ವಿಜ್ಞಾನ ಮತ್ತು ತತ್ವಜ್ಞಾನ

ವೈಜ್ಞಾನಿಕ ಸಂಶೋಧನೆಗಳು ಮಾನವನ ಜೀವನವನ್ನು ಸರಳ, ಸುಖಮಯ, ಸುಂದರ ಹಾಗೂ ಕೌತುಕಮಯವನ್ನಾಗಿಸಿದೆ. ಎಲ್ಲ ಕಾಲದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರ ಜೀವನವನ್ನೂ ಸ್ಪರ್ಶಿಸುತ್ತಾ ಜೀವನದ ಅವಿಭಾಜ್ಯ ಅಂಗವೇ ಆಗಿರುವ ವೈಜ್ಞಾನಿಕ ಸಂಶೋಧನೆಗಳ ಹರವು, ಸ್ಥೂಲಾತಿಸ್ಥೂಲದಿಂದ ಹಿಡಿದು ಸೂಕ್ಷ್ಮಾತಿಸೂಕ್ಷ್ಮದವರೆಗೆ ಹರಡಿದೆ. ಇದರ ಹೊರತು ಇಂದು ಜೀವನವನ್ನು ಊಹಿಸಲೂ ಕಷ್ಟವೆನಿಸುತ್ತದೆ.
ಸ್ಥೂಲಾತಿಸ್ಥೂಲ ವೈಜ್ಞಾನಿಕ ಸಂಶೋಧನೆಯನ್ನು ಅವಲೋಕಿಸಿದರೆ ಮಾನವನು ಭೂಮಿಯ ವಾತಾವರಣವನ್ನು ಭೇದಿಸಿ ಬಾಹ್ಯಾಕಾಶಕ್ಕೆ ಜಿಗಿದು ಚಂದ್ರನ ಮೇಲೆ ಕಾಲಿರಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಬಾಹ್ಯಾಕಾಶದಲ್ಲಿ ವೈಜ್ಞಾನಿಕ ಸಂಶೋಧನೆಯ ಪ್ರಯೋಗಾಲಯಗಳನ್ನು ಸ್ಥಾಪಿಸಿರುವುದು, ಅತ್ಯಂತ ಶಕ್ತಿಶಾಲಿ “ಹಬ್ಬಲ್“ ದೂರದರ್ಶನವನ್ನು ಬಾಹ್ಯಾಕಾಶದಲ್ಲಿ ಸ್ಥಾಪಿಸಿ ದೂರದ ತಾರೆ, ನಿಹಾರಿಕೆಗಳ ಛಾಯಾ ಚಿತ್ರಗಳನ್ನು ಪಡೆಯುತ್ತಿರುವುದು, ಸೌರಮಂಡಲದ ಬೇರೆ ಗ್ರಹಗಳಿಗೆ ಬಾಹ್ಯಾಕಾಶ ನೌಕೆಗಳು ಮತ್ತು ರೋಬೋಗಳನ್ನು ಕಳುಹಿಸಿ ಸಂಶೋಧನೆ ನಡೆಸುತ್ತಿರುವುದು ಜನಜನಿತ. ಮುಂದೆಲ್ಲಿಗೆ ನಮ್ಮ ಪಯಣವೆಂದು ಯೋಚಿಸಿದರೆ ಬೇರೆ ತಾರೆಗಳು ಮತ್ತು ಅವುಗಳ ಗ್ರಹ ಮಂಡಲದೆಡೆಗೆ ಎಂದೆನಿಸುತ್ತದೆ. ಬೇರೆ ತಾರೆಗಳೆಂದರೆ ಸೂರ್ಯನಿಗೆ ಅತ್ಯಂತ ಹತ್ತಿರವಿರುವ ಒಂದು ಪುಟ್ಟ ತಾರೆಯ ಹೆಸರು “ಪ್ರಾಕ್ಸಿಮಾ ಸೆಂಟೌರಿ“ ಎಂದು. ಸೌರಮಂಡಲದಿಂದ ಅದರ ದೂರ ೪.