ದಸರೆಯ ಬೊಂಬೆ

ಕರ್ನಾಟಕದ ಸಂಸ್ಕೃತಿಯ ಭಾಗವಾದ ದಸರಾ ಬೊಂಬೆ ಪೂಜೆಯನ್ನು ಇಷ್ಟು ದೂರದ ಆಸ್ಟ್ರೇಲಿಯಾ ದೇಶದಲ್ಲೂ ನಮ್ಮವರು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ. ಹೀಗೊಂದು ಬಾರಿ ಸಹೃದಯರೊಬ್ಬರ ಮನೆಗೆ ಆಹ್ವಾನಿತರಾಗಿ ಹೋಗಿ ಬೊಂಬೆ ಪ್ರದರ್ಶನವನ್ನು ಕಾಣುವ ಸೌಭಾಗ್ಯ ನಮ್ಮದಾಯಿತು. ಪ್ರದರ್ಶಿಸಿದ ಬೊಂಬೆಗಳು ಇಲ್ಲಿನ ಮಟ್ಟಿಗಂತೂ ಅದ್ಭುತವಾಗಿತ್ತು. ಒಂದು ದೊಡ್ಡ ಕೋಣೆಯನ್ನೇ ಅದಕ್ಕಾಗಿ ಮೀಸಲಿಟ್ಟಿದ್ದರು. ವಿಶಿಷ್ಠ ಬೊಂಬೆಗಳನ್ನು ಹೊಂದಿಸಿಕೊಂಡು, ಜೋಪಾನವಾಗಿಟ್ಟು ಪ್ರದರ್ಶಿಸಲು ತೆಗೆದುಕೊಂಡ ಸಮಯ ಮತ್ತು ಶ್ರಮ ಶ್ಲಾಘನೀಯವೇ ಸರಿ. ವಿವರವಾಗಿ ಗಮನಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುವಂತಿದ್ದಿತು.
ನೋಡ ನೋಡುತ್ತಾ, ಇದು ಸಂಸ್ಕೃತಿಯ ಭಾಗವೇನೋ ಸರಿ, ಆದರೆ ಇದರ ಅರ್ಥವೇನಿರಬಹುದು? ನಮ್ಮ ಧರ್ಮದ ಭಾಗ ಹೇಗಾಗಬಹುದು? ಅಥವಾ ಇದೊಂದು ಬರಿಯ ಅರ್ಥಹೀನ ಮಕ್ಕಳಾಟಿಕೆಯೇ ಎಂದೆಲ್ಲ ಮನಸ್ಸಿನಲ್ಲಿ ಜಿಜ್ಞಾಸೆ. ಏನಿದರ ಉದ್ದೇಶ? ಯಾವ ಯಾವ ಬೊಂಬೆಗಳನ್ನಿಟ್ಟಿದ್ದಾರೆಂದು ಗಮನಿಸಿದರೆ, ಇಲ್ಲದೇ ಇರುವುದೇ ಇಲ್ಲ. ದೇವರುಗಳು, ರಾಜ ರಾಣಿ, ಮನುಷ್ಯರು, ಹೀಗೆ ಒಂದು ಊರನ್ನೇ ಸೃಷ್ಟಿಸಿದ್ದರು. ಪ್ರಾಣಿಗಳು, ಪಕ್ಷಿಗಳು, ಮರಗಿಡಗಳು, ಬೆಟ್ಟ ಗುಡ್ಡಗಳು ಇನ್ನೂ ಏನೇನೋ. ಏನಾದರೂ ಇಲ್ಲದಿದ್ದಲ್ಲಿ ಅದು ಬೇಡವೆಂದಲ್ಲ ಅದು ಹೊಂದಿಸಿಕೊಳ್ಳಲಾಗಿಲ್ಲದಿರಬಹುದೇನೋ ಅಷ್ಟೇ. ಗಮನವಿಟ್ಟು ನೋಡಿದರೆ ನಮ್ಮ ಸುತ್ತಲಿನ, ನಾವು ಕಂಡ ವಿಶ್ವದ ಸೂಕ್ಷ್ಮ ರೂಪವನ್ನೇ ಸೃಷ್ಟಿಸುವ ಪ್ರಯತ್ನ ಮಾಡಿರಬಹುದೆನಿಸಿತು.
