ಏಕಂ ಸತ್ (ದೇವರೊಬ್ಬ)

ದೇವನೊಬ್ಬ, ನಾಮ ಹಲವು ಎಂದು ಹೇಳುತ್ತೇವಲ್ಲವೇ, ಅದನ್ನೇ ವೇದದಲ್ಲಿ ‘ಏಕಮ್ ಸತ್, ವಿಪ್ರಾ ಬಹುದಾ ವದಂತಿ’ ಅಂದರೆ ಇರುವ ಒಂದೇ ಸತ್ಯವನ್ನು ತಿಳಿದವರು ಬಹುವಾಗಿ ಹೇಳುತ್ತಾರೆ. ಮೇಲ್ನೋಟಕ್ಕೆ ಹಿಂದೂ ಧರ್ಮವೊಂದು ಗೊಜಲು. ಅನೇಕಾನೇಕ ದೇವರುಗಳು, ನಾನಾರೀತಿಯ ಆಚರಣೆಗಳು. ಎಲ್ಲವೂ ಅರ್ಥಹೀನ ಅಂದುಕೊಳ್ಳುವ ಮುಂಚೆ, ಅರ್ಥವನ್ನು ಕಂಡುಕೊಳ್ಳಲು ಎಷ್ಟು ಪ್ರಯತ್ನಿಸಿದ್ದೇವೆ ಎಂದು ಯೋಚಿಸಬೇಕು. ಪ್ರಯತ್ನಿಸಿದರೆ ಎಲ್ಲದಕ್ಕೂ ಅರ್ಥ ಸಿಕ್ಕೇ ಸಿಗುತ್ತದೆಂದು ಹೇಳಲಾಗದಿದ್ದರೂ, ಕೆಲವಕ್ಕಾದರೂ ಪ್ರಬುದ್ಧ ಅರ್ಥಗಳು ಸಿಕ್ಕಿದಾಗ ನಮ್ಮ ಪ್ರಾಚೀನರ ಆಲೋಚನೆಗಳ ವೈಜ್ಞಾನಿಕತೆಯನ್ನು ಕಂಡು ಹೆಮ್ಮಯೆನಿಸುವುದು ಮಾತ್ರವಲ್ಲದೇ, ಈ ಧರ್ಮದಲ್ಲಿ ಹುಟ್ಟಿದ್ದಕ್ಕಾಗಿ ಧನ್ಯತೆಯ ಭಾವ ಬರುವುದರಲ್ಲಿ ಸಂಶಯವಿಲ್ಲ. ಹೀಗೆ ದೊರೆತ ಅರ್ಥಗಳಲ್ಲೊಂದನ್ನು ನಿಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ.
ವಿಶ್ವದ ಅಗಾಧತೆಯನ್ನು, ಅದರ ರಚನೆಯ ಸಂಕೀರ್ಣತೆಯನ್ನು, ವ್ಯವಸ್ಥೆಯ ವೈಖರಿಯನ್ನು ಕಂಡು ಬೆಕ್ಕಸ ಬೆರಗಾದ ನಮ್ಮ ಪೂರ್ವಿಕರು, ಇದೆಲ್ಲದರ ಹಿಂದೆ ಯಾವುದೋ ಬುದ್ಧಿಶಕ್ತಿ ಇರಲೇಬೇಕೆಂದು ಭಾವಿಸಿ ಅದನ್ನೇ ದೇವರೆಂದು ಕರೆದರು. ಕಾಣದ ದೇವರನ್ನು ವಿಶ್ವದ ರೂಪದಲ್ಲಿಯೇ ಕಂಡಾಗ ಈ ವ್ಯವಸ್ಥೆಯಲ್ಲಿ ಮೂಲಭೂತವಾದ ಮೂರು ಕಾರ್ಯಗಳನ್ನು ಕಂಡರು. ಅದೆಂದರೆ ಯಾವುದೋ ಹಿಂದಿರದಿದ್ದ ಶಕ್ತಿಯ ಅಥವಾ ದ್ರವ್ಯದ ಅಥವಾ ಜೀವದ ಹುಟ್ಟು, ಆ ರೀತಿ ಸೃಷ್ಟಿಯಾದ ಅದರ ಇರವು ಅಥವಾ ಸ್ಥಿತಿ ಮತ್ತು ಅದರ ನಾಶ ಅಥವಾ ಲಯ..