೩ ಜ್ಯೋತಿರ್ವರ್ಷಗಳು. ಎಂದರೆ ಜ್ಯೋತಿಯ ವೇಗದಲ್ಲಿ ಪಯಣಿಸಿದರೆ ಅದನ್ನು ತಲುಪಲು ೪.೩ ವರ್ಷಗಳು ಬೇಕಾಗುತ್ತದೆ. ಹಿಂತಿರುಗಿ ಬರಲು ಮತ್ತೆ ಅಷ್ಟೇ ಕಾಲ ಬೇಕು. ವಿಜ್ಞಾನ ಇಂದು ತಲುಪಿರುವ ರಾಕೆಟ್ ನ ವೇಗದಲ್ಲಿ ಪಯಣಿಸಿದರೆ ಮಾನವನ ಜೀವಮಾನದಲ್ಲಿ ಹೋಗಿ ಹಿಂತಿರುಗಲು ಸಾಧ್ಯವಿಲ್ಲ. ಯಾವುದೇ ಭೌತಿಕ ವಸ್ತುಗಳು ಬೆಳಕಿನ ವೇಗವನ್ನು ತಲುಪಲು ಸಾಧ್ಯವೇ ಇಲ್ಲವೆನ್ನುತ್ತಾರೆ. ತಲುಪಿದರೆ ಅದು ಭೌತಿಕ ವಸ್ತುವಾಗಿ ಉಳಿಯದೇ ಬೆಳಕೇ ಆಗಿ ಬಿಡುತ್ತದೆ ಎನ್ನುತ್ತಾರೆ. ಹಾಗಾದರೆ ಬೆಳಕನ್ನೇ ಕಳುಹಿಸಿದರೆ ಹೇಗೆ ಎಂದರೆ, ಬೆಳಕು ಸ್ವಲ್ಪ ದೂರ ಪಯಣಿಸಿದ ನಂತರ ಅದು ಹೊರಟ ಜಾಗಕ್ಕೇ ಹಿಂತಿರುಗುತ್ತದಂತೆ, ಭೂಮರಂಗ್ ರೀತಿಯಲ್ಲಿ. ಹಾಗಿದ್ದರೆ ಇದೇ ಸ್ಥೂಲಾತಿ ಸ್ಥೂಲ ವೈಜ್ಞಾನಿಕ ಸಂಶೋಧನೆಯ ಕೊನೆಯಿರಬಹುದೇ?
ಇನ್ನು ಸೂಕ್ಷ್ಮಾತಿಸೂಕ್ಷ್ಮ ಸಂಶೋಧನೆಗಳನ್ನು ನೋಡಿದರೆ, ಭೌತಿಕ ವಸ್ತುಗಳ ಅತ್ಯಂತ ಸೂಕ್ಷ್ಮ ಕಣಗಳಾದ ಅಣುವನ್ನು ಭೇದಿಸಿ ನೋಡಿದಾಗ ಅದರಲ್ಲೊಂದು ಸೌರಮಂಡಲವೇ ಕಾಣಿಸಿತು. ಪ್ರೋಟಾನ್ ಎಂಬ ಸೂರ್ಯನ ಸುತ್ತಲೂ ತಿರುಗುತ್ತಿರುವ ಎಲೆಕ್ಟ್ರಾನ್ ಗಳೆಂಬ ಗ್ರಹಗಳು ಪ್ರತಿಯೊಂದು ಪರಮಾಣುವಿನಲ್ಲಿ. ಪ್ರೋಟಾನ್ ಗಳನ್ನು ಮತ್ತೂ ಒಡೆದು ನೋಡಿದರೆ ಅವರಿಗೆ ಕಂಡು ಬಂದದ್ದು ಮತ್ತೂ ಸೂಕ್ಷ್ಮ ಪರಮಾಣು ದ್ರವ್ಯವಾದ ಕ್ವಾರ್ಕ್ ಗಳು. ಏನು ಈ ಕ್ವಾರ್ಕ್ ಗಳು ಎಂದು ಸಂಶೋಧನೆ ಮುಂದುವರೆಸಿದಾಗ ಅದೇನೆಂದೇ ತಿಳಿಯುವುದಿಲ್ಲವಂತೆ. ಒಮ್ಮೊಮ್ಮೆ ಅದು ಶಕ್ತಿ (energy) ಯಂತೆ ವರ್ತಿಸಿದರೆ ಮತ್ತೊಮ್ಮೆ ಅದು ಕಣದಂತೆ (particle)ವರ್ತಿಸುತ್ತದಂತೆ. ಇನ್ನೂ ಆಶ್ಚರ್ಯಕರ ವಿಷಯವೆಂದರೆ ಅದು ನಮ್ಮ ಮನಸ್ಸಿನಂತೆ ವರ್ತಿಸುವುದಂತೆ. ಅದನ್ನು ಶಕ್ತಿಯೆಂದುಕೊಂಡು ನೋಡಿದರೆ ಶಕ್ತಿಯೂ ಕಣವೆಂದುಕೊಂಡು ನೋಡಿದರೆ ಕಣದಂತೆಯೂ ಕಾಣುವುದಂತೆ. ಈ ಹಂತದಲ್ಲಿ ಸಂಶೋಧಕರು ಸಂಶೋಧನೆಯ ಅಂಶವೇ ಆಗಿ ಬಿಡುವರಂತೆ. ಮತ್ತೊಮ್ಮೆ ವೈಜ್ಞಾನಿಕ ಸಂಶೋಧನೆಯ ಕೊನೆ ಮುಟ್ಟಿದೆವೆನಿಸುತ್ತದೆ. ಆದರೆ ಬಹಳ ಗಮನವಿಟ್ಟು ಇದನ್ನು ನೋಡಿದಾಗ ತಿಳಿಯುವುದು ಇದು ಕೊನೆಯೆಂದಲ್ಲ, ಆದರೆ ಹಿಂತಿರುಗಿ ಹೋಗಿ ಎಂಬ ಫಲಕವಿದು. ಅಂದರೆ ಮುಂದಿನ ಸಂಶೋಧನೆ ನಿಮ್ಮೊಳಗೆ ಆಗಬೇಕೇ ಹೊರತು ಹೊರಗಲ್ಲ ಎಂದು ತಿಳಿಸುತ್ತಿರಬಹುದೆ?... ಮುಂದುವರೆಸುವ ಮುನ್ನ ಇಲ್ಲಿ ಎರಡು ವಿಷಯಗಳ ಬಗ್ಗೆ ಗಮನ ಸೆಳೆಯಬಯಸುತ್ತೇನೆ. ಸೌರಮಂಡಲ, ಅಥವಾ ನಕ್ಷತ್ರ ಮಂಡಲ ಮತ್ತು ದ್ರವ್ಯಗಳ ಅಣುಗಳೆರಡೂ ಒಂದೇ ರೀತಿಯಲ್ಲಿರುವುದನ್ನು ಕಂಡು ಕೊಂಡೇ “ಪೂರ್ಣಮದ: ಪೂರ್ಣಮಿದಂ........“ ಎಂಬ ವೇದಮಂತ್ರದ ಸಾಕ್ಷಾತ್ಕಾರವಾಗಿರಬಹುದೇ!? ಪರಮಾಣು ಸೂಕ್ಷ್ಮದ್ರವ್ಯವಾದ ಕ್ವಾರ್ಕ್ ಗಳನ್ನು ನಮ್ಮ ಮನಸ್ಸಿನಂತೆಯೇ ಕಂಡು, ಇಡೀ ವಿಶ್ವವೇ ನಮ್ಮ ಪ್ರಜ್ಞೆಯ ಭಾಗ ಎಂದು ಅರಿತೇ ವೇದ ಋಷಿಗಳಿಗೆ ಸಾಮವೇದದ “ತತ್ವಮಸಿ“(“ತತ್ ತ್ವಮ್ ಅಸಿ“ ಎಂದರೆ ಅದು ನೀನೇ ಆಗಿದ್ದೀಯೆ)ಯ ಸಾಕ್ಷಾತ್ಕಾರವಾಗಿರಬಹುದೇ!!
