ಗೋವರ್ಧನೋದ್ಧಾರಕ

"ಗೋವಿಂದ ಗೋಪಾಲ ಗೋಪಿಕಾ ವಲ್ಲಭ ಗೋವರ್ಧನೋದ್ಧಾರಕ". ಇದು ಸುಂದರ ಭಕ್ತಿಗೀತೆಯೊಂದರ ಪಲ್ಲವಿ. ಇದನ್ನು ಮೆಲುಕು ಹಾಕುತ್ತಿರುವಂತೆಯೇ ಭಾಗವತದ ಕೃಷ್ಣನ ಕಥೆಯು ಮನಃಪಟಲದಲ್ಲೊಮ್ಮೆ ಸುಳಿಯುತ್ತದೆ. ಕಥೆಯು ಎಲ್ಲರಿಗೂ ತಿಳಿದಿರುವಂತದ್ದೇ. ಆದರೂ ಸಂಕ್ಷಿಪ್ತವಾಗಿ ನನಗೆ ಅನಿಸಿದ್ದನ್ನು ಹೇಳುತ್ತೇನೆ.
ಬೃಂದಾವನದಲ್ಲಿ ಕೃಷ್ಣನ ಬಾಲ್ಯದ ದಿನಗಳವು. ಬೃಂದಾವನದ ಬಳಿ ಗೋವರ್ಧನಗಿರಿ ಎಂಬುದೊಂದು ಬೆಟ್ಟ. ಹುಲುಸಾದ ಹುಲ್ಲಿನ ಮೇವು, ನೀರಿನಿಂದ ಸಮೃದ್ಧವಾಗಿದ್ದ ಆ ಬೆಟ್ಟವು ಬೃಂದಾವನದ ಗೋವುಗಳು ಮತ್ತಿತರ ಪ್ರಾಣಿಗಳಿಗೆ ಆಸರೆಯಂತಿದ್ದಿತು. ಬೃಂದಾವನ ವಾಸಿಗಳಿಗೆ ಇಂದ್ರನ ಪೂಜೆಯು ವಾರ್ಷಿಕ ಆಚರಣೆಗಳಲ್ಲೊಂದಾಗಿತ್ತು. ಕೃಷ್ಣನು ಇಂದ್ರನ ಪೂಜೆಯನ್ನು ಅನುಮೋದಿಸಲಿಲ್ಲ. ಪೂಜೆ ಸತ್ಕಾರವೆಲ್ಲ ಇಂದ್ರನಿಗೇಕೆ? ಬದಲಿಗೆ ಅಷ್ಟು ಪ್ರೀತಿಯಿಂದ ನಮ್ಮ ಗೋವುಗಳಿಗೆ ಆಸರೆಯಾಗಿರುವ ಗೋವರ್ಧನ ಗಿರಿಯನ್ನೇಕೆ ಪೂಜಿಸಬಾರದು ಎಂದು ಪ್ರಶ್ನಿಸಿದನು. ಕಾಲ ಕಾಲಕ್ಕೆ ಮಳೆಯನ್ನು ನೀಡುತ್ತಿರುವ ಮಳೆಯ ದೇವತೆಯಾದ ಇಂದ್ರನು ಕೋಪಿಸಿಕೊಂಡರೇನು ಮಾಡುವುದೆಂದು ಗ್ರಾಮಸ್ಥರು ಭಯಭೀತರಾದರೂ ಕೃಷ್ಣನ ಆಶ್ವಾಸನೆಯಂತೆ, ಒಮ್ಮೆ ವಾರ್ಷಿಕ ಕಟ್ಟಳೆಯನ್ನು ಮುರಿದು ಗೋವರ್ಧನ ಗಿರಿಗೆ ಪೂಜೆ ಸಲ್ಲಿಸಲು ಅನುವಾದರು. ಇದರಿಂದ ಕೋಪಗೊಂಡ ಇಂದ್ರನು ಅತೀ ರಭಸದಿಂದ ಗಾಳಿ, ಧಾರಾಕಾರ ಮಳೆಯನ್ನು ಸುರಿಸಿದ ಕಾರಣ ಬೃಂದಾವನವೇ ಕೊಚ್ಚಿ ಹೋಗುವಂತೆ ಪ್ರವಾಹದಿಂದ ತುಂಬಿ ಹೋಯಿತು. ಪಶು ಪಕ್ಷಿ, ಪ್ರಾಣಿಗಳ ಸಹಿತ ಯಾರಿಗೂ ನಿಲ್ಲಲೂ ನೆಲೆಯಿಲ್ಲದಂತಾಗಲು ಕೃಷ್ಣನು ಎಲ್ಲರಿಗೂ ಅಭಯವನ್ನು ನೀಡಿ, ಗೋವರ್ಧನ ಗಿರಿಯನ್ನೇ ತನ್ನ ಕಿರುಬೆರಳಿನಿಂದ ಎತ್ತಿ ಹಿಡಿದು ಎಲ್ಲರಿಗೂ ಅದರಡಿಯಲ್ಲಿ ಆಶ್ರಯ ಕೊಟ್ಟಾಗ ಇಂದ್ರನು ಏನೂ ಮಾಡಲಾಗದೇ ಸೋತು ಶರಣಾಗುತ್ತಾನೆ.