ಹುಟ್ಟಿನ ಅಥವಾ ಸೃಷ್ಟಿಯ ಹಿಂದಿರುವ ಶಕ್ತಿಯನ್ನೇ ಬ್ರಹ್ಮನೆಂದು ಕರೆದರೆ, ಸ್ಥಿತಿಯ ಹಿಂದಿರುವ ಶಕ್ತಿಯನ್ನು ವಿಷ್ಣುವಾಗಿಯೂ, ಲಯದ ಹಿಂದಿನ ಶಕ್ತಿಯನ್ನು ಶಿವನಾಗಿಯೂ ಕಂಡರು. ಹೀಗೆ ಒಬ್ಬ ದೇವರನ್ನು ಮೂರು ಮಹಾಕಾರ್ಯಗಳಂತೆ ವಿಂಗಡಿಸಿ ತ್ರಿಮೂರ್ತಿ ರೂಪದಲ್ಲಿ ಕಂಡರು. ಇದೇ ಅರ್ಥದಲ್ಲಿಯೇ ಭಗವತ್ ಶಕ್ತಿಯ ಮೂರು ರೂಪಗಳಾಗಿ ವೇದಗಳಲ್ಲಿ ಬ್ರಹ್ಮ, ವಿಷ್ಣು, ಮತ್ತು ಶಿವ ಇವರುಗಳ ಉಲ್ಲೇಖವಿರುವುದಂತೆ. ಅವರ ವಿವಿಧ ರೂಪಗಳು, ಕುಟುಂಬ ಮತ್ತು ಕಥೆಗಳೆಲ್ಲ ಆಮೇಲೆ ರಚನೆಯಾದ ಪುರಾಣಗಳಿಗೆ ಮಾತ್ರ ಸೀಮಿತವಾದದ್ದು ಎನ್ನುತ್ತಾರೆ..
ಧರ್ಮಪತ್ನಿ ಅಥವಾ ಅರ್ಧಾಂಗಿಯೆಂದರೆ, ಆಂಗ್ಲದಲ್ಲಿ ಉತ್ತಮ ಅರ್ಧ ಎಂದು ಹೇಳುವುದುಂಟು. ಹಿಂದಿನ ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಹೊತ್ತು ಹುಟ್ಟುವ ಮುನ್ನವೇ, ದೈನಂದಿನ ಕಾರ್ಯಕ್ಕೆಂದು ಹೊರಡುವ ಪತಿ ಹಿಂತಿರುಗುವುದು ದಿನ ಕಳೆದ ನಂತರವೇ. ಆದುದರಿಂದ ಅವನನ್ನು ಕಾಣುವುದು ಬಹಳ ಕಷ್ಟ. ಆದರೆ ಅವನ ದುಡಿಮೆ, ಮತ್ತು ವ್ಯಕ್ತಿತ್ವದ ಸ್ತರವನ್ನು ಅವನ ಮನೆಯೊಡತಿ, ಕುಟುಂಬವನ್ನು ನಡೆಸುವ ರೀತಿಯಲ್ಲಿ ಕಂಡುಕೊಳ್ಳಬಹುದಿತ್ತಲ್ಲವೇ, ಅಂತೆಯೇ ವ್ಯಕ್ತವಾಗುವುದೆಲ್ಲವೂ ದೇವಿ ಅಥವಾ ದೇವಿ ಸ್ವರೂಪ, ಪುರುಷನು ಅವ್ಯಕ್ತ..
ಕಟ್ಟು ಕಥೆಗಳಂತಿರುವ ಪುರಾಣಗಳನ್ನೂ ಅಸಂಬದ್ಧವೆಂದು ಕಾಣುವಂತಿಲ್ಲ. ಅದರಲ್ಲಿ ಹೇಳಿರುವ, ದೇವರ ಅರ್ಧಾಂಗಿಯರಿಗೂ ಅರ್ಥಪೂರ್ಣ ಕಲ್ಪನೆಯ ತಳಹದಿಯಿದೆ. ಉದಾಹರಣೆಗಾಗಿ, ಯಾವುದಾದರೂ ಹೊಸ ವಸ್ತುವಿನ ಸೃಷ್ಟಿಗಾಗಿ ಅದರ ವಿನ್ಯಾಸ, ಅದರ ರಚನೆಯ ಜಾಣತನ ಮುಂತಾದ ವಿಷಯಗಳ ಹಿಂದೆ ಮುಖ್ಯವಾಗಿ ಬೇಕಾಗಿರುವುದು ಬುದ್ಧಿ ಅಥವಾ ವಿದ್ಯೆ. ಅದನ್ನೇ ವಿದ್ಯಾಧಿದೇವತೆಯಾದ ಸರಸ್ವತಿಯ ರೂಪದಲ್ಲಿ ಕಂಡರು. ಅದಿಲ್ಲದಿದ್ದರೆ ಬ್ರಹ್ಮನೇನು ಮಾಡಬಹುದು? ಅದನ್ನೇ ಬ್ರಹ್ಮನ ಅರ್ಧಾಂಗಿಯೆಂದು ಕಂಡರು. ಹಾಗೆಯೇ ಹುಟ್ಟಿದ ಏನನ್ನಾದರೂ ಅದರ ಸ್ಥಿತಿಯಲ್ಲಿ ಕಾಪಾಡಲು ಅಥವಾ ಸಾಕಲು ಮುಖ್ಯವಾಗಿ ಸಂಪತ್ತಿನ ಅವಶ್ಯಕತೆಯಿದೆಯಲ್ಲವೇ? ಉದಾಹರಣೆಗೆ ಯಾವುದಾದರೂ ಕಟ್ಟಡವೊಂದನ್ನು ನಿರ್ಮಿಸಿದ ಮೇಲೆ ಅದರ ನಿರ್ವಹಣೆಗಾಗಿ ಸಂಪತ್ತಿನ ಅವಶ್ಯಕತೆ ಇರುವುದಲ್ಲವೇ? ಅದನ್ನೇ ಲಕ್ಷ್ಮಿಯಾಗಿ, ವಿಷ್ಣುವಿನ ಅರ್ಧಾಂಗಿಯಾಗಿ, ಸಂಪತ್ತಿನ ಅಧಿದೇವತೆಯಾಗಿ ಕಂಡರು. ಅದೇ ರೀತಿಯಲ್ಲಿಯೇ ಏನನ್ನಾದರೂ ಲಯಗೊಳಿಸಬೇಕಾದಲ್ಲಿ ಶಕ್ತಿಯ ಅವಶ್ಯಕತೆಯೇ ಮುಖ್ಯವಲ್ಲವೇ? ಉದಾಹರಣೆಗೆ ಒಂದು ಕಟ್ಟಡವನ್ನು ನೆಲಸಮಗೊಳಿಸಲು ಬೇಕಾಗಿರುವುದು ಅಗಾಧ ಶಕ್ತಿ, ಮತ್ತು ಇದನ್ನೇ ಪಾರ್ವತಿಯೆಂದೂ, ಶಿವನ ರಾಣಿಯೆಂದೂ ಶಕ್ತಿಯ ಅಧಿದೇವತೆಯೆಂದೂ ಕರೆದಿರುವುದು ಸಮಂಜಸವಾಗಿರುವುದಲ್ಲವೇ?.
ಏನಿದು? ದೇವರನ್ನು ಅನೇಕವಾಗಿ ಕಾಣುವುದು ಮಾತ್ರವಲ್ಲದೇ, ನಮ್ಮಂತೆ ಸತಿ ಸುತರನ್ನೂ ಕಟ್ಟಿದ್ದಾರಲ್ಲ, ಎಂತಹ ಮೌಢ್ಯವೆಂದು ನಿಕೃಷ್ಟವಾಗಿ ಕಾಣುತ್ತಿದ್ದ ನನಗೆ ಈ ರೀತಿಯ ಅರ್ಥವನ್ನೊಮ್ಮೆ ಕೇಳಿದಾಗ ನಮ್ಮ ಪೂರ್ವಿಕರ ಕಲ್ಪನೆಗೆ ಅಚ್ಚರಿಯೆನಿಸಿ, ನಮ್ಮ ಪ್ರತಿಯೊಂದು ಧಾರ್ಮಿಕ ವಿಷಯಗಳಿಗೂ ಅರ್ಥವನ್ನು ಕಂಡುಕೊಳ್ಳುವ, ಆಲೋಚಿಸುವ, ಕಂಡುಕೊಂಡಾಗ ಅದನ್ನು ಎಲ್ಲರಿಗೂ ಸಾರುವ, ತನ್ಮೂಲಕ ಎಲ್ಲರಲ್ಲಿಯೂ ಧರ್ಮದ ಬಗ್ಗೆ ನಂಬಿಕೆ, ಶ್ರದ್ಧೆಯನ್ನು ಬಲಪಡಿಸುವ ತವಕ.