ಆತ್ಮವಿದ್ಯೆಯೇ ನಿಜವಾದ ಸಂಪಾದನೆ

ಉಪನಿಷತ್ತುಗಳು ತಿಳಿಸುವ ವಿದ್ಯೆಗೆ ಆತ್ಮ ವಿದ್ಯಾ ಅಥವಾ ಬ್ರಹ್ಮ ವಿದ್ಯಾ ಎಂದು ಹೆಸರು. ಇಲ್ಲಿ ಬ್ರಹ್ಮ ಎಂದರೆ ನಾಲ್ಕು ಮುಖವುಳ್ಳ ಸೃಷ್ಟಿಕರ್ತ ಅಥವಾ ಸರಸ್ವತಿಯ ಪತಿಯಾದ ಬ್ರಹ್ಮ ಅಲ್ಲ. ಬ್ರಹ್ಮ ಅಂದರೆ ಪರಬ್ರಹ್ಮ. ಪರಬ್ರಹ್ಮ ಅಂದರೆ ನಿರ್ಗುಣ, ನಿರಾಕಾರ ಭಗವಂತ. ಅಥವಾ ಅನೇಕ ರೂಪ, ನಾಮಗಳಿರುವ ಎಲ್ಲಾ ಜೀವಿಗಳ ಹೃದಯದೊಳಗಿರುವ ಒಂದೇ ದೇವರಿಗೆ ಪರಬ್ರಹ್ಮ , ಪರಮಾತ್ಮ ಅಥವಾ ಆತ್ಮನೆಂದು ಹೆಸರು. ಪರಬ್ರಹ್ಮನನ್ನೇ ಜನರು ರಾಮ, ಕೃಷ್ಣ, ವಿಷ್ಣು, ಗಣಪತಿ, ಈಶ್ವರ ಎಂದೆಲ್ಲಾ ಕರೆಯುತ್ತಾರೆ. ಭಗವದ್ಗೀತೆಯಲ್ಲಿ ಭಗವಂತನು, "ಹೃದಯದಲ್ಲಿ ನೆಲೆಸಿರುವ ಈಶ್ವರನೇ ಸರ್ವಪ್ರಾಣಿಗಳನ್ನು ಯಂತ್ರಾರೂಢರಾದ ಬೊಂಬೆಗಳಂತೆ ಮಾಯೆಯಿಂದ ತಿರುಗಿಸುತ್ತಾನೆ" ಎಂದು ಹೇಳುತ್ತಾನೆ. "ಪರ ಬ್ರಹ್ಮ" ದಲ್ಲಿ ಪರ ಎನ್ನುವ ಪದಕ್ಕೆ ಕನ್ನಡದಲ್ಲಿಯೂ "ತನ್ನ ಕಡೆಯಿರುವ" ಎಂದೇ ಅರ್ಥವಿದೆ. ನಾವು ಹುಟ್ಟಿದ್ದು , ಇರುವುದು, ಮುಂದೆ ಲಯವಾಗುವುದು ಎಲ್ಲಾ ಪರಮಾತ್ಮನಲ್ಲಿಯೇ. ನಿಜ ಹೇಳಬೇಕೆಂದರೆ ಅದು ಒಂದೇ ನಮ್ಮ ಎಲ್ಲಾ ಸ್ಥಿತಿಗಳಲ್ಲಿಯೂ ನಮ್ಮ ಪರವಾಗಿ ಜೊತೆಯಲ್ಲಿರುವುದು. ಬೇರೆಲ್ಲವೂ, ಎಲ್ಲರೂ ನಮ್ಮ ವಿರುದ್ಧವೇ. ಎಷ್ಟರ ಮಟ್ಟಿಗೆಂದರೆ ಕಡೆಗುಳಿಯುವುದು ಆತ್ಮವೊಂದೇ ಅಥವಾ ನಾವು ಅಂದರೆ ಆತ್ಮ ಮಾತ್ರವೇ. ಅದು ನಮಗೆ ಅರ್ಥವಾಗಬೇಕಷ್ಟೇ. ಅದನ್ನು ಅರಿಯುವ ತತ್ವಕ್ಕೆ "ಪರತತ್ವ" ಎಂದು ಹೆಸರು. ವಿದ್ಯೆಗೆ ಹೆಸರು "ಪರಾ ವಿದ್ಯೆ" ಎಂದರೆ ಬೇರೆ ವಿದ್ಯೆಗಳೆಲ್ಲಾ "ಅಪರಾ ವಿದ್ಯೆ" ಎಂದು ಅರ್ಥ ಬರುತ್ತದೆ ಅಲ್ಲವೇ? ಅದು ನಿಜವೇ. ಬೇರೆ ಯಾವ ವಿದ್ಯೆಯಿಂದಲೂ ನಿಜವಾದ ಶಾಂತಿ ಸಿಕ್ಕುವುದಿಲ್ಲ. ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಕದಡುವ ವಿದ್ಯೆಗಳೇ ಎಲ್ಲವೂ.