ಏನಿದೆ ನಮ್ಮೊಳಗೆ? ಈ ಪ್ರಶ್ನೆಗೆ ಉತ್ತರ... "ಎಲ್ಲವೂ ಇರುವುದು ನಮ್ಮೊಳಗೆ, ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ ನಮ್ಮೊಳಗೆ, ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ನಮ್ಮೊಳಗೆ, ತೋರಿಕೆಯ ನಾಮ ರೂಪಾತ್ಮಕ ಪ್ರಪಂಚವು ನಮ್ಮೊಳಗಿನಿಂದಲೇ ಹುಟ್ಟಿ ತೋರಿಕೊಳ್ಳುತ್ತಿರುವುದು, ಎಲ್ಲಕ್ಕೂ ಮಿಗಿಲಾಗಿ ಸೃಷ್ಟಿಕರ್ತ, ಸರ್ವನಿಯಾಮಕ ಭಗವಂತನಿರುವುದೂ ನಮ್ಮೊಳಗೆ" ಎನ್ನುತ್ತಾರೆ.
ಆಂತರಿಕ ಅವಿಷ್ಕಾರದ ವಿಷಯಕ್ಕೆ ಬಂದರೆ ನಮ್ಮ ಪುರಾತನ ಋಷಿ ಮುನಿಗಳನ್ನು ಈ ವಿಜ್ಞಾನದಲ್ಲಿ ಮೀರಿಸುವುದಿರಲಿ ಅವರ ಜ್ಞಾನದ ಸಮೀಪಕ್ಕೂ ಅಧುನಿಕ ವಿಜ್ಞಾನ ತಲುಪಲಾರದೆನಿಸುತ್ತದೆ. ಪ್ರಜ್ಞಾಸಾಗರದ ಕೊನೆಯರಿಯದ ಆಳಕ್ಕೆ ಮುಳುಗಿ ತಾವೇ ಅನರ್ಘ್ಯ ರತ್ನಗಳಿಗಾಗಿ ಹೊರಹೊಮ್ಮಿದ ವೈದ್ಯರು, ವಿಜ್ಞಾನಿಗಳು, ಗಣಿತಜ್ಞರು ಹಾಗೂ ಬಾಹ್ಯಾಕಾಶ ವಿಜ್ಞಾನಿಗಳೇ ಚರಕ, ಶುಶ್ರುತ, ಭಾಸ್ಕರಾಚಾರ್ಯ, ಲೀಲಾವತಿ, ಆರ್ಯಭಟ, ವರಾಹಮೀರ, ಮುಂತಾದ ಅನೇಕಾನೇಕ ಪೂರ್ವಜರು. ಇಂತಹ ಆಂತರಿಕ ಅನ್ವೇಷಣೆಯ ಹಾದಿಯಲ್ಲಿಯೇ, ಈ ರೀತಿಯ ಲೌಕಿಕ ಜ್ಞಾನಗಳಷ್ಟೇ ಅಲ್ಲದೇ, ಅನಿತ್ಯ ಜಗತ್ತಿನ ಹಿಂದೆ ಇರುವ ನಿತ್ಯ ಸತ್ಯವೂ ಅವರಿಗೆ ಗೋಚರಿಸಿತು. ಹುಟ್ಟು ಸಾವಿನಾಚೆ ಇರುವ ಶಾಶ್ವತ ಸತ್ಯವದು, ಅದನ್ನು ಪಡೆದ ಮೇಲೆ ಬೇರೇನನ್ನೂ ಬಯಸದ ನಿಧಿಗಳ ನಿಧಿಯದು, ನಿತ್ಯಾನಂದದ ಚರಮ ಸೀಮೆಯದು. ಇಂತಹ ನಿಧಿಯನ್ನು ಹೊಂದಿದ ಬ್ರಹ್ಮ ಜ್ಞಾನಿಗಳ ಉನ್ಮಾದಾವಸ್ಥೆಯು ನಮ್ಮೆಲ್ಲರಿಗಾಗಿ ಕರುಣೆಯಿಂದ ಈ ರೀತಿಯಲ್ಲಿ ಮಂತ್ರ ಕಾವ್ಯವಾಗಿ ಅರಳಿದೆ ಕೃಷ್ಣ ಯಜುರ್ವೇದದ ಶ್ವೇತಾಶ್ವತರ ಉಪನಿಷತ್ತಿನಲ್ಲಿ.
"ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾ
ಯೇ ಧಾಮಾನಿ ದಿವ್ಯಾನಿ ತಸ್ತುಃ
ವೇದಾಹಮೇತಂ ಪುರುಷಂ ಮಹಾಂತಂ
ಆದಿತ್ಯ ವರ್ಣಂ ತಮಸಃ ಪರಸ್ತಾತ್
ತಮೇವ ವಿದಿತ್ವಾ ಅತಿಮೃತ್ಯುಮೇತಿ
ನಾನ್ಯಃ ಪಂಥಾ ವಿದ್ಯತೇ ಅಯನಾಯ||"
“ಅಮೃತಪುತ್ರರು ಇದನ್ನು ಕೇಳಲಿ, ಯಾರು ದಿವ್ಯ ಲೋಕಗಳಲ್ಲಿ ಇರುವರೋ ಅವರು ಕೂಡಾ ಇದನ್ನು ಕೇಳಲಿ. ತಮಸ್ಸಿನ ಆಚೆ ಸೂರ್ಯನಂತೆ ಹೊಳೆಯುತ್ತಿರುವ ವಿಭುವನ್ನು ನಾನು ಅರಿತಿರುವೆನು. ಅವನನ್ನು ಅರಿತವನು ಮಾತ್ರ ಮೃತ್ಯುವನ್ನು ದಾಟುವನು. ಈ ಸಂಸಾರದಿಂದ ಪಾರಾಗಲು ಬೇರೆ ದಾರಿಯೇ ಇಲ್ಲ“. ಇದನ್ನೆಲ್ಲರಿಗೂ ಸಾರುತ್ತಿರುವ ಉದ್ದೇಶವೆಂದರೆ, ಅವರು ಅರಿತಿದ್ದಾರೆಂದರೆ ಅವರ ದಾರಿಯಲ್ಲಿ ಸಾಗಿದವರೆಲ್ಲರೂ ಅರಿಯಬಹುದು. ಇಲ್ಲವಾದಲ್ಲಿ ಮಹಾ ನಷ್ಟವೇ ಆಗಬಹುದು. ದುರ್ಲಭವಾಗಿ ಸಿಕ್ಕಿರುವ ಈ ಜನ್ಮವು ವ್ಯರ್ಥವಾದರೆ ಮುಂದೆಂದಿಗೋ ಇಂತಹ ಇನ್ನೊಂದವಕಾಶ. ಇಂತಹ ದಿವ್ಯ ಚೇತನರು ನಮ್ಮ ಪೂರ್ವಿಕರು. ವೈಜ್ಞಾನಿಕ ಪರಂಪರೆ ನಮ್ಮದು. ನಮ್ಮ ಧರ್ಮಕ್ಕಿಂತ ದೊಡ್ಡ ವಿಜ್ಞಾನವಿಲ್ಲ. ನಮ್ಮ ಹಿರಿಯರು ತೋರಿದ ಹಾದಿಯಲ್ಲಿ ಕಿಂಚಿತ್ ದೂರವನ್ನಾದರೂ ಸಾಗಲು ಸಾಧ್ಯವಾದರೆ ಅದಕ್ಕಿಂತ ಮಿಗಿಲಾದ ಸೌಭಾಗ್ಯವಿಲ್ಲ.