ಎಷ್ಟು ಚೆಂದದ ಕಥೆ. ಬಾಲ್ಯದಲ್ಲಿ ಇದನ್ನು ಕೇಳಿದಾಗ ನಮ್ಮ ದೇವರೆಂದರೆ ಸೂಪರ್ ಮ್ಯಾನ್, ಏನು ಬೇಕಾದರೂ ಮಾಡಬಲ್ಲ, ಎಂದುಕೊಂಡು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ನಾವೇ ನೋಡಿದಂತೆ ಅನುಭವಿಸಿದ್ದು, ಸಂತಸಗೊಂಡಿದ್ದು ಇನ್ನೂ ಹಸಿರಾಗಿದೆ. ಮುಂದೆ ಸ್ವಲ್ಪ ವಯಸ್ಸಾದಂತೆ ಇಂದಿಗೆ ಉದ್ಧಟತನವೆನ್ನಿಸುವ ಅನೇಕ ಆಲೋಚನೆಗಳು. ಇದೆಲ್ಲಾ ನಡೆದಿದೆ ಎನ್ನುವುದಕ್ಕೆ ಏನು ಸಾಕ್ಷಿ? ಒಬ್ಬ ಚಿಕ್ಕ ಬಾಲಕ ಬೆಟ್ಟವನ್ನು ಎತ್ತುವುದೆಂದರೇನು? ಅವನು ದೇವರೇ ಆಗಿದ್ದು ಬೆಟ್ಟವನ್ನೆತ್ತಿದ್ದರೂ ಅದನ್ನು ಹೇಗೆ ಉದ್ಧಾರ ಮಾಡಿದಂತಾಯಿತು? ಹಾಗೆ ಉದ್ಧಾರ ಮಾಡಿದ್ದರೆ ಅದೊಂದು ಬೆಟ್ಟವೇ ಏಕೆ? ಅನೇಕ ಪರ್ವತಗಳೇ ಇವೆಯಲ್ಲ? ಇಂದ್ರನ ಪೂಜೆ ಬೇಡವೆಂದು, ಆ ಬೆಟ್ಟದ ಪೂಜೆ ಮಾಡುವುದೆಂದರೆ ಅರ್ಥವೇನು? ಹೀಗೆ ಹತ್ತು ಹಲವು ಪ್ರಶ್ನೆಗಳು.
ಆದರೂ ಇದರಲ್ಲಿ ಅರ್ಥವೇನೋ ಇರಲೇಬೇಕೆಂದು ಯೋಚಿಸುತ್ತಿದ್ದಾಗ ಮುಂದೊಮ್ಮೆ ಸಂಸ್ಕೃತದಲ್ಲಿ ‘ಗೋ’ ಎಂಬ ಶಬ್ದಕ್ಕೆ ಎಂಭತ್ತಕ್ಕೂ ಹೆಚ್ಚಿನ ಅರ್ಥಗಳಿವೆ, ಅದರಲ್ಲೊಂದು ಅರ್ಥ ಗೋವು ಎಂದಾದರೆ ಮತ್ತೊಂದು ಅರ್ಥ ಇಂದ್ರಿಯಗಳು ಎಂದು ತಿಳಿದಾಗ, ಗೊಜಲು ಗೊಜಲಾದ ಚಿತ್ರವೊಂದನ್ನು ದೃಷ್ಟಿಸುತ್ತಿರುವಾಗ, ಒಮ್ಮೆಲೇ ಅದು ಮೂರು ಆಯಾಮಗಳಿರುವ ಅರ್ಥಪೂರ್ಣ ಆಕೃತಿಯಾಗಿ ಪುಟಿದೆದ್ದ ಅನುಭವ, ಸಂತಸ, ಸಂಭ್ರಮ.