ಇದೇನು ಈ "ಬ್ರಹ್ಮ ವಿದ್ಯೆ" ಅಥವಾ "ಆತ್ಮ ವಿದ್ಯೆ"? ಯಾವುದೋ ಕಾಲದ್ದು ಇಂದಿಗೆ ಅದು ಪ್ರಸ್ತುತವೇ? ಅದೂ ಈ ಆಧುನಿಕ ಯುಗದಲ್ಲಿ, ಈ ಆಧುನಿಕ ದೇಶದಲ್ಲಿ ಎಂದು ಹುಡುಗರಾದರೂ ಪ್ರಶ್ನಿಸಬಹುದು. ಕಾಲ, ದೇಶ ಯಾವುದೇ ಇರಲಿ, ನಾವೆಲ್ಲಾ ಮುಂಚೆ ಮಗುವಾಗಿದ್ದೆವು. ಯುವಕರಾಗಿ, ವಯಸ್ಕಾರಾಗಿ ಮುಂದೊಂದು ದಿನ ಸಾಯುತ್ತೇವೆ. ಎಲ್ಲಿಂದ ಬಂದೆವು, ಎಲ್ಲಿಗೆ ಹೋಗುತ್ತೇವೆ ಎಂದು ತಿಳಿದುಕೊಳ್ಳಲು ದೇಶ, ಕಾಲ ಯಾವುದಾದರೇನು? ನಮ್ಮ ಪರಿಚಯ ಮಾಡಿಕೊಳ್ಳುವುದಕ್ಕೆ, ಇಲ್ಲ ನಾವು ಮಾಡ್ರನ್ ನಮಗೆ ಅದು ಬೇಕಾಗಿಲ್ಲ ಅನ್ನುವುದಕ್ಕಾಗುತ್ತದೆಯೇ? ಅದು ಕೊನೆಗಲ್ಲವೆ ತಿಳಿದುಕೊಳ್ಳ ಬೇಕಾದದ್ದು ,ಈಗ್ಲೇ ಯಾಕೆ? ಸದ್ಯಕ್ಕಂತೂ ಪ್ರಾಪಂಚಿಕ ಸುಖ ಎಲ್ಲ ಪೂರ್ತಿಯಾಗಿ ಅನುಭವಿಸೋಣ ಆಮೇಲೆ ನೋಡೋಣ ಅನ್ನುತ್ತೇವಲ್ಲವೇ? ಪ್ರಾಪಂಚಿಕ ಆಸೆಗಳ ಪೂರೈಕೆಗಾಗಿ ದುಡಿದು ಕಾಲಕಳೆದು ಅದನ್ನು ಅನುಭವಿಸುವ ಮುಂಚೆಯೇ ಬಹಳಷ್ಟು ಜನ ಕೊನೆಯುಸಿರೆಳೆದಿದ್ದಾರೆ. ಇದನ್ನೇ ಕರೆಯುವುದು ಶೂನ್ಯ ಸಂಪಾದನೆ ಅಂತ.
ಆಸೆಗಳು...ಅದನ್ನರಸಿ ಹೋಗುವುದು ಅಂದರೆ ನನಗೆ ಜ್ಞಾಪಕಕ್ಕೆ ಬರುವುದು ೧೫ ವರ್ಷಗಳ ಹಿಂದೆ ಭಾರತದಲ್ಲಿ ಪ್ರಸಾರವಾದ ದೂರ ದರ್ಶನದ ಒಂದು ಕಾರ್ಯಕ್ರಮ, ಯಾವುದೋ ಬೇರೆ ದೇಶದ ಕಥೆಯೊಂದನ್ನು ಆಧರಿಸಿದ್ದೆನಿಸುತ್ತದೆ. ಒಂದು ದೇಶದಲ್ಲಿ ಒಬ್ಬನು, ರಾಜನ ಬಳಿ ಬಂದು ತಾನು ಸುಖವಾಗಿ ಬದುಕಲು ತುಂಡು ಜಮೀನು ಕೊಟ್ಟು ಉಪಕರಿಸಿ ಅಂತ ಕೇಳುತ್ತಾನೆ. ರಾಜ, ಮರುದಿನ ಸೂರ್ಯೋದಯಕ್ಕೆ ಮುಂಚೆಯೇ ಇಂತಹ ಜಾಗಕ್ಕೆ ಬಾ, ಜಮೀನು ಕೊಡುತ್ತೇನೆ ಎಂದು ಹೇಳುತ್ತಾನೆ. ಬಹಳ ಸಂತೋಷದಿಂದ ಅವನು ರಾಜ ಹೇಳಿದ ಜಾಗಕ್ಕೆ ಮುಂಜಾನೆ ಬಂದಾಗ ಅರಸನ ಜೊತೆ ಅವನ ಆಸ್ಥಾನದವರೆಲ್ಲಾ ಇರುತ್ತಾರೆ. ರಾಜನು ಅವನಿಗೆ ಕಣ್ಣಿಗೆ ಕಾಣುವವರೆಗೂ ಫಲವತ್ತಾಗಿ ಪೈರು ತುಂಬಿ ಕಂಗೊಳಿಸುತ್ತಿದ್ದ ಜಮೀನನ್ನು ತೋರಿಸಿ, "ನೋಡು, ಒಂದು ನಿಬಂಧನೆ ಇದೆ, ಈ ಜಮೀನಿನಲ್ಲಿ ಎಷ್ಟು ಬೇಕು ಅನ್ನಿಸುತ್ತದೆಯೋ ಅಷ್ಟು ದೂರ ಹೋಗಿ ಹೋದ ದಾರಿಯಲ್ಲಿಯೇ ಸೂರ್ಯಾಸ್ತಮದ ಒಳಗೆ ಹಿಂತಿರುಗಿ ಬಂದರೆ ಅಷ್ಟು ಜಮೀನು ನಿನ್ನದು ಅಂತ ಹೇಳಿದಾಗ, ಬಹಳ ಆಸೆಯಿಂದ ಜಮೀನಿನಲ್ಲಿ ಓಡಲು ಪ್ರಾರಂಭ ಮಾಡಿದನು, ಇನ್ನೂ ಸ್ವಲ್ಪ ಮತ್ತೂ ಸ್ವಲ್ಪ ಅಂತ ಓಡುತ್ತ ಓಡುತ್ತ ಸೂರ್ಯ ನಡು ನೆತ್ತಿಯ ಮೇಲೆ ಬಂದರೂ ಓಡುತ್ತಿರುತ್ತಾನೆ. ಸೂರ್ಯ ಮುಳುಗುವುದಕ್ಕೆ ಪ್ರಾರಂಭಿಸಿದರೂ ದೂರದಲ್ಲಿ ಕಾಣುತ್ತಿರುವ ಬೆಟ್ಟಗಳ ತನಕ ಇರುವ ಜಮೀನು ನನ್ನದೇ ಆದರೆ ಎಷ್ಟು ಚೆನ್ನ ಅಂತ ಏದುಸಿರು ಬಿಟ್ಟುಕೊಂಡು ಬಹಳ ದೂರದಲ್ಲಿ ಚಿಕ್ಕದಾಗಿ ಕಾಣಿಸುತ್ತಿದ್ದ ರಾಜನ ಕಡೆಗೊಮ್ಮೆ,ಸೂರ್ಯನ ಕಡೆಗೊಮ್ಮೆ ನೋಡುತ್ತ ಓಡಿ ಓಡಿ ಕುಸಿದು ಸತ್ತು ಬೀಳುತ್ತಾನೆ. ಅಷ್ಟು ಓಡಿದ್ದು ಎಲ್ಲ ನಾವು ಮಾಡುವ ಹಾಗೆ ಶೂನ್ಯ ಸಂಪಾದನೆಯೇ.
ಚಿಕ್ಕ ಕಥೆಯಾದರೂ ಎಷ್ಟು ಅರ್ಥ ಪೂರ್ಣ ಅನ್ನಿಸುತ್ತದಲ್ಲವೇ? ನಮಗೆ ಅನ್ವಯಿಸುವ ಹಾಗೆ ರಾಜ ದೇವರು. ನಮಗೆ ಒಡ್ಡಿರುವ ಶರತ್ತೆಂದರೆ ಕೈ ಕಾಲುಗಳಲ್ಲಿ ಶಕ್ತಿ ಉಡುಗಿ ಹೋಗಿ, ಬಾಳೆಂಬ ಸೂರ್ಯ ಮುಳುಗುವುದೊರಳಗೆ ಏನೇ ಸಾಧನೆ ಮಾಡಿದರೂ ಹಿಂತಿರುಗಿ ಅವನ ಬಳಿ ಬಂದರೆ ನಾವು ಗಳಿಸಿದ್ದು ಮಾತ್ರವೇ ಅಲ್ಲದೇ ಅವನ ಸಮಸ್ತ ಐಶ್ವರ್ಯವನ್ನೂ ಅನುಭವಿಸುತ್ತೇವೆ. ಇಲ್ಲದೇ ಇದ್ದರೆ ಮತ್ತೆ ಮೊದಲಿನಿಂದ ಪ್ರಾರಂಭ. ಆದುದರಿಂದ ನಾನೇನೇ ಸಾಧನೆ ಮಾಡಿದರೂ ರಾಜನ ಕಡೆ ಹಿಂತಿರುಗಿ ಬರಲಾರದಷ್ಟು ದೂರ ಹೋಗುವುದು ಬೇಡ ಅಲ್ಲವೇ? ನಮ್ಮೆಲ್ಲ ಕೆಲಸಗಳ ಮಧ್ಯೆಯೂ ಅವನ ಕಡೆ ಹೋಗುವ ದಾರಿಯ ಬಗ್ಗೆ ಚಿಂತನೆ ಹರಿಸಿದರೆ ಅದು ನಿಜವಾದ ಸಂಪಾದನೆ ಅಲ್ಲವೇ?