ವಿಶ್ವವನ್ನು ಪೂಜಿಸುವುದೆಂದರೆ ಇದೆಲ್ಲದರ ಅರ್ಥ ಸಿಕ್ಕಿದಂತಾಯಿತು. ಪೂಜಿಸುವುದು ದೇವರನ್ನು ಮಾತ್ರ ಅಲ್ಲವೇ? ಹಿಂದೂ ಧರ್ಮದ ಪ್ರಕಾರ ದೇವರೇ ವಿಶ್ವವಾಗಿ ತೋರಿಕೊಳ್ಳುತ್ತಿದ್ದಾನೆ (ಎಳ್ಳು ಕೊನೆಯ ಮುಳ್ಳು ಮೊನೆಯ ಪೊಳ್ಳು ಬಿಡದೆ ಒಳಗೆ ಹೊರಗೆ ಎಲ್ಲಾ ಠಾವಿನಲ್ಲೂ ಚಿನ್ಮಯನಿದ್ದಾನೆ). ಬೇರೆ ಧರ್ಮದವರು ಹೇಳುವಂತೆ ಜಗತ್ತನ್ನು ಸೃಷ್ಟಿಸಿ ಬೇರೆಲ್ಲೋ ಅಥವಾ ಸ್ವರ್ಗದಲ್ಲಿ ಕುಳಿತಿರುವುದಲ್ಲ ಅಥವಾ ಮನುಷ್ಯರ ಭೋಗಕ್ಕೆಂದೇ ವಿಶ್ವದಲ್ಲಿ ಎಲ್ಲವನ್ನೂ ಸೃಷ್ಟಿ ಮಾಡಿರುವುದಲ್ಲ. ಬೊಂಬೆ ಪೂಜೆಯಲ್ಲಿದೆ ಹಿಂದೂ ಧರ್ಮದ ವೈಶಿಷ್ಠ್ಯಪೂರ್ಣ ಅರ್ಥ.
ವಿಶ್ವದಲ್ಲಿ ಹುಟ್ಟಿ ತೋರಿಕೊಳ್ಳುತ್ತಿರುವುದೆಲ್ಲ ಭಗವಂತನ ಅವಿಭಾಜ್ಯ ಅಂಗವಾದ ‘ಪ್ರಕೃತಿ’ಯೆನ್ನುತ್ತಾರಲ್ಲವೇ? ಪ್ರಕೃತಿಯು ದೇವಿ ಸ್ವರೂಪವೇ ಆಗಿರುವುದರಿಂದ ದೇವಿಯ ಆರಾಧನೆಗೇ ಮೀಸಲಾದ ಹಿಂದೂಗಳ ದೊಡ್ಡ ಹಾಗೂ ದೀರ್ಘ ಹಬ್ಬವಾದ ನವರಾತ್ರಿಯಲ್ಲಿಯೇ ಬೊಂಬೆ ಪೂಜೆ ಮಾಡುವುದು, ಎಷ್ಟು ಅರ್ಥಪೂರ್ಣವೆನ್ನುವುದನ್ನು ಗಮನಿಸಬಹುದಲ್ಲವೇ?
