ರಪಂಚದ ಇತರೆಡೆಗಳಲ್ಲಿ ನಾಗರೀಕತೆಯ ಮುಂಜಾನೆಯಾಯಿತು. ವಿಶ್ವವೆಲ್ಲ ವಿಸ್ಮಯದಂತೆ ತೋರಿದಾಗ ಅದರ ಒಗಟನ್ನು ಬಿಡಿಸಲು ಬಹಿರ್ಮುಖವಾಗಿ ಅನ್ವೇಷಣೆಗೆ ಹೊರಟ ಫಲವೇ ಭೌತಿಕ ಭವ್ಯತೆಯನ್ನು ಸಾಧಿಸಿದ ನಾಗರೀಕತೆಗಳಾದ ಗ್ರೀಕ್, ರೋಮನ್, ಬೆಬಿಲೋನಿಯಾ ಮುಂತಾದವುಗಳ ಉದಯ. ಈ ನಾಗರೀಕತೆಗಳ ಭೌತಿಕ ಸಮೃದ್ಧಿಗೆ ಬೆರಗಾಗಿ, ಅದೇ ಜೀವನದ ಪರಮೋನ್ನತ ಧ್ಯೇಯವೆಂದುಕೊಂಡು ಇಂದು ಭಾರತವೂ ಸೇರಿದಂತೆ ವಿಶ್ವದ ಎಲ್ಲಾ ದೇಶಗಳು ಇದನ್ನು ಆದರ್ಶವಾಗಿರಿಸಿಕೊಂಡಿದೆ.
ಹೀಗಾಗಿ ನಿಜವಾದ "ಆಧ್ಯಾತ್ಮ ವಿದ್ಯೆ" ಇಂದು ತೀರಾ ಗೌಣವಾದ ಸಂಖ್ಯೆಯಲ್ಲಿರುವ ಕೆಲವೇ ಕೆಲವರದ್ದಾಗಿದೆ. ಈ ಅಂತರ್ಮುಖ ಪಯಣದ ಹಾದಿ ಸುಗಮವೇನಲ್ಲ.ನಮ್ಮ ದೈನಂದಿನ ಜೀವನದಲ್ಲಿ ಕೆಲವಾರು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಮಾನಸಿಕ ಸ್ಥಿಮಿತತೆ ತುಂಬಾ ಮುಖ್ಯವಾಗಿ ಬೇಕಾಗಿರುತ್ತದೆ ಮತ್ತು ಹಂತ ಹಂತವಾಗಿ ಸಾಗಿ ಹೋಗಬೇಕಾದ ಸಹನೆ ಮತ್ತು ಗುರಿಯ ಬಗ್ಗೆ ನಿಶ್ಚಲ ನಂಬಿಕೆ ಬಹಳ ಮುಖ್ಯ. ಇದನ್ನೆಲ್ಲಾ ಒಂದು ವಿಜ್ಞಾನ ಶಾಸ್ತ್ರದಂತೆ ವಿಕಾಸಗೊಳಿಸಿ ಗೀತೆ ಮತ್ತು ಉಪನಿಷತ್ತುಗಳಂತಹ ಅನೇಕ ಗ್ರಂಥಗಳಲ್ಲಿ ದಾಖಲಿಸಿಟ್ಟಿದ್ದಾರೆ ನಮ್ಮ ಪೂರ್ವಜರು.ಇನ್ನಾದರೂ ಅಂಧಗೊಳಿಸುವ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೇ ನಮ್ಮ ಆದ ಅಮೂಲ್ಯ ನಿಧಿಯ ಕಡೆಗೆ ಇಣುಕಿ ನೋಡುವ ಪ್ರಯತ್ನವನ್ನಾದರೂ ಮಾಡೋಣವೇ? ... ಇದರಿಂದ ಪ್ರಾಪಂಚಿಕ ಐಷಾರಮದ ಜೀವನವೋ,ಹಣವೋ ದೊರೆಯದಿರಬಹುದು. ಆದರೆ ಪ್ರಾರಂಭಿಕ ಅಭ್ಯಾಸವೇ ಚಿರಂತನ ಶಾಂತಿ,ಸಚ್ಚಿದಾನಂದದೆಡೆಗೆ ಇಡುವ ಮೊದಲ ಹೆಜ್ಜೆಯಾಗಬಹುದು.ಕ್ಷಣಕ್ಷಣಕ್ಕೂ ಅನಿಶ್ಚಿತತೆ,ಅತೃಪ್ತಿ,ಅಶಾಂತಿ,ವ್ಯಾಮೋಹ,ಆಸೆಗಳ ಇಂದಿನ ಬದುಕಿಗೆ ಇದೇ ಅಲ್ಲವೇ ಸಂಜೀವಿನಿ?!!!