ಇನ್ನೊಂದು ಅರ್ಥದಲ್ಲಿ ಯೋಚಿಸಿದಾಗ ಗೋವರ್ಧನವೆಂದರೆ ಇಂದ್ರಿಯಗಳನ್ನು ಪೋಷಿಸುವುದು ಅಥವಾ ವರ್ಧಿಸುವುದು ಎಂದಾಗುತ್ತದೆ. ಇಂದ್ರಿಯಗಳು ಬೆಳಗುವುದು ಅಥವಾ ಅದರ ಅಸ್ಥಿತ್ವವು, ಪ್ರಜ್ಞೆಯಿಂದಲೇ ಅಲ್ಲವೇ? ಹಾಗಾಗಿ ಗೋವರ್ಧನವೆಂದರೆ ಪ್ರಜ್ಞೆಯೆಂದಾಗುತ್ತದೆ. ಮಾನಸಿಕ ಕ್ಲೇಶಗಳು ತಡೆಯಲಾರದಾದಾಗ ಆಸರೆಗಾಗಿ ಪ್ರಜ್ಞೆಯ ಸ್ಥರವನ್ನು ಮೇಲೆತ್ತಿ ಹಾಯಾಗಿರಬಹುದೆನ್ನುತ್ತಾರೆ. ಮಹಾತ್ಮರು ಪ್ರಪಂಚಕ್ಕಾಗಿ ಕೈಕಾಲುಗಳನ್ನು ಮುಡಿಪಾಗಿರಿಸಿ ತಮ್ಮ ತಲೆಯನ್ನು ಮೋಡಗಳಿಗಿಂತ ಮೇಲಿರಿಸಿಕೊಂಡು ಸದಾ ಸಮ ಸ್ಥಿತಿಯಲ್ಲಿರುತ್ತಾರೆನ್ನುತ್ತಾರಲ್ಲವೇ? ನಮ್ಮಂತಹ ಸಾಮಾನ್ಯರು ಪ್ರಜ್ಞೆಯ ಸ್ಥರವನ್ನು ಮೇಲೇರಿಸಲು ಪ್ರಯತ್ನಿಸಿದಾಗಲೇ, ಅದು ಬೆಟ್ಟವನ್ನೆತ್ತುವಂತೆ ಅಸಾಧ್ಯವೆಂದು ತಿಳಿಯುವುದು. ಏಕೆಂದರೆ ನಮ್ಮ ವೈಯಕ್ತಿಕ ಪ್ರಜ್ಞೆಯು ವಿಶ್ವ ಪ್ರಜ್ಞೆಯ ಅವಿಭಾಜ್ಯ ಭಾಗ ಮಾತ್ರ, ಅದರಿಂದಲೇ ಅದು ಗೋವರ್ಧನ ಗಿರಿ. ಭಗವಂತನ ಅನುಗ್ರಹವಾದರೆ ಮಾತ್ರ ಅವನಿಗೆ ಅದನ್ನು ಕಿರುಬೆರಳಲ್ಲಿ ಎತ್ತುವಷ್ಟು ಸುಲಭ. ಆಮೇಲೆ ಯಾವ ಮಾನಸಿಕ ಕ್ಲೇಶಗಳೂ ನಮ್ಮನ್ನು ಕಾಡಲಾರವೆಂಬ ಅರ್ಥವಿರಬಹುದೇ ಈ ಭಾಗವತದ ಕಥೆಗೆ? ಅದರಿಂದಲೇ ಭಗವಂತನನ್ನು ‘ಗೋವರ್ಧನೋದ್ಧಾರಕ’ ಎಂದು ಸ್ತುತಿಸಿರಬಹುದೇ?
ಹೀಗೆ ಯೋಚಿಸುತ್ತಾ ಹೋದರೆ ‘ಗೋವಿಂದ’ ನೆಂದರೆ ಇಂದ್ರಿಯಗಳನ್ನು ತಿಳಿದವನು, ‘ಗೋಪಾಲ’ ನೆಂದರೆ ಇಂದ್ರಿಯಗಳನ್ನು ಪಾಲಿಸುವವನು, ‘ಗೋಪಿಕಾವಲ್ಲಭ’ ನೆಂದರೆ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟು ಸರಿಯಾದ ದಾರಿಯಲ್ಲಿ ನಡೆಸುತ್ತಿರುವವರಿಗೆ (ಗೋಪಬಾಲರ) ಮತ್ತು ಅದರಿಂದ ಭಗವತ್ ಪ್ರೀತ್ಯರ್ಥವಾದ ಹಾಲು, ಮೊಸರು, ಬೆಣ್ಣೆಯನ್ನು ಪಡೆದು (ಭಕ್ತಿ. ಜ್ಞಾನ, ವೈರಾಗ್ಯದಂತೆ) ಶ್ರೇಯೋ ಮಾರ್ಗದಲ್ಲಿ ನಡೆಯುವವರ (ಗೋಪಿಯರ) ಪ್ರಾಣಸಖನೆಂಬ ಅರ್ಥವಿರಬಹುದೇ?
ಗೋವರ್ಧನ ಗಿರಿಯನ್ನು ಪೂಜಿಸಿರೆಂಬ ಕೃಷ್ಣನ ಸಲಹೆಯು ಪರಬ್ರಹ್ಮ ಸ್ವರೂಪಿ ಭಗವಂತನನ್ನು ಪೂಜಿಸಿರಿ, ಮನಸ್ಸನ್ನು ಓಲೈಸದಿರಿ (ಇಂದ್ರನೆಂದರೆ ಇಂದ್ರಿಯಗಳ ರಾಜ ಅಥವಾ ಮನಸ್ಸು) ಎಂಬ ಅರ್ಥ ಬರಬಹುದು. ಋಗ್ವೇದದ ಮಹಾವಾಕ್ಯ "ಪ್ರಜ್ಞಾನಂ ಬ್ರಹ್ಮ" (ಐತರೇಯ ಉಪನಿಷತ್, ೩-೧-೩) ಎಂದರೆ ಪ್ರಜ್ಞೆಯೇ ಬ್ರಹ್ಮ (ಗೋವರ್ಧನ ಗಿರಿ).
ಹೀಗೆ ಸರಳವೆನಿಸುವ, ಕೆಲವೊಮ್ಮೆ ಬಾಲಿಶವೆನಿಸುವ ಒಂದು ಗೋವಳರ ಗ್ರಾಮದ ಕೃಷ್ಣ ನ ಕಥೆಯಲ್ಲಿ ವೇದ ವೇದಾಂತದ ಅತ್ಯುನ್ನತ ಸತ್ಯಗಳಿವೆ ಎಂದೆನಿಸುವುದರಲ್ಲಿ ಸಂದೇಹವೇ ಇಲ್ಲ. ಎಷ್ಟು ಪ್ರಬುದ್ಧವಾಗಿ ಹೊಮ್ಮಿ ಅರ್ಥೈಸುತ್ತವೆ ನಮ್ಮ ಪುರಾಣ ಕಥೆಗಳು ಎಂದು ಯೋಚಿಸುತ್ತಾ ಹೋದರೆ ಇಂತಹ ಗಹನವಾದ ಸತ್ಯಗಳನ್ನು ಸರಳವಾಗಿ ಎಳೆಯರನ್ನು ರಂಜಿಸುವ ಕಥೆಯಾಗಿಸಿ, ಯೋಚಿಸಿದ ನಮ್ಮ ಪೂರ್ವಜರ ಪ್ರೌಢಿಮೆಯ ಬಗ್ಗೆ , ಜ್ಞಾನದ ಬಗ್ಗೆ ಹೆಮ್ಮೆಯೆನಿಸದಿರಲಾರದು. ಇಂತಹ ಜ್ಞಾನ ದೀವಿಗೆಯನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮರ್ಥ ಹರಿಕಾರರನ್ನಾಗಿಸು ನಮ್ಮನೆಂದು ಗೋವರ್ಧನೋದ್ಧಾರಕನನ್ನು ಪ್ರಾರ್ಥಿಸೋಣ.