“ಅನಂತ ರೂಪ ಅನಂತ ನಾಮ ಆದಿ ಮೂಲ ನಾರಾಯಣ” ಎಂದು ಪ್ರಾರಂಭವಾಗುವ ಭಜನೆಯ ಹಾಡೊಂದರಲ್ಲಿ, “ವಿಶ್ವ ತೈಜಸ ಪ್ರಾಜ್ಞ ಸ್ವರೂಪ ಹೇ ಕೃಪಾಸಿಂಧು ಕೃಷ್ಣಾ” ಎಂದಿದೆ. ನಮ್ಮೊಳಗಿರುವ ಭಗವಂತ, ಜಾಗೃತ್, ಸ್ವಪ್ನ, ಮತ್ತು ಸುಷುಪ್ತಿಯ ಅವಸ್ಥೆಗಳಲ್ಲಿ ವಿಶ್ವ, ತೈಜಸ ಮತ್ತು ಪ್ರಾಜ್ಞನೆಂಬ ಮೂರು ಸ್ವರೂಪಗಳಲ್ಲಿರುತ್ತಾನೆ ಎನ್ನುತ್ತಾರೆ (ಮಾಂಡೂಕ್ಯ ಉಪನಿಷತ್ ೯-೧೦-೧೧). ಜಾಗ್ರತ್ ಅವಸ್ಥೆಯಲ್ಲಿ ವಿಶ್ವನಾಗಿ ತೋರಿಕೊಳ್ಳುತ್ತಿರುವ ವಿಷ್ಣುವನ್ನೇ ಬೊಂಬೆ ಪೂಜೆಯಲ್ಲಿ ಪೂಜಿಸುತ್ತಿರಬಹುದೇ! ವಿಷ್ಣು ಎಂದರೆ ಭಗವಂತನ ವಿಶ್ವ ವ್ಯಾಪಕ ತತ್ವವೇ ಅಲ್ಲವೇ.
"ವಿಶ್ವವು ದರ್ಪಣದಲ್ಲಿ ನೋಡಿದ ನಗರಿಯಂತೆ, ಆತ್ಮ ಮಾಯೆಯಿಂದ ಕನಸಿನಲ್ಲಿ ನೋಡಿದಂತೆ ಹೊರಗೆ ಇರುವ ಹಾಗೆ ಕಂಡರೂ ಇದರ ಮೂಲವಿರುವುದು ನಮ್ಮೊಳಗೆ. ಭಗವಂತನ ಕೃಪೆಯಿಂದ ಆತ್ಮ ಜ್ಞಾನವಾದೊಡನೆ (ಎಚ್ಚರವೆಂಬ ಕನಸಿನಿಂದ ಎಚ್ಚರಗೊಂಡಂತೆ) ಈ ಸತ್ಯದ ಸಾಕ್ಷಾತ್ಕಾರವಾಗುತ್ತದೆ”(ಆಚಾರ್ಯ ಶಂಕರರ ದಕ್ಷಿಣಾಮೂರ್ತಿ ಸ್ತೋತ್ರ). ಹೊರಗೆ ತೋರಿಕೊಳ್ಳುತ್ತಿರುವ ವಿಶ್ವವು ನಮ್ಮೊಳಗಿರುವ ಪ್ರಜ್ಞಾರೂಪಿ ಜ್ಯೋತಿರ್ಲಿಂಗದಿಂದ ಹೊಮ್ಮುತ್ತಿರುವ ಬಿಂಬ ಮಾತ್ರವೇ ಎಂಬ ಅರಿವು ಮೂಡಿದಾಗ ಬೊಂಬೆ ಹಬ್ಬದ ಸೂಕ್ಷ್ಮ ವಿಶ್ವದ ಪೂಜೆಯು ಶಿವ ಪೂಜೆಯಾಗಿಯೇ ಮಾರ್ಪಡುತ್ತದೆ ಅಲ್ಲವೇ?
ಹೀಗೆ ದಸರಾ ಬೊಂಬೆ ಪೂಜೆಯೆಂದರೆ ಜಗನ್ಮಾತೆಯ ಆರಾಧನೆ, ವಿಷ್ಣುವಿನ ಆರಾಧನೆ ಹಾಗೂ ಶಿವನ ಆರಾಧನೆಯೂ ಸಹಾ. ಇದೇ ಅಲ್ಲವೇ ನಮ್ಮ ಧರ್ಮದ ಸಾರ ಸರ್ವಸ್ವ. ಈ ದೇವರುಗಳು ಅವರ ಅವತಾರಗಳು ಹಾಗೂ ಪರಿವಾರವನ್ನು ತಾನೇ ನಾವು ಹೆಚ್ಚಾಗಿ ಪೂಜಿಸುವುದು. ಮೇಲ್ನೋಟಕ್ಕೆ ಬಾಲಿಷವೆನಿಸುವ ಬೊಂಬೆ ಪೂಜೆಯು ಎಷ್ಟು ಅರ್ಥಗರ್ಭಿತ ಆಚರಣೆ ಎನಿಸುವುದಿಲ್ಲವೇ?